ಶರೀಫರ ಅನುಭಾವಲೋಕ ಆಧ್ಯಾತ್ಮಿಕವಾದರೂ ಅನುಭವಲೋಕ ಪ್ರಾಪಂಚಿಕವೇ. ಅದು ಕೇವಲ ಮಾನವ ಜೀವಿಗಳಿಂದ ಮಾತ್ರವೇ ತುಂಬಿರುವುದಲ್ಲ. ಸಕಲ ಪಶುಪಕ್ಷಿ ಕ್ರಿಮಿಕೀಟಗಳಿಗೂ ಜಲ ಜಲಧಾರೆಗಳಿಗೂ ವೃಕ್ಷಗಳಿಗೂ ಅಲ್ಲಿ ನೆಲೆಯಿದೆ. ಅವರ ಕಾವ್ಯದಲ್ಲಿ ಕೋಳಿಗಳ ಪ್ರಸ್ತಾಪ ಬರುವಷ್ಟು ಇನ್ನು ಯಾರ ಕಾವ್ಯದಲ್ಲೂ ಬರುವುದಿಲ್ಲ. ಜನ್ನನ ಯಶೋಧರ ಚರಿತೆಯಲ್ಲಿ ಹಿಟ್ಟಿನ ಹುಂಜವಾಗಿ ಅದು ಬರುತ್ತದೆ. ಬಹುಶಃ ನಂತರ ಅದು ಬರುವುದು ಶರೀಫರ ಕಾವ್ಯದಲ್ಲೇ, ವಿಪುಲವಾಗಿ. ಪಶುಪಕ್ಷಿಗಳೆಂದರೆ ಅದೇನು ಇಷ್ಟವೋ ಅವರಿಗೆ! ಅಷ್ಟು ಮಾತ್ರವೂ ಅಲ್ಲ, ಪರಿಮಳದಂತೆ ನಾತಕ್ಕೂ, ಪರಿಶುದ್ಧಿಯಂತೆ ಕೊಳಕಿಗೂ, ಧೂಪದಂತೆ ಗುಡುಗುಡಿಗೂ ಅವರ ಕಾವ್ಯದಲ್ಲಿ ಸ್ಥಾನವಿದೆ. ಇದರಲ್ಲಿ ಮತ್ತೆ ಅವರು ಜನ್ನನ ಅನುಯಾಯಿಯೆ!
ಕೆ.ವಿ. ತಿರುಮಲೇಶ್ ಬರಹ

 

ಆರೂಢಾ ಈರೂಢಾ ಆರೂಢಾ ಯಾ ಅಲಿ
ಪ್ರೌಢತನದಿ ಗುಂಡಾಡು ಹುಡುಗರೊಳು
ಮೃಡ ನೀ ಪ್ರಭು ಆಡೋ ನಿರಂಜನ

ಹಣುಮಂತ ಯೋಗಸಾ ಗುಣವಂತಾ
ರಾಮಸಾ ಕಡಿದು ಕತ್ತಲದಿನ
ಬಹಳ ವಿಚಾರದಿ ದಣಿದು ದಣಿದು ನಾ ನೋಡಬಂದೆ

ಲಂಗೋಟಿ ಹಾಕಿದಿ ಕಂಗೆಟ್ಟು ಶೋಕದಿ
ತುಂಗ ಶಿಶುನಾಳಧೀಶನ ಸೇವಕಾ
ಇಂತಾತ್ಮ ಅದರ ಇಂಗಿತ ತಿಳಿದವನೇ ಆರೂಢಾ
– ಶಿಶುನಾಳಶರೀಫ

ಕನ್ನಡದ ಮೊದಲ ನವ್ಯ ಕವಿ ಸಂತ ಶಿಶುನಾಳ ಶರೀಫರು (1819-1889) ಎಂದು ನಾನಂದರೆ ಜನ ಹುಬ್ಬೇರಿಸುವುದು ಖಂಡಿತ. ಯಾಕೆಂದರೆ ಶರೀಫರ ಕಾಲದಲ್ಲಿ ಯುರೋಪಿನಲ್ಲಿ ಕೂಡ ನವ್ಯಕ್ಕೆ ಮೂಲವಾಗಿದ್ದ ಮಾಡರ್ನಿಸಂ ಹುಟ್ಟಿ ಬಂದಿರಲಿಲ್ಲ. ಮಾಡರ್ನಿಸಂ ಅರ್ಥಾತ್ ಆಧುನಿಕತೆ ಆರಂಭವಾದದ್ದು ಮೊದಲ ಮಹಾಯುದ್ಧದ ಕಾಲದಲ್ಲಿ, ಎಂದರೆ ಇಪ್ಪತ್ತನೇ ಶತಮಾನದ ಆದಿ ಭಾಗದಲ್ಲಿ. ಎತ್ತಣ ನವ್ಯ ಎತ್ತಣ ಶರೀಫರು ಎಂದು ಕೇಳಬಹುದು. ಕನ್ನಡದ ನವ್ಯ ಕಾವ್ಯ ಶಿಶುನಾಳರಿಗಿಂತ ಇನ್ನೂ ಹತ್ತಿರ ಹತ್ತಿರ ಒಂದು ಶತಮಾನದಷ್ಟು ಮುಂದೆ ಇತ್ತು. ನಿಜವೇ. ನಾನಿಲ್ಲಿ ಒಂದು ಅಸಂಗತ, ಅತಿಶಯೋಕ್ತಿಭರಿತ ಪ್ರಸ್ತಾಪವನ್ನು ಬೇಕೆಂದೇ ಮುಂದಿಡುತ್ತಿದ್ದೇನೆ. ಶರೀಫರ ಕವಿತೆಗಳ ‘ನವ್ಯ’ ವಿಧಾನದ ಕಡೆ ಗಮನ ಸೆಳೆಯುವುದಕ್ಕೆ.

ಬಹುಶಃ ಇವು ಮೌಖಿಕ ವಿಧಾನದಲ್ಲಿ ಹುಟ್ಟಿಬಂದುದರಿಂದ, ಮತ್ತು ತತ್ವಪದಗಳ ಅನುಭಾವ ಪ್ರಪಂಚಕ್ಕೆ ಸಂಬಂಧಿಸಿರುವುದರಿಂದ, ‘ಕವಿತೆ’ಗಳ ಪರಂಪರೆಗಿಂತ ‘ಪದ’ಗಳ ಅಥವಾ ‘ಗೀತೆ’ಗಳಹಾಡು (ಕೀರ್ತನ/ ವಚನ) ಪರಂಪರೆಗೆ ಹೆಚ್ಚು ಹೊಂದುತ್ತವೆ. ಇವನ್ನು ನವ್ಯ ಕವಿತೆಗಳ ಜತೆ ಸೇರಿಸುವುದರಲ್ಲಿ ನಮಗಿರುವ ವಿರೋಧಕ್ಕೆ ಇವುಗಳಲ್ಲಿ ಯಾವುದೇ ಒಂದು ಅಥವಾ ಎಲ್ಲವೂ ಕಾರಣವಾಗಿರಬಹುದು. ಶರೀಫರ ಜೀವಿತ ಕಾಲದಲ್ಲಿ ಅವರ ರಚನೆಗಳು ಮುದ್ರಿತ ರೂಪದಲ್ಲಿ ‘ಪ್ರಕಟ’ವಾಗಲಿಲ್ಲ; ಆಗ ಅದಕ್ಕೆ ಅನುಕೂಲತೆಯೂ ಇರಲಿಲ್ಲ. ಕವಿಯ ಇಂಥ ಸ್ಫೂರ್ತ ಗೀತಗಳನ್ನು ಇತರರು ಬರಕೊಳ್ಳುವ, ಕಂಠಪಾಠ ಮಾಡಿಕೊಳ್ಳುವ ಪದ್ಧತಿಯೊಂದು ಇದ್ದಿರಬೇಕು ಎನ್ನುವುದಕ್ಕೆ ಶರೀಫರ ಕವಿತೆಗಳ ಒಳಗೆಯೇ ನಮಗೆ ಪುರಾವೆ ದೊರಕದೆ ಇಲ್ಲ.

ಉದಾಹರಣೆಗೆ, ಶಿಶುನಾಳರದೇ ‘ಬರಕೋ ಪದಾ ಬರಕೋ’ ಎಂಬ ರಚನೆ. ಕೇಳುವ, ಓದುವ ಕುರಿತು ಪ್ರಸ್ತಾಪವಿರುವ ಇನ್ನಿತರ ಕೆಲವು ರಚನೆಗಳು. ಅವು ಮುದ್ರಿತ ರೂಪದಲ್ಲಿ ಬೆಳಕಿಗೆ ಬಂದುದು ಈಚೆಗೆ. ಮೊದಲ ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ 1985ರಲ್ಲಿ ಡಾ. ಶಿವಾನಂದ ಗುಬ್ಬಣ್ಣವರ ಸಂಪಾದಕತ್ವದಲ್ಲಿ “ಶಿಶುನಾಳ ಶರೀಫರ ಗೀತೆಗಳು” ಎಂಬ ಹೆಸರಿನಲ್ಲಿ ಸಮಗ್ರ ಸಂಪುಟವೊಂದನ್ನು ಪ್ರಕಟಿಸಿತು. ಇದಕ್ಕೆ ಮೊದಲೇ, ನವ್ಯ ಸಾಹಿತ್ಯದ ಕಾಲದಲ್ಲಿ ಕವಿ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ ಅವರು ಸಮಕಾಲೀನರಿಗೆ ಶಿಶುನಾಳ ಶರೀಫರ ಕಾವ್ಯವನ್ನು ಪರಿಚಯಿಸುವ ಕೆಲಸವನ್ನು ಒಂದು ಮಿಶನ್ ಉತ್ಸಾಹ ಮತ್ತು ನಿಷ್ಠೆಯಲ್ಲಿ ಮಾಡಿದರು. ಆದರೆ ಆ ಸಮಯಕ್ಕಾಗಲೇ ಕನ್ನಡದಲ್ಲಿ ನವ್ಯ ತನ್ನ ಕ್ರಾಂತಿಯನ್ನು ಉಂಟುಮಾಡಿಯಾಗಿತ್ತು.

ಶರೀಫರ ಕಾವ್ಯ ನಮ್ಮನ್ನು ತನ್ನ ಪೂರ್ವಭಾವಿ ನಡೆಗೆ ಚಕಿತಗೊಳಿಸಿತು ನಿಜ, ಆದರೆ ಅದರ ವಿಧಾನಗಳನ್ನು ನಾವು ಮಾಡರ್ನಿಸಂನ ಮೂಲಗಳಿಂದ ಸ್ವೀಕರಿಸಿಬಿಟ್ಟಿದ್ದೆವು. ಉಳಿದದ್ದು ಹಾಡುಗಳ ಸೊಗಸು– ಅದನ್ನು ಸಿ. ಅಶ್ವತ್ಥ್, ಶಿವಮೊಗ್ಗ ಸುಬ್ಬಣ್ಣ ಮುಂತಾದ ಗಾಯಕರು ಧಾರಾಳವಾಗಿಯೂ ಮನಮುಟ್ಟುವಂತೆಯೂ ಒದಗಿಸಿಕೊಟ್ಟಿರುವುದನ್ನು ಯಾರೂ ಮರೆಯಲಾರರು.

ಕನ್ನಡ ನವ್ಯದ ಕವಿಗಳ ಮೇಲೆ – ಗೋಪಾಲಕೃಷ್ಣ ಅಡಿಗ, ಎ. ಕೆ. ರಾಮಾನುಜನ್, ರಾಮಚಂದ್ರ ಶರ್ಮ ಮುಂತಾದವರ ಮೇಲೆ ಶರೀಫರ ನೇರ ಪ್ರಭಾವ ಆಗಿದೆ ಎಂದು ನಾನು ಹೇಳಲಾರೆ; ಶರೀಫರ ಕಾವ್ಯವನ್ನು ಅವರು ಓದಿದ್ದಾರೆ ಅಥವ ಇಲ್ಲ ಎಂಬುದರ ಬಗ್ಗೆ ನನಗೆ ಮಾಹಿತಿಯಿಲ್ಲ. ಆದರೂ ಅವರ ಕವಿತೆಗಳಲ್ಲಿ ಶರೀಫರ ಕಾವ್ಯಲಕ್ಷಣಗಳು ಬಹಳ ಇವೆ ಎಂದು ಮಾತ್ರ ಹೇಳಬಲ್ಲೆ; ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಶರೀಫರಲ್ಲಿ ಅಡಿಗ, ರಾಮಾನುಜನ್, ರಾಮಚಂದ್ರ ಶರ್ಮ ಮುಂತಾದ ಕನ್ನಡದ ಮುಂಚೂಣಿಯ ನವ್ಯ ಕವಿಗಳ ಕಾವ್ಯಲಕ್ಷಣಗಳು ಸಾಕಷ್ಟು ಇವೆ ಅನ್ನಬಹುದು. ಎಂದರೆ ನಾನು ಹೇಳುವುದು ಒಂದು ರೀತಿಯ ಸಾದೃಶ್ಯ, ಕಾವ್ಯ ಮನೋಧರ್ಮ ಮತ್ತು ಕಲೆಗಾರಿಕೆಯಲ್ಲಿ. ಇದು ಮುಖ್ಯವಾಗಿ ಕಾಣಿಸುವುದು ಶರೀಫರು ಬರೆಯುವ ವಸ್ತುವಿಷಯಗಳಲ್ಲಿ ಮತ್ತು ಬಳಸುವ ಭಾಷೆಯಲ್ಲಿ. ಯಾವುದೇ ಮಡಿವಂತಿಕೆಯಿಲ್ಲದ, ಬಳಸಬಹುದು, ಬಾರದು ಎಂಬ ಪರಿವೆಯಿಲ್ಲದ, ಜಾತಿ ಮತ ಶಿಷ್ಟ ಅಶಿಷ್ಟ ಮೇಲು ಕೀಳುಗಳೆಂಬ ಭೇದಭಾವಗಳಿಲ್ಲದ, ಈ ಭೇದಭಾವಗಳು ಸಮಾಜದಲ್ಲಿ ಇದ್ದರೂ, ಅಥವಾ ಇದ್ದ ಕಾರಣವೇ ಅವುಗಳನ್ನು ಸೃಜನಶೀಲವಾಗಿ ಬಳಸಿಕೊಳ್ಳುವ ಮಾಂತ್ರಿಕ ಶೈಲಿ ಇದು. ಒಂದು ತರದ ‘ಅಪವಿತ್ರ ಪವಿತ್ರೋ ವಾ’ ಎಂಬ ಛಾತಿ. ಮುಚ್ಚುಮರೆಯಿಲ್ಲದ ‘ಅಕ್ರಮ’ ಸಂಬಂಧ.

ಉರ್ದು, ಅರೆಬಿಕ್, ಪರ್ಶಿಯನ್, ಸಂಸ್ಕೃತ, ಮರಾಠಿ, ಕನ್ನಡ (ಸೀಮೆ, ಗ್ರಾಮ್ಯ ಸಮೇತ ಹಲವು ಶ್ರೇಣಿಯವು) ಶರೀಫರ ಗಿರಣಿಗೆ ಗ್ರಾಸವೇ. ಇನ್ನು ವಸ್ತು ವೈವಿಧ್ಯವನ್ನು ನೋಡಿದರೆ ಇಲ್ಲಿ ಗರತಿಯರು, ಸೂಳೆಯರು, ಋಷಿಮುನಿಗಳು, ಕಳ್ಳ ಸನ್ಯಾಸಿಗಳು, ಸಂತರು, ಪಾಪಿಗಳು, ಭಕ್ತರು, ವಿರಕ್ತರು, ತ್ಯಾಗಿಗಳು, ಭೋಗಿಗಳು ಎಲ್ಲರೂ ಬರುತ್ತಾರೆ. ಹೋಳಿಯಂತೆ ರಂಜಾನೂ ಬರುತ್ತದೆ, ಕರ್ಬಾಲಾ ಬರುತ್ತದೆ, ಹಸನ್-ಹುಸೇನರ ಕುರ್ಬಾನಿಯನ್ನು (ಆತ್ಮಾಹುತಿಯನ್ನು) ನೆನಪಿಸುವ ಕರ್ಬಾಲ ಕಾಳಗ, ಮೊಹರಂ, ಅಲಾವಿ ಮುಂತಾದ ಆಚರಣೆಗಳ ಉಲ್ಲೇಖಗಳು ಆಗಾಗ ಬರುತ್ತವೆ, ಶಿಶುನಾಳ ಶರೀಫರಿಗೆ ದೇವರು ವಿಶ್ವಾತ್ಮಕವೂ ಹೌದು, ಸ್ಥಳೀಯವೂ ಹೌದು. ಅಮೂರ್ತ ಮತ್ತು ಮೂರ್ತವನ್ನು ಒಟ್ಟಿಗೇ ಅವರು ನಿಭಾಯಿಸುವ ರೀತಿ ಆಪ್ಯಾಯಮಾನ.

ಶರೀಫರ ಕಾಲದಲ್ಲಿ ಯುರೋಪಿನಲ್ಲಿ ಕೂಡ ನವ್ಯಕ್ಕೆ ಮೂಲವಾಗಿದ್ದ ಮಾಡರ್ನಿಸಂ ಹುಟ್ಟಿ ಬಂದಿರಲಿಲ್ಲ. ಮಾಡರ್ನಿಸಂ ಅರ್ಥಾತ್ ಆಧುನಿಕತೆ ಆರಂಭವಾದದ್ದು ಮೊದಲ ಮಹಾಯುದ್ಧದ ಕಾಲದಲ್ಲಿ, ಎಂದರೆ ಇಪ್ಪತ್ತನೇ ಶತಮಾನದ ಆದಿ ಭಾಗದಲ್ಲಿ. ಎತ್ತಣ ನವ್ಯ ಎತ್ತಣ ಶರೀಫರು ಎಂದು ಕೇಳಬಹುದು. ಕನ್ನಡದ ನವ್ಯ ಕಾವ್ಯ ಶಿಶುನಾಳರಿಗಿಂತ ಇನ್ನೂ ಹತ್ತಿರ ಹತ್ತಿರ ಒಂದು ಶತಮಾನದಷ್ಟು ಮುಂದೆ ಇತ್ತು.

ಉತ್ತರ ಕರ್ನಾಟಕದಲ್ಲಿ ಅವರು ಸುತ್ತದ ಊರುಗಳಿಲ್ಲ, ನಡೆದುಕೊಳ್ಳದ ದೇವರುಗಳಿಲ್ಲ, ದರ್ಶನ ಮಾಡದ ಸಾಧು ಸಂತರಿಲ್ಲ. ಗಲ್ಲಿ ಗಲ್ಲಿಗಳನ್ನೂ ಜಾತ್ರೆ ಸಂತೆಗಳನ್ನೂ ಮಕ್ಕಳ ಆಟದ ಬಯಲುಗಳನ್ನೂ ಸುತ್ತುತ್ತಾರೆ. ಸೂಳೆಮನೆಗಳೂ ಅವರ ದೃಷ್ಟಿಗೆ ಬೀಳುತ್ತವೆ. ತಾವು ಹೋದಲ್ಲೆಲ್ಲ ಅವರು ಹಾಡುಕಟ್ಟುತ್ತಾರೆ. ಅವು ಎಲ್ಲೆಲ್ಲೋ ಹಾರಿ ಹೋಗುತ್ತವೆ, ಸಿಕ್ಕಿದವರ ಪುಣ್ಯ ಎಂಬಂತೆ ಕೆಲವರಿಗೆ ಕೆಲವು ಸಿಗುತ್ತವೆ. ಶಿಶುನಾಳರ ಲೋಕ ಇದ್ದಲ್ಲೆ ಬಹು ವಿಸ್ತಾರವಾದುದು, ಈ ನೆಲ ಮತ್ತು ಜನಪದದ ಗಟ್ಟಿ ಅಡಿಪಾಯದ ಮೇಲೆ ಕಟ್ಟಿದುದು. ಅವರ ಗಿರಣಿಯ ಚಿತ್ರದಂತೆಯೇ ಚಲನಶೀಲ, ವಿಸ್ಮಯಪೂರ್ಣ. ಜೀವನದಲ್ಲಿ ಶ್ರದ್ಧೆಯಿರುವಂತೆಯೇ ಅವರಿಗೆ ನಿಸ್ಸಂಗತ್ವವೂ ಇದೆ. ಅದಲ್ಲದಿದ್ದರೆ –

ಹುಟ್ಟಿದ್ದು ಹೊಲಿಮನಿ
ಬಿಟ್ಹೊಂಟ್ಯೋ ತಾಯ್ಮನಿ
ಎಷ್ಟಿದ್ದರೇನಿದು ಖಾಲಿಮನಿ

ವಸ್ತಿ ಇರುವ ಮನಿ
ಗಸ್ತಿ ತಿರುಗುವ ಮನಿ
ಶಿಸ್ತಿಲೆ ಕಾಣುವ ಶಿವನ ಮನಿ

ಚಿಂತೆ ಕಾಂತೆಯ ಮನಿ
ಸಂತೆ ಸವತಿಯ ಮನಿ
ಅಂತು ಬಲ್ಲವರಿಗೆ ಆಡವ ಮನಿ

ಒಂಭತ್ತು ಬಾಗಿಲ ದಾಟಿ
ಹೊರಟು ಹೋಗುವಾಗ
ಗಂಟೆ ಬಾರಿಸಿದಂತೆ ಗಾಳಿಮನಿ

ವಸುಧೆಯೊಳಗೆ ನಮ್ಮ
ಶಿಶುನಾಳಧೀಶನ
ಹಸನಾದ ಪದಗಳ ಹಾಡವ ಮನಿ

ಎಂಬ ಈ ಕವಿತೆ ಸಾಧ್ಯವಿತ್ತೇ? ಸಾವನ್ನು ನೆನಪಿಸುವ ಸಂದರ್ಭದಲ್ಲೂ ಈ ಕವಿ ಗಾಳಿಮನಿಯ ಘಂಟಾನಾದದ ರೂಪಕವನ್ನು ಹೇಗೆ ತರುತ್ತಾರೆ ನೋಡಿ! ಎಂಥವರಿಗೂ ಇಷ್ಟವಾಗುವ ಕವಿತೆ ಇದು.

ಶರೀಫರ ಅನುಭಾವಲೋಕ ಆಧ್ಯಾತ್ಮಿಕವಾದರೂ ಅನುಭವಲೋಕ ಪ್ರಾಪಂಚಿಕವೇ. ಅದು ಕೇವಲ ಮಾನವ ಜೀವಿಗಳಿಂದ ಮಾತ್ರವೇ ತುಂಬಿರುವುದಲ್ಲ. ಸಕಲ ಪಶುಪಕ್ಷಿ ಕ್ರಿಮಿಕೀಟಗಳಿಗೂ ಜಲ ಜಲಧಾರೆಗಳಿಗೂ ವೃಕ್ಷಗಳಿಗೂ ಅಲ್ಲಿ ನೆಲೆಯಿದೆ. ಅವರ ಕಾವ್ಯದಲ್ಲಿ ಕೋಳಿಗಳ ಪ್ರಸ್ತಾಪ ಬರುವಷ್ಟು ಇನ್ನು ಯಾರ ಕಾವ್ಯದಲ್ಲೂ ಬರುವುದಿಲ್ಲ. ಜನ್ನನ ಯಶೋಧರ ಚರಿತೆಯಲ್ಲಿ ಹಿಟ್ಟಿನ ಹುಂಜವಾಗಿ ಅದು ಬರುತ್ತದೆ. ಬಹುಶಃ ನಂತರ ಅದು ಬರುವುದು ಶರೀಫರ ಕಾವ್ಯದಲ್ಲೇ, ವಿಪುಲವಾಗಿ.

ಪಶುಪಕ್ಷಿಗಳೆಂದರೆ ಅದೇನು ಇಷ್ಟವೋ ಅವರಿಗೆ! (‘ಬೆಳವ’ನಾನು ಮೊದಲು ಕಂಡದ್ದು ಅವರಲ್ಲಿಯೇ!) ಅಷ್ಟು ಮಾತ್ರವೂ ಅಲ್ಲ, ಪರಿಮಳದಂತೆ ನಾತಕ್ಕೂ, ಪರಿಶುದ್ಧಿಯಂತೆ ಕೊಳಕಿಗೂ, ಧೂಪದಂತೆ ಗುಡುಗುಡಿಗೂ ಅವರ ಕಾವ್ಯದಲ್ಲಿ ಸ್ಥಾನವಿದೆ. ಇದರಲ್ಲಿ ಮತ್ತೆ ಅವರು ಜನ್ನನ ಅನುಯಾಯಿಯೆ! ಈ ಕವಿಯ ಮಿಶ್ರಪದಗಳ ಒಲವಿನ ಕುರಿತು ಆಗಲೇ ಸೂಚಿಸಿದೆವು. ಬಹುಶಃ ಇಂಥ ಪದಸಂಪತ್ತಿನಲ್ಲಿ ಯಾವ ನವ್ಯ ಕವಿಯೂ – ಅಡಿಗರೂ ಸೇರಿದಂತೆ ಯಾರೂ – ಶರೀಫರನ್ನು ಮೀರಿಸಲಾರರು. ಇನ್ನು ಬಯ್ಗುಳ ಪದಗಳನ್ನು ಅವಲೋಕಿಸಿದರೆ ಶರೀಫರಷ್ಟು ನಿರ್ಭಿಡೆಯಿಂದ ಅವುಗಳನ್ನು ಬಳಸಿದವರು ಇನ್ನು ಯಾರೂ ಇಲ್ಲ. ತಾಯಿಗಂಡ, ಪಿಕನಾಶಿ, ಬಾಜಾರಿ, ಹುಂಬ ಸೂಳೇಮಗ ಇಂಥವುಗಳಲ್ಲಿ ಕೆಲವು ಮಾತ್ರ. ಒಬ್ಬ ಗ್ರಾಮೀಣನ ಮುಗ್ಧತೆ ಶರೀಫರಲ್ಲಿದೆ. ಬಯ್ಗುಳ ಪದ ಕಾವ್ಯ ಸಂದರ್ಭದಲ್ಲಿ ಏನು ಮಾಡುತ್ತದೆ ಎನ್ನುವುದು ಮುಖ್ಯವೇ ಹೊರತು ಅದರಷ್ಟಕ್ಕೇ ಅಲ್ಲ ಎನ್ನುವುದು ಅವರ ಮನೋಧರ್ಮ ಇರಬೇಕು. ಅಲ್ಲದೆ ಅಂಥ ಮಾತುಗಳ ಮೂಲಕ ಅವರು ಜನರಿಗೆ ಹತ್ತಿರವಾಗುತ್ತಾರೆ. ಅವರು ಎತ್ತರದಿಂದ ಮಾತಾಡುವುದಿಲ್ಲ, ಸಮನಾಗಿ ಮಾತಾಡುತ್ತಾರೆ.

ಈ ಲೇಖನಕ್ಕೆ ಮೇಲುಕ್ತಿಯಾಗಿ ‘ಬರಕೋ ಪದಾ ಬರಕೋ,’ ಅಥವಾ ‘ಕೋಡಗನ ಕೋಳಿ ನುಂಗಿತ್ತಾ,’ ಅಥವಾ ‘ಹೌದಪ್ಪ ಹೌದೋ ನೀನೇ ದೇವರ,’ ಅಥವಾ ‘ಎಷ್ಟು ಕಾಡತಾವ ಕಬ್ಬಕ್ಕಿ,’ ಅಥವಾ ‘ಬಿದ್ದಿಯಬ್ಬೇ’ – ಯಾವುದನ್ನಾದರೂ ಬಳಸಿಕೊಳ್ಳಬಹುದಿತ್ತು, ಒಂದೊಂದೂ ಅಣಿಮುತ್ತು. ನಾನು ಬಳಸಿಕೊಂಡುದು ‘ಆರೂಢಾ ಈರೂಢಾ’ ಎಂಬ ಕವಿತೆಯನ್ನು. ಶರೀಫರ ನಂತರ ಇಂಥ ಶಬ್ದಲೀಲೆಯನ್ನು (ಅರ್ಥಾತ್ ನಾದಲೀಲೆಯನ್ನು) ಮಾಡಿದವರಲ್ಲಿ ಬೇಂದ್ರೆಯವರೊಬ್ಬರೇ ಅಗ್ರಗಣ್ಯರು ಅನಿಸುತ್ತದೆ. ಹೆಚ್ಚು ಪಾರದರ್ಶಕವೂ ಅಲ್ಲ, ಹೆಚ್ಚು ಅಪಾರದರ್ಶಕವೂ ಅಲ್ಲ ಎಂಬಂತಿರುವ ಅಸಂಗತ ಕಾವ್ಯ ಇದು. ಟಿಪಿಕಲ್ ನವ್ಯ ಅನ್ನಬಹುದು. ಒಂದೆಡೆ ನೇಯ್ದದ್ದು ಇನ್ನೊಂದೆಡೆ ಬಿಚ್ಚುತ್ತ ಹೋಗುತ್ತದೆ. ವಚನಕಾರರಿಂದ ಹಿಡಿದು ಹತ್ತೊಂಭತ್ತನೆ ಶತಮಾನದ ತತ್ವಪದಕಾರರ ತನಕ ಎಲ್ಲರಲ್ಲೂ ಕಾಣಿಸುತ್ತದೆ ನಿಜ, ಆದರೆ ನವ್ಯಪೂರ್ವದ ಹಳಬರಲ್ಲಿ ಢಾಳಾಗಿ ಕಾಣಿಸುವುದು ಶರೀಫರಲ್ಲಿ. ವಾಸ್ತವದಲ್ಲಿ ಶರೀಫರ ಒಂದೊಂದು ಕವಿತೆಯೂ ಅವರ ಕಾವ್ಯಲೋಕಕ್ಕೆ ಪ್ರವೇಶವೇ, ಮತ್ತು ಪ್ರತಿಯೊಂದೂ ನಮಗೆ ಬೆರಗನ್ನು ಹುಟ್ಟಿಸುವಂಥದು.


ಒಂದು ಕವಿತೆಯಲ್ಲಿ ಅವರು ಹೇಳುತ್ತಾರೆ: ಇದರಲ್ಲಿ ವಿಷಯವೇನಿಲ್ಲ, ಇದೊಂದು ‘ಹೊಸಾ ಕವಿತಾ’ ಎಂಬುದಾಗಿ (‘ಯೋಗಿಯ ಕಂಡೆನು ಹುಚ್ಚೇಂದ್ರ’). ಒಂದು ಅಸಂಗತ ಅರ್ಥದಲ್ಲಿ ಇದು ಅವರ ಒಟ್ಟಾರೆ ಕಾವ್ಯಕ್ಕೆ ಒಪ್ಪುವ ಮಾತಾಗಿದೆ.