ಪಾತಾಳ – ಕೇತಕಿ

ಕರಾಳ ಆಳದ ಕಡೆಗೆ
ವಿರೋಧವಿಲ್ಲದ ನಡಿಗೆ ನಡೆಯುತ್ತದೆ.

ಕೈಗಳು ಮುರುಟಿ ಮೊಂಡಾಗಿ
ಆಧಾರಕ್ಕುಳಿದ ಕಾಲುಗಳು
ಕೆಳಗಿಳಿಯುತ್ತವೆ.

ವಾಸಿಸಲಾಗದ ಅಂಧಕಾರಗಳ
ಹೇಸಿಗೆಯಿಂದ ಹೊರಗೆ
ನುಸುಳಿಕೊಳ್ಳುವ
ತಿಳಿನೋವಿನ ಹಗುರಕ್ಕೆ
ವೇಗ ನಶಿಸುತ್ತದೆ.

ಮಾತನಾಡುವವನೂ ಕೇಳಿಸಿಕೊಳ್ಳಬೇಕಾಗುವ
ದುರ್ದೆಸೆಯ ವಾಕ್ಯಗಳ
ಆಕರ್ಷಣೆಯನ್ನು ಶೂನ್ಯಗೊಳಿಸಿದರೆ
ತಳವೂ ಎಳೆಯುವುದಿಲ್ಲ.

ಪಾತಾಳಕ್ಕೆ ಹೊರಟವನ
ಆಯುಷ್ಯದ ಅವಧಿಯಲ್ಲಿ
ಗಡಿಯಾರವಿನ್ನೂ ಮಂಕಾಗದೇ
ಕುದಿಯುತ್ತಿರುವುದೇ ಆಗಿದ್ದಲ್ಲಿ,
ಕೇತಕಿಯ ಘಮ ಗುಲ್ಲೆಬ್ಬಿಸಿ
ಕಟ್ಟಿಹಾಕುತ್ತದೆ.

ಹಿಮ್ಮುಖ ಹೆಜ್ಜೆಯನ್ನು
ಅನುಸರಿಸಿಯಾದರೂ
ತಿರುಗಿ ಬರಲೇಬೇಕಾದವನ
ಸ್ವಾಗತಕ್ಕೆ ಕೇತಕಿ ಕಾದಿರುತ್ತದೆ.

ಬೆವರು ಬೆರೆತ ಚಹಾ!

ಒಂದು ಹನಿ ಬೆವರು ಬೆರೆತ ಚಹಾ!
ಬೆಲೆ ಎಷ್ಟಿದ್ದರೂ
ಹೀರುವವನ ತುಡಿತಕ್ಕೆ
ತಡೆಹಾಕಲಾಗದೇ
ಹಾತೊರೆಯುವ ಹೊತ್ತುಗಳಲ್ಲಿ
ಹಣ ತೆತ್ತು
ಆಸೆ ಇಂಗಿಸಿಕೊಂಡರೂ
ಒಂದು ಹನಿ ಬೆವರ ಹಂಗು ಕಳೆಯುವುದಿಲ್ಲ.

ಇದು ಕಾಮದ ಇನ್ನೊಂದು
ರೂಪವೋ ಎಂದು
ಒಳಗನ್ನು ಪೀಡಿಸುವಂತೆ
ಕಾಡುವ ಚಹಾದ ರುಚಿ
ಮಾಡಿದವನ ಬೆವರ ಹನಿಯಲ್ಲೋ
ಕುಡಿದವನ ಹೊಗಳಿಕೆಯ ದನಿಯಲ್ಲೋ
ಹುಟ್ಟಿ, ಸತ್ತು ಮತ್ತೆ ಬದುಕಿಬರುತ್ತದೆ.

ನೀರಿನಲ್ಲಿ ಕುದಿಯುವ
ಪುಡಿಯ ಸ್ವಾದ
ಆವಿಯಾಗುವುದೇಇಲ್ಲ;
ಆವಿಗೆ ಮುಖವೊಡ್ಡಿ
ಸಕ್ಕರೆ ಹಾಲು ಸುರಿಯುವವನ
ಬೆವರ ಹನಿಯೊಂದನ್ನು ಸೆಳೆದು
ರುಚಿಯನ್ನು ಬೆಳಗಿಕೊಳ್ಳುವ
ಚಹಾದ ತಂತ್ರ
ಮರೆಯಲ್ಲಿ ನಡೆಯುವುದಿಲ್ಲ.

ರೆಪ್ಪೆ ಬಡಿದು ಮುಗಿಸುವಷ್ಟರಲ್ಲಿ
ಒಂದು ಹನಿ ಬೆವರ ಋಣ
ಆಸೆಬುರುಕರ ಕೈಸೇರಿರುತ್ತದೆ;
ಚಹಾದ ಚಟ ಕೈಮೀರಿರುತ್ತದೆ.

ಶ್ರೀಕಲಾ ಹೆಗಡೆ ಕಂಬ್ಳಿಸರ ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ.
ಓದಿದ್ದು ವಾಣಿಜ್ಯಶಾಸ್ತ್ರ.
ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿ
ಈಗ ಊರಲ್ಲಿ ಗೃಹಿಣಿ ಮತ್ತು ಬ್ಲಾಗರ್.
(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)