ಕಲ್ಲಾಗುವುದು ಶಾಪವೋ ಶಿಕ್ಷೆಯೋ ಆಗದೆ ತನ್ನ ಆಯ್ಕೆಯೇ ಆಗಬಹುದಾದ ಸಾಧ್ಯತೆಯನ್ನು ಹೇಳುತ್ತಲೇ ಕಲ್ಲಾಗುವುದು ಕೂಡ ಬಂಡಾಯದ ಒಂದು ಪರಿಯೂ ಹೌದು ಎನ್ನುವುದನ್ನು ಸೂಚಿಸುತ್ತಿದೆ. ಪಾಂಡವರು ಬಂದು ಬಾಳು ಕೊಡದ ಕಾರಣಕ್ಕಾಗಿ ಇನ್ನೂ ಮುಡಿ ಕಟ್ಟಿಲ್ಲದ ದ್ರೌಪದಿಯಾಗಲೀ, ರಾತ್ರಿ ಪಾಳಿಯಲ್ಲಿ ಕಾಲ್ ಸೆಂಟರಿನಲ್ಲಿ ಕೆಲಸ ಮಾಡುತ್ತಿರುವ ಸೀತೆಯಾಗಲೀ, ಸೇಲ್ಸ್ ಗರ್ಲ್ ಆಗಿರುವ ರಾಧೆಯಾಗಲೀ ಧ್ವನಿಸುತ್ತಿರುವುದು ಹೆಣ್ಣಿನ ಮುಗಿಯದ ಹೋರಾಟವನ್ನೇ. ಆದರೆ ಈ ಹೋರಾಟವನ್ನು ಪ್ರಸ್ತುತ ಪಡಿಸುತ್ತಿರುವುದು, ಸ್ವಾನುಕಂಪದಿಂದಲ್ಲ, ಶೋಷಿತ ಮಹಿಳೆಯರ ಅಳುಮುಂಜಿ ಸ್ವರದಲ್ಲೂ ಅಲ್ಲ.
ಡಾ. ಶ್ರುತಿ ಬಿ.ಆರ್‌. ಬರೆದ “ಜೀರೋ ಬ್ಯಾಲೆನ್ಸ್‌” ಕವನ ಸಂಕಲನಕ್ಕೆ ಹಿರಿಯ ಲೇಖಕಿ  ಡಾ. ಎಂ ಎಸ್. ಆಶಾದೇವಿ ಬರೆದ ಮುನ್ನುಡಿ

 

ಕಾವ್ಯ ಶ್ರುತಿಯ ಬೆಂಬಿಡಿದು….

’ಅಕ್ಷಯ’ ಎನ್ನುವುದು ಕಾವ್ಯಕ್ಕೆ ಅನ್ವರ್ಥವಾಗುವಷ್ಟು ಇನ್ನಾವುದಕ್ಕೂ ಆಗಲಾರದೇನೋ. ಮಾತ್ರವಲ್ಲ ಅಕ್ಷಯದ ಅರ್ಥ, ಸಾಧ್ಯತೆ ಮತ್ತು ಆಶಯಗಳೆಲ್ಲದರ ಸಾಕಾರ ರೂಪ ಕಾವ್ಯ. ಹೊಸ ತಲೆಮಾರಿನವರ ಕಾವ್ಯವನ್ನು ಕುತೂಹಲ, ಆಸೆ ಮತ್ತು ಉತ್ಸಾಹದಿಂದ ಓದುವಾಗಲೆಲ್ಲ ಕಾವ್ಯದ ಈ ಅಕ್ಷಯ ಶಕ್ತಿ ಮತ್ತು ಮಾಂತ್ರಿಕತೆಯ ಬಗೆಗೆ ಕೊನೆಯಿಲ್ಲದ ಬೆರಗು ಆವರಿಸುತ್ತದೆ. ಅದೇ ಹೊತ್ತಿಗೆ ಕಾವ್ಯದ ಬಗೆಗಿನ ಪ್ರೀತಿಯೂ ಹೆಚ್ಚಾಗುತ್ತಲೇ ಹೋಗುತ್ತದೆ, ಅಕ್ಷಯವೋ ಎಂಬಂತೆ.

ಸಮಕಾಲೀನ ಕನ್ನಡ ಕಾವ್ಯದ ಏಳು ಮತ್ತು ಬೀಳುಗಳೆರಡೂ ಅಗಾಧವಾದವು. ಕಾವ್ಯವನ್ನು ಶಾಲೆಯಲ್ಲಿ ಕೊಡುವ ಹೋಮ್ ವರ್ಕ್ ನಂತೆ ಮಾಡಿ ಮುಗಿಸಿ, ಕಾವ್ಯವೆನ್ನುವ ಪರೀಕ್ಷೆಯನ್ನು ಪಾಸಾದವರಂತೆ ಬೀಗುವ ದೊಡ್ಡ ಪಡೆಯೇ ನಮ್ಮ ನಡುವೆ ಇದೆ. ಸಾವಿರಾರಲ್ಲದಿದ್ದರೂ ನೂರಾರು ಸಂಖ್ಯೆಯ ಪ್ರಶಸ್ತಿಗಳೂ ಈ ತಲೆಮಾರನ್ನು ದಿಕ್ಕುತಪ್ಪಿಸುತ್ತಿರಬಹುದೆನ್ನುವ ಸಕಾರಣವಾದ ಅನುಮಾನವೂ ನನಗಿದೆ! ಕೆಲವು ಬಾರಿ ಈ ವರ್ಗದವರ ನಡವಳಿಕೆ ಹೇಗಿರುತ್ತದೆ ಎಂದರೆ, ನಮ್ಮ ಬರವಣಿಗೆಯನ್ನು ನೀವು ಕಾವ್ಯವೆಂದು ಒಪ್ಪದಿದ್ದರೆ, ನಿಮಗೆ ಕಾವ್ಯ ಓದಲು ಬರುವುದಿಲ್ಲ ಎನ್ನುವುದರಿಂದ ಹಿಡಿದು, ಅದನ್ನು ಕ್ಷುಲ್ಲಕ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ರಾಜಕಾರಣದ ಶೂಲಕ್ಕೂ ಏರಿಸುತ್ತಾರೆ. ’ಇನ್ನೊಂದು ದಿವಸ ಕಾದರೆ ನಷ್ಟವೆ’? ಎನ್ನುವ ನರಸಿಂಹಸ್ವಾಮಿಯವರ ಮಾತು ಕವಿಯು ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಳ್ಳಬೇಕಾದ ಶಿಸ್ತು ಮತ್ತು ಮನಸ್ಥಿತಿ ಎನ್ನುವುದರ ಅರಿವನ್ನು ಅವರಿಗೆ ತಂದುಕೊಡುವ ಹೊತ್ತಿಗೆ ನಮ್ಮ ಬಗೆಗೇ ಅನುಕಂಪ ಹುಟ್ಟಿರುತ್ತದೆ.

(ಡಾ. ಶ್ರುತಿ ಬಿ.ಆರ್‌.)

ಇದಕ್ಕೆ ತದ್ವಿರುದ್ಧ ಎನ್ನುವಂತೆ, ಕಾವ್ಯಕ್ಕಾಗಿ ಅವಿರತವಾಗಿ ಹಂಬಲಿಸುತ್ತಲೇ, ಮಗುವಿನ ಆಗಮನಕ್ಕಾಗಿ ಕಾಯುವ ತಾಯಿಯಂತೆ ತಾಳ್ಮೆ, ಪ್ರೀತಿಯಿಂದ ಕಾಯುವ ಕವಿಗಳೂ ಇದ್ದಾರೆ. ಅವರೇ ಕನ್ನಡ ಕಾವ್ಯ ಪರಂಪರೆಯ ಉತ್ತರಾಧಿಕಾರಿಗಳು. ಶ್ರುತಿ ಈ ದಾರಿಯಲ್ಲಿದ್ದಾರೆ ಎನ್ನುವ ಭರವಸೆ ನನಗಿದೆ. ಇವರ ಕವಿತೆಗಳನ್ನು ಓದುತ್ತಿದ್ದರೆ, ಇಲ್ಲಿನ ಹಲವಾದರೂ ಕವಿತೆಗಳು ಇವರಲ್ಲಿ ಎಂದಿನಿಂದಲೋ ಇದ್ದು, ’ಕವನ ಹುಟ್ಟುವ ಸಮಯ’ಕ್ಕಾಗಿ ಕಾದು ಬಂದಿರುವ ಕವಿತೆಗಳು ಎನ್ನುವುದು. ಶ್ರುತಿ ಅವರ ಬಗ್ಗೆ ಭರವಸೆ ಹುಟ್ಟುವುದು ಇದೇ ಕಾರಣಕ್ಕಾಗಿ.

ಎಲ್ಲ ಹೊಸ ಕವಿಗಳಂತೆ ಶ್ರುತಿ ಅವರ ಬಹುತೇಕ ಕವಿತೆಗಳೂ ಲೋಕಪ್ರತಿಕ್ರಿಯೆಯ ಮಾದರಿಯವು. ಅವು ತುಸು ವಾಚ್ಯವಾಗಿದ್ದೂ ಚೂಪಾಗಿಯೂ ಇವೆ. ಯಾವ ಲೋಕದ ಬಗ್ಗೆ ಪ್ರಶ್ನೆಗಳಿವೆಯೋ, ಅದರ ಬಗ್ಗೆ ಅದುಮಿಡಲಾಗದ ಕೋಪವಿದೆಯೋ ಆ ಲೋಕದಲ್ಲಿಯೇ ತಾನು ಬದುಕುತ್ತಿರುವುದು, ಹೆಣಗುತ್ತಿರುವುದು ಎನ್ನುವ ಅರಿವು ಈ ಕವಿತೆಗಳನ್ನು ರೂಪಿಸಿದೆ. ಎಂದರೆ, ಲೋಕವನ್ನು ತನ್ನಿಂದ ಬೇರೆಯಾಗಿಸಿಕೊಂಡು ಈ ಕವಿ ನೋಡುತ್ತಿಲ್ಲ, ತಾನೂ ಅದರ ಒಂದು ಭಾಗ ಎನ್ನುವ ಎಚ್ಚರವನ್ನು ಮಾತ್ರವಲ್ಲ, ಅದರ ಈ ಇಂಥ ಸ್ಥಿತಿಗೆ ತಾನೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಕಾರಣವಾಗಿರಬಹುದೆ ಎನ್ನುವ ’ಸಾಕ್ಷಿಪ್ರಜ್ಞೆ’ಯನ್ನು ಸದಾ ಕಾಪಿಟ್ಟುಕೊಳ್ಳಲು ಹವಣಿಸುವ ಕವಿತೆಗಳೂ ಆಗಿವೆ.

ಮೊದಲ ಕವಿತೆ, ‘ಭೇಟಿಯಾಗಿದ್ದರು… ಆ ಹುಡುಗಿಯರು..’ ಕವಿತೆ ಇದಕ್ಕೆ ಅತ್ಯುತ್ತಮ ಉದಾಹರಣೆ.

ಅಹಲ್ಯೆಯನ್ನುದ್ಧರಿಸುವ
ರಾಮ ಲಕ್ಷ್ಮಣರೆಲ್ಲ
ಊರು ಬಿಟ್ಟಿರಬೇಕು!
ಮಾಯಾ ಜಿಂಕೆಗಳ ಬೆನ್ನತ್ತಿ,
ಮಹಾ ಸಾಗರಗಳ ಲಂಘಿಸುತ್ತಾ
ಡಾಲರುಗಳ ಬೇಟೆಗಾಗಿ!
ಕಳೆದ ಸೀತೆಯನುಡುಕಲು
ಸಮಯವಿಲ್ಲ!

ಪುರಾಣ ಮತ್ತು ವರ್ತಮಾನಗಳನ್ನು ಮುಖಾಮುಖಿಯಾಗಿಸುವ ಈ ಕವಿತೆ, ರಾಮ ಲಕ್ಷ್ಮಣರನ್ನಾಗಲೀ, ಕೃಷ್ಣ, ರಾಮರನ್ನಾಗಲೀ ನಾಯಕರನ್ನಾಗಿಸುವ ಇರಾದೆಯದಲ್ಲ. ಅಂದಿಗೂ ಇಂದಿಗೂ ಹೆಣ್ಣಿನ ಸವಾಲುಗಳು, ಸಂಕಷ್ಟಗಳು ಉಳಿದೇ ಇವೆಯಲ್ಲ ಎನ್ನುವ ವ್ಯಗ್ರತೆ, ವಿಷಾದ, ಇದಕ್ಕೆ ತಮ್ಮದೇ ಆದ ಪರಿಹಾರವನ್ನು ಹುಡುಕುತ್ತಿರುವ ಹೆಣ್ಣಿನ ಬಗೆಗಿನ ಗೌರವ ಈ ಎಲ್ಲವೂ ಈ ಕವಿತೆಯಲ್ಲಿ ಢಾಳಾಗಿಯೇ ಇವೆ. ರಾಮ ಲಕ್ಷ್ಮಣರ ಸಹಾಯವೋ ಹಂಗೋ ಇಲ್ಲದೆಯೇ ತಮ್ಮ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಈ ಹೆಣ್ಣುಮಕ್ಕಳು ತಮ್ಮೊಂದಿಗೇ ತಮ್ಮ ಪರಿವಾರದ ಬದುಕನ್ನೂ ಕಟ್ಟುತ್ತಿರುತ್ತಾರೆ ಎನ್ನುವುದು ಈ ಕವಿಗೆ ಆತ್ಮಸ್ಥೈರ್ಯವನ್ನೂ ಕೊಟ್ಟಿದೆ. ಕವಿತೆ ತನ್ನ ಶಿಖರವನ್ನು ತಲುಪುವುದು, ವಾಸ್ತವವನ್ನು ಭಿನ್ನವಾಗಿ ಗ್ರಹಿಸುವ ನೆಲೆಯಿಂದ.

ಮೈತುಂಬ ಸೆರಗೊದ್ದಿದರೂ
ಮೆಸೇಜುಗಳಲ್ಲೇ
ಮೈಸವರಿ, ಆನ್ ಲೈನಿನಲ್ಲೇ
ಸ್ಖಲಿಸಿ ಸುಖಿಸುವ
ಇಂದ್ರರ ಕಂಡ ಅಸಹ್ಯದಿಂದ,
ಮತ್ತೆ ಕಲ್ಲಾಗಬೇಕಂತೆ
ಅಹಲ್ಯೆ!

ಕಲ್ಲಾಗುವುದು ಶಾಪವೋ ಶಿಕ್ಷೆಯೋ ಆಗದೆ ತನ್ನ ಆಯ್ಕೆಯೇ ಆಗಬಹುದಾದ ಸಾಧ್ಯತೆಯನ್ನು ಹೇಳುತ್ತಲೇ ಕಲ್ಲಾಗುವುದು ಕೂಡ ಬಂಡಾಯದ ಒಂದು ಪರಿಯೂ ಹೌದು ಎನ್ನುವುದನ್ನು ಸೂಚಿಸುತ್ತಿದೆ. ಪಾಂಡವರು ಬಂದು ಬಾಳು ಕೊಡದ ಕಾರಣಕ್ಕಾಗಿ ಇನ್ನೂ ಮುಡಿ ಕಟ್ಟಿಲ್ಲದ ದ್ರೌಪದಿಯಾಗಲೀ, ರಾತ್ರಿ ಪಾಳಿಯಲ್ಲಿ ಕಾಲ್ ಸೆಂಟರಿನಲ್ಲಿ ಕೆಲಸ ಮಾಡುತ್ತಿರುವ ಸೀತೆಯಾಗಲೀ, ಸೇಲ್ಸ್ ಗರ್ಲ್ ಆಗಿರುವ ರಾಧೆಯಾಗಲೀ ಧ್ವನಿಸುತ್ತಿರುವುದು ಹೆಣ್ಣಿನ ಮುಗಿಯದ ಹೋರಾಟವನ್ನೇ. ಆದರೆ ಈ ಹೋರಾಟವನ್ನು ಪ್ರಸ್ತುತ ಪಡಿಸುತ್ತಿರುವುದು, ಸ್ವಾನುಕಂಪದಿಂದಲ್ಲ, ಶೋಷಿತ ಮಹಿಳೆಯರ ಅಳುಮುಂಜಿ ಸ್ವರದಲ್ಲೂ ಅಲ್ಲ. ನಾವುಂಟು ನಮ್ಮ ಬದುಕುಂಟು ಎನ್ನುವ ಆತ್ಮವಿಶ್ವಾಸದ ಧರ್ತಿಯಲ್ಲಿ. ನಿಮ್ಮ ಸಹವಾಸವೇ ಸಾಕು, ನಮ್ಮ ತಂಟೆಗೆ ಬಾರದಿದ್ದರೆ ಅದೇ ವರ ಎನ್ನುವ ವ್ಯಂಗ್ಯವೂ ಕವಿತೆಯಲ್ಲಿದೆ.

ಇವರ ಕವಿತೆಗಳನ್ನು ಓದುತ್ತಿದ್ದರೆ, ಇಲ್ಲಿನ ಹಲವಾದರೂ ಕವಿತೆಗಳು ಇವರಲ್ಲಿ ಎಂದಿನಿಂದಲೋ ಇದ್ದು, ’ಕವನ ಹುಟ್ಟುವ ಸಮಯ’ಕ್ಕಾಗಿ ಕಾದು ಬಂದಿರುವ ಕವಿತೆಗಳು ಎನ್ನುವುದು. ಶ್ರುತಿ ಅವರ ಬಗ್ಗೆ ಭರವಸೆ ಹುಟ್ಟುವುದು ಇದೇ ಕಾರಣಕ್ಕಾಗಿ.

ಅಧೀನ ಬದುಕಿನ ಗೋಳುಗಳಿಂದ ಬಿಡುಗಡೆ ಪಡೆಯುವುದು ಇವರ ರಕ್ಷಣೆಯ ಬಲೆಗಿಂತ ವಾಸಿ ಎನ್ನುವ ಅರಿವಿನ ಹೆಣ್ಣುಮಕ್ಕಳು ಇವರು. ಭಾರತೀಯ ಹೆಣ್ಣಿನ ಪ್ರಾತಿನಿಧಿಕ ಮಾದರಿಗಳಂತೆ ಸದಾ ಬಿಂಬಿಸುತ್ತಾ ಬಂದಿರುವ ಈ ನಾಯಕಿಯರನ್ನು ಅವರ ನಾಮಕಾವಸ್ಥೆಯ, ಹಗಲು ವೇಷದ ನಾಯಕಿಯರ ಪಟ್ಟದಿಂದ ಹೊರ ಬರುವುದೇ ತಮ್ಮ ನಿಜ ಮುಕ್ತಿಯ ದಾರಿ ಎನ್ನುವ ಪರಮ ಸತ್ಯವನ್ನು ಅರ್ಥ ಮಾಡಿಕೊಂಡ ವಿಶ್ವಾಸದಲ್ಲಿ ಈ ನಾಯಕಿಯರು ಹೊಳೆಯುತ್ತಿದ್ದಾರೆ. ನಿಜ, ಕವಿತೆ ತುಸು ವಾಚ್ಯವಾಗಿದೆ. ಇನ್ನಷ್ಟು ಬಿಗಿಯಾಗಿರಬಹುದಿತ್ತು, ರೂಪಕಾತ್ಮಕವಾಗಿರಬಹುದಾಗಿತ್ತು.

ಕ್ಷಮಿಸಿ, ನಾನು ಅಂತವಳಲ್ಲ..

ಕವಿತೆಯು ಇದರ ಮುಂದುವರಿದ ಭಾಗದ ಹಾಗೆಯೇ ಇದೆ. ಬದಲಾದ ಕಾಲದಲ್ಲೂ ಅದೇ ಅಪೇಕ್ಷಿತ ಹೆಣ್ಣನ್ನು ಈಗಲೂ ಅಂತಿಮ ಎನ್ನುವಂತೆ ಒಳಗಾದರೂ ಬಯಸುವ ಗಂಡಸರ ಅಂತರಂಗವನ್ನು ಹೊಕ್ಕಂತೆಯೂ, ಏನಾದರೂ ಸರಿ, ಕೊನೆಗೆ ಬದುಕು ಲೋಕದ ಕಣ್ಣಿಗೆ ಮೂರಾಬಟ್ಟೆಯಾದರೂ ಸರಿ, ಅವರ ಪಂಜರದ ಪಕ್ಷಿಯಾಗುವುದನ್ನು ಒಪ್ಪದ ಹೆಣ್ಣಿನ ಬದಲಾದ ಮನಸ್ಥಿತಿಯನ್ನು ಹೇಳುತ್ತಿರುವ ಈ ಕವಿತೆ, ತನಗೆ ತಾನೇ ತನ್ನ ನಿಲುವನ್ನು ಸ್ಪಷ್ಟಪಡಿಸಿಕೊಳ್ಳುತ್ತಿರುವುದೂ ಹೌದು, ಲೋಕಕ್ಕೆ ಅದನ್ನು ಘೋಷಿಸುತ್ತಿರುವುದೂ ಹೌದು.
ಕ್ಷಮಿಸಿ, ನಾನು ಅಂತವಳಲ್ಲ,
ಅಲ್ಲವೇ ಅಲ್ಲ!!

ಎನ್ನುವ ಮಾತು ಅದರ ವಾಚಾಳಿತನದ ಆಚೆಗೂ ಗಂಡು ಮತ್ತು ಹೆಣ್ಣು ಇಬ್ಬರೂ ಸಾಗಬೇಕಾದ ದಾರಿಯ ಆರಂಭದಂತೆ ಕಾಣಿಸುತ್ತದೆ.
ಈ ಎಲ್ಲ ಪಲ್ಲಟಗಳ ಆಶಯದ ನಡುವೆಯೂ ಬದುಕಿನ ದುರಂತ ಮತ್ತು ದುಃಖಗಳು ಕಾಡುವ ಸತ್ಯವನ್ನೂ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಯನ್ನು ’ಕಲೆಗಳಿಗೆ ಕರುಣೆಯಿಲ್ಲ’ ಕವಿತೆಯಲ್ಲಿ ಕಾಣಬಹುದು. ಬದುಕಿನ ನಿಷ್ಕರುಣೆಯನ್ನು ಒಪ್ಪಬೇಕಲ್ಲದೆ ಬೇರೆ ದಾರಿ ಇಲ್ಲ.

ನನಗೆ ಕುತೂಹಲ ಹುಟ್ಟಿಸಿದ ಮತ್ತೊಂದು ಕವಿತೆ ’ಅಂತರ’. ಗಂಡು ಹೆಣ್ಣಿನ ಸಂಬಂಧದ ಸಂಕೀರ್ಣ ಸಂಘರ್ಷವನ್ನು ಈ ಕವಿತೆ ಸರಳವಾಗಿ ಆದರೆ ಸಾಂದ್ರವಾಗಿ ಹಿಡಿಯಲು ಪ್ರಯತ್ನಿಸುತ್ತದೆ.

ಸಮತಟ್ಟಾದ ನೆಲದಲ್ಲೇ ಅರಳಿದ್ದ ನಾವು
ಎಂದು ಕಟ್ಟಿಕೊಂಡೆವು ಹತ್ತಿಳಿಯಲಾಗದ,
ಮೆಟ್ಟಿಲುಗಳೇ ಇಲ್ಲದ,
ಈ ಹತ್ತಾರು ಮಹಡಿಗಳ, ಅಳಿಸಲಾಗದ
ಮೇಲರಿಮೆಗಳ ಮಹಾಸೌಧ?!

ಅಹಂಕಾರದ ಸ್ವರೂಪವನ್ನು ಹತ್ತಿಳಿಯಲು ಮೆಟ್ಟಿಲುಗಳೇ ಇಲ್ಲದ ಸೌಧದ ರೂಪಕ ಬಲು ಚೆಂದವಾಗಿ ಕಟ್ಟಿಕೊಡುತ್ತದೆ. ಗರಿಷ್ಠ ಅಂತರವನ್ನು ತಲುಪುವ ಸಹಜೀವನದ ಭೀಕರತೆಯು ಇಂದಿನ ಸುಡು ವಾಸ್ತವಗಳಲ್ಲಿ ಒಂದು.

(ಡಾ. ಎಂ.ಎಸ್. ಆಶಾದೇವಿ)

’ರೂಪಾಂತರ’ ಕವಿತೆಯು ಅಸಂಗತ ಮತ್ತು ಅಮೂರ್ತ ಆಯಾಮವೊಂದನ್ನು ಬೆನ್ನತ್ತಿರುವಂತೆಯೇ ಕಲೆಯ ಮೂಲವನ್ನೂ ಬೆನ್ನತ್ತಿದಂತೆ ಕಾಣುತ್ತದೆ. ಇರುವೆಯು ಹಲವು ರೂಪಾಂತರಗಳನ್ನು ಕಾಣುತ್ತಾ ಸಿಂಹವಾಗುವುದು ಕೊನೆಗೆ ಮನುಷ್ಯಾವಸ್ಥೆಯನ್ನೇ ಕೈಮಾಡಿ ತೋರಿಸುವಂತಾಗುವುದು ಮನುಷ್ಯ ಮನಸ್ಸು ಮತ್ತು ಬದುಕಿನ ಅನೂಹ್ಯ ಕಾಲ್ಪನಿಕವೋ ವಾಸ್ತವವೋ ಬೇರ್ಪಡಿಸಲಾಗದ ಸ್ಥಿತಿಗೆ ಬರುವುದು ಮನುಷ್ಯರು ಹೇಳಿಕೊಳ್ಳಲು, ಒಪ್ಪಲು ಬಯಸದ ಆಯಾಮವನ್ನು ಧ್ವನಿಸುತ್ತದೆ. ವಿಚಿತ್ರವೆಂದರೆ ಈ ಕವಿತೆ ಶ್ರುತಿ ಅವರಿಗೆ ನಿಜಕ್ಕೂ ಕಾವ್ಯದ ಮೇಲಿರಬಹುದಾದ ಪ್ರೀತಿಯನ್ನೂ ಅದು ಹೇಗೋ ಓದುಗರಿಗೆ ತಲುಪಿಸುತ್ತದೆ!

ಇಷ್ಟೆಲ್ಲ ಹೇಳಿದ ಮೇಲೆ, ಶ್ರುತಿ ಅವರಿಗೆ ಕೆಲವು ಕಿವಿಮಾತುಗಳನ್ನೂ ಪ್ರೀತಿಯಿಂದ ಹೇಳಬೇಕು ಅನ್ನಿಸುತ್ತಿದೆ. ಮೊದಲ ಸಂಕಲನ ಉತ್ಸಾಹದ ಜೊತೆಗೇ ಜವಾಬ್ದಾರಿಯನ್ನೂ ಹೊರಿಸುತ್ತದೆ. ಮೊದಲ ಸಂಕಲನಕ್ಕೆ ಸಿಗಬಹುದಾದ ರಿಯಾಯತಿಗಳು ಎರಡನೆಯ ಸಂಕಲನಕ್ಕೆ ಖಂಡಿತಾ ಸಿಗಲಾರವು. ಇದಕ್ಕಿಂತ ಹೆಚ್ಚಾಗಿ, ಕವಿತೆಯನ್ನು ’ಬರೆಯುವುದಕ್ಕಿಂತ ’ಕಟ್ಟುವ’ ತಪಸ್ಸಿನ ಕಡೆಗೆ ಕವಿ ಚಲಿಸಬೇಕು. ನಿಜ, ಆರಂಭದಲ್ಲಿ ಉತ್ಸಾಹವೇ ಮುಖ್ಯವಾಗಿರುತ್ತದೆ ಮತ್ತದು ಸಹಜ ಕೂಡ. ಆದರೆ ಅದನ್ನು ಎಷ್ಟು ಬೇಗ ದಾಟುತ್ತೇವೋ ಅಷ್ಟು ಬೇಗ ಕಾವ್ಯ ನೌಕೆಯನ್ನು ನಾವು ಏರಬಹುದು. ಕಣ್ಣೆದುರಿಗಿನ ವಾಸ್ತವಗಳು ನಮ್ಮನ್ನು ಆ ಘಳಿಗೆಯಲ್ಲೇ ಪ್ರತಿಕ್ರಿಯಿಸಲು ಒತ್ತಾಯಿಸುತ್ತವೆ. ಆ ಆಮಿಷವನ್ನು ಕವಿಗಳು ನೀಗಿಕೊಳ್ಳಲೇ ಬೇಕು. ನಿಮಗೆ ಭಾಷೆ ಒಲಿದಿದೆ. ಅದನ್ನು ದುಂದುವೆಚ್ಚ ಮಾಡಬಾರದು, ಆ ಎಚ್ಚರ ನಿಮಗಿದೆ,

ಹಳೆಯ ಪದ್ಯವೊಂದು
ಮುಂಬಾಗಿಲಲ್ಲಿ ನಿಂತು
ಕರೆಗಂಟೆಯೊತ್ತಿ
ಪದಗಳ ಕಡ ಕೊಡಬಂದಾಗ,
ಕದವಿಕ್ಕಿ ಕುಳಿತ
ದುರಭಿಮಾನಿ ಕವಿ,
ಹೊಸ ಸಾಲುಗಳಿಗಾಗಿ
ಹಸಿದು ಕಂಗೆಟ್ಟ..!

ಈ ಮಾತುಗಳು ಕಾವ್ಯ ಪರಂಪರೆಯ ಜೊತೆಗೆ ಕವಿಯಾದವರು ನಡೆಸಲೇಬೇಕಾದ ಮಾತುಕತೆಯನ್ನು ಹೇಳುತ್ತವೆ. ಭಾಷೆ, ಶೈಲಿ, ವಸ್ತು ಈ ಎಲ್ಲದರಲ್ಲೂ ’ತನ್ನತನದ ಪನ್ನತಿಕೆ’ಯನ್ನು ಸಾಧಿಸಿಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ, ಬೆನ್ನ ಹಿಂದಿನ ಕಣ್ಣಾದ ಪರಂಪರೆಯೊಂದಿಗೆ ಜೀವಸಂವಾದ ನಡೆಸುವುದು.

ಕಾವ್ಯದ ಹಾದಿಯ ನಿಮ್ಮ ಪ್ರಯಾಣದ ಮೊದಲ ಹೆಜ್ಜೆಗೆ ನನ್ನ ಪ್ರೀತಿ ಮತ್ತು ವಿಶ್ವಾಸದ ಹಾರೈಕೆಗಳು. ಕಾವ್ಯವನ್ನು ನೀವು ಗಂಭೀರವಾಗಿ ಮತ್ತು ಉತ್ಕಟವಾಗಿ ಪ್ರೀತಿಸಿದಂತೆಯೇ ಕಾವ್ಯವೂ ನಿಮ್ಮನ್ನು ಪ್ರೀತಿಸಲಿ.

 

(ಕೃತಿ: ಜೀರೋ ಬ್ಯಾಲೆನ್ಸ್‌(ಕವನ ಸಂಕಲನ), ಲೇಖಕರು: ಡಾ. ಶ್ರುತಿ ಬಿ.ಆರ್‌., ಪ್ರಕಾಶನ: ಅರ್ನವ ಸೂರ್ಯ ಪ್ರಕಾಶನ, ಬೆಲೆ: ೧೦೦/-)