ತನ್ನ ಇಪ್ಪತ್ತರ ಹರೆಯದಲ್ಲಿ ಹ್ಯಾಮಿಲ್ಟನ್ ವಕೀಲನಾಗುವ ಗುರಿಯನ್ನು ಪಕ್ಕಕ್ಕಿಟ್ಟು ಹೊಸ ಅಮೆರಿಕೆಯ ಸ್ವಾತಂತ್ರ್ಯಕ್ಕಾಗಿ ಗ್ರೇಟ್ ಬ್ರಿಟನ್ ರಾಜನ ಸೈನ್ಯದೊಡನೆ ಹೋರಾಡಿದ ಸೈನಿಕನಾದ. ಹೊಸ ದೇಶವನ್ನು ರೂಪಿಸಲು ಹೆಣಗಾಡುತ್ತಿದ್ದ ತನ್ನ ನಾಯಕ ಜಾರ್ಜ್ ವಾಷಿಂಗ್ಟನ್ ಅವರಿಗೆ ತೋಳ್ಬಲ ಕೊಟ್ಟು ರಾಜಕೀಯದಲ್ಲಿನ ಭುಜಬಲನಾದ. ಹೊಸ ಅಮೆರಿಕಾದ ಮೊಟ್ಟಮೊದಲ ಅಧ್ಯಕ್ಷರಾದ ವಾಷಿಂಗ್ಟನ್ ಅವರ ಸರಕಾರದಲ್ಲಿ ಪ್ರಮುಖ ಪದವಿಗಳನ್ನು ನಿರ್ವಹಿಸುತ್ತಾ ತನ್ನನ್ನು ತಾನೇ ದೇಶೀಯ ಮಟ್ಟದಲ್ಲಿ ಒಬ್ಬ ನಂಬಿಕೆಯ ರಾಜಕಾರಣಿ, ರಾಜನೀತಿ ತಜ್ಞನಾಗಿ ರೂಪಿಸಿಕೊಂಡ ಹ್ಯಾಮಿಲ್ಟನ್ ತನ್ನ ಅಲ್ಪಾಯಸ್ಸಿನ ಕಾಲದಲ್ಲಿ ಅಮೆರಿಕಾವನ್ನು ಒಂದು ಸುಸಂಸ್ಥಿತ ದೇಶವನ್ನಾಗಿ ರೂಪಿಸಲು ಅನೇಕ ಮೈಲಿಗಲ್ಲುಗಳನ್ನು ನೆಟ್ಟಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

ಲಿನ್-ಮಾನ್ವೆಲ್ ಮಿರಾಂಡಾ ಸೃಷ್ಟಿಸಿದ ಅಲೆಕ್ಸಾಂಡರ್ ಹ್ಯಾಮಿಲ್ಟನ್‌ರವರ ವ್ಯಕ್ತಿತ್ವವನ್ನು, ಜೀವನಚರಿತ್ರೆಯನ್ನು ಹೇಳುವ ಸಂಗೀತ-ನೃತ್ಯ ರೂಪಕವನ್ನು ನೋಡಿದ ಮೇಲೆ ಆಹಾ ಅದ್ಭುತವೇ ಎನ್ನುವ ಚಕಿತತೆಯಿಂದ ಇನ್ನೂ ಹೊರ ಬಂದಿಲ್ಲ. Queensland Performing Arts Centre (QPAC) ನ Lyric ಥಿಯೇಟರ್ ಒಳಗೆ ಮೂರು ಗಂಟೆಗಳ ಕಾಲ (ಮಧ್ಯಂತರ ವಿರಾಮವಿದೆ) ವೇದಿಕೆಯ ಮೇಲೆ ನೆಟ್ಟ ನೋಟ ಅಲುಗಾಡದಂತೆ ಕೂತು ಬಿಟ್ಟಬಾಯಿ ಬಿಟ್ಟಂತೆಯೆ ಸ್ಥಬ್ಧವಾಗಿದ್ದು ಮೈನವಿರೇಳಿಸಿದ ಅಪರೂಪದ ಅನುಭವವಾಗಿತ್ತು. ಹಲವಾರು ಪಾಶ್ಚಾತ್ಯ ಸಂಗೀತ ಪ್ರಕಾರಗಳ ಮಿಲನ, ಅತ್ಯದ್ಭುತ orchestra, ಹಾಡುಗಳು ಮತ್ತು ಸಾಹಿತ್ಯ, ಮನರಂಜಿಸುವ ಸಂದರ್ಭಯೋಚಿತ ನೃತ್ಯ ವಿಧಗಳು, ಮನಸೂರೆಗೊಂಡ ಅಭಿನಯ, ಕಲಾವಿದರಲ್ಲಿದ್ದ ಅನೇಕತ್ವಗಳು (diversity) ಮತ್ತು ಇವೆಲ್ಲಕ್ಕೂ ಕಳಶವಿಡುವಂಥಾ ಕಥನ – ಎಲ್ಲವೂ ಎಲ್ಲೂ ತಾಳ ತಪ್ಪದೆ ಒಂದಕ್ಕೊಂದು ಮೇಳೈಸಿದ Hamilton ಒಂದು ವಿಶಿಷ್ಟ ಪ್ರಯೋಗ.

ಆಸ್ಟ್ರೇಲಿಯಾ ಪತ್ರದಲ್ಲಿ ಅಮೆರಿಕನ್ ರಾಜಕಾರಣಿಯ ಬಗ್ಗೆ ಬರೆಯುವುದೇಕೆ? ಮುಖ್ಯವಾಗಿ ಹ್ಯಾಮಿಲ್ಟನ್ ರೂಪಕ ಅಮೇರಿಕಾದಲ್ಲಿ, ಇಂಗ್ಲೆಂಡಿನಲ್ಲಿ ನಂತರ ಆಸ್ಟ್ರೇಲಿಯಾದ ಮೆಲ್ಬೋರ್ನ್, ಸಿಡ್ನಿ ಮತ್ತು ಬ್ರಿಸ್ಬೇನ್ ನಗರಗಳಲ್ಲಿ ಪ್ರದರ್ಶನಗೊಂಡಿದೆ. ಬಹುದೊಡ್ಡ ಮಟ್ಟದ ರೂಪಕವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯುವುದು ಮಹತ್ತರ ಪ್ರಯತ್ನ. ಆಸ್ಟ್ರೇಲಿಯಾದಲ್ಲಿ ಪ್ರದರ್ಶಿತವಾದ ರೂಪಕದಲ್ಲಿನ ಹೆಚ್ಚಿನ ಕಲಾವಿದರು ಆಸ್ಟ್ರೇಲಿಯನ್ನರು. ಹ್ಯಾಮಿಲ್ಟನ್ ನಡೆದಲ್ಲೆಲ್ಲಾ ಕಡೆ ವಿಜೃಂಭಿಸಿ ಎಲ್ಲೆಡೆ ಫುಲ್ ಹೌಸ್ ಮತ್ತು ದಿಲ್ ಖುಷ್ ವೀಕ್ಷಕರು. ಆಸ್ಟ್ರೇಲಿಯನ್ ಕಲಾವಿದರು ವಿಶ್ವಕಲಾರಂಗದ ಗಮನ ಸೆಳೆದಿದ್ದಾರೆ.

ಇನ್ನೊಂದು ಕಾರಣ ರೂಪಕದ ಕಟ್ಟಕಡೆಯಲ್ಲಿ ಹ್ಯಾಮಿಲ್ಟನ್ ಹೆಂಡತಿ ಸ್ವಗತವನ್ನು ಹಾಡುತ್ತಾಳೆ. ದೇಶಕ್ಕೆ ಅಪಾರ ಕೊಡುಗೆಯಿತ್ತ ಅಸಾಧಾರಣ ಪ್ರತಿಭೆಯಿದ್ದ ತನ್ನ ಗಂಡನನ್ನು ಜನರು ಮರೆತುಬಿಡುತ್ತಾರೆಂದು ದುಃಖಿಸುತ್ತಾಳೆ. ಪರದೇಶದಿಂದ ಅನಾಥನಾಗಿ ಬಂದು ಅಮೆರಿಕೆಯನ್ನು ಬೆಳೆಸಿದ ಅವನ ಕಥೆಯನ್ನು ಹೇಗೆ ಕಾಪಾಡುವುದು, ಯಾರಿಗೆ ಹೇಳುವುದು ಎಂದೆಲ್ಲ ಕೇಳುತ್ತ ನಿಟ್ಟುಸಿರು ಬಿಡುತ್ತಾಳೆ. ರಾನ್ ಚೆರ್ನೊ ಬರೆದ ಪುಸ್ತಕವನ್ನಾಧರಿಸಿದ ಈ ಸಂಗೀತ-ನೃತ್ಯ ರೂಪಕದ ಜನಕ ಲಿನ್-ಮ್ಯಾನುಎಲ್ ಮಿರಾಂಡಾ ಹೇಳಿದಂತೆ ಹ್ಯಾಮಿಲ್ಟನ್ ‘ಅಂದಿನ ಅಮೆರಿಕದ ಕಥೆ, ಅಮೆರಿಕವು ಇಂದು ಹೇಳುತ್ತಿರುವ ಕಥೆ’. ಇದೊಂದು ವಲಸೆಗಾರರು, ಬಡವರು, ಶ್ರಮಿಕರು, ದೇಶಕ್ಕಾಗಿ ದುಡಿದ ನಿಷ್ಠಾವಂತರು ರೂಪಿಸಿದ ದೇಶ. ಅತ್ಯಂತ ಶ್ರದ್ಧೆಯಿಂದ ಒಬ್ಬ ಪ್ರಾಮಾಣಿಕ ರಾಜಕಾರಣಿ ಬೆಳೆಸಿದ ಹೊಸ ಸಮಾಜ. ಇದನ್ನು ಒಡೆಯುವುದು ಎಂದರೆ ಸಂವಿಧಾನಾತ್ಮಕವಾಗಿ ಕಾಪಾಡಲ್ಪಟ್ಟ ಮೌಲ್ಯಗಳ ವಿನಾಶ. ಹೊಸತರಲ್ಲಿಯೆ ರೂಪಕವನ್ನು ನೋಡಿ ಬಹಳ ಮೆಚ್ಚಿ ಆನಂದಿಸಿದ ಅಂದಿನ ಅಧ್ಯಕ್ಷ ಒಬಾಮಾ ಅವರ ನಂತರ ಆ ಸ್ಥಾನಕ್ಕೆ ಬಂದಿದ್ದ ಹೊಸ ಅಧ್ಯಕ್ಷರು ಅಮೆರಿಕವು ಬಿಳಿಯರಿಗೆ ಸೇರಿದ್ದು, ಅಮೆರಿಕವನ್ನು ಮತ್ತೆ ಕಟ್ಟೋಣ ಬನ್ನಿ ಎಂದು ತಮ್ಮ ಅನುಯಾಯಿಗಳಿಗೆ ಕರೆಯಿತ್ತಿದ್ದರು. ಈ ಹಿನ್ನೆಲೆಯಲ್ಲಿ ಮತ್ತು ಪ್ರಪಂಚದಲ್ಲಿ ಹೆಚ್ಚುತ್ತಿರುವ ದ್ವೇಷ, ವಿಭಜನೆಗಳ ಮನೋಭಾವವನ್ನು ಕುರಿತೂ ರೂಪಕ ಸಂದೇಶ ನೀಡುತ್ತದೆ. ಮಿರಾಂಡಾ ಅವರ ಮಾತನ್ನು ಯಥಾವತ್ತಾಗಿ ಪ್ರತಿಬಿಂಬಿಸುವುದು ಈ ರೂಪಕ. ಎಲ್ಲಾ ತರಹದ ಮೈಬಣ್ಣದವರು, ಬೇರೆಬೇರೆ ಮುಖಚಹರೆಗಳ (ಜನಾಂಗಗಳ), ಲಿಂಗಗಳನ್ನು ಪ್ರತಿನಿಧಿಸುವ ಕಲಾವಿದರ ಪ್ರಯತ್ನ ಖುಷಿ ಕೊಟ್ಟಿತು.

ಅಮೆರಿಕಾ ಎಂದರೆ ಅದು ನಮ್ಮ ಪಕ್ಕದ ಬೀದಿಯೇನೋ ಎನ್ನುವಷ್ಟು ಪರಿಚಯದ ಭಾವನೆಯೇಳುತ್ತದೆ. ಹಾಗಿದೆ ಆ ದೇಶದ ಪ್ರಭಾವಳಿ. ನಮ್ಮ ಕಾಲೇಜು, ಯೂನಿವರ್ಸಿಟಿ ಕಾಲದ ದಿನಗಳಲ್ಲಿ ‘ಅವರು ಫಾರಿನ್‌ನಲ್ಲಿದ್ದಾರೆ’ ಅಂದರೆ ಹೌದಾ, ಅಮೆರಿಕಾದಲ್ಲಾ ಎನ್ನುತ್ತ, ಅದು ಬಹಳ ಸಹಜವೇನೋ ಎನ್ನುವ ಸಲೀಸಿನ ಉದ್ಗಾರವದು. ಅಮೆರಿಕೆಯೆಂದರೆ ಅದೊಂದು ಚಿತ್ತಾರದ ಕನಸುಗಳನ್ನು ಹೆಣೆದ ಕಸೂತಿ ಕೌದಿ ಎನ್ನುವ ಭಾವನೆಯೂ, ಕಲ್ಪನೆಯೂ, ನಂಬಿಕೆಯೂ ಇದ್ದ ಕಾಲವೊಂದಿತ್ತು. ಕನಸುಗಳ ಬೆಂಬೆತ್ತಿ ಅವು ನನಸಾಗುವ ನಾಡು ಅದು ಎಂದೇ ಎಲ್ಲರಿಗೂ ಚಿರಪರಿಚಿತ.

ಅಮೆರಿಕೆಯ ಅಲೆಕ್ಸಾಂಡರ್ ಹ್ಯಾಮಿಲ್ಟನ್ ಹೆಸರು ಪರಿಚಿತವೇ? ಇಲ್ಲ. ಬಹುತೇಕರಿಗೆ ಗೊತ್ತಿಲ್ಲ. ಅಮೆರಿಕೆಗೆ ಹೋಗಿಬಂದಿರುವ ಹ್ಯಾಮಿಲ್ಟನ್ ರೂಪಕವನ್ನು ನೋಡಿಬಂದ ನಮ್ಮ ಬ್ರಿಸ್ಬೇನ್ ಸ್ನೇಹಿತರು, ಸಹೋದ್ಯೋಗಿಗಳು, ನಮ್ಮ ಮಕ್ಕಳ ಸ್ನೇಹಿತರು – ಉಹುಂ, ಯಾರೂ ಕೂಡ ಅಲೆಕ್ಸಾಂಡರ್ ಹ್ಯಾಮಿಲ್ಟನ್ ಅವರ ಹೆಸರನ್ನು ಕೇಳಿಯೇ ಇರಲಿಲ್ಲ. ಇದೇನಿದು, ಇತಿಹಾಸ ಮೋಸ ಮಾಡಿದೆಯೇ? ಹ್ಯಾಮಿಲ್ಟನ್ ಕಥೆಯನ್ನು ಬೇಕೆಂದೇ ಮುಚ್ಚಿಟ್ಟಿದ್ದಾರೆಯೇ? ಯಾರಿದು ಅಮೆರಿಕಾದ ಅಲೆಕ್ಸಾಂಡರ್ ಹ್ಯಾಮಿಲ್ಟನ್? 2021 ರಿಂದ ಕೋವಿಡ್- 19 ಪರಿಸ್ಥಿತಿಯಿದ್ದರೂ ಯಾಕೆ ಆ ಹೆಸರು ಆಸ್ಟ್ರೇಲಿಯನ್ ಸಿಡ್ನಿ, ಮೆಲ್ಬೋರ್ನ್, ಬ್ರಿಸ್ಬೇನ್ ನಗರಗಳ ಜನರ ನಾಲಿಗೆಯ ಮೇಲೆ ಕುಣಿದಾಡಿತು? ಯಾಕೆ ಹ್ಯಾಮಿಲ್ಟನ್ ನಿರ್ಮಾಪಕರು ಹಲವಾರು ಆಯೋಜಕರ ಮತ್ತು ದೊಡ್ಡದೊಡ್ಡ ಸ್ವಯಂಸೇವಾ ಸಂಸ್ಥೆಗಳ ಜೊತೆಗೂಡಿ ಉಚಿತವಾಗಿ ಪ್ರದರ್ಶನವನ್ನು ಶಾಲಾಮಕ್ಕಳು ಮತ್ತು ಯುವಜನತೆ ನೋಡುವಂತೆ ಆಸ್ಥೆ ವಹಿಸಿದ್ದಾರೆ? ಹೇಗೆಲ್ಲ ಹ್ಯಾಮಿಲ್ಟನ್ ಎಲ್ಲರಿಗೂ ಸಲ್ಲುತ್ತದೆ?

ಕಳೆದ ಫೆಬ್ರವರಿಯಲ್ಲಿ ಕೆಲಸದ ನಿಮಿತ್ತ ಎರಡು ದಿನಗಳ ಕಾಲ ಜೊತೆಗಿದ್ದು, ಜೊತೆಯಲ್ಲಿ ಪ್ರಯಾಣ ಮಾಡಿದ್ದ, Big Matilda ಳನ್ನು ತೋರಿಸಿದ್ದ ಸಹೋದ್ಯೋಗಿ ಕಾರಿನಲ್ಲಿ Hamilton ಬಗ್ಗೆ ಹೇಳಿದ್ದೆ ಹೇಳಿದ್ದು. ಏನದು ನಾಟಕದ ವಸ್ತು, ಯಾಕೆಲ್ಲರೂ ಅದರ ಬಗ್ಗೆ ಇಷ್ಟೊಂದು ಮಾತನಾಡುತ್ತಿದ್ದಾರೆ ಎಂದು ಆಕೆಯನ್ನು ಕೇಳಿದರೆ ಗುಟ್ಟು ರಟ್ಟಾಗುವುದು ಬೇಡ, ನೋಡಿದಾಗ ಅರ್ಥವಾಗುತ್ತದೆ ಎಂದಳಾಕೆ. ಮಗನೂ ಕೂಡ ಅದೇ ರೀತಿಯ ಉತ್ತರವನ್ನು ಕೊಟ್ಟಾಗ ಇವರೆಲ್ಲರ ಮಾತಿಗೆ ಬೆಲೆಯಿದೆ, ರೂಪಕದ ಬಗ್ಗೆ ಗೂಗಲ್ ಮಾಡುವುದು ಬೇಡ ಎಂದು ನಿರ್ಧರಿಸಿದ್ದೆ. ಏನನ್ನೂ ನಿರೀಕ್ಷಿಸದೆ ಇದ್ದರೆ ಎಲ್ಲವೂ ಹಬ್ಬವಾಗಿಬಿಡುತ್ತದೆ.

ಹೊಸತರಲ್ಲಿಯೆ ರೂಪಕವನ್ನು ನೋಡಿ ಬಹಳ ಮೆಚ್ಚಿ ಆನಂದಿಸಿದ ಅಂದಿನ ಅಧ್ಯಕ್ಷ ಒಬಾಮಾ ಅವರ ನಂತರ ಆ ಸ್ಥಾನಕ್ಕೆ ಬಂದಿದ್ದ ಹೊಸ ಅಧ್ಯಕ್ಷರು ಅಮೆರಿಕವು ಬಿಳಿಯರಿಗೆ ಸೇರಿದ್ದು, ಅಮೆರಿಕವನ್ನು ಮತ್ತೆ ಕಟ್ಟೋಣ ಬನ್ನಿ ಎಂದು ತಮ್ಮ ಅನುಯಾಯಿಗಳಿಗೆ ಕರೆಯಿತ್ತಿದ್ದರು. ಈ ಹಿನ್ನೆಲೆಯಲ್ಲಿ ಮತ್ತು ಪ್ರಪಂಚದಲ್ಲಿ ಹೆಚ್ಚುತ್ತಿರುವ ದ್ವೇಷ, ವಿಭಜನೆಗಳ ಮನೋಭಾವವನ್ನು ಕುರಿತೂ ರೂಪಕ ಸಂದೇಶ ನೀಡುತ್ತದೆ.

ಒಂದರ್ಥದಲ್ಲಿ ಅಲೆಕ್ಸಾಂಡರ್ ಹ್ಯಾಮಿಲ್ಟನ್ ಜೀವನವೂ ಹಾಗೆಯೇ ಇದ್ದಿತ್ತೇನೋ ಎನಿಸುತ್ತದೆ. ಗ್ರೇಟ್ ಬ್ರಿಟನ್ ದೇಶದ ಸಾಹಸಿಗಳು ದೂರದ ಒಂದು ಅಪರಿಚಿತ ನಾಡನ್ನು ‘ಕಂಡು ಹಿಡಿದು’ ಅದಕ್ಕೆ ಅಮೇರಿಕ ಎಂದು ಹೆಸರು ಕೊಟ್ಟು ಜಗತ್ತಿಗೆ ಅದರ ನೂತನ ಪರಿಚಯವನ್ನು ಮಾಡಿಕೊಡುವ ಹುನ್ನಾರದಲ್ಲಿದ್ದಾಗ ಕರಿಬಿಯನ್ ದ್ವೀಪಗಳಲ್ಲಿ ಹುಟ್ಟಿ ಬೆಳೆದ ಹ್ಯಾಮಿಲ್ಟನ್ ಎಂಬ ಅನಾಥ ಹುಡುಗನೊಬ್ಬ ಒಂದು ಟ್ರಂಕ್ ಹಿಡಿದುಕೊಂಡು ಕನಸುಗಳ ಏಣಿಯ ಮೇಲೆ ಜೋತಾಡುತ್ತಾ ಆ ಹೊಸ ನಾಡಿಗೆ ಕಾಲಿಟ್ಟಿದ್ದ. ಹೇಗಾದರೂ ಸರಿ ಎಷ್ಟೇ ಕಷ್ಟವಾದರೂ ಸರಿ, ಏನೇ ಸವಾಲು ಬಂದರೂ ಅದನ್ನು ಎದುರಿಸಿಯೇ ಜೈಸುತ್ತೀನಿ ಎಂಬ ಆತ್ಮವಿಶ್ವಾಸವಿದ್ದ ಹುಡುಗ ತಾನು ನ್ಯೂಯಾರ್ಕಿನ ಕಾಲೇಜಿನಲ್ಲಿ ಕಲಿತು ವಕೀಲನಾಗುವ ಆಕಾಂಕ್ಷೆಯನ್ನಿಟ್ಟುಕೊಂಡಿದ್ದ. ಇನ್ನೇನೂ ನಿರೀಕ್ಷೆಗಳಿರಲಿಲ್ಲ. ಸ್ವಂತ ಶ್ರಮದಲ್ಲಿ ಅಚಲ ನಂಬಿಕೆಯನ್ನಿಟ್ಟುಕೊಂಡಿದ್ದ ಅವನು ಮುಂದೊಂದು ದಿನ ತಾನು ಕಾಲಿಟ್ಟ ನಾಡನ್ನು ಕನಸುಗಳ ಮೊಗ್ಗುಗಳು ಅರಳುವ, ಅವು ಹೂವಾಗುತ್ತ ಎಲ್ಲರನ್ನೂ ಸೆಳೆಯುವ ಒಂದು ಸದೃಢ ದೇಶವನ್ನಾಗಿ ರೂಪಿಸಿದ.

ತನ್ನ ಇಪ್ಪತ್ತರ ಹರೆಯದಲ್ಲಿ ಹ್ಯಾಮಿಲ್ಟನ್ ವಕೀಲನಾಗುವ ಗುರಿಯನ್ನು ಪಕ್ಕಕ್ಕಿಟ್ಟು ಹೊಸ ಅಮೆರಿಕೆಯ ಸ್ವಾತಂತ್ರ್ಯಕ್ಕಾಗಿ ಗ್ರೇಟ್ ಬ್ರಿಟನ್ ರಾಜನ ಸೈನ್ಯದೊಡನೆ ಹೋರಾಡಿದ ಸೈನಿಕನಾದ. ಹೊಸ ದೇಶವನ್ನು ರೂಪಿಸಲು ಹೆಣಗಾಡುತ್ತಿದ್ದ ತನ್ನ ನಾಯಕ ಜಾರ್ಜ್ ವಾಷಿಂಗ್ಟನ್ ಅವರಿಗೆ ತೋಳ್ಬಲ ಕೊಟ್ಟು ರಾಜಕೀಯದಲ್ಲಿನ ಭುಜಬಲನಾದ. ಜೊತೆಯಲ್ಲಿ ತಾನೇ ಸ್ವತಃ ಓದಿಕೊಂಡು ವಕೀಲನೂ ಆದ. ಹೊಸ ಅಮೆರಿಕಾದ ಮೊಟ್ಟಮೊದಲ ಅಧ್ಯಕ್ಷರಾದ ವಾಷಿಂಗ್ಟನ್ ಅವರ ಸರಕಾರದಲ್ಲಿ ಪ್ರಮುಖ ಪದವಿಗಳನ್ನು ನಿರ್ವಹಿಸುತ್ತಾ ತನ್ನನ್ನು ತಾನೇ ದೇಶೀಯ ಮಟ್ಟದಲ್ಲಿ ಒಬ್ಬ ನಂಬಿಕೆಯ ರಾಜಕಾರಣಿ, ರಾಜನೀತಿ ತಜ್ಞನಾಗಿ ರೂಪಿಸಿಕೊಂಡ ಹ್ಯಾಮಿಲ್ಟನ್ ತನ್ನ ಅಲ್ಪಾಯಸ್ಸಿನ ಕಾಲದಲ್ಲಿ ಅಮೆರಿಕಾವನ್ನು ಒಂದು ಸುಸಂಸ್ಥಿತ ದೇಶವನ್ನಾಗಿ ರೂಪಿಸಲು ಅನೇಕ ಮೈಲಿಗಲ್ಲುಗಳನ್ನು ನೆಟ್ಟಿದ್ದಾರೆ.

ಇತಿಹಾಸದಲ್ಲಿ ದಾಖಲಾಗಿರುವಂತೆ ಅವರು ಹೊಸ ಅಮೆರಿಕಾದ ಭವಿಷ್ಯಕ್ಕೆ ಹೊಸ ಭಾಷ್ಯ ಬರೆದರು. ತಮ್ಮ ಅದ್ವಿತೀಯ ಪ್ರತಿಭೆಯಿಂದ ಅಮೆರಿಕೆಯ ಸಂವಿಧಾನವನ್ನು ರೂಪಿಸಿದ ಖ್ಯಾತಿ ಅವರಿಗಿದೆ. ಸಂವಿಧಾನದ ಕರಡನ್ನು ತಯಾರಿಸಲು ವಾಷಿಂಗ್ಟನ್ ನಿರ್ದೇಶನದ ಪ್ರಕಾರ ಹ್ಯಾಮಿಲ್ಟನ್ ಮತ್ತವರ ಜೊತೆಗಾರರು ಒಟ್ಟು 85 ಫೆಡರಲಿಸ್ಟ್ ಪೇಪರ್ಸ್ ಎನ್ನುವ ಕಡತಗಳನ್ನು ಬರೆದರು. ಅವಲ್ಲಿ ಹ್ಯಾಮಿಲ್ಟನ್ ಬರೆದಿದ್ದು 51 ಪ್ರಬಂಧಗಳು! ಅವರ ಕೊಡುಗೆಯಿಂದಲೇ ಅಮೇರಿಕಾದ ಸಂವಿಧಾನ ರಚನೆಯು ಪೂರ್ಣಗೊಂಡಿತು ಎನ್ನಲಾಗಿದೆ. ಆದ್ದರಿಂದ ಅವರನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಜನ್ಮದಾತರಲ್ಲಿ ಒಬ್ಬರು ಎಂದು ಗುರುತಿಸಲಾಗಿದೆ. ಅವರು ಕೇಂದ್ರ ಸರಕಾರದ ಹಣಕಾಸು ಇಲಾಖೆಯನ್ನು ಬೆಳೆಸುತ್ತಾ, ಕೇಂದ್ರೀಯವಾಗಿ ಕೋಶಾಗಾರವನ್ನು ಸುಸ್ಥಿರಗೊಳಿಸಿದ್ದು ಮುಂದಿನ ಸರಕಾರಗಳಿಗೆ, ದೇಶದ ಆರ್ಥಿಕ ಬೆಳವಣಿಗೆಗೆ ನಾಂದಿಯಾಯಿತು.

ಅಲೆಕ್ಸಾಂಡರ್ ಹ್ಯಾಮಿಲ್ಟನ್ ಹಲವಾರು ‘ಮೊದಲು’ ಗಳಿಗೆ ಹೆಸರಾಗಿದ್ದಾರೆ. ಸ್ವಾತಂತ್ರ್ಯಾನಂತರದ ಹೊಸ ಅಮೆರಿಕೆಯ ಮೊಟ್ಟಮೊದಲ ಟ್ರೆಷರಿ ಸೆಕ್ರೆಟರಿ, ಬಜೆಟ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ತೆರಿಗೆ ಕ್ರಮವನ್ನು ಆಧುನಿಕಗೊಳಿಸಿದ್ದು, ಕೇಂದ್ರೀಯ ಬ್ಯಾಂಕ್ ಸ್ಥಾಪನೆ, ಹಣದ ಮುದ್ರಣ, ನ್ಯಾಷನಲ್ ಕೋಸ್ಟ್ ಗಾರ್ಡ್ ತಂಡ ಸ್ಥಾಪನೆ, ಮತ್ತು ಇಂದಿಗೂ ನಡೆಯುತ್ತಿರುವ ನ್ಯೂಯಾರ್ಕ್ ಪೋಸ್ಟ್ ಪತ್ರಿಕೆಯ ಸ್ಥಾಪನೆ. ಆಗಿನ ಕಾಲದ ಅಮೆರಿಕಾದಲ್ಲಿ ವ್ಯಾಪಕವಾಗಿದ್ದ ಗುಲಾಮಗಿರಿಯ ವಿರುದ್ಧ ಮಾತನಾಡಿ ಸಾಕಷ್ಟು ಗುರುತರ ಕೆಲಸ ಮಾಡಿದ್ದೂ ಕೂಡ ಅವರಿಗೆ ಹೆಸರನ್ನು ತಂದಿದೆ.

ರಾಜಕೀಯ ರಂಗದಲ್ಲಿ ತಮ್ಮ ಆಲೋಚನೆಗಳಿಗೆ, ಕಾರ್ಯವೈಖರಿಗೆ ಕಟುವಾಗಿ ವಿರೋಧ ತೋರಿದ ಅಂತರಂಗದ ಸ್ನೇಹಿತರೂ, ಸಹೋದ್ಯೋಗಿಗಳು ಇದ್ದರೂ ಎದೆಗುಂದದೆ ಮುಂದುವರೆದು ದೇಶದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ ರಾಜಕೀಯ ಮುತ್ಸದ್ದಿ ಎಂದು ಚರಿತ್ರೆ ಅವರನ್ನು ಹೊಗಳುತ್ತದೆ. ಅಮೆರಿಕಾದ ಅತ್ಯಂತ ಬಲಿಷ್ಠ ರಾಜಕಾರಣಿ ಎಂದು ಗುರುತಿಸಲ್ಪಡದಿದ್ದರೂ ಹ್ಯಾಮಿಲ್ಟನ್ ತಾವು ಇಬ್ಬರು ಪ್ರಮುಖ ರಾಜಕಾರಣಿಗಳು (ಜಾರ್ಜ್ ವಾಷಿಂಗ್ಟನ್ ಮತ್ತು ಥಾಮಸ್ ಜೆಫರ್ಸನ್) ದೇಶದ ಅಧ್ಯಕ್ಷರಾಗಲು ಕಾರಣವಾದರು ಎಂದು ಕೂಡ ಇತಿಹಾಸ ದಾಖಲಿಸಿದೆ. ಅಧ್ಯಕ್ಷನಾಗದ ಅಲೆಕ್ಸಾಂಡರ್ ಹ್ಯಾಮಿಲ್ಟನ್ ಮುಖಚಿತ್ರ ಅಮೆರಿಕನ್ ಡಾಲರ್ 1೦ ರ ನೋಟಿನ ಮೇಲೆ ಅಚ್ಚೊತ್ತಿದೆ.

ಹ್ಯಾಮಿಲ್ಟನ್ ಕಥೆ ಹೇಳಿ ಗುಟ್ಟು ಬಿಟ್ಟುಕೊಟ್ಟೆನೆ?! ನನಗಾದಂತೆ ನಿಮಗೆ ಆಗದಿರಲಿ ಎಂದು ಹೇಳಿಬಿಟ್ಟಿದ್ದೀನಿ. ಥಾಮಸ್ ಕೇಲ್ ನಿರ್ದೇಶನದ ರೂಪಕವನ್ನು ನಾನು ನೋಡಿದ್ದು ಹೋದ ಶನಿವಾರ. ಅದು ಆಸ್ಟ್ರೇಲಿಯಾದಲ್ಲಿ ಹ್ಯಾಮಿಲ್ಟನ್ ಪ್ರದರ್ಶನದ ಕಟ್ಟಕಡೆಯ ವಾರಾಂತ್ಯ. ಅಂದರೆ ಮರುದಿನ ಭಾನುವಾರದ ಪ್ರದರ್ಶನವೇ ಕೊನೆಯದು. ತಂಡವು ಗಂಟುಮೂಟೆ ಕಟ್ಟಿಕೊಂಡು ನ್ಯೂಜಿಲ್ಯಾಂಡ್ ಗೆ ಹೋಗುವುದಿತ್ತು. ಹ್ಯಾಮಿಲ್ಟನ್ ಬಗ್ಗೆ ಯಾವ ವಿಷಯವನ್ನೂ ಗೂಗಲ್ ಮಾಡುವುದಿಲ್ಲ ಎಂದು ನನಗೆ ನಾನೇ ನಿಷೇಧ ವಿಧಿಸಿಕೊಂಡಿದ್ದರಿಂದ ಕಟ್ಟಕಡೆಯ ಪ್ರದರ್ಶನದ ವಿಷಯದ ಬಗ್ಗೆ ನನಗೆ ಅರಿವೇ ಇರಲಿಲ್ಲ. ಅದಿರಲಿ, ಹ್ಯಾಮಿಲ್ಟನ್ ರೂಪಕದ ಬಗ್ಗೆ ಕೂಡ ಏನೇನೂ ತಿಳಿದಿರಲಿಲ್ಲ. ಪ್ರದರ್ಶನದ ಮುನ್ನ ಬೇರೆ ಪ್ರೇಕ್ಷಕರು ಅದರ ಬಗ್ಗೆ ಮಾತನಾಡುವುದನ್ನು, ಮುಗಿದೇಹೋಗುತ್ತಿದೆಯಲ್ಲಾ ಎಂದು ಬೇಸರಿಸಿಕೊಳ್ಳುತ್ತಿದ್ದನ್ನು ಕೇಳಿ ಅಚ್ಚರಿಗೊಂಡಿದ್ದೆ. ರೂಪಕವನ್ನು ನೋಡಿ ಹೊರಬಂದ ಮೇಲೆ ಅಯ್ಯೋ ಮುಗಿದೇ ಹೋಯಿತಲ್ಲಾ, ಇನ್ನೊಂದು ಬಾರಿ ನೋಡಬೇಕಿತ್ತು, ಈ ರೂಪಕ ಹೀಗಿದೆ ಎಂದು ಮೊದಲೇ ಗೊತ್ತಿದ್ದಿದ್ದರೆ ಎರಡು ಬಾರಿ ಹೋಗಿ ನೋಡಬಹುದಿತ್ತು ಎಂದೆಲ್ಲ ಪೇಚಾಡುವ ಪರಿಸ್ಥಿತಿ ನನ್ನದು!

ಅಮೆರಿಕನ್ ಕಥೆಯನ್ನು rap ಮತ್ತು hip-hop ಪ್ರಕಾರಗಳ ಮ್ಯೂಸಿಕಲ್ ಆಗಿಸಿ ಆ ಸಾಧ್ಯತೆಯಿಂದ ಕಲಾವಿದರ ಬಹುಮುಖ ಪ್ರತಿಭೆಗಳನ್ನು ಬಳಸಿಕೊಂಡು ರೂಪಕವು ಸಾದೃತ ಪಡಿಸುವುದು ಬಹಳಷ್ಟಿದೆ. ತಾನು ತೆಗೆದುಕೊಳ್ಳುವುದಕ್ಕಿಂತಲೂ ಇತರರಿಗೆ ಕೊಡುವುದು ಮುಖ್ಯ ಎನ್ನುವ ಪ್ರಾಮಾಣಿಕತೆಯ ಜೀವನ ಸಂದೇಶಕ್ಕಾಗಿ ಜನರು ಮಾರುಹೋಗಿದ್ದಾರೆ. ಸರಳ ರಂಗವಿನ್ಯಾಸ, ವಸ್ತ್ರವಿನ್ಯಾಸ, ಮಾತುಗಳಿಲ್ಲದೆ ಎಲ್ಲವನ್ನೂ ಹಾಡುವ, ನೃತ್ಯರೂಪದಲ್ಲಿ ಅಭಿನಯಿಸುವ ಅಸಾಧಾರಣ ಚಾತುರ್ಯಗಳು, ಅವರ ಕುಗ್ಗದ ದೈಹಿಕ ಶಕ್ತಿ, ಪಾದರಸದಂತೆ ಚಲಿಸುವುದು, ರಂಗದ ಮಧ್ಯದ ತಿರುಗುವ ವೇದಿಕೆ, ನೆರಳು-ಬೆಳಕಿನ ಆಟ, ಆರ್ಕೆಸ್ಟ್ರ ಮತ್ತು ಕಲಾವಿದರು ರಂಗದ ಮೇಲೆ ಹಾಡುವ ಗೀತೆಗಳ ಸಾಹಿತ್ಯ, ಸ್ವಗತಗಳು ಮಾಯಾಲೋಕಕ್ಕೆ ಕರೆದೊಯ್ಯುತ್ತವೆ. ಹ್ಯಾಮಿಲ್ಟನ್ ಹಾಡುವ I am not going to throw away my shot, Rise up ಹಾಡು ಮೈಮೇಲಿನ ಕೂದಲು ನಿಮಿರುವಂತೆ ಪ್ರಚೋದಿಸಿತ್ತು. ಜೀವನದ ಸಾಧ್ಯತೆಗಳನ್ನು, ಮನುಷ್ಯನ ದೃಢತೆಯನ್ನು ಸಾರಿತ್ತು. Satisfied ಹಾಡು ಅಂತರಂಗದ ಪ್ರತಿಫಲನವಾಗಿತ್ತು. Room where it happens ಅಧಿಪತ್ಯಕ್ಕಾಗಿ, ಅಧಿಕಾರಕ್ಕಾಗಿ ಹಂಬಲಿಸುವ ಮನುಷ್ಯನ ಸ್ವಭಾವವನ್ನು ಹೇಳಿತ್ತು. Look around ಹಾಡು ಅಧಿಪತ್ಯದ ಹಂಬಲವನ್ನು ತೊರೆದು ಲೋಕಕಲ್ಯಾಣಕ್ಕಾಗಿ ತೆರೆದುಕೊಳ್ಳುವುದು ಉತ್ತಮವೆಂದಿತ್ತು. ಶಾಲಾಮಕ್ಕಳಿಂದ ಹಿಡಿದು ಅಜ್ಜ-ಅಜ್ಜಿಯರೂ ತಾಳ ಹಾಕಿದ್ದರು. ತಲೆದೂಗಿದ್ದರು.