ನನ್ನೆದೆಯೂ ಬಡಿಯುತ್ತಿತ್ತು
ಮಿಡಿಯುತ್ತಲೂ ಇತ್ತು…
ನನ್ನ ಪಾದವ ಮುಳ್ಳು ಹಾದಿಯಲಿ-
ಇಟ್ಟಾಗ ನಿಮ್ಮಂತೆ ನನಗೂ ಘಾಸಿಯಾಗುತ್ತಿತ್ತು,
ನನಗೂ ಗಂಟಲು ಒಣಗಿದಾಗ-
ನಿಮ್ಮಂತೆ ದಾಹವಾಗುತ್ತಿತ್ತು,
ನನಗೂ ಬೀಸುವ ಗಾಳಿಗೆ-
ನಿಮ್ಮಂತೆ ಸ್ವತಂತ್ರವಾಗಿ ಮೈಯೊಡ್ಡಬೇಕೆನಿಸುತ್ತಿತ್ತು,
ನನಗೂ ಚಳಿಯಾದಾಗ-
ನಿಮ್ಮಂತೆ ಹೊದಿಕೆಯ ತೊಡುವಾಸೆಯಾಗುತ್ತಿತ್ತು,
ನನಗೂ ಹಸಿವಾದಾಗ-
ನಿಮ್ಮಂತೆ ಬೆಂದ ಅನ್ನವ ತಿನ್ನಬೇಕೆನಿಸುತ್ತಿತ್ತು,
ನನಗೂ ಅಕ್ಷರವ ಕಂಡಾಗ-
ನಿಮ್ಮಂತೆ ಓದುವ ಆಸೆಯಾಗುತ್ತಿತ್ತು,
ನನಗೂ ಊರ ಜಾತ್ರೆಯಲಿ-
ನಿಮ್ಮಂತೆ ತೇರ ಎಳೆಯಬೇಕೆಂಬಾಸೆಯಾಗುತ್ತಿತ್ತು,
ಇಂತಹ ಆಸೆಯ ಪಟ್ಟಿಯ ಲೆಕ್ಕಾಚಾರ
ಮಾಡುವ ಮುಂಚೆ ನನ್ನಜ್ಜ ಬುದ್ಧನ
ಆಸೆಯ ಕುರಿತ ಮಾತು ನೆನಪಾಗಬೇಕಿತ್ತು…
ಜನಪದರ ಹಾಸಿಗೆ ಇದ್ದಷ್ಟು ಕಾಲ್ಚಾಚುವ
ನೀತಿಯಾದರೂ ಹೊಳೆಯಬೇಕಿತ್ತು….
ಆದರೇನು ಮಾಡುವುದು? ನಾ ಹುಟ್ಟಿದ್ದು
ಗಾಂಧಿ ಹುಟ್ಟಿದ ನಾಡಲಿ
ನಿಮ್ಮೆಲ್ಲಾ ಅಬ್ಬರ ಆರ್ಭಟವ
ಶಾಂತಿಯ ಆಯುಧದಲ್ಲೇ, ನಿಮ್ಮನ್ನು-
ನಿಮ್ಮ ದಾಳಿಯನ್ನೂ ಸಹಿಸಿಕೊಂಡೆ…
ನಾನು ನಿಮ್ಮನ್ನೂ ನನ್ನಂತೆ
ಹೃದಯವಿರುವವರೆಂದು ನಂಬಿದ್ದೆ
ತಪ್ಪಾಯ್ತಾ? ಇರಲಿ ಬಿಡಿ ನೀವೂ
ದೇವರಂತೆ ಜೀವ ಕೊಡುವ
ಜೀವ ಕಸಿದುಕೊಳ್ಳುವ -ಹಕ್ಕುದಾರರಾಗಿಬಿಟ್ಟಿರಿ….!

ಸಂಘಮಿತ್ರೆ ನಾಗರಘಟ್ಟ ಸಾಹಿತ್ಯದ ವಿದ್ಯಾರ್ಥಿ
ರೇಖಾಚಿತ್ರ ರಚಿಸುವಲ್ಲಿ ಆಸಕ್ತಿ ಇದ್ದು ಹಿಮಪಕ್ಷಿ ಮುಖ ಸಂಪುಟ ಪತ್ರಿಕೆಯನ್ನು ಸಂಪಾದನೆ ಮಾಡುತ್ತಿದ್ದಾರೆ.