ಒಂದೂ ಮಾತನಾಡದೇ…

ಮಗುವಾಗುವುದು ಅಷ್ಟು ಸುಲಭವಲ್ಲ ಸಾ
ಎದೆಯ ಕಹಿಯನ್ನೆಲ್ಲಾ ಗಂಟಲ ಉಂಡೆ ಮಾಡಿ
ಕ್ಯಾಕರಿಸಿ ದೂರ ಎಲ್ಲೋ ಉಗಿದಷ್ಟು ಸಲಿಸಲ್ಲ.
ಮನದ ಮಾತುಗಳ ಸೋಸದೇ ಆಡಿಬಿಡಲಾದೀತೇ
ಮಗು ಆಡಿದಂತೆ? ಒಳಗೊಳಗೇ ಗೆದ್ದಲು ಹಿಡಿದ ಮರ ನಾವು
ಹಸಿರೆಲೆಗಳ ಹೊತ್ತು ಸುಮ್ಮನೆ ನಗುತ್ತಿದ್ದೇವೆ; ಮಗುವಾಗದೆ ಮನುಷ್ಯರಾಗುವುದು
ಕಷ್ಟ ಸಾರ್! ಎಷ್ಟೆಂದು ಕೂಡಿಡುತ್ತೀರಿ ನಾಳೆಗಳಿಗೆ… ಒಂದು ಬೊಂಬೆ, ಒಂದು
ಮುರಿದ ಸೀಸದ ಕಡ್ಡಿ, ಅರ್ಧ ಬರೆದ ಚಿತ್ರ, ಕೊಳೆಯಾದ ನಿಕ್ಕರಿನ ಹಿಂಭಾಗ
ಉಂಟೆ ನಮ್ಮಲ್ಲಿ? ಇದ್ದ ಮಿಠಾಯಿಯ ಅಂಗಿ ಚುಂಗಲ್ಲಿ
ಮುಚ್ಚಿ ಕಡಿದು ಎದುರಿನವನಿಗೆ ಕೊಟ್ಟು ತಿನ್ನುವ ಬಾನ ಎದೆಯ ಮನ ನಮಗೆಲ್ಲಿ ಸಾರ್?
ಒಳ ಹೊಳೆಯ ಸಿಹಿನೀರ ಮೇಲೆ ನಗು ದೋಣಿ ತೇಲಿ ಬಿಡುವ ಕಂದನೆದುರು
ನಕ್ಕಂತೆ ನಟಿಸಿ ಎದೆಯೊಳಗಣ ಸಾವಿರ ಸಾವಿರ ಭಾರವ ನುಂಗುತ್ತಲೇ
ಎದೆಯಿರಿಯುವ ಮಾತಾಡಿ ಮಗ್ಗುಲ ಮನೆಯವನ
ಮನ ದುಗುಡಕೆ ತಳ್ವ ನಮ್ಮ ನಡೆ ಮಗುವಾಗುವುದು ಆಸಾನು ಅಲ್ಲ ಸಾರ್!
ಜಗದ ಗೊಡವೆಗೆ ಮುಲಾಜಿಲ್ಲದೇ ದಿಕ್ಕಾರ ಹೇಳಿ, ಜತೆಯಿದ್ದವರೆಲ್ಲಾ ಜೊತೆಗಾರರೆನ್ವ
ಹಾಲಮನ ಹೊಂದುವುದು ನಮಗೆ ನಿಮಗೆ ಸಾಧುವಾ?
ಬಳ್ಳಿಯೊಡಲ ಕುಸುಮ ಸದ್ದಿಲ್ಲದೇ ಗಂಧ ಸೂಸಿ
ಮೆಲ್ಲನೆ ಮರೆಗೆ ಸರಿಯುವ ತೆರದಿ ಮಗು ನಮ್ಮೊಳಗಾ ಘಮ ಕಾಣುವುದೆಲ್ಲಿ?
ಮಗು ನಗು ಕವಿತೆ ಮಾತೊಂದು ಹಾಡು
ಮನವೋ ಜೇನ ಹೊಳೆ; ಲೋಕದೆಲ್ಲಾ
ವಿಷ ಹೊತ್ತ ನಾವು ನಂಜುಂಡರಷ್ಟೆ ಮಗುವಾಗಲು ಅದೆಷ್ಟು ಜನುಮ ಬೇಕೋ….. ಗೊತ್ತಿಲ್ಲ
ಮನ ಮಗುವಾದಾಗ ಮನುಷ್ಯ ಮತ್ತೆ
ಮತ್ತೆ ಮನುಷ್ಯನಾಗಲು ಸಾಧ್ಯ!

ನೂರಾರು ಎಲೆಗಳು

ಮಣ್ಣ ಒಳಗಿನ ವ್ಯಾಪಾರ ಬೇರಿಗಷ್ಟೇ ಖಬರು,
ಮುಗಿಲಿಗಡರಿದ ಸಣ್ಣ ಸಣ್ಣ ಎಲೆಗಳಿಗೇನು ಗೊತ್ತು;
ಎದೆಯ ಮಾತುಗಳ ಕಟ್ಟಿಟ್ಟು ಒಲೆ ಉರಿಗೆ ಕಣ್ಣಿತ್ತು
ಸುರಿದ ಹನಿಗಳಿಗೆ ಹೊಗೆಯ ದೂಷಿಸಿ ನಗುವ ಅವ್ವನ ಬಗ್ಗೆ ಅಪ್ಪನಿಗಷ್ಟೇ ಗೊತ್ತು
ಮಕ್ಕಳು ಎಲೆಗಳೆ! ಮಣ್ಣ ಕತ್ತಲೆಯೊಡನೆ ಬಡಿದಾಡಿ
ಎದೆಯುಬ್ಬಿಸಿ ಹೊರಬಂದ ಟಿಸಿಲು-ಬಿಸಿಲು ನೋಡಿದ ಕ್ಷಣ ಮೂಡಿದ
ಹೂನಗು ಬೇರುಗಳು ಬಲ್ಲವು, ಬಯಲಿಗೆಲ್ಲಾ ಮೈ ಚಾಚಿದ ಕೊಂಬೆಗಳೆತ್ತ ಕಂಡಾವು;
ಎದೆ ಬಸಿದು ದುಡಿದ ಅಪ್ಪನ ಬೆವರ
ಹನಿಗಳು ಚಕ್ಕಳದೆದೆಯಲ್ಲಿಯೇ ಕರಗಿ ಹೊಮ್ಮಿದ ಆ.. ಘಮ
ಅವ್ವನ ದೇವರಮನೆಯ ಧೂಪಕ್ಕೂ ಮಿಗಿಲೆಂದು ಆಕೆ ಬಲ್ಲಳು,
ಪ್ರಸಾದ ಚಪ್ಪರಿಸೋ ಮಕ್ಕಳೆತ್ತ ಕಾಂಬರು!
ದಿನದಿನವೂ ಮಣ್ಣು ನೀರಿನ ಜೊತೆ ಬಂಧ,
ನೆಲದಾಳದತ್ತ ಕಾಲ್ಚಾಚಿ ಸಾಗೋ ಬೇರುಗಳ ಓಟ
ಆಕಾಶದತ್ತ ಮುಖ ಮಾಡಿ ನಗುವ ಹೂವ
ಕಾಣದ ಬೇರಿಗೆ ಮರ ನಿಂತ ಸಂತಸ ಸಾಕು; ಇಂದಲ್ಲ ನಾಳೆ ಹಣ್ಣಾದ ಎಲೆ ಮತ್ತೆ
ಬುಡದ ಬಾಗಿಲಿಗುರುಳಿ
ಶರಣಾಗುವ ನೂರಾರು ಎಲೆಗಳ ಪಾದಸೇವೆ ನಾಳಿನ ಬೇರುಗಳಿಗೆ ಶಕ್ತಿ;
ಅನವರತ ದುಡಿದಣಿದು ನೆಲೆ ನಿಲ್ಲಿಸಿದ ಮಕ್ಕಳ ಮನೆಗಳು
ಅವ್ವ ಅಪ್ಪನಿಗೀಗೀಗ ದೂರ ಮನೆಗಳಷ್ಟೇನಾ?
ಮರದ ಬೇರಿಗೆ ಸಿಕ್ಕ ಎಲೆಗಳ ಪುಣ್ಯ
ಅವ್ವನ ಕಣ್ಣೀರಿಗೂ ಇಲ್ಲ ಅಪ್ಪನ ಬೆವರಿಗೂ ಇಲ್ಲ
ನಾಳೆಗಳ ಕೊಂಬೆ ರೆಂಬೆಗಳಿಗೆ
ಬೇರುಗಳು ದುಡಿಯುತಿವೆ
ಅರಳರಳಿ ಬಾಡುವ ಸಂತಾನಸುಮಗಳಿಗೆ ಲೆಕ್ಕ ಇಟ್ಟವರಿಲ್ಲ
ಅವ್ವ ಅಪ್ಪ ಮಣ್ಣಾಗಿ ಬಹುಕಾಲ
ನಾವಿನ್ನೂ ಬೇರಾಗದಿರುವುದು ದುರಂತ ; ಕತ್ತಲಲ್ಲಿ ಬೇರು ಅದೋ ಸುಮ್ಮನೆ ದುಡಿಯುತಿದೆ!

ಸಂತೆಬೆನ್ನೂರು ಫೈಜ್ನಟ್ರಾಜ್ ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರಿನವರು
ಸಂತೇಬೆನ್ನೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಎದೆಯೊಳಗಿನ ತಲ್ಲಣ(ಕವನಸಂಕಲನ), ಮಂತ್ರದಂಡ (ಮಕ್ಕಳ ಕವಿತೆಗಳು), ಸ್ನೇಹದ ಕಡಲಲ್ಲಿ (ಮಕ್ಕಳ ಕಥಾ ಸಂಕಲನ), ಬುದ್ಧನಾಗ ಹೊರಟು (ಕವನ ಸಂಕಲನ), ಹಬ್ಬಿದಾ ಮಲೆ ಮಧ್ಯದೊಳಗೆ (ಕಥಾ ಸಂಕಲನ), ಹಳೆಯ ಹಾದಿಯಲೊಂದು ಹೊಸ ಹೆಜ್ಜೆ ( ಆಧುನಿಕ ವಚನಗಳು) ಪ್ರಕಟಿತ ಕೃತಿಗಳು
ಸಂಚಯ ಕಾವ್ಯ ಪುರಸ್ಕಾರ, ಹಾಮಾನಾ ಕಥಾ ಪ್ರಶಸ್ತಿ, ಸ್ನೇಹಶ್ರೀ ಪ್ರಶಸ್ತಿಗಳು ಇವರಿಗೆ ದೊರೆತಿವೆ