ಸಂಪಿಗೆ ರಸ್ತೆಯ ಸಂಪಿಗೆ ಹೂವು, ಬೇವಿನ ಮರದ ರಸ್ತೆಯ ಬೇವನ್ನೂ ನಾವು ಖಂಡಿತಾ ಮರೆತಿಲ್ಲ. ನಿತ್ಯ ವಸಂತ. ನಿತ್ಯ ಯುಗಾದಿ ಈ ಬಡಾವಣೆಯ ವೈಶಿಷ್ಟ್ಯ. ಸಿಹಿ ನೀರಿನ ಬಾವಿಗಳಿಂದ ನೆಲದ ಮಟ್ಟದಲ್ಲಿ ನೀರು ಸಿಗುತ್ತಿದ್ದ ದಿನಗಳನ್ನು ನಾವೇ ನೋಡಿದ್ದೇವೆ. ಅದು ಬಾವಿಯೋ ಅಥವಾ ನೀರು ತುಂಬಿಸಲು ನಿರ್ಮಿಸಿರುವ ನೀರಿನ ತೊಟ್ಟಿಯೋ ಎಂದು ಆಶ್ಚರ್ಯ ಪಟ್ಟಿದ್ದೇವೆ. ಊಟ ತಿಂಡಿ, ಮಲ್ಲೇಶ್ವರಂ ಅಡ್ಡೆಗಳ ಬಗ್ಗೆ ಬರೆಯುವುದು ಸಾಧ್ಯವೇ ಇಲ್ಲ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ಮೂರನೆಯ ಕಂತು ನಿಮ್ಮ ಓದಿಗೆ

ಕಳೆದ ಸಂಚಿಕೆ ಮುಕ್ತಾಯದಲ್ಲಿ ಹೀಗೆ ಹೇಳಿದ್ದೆ..
“ಮಲ್ಲೇಶ್ವರ ಅಂದ ಕೂಡಲೇ ನೆನಪಿಗೆ ಬರುವ ಸುಮಾರು ಪ್ರತಿಭಾನ್ವಿತರು ಇಲ್ಲಿ ಬಂದಿಲ್ಲ ಮತ್ತು ಮಲ್ಲೇಶ್ವರದ ಪೂರ್ಣ ಚಿತ್ರಣವೂ ಆಗಿಲ್ಲ ಎಂದು ನನ್ನ ಅನಿಸಿಕೆ. ಇಲ್ಲಿನ ಸಾಂಸ್ಕೃತಿಕ ಮತ್ತು ಸಾಹಿತ್ಯ ಲೋಕದ ಅನಾವರಣ ಆಗಿಲ್ಲ, ಇಲ್ಲಿನ ಹೂ ಮನಸಿನ ಸುಸಂಸ್ಕೃತ ಮಹಿಳೆಯರ ಬಗ್ಗೆ ಉಲ್ಲೇಖ ಇಲ್ಲ. ಇಲ್ಲಿನ ಪ್ರಸಿದ್ಧ ವಿದ್ಯಾಸಂಸ್ಥೆಗಳ ಬಗ್ಗೆ ನೋಟ್ಸ್ ಇಲ್ಲ….. ಈ ಮೊದಲಾದ ಅಂಶಗಳೂ ಸೇರಿದ ಹಾಗೆ ಇಲ್ಲಿ ಕಾಣೆಯಾಗಿರುವ ಹಲವು ಗಣ್ಯರ ಬಗ್ಗೆ ಮುಂದೆ ಬರೆಯುತ್ತೇನೆ. ಒಟ್ಟಾರೆ ನನ್ನ ಪ್ರಕಾರ ಮಲ್ಲೇಶ್ವರಂ ಎನ್ನುವುದು ಮಾನವ ನಿರ್ಮಿತವಾದ ಒಂದು ಸುಂದರ ದೇವಲೋಕ ಮತ್ತು ಇಲ್ಲಿ ವಾಸ ಮಾಡುವ ಪುಣ್ಯವಂತರು ಅದೇ ಮನುಷ್ಯ ರೂಪಿನ ಗಂಧರ್ವರು! ಇಲ್ಲಿನ ಪರಿಧಿಯಿಂದ ಆಚೆ ಇರುವವರು, ಅಂದರೆ ನಾನು ನೀವು “ಶಾಪಗ್ರಸ್ತ ಕಿನ್ನರರು……!”

ಈಗ ಮುಂದೆ ಹೋಗುವ ಮೊದಲು ಮಲ್ಲೇಶ್ವರದ ವಿಶೇಷ ಒಂದು ಇಪ್ಪತ್ತು ಇಪ್ಪತ್ತೈದು ವರ್ಷದ ಹಿಂದೆ ಹೇಗಿತ್ತು ಅನ್ನುವುದನ್ನು ನಿಮಗೆ ಹೇಳಲೇಬೇಕು.
ಇದು ವಾಟ್ಸಾಪ್‌ನಲ್ಲಿ ಓದಿದ್ದ ಒಂದು ಲೇಖನದ ತುಣುಕು. ಬರೆದವರು ಯಾರು ಅಂತ ಮರೆತಿದ್ದೇನೆ.

“ನಮ್ಮ ಮಲ್ಲೇಶ್ವರಂ ಅಂದರೆ ನಿಜಕ್ಕೂ ತುಂಬಾನೇ ಚೆನ್ನಾ. ತುಂಬಾನೇ ಚಿನ್ನ. ಸ್ವರ್ಗ ಲೋಕ ನಾವು ನೋಡಿರುವುದೆಲ್ಲಾ ಚಲನಚಿತ್ರಗಳಲ್ಲಿ, ದೇವ ಲೋಕ ಹೇಗಿರಬಹುದು ಎಂಬ ಊಹೆ ಅಷ್ಟೇ. ಆದರೆ ಬಾಳಿ ಬದುಕುವುದಕ್ಕೆ ಸಕಲ ಖುಷಿ, ಸಮಗ್ರ ಜ್ಞಾನ, ಸಂಪದ್ಭರಿತ ಅರ್ಥವಂತಿಕೆ ಒದಗಿಸಬಲ್ಲ ತಾಕತ್ತು ಮಾತ್ರ ನಮ್ಮ ಮಲ್ಲೇಶ್ವರಂ ಬಡಾವಣೆಗೆ ನಿಜಕ್ಕೂ ಇದೆ. ಮಲ್ಲೇಶ್ವರದ ಇತಿಹಾಸ, ಬರೆದಿದ್ದೆ ಬರೆದು, ತಿಳಿದಿದ್ದೆ ತಿಳಿಸಿ ಬೇಸರ ಹುಟ್ಟಿಸುವುದಕ್ಕಿಂತ ಸ್ವಾನುಭವದಿಂದ ನಾನು ಕಂಡ ಮಲ್ಲೇಶ್ವರದ ಬಗ್ಗೆ ಬರೆಯುವುದರಲ್ಲಿ ಸುಖವಿದೆ. ಹಿತವಿದೆ. ಮಲ್ಲೇಶ್ವರಂ ಪಡ್ಡೆಗಳು, ಅಡ್ಡೆಗಳು, ಸಂಗೀತ, ಸಾಹಿತ್ಯ, ಸಂಸ್ಕೃತಿ, ಮೌಲ್ಯಗಳು ಹಾಗೂ ಸರಳ ಜನ ಜೀವನ ಅನುಭವಿಸಿದವರಿಗೆ ಮಾತ್ರವೇ ಪರಿಕಲ್ಪನೆಗೆ ಬರುವ ನಗ್ನ ಸತ್ಯ. ಅಂದ ಹಾಗೆ ಮಲ್ಲೇಶ್ವರದ ಪಡ್ಡೆಗಳು ಅಂದರೆ ಯಾರು ಅಂದುಕೊಂಡಿರಿ? ಪ್ರಾಯದ ತರುಣರು ಮಾತ್ರವಲ್ಲ. ಸೇವೆಯಿಂದ ನಿವೃತ್ತಿ ಹೊಂದಿದ ಅನೇಕರು ಇಂದಿಗೂ ಪಡ್ಡೆಗಳು. ಪಡ್ಡೆಗಳನ್ನು ಮೀರಿಸುವ ಆಕರ್ಷಣೆ ಇರುವವರು. ಇವರನ್ನು ನೋಡಬೇಕೇ ಒಮ್ಮೆ ಸಂಜೆ ಆರರಿಂದ ಏಳರ ನಡುವೆ ಮಲ್ಲೇಶ್ವರಂ ಎಂಟನೇ ಕ್ರಾಸಿನಲ್ಲಿ ಬಂದು ಒಂದು ಪುಟ್ಟ ವಾಕ್ ಮಾಡಿ. ಇನ್ನು ಸುಂದರಿಯರು, ತರುಣಿಯರು? ಯಾರು ಅಮ್ಮ, ಯಾರು ಅಕ್ಕ, ಯಾರು ತಂಗಿ, ಯಾರು ಮಗಳು ಅಂತ ಚೂರೂ ತಿಳಿಯುವುದಿಲ್ಲ. ಹೇಮಾ ಮಾಲಿನಿ, ಜಯಪ್ರದ, ಶ್ರೀದೇವಿ, ರೇಖಾ ಈ ಸಾಲಿನ ನಿಜವಾದ ಸದಾ ಲವಲವಿಕೆಯ ಮಹಿಳೆಯರನ್ನು ನೋಡುವುದೇ ಇಲ್ಲಿ ಆಕರ್ಷಣೀಯ.

ಕಾಡು ಮಲ್ಲೇಶ್ವರ, ನರಸಿಂಹ ಸ್ವಾಮಿ, ದಕ್ಷಿಣ ಮುಖ ನಂದಿ, ಜಲ ಗಂಗಮ್ಮ, ಸಾಯಿ ಬಾಬಾ ಹೀಗೆ ಎಲ್ಲವನ್ನೂ ಬರೆಯಲು ಸಾಧ್ಯವಿಲ್ಲ. ಪ್ರತಿಯೊಂದು ದೇವಸ್ಥಾನಕ್ಕೂ ಬಹಳ ಶಕ್ತಿ ಇದೆ. ಮಹಾ ಪವಾಡಗಳೇ ನಡೆದು ಹೋಗಿವೆ. ಒಂದಂತೂ ಸತ್ಯ. ಇಡೀ ಮಲ್ಲೇಶ್ವರಂ ಒಂದು ನೆಮ್ಮದಿಯ ತಾಣವಾಗಿ ಒಂದು ಸುಂದರ ದೇವಲೋಕ ಆಗಬೇಕಾದರೆ ಈ ಎಲ್ಲ ಶಕ್ತಿ ಕೇಂದ್ರಗಳೇ ನೇರ ಕಾರಣ. ಎಲ್ಲರಿಗೂ ಸುಖ, ಸಮೃದ್ಧಿ, ನೆಮ್ಮದಿ, ಮನೋರಂಜನೆ ದಯಪಾಲಿಸುವಲ್ಲಿ ಈ ಎಲ್ಲಾ ದೇವಾಲಯಗಳು ಪ್ರಮುಖ ಪಾತ್ರ ವಹಿಸಿವೆ. ಇನ್ನು ಮದರಾಸಿನ ಸಂಗೀತಕ್ಕೆ ಸಾಥ್ ಕೊಡಬಲ್ಲ, ಅಂತರರಾಷ್ಟ್ರೀಯ ಮಟ್ಟದ ಸಂಗೀತದಲ್ಲಿ ಇಡೀ ಕರ್ನಾಟಕವನ್ನೇ ಮಿನುಗಿಸಬಲ್ಲ ಸಂಗೀತ ಪರಂಪರೆ ಇಡೀ ಮಲ್ಲೇಶ್ವರದ ಕೊಡುಗೆ. ಪ್ರತಿ ಬೀದಿ ಬೀದಿಯಲ್ಲಿ ಹತ್ತು ಹಲವಾರು ಸಂಗೀತಗಾರರು, ಕಲಾವಿದರು, ಕಲಾ ಪ್ರೇಮಿಗಳು, ರಸಿಕರು. ಸಾಹಿತ್ಯ ರಚಿಸುವವರು, ವಿಜ್ಞಾನ ಸಂಶೋಧನೆ ನಡೆಸುವ ಮಂದಿ, ಚಿತ್ರಕಲೆ ನೈಪುಣ್ಯ ಪಡೆದವರು, ನೃತ್ಯ ಕ್ಷೇತ್ರದ ಜೀವಾಳ ನಮ್ಮ ಮಲ್ಲೇಶ್ವರಂ.

ಸಂಪಿಗೆ ರಸ್ತೆಯ ಸಂಪಿಗೆ ಹೂವು, ಬೇವಿನ ಮರದ ರಸ್ತೆಯ ಬೇವನ್ನೂ ನಾವು ಖಂಡಿತಾ ಮರೆತಿಲ್ಲ. ನಿತ್ಯ ವಸಂತ. ನಿತ್ಯ ಯುಗಾದಿ ಈ ಬಡಾವಣೆಯ ವೈಶಿಷ್ಟ್ಯ. ಸಿಹಿ ನೀರಿನ ಬಾವಿಗಳಿಂದ ನೆಲದ ಮಟ್ಟದಲ್ಲಿ ನೀರು ಸಿಗುತ್ತಿದ್ದ ದಿನಗಳನ್ನು ನಾವೇ ನೋಡಿದ್ದೇವೆ. ಅದು ಬಾವಿಯೋ ಅಥವಾ ನೀರು ತುಂಬಿಸಲು ನಿರ್ಮಿಸಿರುವ ನೀರಿನ ತೊಟ್ಟಿಯೋ ಎಂದು ಆಶ್ಚರ್ಯ ಪಟ್ಟಿದ್ದೇವೆ. ಊಟ ತಿಂಡಿ, ಮಲ್ಲೇಶ್ವರಂ ಅಡ್ಡೆಗಳ ಬಗ್ಗೆ ಬರೆಯುವುದು ಸಾಧ್ಯವೇ ಇಲ್ಲ. ಎಲ್ಲಿಂದ ಎಲ್ಲೇ ಹೋದರೂ, ರಸ್ತೆ ಬದಿಯ ತಳ್ಳು ಗಾಡಿಯಲ್ಲಿ ತಿಂದರೂ ಸರಿಯೇ ಮಲ್ಲೇಶ್ವರದ ರುಚಿ ನಳ ಮಹಾರಾಜನಿಗೆ ಸ್ಪರ್ಧೆ ನೀಡುವ ಮಟ್ಟದಲ್ಲಿ ಇರುತ್ತವೆ. ಸಂಸ್ಕೃತಿ ಎಂದರೆ ಬೇರೇನಿಲ್ಲ. ಬದುಕುವುದು ಅಂದರೆ ಹೇಗಿರಬೇಕು ಎಂದು ಕಲಿಯಲು ಮಲ್ಲೇಶ್ವರಂ ಹೇಳಿ ಮಾಡಿಸಿದ ಜಾಗ. ಜನ ತಾವಾಯಿತು, ತಮ್ಮ ಪಾಡಾಯಿತು. ಇಲ್ಲದ ಉಸಾಬರಿಗೆ ಹೋಗುವ ಜಾಯಮಾನದವರಲ್ಲ. ಒಂದು ಪ್ರವಚನ, ಒಂದು ಸಂತೋಷ ಕೂಟ, ಒಂದು ದೇವಸ್ಥಾನ, ಒಂದು ಸಂಭ್ರಮ ಇಂತಹ ಸಂದರ್ಭಗಳಲ್ಲಿ ಒಟ್ಟಾಗಿ ಸೇರುವುದು ಬಿಟ್ಟರೆ ಬೇರೆ ಮೂಗು ತೋರಿಸುವ ಕೆಲಸ ಇಲ್ಲಿನ ಜನರ ಪದ್ಧತಿಯಲ್ಲ. ಅತ್ಯಂತ ಸಹಿಷ್ಣುತೆ. ಸರ್ವ ಧರ್ಮಗಳ ಸಮನ್ವಯದ ಶಾಂತಿ ಭೂಮಿ ನಮ್ಮ ಮಲ್ಲೇಶ್ವರಂ. ಸಹಾಯ ಮನೋಭಾವದ, ಶಾಂತಿ ಸ್ವಭಾವದ, ಸಹಾನುಭೂತಿಯ, ಸಮಾಧಾನದ ಜನರ ತಾಣ. ಈಗ ಹೇಳಿ ಮಲ್ಲೇಶ್ವರಂ ನಿಜಕ್ಕೂ ಒಂದು ಸುಂದರ ದೇವಲೋಕ ಅಲ್ಲವೇ ???……,”

ಈ ವಾಟ್ಸಾಪ್ ಬರಹ ಸುಮಾರು ಹಳೆಯದು ಎಂದು ನನ್ನ ಅನಿಸಿಕೆ. ಈಗ ಮಲ್ಲೇಶ್ವರದ ನಿವಾಸಿಗಳ ಸಂಭ್ರಮ ಬರೀ ಎಂಟನೇ ಕಾಸಿಗೆ ಸೀಮಿತವಲ್ಲದೆ ಸುತ್ತ ಮುತ್ತ ಚೆನ್ನಾಗಿ ಹಬ್ಬಿದೆ. ಮಲ್ಲೇಶ್ವರ ಸರ್ಕಲ್‌ನಿಂದಾ ಶುರು ಆಗುವ ಸಡಗರ ಸಂಭ್ರಮ ಹೆಚ್ಚೂ ಕಡಿಮೆ ಹದಿನಾರನೇ ಕ್ರಾಸ್‌ವರೆಗೂ ಮುಂದುವರೆದು ಹದಿನೇಳನೇ ಕ್ರಾಸ್‌ನಲ್ಲಿ ವಿರಳವಾಗುತ್ತದೆ. ಇನ್ನೊಂದು ಇಲ್ಲಿನ ವಿಶೇಷ ಎಂದರೆ ಹೆಣ್ಣುಮಕ್ಕಳು ಮತ್ತು ಹೆಂಗಸರು ಮಹಾತ್ಮ ಗಾಂಧಿ ರಸ್ತೆಯಲ್ಲಿ ಓಡಾಡುವ ಹೆಣ್ಣುಮಕ್ಕಳ ಹಾಗೆ “ಮಾಡ್” ಅಲ್ಲ ಮತ್ತು ಹೆಚ್ಚು ಸಂಪ್ರದಾಯಸ್ಥರು ಅಂದರೆ ಗೌರಮ್ಮಗಳು!

ಎಂ ಜಿ ರಸ್ತೆಯಲ್ಲಿ ಹರಕಲು ಜೀನ್ಸ್ ಅದರ ಮೇಲೆ ದೊಗಲೆ ಟಾಪ್ ತೊಟ್ಟ ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳು, ಸ್ಕರ್ಟ್ ಧರಿಸಿದ ಮೊಣಕಾಲು ಕಾಣುವ ಚೆಲುವೆಯರು, ಮಂಡಿಯಿಂದ ಎರಡಡಿ ಮೇಲೆ ಚಡ್ಡಿ ಧರಿಸಿರುವ ಲೇಟೆಸ್ಟ್ ಫ್ಯಾಶನ್ ಬಟ್ಟೆ ತೊಟ್ಟವರು ನಿಮಗೆ ಹೆಜ್ಜೆ ಹೆಜ್ಜೆಗೂ ಎದುರಾಗುತ್ತಾರೆ. ನಿಮಗೆ ಮಲ್ಲೇಶ್ವರದಲ್ಲಿ ಈ ಲೇಟೆಸ್ಟ್ ಫ್ಯಾಶನ್ ಗುಂಪಿನ ಒಂದೇಒಂದು ಸ್ಯಾಂಪಲ್ ಹುಡುಗಿ ಕಾಣಿಸಿದರೆ ಕೇಳಿ. ಎಂ ಜಿ ರಸ್ತೆಯಲ್ಲಿ ಕೈಯಲ್ಲಿ ಸಿಗರೇಟು ಹಿಡಿದು ಬಾಯಲ್ಲಿ ಸಣ್ಣ ಹೊಗೆ ಬಿಡುತ್ತಾ ಬಳುಕುತ್ತಾ ಹೋಗುವ ಹೆಣ್ಣುಮಕ್ಕಳು ನಿಮಗೆ ಕಾಣಿಸುತ್ತಾರೆ. ಮಲ್ಲೇಶ್ವರ ಇನ್ನೂ ಆ ಹಂತ ಮುಟ್ಟಿಲ್ಲ. ಇನ್ನೂ ಸುಮಾರು ವರ್ಷ ಹೀಗೆ ಇದು ತನ್ನ ಸ್ವಂತಿಕೆ ಕಾಪಾಡಿಕೊಳ್ಳುತ್ತದೆ. ಎಂ ಜಿ ರಸ್ತೆಯಲ್ಲಿ ಇದ್ದಂತೆ ಇಲ್ಲಿ ಪಬ್‌ಗಳೂ ಸಹ ಇಲ್ಲ. ಪಬ್ ಬಿಡಿ ಊರಿನ ತುಂಬಾ ಹಬ್ಬಿರುವ mrp ಸೇಲ್ ಎಂದು ಬೋರ್ಡ್ ಹಾಕಿಕೊಂಡಿರುವ ಇಂಗ್ಲಿಷ್ ಹೆಂಡದ ಅಂಗಡಿ ಸಹ ಎಲ್ಲೋ ಮೂಲೆಯಲ್ಲಿ ಕಂಡೂ ಕಾಣದ ಹಾಗಿವೆ. ಹಬ್ಬ ಹರಿದಿನಗಳಲ್ಲಿ ಸಂಪೂರ್ಣ ಸಂಪ್ರದಾಯಸ್ಥ ಕುಟುಂಬಗಳ ದರ್ಶನ ಆಗುತ್ತದೆ. ಮುಡಿಯ ತುಂಬಾ ಹೂ ಮುಡಿದ, ಹಣೆಗೆ ಉದ್ದ ಕುಂಕುಮ ಹಚ್ಚಿದ, ಬರೇ ಬೊಟ್ಟು ಇಟ್ಟುಕೊಂಡ, ಕೆಲವು ಸಲ ಕಾಸಿನಗಲ ಕುಂಕುಮ ಧರಿಸಿ ರೇಷ್ಮೆ ಸೀರೆ ಉಟ್ಟು ಉದ್ದನೆ ಸೆರಗು ಹೊದ್ದ ಹೆಂಗಸರು, ಆಗ ತಾನೇ ಎರೆದುಕೊಂಡು ಉದ್ದ ಕೂದಲನ್ನು ಬುಡಕ್ಕೆ ಗಂಟು ಹಾಕಿ ಕೆನ್ನೆಗೆ ಅರಿಶಿಣ ಹಚ್ಚಿಕೊಂಡು ಸರಸರ ಓಡಾಡುವ ಹೆಣ್ಣುಮಕ್ಕಳು, ಪುಟ್ಟ ಕೂಸುಗಳಿಗೆ ಕಚ್ಚೆ ಉಡಿಸಿ ಅವನ್ನು ಹೊತ್ತ ಪುಟ್ಟ ತಾಯಂದಿರು. ಸಂದರ್ಭಕ್ಕೆ ತಕ್ಕ ಹಾಗೆ ಮೈಮೇಲೆ ಆಭರಣ ಧರಿಸಿದ ಹೆಣ್ಣುಮಕ್ಕಳು…. ಇವರೆಲ್ಲ ಮಲ್ಲೇಶ್ವರಕ್ಕೆ ಒಂದು ದೊಡ್ಡ ಶೋಭೆ ತಂದಿರುವವರು. ಕೆಲವು ಸಲ ರಾಘವೇಂದ್ರ ಸ್ವಾಮಿ ಮಠದ ಸುತ್ತ ನಿಮಗೆ ಕಚ್ಚೆ ಸೀರೆ ಉಟ್ಟು ಓಡಾಡುವ ಎಲ್ಲಾ ವಯಸ್ಸಿನ ಹೆಂಗಸರು ಕಾಣುತ್ತಾರೆ. ಆಭರಣದ ವಿಷಯಕ್ಕೆ ಬಂದರೆ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಹತ್ತಿರ ಹತ್ತು ನಿಮಿಷ ನಿಂತರೆ ನಿಮಗೆ ಇತ್ತೀಚಿನ ಆಭರಣಗಳ ಒಂದು ಝಲಕ್ ಸಿಗುತ್ತದೆ. ಇನ್ನೊಂದು ಈ ಹತ್ತು ವರ್ಷದಲ್ಲಿನ ಬೆಳವಣಿಗೆ ಎಂದರೆ ಮಲ್ಲೇಶ್ವರದಲ್ಲಿ ಸಹ ಪ್ರಮುಖ ಕಂಪನಿಗಳ ಚಿನ್ನಾಭರಣ ಅಂಗಡಿಗಳು ಹೆಚ್ಚಿರುವುದು. ಅವೆನ್ಯೂ ರಸ್ತೆಗೆ ಪೈಪೋಟಿ ಕೊಡುವ ಹಾಗೆ ಇಲ್ಲೂ ಆಭರಣದ ಅಂಗಡಿಗಳು ಹೆಚ್ಚಿರುವುದು ಮತ್ತು ಅಲ್ಲಿನ ಜನ ಜಂಗುಳಿ ನೋಡಿದರೆ ಖುಷಿ ಆಗುತ್ತದೆ. ಮಲ್ಲೇಶ್ವರದ ಜನ ಕೊನೆಗೂ ಸಾಹುಕಾರರು ಆದರು ಅಂತ! ಮಲ್ಲೇಶ್ವರದ ಒಂದು ದೊಡ್ಡ ಲ್ಯಾಂಡ್ ಮಾರ್ಕ್ ಅನಿಸಿದ್ದ ಕೃಷ್ಣ ಭವನದ ಜಾಗದಲ್ಲಿ ಒಂದು ದೊಡ್ಡ ಆಭರಣ ಮಳಿಗೆ ಬರಲಿದೆ. ಒಟ್ಟಿನಲ್ಲಿ ಅವೆನ್ಯೂ ರಸ್ತೆಗೆ ಪೈಪೋಟಿ ಕೊಡುವ ಬೆಳವಣಿಗೆ ನಡೆಯುತ್ತಿದೆ.

ಇನ್ನು ಹೆಂಗಸರ ಜತೆ ಎಸ್ಕಾರ್ಟ್ ಆಗಿ ಬರುವ ಗಂಡಸರು ಅವರವರ ಪದ್ಧತಿಯಂತೆ ಕಚ್ಚೆ ಪಂಚೆ, ಅಥವಾ ದಟ್ಟಿ ಪಂಚೆ (ಇದಕ್ಕೆ ಕೈಲಾಸಂ ಬುಕ್ ಪೋಸ್ಟ್ ಎನ್ನುತ್ತಿದ್ದರು)ಮೇಲೆ ಶರಟು ಅದರ ಮೇಲೆ ಉತ್ತರೀಯ ಕಾಲಿಗೆ ಚಪ್ಪಲಿ, ಹಣೆ ಮೇಲೆ ಅವರವರ ಪದ್ಧತಿಯಂತೆ ಉದ್ದನಾಮ, ಮೂರು ನಾಮ, ಗಂಧ ಅಕ್ಷತೆ, ಮುದ್ರೆ…. ಹೀಗೆ ಸಾಲಂಕೃತರು. ತುಂಬಾ ಅಪರೂಪಕ್ಕೆ ವಿಭೂತಿ ಧರಿಸಿದ ಗಂಡಸರು ಕಾಣುತ್ತಾರೆ. ಇಲ್ಲಿ ಒಂದೇ ಒಂದು ಲಿಂಗಾಯತ ಸ್ವಾಮಿಗಳ ಮಠ ಇದ್ದ ನೆನಪು. ಈಗ ರಸ್ತೆಯ ಅಂಚಿನಲ್ಲಿ ಸಿದ್ಧಾರೂಢ ಮಠ ಎನ್ನುವ ಬೋರ್ಡ್ ನೋಡಿದ್ದೇನೆ. ಇಲ್ಲೂ ಗಂಡಸರು ಎಂ ಜಿ ರಸ್ತೆಯ ಲೇಟೆಸ್ಟ್ ಫ್ಯಾಶನ್‌ನವರು ಅಲ್ಲ. ಅಬ್ಬಬ್ಬಾ ಅಂದರೆ ಜೀನ್ಸ್ ಪ್ಯಾಂಟ್ ಮತ್ತು ಟಿ ಶರ್ಟ್ ಅಷ್ಟೇ. ಸ್ಲೀವ್ ಲೆಸ್, ಲೋ ಕಟ್ ಹೆಣ್ಣುಮಕ್ಕಳು ಅಪರೂಪ. ಕೆಲವರ್ಷಗಳ ಹಿಂದೆ ಬ್ಯಾಕ್ ಬಟನ್ ಬ್ಲೌಸ್ ಇತ್ತಲ್ಲ, ಆಗ ಕೆಲವರು ಅಂತಹ ಬ್ಲೌಸ್ ತೊಡುತ್ತಿದ್ದರು ಮತ್ತು ಮೈತುಂಬ ಸೆರಗು ಹೊದ್ದು ಓಡಾಡುತ್ತಿದ್ದರು. ತುಂಬಾ ಹಿಂದೆ ಮೆಜೆಸ್ಟಿಕ್‌ನಲ್ಲಿನ ಮೈಸೂರು ಬ್ಯಾಂಕ್ ಹತ್ತಿರ ನಿಂತಿದ್ದೆ. ಬುರ್ಕಾ ತೊಟ್ಟ ಯುವತಿ ದಡ ದಡ ಅವಸರದಲ್ಲಿ ಓಡಿ ಬಂದರು. ಪಾಪ ಅದೇನು ಕಳೆದುಕೊಂಡರೋ ಅಂತ ವ್ಯಾಕುಲತೆ ನನಗೆ. ಸ್ಕೂಟರ್ ಸ್ಟ್ಯಾಂಡ್ ಹೊಕ್ಕ ಆಕೆ ಸರಸರ ಬುರ್ಖಾ ತೆಗೆದರು. ಅದನ್ನು ಮಡಿಸಿ ಜತೆಯಲ್ಲಿನ ಬ್ಯಾಗ್‌ಗೆ ಅದನ್ನು ಹಾಕಿದರು. ಅಲ್ಲೇ ನಿಂತಿದ್ದ ಸ್ಕೂಟರ್ ಕನ್ನಡಿಯಲ್ಲಿ ಮುಖ ನೋಡಿಕೊಂಡು ಟಚ್ ಅಪ್ ಮಾಡಿಕೊಂಡರು. ಕೂದಲು ಸರಿಪಡಿಸಿಕೊಂಡು ನೇರ ಬ್ಯಾಂಕ್ ಒಳಗೆ ಹೋದರು. ಅಲ್ಲಿ ಅವರು ಕೆಲಸ ಮಾಡುತ್ತಿದ್ದರು. ಪಾಪ ಅನಿಸಿತ್ತು ಅವರನ್ನು ನೋಡಿ. ಹಾಗೇ ನಿಸಾರ್ ಅಹ್ಮದ್ ಅವರ ಒಂದು ಪದ್ಯ ನೆನಪಿಗೆ ಬಂತು… ಹೆಣ್ಣು ಮಗಳು ಎಲ್ಲಾ ಅಲಂಕಾರ (ಪೌಡರು ಲಿಪ್ ಸ್ಟಿಕ್ ಬಣ್ಣ ಮುಂತಾದ ಎಲ್ಲಾ ಅಲಂಕಾರ)ಮಾಡಿಕೊಂಡು ಮನೆಯಿಂದ ಆಚೆ ಬಂದು ಬಾಗಿಲಿಗೆ ಬೀಗ ಹಾಕುತ್ತಾಳೆ, ಅಯ್ಯೋ ಮರೆತೆ ಎಂದು ಬೀಗ ತೆಗೆದು ಒಳಗೆ ಹೋಗುತ್ತಾಳೆ. ಬುರ್ಖಾ ತೊಟ್ಟು ಆಚೆ ಬರುತ್ತಾಳೆ…. ಇದು ಕವನದ ಜಿಸ್ಟು.

ಇಲ್ಲಿನ ಹುಡುಗಿಯರು ದೇಶ ವಿದೇಶಗಳಲ್ಲಿ ಕೆಲಸ ಮಾಡುವವರು ಹಾಗೂ ನೆಲೆಸಿರುವವರು. ಬೀ ಏ ಫ್ರೆಂಚ್ ಇನ್ ಫ್ರಾನ್ಸ್ ತತ್ವ ಅನುಕರಣೆ. ಮಾಡ್ ಕಾಲೇಜುಗಳಲ್ಲಿ ಅಂದರೆ ನ್ಯೂ ಫ್ಯಾಶನ್ ಅಳವಡಿಸಿಕೊಳ್ಳುವ ಕಾಲೇಜು, ಮಲ್ಲೇಶ್ವರದ ಹುಡುಗಿಯರು ಓದುತ್ತಿದ್ದರೂ ಅಲ್ಲೂ ಸಹ ಘನತೆ, ಗಾಂಭೀರ್ಯದ ಹೊಳೆ ಹರಿಸುತ್ತಾರೆ. ಹಾಗಾಗಿ ನಮ್ಮ ಹೆಣ್ಣುಮಕ್ಕಳ ಬಗ್ಗೆ ಅಭಿಮಾನ ಉಕ್ಕಿ ಹರಿಯುತ್ತೆ.

ಮಲ್ಲೇಶ್ವರದ ನಿವಾಸಿಗಳ ನೆನಪು ಬಂದಂತೆ ಒಂದು ಸುಮಾರು ಎಪ್ಪತ್ತರ ದಶಕದ ಒಂದು ನೆನಪು ಒತ್ತರಿಸಿಕೊಂಡು ಬರುತ್ತಿದೆ. ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಬಸ್ ಸ್ಟಾಪಿನ ಬಳಿಗೆ ಹೋಗುತ್ತಿದ್ದೆ. ಏಪ್ರಿಲ್ ಮೇ ತಿಂಗಳು. ಸುಡು ಸುಡು ಬಿಸಿಲು. ನನಗಿಂತ ಮುಂದೆ ಒಬ್ಬರು ಸಂಪ್ರದಾಯಸ್ಥ ವೃದ್ಧರು ನಡೆದು ಮೆಲ್ಲಗೆ ಹೋಗುತ್ತಿದ್ದರು. ಮೇಲುಕೋಟೆ ಕೆಂಪು ಅಂಚಿನ ಕಚ್ಚೆ ಪಂಚೆ, ಶರಟಿನ ಬದಲು ಅದರ ಮೇಲೆ ಒಂದು ಉತ್ತರೀಯ, ಕೈಯಲ್ಲಿ ಒಂದು ತಾಮ್ರದ ಪುಟ್ಟ ಚೊಂಬು, ಬರಿಗಾಲು. ಹಿಂದಿನಿಂದ ನೋಡಿದೆನಾ, ಈ ವಯಸ್ಸಿನ ಇಂತಹ ಮುದುಕರನ್ನ ಈ ಸುಡುಬಿಸಿಲಲ್ಲಿ ಬರಿಗಾಲಿನಲ್ಲಿ ಕಳಿಸಿರುವ ಅವರ ಮನೆಯವರ ಮೇಲೆ ಕೋಪ ಬಂತು. ಆಗ ಆರನೇ ಕ್ರಾಸ್, ಎಂಟನೇ ಕ್ರಾಸ್ ಮೂಲೆಯಲ್ಲಿ ಚಪ್ಪಲಿ ಅಂಗಡಿ ಇದ್ದವು. ಈಗಲೂ ಇವೆ. ಮುದುಕರಿಗೆ ಒಂದು ಹವಾಯ್ ಚಪ್ಪಲಿ ಕೊಡಿಸಿದರೆ ಹೇಗೆ ಅನ್ನುವ ಯೋಚನೆ ತಲೆಯಲ್ಲಿ ಬಂತು. ಹವಾಯ್ ಚಪ್ಪಲಿ ಆಗ ಏಳೆಂಟು ರುಪಾಯಿ ಅಷ್ಟೇ. ಸರಸರ ಹೆಜ್ಜೆ ಹಾಕಿ ಮುದುಕರ ಎದುರು ನಿಂತೆ. ಹಣೆ ಮೇಲೆ ಮೂರು ನಾಮ, ಮಧ್ಯದ್ದು ಕೆಂಪು ಬಣ್ಣ, ಅಕ್ಕಪಕ್ಕ ಬಿಳಿಯದು. ಬೆವರಿಗೆ ಕೆಂಪು ಬಿಳಿ ಬಣ್ಣ ಸೇರಲು ಶುರು ಆಗಿತ್ತು. ಸ್ಕೇಲ್ ಹಿಡಿದು ಮಾರ್ಕ್ ಮಾಡಿ ಹಾಕಿದ ಹಾಗೆ ಕರಾರುವಾಕ್ಕು.. ಮೊನ್ನೆ ನನ್ನ ಕೃತಕ ಹಲ್ಲಿನ ಅಳತೆ ತಗೋ ಬೇಕಾದರೆ ಡಾಕ್ಟರು ಸ್ಕೇಲ್, ವರ್ಣಿಯರ್ Verniar calipars ಇಟ್ಟುಕೊಂಡು ಅಳತೆ ತಗೊಂಡರು. ಎದುರು ನಿಂತ ನನ್ನನ್ನು ನೋಡಿ ವೃದ್ಧರು, ಏನೋ ಹೇಗಿದ್ದೀಯಾ ಅಂದರು!

ಅವರು ಶ್ರೀ ವೆಂಕಟ ನಾರಾಯಣ ಅಯ್ಯರ್ ಅವರು. ನಾನು ಪಿಯುಸಿ ಓದಬೇಕಾದರೆ ಎಂ ಈ ಎಸ್ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದವರು, ಫಿಸಿಕ್ಸ್ ಪಾಠ ಮಾಡುತ್ತಿದ್ದರು. ಇನ್ನೂ ಹೇಳಬೇಕು ಅಂದರೆ ಸ್ವಾತಂತ್ರ ಹೋರಾಟಗಾರ ಶ್ರೀ ಎಚ್‌. ಎಸ್. ದೊರೆಸ್ವಾಮಿ ಅವರ ಸಹೋದರ (ಈ ಸಂಬಂಧ ಆಮೇಲೆ ತಿಳಿದದ್ದು). ಆಗಲೇ ನಿವೃತ್ತರಾಗಿದ್ದರು. ಅದು ಹೇಗೋ ಇನ್ನೂ ನಾನು ಅವರ ಮನಸಿನಲ್ಲಿ ಇದ್ದೆ. ಹಾಗೆ ನೋಡಿದರೆ ಕೊನೇ ಬೆಂಚಿನ ದಡ್ಡ ವಿದ್ಯಾರ್ಥಿ ಯಾವುದೇ ಮೇಷ್ಟರ ಮನಸಿನಲ್ಲಿ ಉಳಿಯದವ. ನಾನು ಇನ್ನೂ ಅವರ ನೆನಪಲ್ಲಿ ಇದ್ದೆ ಅಂತ ನನ್ನ ಭಾವನೆ ಇರಬಹುದೇ? ಚಪ್ಪಲಿ ಕೊಡಿಸ್ತೀನಿ ಬನ್ನಿ ಸಾರ್ ಅಂತ ಹೇಗೆ ಕರೆಯೋದು. ನಮಸ್ಕಾರ ಹೇಳಿದೆ, ಬಿಸಿಲಲ್ಲಿ ಬರಿಗಾಲಿನಲ್ಲಿ ಹೋಗ್ತಾ ಇದಿರಲ್ಲಾ ಸಾರ್ ಅಂದೆ. ಮನೇಲಿ ಯಾರದೋ ಹಿರಿಯರ ತಿಥಿ. ದೇವಸ್ಥಾನಕ್ಕೆ (ಅಂದರೆ ಅವರ ಮಠ)ಹೋಗ್ತಾ ಇದೀನಿ, ಮನೇಲೇ ಮಡಿ ಆಯ್ತು, ಅಲ್ಲಿ ಹೋಗಿ ಕಾಲು ತೊಳೆದರೆ ಸೀದಾ ಕರ್ಮಕ್ಕೆ ಕೂರಬಹುದು ಅಂದರು. ಚಪ್ಪಲಿ ಮಡಿಗೆ ಬರುದಿಲ್ಲ ಅಂತ ಹಾಕಿಲ್ಲ ಅಂತ ಅರ್ಥ ಮಾಡಿಕೊಂಡೆ. ಪಾಪ ಅನಿಸಿತು. ಚಪ್ಪಲಿ ತೆಗೆಸಿಕೊಡುವ ಐಡಿಯ ತಲೆಯಿಂದ ಆಚೆ ಹೋಗಿತ್ತು.

ಎಂ ಈ ಈಸ್ ಕಾಲೇಜಿನ ನೆನಪು ತುಂಬಾ ಇದೆ ಅಂತ ಹೇಳಿದ್ದೆ ಅಲ್ಲವಾ. ಇದು ಅದರ ಒಂದು ತುಣುಕು. ಈಗಲೇ ಮಿಕ್ಕ ನೆನಪುಗಳ ಒಂದು ಪುಟ್ಟ ವಿವರಣೆ ಕೊಟ್ಟು ಬಿಡುತ್ತೇನೆ. ನಾನು ಈ ಕಾಲೇಜು ಸೇರಿದ್ದು ಸುಲಭವಾಗಿ ಸೀಟು ಸಿಕ್ತು ಅನ್ನುವ ಒಂದೇ ಕಾರಣ, ಅದಲ್ಲದೆ ಬೇರೆ ಕಾರಣ ಯಾವುದೂ ಇರಲಿಲ್ಲ. ಈಗ ಈ ಕಾಲೇಜಿನಲ್ಲಿ ಸೀಟು ಸಿಗಬೇಕಾದರೆ ಹಲವು ಜನ್ಮದ ಪುಣ್ಯಫಲ ಎನ್ನುವ ನಂಬಿಕೆ ಇದೆ. ಭಾಷೆ ಜತೆಗೆ ಮೂರು ಸೈನ್ಸ್ ವಿಷಯ ಸೈನ್ಸ್ ಓದುವವರಿಗೆ. ಅಲ್ಲಿನ ಕೆಲವು ಆಗಿನ ಮೇಷ್ಟರ ನೆನಪು ಅಂದರೆ ಫಿಸಿಕ್ಸ್‌ನ ಪದ್ಮನಾಭನ್, ಕೇಮಿಸ್ಟ್ರಿಯ ರತ್ನಮ್ಮ, ಮಾಥ್‌ಮೆಟಿಕ್ಸ್‌ನ ಶಾರದಮ್ಮ. ಶಾರದಮ್ಮ ಟ್ರಿಗ್ನೋ ಮೆಟರಿ ಪಾಠ ಮಾಡಿದ್ದು ನಿನ್ನೆ ಮೊನ್ನೆ ಕೇಳಿದ ಹಾಗಿದೆ.. ಇಂಗ್ಲಿಷ್‌ನ ಎಸ್ ಎಸ್ ಆರ್ ( ಶ್ರೀನಿವಾಸ ರಾವ್). ಇವರಿಗೆ ಬಲಗೈ ಮೋಟು, ಮೊಳಕೈಗೆ ಮುಂಗೈ ಅಂಟಿಸಿದ ಹಾಗೆ. ಒಳ್ಳೆಯ ಕ್ರಿಕೆಟ್ ಆಟಗಾರ ಮತ್ತು ಟೇಬಲ್ ಟೆನಿಸ್ ಸಹ. ಪ್ರತಿಯೊಬ್ಬ ವಿದ್ಯಾರ್ಥಿಗೆ ಗಮನ ಕೊಡುತ್ತಿದ್ದರು. ಕೊನೇ ಬೆಂಚಿನ ಹುಡುಗರು ಇವರಿಗೆ ಅಚ್ಚುಮೆಚ್ಚು. ಶೇಕ್ಸ್ ಪಿಯರ್ ಪಾಠ ಮಾಡುತ್ತಾ ಇವರೇ ಪಾತ್ರ ಆಗಿಬಿಡುತ್ತಿದ್ದರು. ಕಪ್ಪಯ್ಯ ಅಂತ ಎನ್ ಸೀ ಸಿ ಆಫೀಸರ್. ಸಂಪತ್ ಅಯ್ಯಂಗಾರ್, ಶೇಷಾದ್ರಿ ಅಯ್ಯಂಗಾರ್ ಕಾಮರ್ಸ್(ತಮಾಶೆಗೆ ಕಾಮರಸ ಎನ್ನುತ್ತಿದ್ದೆವು) ಮೇಷ್ಟರು.

ಕನ್ನಡಕ್ಕೆ ಬಂದರೆ ಕವೆಂ ರಾಜಗೋಪಾಲ್, ಶ್ರೀನಿವಾಸ ಶರ್ಮ ಇವರು. ಕವೆಂ ಆಗಲೇ ನಾಟಕ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು. ಕಾಲೇಜಿನ ಕಲಾವಿದರ ಒಂದು ತಂಡದಿಂದ ಶ್ರೀರಂಗರ ಹರಿಜನ್ವಾರ ನಾಟಕ ಮಾಡಿಸಿದ್ದರು. ಅದು ಆಗ ಕೆಲವು ಬಹುಮಾನ ಪಡೆದಿತ್ತು. ಇದೇ ನಾಟಕದಲ್ಲಿ ಕಾರ್ಣಿಕ್ ಎನ್ನುವ ನನ್ನ ಕ್ಲಾಸ್‌ಮೇಟ್ ದೊಡ್ಡ ಮುಖ್ಯ ಪಾತ್ರ ಮಾಡಿದ್ದ. ನಾಟಕ ಎಷ್ಟು ಪ್ರಭಾವ ಬೀರಿತ್ತು ಅವನ ಮೇಲೆ ಅಂದರೆ ಸುಮಾರು ಸಮಯ ನಾಟಕದ ಹಾವಭಾವ ಅವನಲ್ಲಿ ಎದ್ದು ಕಾಣುತ್ತಿತ್ತು. ಪತ್ರಿಕೋದ್ಯಮ ಓದಲು ಹೋದ ಅವನ ಭೇಟಿ ಮತ್ತೆ ಆಗಿಲ್ಲ. ನನ್ನ ಜತೆಯ ಜಯದೇವ ಅನ್ನುವವರು ಮುಂದೆ ಒಂದು ಜಾಹೀರಾತಿನ ಕಂಪನಿ ತೆರೆದಿದ್ದರು. ಈಚೆಗೆ ಅವರು ದೇವರ ಪಾದ ಸೇರಿದರು. ಪಿಯುಸಿ ಗೆಳೆಯರಲ್ಲಿ ನನ್ನ ನಂಟು ಈಗಲೂ ಅನಂತನ ಸಂಗಡ ಇದೆ. ಮಲ್ಲೇಶ್ವರದಲ್ಲಿ ಒಂದು ಸ್ಟೀಲ್ ಅಂಗಡಿ ಜತೆಗೆ ಪಿಜಿ ಸಹ ನಡೆಸುವ ಇವನು ಸಾಮಾಜಿಕ ಕಳಕಳಿ ಹೊಂದಿರುವ ತುಂಬಾ ಅಪರೂಪದ ಮನುಷ್ಯ.

ನಂದಕುಮಾರ್ ನನ್ನ ಜತೆಯವರು. ಯಾವಾಗಲೂ ಎಸ್ ಡಿ ಬರ್ಮನ್ ಅವರ ಒಂದು ಹಾಡು ಗೈಡ್ ಚಿತ್ರದ್ದು ಗುನುಗುತ್ತಾ ಇರೋರು. ಅವರು ಖ್ಯಾತ ಸಂಗೀತ ವಿದ್ವಾಂಸ ಶ್ರೀ ಕುರುಡಿ ವೆಂಕಣ್ಣಾಚಾರ್ಯರ ಪುತ್ರ. ಬ್ಯಾಂಕ್‌ನಲ್ಲಿ ಹಿರಿಯ ಹುದ್ದೆಯಲ್ಲಿದ್ದು ನಿವೃತ್ತರು. ಸಂಗೀತ ಲೋಕದಲ್ಲಿ ಅವರದ್ದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಪ್ರತಿಭಾವಂತ. ಒಳ್ಳೆಯ ಶಿಷ್ಯ ಗಣವನ್ನೇ ರೂಪಿಸಿದ ಹಿರಿಮೆ ನಂದಕುಮಾರ್ ಅವರದ್ದು.

ಹೇಳಲು ಮರೆತಿದ್ದ ಮತ್ತೊಂದು ವಿಷಯ ಅಂದರೆ ನಮ್ಮ ಜತೆ ಓದುತ್ತಿದ್ದ ಒಂದು ಹುಡುಗಿ ಶಿರೋಮಣಿ(ಹೆಸರು ಖಚಿತ ಇಲ್ಲ)ಅಂತ ಅವರ ಹೆಸರಿರಬೇಕು; ಪಿಯೂಸಿನಲ್ಲಿ ಮೊದಲನೇ ರ್ಯಾಂಕ್ ಪಡೆದದ್ದು. ಆವರೆಗೆ ನ್ಯಾಷನಲ್ ಕಾಲೇಜಿಗೆ ಇದ್ದ ಈ ಹಿರಿಮೆ ಎಂ ಈ ಎಸ್ ಗೆ ಏಕ್ ದಂ ವರ್ಗ ಆಯಿತು ಮತ್ತು ಇದರ ಪರಿಣಾಮ ಅಂದರೆ ಎಂ ಈ ಎಸ್ ಕಾಲೇಜಿನಲ್ಲಿ ನಂತರದ ವರ್ಷಗಳಲ್ಲಿ ಎರಡು ಮೂರನೇ ದರ್ಜೆ ಪಾಸಾದವರಿಗೆ ಹಾಗೂ ಕೆಲವು ಸಲ ಮೊದಲನೇ ದರ್ಜೆ ಅವರಿಗೂ ಸೀಟು ದಕ್ಕುವುದು ದುರ್ಲಭ ಆಗಿದ್ದು. ಈಗ ಅದು ನೆನಪಿಗೆ ಬಂದರೆ ನಾನು ಅದೆಷ್ಟು ಲಕ್ಕಿ ಅನಿಸುತ್ತೆ, ಅತಿ ದಡ್ಡ ಆಗಿದ್ದರೂ ಇಂತಹ ಕಡೆ ಸೀಟು ಸಿಗಲು ಕಷ್ಟ ಆಗಲಿಲ್ಲ ಅಂತ! ಇದು ಸುಮಾರು ಐದು ದಶಕದ ಹಿಂದಿನ ಕತೆ. ಸಹಜವಾಗಿ ಈಗ ಬದಲಾವಣೆ ಆಗಿರುತ್ತೆ. ನಾವು ಕಾಲೇಜಿಂದ ಆಚೆ ಬಂದ ಸುಮಾರು ವರ್ಷದ ನಂತರ ಶ್ರೀ ಎಂ ಪೀ ಎಲ್ ಶಾಸ್ತ್ರೀ ಅವರು ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆ ಮತ್ತೆ ವಹಿಸಿಕೊಂಡಿದ್ದರು. ಕಾಲೇಜಿನ ಅಧ್ಯಕ್ಷರಾಗಿ ಹಲವು ಶಿಕ್ಷಣ ಸಂಸ್ಥೆಗಳ ಹುಟ್ಟಿಗೆ ಕಾರಣರಾಗಿ ರಾಜ್ಯಸರ್ಕಾರದ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಅಪೂರ್ವ ಆಡಳಿತಗಾರ ಇವರು. ಇವರ ಹೆಸರಿನಲ್ಲಿ ಒಂದು ಕಾಲೇಜು ಇದೆ. ೧೯೯೫ ಅಂತ ಕಾಣುತ್ತೆ. ಹಾಸ್ಯೋತ್ಸವದ ಸಂದರ್ಭದಲ್ಲಿ ಇವರಿಂದ ಸಮಾರಂಭ ಉದ್ಘಾಟನೆ ಮಾಡಿಸುವ ಯೋಚನೆ ಹೊಳೆಯಿತು(ಹಾಸ್ಯೋತ್ಸವದ ಹುಟ್ಟಿನ ಬಗ್ಗೆ ಮುಂದೆ ಹೇಳುತ್ತೇನೆ). ಎಂ ಪೀ ಎಲ್ ಶಾಸ್ತ್ರಿ ಅವರ ಮನೆಗೆ ರಾತ್ರಿ ಎಂಟರ ಸುಮಾರಿಗೆ ನಾನು ಕೃಷ್ಣ ಹೋದೆವು. ಆಗಲೇ ಅವರಿಗೆ ವಯಸ್ಸಾಗಿತ್ತು ಮತ್ತು ಈ ಹೊತ್ತಿನಲ್ಲಿ ಅವರಿಗೆ ತೊಂದರೆ ಕೊಡುವುದು ನಮಗೂ ಒಂದು ರೀತಿ ಮುಜುಗರ. ಮನೆ ಸೇರಿದವಾ, ಹೀಗೆ ಸಾರ್‌ನ ನೋಡಬೇಕು ಅಂತ ಬಾಗಿಲು ತೆರೆದವರಿಗೆ ಹೇಳಿದೆವು. ಸಾರ್ ಏಳೂವರೆಗೆ ಮಲಗ್ತಾರೆ… ಅಂದರು. ಅವರ ಭೇಟಿ ಸಾಧ್ಯ ಆಗಲಿಲ್ಲ. ಈಗ ಒಂದು ನೆನಪು ನಿಮಗೆ. ಇದಕ್ಕೆ ಸಂಬಂಧವೇ ಇಲ್ಲದ ನೆನಪು ಇದು.
   

    ಅವೆನ್ಯೂ ರಸ್ತೆಗೆ ಪೈಪೋಟಿ ಕೊಡುವ ಹಾಗೆ ಇಲ್ಲೂ ಆಭರಣದ ಅಂಗಡಿಗಳು ಹೆಚ್ಚಿರುವುದು ಮತ್ತು ಅಲ್ಲಿನ ಜನ ಜಂಗುಳಿ ನೋಡಿದರೆ ಖುಷಿ ಆಗುತ್ತದೆ. ಮಲ್ಲೇಶ್ವರದ ಜನ ಕೊನೆಗೂ ಸಾಹುಕಾರರು ಆದರು ಅಂತ! ಮಲ್ಲೇಶ್ವರದ ಒಂದು ದೊಡ್ಡ ಲ್ಯಾಂಡ್ ಮಾರ್ಕ್ ಅನಿಸಿದ್ದ ಕೃಷ್ಣ ಭವನದ ಜಾಗದಲ್ಲಿ ಒಂದು ದೊಡ್ಡ ಆಭರಣ ಮಳಿಗೆ ಬರಲಿದೆ. ಒಟ್ಟಿನಲ್ಲಿ ಅವೆನ್ಯೂ ರಸ್ತೆಗೆ ಪೈಪೋಟಿ ಕೊಡುವ ಬೆಳವಣಿಗೆ ನಡೆಯುತ್ತಿದೆ.

ರಾತ್ರಿ ಹತ್ತೂವರೆಗೆ ಪದ್ಮಭೂಷಣ ಶ್ರೀ ಆರ್. ಕೆ ಶ್ರೀಕಂಠನ್ ಅವರ ಮನೆಗೆ ಹೋಗಿದ್ದ ನಮ್ಮ ದಡ್ಡತನ ಇಲ್ಲಿ ಹೇಳಬೇಕು. ಇದು ೨೦೦೮ ಅಂತ ಕಾಣುತ್ತೆ. ನಮ್ಮ ಕಾರ್ಖಾನೆಯ ಲಲಿತಕಲಾ ಸಂಘದ ಕಾರ್ಯದರ್ಶಿ ನಾನು. ಶ್ರೀ ಎನ್ ಕೆ ಸುಬ್ರಹ್ಮಣ್ಯ(ಇವರು ಸಂಗೀತ ವಿದ್ವಾಂಸರು ಮತ್ತು ಚಾರ್ಟರ್ಡ್ ಅಕೌಂಟೆಂಟ್ ಸಹ. ಲೆಕ್ಕ ಚೆನ್ನಾಗಿ ಮಾಡುವವರು ಒಳ್ಳೇ ಸಂಗೀತಗಾರರು ಆಗುತ್ತಾರೆ ಅಂತ ನಂಬಿಕೆ. ನಾನು ಲೆಕ್ಕದಲ್ಲಿ ಮೂವತ್ತೈದರ ಗಿರಾಕಿ, ಸಂಗೀತ ಗೊತ್ತಿಲ್ಲ. ನಾನು ಆಗಾಗ್ಗೆ ಇವರ ಮೇಲೆ ಒಲವು ಹೆಚ್ಚಾದಾಗ ಸುಬ್ಬು ಅನ್ನುತ್ತಿದ್ದೆ)ಅನ್ನುವವರು ಖಜಾಂಚಿ. ನಮ್ಮ ಸಂಸ್ಥೆಯ ಅಧ್ಯಕ್ಷರು ಮತ್ತು ನಿರ್ದೇಶಕ (ಸಿ ಎಂ ಡಿ) ಶ್ರೀ ವಿ ವಿ ಆರ್ ಶಾಸ್ತ್ರೀ ಅವರು ನಿವೃತ್ತರಾಗುತ್ತಿದ್ದರು. ನಿವೃತ್ತರಾಗುತ್ತಿರುವವರಿಗೆ ಒಂದು ಸನ್ಮಾನ, ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿ ಅವರಿಗೆ ಇಷ್ಟವಾದ ಕಾರ್ಯಕ್ರಮ ಒಂದು ಏರ್ಪಡಿಸುವುದು ಸಂಪ್ರದಾಯ ಆಗಿತ್ತು. ನಮ್ಮ ಸಿ ಎಂ ಡಿ ಅವರಿಗೆ ಸಂಗೀತ ಇಷ್ಟ ಎಂದು ಗೊತ್ತಿತ್ತು. (ನಮ್ಮ ಲಲಿತ ಕಲಾ ಸಂಘದ ಅಧ್ಯಕ್ಷರಾಗಿದ್ದ ಶ್ರೀ ಎಂ ಆರ್ ಹೆಗ್ಡೆ ನಮಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು.) ಇದನ್ನು ಸುಬ್ಬು ಖಚಿತ ಮಾಡಿದ್ದರು. ಸಂಗೀತದ ಕಾರ್ಯಕ್ರಮಕ್ಕೆ ಶ್ರೀ ಶ್ರೀಕಂಠನ್ ಹಾಗೂ ಶ್ರೀ ಆರ್. ಕೆ.ಪದ್ಮನಾಭನ್ ಅವರನ್ನು ಆಹ್ವಾನಿಸಬೇಕು ಅಂತ ಆಯ್ತು. ಸಂಜೆ ಐದಕ್ಕೆ ಕೆಲಸ ಮುಗಿಸಿಕೊಂಡು ಜಾಲಹಳ್ಳಿಯಿಂದ ಇನ್ನೊಂದು ತುದಿಯ ಜಯನಗರ ಒಂಬತ್ತನೇ ಬ್ಲಾಕಿನ ಶ್ರೀ ಆರ್. ಕೆ. ಪದ್ಮನಾಭನ್ ಅವರ ಮನೆಗೆ ಹೋದೆವು. ಅಲ್ಲಿಂದ ಹೊರಟಾಗ ಎಂಟೂವರೆ. ಅಲ್ಲಿಂದ ಶ್ರೀ ಶ್ರೀಕಂಠನ್ ಅವರ ಮನೆಗೆ ಹೋಗುವ ಪ್ಲಾನ್. ಆಗ ಜಿಪಿಎಸ್ ವ್ಯವಸ್ಥೆ ಇಲ್ಲ ಮತ್ತು ಮೊದಲ ಬಾರಿ ಇವರ ಮನೆಗೆ ಹೋಗುತ್ತಿರುವುದು! ಫೋನಾಯಿಸಿ ಬರ್ತಾ ಇದೀವಿ ಅಂತ ತಿಳಿಸಿದೆವು. ಬನ್ನಿ ಸಂತೋಷ ಅಂದರು. ಮನೆ ವಿಳಾಸ ತಿಳಿಸಿದರು. ಜಯನಗರ ಒಂಬತ್ತನೇ ಬ್ಲಾಕಿನಿಂದ ಹೊರಟು ಅವರ ಮನೆ ಸೇರಿದಾಗ ರಾತ್ರಿ ಹತ್ತೂವರೆ. ಅವರಿಗೆ ಆಗಲೇ ಎಂಬತ್ತರ ಹತ್ತಿರ ಹತ್ತಿರ ವಯಸ್ಸು. ಆ ಹೊತ್ತಿನಲ್ಲಿ ಶ್ರೀಕಂಠನ್ ಅವರ ಹೆಂಡತಿ ನಮಗೆ ಕಾಫಿ ಕೊಟ್ಟು ಸತ್ಕರಿಸಿದರು! ಕಾರ್ಯಕ್ರಮದ ಬಗ್ಗೆ ಇನ್ನೊಮ್ಮೆ ಮುಂದೆ ತಿಳಿಸುತ್ತೇನೆ. ಈಗ ಅದು ನೆನೆಸಿಕೊಂಡರೇ ಶ್ರೀ ಶ್ರೀಕಂಠನ್ ದಂಪತಿಗಳ ಬಗ್ಗೆ ಅತ್ಯಂತ ಭಕ್ತಿ ಮತ್ತು ಗೌರವ ಹುಟ್ಟುತ್ತೆ, ರಾತ್ರಿ ಆ ಹೊತ್ತಿನಲ್ಲಿ ಹೋಗಿ ಬಾಗಿಲು ಬಡಿದು ಅವರಿಗೆ ಹಿಂಸೆ ಕೊಟ್ಟ ನಮ್ಮನ್ನು ಅವರು ನಾಯಿ ಚೂ ಬಿಟ್ಟು ಓಡಿಸಲಿಲ್ಲ! ಹಾಗೇ ಅಂತಹ ಹೊತ್ತಿನಲ್ಲಿ ಅವರ ಮನೆಗೆ ನುಗ್ಗಿ ಹಿಂಸೆ ಕೊಟ್ಟಿದ್ದಕ್ಕೆ ಬೇಸರ ಸಹ ಹುಟ್ಟುತ್ತೆ. ಮಲ್ಲೇಶ್ವರದ ನೆನಪು ಎಲ್ಲೆಲ್ಲಿಗೆ ಕರೆದುಕೊಂಡು ಹೋಗ್ತಾ ಇದೆ ನೋಡಿ. ಮತ್ತೆ ಮಲ್ಲೇಶ್ವರಕ್ಕೆ..

(ಶ್ರೀ ಆರ್ ಕೆ ಶ್ರೀಕಂಠನ್ ಅವರಿಗೆ ಸನ್ಮಾನ)

ಅಪರಂಜಿ ಪತ್ರಿಕೆಯ ಸಂಪಾದಕ ಮಂಡಳಿ ಹಾಗೂ ಟ್ರಸ್ಟಿ ಸಭೆ ನಿಯತವಾಗಿ ಶ್ರೀ ಶಿವಕುಮಾರ ಅವರ ಮನೆಯಲ್ಲಿ ನಡೆಯುತ್ತೆ. ಅವರ ಮನೆಗೆ ಹೋಗಬೇಕಾದಾಗ ನಾನು ಎರಡು ಮೂರು ಸ್ಟಾಪ್ ಹಿಂದೇನೆ ಬಸ್ಸಿನಿಂದ ಇಳಿದು ನಡೆಯುತ್ತೇನೆ. ಇದು ಹಳೇ ಅಭ್ಯಾಸ. ಹೆಚ್ಚು ನಡೆಯಿರಿ, ಆರೋಗ್ಯಕ್ಕೆ ಒಳ್ಳೆಯದು ಎಂದು ಎಂದೋ ಓದಿದ್ದ ಲೇಖನ ಇದಕ್ಕೆ ಪ್ರೇರಣೆ. ನಾನು ಇದರ ಅಂದರೆ ವಾಕಿಂಗ್‌ನ ಉಪಯೋಗ ಪಡೆದದ್ದು ಬೇರೆ ರೀತಿ. ಒಂದೋ ಎರಡೋ ಕಪ್ ಕಾಫಿ, ಸಿಗರೇಟು ಮತ್ತು ಮಿಂಟಿ ಈ ವಾಕಿಂಗ್ ಸಮಯದಲ್ಲಿ ನನ್ನ ಲೆಕ್ಕಕ್ಕೆ ಸೇರುತ್ತಿತ್ತು. ಈಗ ಒಂದು ಏಳೆಂಟು ವರ್ಷದಿಂದ ಖರ್ಚಿನ ಲೆಕ್ಕ ಕೆಳಮುಖ, ಕಾರಣ ಹೊಗೆ ನಿಲ್ಲಿಸಿದ್ದು. ವಾಕಿಂಗ್ ಅಂದರೆ ವಾಯುವಿಹಾರ ಸುಮಾರು ಜನಕ್ಕೆ, ಆದರೆ ನನಗದು ಹೊಗೆ ವಿಹಾರ ಆಗಿತ್ತು. ಹೊಗೆ ಅಂಟಿದ್ದು ಬಿಟ್ಟಿದ್ದು.. ಬಗ್ಗೆ ನಂತರ ಸುದೀರ್ಘ ಟಿಪ್ಪಣಿ ಕೊಡುವೆ. ಇದು ಹಾಗಿರಲಿ.. ಹೊಗೆ ಚಟ ಬಿಟ್ಟವರೆಲ್ಲ ತಾವು ಹೇಗೆ ಅಂತಹ ಕೆಟ್ಟ ಚಟ ಬಿಟ್ಟರು ಎಂದು ಬರೆದೇ ಬರೆದಿರುತ್ತಾರೆ. ನಾನೂ ಸಹ ಅದಕ್ಕೆ ಹೊರತಲ್ಲ!

ಅಪರಂಜಿ ಸಭೆಗೆ ಹೋಗುವಾಗ ಖ್ಯಾತ ವಿಮರ್ಶಕ ಶ್ರೀ ಎಸ್ ಆರ್. ವಿಜಯ ಶಂಕರ ಅವರು ಎದುರು ಸಿಗುವರು. ಅವರ ನನ್ನ ಪರಿಚಯ ಸುಮಾರು ಮೂರು ದಶಕದ್ದು. ಅವರ ಜತೆ ಹತ್ತೇ ನಿಮಿಷ ಮಾತು ಆಡಿದರೂ ಅದೇನೋ ಹೊಸ ವಿಷಯ ತಲೆಯಲ್ಲಿ ತುಂಬಿರುತ್ತೇ. ಇದೇ ಅನುಭವ ಶ್ರೀ ಶಿವಕುಮಾರ ಅವರ ಜತೆ ಮಾತು ಆಡಿದಾಗಲೂ.

ಮಲ್ಲೇಶ್ವರದ luminaries ಬಗ್ಗೆ ಎಷ್ಟು ಬರೆದರೂ ಮುಗಿಯದು. ಶ್ರೀ ಎಂ ಎಸ್ ನರಸಿಂಹ ಮೂರ್ತಿ, ಅಂತರಾಷ್ಟ್ರೀಯ ಖ್ಯಾತ ಹಾಸ್ಯ ಬರಹಗಾರ ಅವರು ಇಲ್ಲಿಯ ನಿವಾಸಿ. ನಾಲ್ಕು ದಶಕಗಳ ನಂಟು ಇವರ ಜತೆ. ಆಗಾಗ ಇವರನ್ನು ಸಭೆಗೆ ಪರಿಚಯಿಸುವಾಗ ನಾನು ಇವರು ಸುಮಾರು ಸಾವಿರ ವರ್ಷಗಳಿಂದ ಹಾಸ್ಯ ಕೃಷಿ ಮಾಡುತ್ತಿದ್ದಾರೆ ಎಂದು ಹೇಳುವುದುಂಟು. ಒಂದು ಲೆಕ್ಕದ ಪ್ರಕಾರ ಇವರು ಈಗಾಗಲೇ ಹತ್ತು ಜನ್ಮಕ್ಕಾಗುವಷ್ಟು ಬರೆದು ರಾಶಿ ರಾಶಿ ಹಾಕಿದ್ದಾರೆ. ತುಂಬಾ ಸ್ನೇಹಿ ಮತ್ತು ಆತ್ಮೀಯರು ಇವರು. ಒಂದೇ ಒಂದು ಸಲವೂ ಇವರ ಮುಖದಲ್ಲಿ ಸಿಡುಕು ಕಂಡಿಲ್ಲ!

ಇನ್ನೊಬ್ಬ ಖ್ಯಾತರು ಅಂದರೆ ಶ್ರೀ ಎಚ್ ವಿ ವೆಂಕಟಸುಬ್ಬಯ್ಯ ಅವರು. ಶ್ರೀರಂಗರ ಮೇಲೆ ಇವರು ಒಂದು ಅಥಾರಿಟಿ. ಕನ್ನಡ ನಾಟಕ ರಂಗದ ಬಗ್ಗೆ ಸುಮಾರು ರಿಸರ್ಚ್ ಮಾಡಿದ್ದಾರೆ ಮತ್ತು ಅವುಗಳನ್ನು ದಾಖಲಿಸಿದ್ದಾರೆ. ಈಗ ಎರಡು ವರ್ಷದ ಹಿಂದೆ ಅವರು ಕಾಲವಾದರು. ಸಿಕ್ಕಿದಾಗಲೆಲ್ಲ ಬೈಟು ಕಾಫಿ ಮತ್ತು ಯಾವುದಾದರೂ ಪುಸ್ತಕದ ಬಗ್ಗೆ ಚರ್ಚೆ. ಮನೆಗೆ ಕರೆದುಕೊಂಡು ಹೋಗಿ ಯಾವುದಾದರೂ ಪುಸ್ತಕ ಕೊಡುವುದು.

ಅಸಂಖ್ಯಾತ luminaries ಇರುವ ಮಲ್ಲೇಶ್ವರದಲ್ಲಿ ಎಲ್ಲರೂ ನೆನಪಿಗೆ ಬಾರದಿರುವ ಸಾಧ್ಯತೆ ತುಂಬಾ. ಇಂತಹ ಮರೆತವರಲ್ಲಿ ಪ್ರಮುಖರು ಅಂದರೆ ಶ್ರೀಯುತ ಎಸ್ ರಾಮಸ್ವಾಮಿ ಮತ್ತು ಅವರ ಸೋದರ ವಿಶ್ವನಾಥ್. ಅವರು ಅಲೆಮಾರಿ ರಾಮಸ್ವಾಮಿ ಎಂದೇ ಪ್ರಸಿದ್ಧರು. ಹಲವು ಮೌಲಿಕ ಗ್ರಂಥಗಳ ಕರ್ತೃ ಇವರು. ಇಂಗ್ಲಿಷ್ ಭಾಷಾ ಪ್ರೌಢಿಮೆ ಮತ್ತು ಇವರ ವಾಕ್ ಚಾತುರ್ಯ ಅಪೂರ್ವ. ನಮ್ಮ ಹಾಸ್ಯಬ್ರಹ್ಮ ಮತ್ತು ಅಪರಂಜಿ ಕೊರವಂಜಿ ಟ್ರಸ್ಟ್ ಮೂಲಕ ಗಂಜಾಂ ಹಾಲ್‌ನಲ್ಲಿ ಏರ್ಪಡಿಸಿದ್ದ ಒಂದು ಸಭೆಯಲ್ಲಿ ಪೀ ಜಿ ವುಡ್ ಹೌಸ್ ಬಗ್ಗೆ ಇವರು ಮಾಡಿದ ಭಾಷಣ ಇನ್ನೂ ಹಲವರ ಮನಸಿನಲ್ಲಿ ಉಂಟು. ಅವರ ಸೋದರ ಸಂಪಟೂರು ವಿಶ್ವನಾಥ್ ಅವರೂ ಸಹ ಒಳ್ಳೆಯ ಬರಹಗಾರ. ಇದೇ ಕುಟುಂಬದಲ್ಲಿ ಒಬ್ಬರು ಸಂಸ್ಕೃತ ಪ್ರೊಫೆಸರ್ ಆದರೆ ಮತ್ತೊಬ್ಬರು ಪ್ರಿನ್ಸಿಪಾಲ್.

ಮಲ್ಲೇಶ್ವರ ಅಂದರೆ ನನ್ನ ಪಿಯೂಸಿ ದಿನಗಳಲ್ಲಿ ಸುಬ್ರಹ್ಮಣ್ಯಂ ಪ್ರತಿದಿನ ಕಾಣುತ್ತಿದ್ದವರು. ಕ್ರಿಕೆಟ್ ಆಟಗಾರ ಮತ್ತು ಆಗಿನ ಮೈಸೂರು ಟೀಮಿನ ಕ್ಯಾಪ್ಟನ್ ಇವರು. ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಅವರು ಪ್ರಸನ್ನ, ಚಂದ್ರಶೇಖರ್, ಜಗನ್ನಾಥ್, ಜಯಪ್ರಕಾಶ್, ವಿಜಯ ಕೃಷ್ಣ, ವಿಜಯ ಕುಮಾರ್ ಮೊದಲಾದವರ ಸಂಗಡ ಆಡಿರುವ ರಣಜಿ ಮ್ಯಾಚ್ ಎಲ್ಲವೂ ನಿನ್ನೆ ಮೊನ್ನೆ ನೋಡಿದ ಹಾಗಿದೆ. ಸುಧಾ ವಾರಪತ್ರಿಕೆಯಲ್ಲಿ ರಾಜ್ಯದ ಕ್ರೀಡಾಪಟುಗಳ ಬಗ್ಗೆ ಲೇಖನ ಬರುತ್ತಿತ್ತು ಮತ್ತು ಅವರ ಪೋಟೋ ಎರಡನೇ ರಕ್ಷಾಪುಟದಲ್ಲಿ ಹಾಕುತ್ತಿದ್ದರು. ಸುಧಾದಲ್ಲಿ ಇವರಿಗೆ ನಾರು ದೇಹದ ಸುಬ್ರಹ್ಮಣ್ಯಂ ಎಂದು ಬರೆದಿದ್ದರು. ವೆಸ್ಟ್ ಇಂಡೀಸ್ ತಂಡ ಬೆಂಗಳೂರಿನಲ್ಲಿ ಮ್ಯಾಚ್ ಆಡಿದಾಗ ಇವರ ಹೆಸರಿನ ಉಚ್ಚಾರ ಸರಿಯಾಗಿ ಮಾಡಲು ಆಗದೇ ಸಬ್ ಮೆರೀನ್ ಎಂದು ಕರೆಯುತ್ತಿದ್ದರು!

(ನ್ಯೂ ಕೃಷ್ಣ ಭವನ ಇಲ್ಲಿ ಹಳದಿ ಬಿಲ್ಡಿಂಗ್ ಮುಂಭಾಗದಲ್ಲಿತ್ತು, ಈಗ ಇಲ್ಲ.)

ಬೀಗಲ್ಸ್ ಬಾಸ್ಕೆಟ್ ಬಾಲ್‌ನ ರಾಜಗೋಪಾಲ್ ಇವರನ್ನು ಬೇಬಿ ಎಂದು ಕರೆಯುತ್ತಿದ್ದರು. ನಮ್ಮ ಜತೆ ಕೆಲಸ ಮಾಡುತ್ತಿದ್ದ ವೆಂಕಟೇಶ್ ಸಹ ಒಳ್ಳೆಯ ಬಾಸ್ಕೆಟ್ ಬಾಲ್ ಪಟು; ಮಲ್ಲೇಶ್ವರ ಪ್ರಾಡಕ್ಟ್! ಬಿಲಿಯರ್ಡ್ಸ್ ಚಾಂಪಿಯನ್ ಶ್ರೀ ಅರವಿಂದ ಸವೂರ್ ಇಲ್ಲಿಯವರು. ಸುಬ್ಬಾಶಾಸ್ತ್ರಿ ಚಲನಚಿತ್ರದ ನಿರ್ದೇಶಕ ಶ್ರೀ ಕೃಷ್ಣಸ್ವಾಮಿ ಮಲ್ಲೇಶ್ವರದವರು. ಇವರ ಮನೆಗೆ ಕೃಷ್ಣನ ಸಂಗಡ ಹೋಗಿದ್ದೆ, ಎಂದಿನ ಹಾಗೇ ಒಂದು ಸಮಾರಂಭಕ್ಕೆ ಆಹ್ವಾನಿಸಲು. ನನಗೆ ಮಲ್ಲೇಶ್ವರದ ಮತ್ತೊಂದು ಪ್ರಮುಖ ಆಕರ್ಷಣೆ ಅಂದರೆ ಸರ್ಕಲ್ ಬಳಿ ಇರುವ ಗಾಯತ್ರಿ ಬ್ಯಾಂಕ್. ನಮ್ಮ ಕಾರ್ಖಾನೆಯ ಉದ್ಯೋಗಿಗಳೇ ಸ್ಥಾಪಿಸಿರುವ ಈ ಬ್ಯಾಂಕ್‌ನಲ್ಲಿ ನಮ್ಮ ಹಣ ಡಿಪಾಸಿಟ್ ಇಟ್ಟು ಅದರ ಬಡ್ಡಿ ಮೂಲಕ ಸುಮಾರು ನಿವೃತ್ತರು ತಮ್ಮ ಸಂಜೆ ಕಳೆಯುತ್ತಾ ಇದ್ದಾರೆ. ನಿವೃತ್ತರಿಗೂ ಮತ್ತು ಹಾಲಿ ನೌಕರರು ಕಣ್ಣು ಮುಚ್ಚಿ ಇಲ್ಲಿ ವ್ಯವಹಾರ ನಡೆಸುತ್ತಾರೆ, ಅಷ್ಟರ ಮಟ್ಟಿಗೆ ಬ್ಯಾಂಕು ತನ್ನ ವರ್ಚಸ್ಸು ಕಾಪಾಡಿಕೊಂಡು ಬಂದಿದೆ.

ಸಾಂಸ್ಕೃತಿಕ ಲೋಕದಲ್ಲಿ ಅನನ್ಯ ಸಂಸ್ಥೆ ಬಹಳ ಉತ್ತಮ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಸ್ಥಳೀಯ ಕಲಾವಿದರಿಗೆ ಹೆಚ್ಚು ಪ್ರೋತ್ಸಾಹ ಕೊಡುವ ಈ ಸಂಸ್ಥೆಯ ರೂವಾರಿ ಶ್ರೀ ರಾಘವೇಂದ್ರ ಅವರು.. ಶ್ರೀಮತಿ ವಾಣಿ ಗಣಪತಿ, ಅಮೃತಾ ವೆಂಕಟೇಶ್ ಮೊದಲಾದ ಪ್ರತಿಭೆಗಳು ಅವರ ಕಾರ್ಯಕ್ರಮ ಇಲ್ಲಿ ಕೊಟ್ಟಿದ್ದಾರೆ. ಭಾರತದ ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದ ಶ್ರೀ ಟಿ ಎನ್ ಶೇಷನ್ ಅವರ ಶ್ರೀಮತಿ ಮಲ್ಲೇಶ್ವರದವರು ಎಂದು ಓದಿದ್ದೆ ಎಂದು ಗೆಳೆಯ ವೆಂಕಟೇಶ್ ನೆನೆಯುತ್ತಾರೆ. ಮಲ್ಲೇಶ್ವರದ ಪ್ರಮುಖ ಲ್ಯಾಂಡ್ ಮಾರ್ಕ್‌ನಲ್ಲಿ ಮತ್ತೊಂದು ಎಂದರೆ ಅಂತ್ಯಕ್ರಿಯೆಗಳನ್ನು ಮಾಡಲು ಸೇವೆ ಸಲ್ಲಿಸುತ್ತಿರುವ ಸಂಸ್ಥೆ – ವೈದಿಕ ಧರ್ಮ ಸಹಾಯ ಸಭಾ (ನನ್ನ ಗೆಳೆಯ ಶ್ರೀ ರಾಮನಾಥ್ ಅವರ ತಾತ ದಿ. ಎಸ್ ಜಿ ನರಸಿಂಹಯ್ಯ ಅವರು ಸ್ಥಾಪಕ ಕಾರ್ಯದರ್ಶಿ). ಈಗ ಚೌಡಯ್ಯ ಸ್ಮಾರಕ ಭವನದ ಪಕ್ಕದಲ್ಲಿಯೇ ಇದೆ.

ಇನ್ನೊಂದು ಮಾಹಿತಿ ನನ್ನಂತಹ ತಿಂಡೀಪೋತರಿಗೆ… CTR ರೀತಿಯಲ್ಲೇ ಮತ್ತೊಂದು ಹೆಸರು ಮಾಡಿರುವ ಹೊಟೆಲ್ ಅಂದರೆ “ಜನತಾ ಹೋಟೆಲ್ ” 8 ನೇ ಕ್ರಾಸ್, ಇಲ್ಲಿ ಮಸಾಲೆ ದೋಸೆ ಮತ್ತು ವಡೆ ಸಾಂಬಾರು ಹೆಸರು ವಾಸಿ . ಮಹಾರಾಣಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಶ್ರೀ ಹನುಮಂತ ರಾವ್ ಮತ್ತು ಅವರ ಪತ್ನಿ ಡಾ ಪದ್ಮಾ (ಇವರು IISC ಯಲ್ಲಿ ಪ್ರೊಫೆಸರ್) ಇವರು ಇಲ್ಲಿಯವರು. ಸೈನ್ಸ್‌ಗೆ ಸಂಬಂಧಪಟ್ಟ ಸುಮಾರು ನನ್ನ ತಲೆಯ ಮೇಲೆ ಹಾರುತ್ತ ಇದ್ದ ವಿಷಗಳನ್ನು ಇವರ ಮೂಲಕ ತಲೆ ಒಳಗೆ ನುಗ್ಗಿಸಿದ್ದೇನೆ! ಫುಲ್ ಸೂಟ್‌ನಲ್ಲಿ ಇವರನ್ನು ನೋಡುವುದೇ ಒಂದು ಖುಷಿ. ಕೋಟು, ಪ್ಯಾಂಟು ಗರಿಗರಿಯಾಗಿ ಮೈಮೇಲೆ ಕೂಡುತ್ತಿತ್ತು. ಶ್ರೀ ಆರಾ ಮಿತ್ರ ಅವರಿಗೂ ಇವರಿಗೂ ತುಂಬಾ ಸ್ನೇಹ. ಹನುಮಂತ ರಾವ್ ಅವರ ಸೂಟಿನ ಬಗ್ಗೆ ಅರಾ ಮಿತ್ರ ಹೀಗೆ ಹೇಳುತ್ತಿದ್ದರು. ನಾವೆಲ್ಲಾ ಐರನ್ ಮಾಡಿ ಬಟ್ಟೆ ಹಾಕಿಕೊಂಡರೆ ಇವರು ಬಟ್ಟೆ ಹಾಕಿಕೊಂಡು ಐರನ್ ಮಾಡಿಕೊಳ್ಳುತ್ತಾರೆ…!

ಅಂದ ಹಾಗೆ ಇಲ್ಲಿ ದೊಡ್ಡ ಮದುವೆ ಛತ್ರಗಳು ಇಲ್ಲ. ಇರುವ ಮೂರೋ ನಾಲ್ಕು ಚತ್ರಗಳು ಪುಟ್ಟವು. ಬಹುಶಃ ಆಗ ಒಂದೊಂದು ಮನೆಯೂ ಚತ್ರದಷ್ಟು ದೊಡ್ಡದು ಇತ್ತು, ಮತ್ತು ಮನೆಯಲ್ಲಿಯೇ ಸಮಾರಂಭ ಆಗುತ್ತಾ ಇದ್ದದ್ದು ಕಾರಣ ಇರಬಹುದು. ಇನ್ನೂ ತಮಾಷೆ ಅಂದರೆ ಇಡೀ ಮಲ್ಲೇಶ್ವರ ಗೀತಾಂಜಲಿ ಟಾಕೀಸ್ ಒಂದೇ. ಈಗ ಅದೂ ಸಹ ಇಲ್ಲ. ಅದು ಈಗ ಮಾಲ್ ಆಗಿದೆ. ಇನ್ನೊಂದು ವಿಶೇಷ ಅಂದರೆ ಇಲ್ಲಿ ಹೇಳಿಕೊಳ್ಳುವಂತಹ ಒಂದೇ ಒಂದು ದೊಡ್ಡ ಪಾರ್ಕ್ ಕಾಣದು. ಬಹುಶಃ ಮಲ್ಲೇಶ್ವರ ನಿರ್ಮಾಣ ಆದಾಗ ಪಾರ್ಕ್ ಅವಶ್ಯಕತೆ ಇದ್ದಿರಲಾರದು. ಇಷ್ಟೆಲ್ಲಾ ನೆನೆಸಿಕೊಂಡರೂ ಸಹ ಏನೋ ಕೊರತೆ ಇದೆ ಅಂತ ಅನಿಸುತ್ತಿದೆ. ಆಗಾಗ ಒಂದೊಂದು ತುಣುಕು ಅಂಟಿಸುತ್ತೇನೆ.

ಇನ್ನೂ ಉಂಟು