ಸಂಗೀತದ ತಿಳುವಳಿಕೆ ಇರುವರೆಲ್ಲಾ ಉತ್ತಮ ಭಾಗವತರಾಗಬಹುದು, ಆದರೆ ಅವರು ರಂಗದಲ್ಲಿ ಯಶಸ್ವೀ ಭಾಗವತರಾಗುವುದಿಲ್ಲ. ಯಕ್ಷಗುರು ಕೃಷ್ಣ  ಭಂಡಾರಿಯವರಿಗೆ ಸ್ವತಃ ವೇಷದ ನಡೆಯ ಅನುಭವವಿರುವ ಕಾರಣ ಮುಮ್ಮೇಳದ ಕಲಾವಿದನಿಗೆ ಯಾವ ಯಾವ ಭಾಗದಲ್ಲಿ ಪದ್ಯದ ಮೂಲಕ ಕುಣಿಸಬೇಕೆನ್ನುವದು ಚೆನ್ನಾಗಿ ಗೊತ್ತಿತ್ತು. ಭಾಗವತಿಕೆಯಲ್ಲಿ ಯಾವ ಕಸರತ್ತುಗಳನ್ನು ಮಾಡದೇ ಕಲಾವಿದನನ್ನು ಹುರಿದುಂಬಿಸುತ್ತಿದ್ದರು. ನುರಿತ ಕಲಾವಿದರಿಂದ ಅಭಿನಯ ರಸವನ್ನು ಸೆಳೆಯುವ, ಹಾಗೂ  ಹವ್ಯಾಸಿ ಕಲಾವಿದರಾದರೆ ಅವರನ್ನು ತಿದ್ದಿ ಪ್ರೇಕ್ಷಕರಿಗೆ ಅವರ ಲೋಪ ತಿಳಿಯದ ಹಾಗೆ ಕುಣಿಸುವ ಕಲೆ ಅವರಿಗೆ ಗೊತ್ತಿತ್ತು.
ಇತ್ತೀಚೆಗೆ ತೀರಿಕೊಂಡ ಯಕ್ಷಗಾನ ಭಾಗವತ ಕಲಾವಿದರಾದ ಯಕ್ಷಗುರು ಕೃಷ್ಣ ಭಂಡಾರಿಯವರ ನೆನಪಿನಲ್ಲಿ ನಾರಾಯಣ ಯಾಜಿ, ಸಾಲೇಬೈಲು ಬರೆದ ಬರಹ

 

ನನಗೆ ಯಕ್ಷಗಾನದಲ್ಲಿ ಹೆಜ್ಜೆ ಕಲಿಸಿದ ಗುರು ಇವರು. ನನ್ನ ಸಮವಯಸ್ಸಿನವರೂ ಹೌದು. ಇನ್ನೂ ನೆನಪಿದೆ 1983ರ ಸುಮಾರಿಗೆ ಗುಣವಂತೆಯಲ್ಲಿ ನಾವೊಂದಿಷ್ಟು ತರುಣರಿಗೆ ಯಕ್ಷಗಾನ ಕಲಿಯುವ ಹುಚ್ಚು, ಆವಾಗ ನಮಗೆ ನೆನಪಿಗೆ ಬಂದವರು ನಮ್ಮ ಓರಿಗೆಯವನೇ ಆದ ಕೃಷ್ಣ ಭಂಡಾರಿಯವರು. ಸರಿ ಅಲ್ಲಿನ ಸುಭಾಸ ಯುವಕಮಂಡಳದ ಕಟ್ಟಡವೇ ನಮ್ಮ ಪಾಠಶಾಲೆ, ದಿನಾಲು ಸಾಯಂಕಾಲ ನಮಗೆ ತರಬೇತಿ. ಬಾಯಲ್ಲಿ ತಾಳ ಹಾಕಿಕೊಳ್ಳುತ್ತಾ, ಕೈಯಲ್ಲಿ ಮದ್ದಳೆ ಬಡಿಯುತ್ತಾ ಕಾಲಲ್ಲಿ ಹೆಜ್ಜೆ ಹಾಕುವಾಗ “ತಕಧಿಮಿ ತಕಿಟ ತ್ತಿ ತ್ತಿ ಥೈs” ಎನ್ನುವ ಸದ್ದು ಅವರ ಕಾಲಿನಿಂದಲೂ ಮೂಡಿಬರುತ್ತಿತ್ತು. ಹಾಗೇ ನಮ್ಮಲ್ಲಿ ಲಯವನ್ನು ತುಂಬಿ ಮಣ್ಣುಮುದ್ದೆಯನ್ನು ಒಂದು ಆಕಾರವನ್ನಾಗಿ ರೂಪಿಸಿದವರು ಕೃಷ್ಣ ಭಂಡಾರಿಯವರು.

ಆಗ ಅವರಿಂದ ಕಲಿತ ಅನೇಕರು ವೃತ್ತಿಮೇಳಗಳಿಗೆ ಹೋಗಿ ಪ್ರಸಿದ್ಧ ಕಲಾವಿದರಾಗಿ ಹೆಸರು ಪಡೆದಿದ್ದಾರೆ. ಹೀಗೆ ಹವ್ಯಾಸಿಗಳಾದ ನಮ್ಮನ್ನು ಸೇರಿಸಿ ಆ ವರ್ಷ ದೀಪಾವಳಿಯಂದು ಗುಣವಂತೆಯ ದೇವಸ್ಥಾನದಲ್ಲಿ ಮೊದಲ ಪ್ರಯೋಗ “ವೀರಮಣಿ ಕಾಳಗ”. ಅದರಲ್ಲಿ ಕೃಷ್ಣ ಭಂಡಾರಿಯವರದೇ ಭಾಗವತಿಕೆ. ಶಿಷ್ಯರೆಲ್ಲರ ವೇಷ. ಆ ದಿನದ ಆಟ ತುಂಬಾ ಮೆಚ್ಚುಗೆ ಗಳಿಸಿತು. ಗುಣವಂತೆ ಊರಿನಲ್ಲಿ ಯಕ್ಷಗಾನ ಹೊಸತೇನೂ ಅಲ್ಲ. ಅಲ್ಲಿನ ಪ್ರೇಕ್ಷಕರಲ್ಲಿ ಆಟ ಒಳ್ಳೆಯದಾಯಿತು ಎಂದು ಹೆಸರು ಗಳಿಸಿಕೊಳ್ಳುವದು ತುಂಬಾ ಕಷ್ಟ. ಆ ನಮ್ಮ ‘ಆರ್ರಂಗೇಟ್ರಂ’ ಅದು. ಹುಡುಗರು ಎಂದು ಉಪೇಕ್ಷೆ ಪಟ್ಟವರೆಲ್ಲ ನಮ್ಮನ್ನು ಹೊಗಳಿದರು. ಯಥಾರ್ಥವಾಗಿ ಅವರು ಹೊಗಳಿದ್ದು ನಮಗೆ ಕಲಿಸಿದ ಗುರು ಕೃಷ್ಣ ಭಂಡಾರಿಯವರನ್ನು. ಅಲ್ಲಿಂದ ಮುಂದೆ ಅವರು ಯಕ್ಷಗುರುವಾಗಿ ಉಡುಪಿಯಿಂದ ಧಾರವಾಡದ ತನಕ ಸಾವಿರಾರು ಆಸಕ್ತರಿಗೆ ಯಕ್ಷಗಾನದ ಹೆಜ್ಜೆ ಕಲಿಸಿ ಕುಣಿಸಿ ತಾವು ದಣಿದು ತಣಿದವರು. ಅದರಲ್ಲಿ ಪಾಮರರರಿಂದ ಹಿಡಿದು ಪಸಿದ್ಧ ವೈದ್ಯರುಗಳವರೆಗೆ ಎಲ್ಲರೂ ಸೇರಿದ್ದಾರೆ. ಅಂತಹ ನನ್ನ ಗೆಳೆಯ, ಗುರುವನ್ನು ಶಿಕ್ಷಕ ದಿನಾಚರಣೆಯ ದಿನವೇ ಕಳೆದುಕೊಂಡಿದ್ದೇನೆ.

ಕೃಷ್ಣ ಭಂಡಾರಿಯವರ ಮನೆತನಕ್ಕೆ ಯಕ್ಷಗಾನದ ಹಿನ್ನೆಲೆಯಿದೆ. ಗುಣವಂತೆ ಶಂಭು ಲಿಂಗೇಶ್ವರ ದೇವಸ್ಥಾನದ ವಾದ್ಯಸೇವೆ ಗೈಯ್ಯುವ ಇವರ ಅಜ್ಜ ವೆಂಕಪ್ಪ ಭಂಡಾರಿ ಆ ಕಾಲದ ಪ್ರಸಿದ್ಧ ವೇಷಧಾರಿಯಾಗಿದ್ದರು. ಯಕ್ಷಗಾನದ ದಂತಕಥೆ ಕೆರೆಮನೆ ಶಿವರಾಮ ಹೆಗಡೆಯವರ ಮತ್ತು ವೆಂಕಪ್ಪ ಭಂಡಾರಿಯವರ ಎದುರು ಬದುರು ವೇಷಗಳ ಕುರಿತು ಇಂದಿಗೂ ಹಿರಿಯರು ನೆನಪು ಮಾಡಿಕೊಳ್ಳುತ್ತಾರೆ. ಅವರ ಮಗ ಮಂಜ ಭಂಡಾರಿಯವರು ದೇವಸ್ಥಾನದ ತೇರಿನ ಉತ್ಸವದಲ್ಲಿ ಡೋಲಿನಂತೆ ಇರುವ ಆದರೆ ಅದಕ್ಕಿಂತ ಚಿಕ್ಕ ವ್ಯಾಸವನ್ನು ಉದ್ದದಾದ ಕಳಸವನ್ನು ಹೊಂದಿರುವ ‘ಪಳ’ ಎನ್ನುವ ವಾದ್ಯವನ್ನು ಭಾರಿಸುತ್ತಿದ್ದರು. ಅದನ್ನು ಭಾರಿಸುವವರೂ ಸಹ ವೃತಸ್ತರಾಗಿರಬೇಕಿತ್ತು. ಮಂಜ ಭಂಡಾರಿಯವರ ಆ ಶೈಲಿಗೆ ಮಾರುಹೋಗದವರಿಲ್ಲ. ಡಣಠಂ, ಡಣಠಂ ಎನ್ನುವ ಆ ರುದ್ರಶಬ್ಧ ನಮ್ಮೆದೆಯ ಬಡಿತವನ್ನು ಹೆಚ್ಚಿಸುತ್ತಿತ್ತು. ಅವರ ಹಿರಿಯ ಮಗ ವೆಂಕಪ್ಪ ಭಂಡಾರಿ ತುಂಬಾ ಪ್ರಸಿದ್ಧ ನಾಗಸ್ವರ ವಾದಕನಾಗಿದ್ದರು. ಹಿಂದುಸ್ಥಾನಿ ಸಂಗೀತವನ್ನು ಶಾಸ್ತ್ರೀಯವಾಗಿ ಕೆರೆಮನೆ ಮಹಾಬಲ ಹೆಗಡೆಯವರಲ್ಲಿ ಕಲಿತ ಅವರ ನಾಗಸ್ವರದ ಮೋಡಿ ಮದುವೆಮನೆಯಲ್ಲಿ ವಾಲಗ ಊದುವದರಲ್ಲಿಯೇ ಕಳೆದುಹೋಯಿತು. ಚಿತ್ರಗೀತೆಗಳನ್ನು ನುಡಿಸದೇ ಹಿಂದುಸ್ಥಾನಿ ರಾಗಗಳನ್ನು ತನ್ನ ನಾಗಸ್ವರದ ಮೂಲಕ ನುಡಿಸಿ ತನ್ನ ಆತ್ಮತೃಪ್ತಿ ಹೊಂದುತ್ತಿದ್ದರು. (ನಮ್ಮಲ್ಲಿ ಅದಕ್ಕೆ ಮೌರಿ ಎನ್ನುತ್ತಾರೆ).

ಗುಣವಂತೆ ಯಕ್ಷಗಾನದ ತವರೂರು. ಕೆರೆಮನೆ ಕಲಾವಿದರಲ್ಲದೇ ಮಾಳ್ಕೋಡು, ನೀಲೆಕೇರಿ ಇಡಗುಂಜಿ ಹೀಗೆ ಸುತ್ತಮುತ್ತ ಎಲ್ಲಾ ಕಡೆಯೂ ಪ್ರಸಿದ್ಧ ಯಕ್ಷಗಾನ ಕಲಾವಿದರು ಆಗಿಹೋಗಿದ್ದಾರೆ. ಅವರಿಗೆಲ್ಲಾ ಹಿಮ್ಮೇಳನದಲ್ಲಿ ಚಂಡೆ ಮದ್ದಳೆಗೆ ಸಹಕಾರಿಯಾದವರು ಗುಣವಂತೆಯ ಭಂಡಾರಿ ಕುಟುಂಬದವರು. ದಕ್ಷಿಣೋತ್ತರ ಕನ್ನಡದ ಎಲ್ಲಾ ಮೇಳಗಳಲ್ಲಿಯೂ ಹಿಮ್ಮೇಳದಲ್ಲಿ ಇವರೆಲ್ಲ ಪ್ರಸಿದ್ಧಿ ಹೊಂದಿದ ಕಲಾವಿದರಾಗಿ ಸೇವೆಸಲ್ಲಿಸುತ್ತಿದ್ದಾರೆ. ಇಂತಹ ವಾತಾವರಣದಲ್ಲಿ ಬೆಳೆದ ಹುಡುಗ ಕೃಷ್ಣನಿಗೆ ಬಾಲ್ಯದಲ್ಲಿ ಕನ್ನಡಶಾಲೆಯ ವಿದ್ಯಾಭ್ಯಾಸಕ್ಕಿಂತ ಯಕ್ಷಗಾನದ ಕಡೆ ಆಸಕ್ತಿ ಸೆಳೆಯಿತು. ಕನ್ನಡ ಶಾಲೆಯಲ್ಲಿ “ಗುಣವತಿ ಪರಿಣಯ”ವೆನ್ನುವ ಆಟಕ್ಕೆ ಮೊದಲು ಭಾಗವತನಾಗಿ ರಂಗಪ್ರವೇಶ ಈತನಲ್ಲಿ ಯಕ್ಷಗಾನದ ಗೀಳನ್ನು ಹಿಡಿಸಿತು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಹೋಗಿ ಕಲಿತು ಬಂದ. ಡಾ. ಕಾರಂತರ ಮಾರ್ಗದರ್ಶನದಲ್ಲಿ ರಂಗಭೂಮಿಯ ಕುರಿತು ಇನ್ನಷ್ಟು ತಿಳಿದುಕೊಂಡ. ತುಂಬಾ ಸುಂದರವಾದ ಹೆಜ್ಜೆ ಮತ್ತು ಪರಂಪರೆಯಿಂದ ಬಂದ ಸಂಗೀತ ಜ್ಞಾನದ ಕಾರಣ ಲಯವೂ ಅಷ್ಟೇ ಗಟ್ಟಿಯಾಗಿತ್ತು. ಒಂದೆರಡು ವರುಷ ಕೆಲ ಮೇಳಗಳಿಗೆ ಬಾಲಗೋಪಾಲ ವೇಷಕ್ಕೆ ಹೋಗಿ ಅಲ್ಲಿಂದ ಪುಂಡುವೇಷಧಾರಿಯಾಗಿ ಹೆಸರು ಗಳಿಸತೊಡಗಿದ. ಆದರೂ ಇವರಿಗೆ ಭಾಗವತಿಕೆಯತ್ತ ತುಂಬಾ ಆಸಕ್ತಿ ಇತ್ತು. ಆಗ ಈ ಮೊದಲೇ ತಿಳಿಸಿದಂತೆ ನಮ್ಮಂತಹ ತರುಣರಿಗೆ ಯಕ್ಷಗಾನವನ್ನು ಕಲಿಸುವ ನೆಪ ಇವರಲ್ಲಿನ ಭಾಗವತಿಕೆಯನ್ನು ಗುರುತಿಸಿತು. ಸ್ವರದಲ್ಲಿ ಖಚಿತವಾದ ಲಯ, ಬಡಗಿನ ಮಟ್ಟು, ಲಾಲಿತ್ಯವಾದ ಮತ್ತು ಎತ್ತರದ ಸ್ಥಾಯಿಯಲ್ಲಿ ಹಾಡಲು ಸುಲಭವಾಗಿ ಸಹಕರಿಸುವ ಕಂಠ ಇವರನ್ನು ರಂಗದ ಭಾಗವತರನ್ನಾಗಿ ರೂಪಿಸಿತು.

ಸಂಗೀತದ ತಿಳುವಳಿಕೆ ಇರುವರೆಲ್ಲಾ ಉತ್ತಮ ಭಾಗವತರಾಗಬಹುದು, ಆದರೆ ಅವರು ರಂಗದಲ್ಲಿ ಯಶಸ್ವೀ ಭಾಗವತರಾಗುವುದಿಲ್ಲ. ಭಂಡಾರಿಯವರಿಗೆ ಸ್ವತಃ ವೇಷದ ನಡೆಯ ಅನುಭವವಿರುವ ಕಾರಣ ಮುಮ್ಮೇಳದ ಕಲಾವಿದನಿಗೆ ಯಾವ ಯಾವ ಭಾಗದಲ್ಲಿ ಪದ್ಯದಲ್ಲಿ ಕುಣಿಸಬೇಕೆನ್ನುವದು ಚನ್ನಾಗಿ ಗೊತ್ತಿತ್ತು. ಭಾಗವತಿಕೆಯಲ್ಲಿ ಯಾವ ಕಸರತ್ತುಗಳನ್ನು ಮಾಡದೇ ಕಲಾವಿದನನ್ನು ಹುರಿದುಂಬಿಸುತ್ತಿದ್ದರು. ನುರಿತ ಕಲಾವಿದರುಗಳಿಗಾದರೆ ರಸವನ್ನು ಅವರಿಂದ ಸೆಳೆಯುವ ಆದರೆ ಹವ್ಯಾಸಿ ಕಲಾವಿದರಾದರೆ ಅವರನ್ನು ತಿದ್ದಿ ಪ್ರೇಕ್ಷಕರಿಗೆ ಅವರ ಲೋಪ ತಿಳಿಯದ ಹಾಗೆ ಕುಣಿಸುವ ಕಲೆ ಅವರಿಗೆ ಗೊತ್ತಿತ್ತು. ಯಕ್ಷಗಾನದ ರೂಪಕತಾಳದ ಮತ್ತು ತ್ರಿವುಡೆ ತಾಳದ ಎರಡನೇಕಾಲದಲ್ಲಿ ಮುಕ್ತಾಯದಲ್ಲಿ ಹವ್ಯಾಸಿಗಳು ಎಡವುವದು ಸಾಮಾನ್ಯ. ಹಿಮ್ಮೇಳದಲ್ಲಿ ಚಂಡೆಯವ ಇಲ್ಲಿ ಕಳ್ಳ ಪೆಟ್ಟುಗಳ ಮೂಲಕ ಅಂದರೆ ಹುಸಿ ಬಡಿತದ ಮೂಲಕ ಎಂದು ರೂಢಿಯಲ್ಲಿ ಹೇಳುತ್ತೇವೆ; ವೇಷಧಾರಿಯ ಲಯವನ್ನು ತಪ್ಪಿಸಲು ನೋಡುತ್ತಾರೆ.

ಹವ್ಯಾಸಿಗಳಾದ ನಮ್ಮನ್ನು ಸೇರಿಸಿ ಆ ವರ್ಷ ದೀಪಾವಳಿಯಂದು ಗುಣವಂತೆಯ ದೇವಸ್ಥಾನದಲ್ಲಿ ಮೊದಲ ಪ್ರಯೋಗ “ವೀರಮಣಿ ಕಾಳಗ”. ಅದರಲ್ಲಿ ಕೃಷ್ಣ ಭಂಡಾರಿಯವರದೇ ಭಾಗವತಿಕೆ. ಶಿಷ್ಯರೆಲ್ಲರ ವೇಷ. ಆ ದಿನದ ಆಟ ತುಂಬಾ ಮೆಚ್ಚುಗೆ ಗಳಿಸಿತು.

ಕೆಲ ಪ್ರಸಿದ್ಧ ವೇಷಧಾರಿಗಳು ತಾವು ಮೇಲೆ ಎಂದು ಗರ್ವದಿಂದ ಬೀಗುತ್ತಿದ್ದು ಹಿಮ್ಮೇಳದವರನ್ನು ಕಡೆಗಣಿಸಿದರೆ ಅಂಥವರನ್ನು ಲಯತಪ್ಪಿಸಿ ಅವರ ತಲೆಯನ್ನು ಭೂಮಿಗೆ ತರುವ ಚಂಡೆ ಮದ್ದಳೆಯವರ ಚಾಣಾಕ್ಷತನ ಎಲ್ಲರಿಗೂ ತಿಳಿದ ಸಂಗತಿ. ಬಡಪಾಯಿಗಳಾದ ಹವ್ಯಾಸಿಗಳಿಗೆ ಹುಮ್ಮಸ್ಸಿನಲ್ಲಿ ಏನಾದರೂ ಅಭಿನಯಮಾಡುವ ಚಟ. ಹೆಚ್ಚಿನ ಸಂದರ್ಭಗಳಲ್ಲಿ ಇದು ಪ್ರಸಿದ್ಧರ ಅನುಕರಣೆಯೂ ಹೌದು; ಆಗೆಲ್ಲಾ ಅವರ ನೆರವಿಗೆ ಒದಗುವ ಭಾಗವತರೆಂದರೆ ಅದು ಕೃಷ್ಣ ಭಂಡಾರಿಯವರಾಗಿದ್ದರು. ತಕ್ಷಣ ಅದಕ್ಕೊಂದು ಬೇರೆಯ ತಾಳದ ತಿರುವನ್ನು ನೀಡಿ ಕಲಾವಿದ ಬೇಸ್ತುಬೀಳದ ಹಾಗೇ ನೋಡಿಕೊಳ್ಳುತ್ತಿದ್ದರು.

ಮಕ್ಕಳಲ್ಲಿ ಯಕ್ಷಗಾನದ ಜಾಗ್ರತಿ ಬೆಳೆಸಬೇಕೆನ್ನುವದು ಇವರ ಆಸೆಯಾಗಿತ್ತು. ಹಾಗಾಗಿ ಶಾಲೆ ಶಾಲೆಗಳಿಗೆ ಹೋಗಿ ಮಕ್ಕಳಿಗೆ ಕುಣಿತ ಕಲಿಸುತ್ತಿದ್ದರು. ಮಕ್ಕಳು ಒಳ್ಳೆಯ ಯಕ್ಷಗಾನದ ಪ್ರೇಕ್ಷಕರಾದರೂ ಅದು ಯಕ್ಷಗಾನದ ಆಸ್ತಿ ಎಂದು ಅವರು ಹೇಳುತ್ತಿದ್ದರು. ಈ ಮೊದಲು ಉತ್ತರಕನ್ನಡದ ಕರಾವಳಿ ಪ್ರದೇಶದಲ್ಲಿ ಕೊಪ್ಪದ ಮಕ್ಕಿ ಭಾಗವತರು ಎನ್ನುವವರು ಊರೂರಲ್ಲಿ ಸುಗ್ಗಿಯ ಕಾಲದಲ್ಲಿ ಹವ್ಯಾಸಿಗಳಿಗೆ ಪ್ರಸಂಗಗಳ ನಡೆಯನ್ನು ಕಲಿಸಿ ಅವರಿಂದ ಆಟಗಳನ್ನು ಮಾಡಿಸುತ್ತಿದ್ದರು. ಅವರ ನಂತರ ಆ ಕೆಲಸವನ್ನು ನಿರ್ವಹಿಸಿ ಹಳ್ಳಿ ಹಳ್ಳಿಗಳಲ್ಲಿ ಬಯಲಾಟಗಳಿಗೆ ಭಾಗವತರಾಗಿ ಇವರು ಒದಗಿದರು. ಮನೆಯ ಸಮಸ್ಯೆ ಮತ್ತು ವೃತ್ತಿ ಮೇಳಗಳ ರಾಜಕೀಯದಿಂದಾಗಿ ಮೇಳಕ್ಕೆ ಹೋದರೂ ಅಲ್ಲಿರುವ ಮನಸ್ಸಾಗಲಿಲ್ಲ. ಅಲ್ಲಿಂದ ಬಂದು ತನ್ನ ಮನಸ್ಸಿಗೆ ತೃಪ್ತಿಯಾಗುವ ಶಿಷ್ಯರನ್ನು ಬೆಳೆಸುವ ಹಾಗೂ ಅವರಲ್ಲಿ ಯಕ್ಷಗಾನದ ಆಸಕ್ತಿ ಮೂಡಿಸುವ ಕಾಯಕಕ್ಕೆ ಇವರು ತಮ್ಮನ್ನು ತಾವು ತೊಡಗಿಸಿಕೊಂಡರು.

ಹೊನ್ನಾವರದ ಖ್ಯಾತ ವೈದ್ಯರುಗಳೆಲ್ಲರಿಗೂ ಸಹಜವಾಗಿ ಈ ಮಣ್ಣಿನ ಕಲೆಯಾದ ಯಕ್ಷಗಾನದ ಹುಚ್ಚು. ಅವರನ್ನೆಲ್ಲ ಒಂದುಗೂಡಿಸಿ ಅವರಿಂದ ಆಟವನ್ನು ಆಡಿಸಿಯೇ ಬಿಟ್ಟರು. ಆ ಆಟ ತುಂಬಾ ಯಶಸ್ವಿಯೂ ಆಯಿತು. ಬದುಕಿಗೆ ಇದು ಆಧಾರವಾಗುತ್ತಿರಲಿಲ್ಲ. ಆದರೆ ಇವರಿಗೆ ತನ್ನ ಈ ವೃತ್ತಿ ಮಾನಸಿಕ ನೆಮ್ಮದಿ ತಂದುಕೊಡುತ್ತಿತ್ತು. ಯಕ್ಷಗಾನದಲ್ಲಿ ನಡೆಗೆ ಒಂದು ವಿಶಿಷ್ಟ ಸ್ಥಾನವಿದೆ. ಸಾಂಪ್ರದಾಯಿಕವಾಗಿ ರೂಢಿಗೆ ಬಂದಿರುವದೊಂದು. ಕೆಲ ಪ್ರಸಿದ್ಧ ಕಲಾವಿದರು ತಮ್ಮ ಮೊಹರನ್ನು ಬಿತ್ತಿ ಕುಣಿತಗಳಲ್ಲಿ ತಂದ ಬದಲಾವಣೆಗಳು ಇನ್ನೊಂದು. ಹವ್ಯಾಸಿಗಳಲ್ಲಿ ಇದು ಗೊಂದಲವನ್ನುಂಟುಮಾಡಿ ಅವರು ಜನಪ್ರಿಯತೆಯ ಹಿಂದೆ ಹೋಗುವದು ಸಾಮಾನ್ಯವಾಗಿತ್ತು. ಅಂಥ ಸಂದರ್ಭಗಳಲ್ಲಿ ಭಂಡಾರಿಯವರು ಸೌಜನ್ಯದಿಂದಲೇ ಜನಪ್ರಿಯತೆಗಿಂತ ಸಾಂಪ್ರದಾಯಿಕ ನಡೆಗೇ ಮಹತ್ವ ನೀಡುತ್ತಿದ್ದರು. ಹಾಗೇ ಅಭಿನಯ ಮತ್ತು ಚಾಲು ಕುಣಿತ. ಚಾಲು ಕುಣಿತವೆಂದರೆ ನಾಟ್ಯದಲ್ಲಿ ಬರುವ ನೃತ್ ಪ್ರಕಾರಗಳು. ಇಲ್ಲಿ ಅಭಿನಯವಿಲ್ಲದೇ ಕೇವಲ ಕಾಲಿನ ಹೆಜ್ಜೆಯ ವೈವಿಧ್ಯವನ್ನು ತೋರಿಸುವಿಕೆ ಇರುತ್ತದೆ. ಇದು ರಂಗಭೂಮಿಯ ಸೌಂದರ್ಯವನ್ನು ಕೆಡಿಸಿಬಿಡುವ ಆದರೆ ಕಲಾವಿದನಿಗೆ ಪ್ರೇಕ್ಷಕರ ಕಡೆಯಿಂದ ಶಿಳ್ಳೆಯ ಭಾಗ್ಯವನ್ನು ಕರುಣಿಸುವ ಅಪಾಯವನ್ನು ತಂದುಕೊಡುತ್ತದೆ. ಭಾಗವತ ಅದನ್ನು ಅಂಕುಶದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅದನ್ನೇ ಆಟ ನಡೆಸುವಿಕೆ ಎನ್ನುತ್ತಾರೆ.

ಯಾರ ಮುಲಾಜು ಇಲ್ಲದೇ ಈ ಸಂದರ್ಭಗಳಲ್ಲಿ ರಂಗವನ್ನು ಹತೋಟಿಗೆ ತರುವಾಗ ಭಾಗವತನಿಗೆ ಸಮಗ್ರ ರಂಗಭೂಮಿಯ ಅರಿವು ಮತ್ತು ಪ್ರೇಕ್ಷಕರ ಮನೋಗಾಂಭೀರ್ಯದ ಕುರಿತು ಸಮತೋಲನದ ನಡೆಯನ್ನು ಅನುಸರಿಸಬೇಕಾಗುತ್ತದೆ. ಅದನ್ನು ಚನ್ನಾಗಿ ನಿರ್ವಹಣೆಮಾಡಿ ಆಟದ ಸಾಂಪ್ರದಾಯಿಕವಾದ ಸೊಗಡನ್ನು ಕೆಡಿಸದಂತೆ ಆಟವಾಡಿಸುವ ಕಲೆ ಕೃಷ್ಣ ಭಂಡಾರಿಯವರಿಗಿತ್ತು. ಅವರ ಈ ವಿನಯ ಮತ್ತು ಸಾಂಪ್ರದಾಯಿಕ ನಡೆಯ ಕಾರಣದಿಂದ ಕೆರೆಮನೆ ಶಂಭು ಹೆಗಡೆಯವರು ಮತ್ತು ಅವರ ಮಗ ಶಿವಾನಂದ ೧992 ಕೆರೆಮನೆ ಮಂಡಳಿಯ ಫ್ರಾನ್ಸ್‌ ಮತ್ತು ಸ್ಪೇನ್ ದೇಶಗಳಲ್ಲಿ ಪ್ರದರ್ಶನ ನೀಡಲು ಇವರನ್ನು ಕರೆದುಕೊಂಡು ಹೋಗಿದ್ದರು.

ಕಲೆಯನ್ನು ಆತುಕೊಂಡ ಕುಟುಂಬ ಹಿನ್ನೆಲೆಯಿರುವ ಇವರಿಗೆ ಕಲೆ ಬಿಟ್ಟರೆ ಲಕ್ಷ್ಮೀ ಕಟಾಕ್ಷ ಒಲಿಯಲಿಲ್ಲ. ಕೆಲ ವರ್ಷಗಳ ಹಿಂದೆ ಅವರ ಶಿಷ್ಯರೆಲ್ಲ ಸೇರಿ ಅವರಿಗೆ ಹೊನ್ನಾವರದಲ್ಲಿ ಆತ್ಮೀಯವಾಗಿ ಸನ್ಮಾನವನ್ನು ಮಾಡಿ ಬಂಗಾರದ ಕಿರೀಟ ತೊಡಿಸಿದ್ದರು. ನಿರಂತರ ತಿರುಗಾಟದ ಕಾರಣದಿಂದ ಮಿದುಳು ಸಂಬಂಧಿ ಕಾಯಿಲೆಗೆ ತುತ್ತಾದರು. ಕುಟುಂಬವತ್ಸಲಿಯಾದ ಇವರಿಗೆ ಅನುಕೂಲೆಯಾದ ಪತ್ನಿ ನಾಗವೇಣಿ ಮತ್ತು ಮಕ್ಕಳಾದ ನಾಗರಾಜ ಮತ್ತು ರಂಜನಾ ಇವರನ್ನು ಮತ್ತು ತನ್ನ ಅಪಾರವಾದ ಶಿಷ್ಯಬಳಗ ಸ್ನೇಹಿತರು ಇವರನ್ನೆಲ್ಲಾ ಬಿಟ್ಟು ಕಾಲನ ಕರೆಗೆ ತಾ. 4/9/2021 ರಂದು ನಡೆದೇ ಬಿಟ್ಟರು.

ಗಧಾಯುದ್ಧದಲ್ಲಿ ಬರುವ “… ವಿಧಿ ಬರೆದಾದಿಯಕ್ಷರಕಿಂತು ಪ್ರತಿಕೂಲಾದಿಗಳುಂಟೇ” ಎನ್ನುವ ಪದ್ಯವನ್ನು ಪರಿಣಾಮಕಾರಿಯಾಗಿ ಹಾಡಿ ಕಲಾವಿದ ಮತ್ತು ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುತ್ತಿದ್ದ ಯಕ್ಷಗಾನದ ಹಿಮ್ಮೇಳ ಮತ್ತು ಮುಮ್ಮೇಳಗಳ ಸವ್ಯಸಾಚಿ ಕೃಷ್ಣ ಭಂಡಾರಿಯವರು ಅವರ ಅಭಿಮಾನಿಗಳಲ್ಲಿ ಕಣ್ಣೀರು ತರಿಸಿ ತಾವು ಲಯದಲ್ಲಿ ಲೀನವಾದರು.