ಆ ನದಿಯು ಮತ್ತು ಈ ದಾದಿಯು..

ಎಲ್ಲಾ ತಿಳಿದ ಆ ಪ್ರಜ್ಞ ಮುನಿಯೇಕೆ
ನೀಡಿದ ವರಗಳನು
ಅರಿಯದ ಹಸಿ ತರುಣಿಗೆ

ಸೂರ್ಯನೇಕೆ ಓಡಿ ಬಂದ
ಬರೀ ಅವಳ ಒಂದು ಸ್ವರಕೆ
ಅವಳ ಮೈತುಂಬಲು

ಇಬ್ಬರೂ ಸೇರಿಯೇಕೆ ಹಡೆಸಿದರಿ
ಒಲ್ಲದ
ಸಂತಾನವನು ಎಳೆ ಹುಡುಗಿಯ
ಒಡಲಿಂದ..

ಅವಳನ್ನು ಲೋಕ ಆಡಿಕೊಳ್ಳುತ್ತಿದೆ
ನೀವೇಕೆ ಕಟಕಟೆಯಲಿ
ಬಂದು ನಿಂತಿಲ್ಲ..

ಎಳೆಗೂಸನು ದಡ ಸೇರಿಸಿದ
ನದಿಯ ಕುರಿತು ಯಾಕೆ ಯಾರೂ
ಚರ್ಚಿಸಲಿಲ್ಲ..

ಇಲ್ಲಿ ಸರ್ಕಾರಿ ಆಸ್ಪತ್ರೆಯ ದಾದಿಯ
ಮೇಲೆ ದೂರೊಂದು ದಾಖಲಾಗಿದೆ

ಕಟಕಟೆಯಲಿ ನಿಲ್ಲಬೇಕಾದವರು
ಅಲ್ಲೆಲ್ಲೊ ಮೀಸೆ ತಿರುವುತ್ತಿದ್ದಾರೆ

ತರುಣಿಯ ಹೆಸರು ಬೀದಿ ಬೀದಿ
ಅಲೆಯುತ್ತಿದೆ

ಆ ಮುನಿ ಆ ಸೂರ್ಯ ಇಲ್ಲೆ ಎಲ್ಲೊ
ಜೀವಿಸಿದ್ದಾರೆ ಹಿಡಿದು ಶಿಕ್ಷಿಸಿ

ವರಗಳು ಇನ್ನೂ ಜೀವಿಸಿರಬಹುದು
ಎಲ್ಲಾದರೂ ಸಿಕ್ಕರೆ ಕತ್ತು ಹಿಸುಕಿ

ಕರುಣಾಮಯಿ ದಾದಿಗೊಂದು
ಬೇಲ್ ಬೇಕಿದೆ ಯಾರಾದರೂ ಸಹಕರಿಸಿ..