ದಿನನಿತ್ಯದ ಸಾಮಾನ್ಯ ವಾರ್ತೆಯೂ ಕವಿತೆಯಾಗಬಲ್ಲದು. ಸಾಮಾನ್ಯ ಎನಿಸುವ ಸಣ್ಣ ವರ್ತಮಾನವೂ ಕವಿಗೆ ಭಿನ್ನವಾಗಿ ಕಾಣಬಹುದು. ಅಂತಹ ಭಿನ್ನತೆಯಲ್ಲಿಯೇ ವರ್ತಮಾನದ ಕಾವ್ಯ ಹೊಸತನ ಪಡೆದುಕೊಳ್ಳುತ್ತದೆ. ಆದರೆ ಕವಿತೆ ಎನ್ನುವುದು ಒಂದು ಭಾಷೆಯ ಸೌಂದರ್ಯ ಸಾಧನವಾಗಿರುತ್ತದೆ. ಕಡಿಮೆ ಪದಗಳಲ್ಲಿ ಹೆಚ್ಚಿನದನ್ನು ಹೇಳಲಿಕ್ಕೆ ಕಾವ್ಯ ನೆರವಾಗುತ್ತದೆ. ಕಾವ್ಯಕ್ಕೆ ಪದಗಳ ದುಂದು, ತುಂಡರಿಸಿಟ್ಟ ಗದ್ಯದ ಭಾಗ ಎನಿಸುವಂತಹ ರಚನೆಗಳು ಸಲ್ಲುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗಿರುವ ಮತ್ತು ಹೊಸ ಬರಹಗಾರರು ಅನುಸರಿಸುತ್ತಿರುವ ಗಪದ್ಯಗಳು (ಗದ್ಯ ರೂಪದ ಪದ್ಯಗಳು) ಮತ್ತು ಕಥನ ಕವನಗಳು ಸಹ ತಮ್ಮದೇ ವೈಶಿಷ್ಟ್ಯನ್ನು ಹೊಂದಿವೆ.
ಸದಾಶಿವ ಸೊರಟೂರರ “ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ” ಕವನ ಸಂಕಲನಕ್ಕೆ ಆಶಾಜಗದೀಶ್ ಬರೆದ ಮುನ್ನುಡಿ

 

ಒಂದು ದಟ್ಟ ಕಾಡು. ಕೊರೆ ಹಿಂಡುತ್ತಿರುವ ಹೊಟ್ಟೆಯ ತಳಮಳ. ಅಕ್ಕ ಪಕ್ಕ ಯಾರೂ ಇಲ್ಲ. ಭೂಮಿಯಲ್ಲಿ ಉದಿಸಿದ ಮೊದಲ ಮತ್ತು ಏಕಾಂಗಿ ನರಜೀವಿಯಂತೆ ಅಪ್ಪಟ ಒಂಟಿ. ಅದೇ ನದಿ, ಅದೇ ಹಕ್ಕಿ, ಕಾಮನಬಿಲ್ಲು, ಆಕಾಶದ ನೀಲಿ, ದಿಕ್ಕೆಟ್ಟು ಅಲೆಯುತ್ತಿರುವ ಹುಟ್ಟು ಕಳೆದ ಹಾಯಿದೋಣಿ, ಮರಳ ದಂಡೆಯ ಸೂಜಿಗಲ್ಲು, ಒಂಟಿ ಹೆಜ್ಜೆಗಳ ಅಲೆಮಾರಿ ನೆರಳು…. ಇದು ಕನಸು ಎನಿಸಿಬಿಡುವ ಹೊತ್ತಿನಲ್ಲೇ ಇದು ವಿರಕ್ತ ಮನಸಿನ ಕಲ್ಪನೆಯೂ ಆಗಿಬಿಡಬಹುದು. ಆದರೆ ಆ ತೀವ್ರ ಏಕಾಂತವನ್ನು ಮುರಿಯುವುದು ಮನಸಿಗೆ ಬೇಕಿಲ್ಲ. ಕೆಲವೊಮ್ಮೆ ಯಾರ ಎದೆಗೂ ಒರಗದೆ, ಅನುಕಂಪದ ಸೋಂಕು ತಗುಲಿಸಿಕೊಳ್ಳದೆ, ಸುಮ್ಮನೆ ಜೋರು ಧ್ವನಿ ತೆಗೆದು ಎದೆ ಒಡೆಯುವಂತೆ ಕರುಣಾಜನಕವಾಗಿ ಅಳುವುದೂ ಬಿಡುಗಡೆಯ ಹಾದಿಯಾಗಿಬಿಡುತ್ತದಲ್ಲ ಹಾಗೆ.

ಅಂತಹ ನಿರುಪಾಯ ಸ್ಥಿತಿಯಲ್ಲಿ ಕವಿತೆ ಹುಟ್ಟುತ್ತದೆ ಅನಿಸುತ್ತದೆ ನನಗೆ. ಇಲ್ಲದೇ ಹೋಗಿದ್ದರೆ ಒಂದು ಕ್ಷಣ ಈ ಎಲ್ಲ ಸಾಲುಗಳು ಸತ್ಯಕ್ಕೂ ಈ ಲೋಕದವು ಅಲ್ಲವೇ ಅಲ್ಲ ಅಂತ ಯಾಕನಿಸಬೇಕು…. ಬರೆದವನಿಗೂ ಬರೆದ ನಂತರ ಈ ಸಾಲುಗಳು ಖಂಡಿತಾ ನನ್ನವಲ್ಲ ಅಂತಲಾದರೂ ಯಾಕನಿಸಬೇಕು…

ದಿನನಿತ್ಯದ ಸಾಮಾನ್ಯ ವಾರ್ತೆಯೂ ಕವಿತೆಯಾಗಬಲ್ಲದು. ಸಾಮಾನ್ಯ ಎನಿಸುವ ಸಣ್ಣ ವರ್ತಮಾನವೂ ಕವಿಗೆ ಭಿನ್ನವಾಗಿ ಕಾಣಬಹುದು. ಅಂತಹ ಭಿನ್ನತೆಯಲ್ಲಿಯೇ ವರ್ತಮಾನದ ಕಾವ್ಯ ಹೊಸತನ ಪಡೆದುಕೊಳ್ಳುತ್ತದೆ. ಆದರೆ ಕವಿತೆ ಎನ್ನುವುದು ಒಂದು ಭಾಷೆಯ ಸೌಂದರ್ಯ ಸಾಧನವಾಗಿರುತ್ತದೆ. ಕಡಿಮೆ ಪದಗಳಲ್ಲಿ ಹೆಚ್ಚಿನದನ್ನು ಹೇಳಲಿಕ್ಕೆ ಕಾವ್ಯ ನೆರವಾಗುತ್ತದೆ. ಕಾವ್ಯಕ್ಕೆ ಪದಗಳ ದುಂದು, ತುಂಡರಿಸಿಟ್ಟ ಗದ್ಯದ ಭಾಗ ಎನಿಸುವಂತಹ ರಚನೆಗಳು ಸಲ್ಲುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗಿರುವ ಮತ್ತು ಹೊಸ ಬರಹಗಾರರು ಅನುಸರಿಸುತ್ತಿರುವ ಗಪದ್ಯಗಳು (ಗದ್ಯ ರೂಪದ ಪದ್ಯಗಳು) ಮತ್ತು ಕಥನ ಕವನಗಳು ಸಹ ತಮ್ಮದೇ ವೈಶಿಷ್ಟ್ಯನ್ನು ಹೊಂದಿವೆ. ಆದರೆ ಅವುಗಳ ಒಳಗೂ ಅಂತರ್ಗತವಾಗಿರಬೇಕಾದ ಲಯವನ್ನು ಗುರುತಿಸಿಟ್ಟುಕೊಂಡು ಅನುಸರಿಸದೆ ಹೋದರೆ ಅದು ಅರ್ಥವಿಲ್ಲದ ಅನುಕರಣೆ ಎನಿಸಿಬಿಡುವ ಅಪಾಯವಿದೆ ಮತ್ತು ಕವಿತೆಯಾಗಿ ಸೋಲನುಭವಿಸಬೇಕಾಗಿ ಬರುತ್ತದೆ.

ಇಂತಹ ಹಲವಾರು ಕಾವ್ಯಕಾರಣ ವಿಚಾರಗಳನ್ನು ಮಥಿಸುತ್ತಿರುವುದರ ನಡುವೆಯೇ ಸದಾಶಿವ ಸೊರಟೂರರ ಕವಿತೆಗಳನ್ನು ಓದುವಂತಾಯಿತು. ಸದಾಶಿವ ಸೊರಟೂರರು ಅಂಕಣಕಾರರಾಗಿ, ಲೇಖನ ಬರೆಯುವವರಾಗಿ ಬಹಳಾ ಪ್ರಸಿದ್ಧರು. ಇತ್ತೀಚೆಗೆ ಒಳ್ಳೆಯ ಪ್ರಬಂಧಗಳನ್ನು ಮತ್ತು ಕಥೆಗಳನ್ನೂ ಸಹ ಬರೆದವರು. ಬರಹದ ಸಾಧ್ಯತೆಗಳನ್ನು ಶೋಧಿಸುವ ಮತ್ತು ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಿಕೊಳ್ಳುವ ಸ್ಥಿತಿಸ್ಥಾಪಕತ್ವ ಗುಣದ ಸದಾಶಿವರು ಇಲ್ಲಿ ಈಗ ತಮ್ಮ ಸುಂದರ ಕವಿತೆಗಳದೊಂದು ಗುಚ್ಛ ಹಿಡಿದು ನಿಂತಿದ್ದಾರೆ. ಈ ಹಿಂದೆಯೇ ಅವರ ಒಂದಷ್ಟು ಕವಿತೆಗಳನ್ನು ಓದಿ ಗೊತ್ತಿದ್ದ ನನಗೆ ಈ ಸಂಕಲನದ ಹಸ್ತಪ್ರತಿ ಕೈಗೆ ಸಿಕ್ಕಾಗ ಕುತೂಹಲದಿಂದಲೇ ಓದಲು ಶುರುಮಾಡಿದ್ದೆ. ನಾನು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನದ್ದು ಸಿಕ್ಕಿದ್ದು ಖುಷಿ ನನಗೆ.

ಸದಾಶಿವರ ಕವಿತೆಗಳನ್ನು ಓದುವಾಗ ಅವರ ರೂಪಕಗಳ ಕಟ್ಟುವಿಕೆಯಲ್ಲಿನ ತಾಜಾತನ ಹಿತವೆನಿಸುತ್ತದೆ. ಸೌಮ್ಯವಾಗಿ ಹೇಳಿದರೂ ಧ್ವನಿಯಲ್ಲಿನ ದೃಢತೆ ಅವರ ಕವಿತೆಗಳಿಗೊಂದು ಗಟ್ಟಿತನವನ್ನು ತಂದು ಕೊಟ್ಟಿದೆ. ಮಾನವ ಸಹಜ ಭಾವನೆಗಳು ಎಲ್ಲೋ ತಮ್ಮ ನೈಜ ಜಾಗವನ್ನು ಕಳೆದುಕೊಳ್ಳುತ್ತಾ ಕುಸಿಯುತ್ತಿರುವುದನ್ನು ತಮ್ಮ ಪ್ರತಿ ಕವನದಲ್ಲೂ ಆರ್ದ್ರವಾಗಿ ಕಟ್ಟಿಕೊಡುವ ಸದಾಶಿವರದ್ದು ಜೀವಪರ ಕಾಳಜಿ.

“ಅಪ್ಪ ಅವ್ವ ನಳನಳಿಸುತ್ತಾರೆ
ಯಾರ್ಯಾರೋ ತೊಡಿಸಿ ಹೋದ
ಅವಮಾನದ ಬಟ್ಟೆಯಿಂದ
ನೋಡಿ ಅದೆಷ್ಟು ಗಟ್ಟಿ
ಇಂದಿಗೂ ಅದಕ್ಕೊಂದು ಸವಕಲು
ಬಂದಿಲ್ಲ”

ಅವಮಾನ ಬಟ್ಟೆಯಾದದ್ದು ಎಷ್ಟು ಹೊಸದೊ, ಅದನ್ನು ತೊಟ್ಟೂ ನಳನಳಿಸುವ ಅಪ್ಪ ಅಮ್ಮ ಮನಸಿಗೆ ನಾಟಿಬಿಡುತ್ತಾರೆ. ಇದು ತಾನೆ ನಮಗೆ ಆದರ್ಶವಾಗಬೇಕಿರುವುದು… ಅವಮಾನದ ಅಂತ್ಯ ಸೋಲು ಅಥವಾ ಸಾವಲ್ಲವೇ ಅಲ್ಲ. ಅದು ಯಾವತ್ತಿಗೂ ಎದಿರಿಸುವುದು ಮಾತ್ರವೇ ಆಗಿರುತ್ತದೆ. ಕೋಮಲವಾದ ತಾಯಿ ಕಷ್ಟಗಳ ನಡುವೆಯೂ ಬಾಗಿಬಳುಕಿರುವಳೇ ಹೊರತು ಎಂದೂ ಮುರಿದುಹೋದವಳಲ್ಲ. ಅಪ್ಪನ ಉಬ್ಬಿದೆದೆ ಸೋಲುಗಳನ್ನೂ ಬಗ್ಗುಬಡಿದಿದೆಯೇ ಹೊರತು ಪಾತಾಳಕ್ಕೆ ಕುಸಿದಿಲ್ಲ. ಇಂತಹ ಚಿತ್ರಣಗಳನ್ನು ಕಟ್ಟಿಕೊಡುವ ಸದಾಶಿವರ ಕಲೆಗಾರಿಕೆ ಮೆಚ್ಚುವಂಥದ್ದು.

ಅಂತಹ ನಿರುಪಾಯ ಸ್ಥಿತಿಯಲ್ಲಿ ಕವಿತೆ ಹುಟ್ಟುತ್ತದೆ ಅನಿಸುತ್ತದೆ ನನಗೆ. ಇಲ್ಲದೇ ಹೋಗಿದ್ದರೆ ಒಂದು ಕ್ಷಣ ಈ ಎಲ್ಲ ಸಾಲುಗಳು ಸತ್ಯಕ್ಕೂ ಈ ಲೋಕದವು ಅಲ್ಲವೇ ಅಲ್ಲ ಅಂತ ಯಾಕನಿಸಬೇಕು…. ಬರೆದವನಿಗೂ ಬರೆದ ನಂತರ ಈ ಸಾಲುಗಳು ಖಂಡಿತಾ ನನ್ನವಲ್ಲ ಅಂತಲಾದರೂ ಯಾಕನಿಸಬೇಕು…

“ಬೆಳಗಿದ ಸೂರ್ಯನಿಗೊಂದು
ಕತ್ತಲೆಯ ಮೂಲೆ
ಇಲ್ಲವೇ; ಹಣ ಕೊಟ್ಟು
ಅನ್ನವಹಾಕಿಸುವ ಒಂದು ಮನೆ!”
(ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ)

ಎನ್ನುವ ಈ ಸಾಲುಗಳಲ್ಲಿ ಅವ ಉರಿಉರಿ ಸೂರ್ಯನೇ ಆಗಿದ್ದರೂ ಕತ್ತಲೆಗೆ ಸಲ್ಲಬೇಕಿರುವುದು ನಿಯಮವೇ… ಬಳಸಿಯಾದ ನಂತರ ಬಿಸಾಡುವ ಹಂತ ಒಬ್ಬನದಾದರೆ ತ್ಯಜಿಸಲ್ಪಟ್ಟದ್ದು ಹಣ್ಣಕ್ಕೆ ವಿಲೇವಾರಿಗೊಂಡು ಮತ್ತೊಬ್ಬರ ಬಳಕೆಗೆ ನಿಲುಕುತ್ತಾ ಹೋಗುವುದೂ ಸಹ ಒಂದು ವರ್ತುಲವೇ…

“ನನ್ನವ್ವ ನಿತ್ಯ ತರುಣಿ” ಕವಿತೆ ಒಂದು ಚಂದದ ಕವಿತೆ. ಸಣ್ಣ ವಾಚ್ಯತೆ ಇಣುಕಿದೆಯಾದರೂ ಕವಿತೆಯಾಗಿ ಗೆದ್ದಿದೆ. ಕವಿತೆಯ ಯಶಸ್ಸಿಗೆ ಭಾವತೀವ್ರತೆ ಮತ್ತು ಅದರ ಸಮತೋಲನದ ಹದವೂ ಬೇಕು. ಮತ್ತು ಒಂದು ಪ್ರಾಮಾಣಿಕತೆಯೂ ಇರಬೇಕು. ಅದು ಈ ಕವಿತೆಯಲ್ಲಿದೆ ಅನಿಸಿತು. ಇಲ್ಲಿನ ಬಹಳಷ್ಟು ಕವಿತೆಗಳಲ್ಲೂ ಅದನ್ನು ಕಾಣಬಹುದು.

“ಶಾಲೆ ಹೆಸರಿನ
ದೊಡ್ಡ ಕಟ್ಟಡಗಳಿಂದ
ಮುಗ್ಧತೆಯ ಜಗಿಯುವ
ಅಮಾನವೀಯ ಸದ್ದು”

“ಬಿಡಿ ಸುಳ್ಳೇ ನಟಿಸಬೇಡಿ
ಆಕೆ ಪ್ರತಿ ಉಸಿರೂ ಓದಬಲ್ಲಳು
ಪಾಪದ ಭರ್ತಿಗೆ ಚಿಟಕಿಯಷ್ಟು ಬಾಕಿ
ನಮಗೆ ನಾಳೆಗಳಿಲ್ಲ”
(ತುದಿ ಪಾದದ ಗುರುತುಗಳು)

ಎನ್ನುವ ಸಾಲುಗಳು ಕಡು ವಿಷಾದವನ್ನು ಹುಟ್ಟಿಸುತ್ತವೆ. ಎಲ್ಲೊ ಅಂಗಳದಲ್ಲಿ ಆಡಿಕೊಂಡಿರುವ ಮಗಳನ್ನು ಎದೆಯಲ್ಲಿ ಹುದುಗಿಸಿಕೊಳ್ಳಬೇಕೆನಿಸುತ್ತದೆ. ಇಂತಹ ಕವಿತೆಗಳು ಅವರ ಮುಂದಿನ ಕಾವ್ಯಯಾನವನ್ನು ನಿರ್ಧರಿಸುತ್ತವೆ. ಅವರ ಶಕ್ತಿಗೊಂದು ಪುರಾವೆಯಾಗಿಯೂ ಸಲ್ಲುತ್ತವೆ.

ಮುರಿದ ಕೊಡೆ ಮತ್ತು ಮುಪ್ಪು, ಕವಿಗಳಿಗೂ ಇರಲಿ ಬಿ.ಪಿ.ಎಲ್. ಕಾರ್ಡು… ಮತ್ತಿತರ ಕವಿತೆಗಳು ತಾಜಾ ಅನಿಸುತ್ತವೆ. ಸದಾಶಿವರ ಕವಿತೆಗಳಲ್ಲಿ ವೈವಿಧ್ಯಮಯ ವಸ್ತು ಪ್ರಯೋಗವನ್ನು ಕಾಣಬಹುದು. ಸಣ್ಣ ನಾಯಿಯೊಂದು ಅವರ ಕವಿತೆಯ ರೂಪಕವಾಗುವ ಹೊತ್ತಿನಲ್ಲೇ ಅವ್ವ, ಹೆಣ್ಣು, ಕಾಮ ದಾಹ… ಎಲ್ಲವೂ ಅವರ ಕಾವ್ಯವನ್ನು ವಸ್ತುವಾಗಿ ಆಕ್ರಮಿಸತೊಡಗುತ್ತವೆ. ಪದಗಳೊಂದಿಗಿನ ಅವರ ಸುಲಲಿತ ಆಟ ಮತ್ತು ಓಟ, ಅವರು ಬರಹದಲ್ಲಿ ಎಷ್ಟರ ಮಟ್ಟಿಗೆ ಪಳಗಿದ್ದಾರೆ ಎಂಬುದನ್ನು ಸೂಚಿಸುತ್ತದೆ.

ಒಟ್ಟಾರೆ ಇಲ್ಲಿನ ಎಲ್ಲಾ ಕವಿತೆಗಳು ಒಂದು ಚಂದದ ಅನುಭವವನ್ನಂತೂ ಕೊಡುತ್ತವೆ. ಸದಾಶಿವರು ಕವ್ಯಲೋಕಕ್ಕೆ ಒಂದೊಳ್ಳೆ ಅಡಿ ಇಟ್ಟಿದ್ದಾರೆ, ಮತ್ತವರು ಬಹುದೂರ ಸಾಗಬಲ್ಲವರೂ ಸಹ. ಪದಗಳ ಲಾಲಿತ್ಯಕ್ಕೆ ತೀವ್ರ ಭಾವದ ಜೀವ ಸಂಚಾರವಾಗುವುದರಿಂದ ಕವಿತೆ ಜೀವಂತವಾಗಬಲ್ಲದು. ಮತ್ತು ನೋಡಿದ್ದೆಲ್ಲ ಕವಿತೆಗಳಾಗಬೇಕಿಲ್ಲ. ಆದರೆ ಕಾಡಿದ್ದೆಲ್ಲವೂ ಕವಿತೆಗಳಾದಾಗ ಅವರ ಪರಿಣಾಮವೇ ಬೇರೆ. ಮತ್ತು ಕವಿತೆಯ ಭಾವವೇ ಮುಖ್ಯವಾಗಿದ್ದರೂ ಕಟ್ಟುವಿಕೆಯಲ್ಲಿನ ತಾಂತ್ರಿಕ ಅಂಶಗಳು ಮತ್ತು ಪದ್ಯವೊಂದಕ್ಕೆ ಇರಬೇಕಾದ ಲಯ ಯಾವುದೇ ಕಾರಣಕ್ಕೂ ಅಲ್ಲಗಳೆಯುವಂಥವಲ್ಲ. ಈ ಎಲ್ಲ ಎಚ್ಚರದೊಟ್ಟಿಗೆ ಸದಾಶಿವರ ಮುಂದಿನ ಕಾವ್ಯಯಾನ ಸಾಗಲಿ ಎಂದು ಪ್ರೀತಿಯಿಂದ ಹಾರೈಸುತ್ತೇನೆ.

“ಎಂದೋ ಬಿದ್ದು ಹೋದ ಮಳೆ
ಈಗ ಗೀಚಿದೆ ಕುಂಟಲಿಪಿ
ಓದುವುದೊ ಮರೆಯುವುದೊ ಗೊತ್ತಿಲ್ಲ!”
(ಹೆಜ್ಜೆಗಳು)

ಕೊನೆಯಲ್ಲಿ ಈ ಅಯೋಮಯದ ಸ್ಥಿತಿಯೂ ಕಾವ್ಯವನ್ನು ಪೊರೆಯಬಲ್ಲದು ಅನಿಸಿಬಿಡುತ್ತದೆ.