ಪವರ್ ಹೌಸ್ ಹಿಂಭಾಗವೇ ಶಿವನ ಹಳ್ಳಿ. ಆಗ ಅರವತ್ತರ ದಶಕದಲ್ಲಿ ಒಂದು ಹದಿನೈದು ಅಡಿ ಅಗಲದ ಮಣ್ಣಿನ ರಸ್ತೆ ಇವೆರೆಡರ ಮಧ್ಯೆ ಹಾದು ಹೋಗುತ್ತಿತ್ತು. ಪೂರ್ತಿ ಏರಿಯಾ ರೆವೆನ್ಯೂ ನಿವೇಶನಗಳು. ಅರವತ್ತು ನೂರರ ಸೈಟುಗಳು ಐನೂರು ಆರು ನೂರು ರೂಪಾಯಿ. ಸುಮಾರು ಜನ ನಿವೇಶನ ಕೊಂಡವರು ರೆವೆನ್ಯೂ ಆಸ್ತಿ, ಸೈಟು ರೋಡ್ ಆಗುತ್ತೆ ಅಂತ ಹೆದರಿ ಮಾರಿದರು. ರೆವೆನ್ಯೂ ನಿವೇಶನ ಕೊಳ್ಳುವವರಿಗೆ ಆಗ ಸೈಟು ರಸ್ತೆ ಆಗುವುದು ಒಂದು ದುಃಸ್ವಪ್ನ. ಎಷ್ಟೋ ಜನರಿಗೆ ಈ ರೀತಿ ಆಗಿ ಆಗಿ ಹೆದರಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐದನೆಯ ಕಂತು ನಿಮ್ಮ ಓದಿಗೆ

ಶಿವನ ಹಳ್ಳಿ ಕೆರೆ, ಸಾಣೆ ಗುರುವನ ಹಳ್ಳಿ ಕೆರೆ ಅಂತ ಇತ್ತು. ನಮ್ಮ ಜತೆಯ, ನಮ್ಮದೇ ವಯಸ್ಸಿನ ಮೂರು ಮುಗ್ಧ ಈಜು ಬರದ ಹುಡುಗರು ಕೆರೆಯಲ್ಲಿ ಮುಳುಗಿ ಸತ್ತದ್ದು ಹೇಳಿದೆ. ಇ ಎಸ್ ಐ ಆಸ್ಪತ್ರೆ ಬಗ್ಗೆ ಬರೆಯುತ್ತಾ ಅಲ್ಲಿನ ಒಂದು ಸಾವಿನ ಬಗ್ಗೆಯೂ ವಿವರಿಸಿದ್ದೆ. ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಕತೆ, ಅದರ ಎದುರಿನ ಅಬ್ಬಕ್ಕನ ಪ್ರತಿಮೆ, ರಾಜಾಜಿನಗರದ ಉದ್ಘಾಟನಾ ಶಿಲೆ…. ಇಲ್ಲಿನ ಕೆಲ ಖ್ಯಾತ ನಾಮರು… ಇವೆಲ್ಲವೂ ಹಿಂದಿನ ಸಂಚಿಕೆಯಲ್ಲಿ ಬಂತು. ಈಗ ಮುಂದೆ…
ಐದನೇ ಎಪಿಸೋ ಡು

(ವೀರಾಸ್ವಾಮಿ)

ಚಿತ್ರ ನಿರ್ಮಾಪಕ ವೀರಾಸ್ವಾಮಿ ಅವರು ತಮ್ಮ ಸಂಸ್ಥೆ ಬೆಳೆಸಿದ್ದು ಇಲ್ಲಿ. ಕ್ರೇಜಿ ಸ್ಟಾರ್ ರವಿಚಂದ್ರನ್ ಇಲ್ಲಿಯವರು! ಆಗಾಗ ಅವರ ಮನೆ ಮುಂದೆ ಸಾಗುವಾಗ ಟಿಂಟೆಡ್ ಗಾಜಿನ ಕಿಟಕಿಗಳು ಇರುತ್ತಿದ್ದ ಕಾರುಗಳು ಅವರ ಮನೆ ಮುಂದೆ ಕಾಣಿಸುತ್ತಿದ್ದವು. ಯಾರೋ ಪ್ರಖ್ಯಾತ ಸಿನಿಮಾ ನಟ ಅಥವಾ ನಟಿ ಬಂದಿರಬೇಕು ಅಂದುಕೊಳ್ಳುತ್ತಿದ್ದೆ. ಅಲ್ಲೇ ಕಾದು ಹೊರಗೆ ಬರುವ ಖ್ಯಾತರನ್ನು ನೋಡಬೇಕು ಎಂದು ಅನಿಸುತ್ತಿರಲಿಲ್ಲ, ಯಾಕೋ ಕಾಣೆ! ನಾಟಕಕಾರ ಎಂ ಎಸ್ ನಾಗರಾಜ್ ಇಲ್ಲಿಯವರು. ಇನ್ನೊಬ್ಬ ಎಂ ಎಸ್ ನಾಗರಾಜ್ ಅವರು ಕಾಲೇಜಿನಲ್ಲಿ ಇಂಗ್ಲಿಷ್ ಮೇಷ್ಟರು ಮತ್ತು ನಾಟಕ ಬರೆದು ಆಡಿಸುತ್ತಿದ್ದರು. ನಾಗರಾಜ್ ಅವರು ಬರೆದ ಇಂಟರ್ ಈಡಿಯಟ್ ಎನ್ನುವ ಹಾಸ್ಯಮಯ ನಾಟಕ ನಮ್ಮ ಶಾಲಾ ವಾರ್ಷಿಕೋತ್ಸವದಲ್ಲಿ ಆಡಿದರು. ನನ್ನ ಗೆಳೆಯ ಶ್ರೀ ಸಿ ಜಿ. ಗೋಪಾಲಸ್ವಾಮಿ (ಈಗ ಪ್ರಸಿದ್ಧ ಅಡ್ವೋಕೇಟ್) ಈ ನಾಟಕದಲ್ಲಿ ಮುಖ್ಯ ಪಾತ್ರಧಾರಿ, ಅವನ ಸಂಗಡ ವಿಜಯ ಸಾರಥಿ ಮತ್ತೊಂದು ಪ್ರಮುಖ ಪಾತ್ರ. ವಿಜಯಸಾರಥಿ ಮುಂದೆ ಪತ್ರಕರ್ತ, ಸಿನಿಮಾನಟನೆ ಮೊದಲಾದ ಹಲವು ಹವ್ಯಾಸಗಳನ್ನು ಬ್ಯಾಂಕ್ ಕೆಲಸದ ಜತೆಜತೆಗೆ ರೂಢಿಸಿಕೊಂಡಿದ್ದ. ಈಗ ವಿಜಯ ಸಾರಥಿ ಬರೇ ನೆನಪು. ಸುರೇಶ್ ಸಹ ಒಂದು ಪಾತ್ರ ವಹಿಸಿದ್ದ. ಮುಂದೆ ಈ ಸುರೇಶ್ ಬಾಹ್ಯಾಕಾಶ ಸಂಸ್ಥೆಯಲ್ಲಿ ಉನ್ನತ ಹುದ್ದೆ ನಿರ್ವಹಿಸಿದ. ಗೋಪಾಲಸ್ವಾಮಿ ಹವ್ಯಾಸೀ ನಾಟಕ ತಂಡಗಳಲ್ಲಿ ಕೆಲವು ಕಾಲ ಪಾತ್ರ ವಹಿಸುತ್ತಿದ್ದ. ನಂತರ ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡ.

ಎಂ. ಎಸ್. ನಾಗರಾಜ್ ಅವರ ಶ್ರೀಮತಿಯವರು ಮಹಿಳಾ ಸಂಘ ಕಟ್ಟಿ ಅದರ ಮೂಲಕ ಹಲವು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿದ್ದರು. ಬಹುಶಃ ಇದು ರಾಜಾಜಿನಗರದ ಮೊದಲ ಮಹಿಳಾ ಸಂಘ. ಭದ್ರಗಿರಿ ಅಚ್ಯುತದಾಸರು, ಭದ್ರಗಿರಿ ಕೇಶವದಾಸರು ಸಹೋದರರು. ಇವರಿಗೆ ಮತ್ತೊಬ್ಬ ತಮ್ಮ, ಸರ್ವೋತ್ತಮ ದಾಸ್ ಎಂದಿರಬೇಕು. ಇವರು ನಾಲ್ಕು ಐದನೇ ಬ್ಲಾಕ್ ನಡುವೆ, ರಾಮ ಕುಮಾರ್ ಮಿಲ್ಲಿನ ಹಿಂದೆ ಒಂದು ಪುರಂದರ ಮಂದಿರ ಕಟ್ಟಿದರು. ಪುರಂದರ ದಾಸರ ಪ್ರತಿಮೆಯ ಮೊದಲ ಗುಡಿ ಇದು ಎಂದು ಆಗ ಪ್ರಚಾರವಾಗಿತ್ತು. ಅದಕ್ಕೆ ದಾಸಾಶ್ರಮ ಎಂದು ಹೆಸರಿಟ್ಟರು. ಅಲ್ಲಿ ಹರಿಕತೆ ತರಗತಿಗಳು ನಡೆಸುತ್ತಾರೆ ಎಂದು ಕೇಳಿದ್ದೆ. ಸುತ್ತಲಿನ ಜಾಗ ದಾಸಾಶ್ರಮ ಎಂದು ಹೆಸರಾಯಿತು. (ಬೂಸಾ ಗಲಾಟೆ ಆದಾಗ ರಾಜಾಜಿನಗರದ ಹೆಸರು ಬದಲಾಯಿಸಿ ಎಂದು ಒಂದು ಸಣ್ಣ ಕೂಗು ಎದ್ದಿತ್ತು ಎಂದು ಹಿಂದೆ ಹೇಳಿದ್ದೆ. ರಾಜಾಜಿನಗರವನ್ನು ಪುರಂದರ ಪುರ ಎಂದು ಕರೆಯಬೇಕು ಎಂದು ಸಣ್ಣ ದನಿಯ ಒತ್ತಾಯ ಇತ್ತು. ಕೆಲವು ಕಾಗದ ಪೋಸ್ಟ್ ಮಾಡಿದಾಗ ನಾನು ನಮ್ಮ ವಿಳಾಸವನ್ನು ರಾಜಾಜಿನಗರ ಬದಲಿಗೆ ಪುರಂದರ ಪುರ ಎಂದೇ ಬರೆದಿದ್ದೆ. ಹೆಚ್ಚು ಜನ ಈ ಹೆಸರು ಉಪಯೋಗಿಸಿದರೆ ಮೂಲ ಹೆಸರು ಬದಲಾಗುತ್ತೆ ಎನ್ನುವ ನಂಬಿಕೆ. ಅದಾಗಲಿಲ್ಲ, ಆದರೆ ಆ ಕೂಗು ಅಲ್ಲಿಯೇ ಸತ್ತಿತು). ನಂತರ ನೆಲಮಂಗಲದ ಬಳಿ ಅರಸಿನಕುಂಟೆ ಯಲ್ಲಿ ದೊಡ್ಡ ಸ್ಥಳದಲ್ಲಿ ಇವರೇ ನಿರ್ಮಿಸಿದ ದೇವಾಲಯಗಳು ಬಂದವು. ಈಗ ಅವು ವರ್ಲ್ಡ್ ಫೇಮಸ್ ಆಗಿವೆ, ಅತ್ತ ಹೋಗುವವರನ್ನು ಕೈ ಬೀಸಿ ಕರೆಯುತ್ತದೆ.

(ಭದ್ರಗಿರಿ ಕೇಶವದಾಸರು)

ಇನ್ನೊಂದು ಬೆಂಗಳೂರಿನ ಯಾವ ಭಾಗದಲ್ಲೂ ಆಗದ ಒಂದು ಕೆಲಸ ಇಲ್ಲಿ ನಡೆಯಿತು ಮತ್ತು ನಮ್ಮ ಸಾಂಸ್ಕೃತಿಕ ಲೋಕ ಅದನ್ನು ಗಮನಿಸಿದ ಹಾಗೆ ಕಾಣೆ. ಎಂಟ್ರೆನ್ಸ್‌ನಿಂದ ಸುಮಾರು ಮುನ್ನೂರು ನಾನೂರು ಗಜ ದೂರದಲ್ಲಿನ ಒಂದು ಪುಟ್ಟ ಮೈದಾನದಲ್ಲಿ ಕುಮಾರ ವ್ಯಾಸ ಭಾರತ ವಾಚನ ಮಾಡಲೆಂದೇ ಒಂದು ಸಂಸ್ಥೆ ಕಾರ್ಯಾರಂಭ ಮಾಡಿತು. ಪ್ರತಿ ಸಂಜೆ ಇಲ್ಲಿ ಭಾರತ ವಾಚನ ಶುರು ಆಯಿತು. ಶ್ರೀ ರಾಜಾರಾವ್ ಅವರ ನೇತೃತ್ವದಲ್ಲಿ ಒಂದು ಯುವ ಪೀಳಿಗೆ ಈ ಅಪೂರ್ವ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು. ಖ್ಯಾತ ಗಮಕಿಗಳು ವ್ಯಾಖ್ಯಾನಕಾರರು ಇಲ್ಲಿ ಭಾರತ ವಾಚನ ಮಾಡಿದರು. ಒಮ್ಮೆ ಅದರ ತಾರಸಿ ಅನಿಸಿದ್ದ ತೆಂಗಿನ ತಡಿಕೆಯ ಚಪ್ಪರ ಸುಟ್ಟು ಹೋಯಿತು. ನಂತರ ಒಂದು ಭದ್ರ ಮೇಲ್ಛಾವಣಿ ಅದಕ್ಕೆ ಬಂದಿತು. “ಕುಮಾರವ್ಯಾಸ ಮಂಟಪ ಸ್ಥಾಪನೆ ಆದದ್ದು ದಿ.೧೦-೦೧-೧೯೭೧ರಂದು. (ದಿ. ಸನ್ಮಾನ್ಯ ರಾಜಾರಾಯರು ತಿಳಿಸಿದಂತೆ). ನಮ್ಮ ತಾಯಿ ಶ್ರೀಮತಿ ಅನ್ನಪೂರ್ಣಮ್ಮ ರಘುಪತಿ ಶಾಸ್ತ್ರಿ. ಅವರು ಪ್ರಾರಂಭದಿಂದ ಸುಮಾರು ಎರಡು ವರ್ಷಗಳ ಕಾಲ ಅಲ್ಲಿ ಗಮಕ ವಾಚನ ಮಾಡಿದರು. ನಂತರದ ದಿನಗಳಲ್ಲಿ ವಿದ್ವಾನ್ ಶ್ರೀ ಮತ್ತೂರು ಲಕ್ಷ್ಮಿಕೇಶವ ಶಾಸ್ತ್ರಿ ಅವರೊಂದಿಗೆ (ಅವರ ವ್ಯಾಖ್ಯಾನ) ಒಂದು ವರ್ಷಕ್ಕೂ ಮಿಗಿಲಾಗಿ ಕಾರ್ಯಕ್ರಮ ನೀಡಿದ್ದರು. ಅಲ್ಲಿನ ಯಾವುದೇ ಫೋಟೋ ಅಥವಾ ಸ್ಮರಣಿಕೆ ನನ್ನಲ್ಲಿ ಇಲ್ಲ…

ನಂತರ ಈ ಸ್ಥಳಕ್ಕೆ ಕುಮಾರವ್ಯಾಸ ಮಂಟಪ ಎಂದೇ ಹೆಸರಾಯಿತು. ಇದು ಎಲ್ಲೂ ದಾಖಲಾದ ಹಾಗೆ ಕಾಣೆ. ಅಂದಿನ ಎಲ್ಲಾ ಗಮಕಿಗಳೂ ಇಲ್ಲಿ ವಾಚಿಸಿದರು ಮತ್ತು ಅಂದಿನ ವ್ಯಾಖ್ಯಾನಕಾರರು ಇಲ್ಲಿ ಕುಮಾರ ವ್ಯಾಸ ಭಾರತ ಪರಿಚಯಿಸಿದರು. ಆ ಕಾಲದ ಸುಮಾರು ಎಲ್ಲರ ಬಾಯಲ್ಲೂ ಕುಮಾರವ್ಯಾಸ ನಲಿದಾಡುತ್ತ ಇದ್ದ.

(ಶ್ರೀಮತಿ ಅನ್ನಪೂರ್ಣಮ್ಮ ರಘುಪತಿ ಶಾಸ್ತ್ರಿ)

ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಎನ್ನುವ ಕುವೆಂಪು ಅವರ ಗೀತೆಯನ್ನು ಆಗಾಗ ಸಣ್ಣದಾಗಿ ಹಾಡಿಕೊಳ್ಳುವ ಅನೇಕ ಸ್ನೇಹಿತರು ನನಗಿದ್ದಾರೆ! ಕುಮಾರವ್ಯಾಸನ ಈ ಹಾಡು ಈಗಲೂ ನನ್ನ ಇಷ್ಟವಾದ ಹಾಡುಗಳಲ್ಲಿ ಒಂದು.

  ಪ್ರತಿ ಸಂಜೆ ಇಲ್ಲಿ ಭಾರತ ವಾಚನ ಶುರು ಆಯಿತು. ಶ್ರೀ ರಾಜಾರಾವ್ ಅವರ ನೇತೃತ್ವದಲ್ಲಿ ಒಂದು ಯುವ ಪೀಳಿಗೆ ಈ ಅಪೂರ್ವ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು. ಖ್ಯಾತ ಗಮಕಿಗಳು ವ್ಯಾಖ್ಯಾನಕಾರರು ಇಲ್ಲಿ ಭಾರತ ವಾಚನ ಮಾಡಿದರು. ಒಮ್ಮೆ ಅದರ ತಾರಸಿ ಅನಿಸಿದ್ದ ತೆಂಗಿನ ತಡಿಕೆಯ ಚಪ್ಪರ ಸುಟ್ಟು ಹೋಯಿತು. ನಂತರ ಒಂದು ಭದ್ರ ಮೇಲ್ಛಾವಣಿ ಅದಕ್ಕೆ ಬಂದಿತು.

ಕುಮಾರ ವ್ಯಾಸ ಕವಿತೆ
ಕುಮಾರವ್ಯಾಸನು ಹಾಡಿದನೆಂದರೆ,
ಕಲಿಯುಗ ದ್ವಾಪರವಾಗುವುದು !
ಭಾರತ ಕಣ್ಣಲಿ ಕುಣಿವುದು ; ಮೆಯ್ಯಲಿ
ಮಿಂಚಿನ ಹೊಳೆ ತುಳುಕಾಡುವುದು !
ಆ ಕುರುಭೂಮಿಯು ತೋರುವುದು ;
ಆ ರಣರಂಗದಲಿ,
ಆ ಸಂಗ್ರಾಮದಲಿ,
ಪಟುಭಟರಾರ್ಭಟ ಕೇಳುವುದು !
ಮೈ ನವಿರೇಳುವುದು ! ೧
ಹೊಳೆಯುವ ಕೈದುಗಳಾಟದಲಿ,
ಕಲಿಗಳ ಕದನದ ಕೂಟದಲಿ,
ತಾಗುವ ಗದೆಗಳ ಸಂಘಟ್ಟಣೆಯಲಿ,
ರಥಚಕ್ರಧ್ವನಿ ಚೀತ್ಕಾರದಲಿ,
ಸಾಯ್ಯರ ಶಾಪದಲಿ,
ಬೀಳ್ವರ ತಾಪದಲಿ
ನಸುಸೋತಿರುವರ ಕೋಪದಲಿ,
ನೆರೆ ಗೆದ್ದಿಹರಾಟೋಪದಲಿ,
ಕೆನೆಯುವ ಹಯಗಳ ಹೇಷಾರವದಲಿ,
ಕಿವಿ ಬಿರಿಯುವುದು !
ಎದೆ ಮುರಿಯುವುದು !
ಬಸಿಯುವ ಮಜ್ಜೆಯ ಪಂಕದೊಳೂಡಿ
ಚಿಮ್ಮುವ ರಕ್ತನ ಬುಗ್ಗೆ ಯ ನೋಡಿ
ಕಣ್ಣೊಡೆಯುವುದು !
ಮೈ ನಡುಗುವುದು ! ೨
ಕೇಳಿರಿ ! ಪಾರ್ಥನ ಸಾರಥಿಯು
ರಣ ಗೀತೆಯನು,
ರಣ ನೀತಿಯನು,
ಬೋಧಿಸುವನು ನಿರ್ಭೀತಿಯನು !
ಕುರುರಂಗದ ಶರಶಯ್ಯೆಯಲಿ |
ಭೀಷ್ಮನು ಮಲಗಿಹನು !
ಹೆಣಗಳ ಬಣಬೆಯ ಮಂಚದಲಿ
ದ್ರೋಣನು ಬಿದ್ದಿಹನು !
ನೆತ್ತರವೀ೦ಟುತಲಿರುವನು ಭೀಮನು
ಅಯ್ಯೋ, ನೋಡಲ್ಲಿ !
ರಥದಿಂದುರುಳುತಲಿರುವನು ಕರ್ಣನು,
ಹಾ! ಹಾ! ನೋಡಿಲ್ಲಿ !
ರಣಚಂಡಿಯು ಆ ಬೆಂಕಿಯ ಮಗಳು
ಹೆಣ್ಣಿನ ರೂಪದ ಬರಸಿಡಿಲವಳು !
ಮುಗುಳ್ಳಗೆ ಬೀರುತ ನೋಡಲ್ಲಿ
ನಿಂತಿರುವಳು ರಣರಂಗದಲಿ
ದ್ರೌಪದಿ ಮುಡಿಗೆದರಿ ! ೩
ವೈಶಂಪಾಯನ ಸರಸಿಯ ತೀರದಿ
ತೋರುವರಾರಲ್ಲಿ !
ಕೌರವದೇವನು ಸಿಡಿಲಾಗಿರುವನು
ಭೀಮನ ಸರಿಸದಲಿ !
ವೈರಿಯ ಎದೆಯನು
ಒಡೆಯುವ ಗದೆಯನು
ಮೇಲೆತ್ತಿರುವನು ನೋಡಲ್ಲಿ !
ಭೀಮನು ಬಿದ್ದನೆ!
ಕೌರವ ಗೆದ್ದನೆ!
ಮುಂದಾಗುವುದನು ಕಾಣಲ್ಲಿ !
ಇದಾವ ನ್ಯಾಯ !
ಏನನ್ಯಾಯ ! ೪
ಕೃಷ್ಣನ ಕುಹಕವ ನೋಡಲ್ಲಿ !
ಏನನು ನೋಡುವೆ ? ತಡೆಯುವೆ ಏಕೆ ?
ಕೌರವರಾಯನು ಮಡಿಯಲೆ ಬೇಕೆ ?
ಯುವಕನೆ ತುಡುಕು ಕಠಾರಿಯನು !
ಹೊಡೆ ರಣಭೇರಿಯನು !
ನಡೆ, ನಡೆ, ಊದು ತುತ್ತೂರಿಯನು !
ಕರೆ, ರಣಮಾರಿಯನು ! ೫
ಕುಮಾರವ್ಯಾಸನು ಹಾಡಿದನೆಂದರೆ,
ಕಲಿಯುಗ ದ್ವಾಪರವಾಗುವುದು !
ಭಾರತ ಕಣ್ಣಲಿ ಕುಣಿವುದು ; ಮೆಯ್ಯಲಿ
ಮಿಂಚಿನ ಹೊಳೆ ತುಳುಕಾಡುವುದು !
ಕಲಿ ಕೆಚ್ಚಾಗುವನು !
ಕವಿ ಹುಚ್ಚಾಗುವನು ! ೬ [೧][೨]

ಕವಿ:ಕೆ. ವಿ. ಪುಟ್ಟಪ್ಪ
ರಾಜಾಜಿನಗರದ ಈಗಿನ ಹಿರಿಯರಿಗೆ ಕುಮಾರವ್ಯಾಸ ಇಷ್ಟವಾಗಲು ಇದೂ ಸಹ ಒಂದು ಕಾರಣ.

ಕುಮಾರ ಸ್ವಾಮಿಯು ಹಾಡಿದನೆಂದರೇ
ಕುಮಾರ ಸ್ವಾಮಿಯು ಹಾಡಿದ ನೆಂದರೆ.
ಎನ್ನುವ ಅಣಕು ಹಾಡನ್ನು ನಾ. ಕಸ್ತೂರಿ ರಚಿಸಿದರು. ಮೂಲಕ್ಕೆ ಕಚಗುಳಿ ಈ ಅಣಕು.

ಪವರ್ ಹೌಸ್ ಹಿಂಭಾಗವೇ ಶಿವನ ಹಳ್ಳಿ. ಆಗ ಅರವತ್ತರ ದಶಕದಲ್ಲಿ ಒಂದು ಹದಿನೈದು ಅಡಿ ಅಗಲದ ಮಣ್ಣಿನ ರಸ್ತೆ ಇವೆರೆಡರ ಮಧ್ಯೆ ಹಾದು ಹೋಗುತ್ತಿತ್ತು. ಪೂರ್ತಿ ಏರಿಯಾ ರೆವೆನ್ಯೂ ನಿವೇಶನಗಳು. ಅರವತ್ತು ನೂರರ ಸೈಟುಗಳು ಐನೂರು ಆರು ನೂರು ರೂಪಾಯಿ. ಸುಮಾರು ಜನ ನಿವೇಶನ ಕೊಂಡವರು ರೆವೆನ್ಯೂ ಆಸ್ತಿ, ಸೈಟು ರೋಡ್ ಆಗುತ್ತೆ ಅಂತ ಹೆದರಿ ಮಾರಿದರು. ರೆವೆನ್ಯೂ ನಿವೇಶನ ಕೊಳ್ಳುವವರಿಗೆ ಆಗ ಸೈಟು ರಸ್ತೆ ಆಗುವುದು ಒಂದು ದುಃಸ್ವಪ್ನ. ಎಷ್ಟೋ ಜನರಿಗೆ ಈ ರೀತಿ ಆಗಿ ಆಗಿ ಹೆದರಿದ್ದರು. ನಿಧಾನಕ್ಕೆ ಏರಿಯಾ ಅಭಿವೃದ್ಧಿ ಹೊಂದಿ ರಸ್ತೆ ವಿಶಾಲ ಆಗಿ ಅಂಗಡಿ ಮುಂಗಟ್ಟು ಬೆಳೆದು ಒಂದು ಪ್ರಮುಖ ಸ್ಥಳವಾಯಿತು. ಶಿವನ ಹಳ್ಳಿಗೆ ಅದ್ಯಾರೋ ಪುಣ್ಯಾತ್ಮ ಶಿವನಗರ ಎಂದು ಕರೆದರೂ ಜನರ ಮನಸ್ಸಿನಲ್ಲಿ ಅದು ಈಗಲೂ ಶಿವನ ಹಳ್ಳಿಯೇ.

ರಾಜಾಜಿನಗರದ ಮೊದಲನೇ ಬ್ಲಾಕ್‌ನ ರಿಸರ್ವಾಯರ್ ಮೊದಮೊದಲು ವದಂತಿಗಳ ಸರಕು. ಯಾರೋ ಮುಳುಗಿ ಸತ್ತರು, ಹತ್ತು ದಿವಸ ಆದಮೇಲೆ ಹೆಣ ತೇಲಿತು….. ಹೀಗೆ. ಇಡೀ ರಾಜಾಜಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಈ ರಿಸರ್ವಾಯರ್ ನೀರು ಕೊಡುತ್ತಿತ್ತು. ಮುಳುಗಿ ಸತ್ತ ಸುದ್ದಿಗಳು ಒಂದು ರೀತಿ ಬಾಯಿಂದ ಬಾಯಿಗೆ ರವಾನೆ ಆಗುತ್ತಿತ್ತೆ ಹೊರತು ಕಂಡವರು ಇರಲಿಲ್ಲ. ಒಂದು ರೀತಿ ಇದು ಲೋವರ್ಸ್ ಮೀಟಿಂಗ್ ಸ್ಥಳ ಮತ್ತು ಪುರೋಹಿತ ಬಂಡೆ. ಸಂಜೆ ಬೆಳಿಗ್ಗೆ ಯಾವುದೇ ಸಮಯದಲ್ಲೂ ಮಿನಿಮಮ್ ಅರ್ಧ ಡಜನ್ ಯುವ ಜೋಡಿ ಇಲ್ಲಿ ಕಾಣಿಸುತ್ತಿತ್ತು! ಸುಮಾರು ಯುವ ಜೋಡಿಗಳು ತಮ್ಮ ಪ್ರೇಮ ನಿವೇದನೆ ಇಲ್ಲಿ ಮಾಡಿ ನಂತರ ಗೃಹಸ್ಥಾಶ್ರಮ ಸೇರಿದ್ದರು! ಆಗ ಹೀಗೆ ಮದುವೆ ಆದವರು ಈಗಲೂ ಮೊಮ್ಮಕ್ಕಳ ಜತೆಗೆ ಈ ರಸ್ತೆ ಸುತ್ತುಹಾಕುವುದುಂಟು.

ಶಿವನ ಹಳ್ಳಿ ರಸ್ತೆ ಮುಂದುವರೆದು ಸೋಪ್ ಫ್ಯಾಕ್ಟರಿ ಹತ್ತಿರ ನವರಂಗ್ ಕಡೆಯಿಂದ ಬರುವ ರಸ್ತೆಗೆ ಸೇರುತ್ತಿತ್ತು, ಈಗಲೂ ಅದು ಹಾಗೇ. ಶಿವನಹಳ್ಳಿಯ ಈ ರಸ್ತೆ ಮುಂದೆ ಕಾರ್ಡ್ ರಸ್ತೆ ಆಯಿತು. ಆಗಂತೂ ಇದು ಅಷ್ಟಾಗಿ ಜನ ಸಂಚಾರ ಇಲ್ಲದ್ದು ಮತ್ತು ಹೇರಳವಾಗಿ ದೆವ್ವ ಭೂತ ಪಿಶಾಚಿಗಳು ಇಲ್ಲಿ ಹುಟ್ಟಿದ್ದವು ಮತ್ತು ವಾಸ ಸಹ ಮಾಡುತ್ತಿದ್ದವು… ಅದೂ ಎಂಥಹ ದೆವ್ವಗಳು ಅನ್ನುವಿರಿ, ಇಡೀ ವಂಶ ವಾಹಿನಿಗಳೆ ಇಲ್ಲಿತ್ತು! ಇದು ನಮ್ಮ ಮನೆಗಳಿಗೆ ಕೆಲಸಕ್ಕೆ ಬರುತ್ತಿದ್ದ ಅಲ್ಲಿನ ಹೆಂಗಸರು ಹೇಳುತ್ತಿದ್ದ ಕಥಾನಕ. ಆ ರಸ್ತೆಯಲ್ಲಿ ಹಗಲು ಹೊತ್ತಿನಲ್ಲೂ ಓಡಾಡಲು ಕೆಲವರು ಭಯ ಪಡುತ್ತಿದ್ದರು. ದೆವ್ವ ಪಿಶಾಚಿಗಳ ಕತೆ ಕೇಳಿ ಬೆಳೆದವರು ನಾವು! ಸುಮಾರು ನನ್ನ ವಯಸ್ಸಿನವರಿಗೆ ದೊಡ್ಡವರಾದ ಮೇಲೆ ಬುರುಡೆ ಕತೆಗಳನ್ನು ಹೇಳಲು ಒಳ್ಳೆ ವೇದಿಕೆ ಇಲ್ಲೇ ಸೃಷ್ಟಿ ಆಯಿತೇನೋ! ಮುಂದೆ ಇದೇ ರಸ್ತೆ ವೆಸ್ಟ್ ಆಫ್ ಕಾರ್ಡ್ ರೋಡ್ ಆಯಿತು. ನಗರ ಬೆಳೆದ ಹಾಗೆ ದೆವ್ವಗಳು ಊರು ಬಿಟ್ಟು ಓಡಿದವು. ದೆವ್ವಗಳ ಅಪ್ಪನಂತಹ, ತಾತನಂತಹ ಮನುಷ್ಯರು ಬಂದು ಇಲ್ಲಿ ಝಾಂಡ ಹೂಡಿದರು. ಮುಂದೆ ಇವರೇ ದೆವ್ವಗಳು ಆದರು…!

(ಮುಂದುವರೆಯುವುದು…)