ಪರ್ವತದ ಉತ್ತರ ಭಾಗದಲ್ಲಿ ಮಲ್ಲೋರಿಯ ಅವಶೇಷಗಳು ಪರ್ವತಾರೋಹಿಗಳ ತಂಡವೊಂದಕ್ಕೆ ಕಾಣಸಿಕ್ಕಿದೆ. ಮತ್ತೊಂದು ದೇಹವನ್ನು ಇದೇ ಪ್ರದೇಶದಲ್ಲಿ ನೋಡಿದ್ದೇವೆಂದು ಕೆಲವು ಪರ್ವತಾರೋಹಿಗಳು ಹೇಳಿಕೊಂಡಿದ್ದಾರೆ. ಅವರಿಬ್ಬರೂ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಬಳಿಕವೂ ಬದುಕಿ ಉಳಿದಿದ್ದಾರೆ. ಆದರೆ ಪರ್ವತದಿಂದ ಇಳಿಯುವಾಗ ಮರಣ ಹೊಂದಿರಬಹುದು ಎಂದು ಈ ವಿದ್ಯಮಾನದ ಕುರಿತು ಅಧ್ಯಯನ ನಡೆಸಿದ ತಜ್ಞರು ಊಹಿಸಿದ್ದಾರೆ. ಈ ಊಹೆ ನಿಜ ಎನ್ನುವುದಾದರೆ ಇವರಿಬ್ಬರು ಮೌಂಟ್ ಎವರೆಸ್ಟ್ ಏರಿದ ಪ್ರಪಂಚದ ಮೊದಲಿಗರೆನಿಸಿಕೊಳ್ಳುತ್ತಾರೆ. ಆದರೆ ಆಕಸ್ಮಿಕವಾಗಿ ಬಂದಪ್ಪಳಿಸಿದ ಸಾವು ಅವರ ಸಾಧನೆಯನ್ನು ಇನ್ನಿಲ್ಲವಾಗಿಸಿದ್ದಂತೂ ಸತ್ಯ.
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಸಾವಿನ ಕುರಿತ ಬರಹ ನಿಮ್ಮ ಓದಿಗೆ
ಸಾವು ಎನ್ನುವುದು ಹುಟ್ಟಿನಿಂದ ತೊಡಗಿ ಇಡೀ ಬದುಕಿನುದ್ದಕ್ಕೂ ಮನುಷ್ಯನನ್ನು ಹಲವು ಹಂತಗಳಲ್ಲಿ ಮುಟ್ಟುವ, ತಟ್ಟುವ ಸಂಗತಿಯಾಗಿದೆ. ಸಾವು ತನ್ನ ನಿಗೂಢತೆಯನ್ನು ಇಂದಿಗೂ ಉಳಿಸಿಕೊಂಡಿರುವ ರೀತಿಯಲ್ಲಿಯೇ ಕೆಲವು ಸಾವಿನ ಪ್ರಕರಣಗಳು ಇಂದಿಗೂ ನಿಗೂಢವಾಗಿವೆ. ಅವುಗಳ ಹಿಂದಿನ ಕಾರಣವನ್ನು, ಕಾರಣಕರ್ತರೆನಿಸಿಕೊಂಡವರನ್ನು ಗುರುತಿಸಲು ಸಾಧ್ಯವಾಗಿಯೇ ಇಲ್ಲ. ಇಂತಹ ವಿದ್ಯಮಾನಗಳು ನಮ್ಮ ಕುತೂಹಲವನ್ನು ಕೆರಳಿಸುವುದರ ಜೊತೆಗೆ ಪತ್ತೇದಾರಿ ಪ್ರವೃತ್ತಿಯನ್ನು ಪ್ರಚೋದಿಸುವ ರೀತಿಯಲ್ಲಿವೆ. ಅಂತಹ ಕೆಲವು ಪ್ರಕರಣಗಳ ಕುರಿತು ಗಮನವನ್ನು ಹರಿಸಬಹುದಾಗಿದೆ.
ಇಂಗ್ಲೆಂಡ್ ದೇಶದ ಪರ್ವತಾರೋಹಿಗಳಾದ ಜಾರ್ಜ್ ಮಲ್ಲೋರಿ ಮತ್ತು ಆಂಡ್ರ್ಯೂ ಇರ್ವಿನ್ ಅವರು 1924ನೇ ಇಸವಿಯ ಜೂನ್ 4ರಂದು ಮೌಂಟ್ ಎವರೆಸ್ಟ್ ಶಿಖರವನ್ನು ಏರುವುದಕ್ಕೆ ಸಿದ್ಧರಾಗಿದ್ದರು. ವಿಶ್ವದ ಅತೀ ಎತ್ತರದ ಪರ್ವತದ ಶಿಖರವನ್ನು ತಲುಪಿದ ಮೊದಲ ವ್ಯಕ್ತಿಗಳು ಎನಿಸಿಕೊಳ್ಳುವ ತವಕ ಅವರಲ್ಲಿತ್ತು. ಉತ್ತರ ಕೋಲ್‌ನ ಬೇಸ್ ಕ್ಯಾಂಪ್‌ನಿಂದ ಹೊರಟ ಅವರಿಬ್ಬರು ನಾಲ್ಕು ದಿನಗಳ ನಂತರ ಪರ್ವತಾರೋಹಿಯಾಗಿದ್ದ ಇನ್ನೊಬ್ಬ ವ್ಯಕ್ತಿಗೆ ಕಾಣಿಸಿದರು. ಅದಾದ ಬಳಿಕ ಪರ್ವತವನ್ನು ಮೋಡಗಳು ಆವರಿಸಿಕೊಂಡವು. ಮಲ್ಲೋರಿ ಮತ್ತು ಇರ್ವಿನ್ ಮತ್ತೆ ಕಾಣಿಸಲೇ ಇಲ್ಲ. ನಂತರದ ಕಾಲಘಟ್ಟದಲ್ಲಿ ಇರ್ವಿನ್ ಅವರ ಐಸ್ ಕೊಡಲಿ ಪರ್ವತದ ಮೇಲ್ಭಾಗದಲ್ಲಿ ಕಂಡುಬಂದಿದೆ. ಪರ್ವತದ ಉತ್ತರ ಭಾಗದಲ್ಲಿ ಮಲ್ಲೋರಿಯ ಅವಶೇಷಗಳು ಪರ್ವತಾರೋಹಿಗಳ ತಂಡವೊಂದಕ್ಕೆ ಕಾಣಸಿಕ್ಕಿದೆ. ಮತ್ತೊಂದು ದೇಹವನ್ನು ಇದೇ ಪ್ರದೇಶದಲ್ಲಿ ನೋಡಿದ್ದೇವೆಂದು ಕೆಲವು ಪರ್ವತಾರೋಹಿಗಳು ಹೇಳಿಕೊಂಡಿದ್ದಾರೆ. ಅವರಿಬ್ಬರೂ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಬಳಿಕವೂ ಬದುಕಿ ಉಳಿದಿದ್ದಾರೆ. ಆದರೆ ಪರ್ವತದಿಂದ ಇಳಿಯುವಾಗ ಮರಣ ಹೊಂದಿರಬಹುದು ಎಂದು ಈ ವಿದ್ಯಮಾನದ ಕುರಿತು ಅಧ್ಯಯನ ನಡೆಸಿದ ತಜ್ಞರು ಊಹಿಸಿದ್ದಾರೆ. ಈ ಊಹೆ ನಿಜ ಎನ್ನುವುದಾದರೆ ಇವರಿಬ್ಬರು ಮೌಂಟ್ ಎವರೆಸ್ಟ್ ಏರಿದ ಪ್ರಪಂಚದ ಮೊದಲಿಗರೆನಿಸಿಕೊಳ್ಳುತ್ತಾರೆ. ಆದರೆ ಆಕಸ್ಮಿಕವಾಗಿ ಬಂದಪ್ಪಳಿಸಿದ ಸಾವು ಅವರ ಸಾಧನೆಯನ್ನು ಇನ್ನಿಲ್ಲವಾಗಿಸಿದ್ದಂತೂ ಸತ್ಯ.
‘ವ್ಯಾಲೇಸ್ ಪ್ರಕರಣ’ ಎಂದು ಖ್ಯಾತವಾದ ಘಟನೆಯು ಜೂಲಿಯಾ ವ್ಯಾಲೇಸ್ ಎನ್ನುವ ಗೃಹಿಣಿಯ ಕೊಲೆಗೆ ಸಂಬಂಧಪಟ್ಟಿದೆ. ಜೂಲಿಯಾ ಅವರು ತನ್ನ ಪತಿ ವಿಲಿಯಂ ಅವರ ಜೊತೆಗೆ ಬದುಕುತ್ತಿದ್ದರು. ವಿಮಾ ಏಜೆಂಟ್ ಆಗಿದ್ದವರು ವಿಲಿಯಂ. 1931ರ ಜನವರಿ 21ರಂದು ಮೆನ್‌ಲೋವ್ ಗಾರ್ಡನ್ಸ್ ಈಸ್ಟ್ ಎನ್ನುವ ಸ್ಥಳಕ್ಕೆ ಬರುವಂತೆ ಸಂದೇಶವೊಂದು ಬಂದದ್ದರಿಂದಾಗಿ ವಿಲಿಯಂ ಆ ಸ್ಥಳವನ್ನು ಹುಡುಕಿಕೊಂಡು ಹೋದರು. ಉದ್ಯೋಗದಲ್ಲಿ ಭಡ್ತಿ ಸಿಕ್ಕಿರಬಹುದು ಎನ್ನುವ ನಿರೀಕ್ಷೆ ಅವರದ್ದಾಗಿತ್ತು. ಆದರೆ ಆ ಸ್ಥಳವನ್ನು ಹುಡುಕಿಕೊಂಡು ಹೋದರೆ ಆ ಹೆಸರಿನ ಜಾಗವೇ ಇಲ್ಲ ಎನ್ನುವುದು ವಿಲಿಯಂ ಅವರಿಗೆ ತಿಳಿದುಬಂತು. ಮನೆಗೆ ಹಿಂದಿರುಗಿದಾಗ ಅವರ ಪತ್ನಿ ಜೂಲಿಯಾ ಬರ್ಬರವಾಗಿ ಹತ್ಯೆಯಾಗಿದ್ದರು. ಹೆಂಡತಿಯನ್ನು ವಿಲಿಯಂ ಅವರೇ ಕೊಂದಿದ್ದಾರೆ ಎಂದು ಅವರಿಗೆ ಮರಣದಂಡನೆ ವಿಧಿಸಲಾಗಿತ್ತು. ಆದರೆ ಮೇಲ್ಮನವಿಯಲ್ಲಿ ಶಿಕ್ಷೆಯನ್ನು ರದ್ದುಗೊಳಿಸಲಾಯಿತು. ವಿಲಿಯಂ ಅವರೇ ಜೂಲಿಯಾರನ್ನು ಕೊಂದಿದ್ದಾರೆ ಎಂಬ ಸಂಶೋಧನೆಯಾಧಾರಿತ ವರದಿ ಸಂಡೇ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಈ ಕೊಲೆಯನ್ನು ವಿಲಿಯಂ ಮಾಡಿಲ್ಲ. ವಿಮಾ ಹಣವನ್ನು ವಿಲಿಯಂ ದುರುಪಯೋಗಪಡಿಸಿಕೊಂಡಿದ್ದರು. ಈ ಕಾರಣಕ್ಕಾಗಿ ಅವರ ಸಹೋದ್ಯೋಗಿ ಈ ಕೊಲೆ ಮಾಡಿದ್ದಾನೆ ಎಂಬ ಅಭಿಪ್ರಾಯವೂ ಇದೆ.
ಎಲೋಯಿಸ್ ವೆಹ್ಬೋರ್ನ್ ಎನ್ನುವ ಆಸ್ಟ್ರಿಯಾದ ಯುವತಿ ಪೂರ್ವ ಪೆಸಿಫಿಕ್ ಮಹಾಸಾಗರದ ಗ್ಯಾಲಪಗೋಸ್ ದ್ವೀಪಸಮೂಹದಲ್ಲಿರುವ ಫ್ಲೋರಿಯಾನಾ ಎಂಬ ದ್ವೀಪದಲ್ಲಿ 1934ರಲ್ಲಿ ಕಣ್ಮರೆಯಾದದ್ದು ಕುತೂಹಲ ಮೂಡಿಸುವ ಸಂಗತಿಯಾಗಿದೆ. ‘ಬ್ಯಾರೊನೆಸ್ ಆಫ್ ದಿ ಗ್ಯಾಲಪಗೋಸ್’ ಎಂಬ ವಿಶೇಷಣ ಇವಳಿಗಿತ್ತು. ಬ್ಯಾರೊನೆಸ್ ಎಂದರೆ ಜಹಗೀರುದಾರನ ಹೆಂಡತಿ ಎಂದರ್ಥ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಉನ್ನತ ಸ್ಥಾನದಲ್ಲಿದ್ದ ಯುವತಿ ಇವಳಾಗಿದ್ದಳು. 1933ರಲ್ಲಿ ತನ್ನ ಇಬ್ಬರು ಪ್ರೇಮಿಗಳಾದ ರಾಬರ್ಟ್ ಫಿಲಿಪ್ಸನ್ ಮತ್ತು ರುಡಾಲ್ಫ್ ಲೊರೆನ್ಜ್ ಅವರೊಂದಿಗೆ ಫ್ಲೋರಿಯಾನಾ ದ್ವೀಪಕ್ಕೆ ಆಗಮಿಸಿದಳು. ಜೊತೆಗೆ ಅನೇಕ ಸೇವಕರೂ ಇದ್ದರು. ದ್ವೀಪದಲ್ಲಿ ಮನೆಯನ್ನು ಸ್ಥಾಪಿಸಿದ ಈ ಮೂವರು ಮುಂದೆ ಐಷಾರಾಮಿ ಹೋಟೆಲೊಂದನ್ನು ನಿರ್ಮಿಸುವ ಯೋಜನೆ ಇಟ್ಟುಕೊಂಡಿದ್ದರು. ಫ್ಲೋರಿಯಾನಾದಲ್ಲಿದ್ದವರೆಲ್ಲರೂ ಸರಳ ಜೀವನ ನಡೆಸುತ್ತಿದ್ದರೆ, ಇವರದ್ದು ಐಷಾರಾಮಿ ಜೀವನವಾಗಿತ್ತು. 1934ರ ಮಾರ್ಚ್ 27ರಂದು ಎಲೋಯಿಸ್ ಮತ್ತು ಅವಳ ಪ್ರೇಮಿ ಫಿಲಿಪ್ಸನ್ ಕಣ್ಮರೆಯಾದರು. ಅವರಿಬ್ಬರು ಟಹೀಟ್‌ಗೆ ಹೋಗುವ ವಿಹಾರ ನೌಕೆಯಲ್ಲಿ ಪ್ರಯಾಣ ಕೈಗೊಂಡಿದ್ದರು ಎಂದು ಇವರ ಜೊತೆಗಿದ್ದ ರುಡಾಲ್ಫ್ ಹೇಳಿದ್ದ. ಆದರೆ ಆ ಸಮಯದಲ್ಲಿ ಅಂತಹ ವಿಹಾರ ನೌಕೆ ಗ್ಯಾಲಪಗೋಸ್‌ಗೆ ಭೇಟಿ ನೀಡಿರಲಿಲ್ಲ. ಹೀಗಿದ್ದಾಗಲೇ ರುಡಾಲ್ಫ್ ಅವಸರವಸರವಾಗಿ ಫ್ಲೋರಿಯಾನಾವನ್ನು ತೊರೆದು ದಕ್ಷಿಣ ಅಮೆರಿಕಾದ ಕಡೆಗೆ ಹೊರಟಿದ್ದ. ಇದಾಗಿ ತಿಂಗಳುಗಳ ನಂತರ ಎಲೋಯಿಸ್ ಮತ್ತು ಫಿಲಿಪ್ಸನ್ ಅವರ ಶವಗಳು ಪತ್ತೆಯಾದವು. ದ್ವೀಪದಲ್ಲಿ ಅವರ ದೋಣಿಯೂ ಕಾಣಿಸಿಕೊಂಡಿತು. ಇವರಿಬ್ಬರನ್ನು ರುಡಾಲ್ಫ್ ಅವರೇ ಕೊಂದಿರಬಹುದು. ಫ್ಲೋರಿಯಾನಾದಲ್ಲಿ ಬದುಕುತ್ತಿದ್ದ ಉಳಿದವರು ಕೊಲೆಯನ್ನು ಮುಚ್ಚಿಹಾಕಲು ಸಹಕಾರ ನೀಡಿರಬಹುದು ಎನ್ನುವುದಾಗಿ ಈ ಘಟನೆಯ ಕುರಿತು ಸಂಶೋಧಕರು ಊಹೆ ವ್ಯಕ್ತಪಡಿಸಿದ್ದಾರೆ. ತನ್ನ ಪ್ರೀತಿಪಾತ್ರರ ಜೊತೆಗೆ ಐಷಾರಾಮಿಯಾಗಿ ಬದುಕುವ ಕನಸು ಹೊತ್ತು ಬಂದ ಎಲೋಯಿಸ್ ಅನಿರೀಕ್ಷಿತ ಸಾವನ್ನು ಕಂಡದ್ದು ಮಾತ್ರ ನಿಜಕ್ಕೂ ದುಃಖದ ವಿಷಯವಾಗಿದೆ.
ಅಮೇರಿಕಾದ ಅಮೆಲಿಯಾ ಇಯರ್ ಹಾರ್ಟ್ ಎನ್ನುವವರು ವಿಮಾನದಲ್ಲಿ ಪ್ರಪಂಚವನ್ನು ಸುತ್ತಿದ ಮೊದಲ ಮಹಿಳೆ ಎಂಬ ಗುರುತಿಸುವಿಕೆ ಪಡೆಯುವ ಕನಸನ್ನು ಇಟ್ಟುಕೊಂಡಿದ್ದರು. ಏಕಾಂಗಿಯಾಗಿ ವಿಮಾನ ಹಾರಾಟ ನಡೆಸಿದ ಅನುಭವ ಅವರಿಗಿತ್ತು. 1932ರಲ್ಲಿ ಅಟ್ಲಾಂಟಿಕ್‌ನಾದ್ಯಂತ ಏಕಾಂಗಿಯಾಗಿ ವಿಮಾನ ಹಾರಿಸಿ, ಆ ಸಾಧನೆ ಮಾಡಿದ ಮೊದಲ ಮಹಿಳೆ ಎನಿಸಿಕೊಂಡಿದ್ದರು. 1935ರಲ್ಲಿ ಹೊನೊಲುಲು, ಹವಾಯಿ, ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್ ಮೊದಲಾದ ಕಡೆಗಳಲ್ಲಿಯೂ ಇದೇ ಮಾದರಿಯ ಸಾಧನೆಯನ್ನು ಪುನರಾವರ್ತಿಸಿದ್ದರು. ಇದೇ ಅನುಭವವನ್ನು ಆಧಾರವಾಗಿಟ್ಟುಕೊಂಡು 1937ರಲ್ಲಿ ಗೆಳೆಯ ನೂನನ್ ಜೊತೆಗೆ ವಿಮಾನದಲ್ಲಿ ವಿಶ್ವವನ್ನು ಸುತ್ತುವ ಪ್ರಯತ್ನಕ್ಕೆ ಮುಂದಾದರು. ಜುಲೈ 2ರಂದು ಪಪುವಾ ನ್ಯೂಗಿನಿಯ ಲೇ ಎನ್ನುವ ಪ್ರದೇಶದಿಂದ ಹೌಲ್ಯಾಂಡ್ ದ್ವೀಪಕ್ಕೆ ಹೊರಟಿದ್ದರು. ಸುಮಾರು 4,110 ಕಿಲೋಮೀಟರ್‌ಗಳ ಪ್ರಯಾಣ. ದ್ವೀಪವನ್ನು ಸಮೀಪಿಸಿದಾಗ ಅಮೇರಿಕಾದ ಕೋಸ್ಟ್ ಗಾರ್ಡ್ಗಳು ರೇಡಿಯೋ ಸಂಪರ್ಕದ ಮೂಲಕ ಲ್ಯಾಂಡಿಂಗ್‌ಗೆ ಅಗತ್ಯವಾದ ಮಾರ್ಗದರ್ಶನ ನೀಡಿದರು. ಆದರೆ ಪೆಸಿಫಿಕ್ ಸಾಗರದ ಮೇಲೆ ಚಲಿಸುತ್ತಿದ್ದ ವಿಮಾನ ಇದ್ದಕ್ಕಿದ್ದಂತೆಯೇ ಕಣ್ಮರೆಯಾಯಿತು. ಇಯರ್ ಹಾರ್ಟ್ ಅವರಿಗೆ ದ್ವೀಪವನ್ನು ಪತ್ತೆಹಚ್ಚಲು ಸಾಧ್ಯವಾಗದೇ ಇದ್ದರಿಂದ ದುರಂತ ನಡೆಯಿತು ಎನ್ನುವುದು ತಿಳಿದುಬಂದದ್ದು ಅವರ ಕೊನೆಯ ರೇಡಿಯೊ ಸಂದೇಶಗಳನ್ನು ಗಮನಿಸಿಕೊಂಡಾಗ. ಎರಡು ವಾರ ಹುಡುಕಾಡಿದರೂ ವಿಮಾನ ಪತ್ತೆಯಾಗಲೇ ಇಲ್ಲ. ಈಗಲೂ ಸಹ ಇಯರ್ ಹಾರ್ಟ್ ಅವರು ಕೊನೆಯ ಬಾರಿ ಪ್ರಯಾಣಿಸಿದ ವಿಮಾನವನ್ನು ಪತ್ತೆಹಚ್ಚುವ ಪ್ರಯತ್ನವನ್ನು ಕೆಲವು ಸಾಹಸಿಗಳು ನಡೆಸುತ್ತಲೇ ಇದ್ದಾರೆ.
1948ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದ ಆಡಿಲೇಡ್ ನಗರದ ದಕ್ಷಿಣಕ್ಕಿರುವ ಕಡಲತೀರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಅವರ ಜೇಬಿನಲ್ಲಿ ಕಾಗದದ ಚೂರೊಂದು ಪತ್ತೆಯಾಗಿದ್ದು, ಕಾಗದದಲ್ಲಿದ್ದ ಪದವನ್ನು ಆಧರಿಸಿಕೊಂಡು ಈ ಘಟನೆಯನ್ನು ‘ತಮಾಮ್ ಶುಡ್ ಪ್ರಕರಣ’ ಎಂದು ಕರೆಯಲಾಗುತ್ತದೆ. ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳಿರಲಿಲ್ಲ. ರೈಲು ಟಿಕೆಟ್, ಬಾಚಣಿಗೆ, ಸಿಗರೇಟ್ ಜೊತೆಗೆ ಒಂದು ಕಾಗದದ ಚೂರು. ಆ ಕಾಗದದಲ್ಲಿ ಬರೆಯಲಾಗಿದ್ದ ‘ತಮಾಮ್ ಶುಡ್’ ಎಂಬ ಪದ ಪರ್ಷಿಯನ್ ಭಾಷೆಯದ್ದು. ಇದರ ಅರ್ಥ ‘ದಿ ಎಂಡ್’ ಎಂದಾಗುತ್ತದೆ.
ಕವನ ಸಂಗ್ರಹವೊಂದರಿಂದ ಈ ಪದವಿದ್ದ ಕಾಗದವನ್ನು ಹರಿದು ತೆಗೆಯಲಾಗಿತ್ತು. ಆ ಕವನ ಸಂಗ್ರಹದಲ್ಲಿ ದೂರವಾಣಿ ಸಂಖ್ಯೆಯೂ ಇತ್ತು. ಯಾರ ಬಳಿಯಲ್ಲಿತ್ತು ಆ ಪುಸ್ತಕ ಎನ್ನುವುದನ್ನೂ ಸಹ ಪೋಲೀಸರು ಪತ್ತೆಹಚ್ಚಿದರು. ಆಸ್ಟ್ರೇಲಿಯಾದ ಮಹಿಳೆಯೊಬ್ಬಳಿಗೆ ಸೇರಿತ್ತು. ತೀರಿಕೊಂಡ ವ್ಯಕ್ತಿಯ ಬಗ್ಗೆ ತನಗೇನೂ ಗೊತ್ತಿಲ್ಲ ಎನ್ನುವುದು ಆ ಮಹಿಳೆಯ ಉತ್ತರವಾಗಿತ್ತು. ಆ ಪುಸ್ತಕ ಅವಳಲ್ಲಿ ಇದ್ದುದು ನಿಜ. ಆದರೆ ಅದನ್ನು ಬೇರೆಯವರಿಗೆ ಕೊಟ್ಟಿದ್ದಳು. ವ್ಯಕ್ತಿ ತೀರಿಕೊಂಡದ್ದು ಹೇಗೆ? ಆತ್ಮಹತ್ಯೆಯೇ? ಕೊಲೆಯೇ? ಕೊಲೆಯಾಗಿದ್ದರೆ ಮಾಡಿದವರು ಯಾರು? ಇವೆಲ್ಲಾ ಪ್ರಶ್ನೆಗಳಾಗಿಯೇ ಉಳಿದಿವೆ. ಆಸ್ಟ್ರೇಲಿಯಾದ ಗೂಢಚಾರಿಕೆ ವ್ಯವಸ್ಥೆಗೂ ಈ ನಿಗೂಢ ಸಾವಿಗೂ ಸಂಬಂಧವಿದೆ ಎಂಬ ಕಲ್ಪನೆಯೂ ಇದೆ. ಆದರೆ ಅದು ಸಾಬೀತಾಗಿಲ್ಲ.
ರಷ್ಯಾದ ಉತ್ತರದ ಉರಲ್ ಪರ್ವತಗಳಲ್ಲಿ 1959ರ ಫೆಬ್ರವರಿಯಲ್ಲಿ ಶೋಧಕರು ಖಾಲಿ ಖಾಲಿಯಾಗಿದ್ದ ತಾತ್ಕಾಲಿಕ ಶಿಬಿರವೊಂದನ್ನು ಗಮನಿಸುತ್ತಾರೆ. ಟೆಂಟ್ ಅರ್ಧ ಭಾಗ ಹರಿದುಹೋಗಿರುತ್ತದೆ. ದಿನಂಪ್ರತಿ ಬಳಸುವ ಕೆಲವು ವಸ್ತುಗಳು ಅದರ ಒಳಗಿದ್ದವು. ಟೆಂಟ್‌ನಿಂದ ಬರಿಗಾಲಿನಲ್ಲಿ ಅಥವಾ ಸಾಕ್ಸ್ ಧರಿಸಿಕೊಂಡು ಹಿಮದ ಕಡೆಗೆ ಸಾಗಿರುವ ಸುಳುಹನ್ನು ನೀಡಬಲ್ಲ ಹೆಜ್ಜೆಗುರುತುಗಳೂ ಕಾಣಿಸಿದವು. ಈ ಸುಳುಹಿನ ಆಧಾರದಲ್ಲಿ ಚಲಿಸಿದ ಶೋಧಕರಿಗೆ ಅಂತಿಮವಾಗಿ ಕಾಣಿಸಿದ್ದು ಒಂಭತ್ತು ಪಾದಯಾತ್ರಿಕರ ಮೃತದೇಹಗಳು. ಇವುಗಳಲ್ಲಿ ಇಬ್ಬರ ತಲೆಬುರುಡೆಗಳು ಒಡೆದುಹೋಗಿದ್ದವು. ಇಬ್ಬರ ಪಕ್ಕೆಲುಬುಗಳು ಮುರಿದಿದ್ದವು. ಒಬ್ಬಳ ನಾಲಗೆಯೇ ಕಳೆದುಹೋಗಿತ್ತು. ಈ ಒಂಭತ್ತೂ ಮಂದಿ ರಷ್ಯಾದ ಯೆಕಟೆರಿನ್‌ಬರ್ಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎನ್ನುವುದು ತಿಳಿದುಬಂತು. ಗುಂಪಿನ ನಾಯಕನಾಗಿದ್ದ ಇಗೊರ್ ಡಯಾಟೊವ್ ಅವರ ಹೆಸರಿನಿಂದ ಈ ಘಟನೆಯನ್ನು ‘ಡಯಾಟೊವ್ ಪಾಸ್ ಘಟನೆ’ ಎಂದು ಕರೆಯಲಾಗುತ್ತದೆ. ವಿಪರೀತ ಶೀತದಿಂದಾಗಿ ಇವರ ಸಾವು ಸಂಭವಿಸಿರಬಹುದೆಂಬ ಊಹೆಯಿದೆ. ವಿದ್ಯಾರ್ಥಿಗಳ ಗುಂಪಿನ ಮೇಲೆ ಕಾಡುಪ್ರಾಣಿಗಳು ಆಕ್ರಮಣ ನಡೆಸಿರಬಹುದು ಎನ್ನುವುದಾಗಿಯೂ ಕೆಲವರು ಅಂದಾಜಿಸಿದ್ದಾರೆ. ನಿಗೂಢ ಸದ್ದಿಗೆ ಹೆದರಿ ಗುಂಪಿನಲ್ಲಿದ್ದವರು ಚದುರಿಹೋಗಿ ಸಾವನ್ನಪ್ಪಿರಬಹುದು ಎನ್ನುವವರೂ ಇದ್ದಾರೆ. ಆದರೆ ಒಂಭತ್ತು ಮಂದಿಯ ಸಾವಿಗೆ ನೈಜ ಕಾರಣ ಏನು ಅನ್ನುವುದು ಇನ್ನೂ ಹೊರಬಂದಿಲ್ಲ.
‘ದಕ್ಷಿಣ ಧ್ರುವದಲ್ಲಿ ನಡೆದ ಮೊದಲ ಕೊಲೆ’ ಎಂದು ಇತಿಹಾಸದಲ್ಲಿ ಖ್ಯಾತಿವೆತ್ತ ವಿದ್ಯಮಾನವು ಆಸ್ಟ್ರೇಲಿಯಾದ ಖಗೋಳ ಭೌತಶಾಸ್ತ್ರಜ್ಞರೊಬ್ಬರ ಆಕಸ್ಮಿಕ ಸಾವಿಗೆ ಸಂಬಂಧಪಟ್ಟಿದೆ. ರಾಡ್ನಿ ಮಾರ್ಕ್ಸ್ ಎಂಬ ಖಗೋಳ ಭೌತಶಾಸ್ತ್ರಜ್ಞರು ಅಧ್ಯಯನದ ಉದ್ದೇಶದಿಂದ ದಕ್ಷಿಣ ಧ್ರುವ ತಲುಪಿದ್ದರು. ಆದರೆ ಅಮೇರಿಕನ್ ವೈಜ್ಞಾನಿಕ ಸಂಶೋಧನಾ ನೆಲೆಯಾದ ಅಮುಂಡ್ಸೆನ್-ಸ್ಕಾಟ್ ನಿಲ್ದಾಣದಲ್ಲಿ 2000ನೇ ಇಸವಿಯ ಮೇ 12ರಂದು ಹಠಾತ್ತಾಗಿ ನಿಧನರಾದರು. ಚಳಿಗಾಲದ ಸಮಯದಲ್ಲಿ ವಿಮಾನಗಳು ದಕ್ಷಿಣ ಧ್ರುವಕ್ಕೆ ಹೋಗುವುದು ಸಾಧ್ಯವಿರಲಿಲ್ಲ. ಆದ್ದರಿಂದ ಮಳೆಗಾಲ ಬರುವವರೆಗೂ ಅವರ ದೇಹವನ್ನು ಫ್ರಿಜ್‌ನಲ್ಲಿ ಇರಿಸಿ, ನಂತರ ಅವರ ದೇಶಕ್ಕೆ ಹಿಂದಿರುಗಿಸಲಾಯಿತು. ಮೆಥನಾಲ್ ವಿಷ ಸೇವನೆಯಿಂದ ಅವರು ಮೃತಪಟ್ಟಿದ್ದಾರೆ ಎನ್ನುವುದು ಶವಪರೀಕ್ಷೆಯ ಮೂಲಕ ತಿಳಿದುಬಂತು. ಮಾರ್ಕ್ಸ್ ಅವರು ತೀರಿಕೊಂಡ ಸಮಯದಲ್ಲಿ ಅವರ ಜೊತೆಗೆ ನಲುವತ್ತೊಂಬತ್ತು ಜನರಿದ್ದರು ಎಂಬ ವಿಚಾರ ತನಿಖೆಯ ನಂತರ ತಿಳಿದುಬಂತು. ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳುವುದಕ್ಕೆ ನ್ಯೂಜಿಲೆಂಡ್ ಪೊಲೀಸರು ಸಿದ್ಧರಿರಲಿಲ್ಲ. ಅದು ಸಾಧ್ಯವೇ ಇಲ್ಲ ಎನ್ನುವುದು ಅವರ ವಾದ. ಮಾರ್ಕ್ಸ್ ಅವರ ನಿಗೂಢ ಸಾವು ಇಂದಿಗೂ ಸಹ ಬಗೆಹರಿಯಲಾರದ ರಹಸ್ಯವಾಗಿಯೇ ಉಳಿದುಕೊಂಡಿದೆ.
*****
ಸಾವಿನ ಕುರಿತಾದ ಭಯ ಎಲ್ಲರಲ್ಲಿಯೂ ಇರುತ್ತದೆ. ಆದರೆ ಈ ರೀತಿಯ ಭಯ ಗರಿಷ್ಟ ಮಟ್ಟವನ್ನು ತಲುಪಿದಾಗ ಅದು ಅಸ್ವಸ್ಥತೆಯ ರೂಪವನ್ನು ಪಡೆದುಕೊಳ್ಳುತ್ತದೆ. ಸಾವಿನ ಕುರಿತಾದ ತೀವ್ರವಾದ ಭಯವನ್ನು ‘ಥಾನಟೋಫೋಬಿಯಾ’ ಎಂದು ಕರೆಯಲಾಗುತ್ತದೆ. ‘ಥಾನಟೋಫೋಬಿಯಾ’ ಪದವು ಗ್ರೀಕ್ ಮೂಲದಿಂದ ಬಂದಿದೆ. ಗ್ರೀಕ್ ಭಾಷೆಯಲ್ಲಿ ‘ಥಾನಾಟೋಸ್’ ಎಂದರೆ ಸಾವು ಎಂದರ್ಥ. ‘ಫೋಬೋಸ್’ ಪದವು ಭಯವನ್ನು ಸೂಚಿಸುತ್ತದೆ. ಸಾವಿನ ಭಯ ಎನ್ನುವುದು ಈ ಪದದ ಸಂಪೂರ್ಣ ಅರ್ಥವಾಗಿದೆ. ಈ ಮಾದರಿಯ ಅಸ್ವಸ್ಥತೆ ಹೊಂದಿದವರು ಸಾವಿನ ಬಗ್ಗೆ ಅಥವಾ ಸಾಯುವ ಪ್ರಕ್ರಿಯೆಯ ಬಗ್ಗೆ ಅಗಾಧವಾದ ಆತಂಕವನ್ನು ಹೊಂದಿರುತ್ತಾರೆ. ಕೆಲವು ವೈದ್ಯರು ಇದನ್ನು ಒಂದು ಪ್ರತ್ಯೇಕ ಅಸ್ವಸ್ಥತೆ ಎಂದು ಗುರುತಿಸಿಲ್ಲ. ಇದು ಇತರ ಖಿನ್ನತೆ ಅಥವಾ ಆತಂಕದ ಮನಃಸ್ಥಿತಿಯ ಜೊತೆಗೆ ಸಂಬಂಧ ಇಟ್ಟುಕೊಂಡಿದೆ ಎನ್ನುವುದು ಅವರ ಅಭಿಪ್ರಾಯ. ತಮ್ಮವರನ್ನು ಅಗಲಬೇಕಾದ ಅನಿವಾರ್ಯತೆ, ಸಂಪಾದಿಸಿದ್ದನ್ನು ತೊರೆದು ಹೋಗಬೇಕಾದ ಸ್ಥಿತಿ ಮೊದಲಾದ ಯೋಚನೆಗಳು ಸಾವಿನ ಕುರಿತಾದ ಆತಂಕವನ್ನು ಮೂಡಿಸುತ್ತವೆ. ಸಾಮಾಜಿಕ ಸ್ಥಿತಿಗತಿಗಳು ಹಾಗೂ ಧಾರ್ಮಿಕ ನಂಬಿಕೆಗಳೂ ಸಹ ಸಾವಿನ ಭಯವನ್ನು ತೀವ್ರಗೊಳಿಸಬಹುದು.
ಈ ಭಯವನ್ನು ಹೊಂದಿರುವವರು ತೀವ್ರವಾದ ಅನಾರೋಗ್ಯ, ಅಪಾಯಕಾರಿ ವಸ್ತುಗಳು- ಜನರು ಹೀಗೆ ಸಾವಿಗೆ ಕಾರಣವಾಗಬಹುದಾದ ವಿಷಯಗಳ ಕುರಿತಾಗಿ ಹೆಚ್ಚು ಗಮನ ಹರಿಸುತ್ತಿರುತ್ತಾರೆ. ಇತರರಿಂದ, ವಿಶೇಷವಾಗಿ ಅಪರಿಚಿತರಿಂದ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ನಿರ್ದಿಷ್ಟ ಸನ್ನಿವೇಶಗಳ ಬಗ್ಗೆ ಭಯ ಹೊಂದಿರುತ್ತಾರೆ. ಯಾರೋ ತೀರಿಕೊಂಡಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣ ಆತಂಕಕ್ಕೆ ಒಳಗಾಗುತ್ತಾರೆ. ಮೈ ನಡುಗುವುದು, ಬೆವರುವುದು, ಹೃದಯ ಜೋರಾಗಿ ಬಡಿದುಕೊಳ್ಳುವುದೂ ನಡೆಯಬಹುದು. ಸಾವಿನ ಬಗ್ಗೆ ಯೋಚಿಸುವ ಸಂದರ್ಭಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಸಾವಿನ ಬಗ್ಗೆ ಯೋಚಿಸುವಾಗ ವಾಕರಿಕೆ ಅಥವಾ ಹೊಟ್ಟೆನೋವಿನ ಅನುಭವವೂ ಆಗಬಹುದು. ದೀರ್ಘಕಾಲದವರೆಗೆ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕವನ್ನೇ ಇಟ್ಟುಕೊಳ್ಳದೇ ಇರಬಹುದು. ಸಾಮಾನ್ಯವಾಗಿ ಈ ರೀತಿಯ ಭಾವನೆಗಳು ಆರು ತಿಂಗಳುಗಳಿಗಿಂತ ಹೆಚ್ಚು ಕಾಲ ಮುಂದುವರಿಯುತ್ತವೆ. ಈ ರೋಗಲಕ್ಷಣಗಳು ವ್ಯಕ್ತಿಯ ಜೀವಿತಾವಧಿಯಲ್ಲಿ ಅನೇಕ ಸಲ ಕಾಣಿಸಿಕೊಳ್ಳಬಹುದು; ಹೊರಟುಹೋಗಬಹುದು. ಥಾನಟೋಫೋಬಿಯಾಕ್ಕೆ ಅದರದ್ದೇ ಆದ ಕೆಲವು ಕಾರಣಗಳಿವೆ. ಹಿಂದೆ ನಡೆದ ಕೆಲವು ಘಟನೆಗಳು, ಆದ ಅನುಭವಗಳು ವ್ಯಕ್ತಿಯಲ್ಲಿ ಸಾವಿನ ಭಯವನ್ನು ಪ್ರಚೋದಿಸಬಹುದು. ಆ ಘಟನೆ ನೆನಪಿಲ್ಲದೇ ಹೋದರೂ ಅದು ಉಂಟುಮಾಡಿದ ಆತಂಕ ಸ್ಮೃತಿಯಲ್ಲಿ ಉಳಿದುಬಿಡುವುದರಿಂದ ಹೀಗಾಗಬಹುದು. ತೀವ್ರವಾದ ಅನಾರೋಗ್ಯ ಉಂಟಾದಾಗ ಥಾನಟೋಫೋಬಿಯಾ ಕಾಡಬಹುದು.
ಸಾವಿನ ಆತಂಕದ ಅನುಭವವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಪ್ರೀತಿಪಾತ್ರರ ಸಾವು ಮತ್ತು ಅವರ ಸಾವಿನ ಪರಿಣಾಮಗಳ ಬಗ್ಗೆ ಭಯಪಡುವವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಎನ್ನುವುದು 2012ರ ಅಧ್ಯಯನದಲ್ಲಿ ಸಾಬೀತಾಗಿದೆ. 2014ರಲ್ಲಿ ನಡೆದ ಅಧ್ಯಯನವು ಮಾನಸಿಕ ಆರೋಗ್ಯ ಸರಿಯಿಲ್ಲದೇ ಇರುವುದು ಥಾನಟೋಫೋಬಿಯಾಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುವುದನ್ನು ತಿಳಿಸಿಕೊಟ್ಟಿದೆ. ಜೊತೆಗೆ, ಹೆಚ್ಚು ಸ್ವಾಭಿಮಾನ ಮತ್ತು ಉತ್ತಮ ಆರೋಗ್ಯದೊಂದಿಗೆ ಸಾರ್ಥಕ ಜೀವನವನ್ನು ನಡೆಸುತ್ತಿದ್ದೇವೆ ಎಂಬ ನಂಬಿಕೆ ಹೊಂದಿರುವವರಿಗೆ ಸಾವಿನ ಭಯ ಇತರರಿಗಿಂತ ಕಡಿಮೆ ಎನ್ನುವುದು ತಿಳಿದುಬಂದಿದೆ. 2017ರ ಅಧ್ಯಯನವನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ, ವಯಸ್ಸಾದವರು ಸಾಯುವ ಪ್ರಕ್ರಿಯೆಯ ಬಗ್ಗೆ ಹೆಚ್ಚು ಭಯವನ್ನು ಹೊಂದಿರುತ್ತಾರೆ. ಕಡಿಮೆ ವಯಸ್ಸಿನವರಲ್ಲಿ ಈ ರೀತಿಯ ಆತಂಕ ಕಡಿಮೆ.
ಥಾನಟೋಫೋಬಿಯಾ ಹೊಂದಿರುವವರು ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎನ್ನುವುದು ವೈದ್ಯಕೀಯ ಪರಿಣತರ ಅಭಿಪ್ರಾಯವಾಗಿದೆ. ಈ ಮಾದರಿಯ ಚಿಕಿತ್ಸೆಯು ಅರಿವಿನ ವರ್ತನೆಯ ಚಿಕಿತ್ಸೆ, ಔಷಧಿಗಳು, ಮಾನಸಿಕ ಚಿಕಿತ್ಸೆ ಇವುಗಳನ್ನು ಒಳಗೊಂಡಿರುತ್ತವೆ. ಆತಂಕವು ಸಾಮಾನ್ಯ ಮಟ್ಟದಲ್ಲಿದ್ದರೆ ವೈದ್ಯರು ಖಿನ್ನತೆ ಹೋಗಲಾಡಿಸುವ ಔಷಧಿಯ ಮೂಲಕ ಚಿಕಿತ್ಸೆ ನೀಡುವುದೂ ಇದೆ. ಒತ್ತಡ ವಿಪರೀತವಾಗಿದ್ದಾಗ ವಿಶ್ರಾಂತಿ ತೆಗೆದುಕೊಳ್ಳುವುದು, ಪ್ರಾಣಾಯಾಮ ಮಾಡುವುದು, ಧ್ಯಾನ ಇವುಗಳೂ ಕೂಡಾ ಈ ಫೋಬಿಯಾವನ್ನು ನಿವಾರಿಸಲು ನೆರವಾಗಬಹುದು. ಇಳಿವಯಸ್ಸಿನವರಲ್ಲಿ ಸಾವಿನ ಕುರಿತಾದ ಭಯ ಸಹಜವಾದದ್ದಾದರೂ ಈ ರೀತಿಯ ಭಯ ನಿರಂತರವಾಗಿ ಆರು ತಿಂಗಳುಗಳಿಗಿಂತ ಹೆಚ್ಚು ಸಮಯ ಮುಂದುವರಿದರೆ, ತೀವ್ರಗೊಳ್ಳುತ್ತಲೇ ಹೋದರೆ, ದಿನನಿತ್ಯದ ಜೀವನಕ್ಕೆ ಅಡ್ಡಿಯುಂಟುಮಾಡಿದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.