ಕಣ್ಣಿಂದ ಕೆಲವೇ ಕಾಲದಲ್ಲಿ ಮರೆಯಾಗಲಿರುವ ಬಹಳಷ್ಟು ಸಂಗತಿಗಳು ಅಪರಿಮಿತ ಸೌಂದರ್ಯದಿಂದ ಕೂಡಿರುತ್ತವೆ ಎನ್ನುವುದು ಬಲ್ಲವರು ಹೇಳುವ ಮಾತು. ಕಳೆದ ಹದಿನೈದು ಮಾಸಗಳಿಂದ ವಾಸಿಸುತ್ತಿರುವ ಈ ಲಕ್ಷದ್ವೀಪ ಸಮೂಹದ ಕಡಲು ಮತ್ತು ಆಕಾಶದ ಅನೂಹ್ಯ ನೀಲ ನಿಚ್ಛಳ ಬಣ್ಣವನ್ನು ನೋಡುತ್ತಾ ಇದ್ದರೆ ನನಗೂ ಹಾಗೇ ಅನಿಸುತ್ತದೆ. ಹಾಗಾಗಿ ಇಲ್ಲಿ ಇರುವ ತನಕ ಒಂದು ನಿಮಿಷವನ್ನೂ ವ್ಯರ್ಥ ಮಾಡಬಾರದೆಂಬ ಹಠತೊಟ್ಟಂತಿರುವ ಆಸೆಬುರುಕನಂತೆ ಹೊತ್ತುಗೊತ್ತಿಲ್ಲದೆ ಇಲ್ಲೆಲ್ಲ ಸುತ್ತುತ್ತಲೇ ಇರುತ್ತೇನೆ. ಹಾಗೆ ಸುತ್ತುವಾಗಲೆಲ್ಲ ನಿಸರ್ಗದ ದಿವ್ಯ ಸೌಂದರ್ಯದ ಅನುಭೂತಿಯ ಜೊತೆಜೊತೆಗೇ ಕೆಲವು ಮನುಷ್ಯ ನಿರ್ಮಿತ ತಮಾಷೆಗಳೂ ಅನುಭವಕ್ಕೆ ಬರುತ್ತಲೇ ಇರುತ್ತವೆ.
ಅಬ್ದುಲ್ ರಶೀದ್ ಬರೆದ ಲಕ್ಷದ್ವೀಪ ಕಥಾನಕದ ಮೊದಲ ಕಂತು

ಪರ್ವತ ಶ್ರೇಣಿಗಳಿರುವುದು ಭೂಮಿಯ ಮೇಲೆ ಮಾತ್ರ ಎಂದು ನೀವೇನಾದರೂ ತಿಳಿದುಕೊಂಡಿದ್ದರೆ ಅದು ಬಹಳ ದೊಡ್ಡ ತಪ್ಪು. ಕಡಲಿನ ಆಳಾತಿಆಳದಲ್ಲೂ ಸಾವಿರ ಮೈಲುಗಳುದ್ದದ ಪರ್ವತ ಶ್ರೇಣಿಗಳು ನೀರೊಳಗೆ ಉದ್ದಕ್ಕೆ ಮಲಗಿಕೊಂಡಿರುತ್ತವೆ. ಸಹಸ್ರ ಲಕ್ಷ ವರ್ಷಗಳ ಹಿಂದೆ ಖಂಡಾಂತರಗಳ ಪಲ್ಲಟದ ಕಾಲದಲ್ಲಿ ಹಿಂದೂ ಮಹಾಸಾಗರದಿಂದ ಅರಬೀ ಕಡಲಿನ ಮೂಲಕ ಮಡಗಾಸ್ಕರಿನ ಆಚೆಗೂ ಉಂಟಾದ ಪರ್ವತಶ್ರೇಣಿಯೂ ಇಂತಹ ಸಾಗರ ಪರ್ವತಶ್ರೇಣಿಗಳಲ್ಲಿ ಒಂದು. ಆ ಪರ್ವತ ಶ್ರೇಣಿಯ ಒಂದು ಶಿಖರ ಉಗುಳಿದ ಲಾವಾದಿಂದ ಉಂಟಾದ ಹವಳಗಳ ದಿಬ್ಬವೇ ಲಕ್ಷದ್ವೀಪ ಸಮೂಹ ಅನ್ನುತ್ತಾರೆ ಸಾಗರ ವಿಜ್ಞಾನಿಗಳು. ಯಾವುದೋ ಒಂದು ಅನೂಹ್ಯ ಪುರಾತನ ಕಾಲದಲ್ಲಿ ಸಮುದ್ರದ ನೀರು ಉಕ್ಕೇರಿ ಈ ಹವಳ ದಿಬ್ಬಗಳು ಬಹುತೇಕ ಮುಳುಗಿ ಉಳಿದ ಕೆಲವು ತುದಿಗಳು ಮಾತ್ರ ದ್ವೀಪಗಳ ಹಾಗೆ ಉಳಿದು ಸುಮಾರು ಸಾವಿರ ವರ್ಷಗಳ ಹಿಂದೆ ಮನುಷ್ಯರೂ ಇಲ್ಲಿ ಬಂದರು ಎನ್ನುತ್ತಾರೆ ಮಾನವ ಸಮಾಜ ಶಾಸ್ತ್ರಜ್ಞರು. ಇದೀಗ ಬಹಳಷ್ಟು ಚಾಲ್ತಿಯಲ್ಲಿರುವ ಜಾಗತಿಕ ತಾಪಮಾನ ಏರಿಕೆಯ ಕುರಿತ ವರದಿಗಳ ಪ್ರಕಾರ ಇನ್ನು ಕೆಲವೇ ವರ್ಷಗಳಲ್ಲಿ ಭೂಶಿರಗಳ ಮಂಜುಗಲ್ಲುಗಳು ಕರಗಿ ಸಮುದ್ರಕ್ಕೆ ಹರಿದು ಸಮುದ್ರವು ಇನ್ನೂ ಉಕ್ಕೇರಿ ಈಗ ಇರುವ ಈ ದ್ವೀಪಗಳೂ ಕಣ್ಣಿಂದ ಮರೆಯಾಗುವುದಂತೆ.

ಕಣ್ಣಿಂದ ಕೆಲವೇ ಕಾಲದಲ್ಲಿ ಮರೆಯಾಗಲಿರುವ ಬಹಳಷ್ಟು ಸಂಗತಿಗಳು ಅಪರಿಮಿತ ಸೌಂದರ್ಯದಿಂದ ಕೂಡಿರುತ್ತವೆ ಎನ್ನುವುದು ಬಲ್ಲವರು ಹೇಳುವ ಮಾತು. ಕಳೆದ ಹದಿನೈದು ಮಾಸಗಳಿಂದ ವಾಸಿಸುತ್ತಿರುವ ಈ ಲಕ್ಷದ್ವೀಪ ಸಮೂಹದ ಕಡಲು ಮತ್ತು ಆಕಾಶದ ಅನೂಹ್ಯ ನೀಲ ನಿಚ್ಛಳ ಬಣ್ಣವನ್ನು ನೋಡುತ್ತಾ ಇದ್ದರೆ ನನಗೂ ಹಾಗೇ ಅನಿಸುತ್ತದೆ. ಹಾಗಾಗಿ ಇಲ್ಲಿ ಇರುವ ತನಕ ಒಂದು ನಿಮಿಷವನ್ನೂ ವ್ಯರ್ಥ ಮಾಡಬಾರದೆಂಬ ಹಠತೊಟ್ಟಂತಿರುವ ಆಸೆಬುರುಕನಂತೆ ಹೊತ್ತುಗೊತ್ತಿಲ್ಲದೆ ಇಲ್ಲೆಲ್ಲ ಸುತ್ತುತ್ತಲೇ ಇರುತ್ತೇನೆ. ಹಾಗೆ ಸುತ್ತುವಾಗಲೆಲ್ಲ ನಿಸರ್ಗದ ದಿವ್ಯ ಸೌಂದರ್ಯದ ಅನುಭೂತಿಯ ಜೊತೆಜೊತೆಗೇ ಕೆಲವು ಮನುಷ್ಯ ನಿರ್ಮಿತ ತಮಾಷೆಗಳೂ ಅನುಭವಕ್ಕೆ ಬರುತ್ತಲೇ ಇರುತ್ತವೆ. ‘ದ್ವೀಪವೊಂದನ್ನು ಹೊಕ್ಕು ವಾಪಾಸು ಬಂದ ಮೇಲೆ ನಿನ್ನ ಮನಸಲ್ಲಿ ಉಳಿಯುವುದು ನಿಸರ್ಗದ ಸೌಂದರ್ಯವೋ ಅಥವಾ ಮನುಷ್ಯನ ಫಜೀತಿಗಳೋ?’ ಎಂದು ಯಾರಾದರೂ ಕೇಳಿದರೆ ಕರಾರುವಕ್ಕಾಗಿ ಹೀಗೇ ಎಂದು ಉತ್ತರಿಸುವುದೂ ಕಷ್ಟ. ಆದರೆ, ‘ಇವೆರಡರಲ್ಲಿ ಅನುಭವಿಸಲಿಕ್ಕೆ ಮಜಾ ಸಿಗುವುದು ಯಾವುದರಲ್ಲಿ ಹೆಚ್ಚು?’ ಎಂದು ಯಾರಾದರೂ ಕೇಳಿದರೆ ಮನುಷ್ಯನ ಫಜೀತಿಗಳೇ ಚಂದ ಎಂದು ಮುಲಾಜಿಲ್ಲದೆ ಉತ್ತರಿಸಬಹುದು. ಏಕೆಂದರೆ ಅಪರಿಮಿತ ಸೌಂದರ್ಯ ಎಂಬುದು ಅಪರಿಮಿತ ದುಃಖದ ಹಾಗೆ ಮನುಷ್ಯನನ್ನು ಒಂಟಿ ಮತ್ತು ಅಸಹಾಯಕನನ್ನಾಗಿ ಮಾಡುತ್ತದೆ. ಆದರೆ ಮನುಷ್ಯನ ಜೀವಿತ ಕಥೆಗಳು ಯಾವಾಗಲೂ ಸಣ್ಣಪುಟ್ಟ ತಮಾಷೆಗಳಿಂದ ಕೂಡಿರುವುದರಿಂದ ಕೇಳಲು ಮತ್ತು ಅನುಭವಿಸಲು ಚೇತೋಹಾರಿಯಾಗಿರುತ್ತದೆ.

ಇಂತಹ ಚೇತೋಹಾರಿ ಮನುಷ್ಯ ಸಂಗತಿಗಳನ್ನು ನಾನು ಈಗ ಇರುವ ಲಕ್ಷದ್ವೀಪ ಸಮೂಹದಲ್ಲಿ ಮಾತ್ರವಲ್ಲ, ಹಿಂದೆ ಇದ್ದ ಮಂಗಳೂರು, ಮೇಘಾಲಯ, ಮೈಸೂರು, ಗುಲ್ಬರ್ಗ, ಕೊಡಗು, ಕಾಶ್ಮೀರ, ಲಡಾಖ್ ಗಳಲ್ಲೂ ಮನಸಾರೆ ಅನುಭವಿಸಿದ್ದೇನೆ ಮತ್ತು ಆ ಕುರಿತು ಬರೆದೂ ಇದ್ದೇನೆ. ನಾನು ಅನುಭವಿಸಿದ ಇಂತಹ ಸಂಗತಿಗಳು ಕೆಲವೊಮ್ಮೆ ಎಷ್ಟು ಅಸಾಧಾರಣವೂ, ಅಸಂಗತವೂ ಆಗಿದ್ದವೆಂದರೆ ಇವುಗಳ ಕುರಿತು ಬರೆದಾಗ ಕೆಲವು ಓದುಗರು ಇವೇನು ನಿಜವಾಗಿ ಘಟಿಸಿದ ಸಂಗತಿಗಳೋ ಅಥವಾ ಲೇಖಕನ ಕಲ್ಪನಾಶೀಲತೆಯ ಪರಿಣಾಮಗಳೋ ಎಂದು ಸಂದೇಹ ಪಟ್ಟಿರುವುದೂ ಇದೆ. ಹಾಗಾಗಿ ಕಳೆದ ಹತ್ತು ಹನ್ನೆರೆಡು ವರ್ಷಗಳಿಂದ ನಾನು ಹೋಗುವಲ್ಲೆಲ್ಲ ಕ್ಯಾಮರಾವನ್ನು ಹೊತ್ತುಕೊಂಡು ಹೋಗುವುದನ್ನೂ ರೂಢಿಸಿಕೊಂಡಿದ್ದೇನೆ.

ಈ ರೂಢಿ ಎರಡು ಕಾರಣಗಳಿಗಾಗಿ ಬಹಳ ಪ್ರಯೋಜನಕಾರಿಯಾಗಿದೆ. ಒಂದು ಅನುಮಾನ ಸ್ವಭಾವದ ಓದುಗರ ಸಂಶಯ ನಿವಾರಣೆಗಾಗಿ. ಇನ್ನೊಂದು ಲೇಖಕನಾದ ನನ್ನ ನೆನಪಿನ ಉದ್ದೇಶಗಳಿಗಾಗಿ. ಹಿಂದಿನ ಹಾಗೆ ಬರೆಯಲು ನೆನಪುಗಳನ್ನೇ ನಂಬಿಕೊಂಡಿರಬೇಕಿಲ್ಲ. ತೆಗೆದ ಫೋಟೋಗಳನ್ನು, ವಿಡಿಯೋಗಳನ್ನೂ ಬಿಚ್ಚಿ ಎದುರಿಗೆ ಹರವಿಕೊಂಡರಾಯಿತು. ಆ ಹೊತ್ತಲ್ಲಿ ಅನುಭವಿಸಿದ ಎಲ್ಲವೂ ಸದ್ದು, ಚಿತ್ರ, ಮಾತು, ಚಹರೆ, ಸ್ವಭಾವಗಳ ಸಮೇತ ಇನ್ನೊಮ್ಮೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ ಈ ಕ್ಯಾಮರಾ ಎಂಬುದು ನನ್ನ ಇನ್ನೊಂದು ಅಹಮ್ಮಿನಂತೆಯೂ ಕೆಲಸ ಮಾಡುತ್ತದೆ.

ಕಳೆದ ಕಾರ್ತಿಕ ಅಮವಾಸ್ಯೆಯಂದು ಹೀಗೇ ಆಯಿತು. ಕಾರ್ತಿಕ ಅಮವಾಸ್ಯೆಯನ್ನು ಇಲ್ಲಿ ಬಿರ್ಸಂ ಎಂದು ಕರೆಯುತ್ತಾರೆ. ಈ ಅಮವಾಸ್ಯೆಯ ಸುತ್ತಮುತ್ತ ಹತ್ತು ದಿನಗಳು ಅಂದರೆ ಇಲ್ಲಿ ಸ್ವಲ್ಪ ಭಯ. ಯಾಕೆಂದರೆ ಈ ದಿನಗಳಲ್ಲಿ ಕಡಲಲ್ಲಿ ಹಠಾತ್ ಅಲೆಗಳು ಎದ್ದು, ತೂಫಾನು ಬೀಸಿ, ಕಡಲ ನೀರು ನೆಲಕ್ಕೂ ನುಗ್ಗಿ, ಗುಡಿಸಲೊಳಗೆ ಇರುವ ರುಬ್ಬುಕಲ್ಲೂ ಗಾಳಿಯಲ್ಲಿ ಹಾರಿ ಹೋಗುವ ಅನಾಹುತದ ದಿನಗಳು ಎಂಬುದು ಹಿರಿಯರ ಅನುಭವದ ಮಾತು. ಹಾಗಾಗಿ ಈ ದಿನಗಳಲ್ಲಿ ಕಡಲ ಪಯಣವನ್ನೂ ಮೀನುಗಾರಿಕೆಯನ್ನೂ ಕೊಂಚ ಎಚ್ಚರಿಕೆಯಿಂದಲೇ ಮಾಡುತ್ತಾರೆ. ಆದರೆ ಕಾರ್ತಿಕ ಅಮವಾಸ್ಯೆಯ ಇನ್ನೊಂದು ವಿಶೇಷ ಅಂದರೆ ಈ ಅಮವಾಸ್ಯೆಯ ದಿನದಂದು ಕಡಲು ಸಂಪೂರ್ಣವಾಗಿ ಇಳಿಯುತ್ತದೆ. ಎಷ್ಟು ಇಳಿಯುತ್ತದೆ ಎಂದರೆ ಹತ್ತಿರವಿರುವ ಒಂದು ದ್ವೀಪದಿಂದ ಇನ್ನೊಂದು ದ್ವೀಪದ ತನಕ ನಡೆದುಕೊಂಡೇ ಹೋಗಬಹುದು. ಕಡಲ ಮೈ ಬರಿದಾಗಿ ಒದ್ದೆ ಮರಳಿನ ಮೇಲೆ ಗಂಟೆಗಟ್ಟಲೆ ನಡೆದುಕೊಂಡೇ ಇರಬಹುದು.

ಇಂತಹ ಕಡಲ ನಡೆತಕ್ಕೆ ಹೇಳಿ ಮಾಡಿಸಿದಂತಿರುವ ದ್ವೀಪವೊಂದಕ್ಕೆ ಅಮವಾಸ್ಯೆಯ ಮಧ್ಯಾಹ್ನ ಕ್ಯಾಮರಾ ಹೊತ್ತುಕೊಂಡು ಅದು ಹೇಗೋ ತಲುಪಿಬಿಟ್ಟಿದ್ದೆ. ಹೆಚ್ಚು ಜನವಸತಿಯಿಲ್ಲದ ಮೂರು ನಾಲ್ಕೋ ಗುಡಿಸಲುಗಳಿರುವ ದ್ವೀಪ ಅದು. ಆ ದ್ವೀಪಕ್ಕೆ ತಾಗಿಕೊಂಡಂತೆಯೇ ಇನ್ನೆರೆಡು ನಿರ್ಜನ ದ್ವೀಪಗಳು. ರೆವಿನ್ಯೂ ದಾಖಲೆಗಳ ಪ್ರಕಾರ ಈ ಎರಡು ದ್ವೀಪಗಳ ನಡುವೆ ಇನ್ನೂ ಒಂದು ಪುಟ್ಟ ನಿರ್ಜನ ದ್ವೀಪವಿತ್ತು. ಆದರೆ ಕೆಲವು ದಶಕಗಳ ಹಿಂದೆ ಕಡಲು ಉಕ್ಕಿದಾಗ ಈ ದ್ವೀಪ ನೀರೊಳಕ್ಕೆ ಮಾಯವಾಯಿತು. ಬ್ರಿಟಿಷ್ ಇತಿಹಾಸಗಳ ಪ್ರಕಾರ ಈ ದ್ವೀಪ ಸಮೂಹಗಳನ್ನು ಒಂದು ಕಾಲದಲ್ಲಿ ಕಣ್ಣಾನೂರಿನ ಮುಸ್ಲಿಂ ಮಹಾರಾಣಿ ಆಳುತ್ತಿದ್ದಳು. ಆನಂತರ ಇದು ಪೋರ್ಚುಗೀಸರ ದಾಳಿಗೆ ತುತ್ತಾಯಿತು. ಆನಂತರ ಟೀಪುವಿನ ಮಣೆಗಾರರ, ಬ್ರಿಟಿಷರ ಅಮೀನರ ಆಡಳಿತಕ್ಕೆ ಬಂತು.

ಭಾರತಕ್ಕೆ ಸ್ವತಂತ್ರ ಬಂದಾಗ ಇವು ನಮ್ಮ ದೇಶದ ಅಂಗಗಳಾದವು. ನಮ್ಮ ದೇಶದ ಅಂಗ ಎಂದು ಸೂಚಿಸಲು ಈ ದ್ವೀಪಗಳ ನಟ್ಟ ನಡುವೆ ಭಾರತದ ಸಾರ್ವಭೌಮತ್ವದ ಲಾಂಛನಗಳನ್ನು ಹೊತ್ತ ಗುರುತಿನ ಸ್ಥಂಭವೊಂದಿರುತ್ತದೆ. ಇದು ಅಶೋಕ ಚಕ್ರ ಮತ್ತು ಸಿಂಹದ ಮುಖವನ್ನು ಹೊಂದಿರುವ ರಾಷ್ಟ್ರೀಯ ಲಾಂಛನ. ದ್ವೀಪವಾಸಿಗಳು ಈ ಲಾಂಛನವನ್ನು ಬಹಳ ಗೌರವದಿಂದ ನೋಡಿಕೊಳ್ಳುತ್ತಾರೆ. ನಾವು ಸಣ್ಣದಿರುವಾಗ ನಮ್ಮ ಶಾಲೆಯ ದ್ವಜಸ್ಥಂಭವನ್ನು ಪ್ರೀತಿಯಿಂದ ನೋಡುತ್ತಿದ್ದ ಹಾಗೆ. ಭಾರತ ಭೂಖಂಡದಿಂದ ನೂರಾರು ಮೈಲುಗಳ ದೂರದಲ್ಲಿ ಕಡಲ ನಡುವೆ ಒಂಟಿಯಾಗಿದ್ದರೂ ಭಾರತ ಸಾರ್ವಭೌಮತ್ವವು ತಮ್ಮನ್ನು ಸದಾ ಸಲಹುತ್ತದೆ ಎಂಬ ಸಂದೇಶವನ್ನು ಆ ಲಾಂಛನ ಅವರಿಗೆಲ್ಲ ನೀಡುತ್ತದೆ.

ಆ ಲಾಂಛನವನ್ನು ಹಾದುಕೊಂಡೇ ನಾನು ಕಡಲಿಗೆ ಇಳಿಯಬೇಕಿತ್ತು. ಕಾರ್ತಿಕ ಅಮವಾಸ್ಯೆಯ ಮಧ್ಯಾಹ್ನ ದೋಣಿ ಹತ್ತಿ ಹೊರಟಾಗ ತುಂಬಿಕೊಂಡಿದ್ದ ನೀಲಸಾಗರ ಈಗ ಅಮವಾಸ್ಯೆಯ ಚಂದ್ರನ ಎಳೆತಕ್ಕೆ ಸಿಲುಕಿ ಬರಿದಾಗುತ್ತಾ ಕಣ್ಣಿಗೆ ಕಾಣುವಷ್ಟು ದೂರ ಕಡಲಿನ ಬತ್ತಲು ಮೈ ಕಾಣಿಸುತ್ತಿತ್ತು. (ಅಮವಾಸ್ಯೆಯ ಹಗಲು ಚಂದ್ರ ಎಲ್ಲಿರುತ್ತಾನೆ ಎಂಬ ದಡ್ಡ ಪ್ರಶ್ನೆಯನ್ನು ನಾನೂ ಕೇಳಿದ್ದೇನೆ. ಅಮವಾಸ್ಯೆಯ ಹಗಲೂ ಕೂಡಾ ಚಂದ್ರ ಭೂಮಿಯನ್ನು ಸುತ್ತುತ್ತಿರುತ್ತಾನೆ. ಆದರೆ ನಮಗೆ ಕಾಣಿಸುವುದಿಲ್ಲ ಎಂಬುದನ್ನು ಬಹಳ ವಯಸ್ಸಾದ ಮೇಲೆಯೇ ಅರಿತುಕೊಂಡಿದ್ದೇನೆ) ನನ್ನನ್ನು ಕಡಲ ನಡಿಗೆಗೆ ಕರೆದುಕೊಂಡು ಹೋಗುತ್ತಿದ್ದ ನನಗಿಂತ ವಯಸ್ಸಾದ ವ್ಯಕ್ತಿ ಈ ದ್ವೀಪದ ಬಹಳ ಹಳೆಯ ನಿವಾಸಿ ಮತ್ತು ನುರಿತ ಮೀನುಗಾರ. ಈತ ಈ ಲಾಂಛನ ಎದುರಾಗುತ್ತಿದ್ದಂತೆ ಒಂದು ಕ್ಷಣ ನಿಂತ. ಮತ್ತೆ ಮುಂದೆ ನಡೆದ. ಆತನ ಮುಖದಲ್ಲಿ ಒಂದು ಅಸಹಜ ತುಂಟ ನಗು ಕಾಣಿಸಿತು. ಈ ದ್ವೀಪಕ್ಕೆ ನಾನು ಬರುತ್ತಿರುವುದು ಇದು ಎರಡನೆಯದೋ ಮೂರನೆಯದೋ ಬಾರಿ ಆಗಿರುವುದರಿಂದ ಮತ್ತು ಪ್ರತಿಬಾರಿಯೂ ಈತನೇ ನನ್ನ ಮಾರ್ಗದರ್ಶಿ ಆಗಿರುವುದರಿಂದ ಈತನ ಮುಖದಲ್ಲಿ ಅಸಹಜ ನಗು ಕಾಣಿಸಿಕೊಂಡರೆ ಅದರ ಹಿಂದೆ ಏನೋ ಒಂದು ಕಥೆ ಇದೆ ಎಂದೇ ಅರ್ಥ. ಮತ್ತು ಆ ಕಥೆಯನ್ನು ಹೇಳಲು ಆತನಿಗೆ ಅತೀವ ಆಸಕ್ತಿ ಇದೆ ಎಂಬುದು ಆ ನಗುವಿನ ಚಹರೆಯ ಹಿಂದಿರುವ ಇಂಗಿತ. ಹಾಗಾಗಿ ಆತನ ಮುಖದ ಅಸಹಜ ತುಂಟ ನಗು ಕಂಡೊಡನೆ ಏನದು ಅದರ ಕಥೆ ಎಂದು ನಾನು ಕೇಳುವುದು ಮತ್ತು ಗಂಟಲು ಸರಿ ಪಡಿಸಿಕೊಂಡು ಆತ ಆ ಕಥೆಯನ್ನು ಹೇಳುವುದು ನಮ್ಮಿಬ್ಬರ ನಡುವಿನ ಪದ್ಧತಿ.

ಇಲ್ಲಿ ಇರುವ ತನಕ ಒಂದು ನಿಮಿಷವನ್ನೂ ವ್ಯರ್ಥ ಮಾಡಬಾರದೆಂಬ ಹಠತೊಟ್ಟಂತಿರುವ ಆಸೆಬುರುಕನಂತೆ ಹೊತ್ತುಗೊತ್ತಿಲ್ಲದೆ ಇಲ್ಲೆಲ್ಲ ಸುತ್ತುತ್ತಲೇ ಇರುತ್ತೇನೆ. ಹಾಗೆ ಸುತ್ತುವಾಗಲೆಲ್ಲ ನಿಸರ್ಗದ ದಿವ್ಯ ಸೌಂದರ್ಯದ ಅನುಭೂತಿಯ ಜೊತೆಜೊತೆಗೇ ಕೆಲವು ಮನುಷ್ಯ ನಿರ್ಮಿತ ತಮಾಷೆಗಳೂ ಅನುಭವಕ್ಕೆ ಬರುತ್ತಲೇ ಇರುತ್ತವೆ.

ಈ ಮುಂಗಾರಿಗೆ ಮೊದಲು ಒಂದು ಹುಣ್ಣಿಮೆಯ ಹಗಲು ನಾನು ಇಲ್ಲಿಗೆ ಬಂದಿದ್ದೆ. ಅಂದ ಹಾಗೆ ಹುಣ್ಣಿಮೆಯ ಹಿಂದಿನ ಹಗಲೂ ಕಡಲು ಸಂಪೂರ್ಣ ಅಲ್ಲದಿದ್ದರೂ ಬಹುತೇಕ ಬರಿದಾಗುತ್ತದೆ. ಆಗಲೂ ಮೊಣಕಾಲುದ್ದದ ನೀರಿನಲ್ಲಿ ನಡೆದುಕೊಂಡು ದೂರದ ಇನ್ನೊಂದು ನಿರ್ಜನ ದ್ವೀಪಕ್ಕೆ ನಡೆದುಕೊಂಡು ಹೋಗಬಹುದು. ಆದರೆ ವೇಗವಾಗಿ ನಡೆದುಕೊಂಡು ಹೋಗಿ ಬೇಗ ಮರಳಿ ಬರಬೇಕಾಗುತ್ತದೆ. ಏಕೆಂದರೆ ಹುಣ್ಣಿಮೆಯ ಹಿಂದಿನ ದಿನದ ಕಡಲು ಇಳಿಯುವುದು ನಿಧಾನ. ಆದರೆ ಏರುವುದು ವೇಗವಾಗಿ. ಹಾಗಾಗಿ ನೀವು ವೇಗವಾಗಿ ಹೋಗಿ ಆ ದ್ವೀಪವನ್ನು ಬೇಗ ನೋಡಿಕೊಂಡು ವಾಪಾಸು ಬೇಗ ಹಿಂತಿರುಗದಿದ್ದರೆ ಅಷ್ಟು ಹೊತ್ತಿಗೆ ಕಡಲು ಏರುತ್ತಾ ಏರುತ್ತಾ ಮೇಲೆ ಬಂದು ನಿಮಗೆ ಈಜು ಬಾರದಿದ್ದರೆ ಮರಣವೂ ಸಂಭವಿಸಬಹುದು. ಹಾಗೆ ಮರಣಕ್ಕೀಡಾದ ಮಲೇರಿಯಾ ವೈದ್ಯರೊಬ್ಬರ ಕಥೆಯನ್ನು ಈತ ಹೇಳಿದ್ದ.

ಈ ದ್ವೀಪದಲ್ಲಿ ಸೊಳ್ಳೆಗಳ ಕಾಟ ಬಹಳ ಇತ್ತಂತೆ. ಜೊತೆಗೆ ಮಲೇರಿಯಾದಿಂದ ಸಂಭವಿಸುವ ಮರಣಗಳೂ ಕೂಡಾ. ಹಾಗೆ ಮಲೇರಿಯಾ ರೋಗವನ್ನು ತೊಲಗಿಸಲು ಬಂದ ಕೇರಳದ ವೈದ್ಯರೊಬ್ಬರು ಹುಣ್ಣಿಮೆಯ ಕಡಲ ಇಳಿತದ ಹೊತ್ತಲ್ಲಿ ಒಬ್ಬರೇ ಇನ್ನೊಂದು ದ್ವೀಪಕ್ಕೆ ನಡೆದುಕೊಂಡೇ ಹೋದವರು ವಾಪಾಸು ಬರುವಾಗ ಕಡಲಿನ ಭರತಕ್ಕೆ ಸಿಲುಕಿ ಈಜು ಬಾರದೆ ಇವರ ಕಣ್ಣೆದುರೇ ತೀರಿ ಹೋದರಂತೆ. ಆಗ ಇವರು ಇನ್ನೂ ಸಣ್ಣ ಹುಡುಗರಂತೆ. ಆದರೆ ಇಷ್ಟು ವರ್ಷಗಳ ನಂತರ ಆ ಸಾವಿನ ಆ ಕಥೆ ಹೇಳುವಾಗಲೂ ಇವರ ಮುಖದಲ್ಲಿ ಅಸಹಜ ನಗು ಯಾಕೆಂಬುದು ನನಗೆ ಗೊತ್ತಾಗಿರಲಿಲ್ಲ. ಬಹುಶಃ ಮಲೇರಿಯಾದಂತಹ ಮರಣದ ಕಾಯಿಲೆಯಿಂದ ಮನುಷ್ಯರನ್ನು ಕಾಪಾಡಲು ಬಂದ ಆ ನುರಿತ ವೈದ್ಯನಿಗೆ ಹುಣ್ಣಿಮೆಯ ಹಗಲಿನ ಚಂದ್ರನಿಗೂ ಕಡಲಿನ ನೀರಿನ ಏರಿಳಿತಕ್ಕೂ ಇರುವ ಸಂಬಂಧ ಗೊತ್ತಿರುವುದಿಲ್ಲವಲ್ಲ ಎಂಬ ಸತ್ಯವನ್ನು ನನಗೆ ತಿಳಿಯಪಡಿಸಲು ಆ ನಗು ಅವರ ಮುಖದಲ್ಲಿ ಮೂಡಿರಬಹುದು ಎಂದು ಆಮೇಲೆ ನನಗೆ ಅನಿಸಿತ್ತು.

ಹಾಗಾದರೆ ಈ ದ್ವೀಪದ ನಡುವಿನ ರಾಷ್ಟ್ರೀಯ ಲಾಂಛನದ ಹಿಂದೆಯೂ ಇಂತಹದೇ ಒಂದು ಕಥೆ ಇರಬಹುದೇನೋ ಎಂದು ಅನಿಸಿತು. ಅದನ್ನೇ ಕೇಳಿದೆ. ನಾನು ಕೇಳಲಿ ಎಂದೇ ಕಾಯುತ್ತಿದ್ದ ಆ ಹಿರಿಯ ಮೀನುಗಾರ ಕಥೆ ಹೇಳುವ ಮೊದಲೇ ನಗಲು ತೊಡಗಿದ. ಆತ ನಗುವಿನ ನಡುವೆಯೇ ಹೇಳಿದ ಕಥೆಯನ್ನು ಚುಟುಕಾಗಿ ಹೇಳುತ್ತೇನೆ.

ಅದು ಸ್ವಾತಂತ್ರ್ಯ ಬಂದು ಒಂದು ದಶಕದ ನಂತರ ನಡೆದ ಸಂಗತಿ. ಹೊಸತಾಗಿ ಈ ರಾಷ್ಟೀಯ ಲಾಂಚನ ಈ ನಿರ್ಜನ ದ್ವೀಪಕ್ಕೆ ಬಂದಿತ್ತು. ಈ ದ್ವೀಪ ನಿರ್ಜನವಾದರೂ ಇಲ್ಲಿರುವ ತೆಂಗಿನ ತೋಪುಗಳು ಹತ್ತಿರದ ದೊಡ್ಡ ದ್ವೀಪವಾಸಿಗಳ ಒಡೆತನಕ್ಕೆ ಸೇರಿದ್ದು. ಈ ತೆಂಗಿನ ತೋಪುಗಳನ್ನು ಭಂಡಾರದ ಭೂಮಿ ಎಂದು ಕರೆಯುತ್ತಾರೆ. ಭಂಡಾರದ ಭೂಮಿ ಎಂದರೆ ಕಣ್ಣಾನೂರಿನ ಮುಸ್ಲಿಂ ಮಹಾರಾಣಿಯ ಸೊತ್ತು. ಆಕೆ ಈ ಸ್ವತ್ತನ್ನು ಹತ್ತಿರದ ದ್ವೀಪವಾಸಿಗಳಿಗೆ ಗೇಣಿಗೆ ಕೊಟ್ಟ ಹಾಗೆ ಲೆಕ್ಕ. ಇದಕ್ಕೆ ಪ್ರತಿಯಾಗಿ ದ್ವೀಪವಾಸಿಗಳು ಪ್ರತಿ ವರ್ಷ ತೆಂಗಿನ ನಾರಿನ ಹಗ್ಗವನ್ನೂ, ಕೊಬ್ಬರಿಯನ್ನೂ ಕಡಲಿಂದ ಹೆಕ್ಕಿದ ಕವಡೆ, ಶಂಖ, ಹವಳ ಇತ್ಯಾದಿಗಳನ್ನೂ ಆ ಮಹಾರಾಣಿಯ ದೂತರಿಗೆ ಕಾಣಿಕೆಯಾಗಿ ಒಪ್ಪಿಸಬೇಕು. ಇಲ್ಲವಾದರೆ ಚಾಟಿ ಏಟು. ಅಂತಹ ಸೊತ್ತನ್ನು ಗೇಣಿಗೆ ಪಡೆದ ಮನೆತನಕ್ಕೆ ಸೇರಿದ ವ್ಯಕ್ತಿಯೊಬ್ಬರು ಸ್ವಾತಂತ್ರಾನಂತರದಲ್ಲಿ ಈ ನಿರ್ಜನ ದ್ವೀಪದ ತಮ್ಮ ತೆಂಗಿನ ತೋಟವನ್ನು ನೋಡಲು ಹೋದರು.

ಅದು ಮಳೆಗಾಲ ಕಳೆದು ಬರುವ ಕಾರ್ತಿಕ ತಿಂಗಳು. ತೆಂಗಿನ ತೋಪಲ್ಲಿ ಕಾಡು ಹುಲ್ಲು ತಲೆಯ ಎತ್ತರಕ್ಕೆ ಬೆಳೆದಿತ್ತು. ಆ ವ್ಯಕ್ತಿ ಹುಲ್ಲು ಕತ್ತರಿಸುವ ಕತ್ತಿಯನ್ನು ಬೀಸುತ್ತಾ ಕಾಡು ಹಿಡಿದುಹೋಗಿರುವ ತನ್ನ ತೆಂಗಿನ ತೋಪನ್ನು ಶುಚಿಗೊಳಿಸುತ್ತಿದ್ದ. ಇದ್ದಕ್ಕಿದ್ದಂತೆ ಕತ್ತಿಯ ತುದಿಗೆ ಏನೋ ತಾಗಿ ‘ಠಣ್’ ಎಂಬ ಸದ್ದಾಯಿತು. ನೋಡಿದರೆ ಅದು ರಾಷ್ಟ್ರೀಯ ಲಾಂಚನದ ಸಿಂಹದ ಮೂಗಿನ ತುದಿಗೆ ಆತ ಬೀಸಿದ ಕತ್ತಿ ತಾಗಿದ ಸದ್ದು. ಕತ್ತಿ ತಾಗಿದ ರಭಸಕ್ಕೆ ಸಿಂಹದ ಮೂಗಿನ ತುದಿಗೆ ಸಣ್ಣ ಪೆಟ್ಟಾಗಿತ್ತು.

ಸಿಂಹದ ಮೂಗಿನ ತುದಿಗೆ ಆದ ಪೆಟ್ಟು ಸಣ್ಣದಾದರೂ ಅದಕ್ಕೆ ಕಾರಣನಾದ ಆ ವ್ಯಕ್ತಿ ಎಷ್ಟು ತಲ್ಲಣಿಸಿ ಹೋದ ಅಂದರೆ ಭಯದಿಂದ ಆತನ ತಲೆಯೇ ಕೆಟ್ಟುಹೋಗಿ ಆತ ಬಹಳ ವರ್ಷ ಮಾನಸಿಕ ಅಸ್ವಸ್ಥನಂತೆ ಬದುಕಿದ್ದನಂತೆ. ಆಗ ಇನ್ನೂ ಬ್ರಿಟಿಷರು ದೇಶ ಬಿಟ್ಟು ಹೋಗಿದ್ದ ಕಾಲ. ಬ್ರಿಟಿಷರ ಕಾಲದಲ್ಲಿ ನೇಮಕವಾಗಿದ್ದ ಅಮೀನರೇ ದ್ವೀಪಗಳ ಆಡಳಿತವನ್ನು ನಡೆಸುತ್ತಿದ್ದರಂತೆ. ಬಹಳ ಕ್ರೂರವಾಗಿ ನಡೆದುಕೊಳ್ಳುತ್ತಿದ್ದರಂತೆ. ಅವರ ಶಿಕ್ಷೆಗೆ ಸಿಲುಕುವ ಬದಲು ತಲೆಕೆಟ್ಟವನಂತೆ ಬದುಕುವುದೇ ಒಳ್ಳೆಯದೆಂದು ಆತ ಸಾಯುವವರೆಗೂ ತಲೆಕೆಟ್ಟವನಂತೆಯೇ ಬದುಕಿದ್ದನಂತೆ.

(ಫೋಟೋಗಳು:ಲೇಖಕರವು)

ಈಗಲೂ ಈ ಲಾಂಛನದ ಸುತ್ತಲಿನ ತೆಂಗುಗಳ ಫಲವನ್ನು ಆತನ ವಂಶಸ್ಥರು ಅನುಭವಿಸುತ್ತಿದ್ದಾರಂತೆ. ಮತ್ತು ಅವರನ್ನು ಈಗಲೂ ಸಿಂಹದ ಮೂಗನ್ನು ಕೆತ್ತಿದವನ ಮನೆತನದವರು ಎಂದು ತಮಾಷೆ ಮಾಡುತ್ತಾರಂತೆ.

ನಾನು ಅವನನ್ನೊಮ್ಮೆ, ಎದುರಿಗಿರುವ ರಾಷ್ಟ್ರೀಯ ಲಾಂಛನದ ಸಿಂಹದ ಮುಖವನ್ನೊಮ್ಮೆ ಮತ್ತು ಹತ್ತಿರದಲ್ಲೇ ಅಮವಾಸ್ಯೆಗೆ ಬರಿದಾಗಿ ಹೊಳೆಯುತ್ತಿರುವ ಕಡಲ ಮರಳರಾಶಿಯನ್ನೊಮ್ಮೆ ನೋಡುತ್ತಾ ನಡೆಯತೊಡಗಿದೆ. ಕಡಲು ಎಂದರೆ ಸದಾ ಭೋರ್ಗರೆಯುತ್ತಿರುವ ಅಲೆಗಳ ಮೊರೆತ ಎಂದು ಸುಳ್ಳುಸುಳ್ಳೇ ತಿಳಿದುಕೊಂಡಿದ್ದ ನನಗೆ ಇಲ್ಲಿ ಬಂದ ಮೇಲೆ ಅರಿವಾಗುತ್ತಿರುವ ಕಡಲಿನ ಕೋಮಲ ವಿವರಗಳು. ಹುಣ್ಣಿಮೆಯ ಹಗಲು ಒಮ್ಮೆ ಅಮವಾಸ್ಯೆಯ ಹಗಲು ಒಮ್ಮೆ ಬರಿದಾಗಬೇಕಾದ ಅದರ ಅಸಹಾಯಕತೆಗಳು. ಅಶೋಕ ಚಕ್ರದಲ್ಲಿರುವ ಸಿಂಹದ ಮುಖದಲ್ಲಿರುವ ಶಾಂತವೂ ಅಲ್ಲದ ಗಂಭೀರವೂ ಅಲ್ಲದ ಮಂದಹಾಸ. ತೆಂಗಿನ ತೋಪಿನ ಮಾಲೀಕನಿಂದ ಮೂಗು ಕೆತ್ತಿಸಿಕೊಂಡ ಅದರ ಅಸಹಾಯಕತೆ ಎಲ್ಲವೂ ಆ ಇಳಿ ಸೂರ್ಯನ ಬೆಳಕಿನಲ್ಲಿ ಮಂಕು ಮಂಕಾಗಿ ಕಾಣಿಸತೊಡಗಿದವು.

‘ಕಡಲು ಏರುವ ಮೊದಲು ನಾವು ವಾಪಾಸಾಗಬೇಕಾಗುತ್ತದೆ. ಇಲ್ಲವಾದರೆ ಸರಿಯಾಗಿ ಈಜು ಗೊತ್ತಿರದ ನೀವು ಆ ಜನವಸತಿಯಿಲ್ಲದ ದ್ವೀಪದಲ್ಲೇ ಈ ಇರುಳು ಕಳೆಯಬೇಕಾಗುತ್ತದೆ’ ಎಂದು ಮೀನುಗಾರ ಹಿರಿಯ ಎಚ್ಚರಿಸಿದ.

 

(ಮುಂದುವರೆಯುವುದು)