ವಿಮರ್ಶಕ ಮತ್ತು ಅನುವಾದಕ ಪ್ರೊಫೆಸರ್ ಓ.ಎಲ್.ನಾಗಭೂಷಣ ಸ್ವಾಮಿಯವರು ಈ ಹಿಂದೆ ಕೆಂಡಸಂಪಿಗೆಯಲ್ಲಿ ಬರೆದ ಜರ್ಮನ್ ಕವಿ ರೇನರ್ ಮಾರಿಯಾ ರಿಲ್ಕ್ ನ ‘ಯುವಕವಿಗೆ ಬರೆದ ಪತ್ರಗಳು’ ಮಾಲಿಕೆಯನ್ನು ಓದಿದವರು ಬದುಕು ಮತ್ತು ಕಾವ್ಯದ ಸಂಬಂಧದ ಬಗ್ಗೆ ರಿಲ್ಕ್ ನ ಗಹನ, ಗಂಭೀರ ಚಿಂತನೆಯನ್ನು ಮೆಚ್ಚಿಕೊಂಡಿದ್ದರು. ಈಗ ಅಮೆರಿಕದ ಕವಿ, ಕಥೆಗಾರ್ತಿ, ಕಾದಂಬರಿಗಾರ್ತಿ, ಶಿಶು ಸಾಹಿತ್ಯ ಲೇಖಕಿ ಸಿಲ್ವಿಯಾ ಪ್ಲಾತ್ ತನ್ನ ಮನಸಿನ ಆಲೋಚನೆ, ಭಾವನೆ, ಚಿಂತನೆಗಳ ಬಗ್ಗೆ ದಿನಚರಿಯ ರೂಪದಲ್ಲಿ ಬರೆದ ಜರ್ನಲ್ಸ್ ಕೃತಿಯ ಆಯ್ದಭಾಗಗಳನ್ನು ಕೆಂಡಸಂಪಿಗೆಗಾಗಿ ಅನುವಾದಿಸಿರುವ ಓ.ಎಲ್.ಎನ್.ಅವರಿಗೆ ಎಲ್ಲ ಓದುಗರ ಪರವಾಗಿ ಕೃತಜ್ಞತೆಗಳು. ಇನ್ನು ಮುಂದೆ ಪ್ರತಿ ಗುರುವಾರ ಕೆಲವು ವಾರಗಳ ಕಾಲ ಈ ಅನುವಾದ ಮಾಲೆ ಮೂಡಿ ಬರಲಿದೆ.

 

ರಿಲ್ಕ್ ಮಹಾನ್ ಚಿಂತಕನ ಹಾಗೆ, ವಿವೇಕಿಯ ಹಾಗೆ ಕಂಡರೆ ಪ್ಲಾತ್ ಸೂಕ್ಷ್ಮ ಮನಸ್ಸಿನ, ವಿಷಾದ ಖಿನ್ನತೆಗಳ ಪೀಡನೆಗೆ ಒಳಗಾದ, ಬದುಕನ್ನು ತನ್ನದೇ ರೀತಿಯಲ್ಲಿ ನೋಡಿದ ಹೆಣ್ಣುಮನಸ್ಸಿನ ಸ್ವಗತದ ಹಾಗೆ ಇಲ್ಲಿ ಬರೆದುಕೊಂಡಿದ್ದಾಳೆ. ಕವಿಯಾದವರೊಬ್ಬರು ಹೀಗೆ ತಮ್ಮ ಬದುಕಿನ ಭಾವಸೂಕ್ಷ್ಮಗಳನ್ನು ಬರವಣಿಗೆಯಲ್ಲಿ ಹೇಳಿಕೊಂಡಿರುವುದು ಅಪರೂಪ. ಈ ಬರಹವನ್ನು ಓದುತ್ತ ಹೆಣ್ಣಿನ ಪಾಡಿನ ಬಗ್ಗೆ ಮರುಕ ಹುಟ್ಟಿ ಅಯ್ಯೋ ಅನಿಸುವುದರ ಜೊತೆಗೇ ಸಿಲ್ವಿಯಾಳ ಸೂಕ್ಷ್ಮ ಗ್ರಹಿಕೆ, ಅವಳ ಬರವಣಗೆಯಲ್ಲಿ ಎದುರಾಗುವ ಅನಿರೀಕ್ಷಿತ ಹೋಲಿಕೆಗಳು ಅಚ್ಚರಿ, ಮೆಚ್ಚುಗೆಗಳನ್ನು ಮೂಡಿಸುತ್ತವೆ. ತನ್ನ ಸುತ್ತಲ ವ್ಯಕ್ತಿಗಳನ್ನು, ಅವರೊಡನೆ ತನಗೆ ಇದ್ದ ಸಂಬಂಧಗಳನ್ನು ಆಕೆ ವಿವರಿಸುವ ಬಗೆಯೂ ಅಷ್ಟೇ. ಮಹತ್ವದ ಕವಿಯೊಬ್ಬರ ದಿನನಿತ್ಯದ ಬದುಕಿನ ಭಾವಪ್ರಪಂಚ ಇಲ್ಲಿ ನಮ್ಮೆದುರು ನಿರಾಯಾಸವಾಗಿ ತೆರೆದುಕೊಳ್ಳುತ್ತದೆ. ಕವಿಮನಸಿಗೊಂದು ಬೆಳಕಿಂಡಿ ಈ ಬರವಣಿಗೆ.

ಸಿಲ್ವಿಯಾ ಪ್ಲಾತ್ ಬದುಕಿದ್ದು ಮೂವತ್ತು ವರ್ಷ, ಕೇವಲ ಮೂವತ್ತು ವರ್ಷ; ಹುಟ್ಟಿದ್ದು-ಅಕ್ಟೋಬರ್ 27, 1932, ತೀರಿಕೊಂಡದ್ದು ಫೆಬ್ರವರಿ 11, 1963. ಇಪ್ಪತ್ತನೆಯ ಶತಮಾನದಲ್ಲಿ ಜಾಗತಿಕ ಪ್ರಸಿದ್ಧಿಯನ್ನು ಪಡೆದ ಮಹಿಳಾ ಕವಿಗಳು ಇದ್ದಾರೆ. ರಶಿಯದ ಅನ್ನಾ ಅಖ್ಮತೋವ, 1945ರಲ್ಲಿ ಸಾಹಿತ್ಯದ ನೊಬೆಲ್ ಪ್ರಶಸ್ತಿ ಪಡೆದ, ಚಿಲಿ ದೇಶದ, ಗಾಬ್ರಿಯೇಲಾ ಮಿಸ್ಟ್ರಲ್, ಹೀಗೆ. ಇವರೆಲ್ಲರಿಗಿಂತ ಸಿಲ್ವಿಯಾ ಪ್ರಸಿದ್ಧಳು. ಒಂದು ಪ್ರಮುಖ ವ್ಯತ್ಯಾಸವೆಂದರೆ ಮಿಕ್ಕ ಕವಿಗಳಿಗೆ ಅವರು ಬದುಕಿದ್ದಾಗಲೇ ಖ್ಯಾತಿ ದೊರೆಯಿತು, ಸಿಲ್ವಿಯಾ ತೀರಿಕೊಂಡ ಮೇಲೆ, 1963ರ ನಂತರ ಅವಳ ಕೀರ್ತಿ ಬೆಳೆಯಿತು. ನಟಿ ಗ್ವೈನೆತ್ ಪಾಲ್ಟ್ರೋ ಅಭಿನಯಿಸಿದ್ದ ‘ಸಿಲ್ವಿಯಾ’ ಎಂಬ ಚಲನಚಿತ್ರ 2003ರಲ್ಲಿ ಬಂದಿತು. ಹಾಗೆಯೇ ಅವಳ ಜೀವನ ಚರಿತ್ರೆ, ವಿಮರ್ಶಾತ್ಮಕ ಅಧ್ಯಯನ, ನೆನಪುಗಳ ಸಂಕಲನ, ಅವಳ ರಚನೆಗಳ ರಂಗಪ್ರಸ್ತುತಿ ಎಲ್ಲವೂ ಮರಣೋತ್ತರವಾಗಿ ರೂಪುಗೊಳ್ಳುತ್ತ ಸಿಲ್ವಿಯಾ ಪ್ಲಾತ್ ಪೌರಾಣಿಕ ವ್ಯಕ್ತಿಯಾದಳು.

ಸಿಲ್ವಿಯಾಳ ಅಮ್ಮ, ಅಪ್ಪ ಇಬ್ಬರೂ ವಿದ್ವಾಂಸರು. ಸಿಲ್ವಿಯಾ ತನ್ನ ಮೊದಲ ಕವಿತೆಯನ್ನು ಬೋಸ್ಟನ್ ಸಂಡೆ ಹೆರಾಲ್ಡ್ ನಲ್ಲಿ ಪ್ರಕಟಿಸಿದಾಗ ಅವಳಿಗಿನ್ನೂ ಎಂಟು ವರ್ಷ. ಬದುಕಿನುದ್ದಕ್ಕೂ ಬರೆಯುತ್ತಲೇ ಇದ್ದಳು. ಕೊನೆಯ ಏಳು ವರ್ಷಗಳಲ್ಲಿ ಆಕೆ 750 ಕವಿತೆ, ಸುಮಾರು ಎಪ್ಪತ್ತು ಸಣ್ಣ ಕಥೆ, ಒಂದು ಗೀತನಾಟಕ, ಒಂದು ಮಕ್ಕಳ ಪುಸ್ತಕ, ಒಂದು ಕಾದಂಬರಿಯನ್ನು ಪ್ರಕಟಿಸಿದಳು. ಎರಡನೆಯ ಕಾದಂಬರಿಯ ಹಸ್ತಪ್ರತಿ ಕರಡು ಬರವಣಿಗೆಯ ರೂಪದಲ್ಲಿತ್ತು. ಬಿಬಿಸಿ ಮತ್ತು ಇತರ ಪ್ರಕಾಶಕರಿಗಾಗಿ ಹಲವು ಬಗೆಯ ಬರವಣಿಗೆಗಳನ್ನು ಮಾಡಿದಳು. ಇವುಗಳೊಡನೆ ತನ್ನ ಭಾವಲೋಕದಲ್ಲಿ ದಿನದಿನ ಏಳುತಿದ್ದ ಅಲೆಗಳನ್ನು ಜರ್ನಲ್ಸ್ ರೂಪದಲ್ಲಿ, ತನ್ನ ತಾಯಿಯೇ ಇದರ ಓದುಗಳು ಎಂಬಂತೆ ಬರೆದಳು.

ಸಿಲ್ವಿಯಾಳ ತಾಯಿ ಅರೀಲಿಯ ಆಸ್ಟ್ರಿಯದವಳು, ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದ ತಂದೆ ಓಟ್ಟೋ ಪ್ಲಾತ್ ಜರ್ಮನಿಯವನು. ಸಿಲ್ವಿಯಾಗೆ ಎಂಟು ವರ್ಷವಾಗಿದ್ದಾಗ, ಅವಳ ತಮ್ಮ ವಾರೆನ್ ಗೆ ಐದೂವರೆ ವರ್ಷವಾಗಿದ್ದಾಗ ತಂದೆ ತೀರಿಕೊಂಡ. ಸಿಲ್ವಿಯಾಳ ತಾಯಿ ಮೆಸಾಚುಸೆಟ್ಸ್ ಹೈಸ್ಕೂಲಿನಲ್ಲಿ ಇಂಗ್ಲಿಶ್ ಮತ್ತು ಜರ್ಮನ್ ಭಾಷೆಗಳನ್ನು ಕಲಿಸುವ ಅಧ್ಯಾಪಿಕೆಯಾಗಿ ಮನೆಯ ಜವಾಬ್ದಾರಿ ಹೊತ್ತಳು.

ಸಿಲ್ವಿಯಾ 1950ರಲ್ಲಿ ಸ್ಮಿತ್ ಕಾಲೇಜಿಗೆ ಸೇರಿ ಮೊದಲ ವರ್ಷವೇ ಮೂರು ಸ್ಕಾಲರ್ಶಿಪ್ ಪಡೆದಾಗ ‘ಸಂತೋಷಕ್ಕೆ ಅಳಬೇಕು ಅನಿಸುತ್ತಿದೆ. ಇಡೀ ಜಗತ್ತು ಮಾಗಿದ ಕಲ್ಲಂಗಡಿ ಹಣ್ಣಿನ ಹಾಗೆ ತೆರೆದುಕೊಂಡು ನನ್ನ ಕಾಲ ಬಳಿ ಬಿದ್ದಿದೆ’ ಎಂದು ಹೇಳಿಕೊಂಡಿದ್ದಾಳೆ. ಮೂರುವರ್ಷದ ನಂತರ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಪ್ರವೇಶ ಸಿಗಲಿಲ್ಲವೆಂದು ಖಿನ್ನಳಾಗಿ, ದೀರ್ಘ ವಾಕ್ ಗೆ ಹೋಗಿಬರುತ್ತೇನೆಂದು ಹೋದವಳು, ವಾಪಸ್ ಬಂದು ನೆಲಮಾಳಿಗೆಯಲ್ಲಿ ಬಚ್ಚಿಟ್ಟುಕೊಂಡಿದ್ದಳು. ನಿದ್ರೆಮಾತ್ರೆಗಳನ್ನು ನುಂಗಿ ಎಚ್ಚರ ತಪ್ಪಿದ್ದಳು. ಉಪಚಾರ ಮಾಡಿ ಅವಳನ್ನು ಉಳಿಸಿಕೊಂಡರು. ಹೀಗೆ ಹರೆಯದಲ್ಲೇ ಖಿನ್ನತೆ ಮತ್ತು ಆತ್ಮಹತ್ಯೆಯ ಗೀಳು ಅವಳಿಗಿತ್ತು ಅನಿಸುತ್ತದೆ. ತನ್ನ ಕಿರು ಅವಧಿಯ ಬದುಕಿನಲ್ಲೆ ಮೂರು ನಾಲ್ಕುಬಾರಿ ಆತ್ಮಹತ್ಯೆಯ ಪ್ರಯತ್ನ ನಡೆಸಿದ್ದಳು.

ಸಿಲ್ವಿಯಾ ತನ್ನ ಮೊದಲ ಕವಿತೆಯನ್ನು ಬೋಸ್ಟನ್ ಸಂಡೆ ಹೆರಾಲ್ಡ್ ನಲ್ಲಿ ಪ್ರಕಟಿಸಿದಾಗ ಅವಳಿಗಿನ್ನೂ ಎಂಟು ವರ್ಷ. ಬದುಕಿನುದ್ದಕ್ಕೂ ಬರೆಯುತ್ತಲೇ ಇದ್ದಳು. ಕೊನೆಯ ಏಳು ವರ್ಷಗಳಲ್ಲಿ ಆಕೆ 750 ಕವಿತೆ, ಸುಮಾರು ಎಪ್ಪತ್ತು ಸಣ್ಣ ಕಥೆ, ಒಂದು ಗೀತನಾಟಕ, ಒಂದು ಮಕ್ಕಳ ಪುಸ್ತಕ, ಒಂದು ಕಾದಂಬರಿಯನ್ನು ಪ್ರಕಟಿಸಿದಳು. ಎರಡನೆಯ ಕಾದಂಬರಿಯ ಹಸ್ತಪ್ರತಿ ಕರಡು ಬರವಣಿಗೆಯ ರೂಪದಲ್ಲಿತ್ತು.

ಸಿಲ್ವಿಯಾ ಫುಲ್ ಬ್ರೈಟ್ ವಿದ್ಯಾರ್ಥಿವೇತನ ಪಡೆದು ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಹೋದಳು. ಅಲ್ಲಿ ಇಪ್ಪತ್ತನೆಯ ಶತಮಾನದ ಪ್ರಮುಖ ಇಂಗ್ಲಿಶ್ ಕವಿ ಟೆಡ್ ಹ್ಯೂಸ್ ನ ಪರಿಚಯವಾಯಿತು, ಮದುವೆಯೂ ಆಯಿತು. ಈ ಮದುವೆಯಿಂದ ಸಿಲ್ವಿಯಾಳ ಸಾಹಿತ್ಯಕ ಜೀವನ ಸಮೃದ್ಧವಾಯಿತು. ಹಾಗೆಯೇ ಗರ್ಭಪಾತದಂಥ ದುಃಖವನ್ನೂ ಅನುಭವಿಸಿದಳು. ಗಂಡನ ಸಾಹಿತ್ಯಕ ಬದುಕಿಗೆ ಸಂಗಾತಿಯಾಗಿದ್ದವಳು ಕ್ರಮೇಣ ತನ್ನ ಬರವಣಿಗೆಗೆ ಗಮನಕೊಡಲು ತೊಡಗಿದ್ದು ದಾಂಪತ್ಯದ ವಿರಸಕ್ಕೆ ಕಾರಣವಾಯಿತೋ? ಕೆಲವು ಸ್ತ್ರೀವಾದೀ ಚಿಂತಕರಂತೂ ಟೆಡ್ ಹ್ಯೂಸ್ ನ ಸ್ವಭಾವ, ವರ್ತನೆಗಳೇ ಸಿಲ್ವಿಯಾಳ ಗಾಢವಿಷಾದಕ್ಕೆ ಕಾರಣ ಎನ್ನುತ್ತಾರೆ. ಸಿಲ್ವಿಯಾ ತೀರಿಕೊಂಡ ನಂತರ ಪ್ರಕಟವಾದ ಅವಳ ದಿನಚರಿಯನ್ನು ಆತ ತಿದ್ದಿದ್ದಾನೆ, ಮಕ್ಕಳಿಗೆ ಆಘಾತವಾಗಬಾರದೆಂದು ಸಿಲ್ವಿಯಾಳ ಕೆಲವು ಬರವಣಿಗೆಗಳನ್ನು ಸುಟ್ಟೆ ಎಂದು ಅವನು ಹೇಳಿದ್ದು ನಂಬಲು ಅಸಾಧ್ಯವಾದ ಸಂಗತಿ ಎಂಬ ಆಪಾದನೆಗಳೂ ಇವೆ. ಸಿಲ್ವಿಯಾ ತನ್ನ ಮೂವತ್ತನೆಯ ವಯಸಿನಲ್ಲಿ ಗ್ಯಾಸ್ ಒವೆನ್ ನಲ್ಲಿ ತಲೆ ಇಟ್ಟು ಬದುಕು ಕೊನೆಗೊಳಿಸಿಕೊಂಡಳು.

ಸಿಲ್ವಿಯಾ ತನ್ನ ಆರಂಭದ ಕವಿತೆಗಳಲ್ಲಿ ನಿಸರ್ಗದ ಪ್ರತಿಮೆಗಳು, ಖಾಸಗಿ ಭಾವಗಳ ಚಿತ್ರಣ, ಚಂದ್ರ, ಆಸ್ಪತ್ರೆ, ತಲೆಬುರುಡೆ ಇಂಥ ವಿಷಯಗಳನ್ನು ಕುರಿತು ಕವಿತೆ ಬರೆದಿದ್ದಾಳೆ. ಪ್ರಸಿದ್ಧ ಕವಿಗಳಾದ ಡಿಲನ್ ಥಾಮಸ್, ಯೇಟ್ಸ್ ಮತ್ತು ಮ್ಯಾರಿಯಾನಾ ಮೂರ್ ಇಂಥ ಕವಿಗಳ ರಚನೆಗಳನ್ನು ಮೆಚ್ಚಿ ಅಳವಡಿಸಿಕೊಂಡದ್ದು ಕಾಣುತ್ತದೆ.

ಅವಳ ಕವಿತೆಗಳು, 1960ರ ನಂತರ ಅತಿವಾಸ್ತವ ರೀತಿಯ ಲ್ಯಾಂಡ್ ಸ್ಕೇಪಿನ ಚಿತ್ರಣ, ಸಾವು, ಬಿಡುಗಡೆ, ಪುನರುತ್ಥಾನದ ವಿಷಯಗಳತ್ತ ಓಲುಮೆ ತೋರುತ್ತವೆ. ಟೆಡ್ ಹ್ಯೂಸ್ ದೂರವಾದ ನಂತರ ಬರೆದ ಕವಿತೆಗಳು ಆಕ್ರೋಶ, ಹತಾಶೆ, ಪ್ರೀತಿ, ದ್ವೇಷಗಳನ್ನು ಕುರಿತ ರಚನೆಗಳು. ಸಿಲ್ವಿಯಾ ಪ್ಲಾತ್ ಳ ಕೀರ್ತಿಗೆ ಕಾರಣವಾದವು ಈ ಕವಿತೆಗಳೇ.

ಸಿಲ್ವಿಯಾ ಪ್ಲಾತ್ ಕವನ ಸಂಕಲನಗಳು: ದಿ ಕೊಲಾಸಸ್ ಮತ್ತು ಇತರ ಕವಿತಗಳು (1960), ಏರಿಯಲ್ (1965): ಮರಣೋತ್ತರ ಪ್ರಕಟಣೆಗಳು- ತ್ರೀ ವಿಮೆನ್: ಎ ಮಾನೊಲಾಗ್ ಫಾರ್ ತ್ರೀ ವಾಯ್ಸಸ್ (1968), ಕ್ರಾಸಿಂಗ್ ದಿ ವಾಟರ್ (1968), ಕಲೆಕ್ಟೆಡ್ ಪೊಯೆಮ್ಸ್ (1981), ಸೆಲೆಕ್ಟೆಡ್ ಪೊಯೆಮ್ಸ್ (1985), ಏರಿಯಲ್-ದಿ ರಿಸ್ಟೋರ್ಡ್ ವರ್ಶನ್ (2004).

ಗದ್ಯ ಕೃತಿಗಳು: ಎಲ್ಲವೂ ಮರಣೋತ್ತರ ಪ್ರಕಟಣೆಗಳು: ದಿ ಬೆಲ್ ಜಾರ್, ಕಾದಂಬರಿ (1963) ಲೆಟೆರ್ಸ್ ಹೋಂ 1950-1963 (1975), ಜಾನಿ ಪ್ಯಾನಿಕ್ ಅಂಡ್ ದಿ ಬೈಲ್ ಆಫ್ ಡ್ರೀಮ್ಸ್-ಕಥೆಗಳು (1977), ದಿ ಅನ್ ಅಬ್ರಿಜ್ಡ್ ಜರ್ನಲ್ಸ್ ಆಫ್ ಸಿಲ್ವಿಯಾ ಪ್ಲಾತ್ (1982), ಸಿಲ್ವಿಯಾ ಪ್ಲಾತ್, ಪತ್ರಗಳು, ಸಂ. 1 (2017), ಸಂಪುಟ 2 (2018).

ಶಿಶು ಸಾಹಿತ್ಯ: ದಿ ಬೆಡ್ ಬುಕ್ (1976), ದಿ ಇಟ್-ಡಸನ್ಟ್-ಮ್ಯಾಟರ್ ಸೂಟ್ (1996),ಮಿಸೆಸ್ ಚೆರ್ರೀಸ್ ಕಿಚನ್ (2001), ಕಲೆಕ್ಟೆಡ್ ಚಿಲ್ಡನ್ಸ್ ಸ್ಟೋರೀಸ್ (2001).


ಇಸವಿ 2000ದಲ್ಲಿ ಆಂಕರ್ ಬುಕ್ಸ್ ಪ್ರಕಟಿಸಿದ, ಕಾರೆನ್ ವಿ. ಕುಕಿಲ್ ಸಂಪಾದಿಸಿರುವ ದಿ ಅನ್ ಅಬ್ರಿಜ್ಡ್ ಜರ್ನಲ್ಸ್ ಆಫ್ ಸಿಲ್ವಿಯಾ ಪ್ಲಾತ್ ಪುಸ್ತಕದ ಆಯ್ದ ಭಾಗಗಳ ಕನ್ನಡ ಅನುವಾದ ಇಲ್ಲಿದೆ. ಮನುಷ್ಯ ಸಂಬಂಧ, ಕವಿಯ ಮನೋಧರ್ಮ, ಕಾವ್ಯಚಿಂತನೆಗಳಿಗೆ ಸಂಬಂಧಿಸಿದ ಭಾಗಗಳಿಗೆ ಗಮನಕೊಟ್ಟು ಆಯ್ಕೆ ಮಾಡಿದ್ದೇನೆ.

ಸಿಲ್ವಿಯಾ ಪ್ಲಾತಳ ಬದುಕು ಮತ್ತು ಬರಹದ ಕುರಿತ ಮುಂದಿನ ಕಂತುಗಳಿಗೆ ಹೋಗುವ ಮೊದಲು ನಾನೇ ಕನ್ನಡಕ್ಕೆ ಮಾಡಿರುವ ಆಕೆಯ ಎರಡು ಕವಿತೆಗಳ ಅನುವಾದ ನಿಮಗಾಗಿ

ಕನ್ನಡಿ

ನಾನು ಬೆಳ್ಳಿ, ನಾನು ಖಚಿತ. ನನ್ನಲ್ಲಿ ಅನಿಸಿಕೆಗಳಿಲ್ಲ.
ಕಂಡದ್ದನ್ನೆಲ್ಲ ಇಡಿಯಾಗಿ ಒಳಗು ಮಾಡಿಕೊಳ್ಳುವೆ,
ಅದು ಹೇಗಿದೆಯೋ ಹಾಗೆ, ಪ್ರೀತಿ ದ್ವೇಷಗಳ ಮಬ್ಬು ಮಸುಕು ನನ್ನಲಿಲ್ಲ.
ನನ್ನಲ್ಲಿ ಕ್ರೌರ್ಯವಿಲ್ಲ, ಇರುವುದು ಕೇವಲ ಸತ್ಯ.
ನಾಲ್ಕು ಮೂಲೆಗಳ ಚಚ್ಚೌಕ ನಾನು, ಪುಟ್ಟ ದೇವತೆಯ ಕಣ್ಣು.
ನನ್ನೆದುರಿನ ಗೋಡೆಯನ್ನು ಧ್ಯಾನಿಸುವುದರಲ್ಲೇ ಬಲು ಹೊತ್ತು ಕಳೆಯುತ್ತದೆ.
ಪಿಂಕು ಗೋಡೆ, ಅಲ್ಲಲ್ಲಿ ಕಲೆ/ಮಚ್ಚೆ. ಗೋಡೆಯ ಧ್ಯಾನ ನಿಡಿದಾಗಿ
ಅದೀಗ ನನ್ನ ಮನಸಿನದೇ ಭಾಗ. ಆದರದು ಕಂಪಿಸುವುದು
ಮುಖಗಳು ಮತ್ತೆ ಕತ್ತಲು ನಮ್ಮನ್ನು ಮತ್ತೆ ಮತ್ತೆ ದೂರವಾಗಿಸುವವು.

ಈಗ ನಾನೊಂದು ಕೊಳ. ಹೆಂಗಸು ನನ್ನತ್ತ ಬಾಗಿದ್ದಾಳೆ.
ತಾನೇನು ನಿಜವಾಗಲೂ ಎಂದು ತಿಳಿಯಲು ನನ್ನಾಳ ಅರಸುತ್ತಾಳೆ.
ಆ ಸುಳ್ಳರತ್ತ ತಿರುಗುತ್ತಾಳೆ. ಅದೇ ದೀಪಗಳು, ಅದೇ ಬೆಳದಿಂಗಳು ಎಂಬ ಸುಳ್ಳರು
ಅವಳ ಬೆನ್ನು ನೋಡುತ್ತೇನೆ, ಅದನ್ನೇ ಯಥಾವತ್ ಪ್ರತಿಫಲಿಸುತೇನೆ.
ಕಂಬನಿ, ಕಂಪಿಸುವ ಕೈ ಅವಳು ನನಗೆ ಕೊಡುವ ಬಹುಮಾನ.
ನಾನು ಬಹಳ ಮುಖ್ಯ ಅವಳ ಪಾಲಿಗೆ.
ಪ್ರತಿದಿನ ಬೆಳಗ್ಗೆ ಅವಳು ಬರುತ್ತಾಳೆ, ಅವಳ ಮುಖ ಕತ್ತಲೆಯನ್ನು ಕಳೆಯುತ್ತದೆ
ಪ್ರಾಯದ ಹುಡುಗಿಯನ್ನು ಅವಳು ಮುಳುಗಿಸಿದ್ದಾಳೆ ನನ್ನಲ್ಲಿ
ಪ್ರತಿದಿನವೂ ಮೂಳಿ ಮುದುಕಿಯೊಬ್ಬಳು, ಭಯಂಕರ ತಿಮಿಂಗಿಲದ ಹಾಗೆ
ನನ್ನಿಂದೆದ್ದು ಅವಳತ್ತ ಸಾಗುತ್ತಾಳೆ.

 

I am silver and exact. I have no preconceptions.
Whatever you see I swallow immediately
Just as it is, unmisted by love or dislike.
I am not cruel, only truthful—
The eye of a little god, four-cornered.
Most of the time I meditate on the opposite wall.
It is pink, with speckles. I have looked at it so long
I think it is a part of my heart. But it flickers.
Faces and darkness separate us over and over.

Now I am a lake. A woman bends over me,
Searching my reaches for what she really is.
Then she turns to those liars, the candles or the moon.
I see her back, and reflect it faithfully.
She rewards me with tears and an agitation of hands.
I am important to her. She comes and goes.
Each morning it is her face that replaces the darkness.
In me she has drowned a young girl, and in me an old woman
Rises toward her day after day, like a terrible fish.

(1961, ದಿ ಮಿರರ್)

(ಮುಂದುವರಿಯುವುದು)