ತಂಬುಳಿಗೆ ಕಲೆಸಿದ್ದ ಅಷ್ಟೂ ಅನ್ನವನ್ನು ಬದಿಗೆ ದೂಡಿ ಹುಳಿಗೆ ಅನ್ನ ಕಲೆಸಲು ಸನ್ನದ್ಧನಾದ ಶಿವರಾಮ. ಹುಳಿ ಬಡಿಸಲು ಬಂದ ಸೀತಾಲಕ್ಷ್ಮಿಯ ಕೈಗಳು ಅಕ್ಷರಶಃ ನಡುಗುತ್ತಿದ್ದುವು. ತನ್ನ ತೌರಿನಲ್ಲಿ ಇಂತಾದ್ದೆಲ್ಲಾ ಕಂಡು ಗೊತ್ತಿಲ್ಲದ ಹುಡುಗಿಗೆ ದಿಗಿಲು, ದುಃಖ. ವಾಸ್ತವವಾಗಿ ಇದು ತನ್ನ ತಲೆಕೂದಲು ಎಂದು ಅವಳಿಗೆ ಅನುಮಾನ. ಮಂಗಳವಾರ ಅವತ್ತು. ಸೀತಾಲಕ್ಷ್ಮಿ ಅತ್ತೆ ಹೇಳಿದಂತೆ ತಲೆಗೆ ಎರೆದುಕೊಂಡಿದ್ದಳು. ಒದ್ದೆ ತಲೆಕೂದಲನ್ನು ಪಾಣಿಪಂಚೆಯಿಂದ ವರೆಸಿಕೊಂಡು ತುದಿಗಂಟು ಹಾಕಿಕೊಂಡಿದ್ದರೂ ಉಟ್ಟ ಸೀರೆಯ ಮೇಲೆ ಕೂದಲು ಉದುರಿ ಬಿದ್ದಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ವಸುಮತಿ ಉಡುಪ ಬರೆದ ಕಾದಂಬರಿ “ಅಂತಃಪುರ”ದ ಕೆಲವು ಪುಟಗಳು ನಿಮ್ಮ ಓದಿಗೆ

ಸೀತಾಲಕ್ಷ್ಮಿ ಎನ್ನುವ ಹದಿನಾರರ ಎಳೆಪ್ರಾಯದ ಹುಡುಗಿ ತನಗಿಂತಾ ಹತ್ತು ವರ್ಷ ದೊಡ್ಡವನಾದ ಶಿವರಾಮನ ಕೈ ಹಿಡಿದು ಬಲಗಾಲು ಮುಂದಿಟ್ಟು ಅವರ ಮನೆಯ ಹೊಸಿಲು ದಾಟಿ ಮನೆಯೊಳಗೆ ಕಾಲಿಟ್ಟಾಗ ಏನೆಂದರೆ ಏನೂ ಅರಿಯದ ಮುಗ್ಧೆ. ಮಾಧ್ಯಮಿಕಶಾಲೆ ಮುಗಿಸುವಷ್ಟಕ್ಕೆ ಕೈದಾಗಿತ್ತು ವಿದ್ಯೆ. ಅಡುಗೆ, ಮನೆಗೆಲಸ, ಕೊಟ್ಟಿಗೆ ಕೆಲಸ ಎಂದು ಆ ಕಾಲದ ಹೆಣ್ಣುಮಕ್ಕಳಿಗೆ ಅತ್ಯಗತ್ಯವಾಗಿ ಇರಬೇಕಾದ ಪ್ರಾಥಮಿಕಜ್ಞಾನದ ಕುರಿತು ಅರಿವು ಮೂಡಿಸಿದ್ದರು ಅಮ್ಮ. ಹುಟ್ಟಿ ಬೆಳೆದ ಹಳ್ಳಿ ಊರಿನಂತೆಯೇ ಇದ್ದ ಮತ್ತೊಂದು ಹಳ್ಳಿಗೆ ನವವಧುವಾಗಿ ಹೋದವಳ ಮನಸ್ಸಿನಲ್ಲಿ ಕಾಮನಬಿಲ್ಲಿನ ರಂಗುಗಳು ಚಿತ್ತಾರ ಬಿಡಿಸಿದ್ದುವು ಅನ್ನುವಂತಿರಲಿಲ್ಲ. ಅಷ್ಟೆಲ್ಲಾ ಯೋಚಿಸುವಷ್ಟು ಬುದ್ಧಿವಂತೆಯೇನಾಗಿರಲಿಲ್ಲ. ಇನ್ನೂ ಹುಡುಗಾಟಿಕೆ ಪೂರ್ತಿ ಹೋಗದೆ ಬೆಳೆದ ಮಗುವಿನಂತೆ ಇದ್ದವಳು ಸೀತಾಲಕ್ಷ್ಮಿ. ಗಂಡನ ಮನೆಯಲ್ಲಿ ತುಂಬು ಕುಟುಂಬ. ಅಪ್ಪ ಅರೆ ಆಯುಸ್ಸಲ್ಲಿ ತೀರಿಕೊಂಡ ಮೇಲೆ ಶಿವರಾಮನೇ ಮನೆಯ ಯಜಮಾನ. ಸೀತಾಲಕ್ಷ್ಮಿ ಎಂಟನೇ ಕ್ಲಾಸು ಪಾಸಾಗಿದ್ದರೆ ಶಿವರಾಮನಿಗೆ ಅಷ್ಟು ವಿದ್ಯೆಯೂ ಇಲ್ಲ. ನಾಲ್ಕೋ, ಐದೋ ವರ್ಷ ಸ್ಕೂಲಿಗೆ ಮಣ್ಣು ಹೊತ್ತಿದ್ದ. ಐದೆಕರೆ ಅಡಿಕೆ ತೋಟ, ಎಂಟು ಎಕರೆ ಭತ್ತ ಬೆಳೆಯುವ ಗದ್ದೆ ಇದ್ದ ಜಮೀನ್ದಾರಿ ಕಟುಂಬ. ಜಾತಕ ಕೂಡುತ್ತದೆ ಅಂದರೆ ಕಣ್ಣು ಮುಚ್ಚಿ ಹುಡುಗಿಯನ್ನು ಮದುವೆ ಮಾಡಿಕೊಡುತ್ತಿದ್ದ ಕಾಲ. ವಯಸ್ಸಿನ ಅಂತರ ದೊಡ್ಡ ವಿಷಯವೇ ಅಲ್ಲ. ಇಷ್ಟಕ್ಕೂ ಸೀತಾಲಕ್ಷ್ಮಿ ಪುಣ್ಯವಂತೆ ಎಂದು ಅವಳ ಅಮ್ಮ ಅಟ್ಟ ಹತ್ತಿಸಿ ಕೂರಿಸಿದ್ದರು. ಅಪ್ಪನಿಗೂ, ಅಮ್ಮನಿಗೂ ಭರ್ತಿ ಇಪ್ಪತ್ತು ವರ್ಷಗಳ ವ್ಯತ್ಯಾಸ. ಎರಡನೇ ಸಂಬಂಧ. ಮೊದಲ ಹೆಂಡತಿಯ ಇಬ್ಬರು ಮಕ್ಕಳನ್ನು ಸ್ವಂತ ಮಕ್ಕಳಂತೆ ನೋಡಿಕೊಂಡ ಪುಣ್ಯಾತ್ಗಿತ್ತಿ. ಸ್ವಂತ ಮಕ್ಕಳಿಗಾದರೆ ಎರಡೇಟು ಹೊಡೆದರೂ ನಡೆಯುತ್ತದೆ.

(ವಸುಮತಿ ಉಡುಪ)

ಮಲಮಕ್ಕಳ ಮೈ ಮುಟ್ಟಿದರೆ ದೊಡ್ಡ ಪುಕಾರು. ಅಪವಾದ. ಮಲತಾಯಿ ಮತ್ತೆ ಹೇಗಿರುತ್ತಾಳೆ ಎನ್ನುವ ಕಿರೀಟ. ಸೀತಾಲಕ್ಷ್ಮಿ ಇಂತಾ ಕಂಟಕಗಳನ್ನು ಎದುರಿಸ ಬೇಕಾದ್ದಿಲ್ಲ ಎಂದು ಅಮ್ಮನಿಗೆ ಪರಮ ಸಂತೋಷ. ಶಿವರಾಮ ನೋಡಲು ಸುರೂಪಿ. ಅನುಕೂಲದ ಮನೆತನ. ಈಡುಜೋಡು ಚೆನ್ನಾಗಿದೆ. ಹೆಣ್ಣಾದವಳಿಗೆ ಮತ್ತೇನು ಬೇಕು ಎನ್ನುವುದು ಆವಾಗಿನ ಮನೋಧರ್ಮ. ಮನೆಯಲ್ಲಿ ಶಿವರಾಮನ ಸಕೇಶಿ ಅಕ್ಕ ಕಮಲಾ ಇದ್ದಳು. ವಿಧವೆಯಾದ ಮೇಲೆ ಕೇಶಮುಂಡನ ಮಾಡಿಸಿಕೊಂಡ ಅತ್ತೆ ಇದ್ದರು. ಮದುವೆಯ ವಯಸ್ಸಿಗೆ ಬಂದ ಮೈದುನ ಇದ್ದ. ‘ಹೊಂದಿಕೊಂಡು ಹೋಗ ಬೇಕು’ ಎಂದು ಅರೆದು ಹುಯ್ದು ಕಳಿಸಿದ್ದರು ಹೆತ್ತವರು. ಸೀತಾಲಕ್ಷ್ಮಿ ಹೊಂದಿಕೊಂಡು ಹೋದಳು ಕೂಡಾ. ಮನೆಗೆಲಸದಲ್ಲಿ ಅತ್ತಿಗೆ, ಅತ್ತೆ ಸಹಾಯ ಮಾಡುತ್ತಿದ್ದುದರಿಂದ ಅದೊಂದು ದೊಡ್ಡ ಹೊರೆ ಅನಿಸಲಿಲ್ಲ. ಆದರೆ ಮುಖ್ಯವಸ್ತುವೇ ಸ್ವಲ್ಪ ಅತಿರೇಕದ್ದು. ಶಿವರಾಮ ಮಹಾ ಎದುರುಸಿಟ್ಟಿನ ಮನುಷ್ಯ. ಮೂಗಿನ ತುದಿಯಲ್ಲಿ ಸಿಟ್ಟು. ವಯಸ್ಸನ್ನು ಗಮನಿಸದೆ ಅವನು ಅಕ್ಕನಿಗೋ, ಅಮ್ಮನಿಗೋ ಸಟಕ್ಕನೆ ಏನಾದರೂ ಹೇಳಿದರೆ ಸೀತಾಲಕ್ಷ್ಮಿಗೇ ಒಂಥರಾ ಆಗುತ್ತಿತ್ತು.

ಹೆಂಡತಿ ಎಂದು ಸೀತಾಲಕ್ಷ್ಮಿಯನ್ನು ತಲೆಯ ಮೇಲೆ ಏರಿಸಿ ಕೂರಿಸಿಕೊಳ್ಳಲಿಲ್ಲ ಶಿವರಾಮ. ಎಲ್ಲಾ ಸರಿಯಾಗಿದ್ದಲ್ಲೂ ಏನೋ ಹುಳುಕು ಹುಡುಕುವವನನ್ನು ಕಂಡು ‘ಜನ ಹೀಗೂ ಇರುತ್ತಾರಾ?’ ಎಂದು ಹೊಸ ಮದುವಳಿಗೆಗೆ ಅಚ್ಚರಿ ಗಂಡನೊಡನೆ ಮುಖ ಕೊಟ್ಟು ಮಾತನಾಡಲು ಅವಳಿಗೆ ಧೈರ್ಯ ಇರಲಿಲ್ಲ. ಹೆದರಿ ಹೆದರಿಯೇ ಒಡನಾಡುವುದು ಅಭ್ಯಾಸವಾಗಿತ್ತು. ಅವನಿಗೆ ಸಿಟ್ಟು ಬರಲು ಇಂತಾದ್ದೇ ದೊಡ್ಡ ಕಾರಣ ಬೇಕು ಎನ್ನುವುದಿರಲಿಲ್ಲ. ಒಂದು ಘಟನೆ ಇವತ್ತಿಗೂ ನೆನಪಿದೆ ಸೀತಾಲಕ್ಷ್ಮಿಗೆ. ಅವತ್ತು ಮನೆಯ ಗಂಡಸರಿಬ್ಬರೂ ಊಟಕ್ಕೆ ಕೂತಿದ್ದರು. ಸೀತಾಲಕ್ಷ್ಮಿ ಬಡಿಸುತ್ತಿದ್ದಳು. ತಂಬುಳಿಯಲ್ಲಿ ಮೊದಲ ಅನ್ನ ಕಲೆಸಿ ಒಂದು ತುತ್ತು ಬಾಯಿಗಿಟ್ಟಿದ್ದ ಶಿವರಾಮ. ಅನ್ನದ ತುತ್ತಿನೊಡನೆ ಉದ್ದದ ಒಂದು ಕೂದಲೆಳೆ ಬಾಯಿಗೆ ಬಂತು. ಕೆಂಚಗಾಯ್ತು ಮುಖ. “ಯಾರು ಅಡಿಗೆ ಮಾಡಿದ್ದು? ಕಣ್ಣು ಹೊಟ್ಟಿ ಹೋಗಿದೆಯಾ?” ದನಿ ಏರಿಸಿ ಕೇಳಿದ ಶಿವರಾಮ. ಯಾರು ಅಡಿಗೆ ಮಾಡಿದ್ದು? ಮೂರೂ ಜನ ಹೆಂಗಸರು ಕೈ ಜೋಡಿಸಿದ್ದರು. ತರಕಾರಿ ಹೆಚ್ಚಿಕೊಟ್ಟಿದ್ದು ಲಾಗಾಯ್ತಿನ ಪದ್ಧತಿಯಂತೆ ಅತ್ತೆ ವೆಂಕಮ್ಮ. ಮೇಲೋಗರಕ್ಕೆ ಅರೆದುಕೊಟ್ಟಿದ್ದು ಸೀತಾಲಕ್ಷ್ಮಿ ಮತ್ತು ಒಲೆಯ ಮುಂದೆ ಕೂತು ಅಡಿಗೆ ಮಾಡಿದ್ದು ಕಮಲಾ. ಮತ್ತೆ ತುತ್ತು ಎತ್ತಲಿಲ್ಲ ಶಿವರಾಮ. ಎಲೆಯಲ್ಲಿದ್ದ ಅನ್ನವನ್ನು ಬೆದಕಿ ಬೆದಕಿ ಪರೀಕ್ಷೆ ಮಾಡಿದ. ಅಲ್ಲೇ ಬಾಗಿಲ ಹತ್ತಿರ ನಿಂತಿದ್ದರು ವೆಂಕಮ್ಮ. “ಅದೆಂತಕ್ಕೆ ಹಂಗೆ ಮಾಡ್ತೀಯೋ? ಏನೋ ಪರಾಮೋಷಿ ಆಗಿದೆ. ತೆಗೆದು ಬದಿಗಿಟ್ರೆ ಆಯ್ತಪ್ಪಾ..” ಅಂದರು.

“ಅಡಿಗೆ ಮಾಡ್ಬೇಕಾರೆ ಮೈಮೇಲೆ ಪ್ರಜ್ಞೆ ಇರ್ಲಿಲ್ವಾ?”
“ಥೂ ಹುಚ್ಚಪ್ಪಾ, ಯಾರಾರೂ ಬೇಕ್ ಬೇಕೂಂತ ಹಾಕ್ತಾರಾ? ಏನೋ ಪರಾಮೋಷಿ..”
“ಹೇಳಿದ್ದೇ ಹೇಳ್ಬೇಡ ನೀನು. ನಂಗೆ ಇಂತದೆಲ್ಲಾ ಒಡ್ಡೊಡ್ಡು ಕೆಲಸ ಇಷ್ಟ ಆಗಲ್ಲ. ಅಸಂಯ್ಯ ಆಗುತ್ತೆ..”
“ಆಯ್ತಪ್ಪಾ ಮಾರಾಯಾ, ನಾಳೆಂದ ನಾಜೂಕಾಗಿ ಕೆಲಸ ಮಾಡ್ತೀವಿ ಆಯ್ತಾ?”

ತಂಬುಳಿಗೆ ಕಲೆಸಿದ್ದ ಅಷ್ಟೂ ಅನ್ನವನ್ನು ಬದಿಗೆ ದೂಡಿ ಹುಳಿಗೆ ಅನ್ನ ಕಲೆಸಲು ಸನ್ನದ್ಧನಾದ ಶಿವರಾಮ. ಹುಳಿ ಬಡಿಸಲು ಬಂದ ಸೀತಾಲಕ್ಷ್ಮಿಯ ಕೈಗಳು ಅಕ್ಷರಶಃ ನಡುಗುತ್ತಿದ್ದುವು. ತನ್ನ ತೌರಿನಲ್ಲಿ ಇಂತಾದ್ದೆಲ್ಲಾ ಕಂಡು ಗೊತ್ತಿಲ್ಲದ ಹುಡುಗಿಗೆ ದಿಗಿಲು, ದುಃಖ. ವಾಸ್ತವವಾಗಿ ಇದು ತನ್ನ ತಲೆಕೂದಲು ಎಂದು ಅವಳಿಗೆ ಅನುಮಾನ. ಮಂಗಳವಾರ ಅವತ್ತು. ಸೀತಾಲಕ್ಷ್ಮಿ ಅತ್ತೆ ಹೇಳಿದಂತೆ ತಲೆಗೆ ಎರೆದುಕೊಂಡಿದ್ದಳು. ಒದ್ದೆ ತಲೆಕೂದಲನ್ನು ಪಾಣಿಪಂಚೆಯಿಂದ ವರೆಸಿಕೊಂಡು ತುದಿಗಂಟು ಹಾಕಿಕೊಂಡಿ ದ್ದರೂ ಉಟ್ಟ ಸೀರೆಯ ಮೇಲೆ ಕೂದಲು ಉದುರಿ ಬಿದ್ದಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸೀರೆಯ ಮೇಲಿದ್ದಿದ್ದು ಅಡುಗೆಗೆ ಬಿದ್ದರೆ ಏನಾಶ್ಚರ್ಯ? ಕತ್ತಲು ಕತ್ತಲಿನ ಅಡುಗೆಮನೆ.

ಚುರುಕುಗಣ್ಣಿನಹುಡುಗಿಯಿಂದ ಕೂಡಾಕಣ್ತಪ್ಪು ಆಗಿದ್ದರೆ ಆಶ್ಚರ್ಯವೇನಿಲ್ಲ. ತನ್ನಿಂದಾಗಿ ಎಲ್ಲರಿಗೂ ಮಂಗಳಾರತಿ ಆಯ್ತೆಂದು ಹುಡುಗಿಗೆ ಕಣ್ಣು ಒದ್ದೆಯಾಗಿತ್ತು. ಹುಳಿ ಬಡಿಸಲು ಬಂದವಳ ನಡುಗುತ್ತಿದ್ದ ಕೈನಿಂದ ಸೌಟು ಎಲೆಯಲ್ಲಿದ್ದ ಅನ್ನಕ್ಕೆ ಬಿದ್ದಿದ್ದು ಮಹಾಪರಾಧವಾಗಿಹೋಯ್ತು. ತಣಿಯಲು ಬಂದಿದ್ದ ಶಿವರಾಮನ ಸಿಟ್ಟು ಮತ್ತೆ ಏರಿತು.

“ಬೆಳಿಗ್ಗೆ ತಿಂಡಿ ತಿಂದಿಲ್ವನೇ? ಕೈಯಲ್ಲಿ ಬಲ ಇಲ್ವಾ?” ಕೇಳಿದ ಶಿವರಾಮ. ‘ಬರುತ್ತೇನೆ, ಬರುತ್ತೇನೆ’ ಅನ್ನುವಂತಿದ್ದ ಅಳು ಹೊರಗೆ ನುಗ್ಗಿ ಬಂದೇಬಿಟ್ಟಿತು. ಸೀತಾಲಕ್ಷ್ಮಿ ಸರಕ್ಕನೆ ತಿರುಗಿ ಅಡುಗೆಮನೆ ಸೇರಿಕೊಂಡಳು.

“ಥುತ್, ಹೆಂಗಸ್ರ ಜಾತಿಗಿಷ್ಟು. ಮಾತೆತ್ತಿದ್ರೆ ಅತ್ತುಬಿಟ್ರೆ ಸೈ. ಅತ್ತು ಹೆದರಿಸೋಕೆ ಬಂದ್ರೆ ಇಲ್ಲಿ ಹೆದರೋರು ಯಾರಿಲ್ಲ ಗೊತ್ತಾಯ್ತಾ?” ಎಲ್ಲಾ ಕಿವಿಯ ಮೇಲೆ ಬೀಳುತ್ತಿತ್ತು ಒಳಗೆ ಮಂಡಿಯಲ್ಲಿ ಮುಖ ಹುದುಗಿಸಿ ಕೂತ ಸೀತಾಲಕ್ಷ್ಮಿಗೆ. ತನ್ನ ತೌರಿನಲ್ಲಾದರೆ ಅಣ್ಣಂದಿರು ಇಂತಾ ಪ್ರಸಂಗವನ್ನು ಎಷ್ಟು ತಮಾಷೆಯಾಗಿ ತೆಗೆದುಕೊಳ್ಳುತ್ತಿದ್ದರು ಎಂದು ನೆನೆದು ದುಃಖದ ತೀವ್ರತೆ ಹೆಚ್ಚಾಗಿತ್ತು. ಮಲ ಅಣ್ಣಂದಿರಾದರೇನು, ಈ ತಂಗಿಯನ್ನು ಕಣ್ಣಗೊಂಬೆಯಂತೆ ಕಾಪಾಡಿಕೊಂಡಿದ್ದಾರೆ. ಬೆಳೆಸಿದ್ದಾರೆ. ಹಿಡಿದದ್ದು ಮುಟ್ಟಿದ್ದಕ್ಕೆಲ್ಲಾ ಹೆದರಿ ಹೆದರಿ ಸಾಯುವ ಪರಿಸ್ಥಿತಿ ಆ ಮನೆಯಲ್ಲಿರಲಿಲ್ಲ. ಅಲ್ಲಿ ಹೀಗೇನಾದರೂ ಆದರೆ ಅದನ್ನೇ ಒಂದು ತಮಾಷೆಯಾಗಿ ತೆಗೆದುಕೊಂಡು ಹೇಗೆ ನಕ್ಕು ನಲಿಯುತ್ತಿದ್ದರು ಎಂದು ಅವಳಿಗೆ ಅನಿಸಿಯೇ ಅನಿಸಿತು.

“ಇವತ್ತೇನು ವಿಶೇಷ, ಅಡುಗೆಗೆ ಕರಿಕೇಸರಿ ಹಾಕಿದೀರಿ?” ಅನ್ನುವ ನಗೆಚಾಟಿಕೆ ಮಾಮೂಲು.

“ಹೌದು ಕಣೋ, ನಿಂಗೇಂತ್ಲೇ ಹಾಕಿದ್ದು. ರುಚಿಯಾಗಿಲ್ವಾ ಹುಳಿ?” ಅನ್ನುವಷ್ಟು ಸಲಿಗೆ ತಂಗಿಗಿತ್ತು. ಅಂದೂ ಅನ್ನುತ್ತಿದ್ದಳು. ಅದನ್ನು ಎತ್ತಿ ಹಿಡಿದು ಕಣ್ಣಳತೆಯಲ್ಲಿ ಅಂದಾಜು ಮಾಡಿ ಅಮ್ಮನ ತಲೆಕೂದಲೋ, ತಂಗಿಯದೋ ಎನ್ನುವ ವಾದ ವಿವಾದ ಕೂಡಾ ನಡೆಯುತ್ತಿತ್ತು. ಏನು ಅರೆಯಾಗಿದೆ ಈ ಮನೆಯಲ್ಲಿ? ಯಾಕೆ ಎಲ್ಲರ ಮೇಲೂ ಉರಿದು ಬೀಳುವ ಸಿಟ್ಟು ಗಂಡನಿಗೆ? ಅವತ್ತು ಕಮಲ ಬಡಿಸಲು ಹೋದರೆ ಕೇಳಲಿಲ್ಲ ಗ್ರಾಸ್ತ.
“ನೀನ್ಯಾಕೆ ಬಂದೆ? ಅವಳಿಗೇನು ಕೈ ಮೋಟಾಗಿದ್ಯಾ? ಯಾರಾರೂ ಅಪ್ಪಂತೋರು ಮನೆಗೆ ಬಂದ್ರೆ ಹಿಂಗಿದ್ದೇ ಮಾಡಿಡಿ ಆಯ್ತಾ? ಮರ್ಯಾದೆ ಬರುತ್ತೆ..”

‘ನಾಯಿ ಬಾಯಿಗೆ ಕೋಲು ಹೆಟ್ಟಿದ ಹಂಗೆ’ ಎನ್ನುವ ಗಾದೆ ನೆನಪಾಗಿತ್ತು ಸೀತಾಲಕ್ಷ್ಮಿಗೆ. ಕಣ್ಣೊರೆಸಿಕೊಂಡು ಅತ್ತಿಗೆ ಒಳಗೆ ತಂದಿದ್ದ ಹುಳಿ ಪಾತ್ರೆಯನ್ನು ಕೈಗೆತ್ತಿ ಕೊಂಡಿದ್ದಳು. ‘ಮೈಯೆಲ್ಲಾ ಕಣ್ಣಾಗಿ..’ ಎನ್ನುವಂತೆ ಗಂಡನಿಗೆ ಬಡಿಸಿದ್ದಳು. ಶಿವರಾಮ ಉಂಡೆದ್ದು, ಕೈ ತೊಳೆದು, ಕವಳ ಕಟ್ಟಲು ಮುಂಚೇಕಡೆಗೆ ದಾಟಿದ ಮೇಲೆ ಊಟಕ್ಕೆ ಕೂತ ಹೆಂಗಸರಿಗೆ ಬಡಿಸಲು ಟೊಂಕ ಕಟ್ಟಿ ನಿಂತಿದ್ದು ಮೈದುನ ವೆಂಕಟರಾಮು. ಸೀತಾಲಕ್ಷ್ಮಿಯ ಕಣ್ಣುಗಳಲ್ಲಿ ಇನ್ನೂ ಗಂಗಾಭವಾನಿ ಧುಮುಕುತ್ತಿರುವುದನ್ನು ಕಂಡು ಸಮಾಧಾನ ಹೇಳಿದ್ದ,

“ಒಂದೇ ದಿನಕ್ಕೆ ಕಣ್ಣೀರೆಲ್ಲಾ ಖಾಲಿ ಮಾಡ್ಕಂಬೇಡಿ ಅತ್ಗೆ. ದಿನಾ ಏನಾದ್ರೊಂದು ರಾಮಾಯಣ ಈ ಮನೇಲಿ ನಡೀತಾನೇ ಇರುತ್ತೆ. ಅಳ್ತಾ ಕೂತ್ಗಂಡ್ರೆ ಮುಗೀತು ಕತೆ. ‘ನಂಗಲ್ಲ’ ಅನ್ನೋ ಹಂಗೆ ತಟ್ಟಿ ಹಾರಿಸಿಬಿಡ್ಬೇಕು..”

“ಹೌದು ಕಣೇ. ಏನು ಮಾತಾಡ್ತೀನಿ ಅಂತ ಅವನಿಗೆ ಎಷ್ಟೋ ಸಲ ಗೊತ್ತೇ ಇರಲ್ಲ. ಬಾಯಿಗೆ ಬಂದದ್ದು ವದರಿಬಿಡ್ತಾನೆ..” ಕಮಲತ್ತಿಗೆಯ ಸಾಂತ್ವನ.

“ಮುಂಚಿಂದ ಅವನು ಹಿಂಗಿದ್ದೋನಲ್ಲ. ಅವನ ಅಪ್ಪ ಹೋದಾಗ ಅವನಿಗೆ ಎಷ್ಟೊರ್ಷ ಅಂತಿ? ಇನ್ನೂ ಹದಿನೈದು ತುಂಬಿತ್ತು ಕಣೇ. ಓದ್ಕಂಡಿರೋ ವಯಸ್ಸಲ್ಲಿ ಇಡೀ ಮನೆ ಜವಾಬ್ದಾರಿ ತಲೇಮೇಲೆ ಕಡ್ಕೊಂಡು ಬಿತ್ತು. ದೋರೆಗಾಯೀನ ಹಿಚುಕಿ ಹಣ್ಣು ಮಾಡಿದ್ರೆ ಹೆಂಗಿರುತ್ತೆ ಹೇಳು? ಮೇಲೆ ಕಾಣೋಕೆ ಮೆತ್ತಗಾಗಿರೋ ಹಣ್ಣು. ಒಳಗೆ ಹುಳಿ. ಇವನು ಪಾಪದೋನಾಗಿದ್ರೆ ಜನ ಹುರಿದು ಮುಕ್ಕಿಬಿಡ್ತಿದ್ರು. ಜೋರಾಗ್ದೆ ವಿಧಿ ಇರ್ಲಿಲ್ಲ ಇವಂಗೆ. ಆಮೇಲಾಮೇಲೆ ಅದೇ ಅಭ್ಯಾಸ ಆಯ್ತು..” ವೆಂಕಮ್ಮ ಹಳೇಪುರಾಣ ಬಿಚ್ಚಿಟ್ಟಿದ್ದರು.

“ಅಷ್ಟೇ ಅಲ್ಲ ಅತ್ಗೆ, ಕಮಲಕ್ಕಂದು ಅತಂತ್ರ ಆಗಿ ಕೂತ್ಗಂತಲ್ಲ, ಇವನಿಗೆ ತಲೆ ಹನ್ನೆರಡಾಣೆ ಆಗ್ದಿದ್ದು ಹೆಚ್ಚು..” ವೆಂಕಟರಾಮು ಹೇಳಿದ್ದ.
ಸೀತಾಲಕ್ಷ್ಮಿಯನ್ನು ಎಲ್ಲಾ ಸೇರಿ ಸಂತೈಸಿದ್ದರು. ಯಾವಾಗೆಂದರೆ ಆವಾಗ ಪ್ರಕೋಪಕ್ಕೆ ತಲುಪುವ ಶಿವರಾಮನ ಅಸಹನೆಗೆ ಕಾರಣ ತಿಳಿಸಿದ್ದರು. ‘ಪಾಪ..’ ಅನಿಸಿತ್ತು ಸೀತಾಲಕ್ಷ್ಮಿಗೆ. ಎಳೆಹುಡುಗನ ಹೆಗಲಿಗೆ ಮಣಭಾರ ಬಿದ್ದರೆ ಕುಸಿದು ಹೋಗುವುದರಲ್ಲಿ ಆಶ್ಚಯವೇನಿಲ್ಲ ಅನಿಸಿತ್ತು. ಅವಳಿಗೆ ಅಗತ್ಯವಾದ ಸಾಂತ್ವನ ಆ ಕ್ಷಣದಲ್ಲಿ ಅವಳಿಗೆ ಸಿಕ್ಕಿತ್ತು. ಸಮಾಧಾನದಿಂದ ಹೊಟ್ಟೆ ತುಂಬಾ ಉಂಡಿದ್ದಳು ಸೀತಾಲಕ್ಷ್ಮಿ.

*****

ಸೀತಾಲಕ್ಷ್ಮಿಯ ಮದುವೆಯಾಗುವುದಕ್ಕಿಂತಾ ಹತ್ತಿಪ್ಪತ್ತು ವರ್ಷ ಮುಂಚಿನ ಕಾಲ ಅದೆಂತಾ ಕೆಟ್ಟ ಕಾಲವಾಗಿತ್ತು ಅಂದರೆ ಬೆಳೆದು ನಿಂತ ಹುಡುಗಿಯರ ಲಗ್ನ ಮಾಡುವುದು ಅಂದರೆ ದೊಡ್ಡ ಯಜ್ಞ. ಬೆಳೆದು ನಿಲ್ಲುವುದು ಆಂದರೇನು? ಮೈನೆರೆದು ಕೂತರೆ ಬೆಳೆದು ನಿಂತ ಅರ್ಥ. ಆದಷ್ಟು ಬೇಗ ಮನೆಮಗಳನ್ನು ದಾಟಿಸಿ ಕೈ ತೊಳೆದುಕೊಳ್ಳುವ ಅವಸರ. ಮೈ ನೆರೆಯುವ ಮೊದಲೇ ಮದುವೆ ಮಾಡಿದ ಉದಾಹರಣೆಗಳು ಬೇಕಾದಷ್ಟು. ಜಾತಕದ ಹೊಂದಾಣಿಕೆಯಾದರೆ ಸಾಕು, ಮದುಮಗನಾಗುವವನ ವಯಸ್ಸು ದೊಡ್ಡದಾಗಿ ಕಾಣುತ್ತಿರಲಿಲ್ಲ. ಹುಡುಗಿಯ ಅಪ್ಪನ ವಯಸ್ಸಾಗಿದ್ದರೂ ಸೈ, ಎರಡನೆಯ, ಮೂರನೆಯ ಸಂಬಂಧವಾದರೂ ಸೈ, ‘ಹುಲ್ಲು, ನೀರು ಇರುವ ಕಡೆ ನೋಡಿ ಕಟ್ಟಿದರೆ’ ಅದು ಹುಡುಗಿಯ ಭಾಗ್ಯ. ಹೀಗಿರುವ ಕಾಲಮಾನದಲ್ಲಿ ಮನೆಮನೆಯಲ್ಲೂ ಗಂಡನನ್ನು ಕಳೆದುಕೊಂಡ ವಿಧವೆಯರು ಒಂದಿಬ್ಬರಾದರೂ ಇರುತ್ತಿದ್ದರೆಂದರೆ ಆಶ್ಚರ್ಯವಲ್ಲ. ಇಲ್ಲದಿದ್ದರೆ ಅದೇ ಆಶ್ಚರ್ಯ. ‘ಕಷ್ಟಾನೋ, ಸುಖಾನೋ ಹೊಕ್ಕ ಮನೇಲೇ ಬದುಕು ಮಾಡುತ್ತೇನೆ’ ಎಂದು ಗಂಡನಮನೆಗೆ ಖಾಯಮ್ಮಾಗಿ ಕಚ್ಚಿಕೊಂಡವರಿರುತ್ತಿದ್ದರು.

“ಜೀವನಾಂಶ ಕೇಳಣ ಕಣೇ, ಅಷ್ಟೋ ಇಷ್ಟೋ ಕೊಡ್ದೆ ಇರ್ತಾರಾ? ಯಾರಿದಾರೆ ಅಂತ ಅಲ್ಲಿ ಜೀವ ಸಮೆಸ್ತಿ?” ಆ ಸಂದರ್ಭದ ಸಹಾನುಭೂತಿಯಿಂದ ಒಡಹುಟ್ಟಿದವರು ತೌರಿಗೆ ಆಹ್ವಾನಿಸಿದರೆ ಹೆಚ್ಚಿನವರು ನಿರಾಕರಿಸುತ್ತಿದ್ದುದಕ್ಕೆ ಸಕಾರಣ ಇರುತ್ತಿತ್ತು. ಎಲ್ಲಿ ಹೋದರೂ ರಟ್ಟೆಮುರಿ ಗೆಯ್ತ ತಪ್ಪಿದ್ದಲ್ಲ.

ಮಧ್ಯಾಹ್ನದ ಒಂದು ಊಟ, ರಾತ್ರಿ ಒಂದು ಮುಷ್ಠಿ ಅವಲಕ್ಕಿಗೆ ಭಾಜನರಾದವರು ಎಲ್ಲಿದ್ದರೇನು? ಕೂರಿಸಿ ಅನ್ನ ಹಾಕುತ್ತೇವೆಂದು ತೌರಿಗೆ ಕರೆದುಕೊಂಡು ಬಂದವರಿಗೆ ಮನೆ ತಪ್ಪಿದ ಹೆಣ್ಣಿನ ಕುರಿತು ಕ್ರಮೇಣ ಸಸಾರ. ಒಡಹುಟ್ಟಿದವರ ಕಿಮಿ ತಿರುಪಲು ಅವರವರ ಹೆಂಡಂದಿರು ಇದ್ದೇ ಇರುತ್ತಾರಲ್ಲ? ಗತಿ ಇಲ್ಲದೆ ಬಂದು ಸೇರಿಕೊಂಡವರೆಂದರೆ ಎಂತವರಿಗೂ ನಿರ್ಲಕ್ಷ್ಯ. ಎಷ್ಟು ಕೆಲಸ ಮಾಡಿದರೂ ಕಮ್ಮಿ. ಕೂತರೆ ತಪ್ಪು, ನಿಂತರೆ ತಪ್ಪು. ಹಾಗೂ ಪ್ರೀತಿ ತೋರಿಸುವವರು ಇರುತ್ತಲೇ ಇರಲಿಲ್ಲ ಅಂತಲ್ಲ, ಇರುತ್ತಿದ್ದರು ಅಪರೂಪಕ್ಕೆ. ಗಂಡನ ಮನೆಯಿಂದ ಜೀವನಾಂಶ ಬರುತ್ತದೆಯೆಂದು ನಂಬಿಕೊಂಡು ತೌರು ಸೇರಿಕೊಂಡವರಿಗೆ ಆಮೇಲೆ ಅದೂ ನಾಸ್ತಿ. ಒಂದೆರಡು ವರ್ಷ ಕೊಟ್ಟ ಹಾಗೆ ಮಾಡುವುದು, ಸ್ಟ್ಯಾಂಪ್ ಪೇಪರಿನ ಮೇಲೆ ಹೆಬ್ಬೆಟ್ಟು ಒತ್ತಿಸಿಕೊಳ್ಳುವುದು. ಮುಂದೆ ದುಡ್ಡಿರಲಿ, ಅದರ ವಾಸನೆ ಕೂಡಾ ಇಲ್ಲ. ಪೇಪರಿನ ಮೇಲೆ ಮನೆಯವರದೇ ಹೆಬ್ಬೆಟ್ಟು. ಅವರ ಪೈಕಿಯವರದೇ ಸಾಕ್ಷಿ. ಪಂಗನಾಮ ಹಾಕಲು ಪಾಪಪ್ರಜ್ಞೆ ಕಾಡುತ್ತಲೇ ಇರಲಿಲ್ಲ. ಕೊಡುತ್ತಿದ್ದ ದುಡ್ಡಿನ ಮೊತ್ತವಾದರೂ ಎಷ್ಟು? ವರ್ಷಾವಧಿಯ ಒಪ್ಪೊತ್ತಿನ ಊಟದ ಲೆಕ್ಕ ತೆಗೆದರೆ ಸಾಕೂ ಸಾಲದಷ್ಟು. ಎಲ್ಲೇ ಇರಲಿ, ಮೈಮುರಿದು ದುಡಿದದ್ದಕ್ಕೆ ಪ್ರತಿಫಲ ವರ್ಷಕ್ಕೆರಡು ಕಗ್ಗು ಸೀರೆ. ಒಪ್ಪೊತ್ತಿನ ಊಟ. ಗಂಡನಿಲ್ಲದವಳು ತಲೆ ಬೋಳಿಸಿಕೊಂಡು, ಕೆಂಪು ಸೀರೆ ಉಟ್ಟು ಮಡಿಯಾಗಬೇಕಾದ್ದು ಬ್ರಾಹ್ಮಣ ಮನೆತನಗಳಲ್ಲಿನ ಕಟ್ಟುಪಾಡು. ಸಂಪ್ರದಾಯ. ಇಲ್ಲದಿದ್ದರೆ ‘ಅಥೋ ಭ್ರಷ್ಟ, ತಥೋಭ್ರಷ್ಟ’ ಆಗಬೇಕಾದ ಪರಿಸ್ಥಿತಿ. ಸಕೇಶಿ ಮಾಡಿದ ಅಡುಗೆ ದೇವರ ನೈವೇದ್ಯಕ್ಕೆ ಬರುವುದಿಲ್ಲ. ಮಡಿ ಮಾಡಿಸಿಕೊಳ್ಳದಿದ್ದರೆ ಅವಳ ತಲೆ ಕೂದಲಿನಿಂದ ಬೀಳುವ ಒಂದೊಂದು ಹನಿ ನೀರಿಗೂ ಗಂಡನಿಗೆ ಪರಲೋಕದಲ್ಲಿ ನರಕಶಿಕ್ಷೆ ಅನ್ನುವ ನಂಬಿಕೆ.

ಶಿವರಾಮನ ಅಕ್ಕ ಕಮಲ ಎಲ್ಲರ ಮಾತನ್ನೂ ಮೀರಿ ನಿಂತಿದ್ದು ಗಂಡನ ಮನೆಯವರಿಗೆ ಬಿಸಿ ತುಪ್ಪ. ಶಿವರಾಮನ ಅಪ್ಪ ಬದುಕಿದ್ದಾಗಲೇ ಮಗಳ ಮದುವೆ ಮಾಡಿ ಮುಗಿಸಿದ್ದರು. ಮಗನ ಪಾಲಿಗೆ ಯಾವ ಜವಾಬ್ದಾರಿಯನ್ನೂ ಉಳಿಸಿಲ್ಲ ಎಂದು ಅವರಿಗೆ ಕೊಂಬು. ವಿಧಿಯ ಆಟ ಯಾರಿಗೆ ಗೊತ್ತಿರುತ್ತದೆ? ಗಟ್ಟಿಮುಟ್ಟಾಗಿ ನೂರು ವರ್ಷ ಬದುಕುತ್ತಾನೆ ಎನ್ನುವಂತಿದ್ದ ಕಮಲನ ಗಂಡ ಮದುವೆಯಾಗಿ ವರ್ಷ ಕಳೆಯುವುದರಲ್ಲಿ ಪೆಟ್ಟಿಗೆ ಕಟ್ಟಿದ. ಮಳೆಗಾಲಕ್ಕೆ ಸೌದೆ ಒಟ್ಟು ಹಾಕಲು ಕೆಲಸದಾಳನ್ನು ಕರೆದುಕೊಂಡು ಕಾನು ಹೊಕ್ಕವನು ಹೆಜ್ಜೇನುಗಳ ದಾಳಿಗೆ ಸಿಕ್ಕಿ, ಮೈಯಿಡೀ ಬಾತುಕೊಂಡು, ನಂಜು ಏರಿ, ಯಾವ ಚಿಕಿತ್ಸೆಗೂ ಬದುಕುಳಿಯಲಿಲ್ಲ. ದಿಗ್ಭ್ರಮೆಯಿಂದ ಮರಗಟ್ಟಿ ಹೋಗಿದ್ದಳು ಹದಿನೇಳರ ಬಾಲೆ. ಗಾಯದ ಮೇಲೆ ಬರೆ ಎಳೆದಂತೆ ಕೂದಲು ತೆಗೆಸಬೇಕೆಂದು ಗಂಡನ ಮನೆಯವರ ಒತ್ತಾಯ. ‘ಗಂಡನ ಮನೇಲಿ ಕೂದಲು ತೆಗೆಸಿ ಮನೆ ಚಾಕರಿಗೆ ಹಾಕ್ಕಂತಾರೆ’ ಅಂತ ಗಂಡನ ಮನೆ ಬಿಟ್ಟು ರಾತ್ರೋರಾತ್ರಿ ತೌರಿಗೆ ಓಡಿ ಬಂದಿದ್ದಳು ಕಮಲಾ. ಇನ್ನೂ ಹಡೆಯುತ್ತಿದ್ದರಂತೆ ಅವಳ ಅತ್ತೆ. ಅಲ್ಲೇ ಇದ್ದಿದ್ದರೆ ಕಮಲಾ ಅಂದುಕೊಂಡಿದ್ದು ಸತ್ಯವಾಗುವುದರಲ್ಲಿ ಅನುಮಾನ ಇರಲಿಲ್ಲ. ದುರದೃಷ್ಟ ಎಷ್ಟಿತ್ತು ಅಂದರೆ ಒಬ್ಬಳೇ ಮಗಳೆಂದು ಅಪ್ಪನ ಮನೆಯಲ್ಲಿ ಕೈ ಬಿಚ್ಚಿ ಹಾಕಿದ್ದ ನಗನಟ್ಟು ಮಾವನ ತಿಜೋರಿಯಲ್ಲಿ ಉಳಿದು ಹೋಗಿತ್ತು. ಎಲ್ಲರ ಮನೆಯ ಹಣೇಬರವೂ ಇದೇ. ಕಿಮ್ಮತ್ತಿನ ವಸ್ತು ಒಡವೆಗಳು ಅಂದರೆ ಅವು ಮನೆ ಯಜಮಾನನ ತಿಜೋರಿಯಲ್ಲಿ ಭದ್ರವಾಗಿರುತ್ತಿದ್ದುವು. ಹೆಣ್ಣುಹೆಂಗಸರು ಅವನ್ನು ಎಲ್ಲಿಟ್ಟು ಕಾಪಾಡಿಕೊಳ್ಳುತ್ತಾರೆ? ಹೆಚ್ಚಿನದೆಲ್ಲವನ್ನೂ ತೆಗೆದು ಮನೆ ಯಜಮಾನನ ಕೈಗೆ ಒಪ್ಪಿಸಿರು ತ್ತಾರೆ. ಅವರು ಅದನ್ನು ಭದ್ರವಾಗಿ ತಿಜೋರಿಯಲ್ಲಿಟ್ಟು ಬೀಗ ಹಾಕಿ ಬೀಗದಕೈಯನ್ನು ಜನಿವಾರದಲ್ಲಿ ಕಟ್ಟಿಕೊಂಡು ಜೋಪಾನವಾಗಿರಿಸಿಕೊಂಡಿರುತ್ತಾರೆ. ಹಬ್ಬಹರಿದಿನಗಳಲ್ಲೋ, ವಿಶೇಷಕಟ್ಲೆಗೆ ಹೋಗಬೇಕಾದಾಗಲೋ, ಅಥವಾ ಮನೆಯಲ್ಲಿ ಸಂತರ್ಪಣೆ ಮನೆ ಎದ್ದಾಗಲೋ, ಯಜಮಾನ ನಗನಟ್ಟು ತೆಗೆದು ಹೆಂಗಸರಿಗೆ ಕೊಡಬೇಕು. ಅವರು ಉಟ್ಟು, ತೊಟ್ಟು ಸಂತೃಪ್ತಿಪಡಬೇಕು. ಮತ್ತೆ ಅವೆಲ್ಲಾ ಯಜಮಾನನ ತಿಜೋರಿಗೆ ರವಾನೆ. ಗಂಡನ ಮನೆಯಿಂದ ಕದ್ದು ಓಡಿ ಬಂದವಳ ಒಡವೆವಸ್ತುಗಳು ಗಂಡನಮನೆಯಲ್ಲಿ ಉಳಿದು ಹೋದುವು. ಸೊಸೆ ಮನೆತನದ ಮರ್ಯಾದೆ ಹರಾಜು ಹಾಕಿದಳೆಂದು, ರೀತಿರಿವಾಜು ಮುರಿದಳೆಂದು ಗಂಡನ ಮನೆಯವರಿಗೆ ಅವಳ ಮೇಲೆ ಕೆಂಡದಂತಾ ಕೋಪ. ‘ಒಂದಿನ ಅದನ್ನ ಹಿಡಿದು ತಲೆ ಬೋಳಿಸದಿದ್ರೆ ನಾವು ಗಂಡಸ್ರೇ ಸುಳ್ಳು..’ ಎಂದು ಅವಳ ಭಾವದಿಕ್ಕಳು ಶಪಥ ಮಾಡಿದ್ದರಂತೆ. ಜೀವನಾಂಶ ಸಾಯಲಿ, ತಾವು ಹಾಕಿದ ಚಿನ್ನ ಬಣ್ಣ ವಾಪಸು ಬಂದರೆ ಮಗಳ ಆಪತ್ಕಾಲಕ್ಕೆ ಒದಗುತ್ತೆ ಎಂದು ಅವಳ ಅಪ್ಪ ಸಂಧಾನಕ್ಕೆ ಹೋಗಿದ್ದರು. ಅಲ್ಲಿ ಅವರ ಮಕಕ್ಕೆ ಸಮಾ ಮಂಗಳಾರತಿ ಆಯಿತಂತೆ ಎನ್ನುವುದು ಗಾಳಿ ಸುದ್ದಿ. ‘ಮಗಳಿಗೆ ಎಂತಾ ಸಂಸ್ಕಾರ ಕಲಿಸಿದೀರಿ?’ ಎಂದು ಅವಳ ಅಪ್ಪ ಹಂಗಿಸಿಕೊಂಡು ಕಣ್ಣೀರು ಹಾಕಿದರಂತೆ. ಆದರೂ ಆ ಜನ ಕರಗಲಿಲ್ಲ. ‘ತಲೆ ಬೋಳಿಸುವ’ ಮಾತು ಆಗಲೇ ಬಂದಿದ್ದಂತೆ. ‘ಬಂದ ದಾರಿಗೆ ಸುಂಕ ಇಲ್ಲ’ ಎಂದು ಬ್ರಾಹ್ಮಣ ಕಾಲೆಳೆದುಕೊಂಡು ವಾಪಸು ಬರುವಾಗ ಜೀವ ಸೋತು ಹೋಗಿ ಹಾದಿ ಬದಿಯ ಮರಕ್ಕೆ ವರಗಿ ಕೂತಿದ್ದಷ್ಟೇ ಗೊತ್ತು, ಯಾವ ಮಾಯದಲ್ಲೋ ದೊಡ್ಡ ಜೀವ ಹೊರಟು ಹೋಯ್ತು.

‘ರಣ ಹೊಡೆದುಕೊಂಡು ಹೋಗಿದ್ದು’ ಎನ್ನುವುದು ಒಂದು ಹೇಳಿಕೆ. ‘ಅಳಿಯನ ಮನೆಯಲ್ಲಿ ವಿಷ ಹಾಕಿದ್ದು’ ಅಂತ ಮತ್ತೊಂದು. ಸತ್ಯ ಪರಮಾತ್ಮ ನೊಬ್ಬನಿಗೆ ಗೊತ್ತು. ಗೊತ್ತಿರುವವರು ಹೇಳುವುದಿಲ್ಲ, ಹೇಳುವಂತವರು ಬದುಕಲಿಲ್ಲ. ಯಾರೋ ದಾರಿಹೋಕರು ನೋಡಿ ಮನೆಗೆ ವರ್ತಮಾನ ತಲುಪಿಸದಿದ್ದರೆ ನಾಯೋ, ನರಿಯೋ ಎಳೆದುಕೊಂಡು ಹೋಗಿ ಹಬ್ಬ ಮಾಡುವ ಪರಿಸ್ಥಿತಿ. ಪುಣ್ಯಕ್ಕೆ ಅದೊಂದು ಆಗಲಿಲ್ಲ. ಗಾಡಿದಾರಿಯ ಬದಿಯಲ್ಲೇ ಕಾನು. ಹಾದಿ ಬದಿಯಲ್ಲಿ ಮುಂದುಮುಂದಕ್ಕೆ ಹೋದರೆ ಕಗ್ಗಾನು ಕಾಡು. ಹುಲಿ, ಕುರ್ಕಗಳು ಹಗಲು ಹೊತ್ತಲ್ಲೂ ಓಡಾಡುವ ಜಾಗ. ‘ಏನಾಯ್ತು? ಏನಾಯ್ತು? ಏನಾಯ್ತು?’ ಎಂದು ಮನೆ ಮಂದಿ ಆ ದುಃಖದ, ಸಂಕಟದ ಸಮಯದಲ್ಲೂ ತಲೆ ಕೆಡಿಸಿಕೊಂಡಿದ್ದರು. ಅಲ್ಲಿಯದನ್ನು ಇಲ್ಲಿಗೆ, ಇಲ್ಲಿಯದನ್ನು ಅಲ್ಲಿಗೆ ತಂದು ವರೆಯುವ ನಾರದರು ಎಲ್ಲಾ ಕಡೆಯಲ್ಲೂ ಒಬ್ಬರಿಬ್ಬರಾದರೂ ಇದ್ದೇ ಇರುತ್ತಾರೆ. ‘ಹೀಗಾಯ್ತಂತೆ.., ಹೀಗಾಯ್ತಂತೆ..’ ಎನ್ನುವ ಗಾಳಿ ಸುದ್ದಿ ಬಂತು. ಇನ್ನೂ ಹುಡುಗ ಶಿವರಾಮ. ಆಗಲೇ ಮನೆಯ ಜವಾಬ್ದಾರಿ ತಲೆಯ ಮೇಲೆ ವರಗಿಕೊಂಡಿದೆ. “ಅವರನ್ನ ಸುಮ್ನೆ ಬಿಡಲ್ಲ ಕಣೇ. ಅಪ್ಪನಿಗೆ ಮತ್ತೇನಾಗಿದ್ದಲ್ಲ, ಎದೆ ಒಡ್ಕಂಡಿದ್ದು ಅವನು” ಎಂದು ಹುಡುಗ ಅಂದಾಜು ಮಾಡಿದ್ದ. ಕಮಲಾ ಅಪ್ಪನ ಮನೆ ಸೇರಿಕೊಂಡು ಹತ್ತಾರು ವರ್ಷ ಕಳೆದಿದ್ದರೂ ಇನ್ನೂ ಶಿವರಾಮನ ಎದೆಯಲ್ಲಿ ಆ ಬೆಂಕಿ ಆರದೆ ಉಳಿದುಕೊಂಡಿದೆ. ಕೋರ್ಟು, ಕಛೇರಿ ಅಂದರೆ ಜನ ಹೆದರಿ ಹಿಂದೆಗೆಯುತ್ತಿದ್ದ ಕಾಲ. ಹಾಗಾಗಿ ದುಡ್ಡಿನ ಪೊಗರು ಜಾಸ್ತಿ ಇದ್ದವರು ಆಡಿದ್ದೇ ಆಟ. ಕೊಲೆ ಮಾಡಿ ದಕ್ಕಿಸಿಕೊಂಡವರ ಕತೆಗಳು ಅಲ್ಲಲ್ಲಿ ಚಾಲ್ತಿಯಲ್ಲಿದ್ದುವು. ‘ಕೊಂದು ಅಡಿಕೆಮರದ ಬುಡದಲ್ಲಿ ಹೂತು ಹಾಕಿದ’ ಕತೆಗಳು ಆಗೀಗ ಗಾಳಿಯಲ್ಲಿ ಹಾರಾಡುತ್ತಿದ್ದುವು. “ನೋಡ್ತಿರು, ನಾನೂ ಒಂದಿನ..” ಎಂದು ಹೇಳಹೊರಟ ಶಿವರಾಮನನ್ನು ವೆಂಕಮ್ಮ ಅವನ ಬಾಯಿಗೆ ಕೈ ಅಡ್ಡ ಇಟ್ಟು ಮುಂದೆ ಉಸಿರೊಡೆಯದಂತೆ ತಡೆದಿದ್ದರು.

“ಮಾರಾಯಾ, ನಮ್ಮ ಗ್ರಾಚಾರಾನೇ ನೆಟ್ಟಗಿಲ್ಲ. ಒಟ್ಟೊಟ್ಟಿಗೆ ನಿನ್ನ ಭಾವನನ್ನ, ಅಪ್ಪನ್ನ ಕಳ್ಕೊಂಡಿದ್ದಾಗಿದೆ. ನೀನು ಮತ್ತೊಂದೇನೋ ಕುತ್ತಿಗೆಗೆ ತಂದಿಡ್ಬೇಡ, ದೇವ್ರಿದಾನೆ, ನೋಡ್ಕಂತಾನೆ..”
“ಎಲ್ಲಿದಾನೆ ನಿನ್ನ ದೇವ್ರು? ಕಡುಬು ತಿಂತಾ ಕೂತ್ಗಂಡಿದಾನಂತಾ?”
“ಬ್ಯಾಡ ಕಣೋ, ದೇವರ ಸುದ್ದಿಗೆ ಹೋಗ್ಬೇಡ..”

ವೆಂಕಮ್ಮ ಮಗನಿಂದ ಆಣೆ, ಭಾಷೆ ಹಾಕಿಸಿಕೊಂಡು ಎದೆಯ ತಳಮಳವನ್ನು ಹತ್ತಿಕ್ಕಿಕೊಂಡಿದ್ದರು. ‘ಮಗನ ಕುತ್ತಿಗೆಗೊಂದು ಕುಂಟೆ ಕಟ್ಟಿದರೆ ಅವನು ಹಾದಿಗೆ ಬರುತ್ತಾನೆ, ಅತಿರೇಕದ ಸಾಹಸಕ್ಕೆ ಕೈ ಹಾಕುವುದಿಲ್ಲ’ ಎಂದು ವೆಂಕಮ್ಮ ಅವರ ಅನುಭವಕ್ಕೆ ತಕ್ಕಂತೆ ಯೋಚನೆ ಮಾಡಿದ್ದರು. “ಯಾವನಿಗೆ ಬೇಕು ಮದುವೆ? ಮದುವೆ ಮಾಡ್ಕಂಡು ಸುಖ ಸುರ್ಕಂಡೋರನ್ನ ನೋಡ್ತಿದೀನಲ್ಲ..” ಎನ್ನುತ್ತಾ ಅಮ್ಮನ ಮಾತನ್ನು ತಟ್ಟಿ ಹಾರಿಸುತ್ತಿದ್ದ ಶಿವರಾಮ ವಯಸ್ಸಿಗೆ ತಕ್ಕ ದೇಹದ ಬಯಕೆಗೆ ಮಣಿದು ಕೊನೆಗೂ ಮದುವೆಯಾಗಲು ಸಮ್ಮತಿಯ ಮುದ್ರೆ ಒತ್ತಿದ್ದ. ವೆಂಕಮ್ಮ ಈ ಹಳೆಯ ಪುರಾಣವನ್ನೆಲ್ಲಾ ಸೊಸೆ ಸೀತಾಲಕ್ಷ್ಮಿಯ ಕಿವಿಗೆ ಊದಿದ್ದರು.

“ಇಷ್ಟು ಕಷ್ಟ, ನೋವು ಅನುಭೋಗಿಸಿದೋನು ಇನ್ನು ಹೆಂಗಿರೋಕೆ ಸಾಧ್ಯ? ಮಾತೆತ್ತಿದ್ರೆ ಸಿಟ್ಟೊಂದು ಮೂಗಿನ ತುದೀಲಿರುತ್ತೆ. ನನ್ನ ಮಗ ಒಳ್ಳೆಯೋನು, ನೀನು ಸ್ವಲ್ಪ ಅನುಸರಣೆ ಮಾಡ್ಕಂಡು ಹೋಗ್ಬೇಕು ಕಣೇ..” ಅಂದಿದ್ದರು ಅತ್ತೆ, ಅನುಸರಣೆ ಮಾಡಿಕೊಂಡು ಹೋಗುವುದಕ್ಕೂ ಒಂದು ಮಿತಿ ಇರುವುದಿಲ್ಲವಾ? ಕಷ್ಟ ಅನುಭೋಗಿ ಸಿದ್ದು ಅವನು ಮಾತ್ರವಾ? ಅನುಭವಿಸುತ್ತಿಲ್ಲವಾ ವೆಂಕಮ್ಮ? ಕಮಲಾ? ತೌರು ಸೇರಿಕೊಂಡು ಇಷ್ಟು ವರ್ಷ ಕಳೆದಿದ್ದರೂ ಗಂಡನ ಮನೆಯವರು ತಲೆ ಬೋಳಿಸುವ ಮಾತಾಡಿದ್ದು ಅವಳ ಮನಸ್ಸಿಂದ ಮರೆಯಾಗಿಲ್ಲ. ತಂಬಿಗೆ ತೆಗೆದುಕೊಂಡು ಗುಡ್ಡಕ್ಕೆ ಹೋಗುವುದಕ್ಕೂ ಹೆದರಿ ಸಾಯುತ್ತಾಳೆ. ದಿನಾ ಒಂದೇ ಹೊತ್ತಿಗೆ ಹೋಗದೆ ಹೊತ್ತು ಬದಲಾಯಿಸುತ್ತಾಳೆ. ಕೆಲವು ಸಲ ಯಾವುದೋ ಹೆಳೆ ಮಾಡಿಕೊಂಡು ವೆಂಕಮ್ಮನೂ ಮಗಳ ಜೊತೆ ಗುಡ್ಡ ಹತ್ತುವುದಿದೆ. ತೀರಾ ಅವಸರವಾದರೆ, ಹೊಟ್ಟೆ ಕೆಟ್ಟರೆ ಹತ್ತಿರದಲ್ಲಿ ಎಲ್ಲಾದರೂ ಮರೆ ಹುಡುಕಿ ಕೂರಬಹುದಾದ ವಿನಾಯಿತಿ ಇದ್ದರೂ ಶಿವರಾಮನಿಗೆ ಅಂತಾದ್ದೆಲ್ಲಾ ಇಷ್ಟವಾಗುವುದಿಲ್ಲ. ‘ಯಾರದು ಮನೆ ಬದೀಲಿ ಹೇತು ಹಾಕಿದ್ದು? ದಿನಾ ಅದೇ ಅಭ್ಯಾಸ ಮಾಡ್ಕಂಡ್ರೆ ಗೊಬ್ಬರದ ಗುಂಡಿ ಜೊತೇಲಿ ಮತ್ತೊಂದು ಗುಂಡಿ ಆಗುತ್ತೆ” ಎಂದು ಸಿಟ್ಟು ಮಾಡುತ್ತಾನೆ. ಅತ್ತಿಗೆ ಇಷ್ಟೆಲ್ಲಾ ಹೆದರುಪುಕ್ಕಲಿ ಆಗಬೇಕಾದ್ದಿಲ್ಲ ಎಂದು ಸೀತಾಲಕ್ಷ್ಮಿಗೆ ಅನಿಸುವುದಿದೆ. ‘ಬೋಳಿಸಲಿ ತಲೆಕೂದಲು. ಒಂದು ಸಲ ತೀರಿ ಹೋಗಲಿ ಅವರ ಹಟ. ಏನಾಗುತ್ತಪ್ಪಾ? ಮತ್ತೆ ಹುಟ್ಟುತ್ತೆ ಕೂದಲು..’ ಗಂಟಲಿಗೆ ಬಂದಿದ್ದನ್ನು ಬಾಯಲ್ಲಿ ಹೇಳುವ ಧೈರ್ಯ ಅವಳಿಗಿಲ್ಲ. ತಲೆ ಬೋಳಿಸುವುದಕ್ಕಿಂತಾ ಹೆಚ್ಚು ಇನ್ನೇನೋ ಅಂಜಿಕೆ ಅತ್ತಿಗೆಯನ್ನು ಕಾಡುತ್ತಿದೆ ಎಂದು ಅವಳ ಅನುಮಾನ. ಕುತ್ತಿಗೆ ಹಿಸುಕಿದರೆ? ಕೊಂದು ಕಾನಲ್ಲಿ ಬಿಸಾಕಿ ಹೋದರೆ? ಮಾನಭಂಗ ಮಾಡಿದರೆ? ಇರಬೇಕು ಇಂತಾದ್ದೇನೋ ಸಂಶಯ. ‘ತಪ್ಪು’ ಅನ್ನುವಂತಿಲ್ಲ. ಬೀಗರ ಕುರಿತು ಏನೇನೋ ಕತೆಗಳು ಹರಿದಾಡುತ್ತಿವೆ ಈ ಮನೆಯವರ ಬಾಯಿಯಲ್ಲಿ.

ತನ್ನ ತೌರಿನಲ್ಲಾದರೆ ಅಣ್ಣಂದಿರು ಇಂತಾ ಪ್ರಸಂಗವನ್ನು ಎಷ್ಟು ತಮಾಷೆಯಾಗಿ ತೆಗೆದುಕೊಳ್ಳುತ್ತಿದ್ದರು ಎಂದು ನೆನೆದು ದುಃಖದ ತೀವ್ರತೆ ಹೆಚ್ಚಾಗಿತ್ತು. ಮಲ ಅಣ್ಣಂದಿರಾದರೇನು, ಈ ತಂಗಿಯನ್ನು ಕಣ್ಣಗೊಂಬೆಯಂತೆ ಕಾಪಾಡಿಕೊಂಡಿದ್ದಾರೆ. ಬೆಳೆಸಿದ್ದಾರೆ. ಹಿಡಿದದ್ದು ಮುಟ್ಟಿದ್ದಕ್ಕೆಲ್ಲಾ ಹೆದರಿ ಹೆದರಿ ಸಾಯುವ ಪರಿಸ್ಥಿತಿ ಆ ಮನೆಯಲ್ಲಿರಲಿಲ್ಲ. ಅಲ್ಲಿ ಹೀಗೇನಾದರೂ ಆದರೆ ಅದನ್ನೇ ಒಂದು ತಮಾಷೆಯಾಗಿ ತೆಗೆದುಕೊಂಡು ಹೇಗೆ ನಕ್ಕು ನಲಿಯುತ್ತಿದ್ದರು ಎಂದು ಅವಳಿಗೆ ಅನಿಸಿಯೇ ಅನಿಸಿತು.

ಶಿವರಾಮನ ಅಪ್ಪ ಪಂಚಾಯಿತಿಗೆ ಅಲ್ಲಿಗೆ ಹೋಗಿದ್ದರಲ್ಲ, ಅವರ ಮುಖ ಕಂಡಕೂಡಲೇ ನಾಲಿಗೆಗೆ ಬೆಲ್ಲ ಸವರಿಕೊಂಡು ಮಾತಾಡಿ, ಕಾಫಿಯೋ, ಮತ್ತೊಂದೋ ಕೊಟ್ಟು ಲಾಯ್ಖು ಉಪಚಾರ ಮಾಡಿ, ಅದರಲ್ಲಿ ಎಂತದೋ ಹಾಕಿ ಕೊಟ್ಟು, ಆಮೇಲೆ ಕಾಲು ಕೆರೆದು ಜಗಳ ತೆಗೆದು ಹೊಟ್ಟೆಯೊಳಗಿದ್ದ ಸಿಟ್ಟು ಕಾರಿಕೊಂಡಿದ್ದು. ಈ ಮನುಷ್ಯ ಸೋತು ಸುಣ್ಣವಾಗಿ ಮನೆಯ ಕಡೆ ಕಾಲೆಳೆದುಕೊಂಡು ಬರುವಾಗ ದಾರಿ ಮಧ್ಯ ಹೊಟ್ಟೆಗೆ ಬಿದ್ದಿದ್ದರ ನಂಜು ಏರಿ ಜೀವ ಕಳೆದುಕೊಂಡಿದ್ದು, ಹೀಗಿದ್ದೆಲ್ಲಾ ಪುಕಾರು. ಇರಬಹುದು ಏನೂ. ಹಳೆಯದನ್ನೆಲ್ಲಾ ನೆನಪಿಸಿಕೊಂಡು ಶಿವರಾಮನಿಗೆ ಒಮ್ಮೊಮ್ಮೆ ಗಣ ಮೈಮೇಲೆ ಬರುತ್ತಿತ್ತು. ಆಗೆಲ್ಲಾ ಕಮಲಾ ನಿರ್ಲಿಪ್ತೆಯಂತೆ ಹೇಳುತ್ತಿದ್ದಳು,
“ಮಸಲಾ ಅವರು ನನ್ನ ಚಿನ್ನ, ಬೆಳ್ಳಿ ಕೊಟ್ಟಿದ್ರೂಂತ್ಲೆ ಇಟ್ಕಾ. ಅದನ್ನೆಲ್ಲಾ ಹಾಕ್ಕೊಂಡು ನಾನೇನು ಮೆರವಣಿಗೆ ಹೋಗ್ತಿದ್ನಾ? ಟ್ರೆಜರೀಲಿ ಬೆಚ್ಚಗಿರ್ತಿತ್ತು, ಹೌದಾ, ಅಲ್ವಾ?”
“ಹಂಗಂತ? ನಿಂದೊಳ್ಳೇ ಕತೆ..”
“ತಡಿಯೋ, ಪೂರ್ತಿ ಕೇಳೋ. ಈಗ್ಲೂ ಟ್ರೆಜರೀಲಿ ಅದು ಇದೆ ಅಂದ್ಕೋ..”
“ಅಂದ್ಕಂಬಿಟ್ರೆ ಸೈಯಾ? ಕತೆ ಕಟ್ಟಿ ಹೇಳ್ಬೇಡ ನೀನು..”
“ಇಲ್ಲಿರೋದು ಅಲ್ಲಿದೆ ಅಷ್ಟೇ. ಇಟ್ಗಂಡಿರ್ಲಿ ಬಿಡು. ಅದನ್ನ ನೋಡಿದಾಗ್ಲೆಲ್ಲಾ ಚೇಳು ಕಚ್ಚಿದ ಹಂಗಾಗ್ಬೇಕು ಅವ್ರಿಗೆ. ಅನ್ಯಾಯಾಗಿ ಒಂದು ಹೆಣ್ಣಿನ ಹೊಟ್ಟೆ ಮೇಲೆ ಹೊಡೆದೆ ಅನ್ನಿಸ್ಬೇಕು. ಪುಣ್ಯ, ಪಾಪ ಅಂತ ತಲೆ ಹಾಳು ಮಾಡ್ಕೊಳ್ಳೋರಿಗೆ ನರಕದ ನೆನಪಾಗ್ಬೇಕು. ಅದೂ ಒಂಥರಾ ಶಿಕ್ಷೆ ಕಣೋ..”

“ಏ ಹೋಗೇ, ಕರಟು ಪುರಾಣ ಹೇಳ್ಬೇಡ ನೀನು. ಅದರಿಂದ ಮೂರುಕಾಸಿನ ಪ್ರಯೋಜನ ಇಲ್ಲ”

ಹಾವು ಸಾಯಲಿಲ್ಲ, ಕೋಲು ಮುರಿಯಲಿಲ್ಲ ಎನ್ನುವಂತೆ ಸಧ್ಯಕ್ಕೆ ಕೈದಾಗುತ್ತಿತ್ತು ಮಾತುಕತೆ. ವಾದವಿವಾದ.

ಮೂರುಸಂಜೆ ಆಗುವುದರೊಳಗೆ ಊಟಕ್ಕೆ ಬಳ್ಳೆ ಹಾಕುತ್ತಿದ್ದ ಕಾಲ. ಗಂಟೆ ಎಂಟಾಗುವುದರೊಳಗೆ ಹೆಂಗಸರು ಸೈತಾ ಹೆಪ್ಪು ಗಿಪ್ಪಿನ ಕೊನೆಯ ಕೆಲಸ ಮುಗಿಸಿ ಹಾಸಿಗೆ ಸೇರಿಕೊಳ್ಳುತ್ತಿದ್ದ ಕಾಲ. ಒಳಗೆಲ್ಲಾ ಓಡಾಡಲು ಚಿಮಣಿಬುಡ್ಡಿಯ ದೀಪ. ಮುಂಚೇಕಡೆಯಲ್ಲಿ ಕೊಕ್ಕೆಗೆ ತೂಗು ಹಾಕಿದ ಲಾಟೀನು. ಕೆಲಸ ಮುಗಿದ ಮೇಲೆ ಕುಗುರುತ್ತಾ ಕೂತಿರಲು ಕಾರಣ ಇಲ್ಲದಿದ್ದರೂ ಒಮ್ಮೊಮ್ಮೆ ಶುರುವಾಗುತ್ತಿತ್ತು ಪಟ್ಟಾಂಗ. ಹಳೇ ಪುರಾಣ ಬಿಚ್ಚಿಕೊಳ್ಳುತ್ತಿತ್ತು.

ಹೊಗೆಸೊಪ್ಪಿನ ಅಮಲಿನ ಜೊತೆ ಶಿವರಾಮನ ಮನಸ್ಸಿನಲ್ಲೂ ಕಾವು ಏರುತ್ತಿತ್ತು. ಹೊರಗೆ ದಾಟಿ ಅಂಗಳದ ತುದಿಯ ತೆಂಗಿನಮರದ ಬುಡದಲ್ಲಿ ಕವಳದ ರಸ ತುಪ್ಪುವುದು, ಒಳಗೆ ಬಂದು ತಮಗೆ ಅನ್ಯಾಯ ಮಾಡಿದವರನ್ನು ನೇಣಿಗೇರಿಸುವ ಮಾತಾಡುವುದು, ಮತ್ತೆ ಬಾಯಿಗೆ ಅಡಿಕೆಹೋಳು ಎಸೆದುಕೊಂಡು, ಎಲೆಗೆ ಸುಣ್ಣ ಸವರಿ ಬಾಯಿಗೆ ಗಿಡಿದುಕೊಂಡು, ಎಡ ಅಂಗೈ ಕುಳಿಯಲ್ಲಿ ತಂಬಾಕಿನ ಚೂರನ್ನು ಸುಣ್ಣದೊಡನೆ ಮಿದಿಯುತ್ತಾ..
“ನೀನು ಬಂದ್ಮೇಲೆ ಒಂಚೂರು ವಾಸಿ ಕಣೇ. ಉರುಬು ಕಮ್ಮಿಯಾಗಿದೆ. ಅವನನ್ನ ಅಂಕೇಲಿಟ್ಕೋಬೇಕು ನೀನು..”

ವೆಂಕಮ್ಮನ ಉಪದೇಶ ಕೇಳಿ ಕೇಳಿ ಬೆಪ್ಪಾಗಿದ್ದಳು ಸೀತಾಲಕ್ಷ್ಮಿ. ಅವನೆಲ್ಲಿ? ಅವನಿಗಿಂತಾ ಹತ್ತು ವರ್ಷ ಚಿಕ್ಕವಳಾದ ತಾನೆಲ್ಲಿ? ಮನೆಯ ಉಣುಗೋಲು ದಾಟಿ ಆಚೆ ಹೋಗಿ ಗೊತ್ತಿಲ್ಲದವಳು ತಾನು. ಎಲ್ಲಿಗೆ ಬೇಕಾದರೂ ಹೋಗಿ ಬಂದು ಮನೆಯ ವೈವಾಟು ನೋಡಿಕೊಳ್ಳುವ ಬುದ್ಧಿವಂತ ಅವನು. ತನ್ನ ಕಿವಿಗೇ ಕೇಳದಷ್ಟು ಮೆತ್ತಗೆ ಮಾತಾಡುವವಳು ತಾನು. ಬಾಯಿ ಬಿಟ್ಟ ಅಂದರೆ ಎದುರಿದ್ದವರನ್ನು ಉಚ್ಚೆ ಹುಯ್ದು ಕೊಳ್ಳುವಂತೆ ಮಾಡುವವನು ಅವನು ಅಂದುಕೊಳ್ಳುವಾಗ ಸೀತಾಲಕ್ಷ್ಮಿಗೆ ಮತ್ತೊಂದು ವಿಪರೀತ ನೆನಪಾಗಿತ್ತು. ಗಂಟಲು ಜೋರು ಮಾಡಿದರೆ ಹೆಂಗಸರು ಹೆದರಿಬಿಡುತ್ತಾರೆ ಎಂದು ಬುದ್ಧಿವಂತ ಗಂಡಸರು ಅರ್ಥ ಮಾಡಿಕೊಂಡುಬಿಟ್ಟಿರುತ್ತಾರೆ. ಅದನ್ನೊಂದು ಅಸ್ತ್ರವನ್ನಾಗಿ ಉಪಯೋಗಿಸಿ ಹೆಂಗಸರನ್ನು ಹಣ್ಣು ಮಾಡಲು ಅವರಿಗೆ ಯಾವ ಮುಲಾಜೂ ಇಲ್ಲ. ಹಾವು ಹೆಡೆ ಬಿಚ್ಚಿ ಬುಸುಗುಟ್ಟಿ ಹೆದರಿಸಿದಂತೆ? ಹೋರಿ ಕೊಂಬು ತೋರಿಸಿ? ಮರದ ಮೇಲಿನ ಮಂಗಣ್ಣ ಕೂಡಾ ಹಲ್ಲು ಕಿಸಿದು ಹೆದರಿಸುವುದನ್ನು ಕಲಿತುಬಿಟ್ಟಿರುತ್ತದೆ. ಹೆದರಿಸುವವರಿಗೆ ಈ ಕಲೆ ಕರಗತವಾದಂತೆ ಹೆದರುವವರೂ ಕೂಡಾ ಅಭ್ಯಾಸಬಲದಿಂದ ಹೆದರುತ್ತಾರಾ? ಅಥವಾ ವಾಸ್ತವವಾಗಿ ಹೆದರಿದಂತೆ ಬಾಯ್ಮುಚ್ಚಿಕೊಂಡಿರುವುದೂ ಕೂಡಾ ಅವಗಣನೆಯ, ತಿರಸ್ಕಾರದ ಮತ್ತೊಂದು ಮುಖ ಯಾಕಾಗಿರಬಾರದು? ಹಾಳುಬಿದ್ದು ಹೋಗಲಿ ಎನ್ನುವ ಧೋರಣೆ? ‘ಕುತ್ತಿಗೆಗೊಂದು ಕುಂಟೆ’ ಎನ್ನುವ ಮುಂದಾಲೋಚನೆಯಲ್ಲಿ, ಕೆಲವೊಮ್ಮೆ ದುರಾಲೋಚನೆಯಲ್ಲಿ ಕೂಡಾ, ಕಂಡವರ ಮನೆಯ ಹೆಣ್ಣುಮಕ್ಕಳನ್ನು ಮನೆ ತುಂಬಿಸಿಕೊಳ್ಳುವವರಿಂದ ಏನೆಲ್ಲಾ ನಿರೀಕ್ಷೆಗಳು? ದಾರಿ ತಪ್ಪಿದ ಮನೆಮಗನನ್ನು ಸರಿದಾರಿಗೆ ತರಬೇಕಾದ್ದು ತಾಳಿ ಕಟ್ಟಿಸಿ ಕೊಂಡವಳ ಕರ್ತವ್ಯ. ಜವಾಬ್ದಾರಿ. ಅವನು ಕುಡುಕನೋ, ಕೆಡುಕನೋ, ಕಳ್ಳನೋ, ಸುಳ್ಳನೋ ಏನೇ ಆಗಿರಲಿ, ಅವನಿಗೆ ಮೂಗುದಾರ ಹಾಕಬೇಕು ಹೆಂಡತಿ. ಆಗಲೇ ಅವಳ ಪತಿವ್ರತಾಧರ್ಮ ಪಾಲನೆಯಾಗುತ್ತಿರುವ ಸಾರ್ಥಕತೆ. ಅಬ್ಬಾ!…

*****

ಕಮಲಾ ಸಕೇಶಿಯಾಗಿದ್ದರಿಂದ ಅವಳಿಗೆ ಕೆಲವೊಂದು ಅನುಕೂಲತೆಗಳಿದ್ದುವು. ಹಬ್ಬಹರಿದಿನ, ವ್ರತಾಚರಣೆಗಳ ಸಂದರ್ಭದಲ್ಲಿ ಅವಳು ಮುಟ್ಟಿದ ಅಡುಗೆ ದೇವರನೈವೇದ್ಯಕ್ಕೆ ಅನರ್ಹವಾದ್ದರಿಂದ ಆ ಸಮಯದಲ್ಲಿ ಅವಳು ಹೊರಹೊರಗೆ. ತನ್ನಮ್ಮನಂತೆ ಅವಳು ರಾತ್ರಿಯ ಊಟ ಬಿಟ್ಟು ಅವಲಕ್ಕಿ ಫಳಾರಕ್ಕೆ ಸೀಮಿತಳಾಗಬೇಕಾಗಿರಲಿಲ್ಲ. ಎಲ್ಲಕ್ಕಿಂತಾ ಮಿಗಿಲಾಗಿ ಮುಳ್ಳುಮುಳ್ಳಾಗಿ ತಲೆಯ ಮೇಲೆ ಕೂದಲು ಚಿಗಿಯುತ್ತಿದ್ದಂತೆ ನಾಪಿತನ ಎದುರು ತಲೆ ಬಗ್ಗಿಸಿ ಕೂರಬೇಕಾಗಿರಲಿಲ್ಲ. ಸಂಪ್ರದಾಯ ಎನ್ನುವುದು ಕಟ್ಟುನಿಟ್ಟಾಗಿ ಪಾಲನೆಯಾಗಲೇಬೇಕಾದ ಕಾಲವಾಗಿದ್ದರೂ ಶಿವರಾಮ ಈ ವಿಷಯದಲ್ಲಿ ಅಕ್ಕನನ್ನು ಅಡಕತ್ತರಿಗೆ ದೂಕಿರಲಿಲ್ಲ. ‘ನಾಕು ಜನ ಹೆಂಗಿರ್ತಾರೋ ಹಂಗೇ ಇರಬೇಕು ಕಣೇ’ ಎನ್ನುವ ಬುದ್ಧಿಮಾತು ಅವನ ಬಾಯಿಂದ ಉದುರಿರಲಿಲ್ಲ. ಅವನು ಹಾಗೇನಾದರೂ ಒತ್ತಾಯಿಸಿದ್ದರೆ ಏನು ಮಾಡುತ್ತಿದ್ದಳೋ ಕಮಲಾ ಎನ್ನುವ ದುರ್ದೈವಿ ಹೆಣ್ಣು? ಅಲ್ಲೂ ಸಲ್ಲದೆ, ಇಲ್ಲೂ ಸಲ್ಲದೆ ಕೊನೆಗೆ ಜೀವ ಕಳೆದುಕೊಳ್ಳುವುದೊಂದೇ ಬಾಕಿ ಉಳಿದಿರುತ್ತಿತ್ತೇನೋ. ಬದುಕು ಎನ್ನುವುದು ಯಾರ ಕಲ್ಪನೆಗೂ ನಿಲುಕದ ನಿಗೂಢ. ಕೆಲವೊಮ್ಮೆ ಕಟ್ಟುಕತೆಗಿಂತಾ ಅನೂಹ್ಯವಾಗಿರುತ್ತದೆ ಜೀವನ. ಗಂಡ ಇಲ್ಲವೆನ್ನುವ ಒಂದು ಲೋಪ ಹೊರತುಪಡಿಸಿ ಮಿಕ್ಕಂತೆ ಉಂಡುಟ್ಟು ತೌರಿನಲ್ಲಿ ಸುಖವಾಗಿ ಕಾಲಕ್ಷೇಪ ಮಾಡುತ್ತಿದ್ದಳು ಕಮಲಾ. ಅವಳಾದರೂ ಯಾವ ಮಹಾ ದೊಡ್ಡವಳು? ಶಿವರಾಮ ನಿಗಿಂತಾ ಒಂದೂವರೆ ವರ್ಷ ದೊಡ್ಡವಳು. ತಮ್ಮನ ಬದುಕಿಗೆ ಈಗಿನ್ನೂ ಶ್ರೀಕಾರ ಬಿದ್ದಿದ್ದರೆ ಅವಳ ಬದುಕಿಗೆ ಪೂರ್ಣವಿರಾಮ. ‘ತನಗೆ ಮದುವೆಯಾಗಿತ್ತು’ ಎನ್ನುವುದನ್ನು ಮರೆತೇಬಿಟ್ಟವಳಂತೆ ಅವಳ ವರ್ತನೆ.

ವಾರಕ್ಕೊಮ್ಮೆ ತಪ್ಪದೆ ಹರಳೆಣ್ಣೆ ಗಿಂಡಿ ಹಿಡಿದು ಅಮ್ಮನ ಎದುರು ಬರುತ್ತಾಳೆ. “ಅಮ್ಮಾ, ಎಣ್ಣೆ ಹಾಕೇ..” ಎನ್ನುತ್ತಾ ಅವರೆದುರು ಅಂಡೂರಿ ಹಾಯಾಗಿ ಕೂತು ಎಣ್ಣೆ ಹಚ್ಚಿಸಿಕೊಳ್ಳುತ್ತಾಳೆ. ನೆತ್ತಿಯ ಮೇಲೆ ಎಣ್ಣೆ ಹಾಕಿ ಅಮ್ಮ ತಪತಪ ತಟ್ಟಿದರೆ ಹಿತವಾಗಿ ಆ ಸುಖ ಅನುಭವಿಸುತ್ತಾಳೆ. ತಲೆಗೂದಲು ಅಂದರೆ ಕಮಲನದು. ಬಾಚಿ ಮುಡಿ ಕಟ್ಟಿದರೆ ಸಿಪ್ಪೆ ಸುಲಿಯದ ತೆಂಗಿನಕಾಯಿಯ ಗಾತ್ರ. ಮುಡಿ ಕಟ್ಟುತ್ತಿರಲಿಲ್ಲ ಕಮಲಾ. ಉದ್ದ ಜಡೆಯನ್ನು ಹೆಣೆದು ಹಾಗೇ ತೂಗು ಬಿಡುತ್ತಿದ್ದಳು. ನಡೆಯುವಾಗಲೆಲ್ಲಾ ಆ ಜಡೆ ಅತ್ತಿತ್ತ ವಾಲಾಡುತ್ತಾ ಅವಳ ನಡಿಗೆಗೊಂದು ನರ್ತನದ ಲಾಸ್ಯ ತಂದುಕೊಡುತ್ತಿತ್ತು. ಸೀತಾಲಕ್ಷ್ಮಿ ಅವಳ ನಿಡುಜಡೆ ನೋಡುತ್ತಾ ಎಷ್ಟೋ ಬಾರಿ ಬಾಯಿ ಕಳೆದುಕೊಂಡು ನಿಂತುಬಿಡುತ್ತಿದ್ದುದಿತ್ತು. ಈ ನಮೂನಿ ಕೇಶಸಂಪತ್ತು ಇದ್ದುದರಿಂದಲೇ ಕಮಲಾ ಅದನ್ನು ಕಳೆದುಕೊಳ್ಳಲು ಶತಾಯಗತಾಯ ಸಿದ್ಧಳಾಗಲಿಲ್ಲವೇನೋ. ಅದ್ಯಾವುದೋ ರಾಕ್ಷಸನ ಪ್ರಾಣ ಏಳುಸಮುದ್ರದ ಆಚೆಯ ಕೀಳುಸಮುದ್ರದ ನಡುವಿನ ಒಂದು ದ್ವೀಪದಲ್ಲಿರುವ ಮರದ ಮೇಲಿನ ಒಂದು ಗಿಣಿ ಯಲ್ಲಿತ್ತು ಎಂದು ಕತೆ ಹೇಳುವ ಹಾಗೆ ಕಮಲನ ಪ್ರಾಣ ಅವಳ ತಲೆಗೂದಲಿನಲ್ಲಿ ಅಡಗಿದ್ದರೂ ಆಶ್ಚರ್ಯಪಡಬೇಕಾಗಿರಲಿಲ್ಲ. ಗಂಡನ ಮನೆಯವರನ್ನು ಎದುರು ಹಾಕಿ ಕೊಂಡು ತನ್ನದಾಗಿದ್ದ ಸರ್ವಸಂಪತ್ತನ್ನು ಅಲ್ಲಿ ಬಿಟ್ಟು ಓಡಿ ಬಂದವಳ ಪ್ರಾಣ ಮತ್ತೆಲ್ಲಿರಲು ಸಾಧ್ಯ? ಕಮಲಾ ತನ್ನ ತಲೆಕೂದಲನ್ನು ಎಷ್ಟು ಬಗೆಯಲ್ಲಿ ಆರೈಕೆ ಮಾಡಿಕೊಳ್ಳುತ್ತಿದ್ದಳು ಅಂದರೆ ಇಂತಾದ್ದೊಂದು ಉಮೇದು ಅವಳಲ್ಲಿ ಇರುವುದು ಹೇಗೆ ಎಂದು ಸೀತಾಲಕ್ಷ್ಮಿ ಆಶ್ಚರ್ಯಪಡುವುದರ ಹಿಂದೆ ‘ಯಾಕೆ?’ ಎನ್ನುವ ಪ್ರಶ್ನೆಯೂ ಅವಳಿಗೇ ಗೊತ್ತಿಲ್ಲದ ಹಾಗೆ ಅಡಗಿ ಕೂತಿರುತ್ತಿತ್ತೇನೋ. ಮಧ್ಯಾಹ್ನ ಉಂಡು ಕೈ ತೊಳೆದ ಮೇಲೆ ವೆಂಕಮ್ಮ ಒಂದು ಗಳಿಗೆ ಮಲಗುತ್ತಿದ್ದರು. ಅವರು ಎದ್ದು ಕಾಫಿ ಕುಡಿಯುವುದರೊಳಗೆ ಕೈಲಿ ಮರದ ಬಾಚಣಿಗೆ ಹಿಡಿದು ಕಮಲಾ ಅವರೆದುರು ಸ್ಥಾಪನೆಯಾಗುತ್ತಿದ್ದಳು. ಮಗಳಿಗೆ ತಲೆ ಬಾಚುವ ಕಾರ್ಯಕ್ರಮಕ್ಕೆ ಅರ್ಧ ಗಂಟೆ, ತಲೆಗೆ ಎರೆದುಕೊಂಡ ದಿನ ಸಿಕ್ಕು ಬಿಡಿಸಿ ಜಡೆ ಹೆಣೆಯುವುದಕ್ಕೆ ವೆಂಕಮ್ಮನ ಕೈ ಸೋತು ಬರುತ್ತಿತ್ತು.

“ನಂಕೈಲಾಗಲ್ಲ ಕಣೇ. ರಟ್ಟೆ ಬಿದ್ದು ಹೋಯ್ತು. ಇಷ್ಟೊರ್ಷ ಆಯ್ತು, ಇನ್ನೂ ಜಡೆ ಹಾಕ್ಕೊಳ್ಳೋಕೆ ಬರಲ್ಲ ಅಂದ್ರೆ ಏನರ್ಥ?” ವೆಂಕಮ್ಮನ ಬೈಗುಳದಲ್ಲೂ ಪ್ರೀತಿ ಜಿನುಗುತ್ತಿರುತ್ತಿತ್ತು. ಗಂಡನ ಸುಖಕ್ಕೆ ತಿಲಾಂಜಲಿ ಬಿಟ್ಟಾಗಿದೆ. ಸಣ್ಣಪುಟ್ಟ ಸಂಗತಿಗಳಲ್ಲಿ ಮಗಳಿಗೆ ಸಮಾಧಾನವಾಗುವುದಿದ್ದರೆ ಅಷ್ಟರಮಟ್ಟಿಗೆ ಸೇವೆ ಮಾಡಲು ವೆಂಕಮ್ಮ ತಯಾರು. ಸೊಸೆಯ ದೃಷ್ಟಿಯಲ್ಲಿ ಪಕ್ಷಪಾತ ಆಗಬಾರದೆಂದು ಅವಳಿಗೂ ಜಡೆ ಹಾಕಲು ಉತ್ಸಾಹ ತೋರಿಸುತ್ತಿದ್ದರು ವೆಂಕಮ್ಮ.

“ಬ್ಯಾಡಪ್ಪಾ. ಅತ್ತಿಗೆ ಹಂಗೆ ನಂಗೆಲ್ಲುಂಟು ಹೊರೆಗೂದಲು? ಮೋಟು ಜಡೆ..” ತಪ್ಪಿಸಿಕೊಂಡಿದ್ದಳು ಸೀತಾಲಕ್ಷ್ಮಿ. ತೌರಿನಲ್ಲಿದ್ದಾಗ ಅವಳೂ ಅಮ್ಮನ ಕೈಲಿ ಚಾಕರಿ ಮಾಡಿಸಿಕೊಂಡವಳು. ಗಂಡನ ಮನೆಗೆ ಬಂದ ಕೂಡಲೆ ಅದೆಲ್ಲಿಂದ ಬಂತೋ ಗಾಂಭೀರ್ಯ?

ಮನೆ ಎದುರಿನ ಹೂದೋಟದಲ್ಲಿ ಬೇಸಿಗೆ ಬಂತು ಅಂದರೆ ಎಲೆ ಕಾಣದಷ್ಟು ಮಲ್ಲಿಗೆ ಹೂಗಳ ರಾಶಿ. ‘ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದಂತೆ’. ಸಂಜೆ ಹೊತ್ತು ಆಸ್ಥೆಯಿಂದ ಮೊಗ್ಗು ಬಿಡಿಸಿ, ಕಾಲಿನ ಹೆಬ್ಬೆಟ್ಟಿಗೆ ಬಾಳೆನಾರು ಕಟ್ಟಿಕೊಂಡು ಮೊಗ್ಗು ನೇಯ್ದಿಡುತ್ತಿದ್ದಳು ಕಮಲಾ. ಮನೆಯಾಚೆಯು ತಂಪಿನಲ್ಲಿ ಒದ್ದೆಬಟ್ಟೆಯಲ್ಲಿ ದಂಡೆ ಸುತ್ತಿಟ್ಟರೆ ಬೆಳಗಿನ ಹೊತ್ತಿಗೆ ಅರೆಬಿರಿದು ಘಮಘಮ. ಬೆಳಬೆಳಿಗ್ಗೆ ಎದ್ದೊಡನೆ ಅದನ್ನು ಮುಡಿದು ಸೀತಾಲಕ್ಷ್ಮಿ ಸಂಭ್ರಮಿಸಲು ಒಂದು ಕಾರಣ ಇತ್ತು. ಅವಳದೇ ಆದ ಗುಪ್ತವಾದ ಕಾರಣ. ಬೆಳಿಗ್ಗೆ ಎದ್ದು ಕಾಫಿಗೆ ಬಂದ ಶಿವರಾಮ ಅಡುಗೆ ಮನೆಯಲ್ಲಿ ಇಡುಕಿಕೊಂಡಿರುತ್ತಿದ್ದ ಪರಿಮಳವನ್ನು ದೀರ್ಘವಾಗಿ ಉಸಿರೆಳೆದುಕೊಂಡು ಆಸ್ವಾದಿಸುತ್ತಿದ್ದ ಎಂದು ಅವಳ ಅನಿಸಿಕೆ. ಕೆಲವು ಸಂಗತಿಗಳು ಬಾಯಿ ಬಿಟ್ಟು ಹೇಳದೆಯೂ ಅರ್ಥ ವಾಗುವಂತೆ ಹೇಗೋ ಇದು ಸೀತಾಲಕ್ಷ್ಮಿಯ ಅಂತರಂಗಕ್ಕೆ ಅರಿವಾಗಿಬಿಟ್ಟಿತ್ತು. ರಾಜಗಾಂಭೀರ್ಯ ಶಿವರಾಮನಿಗೆ. ಇಂತಾ ವಿಷಯಗಳನ್ನು, ಅದರಲ್ಲೂ ಪ್ರೀತಿ ಪ್ರೇಮ ಗಳಿಗೆ ಸಂಬಂಧಿಸಿದ ನವಿರು ಭಾವನೆಗಳನ್ನು, ಯಾವತ್ತೂ ಅವನು ಬಾಯಿ ಬಿಟ್ಟು ಹೆಂಡತಿಯ ಎದುರು ವ್ಯಕ್ತಪಡಿಸಿದವನಲ್ಲ. ಸಲಿಗೆ ಹೆಚ್ಚಾಗಿ ಹಲ್ಲು ಲೆಕ್ಕ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬಾರದು ಅನ್ನುವುದು ಒಂದು ಕಾರಣ ಇರಬಹುದು.

ಮನೆ ಯಲ್ಲಿರುವ ಅಕ್ಕನಿಗೆ ರಸಿಕಚೇಷ್ಟೆಗಳೇನಾದರೂ ಕಣ್ಣಿಗೆ ಬಿದ್ದು ಅವಳಿಗೆ ನೋವೋ, ವಿಷಾದವೋ, ಮುಜುಗರವೋ ಆಗಬಾರದು ಎನ್ನುವುದು ಮತ್ತೊಂದು ಕಾರಣ. ಎರಡನೆಯದೇ ಹೆಚ್ಚು ಸರಿ ಇರಬಹುದು ಎಂದು ಗಂಡನ ಗಜಗಾಂಭೀರ್ಯಕ್ಕೆ ಅರ್ಥ ಕಲ್ಪಿಸಿಕೊಂಡು ಸಮಾಧಾನ ಹಚ್ಚಿಕೊಳ್ಳುತ್ತಾಳೆ ಸೀತಾಲಕ್ಷ್ಮಿ. ಒಮ್ಮೆ ಅವಳಿಗೆ ಆಘಾತವಾಗುವಂತಾ ಸಂಗತಿಯೊಂದು ಆ ಮನೆಯಲ್ಲಿ ನಡೆದಿತ್ತು. ಯಾರೊಂದಿಗೂ ಹಂಚಿಕೊಳ್ಳಲಾಗದೆ, ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗದೆ ಹೊಟ್ಟೆಯೊಳಗೆ ಸುರುಳಿ ಸುತ್ತುವ ಸಂಗತಿ. ಬೆಳಿಗ್ಗೆ ಎದ್ದು ಮುಖ ತೊಳೆದು, ಕೈಬೆರಳುಗಳಿಂದಲೇ ತಲೆಗೂದಲು ಒಪ್ಪ ಮಾಡಿಕೊಂಡು, ದಿನದ ಮೊದಲ ಕೆಲಸವಾದ ಮಲ್ಲಿಗೆ ದಂಡೆಯನ್ನು ಮುಡಿಗೇರಿಸಿ ಕೊಳ್ಳಲು ಅವಳು ಹಿತ್ತಿಲಬಾಗಿಲಿನಿಂದ ಸುತ್ತಿಕೊಂಡು ಮನೆ ಎದುರಿನ ತುಳಸಿಕಟ್ಟೆಯ ಹತ್ತಿರ ಬಂದು ಇನ್ನೇನು ಹೂದಂಡೆಯನ್ನು ಮುಡಿಗೇರಿಸಿಕೊಳ್ಳಬೇಕು, ಒಮ್ಮೆ ಮೂಗಿನ ಬಳಿಗೊಯ್ದು ಆಘ್ರಾಣಿಸುವ ಸಹಜ ಬಯಕೆ ಜಾಗೃತವಾಗಿತ್ತು. ಸೀತಾಲಕ್ಷ್ಮಿ ದಂಡೆಯನ್ನು ಮೂಗಿನ ಹತ್ತಿರ ಹಿಡಿದರೆ ಏನೋ ಮುಲುಮುಲು. ತಲೆಗೂದಲ ಎಳೆಯೊಂದು ಮುಖ ನೇವರಿಸುವಂತೆ, ಕೆನ್ನೆಗೆ ತಾಗಿಯೂ ತಾಗದಂತೆ ನೇತಾಡುತ್ತಿದೆ. ಝಗ್ ಅಂದಿತ್ತು ಎದೆ. ತುಳಸಿಕಟ್ಟೆಯ ಮೇಲಿಟ್ಟ ಹೂದಂಡೆಗೆ ತಲೆಗೂದಲು ಅಂಟಿಕೊಳ್ಳುವ ಸಾಧ್ಯತೆ ಖಂಡಿತಕ್ಕೂ ಇಲ್ಲ. ಯಾರೂ ಅಲ್ಲಿ ತಲೆ ಬಾಚಿಕೊಳ್ಳುವುದಿಲ್ಲ. ಯಾರೂ ಅಂದರೆ ಮತ್ತ್ಯಾರು? ತಲೆ ಬಾಚಿಕೊಳ್ಳುವ ಹೆಂಗಸರು ಮನೆಯಲ್ಲಿ ಇಬ್ಬರೇ. ಹಿತ್ತಲ ಜಗುಲಿಯಲ್ಲಿ ತಲೆ ಬಾಚಿಕೊಂಡಾದ ಮೇಲೆ ಹಣಿಗೆಗೆ ಹತ್ತಿದ ತಲೆಕಸ ತೆಗೆದು, ಕೆಳಗೆ ಉದುರಿರಬಹುದಾದ್ದನ್ನು ಕೈಯಿಂದ ಬಳಿದು ಉಂಡೆ ಮಾಡಿ ಬದಿಯ ಕಸ ಬಿಸಾಕುವ ಜಾಗದಲ್ಲಿ ಹಾಕಿ ಬರುವ ಕ್ರಮ. ಮೂರುಸಂಜೆಯ ಹೊತ್ತಿಗೆ ಮುಂಚೇಕಡೆಯಲ್ಲಿ ಕಾಲು ನೀಡಿ ಕೂತು ದಂಡೆ ಕಟ್ಟುವವಳು ಕಮಲಾ. ಇದೆಲ್ಲಿಂದ ಬಂತು ತಲೆಕೂದಲು? ತಲೆಕೂದಲಿಗೆ ಸಂಬಂಧಿಸಿದ ಮತ್ತೊಂದು ಪ್ರಕರಣವನ್ನು ದೊಡ್ಡದು ಮಾಡಲು, ಅಥವಾ ವಿಚಾರಣೆ ನಡೆಸಲು ಸೀತಾಲಕ್ಷ್ಮಿಗೆ ಧೈರ್ಯವಿರಲಿಲ್ಲ. ಮನಸ್ಸೂ ಇರಲಿಲ್ಲ. ಒಳಗೆ ಕಾಫಿ ಕುಡಿಯುತ್ತಾ ಅತ್ತಿಗೆಯ ಬಳಿಯಲ್ಲಿ ಸ್ವಲ್ಪ ಹೆಚ್ಹೆಚ್ಚೇ ಅನಿಸುವಂತೆ ತಾಗಿ ಕೂತಿದ್ದಳು.

ಅವಳ ತಲೆಗೂದಲಿನಿಂದ ಮಲ್ಲಿಗೆಯ ಪರಿಮಳವೇನಾದರೂ ಹೊರಸೂಸು ತ್ತಿರಬಹುದೇ ಎಂದು ಮೂಗರಳಿಸಿ ಉಸಿರೆಳೆದುಕೊಂಡಿದ್ದಳು. ಅವಳೇ ಸ್ವತಾ ಮುಡಿದ ಮಲ್ಲಿಗೆಯ ಪರಿಮಳ ಸುತ್ತ ಹಬ್ಬಿ ಹರಡಿಕೊಂಡಿದ್ದರಿಂದ ಪ್ರತ್ಯೇಕವಾಗಿದ್ದೇನೂ ಸೀತಾಲಕ್ಷ್ಮಿಗೆ ಅನುಭವವಾಗಿರಲಿಲ್ಲ. ‘ಥೂ, ಇದೆಂತಾ ಹೀನಬುದ್ಧಿ ತನ್ನದು..’ ಎಂದು ಅವಳಿಗೇ ಕಸಿವಿಸಿ. ಮನಸ್ಸು ಅಂದರೆ ಎಷ್ಟು ವಿಚಿತ್ರ. ಏನು ಕಲ್ಪಿಸಿಕೊಳ್ಳಬೇಕು, ಏನು ಕಲ್ಪಿಸಿಕೊಳ್ಳಬಾರದು ಎನ್ನುವ ಯಾವ ತಡೆಗೋಡೆಯೂ ಅದಕ್ಕಿಲ್ಲ. ಅನುಮಾನ ಅಂದರೆ ದೊಡ್ಡ ರೋಗ ಎಂದು ಸುಮ್ಮನೆ ಹೇಳುತ್ತಾರೆಯೇ?

ಅವತ್ತು ಶುಕ್ರವಾರ. ಸಮಾ ನೆನಪಿದೆ ಸೀತಾಲಕ್ಷ್ಮಿಗೆ. ಏಕೆಂದರೆ ಕಾಫಿ ಕುಡಿದು ಮುಗಿಸುತ್ತಿದ್ದಂತೆ ಎರೆದುಕೊಳ್ಳಲು ಕಮಲಾ ತಲೆಗೆ ಎಣ್ಣೆ ಹಾಕಿಕೊಂಡಿದ್ದಳು. ಆಶ್ಚರ್ಯ ಎನ್ನುವಂತೆ ತಾನೇ ಸ್ವತಃ ತಲೆಗೆ ಎಣ್ಣೆ ತಟ್ಟಿಕೊಳ್ಳುತ್ತಾ, ನೀಳ್ಗೂದಲಿಗೆ ಸವರಿಕೊಳ್ಳುತ್ತಿದ್ದಳು. “ಹೇಳಿದ್ರೆ ನಾನು ಹಾಕ್ತಿರಲಿಲ್ವೇನೇ? ಇವತ್ತೇನು ಹೊಸಾ ವೇಷ? ಸೂರ್ಯ ಪಶ್ಚಿಮದಲ್ಲಿ ಹುಟ್ಟಿದಾನಾ?” ಕೇಳಿದ್ದರು ವೆಂಕಮ್ಮ.

“ನಿನ್ನ ಕೆಲಸ ನೀನು ನೋಡ್ಕಾ..” ಸಿಡುಕಿದ್ದಳು ಮಗಳು.

ಸೀತಾಲಕ್ಷ್ಮಿ ಮೈ ತೊಳೆದುಕೊಂಡು ಬಂದವಳು ತನ್ನ ಮರದ ಪೆಠಾರಿ ತೆಗೆದು ಬದಿಯ ಖಾನೆಯಲ್ಲಿ ಕಟ್ಟಿಟ್ಟಿದ್ದ ಪುಟ್ಟ ಗಂಟು ಬಿಚ್ಚಿದ್ದಳು. ಎಲ್ಲಾ ಐವತ್ತು ಪೈಸೆ, ಒಂದು, ಎರಡು ರೂಪಾಯಿಯ ನಾಣ್ಯಗಳು. ಊಟದ ಮನೆಗೆ ಹೋದಲ್ಲಿ ದಕ್ಷಿಣೆ ಕೊಟ್ಟ ದುಡ್ಡು. ಬಲಗೈಯನ್ನು ಉಣ್ಣುತ್ತಿದ್ದ ಅನ್ನದ ಮೇಲೆ ವಿರಮಿಸಲು ಬಿಟ್ಟು, ಎಡಗೈ ಮುಂದೆ ಮಾಡಿ ಅದನ್ನು ತೆಗೆದುಕೊಳ್ಳುವಾಗ ಒಂಥರಾ ಸಿಗ್ಗು, ಮುಜುಗರ. ಐವತ್ತುಪೈಸೆಯ ಒಂದು ನಾಣ್ಯ ತೆಗೆದು ದೇವರ ಕೋಣೆಯಲ್ಲಿದ್ದ ಕಾಣಿಕೆ ಡಬ್ಬಿಗೆ ಹಾಕಿ ದೇವರಿಗೆ ಶ್ರದ್ಧಾಪೂರ್ವಕ ಕೈ ಮುಗಿದಿದ್ದಳು ಸೀತಾಲಕ್ಷ್ಮಿ. ಯಾವತ್ತೋ ಒಂದು ದಿನ ಕಾರಣಿಕ ಕ್ಷೇತ್ರಕ್ಕೆ ಯಾತ್ರೆ ಹೋದರೆ ಇಲ್ಲಿ ಸಂಗ್ರಹವಾಗಿರುತ್ತಿದ್ದ ದುಡ್ಡು ಅಲ್ಲಿ ಕಾಣಿಕೆ ಡಬ್ಬಿಗೆ. ‘ತಪ್ಪಾಯ್ತು ದೇವ್ರೇ, ಸಾವಿರ ಸತಿ ತಪ್ಪಾಯ್ತು. ಇನ್ನ್ಯಾವತ್ತೂ ಇಂತಾ ಕೆಟ್ಟ ಯೋಚನೆ ಮಾಡುವುದಿಲ್ಲ. ಕ್ಷಮಿಸು ನನ್ನ..’ ಯಾವತ್ತಿಗಿಂತಾ ಹೆಚ್ಚಿನ ಸುತ್ತು ಹಾಕಿ ದೇವರಿಗೆ ಕೈ ಮುಗಿದು, ಬಗ್ಗಿ ನಮಸ್ಕಾರ ಮಾಡುವಾಗಲೂ ಬೇಗ ಏಳದೆ ತಪ್ಪೊಪ್ಪಿಗೆಯ ಯಾಚನೆ. ಒಳಗಿಂದ ಅತ್ತೆ ಕರೆದಿದ್ದರು,
“ಏನೇ, ನಮಸ್ಕಾರ ಉದ್ದ ಆಗ್ತಿದೆ. ದೇವರ ಕೋಣೇಲಿ ಹೊಕ್ಕಂಡು ಏನ್ಮಾಡ್ತಿದ್ದಿ?”
ಅಲ್ಲೇ ಅಡುಗೆ ಮನೆಯಲ್ಲಿದ್ದಳು ಕಮಲಾ.
“ತಲೆತಿರುಗು ಬಂದು ಬೀಳ್ಬೇಡ ಮಾರಾಯ್ತೀ, ಸಾಕು ಪ್ರದಕ್ಷಿಣೆ ಹಾಕಿದ್ದು..” ತಮಾಷಿ ಮಾಡಿದ್ದಳು.

(ಕೃತಿ: ಅಂತಃಪುರ (ಸಾಮಾಜಿಕ ಕಾದಂಬರಿ), ಲೇಖಕರು: ವಸುಮತಿ ಉಡುಪ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 195/-, ಪುಟಗಳು: 192)