ಹೊಸಪೇಟೆಯ ಬಡತನ ನನ್ನನ್ನು ದಿಗಿಲು ಬಡಿಸಿತು. ಬೆಳಗಿನ ನಾಷ್ಟಾ ಮತ್ತು ಮಧ್ಯಾಹ್ನದ ಊಟದ ವೇಳೆ, ತಂತಿಬೇಲಿಯ ಆಚೆ ಬಡವರು ಅನ್ನಕ್ಕಾಗಿ ಕಾಯುತ್ತಿದ್ದರು. ನಮಗೆ ಇಲ್ಲಿ ಬೇಕಾದಷ್ಟು ಆಹಾರ ನೀಡುತ್ತಿದ್ದರು. ನನ್ನ ಕೆಲವರು ಗೆಳೆಯರಿಗೆ ಆ ನಿರ್ಗತಿಕರ ಬಗ್ಗೆ ತಿಳಿಸಿ ಒಂದು ಯೋಜನೆ ರೂಪಿಸಿದೆ. ನಾವೆಲ್ಲ ಹೆಚ್ಚಿಗೆ ಅನ್ನ ಹಾಕಿಸಿಕೊಳ್ಳುವುದು. ಸ್ವಲ್ಪ ತಿಂದ ಹಾಗೆ ಮಾಡಿ ಅವರ ಬಳಿ ಹೋಗುವುದು. ಆ ಬಡ ಹೆಣ್ಣುಮಕ್ಕಳು ಸೆರಗೊಡ್ಡುವುದು. ನಾವು ಅವರ ಸೆರಗಲ್ಲಿ ಸಾರು ಸೇರಿದ ಅನ್ನ ಹಾಕುವುದು. ಅನ್ನದಲ್ಲಿನ ಸಾರು ಸೆರಗಿಂದ ಸೋರಿ ಹೋಗುವುದು. ಅವರು ಸಾರಲ್ಲಿ ನೆನೆದ ಅನ್ನವನ್ನು ಗಪಗಪ ತಿನ್ನುವುದು..
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 62ನೇ ಕಂತು ನಿಮ್ಮ ಓದಿಗೆ

ನಾನು ಎಂಟನೆಯ ಇಯತ್ತೆಯಲ್ಲಿ ಇದ್ದಾಗ ಜ್ಯೂನಿಯರ್ ಎನ್.ಸಿ.ಸಿ. ಸೇರಿದೆ. ಕ್ಯಾನ್ವಸ್ ಷೂ, ಸಾಕ್ಸ್, ಉಣ್ಣೆಯ ದಾರದಿಂದ ತಯಾರಿಸಿದ ದುಂಡನೆಯ ಕೆಂಪು ಗುಚ್ಛ ಮತ್ತು ಎನ್.ಸಿ.ಸಿ. ಬಿಲ್ಲೆ ಇರುವ ಕ್ಯಾಪ್, ದಪ್ಪನೆಯ ಕಾಟನ್ ಥರದ ಬೆಲ್ಟ್ ಹಾಗೂ ಒಂದು ಜೊತೆ ಖಾಕಿ ಹಾಫ್ ಪ್ಯಾಂಟ್ ಮತ್ತು ಷರ್ಟ್ ಕೊಟ್ಟರು. ಜೀವನದಲ್ಲಿ ಮೊದಲ ಬಾರಿಗೆ ಅಂಥ ಯೂನಿಫಾರ್ಮ್ ಧರಿಸುವ ಅವಕಾಶ ಸಿಕ್ಕಿತು. ಕಡಿಮೆ ತೂಕದ ಕಾರಣ ಬಾಲ ಮಿಲಿಟರಿ ಸೇರಲಿಕ್ಕೆ ಸಾಧ್ಯವಾಗದಿದ್ದರೂ ಜ್ಯೂನಿಯರ್ ಎನ್.ಸಿ.ಸಿ. ಯಾದರೂ ಸೇರಿದೆನಲ್ಲಾ ಎಂಬ ಸಂತೋಷ ಉಕ್ಕುತ್ತಿತ್ತು. ಆ ಶಿಸ್ತಿನ ಡ್ರೆಸ್ ಧರಿಸಿದಾಗ ಯಾವುದೋ ಹೊಸ ವ್ಯಕ್ತಿತ್ವದ ಅವತಾರವಾದಂತೆನಿಸಿತು.

ಎಂಟನೆಯ ಇಯತ್ತೆಯ ಬೇರೆ ಬೇರೆ ಕ್ಲಾಸಿನವರೂ ಗೆಳೆಯರಾದರು. ಉತ್ತರ ಭಾರತದಿಂದ ಬಂದ ಅನೇಕರು ನಮಗೆ ಪಿ.ಐ. ಸ್ಟಾಫ್ ಇದ್ದರು. ಅವರಲ್ಲಿ ಇಬ್ಬರು ಸಿಖ್ ಸಮುದಾಯದವರು ಮತ್ತು ಒಬ್ಬರು ಮಹಾರಾಷ್ಟ್ರದವರಿದ್ದರು. ಅವರೆಲ್ಲ ಮಿಲಿಟರಿಯಿಂದ ಡೆಪ್ಯುಟೇಶನ್ ಮೇಲೆ ಬಂದವರಾಗಿದ್ದರು. ಜೊತೆಗೆ ಎನ್.ಸಿ.ಸಿ. ಆಫಿಸರ್ ಆಗಿ ನಮ್ಮ ಹೈಸ್ಕೂಲಿನ ಅಧ್ಯಾಪಕರಲ್ಲೊಬ್ಬರಾದ ಕುರ್ಲೆ ಸರ್ ಇದ್ದರು. ಅವರದು ಒಂದಿಷ್ಟು ಮಂಗೋಲಿಯನ್ ಮುಖ. ಒಳ್ಳೆಯ ಮನುಷ್ಯ. ಆದರೆ ತಮ್ಮದೇ ಗುಂಗಿನಲ್ಲಿ ಕೆಲಸ ಮಾಡುತ್ತಿದ್ದರು. ನಗುವುದು ಕಡಿಮೆ. ಆಕಾಶ ತಲೆಯಮೇಲೆ ಬಿದ್ದವರ ಹಾಗೆ ಉದ್ವಿಗ್ನ ಮನಸ್ಥಿತಿಯಲ್ಲಿರುತ್ತಿದ್ದರು. ಯಾರಾದರೂ ಹುಡುಗರು ಮಧ್ಯೆ ಮಾತನಾಡುವಾಗ ಸಿಟ್ಟಿಗೆದ್ದು ಡಿಸಿಪ್ಲೇನ್, ಯಾರಾದರೂ ಶಿಸ್ತಿಗೆ ಭಂಗ ತಂದರೆ ಎರಡೂ ಕಾಲಿನಿಂದ ಒದೆಯುತ್ತೇನೆ ಎಂದು ಹೇಳುತ್ತಿದ್ದರು. ಆಗ ನಮಗೆಲ್ಲ ನಗು ತಡೆಯುತ್ತಿರಲಿಲ್ಲ.

ಪರೇಡ್ ಮುಗಿದ ಮೇಲೆ ಸಿರಾ ಉಪ್ಪಿಟ್ಟು ಪುಡಿಕೆಗಳನ್ನು ವಿತರಿಸುತ್ತಿದ್ದರು. ಆಗ ‘ಯಾರೂ ಗಲಾಟೆ ಮಾಡಬೇಡಿರಿ. ಎಲ್ಲರೂ ಕುಂತಲ್ಲೇ ಸಿಡೌನ್’ ಎಂದು ಹೇಳಿ ನಮಗೆ ನಾಷ್ಟಾ ವಿತರಿಸುವ ವ್ಯವಸ್ಥೆ ಮಾಡಲು ಹೋಗುತ್ತಿದ್ದರು. ಅವರು ಹೋದಮೇಲೆ ನಮಗೆ ನಕ್ಕು ನಕ್ಕು ಸಾಕಾಗುತ್ತಿತ್ತು.

(ವಿರೂಪಾಕ್ಷ ದೇವಾಲಯದ ಸಮೀಪ ಹರಿಯುವ ತುಂಗಭದ್ರೆ)

ಭೋಸಲೆ ಎಂಬ ಅಡ್ಡಹೆಸರಿನ ತೆಳ್ಳನೆಯ ಹುಡುಗ ಬಹಳ ಶ್ರದ್ಧೆಯಿಂದ ಪರೆಡ್ ಕಲಿತ. ಸ್ವಲ್ಪ ದಿನಗಳ ನಂತರ ಅವನು ನಮ್ಮ ಕ್ಯಾಪ್ಟನ್ ಆದ. ನನಗೆ ಎನ್.ಸಿ.ಸಿ. ಬಹಳ ಹಿಡಿಸಿತ್ತು. ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ದೇಶದ ಕಲ್ಪನೆ ಮೂಡಲು ಜ್ಯೂನಿಯರ್ ಎನ್.ಸಿ.ಸಿ. ಬಹಳ ಮಹತ್ವದ್ದು ಎಂಬ ಅರಿವು ನನ್ನದಾಗಿತ್ತು. ‘ಜವ್ಞಾ ಹಮ್ ಜ್ಯೂನಿಯರ್ ಎನ್.ಸಿ.ಸಿ. ಹ್ಞೈ, ಇಸ್ ದುನಿಯಾಕೋ ಬತಾಯೇಂಗೆ’ ಎಂದು ನಾವು ಹಾಡುತ್ತಿದ್ದೆವು. ಆದರೆ ನಾನು ಪರೇಡ್ ಮತ್ತು ಕಸರತ್ತಿನಂಥವುಗಳ ಬಗ್ಗೆ ತೀವ್ರ ಆಸಕ್ತಿದಾಯಕನಾಗಿರಲಿಲ್ಲ. ಮಿಲಿಟರಿ ಶಿಕ್ಷಕರು ನಮಗೆ ಯುದ್ಧದ ಎಲ್ಲ ಸಂದರ್ಭಗಳನ್ನು ವಿವರಿಸುತ್ತಿದ್ದರು ಮತ್ತು ಅವುಗಳ ಪ್ರಾತ್ಯಕ್ಷಿಕೆ ನಡೆಯುತ್ತಿತ್ತು. ಇವೆಲ್ಲ ನನಗೆ ಆಸಕ್ತಿದಾಯಕವಾಗಿದ್ದವು.

ಬಯಲಲ್ಲಿ ಕುಳಿತು ಯುದ್ಧಭೂಮಿಯೊಂದರ ದೊಡ್ಡ ನಕಾಶೆಯನ್ನು ನೆಲದ ಮೇಲೆ ಹಾಸಿ ಮ್ಯಾಪ್ ರೀಡಿಂಗ್ ಪಾಠ ಕೇಳುವುದು ಖುಷಿ ಕೊಡುತ್ತಿತ್ತು. ಯುದ್ಧಭೂಮಿಯಲ್ಲಿ ಆ ಪ್ರದೇಶದ ಮಣ್ಣು ಮತ್ತು ಹಸಿರು ವಾತಾವರಣಕ್ಕೆ ತಕ್ಕಂತೆ ಡ್ರೆಸ್ ಕಲರ್ ಇರುವುದು ಅವಶ್ಯ ಎಂದು ಮಿಲಿಟರಿ ಶಿಕ್ಷಕರು ವಿವರಿಸಿದರು. ನಕಾಶೆಯಲ್ಲಿರುವ ಗೆರೆಗಳು ಮತ್ತು ಅವುಗಳ ಬಣ್ಣ ಹಾಗೂ ಜೊತೆಗಿರುವ ಸಂಕೇತಗಳನ್ನು ಕುರಿತು ಅವರು ನಮಗೆಲ್ಲ ವಿವರಿಸಿದ್ದು ನೆನಪಾಗುತ್ತಿರುತ್ತದೆ. ನಕಾಶೆಯಲ್ಲಿ ಗೆರೆಯ ದಪ್ಪ ಮತ್ತು ಬಣ್ಣಗಳು ಬೇರೆಬೇರೆಯಾಗಿರುತ್ತವೆ. ಅವುಗಳಲ್ಲಿ ಯಾವುವು ಸ್ಥಳೀಯ ದಾರಿಗಳು, ಯಾವುವು ಹೆದ್ದಾರಿಗಳು, ಯಾವುವು ಜನವಸತಿ ಪ್ರದೇಶಗಳು, ಯಾವುವು ಅರಣ್ಯ ಮತ್ತು ನಿರ್ಜನ ಪ್ರದೇಶಗಳು, ಆ ನಕಾಶೆಯಲ್ಲಿ ಯುದ್ಧಭೂಮಿಗೆ ಸಂಬಂಧಿಸಿದ ಪ್ರದೇಶ ಯಾವುದು. ಆ ಪ್ರದೇಶದ ಬಣ್ಣವನ್ನು ಯಾವರೀತಿಯಲ್ಲಿ ಗುರುತಿಸಲಾಗಿದೆ. ಆ ಪ್ರದೇಶಗಳಲ್ಲಿ ವೈರಿಗಳು ಬರುವ ಸಾಧ್ಯತೆ ಯಾವ ಬಾರ್ಡರ್‌ನಿಂದ ಇರುತ್ತದೆ. ನಾವು ವೈರಿಗಳಿಗೆ ಕಾಣದ ಹಾಗೆ ಯಾವರೀತಿ ತಗ್ಗು ತೋಡಿ ಕ್ರೌಲಿಂಗ್ ಮಾಡುತ್ತ ಮುಂದೆ ಸಾಗಬೇಕು. ಬಹಳ ಗಂಭೀರ ಪರಿಸ್ಥಿತಿಯಲ್ಲಿ ರಾಡಿ ನೀರು ಸಿಕ್ಕರೂ ಅದರಲ್ಲಿ ಮಣ್ಣು ಕಲಿಸಿ ಮುಖಕ್ಕೆ ಆ ಮಣ್ಣನ್ನು ಹೇಗೆ ಹಚ್ಚಿಕೊಳ್ಳಬೇಕು ಮುಂತಾದ ವಿಚಾರಗಳನ್ನು ಕೂಡಿಸಿ ಪ್ರಾತ್ಯಕ್ಷಿಕೆ ಮೂಲಕ ತಿಳಿಸುತ್ತಿದ್ದರು.

ಬಂದೂಕು ಗುರಿಯಿಡುವುದು. ಗುರಿ ಇಡುವ ಮೊದಲು ಸರಿಯಾಗಿ ಭೂಮಿಗೆ ಒರಗುವುದು. ಕಾಲುಗಳನ್ನು ಸರಿಯಾಗಿ ಚಾಚುವುದು, ದೃಷ್ಟಿಯನ್ನು ತೀಕ್ಷ್ಣಗೊಳಿಸಿಕೊಳ್ಳುವುದಕ್ಕಾಗಿ ಗುರಿ ಇಟ್ಟ ಭಂಗಿಯಲ್ಲೇ ಒಂದು ಸಲ ಗೋಣು ಹೊರಳಿಸಿ ಮರ ಗಿಡಗಳ ಹಸಿರನ್ನು ಕಣ್ಣಲ್ಲಿ ತುಂಬಿಕೊಳ್ಳುವುದು. ಮುಂದೆ ಇಟ್ಟ ಟಾರ್ಗೆಟ್ ಫಲಕಕ್ಕೆ ಗುರಿಯಿಟ್ಟು ಟ್ರಿಗರ್ ಒತ್ತಿ ಗುಂಡು ಹಾರಿಸುವ ನಟನೆ ಮಾಡುವುದು… ಹೀಗೆ ಜ್ಯೂನಿಯರ್ ಎನ್.ಸಿ.ಸಿ.ಯಲ್ಲಿ ಬಹಳಷ್ಟು ಕಲಿತೆವು. ಶಿಸ್ತಿನ ಜೀವನದ ಆನಂದವೇ ಬೇರೆ ಎಂದು ಅನಿಸಿತು.

ನಂತರ ನಾವು ಹೊಸಪೇಟೆಯಲ್ಲಿ ನಡೆಯಲಿರುವ ಎನ್.ಸಿ.ಸಿ. ಕ್ಯಾಂಪ್‌ಗೆ ತಯಾರಿ ನಡೆಸಿದೆವು. ಹೋಗುವ ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂಜೆಕ್ಷನ್ ತೆಗೆದುಕೊಳ್ಳಬೇಕಾಯಿತು. ನನಗೆ ತಿಳಿವಳಿಕೆ ಬಂದ ಮೇಲೆ ಚುಚ್ಚಿಸಿಕೊಂಡ ಮೊದಲ ಇಂಜೆಕ್ಷನ್ ಅದಾಗಿತ್ತು. ಇಂಜೆಕ್ಷನ್ ಮಾಡಿಸಿಕೊಳ್ಳುವವರೆಗಿನ ಭಯ ಇಂದಿಗೂ ನೆನಪಾಗಿ ನಗು ಬರುವುದು. ಆ ಕಾಲದ ಸೂಜಿಗಳು ಈಗಿನಂತೆ ತೆಳ್ಳಗೆ ಇರಲಿಲ್ಲ. ಅವುಗಳನ್ನು ಕುದಿಯುವ ನೀರಿನಲ್ಲಿ ಮುಳುಗಿಸಿ ಮರುಬಳಕೆ ಮಾಡಲಾಗುತ್ತಿತ್ತು. ಒಂದು ಇಂಜೆಕ್ಷನ್ ಕನಿಷ್ಠ ಮರುದಿನದವರೆಗೆ ಹೆಚ್ಚಿನ ನೋವು ಕೊಡುತ್ತಿತ್ತು. ಈ ಮುಂಜಾಗ್ರತಾ ಇಂಜೆಕ್ಷನ್ ಕಾರಣ ಜ್ವರ ಬಂದಿತು.

ಅಂತೂ ಕ್ಯಾಂಪ್‌ಗೆ ಹೋಗುವ ದಿನ ಎಲ್ಲರನ್ನೂ ಮಿಲಿಟರಿ ವ್ಯಾನ್‌ನಲ್ಲಿ ವಿಜಾಪುರ ರೈಲು ನಿಲ್ದಾಣಕ್ಕೆ ಕರೆದುಕೊಂಡು ಹೋದರು. ಬಾಲ್ಯದಲ್ಲಿ ಅಜ್ಜಿಯ ಜೊತೆ ಒಂದು ಸಲ ಯಮನೂರು ಜಾತ್ರೆಗೆ ಹೋಗುವಾಗ ರೈಲು ಹತ್ತಿದ್ದು ಬಿಟ್ಟರೆ ಇದು ಎರಡನೆಯ ರೈಲು ಪ್ರವಾಸವಾಗಿತ್ತು.

ಕಿಟಕಿಯಲ್ಲಿ ಕುಳಿತು ಹಳಿಗಳ ಕಡೆಗೆ ಗಮನ ಹರಿಸುವುದು. ಜಂಕ್ಷನ್‌ನಲ್ಲಿ ಹಳಿಗಳ ಬದಲಾವಣೆ ವೇಳೆ ವೇಗಗತಿಯಲ್ಲಿನ ರೈಲುಗಾಲಿ ನೋಡಿ ಗಾಬರಿಯಾಗುವುದು. ಇದು ಮೊದಲ ಪ್ರವಾಸದ ಮುಖ್ಯ ನೆನಪು. ತುಂಬಿ ತುಳುಕುತ್ತಿದ್ದ ರೈಲು ಡಬ್ಬಿಯಲ್ಲಿ ನನ್ನನ್ನು ಎತ್ತಿಕೊಂಡು ಅಜ್ಜಿ ಅದುಹೇಗೆ ಹತ್ತಿದಳೋ, ಕಿಟಕಿ ಪಕ್ಕ ಅದು ಹೇಗೆ ಕೂಡಿಸಿದಳೋ ದೇವರೇ ಬಲ್ಲ. ರೈಲು ಓಡುವಾಗ ಪಕ್ಕದ ರಸ್ತೆ ಬದಿಯ ಗಿಡಗಳು ವಿರುದ್ಧ ದಿಕ್ಕಿನಲ್ಲಿ ಓಡುವಂತೆ ಕಾಣುವುದನ್ನು ಆಶ್ಚರ್ಯಚಕಿತನಾಗಿ ನೋಡುತ್ತಿದ್ದೆ.

ಈ ಎರಡನೆಯ ರೈಲು ಪ್ರವಾಸದಲ್ಲಿ ರಾತ್ರಿಯಾಗಿದ್ದರಿಂದ ಹಾಗೆಲ್ಲ ನೋಡುವ ಅವಕಾಶ ಸಿಗಲಿಲ್ಲ. ಹೊಸಪೇಟೆ ನಿಲ್ದಾಣ ಬರುವುದರೊಳಗಾಗಿ ನಿದ್ದೆಯ ಮೂಡಲ್ಲಿದ್ದೆವು. ಹೊಸಪೇಟೆಯ ಸರ್ಕಾರಿ ಹೈಸ್ಕೂಲಿನ ಕೋಣೆಗಳಲ್ಲಿ ನಮ್ಮ ಉಳಿದುಕೊಳ್ಳುವ ವ್ಯವಸ್ಥೆಯಾಗಿತ್ತು. ದೊಡ್ಡ ಕೋಣೆಗಳಲ್ಲಿನ ಬೆಂಚುಗಳನ್ನು ತೆಗೆದು ಸ್ವಚ್ಛವಾಗಿ ಇಡಲಾಗಿತ್ತು. ನಾವು ಶಿಸ್ತಿನಿಂದ ದಂಡೆಗುಂಟ ನಮ್ಮ ಟ್ರಂಕುಗಳನ್ನು ಇಟ್ಟೆವು. ನಮ್ಮ ನಮ್ಮ ಟ್ರಂಕಿನ ಮುಂದೆ ಜಮಖಾನೆ ಹಾಸಿ ಚದ್ದರ್ ಹೊದ್ದುಕೊಂಡು ಮಲಗಿದೆವು. ಮಿಲಿಟರಿ ತರಬೇತಿ ಶಿಕ್ಷಕರು ನಸುಕಿನಲ್ಲಿ ಎಬ್ಬಿಸಿದರು. ಎದ್ದರೂ ರೈಲಿನಲ್ಲಿ ತೂಗಿದಂತೆ ಭಾಸವಾಗುತ್ತಿತ್ತು. ಇದೊಂದು ಹೊಸ ಅನುಭವವಾಗಿ ಪರಿಣಮಿಸಿತು.

ಬಿಲ್ಡಿಂಗ್ ಹಿಂದೆ ಸ್ನಾನಕ್ಕಾಗಿ ತಾತ್ಪೂರ್ತಿಕವಾಗಿ ನಳಗಳ ಸಾಲೇ ಸಿದ್ಧವಾಗಿತ್ತು. ಪಕ್ಕದಲ್ಲಿ ಚಹಾದ ದೊಡ್ಡ ಟೆಂಟ್ ಹಾಕಲಾಗಿತ್ತು. ನಾಷ್ಟಾ ಮತ್ತು ಊಟದ ವಿತರಣೆಯ ವ್ಯವಸ್ಥೆ ಕೂಡ ಅಲ್ಲೇ ಇತ್ತು. ಹೈಸ್ಕೂಲ್ ಕಟ್ಟಡದ ಆವರಣದ ಹಿಂದೆ ರೈಲು ಹಳಿ ಹಾದು ಹೋಗಿತ್ತು. ಬರುವ ಹೋಗುವ ರೈಲುಗಳನ್ನು ನೋಡುವ ಖುಷಿ ನನ್ನದು.

(ಬಡವಿ ಲಿಂಗ)

ನಕಾಶೆಯಲ್ಲಿ ಗೆರೆಯ ದಪ್ಪ ಮತ್ತು ಬಣ್ಣಗಳು ಬೇರೆಬೇರೆಯಾಗಿರುತ್ತವೆ. ಅವುಗಳಲ್ಲಿ ಯಾವುವು ಸ್ಥಳೀಯ ದಾರಿಗಳು, ಯಾವುವು ಹೆದ್ದಾರಿಗಳು, ಯಾವುವು ಜನವಸತಿ ಪ್ರದೇಶಗಳು, ಯಾವುವು ಅರಣ್ಯ ಮತ್ತು ನಿರ್ಜನ ಪ್ರದೇಶಗಳು, ಆ ನಕಾಶೆಯಲ್ಲಿ ಯುದ್ಧಭೂಮಿಗೆ ಸಂಬಂಧಿಸಿದ ಪ್ರದೇಶ ಯಾವುದು. ಆ ಪ್ರದೇಶದ ಬಣ್ಣವನ್ನು ಯಾವರೀತಿಯಲ್ಲಿ ಗುರುತಿಸಲಾಗಿದೆ. ಆ ಪ್ರದೇಶಗಳಲ್ಲಿ ವೈರಿಗಳು ಬರುವ ಸಾಧ್ಯತೆ ಯಾವ ಬಾರ್ಡರ್‌ನಿಂದ ಇರುತ್ತದೆ.

ಹೊಸಪೇಟೆಯ ಬಡತನ ನನ್ನನ್ನು ದಿಗಿಲು ಬಡಿಸಿತು. ಬೆಳಗಿನ ನಾಷ್ಟಾ ಮತ್ತು ಮಧ್ಯಾಹ್ನದ ಊಟದ ವೇಳೆ, ತಂತಿಬೇಲಿಯ ಆಚೆ ಬಡವರು ಅನ್ನಕ್ಕಾಗಿ ಕಾಯುತ್ತಿದ್ದರು. ನಮಗೆ ಇಲ್ಲಿ ಬೇಕಾದಷ್ಟು ಆಹಾರ ನೀಡುತ್ತಿದ್ದರು. ನನ್ನ ಕೆಲವರು ಗೆಳೆಯರಿಗೆ ಆ ನಿರ್ಗತಿಕರ ಬಗ್ಗೆ ತಿಳಿಸಿ ಒಂದು ಯೋಜನೆ ರೂಪಿಸಿದೆ. ನಾವೆಲ್ಲ ಹೆಚ್ಚಿಗೆ ಅನ್ನ ಹಾಕಿಸಿಕೊಳ್ಳುವುದು. ಸ್ವಲ್ಪ ತಿಂದ ಹಾಗೆ ಮಾಡಿ ಅವರ ಬಳಿ ಹೋಗುವುದು. ಆ ಬಡ ಹೆಣ್ಣುಮಕ್ಕಳು ಸೆರಗೊಡ್ಡುವುದು. ನಾವು ಅವರ ಸೆರಗಲ್ಲಿ ಸಾರು ಸೇರಿದ ಅನ್ನ ಹಾಕುವುದು. ಅನ್ನದಲ್ಲಿನ ಸಾರು ಸೆರಗಿಂದ ಸೋರಿ ಹೋಗುವುದು. ಅವರು ಸಾರಲ್ಲಿ ನೆನೆದ ಅನ್ನವನ್ನು ಗಪಗಪ ತಿನ್ನುವುದು. ಮತ್ತೆ ಅನ್ನ ಹಾಕಿಸಿಕೊಂಡು ಹೀಗೆ ಪುನರಾವರ್ತನೆ ಮಾಡುವುದು. ಇದೆಲ್ಲ ನೆನಪಾದರೆ ನನಗೆ ಈಗಲೂ ತಲೆಸುತ್ತು ಬಂದಂತಾಗುತ್ತದೆ. ನಾನು ಕಮ್ಯುನಿಸಂ ಕಡೆಗೆ ಆಕರ್ಷಿತನಾಗಲು ಇಂಥ ಪ್ರಸಂಗಗಳೂ ಕಾರಣವಾದವು.

ಹೈಸ್ಕೂಲು ಕಟ್ಟಡದ ಮಧ್ಯೆ ಚಚ್ಚೌಕಾದ ಖಾಲಿ ಜಾಗವನ್ನು ಸ್ವಚ್ಛವಾಗಿಟ್ಟಿದ್ದರು. ಮೂಲೆಯಲ್ಲೊಂದು ಪಾರಿಜಾತದ ಗಿಡವಿತ್ತು. ಅದು ಅಷ್ಟೇನೂ ದೊಡ್ಡದಾಗಿರಲಿಲ್ಲ. ಆದರೆ ಬೆಳಿಗ್ಗೆ ನೋಡಿದಾಗ ಕೇಸರಿ ಬಣ್ಣದ ತೊಟ್ಟಿನಿಂದ ಕೂಡಿದ ಬಿಳಿ ಹೂಗಳ ನೋಡಿ ಆನಂದ ತುಂದಿಲನಾದೆ. ನೆಲದ ಮೇಲಂತೂ ಹೂವಿನ ರಾಶಿ ಬಿದ್ದಿರುತ್ತಿತ್ತು. ಕ್ಯಾಂಪ್ ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ ಆ ಹೂಗಿಡದ ಬಳಿ ಹೋಗಿ ನೋಡುತ್ತ ಖುಷಿಪಡುತ್ತಿದ್ದೆ. (ಕೆಲ ವರ್ಷಗಳ ಹಿಂದೆ ಹೊಸಪೇಟೆಯ ಆ ಸರ್ಕಾರಿ ಹೈಸ್ಕೂಲಿನ ಸಮೀಪದಲ್ಲಿನ ಸಭಾಂಗಣದಲ್ಲಿ ನನ್ನ ಭಾಷಣ ಏರ್ಪಡಿಸಲಾಗಿತ್ತು. ಸಮಯ ಮಾಡಿಕೊಂಡು ಸದಾ ನೆನಪಾಗುವ ಆ ಪಾರಿಜಾತ ಗಿಡವನ್ನು ನೋಡಲು ಹೋದೆ. ಆ ಹೂಗಿಡವನ್ನು ಕಡಿದು ಹಾಕಿ ಅದರ ಗುರುತಿಲ್ಲದಂತೆ ಮಾಡಿದ್ದರು. ಒಳ್ಳೆಯದೆಲ್ಲವೂ ನಮ್ಮ ನೆನಪಿನಲ್ಲಿ ಮಾತ್ರ ಉಳಿಯುತ್ತವೇನೋ ಎನಿಸಿತು. ಬುದ್ಧನ ಕ್ಷಣಭಂಗುರ ತತ್ತ್ವದ ನೆನಪಾಯಿತು.)

ಹೈಸ್ಕೂಲಿನ ಕಂಪೌಂಡ್‌ನಲ್ಲಿ ಟೆಂಟ್‌ಗಳ ಮೂಲಕ ಮಿನಿ ಮಿಲಿಟರಿ ಕ್ಯಾಂಪನ್ನೇ ನಿರ್ಮಿಸಲಾಗಿತ್ತು. ಆಸ್ಪತ್ರೆ ಟೆಂಟಲ್ಲಿ ಗುಳಿಗೆ, ಸಿರಪ್‌, ಇಂಜೆಕ್ಷನ್ ಮುಂತಾದ ಪ್ರಥಮ ಚಿಕಿತ್ಸೆಯ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಸೆಂಟ್ರಿ ಟೆಂಟ್‌ನಲ್ಲಿ ಒಂದಿಷ್ಟು ಕೆಡೆಟ್‌ಗಳು ರಾತ್ರಿ ಪಾಳಿಯ ಚೌಕಿದಾರರಾಗಿ ಕರ್ತವ್ಯ ಪಾಲನೆ ಮಾಡಬೇಕಿತ್ತು. ರಾತ್ರಿ ಹತ್ತು ಗಂಟೆಯ ಮೇಲೆ ಕಂಪೌಂಡ್ ಒಳಗಡೆ ಬಂದರೆ “ಫ್ರೆಂಡ್ ಆರ್ ಫೋ?” (ಗೆಳೆಯನೋ ಅಥವಾ ವೈರಿಯೋ?) ಎಂದು ಒಬ್ಬಾತ ಜೋರಾಗಿ ಕೂಗುತ್ತಿದ್ದ. ಒಳಗೆ ಬರುವಾತ “ಫ್ರೆಂಡ್” ಎಂದು ಕೂಗುತ್ತಿದ್ದ. ಆಗ ಆತನನ್ನು ಒಳಗೆ ಬರುವ ಅವಕಾಶ ಕಲ್ಪಿಸಲಾಗುತ್ತಿತ್ತು. ಹೀಗೆ ರಿಹರ್ಸಲ್ ನಡೆಯುತ್ತಿತ್ತು. (ಇಂಥ ಒಂದು ಘಟನೆ ನೆನಪಾಗುತ್ತಿದೆ. ವಿಜಾಪುರದ ಖ್ವಾಜಾ ಅಮೀನ ದರ್ಗಾದಿಂದಾಗಿ ನನ್ನ ತಂದೆಯ ಜನ್ಮಸ್ಥಳದ ಗ್ರಾಮಕ್ಕೆ ದರ್ಗಾ ಎಂದೇ ಹೆಸರು ಬಂದಿದೆ. ಅದರ ಬಳಿಯ ಐತಿಹಾಸಿಕ ಜೈಲೇ ಇಂದಿಗೂ ಜಿಲ್ಲಾ ಕೇಂದ್ರ ಕಾರಾಗೃಹವಾಗಿದೆ. ಇದು ವಿಜಾಪುರ ನಗರದಿಂದ ಎರಡು ಕಿಲೊ ಮೀಟರ್ ದೂರದಲ್ಲಿದೆ. ಈ ಜೈಲಿನ ಒಳಗಡೆಯಿಂದ ದರ್ಗಾ ಗ್ರಾಮಕ್ಕೆ ಹೋದರೆ ಅರ್ಧ ಕಿಲೋ ಮೀಟರ್ ಹೆಚ್ಚಿಗೆ ನಡೆಯುವ ಶ್ರಮ ತಪ್ಪುವುದು. ಇಲ್ಲದಿದ್ದರೆ ಜೈಲಿನ ಕಂಪೌಂಡ್ ಸುತ್ತಿಕೊಂಡು ಹಳ್ಳಿಗೆ ಹೋಗಬೇಕಾಗುವುದು. ಆ ಕಾಲದಲ್ಲಿ ಯಾವುದೇ ಸಿಟಿ ಬಸ್‌ಗಳಿರಲಿಲ್ಲ. ಆದರೆ ದರ್ಗಾ ಗ್ರಾಮದ ಸುತ್ತಮುತ್ತ ವಿವಿಧ ಹಣ್ಣಿನ ತೋಟಗಳಿದ್ದವು. ದರ್ಗಾದ ಜಹಗೀರದಾರರಿಗೆ ಸಂಬಂಧಿಸಿದ್ದ ಬೃಹತ್ ಹಣ್ಣಿನ ತೋಟದಲಿ ಕೂಡ ವಿವಿಧ ಪ್ರಕಾರದ ಹಣ್ಣಿನ ಮರಗಳಿದ್ದವು. ಕುರುಚಲು ಅರಣ್ಯದಂಥ ಹಾಳು ಭೂಮಿಯಲ್ಲಿ ಸೀತಾಫಲದ ಗಿಡಗಳು ಸಾಕಷ್ಟಿದ್ದವು. ಪೇರು, ಮಾವು, ಬಾರಿಕಾಯಿ, ಬಳುವಲಕಾಯಿ ಹೀಗೆ ಅನೇಕ ತರದ ಹಣ್ಣುಹಂಪಲಗಳನ್ನು ಅಲ್ಲಿನ ಬಡವರು ಮಾಲೀಕರಿಂದ ಕೊಂಡು ಬುಟ್ಟಿಯಲ್ಲಿ ತುಂಬಿಕೊಂಡು ವಿಜಾಪುರ ನಗರಕ್ಕೆ ನಡೆಯುತ್ತ ಮಾರಲು ಬರುತ್ತಿದ್ದರು. ಸಂಜೆ ಮಾರಿಬಂದ ಹಣದಿಂದ ಮನೆಗೆ ಬೇಕಾದ ವಸ್ತುಗಳನ್ನು ಕೊಂಡು ಅದೇ ಖಾಲಿ ಬುಟ್ಟಿಯಲ್ಲಿ ಹಾಕಿಕೊಂಡು ಊರಿಗೆ ವಾಪಸ್ ಆಗುವಾಗ ಅರ್ಧ ಕಿಲೊಮೀಟರ್ ಹೆಚ್ಚಿನ ದಾರಿ ಕ್ರಮಿಸುವುದನ್ನು ತಪ್ಪಿಸಲು ಜೈಲಿನ ಗೇಟಿನ ಬಳಿ ಬಂದಾಗ ಸೆಂಟ್ರಿ ‘ಫ್ರೆಂಡ್ ಆರ್ ಫೊ’ ಎಂದು ಕೂಗುವ ಬದಲು “ಪೆಂಡರ್ ಪೊ” ಎಂದು ಕೂಗುತ್ತಿದ್ದ. ಈ ಬಡಪಾಯಿಗಳು “ಪೆಂಡ್” ಎಂದು ಕೂಗುತ್ತಿದ್ದರು. ಅವರೆಲ್ಲ ಗುರುತಿನವರೇ ಆಗಿದ್ದರು. ಆದರೂ ನಿಯಮ ಪಾಲನೆಗಾಗಿ ಇದೆಲ್ಲ ನಡೆಯುತ್ತಿತ್ತು. ಹೀಗೆ ಅವರದೇ ಆದ ಇಂಗ್ಲಿಷ್ ಭಾಷೆ, ಇಂಗ್ಲಿಷ್ ಮಾತೃಭಾಷೆಯವರಿಗೂ ಗೊತ್ತಾಗಲು ಸಾಧ್ಯವಿಲ್ಲ ಎಂದು ಭಾವಿಸಿ ನಗುತ್ತಿದ್ದೆ.

(ಉಗ್ರನರಸಿಂಹ)

ಈಗ ದರ್ಗಾ ಗ್ರಾಮ ಹಣ್ಣು ಹಂಪಲಗಳ ಗ್ರಾಮವಾಗಿ ಉಳಿದಿಲ್ಲ. ಬರಗಾಲದಲ್ಲಿ ದೊಡ್ಡ ದೊಡ್ಡ ಹಣ್ಣಿನ ಗಿಡಗಳನ್ನು ಕಡಿದು ಮಾರಾಟ ಮಾಡುತ್ತ ಬರುವ ರೂಢಿ ಬೆಳೆದದ್ದರಿಂದ ಬಡವರನ್ನು ಬದುಕಿಸುವ ಈ ವ್ಯವಸ್ಥೆ ಹಾಳಾಯಿತು. ನನ್ನ ಉದ್ದನೆಯ ಅಜ್ಜ ಮತ್ತು ಗಿಡ್ಡನೆಯ ಅಜ್ಜಿ ಬುಟ್ಟಿಯಲ್ಲಿ ಹೀಗೆ ಹಣ್ಣುಗಳನ್ನು ಇಟ್ಟುಕೊಂಡ ದರ್ಗಾ ಗ್ರಾಮದಿಂದ ಮಾರಾಟಕ್ಕೆ ಬರುವುದನ್ನು ನೋಡಿದ್ದೇನೆ. ಅವರು ಬಜಾರದಲ್ಲಿ ಆಕಸ್ಮಿಕ ಸಿಕ್ಕಾಗ ಒಂದು ಹಣ್ಣು ಕೊಡುತ್ತಿದ್ದರು. ದರ್ಗಾದ ಉರುಸ್ ಮತ್ತು ಮೊಹರಂನಲ್ಲಿ ಅಲ್ಲಿನ ಪ್ರಸಿದ್ಧವಾದ ಕಾಷ್ಠಶಿಲ್ಪದ ಹುಲಿ ಸವಾರಿ ನೋಡಲು ನಾವು ಮಕ್ಕಳು ತಂದೆ ಜೊತೆ ವರ್ಷಕ್ಕೆ ಎರಡು ಬಾರಿ ಮಾತ್ರ ದರ್ಗಾಕ್ಕೆ ಹೋಗುತ್ತಿದ್ದೆವು. ನಮ್ಮ ಅಜ್ಜ ಅಜ್ಜಿ ನಮ್ಮ ಮನೆಗೆ ಬರುತ್ತಿರಲಿಲ್ಲ. ದುಡಿಯುವುದೇ ಅವರ ಧರ್ಮವಾಗಿತ್ತು.)

ಹೊಸಪೇಟೆಯಲ್ಲಿ ನಮ್ಮ ಕ್ಯಾಂಪ್ ಇದ್ದ ವೇಳೆ ಶಮ್ಮೀ ಕಪೂರ ನಟಿಸಿದ ಜಂಗಲಿ ಸಿನಿಮಾ ಥಿಯೇಟರೊಂದರಲ್ಲಿ ಓಡುತ್ತಿತ್ತು. ನಮ್ಮ ಕ್ಯಾಂಪಿನ ಇಬ್ಬರು ಹಳ್ಳಿಯ ಹುಡುಗರು ಬಹಳ ಉಡಾಳ ಇದ್ದರು. ಅವರಿಬ್ಬರು ಸೋದರ ಸಂಬಂಧಿಗಳಾಗಿದ್ದು ಅವರ ವಿಜಾಪುರದ ಸಂಬಂಧಿಕರ ಮನೆಯಲ್ಲಿ ಇದ್ದು ಓದುತ್ತಿದ್ದರು. ಒಂದು ದಿನ ರಾತ್ರಿ ಎಲ್ಲರ ಕಣ್ಣು ತಪ್ಪಿಸಿ ಜಂಗಲಿ ಸಿನಿಮಾ ನೋಡಲು ಹೋದರು. ಆ ರಾತ್ರಿ ಕುರ್ಲೆ ಸರ್ ಅನಿರೀಕ್ಷಿತ ಭೇಟಿ ನೀಡಿದಾಗ ಇವರಿಬ್ಬರ ಹಾಸಿಗೆ ಖಾಲಿ ಇದ್ದದ್ದನ್ನು ನೋಡಿ ಗಾಬರಿಯಾಗಿ ಅವರಿವರನ್ನು ಎಬ್ಬಿಸಿ ಕೇಳತೊಡಗಿದರು. ಒಬ್ಬ ಹುಡುಗನಿಗೆ ಅವರ ವಿಷಯ ಗೊತ್ತಿತ್ತು. ಕಣ್ಣು ಒರೆಸಿಕೊಳ್ಳುತ್ತ ನಿದ್ದೆಯಿಂದ ಎದ್ದ ಆತ, ಅಳಕುತ್ತ ‘ಅವರು ಸಿನಿಮಾ ನೋಡಲು ಹೋಗಿದ್ದಾರೆ’ ಎಂದು ಹೇಳಿದ. ಆತನ ಮಾತು ಕಿವಿಗೆ ಬಿದ್ದೊಡನೆ ಕುರ್ಲೆ ಸರ್ ಕೆಂಡಾಮಂಡಲವಾದರು. ಇಟ್ಟಿಗೆ ಬಣ್ಣದ ಎನ್.ಸಿ.ಸಿ. ಆಫಿಸರ್ ಸ್ಟಿಕ್ಕನ್ನು ತೆಗೆದುಕೊಂಡು ಬಂದು ಕುರ್ಚಿ ಹಾಕಿಕೊಂಡು ನಮ್ಮ ಕೋಣೆಯ ಬಾಗಿಲ ಮುಂದೆ ಕುಳಿತರು. ಅವರು ಬಂದ ಮೇಲೆ ಏನಾಗುವುದೋ ಎಂಬ ಭಯದಿಂದ ನನಗಂತೂ ನಿದ್ದೆ ಹತ್ತಲಿಲ್ಲ. ಆ ನೀರವ ರಾತ್ರಿ ಆ ಹುಡಗರಿಬ್ಬರೂ ‘ಲಾಲಛಡಿ ಮೈದಾನ ಖಡಿ ಕ್ಯಾ ಖೂಬ ಲಡಿ’ ಎಂದು ಜಂಗಲಿ ಸಿನಿಮಾದ ಹಾಡನ್ನು ಹಾಡುತ್ತ ಬರುವುದು ಕೇಳಿಸಿತು. ‘ಬರ್ರಿ ಮಕ್ಳಾ ಲಾಲ ಚಡಿ ಕಾಯಾಕ ಹತ್ಯದ’ ಎಂದು ಗೊಣಗಿದರು. ಅವರು ಬಂದದ್ದೇ ತಡ ಸರ್ ನೋಡಿ ಗಾಬರಿಗೊಂಡರು. ಅವರಿಬ್ಬರನ್ನು ಒಳಗೆ ತಂದು ಕೈಯಲ್ಲಿನ ಸ್ಟಿಕ್ ಮುರಿಯುವವರೆಗೆ ದನ ಬಡಿದ ಹಾಗೆ ಬಡಿದರು. ಆ ಬಡಿತ ನೋಡಿ ನಾನಂತೂ ಬೆವೆತು ಹೋಗಿದ್ದೆ.

ಹೊಸಪೇಟೆ ಕ್ಯಾಂಪಿಗೆ ಬರುವಾಗ ನನ್ನ ತಾಯಿ ಎರಡು ಎಂಟಾಣೆ ನಾಣ್ಯ ಮತ್ತು ಒಂದು ನಾಲ್ಕಾಣೆ ನಾಣ್ಯ ಕೊಟ್ಟಿದ್ದಳು. ಬಹಳ ಕಷ್ಟಪಟ್ಟು ಕೂಡಿಸಿಟ್ಟ ನಾಣ್ಯಗಳಾಗಿದ್ದರಿಂದ ಅವುಗಳನ್ನು ಖರ್ಚು ಮಾಡುವ ಮನಸ್ಸಾಗಲಿಲ್ಲ. ‘ಟ್ರಂಕಿಗೆ ಕೀಲಿ ಇಲ್ಲದ ಕಾರಣ ಅದರಲ್ಲಿ ಇಟ್ಟರೆ ಯಾರಾದರೂ ತೆಗೆದುಕೊಂಡರೆ’ ಎಂಬ ಭಯದ ಕಾರಣ ಆ ನಾಣ್ಯಗಳನ್ನು ಎರಡು ಕಡೆಯ ಸಾಕ್ಸಲ್ಲಿ ಇಟ್ಟು ಕಾಪಾಡುತ್ತಿದ್ದೆ. ಕ್ಯಾಂಪ್ ಮುಗಿಸಿ ವಾಪಸ್ ಮನೆಗೆ ಹೋದಾಗ ಆ ನಾಣ್ಯಗಳನ್ನು ತಾಯಿಗೆ ವಾಪಸ್ ಕೊಟ್ಟೆ. ನನ್ನ ತಾಯಿ ಬಹಳ ಭಾವುಕಳಾದಳು; ನನ್ನ ಅಪ್ಪಿಕೊಂಡು ಅತ್ತಳು.

ಕಠಿಣ ಜೀವನ ಕ್ರಮದ ಈ ಕ್ಯಾಂಪಿನ ಅನುಭವ ನನ್ನಲ್ಲಿ ಹೊಸ ಹುರುಪನ್ನು ತಂದರೂ ಹೊಸಪೇಟೆಯಿಂದ ಆ ಉರಿಬಿಸಲಲ್ಲಿ ಹಂಪಿಯವರೆಗೆ ಮಿಲಿಟರಿ ಬ್ಯಾಗಲ್ಲಿ ನಮ್ಮ ಸಾಮಾನುಗಳನ್ನು ಬೆನ್ನಿಗೇರಿಸಿಕೊಂಡು ನಡೆಯುತ್ತ ಹೋಗುವುದು ಬಹಳ ಸುಸ್ತು ಮಾಡಿತು. ಮಧ್ಯೆ ಮಧ್ಯೆ ಕ್ರೌಲಿಂಗ್ ಮಾಡಿಸುತ್ತಿದ್ದರು. ಹೀಗಾಗಿ ಮೊಳಕೈಗಳಲ್ಲಿ ತರಚಿದ ಗಾಯಗಳಾದವು. ಆಗ ಅಯೋಡಿನ ಉರಿತ ತಾಳಿಕೊಳ್ಳುವುದು ಅನಿವಾರ್ಯವಾಗಿತ್ತು.

ಹಸಿರಿನ ಮಧ್ಯೆ ಕಲ್ಲುಗುಡ್ಡಗಳಿಂದ ಕೂಡಿದ ಶಿಲ್ಪಕಲೆಯ ಮಾಹಾ ತಾಣವಾಗಿ ಹಂಪಿಯ ಪರಿಸರ ಕಣ್ಮನ ಸೆಳೆಯಿತು. ರಾತ್ರಿ ಹಂಪಿಯ ವಿರೂಪಾಕ್ಷೇಶ್ವರ ಮಂದಿರದ ಪೌಳಿಯೊಳಗಿನ ಶಿಲಾಮಂಟಪವೊಂದರಲ್ಲಿ ಮಲಗುವ ವ್ಯವಸ್ಥೆ ಮಾಡಲಾಗಿತ್ತು. ಅಷ್ಟೊಂದು ದಣಿವಾಗಿದ್ದರೂ ಆ ಉಡಾಳ ಹುಡುಗರು ಮಧ್ಯೆ ಮಧ್ಯೆ ಕಿಸಕ್ಕೆಂದು ನಗುತ್ತ ನಮಗೆ ನಿದ್ದೆ ಬರಲಾರದ ಹಾಗೆ ಮಾಡುತ್ತಿದ್ದರು. ಆದರೆ ಕುರ್ಲೆ ಸರ್‌ಗೆ ಕಿರಿಕಿರಿ ಮಾಡುವುದು ಅವರ ಉದ್ದೇಶವಾಗಿತ್ತು. ಆ ರಾತ್ರಿಯಲ್ಲಿ ಮತ್ತು ದೇವಸ್ಥಾನದ ಪೌಳಿಯಲ್ಲಿ ಕುರ್ಲೆ ಸರ್‌ಗೆ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಸಾಧ್ಯತೆ ಇರಲಿಲ್ಲ. ಸಾತ್ವಿಕರಾಗಿದ್ದ ಅವರು ಈ ಹುಡುಗರ ಬಗ್ಗೆ ಬೇಸರಪಟ್ಟುಕೊಂಡಿದ್ದರು.

ಬೆಳಿಗ್ಗೆ ಎದ್ದು ಪೌಳಿಯ ಸಮೀಪದಲ್ಲೇ ಇರುವ ತುಂಗಭದ್ರಾ ನದಿಗೆ ಸ್ನಾನಕ್ಕಾಗಿ ಕರೆದುಕೊಂಡು ಹೋದರು. ನೀರು ಬಹಳ ಇರಲಿಲ್ಲ. ನದಿ ಶಾಂತವಾಗಿತ್ತು. ನಾವು ಮುಳುಗಿ ಮುಳುಗಿ ವಿಜಯನಗರ ಕಾಲದ ನಾಣ್ಯಗಳನ್ನು ಹುಡುಕುವುದರಲ್ಲಿ ತಲ್ಲೀನರಾದೆವು. ನನಗೆ ನಾಲ್ಕೈದು ಚಿಕ್ಕ ಚಿಕ್ಕ ನಾಣ್ಯಗಳು ಸಿಕ್ಕವು. (ದೇವಸ್ಥಾನಕ್ಕೆ ಬರುವ ಭಕ್ತರು ನದಿಯಲ್ಲಿ ನಾಣ್ಯಗಳನ್ನು ಎಸೆಯುವ ಸಂಪ್ರದಾಯ ಈಗಲೂ ಮುಂದುವರಿದಿದೆ. 60 ವರ್ಷಗಳಷ್ಟು ಹಿಂದೆ ನದಿಗೆ ಇಳಿದಾಗ, 500 ವರ್ಷಗಳಷ್ಟು ಹಿಂದಿನ ನಾಣ್ಯಗಳು ಹಂಪಿ ಪರಿಸರದ ತುಂಗಭ್ರಾ ನದಿಯ ತಳದಲ್ಲಿ ಸಿಗುತ್ತಿದ್ದವು ಎಂಬುದು ಈಗ ನೆನಪಿಸಿಕೊಂಡಾಗ ನನಗೇ ಆಶ್ಚರ್ಯವೆನಿಸುತ್ತದೆ.) ಪೌಳಿಯಲ್ಲಿರುವ ಬಹುಶಃ ಕೋಣೆಯೊಂದರ ಬಾಗಿಲದ ಕಿಂಡಿಯಿಂದ ನೋಡುವಾಗ ಹಂಪಿಯ ರಾಜಗೋಪುರದ ನೆರಳು ಗೋಡೆಯ ಮೇಲೆ ತಲೆಕೆಳಗಾಗಿ ಬಿದ್ದಿದ್ದನ್ನು ನೋಡಿದ ನೆನಪಾಗುತ್ತಿದೆ.

ಚಕ್ರತೀರ್ಥದ ಬಳಿ ಮಂಗಗಳ ಕಾಟ ಜಾಸ್ತಿ ಇತ್ತು. ಮಂಗಗಳು ಕೈಯಲ್ಲಿಯ ವಸ್ತುಗಳನ್ನು ಕಸಿದುಕೊಳ್ಳಲು ತವಕಿಸುತ್ತಿದ್ದವು. ಒಬ್ಬ ಪ್ರವಾಸಿಯ ಕೈಯಲ್ಲಿ ಛತ್ರಿ ಇತ್ತು. ಆತ ಒಮ್ಮೆಲೆ ಛತ್ರಿಯನ್ನು ಬಿಚ್ಚಿದ. ಅದರಿಂದ ಹೆದರಿದ ಮಂಗಗಳು ಗಾಬರಿಯಿಂದ ಓಡಿಹೋದವು. ಅವುಗಳಲ್ಲಿ ಹೆಣ್ಣು ಮಂಗವೊಂದರ ಮರಿ ಕಳಚಿ ಬಿದ್ದಿತು. ಆಗ ಆ ಹೆಣ್ಣು ಮಂಗ ಯಾವುದಕ್ಕೂ ಅಂಜದೆ ಹಂಗು ಹರಿದು ಎಲ್ಲರನ್ನೂ ಅಂಜಿಸುತ್ತ ಬಂದು ತನ್ನ ಮರಿಯನ್ನು ತೆಗೆದುಕೊಂಡು ಹೋಯಿತು. ‘ಮದರ್ ಕರೇಜ್’ ಅಂತಾರಲ್ಲಾ, ಅಂದೇ ಅದರ ಸಾಕ್ಷಾತ್ಕಾರವಾಯಿತು.

ಹಂಪೆಯ ಪರಿಸರದಲ್ಲಿನ ಬಾಳೆಯ ತೋಟಗಳು, ತೆಂಗಿನ ಸಾಲುಗಳು, ರಾಜಗೋಪುರ, ಮಂದಿರದ ಪೌಳಿ, ಕಲ್ಲಿನ ರಥ, ಉಗ್ರನರಸಿಂಹ, ಉದ್ದಾನ ವೀರಭದ್ರ, ಬಡವಿ ಲಿಂಗ, ಸಾಸುವೆಕಾಳು ಗಣಪತಿ, ಮಹಾನವಮಿ ದಿಬ್ಬ, ಕಮಲಮಹಲ ಮುಂತಾದವುಗಳನ್ನು ಮೊದಲ ಬಾರಿಗೆ ನೋಡಿದಾಗ ಆದ ಆನಂದ ಅವರ್ಣನೀಯ. ದಣಿದ ಕಾಲುಗಳೊಂದಿಗೆ ಸುತ್ತುತ್ತಿದ್ದರೂ ನೋಡುವ ತೀವ್ರತೆ ಕಡಿಮೆಯಾಗಲಿಲ್ಲ. ಹೀಗೆ ಜ್ಯೂನಿಯರ್ ಎನ್.ಸಿ.ಸಿ. ನನ್ನ ನೆನಪಿನಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ.

(ಮುಂದುವರೆಯುವುದು…)
(ಚಿತ್ರಗಳು: ಖ್ಯಾತ ಛಾಯಾಚಿತ್ರ ಕಲಾವಿದ ಶಿವಶಂಕರ ಬಣಗಾರ)