ಬುದ್ಧ ಹೆಣ್ಣಾಗಿದ್ದರೆ

ಸನ್ಯಾಸಿಯಾಗುವಳೆಂದು
ಮುಚ್ಚಿಟ್ಟು ಬೆಳೆಸಿದರೂ
ಕಣ್ಣ ತಪ್ಪಿಸಿ ಬೃಂದಾವನ ಸರೋವರ
ಬೆಳ್ಳಕ್ಕಿ ಮರಿಕೋಗಿಲೆ ಗಿಳಿ ಕಾಜಾಣ ಕಂಡು
ಹಿಗ್ಗಿ ಕುಣಿದಾಡಿ ಸಂಭ್ರಮಕ್ಕೆ ಸವಾಲೆಸೆಯುತ್ತಿದ್ದಳು

ಜೊತೆಯಾದವನ ಎದೆಗೊರಗಿ
ರಾಗ ಸಮುದ್ರದ ಆಳ ಮುಟ್ಟಿ
ಸುತ್ತಿ ಸುಳಿದಾಡಿ ಗಂಧರ್ವರ ಮಧ್ಯೆ
ಎಳೆದೊಯ್ದು ರಸ್ತೆ ಪರ್ವತ ಕಣಿವೆಗೆ
ಲಜ್ಜೆ ಹುಟ್ಟಿಸಿ ಬರುತ್ತಿದ್ದಳು.

ರೋಗಿ, ಸಾವು, ವೃದ್ಧರನು ಕಂಡಾಗ
ಓಡೋಡಿ ಸಂತೈಸಿ
ಮೈಮೇಲಿನ ಆಭರಣವನೆ ಕೊಟ್ಟು
ಸೈನಿಕರಿಗೆ ನೆರವಾಗಲು ಆಜ್ಞೆ ಮಾಡುತ್ತಿದ್ದಳು.

ನೂರು ಯೋಚನೆ ಜಿಜ್ಞಾಸೆ ಸುಳಿದಾಡಿದರೂ
ಮಧ್ಯರಾತ್ರಿ ಎದ್ದು ಮನೆ ಬಿಡುತ್ತಿರಲಿಲ್ಲ
ಪಕ್ಕದಲ್ಲಿನ ಗಂಡನ ಮರೆತರು
ಹಸುಕಂದನ ಬಿಟ್ಟು ಎದೆಯ ಹಾಲನು
ನಂಜಾಗಿಸಿಕೊಂಡು
ಮನವ ಕಲ್ಲಾಗಿಸಿಕೊಂಡು ನಡೆದುಬಿಡುತ್ತಿರಲಿಲ್ಲ.

ಬುದ್ಧ ಹೆಣ್ಣಾಗಿದಿದ್ದರೆ…
ಸಿದ್ದಾರ್ಥ ಬುದ್ಧನಾಗಲು ಕಾಡುಮೇಡು ಅಲೆಯಬೇಕಾಗಿರಲಿಲ್ಲ..
ಸಂಸಾರದ ಕಾನನದಲ್ಲೇ ನೋವು ನಲಿವು
ಹುಟ್ಟು ಸಾವಿನ ಮಧ್ಯದಲ್ಲೇ ಬೇಯುತ್ತ
ಬಂಧ ಸಂಬಂಧದ ಪರಿಧಿಯೊಳಗೇ
ಬ್ರಹ್ಮಾಂಡದ ಜ್ಞಾನ ಗಳಿಸುತ್ತಿದ್ದ.

ಸಂಸಾರ ವೃಕ್ಷದ ನೆರಳಿನಲ್ಲಿ
ಪ್ರೀತಿ ಹಂಚಿ ಮೋಕ್ಷ ಪಡೆಯುತ್ತಿದ್ದ.