ಮಹಾದೇವಿ ಅಡಿಗೆ ಮನೆಯ ಬಾಗಿಲ ಮರೆಯಿಂದಲೇ ಇಣುಕಿ ನೋಡುತ್ತಿದ್ದಳು. ನಿನ್ನೆ ಕೌಶಿಕ ತನ್ನನ್ನು ನುಂಗುವಂತೆ ನೋಡುತ್ತಿದ್ದುದಕ್ಕೂ, ಈಗ ಮಂತ್ರಿ ಮನೆಗೆ ಬಂದಿರುವುದಕ್ಕೂ ಏನೋ ಸಂಬಂಧವಿರಬೇಕೆಂದು ಅವಳಿಗೆ ಸಂದೇಹ ಬಂತು.  ಹೇಗೆ ಮಾತು ಆರಂಭಿಸಬೇಕೆಂದು ತೋಚದೆ ಮಹಾಬಲಯ್ಯ ಚಡಪಡಿಸಿದ. ಆದರೆ ಬಂದಾಗಿದೆ, ಮಾತಾಡಲೇಬೇಕಾಗಿತ್ತು. ರಾಜಾಜ್ಞೆಯನ್ನು ಮಂತ್ರಿಯಾಗಿ ಪಾಲಿಸಲೇ ಬೇಕಾಗಿತ್ತು. –ಸು.ರುದ್ರಮೂರ್ತಿ ಶಾಸ್ತ್ರಿಗಳು  ಬರೆದ ‘ಅಕ್ಕಮಹಾದೇವಿ’ ಹೊಸ ಕಾದಂಬರಿಯ ಒಂದು ಅಧ್ಯಾಯ ಇಲ್ಲಿದೆ. 

ಗುರುಲಿಂಗದೇವರ ಸಲಹೆಯಂತೆ ನಿರ್ಮಲ ಮತ್ತು ಸುಮತಿ, ಮಗಳ ಮದುವೆಯ ವಿಷಯದಲ್ಲಿ ತಾತ್ಕಾಲಿವಾಗಿಯಾದರೂ ತಟಸ್ಥರಾದರು. ಮಹಾದೇವಿಯನ್ನು ನೋಡಲು ಬರಲಿದ್ದ ಗಂಡಿನ ಕಡೆಯವರಿಗೆ ನೆಪ ಹೇಳಬೇಕಾಯಿತು. ಮಹಾದೇವಿ ಮಾತ್ರ ತನ್ನ ಪಾಡಿಗೆ ತಾನು ನಿಯಮಿತವಾಗಿ ಮನೆಗೆಲಸ, ಭಕ್ತಿ ಸಾಧನೆ, ವಚನಗಳ ಅಧ್ಯಯನ, ಆಗೊಂದು ಈಗೊಂದು ತನ್ನದೇ ವಚನ ರಚನೆಯಲ್ಲಿ ತೊಡಗಿದಳು. ಆದರೆ ಸದಾ ಕಾಲವೂ ಚೆನ್ನಮಲ್ಲಿಕಾರ್ಜುನನ ಧ್ಯಾನ ಮಾತ್ರ ನಡೆದೇ ಇತ್ತು. ಬಸವಣ್ಣನವರ `ಶರಣಸತಿ-ಲಿಂಗಸತಿ’ ಭಾವದ ವಚನಗಳನ್ನು ಮತ್ತೊಮ್ಮೆ ಓದುತ್ತಿದ್ದಂತೆ ಮಹಾದೇವಿ ರೋಮಾಂಚಿತಳಾದಳು. ತಾನು ಮಾಡುತ್ತಿರುವ ಸಾಧನೆ ಅದೇ ಆಗಿತ್ತು. ಭಕ್ತನಾದ ಬಸವಣ್ಣ ಭಗವಂತನನ್ನು ಪತಿಯಾಗಿ ಪರಿಭಾವಿಸಿ ತಾನು ಪತ್ನಿಯೆಂಬ ಭಾವದಿಂದ ರಚಿಸಿದ ಆ ವಚನಗಳು ಮೊದಲಿಗಿಂತ ಹೆಚ್ಚಾಗಿ ಮಹಾ ದೇವಿಯ ಮೇಲೆ ಪ್ರಭಾವ ಬೀರಿದವು. ಹೆಣ್ಣಾದ ತಾನು ಚೆನ್ನಮಲ್ಲಿಕಾರ್ಜುನನನ್ನು ಪತಿಯಾಗಿ ಭಾವಿಸಿ ಸಾಧನೆ ಮಾಡುವುದು ಹೆಚ್ಚು ಸಹಜ ಎಂದುಕೊಂಡಳು.
ಮೊದಲೇ ಇದ್ದ ಈ ಭಾವನೆ ದಿನೇ ದಿನೇ ಪ್ರಬಲವಾಗಿ ಬೆಳೆದು, ತಾನು ಚೆನ್ನಮಲ್ಲಿಕಾರ್ಜುನನಿಗೆ ಸೇರಿದವಳು, ಅವನ ಪ್ರೇಮವನ್ನು ಗೆದ್ದು ತಾನು ಅವನಲ್ಲಿ ಒಂದಾಗಬೇಕು ಎಂಬ ಭಾವನೆ ಸ್ಥಿರವಾಯಿತು. ಪ್ರತಿಕ್ಷಣವೂ ಚೆನ್ನಮಲ್ಲಿಕಾರ್ಜುನನ ದಿವ್ಯ ಪ್ರೇಮಕ್ಕಾಗಿ ಕಾತರಿಸಿ ಕಳವಳಪಡುವುದೇ ಅವಳ ಕೆಲಸವಾಯಿತು. ಅವಳ ಅಂತರಂಗದ ವ್ಯಾಪಾರ ತಂದೆತಾಯಿಗೆ ಹೇಗೆ ಅರ್ಥವಾಗಬೇಕು. ಮಗಳು ಭಕ್ತಿಯ ಹುಚ್ಚಿನಲ್ಲಿದ್ದಾಳೆ ಎಂದುಕೊಂಡಿದ್ದರೇ ವಿನಹ, ಚೆನ್ನಮಲ್ಲಿಕಾರ್ಜುನನೇ ತನ್ನ ಪತಿಯೆಂದು ಭಾವಿಸಿರುವಳೆಂದು ಅವರಿಗೆ ಗೊತ್ತಿರಲಿಲ್ಲ. ಗೊತ್ತಾದರೂ ಅದನ್ನು ಅರ್ಥ ಮಾಡಿ ಕೊಳ್ಳುವುದು ಅವರಿಂದ ಸಾಧ್ಯವಿರಲಿಲ್ಲ. ಅದು ಅವರು ಕಂಡು ಕೇಳರಿಯದ ಸಂಗತಿ ಯಾಗಿತ್ತು, ಅಸಂಭವವೂ ಆಗಿತ್ತು.
ಒಂದು ದಿನ ಗೌರಿ ಮತ್ತು ಸರಸ್ವತಿಯೊಂದಿಗೆ ಮಹಾದೇವಿ ತನ್ನ ಕೋಣೆಯಲ್ಲಿ ಮಾತನಾಡುತ್ತಾ ಕುಳಿತಿದ್ದಳು. ಈಗಾಗಲೇ ನಿಶ್ಚಯವಾಗಿರುವ ಗೌರಿಯ ಮದುವೆ ಒಂದೆರಡು ತಿಂಗಳಲ್ಲಿ ನಡೆಯುವುದರಲ್ಲಿತ್ತು. ಮಹಾದೇವಿ, ಗೌರಿಯ ಮುಖವನ್ನೇ ದಿಟ್ಟಿಸಿ ನೋಡುತ್ತ ಹೇಳಿದಳು `ನಮ್ಮ ಗೌರಿ ನೆನ್ನೆ ಮೊನ್ನೆಯವರೆಗೆ ಆಡುವ ಹುಡುಗಿ ಯಾಗಿದ್ದವಳು, ಈಗ ದೊಡ್ಡ ಹೆಂಗಸಿನಂತೆ ಕಾಣುತ್ತಾಳೆ. ಅಲ್ಲವೆ ಸರಸ್ವತಿ?’’
`ಹೌದು ಮಹಾದೇವಿ’ ಸರಸ್ವತಿ ಹೇಳಿದಳು, `ನಾವು ಇನ್ನು ಮೇಲೆ `ಗೌರಿ’ ಎಂದು ಸಲಿಗೆಯಿಂದ ಕರೆಯುವಂತಿಲ್ಲ. `ಗೌರಮ್ಮ’ ಎಂದು ಗೌರವ ಕೊಟ್ಟು ಕರೆಯ ಬೇಕು.’
ತುಸು ನಾಚಿಕೆಯಿಂದ ಗೌರಿ ನಗುತ್ತಾ ಹೇಳಿದಳು, `ಏನಿಲ್ಲ, ಗೆಳತಿಯರು ಯಾವಾಗಲೂ ಗೆಳತಿಯರೇ. ಮುದುಕಿಯರಾದರೂ ಏಕವಚನದಲ್ಲೇ ಮಾತನಾಡಿಸ ಬೇಕು. ಗೊತ್ತಾಯಿತೇ ಸರಸ್ವತಮ್ಮನವರೇ.’
ಮೂವರೂ ನಕ್ಕರು. ಎರಡು ಕ್ಷಣ ಬಿಟ್ಟು `ಗಂಡನ ಮನೆಗೆ ಹೋದ ಮೇಲೆ ನಾವೆಲ್ಲ ನೆನಪಿಗೆ ಬರುತ್ತೇವೋ ಇಲ್ಲವೋ? ಏಕವಚನಕ್ಕೂ ಬಹುವಚನಕ್ಕೂ ಆಗ ಅವಕಾಶವೆಲ್ಲಿರುತ್ತದೆ?’’ ಎಂದು ಮಹಾದೇವಿ ನಕ್ಕಳು.

`ನೆನಪು ಮಾಡಿಕೊಳ್ಳಲು ಸಮಯ ಸಿಗಬೇಕಲ್ಲ? ಹೊಸ ಗಂಡನ ಪ್ರೀತಿಯ ಅಮಲಿನಲ್ಲಿ ನಾವು ಮಾತ್ರವಲ್ಲ, ಜಗತ್ತೇ ಮರೆತು ಹೋಗುತ್ತದೆ’’ ಎಂದು ಸರಸ್ವತಿ ಚೇಷ್ಟೆ ಮಾಡಿದಳು.
“ಹೊಸ ಗಂಡ ಅಂದರೆ? ಹಳೆ ಗಂಡ ಬೇರೆ ಇರುತ್ತಾನಾ?’’ ಎಂದಳು ಗೌರಿ.
ಸರಸ್ವತಿ ಮತ್ತು ಮಹಾದೇವಿ ಜೋರಾಗಿ ನಕ್ಕರು. “ಚಿಂತೆಯಿಲ್ಲ, ನಮ್ಮ ಗೌರಿಗೆ ಹಾಸ್ಯಪ್ರಜ್ಞೆ ಕೂಡ ಇದೆ’’ ಎಂದಳು ಮಹಾದೇವಿ.

`ನನ್ನನ್ನು ಪರಿಹಾಸ ಮಾಡುತ್ತಿರುವಿರಲ್ಲಾ, ನಿಮಗೆ ಮದುವೆ ಗೊತ್ತಾದರೆ ನೀವೇನು ಮಾಡುತ್ತೀರೋ ನಾನೂ ನೋಡುತ್ತೇನೆ’’ ಎಂದಳು ಗೌರಿ.
`ನಾನಂತೂ ಮದುವೆಯಾಗುವುದಿಲ್ಲ. ಈ ಮಾತನ್ನು ಸರಸ್ವತಿಗೆ ಹೇಳು’’ ಎಂದಳು ಮಹಾದೇವಿ.
`ಮಹಾದೇವಿ, ನೀನೂ ಮದುವೆ ಆಗೇ ಆಗುತ್ತೀಯ ಎಂದು ನನಗೆ ಗೊತ್ತು’’ ಎಂದಳು ಸರಸ್ವತಿ.
`ಸಾಯದೇ ಇರುವ, ಕೆಟ್ಟು ಹೋಗದೇ ಇರುವ ಗಂಡ ಬೇಕೂಂತ ಅವತ್ತೇ ಹೇಳಿದಳಲ್ಲ?’’ ಎಂದಳು ಗೌರಿ.
`ನಾನು ಮದುವೆಯಾಗುತ್ತೇನೆ. ಆದರೆ ಅದನ್ನು ನೋಡುವ ಭಾಗ್ಯ ನಿಮ ಗಿದೆಯೋ ಇಲ್ಲವೋ ಯಾರಿಗೆ ಗೊತ್ತು’’ ಎಂದು ಮಹಾದೇವಿ ಎತ್ತಲೋ ನೋಡುತ್ತ ಹೇಳಿದಳು.
ಒಗಟಿನಂಥ ಅವಳ ಮಾತಿಗೂ, ಅಂದು ಹೊಳೆಯ ಬಳಿ ಅವಳು ಹೇಳಿದ ಮಾತಿಗೂ ಸಂಬಂಧವಿದೆಯೆಂದು ಅವರು ಯೋಚಿಸುತ್ತಿರುವಾಗ ಹೊರಗೆ ಬೀದಿಯಲ್ಲಿ ಏನೋ ಗದ್ದಲ ಕೇಳಿಸಿತು.

`ಹೊರಗೆ ಏನೋ ಗದ್ದಲವಾಗುತ್ತಿದೆ. ವಾದ್ಯಗಳ ಸದ್ದು ಕೇಳಿಸುತ್ತಿದೆ. ದೇವರ ಮೆರವಣಿಗೆ ಇರಬೇಕು. ಆದರೆ ಅಂಥ ಯಾವ ಸಂದರ್ಭವೂ ಇದ್ದ ಹಾಗಿಲ್ಲವಲ್ಲಾ?’’ ಎಂದಳು ಸರಸ್ವತಿ.
ಗೌರಿ `ನಾನೇ ಹೋಗಿ ನೋಡಿ ಬರುತ್ತೇನೆ’’ ಎಂದು ಹೊರಗೆ ಹೋದವಳು ಬೇಗನೇ ಹಿಂದಿರುಗಿ ಬಂದು ಹೇಳಿದಳು, `ಮಹಾದೇವಿ, ಕೌಶಿಕ ರಾಜ ವೈಹಾಳಿ ಹೊರಟಿದ್ದಾನೆ. ರಾಜಪರಿವಾರದ ಮೆರವಣಿಗೆ ನಮ್ಮ ಬೀದಿಯಲ್ಲೇ ಬರುತ್ತಿದೆ. ಅದೇ ಈ ಗದ್ದಲಕ್ಕೆ ಕಾರಣ.’
`ಹೌದೇ? ಬಾರೇ ನಾವೂ ನೋಡೋಣ’’ ಎಂದು ಸರಸ್ವತಿ ಉತ್ಸಾಹ ತೋರಿಸಿದಳು.
`ಅದನ್ನೇನು ನೋಡುವುದು?’’ ಮಹಾದೇವಿ ಉದಾಸೀನವಾಗಿ ಹೇಳಿದಳು, `ರಾಜನ ಮೆರವಣಿಗೆ ಹೋದರೆ ನಾವೇಕೆ ಸಡಗರ ಪಡಬೇಕು? ಹೋದರೆ ಹೋಗುತ್ತಾನೆ.’’
`ನಾವೇನು ಸಡಗರ ಪಡುತ್ತಿಲ್ಲ. ಎಷ್ಟೇ ಆಗಲಿ ಕೌಶಿಕ ನಮ್ಮ ರಾಜನಲ್ಲವೆ? ಅವನ ಸಡಗರವನ್ನು ನಾವು ನೋಡಿದರೆ ತಪ್ಪೇನು?’’ ಎಂದಳು ಗೌರಿ.

`ತಪ್ಪೆಂದು ಹೇಳಲಿಲ್ಲ, ಆದರೆ ನನಗೆ ಅದನ್ನೆಲ್ಲ ನೋಡುವ ಆಸಕ್ತಿಯಿಲ್ಲ ಎಂದು ಹೇಳಿದೆ. ನೀವು ಬೇಕಾದರೆ ಹೋಗಿ ನೋಡಿ’’ ಎಂದು ಮಹಾದೇವಿ ಮುಖ ತಿರುಗಿಸಿ ಕೊಂಡಳು.
`ಒಮ್ಮೆ ನೋಡಿದರೆ ಯಾವ ಅನಾಹುತವೂ ಆಗುವುದಿಲ್ಲ. ಸುಮ್ಮನೆ ಬಾರೆ, ಹೀಗೆ ಹೋಗಿ ಹಾಗೆ ಬಂದುಬಿಡೋಣ’ ಎಂದು ಗೆಳತಿಯರು ಅವಳ ತೋಳು ಹಿಡಿದು ಎಳೆದುಕೊಂಡೇ ಹೋದರು.

ಮಹಾದೇವಿ ಮತ್ತು ಗೆಳತಿಯರು ಬೀದಿಯ ಬಾಗಿಲಿಗೆ ಬಂದಾಗ ಎದುರಿನ, ಅಕ್ಕಪಕ್ಕದ ಮನೆಗಳ ಮುಂದೆಲ್ಲ ಸ್ತ್ರೀಪುರುಷರು, ಮಕ್ಕಳು ಕುತೂಹಲದಿಂದ ಕಿಕ್ಕಿರಿದು ಸೇರಿದ್ದರು. ತುಸು ದೂರದಲ್ಲಿ ರಾಜಪರಿವಾರದ ಮೆರವಣಿಗೆ ನಿಧಾನವಾಗಿ ಬರುತ್ತಿತ್ತು. ಒಂದು ಬಲವಾದ ಬಿಳಿಯ ಕುದುರೆಯ ಮೇಲೆ ಸುಮಾರು ಮುವ್ವತ್ತು ವರ್ಷದ ರಾಜ ಕೌಶಿಕ ಗಂಭೀರನಾಗಿ ಕುಳಿತು ಅಕ್ಕಪಕ್ಕದ ಜನರತ್ತ ನೋಡುತ್ತ ಕೃಪಾಕಟಾಕ್ಷ ಬೀರುತ್ತಿದ್ದ. ರಾಜ ಲಾಂಛನ ಹಿಡಿದವರು, ಧ್ವಜ ಹಿಡಿದವರು, ಬಿಳಿಯ ಛತ್ರಿ ಹಿಡಿದವರು, ಮಂತ್ರಿ, ಅಧಿಕಾರಿಗಳು ಉಚಿತ ವರ್ಣರಂಜಿತ ವಸ್ತ್ರ ಭೂಷಣಗಳನ್ನು ಧರಿಸಿ ನಿಧಾನವಾಗಿ ಬರುತ್ತಿದ್ದರು. ಮೆರವಣಿಗೆಯ ಮುಂದೆ, ಹಿಂದೆ, ಅಕ್ಕಪಕ್ಕದಲ್ಲಿ ಆಯುಧಪಾಣಿಗಳಾದ ಸೈನಿಕರು ನಡೆದು ಬರುತ್ತಿದ್ದರು. ಎಲ್ಲರಿಗಿಂತ ಮುಂದೆ ಮಂಗಳ ವಾದ್ಯಕಾರರು ತಮ್ಮ ವಾದ್ಯಗಳನ್ನು ನುಡಿಸುತ್ತಿದ್ದರು. ಕೆಲವರು ಆಗಾಗ ರಾಜನ ಮೇಲೆ ಹೂವನ್ನು ಎರಚುತ್ತಿದ್ದರು. ಕೆಲವು ಜನ `ಕೌಶಿಕ ಮಹಾರಾಜರಿಗೆ ಜಯವಾಗಲಿ’ ಎಂದು ಉದ್ಗರಿಸುತ್ತಿದ್ದರು. ಕೆಲವು ಮುತ್ತೈದೆಯರು ರಾಜನಿಗೆ ಆರತಿ ಬೆಳಗಿದರು.

ಮಹಾದೇವಿ ಮತ್ತು ಗೆಳತಿಯರು ಬೀದಿಯ ಬಾಗಿಲಿಗೆ ಬಂದಾಗ ಎದುರಿನ, ಅಕ್ಕಪಕ್ಕದ ಮನೆಗಳ ಮುಂದೆಲ್ಲ ಸ್ತ್ರೀಪುರುಷರು, ಮಕ್ಕಳು ಕುತೂಹಲದಿಂದ ಕಿಕ್ಕಿರಿದು ಸೇರಿದ್ದರು. ತುಸು ದೂರದಲ್ಲಿ ರಾಜಪರಿವಾರದ ಮೆರವಣಿಗೆ ನಿಧಾನವಾಗಿ ಬರುತ್ತಿತ್ತು. ಒಂದು ಬಲವಾದ ಬಿಳಿಯ ಕುದುರೆಯ ಮೇಲೆ ಸುಮಾರು ಮುವ್ವತ್ತು ವರ್ಷದ ರಾಜ ಕೌಶಿಕ ಗಂಭೀರನಾಗಿ ಕುಳಿತು ಅಕ್ಕಪಕ್ಕದ ಜನರತ್ತ ನೋಡುತ್ತ ಕೃಪಾಕಟಾಕ್ಷ ಬೀರುತ್ತಿದ್ದ.

ಬಹಳ ನಿಧಾನವಾಗಿ ಸಾಗಿ ಬಂದ ಮೆರವಣಿಗೆ ಮಹಾದೇವಿಯ ಮನೆಯ ಮುಂದೆ ಒಂದು ಕ್ಷಣ ನಿಂತಿತು. ಅಕ್ಕಪಕ್ಕದ ಮನೆಯವರು ಆರತಿ ಬೆಳಗಿದರು. ನಿರ್ಮಲ ಮತ್ತು ಸುಮತಿ ಒಂದು ಕ್ಷಣ ಇಣುಕಿ ನೋಡಿ ಒಳಗೆ ಹೋಗಿಬಿಟ್ಟರು. ಮಹಾದೇವಿಯೂ ಒಳಗೆ ಹೋಗಲು ಹೋದಾಗ `ಒಂದು ಕ್ಷಣ ಇರೆ’ ಎಂದು ಗೆಳತಿಯರು ಕೈಹಿಡಿದು ನಿಲ್ಲಿಸಿಕೊಂಡರು.

ಎಲ್ಲ ಕಡೆ ಕಣ್ಣಾಡಿಸುತ್ತಿದ್ದ ಕೌಶಿಕನ ದೃಷ್ಟಿ, ಗೆಳತಿಯರೊಂದಿಗೆ ಮನೆಯ ಬಾಗಿಲಿನಲ್ಲಿ ನಿಂತಿದ್ದ ಮಹಾದೇವಿಯ ಮೇಲೆ ಬಿತ್ತು. ಕಣ್ಣು ಕೋರೈಸಿದಂತಾಯಿತು! ಅವನ ನೋಟ ಮಹಾದೇವಿಯ ಮೇಲೇ ನೆಟ್ಟಿತು! ಕ್ಷಣ ಮಾತ್ರದಲ್ಲಿ ಮಹಾದೇವಿಯ ಚೆಲುವು ಅವನ ಮೇಲೆ ಮಿಂಚಿನಂತೆ ದಾಳಿ ನಡೆಸಿತು. ಅವನು `ತಾನು ರಾಜ, ಬೀದಿಯಲ್ಲಿ ಮೆರವಣಿಗೆ ಹೊರಟಿದ್ದೇನೆ, ಜನರೆಲ್ಲ ನೋಡುತ್ತಿದ್ದಾರೆ. ಹೀಗೆ ಒಂದು ಹೆಣ್ಣನ್ನು ದಿಟ್ಟಿಸಿ ನೋಡುವುದು ಅಸಭ್ಯತೆ’ ಎಂಬ ಪರಿವೆಯೇ ಇಲ್ಲದೆ ಅವನು ಮಹಾದೇವಿಯನ್ನೇ ನೋಡತೊಡಗಿದ. ಅದರ ಅರಿವಾಗಿ ಮಹಾದೇವಿ ಕಸಿವಿಸಿಗೊಂಡಳು. ಗೆಳತಿಯರಿಗೂ ಅದು ಸರಿಬರಲಿಲ್ಲ.

`ಎಂಥ ಅಪೂರ್ವ ಲಾವಣ್ಯವತಿ!’ ಕೌಶಿಕ ತನ್ನಲ್ಲೇ ಅಂದುಕೊಂಡ. `ಇಂಥ ಚೆಲುವೆಯನ್ನು ನಾನು ಕಂಡವನೇ ಅಲ್ಲ. ಬೆಳದಿಂಗಳನ್ನು ಎರಕ ಹೊಯ್ದು ಮಾಡಿದಂಥ ಇಂಥ ಸುಂದರ ಪುತ್ಥಳಿ ನನ್ನ ರಾಜ್ಯದಲ್ಲೇ ಇದೆಯೆಂದು ಅಚ್ಚರಿಯಾಗುತ್ತಿದೆ! ಇವಳೇನು ಈ ಮಣ್ಣಿನವಳೇ, ಅಥವಾ ಸ್ವರ್ಗದಿಂದ ಇಳಿದು ಬಂದವಳೇ! ಅಥವಾ ದೇವಲೋಕದ ಅಪ್ಸರೆ ವಿಹಾರಕ್ಕಾಗಿ ಭೂಮಿಗೆ ಬಂದಿರುವಳೇ! ಕಂಡಕೂಡಲೇ ಮೋಹವುಕ್ಕಿಸುವ ಇಂಥ ಸುಂದರಿಯನ್ನು ಕಂಡು ಕಣ್ಣುಗಳು ಧನ್ಯವಾದವು! ಜನ್ಮ ಸಾರ್ಥಕವಾಯಿತೆಂಬ ಭಾವನೆ ಬರುತ್ತಿದೆ.’

`ನೋಡೆ, ರಾಜ ನಿನ್ನನ್ನೇ ನೋಡುತ್ತಿದ್ದಾನೆ’ ಎಂದು ಸರಸ್ವತಿ ಮಹಾದೇವಿಯನ್ನು ಮೆಲ್ಲಗೆ ತಿವಿದಳು.

`ಹೌದು ಮಹಾದೇವಿ’’ ಗೌರಿ ಹೇಳಿದಳು, `ಎಂದೂ ಹೆಣ್ಣನ್ನೇ ನೋಡಿಲ್ಲದವನಂತೆ ನಿನ್ನನ್ನೇ ತಿನ್ನುವಂತೆ ನೋಡುತ್ತಿದ್ದಾನೆ.’’

`ಛೀ!’ ಮಹಾದೇವಿಯ ಮುಖದಲ್ಲಿ ಅಸಹ್ಯ ಕಾಣಿಸಿಕೊಂಡಿತು. `ಲಜ್ಜೆಯಿಲ್ಲದ ಅನಾಗರಿಕ. ಸ್ವಲ್ಪವೂ ಗಾಂಭೀರ್ಯವಿಲ್ಲದ ಇವನೆಂಥ ರಾಜ! ಅದಕ್ಕೇ ನಾನು ಬರುವುದಿಲ್ಲ ವೆಂದು ಹೇಳಿದ್ದು.’

`ಇನ್ನೂ ಮದುವೆಯಿಲ್ಲವಲ್ಲ, ಅದಕ್ಕೇ ಈ ಚಾಪಲ್ಯ’’ ಎಂದು ಸರಸ್ವತಿ ಪಿಸುಗುಟ್ಟಿದಳು.
`ಮದುವೆಯಿಲ್ಲದವರೆಲ್ಲ ಹೀಗೇ ಮಾಡುತ್ತಾರೇನು? ಅವನ ಚಾಪಲ್ಯ ಅವನಿಗೇ ಇರಲಿ, ನಾನು ಹೊರಟೆ’’ ಎಂದು ಮಹಾದೇವಿ ಸರ್ರನೆ ತಿರುಗಿ ಮನೆಯೊಳಗೆ ಹೊರಟುಬಿಟ್ಟಳು. ಗೆಳತಿಯರು ಹಿಂಬಾಲಿಸಿದರು.

ಮಹಾದೇವಿಯ ಮನೆಯ ಬಾಗಿಲತ್ತಲೇ ಕಣ್ಣು ಕೀಲಿಸಿದ್ದ ಕೌಶಿಕನನ್ನು ಮಂತ್ರಿ ಮಹಾಬಾಲಯ್ಯ ಎಚ್ಚರಿಸದಿದ್ದರೆ, ಅವನು ದಿನವೆಲ್ಲಾ ಅಲ್ಲೇ ನಿಲ್ಲುತ್ತಿದ್ದನೇನೋ! ಅಂತೂ ವೈಹಾಳಿಯ ಮೆರವಣಿಗೆ ಮುಂದೆ ಸಾಗಿತು. ಕೌಶಿಕ ಮತ್ತೆ ಮತ್ತೆ ಮಹಾದೇವಿಯ ಕಡೆ ಹಿಂದಿರುಗಿ ನೋಡುತ್ತಲೇ ಹೋದ. ಬಹಳ ಜನ ಗಮನಿಸದಿದ್ದರೂ ಗಮನಿಸಿದವರಿಗೆ ಕೌಶಿಕ ಮಹಾದೇವಿಯನ್ನು ಹಾಗೆ ನೋಡಿದ್ದು ಸಭ್ಯತೆಯಲ್ಲ ಎಂಬ ಭಾವನೆ ಬಂತು.
ಅಸಮಾಧಾನದಿಂದಲೇ ತನ್ನ ಕೋಣೆಗೆ ಬಂದ ಮಹಾದೇವಿ ದೊಪ್ಪನೆ ಕುಳಿತಳು. ಗೆಳತಿಯರೂ ಬಂದು ಅವಳ ಎದುರಿಗೆ ಕುಳಿತರು. “ಇಂಥ ಲಜ್ಜೆಗೆಟ್ಟ ವ್ಯಕ್ತಿ ನಮ್ಮ ರಾಜನೆಂದರೆ ನಾವೆಲ್ಲ ನಾಚಿಕೆ ಪಡಬೇಕು. ಲಂಪಟನಂತೆ ಎಲ್ಲರೆದುರಿಗೆ ಹಾಗೆ ನೋಡುವುದು ಸಭ್ಯತೆಯೇ?’’ ಎಂದಳು ಮಹಾದೇವಿ ಅದೇ ಅಸಮಾಧಾನದಿಂದ.

`ಮಹಾದೇವಿ, ಇಷ್ಟೊಂದು ಅಸಮಾಧಾನವೇಕೆ? ಈಗ ಅಂಥದ್ದೇನಾಯಿತು?’ ಎಂದಳು ಸರಸ್ವತಿ.
`ಏನಾಯಿತೆಂದು ಕೇಳುತ್ತೀಯ? ಅವನು ಹೇಗೆ ನೋಡುತ್ತಿದ್ದನೆಂದು ನಿನಗೆ ಕಾಣಲಿಲ್ಲವೆ?’ ಮಹಾದೇವಿ ಸಿಡುಕಿದಳು.
`ನೋಡಿದರೆ ನೋಡಿಕೊಳ್ಳುತ್ತಾನೆ. ಸುಂದರವಾದ ಹೂವನ್ನು ಮೆಚ್ಚಿಗೆಯಿಂದ ನೋಡಿದರೆ, ಅದರಲ್ಲಿ ತಪ್ಪು ಹುಡುಕುವುದೇಕೆ?’’ ಎಂದಳು ಗೌರಿ.
`ಅಷ್ಟು ಜನರ ಎದುರಿಗೆ ನಿನ್ನನ್ನೇ ನೋಡುವಂತೆ ಮಾಡಿದ ನಿನ್ನ ಸೌಂದರ್ಯದ್ದೇ ತಪ್ಪು’ ಎಂದು ಸರಸ್ವತಿ ನಕ್ಕಳು.

`ಯಾವ ಸೌಂದರ್ಯ!’’ ಮಹಾದೇವಿ ಗಂಭೀರವಾಗಿ ಹೇಳಿದಳು, `ಇದೆಲ್ಲ ಶವದ ಸಿಂಗಾರವಲ್ಲವೆ ಸರಸ್ವತಿ? ಒಂದಲ್ಲ ಒಂದು ದಿನ ಜೀವ ಕಳೆದುಕೊಂಡು ಹೆಣವಾಗುವ ಈ ದೇಹದ ಸೌಂದರ್ಯ ಶಾಶ್ವತವೆ? ಅಥವಾ ಹೆಚ್ಚು ಕಾಲ ಬದುಕಿದ್ದರೆ ಮುದಿಯಾಗಿ, ದೇಹ ನಿತ್ರಾಣವಾಗಿ, ಕಣ್ಣು ಮಂಜಾಗಿ, ಹಲ್ಲು ಉದುರಿ ಹೋಗಿ ವಿಕಾರವಾಗುವ ಈ ದೇಹದ ನಶ್ವರ ಚೆಲುವಿನ ಭ್ರಮೆಯಲ್ಲಿ ಮುಳುಗುವುದು ಎಷ್ಟು ಹಾಸ್ಯಾಸ್ಪದ!’’
ಮಹಾದೇವಿಯ ಮಾತುಗಳಿಂದ ವಿಚಲಿತರಾದ ಗೆಳತಿಯರು ಮುಖ ಮುಖ ನೋಡಿಕೊಂಡರು. ಇತ್ತೀಚೆಗೆ ಬದಲಾದ ಅವಳ ವರ್ತನೆಯ ಮುಂದುವರಿದ ಭಾಗವಾಗಿ ಇದು ಕಂಡಿತು. ಮದುವೆ ಗೊತ್ತಾದ ಮೇಲೆ ಗೌರಿಯನ್ನು ಹಾಸ್ಯ ಮಾಡುತ್ತಿದ್ದಳು. ಆದರೆ ತನ್ನದೇ ಮದುವೆಯ ವಿಷಯ ಬಂದಾಗ ಅವಳು ಗಂಭೀರವಾಗುತ್ತಿದ್ದಳು, ನಿರಾಸಕ್ತಿಯನ್ನು ತೋರಿಸುತ್ತಿದ್ದಳು. ಅಸಹಜ ರೀತಿಯಲ್ಲಿ ಮಾತನಾಡುತ್ತಿದ್ದಳು. `ಒಂದು ಸಾಮಾನ್ಯ ಮಾತಿಗೆ ದೊಡ್ಡ ಪ್ರವಚನವನ್ನೇ ಆರಂಭಿಸಿಬಿಟ್ಟೆಯಲ್ಲ ಮಹಾದೇವಿ?’’ ಎಂದಳು ಗೌರಿ.

`ಈ ವಯಸ್ಸಿಗೆ ನೀನು ಇಂಥ ಯೋಚನೆ ಮಾಡಬಾರದು. ಎಲ್ಲ ನಿನ್ನ ಹಾಗೇ ಯೋಚನೆ ಮಾಡುತ್ತಿದ್ದರೆ ಯಾರೂ ಮದುವೆಯನ್ನೇ ಆಗಬಾರದು’’ ಎಂದಳು ಸರಸ್ವತಿ.
`ಜೀವನದ ನಗ್ನ ಸತ್ಯಗಳನ್ನು ಅರ್ಥ ಮಾಡಿಕೊಳ್ಳಲು ಯಾವ ವಯಸ್ಸಾದರೇನು ಸರಸ್ವತಿ? ಭಗವಂತನಿಂದ ದೂರ ಮಾಡಿ ಅಲ್ಪ ಆಮಿಷಗಳಲ್ಲಿ ಮುಳುಗಿಸಿ ಜೀವನವನ್ನು ವ್ಯರ್ಥಗೊಳಿಸುವ ಮಾಯಾಮೋಹಗಳನ್ನು ಗೆಲ್ಲಬೇಕು. ಅದನ್ನು ಅರ್ಥ ಮಾಡಿ ಕೊಳ್ಳಲು ಯಾವ ವಯಸ್ಸಾದರೇನು?’

ಮಹಾದೇವಿಯ ದೃಢವಾದ ಮಾತುಗಳನ್ನು ಕೇಳಿ, ಏನು ಉತ್ತರ ಕೊಡಬೇಕೆಂದು ತೋಚದೆ ಗೆಳತಿಯರು ಸುಮ್ಮನಾದರು. ಏಕೆಂದರೆ ಮಹಾದೇವಿ ಮಾತನಾಡುವ ವಿಷಯಗಳು ಅವರ ಅಳತೆಗೆ ಮೀರಿದ್ದವು. ಅವಳಷ್ಟು ಓದು ಬರಹ ಮಾಡಿದವರಲ್ಲ ದಿದ್ದರೂ, ಅವಳಂತೆ ಆಲೋಚಿಸುವ ಶಕ್ತಿಯೂ ಅವರಲ್ಲಿರಲಿಲ್ಲ.

ಅಷ್ಟರಲ್ಲಿ ಸುಮತಿ `ಮಹಾದೇವಿ, ನಿನ್ನ ಗೆಳತಿಯರು ಬಂದು ಎಷ್ಟು ಹೊತ್ತಾಯಿತು. ಅವರಿಗೆ ಏನಾದರೂ ಉಪಾಹಾರ ಕೊಡಬಾರದೇ?’’ ಎಂದು ಅಡಿಗೆ ಮನೆಯಿಂದಲೇ ಕೂಗಿದಳು.
`ಅಯ್ಯೋ, ಮರೆತೇ ಬಿಟ್ಟೆ. ಈಗ ಬಂದೆ’ ಎಂದು ಮಹಾದೇವಿ ಅಡಿಗೆ ಮನೆಗೆ ಹೋದಳು.
ಅವಳು ಹೋದ ಮೇಲೆ `ಇವಳಿಗೇನಾಗಿದೆ? ಏಕೆ ಹೀಗೆ ಮಾತಾಡುತ್ತಾಳೆ?’’ ಎಂದಳು ಸರಸ್ವತಿ.
“ಹೀಗೇ ಆದರೆ ನಮ್ಮ ಮಹಾದೇವಿ ಹೆಂಗಸರ ಒಂದು ಮಠ ಕಟ್ಟುತ್ತಾಳೇನೋ!’’ ಎಂದಳು ಗೌರಿ. ಇಬ್ಬರೂ ನಕ್ಕರು.

* * *
ರಾತ್ರಿಯಾಗಿದೆ. ಅರಮನೆಯ ಶಯ್ಯಾಗೃಹದಲ್ಲಿ ಕೌಶಿಕ ಚಡಪಡಿಸುತ್ತಾ ಅತ್ತಿತ್ತ ಅಡ್ಡಾಡುತ್ತ, ಮತ್ತೆ ಬಂದು ಕೂಡುತ್ತ, ಮತ್ತೆ ಎದ್ದು ವಾತಾಯನದ ಬಳಿ ನಿಲ್ಲುತ್ತ, ಮತ್ತೆ ಬಂದು ಪಲ್ಲಂಗದ ಮೇಲೆ ಕೂಡುತ್ತ ತೀರ ಅಶಾಂತಿಯಿಂದ ತಳಮಳಿಸುತ್ತಿದ್ದ. ಅವನ ಅಶಾಂತಿಗೆ ಕಾರಣವಾದವಳು ಮಹಾದೇವಿ! ಅವಳನ್ನು ಕಂಡ ಕ್ಷಣದಿಂದ ಕೌಶಿಕ ಮೋಹಾಂಧಕಾರದಲ್ಲಿ ದಾರಿ ತಪ್ಪಿದ್ದ. ಮಹಾದೇವಿಯಲ್ಲದೆ ಅವನಿಗೆ ಬೇರೆ ಏನೂ, ಯಾರೂ ಕಾಣುತ್ತಿರಲಿಲ್ಲ. ಅವನು ಅದು ಹೇಗೆ ವೈಹಾಳಿಯನ್ನು ಮುಗಿಸಿದನೋ, ಹೇಗೆ ಅರಮನೆಗೆ ಬಂದನೋ, ಬಂದ ಕ್ಷಣದಿಂದಲೂ ಅವನು ಮಹಾದೇವಿಯನ್ನು ಕಂಡ ದೃಶ್ಯವನ್ನೇ ಮತ್ತೆ ಮತ್ತೆ ಕಣ್ಣ ಮುಂದೆ ತಂದುಕೊಂಡು ನಿಟ್ಟುಸಿರು ಬಿಡುತ್ತಿದ್ದ.

`ಛೆ, ಹೀಗೇ ಆದರೆ ರಾತ್ರಿಯೆಲ್ಲ ನಿದ್ರೆಯೇ ಬರುವುದಿಲ್ಲವೇನೋ! ಈ ದಿನ ಆಹಾರವೂ ರುಚಿಸಲಿಲ್ಲ. ಹಸಿವಿನ ಸುಳಿವೇ ಇಲ್ಲ. ಆದರೆ ಆ ಚೆಲುವೆಯನ್ನು ನೋಡುತ್ತಲೇ ಇರಬೇಕೆಂಬ ಕಣ್ಣಿನ ಹಸಿವು ಅಗಾಧವಾಗಿದೆ! ಕೇವಲ ಒಂದು ಹುಡುಗಿಯನ್ನು ಕಂಡು ನನ್ನ ಮನಸ್ಸು ಅಲ್ಲೋಲ ಕಲ್ಲೋಲವಾಯಿತಲ್ಲ! ನಾನು ಅಷ್ಟು ದುರ್ಬಲನೇ? ಇಲ್ಲ ಇಲ್ಲ, ನಾನು ದುರ್ಬಲನಲ್ಲ. ಅದರ ಬದಲಾಗಿ ಆ ಹುಡುಗಿಯ ಆಕರ್ಷಣೆಯೇ ಪ್ರಬಲ! ನಾನು ಇಲ್ಲಿಯವರೆಗೂ ಮದುವೆಯಾಗದಿರುವುದೇ ಲೇಸಾಯಿತು. ನನ್ನ ಅದೃಷ್ಟ ಇವಳಿಗೋಸ್ಕರ ಕಾಯುತ್ತಿತ್ತೋ ಏನೋ!

`ಅವಳಾರು? ಯಾರ ಮಗಳು? ಹೆಸರೇನು? ಅವಳಿಗೆ ಇನ್ನೂ ಮದುವೆ ಯಾಗಿಲ್ಲ ತಾನೆ? ಇರಲಾರದು. ಆಗಿಲ್ಲದಿರಲಿ ಎಂದು ಹಾರೈಸುತ್ತೇನೆ. ಜಿಂಕೆಯಂತೆ ಚಂಚಲವಾದ ಅವಳ ಕಣ್ಣುಗಳೇ ಸಾಕು, ಮನಸ್ಸನ್ನು ಮೋಹಗೊಳಿಸಲು! ಇಲ್ಲವಾದರೆ ನನ್ನಂಥವನೂ ಒಂದೇ ಕ್ಷಣದಲ್ಲಿ ಅವಳ ಮೋಹದ ಬಲೆಯಲ್ಲಿ ಬೀಳುತ್ತಿರಲಿಲ್ಲ. ಸೃಷ್ಟಿಕರ್ತ ಅವಳನ್ನು ವಿಶೇಷ ಗಮನಹರಿಸಿ ಸೃಷ್ಟಿ ಮಾಡಿರಬೇಕು.

`ಒಮ್ಮೆ ಕಂಡ ಮಾತ್ರಕ್ಕೇ ನನ್ನನ್ನು ವಿಚಲಿತಗೊಳಿಸಿದ ಅವಳನ್ನು ಪಡೆಯಬೇಕೆಂಬ ಆಸೆ ಪ್ರಬಲವಾಗುತ್ತಿದೆ. ಅವಳು ನನಗೋಸ್ಕರವೇ ಸೃಷ್ಟಿಯಾಗಿರಬೇಕು. ಹೌದು, ಅವಳನ್ನು ಪಡೆಯಲೇಬೇಕು. ಅದರಲ್ಲಿ ತಪ್ಪೇನು? ಅಮೂಲ್ಯವಾದ ಎಲ್ಲ ವಸ್ತುಗಳ ಮೇಲೂ ರಾಜನಾದವನಿಗೆ ಅಧಿಕಾರವಿದೆ. ಅಂದಮೇಲೆ ನನ್ನ ರಾಜ್ಯದ ಪ್ರಜೆಯೇ ಆಗಿರುವ ಅವಳ ಮೇಲೆ ನನ್ನ ಅಧಿಕಾರವಿದೆಯೆಂದೇ ಅರ್ಥ. ರಾಜನೇ ಬಯಸಿದನೆಂದು ತಿಳಿದರೆ ಅವಳು ಸಂತೋಷದಿಂದ ಕುಣಿಯುತ್ತ ಬಂದಾಳು! ಏನೇ ಆದರೂ ಅವಳನ್ನು ಪಡೆಯದೆ ಈ ಜನ್ಮ ವ್ಯರ್ಥ. ಅವಳು ನನ್ನವಳಾಗುವವರೆಗೂ ನನಗೆ ನೆಮ್ಮದಿಯಿಲ್ಲ. ಆಹಾರ ಬೇಕಿಲ್ಲ, ನಿದ್ರೆ ಬೇಕಿಲ್ಲ, ಬೇರೆ ಯಾವುದೂ ಬೇಕಾಗಿಲ್ಲ. ಈ ಮಂತ್ರಿ ಎಷ್ಟು ತಡ ಮಾಡುತ್ತಿದ್ದಾರೆ? ನನ್ನ ಆತುರ ಅವರಿಗೆ ಹೇಗೆ ಅರ್ಥವಾಗಬೇಕು?’ ಎಂದು ಕೊಳ್ಳುತ್ತಿರುವಾಗಲೇ ಮಂತ್ರಿ ಮಹಾಬಲಯ್ಯ ಬರುತ್ತಿರುವುದು ಕಾಣಿಸಿತು.

ಅವನ ಮುಖ ಕಂಡ ಕೂಡಲೇ `ಬನ್ನಿ ಬನ್ನಿ ಮಂತ್ರಿಗಳೇ’ ಎಂದು ಕೌಶಿಕ ಆತುರದಿಂದ ಸ್ವಾಗತಿಸಿದ.
`ಈ ಅವೇಳೆಯಲ್ಲಿ ಕರೆ ಕಳಿಸಿದ ಕಾರಣವೇನು ಪ್ರಭು? ಅವಸರದ ರಾಜಕಾರ್ಯ ವೇನಾದರೂ ಇತ್ತೆ? ಅಥವಾ ಬೇರೆ ಯಾವುದಾದರೂ ಜಟಿಲ ಸಮಸ್ಯೆಯಿದೆಯೇ?’’ ಎಂದು ಮಂತ್ರಿ ಕೇಳಿದ.
`ಹೌದು ಮಂತ್ರಿಗಳೆ, ರಾಜಕಾರ್ಯವಿದೆ. ಅದು ಅವಸರದ್ದೂ ಹೌದು, ಕುಳಿತುಕೊಳ್ಳಿ’ ಎಂದು ಹೇಳಿ ಕೌಶಿಕ ಕುಳಿತುಕೊಂಡು ಪೀಠ ತೋರಿಸಿದ. ಮಂತ್ರಿಯೂ ಕುಳಿತುಕೊಂಡ.

`ಯಾವ ರಾಜಕಾರ್ಯವೆಂದು ಹೇಳಿ ಪ್ರಭು’ ಮಂತ್ರಿ ಕೇಳಿದ.
ಒಂದು ಕ್ಷಣ ಮಾತು ಜೋಡಿಸಿಕೊಂಡು ಕೌಶಿಕ ಹೇಳಿದ, `ಮಂತ್ರಿಗಳೆ, ಈ ದಿನ ವೈಹಾಳಿ ಹೋಗುತ್ತಿರುವಾಗ ಕಂಡ ಆ ಮುದ್ದು ಹುಡುಗಿಯ ಸುಂದರ ಮುಖ ನಿರಂತರವಾಗಿ ಕಾಡುತ್ತಿದೆ.’

`ಯಾವ ಹುಡುಗಿ ಪ್ರಭು?’
`ಅದೇ, ನಾನು ಅವಳತ್ತಲೇ ನೋಡುತ್ತಿರುವಾಗ ನೀವು ಎಚ್ಚರಿಸಿದಿರಲ್ಲಾ?’
ಮಂತ್ರಿ ಕ್ಷಣಹೊತ್ತು ನೆನಪು ಮಾಡಿಕೊಂಡು “ಓ! ಆ ಹುಡುಗಿಯೇ!’’ ಎಂದ.
`ನಿಮಗೆ ಅವಳು ಗೊತ್ತೆ? ಅವಳು ಯಾರು? ಯಾರ ಮಗಳು? ಅವಳ ತಂದೆಯ ಹೆಸರೇನು?’’
`ಅವಳು ನಿರ್ಮಲ, ಸುಮತಿಯೆಂಬ ನಿಷ್ಠಾವಂತ ಶಿವಭಕ್ತರ ಮಗಳು.’’
`ಅವರ ಪರಿಚಯ ನಿಮಗಿದೆಯೆ?’’
`ಅವರು ಉಡುತಡಿಯಲ್ಲಿ ಬಹಳ ಗಣ್ಯರು, ಸಾತ್ವಿಕರು, ಗೌರವಾನ್ವಿತರು. ಅವರೆಂದರೆ ಊರವರಿಗೆಲ್ಲ ಬಹಳ ಅಭಿಮಾನ. ಅವರ ಪರಿಚಯ ಯಾರಿಗಿಲ್ಲ. ನನಗೂ ತಕ್ಕ ಮಟ್ಟಿಗೆ ಅವರ ಪರಿಚಯವಿದೆ.’
`ಹೌದೇ! ಹಾಗಾದರೆ ಒಳ್ಳೆಯದೇ ಆಯಿತು.’’
`ಯಾವುದಕ್ಕೆ ಒಳ್ಳೆಯದಾಯಿತು?’’ ಕೌಶಿಕನ ಉದ್ದೇಶದ ಸುಳಿವು ಸಿಕ್ಕಿದರೂ, ಮಂತ್ರಿ ಅಮಾಯಕನಂತೆ ಕೇಳಿದ.
`ಮಂತ್ರಿಗಳೇ, ನೀವು ನನ್ನ ಪರವಾಗಿ ಅವರ ಮನೆಗೆ ಹೋಗಿ, ಅವರೊಂದಿಗೆ ಮಾತನಾಡಬೇಕು.’
`ಏನೆಂದು ಮಾತನಾಡಬೇಕು ಪ್ರಭು?’’
`ಅವರ ಮಗಳನ್ನು ನನಗೆ ಮದುವೆ ಮಾಡಿಕೊಡುವಂತೆ ಕೇಳಬೇಕು.’’
“ಇದೇನು ಪ್ರಭು, ಇದ್ದಕ್ಕಿದ್ದಂತೆ ಇಂಥ ಆಲೋಚನೆ?’
“ಆ ಹುಡುಗಿಯನ್ನು ಕಾಣುವವರೆಗೂ ನನಗೆ ಮದುವೆಯ ಯೋಚನೆಯೇ ಇರಲಿಲ್ಲ. ಈಗ ಮದುವೆಯ ಆಸೆಯಾಗಿದೆ. ಅವಳನ್ನು ನಾನು ಮದುವೆಯಾಗಲಿ ಎಂದೇ, ಇಷ್ಟು ಕಾಲ ನನ್ನಲ್ಲಿ ಆ ಯೋಚನೆ ಬರಲಿಲ್ಲವೆಂದು ಕಾಣುತ್ತದೆ.’
“ವಿಚಿತ್ರವಾಗಿದೆ ಪ್ರಭು.’
“ಇದರಲ್ಲಿ ವಿಚಿತ್ರವೇನು ಬಂತು, ಎಲ್ಲ ಸಚಿತ್ರವಾಗಿಯೇ ಇದೆ.’
ಎರಡು ಕ್ಷಣ ಯೋಚಿಸಿದ ಮಂತ್ರಿ ಹೇಳಿದ, “ಬಹುಶಃ ಅವರು ಒಪ್ಪಲಾರರು.’
`ಏಕೆ? ಏಕೆ ಒಪ್ಪುವುದಿಲ್ಲ? ನಾನು ಚೆನ್ನಾಗಿಲ್ಲವೆ? ನನ್ನಲ್ಲಿ ತಾರುಣ್ಯವಿಲ್ಲವೆ? ರಾಜನೇ ಅಳಿಯನಾಗುವ ಅದೃಷ್ಟ ದೊರೆತರೆ ಯಾರು ಬೇಡವೆನ್ನುತ್ತಾರೆ? ಖಂಡಿತ ಸಂತೋಷದಿಂದ ಒಪ್ಪುತ್ತಾರೆ. ನೀವು ಹೋಗಿ ಮಾತನಾಡಿ.’
`ಅಂಥ ಆಸೆಗಳಿಗೆಲ್ಲ ಅವರು ಮರುಳಾಗುತ್ತಾರೆಂದು ನನಗೆ ಅನ್ನಿಸುತ್ತಿಲ್ಲ.’
`ಏಕೆ, ಅವರು ಒಪ್ಪದಿರುವುದಕ್ಕೆ ಏನಾದರೂ ಕಾರಣವಿದೆಯೆ? ಅಥವಾ ಅಡ್ಡಿಯಿದೆಯೆ?’
`ಧರ್ಮ! ಧರ್ಮದ ಅಡ್ಡಿಯಿದೆ. ಅವರು ಮಹಾಶಿವ ಭಕ್ತರು, ಬೇರೆ ಧರ್ಮದವರೊಂದಿಗೆ ಅವರು ಹೇಗೆ ಸಂಬಂಧ ಬೆಳೆಸುತ್ತಾರೆ? ಮದುವೆಗಾಗಿ ಧರ್ಮವನ್ನು ಬಿಡುತ್ತಾರೆಂದು ನಿರೀಕ್ಷಿಸಲಾಗುತ್ತದೆಯೆ?’’
`ಇಲ್ಲ ಮಂತ್ರಿಗಳೆ’ ಕೌಶಿಕ ಹಟದಿಂದ ಹೇಳಿದ, `ಆ ಹುಡುಗಿ ನನಗೆ ಬೇಕೇ ಬೇಕು. ರಾಜನಾದವನು ಧರ್ಮಗಿರ್ಮಗಳನ್ನು ಲೆಕ್ಕಿಸಬೇಕಾಗಿಲ್ಲ. ನೀವು ನಾಳೆಯೇ ಬೇಗ ಹೋಗಿ ಅವರೊಂದಿಗೆ ಮಾತನಾಡಿ. ಬರೀ ಮಾತನಾಡುವುದಲ್ಲ, ಅವರನ್ನು ಒಪ್ಪಿಸಿಕೊಂಡೇ ಬರಬೇಕು.’
`ಇದು ಬಹಳ ಕಷ್ಟದ ಕೆಲಸ ಪ್ರಭು’’ ಮಂತ್ರಿ ಹಿಂಜರಿದ.
`ಕಷ್ಟವೋ ಸುಖವೋ ಈ ಕೆಲಸ ಆಗಲೇಬೇಕು. ನೀವು ಈ ನನ್ನ ಆಜ್ಞೆಯನ್ನು ಪಾಲಿಸಲೇಬೇಕು.’

ಒಳಗೇ ಕೋಪ ಬಂದರೂ ತಡೆದುಕೊಂಡು ಮಹಾಬಲಯ್ಯ `ಪ್ರಯತ್ನಿಸುತ್ತೇನೆ ಪ್ರಭು’ ಎಂದು ಅರಮನೆಯಿಂದ ಹೊರಟು ಬಂದ. ಕೌಶಿಕನ ಧೋರಣೆ ಮೊದಲಿನಿಂದಲೂ ಅವನಿಗೆ ಇಷ್ಟವಾಗುತ್ತಿರಲಿಲ್ಲ. ಒಬ್ಬ ಸಣ್ಣ ರಾಜನಾದ ಅವನು ಮಹಾಸಾಮ್ರಾಜ್ಯದ ಚಕ್ರವರ್ತಿಯಂತೆ ದರ್ಪ ತೋರಿಸುತ್ತಿದ್ದ. ಎಷ್ಟೋ ಸಲ ಮಂತ್ರಿಯಾಗಿ ಅವನು ನೀಡಿದ ಸಲಹೆಯನ್ನು ಧಿಕ್ಕರಿಸಿ ತನ್ನ ಮೂಗಿನ ನೇರಕ್ಕೇ ನಡೆದುಕೊಳ್ಳುತ್ತಿದ್ದ. ಈಗಲೂ ಅವನು ಸಲ್ಲದ ಹೆಣ್ಣಿಗಾಗಿ ಬಾಯಿ ಬಿಡುತ್ತಿದ್ದಾನೆಂದು ಅನ್ನಿಸಿತು. ಬೇಡವೆಂದು ತಾನಿರಲಿ, ಬೇರೆ ಯಾರು ಹೇಳಿದರೂ ಅವನು ಕೇಳುವುದಿಲ್ಲವೆಂದು ಅವನಿಗೆ ಗೊತ್ತಿತ್ತು. ನಿರ್ಮಲ ಮತ್ತು ಸುಮತಿಯ ಮುಂದೆ ಈ ವಿಷಯವನ್ನು ಹೇಗೆ ಹೇಳುವುದೆಂಬ ಸಂಕೋಚ ಕಾಡಿದರೂ, ರಾಜಾಜ್ಞೆಯಾಗಿರುವುದರಿಂದ, ಮಂತ್ರಿಯಾಗಿ ಅದನ್ನು ಮಾಡಲೇ ಬೇಕಾಗಿತ್ತು.
* * *
ಬೆಳಿಗ್ಗೆ ಸೂರ್ಯೋದಯವಾದ ನಂತರ ಸುಮತಿ, ನಿರ್ಮಲ ಮತ್ತು ಮಹಾದೇವಿ ತಮ್ಮ ನಿತ್ಯದ ಸ್ನಾನ, ಪೂಜಾದಿಗಳನ್ನು ಪೂರೈಸಿದ್ದರು. ಸುಮತಿ ಮತ್ತು ಮಹಾದೇವಿ ಅಡಿಗೆ ಮನೆಯಲ್ಲಿ ಉಪಾಹಾರ ಸಿದ್ಧಪಡಿಸುವುದರಲ್ಲಿ ತೊಡಗಿದ್ದರು. ನಡು
ಮನೆಯಲ್ಲಿ ಕುಳಿತಿದ್ದ ನಿರ್ಮಲ, ಮಹಾಬಲಯ್ಯ ತಮ್ಮ ಮನೆಯ ಕಡೆಗೇ
ಬರುತ್ತಿರುವುದನ್ನು ಕಂಡು ದಿಗ್ಗನೆ ಮೇಲೆದ್ದು “ಸುಮತೀ, ಮಂತ್ರಿಗಳು ಬರುತ್ತಿದ್ದಾರೆ!’’ ಎಂದ.
ಸುಮತಿ ಅಡಿಗೆ ಮನೆಯಿಂದ ಬರುತ್ತಾ `ಏನು! ಮಂತ್ರಿಗಳೆ? ಅವರಿಗೆ ನಮ್ಮ ಮನೆಯಲ್ಲೇನು ಕೆಲಸ?’’ ಎನ್ನುವಷ್ಟರಲ್ಲಿ ಮಹಾಬಲಯ್ಯ ಒಳಗೆ ಬಂದಾಗಿತ್ತು. ಅವನು ಕಸಿವಿಸಿಯಲ್ಲಿದ್ದ, ಇವರು ಕುತೂಹಲದಲ್ಲಿದ್ದರು.

`ಮಂತ್ರಿಗಳಿಗೆ ಸ್ವಾಗತ, ಬಡವರ ಮನೆಗೆ ಭಾಗ್ಯ ಬಂದಂತಾಯಿತು’ ಎಂದು ಔಪಚಾರಿಕವಾಗಿ ಸ್ವಾಗತಿಸಿ ನಿರ್ಮಲ ಪೀಠ ತೋರಿಸಿದ.
`ನಾನು ಹೇಳುವ ವಿಷಯವನ್ನು ಕೇಳಿದ ಮೇಲೆ, ನೀವು ಈ ಮಾತನ್ನು ಹೇಳುತ್ತೀರೋ ಇಲ್ಲವೋ ಸಂದೇಹಾಸ್ಪದ’’ ಎನ್ನುತ್ತ ಮಹಾಬಲಯ್ಯ ಕುಳಿತುಕೊಂಡ.
`ಅದೆಲ್ಲ ಆಮೇಲಾಗಲಿ, ಮೊದಲು ಬಾಯಾರಿಕೆಗೆ ಏನಾದರೂ ತೆಗೆದುಕೊಳ್ಳಿ’ ಎಂದಳು ಸುಮತಿ.

`ಬಾಯಾರಿಕೆಯೇಕೆ? ಮಂತ್ರಿಗಳು ಉಪಾಹಾರವನ್ನೇ ಮಾಡಲಿ, ಸಿದ್ಧವಾಗಿದೆಯಲ್ಲ?’ ಎಂದ ನಿರ್ಮಲ.
`ಅದೆಲ್ಲ ಏನೂ ಬೇಡ, ನೀವೂ ಕುಳಿತುಕೊಳ್ಳಿ’ ಎಂದ ಮಹಾಬಲಯ್ಯ. ನಿರ್ಮಲ ಮತ್ತು ಸುಮತಿ ಮುಖ ಮುಖ ನೋಡಿಕೊಂಡು ಕುಳಿತುಕೊಂಡರು. ಅವರಿಗೆ ಏನೂ ಅರ್ಥವಾಗಲಿಲ್ಲ. ಏಕೆಂದರೆ ಮಂತ್ರಿ ತಮ್ಮ ಮನೆಗೆ ಬರುವ ಯಾವ ಕಾರಣವೂ ಇರಲಿಲ್ಲ. ಜೊತೆಗೆ ಮಂತ್ರಿಯ ಮುಖ ನೋಡಿದರೆ ಯಾವುದೋ ಪ್ರಮುಖ ವಿಷಯವೇ ಇರಬೇಕೆಂಬ ಸಂದೇಹ ಬಂತು. ಅದು ಯಾವ ವಿಷಯವಾಗಿರಬಹುದೆಂಬ ಕುತೂಹಲವೂ ಇತ್ತು, ಭಯವೂ ಇತ್ತು.
ಕೆಲವು ಕ್ಷಣಗಳ ನಂತರ ನಿರ್ಮಲ `ನಿಮ್ಮ ಬಿಗಿದ ಮುಖವನ್ನು ನೋಡಿದರೆ ನನ್ನಲ್ಲಿ ಆತಂಕವುಂಟಾಗುತ್ತಿದೆ. ಅದೇನೆಂದು ಹೇಳಿ’’ ಎಂದ.

ಮಹಾದೇವಿ ಅಡಿಗೆ ಮನೆಯ ಬಾಗಿಲ ಮರೆಯಿಂದಲೇ ಇಣುಕಿ ನೋಡುತ್ತಿದ್ದಳು. ನಿನ್ನೆ ಕೌಶಿಕ ತನ್ನನ್ನು ನುಂಗುವಂತೆ ನೋಡುತ್ತಿದ್ದುದಕ್ಕೂ, ಈಗ ಮಂತ್ರಿ ಮನೆಗೆ ಬಂದಿರುವುದಕ್ಕೂ ಏನೋ ಸಂಬಂಧವಿರಬೇಕೆಂದು ಅವಳಿಗೆ ಸಂದೇಹ ಬಂತು.

ಹೇಗೆ ಮಾತು ಆರಂಭಿಸಬೇಕೆಂದು ತೋಚದೆ ಮಹಾಬಲಯ್ಯ ಚಡಪಡಿಸಿದ. ಆದರೆ ಬಂದಾಗಿದೆ, ಮಾತಾಡಲೇಬೇಕಾಗಿತ್ತು. ರಾಜಾಜ್ಞೆಯನ್ನು ಮಂತ್ರಿಯಾಗಿ ಪಾಲಿಸಲೇ ಬೇಕಾಗಿತ್ತು. ಕೆಲವು ಕ್ಷಣ ಮಾತುಗಳನ್ನು ಜೋಡಿಸಿಕೊಂಡು ಅವನು ನಿಧಾನವಾಗಿ `ಮೊದಲು ನೀವು ನನ್ನನ್ನು ತಪ್ಪು ತಿಳಿಯಬಾರದೆಂದು ಕೇಳಿಕೊಳ್ಳುತ್ತೇನೆ’ ಎಂದು ನಿರ್ಮಲನ ಕೈ ಹಿಡಿದುಕೊಂಡ.

`ಅಂಥ ಯಾವ ಮಾತಿದೆ ಮಂತ್ರಿಗಳೆ? ಸಂಕೋಚವಿಲ್ಲದೆ ಹೇಳಿ’ ಎಂದ ನಿರ್ಮಲ.
ಮಹಾಬಲಯ್ಯ ಹೇಳಿದ, `ನಿರ್ಮಲ, ನೀವು ನನ್ನ ಪರಿಚಿತರು, ಆಪ್ತರು. ನಿಮ್ಮ ಸಾತ್ವಿಕ ಸ್ವಭಾವ, ಧರ್ಮನಿಷ್ಠೆ, ಎಲ್ಲರೊಂದಿಗೆ ಅತ್ಯಂತ ಸೌಜನ್ಯದಿಂದ ನಡೆದುಕೊಳ್ಳುವ ಗುಣ, ಎಲ್ಲ ನನಗೆ ಗೊತ್ತಿದೆ. ಈ ಊರಿನ ಜನ ನಿಮ್ಮನ್ನು ಎಷ್ಟು ಗೌರವಿಸು ತ್ತಾರೆಂಬುದೂ ಗೊತ್ತಿದೆ.’
`ಅದೆಲ್ಲ ಇರಲಿ ಮಂತ್ರಿಗಳೆ, ಈಗ ನೀವು ಬಂದ ಕಾರಣವೇನೆಂದು ಸುತ್ತಿ ಬಳಸದೆ ನೇರವಾಗಿ ಹೇಳಿ’ ಎಂದು ನಿರ್ಮಲ ಅವಸರಪಡಿಸಿದ.

`ನಿನ್ನೆ ನಮ್ಮ ರಾಜ ಕೌಶಿಕ ನಿಮ್ಮ ಮನೆಯ ಮುಂದಿನಿಂದಲೇ ವೈಹಾಳಿ ಹೋದದ್ದು ನಿಮಗೂ ಗೊತ್ತಿದೆ.’
`ಗೊತ್ತಿದೆ ಮಂತ್ರಿಗಳೆ’ ಸುಮತಿ ಹೇಳಿದಳು, “ನಮ್ಮ ಬೀದಿಯ ಜನರೆಲ್ಲ ಸಂಭ್ರಮದಿಂದ ಆ ಮೆರವಣಿಗೆಯನ್ನು ನೋಡಿದರು.’’
`ಆ ನೋಟಕರಲ್ಲಿ ನಿಮ್ಮ ಮಗಳು ಮಹಾದೇವಿಯೂ ಇದ್ದಳಲ್ಲವೆ?’
`ಹೌದು, ನಮ್ಮ ಮಗಳು ತನ್ನ ಗೆಳತಿಯರೊಂದಿಗೆ ಮೆರವಣಿಗೆ ನೋಡಿದಳು. ಅದು ಅಪರಾಧವಾಯಿತೇ? ಅದಕ್ಕೆ ಶಿಕ್ಷೆ ಕೊಡುತ್ತೀರೇನು?’
“ಅದು ಅಪರಾಧವೇ ಅಲ್ಲದ ಮೇಲೆ ಶಿಕ್ಷೆ ಕೊಡುವುದು ಹೇಗೆ? ಆದರೆ ಬಹುಶಃ ಅದರಿಂದ ರಾಜ ಅಪರಾಧ ಮಾಡುವಂತಾಯಿತು.’
`ಏನು, ರಾಜನ ಅಪರಾಧವೇ? ಅದೇನು ಮಂತ್ರಿಗಳೆ?’’ ಸ್ವಲ್ಪ ಗೊಂದಲಗೊಂಡು ನಿರ್ಮಲ ಕೇಳಿದ.
`ಆ ಸಂದರ್ಭದಲ್ಲಿ ನಮ್ಮ ರಾಜನ ದೃಷ್ಟಿಯೋ, ವಕ್ರದೃಷ್ಟಿಯೋ ನಿಮ್ಮ ಮಗಳು ಮಹಾದೇವಿಯ ಮೇಲೆ ಬಿತ್ತು.’
`ಅಂದರೆ, ಅದರ ಅರ್ಥವೇನು ಮಂತ್ರಿಗಳೆ?’’ ನಿರ್ಮಲ ಸ್ವಲ್ಪ ಅಸಮಾಧಾನದಿಂದಲೇ ಕೇಳಿದ.

`ನಿರ್ಮಲ’ ಮಹಾಬಲಯ್ಯ ತಡೆದು ತಡೆದು ಹೇಳಿದ, `ನಿಜವಾದ ಸಂಗತಿ ಯೆಂದರೆ, ನಿಮ್ಮ ಮಗಳ ಸೌಂದರ್ಯ ಕೌಶಿಕನನ್ನು ಆಕರ್ಷಿಸಿದೆ.’
ಆ ಮಾತು ಕಿವಿಗೆ ಬೀಳುತ್ತಿದ್ದಂತೆ ಮಹಾದೇವಿ ಕೋಪದಿಂದ ಕುದಿದಳು. `ಛೆ, ನಾನು ಆ ಮೆರವಣಿಗೆ ನೋಡಲು ಹೋಗಲೇಬಾರದಿತ್ತು’ ಎಂದುಕೊಂಡಳು.

ಮಂತ್ರಿಯ ಮಾತಿನಿಂದ ನಿರ್ಮಲ, ಸುಮತಿ ಇಬ್ಬರಿಗೂ ಕೋಪ ಬಂತು. ತಕ್ಷಣ ಏನು ಪ್ರತ್ಯುತ್ತರ ಕೊಡಬೇಕೆಂದು ಅವರು ಯೋಚಿಸುವಂತಾಯಿತು. ಇಂಥ ಪ್ರಸಂಗ ಬರುವುದೆಂದು ಅವರು ಕಲ್ಪನೆಯನ್ನೂ ಮಾಡುವಂತಿರಲಿಲ್ಲ.

ಕೆಲವು ಕ್ಷಣಗಳ ನಂತರ ಸುಮತಿ ಕೋಪದಿಂದಲೇ ಹೇಳಿದಳು, “ನಿಮ್ಮ ಮಾತಿನ ಅರ್ಥವೇನು ಮಂತ್ರಿಗಳೆ? ಹೆಣ್ಣು ಮಕ್ಕಳು ನಿಮ್ಮ ರಾಜನ ಕಣ್ಣಿಗೆ ಬೀಳಲೇಬಾರದೆ? ರಾಜ ಬರುತ್ತಾನೆಂದರೆ, ಎಲ್ಲ ಮನೆಯಲ್ಲಿ ಅಡಗಿಕೊಳ್ಳಬೇಕೆ? ರಾಜನಾದವನಿಗೆ ತಾರತಮ್ಯ ಜ್ಞಾನವಿರಬೇಕು. ಪ್ರಜೆಗಳ ದೃಷ್ಟಿಯಲ್ಲಿ ತನ್ನ ವರ್ತನೆ ಹಾಸ್ಯಾಸ್ಪದವಾಗದಂತೆ ನಡೆದು ಕೊಳ್ಳಬೇಕು. ಅವನು ತನ್ನ ಪ್ರಜೆಗಳನ್ನು ಗೌರವದಿಂದ ಕಾಣಬೇಕು. ಗೌರವಸ್ಥ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕುವ ಇವನೆಂಥ ರಾಜ!’’

`ಸುಮತಿ ಸ್ವಲ್ಪ ಸುಮ್ಮನಿರು’’ ನಿರ್ಮಲ ತಡೆದ, `ಮಂತ್ರಿಗಳೆ, ನೀವು ಹೇಳಲು ಬಂದದ್ದು ಇಷ್ಟೇ ವಿಷಯವೇ?’
`ಇಷ್ಟೇ ವಿಷಯವಾದರೂ, ಈ ವಿಷಯದ ಮುಂದಿನ ಭಾಗವನ್ನೂ ಹೇಳಬೇಕಲ್ಲ.’
`ಅದನ್ನೂ ಹೇಳಿಬಿಡಿ. ಇಷ್ಟು ಕೇಳಿದ ಮೇಲೆ ಅದನ್ನೂ ಕೇಳಿಬಿಡುತ್ತೇವೆ’’ ಎಂದ ನಿರ್ಮಲ.
`ನಮ್ಮ ರಾಜ ನಿಮ್ಮ ಮಗಳನ್ನು ಮದುವೆಯಾಗಲು ಬಯಸುತ್ತಾನೆ’’ ಎಂದು ಮಹಾಬಲಯ್ಯ ಧೈರ್ಯವಹಿಸಿ ಹೇಳಿಬಿಟ್ಟ.

`ಮದುವೆ! ಸಾವ ಕೆಡುವ ಈ ಭವಿಯೊಂದಿಗೆ ನನ್ನ ಮದುವೆಯೇ? ಚೆನ್ನಮಲ್ಲಿಕಾರ್ಜುನಾ! ನೋಡಿದೆಯಾ! ನಿನಗೆ ಮೀಸಲಾದವಳನ್ನು ಈ ಪಾಪಿ ರಾಜ ಬಯಸುತ್ತಿದ್ದಾನೆ’’ ಎಂದು ಮಹಾದೇವಿ ಮನಸ್ಸಿನಲ್ಲೇ ಮೊರೆಯಿಟ್ಟಳು.

`ಅವನು ಬಯಸಿದನೆಂದು ನಾವು ಕುಣಿಯುತ್ತಾ ನಮ್ಮ ಮಗಳನ್ನು ಅವನಿಗೆ ಧಾರೆಯೆರೆದು ಕೊಡಬೇಕೆ?’ ಸುಮತಿಯ ಕೋಪ ಕಡಿಮೆಯಾಗಲಿಲ್ಲ.

`ಇದು ಉದ್ಧಟತನವಲ್ಲವೆ ಮಂತ್ರಿಗಳೇ?’ ಕೋಪವನ್ನು ಅಡಗಿಸಿಕೊಂಡು ಸ್ವಲ್ಪ ಸಮಾಧಾನದಿಂದಲೇ ನಿರ್ಮಲ ಕೇಳಿದ, “ಇದು ರಾಜನಾದವನ ನಿರಂಕುಶ ವರ್ತನೆ ಯಲ್ಲವೆ?’

`ನೀವು ಹೀಗೆ ಹೇಳುತ್ತೀರಿ’’ ಮಹಾಬಲಯ್ಯಾ ಹೇಳಿದ, `ಆದರೆ ಅವನು, ತಾನು ಅವಿವಾಹಿತನಾಗಿದ್ದೇನೆ, ಮಹಾದೇವಿಯನ್ನು ಮದುವೆ ಮಾಡಿಕೊಳ್ಳುವುದರಲ್ಲಿ ಯಾವ ಅಭ್ಯಂತರವೂ ಇಲ್ಲ ಎಂದು ಯೋಚಿಸುತ್ತಾನೆ.’’

`ಅವನು ಹೇಗೆ ಬೇಕಾದರೂ ಯೋಚಿಸಿಕೊಳ್ಳಲಿ? ಏನು ಬೇಕಾದರೂ ಯೋಚಿಸಿ ಕೊಳ್ಳಲಿ?’’ ನಿರ್ಮಲ ಸ್ಪಷ್ಟವಾಗಿ ಹೇಳಿದ, `ನಾವು ಅವನ ಪ್ರಜೆಗಳು ನಿಜ, ಆದರೆ ನಮಗೆ ನಮ್ಮದೇ ಆದ ಗೌರವವಿದೆ, ಸ್ವಾಭಿಮಾನವಿದೆ, ಇಷ್ಟಾನಿಷ್ಟಗಳಿವೆ. ಜೊತೆಗೆ ನಮ್ಮ ಮಗಳಿಗೆ ತನಗೆ ಇಷ್ಟವಾದವನೊಡನೆ ಮದುವೆಯಾಗುವ ಸ್ವಾತಂತ್ರ್ಯವೂ ಇದೆ.’’

`ಹೌದು ನಿರ್ಮಲ’ ಮಹಾಬಲಯ್ಯ ಅಸಹಾಯಕತೆಯಿಂದ ಹೇಳಿದ, `ನಿಮ್ಮ ಮಾತೆಲ್ಲ ಸತ್ಯ. ನಿಮ್ಮ ಮಾತನ್ನು ನಾನು ಗೌರವಿಸುತ್ತೇನೆ. ಅದಕ್ಕೇ ನಾನು ನೀವು
ಕಂಡ ಕೂಡಲೇ ನಿಮಗೆ ಈ ವಿಷಯ ತಿಳಿಸಲು ಹಿಂಜರಿದೆ. ಆದರೆ ಮಂತ್ರಿಯಾದವನು ರಾಜಾಜ್ಞೆಯನ್ನು ಪಾಲಿಸಬೇಕಲ್ಲವೆ?’
`ಇಂಥ ದುಷ್ಟ ಆಲೋಚನೆ ಅವನಿಗೆ ಹೇಗೆ ಬಂತು?’’ ಸುಮತಿ ನೋವಿನಿಂದ ಕೇಳಿದಳು.
`ತಾನು ಲಕ್ಷಣವಾಗಿದ್ದೇನೆ, ಆರೋಗ್ಯ ದೃಢಕಾಯನಾಗಿದ್ದೇನೆ, ತನ್ನಲ್ಲಿ ಏನು ಕಡಿಮೆಯಿದೆ? ರಾಜನ ಅಧಿಕಾರವಿದೆ, ಸಂಪತ್ತಿದೆ ಎಂಬ ಅಹಂಕಾರ, ದುರಭಿಮಾನ ಅವನಲ್ಲಿದೆ’ ಎಂದ ಮಹಾಬಲಯ್ಯ.

ಎರಡು ಕ್ಷಣ ಬಿಟ್ಟು ನಿರ್ಮಲ ಹೇಳಿದ, `ಅವನ ತರ್ಕವೂ ಸರಿಯಿರಬಹುದು. ರಾಜನೇ ನಮ್ಮ ಮಗಳನ್ನು ಮದುವೆಯಾಗಲು ಮುಂದೆ ಬಂದನೆಂದು ನಾವು ಸಂತೋಷವನ್ನೂಪಡಬಹುದು. ಆದರೆ, ಇಲ್ಲಿರುವ ದೊಡ್ಡ ಅಡ್ಡಿಯೆಂದರೆ ಧರ್ಮ. ನಮ್ಮ ಧರ್ಮ ಬೇರೆ, ಅವನ ಧರ್ಮ ಬೇರೆ. ನಿಷ್ಠಾವಂತ ಶಿವಭಕ್ತರಾದ ನಾವು ಬೇರೆ ಧರ್ಮದವರನ್ನು ಭವಿಗಳೆಂದು ಕರೆಯುತ್ತೇವೆ. ಭವಿಗಳ ಜೊತೆ ವಿವಾಹ ಸಂಬಂಧ ಬೆಳಸುವುದು ಮಹಾಪಾಪವೆಂದು ನಂಬಿದ್ದೇವೆ.’

`ಹೌದು ಮಂತ್ರಿಗಳೆ’` ಸುಮತಿ ಕೂಡ ಸ್ಪಷ್ಟ ಮಾತುಗಳಲ್ಲಿ ಹೇಳಿದಳು, `ಈ ಸಂಬಂಧಕ್ಕೆ ನಮ್ಮ ಸಮ್ಮತಿಯಿಲ್ಲ. ನಮ್ಮ ಮಗಳು ರಾಜನ ಪತ್ನಿಯಾಗಲಿ, ರಾಣಿಯಾಗಲಿ ಎಂಬ ಯಾವ ಭ್ರಮೆಯೂ ನಮಗಿಲ್ಲ. ನೀವೂ ಅವರಿಗೆ, ಇದು ತಪ್ಪು ಎಂದು ಬುದ್ಧಿ ಹೇಳಿ.’
`ನಾನು ನಿಮ್ಮಿಂದ ಈ ಉತ್ತರವನ್ನೇ ನಿರೀಕ್ಷಿಸಿದ್ದೆ ತಾಯಿ. ನೀವು ಒಪ್ಪುವುದು ಅಸಂಭವವೆಂದು ಅವನಿಗೆ ನಾನು ಮೊದಲೇ ಹೇಳಿದ್ದೆ. ಆಗಲಿ, ರಾಜನಿಗೆ ತನ್ನ ಬಯಕೆಯನ್ನು ಕೈಬಿಡುವಂತೆ ಇನ್ನೊಮ್ಮೆ ಹೇಳುತ್ತೇನೆ. ಅವನ ಪ್ರತಿಕ್ರಿಯೆ ಏನಿರುವುದೋ, ನನಗೆ ಗೊತ್ತಿಲ್ಲ. ನೊಡೋಣ ಬರುತ್ತೇನೆ’’ ಎಂದು ಮಹಾಬಲಯ್ಯ ನಮಸ್ಕರಿಸಿ ಹೊರಟು ಹೋದ.

ಅಕ್ಕಪಕ್ಕದವರಿಗೆಲ್ಲ ಮಂತ್ರಿ ನಿರ್ಮಲನ ಮನೆಗೆ ಏಕೆ ಬಂದಿದ್ದ ಎಂಬ ಕುತೂಹಲ. ಏನು ಕಾರಣವಿರಬಹುದೆಂಬ ಊಹೆ. ಒಂದಿಬ್ಬರು ಬಂದು ಕೇಳಿಯೂ ಕೇಳಿದರು. `ಏನಿಲ್ಲ, ಮಹಾಬಲಯ್ಯನವರು ಹಳೆಯ ಪರಿಚಯ. ವಿಶ್ವಾಸದ ಭೇಟಿ ಅಷ್ಟೆ’’ ಎಂದು ಹೇಳಿ ನಿರ್ಮಲ ಪಾರಾದ.

ಮಹಾದೇವಿ ಮಾತ್ರ ಕೋಪದಿಂದ ಕುದಿಯತೊಡಗಿದಳು. ರಾಜನ ವರ್ತನೆ ಸಭ್ಯತೆಯ ಎಲ್ಲೆಯನ್ನು ಮೀರಿದೆ, ಎಂದುಕೊಂಡಳು. ಒಂದು ಕ್ಷಣ, ತಾನು ತನ್ನ ತಂದೆ ತಾಯಿಗಳ ಮಾತಿಗೆ ಸಮ್ಮತಿಸಿ ಮದುವೆಗೆ ಒಪ್ಪಿದ್ದರೆ, ಇಂಥ ಪ್ರಸಂಗ ಬರುತ್ತಿರಲಿಲ್ಲ ವೇನೋ, ಎನ್ನಿಸಿತು. ತಾನು ಬೇಡವೆಂದರೂ ಒತ್ತಾಯದಿಂದ ಮೆರವಣಿಗೆ ನೋಡಲು ಎಳೆದೊಯ್ದ ಗೆಳತಿಯರ ಮೇಲೆ ಅಸಮಾಧಾನವಂತೂ ಉಂಟಾಯಿತು.
* * *
ಇತ್ತ ಅರಮನೆಯಲ್ಲಿ ಮಂತ್ರಿಯ ಆಗಮನಕ್ಕಾಗಿ ಕೌಶಿಕ ಚಡಪಡಿಸುತ್ತ, ಮತ್ತೆ ಮತ್ತೆ ಬಾಗಿಲತ್ತ ನೋಡುತ್ತ ಕಾಯುತ್ತಿದ್ದ.

`ಛೆ, ಮಂತ್ರಿಗಳು ಏಕೆ ಇನ್ನೂ ಬರುತ್ತಿಲ್ಲ? ಏಕೆ ಇಷ್ಟು ತಡಮಾಡುತ್ತಿದ್ದಾರೆ? ಅವರು ಇನ್ನೂ ಅವರ ಮನೆಗೆ ಹೋಗಿಲ್ಲವೇ? ಅಥವಾ ಅವರ ಮನೆಯಲ್ಲಿ ವಿವರವಾಗಿ ಮಾತಾಡುತ್ತಿರಬಹುದೇ? ಹಾಗಾದರೆ ಅವಳ ತಂದೆತಾಯಿ ಒಪ್ಪಿದ್ದಾರೆಯೆ? ಒಪ್ಪದೆ ಏನು ಮಾಡುತ್ತಾರೆ? ಅರಮನೆಯ ಸಂಬಂಧ ನಿರಾಯಾಸವಾಗಿ ಮನೆ ಬಾಗಿಲಿಗೆ ಬಂದಾಗ ಯಾರು ತಾನೇ ನಿರಾಕರಿಸುತ್ತಾರೆ? ಆ ಸುಂದರಿ ನನ್ನವಳಾಗುವುದಾದರೆ ಅವಳುದ್ದಕ್ಕೆ ಸಂಪತ್ತನ್ನು ಸುರಿದೇನು!’

ಹೀಗೆ ಅಂದುಕೊಳ್ಳುತ್ತಿರುವಷ್ಟರಲ್ಲಿ ಮಂತ್ರಿ ಮಹಾಬಲಯ್ಯ ಬಾಗಿಲಲ್ಲಿ ಕಾಣಿಸಿ ಕೊಂಡ. ಕೌಶಿಕನ ಮುಖ ಅರಳಿತು. ತಾನೇ ಎದುರಿಗೆ ಹೋಗಿ ಸ್ವಾಗತಿಸಿದ.
`ಬನ್ನಿ, ಬನ್ನಿ ಮಂತ್ರಿಗಳೇ, ಏಕಿಷ್ಟು ತಡ? ಆ ಹುಡುಗಿ, ಅವಳ ತಂದೆತಾಯಿ ಒಪ್ಪಿಕೊಂಡರೇನು? ಅವರ ನಿಬಂಧನೆಗಳೇನು? ಎಲ್ಲಿ ವಿವಾಹವಾದರೆ ಸರಿಯೆಂದು ಹೇಳುತ್ತಾರೆ? ಅವರ ಮನೆಯಲ್ಲೋ ಅಥವಾ ಅರಮನೆಯಲ್ಲೋ? ರಾಜನ ಮದುವೆ ಅರಮನೆಯಲ್ಲೇ ನಡೆಯುವುದು ಉಚಿತವೆಂದು ನೀವು ಹೇಳಿದಿರಿ ತಾನೆ?’

`ಈ ಮನುಷ್ಯನಿಗೆ ಹುಡುಗಿಯ ಹುಚ್ಚು ಚೆನ್ನಾಗಿಯೇ ತಲೆಗೇರಿದೆ’ ಎಂದುಕೊಂಡ ಮಹಾಬಲಯ್ಯ ಹೇಳಿದ, `ಎಷ್ಟೊಂದು ಪ್ರಶ್ನೆಗಳು ಪ್ರಭು? ಈ ಪ್ರಶ್ನೆಗಳೆಲ್ಲ ಪ್ರಸ್ತುತ ವಾಗುವುದು, ಅವರು ಈ ಸಂಬಂಧಕ್ಕೆ ಒಪ್ಪಿದ ಮೇಲೆ ತಾನೆ?’

`ಅಂದರೆ, ಅವರು ಈ ಸಂಬಂಧಕ್ಕೆ ಒಪ್ಪಲಿಲ್ಲವೆ?’’ ಕೌಶಿಕ ಸ್ವಲ್ಪ ಸಿಟ್ಟಿನಿಂದ ಕೇಳಿದ.
`ಇಲ್ಲ ಪ್ರಭು’ ಮಹಾಬಲಯ್ಯ ಹೇಳಿದ, `ಅವರು ಒಪ್ಪಲಿಲ್ಲ. ಅವರು ನಿಷ್ಠಾವಂತ ಶಿವಭಕ್ತರೆಂದು ನಾನು ಮೊದಲೇ ಹೇಳಿದೆನಲ್ಲವೆ!’

“ಆದರೇನು? ನನ್ನನ್ನು ಮದುವೆಯಾದರೆ ಅವರ ಶಿವಭಕ್ತಿಗೆ ಯಾವ ಅಡ್ಡಿಯಾಗುತ್ತದೆ?’
“ಬೇಡಿ ಪ್ರಭು, ಇದು ಆಗುವ ಹೋಗುವ ಸಂಬಂಧವಲ್ಲ. ದಯಮಾಡಿ ನಿಮ್ಮ ಆಸೆಯನ್ನು ಕೈಬಿಡಿ. ಆ ಹುಡುಗಿಗಿಂತ ಸುಂದರಿಯಾದ ಹುಡುಗಿ ನಿಮ್ಮ ಧರ್ಮದಲ್ಲೇ ಸಿಗಬಹುದು. ನಾನೇ ಹುಡುಕುತ್ತೇನೆ’ ಮಹಾಬಲಯ್ಯ ತಿಳಿಸುವಂತೆ ಹೇಳಿದ.

`ಇಲ್ಲ, ಇಲ್ಲ ಮಂತ್ರಿಗಳೆ’ ಕೌಶಿಕ ವ್ಯಗ್ರನಾಗಿ ಹೇಳಿದ, `ನನಗೆ ಅವಳೇ ಬೇಕು. ನಾನು ವಿವಾಹವಾದರೆ ಅವಳನ್ನೇ. ನೀವು ಏನಾದರೂ ಮಾಡಲೇಬೇಕು. ಹೇಗಾದರೂ ಮಾಡಿ ನೀವು ಅವರನ್ನು ಒಪ್ಪಿಸಲೇಬೇಕು. ಹೌದು ಮಂತ್ರಿಗಳೇ, ದಯಮಾಡಿ ಸಹಾಯ ಮಾಡಿ. ನಾನು ರಾಜನಾಗಿ ಕಠಿಣವಾದ ಆಜ್ಞೆ ಮಾಡುವ ಮೊದಲು ಏನಾದರೂ ಮಾಡಿ’’ ಎಂದು ಮಂತ್ರಿಯ ಕೈಹಿಡಿದುಕೊಂಡು ಗೋಗರೆದ.

`ಅಂದರೆ, ರಾಜಾಜ್ಞೆಯ ಮೂಲಕ, ಬಲವಂತದಿಂದ ಅವಳನ್ನು ಪಡೆಯುವ ಆಲೋಚನೆಯೇ?’ ಮಹಾಬಲಯ್ಯ ದಿಗ್ಭ್ರಾಂತಿಯಿಂದ ಕೇಳಿದ.
`ಅದು ಕಡೆಯ ಅಸ್ತ್ರ.ಅದಕ್ಕೆ ಮೊದಲು ನೀವು ನಿಮ್ಮ ಪ್ರಯತ್ನ ಮಾಡಿ.’
ಅವನು ಅದಕ್ಕೂ ಹಿಂಜರಿಯುವುದಿಲ್ಲ ಎಂದು ಅರ್ಥವಾಗಿ `ಆಗಲಿ ಪ್ರಭು, ಪ್ರಯತ್ನಿಸುತ್ತೇನೆ’ ಎಂದು ಸಪ್ಪೆಯಾಗಿ ಹೇಳಿ ಮಹಾಬಲಯ್ಯ ಎದ್ದು ಹೊರಟ.

(ಕೃತಿ: ಅಕ್ಕಮಹಾದೇವಿ(ಕಾದಂಬರಿ), ಲೇಖಕರು: ಸು.ರುದ್ರಮೂರ್ತಿ ಶಾಸ್ತ್ರಿ,ಪ್ರಕಾಶಕರು: ಅಂಕಿತ ಪ್ರಕಾಶನ, ಬೆಲೆ: ರೂ.150)