ಆಕೆಯದ್ದು ವಿಚಿತ್ರ ಸ್ವಭಾವ. ಅಮ್ಮ ಹೇಳಿರುತ್ತಿದ್ದ ಸಮಯಕ್ಕೆ ಯಾವತ್ತೂ ಬಂದಿದ್ದು ನನಗೆ ನೆನಪಿಲ್ಲ. ತನಗೆ ಬಿಡುವಾದಾಗಲೇ ಆಕೆ ಕೆಲಸಕ್ಕೆ ಬರೋದು. ಹಾಗಂತ ಕಡಿಮೆ ದುಡ್ಡಿಗೆ, ಚೌಕಾಸಿಗೆ ಬರುವ ಹೆಂಗಸೂ ಆಕೆಯಲ್ಲ. ಹಾಗೇನಾದ್ರೂ ಕೇಳಿದ್ರೆ ‘ಆಯ್ತು, ಎಲ್ಡು ಬಟ್ಟೆ ಕಮ್ಮಿ ಒಕ್ಕೊಡ್ತೀನಿ.. ಸುಮ್ಮನಿರ್ತಾರಾ…ʼ ಅಂತ ಸೀದಾ ಕೇಳಿಬಿಡುವವಳು. ಹಾಗಾಗಿ ಅವಳ ಈ ಸ್ವಭಾವ ಸಹಿಸಿಕೊಳ್ಳುವವರು ಅಥವಾ ಅನಿವಾರ್ಯವಿದ್ದವರು ಮಾತ್ರವೇ ಅವಳನ್ನು ಕೆಲಸಕ್ಕೆ ಕರೆಯುತ್ತಿದ್ದರು.
ರೂಪಶ್ರೀ ಕಲ್ಲಿಗನೂರ್‌ ಬರಹ

 

ಕೆಲ ವರ್ಷದ ಹಿಂದಿನ ಮಾತು. ನಾನಿನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದೆ. ಅಮ್ಮನಿಗೆ ಹೆಚ್ಚುವರಿ ಮನೆಗೆಲಸದ ಅಡ್ಡಪರಿಣಾಮವೋ ಏನೋ…. ಮೆಲ್ಲಗೆ ಮಂಡಿನೋವು ಕಾಣಿಸಲಾರಂಭಿಸಿತ್ತು. ಅಮ್ಮ ಅಲ್ವ… ಸಣ್ಣಪುಟ್ಟ ನೋವಿಗೆಲ್ಲ ಬಗ್ಗುವವಳಲ್ಲ… ಹಾಸಿಗೆ ಹಿಡಿಯುವವಳಲ್ಲ. ಹಾಗಂತಲೇ ಬಹಳ ದಿನಗಳ ಕಾಲ, ಬಾಧಿಸುತ್ತಿದ್ದ ಮಂಡಿನೋವಿಟ್ಟುಕೊಂಡೇ, ಅದೇನು ಮಹಾಬಿಡು ಅನ್ನುವಂತೆ, ಅದನ್ನು ನಿರ್ಲಕ್ಷಿಸಿ ಕಾಲು ನೋವಿನಲ್ಲೆ ಮನೆಕೆಲಸಗಳನ್ನು ಮಾಡಿಮಾಡಿ ಹಾಕುತ್ತಿದ್ದರು. ಕ್ರಮೇಣ ಅದು ಹೆಚ್ಚಾಗಿ, ಡಾಕ್ಟರರ ಬಳಿ ಹೋಗಬೇಕಾಗಿ ಬಂದಮೇಲೆ, ಅವರ ಸಲಹೆಯ ಮೇರೆಗೆ, ಒಂದಷ್ಟು ದಿನ ಹಾಗೂಹೀಗೂ ಅಡುಗೆಮನೆಗೆ ರಜೆ ಹಾಕಲೇಬೇಕಾಯ್ತು. ಅದರಲ್ಲೂ ಮಂಡಿನೋವಿನ ಕಾರಣ, ಕೆಳಕೆ ಕೂತೋ- ನಿಂತೋ, ಮನೆಮಂದಿಯ ರಾಶಿ ಬಟ್ಟೆಯನ್ನು ಒಗೆದು ಹಾಕುವ ಪರಿಸ್ಥಿತಿಯೇ ಇರಲಿಲ್ಲ.

ಆಗ ಮನೆಗಿನ್ನೂ ವಾಷಿಂಗ್‌ ಮಷೀನ್ನು ಬಂದಿರಲಿಲ್ಲವಾದ್ದರಿಂದ ಬಟ್ಟೆಯನ್ನು ಕೈಯಲ್ಲೇ ಒಗೆದುಹಾಕಬೇಕಿತ್ತು. ಅಕ್ಕನಿಗೆ ನನಗೆ ಒಂಚೂರು ಅಡುಗೆ ಮಾಡುವುದು ಗೊತ್ತಿತ್ತು. ಹಾಗಾಗಿ ಅಡುಗೆಮನೆ ಕೆಲಸವನ್ನು ಹಂಚಿಕೊಂಡೆವು. ಆದರೆ ಅಮ್ಮನ ವಿಶ್ರಾಂತಿಯ ನಡುವೆ ಬಟ್ಟೆ ಒಗೆಯುವ ಕೆಲಸವೊಂದು ಹೇಗೆ ಮಾಡಿ ಮುಗಿಸುವುದೆಂದು ಬಗೆಹರಿಯಲಾರದ ಸಮಸ್ಯೆಯಾಯ್ತು. ಅಡುಗೆ ಕೆಲಸಕ್ಕೆ ಹಿಂದೆಮುಂದೆ ನೋಡದೆ ನಿಲ್ಲುತ್ತಿದ್ದ ನಮಗೆ ಬಟ್ಟೆಗಳನ್ನು ಒಗೆದು ಹಾಕುವುದು ಇಬ್ಬರಿಗೂ ಸವಾಲಿನ ಕೆಲಸವಾಗಿತ್ತು. ಆಗೀಗ ಅಮ್ಮ ಬಟ್ಟೆ ಒಗೆದಾದಮೇಲೆ ಹಿಂಡಿ, ಒಣಗು ಹಾಕಲು ನಾನು ಹೋಗಿ ಕೈ ಜೋಡಿಸುತ್ತಿದ್ದೆನಾದರೂ ಬಟ್ಟೆ ಒಗೆಯುವುದು ರೂಢಿಯಿರಲಿಲ್ಲ. ಇಷ್ಟು ಕೆಲಸಕ್ಕೆ ನಾವು ಸುಸ್ತು ಎಂದೆನ್ನುವಾಗ, ಇಡೀ ಮನೆಯ ಕೆಲಸವನ್ನೆಲ್ಲ ಮಾಡಿ ಮುಗಿಸಿ, ಕೊನೆಗೆ ಮನೆಯವರ ಬಟ್ಟೆಯನ್ನೆಲ್ಲ ಒಗೆದುಹಾಕಲು ಅಮ್ಮನಲ್ಲಿ ಅದೆಷ್ಟು ಶಕ್ತಿಯಿತ್ತಲ್ಲ ಅಂತ ಈಗ ಸೋಜಿಗವೆನ್ನಿಸತ್ತೆ. ಹಾಗೆ ಮಂಡಿನೋವು ಶುರುವಾದಂದಿನಿಂದ ಕೆಳಗೆ ಕೂತು ಬಟ್ಟೆ ಒಗೆಯಲು ಸಾಧ್ಯವಾಗದೇ ಹೋದಾಗ, ಬಟ್ಟೆ ಒಗೆಯಲು ಮನೆ ಹತ್ತಿರವೇ ಇದ್ದ ಹೆಂಗಸೊಬ್ಬರನ್ನು ನೇಮಿಸಿಕೊಂಡೆವು.

ಆಕೆಯ ಹೆಸರು ಲಕ್ಷ್ಮಮ್ಮ ಅಂತ ನೆನಪು. ಐವತೈದರ ಮೇಲೆ ವಯಸ್ಸಾಗಿದ್ದಿರಬಹುದಾದ ಆ ಹೆಂಗಸಿನದ್ದು ದೊಡ್ಡ ಧ್ವನಿ. ಬಾಬ್‌ ಕಟ್‌ ಕೂದಲಿನ ಆಕೆಯ ತಲೆ ಬಹುತೇಕ ನೆರೆದಿತ್ತು. ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ದೊಡ್ಡ ಆಳು. (ಅಥವಾ ನಾನು ಚಿಕ್ಕವಳಾಗಿದ್ದಕ್ಕೆ ಅವರು ಹಾಗೆ ಕಾಣುತ್ತಿದ್ದರೋ ಗೊತ್ತಿಲ್ಲ) ಹಿಮ್ಮಡಿ ಕಾಣುವಂತೆ ಸೀರೆಯನ್ನು ಮೇಲಕ್ಕೆತ್ತಿ ಉಡುತ್ತಿದ್ದ ಅವರ ಕಾಲಲ್ಲಿ ದಪ್ಪನೆಯ ಬೆಳ್ಳಿಯ ಹಾಲ್ಗಡಗಗಳು ಎದ್ದುಕಾಣುತ್ತಿದ್ದವು.

ಆಕೆಗೆ ಗಂಡನಿರಲಿಲ್ಲ. ಮಗನೊಬ್ಬ ಇದ್ದ ಅಷ್ಟೇ. ಅವನೊಬ್ಬನ ಹೊರತು ಬೇರೆ ಬಂಧು ಬಳಗವೂ ಇದ್ದಂತೆ ಕಾಣಿಸಿದ್ದಿಲ್ಲ. ಅವನು ಓದಿ ಕೆಲಸವಿಲ್ಲದ ನಿರುದ್ಯೋಗಿ. ಹಾಲೂ, ಅಡುಗೆಮನೆಯೆಲ್ಲವೂ ಒಂದೇ ಎನ್ನುವಂತಿದ್ದ ಮನೆಯಲ್ಲಿ ಇದ್ದ ಏಕಮಾತ್ರದ ಮಂಚದ ಮೇಲೆ ಯಾವಾಗಲೂ ಬಿದ್ದುಕೊಂಡೇ ಸಮಯ ಹಾಳು ಮಾಡುತ್ತಿದ್ದ.. ಆಗಿನ್ನೂ ಸ್ಮಾರ್ಟ್‌ ಫೋನು ಬಂದಿಲ್ಲದೇ ಇದ್ದರೂ ಕೈಯಲ್ಲಿದ್ದ ಕರಿ ಲಡಕಾಸಿ ಫೋನನ್ನು ಕೆಳಗಿಟ್ಟು ಎಲ್ಲಿಗೂ ಹೋಗುತ್ತಿರಲಿಲ್ಲ. ತಾನು ಓದಿದ ವಿಷಯದಲ್ಲೇ ಕೆಲಸ ಸಿಗಬೇಕೆಂಬುದು ಅವನ ಆಸೆ ಮತ್ತು ಹಠ. ಅದನ್ನು ಬಿಟ್ಟು ಬೇರೆ ಯಾವ ತೆರನಾದ ಕೆಲಸಕ್ಕೆ ಸೇರಲೂ ಅವನು ಸಿದ್ಧನಿರಲಿಲ್ಲ. ಹಾಗಾಗಿ ಕೆಲಸವಿಲ್ಲದೆ ಪೋಲಿಯಲೆಯುವ ಬೆಳೆದ ಮಗನನ್ನೂ ಈ ಹೆಂಗಸೇ ಸಾಕಿಸಲುಹಬೇಕಿತ್ತು. ನಾವು ಅದೇ ಏರಿಯಾದಲ್ಲೇ ಮೊದಲಿದ್ದ ಮನೆಯ ಬಳಿ ಲಕ್ಷ್ಮಮ್ಮನ ಮನೆಯೂ ಇದ್ದದ್ದರಿಂದ, ಕೆಲಸಕ್ಕೆ ಯಾರು ಸಿಗಬಹುದು ಎಂದು ಯೋಚಿಸಿದ ತತ್‌ ಕ್ಷಣ ಆಕೆಯೇ ನೆನಪಾಗಿ ಅಮ್ಮ ಅವರನ್ನು ಕರೆಸಿಕೊಂಡಿದ್ದರು.

ಆಕೆಯದ್ದು ವಿಚಿತ್ರ ಸ್ವಭಾವ. ಅಮ್ಮ ಹೇಳಿರುತ್ತಿದ್ದ ಸಮಯಕ್ಕೆ ಯಾವತ್ತೂ ಬಂದಿದ್ದು ನನಗೆ ನೆನಪಿಲ್ಲ. ತನಗೆ ಬಿಡುವಾದಾಗಲೇ ಆಕೆ ಕೆಲಸಕ್ಕೆ ಬರೋದು. ಹಾಗಂತ ಕಡಿಮೆ ದುಡ್ಡಿಗೆ, ಚೌಕಾಸಿಗೆ ಬರುವ ಹೆಂಗಸೂ ಆಕೆಯಲ್ಲ. ಹಾಗೇನಾದ್ರೂ ಕೇಳಿದ್ರೆ ‘ಆಯ್ತು, ಎಲ್ಡು ಬಟ್ಟೆ ಕಮ್ಮಿ ಒಕ್ಕೊಡ್ತೀನಿ.. ಸುಮ್ಮನಿರ್ತಾರಾ…ʼ ಅಂತ ಸೀದಾ ಕೇಳಿಬಿಡುವವಳು. ಹಾಗಾಗಿ ಅವಳ ಈ ಸ್ವಭಾವ ಸಹಿಸಿಕೊಳ್ಳುವವರು ಅಥವಾ ಅನಿವಾರ್ಯವಿದ್ದವರು ಮಾತ್ರವೇ ಅವಳನ್ನು ಕೆಲಸಕ್ಕೆ ಕರೆಯುತ್ತಿದ್ದರು.

ಆಗಿನ್ನೂ ಸ್ಮಾರ್ಟ್‌ ಫೋನು ಬಂದಿಲ್ಲದೇ ಇದ್ದರೂ ಕೈಯಲ್ಲಿದ್ದ ಕರಿ ಲಡಕಾಸಿ ಫೋನನ್ನು ಕೆಳಗಿಟ್ಟು ಎಲ್ಲಿಗೂ ಹೋಗುತ್ತಿರಲಿಲ್ಲ. ತಾನು ಓದಿದ ವಿಷಯದಲ್ಲೇ ಕೆಲಸ ಸಿಗಬೇಕೆಂಬುದು ಅವನ ಆಸೆ ಮತ್ತು ಹಠ. ಅದನ್ನು ಬಿಟ್ಟು ಬೇರೆ ಯಾವ ತೆರನಾದ ಕೆಲಸಕ್ಕೆ ಸೇರಲೂ ಅವನು ಸಿದ್ಧನಿರಲಿಲ್ಲ.

ಒಟ್ಟಿಗೇ ಬೇರೆಬೇರೆ ಐದಾರುಕಡೆ ಮನೆಗಳಲ್ಲಿ ಕೆಲಸ ಮಾಡುವವಳು ಅವಳು. ಹಾಗಾಗಿ ಸಮಯ ಹೆಚ್ಚೂಕಡಿಮೆ ಆಗಿ, ಸರಸರ ಬಂದು ಕೆಲಸ ಮಾಡುತ್ತಿರಲಿಲ್ಲ. ‘ಅಲ್ಲಿ ಲೇಟಾಯ್ತು, ಏನ್‌ ಮಾಡಾಕಾಯ್ತದೆʼ ಅಂತ ತಾನು ಬಂದದ್ದೇ ಸಮಯವೆಂಬಂತೆ ಬಂದು ಕೆಲಸ ಮುಗಿಸಿಕೊಟ್ಟು ಹೋಗುತ್ತಿದ್ದಳು. ಅವಳು ಬಂದು ಹೋಗುವವರೆಗೂ ಅಮ್ಮನಿಗೆ ತಲೆಬಿಸಿ. ಬೆಳಗ್ಗೆ ನೆನೆಸಿಟ್ಟ ಬಟ್ಟೆಯನ್ನು ಸಂಜೆ ಬಂದು ಒಗೆಯುವುದಲ್ಲದೇ, ಆವತ್ತು ನಾಲ್ಕು ಬಟ್ಟೆ ಜಾಸ್ತಿಯಾದರೆ ದುಮುದುಮುಗುಟ್ಟುತ್ತಿದ್ದಳು. ಕೆಲಸಕ್ಕೆ ಮೊದಲ ದಿನ ಬಂದಾಗ, ಅಮ್ಮ ತಾವು ಕುಡಿಯುವಂತೆ ಟೀ ಮಾಡಿ ಕೊಟ್ಟಾಗ, ‘ಅಮ್ಮಾ, ನಂಗೇ ಟೀ ಅಭ್ಯಾಸ ಇಲ್ಲ… ನಾಳೆಯಿಂದ ಕಾಫೀನೇ ಕೊಡಿ. ಇವತ್ತು ಮೊದಲನೇ ದಿನಾ ಅಲ್ವಾ. ಪರ್ವಾಗಿಲ್ಲ…ʼ ಅಂತಂದು ಏನೋ ಸಹಿಸಿಕೊಂಡು ಕುಡೀತಿದ್ದೀನಿ ಅನ್ನುವ ದಾಟಿಯಲ್ಲಿ ಮಾತನಾಡಿದ್ದನ್ನ ಕಂಡು, ಅಮ್ಮನಿಗೆ ಉರಿದು ಹೋಗಿತ್ತು. ‘ಎಲಾ ಇವಳಾ…ʼ ಅಂತ ಮನಸ್ಸಿನಲ್ಲಿ ಅಂದುಕೊಂಡದ್ದು ಅಲ್ಲೇ ಇದ್ದ ನನಗೆ, ಅವರ ಮುಖ ನೋಡಿಯೇ ಅನ್ನಿಸಿತ್ತು. ಇನ್ನೊಂದು ದಿನ, ಬೆಳಗ್ಗೆ ಮಾಡಿದ್ದ ಉಪ್ಪಿಟ್ಟು ಕೊಟ್ಟಾಗಲೂ ಅದೇ ಧಿಮಾಕು.. ʼಅಮ್ಮಾ ನಂಗೆ ಉಪ್ಪಿಟ್ಟು ಮಾಡಿದಾಗ ಕೊಡ್ಬೇಡಿ… ಕಾಂಕ್ರಿಟ್ಟು ಆಗ್ಬರಲ್ಲ ನಂಗೆʼ ಅಂದಾಗಂತೂ ಅವರ ಮಾತು ಧಿಮಾಕಿನದ್ದೇ ಅಂತ ಅನ್ನಿಸಿದರೂ, ಅವರಿಗೆಷ್ಟು ಧೈರ್ಯ ಅಲ್ಲವಾ ಅಂತಂದು ನಾನು ಸೋಜಿಗಪಟ್ಟಿದ್ದೆ. ಆಗಿನಿಂದಲೇ ಈ ಕೆಲಸಕ್ಕೆ ಬರುವ ಹೆಂಗಸರನ್ನು ಗಮನಿಸುವ ರೂಢಿ ನನಗೆ.

ಅನಿಸಿದ್ದನ್ನು ಹೇಳುವಲ್ಲಿ ಯಾವ ಮುಲಾಜೂ ‘ಕೆಲಸʼಕ್ಕೆ ಬರುವ ಹೆಣ್ಣುಮಕ್ಕಳಲ್ಲಿ ಇರುವುದಿಲ್ಲ. ಮನೆಗೆಲಸಕ್ಕೆ ಬರುವ ಹೆಂಗಸರು ಕೆಲಸದ ಮನೆಯವರಿಂದ ಏನಾದರೂ ಉದ್ರಿ ಇಸಿದುಕೊಳ್ಳುವಲ್ಲಿ ಚಾಕಚಕ್ಯತೆ ಹೊಂದಿರುವವರಾದರೆ, ‘ಅವಳು ಬಿಡು. ಬಾರೀ ಚಾಲಾಕಿ. ಮೆತ್ತಗೆ ಮಾತಾಡಿ ಏನು ಬೇಕೋ ಅದ್ನ ಗಳಸ್ತಾಳೆ.ʼ ಅಂತ ಅಂದುಬಿಡುತ್ತಾರೆ. ಅಸಲಿಗೆ ಹೆಚ್ಚು ದುಡಿಯುವವರಲ್ಲಿ ಎಷ್ಟೋ ಜನ ಕೆಲಸ ಮಾಡುವ ಜಾಗಗಳಲ್ಲಿ, ಬದುಕಿನಲ್ಲಿ ಅದೇ ಜಾಣತನದಿಂದಲೇ ಕೆಲಸ ಮಾಡಿ, ಪ್ರಮೋಷನ್ನಿಗೋ, ಮತ್ತೊಂದಕ್ಕೋ ಬಾಸಿಗೆ ಅಮೂಲ್‌ ಬಟರನ್ನೇ ಹಚ್ಚಿ ಕಾರ್ಯಸಿದ್ಧಿಸಿಕೊಳ್ಳುವವರಲ್ಲವೇ! ಇಬ್ಬರೂ ನಮ್ಮ ನಮ್ಮ ಬದುಕನ್ನು ಮಾಡಿಕೊಳ್ಳುವ ವಿಧಾನವೇ ಹೊರತು ಅವರದ್ದೊಂದು, ನಮ್ಮದೊಂದು ಹೇಗಾಗುತ್ತದೆ?

ಮತ್ತೆ ಕೆಲಸಕ್ಕೆ ಬರುವ ಯಾವ ಹೆಂಗಸರನ್ನಾದರೂ ಸರಿಯಾಗಿ ಗಮನಿಸಿ. ಅವರ ಮುಖದಲ್ಲಿ ಪುಕ್ಕಲತನವಾಗಲೀ, ಹಿಂಜರಿಕೆಯಾಗಲೀ, ದೈನ್ಯಭಾವವಾಗಲೀ ಯಾವತ್ತೂ ಕಾಣಿಸುವುದಿಲ್ಲ. ಒಂದರ್ಥದಲ್ಲಿ ಮಾತಲ್ಲಿ, ಕೃತಿಯಲ್ಲಿ ಸ್ಪಷ್ಟತೆಯಿರತ್ತೆ. ವರ್ಕಿಂಗ್‌ ವುಮನ್‌ ಮುಖದಲ್ಲಿ ಕಾಣಿಸುವ ಸ್ಪಷ್ಟತೆ ಅದು. ತಮ್ಮ ತುತ್ತಿನ ಚೀಲದೊಟ್ಟಿಗೆ ಇಡೀ ಸಂಸಾರನ್ನು ದುಡಿದು ತೂಗಿಸುವ ಅವರಿಗೆ ಯಾಕಾದರೂ ಹಿಂಜರಿಕೆಯಿರಬೇಕು? ಬ್ಯಾಂಕು, ಐಟಿಯಲ್ಲಿ ದುಡಿಯುವ ಹೆಣ್ಮಕ್ಕಳಷ್ಟೇ ಆತ್ಮವಿಶ್ವಾಸ ಇವರಿಗೆ. ನನ್ನ ಅನ್ನವನ್ನ ನಾನು ದುಡಿದು ತಿನ್ನುತ್ತೀನಿ… ನಿಂದೇನು? ಅನ್ನೋ ಮನೋಭಾವ ಸರಿಯಾದದ್ದೇ ಅಲ್ಲವೇ.

ಹೋದವರ್ಷ ಲಾಕ್‌ ಡೌನ್‌ ಆರಂಭವಾದಾಗ ಕೆಲವು ಗಂಡುಮಕ್ಕಳು ‘ಈಗ ಎಲ್ಲ ಸಾಸಿವೆ, ಜೀರಿಗೆ ಡಬ್ಬಗಳಿಂದ ಒಂದೊಂದೇ ನೋಟುಗಳು ಹೊರಬರುತ್ತಿವೆ…ʼ ಎಂದು ಹೆಣ್ಣುಮಕ್ಕಳು ತಾವು ಅಡಗಿಸಿಟ್ಟ ದುಡ್ಡು ಕಾಸಿನ ಬಗ್ಗೆ ಹಾಸ್ಯಮಾಡಿ ಸೋಷಿಯಲ್‌ ಮೀಡಿಯಾಗಳಲ್ಲಿ ಬರೆದುಕೊಂಡಿದ್ದರು. ಮತ್ತೆ ಅಂಥದ್ದೇ ಮನೋಭಾವದ ಮಹಾಶಯರುಗಳು ಅದನ್ನ ಊರಿಗೆಲ್ಲ ಹಂಚಿದ್ದರು! ಅರೇ ಸ್ವಾಮಿ, ಹಾಗವರು ಇಷ್ಟಿಟ್ಟು ಅಂತ ಕೂಡಿಟ್ಟ ಹಣವೇ ಅಲ್ವ ಇಂಥಾ ಆಪತ್ಕಾಲದಲ್ಲಿ ಅದು ಸಿಕ್ಕು, ನಿಮ್ಮ ಕುಟುಂಬಕ್ಕೆ ಆಗುತ್ತಿರುವುದು?

ವಾರದ ಹಿಂದೆ ಸ್ನೇಹಿತೆಯೊಟ್ಟಿಗೆ ಫೋನಿನಲ್ಲಿ ಮಾತನಾಡುವಾಗ ಜಾತಿ-ಸಮಾನತೆ ಕುರಿತು ಏನೋ ಮಾತು ಬಂತು. ಆಗ ಅವರು ಕೇಳಿದರು… ‘ಹೌದು ಸಮಾನತೆ.. ಮಣ್ಣು ಮಸಿ ಅಂತೆಲ್ಲ ಮಾತನಾಡೋ ಜನ ಮನೆ ಕೆಲಸದವರಿಗೆ ಡೈನಿಂಗ್‌ ಟೇಬಲ್ಲಿನ ಮೇಲೆ ಕೂರಿಸಿ ಊಟ ಕೊಡ್ತಾರಾ?ʼ ಅಂತ.. ಹೌದಲ್ಲ ಅಂತ ಅನ್ನಿಸಿತು ನನಗೆ. ಅಂಥವರೂ ಮನೆಯ ಕೆಲಸದವರನ್ನು ತಮ್ಮಂತೆಯೇ ಸಮಾನವಾಗಿ ನೋಡುತ್ತಾರ? ಮನೆಯ, ಮಕ್ಕಳ ವಿಚಾರದಲ್ಲಿ ಹೆಂಡತಿಯನ್ನೂ ಕೇಳಿಯೇ ನಿರ್ಧರಿಸುತ್ತಾರ? ಅಂತೆಲ್ಲ ಅನ್ನಿಸಲು ಶುರುವಾಯಿತು.

ಹಿಂದೆಲ್ಲ, ಬೇರೇನೂ ಕೆಲಸವಿಲ್ಲದ ಜನ, ಮನೆಮಂದಿಯೆಲ್ಲ ಒಬ್ಬೊಬ್ಬರ ಮನೆಯಲ್ಲಿ ಕೆಲಸಕ್ಕೆ ಇದ್ದುಬಿಡುತ್ತಿದ್ದರು. ಆಗೆಲ್ಲ ಅವರಿಗೆ ‘ಗಂಗಾಳʼ ಪಗಾರವೇ.. ಕೈಗೆ ಕಾಸು ಸಿಗುತ್ತಿದ್ದದ್ದು ಕಡಿಮೆಯೇ. ಕೆಲಸ ಮಾಡುವವರಿಗೂ ಲೋಕಜ್ಞಾನವಿಲ್ಲದೇ, ತಮ್ಮ ತಮ್ಮ ಮನೆಮಂದಿಯ ಹೊಟ್ಟೆಬಟ್ಟೆಯನ್ನು ನೋಡಿಕೊಂಡು ತಮ್ಮ ‘ಧಣಿʼಗಳು ಹೇಳಿದಂತೆ ಕೇಳುತ್ತಾ ಇದ್ದುಬಿಡುತ್ತಿದ್ದರು. ಹಾಗಾಗಿ ಎಲ್ಲ ರೀತಿಯ ಶೋಷಣೆಗೆ ಒಳಗಾಗುತ್ತಿದ್ದರು. ಅಂದಿದ್ದನ್ನೆಲ್ಲ ಅನ್ನಿಸಿಕೊಂಡು ದುಃಖ ನುಂಗಿಕೊಳ್ಳುತ್ತಿದ್ದರು. ಆದರೆ ಈಗ ಕಾಲ ವಿಪರೀತ ಬದಲಾಗಿಹೋಗಿದೆ. ದುಡಿಯುವ ಜನರ ಹಿಂದೆ ಮನೆಗೆಲಸದ ಜನ ಬೇಕೇಬೇಕು. ಅಷ್ಟೇ ಏಕೆ, ಈಗ ಕೆಲಸಕ್ಕೆ ಹೋಗುವ ಅಮ್ಮಂದಿರ ಮಕ್ಕಳನ್ನು ನೋಡಿಕೊಳ್ಳಲೂ ಜನ ಬೇಕು. ಹಾಗಾಗಿ ಮಾತು ಆಚೀಚೆಯಾದರೆ, ಅವರದ್ದೇ ಕೆಲಸ ಕೆಡುವ ಭೀತಿ. ಹಾಗಾಗಿಯೇ, ಅವರೂ ಮರ್ಯಾದೆಯಿಂದ ಬದುಕುವಂತಾಗಿದೆ.