”ಕಾಡು ಬಿಟ್ಟು ಬಂದ ಹಕ್ಕಿಗಳು ರಸ್ತೆಯಲ್ಲಿ ಬಿದ್ದ ಕಾಳನ್ನು ಕಾಣುವ ಬಗೆ, ಊರು ಬಿಟ್ಟು ಬಂದವರು ಪಟ್ಟಣದ ಥಳುಕಿಗೆ ರೋಸಿ ನಲುಗಿ ಹೋಗುವ ಕಥೆ, ಮಾಡಿದ ಸಾಲ ತೀರಿಸಲು ಬಂದು ಒಗ್ಗದ ಕೆಲಸಗಳನ್ನು ಮಾಡುತ್ತಲೇ ಅರ್ಧ ವಯಸ್ಸಿಗೆ ಹಣ್ಣಾಗಿ, ಇತ್ತ ಮಕ್ಕಳು, ಅತ್ತ ಊರಲ್ಲಿ ಗಟ್ಟಿಮುಟ್ಟಾಗಿ ಉಳಿದ ತಾಯ್ತಂದೆಯರ ನಡುವೆ ನಲುಗುವ ಕಾರ್ಮಿಕ ಬಂಧುಗಳು. ಹೀ…ಗೆ ಏಸೊಂದು ಜೀವಗಳು, ನಿಗೂಢ ಅರ್ಥ ಹೊತ್ತ ಕತ್ತಲೆಯನ್ನೇ ಮರೆತ ಈ ಥಳುಕಿನ ಬೆಳಕಿನ ಪಟ್ಟಣಗಳಲ್ಲಿ ನೋಯುತ್ತವೆ”
ಸುಜಾತಾ ಎಚ್.ಆರ್. ಬರೆಯುವ ತಿರುಗಾಟ ಕಥಾನಕದ ಒಂಬತ್ತನೆಯ ಕಂತು.

 

ಬೆಳಗಾವಿಯಲ್ಲಿ ಮುಂಜಾನೆಯ ಪ್ರಯಾಣ. ದಟ್ಟ ಮಂಜು. ಬಿದ್ದ ಕಾವಳದ ನಡುವೆ ಸೇತುವೆ ಮೇಲೆ ಕಾರು ತೂರಿ ಸಾಗುತಿತ್ತು. ಕಾರಿಗೂ ತಾಯ ಸೆರಗೊಳಗೆ ತೂರಿಕೊಳ್ಳುವ ಸಂಭ್ರಮ… ಇದ್ದಕ್ಕಿದ್ದಂತೆ ಕಪ್ಪು ಟಾರು ರಸ್ತೆಯೆ ಮಿಂದು ಮಡಿಯುಟ್ಟು ನೀರ ಹರಿವಿಂದ ಎದ್ದು ಹಾರುತ್ತಾ ಹೋಗುವ ಬೆಳ್ಳಕ್ಕಿಗಳಾದವು. ಅವು ದೂರದಲ್ಲಿ ಬಾನಿನಲ್ಲಿ ತೂರಿ ಹೋಗುವ ಸಾಲಾಗಿ, ಚಿಕ್ಕಿಯಿಡುತಾ ಬಾನಲ್ಲಿ ಮರೆಯಾದವು. ಚಣದ ಹಿಂದೆ ಬಾನೊಡಲಿಂದ ಅವು ಇಳಿದು ರಸ್ತೆ ಮೇಲೆ ಗಸ್ತು ಹಾಕಿದ್ದು, ಅವುಗಳ ರೆಕ್ಕೆಗಳು ಅಷ್ಟಗಲ ಅರಳಿದ್ದು, ಭೂಮಿ ತೂಕವನ್ನು ಹೊತ್ತುಕೊಂಡು ಬಿಳಿ ಬಿಳಿ ವಿಮಾನಗಳಂತೆ ಹಾರಿ ಹೋದದ್ದು, ಆ ಕಣ್ಣೋಟ ಕನಸಂತೆ ನನ್ನಲ್ಲಿ ಉಳಿದು ಹೋಯ್ತು. ಅವು ಕಣ್ಮರೆಯಾದಾಗ ರಸ್ತೆಯ ಮೇಲೆ ಕಂಡಿದ್ದು, ಸರಕು ಸಾಗಣೆಯಿಂದ ರಸ್ತೆಯಲ್ಲಿ ತುಳುಕಿ ಚೆಲ್ಲಿದ ಕಾಳು. ಅದು ರಸ್ತೆಯುದ್ದಕ್ಕೂ ಹರವಿ ಹೋಗಿತ್ತು.

ಹಾಸನದ ಒಂದು ರಸ್ತೆ. ಪಕ್ಕದಲ್ಲೇ ಕಸದ ರಾಶಿ. ಅದರೊಳಗೆ ಬಿಳಿ ಬಿಳಿ ಕೊಕ್ಕರೆಗಳ ಸಾಲು. ಒಂದೀಟು ರೋಸಾಗದ ಹಾಗೆ ಕೆಸರುಗದ್ದೆಯಲ್ಲಿ ತಪಸ್ಸಿಗೆ ಒಂಟಿ ಕಾಲ ಮೇಲೆ ನಿಲ್ಲುವ ಈ ತಪಸ್ವಿಗಳು ಹರಿದಾಡುವ ಮೀನ ಚಲನೆಯನ್ನ ವಚ್ಚಗಣ್ಣಲ್ಲಿ ಕಾಣುತ್ತಾ, ಒಳೊಗೊಳಗೆ ಗಾಳಹಾಕುತ್ತಾ, ಸಿಕ್ಕೊ ಹುಳಹುಪ್ಪಟೆಯ ಪಟಕ್ಕನೆ ಬಾಯಿಗೆ ಹಾಕೊಳ್ಳುತ್ತಾ, ಹೊಟ್ಟೆ ಹೊರಿಯುತ್ತಾ, ಸಂಜೆ ಮುಂದೆ ಹಸಿರು ಹಾಸಿದ ಗದ್ದೆಯಿಂದೆದ್ದು ಆಕಾಶ ಹಾಸಿ ಹರವಿದ ಬಣ್ಣದ ಸೆರಗಲ್ಲಿ ರಂಗೋಲಿ ಎಳೆ ಬಿಡಿಸುತ್ತಾ, ಹರಿಯುತ್ತಾ, ತನ್ನ ಗೂಡನ್ನು ಸೇರಿಕೊಳ್ಳುವ ಆ ಬದುಕಿನ ಚಲನೆಯ ನೋಟ ಎಂದೆಂದಿಗೂ ಕಣ್ಣಿಗೆ ಆಕರ್ಷಕ.

ಕಾವ್ಯದ ಸಾಲುಗಳನ್ನು ದಿನನಿತ್ಯ ಬರೆದು ಬರೆದು ಅರಳಿಸುತ್ತಾ- ಅಳಿಸುತ್ತಾ, ದೃಶ್ಯ ಕಾವ್ಯವನ್ನು ಕಟ್ಟಿಕೊಡುತ್ತಾ, ಅವು ಮನಸ್ಸಿಗೆ ಮುದವೇರಿಸುತ್ತಾ, ಕಣ್ಣಿಗೆ ಮತ್ತೇರಿಸುತ್ತಾ, ಬೆರಗುಗೊಳಿಸುತ್ತಾ ಸಾಗುವ ಅವುಗಳ ನೋಟ ಅಪೂರ್ವ. ನೋಡುವ ದಿಟ್ಟಿಗೆ ಇಂಥಾ ಸ್ಪೂರ್ತಿಯ ಸೆಲೆಯಾಗಿದ್ದ ಜೀವಿಗಳು ಇಂದು ಆ ಕಸದ ರಾಶಿಯಲ್ಲಿ ನಿಂತು ಗಬಗಬನೆ ಎಂದೂ ಕಾಣದಂತೆ ಒಂದೇ ಉಸುರಿಗೆ ಬರಗೆಟ್ಟ ಹೊಟ್ಟೆಹಾಳರಂತೆ ಸಿಕ್ಕುಸಿಕ್ಕಿದ್ದನ್ನೆಲ್ಲಾ ಮೇಯುತಿದ್ದವು.


ಅದೇನೆಂದು ಗಮನಿಸಿದರೆ ಕಟುಕನ ಕೋಳಿ ಅಂಗಡಿಯಿಂದ ಹೊರ ತಂದು ಹಾಕಿದ ಕಳ್ಳುಪಚ್ಚಿಯಾಗಿತ್ತು. ಆ ತಿಪ್ಪೆ ರಾಶಿಯನ್ನು ಕೆದಕಲೆಂದೆ ಭೂಮಿಯಲ್ಲಿ ಹುಟ್ಟುವ ಬಣ್ಣಬಣ್ಣದ ಗರಿಗಳನ್ನು ಹೊದ್ದು ಚಲಿಸುವ ಕೋಳಿಗಳು, ಇಂದು ಗೂಬೆಗಳಂತೆ ಇಕ್ಕಟ್ಟಿನ ಗೂಡುಗಳಲ್ಲಿ, ದುರಾಸೆಯ ಮುಕ್ಕಣ್ಣರ ಆಸೆಗೆ ಬಲಿಯಾಗಿ, ಈ ಹುಲುಮಾನವ ಒದಗಿಸಿದ ನೀರುಮೇವನ್ನು ಮೇದು, ಕೂಗುವುದನ್ನು ಮರೆತು, ಮೈಯಲ್ಲಿ ಒದ್ದುಕೊಂಡ ಮೈನೆಣಕ್ಕೆ ತುಪ್ರುಸಾಡುತ್ತಾ, ಯಾವಾಗಲೂ ಬಸುರಿ ಹೆಜ್ಜೆ ಹಾಕುತ್ತಿರುತ್ತವೆ. ಬೇಲಿ ಬಂಕ ಏನೆಂದು ಅರಿಯದೆ ಕಾಡುಮೇಡು ಮೇಯುತ್ತಾ, ಪರಪಂಚಕ್ಕೆ ಬೆಳಕರಿಸುತಿದ್ದ ಈ ಕೋಳಿ ಸಂತತಿ ಎಂಬುದು, ಇಂದು, ಇರುಳು-ಬೆಳಕನ್ನೇ ಕಾಣದೆ… ವಿದ್ಯುತ್ ವೋಲ್ಟೇಜಿನ ಬೆಳಕಿನಲ್ಲಿ ಹಣ್ಣಹಣ್ಣಾಗಿ, ಬಗೆಬಗೆಯ ನಕಲಿ ಬಣ್ಣ ಹೊತ್ತು, ಪ್ಯಾಟೆಗಳಲ್ಲಿ ಪಿತಿಗುಡುವ ಮನುಷ್ಯ ಸಂತತಿಯ ತೀರದ ಆಸೆಗೆ ಬಲಿಯಾಗಿ, ಬಕಾಸುರನ ಹೊಟ್ಟೆಗೆ ಖಾದ್ಯಗಳಾಗಿ, ಜಗತ್ತಿನಾದ್ಯಂತ ಲಕ್ಷಾಂತರ ರೂಪಾಯಿಗಳ ವಹಿವಾಟನ್ನು ನಡೆಸುತ್ತವೆ. ಏನು ತಿಂದೆವು? ಎಲ್ಲಿದ್ದೆವು?

ಬೆಳಕರಿದಿದ್ದು ತಿಳಿನಾರದ, ಕತ್ತಲಿಗೆ ತೂಕಡಿಸುವುದನ್ನೂ ಮರೆತ ಇಂಥ, ಅಜ್ಞಾನದ ಕೋಳಿಯ ಎಸೆದ ಒಳಭಂಡಾರವನ್ನು…. ಸಮಯಕ್ಕೆ ಸರಿಯಾಗಿ ಗೂಡು ಬಿಟ್ಟು ಯಾವ ದಿಕ್ಕಿಗಾದರೂ ಚಲಿಸಿ, ತಿರುಗಿ ಗೂಡಿನ ಜಾಡು ಹಿಡಿದು ಬರುವ ಈ ದಿಕ್ಸೂಚಿಗಳು ಆಗಸದಿಂದ ಇಳಿದು… ನೀರ ಹರಿವಲ್ಲಿ ನಿಂತು ದುಡಿಯದೆ ಭಿಕ್ಷುಕರಂತೆ ಕಸದ ರಾಶಿಯಲ್ಲಿ ನಿಂತು ಸಿಕ್ಕಿದ್ದನ್ನೆಲ್ಲಾ ದಕ್ಕಿಸಿಕೊಳ್ಳುತ್ತಾ ತಿನ್ನುತ್ತಿದ್ದವು. ಅವುಗಳ ಮಡಿಮಡಿಯಾದ ರೆಕ್ಕೆಗಳಿಗೆ ಈ ನೆಲದ ಗಲೀಜಿನ ಅಂಟಿನ ನಂಟನ್ನು ಮೆತ್ತಿಸಿಕೊಂಡಿದ್ದವು. ಅಂದು ಮಹಾದೇವಿಯಕ್ಕಳ ಜಗದ ಕೇಡಿನ ಹಾಡು ಸಟ್ಟನೆ ನೆನಪಾಗಿತ್ತು. ಒಳಗೆ ಕರುಳು ಸುಟ್ಟಂತ ಅನುಭವವಾಗಿತ್ತು.

ಸಕಲೇಶಪುರದ ಮಲೆನಾಡಿನ ಒಂದು ಮೂಲೆ. ಹಿಂದೆ ಇದು ಕಗ್ಗತ್ತಲ ಕಾಡಾಗಿತ್ತು. ಆಗುಂಬೆಗೆ ಸರಿಸಾಟಿಯಾಗಿ ಮಳೆ ಹುಯ್ಯುವ ಜಾಗ. ಎತ್ತರದಲ್ಲಿ ಹೋಗಿ ನಿಂತರೆ ಕಾಡುಕಣಿವೆ ಹಸಿರನ್ನು ಹೊತ್ಕಂಡುಬಂದು, ಕಣ್ಣನ್ನೇ ಬಸಿರು ಮಾಡುವಂಥ ಹಸಿರು. ಹೊಳೆ ಝರಿಗಳು ಇಲ್ಲಿ ಇಟ್ಟಾಡುತ್ತಾ ಬಿಸಿಲಲ್ಲಿ ಹೊಳೆಯುತ್ತಾ ತಮಗಾಗಿಯೇ ಹಾಡೊಂದನ್ನು ಹಾಡುತ್ತಿರುತ್ತವೆ. ಆದರೆ ಮೊನ್ನೆ ಆ ಜಾಗಕ್ಕೆ ಹೋದಾಗ ಅಲ್ಲಿ ಕಸದ ರಾಶಿಯನ್ನು ತಂದು ಯಾರೋ ಸುರುವಿ ಹೋಗಿದ್ದರು. ಯಾವಾಗಲೂ ಈ ಕಾಡು ವರ್ಷಪೂರ್ತಿ ಮಾಸದ ಹಸಿರಿನಿಂದ ಕಂಗೊಳಿಸುತ್ತಾ, ಕೆರೆಯ ನೀರಲ್ಲಿ ಬಣ್ಣಬಣ್ಣದ ತಾಜಾ ಹೂಗಳನ್ನು ಅರಳಿಸುತ್ತಾ, ನದಿ ಹೊಳೆ ತೊರೆಯಲ್ಲಿ ಮೀನ ಪುಳಕದ ಹಾಡೊಂದನ್ನು ಗುನುಗುತ್ತಾ, ಕುಡಿವ ನೀರಲ್ಲಿ ಹೊರಹೊಮ್ಮಿ ಮರದ ಮೇಲಿನ ಹಕ್ಕಿಯ ಕೊರಳಾಗುತ್ತಾ, ತನ್ನ ಪಾಡಿಗೆ ತಾನೇ ಬೆಟ್ಟಗುಡ್ಡಗಳನ್ನು ಲಾಲಿಸಿ ಧ್ಯಾನಿಸುತ್ತಾ, ಮಡಿಲಲ್ಲಿ ಚರಾಚರ ಜೀವಿಗಳಿಗೂ ಎಡೆಮಾಡಿ ಉಸಿರಿಡುವಂಥ ಜಾಗ.

ನಿಂತರೆ ಜೀವನ ಪಾವನವಾಗುತಿದ್ದಂಥ ಇಂಥ ಜಾಗದಲ್ಲಿ ಮೊನ್ನೆ ಕಸದ ಗುಡ್ಡೆ ಕಂಡಾಗಿನಿಂದ ಇಲ್ಲಿಯವರೆಗೂ ಆ ಕಸದ ರಾಶಿ ಕಣ್ಣಲ್ಲೇ ಮನೆ ಹೂಡಿದೆ. ಜಗದ ಕೇಡಿನ ಸಂಚೊಂದು ಕನಸಲ್ಲಿ ಕಂಡಂತೆ ಉಳಿದುಹೋಗಿದೆ. ತಿರುತಿರುಗಿ ನೋಡಿಕೊಂಡು ಬಂದದ್ದು ನೆನಪಾಗುತ್ತದೆ. ನೆನಪು ಭಾರವಾಗುತ್ತದೆ. ಹಿಂದೆ ಎಂದೂ ಆ ಜಾಗದಲ್ಲಿ ಕಾಣದ, ಭೂತಾಯ ಒಡಲಲ್ಲಿ ಕರಗದ ಈ ಬಂದಳಿಕೆ ಒಮ್ಮೆ ಬಂದು ಬೇರೂರಿತೆಂದರೆ, ಇಲ್ಲಿಯ ಹೊಳೆವ ನೀರು ಬೆಂಗಳೂರು ನಗರದ ವಾಸನೆಯ ಹೊಳೆತೊರೆಗಳ ಕಪ್ಪು ಜಗತ್ತನ್ನು ಒಳ ಬಿಟ್ಟುಕೊಂಡು, ಇಡೀ ಬೆಟ್ಟಗುಡ್ಡಗಳು, ಹರಡಿದ ಈ ಬಂದಳಿಕೆಯ ದಾಳಿಗೆ ಕರಗಿ ಹೋಗುವುದರಲ್ಲಿ ಸಂದೇಹವಿಲ್ಲ.

ಇಂಥ ಕಾಡಿನ ಟಾರು ರಸ್ತೆಯುದ್ದಕ್ಕೂ ಹೊರಗಿನಿಂದ ಬಂದ ಹಣವಂತರು ಆ ಹಸಿರಲ್ಲಿ ಹೋಂಸ್ಟೇಗಳ ತಯ್ಯಾರಿ ನಡೆಸುತ್ತಿದ್ದರು. ಅದಕ್ಕಾಗಿ ಕಾಡನ್ನು ಹುರಿಗೊಳಿಸುತ್ತಿದ್ದರು. ಅಲ್ಲಿಯ ನಮ್ಮ ಬಂಧುಗಳು ಒಂದು ವಿಷಾದದ ನಗೆ ನಕ್ಕರು. “ಎಲ್ಲಾ ಹೊಡೆದುರುಳಿಸಿ ಪಾರ್ಕ್ ಮಾಡ್ತಿದ್ದಾನೆ ಯಾರೋ ಹುಚ್ಚ.” ಅವರ ಮಾತು ಹಾಗೂ ಆ ಉಸಿರು, ಮಲೆನಾಡಿಗೆ ಹರಿದು ಬಂದ ಕೇಡಿನ ಶಂಕೆಯ ಉಸಿರಾಗಿತ್ತು. ಈ ಟಾರು ರಸ್ತೆ ಅನ್ನುವುದು ಜಗತ್ತಿನ ಮೂಲೆಮೂಲೆಗೂ ಹಬ್ಬಿ, ಕರೆಂಟಿನ ಕರುಳು ಅದರುದ್ದಕ್ಕೂ ಹರಿದು, ಕಾಡಿನ ಹಕ್ಕಿಗಳೆಲ್ಲ ಇಂದು ಬಂದು ತಂತಿಯೇರಿ ಕುಳಿತಿವೆ.

ತಿನ್ನುವ ಒಂದು ಗುಕ್ಕಿಗಾಗಿ ಪಟ್ಟಣದ ಹಾದಿಯಲ್ಲಿ ಹಕ್ಕಿಯ ಮೊಟ್ಟೆಯೊಡೆದು ಆಮ್ಲೆಟ್ ಹಾಕುವ ಕೈಗಳು ಮೀನು ಹಿಡಿಯುವುದನ್ನು, ಗೆಡ್ಡೆಗೆಣಸು ಅಗೆಯುವುದನ್ನು ಮರೆತು, ಬಂದವರನ್ನು ಖುಶಿಪಡಿಸಲು ತೋಳೇರಿಸಿ ನಿಂತಿವೆ. ರಸ್ತೆ ಮತ್ತು ಹಣ ಎರಡೂ… ನೆಮ್ಮದಿಯೇ ತಾನಾಗಿರುವ ಮುಗ್ಧ ಪರಿಸರಕ್ಕೆ ಆತಂಕ ಹುಟ್ಟಿಸುವ ಕೇಡುಗಳು. ಅಕ್ಷರಗಳ ಉರುಳು, ಜಾಗತೀಕರಣದ ಸಂಕಟಗಳು, ಮನುಷ್ಯನನ್ನು ಪ್ರಗತಿಪಥದ ಹಾದಿಯಲ್ಲಿ ನಡೆಸುತ್ತಲೇ, ಎಡವಿ ಕೆಡುವುತ್ತಿವೆ ಎಂಬುದು ಸುಳ್ಳಲ್ಲ. ಪ್ರಗತಿ ಎಂದರೆ ಮನುಷ್ಯನ ಹೊಟ್ಟೆ ತುಂಬಿಸುವುದು ಮಾತ್ರವೇ? ಬುದ್ಧಿವಂತಿಕೆಯ ಬುನಾದಿ ಮಾತ್ರವೇ? ಅಥವಾ ಶೇಖರಣೆಯೇ?

ಕಾಡು ಬಿಟ್ಟು ಬಂದ ಹಕ್ಕಿಗಳು ರಸ್ತೆಯಲ್ಲಿ ಬಿದ್ದ ಕಾಳನ್ನು ಕಾಣುವ ಬಗೆ, ಊರು ಬಿಟ್ಟು ಬಂದವರು ಪಟ್ಟಣದ ಥಳಿಕಿಗೆ ರೋಸಿ ನಲುಗಿ ಹೋಗುವ ಕಥೆ, ಮಾಡಿದ ಸಾಲ ತೀರಿಸಲು ಬಂದು ಒಗ್ಗದ ಕೆಲಸಗಳನ್ನು ಮಾಡುತ್ತಲೇ ಅರ್ಧ ವಯಸ್ಸಿಗೆ ಹಣ್ಣಾಗಿ, ಇತ್ತ ಮಕ್ಕಳು, ಅತ್ತ ಊರಲ್ಲಿ ಗಟ್ಟಿಮುಟ್ಟಾಗಿ ಉಳಿದ ತಾಯ್ತಂದೆಯರ ನಡುವೆ ನಲುಗುವ ಕಾರ್ಮಿಕ ಬಂಧುಗಳು. ಹೀ…ಗೆ ಏಸೊಂದು ಜೀವಗಳು, ನಿಗೂಢ ಅರ್ಥ ಹೊತ್ತ ಕತ್ತಲೆಯನ್ನೇ ಮರೆತ ಈ ಥಳುಕಿನ ಬೆಳಕಿನ ಪಟ್ಟಣಗಳಲ್ಲಿ ನೋಯುತ್ತವೆ. ಯಾವುದು ನಾಗರೀಕತೆ? ಅದು ಉಳಿಸಿಹೋಗುವ ಮನೆ ಮನೆಯ ವ್ಯಥೆ… “ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ” ಬಸವಣ್ಣನವರ ವಚನವೇ?….

ತಾಳಿತು ಪರಿಹಾರ

ಗೋವಾದ ದೂಧ್ ಸಾಗರ್ ಎಂಬ ಜಲಪಾತ. ಮುನ್ನೂರು ಅಡಿಗೂ ಮೇಲಿಂದ ಮೂರು ಹಂತದಲ್ಲಿ ಅಪ್ಸರೆಯಂತೆ ನಿರಿಗೆಗಳನ್ನು ಗಾಳಿಯಲ್ಲಿ ಹರಡುತ್ತಾ ದುಮ್ಮಿಕ್ಕುತ್ತಾ, ಕಲ್ಲುಬಂಡೆಗಳನ್ನು ತನ್ನ ನಿರಂತರ ಹರಿವ ಪ್ರೀತಿಯಿಂದ ಸಾಣೆ ಹಿಡಿಯುತ್ತಾ, ಇದನ್ನು ಎತ್ತಿ ಚಿಮ್ಮಿಸುವ ಆ ಗುಂಡುಕಲ್ಲುಗಳಿಗೆ ತಮ್ಮ ನಾದದಲ್ಲಿ ತಾವೇ ಮುಳುಗುವಂತೆ ಅವುಗಳೊಂದಿಗೆ ಕೊರಳುಬ್ಬಿಸಿ ಹಾಡುತ್ತಾ, ಮುಂದೆ ಕಾದಿರುವವರ ಬಯಕೆಗೆ ಬೀಗುತ್ತಾ ಸಾಗುತಿತ್ತು. ಅಷ್ಟೆತ್ತರದ ಜಲಪಾತ, ಅದರ ರಮ್ಯತೆಯಲ್ಲಿ ಕೋತಿ ಹಿಂಡಿನಂತೆ ಅಲ್ಲಿಗೆ ಬಂದ ನಮ್ಮಂಥ ಪ್ಯಾಟೆ ಮಂಗಗಳು ಕುಂತಿದ್ದೆವು.

ಅಗಾಧ ಹರಿವಿನ ನೀರು ನೋಡಿದ್ದೆ ಯುವ ಜೋಡಿಗಳು ಜಲಕ್ರೀಡೆ ಆಡಿದರು. ಮಕ್ಕಳ ತಾಯ್ತಂದೆಗಳು ಹೆಗಲ ಮೇಲೆ ಆ ಚಿಕ್ಕ ಮೂರ್ತಿಗಳನ್ನು ದೇವರನ್ನು ಮೀಸುವಂತೆ ಜೋಕೆಲಿ ನೀರ ಮುಳುಗಿಸುತಿದ್ದರು. ಪಡ್ಡೆ ಹುಡುಗರು ಜಲಪಾತದ ಅಂಡಿಗೆ ಹೋಗಿ ಅದರ ಕಾಲಿನ ವದೆ ತಿಂದು ಅಲುಗಾಡುತಿದ್ದರು. ಗಟ್ಟಿಯಾಗಿ ಮತ್ತೆ ನಿಂತು ಜಲಪಾದದ ತಿರುಗೇಟಿಗೆ ತಲೆ ಕೊಡುವ ಅವರು ಹರಯದ ಹುಚ್ಚರಾಗಿದ್ದರು. ಅಗಾಧ ಮೌನದಲ್ಲಿ ಹರಡಿದ ಆ ತಾಯ ಸಿರಿಮೈಯ ಸ್ಪರ್ಶದಲ್ಲಿ ನಲಿಯದೆ ಇರುವುದೇ ಈ ಜನ್ಮ.

ಹೀಗಿರುವಾಗ, ಪಕ್ಕದಲ್ಲಿ ಅಷ್ಟೆ ಎತ್ತರದ ಒಂದು ಸಣ್ಣ ನೀರಿನ ಹರಿವಲ್ಲಿ ನೀರು ಜಿನುಗುವುದು ಕಾಣಿಸುತಿತ್ತು. ಮಳೆಗಾಲದಲ್ಲಿ ಅಲ್ಲೂ ಒಂದು ಅಬ್ಬಿ ಹರಿಯುವ ಕಲೆ ಆ ಬೃಹತ್ ಬಂಡೆಯ ಮೇಲಿತ್ತು. ಈಗ ಅದು ಸಣ್ಣಗೆ ಜಿನುಗಿಸುವ ನೀರು ಸಂಜೆಬಿಸಿಲಿಗೆ ಥಣಗುಡುತಿತ್ತು. ಅಲ್ಲೇನೋ ಅಷ್ಟೆತ್ತರದಲ್ಲಿ ಸುಣ್ಣದಲ್ಲಿ ಚಿತ್ರ ಬರೆದವರ್ಯಾರು? ಅಂತ ಕಣ್ಣಿಟ್ಟು ನೋಡಿದೆ. ಅದು ಜೀವ ತಳೆದು, ಕಾಯುತ್ತ ಕೂತ ಬೆಳ್ಳಕ್ಕಿಯಾಗಿತ್ತು. ಅದು ನೀರಿನ ದಾವಕ್ಕಷ್ಟೇ ಅಲ್ಲಿ ಕಾದು ಕೂತಂತೆ ಕಾಣಿಸಲಿಲ್ಲ. ಆ ನೀರ ಸಣ್ಣ ಹರಿವಲ್ಲಿ ಅದಕ್ಕೆ ಬೇಕಾದ್ದೇನೋ ಹೊತ್ತು ತರುವ ಆ ತಾಯ ಚಲನೆಯನ್ನೇ ನೋಡುತ್ತಾ ಅದು ಕಾದು ಕೂತಿತ್ತು. ತಾಯಿ ಕೊಡುವ ತುತ್ತಿಗೆ ಬಾಯಿಬಿಡುವ ಮಗುವಂತೆ ಅದರ ಕತ್ತಿನ ಚಲನೆಯಲ್ಲಿ ನೀರೊಳಗೆ ಇಟ್ಟ ಅದರ ಧ್ಯಾನ ಕಾಣುತಿತ್ತು. ಚೆಕ್ ಔಟ್ ಆದ ವಿಮಾನ ಪ್ರಯಾಣಿಕರು ಹೆಬ್ಬಾವಂತೆ ಸುತ್ತಿ ಸುತ್ತಿ ಹರಿಯುವ ಕನ್ವೇಯರ್ ಮೇಲೆ ಬರುವ ತಮ್ಮ ಲಗ್ಗೇಜ್ ಗಂಟಿಗೆ ಕಾದು, ಬಂದೊಡನೆ ಪಟಕ್ಕನೆ ಎತ್ತಿಕೊಂಡು ಹೊರಡುವಂತೆ, ಸಿಕ್ಕ ತನ್ನ ತುತ್ತನ್ನು ಪಟಕ್ಕನೆ ತಾಯ ಕೈಯಿಂದ ಕಿತ್ತು ಬಾಯಿಗೆ ಹಾಕಿಕೊಳ್ಳುತ್ತಿತ್ತು. ಇಳಿ ಸಂಜೆಯ ಆ ಬೆರಗಲ್ಲಿ ಕೂತ ಅದರ ತಪಸ್ಸಿಗೆ ನಾನು ಮನಸೋತಿದ್ದೆ. ಎಲ್ಲೆಲ್ಲಿ? ದೇವರು ಅನ್ನವನ್ನು, ಬಾಂಧವ್ಯವನ್ನು ಇಟ್ಟಿದ್ದಾನೋ……

ಆದರೆ ಆ ಕ್ಷಣಕ್ಕೆ ಜಗದ ಕೇಡಿನ ಸಂಚು ಆ ಸಂಜೆಯಲ್ಲಿ ಹುಸಿಯಾಗಿ ಮನಸ್ಸು ಸಮಾಧಾನದ ನೆಲೆಯಾಯಿತು. ದಾರಿಯುದ್ದಕ್ಕೂ ಕಾಡಿನ ಹಕ್ಕಿಯ ಕಲರವ ಮನುಷ್ಯನ ಎಲ್ಲಾ ಸಂಚಿಗೆ ಮೀರಿದ ಲೋಕವೊಂದರ ಪರಿಚಯ ಮಾಡಿಸುತ್ತಾ, ತನ್ನನ್ನು ಬದುಕಿಸಿಕೊಳ್ಳುವ ಕಲೆಯನ್ನು ನಮ್ಮಲ್ಲಿ ಬೇರೂರಿಸುತ್ತಾ ಮುದಗೊಳಿಸಿತು. ಬರುವಾಗ ಬೆಂಗಳೂರ ದಾರಿಯುದ್ದಕ್ಕೂ ರಸ್ತೆಯೇ ಕಣವಾಗಿ ಭತ್ತ, ಜೋಳ, ಕಡ್ಲೆಕಾಯಿಯ ರಾಶಿಯೇ ಸಣ್ಣ ಸಣ್ಣ ದಿಬ್ಬಗಳಾಗಿ ಕೂತಿದ್ದವು. ಚಕ್ಕಡಿಯಲ್ಲಿ ಸಾಗುವ ರೈತಕುಟುಂಬ ” ಇನ್ನೂ ಅನ್ನ ಇಕ್ಕುತ್ತೇವೆ ಹಸಿದ ಹೊಟ್ಟೆಗೆ” ಅನ್ನುತ್ತಾ ಸಾಗಿದಂತೆ ಕಾಣುತಿದ್ದವು. ಮರದ ಮೇಲೆ ಕಾವಲು ಕೂತಿದ್ದ ಹಕ್ಕಿಪಡೇ ಅವರ ಜತೆಗಾರರಂತೆ ಹಾರುತ್ತಾ ಗೂಡು ಸೇರುವಾಗಲೂ ನಾಳಿನ ಕಾಳಿಗೆ ಹೊಲಗದ್ದೆಗಳ ನಂಬಿ ಅದರ ಮೇಲೆ ಹಾರುತಿದ್ದವು.

ಮೊನ್ನೆ ಅಣ್ಣ ಬಂದಾಗ ಹೇಳಿದ ಮಾತು. “ಒಂದು ಕೆರೆ ತೋಡಿಸಿದೆ. ಅರಳಿಮರದ ಗದ್ದೇಲಿ. ಈ ವರ್ಷ ಹಾಕಿರೋ ಗಿಡಗಳನ್ನ ಉಳುಸ್ಕೊಂಡರೆ ಎಂಗೋ ಮುಂದೆ ನೋಡಣ”. ದೊಡ್ಡ ವ್ಯವಸಾಯ ಮಾಡುವ ಅಣ್ಣಂದಿರು ಸಾವಿರಾರು ಗಿಡ ನೆಟ್ಟು ಹಸಿರು ಹಬ್ಬಿಸಿ ತೋಟ ತುಡಿಕೆಗಳನ್ನು ಮಕ್ಕಳಂತೆ ಕಾಪಾಡಿಕೊಂಡ ರೈತ ಮಕ್ಕಳು. ಅವರ ಪ್ರಕಾರ ಋತುಮಾನಗಳನ್ನು ಮೀರಿ ಮಳೆಕಾಲ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ “ಎತ್ತೆತ್ತಲಾಗೋ ಮಳೆ ಹುಯ್ಯುತ್ತೆ, ಯಾವ್ವಾಗಲೋ ಹುಯ್ಯುತ್ತೆ.” ಎಂದು ಅವರೆನ್ನುತ್ತಿರುತ್ತಾರೆ. ಆದರೆ ಅವರ ಜಾಗೃತ ಮನಸೊಂದು ಮಳೆಬೆಳೆಯೊಡನೆ ತಮ್ಮ ಹೋರಾಟ ಮುಂದುವರೆಸುತ್ತಲೇ ಇರೋದನ್ನ ಕಂಡು ಮನಸ್ಸು ತುಂಬಿ ಬರುತ್ತೆ. ನಮ್ಮ ರೈತ ಕುಲದ ಗಾದೆ ಇದು. “ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರ್ತಾನಾ?”

ಬೆಳಕನ್ನೆ ಹೊಸೆಯುತ್ತಿದೆ ಇರುಳು ಕಂತು
ಹಣತೆಯಾಗಿ ಉರಿಯುತ್ತಿದೆ ಮಸೆದು ಮಂತು
ತಮವೇ? ಜ್ಯೋತಿಯೇ ? ನಿಲ್ಲದು ಆ ಹೆಜ್ಜೆ
ಮರೆಯದೆ ಇಡುತ್ತಿವೆ
ಒಂದರ ಹಿಂದ್
ಇನ್ನೊಂದರ ಹೆಜ್ಜೆ