ಮಿಡಲ್ ಬರಹಗಾರರ ಗುಂಪು ಒಂದು ಶುರು ಮಾಡುವ ಐಡಿಯಾ ನಮ್ಮಲ್ಲಿ ಬಿತ್ತಿದರು. ಇದು ನಂತರ ಮಿಡಲ್ ಬದಲಿಗೆ ಹಾಸ್ಯಬರಹಗಾರರ ಸಂಘಟನೆ ಆಗಲಿ ಅಂತ ನಿರ್ಧಾರ ಆಯಿತು. ಹಿಂದೆ ಕೈಗಾರಿಕಾ ರಂಗದ ಸಾಹಿತ್ಯ ವೇದಿಕೆ ಆರಂಭಿಸಿದಾಗ ಶ್ರೀ ಆನಂದರಾಮ ಶಾಸ್ತ್ರಿ ಅವರು ನೀತಿ ನಿಯಮ ರೂಪಿಸಿದ್ದರು ಅಂತ ಹೇಳಿದ್ದೆ. ಇದಕ್ಕೂ ಅವರೇ ಆರಂಭಿಕ ಪತ್ರಗಳು ಸಿದ್ಧ ಮಾಡಿದರು. ಇದಕ್ಕೆ ಬೇಕಾದ ನಮ್ಮ ಮೀಟಿಂಗ್‌ಗಳು ಬೆಂಗಳೂರಿನ ಸಂಗಮ್ ಟಾಕೀಸ್ ಮುಂದೆ ಸೇರಿತು! ಟಾಕೀಸ್ ಮುಂದೆ ಫುಟ್ ಪಾತ್‌ನಲ್ಲಿ ಐದಾರು ಜನ ಸೇರಿ ನಮ್ಮ ಸಂಘಟನೆ ಕುರಿತ ಮಾತುಕತೆ ಆಡಿದೆವು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೫ನೇ ಬರಹ ನಿಮ್ಮ ಓದಿಗೆ
ಕಳೆದ ಎಪಿಸೋಡು ಹೀಗೆ ಮುಗಿದಿತ್ತು ಅಲ್ವಾ ಮೇಡಂ…ಸರ್….
ಈ ಅಭೂತಪೂರ್ವ ಕಾರ್ಯಕ್ರಮ ನಮ್ಮಲ್ಲಿ ಒಂದು ಮೋರಲೇ morale ಬೂಸ್ಟ್ ಮಾಡಿತು. ಎರಡು ಗಂಟೆ ಮೂರು ಗಂಟೆಗಳ ಕಾರ್ಯಕ್ರಮಕ್ಕೆ ಸೀಮಿತವಾಗಿದ್ದ ನಮಗೆ ಇಡೀ ದಿವಸದ ಕಾರ್ಯಕ್ರಮ ನಡೆಸಬಹುದು ಎನ್ನುವ ಆತ್ಮ ವಿಶ್ವಾಸ ಹುಟ್ಟಿತು. ಇಡೀ ಕಾರ್ಯಕ್ರಮಕ್ಕೆ(ಊಟ ತಿಂಡಿಗೂ ಸಹ)ಆಯೋಜಕರು ಸಿಕ್ಕಿದ್ದು ಮುಂದೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡರೆ ಹಮ್ಮು ಬಿಮ್ಮು ಬಿಟ್ಟು ಪ್ರಾಯೋಜಕರ ಬಳಿಗೆ ಹೋಗಬಹುದು ಎನ್ನುವ ಧೈರ್ಯ ಬಂದಿತು. ಒಟ್ಟಿನಲ್ಲಿ ಜನ ಮೆಚ್ಚುವ ಕಾರ್ಯಕ್ರಮ ಹಮ್ಮಿಕೊಂಡರೆ ಯಶಸ್ಸು ಅದಾಗಿ ಅದೇ ಬರುತ್ತೆ ಅನಿಸಿತು. ಜನಕ್ಕೆ ತಮ್ಮ ಝಂಜಾಟಗಳ ನಡುವೆ ಕೊಂಚ ನಗು ಬಂದರೆ ಅಂತಹ ಕಾರ್ಯಕ್ರಮಗಳು ಹುಡುಕಿ ಬರುತ್ತಾರೆ ಎಂದು ಮುಂದೆ ಅರಿವಿಗೆ ಬಂತು.
ಬಹುಶಃ ಈ ಕಾರ್ಯಕ್ರಮದ ಯಶಸ್ಸು ಮುಂದಿನ ಕಾರ್ಯಕ್ರಮಗಳಿಗೆ ಒಂದು ಮಟ್ಟ ಅಂದರೆ ಮಾಪನ ನಿರ್ಮಿಸಿತು ಎಂದು ಹೇಳಬೇಕು. ಮುಂದಿನ ಕಾರ್ಯಕ್ರಮಗಳು ಈ ಮಟ್ಟ ಅಥವಾ ಇದಕ್ಕಿಂತಲೂ ಮಿಗಿಲಾಗಿರಬೇಕು ಎನ್ನುವ ಸ್ಟ್ಯಾಂಡರ್ಡ್ ನಾವೇ ರೂಪಿಸಿಕೊಳ್ಳಬೇಕಾಯಿತು. ಅದರ ಅಂದರೆ ಮುಂದೆ ನಮ್ಮ ಕಾರ್ಯವ್ಯಾಪ್ತಿ ಹೇಗೆ ಹಿಗ್ಗಿತು ಎನ್ನುವ ನೆನಪುಗಳು ನುಗ್ಗಿ ನುಗ್ಗಿ ಬರುತ್ತಿವೆ… ಹೇಗೆ ಅಂದರೆ ಹಿಂದೆ ನಮ್ಮ ಕಾಲದಲ್ಲಿ ಎಸ್ಸೆಎಲ್ಸಿ ಪಿಯುಸಿ ರಿಸಲ್ಟ್ ಬಂದ ಮಾರನೇ ದಿವಸ ಮಾತ್ರ ಹೆಚ್ಚಿನ ಅಂಕ ಪಡೆದವರ ವಿವರ ಬರುತ್ತಿತ್ತು. ಈಗ ನೋಡಿ ಆರೇಳು ತಿಂಗಳಾದರೂ ಹೆಚ್ಚಿನ ಅಂಕ ಪಡೆದವರ ಫೋಟೋಗಳು ಬರ್ತಾನೇ ಇರ್ತದೆ, ಇದೂ ಹಾಗೇನೇಯ ಸರ.
ಮೇಡಂಮೋರೆ, ಸರ ಈ ರಿಸಲ್ಟ್ ಬಂದು ಫೋಟೋಗಳು ಬಂದಹಾಗೇನೇ ಅಂದಿನ ಚಿತ್ರಗಳನ್ನು ಜೋಡಿಸಿಕೊಬೇಕ್ರಿ.. ಅದೆಲ್ಲಾ ಒಂದರ ಪಕ್ಕ ಒಂದು ಮಡಗಿ (ಮಡಗಿ ಅನ್ನುವ ಪದ ಪ್ರಯೋಗ ಮಾಡಬಾರದು ಅಂತ ನನ್ನವ್ವ ಹೇಳ್ತಾ ಇತ್ತು. ಯಾಕೆ ಅಂತ ತಿಳಿಯದು. ಅಮ್ಮ ಈಗಿಲ್ಲ ಸ್ವರ್ಗದಲ್ಲಿ ಅವರೆ. ಅದರಿಂದ ಮಡಗಿ ಪದ ಬೇಡ್ರಿ) ಒಂದರ ಪಕ್ಕ ಒಂದು ಇಟ್ಟು ಜೋಡಿಸಿ ಹೇಳ್ತೇನೆ….
ಈಗ ತಮ್ಮ ಅನುಮತಿಯೊಂದಿಗೆ ಮುಂದಕ್ಕೆ ತೆವಳಲೇ…
ನೆನಪುಗಳು over lap ಆಗುತ್ತಾ ಆಗುತ್ತಾ ಕೆಲವು ತಳದಲ್ಲಿ ಸಿಕ್ಕಿ ಕೊಂಡುಬುಡುತ್ತೆ ಮತ್ತು ಅದರ ಮೇಲೆ ಭಾರ ಹೇಗೆ ಅಮರಿರುತ್ತೆ ಅಂದರೆ ಹೊರೆಯ ಭಾರ ಕಡಿಮೆ ಆದನಂತರವೇ ಬಾಲ ಕೊಂಬು ಆಚೆ ಕಾಣಿಸುತ್ತೆ. ಅದನ್ನು ಹಿಡಿದು ಆಚೆ ಎಳೆದು ತಂದು ಅಂಗಳದಲ್ಲಿ ಹರವಿದಾಗ ಓಹೋ ಇದು ಕಣ್ಣು ತಪ್ಪಿಸಿತು ಅಂತ ಗೊತ್ತಾಗುತ್ತೆ! ಈಗ ನನ್ನದು ಅದೇ ಪರಿಸ್ಥಿತಿ. ಒಂದು ಸಂಗತಿ ತಳದಲ್ಲಿ ಸಿಕ್ಕಿತ್ತು. ಈಗ ಅದರ ಗೊರಸು ನೋಡಿದೆ. ಹಾಗೇ ಇಗ್ನೋರಿಸಿದರೆ ಸತ್ಯಕ್ಕೆ ಅಪಚಾರ ಮಾಡಿದ ಹಾಗೇ ತಾನೇ? ಹೇಳಿಕೇಳಿ ನಾವುಗಳು ಪುಣ್ಯಕೋಟಿ ನಾಡಿನಲ್ಲಿ ಹುಟ್ಟಿ ಇಲ್ಲೇ ಬಾಳು ಬದುಕು ಕಟ್ಟಿಕೊಂಡು ಬದುಕುತ್ತಿರುವ ಮಂದಿ. ಹಿಂದೆ ಬಂದರೆ ಒದೆಯದ ಮುಂದೆ ಬಂದರೆ ಹಾಯದ ಅಕ್ಕಪಕ್ಕ ಬಂದರೆ ಮೋರಿಗೆ ತಳ್ಳದ ಮನೋಭಾವನೆ ನಮ್ಮದು. ಸತ್ಯವೇ ನಮ್ಮ ತಾಯಿ ಸತ್ಯವೇ ನಮ್ಮ ತಂದೆ ಸತ್ಯಮಾರ್ಗಕೆ ನೆಚ್ಚಿ ನಡೆದರೆ ಮೆಚ್ಚನಾ ಆ ಪರಮಾತ್ಮನು ಅಂತ ಪ್ರತಿದಿವಸ ಪುಣ್ಯಕೋಟಿ ಪದ್ಯ ಹೇಳಿ ಹೇಳಿ ಬೆಳೆದ ಪೀಳಿಗೆ ನಮ್ಮದು. ಅದರಿಂದ ನನ್ನ ಮನಸಾಕ್ಷಿ ಅಯ್ಯೋ ಮುಠ್ಠಾಳ, ಹಿಂದಕ್ಕೆ ಹೋಗಿ ಅವಶೇಷಗಳ ಅಡಿಯಿಂದ ಕಾಣಿಸುತ್ತಿರುವ ನೆನಪಿನ ಗೊರಸು ಹಿಡಿದು ಹೊರಗೆ ತೆಗಿ, ಅದನ್ನ ಈಗಲೇ ಮಾಡು ಅಂತ ಒದೀತಾ ಉಂಟು. ಅದನ್ನು ಮೊದಲು ನಿಮಗೆ ವಪ್ಪಿಸಿ ಬಿಡುತ್ತೇನೆ…!
ನಮ್ಮ ವೇದಿಕೆಗೆ ಒಂದು ತಮ್ಮ ಹುಟ್ಟಿದ ಕಥೆಗೆ ನಿಮ್ಮನ್ನು ಈಗ ಒಯ್ಯಬೇಕು. ನಮ್ಮಲ್ಲಿನ ಹೆಚ್ಚು ಮಂದಿ ಹಾಸ್ಯ ಪಾಸ್ಯ ಬರೆಯುತ್ತಿದ್ದವರು ಅಂತ ಹೇಳಿದ್ದೆ ತಾನೇ. ನಾವು ನಾವು ಸೇರಿದಾಗ ಪುಟ್ಟಪುಟ್ಟ ಸ್ವಾರಸ್ಯಗಳ ವಿನಿಮಯದ ಜತೆಗೆ ನಗು ಕಟ್ಟೆ ಹರಿದು ಓಡುತ್ತಿತ್ತು. ಭೇಟಿಯ ಸಂಭ್ರಮ ಅನುಭವಿಸಿ ಮರೆಯುತ್ತಿದ್ದೆವು. ಬಹುಶಃ ಬೆಂಗಳೂರು ಮತ್ತು ಆಚೆಗಿನ ಹಾಸ್ಯ ಬರಹಗಾರರ ಪರಿಚಯ ಆಗಿತ್ತು. ಕೆಲವರು ಮೌಖಿಕವಾಗಿ ಮತ್ತೆ ಕೆಲವರು ಪತ್ರ ಮುಖೇನ ಗೊತ್ತಾಗಿದ್ದರು. ಆಗಿನ್ನೂ ಫೇಸ್ ಬುಕ್, ಇನ್ಸ್ಟಾಗ್ರಾಮ್ ಇನ್ನೂ ಹುಟ್ಟಿರಲಿಲ್ಲ. ಮೊಬೈಲ್ ಫೋನಿನ ಹೆಸರೂ ಸಹ ಗೊತ್ತಿರಲಿಲ್ಲ!
ಆಗ ತಾನೇ ಪ್ರಜಾವಾಣಿ ಪತ್ರಿಕೆಯಲ್ಲಿ ಮಿಡಲ್ ಬರೆಯಲು ಶುರುಮಾಡಿದ್ದ ಶ್ರೀ ನಾಗಭೂಷಣ ಅವರ ಪರಿಚಯ ಆಯಿತು. ನಾಗಭೂಷಣ ಅವರು ಈಗ ನಮ್ಮೊಂದಿಗೆ ಇಲ್ಲ. ಅವರ ಪರಿಚಯ ನಿಮ್ಮಲ್ಲಿ ಸುಮಾರು ಜನಕ್ಕೆ ಇರಬಹುದು. ಅವರ ಬಗ್ಗೆ ಒಂದು ಪುಟ್ಟ ಪರಿಚಯ… ಅಜಿತನ ಸಾಹಸಗಳು ಅಂತ ಬೆಂಗಳೂರು ದೂರದರ್ಶನದಲ್ಲಿ ಒಂದು ಸೀರಿಯಲ್ ಬರ್ತಾ ಇತ್ತು ಆ ಕಾಲದಲ್ಲಿ. ಶರ್ಲಾಕ್ ಹೊಮ್ಸ್ ನ ಕತೆ ಗಳನ್ನು ಆಧರಿಸಿ ಈ ಸೀರಿಯಲ್ ತೆಗೆದಿದ್ದರು. ಖ್ಯಾತ ನಟ ಬಿ ವಿ ರಾಜಾರಾಮ್ ಇದರಲ್ಲಿ ಅಜಿತನ ಪಾತ್ರ. ಅಜಿತನ ಮನೆಯಲ್ಲಿ ಆತನ ರೈಟ್ ಹ್ಯಾಂಡ್ ಪಾತ್ರ ಒಂದಿತ್ತು ತಾನೇ? ಅದನ್ನೇ ನಾಗಭೂಷಣ ಅವರು ಮಾಡುತ್ತಾ ಇದ್ದದ್ದು.
ಅವರು ಮಿಡಲ್ ಬರಹಗಾರರ ಗುಂಪು ಒಂದು ಶುರು ಮಾಡುವ ಐಡಿಯಾ ನಮ್ಮಲ್ಲಿ ಬಿತ್ತಿದರು. ಇದು ನಂತರ ಮಿಡಲ್ ಬದಲಿಗೆ ಹಾಸ್ಯಬರಹಗಾರರ ಸಂಘಟನೆ ಆಗಲಿ ಅಂತ ನಿರ್ಧಾರ ಆಯಿತು. ಹಿಂದೆ ಕೈಗಾರಿಕಾ ರಂಗದ ಸಾಹಿತ್ಯ ವೇದಿಕೆ ಆರಂಭಿಸಿದಾಗ ಶ್ರೀ ಆನಂದರಾಮ ಶಾಸ್ತ್ರಿ ಅವರು ನೀತಿ ನಿಯಮ ರೂಪಿಸಿದ್ದರು ಅಂತ ಹೇಳಿದ್ದೆ. ಇದಕ್ಕೂ ಅವರೇ ಆರಂಭಿಕ ಪತ್ರಗಳು ಸಿದ್ಧ ಮಾಡಿದರು. ಇದಕ್ಕೆ ಬೇಕಾದ ನಮ್ಮ ಮೀಟಿಂಗ್‌ಗಳು ಬೆಂಗಳೂರಿನ ಸಂಗಮ್ ಟಾಕೀಸ್ ಮುಂದೆ ಸೇರಿತು! ಟಾಕೀಸ್ ಮುಂದೆ ಫುಟ್ ಪಾತ್‌ನಲ್ಲಿ ಐದಾರು ಜನ ಸೇರಿ ನಮ್ಮ ಸಂಘಟನೆ ಕುರಿತ ಮಾತುಕತೆ ಆಡಿದೆವು. ಎಲ್ಲರ ಕೈಯೂ ಬೋಳು ಬೋಳು; ಅದರಿಂದ ಈ ವ್ಯವಸ್ಥೆ. ನಂತರದ ಒಂದೆರೆಡು ಮೀಟಿಂಗ್‌ಗಳು ವಿಧಾನ ಸೌಧ ಮುಂದೆ ನಡೆಯಿತು. ಆಗಿನ ಮಿಡಲ್ ಕಾಲಮಿಸ್ಟ್‌ಗಳು ಸೇರಿದ್ದೆವು. ಕೃಷ್ಣ, ಆನಂದರಾಮ ಶಾಸ್ತ್ರೀ, ರಾಮಮೂರ್ತಿ, ಗುಂಡೂರಾವ್ ವೈ ಎನ್, ಸೂರಿ ಹಾರ್ದಳ್ಳಿ, ತಿಮ್ಮಯ್ಯ, ನಾಗಭೂಷಣ್, ಪಾಳ್ಯದ ಶೆಟ್ಟರ ಮಹದೇವಪ್ಪ ಇವರುಗಳ ಜತೆ ನಾನು… ಇವರೆಲ್ಲ ಹುಲ್ಲುಹಾಸಿನ ಮೇಲೆ ಕೂತು ಸಭೆ ಮಾಡಿದೆವು!
ಹೀಗೆ ಶುರು ಹಚ್ಚಿಕೊಂಡ ಸಭೆ ನಂತರ ಚಿಕ್ಕಲಾಲಬಾಗ್‌ನಲ್ಲಿ ನಡೆಯಿತು.
ಹೊರಬೆಂಗಳೂರಿನ ಸುಮಾರು ಹಾಸ್ಯ ಲೇಖಕರನ್ನು ಸಂಪರ್ಕಿಸಿದೆವು. ನಮ್ಮ ಪತ್ರದ ಒಕ್ಕಣೆಗಳನ್ನು ಶಾಸ್ತ್ರಿ ಅವರು ನೋಡಿಕೊಂಡರು. ಅದರ ಪ್ರಿಂಟಿಂಗ್ ಮುಂತಾದ ಕೆಲಸ ಸೂರಿ ಹಾರ್ದಳ್ಳಿ ಹೊತ್ತರು. ಅಂಚೆ ಕೆಲಸ ಸಂಪರ್ಕದ ಜವಾಬ್ದಾರಿ ನನ್ನದು. ನಂತರ ನಮ್ಮ ಸಭೆಗಳು ಗಾಂಧಿ ಸಾಹಿತ್ಯ ಸಂಘದಲ್ಲಿ. ಅಲ್ಲಿನ ನೆಲದ ಗುಣ ಅಂದರೆ ಅಲ್ಲಿ ಆರಂಭಗೊಂಡ ಸಂಘಟನೆಗಳು ಮುಂದೆ ಮೈಕೈ ತುಂಬಿಕೊಂಡು ಬೆಳೆದವು. ಸದಭಿರುಚಿಯ ಹಾಸ್ಯ ಪ್ರಸಾರವೇ ಸಂಘದ ಗುರಿ ಮಾಡಿದೆವು.
ಈ ನಡುವೆ ಶ್ರೀ ಅರಾಸೆ ಅವರು ವಿನೋದ ಪತ್ರಿಕೆಯ ಸಮಾರಂಭಕ್ಕೆ ಬಂದಿದ್ದು ನಮ್ಮ ಪರಿಚಯವಾಯಿತು. ಇದನ್ನು ಆಗಲೇ ನಿಮಗೆ ಹೇಳಿದ ನೆನಪು ನನಗೆ. ಇವರ ಮೂಲಕ ಅಪರಂಜಿ ಪತ್ರಿಕೆ, ಆಕಾಶವಾಣಿಯಲ್ಲಿದ್ದ ಶ್ರೀ ಎಂ ಎಸ್ ಕೆ ಪ್ರಭು ಅವರೆಲ್ಲರ ಪರಿಚಯ ಆಗಿತ್ತು. ಈ ಎಲ್ಲಾ ಗ್ರೌಂಡ್ ವರ್ಕಿನ ನಂತರ ನಮ್ಮ ಸಂಘಟನೆ, ಹಾಸ್ಯ ಬ್ರಹ್ಮ, (ಈ ಹೆಸರು ನಾನೇ ಸೂಚಿಸಿದ್ದು!) ಜೂನ್ 18, 1995ರಲ್ಲಿ ಉದ್ಘಾಟನೆಗೊಂಡಿತು. ತಮಾಷೆ ಎಂದರೆ ನಮ್ಮ ಕೈಯಲ್ಲಿ ಖರ್ಚಿಗೆ ಹಣವೇ ಇಲ್ಲ, ಬರೀ ಅದಮ್ಯ ಉತ್ಸಾಹ ಮಾತ್ರ ಇದ್ದದ್ದು. ಪೂಲ್ ಮಾಡಿದ ಹಣ ಇದಕ್ಕೆ ಬಳಕೆ ಆಗುತ್ತಿತ್ತು. ಚಂದಾ ಎಂದು ಕೊಂಚ ಹಣ ಇದ್ದರೂ ಸದ್ಯಕ್ಕೆ ಅದನ್ನು ಮುಟ್ಟುವುದು ಬೇಡ ಎಂದು ತೀರ್ಮಾನವಾಗಿತ್ತು!
ಈಗಾಗಲೇ ನಮ್ಮ ಚಟುವಟಿಕೆಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದ ಮತ್ತು ವೇದಿಕೆಯ ಮೂಲಕ ನಮ್ಮ ಪುಸ್ತಕ ಬಿಡುಗಡೆ ಸಮಾರಂಭಗಳಿಗೆ ಆಗಮಿಸಿದ್ದ ನಮ್ಮ ಪುಸ್ತಕಗಳಿಗೆ ಅತ್ಯಂತ ಪ್ರೀತಿಯಿಂದ ಅತಿ ಧಾರಾಳವಾಗಿ ಹೊಗಳಿ ಮುನ್ನುಡಿಗಳನ್ನೂ ಬರೆದು ಕೊಟ್ಟಿದ್ದ ಹಿರಿಯರು ನಮ್ಮ ಸಾಹಸಗಳನ್ನು ಅವಲೋಕಿಸುತ್ತಾ ಬೆನ್ನು ತಟ್ಟುತ್ತಿದ್ದರು. ಶ್ರೀಯುತ ವೈಎನ್ಕೆ, ಕನ್ನಡಪ್ರಭ ಸಂಪಾದಕರು, ಕೆ. ನರಸಿಂಹ ಮೂರ್ತಿ, ಖ್ಯಾತ ವಿಮರ್ಶಕರು, ಡಾ ಎಚ್ ಕೆ ರಂಗನಾಥ್ ಹಿರಿಯ ಬರಹಗಾರರು ಮುಂತಾದ ದಿಗ್ಗಜರು ಆಗಲೇ ನಮಗೆ ಸಾಕಷ್ಟು ಪರಿಚಿತರು ಮತ್ತು ಅವರ ಪ್ರಭಾವಳಿಯಲ್ಲಿ ನಾವು!
ಈ ಹಿನ್ನೆಲೆಯಲ್ಲಿ ಉದ್ಘಾಟನೆ ಸಮಾರಂಭ ಕ್ಕೆ ಶ್ರೀ ಕೆ ನರಸಿಂಹ ಮೂರ್ತಿ ಅವರು ಬಂದಿದ್ದರು. ಸೂರಿ ಹಾರ್ದಳ್ಳಿ ಅವರ ಉಪಾಯೋಪಾಯಗಳು ಹಾಸ್ಯ ಸಂಕಲನವನ್ನು ಆಕಾಶವಾಣಿಯ ನಿವೃತ್ತ ಹಿರಿಯ ಅಧಿಕಾರಿಗಳು ಮತ್ತು ಸಾಹಿತಿಗಳು ಡಾ ಎಚ್ ಕೆ ರಂಗನಾಥ್ಅವರು ಬಿಡುಗಡೆ ಮಾಡಿದರು. ಅವತ್ತು ಡಾ ಎಚ್ ಕೆ ರಂಗನಾಥ್ ಅವರ ಸಂಬಂಧಿ ಒಬ್ಬರು ತೀರಿದ್ದರು. ಸ್ಮಶಾನಕ್ಕೆ ಹೋಗಿ ಅಂತಿಮ ದರ್ಶನ ಪಡೆದು ನೇರ ಈ ಸಮಾರಂಭಕ್ಕೆ ಅವರು ಬಂದಿದ್ದರು! ಉದ್ಘಾಟನಾ ಭಾಷಣದಲ್ಲಿ ಅವರು ಈ ಸಂಗತಿ ಹೇಳಿ ನಗೆ ಉಕ್ಕಿಸಿದರು. ಹಾಸ್ಯಬ್ರಹ್ಮಕ್ಕೆ ಹೀಗೆ ಒಂದು ಒಂದು ವಿಚಿತ್ರ ಮತ್ತು ಅಸಾಂಪ್ರದಾಯಿಕ ಟೇಕ್ ಆಫ್ ಸಿಕ್ಕಿತು! ಈ ವೇಳೆಗೆ ಶ್ರೀ ಆನಂದರಾಮ ಶಾಸ್ತ್ರಿ ಅವರಿಗೆ ವರ್ಗಾವಣೆ ಆಯಿತು. ಅದರಿಂದ ಅವರ ಸೇವೆ ನಮಗೆ ತಪ್ಪಿತು!
ಬೆಂಗಳೂರಿನ ಸುಮಾರು ಎಲ್ಲಾ ಹಾಸ್ಯಬರಹಗಾರರಲ್ಲದೆ ಹೊರಗಿನಿಂದಲೂ ಬರಹಗಾರರು ಬಂದಿದ್ದು ಇಂತಹ ಒಂದು ಕಾರ್ಯಕ್ರಮಕ್ಕೆ ಒಂದು ಅಪೂರ್ವ ಚಾಲನೆ ಸಿಕ್ಕಿತು. ಶ್ರೀ ಎಸ್ ಎನ್ ಶಿವಸ್ವಾಮಿ ಮತ್ತು ಶ್ರೀ ಹಾ ರಾ (ಶಂಕರ ನಾರಾಯಣ ರಾವ್) ಶ್ರೀ ಅರಾಸೆ ಅಂತಹ ಹಿರಿಯರು ಹಾಜರಿದ್ದರು. ಶ್ರೀ ಶಿವಕುಮಾರ್ ಜ್ಯೋತಿ ಬೆಳಗಿಸಿ ಸಂಘಟನೆಯ ಉದ್ಘಾಟನೆ ನೆರವೇರಿಸಿದರು. ಈ ಒಂದು ಪುಟ್ಟ ಸಂಘಟನೆ ಮುಂದೆ ಅಗಾಧವಾಗಿ ಬೆಳೆಯಬಹುದು ಎನ್ನುವ ಒಂದೇ ಒಂದು ಸಣ್ಣ ಕಲ್ಪನೆಯೂ ನಮಗಾರಿಗೂ ಅಂದು ಇರಲಿಲ್ಲ. ಹೀಗಾಗಿ ಈ ಸಮಾರಂಭಕ್ಕೆ ಪತ್ರಿಕಾ ಪ್ರಚಾರ ಇರಲಿಲ್ಲ, ಬ್ಯಾನರ್‌ಗಳೂ ಅಷ್ಟೇ. ಇದಕ್ಕೆ ನಮ್ಮ ಆರ್ಥಿಕ ಪರಿಸ್ಥಿತಿಯೂ ಸಹ ಒಂದು ಮೇಜರ್ ಕಾರಣ! ಹೀಗೆ ಟೇಕ್ ಆಫ್ ಆದ ಹಾಸ್ಯಬ್ರಹ್ಮ ಮುಂದೆ ಒಂದು ಅರಳಿ ಮರದ ಹಾಗೆಯೋ ಆಲದ ಮರದ ಹಾಗೆಯೋ ಬೆಳೆದು ಬಂದದ್ದು ಮತ್ತೊಂದು ರೋಚಕ ಕಥಾನಕ, ಸವಿನೆನಪು ಸಹ! ಕೊಂಚ ಅತ್ತ ನನ್ನ ಯೋಚನೆಯನ್ನು ತಮ್ಮ ಅನುಮತಿಯಿಂದ ಹರಿಯಲು ಬಿಡುತ್ತೇನೆ, ಸರ.
ಈ ವೇಳೆಗೆ ಅಪರಂಜಿ ಬಳಗ ನಮ್ಮ ಬಳಿಗೆ ನಮ್ಮ ಬಳಗ ಅವರ ಹತ್ತಿರಕ್ಕೆ ಅರಿವಿಲ್ಲದ ಹಾಗೇ ಸಮೀಪಿಸಿದ್ದೆವು. ಅಪರಂಜಿ ಪತ್ರಿಕೆಯನ್ನು ಬಲ ಪಡಿಸುವ ಯೋಚನೆ ಹರಡಿತ್ತು. ಅದರ ಫಲವೇ ಹಿಂದೆ ವಿವರಿಸಿದ ಅಪರಂಜಿ ಹತ್ತುವರ್ಷದ ಹಬ್ಬ.
ಹತ್ತುವರ್ಷದ ಹಬ್ಬದ ನಂತರ ಇಡೀ ದಿವಸ ಹಾಸ್ಯದ್ದೇ ಕಾರ್ಯಕ್ರಮ ಹಬ್ಬಿಕೊಂಡರೆ ಹೇಗೆ ಎನ್ನುವ ಚಿಂತನೆ ಶುರುವಾಯಿತು. ಒಂದು ರೂಪುರೇಷೆ ಸಿದ್ಧವಾಯಿತು. ಇಡೀ ದಿವಸದ ಕಾರ್ಯಕ್ರಮಕ್ಕೆ ಒಂದು ಪುಟ್ಟ ಆಕರ್ಷಕ ಹೆಸರು ಇಲ್ಲ ಅಂದರೆ ಹೇಗೆ?
ಕೂತು ಚಿಂತನ ಮಂಥನ ನಡೆಸಿದೆವಾ? ಸುಮಾರು ಹೆಸರುಗಳು ಸೂಚಿತವಾಯಿತು. ಎಲ್ಲರೂ ಒಪ್ಪಲಿಲ್ಲ ಎಂದು ತಿರಸ್ಕೃತವೂ ಆಯಿತು. ಹಾಸ್ಯೋತ್ಸವ ಎನ್ನುವ ಹೆಸರು ಕೃಷ್ಣ ಪ್ರೊಪೋಸ್ ಮಾಡಿದರು. ಶ್ರೀ ನಿಸಾರ್ ಅಹ್ಮದ್ ಅವರು ಆಗಲೇ ಕನ್ನಡ ಭಾಷೆಗೆ ನಿತ್ಯೋತ್ಸವ ಎನ್ನುವ ಶಬ್ದ ಕೊಟ್ಟಿದ್ದರು. ಹಾಸ್ಯೋತ್ಸವ ಎನ್ನುವ ಪದ ಅದಕ್ಕೆ ತುಂಬಾ ಹತ್ತಿರದ್ದು ಮತ್ತು ತನ್ನ ಅಸ್ಮಿತೆಯನ್ನು ಹೊರಸೂಸುವ ಪದ, ಹಾಸ್ಯ ಕಾರ್ಯಕ್ರಮಗಳು ಒಂದು ಉತ್ಸವದ ಹಾಗೇ ಜರುಗಬೇಕು. ಹಾಸ್ಯೋತ್ಸವ ಎನ್ನುವ ಪದ ನಮ್ಮ ಕಾರ್ಯಕ್ರಮಗಳಿಗೆ ಅತ್ಯಂತ ಸೂಕ್ತ ಹೆಸರು ಎಂದು ಈ ಹಾಸ್ಯೋತ್ಸವ ಪದವನ್ನು ನಮ್ಮ ಕಾರ್ಯಕ್ರಮಗಳಿಗೆ ನಾಮಕರಣ ಮಾಡಿದೆವು. ಈ ಹೆಸರಿಟ್ಟ ಘಳಿಗೆ ಮಹಿಮೆಯನ್ನು ಏನೆಂದು ಹೇಳಲಿ? ಮುಂದೆ ಕರ್ನಾಟಕವನ್ನೂ ಮೀರಿ ಈ ಹೆಸರು ಜಗದ್ವಿಖ್ಯಾತಿ ಪಡೆಯಿತು. ಹಾಸ್ಯೋತ್ಸವ ಎನ್ನುವ ಪದ ನಮ್ಮ ಹಾಸ್ಯಬರಹಗಾರರ ಸಂಘಟನೆ ಹಾಸ್ಯಬ್ರಹ್ಮದ ಕೊಡುಗೆ! ಇದು ಇನ್ನೂ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಿಲ್ಲ! ಮುಂದೆ ಎಂದೋ ಒಂದು ದಿವಸ ಇದು ಖಂಡಿತ ದಾಖಲಾಗಲೇಬೇಕು! ಮುಂದೆ ಚರಿತ್ರೆ ಬರೆಯುವ ಜ್ಞಾನಿಗಳು ದಯವಿಟ್ಟು ಈ ಸಂಗತಿಯನ್ನು ಮರೆಯದೇ ಸೇರಿಸಿ ಎಂದು ವೆಲ್ ಇನ್ ಅಡ್ವಾನ್ಸ್ ಕೋರುತ್ತೇನೆ..!
ಮುಂದೆ ನಮ್ಮ ಹಲವು ಯೋಜನೆಗಳು ಹೇಗೆ ಕಾರ್ಯರೂಪಕ್ಕೆ ಬಂದವು ಎನ್ನುವುದನ್ನು ತುಂಬಾ ಚಿಕ್ಕದಾಗಿ ಚೊಕ್ಕದಾಗಿ ನಿಮಗೆ ಹೇಳಲೇ ಬೇಕು ಮೇಡಂಮೋರೆ… ಈಗ ಅದರತ್ತ ಒಂದು ಪುಟಾಣಿ ಬುಲ್ ಬುಲ್ ನೋಟ. ಹಕ್ಕಿನೋಟ ಅಂತ ಕೇಳೇ ಇರ್ತೀರಿ ತಾನೇ. ಇಲ್ಲಿ ಹಕ್ಕಿ ಬದಲು ಬುಲ್ ಬುಲ್ ನೋಟ. ಬುಲ್ ಬುಲ್ ಅಂದರೆ ಏನಪ್ಪಾ ಅಂದರೆ ಅದೊಂದು ಪುಟ್ಟ ಅತಿ ಉತ್ಸಾಹ ತುಂಬಿದ ಹಿಡಿಯಷ್ಟು ಬೆಳೆದಿಲ್ಲದ ಲವಲವಿಕೆಯ ಹಕ್ಕಿ. ಅದರ ನೋಟದಲ್ಲಿ ಒಂದು ಪುಟಾಣಿ ವಿವರ ಅಷ್ಟೇ.
ಪ್ರತಿಭಾ ಅನ್ವೇಷಣೆಗಾಗಿ ಮಕ್ಕಳಿಗಾಗಿ ಎರಡು ದಿವಸಗಳ ಒಂದು ಕಾರ್ಯಗಾರ ವಾಣಿ ಶಾಲೆಯಲ್ಲಿ ನಡೆಸಿದೆವು. ಇಲ್ಲಿನ ಪ್ರತಿಭೆಗಳು ಮುಂದೆ ನಮ್ಮ ಕಾರ್ಯಕ್ರಮಗಳಲ್ಲಿ ಸೊಗಸಾಗಿ ಪಾತ್ರವಹಿಸಿದವು. ಹಾಸ್ಯಬರಹಗಾರರು ಒಂದೇ ರೀತಿಯ ಬರಹಕ್ಕೆ ಬ್ರಾಂಡ್ ಆಗಬಾರದು, ಬಹುಶೃತರಾಗಿರಬೇಕು ಎನ್ನುವುದು ಎನ್ನುವುದು ನಾವು ನಮ್ಮ ಹಿರಿಯರಿಂದ ಕಲಿತದ್ದು. ಅದಕ್ಕೆ ಪೂರಕವಾಗುವಂತೆ ಮಲ್ಲಿಗೆ ಪತ್ರಿಕೆಯ ಸಹಯೋಗದೊಂದಿಗೆ ಲಲಿತಪ್ರಬಂಧ ರಚನಾ ಕಮ್ಮಟ ನಡೆಯಿತು. ಪ್ರೊ ಮಿತ್ರಾ, ಡಾ. ಪ್ರಭು ಶಂಕರ್, ಡಾ ಎಚ್ ಕೆ ರಂಗನಾಥ್ ಅವರು ಜ್ಞಾನಧಾರೆ ಎರೆದರು. ನಮ್ಮ ಇತಿಮಿತಿ ಅರಿತು ಮುಂದೆ ನಮ್ಮ ಪ್ರತಿಭೆಗಳು ಹಲವು ಸಹಸ್ರ ಪ್ರಬಂಧ ರಚಿಸಿದವು! ಹೀಗೆ ಕಮ್ಮಟ ನಡೆಯ ಬೇಕಾದರೆ ಒಂದು ನಾವು ಕೇಳದೇ ಬಂದ ಸೌಭಾಗ್ಯ ಒಂದು ಇದೆ. ಅದನ್ನು ನಿಮಗೆ ಹೇಳಲೇಬೇಕು ಸರ.
ಕನ್ನಡ ಸಾಹಿತ್ಯದಲ್ಲಿ ಪ್ರಬಂಧ ಪಿತಾಮಹ ಎಂದು ಖ್ಯಾತಿ ಪಡೆದಿದ್ದ ಶ್ರೀ ಎ ಎನ್ ಮೂರ್ತಿರಾವ್ ಅವರ ಸಂದರ್ಶನವನ್ನು ಬೆಂಗಳೂರು ದೂರದರ್ಶನ ಅಂದು ಅವರ ಮನೆಯಲ್ಲಿ ರೆಕಾರ್ಡ್ ಮಾಡುತ್ತಿತ್ತು. ನಮ್ಮ ಕಾರ್ಯಕ್ರಮಕ್ಕೆ ಅವರೂ ಸಹ ಒಬ್ಬರು ಸಂಪನ್ಮೂಲ ತಜ್ಞರು. ದೂರದರ್ಶನದ ಸಿಬ್ಬಂದಿ ಕಾಮೆರಾ ಹೊತ್ತು ನಮ್ಮ ಕಮ್ಮಟಕ್ಕೆ ಮೂರ್ತಿರಾವ್ ಅವರ ಜತೆ ಬಂದರು. ಶೂಟಿಂಗ್ ಮತ್ತು ನಮ್ಮ ಜತೆ ವಿಚಾರ ವಿನಿಮಯ ನಡೆಯಿತು.
ದೂರದರ್ಶನಕ್ಕೆ ಲಾಟರಿ ಹೊಡೆದ ಹಾಗೆ ಕನ್ನಡ ಸಾಹಿತ್ಯದ ಅಂದಿನ ಮತ್ತು ಮುಂದಿನ ಮಹಾ ದಿಗ್ಗಜರು(ಅಂದರೆ ನಾನು ಮತ್ತು ನನ್ನ ಗೆಳೆಯರು!) ಒಂದೇ ಕಡೆ ಸಿಕ್ಕಿದರು! ದೂರದರ್ಶನ ಈಗಲೂ 1997ರಲ್ಲಿ ನಡೆದ ಈ ಕಾರ್ಯಕ್ರಮ ವನ್ನು ಆಗಾಗ ಪ್ರಸಾರ ಮಾಡುತ್ತದೆ. ಪ್ರಸಾರ ಆದಾಗಲೆಲ್ಲಾ ನಮ್ಮ ಮೈ ನವಿರೇಳುತ್ತದೆ..! ಹೃದಯ ಕುಣಿದಾಡುತ್ತದೆ, ಕುಮಾರ ವ್ಯಾಸನು ಹಾಡಿದನೆಂದರೆ.. ಹಾಗೇನೇ!

ಬಡಾವಣೆಗಳಲ್ಲಿ ನಾವು ನಡೆಸಿದ ಕಾರ್ಯಕ್ರಮಗಳು, ಕೈಲಾಸಂ ಸ್ಮರಣೆ.. ಮೊದಲಾದ ಪ್ರಸಂಗಗಳು ಇನ್ನೂ ನೆನ್ನೆ ಮೊನ್ನೆ ನಡೆದ ಹಾಗೆ ಮನಸಿನಲ್ಲಿ ಪ್ರಿಂಟ್ ಆಗಿವೆ. ಅದರ ಬಗ್ಗೆ ತುಂಬಾ ಚಿಕ್ಕದಾಗೆ ಮುಂದಿನ ಸಲ ಹೇಳುತ್ತೇನೆ. ಅದರ ಜತೆಗೆ ನಮ್ಮ ಹಾಸ್ಯೋತ್ಸವದ ಬಗ್ಗೆ ತಮಟೆ ಬಜಾಯಿಸಬೇಕು. ನಮ್ಮ ಬಳಗ ಹಾಗೂ ಅಪರಂಜಿ ಬಳಗ ಹೇಗೆ ಸದಭಿರುಚಿಯ ಹಾಸ್ಯ ಪ್ರಸರಣಕ್ಕೆ ಭುಜಕ್ಕೆ ಭುಜ ಕೊಟ್ಟು ಒಂದು ವ್ರತದ ಹಾಗೆ ನಡೆಸಿದೆವು ಅಂತ ತಿಳಿಸಬೇಕು…
ಮುಂದಿನ ಸಂಚಿಕೆಯಲ್ಲಿ ಇವುಗಳಿಗೆ ಒಂದು ರೂಪ ಕೊಡಲು ಯತ್ನಿಸುತ್ತೇನೆ. ಅಲ್ಲಿಯವರೆಗೂ ಬೈ ಬೈ ಸರ, ಮೇಡಂಮ್ಮೋರ…
ಇನ್ನೂ ಇದೆ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
