ಟರ್ಕಿಷ್ ಕಾದಂಬರಿಕಾರ ಒರ್ಹಾನ್ ಪಾಮುಕ್ ಅವರ ರಾಜಕೀಯ ಕಾದಂಬರಿ `ಹಿಮ’ 2002 ರಲ್ಲಿ ಪ್ರಕಟಗೊಂಡಿದೆ. ಟರ್ಕಿ ದೇಶದ ಈಶಾನ್ಯ ದಿಕ್ಕಿನಲ್ಲಿರುವ `ಕಾರ್ಸ್’ ಎಂಬ ಸಣ್ಣ ನಗರವೊಂದರಲ್ಲಿ ನಡೆಯುವ ಘಟನಾವಳಿಗಳ ಸುತ್ತ ಹೆಣೆದ ಈ ಕಥಾನಕದಲ್ಲಿ ಪಾಮುಕ್ ಪ್ರಯೋಗಾತ್ಮಕವಾಗಿ ಒಂದು ವಿನೂತನ ಬಗೆಯ ರಾಜಕೀಯ ಕಾದಂಬರಿಯನ್ನು ಸೃಷ್ಟಿಸಿದ್ದಾರೆ. ಸಮಕಾಲೀನ ರಾಜಕೀಯ ಸ್ಥಿತ್ಯಂತರಗಳ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವೆನ್ನಿಸುವ ಕಥೆಯ ಹಂದರವನ್ನು ಹೊಂದಿದ ಈ ಕಾದಂಬರಿ ನಮ್ಮ ಕಾಲಘಟ್ಟದ ಅತ್ಯಂತ ಮಹತ್ವಪೂರ್ಣ ಕಾದಂಬರಿ.
ಈ ಕಾದಂಬರಿಯನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿರುವ ಕೆ.ಎಸ್ ವೈಶಾಲಿ ಬರೆದಿರುವ ಪ್ರಸ್ತಾವನೆ ಇಲ್ಲಿದೆ.

 

ಹೊರಪ್ರಪಂಚಕ್ಕೆ ಟರ್ಕಿ ದೇಶದ ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಅನಾವರಣಗೊಳಿಸುವ ಕೆಲಸವನ್ನು ಪಾಮುಕ್ ಅದ್ಭುತವಾಗಿ ಮಾಡುತ್ತಾರೆ. ಇಸ್ತಾನ್ ಬುಲ್ ನಗರದಲ್ಲಿ ವಾಸವಾಗಿರುವ ಪಾಮುಕ್ ಪ್ರಜಾಸತ್ತಾತ್ಮಕತೆಯ ಆಮ್ಲಜನಕವನ್ನು ಟರ್ಕಿಯೊಳಗೆ ಬರಮಾಡಿಕೊಂಡು, ಟರ್ಕಿಷ್ ಜನತೆಯ ದಾರುಣ ಯಾತನಾಮಯ ಅನುಭವಗಳನ್ನು ಹೊರಪ್ರಪಂಚಕ್ಕೆ ರವಾನಿಸುವ ಕೆಲಸವನ್ನು ಎಷ್ಟು ಸಮರ್ಪಕವಾಗಿ ಮಾಡುತ್ತಾರೆಂದರೆ ತಮ್ಮ ಸಂವೇದನೆಗಳಿಗೆ ವ್ಯತಿರಿಕ್ತವಾಗಿ ಅವರೊಬ್ಬ ರಾಜಕೀಯ ಸಿದ್ಧಾಂತಿಯಾಗಿಯೂ ಹೊರಹೊಮ್ಮುತ್ತಾರೆ.

(ಒರ್ಹಾನ್ ಪಾಮುಕ್)

“ನನ್ನ ಕಾದಂಬರಿ ಹಿಮ ನಾನು ಉದ್ದೇಶಪೂರ್ವಕವಾಗಿಯೇ ಬರೆದ ಮೊದಲ ಹಾಗೂ ಕೊನೆಯ ರಾಜಕೀಯ ಕಾದಂಬರಿ. ನನ್ನ ರಾಜಕೀಯ ನಿಲುವುಗಳನ್ನು ನಾನು ಪ್ರಕಟಿಸುತ್ತಲೇ ಬಂದಿದ್ದೇನೆ. ಒಂದು ಹಂತದಲ್ಲಿ ನನಗೆ ನಾನೇಕೆ ನನ್ನೆಲ್ಲ ರಾಜಕೀಯ ಚಿಂತನೆಗಳನ್ನು ಒಂದು ಕಾದಂಬರಿಯೊಳಗೆ ಸೇರಿಸಿ ನಿರಾಳವಾಗಿಬಿಡಬಾರದು? ಎನ್ನಿಸಿತು. ನನ್ನ ಬೇರೆ ಕಾದಂಬರಿಗಳು ಇಸ್ತಾನ್ ಬುಲ್ ನಗರದಲ್ಲಿ ರೂಪುಗೊಂಡಿವೆ. ಆದರೆ, ಈ ಕಾದಂಬರಿಯ ಘಟನೆಗಳು ದೂರದ ಕಾರ್ಸ್ ನಲ್ಲಿ ನಡೆಯುತ್ತವೆ. ನಾನು ಇಪ್ಪತ್ತರ ಹರೆಯದ ಪ್ರಾಯದಲ್ಲಿ ಒಬ್ಬ ಮಿತ್ರನೊಟ್ಟಿಗೆ ಟರ್ಕಿಯ ಉದ್ದಗಲಕ್ಕೂ ಸಂಚರಿಸಿದ್ದೆ. ಆಗ ಕಾರ್ಸ್ ನಗರಕ್ಕೂ ಹೋಗಿದ್ದೆ. ಅದರ ಅಗಾಧತೆ ಹಾಗೂ ಸೌಂದರ್ಯ ನನ್ನನ್ನು ಆಕರ್ಷಿಸಿತ್ತು. ಭಾಗಶಃ ರಷ್ಯನ್ನರಿಂದ ನಿರ್ಮಿಸಲ್ಪಟ್ಟಿದ್ದ ಈ ನಗರದಲ್ಲಿ ಅಪರಿಚಿತವಾದದ್ದೇನೋ ಇತ್ತು. ಅದು ಟರ್ಕಿಯ ಬೇರೆ ಭಾಗಗಳಿಗಿಂತ ಭಿನ್ನವಾಗಿತ್ತು. ನಾನು `ಹಿಮ’ ಕಾದಂಬರಿಯನ್ನು ಬರೆಯಲಾರಂಭಿಸಿದಾಗ ನನಗೆ ಈ ಕಾದಂಬರಿಯ ಘಟನೆಗಳು ನಡೆಯುವುದು ಕಾರ್ಸ್ ನಗರದಲ್ಲಿಯೇ ಎಂದೆನ್ನಿಸಿಬಿಟ್ಟಿತು” ಎಂದು ಪಾಮುಕ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸ್ವಿಸ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಒರ್ಹಾನ್ ಪಾಮುಕ್ ಮೊದಲ ಮಹಾಯುದ್ಧದ ಸಮಯದಲ್ಲಿ ಟರ್ಕಿಯಲ್ಲಿ ಆಟೋಮನ್ನರ ಪ್ರಭುತ್ವದಲ್ಲಿ ನಡೆದ ಅರ್ಮೇನಿಯನ್ನರ ಸಾಮೂಹಿಕ ಹತ್ಯಾಕಾಂಡಗಳು ಮತ್ತು ಟರ್ಕಿಯಲ್ಲಿನ ಆಂತರಿಕ ಬಂಡಾಯಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ವಿಷಯಗಳ ಬಗ್ಗೆ ಟರ್ಕಿಯ ನಾಗರೀಕರು ಸೊಲ್ಲೆತ್ತುವಂತೆಯೇ ಇರಲಿಲ್ಲ. ಆದರೆ ಪಾಮುಕ್ ನಿರ್ಭಿಡೆಯಿಂದ ಈ ದೌರ್ಜನ್ಯಗಳನ್ನು ಖಂಡಿಸಿದ್ದರು. ಇದು ಅವರಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ತಂದುಕೊಟ್ಟಿದ್ದಲ್ಲದೇ ಅವರನ್ನು ರಾಜಕೀಯವಾಗಿ ವಿವಾದಾತ್ಮಕ ವ್ಯಕ್ತಿಯನ್ನಾಗಿ ಮಾರ್ಪಾಡಾಗಿಸಿತು. ಟರ್ಕಿಷ್ ದಂಡ ಸಂಹಿತೆಯ ಅನುಚ್ಛೇದ 301ರ ಪ್ರಕಾರ ಟರ್ಕಿಷ್ ಸಂಸ್ಕೃತಿಯನ್ನು ಹೀಗಳೆದಿದ್ದಾರೆನ್ನುವ ಆರೋಪದ ಮೇರೆಗೆ ಅವರ ಮೇಲೆ ಕ್ರಮ ಜರುಗಿಸಲಾಯಿತು. ಅನೇಕ ವರ್ಷಗಳ ಕಾಲ ಲೇಖಕರು ಹಾಗೂ ವಿದ್ವಾಂಸರ ಮೇಲೆ ಇದರ ಅಡಿಯಲ್ಲಿ ಕ್ರಮ ಜರುಗಿಸಲಾಗುತ್ತಿತ್ತು. ಅನಂತರ ಅದು ಸರ್ಕಾರದ ನೀತಿಯಾಗಿರದಿದ್ದರೂ ಮೂಲಭೂತವಾದಿಗಳು ಹಾಗೂ ಉಗ್ರ ರಾಷ್ಟ್ರೀಯತಾವಾದಿಗಳ ಆಯುಧವಾಗಿತ್ತು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕರು ಪ್ರತಿಭಟಿಸಿ ಖಂಡಿಸಿದ ನಂತರ ಪಾಮುಕ್ ರವರ ವಿರುದ್ಧ ಹೂಡಿದ್ದ ಮೊಕದ್ದಮೆಯನ್ನು ವಜಾಗೊಳಿಸಲಾಯಿತು. ಈ ರಾಜಕೀಯ ಹಿನ್ನೆಲೆಯಲ್ಲಿಯೇ `ಹಿಮ’ ಕಾದಂಬರಿ ಸೃಷ್ಟಿಗೊಂಡಿದೆ. ಈ ಕಾದಂಬರಿಯ ಕಾಲಘಟ್ಟ 1990ರ ದಶಕ. ಕಾದಂಬರಿಯಲ್ಲಿ ಬರುವ ಘಟನೆಗಳು ಈ ದಶಕದ ಮೊದಲ ವರ್ಷಗಳಲ್ಲಿ ನಡೆಯುತ್ತವೆ. ಆಗ ಟರ್ಕಿಯಲ್ಲಿ ಇಸ್ಲಾಮಿ ಮೂಲಭೂತವಾದಿಗಳು ಅಧಿಕಾರಕ್ಕೆ ಬರುವ ಆತಂಕಗಳಿದ್ದವು. ಹಾಗಾಗಿ `ಹಿಮ’ ಒಂದು ಐತಿಹಾಸಿಕ ಕಾಲಘಟ್ಟದ ಕಾದಂಬರಿಯೆನ್ನಬಹುದು. ಆ ಕಾಲದ ಭೀಕರವಾದ ಅಸಹಿಷ್ಣುತೆ, ಜನಾಂಗೀಯ ದ್ವೇಷ, ಹಿಂಸೆ, ಕಗ್ಗೊಲೆಗಳ ಚಿತ್ರಣಗಳು ಈ ಕಾದಂಬರಿಯಲ್ಲಿ ಹೇರಳವಾಗಿವೆ.

ಕಾದಂಬರಿಯ ನಾಯಕ ಕರೀಂ ಅಲಕುಸೋಗ್ಲು ಆಲಿಯಾಸ್ ಕ ಕಾರ್ಸ್ ಎಂಬ ಟರ್ಕಿಯ ಈಶಾನ್ಯ ಮೂಲೆಯಲ್ಲಿರುವ ಹಿಂದುಳಿದ ನಗರವೊಂದಕ್ಕೆ ಬರುತ್ತಾನೆ. ಟರ್ಕಿಷ್ ಭಾಷೆಯಲ್ಲಿ ಕಾರ್ಸ್ ಎಂದರೆ ಹಿಮವೆನ್ನುವ ಅರ್ಥವಿದೆ. ಒಂದು ಕಾಲಘಟ್ಟದಲ್ಲಿ ಕಾರ್ಸ್ ನಗರ ವಾಣಿಜ್ಯ ವಹಿವಾಟುಗಳಿಗೆ ಟರ್ಕಿ, ಸೋವಿಯೆಟ್ ಜಾರ್ಜಿಯ, ಅರ್ಮೇನಿಯ ಹಾಗೂ ಇರಾನ್ ದೇಶಗಳ ನಡುವಿನ ಕೊಂಡಿಯಾಗಿತ್ತು. ಈ ದೇಶಗಳು ಕಾರ್ಸ್ ನಗರದಿಂದ ಕೆಲವೇ ಮೈಲುಗಳ ಅಂತರದಲ್ಲಿದ್ದವು. ಆದರೆ ಈಗ ಅದು ಟರ್ಕಿಯ ಅತ್ಯಂತ ಹಿಂದುಳಿದ ಭಾಗವಾಗಿದೆ. ದಾರಿದ್ರ್ಯವೇ ತಾಂಡವವಾಡುವ ಕೊಂಪೆಯಾಗಿದೆ. ಟರ್ಕಿ ದೇಶದ ಎಲ್ಲ ರಾಜಕೀಯ ಹಾಗೂ ಧಾರ್ಮಿಕ ತಲ್ಲಣಗಳನ್ನು ಇಲ್ಲಿ ಕಾಣಬಹುದಾಗಿದೆ. ಚರಿತ್ರಾರ್ಹವಾದ ಅನೇಕ ಪಂಥಗಳ ಪ್ರಭಾವ ಈ ನಗರದ ನಿವಾಸಿಗಳ ಮೇಲೆ ಆಗಿದೆ : ಸಮಾಜವಾದ, ಕಮ್ಯೂನಿಸಂ, ನಾಸ್ತಿಕವಾದ, ರಾಜಕೀಯ ಧರ್ಮನಿರಪೇಕ್ಷವಾದ, ಬೇರೆ ಬೇರೆ ಬುಡಕಟ್ಟು ಸಮುದಾಯಗಳ ರಾಷ್ಟ್ರೀಯತಾವಾದ ಹಾಗೂ ಶರವೇಗದಲ್ಲಿ ಬೆಳೆಯುತ್ತಿರುವ ಇಸ್ಲಾಮಿ ಮೂಲಭೂತವಾದ-ಇವುಗಳೆಲ್ಲದರ ಪ್ರಭಾವವೂ ಕಾರ್ಸ್ ನಗರದ ನಾಗರೀಕರ ಮೇಲೆ ಆಗಿವೆ.

ಟರ್ಕಿಯ ಗಡಿಭಾಗದ ಒಂದು ಸಣ್ಣ ಊರಾದ ಕಾರ್ಸ್ ನಲ್ಲಿ ಅಟಾಟರ್ಕ್ ರೂಪಿಸಿದ ಪ್ರಜಾಸತ್ತಾತ್ಮಕ ಆಧುನಿಕ ಗಣರಾಜ್ಯದ ಪ್ರತಿಪಾದಕರಾದ ಮತ ಧರ್ಮಾತೀತ ನಿಲುವುಗಳನ್ನು ಹೊಂದಿದ (ಸೆಕ್ಯುಲರ್) ಧರ್ಮನಿರಪೇಕ್ಷವಾದಿಗಳು, ಅವರ ಬೆಂಬಲಕ್ಕೆ ನಿಂತ ಸೈನ್ಯ, ಕುರ್ಡಿಷ್ ಹಾಗೂ ಟರ್ಕಿಷ್ ರಾಷ್ಟ್ರೀಯತಾವಾದಿಗಳು, ಕಾರ್ಸ್ ನ ನಾಗರೀಕರು ಮತ್ತು ಇಸ್ಲಾಮಿ ಮೂಲಭೂತವಾದಿಗಳ ನಡುವಿನ ಸಂಘರ್ಷ, ಹಿಂಸೆ ಹಾಗೂ ತಳಮಳಗಳನ್ನು ಬಿಂಬಿಸುವ ಈ ಕಾದಂಬರಿ ಎಲ್ಲೂ ಸರಳೀಕೃತವಾದ ಚಿತ್ರಣವಾಗುವುದಿಲ್ಲ. ಪಾಮುಕ್ ನಿಷ್ಪಕ್ಷಪಾತಿಯಾಗಿ ಧಾರ್ಮಿಕ ಮೂಲಭೂತವಾದಿಗಳನ್ನು ಹಾಗೂ ಮುಖಂಡರನ್ನು ಚಿತ್ರಿಸುತ್ತಾರೆ. ರಾಜಕೀಯ ಖೈದಿಯಾಗಿ ಟರ್ಕಿಯಿಂದ ಗಡೀಪಾರಾದ ಕರೀಂ ಅಲಕುಸೋಗ್ಲು ಹನ್ನೆರಡು ವರ್ಷಗಳ ಕಾಲ ಫ್ರಾಂಕ್ ಫರ್ಟ್ನಲ್ಲಿ ಕಳೆದು ಆಗಷ್ಟೇ ತನ್ನ ತಾಯಿಯ ಉತ್ತರಕ್ರಿಯೆಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಟರ್ಕಿಗೆ ಮರಳಿ ಬಂದಿದ್ದಾನೆ. ಆತನೇ ಕಾದಂಬರಿಯ ನಾಯಕ. ಇಸ್ತಾನ್ ಬುಲ್ ನಲ್ಲಿರುವ ‘ಕ’ ಎಂಬ ಪತ್ರಕರ್ತ ಮಿತ್ರನೊಬ್ಬ ಆತನಿಗೆ ಟರ್ಕಿಯ ಗಡಿಪ್ರದೇಶದಲ್ಲಿರುವ ಕಾರ್ಸ್ ಎಂಬ ನಗರಕ್ಕೆ ಭೇಟಿ ನೀಡಿ ಅಲ್ಲಿ ಉಗ್ರಗಾಮಿಗಳು ಗೆಲ್ಲುವ ಸಾಧ್ಯತೆಗಳಿವೆಯೆಂದು ಹೇಳಲಾದ ನಗರಸಭೆಯ ಚುನಾವಣೆಯ ಬಗ್ಗೆ ವರದಿ ಮಾಡಲು ಹೇಳುತ್ತಾನೆ. ಈ ಕೆಲಸದೊಂದಿಗೇ ಆತ ಕಾರ್ಸ್ ನಲ್ಲಿ ಶಿರವಸ್ತ್ರಧಾರಿಣಿಯರಾದ ಯುವತಿಯರ ಆತ್ಮಹತ್ಯಾ ಪ್ರಕರಣಗಳನ್ನು ಕುರಿತಾಗಿಯೂ ತನಿಖೆ ನಡೆಸಬೇಕಾಗಿರುತ್ತದೆ. ಈ ಯೋಜನೆಗಳನ್ನು ಹೊರತುಪಡಿಸಿ ಆತನಿಗೆ ಮತ್ತೊಂದು ಮುಖ್ಯವಾದ ಖಾಸಗಿ ಉದ್ದೇಶವೂ ಇದೆ. ಈಗ ಕಾರ್ಸ್ ನಗರದಲ್ಲಿ ತನ್ನ ತಂದೆ ಹಾಗೂ ತಂಗಿಯೊಡನೆ ವಾಸಮಾಡುತ್ತಿರುವ ಕಾಲೇಜಿನಲ್ಲಿ ತನ್ನ ಸಹಪಾಠಿಯಾಗಿದ್ದ ಸುಂದರಿ ಐಪೆಕ್ ಳನ್ನು ಸಂಧಿಸಿ ಆಕೆಯನ್ನು ತನ್ನ ಜೀವನಸಂಗಾತಿಯಾಗಿ ಮಾಡಿಕೊಳ್ಳುವ ತವಕ-ಹಂಬಲಗಳೂ ಆತನಿಗಿವೆ.

ಟರ್ಕಿಷ್ ದಂಡ ಸಂಹಿತೆಯ ಅನುಚ್ಛೇದ 301ರ ಪ್ರಕಾರ ಟರ್ಕಿಷ್ ಸಂಸ್ಕೃತಿಯನ್ನು ಹೀಗಳೆದಿದ್ದಾರೆನ್ನುವ ಆರೋಪದ ಮೇರೆಗೆ ಅವರ ಮೇಲೆ ಕ್ರಮ ಜರುಗಿಸಲಾಯಿತು. ಅನೇಕ ವರ್ಷಗಳ ಕಾಲ ಲೇಖಕರು ಹಾಗೂ ವಿದ್ವಾಂಸರ ಮೇಲೆ ಇದರ ಅಡಿಯಲ್ಲಿ ಕ್ರಮ ಜರುಗಿಸಲಾಗುತ್ತಿತ್ತು. ಅನಂತರ ಅದು ಸರ್ಕಾರದ ನೀತಿಯಾಗಿರದಿದ್ದರೂ ಮೂಲಭೂತವಾದಿಗಳು ಹಾಗೂ ಉಗ್ರ ರಾಷ್ಟ್ರೀಯತಾವಾದಿಗಳ ಆಯುಧವಾಗಿತ್ತು.

‘ಕ’ ತನ್ನ ಸ್ವಯಿಚ್ಛೆಯಿಂದಲ್ಲದೇ ಬಲವಂತದ ಮೇರೆಗೆ, ಟರ್ಕಿಯ ಜನತೆಯನ್ನು ಪ್ರಜ್ಞಾವಂತರನ್ನಾಗಿ ಮಾಡಲು ಹೆಣಗುವ ಭ್ರಮನಿರಸನಗೊಂಡ ಎಡಪಂಥೀಯ ರಂಗ ಕಲಾವಿದ ದಂಪತಿ ಸುನೈ ಜೈಂ ಮತ್ತು ಅವನ ಪತ್ನಿ ಫಂಡಾ ಈಸರ್ ಹಾಗೂ ಬ್ಲೂ ಎಂಬ ಒಬ್ಬ ಉಗ್ರ ಧಾರ್ಮಿಕ ಮೂಲಭೂತವಾದಿಯ ಮಧ್ಯವರ್ತಿಯಾಗುವ ಸನ್ನಿವೇಶಗಳಲ್ಲಿ ಕತೆ ಮುಂದುವರಿಯುತ್ತದೆ. ಕ ಸರ್ವಜನಸ್ನೇಹಿ (ಕಾಸ್ಮೊಪಾಲಿಟನ್) ನಗರವಾದ ಇಸ್ತಾನ್ ಬುಲ್ನವನು, ಬೂಜ್ರ್ವಾ ಹಿನ್ನೆಲೆಯವನು. ನಾಸ್ತಿಕ, ಗಡೀಪಾರಿನ ಶಿಕ್ಷೆಗೆ ಒಳಗಾಗಿ ಪಾಶ್ಚಿಮಾತ್ಯರ ನಾಡು ಜರ್ಮನಿಯಲ್ಲಿ ಒಂದು ದಶಕಕ್ಕೂ ಮೀರಿ ಕಾಲಕಳೆದವನು. ಹೀಗಾಗಿ ಟರ್ಕಿಯ ಸೆಕ್ಯುಲರ್ ಸರ್ಕಾರಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡ ಹುಡುಗಿಯರ ಬಗ್ಗೆ ಬರೆಯುವುದು ಅಪ್ರಿಯವಾದ ಸಂಗತಿ, ಏಕೆಂದರೆ ಅದು ಸರ್ಕಾರದ ಘನತೆಗೆ ಚ್ಯುತಿ ತರುವಂಥಾ ಕೆಲಸ. ಆದ್ದರಿಂದ ಅವರು ‘ಕ’ ನನ್ನು ಹಿಂಬಾಲಿಸುವಂತೆ ಗೂಢಚಾರರನ್ನು ನೇಮಿಸುತ್ತಾರೆ. ಸಾಮಾನ್ಯ ಜನರು ಅವನನ್ನು ಅನುಮಾನದಿಂದ ನೋಡುತ್ತಾರೆ. ತನ್ನ ಗೆಳತಿ ಐಪೆಕ್ಳೊಡನೆ ಪೇಸ್ಟ್ರಿ ಅಂಗಡಿಯಲ್ಲಿರುವಾಗ ಆತನ ಸಂಸ್ಥೆಯಲ್ಲಿ ಶಿರವಸ್ತ್ರಧಾರಿಣಿ ಯುವತಿಯರಿಗೆ ಪ್ರವೇಶ ನಿಷೇಧಿಸಲಾಗಿದೆಯೆಂಬ ಕಾರಣದಿಂದ ಶಿಕ್ಷಣ ಸಂಸ್ಥೆಯೊಂದರ ನಿರ್ದೇಶಕನಿಗೆ ಮೂಲಭೂತವಾದಿಯೊಬ್ಬ ಗುಂಡಿಟ್ಟು ಕೊಲ್ಲುವುದನ್ನು ಕ ನೋಡುತ್ತಾನೆ. ತನ್ನ ಪ್ರಿಯತಮೆ ಐಪೆಕ್ ಳ ಮಾಜಿ ಪತಿಯಾದ ತನ್ನ ಕಾಲೇಜು ಸಹಪಾಠಿ ಮುಹ್ತಾರ್ ನನ್ನೂ ಕ ಭೇಟಿಯಾಗುತ್ತಾನೆ. ವಿಪರ್ಯಾಸವೆಂದರೆ, ಅವರಿಬ್ಬರೂ ಪೊಲೀಸರಿಂದ ಬಂಧನಕ್ಕೊಳಗಾದ ನಂತರ ಸೆಕ್ಯುಲರ್ ಸರ್ಕಾರ ಸೇನೆಯವರ ಸಹಭಾಗಿತ್ವದಲ್ಲಿ ನಡೆಸುತ್ತಿರುವ ದೌರ್ಜನ್ಯಗಳಿಗೆ ಪ್ರತ್ಯಕ್ಷದರ್ಶಿಗಳಾಗುತ್ತಾರೆ. ತನ್ನನ್ನು ಹಿಂಬಾಲಿಸುವ ಬೇಹುಗಾರರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿರುವ ಇಸ್ಲಾಮಿ ಉಗ್ರಗಾಮಿ ಬ್ಲೂನನ್ನು ಭೆಟ್ಟಿಯಾಗುವಲ್ಲಿ ಕ ಯಶಸ್ವಿಯಾಗುತ್ತಾನೆ.

(ಮೌರೀನ್ ಫ್ರೀಲಿ)

ಬ್ಲೂ ಎಂಬ ಈ ಇಸ್ಲಾಮಿ ಉಗ್ರಗಾಮಿಯ ವ್ಯಕ್ತಿತ್ವವನ್ನು ಪಾಮುಕ್ ಅತ್ಯಂತ ಸಂಕೀರ್ಣವಾಗಿ ಚಿತ್ರಿಸಿದ್ದಾರೆ. ತಮ್ಮ ಮೊದಲ ಭೇಟಿಯಲ್ಲಿ ಬ್ಲೂ ‘ಕ’ ನಿಗೆ ‘ನೀನೊಬ್ಬ ಆಧುನಿಕ ದರ್ವೇಷ್. ನೀನು ಪ್ರಪಂಚದಿಂದ ವಿಮುಖನಾಗಿ ಭಕ್ತಿಯಿಂದ ನಿನ್ನನ್ನು ಕಾವ್ಯಕ್ಕೆ ಸಮರ್ಪಿಸಿಕೊಂಡಿದ್ದೀಯ. ಮುಗ್ಧ ಮುಸ್ಲಿಮರನ್ನು ಹೀಗಳೆಯುವವರ ಕೈಗೊಂಬೆಯಾಗಲು ನೀನೆಂದೂ ಬಯಸಬಾರದು. ನಾನು ನಿನ್ನನ್ನು ನಂಬಿದ ಹಾಗೆಯೇ ನೀನೂ ನನ್ನ ಮೇಲೆ ನಂಬಿಕೆಯಿಡಲು ತೀರ್ಮಾನಿಸಿರುವೆ ಮತ್ತು ಅದಕ್ಕೋಸ್ಕರವಾಗಿ ನೀನು ಈ ಹಿಮಪಾತದ ನಡುವೆಯೂ ನನ್ನನ್ನು ಭೇಟಿಯಾಗಲು ಬಂದೆ,’ ಎನ್ನುತ್ತಾನೆ. ಬ್ಲೂನಲ್ಲಿ ಕವಿಯ ಹೃದಯವೂ ಇದೆ. ಆತ ಕನಸುಗಾರ. ಪ್ರಖ್ಯಾತ ಕವಿ ಫಿರ್ದೂಸಿಯ `ಷಾ ನಾಮೆ’ ಕಾವ್ಯ ಆತನಿಗೆ ಕಂಠಪಾಠವಾಗಿದೆ. ತಾನು ಈ ಕಾವ್ಯವನ್ನು ನೂರಾರು ಬಾರಿ ಓದಿದ್ದರೂ ಶ್ರೇಷ್ಠ ಯೋಧರಾದ ಸೊಹ್ರಾಬ್ ಮತ್ತು ರುಸ್ತುಂ ಯುದ್ಧಭೂಮಿಯಲ್ಲಿ ತಾವು ತಂದೆ? ಮಗ ಎಂಬ ಅರಿವಿಲ್ಲದೇ ವೈರಿಗಳಾಗಿ ಪರಸ್ಪರ ಎದುರಾಗುವ ದೃಶ್ಯಕ್ಕೆ ತಲುಪಿದಾಗ ತಾನು ತತ್ತರಿಸತೊಡಗುತ್ತೇನೆ, ತನ್ನ ಹೃದಯ ಜೋರಾಗಿ ಹೊಡೆದುಕೊಳ್ಳುತ್ತದೆಯೆಂದು ‘ಕ’ ನಿಗೆ ಹೇಳುತ್ತ, ಆ ಸಂದರ್ಭವನ್ನು ನೆನೆದು ಕಣ್ಣೀರುಗರೆಯುವ ಬ್ಲೂ ‘ಕ’ ನಿಗೆ `ಒಂದಾನೊಂದು ಕಾಲದಲ್ಲಿ ಸಾವಿರಾರು ಜನರಿಗೆ ಕಂಠಪಾಠವಾಗಿದ್ದ ಕತೆಯಿದು – ತಬ್ರೀಸ್ ನಿಂದ ಇಸ್ತಾನ್ ಬುಲ್ನವರೆಗೆ, ಬೋಸ್ನಿಯಾದಿಂದ ತ್ರಾಬ್ ಜಾನ್ವರೆಗೆ – ಜನರು ಈ ಕತೆಯನ್ನು ನೆನಪಿಸಿಕೊಂಡಾಗ ತಮ್ಮ ಬದುಕಿನಲ್ಲಿ ಅರ್ಥ ಕಂಡುಕೊಳ್ಳುತ್ತಿದ್ದರು.

ಪಾಶ್ಚಿಮಾತ್ಯ ಜಗತ್ತಿನ ಜನರಿಗೆ ಈಡಿಪಸ್ ತನ್ನ ತಂದೆಯನ್ನು ಹತ್ಯೆ ಮಾಡುವ ಕತೆ ಮತ್ತು ಮ್ಯಾಕ್ ಬೆಥ್ ನ ಅಧಿಕಾರ ದಾಹ ಹಾಗೂ ದುರಂತ ಸಾವಿನ ಕತೆಗಳು ಯಾವ ರೀತಿಯಲ್ಲಿ ಅವರ ಬದುಕಿನ ಅರ್ಥದ ಅಭಿವ್ಯಕ್ತಿಗಳಾಗಿಬಿಡುತ್ತವೆಯೋ ಅದೇ ರೀತಿಯಲ್ಲಿ ಈ ಕತೆ ನಮ್ಮ ಜನತೆಗೆ ಆದರ್ಶಪ್ರಾಯವಾಗಿತ್ತು. ಆದರೆ ಈಗ, ನಾವು ಪಶ್ಚಿಮದ ಮಾಯೆಗೆ ಸಿಲುಕಿ ನಮ್ಮ ಕತೆಗಳನ್ನು ಮರೆತುಬಿಟ್ಟಿದ್ದೇವೆ. ಎಲ್ಲಾ ಹಳೆಯ ಕತೆಗಳನ್ನೂ ನಮ್ಮ ಮಕ್ಕಳ ಪಠ್ಯಪುಸ್ತಕಗಳಿಂದ ತೆಗೆದುಹಾಕಲಾಗಿದೆ. ಈ ದಿನಗಳಲ್ಲಿ ಇಡೀ ಇಸ್ತಾನ್ ಬುಲ್ ನಲ್ಲಿ ‘ಷಾ ನಾಮೆ’ ಯನ್ನು ಇಟ್ಟುಕೊಂಡಿರುವ ಒಬ್ಬನೇ ಒಬ್ಬ ಪುಸ್ತಕ ವ್ಯಾಪಾರಿಯೂ ಕಂಡುಬರುವುದಿಲ್ಲ! ಅದಕ್ಕೇನು ವಿವರಣೆ ನೀಡಬಲ್ಲೆ?’ ಎಂದು ಮಾರ್ಮಿಕವಾದ ಪ್ರಶ್ನೆಗಳನ್ನು ಕೇಳುತ್ತಾನೆ. ತನ್ನ ಕಾದಂಬರಿಯಲ್ಲಿ ಓದುಗರು ಮೆಚ್ಚಿಕೊಳ್ಳುವಂಥಾ ಇಸ್ಲಾಮಿಗಳೂ ಬರುತ್ತಾರೆನ್ನುವುದನ್ನು ಪಾಮುಕ್ ಅಲ್ಲಗಳೆಯುವುದಿಲ್ಲ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾಡುವಂತೆ ತನಗೆ ಎಲ್ಲ ಇಸ್ಲಾಮೀಯರನ್ನೂ ಉಗ್ರಗಾಮಿಗಳೆಂದು ಖಂಡಿಸುವುದರಲ್ಲಿ ಆಸಕ್ತಿಯಿಲ್ಲ. ಆದರೆ ಅದೇ ಸಮಯದಲ್ಲಿ ಸೆಕ್ಯುಲರ್ ಆದರ್ಶಗಳನ್ನು ಹೊಂದಿದವರೆಲ್ಲರೂ ಪಾಶ್ಚಿಮಾತ್ಯರ ಕೀಳು ದರ್ಜೆಯ ಅನುಕರಣೆಯಲ್ಲಿ ತೊಡಗಿರುವವರೆಂದು ಅರ್ಥೈಸಿಕೊಳ್ಳುವ ಇಸ್ಲಾಮೀಯರ ದೃಷ್ಟಿಕೋನವನ್ನೂ ತಾನು ಖಂಡಿಸುತ್ತೇನೆ. ಹೀಗೆ ಎರಡೂ ಬಣದವರಲ್ಲಿ ಹೇರಳವಾಗಿರುವ ಚರ್ವಿತ ಚರ್ವಣವಾದ ಹಳಸಲು ಅಭಿಪ್ರಾಯಗಳನ್ನು (ಕ್ಲೀಷೆಗಳು) ನಾಶ ಮಾಡುವುದೇ ತನ್ನ ಧ್ಯೇಯವಾಗಿದೆ ಹಾಗೂ ರಾಜಕೀಯ ಕಾದಂಬರಿಯ ಮೂಲ ಉದ್ದೇಶವೂ ಇದೇ ಎಂದು ಪಾಮುಕ್ ಅಭಿಪ್ರಾಯ ಪಡುತ್ತಾರೆ. ತನ್ನ ಸ್ವಯಿಚ್ಛೆಯಿಂದಲೇ ತಲೆಯ ಮೇಲೆ ಮುಸುಕು ಹಾಕಿಕೊಳ್ಳುವ ಶಿರವಸ್ತ್ರಧಾರಿಣಿ ಯುವತಿಯರ ಪಡೆಯ ನಾಯಕಿಯಾದ ತರುಣಿ ಕ್ಯಾಡಿಫ್ ಳನ್ನು ಅಷ್ಟು ಕಕ್ಕುಲಾತಿಯಿಂದ ಅವರು ಚಿತ್ರಿಸಿರುವ ಬಗ್ಗೆ ಟರ್ಕಿಯ ಸೆಕ್ಯುಲರ್ ವಾದಿಗಳು ಮುನಿಸಿಕೊಂಡಿದ್ದರು. ರಾಜಕೀಯ ಇಸ್ಲಾಮಿಗಳ ದೌರ್ಜನ್ಯಗಳಿಗೆ ಮಹಿಳೆಯರು ಹೇಗೆ ಬಲಿಪಶುಗಳಾಗುತ್ತಾರೆ ಎಂಬುದನ್ನು ಪಾಮುಕ್ ವರ್ಣಿಸಿರುವುದರ ಬಗ್ಗೆ ಅನೇಕರಿಗೆ ಅಸಮಾಧಾನವಿದೆ. ಪ್ರಜಾಪ್ರಭುತ್ವವನ್ನು ಕಾಪಾಡಲು, ರಾಷ್ಟ್ರದ ಪರಿಕಲ್ಪನೆಯನ್ನುಳಿಸಿಕೊಳ್ಳಲು ಅಮಾನುಷವಾದ ಸೈನ್ಯಾಡಳಿತಕ್ಕೆ ಮೊರೆ ಹೋದ ರಾಷ್ಟ್ರೀಯತಾವಾದಿಗಳಿಗೆ, ಪಾಮುಕ್ ಸೈನ್ಯದ ಕಾರ್ಯಾಚರಣೆಯ ದೌರ್ಜನ್ಯಗಳನ್ನು ಖಂಡಿಸಿದ್ದರ ಬಗ್ಗೆ ಆಕ್ರೋಶವಿದೆ. ಕುರ್ಡಿಷ್ ಸಮುದಾಯದವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಾರೆಂದು ಪಾಮುಕ್ ರವರ ಮೇಲೆ ದ್ವೇಷಕಾರಿದವರಿದ್ದಾರೆ. ಆದರೆ ಈ ಯಾವ ಕಟುವಾಸ್ತವಗಳನ್ನು ಚಿತ್ರಿಸಲೂ ಪಾಮುಕ್ ಹಿಂಜರಿಯುವುದಿಲ್ಲ.

ಯುರೋಪಿಯನ್ ಒಕ್ಕೂಟಕ್ಕೆ ಟರ್ಕಿ ಸೇರ್ಪಡೆಯಾಗುವ ವಿಷಯವನ್ನು ಬಹಳ ಕಾಲದಿಂದಲೂ ಚರ್ಚಿಸಲಾಗುತ್ತಿದೆ. ಅದು ಸಾಧ್ಯವಾದರೆ ಯುರೋಪ್ ಒಂದು ಬಲಶಾಲಿಯಾದ ಬಹು ಧಾರ್ಮಿಕ ಸಂಸ್ಕೃತಿಯ ತಳಹದಿಯನ್ನು ಹೊಂದಿದ ಖಂಡವಾಗುತ್ತದೆ. ಟರ್ಕಿಯ ಸುಮಾರು ಎಪ್ಪತ್ತು ಮಿಲಿಯನ್ ಮುಸ್ಲಿಮರು ಈ ಖಂಡದ ಭಾಗವಾಗುತ್ತಾರೆ. ಇದು ಖಂಡಿತವಾಗಿಯೂ ಅಪಾಯಕಾರಿ ಬೆಳವಣಿಗೆಯಾಗುವುದಿಲ್ಲ ಏಕೆಂದರೆ ತುರ್ಕರು ಶಾಂತಿಪ್ರಿಯರು ಅನ್ನುವುದು ಪಾಮುಕ್ ರವರ ಅಭಿಮತ.

ಟರ್ಕಿಯ ಸೆಕ್ಯುಲರ್ ಸರ್ಕಾರಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡ ಹುಡುಗಿಯರ ಬಗ್ಗೆ ಬರೆಯುವುದು ಅಪ್ರಿಯವಾದ ಸಂಗತಿ, ಏಕೆಂದರೆ ಅದು ಸರ್ಕಾರದ ಘನತೆಗೆ ಚ್ಯುತಿ ತರುವಂಥಾ ಕೆಲಸ. ಆದ್ದರಿಂದ ಅವರು ‘ಕ’ ನನ್ನು ಹಿಂಬಾಲಿಸುವಂತೆ ಗೂಢಚಾರರನ್ನು ನೇಮಿಸುತ್ತಾರೆ. ಸಾಮಾನ್ಯ ಜನರು ಅವನನ್ನು ಅನುಮಾನದಿಂದ ನೋಡುತ್ತಾರೆ. ತನ್ನ ಗೆಳತಿ ಐಪೆಕ್ಳೊಡನೆ ಪೇಸ್ಟ್ರಿ ಅಂಗಡಿಯಲ್ಲಿರುವಾಗ ಆತನ ಸಂಸ್ಥೆಯಲ್ಲಿ ಶಿರವಸ್ತ್ರಧಾರಿಣಿ ಯುವತಿಯರಿಗೆ ಪ್ರವೇಶ ನಿಷೇಧಿಸಲಾಗಿದೆಯೆಂಬ ಕಾರಣದಿಂದ ಶಿಕ್ಷಣ ಸಂಸ್ಥೆಯೊಂದರ ನಿರ್ದೇಶಕನಿಗೆ ಮೂಲಭೂತವಾದಿಯೊಬ್ಬ ಗುಂಡಿಟ್ಟು ಕೊಲ್ಲುವುದನ್ನು ಕ ನೋಡುತ್ತಾನೆ.

`ಹಿಮ’ ಟರ್ಕಿಷ್ ಭಾಷೆಯಲ್ಲಿರುವ ಒರ್ಹಾನ್ ಪಾಮುಕ್ ರವರ ಮೂಲ ಕಾದಂಬರಿಯ ಆಂಗ್ಲ ಅನುವಾದದ ಕನ್ನಡ ತರ್ಜುಮೆ. ಪಾಮುಕ್ ರ ಸಹಪಾಠಿ ಮೌರೀನ್ ಫ್ರೀಲಿ ಈ ಕಾದಂಬರಿಯನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. `ಒಬ್ಬ ಲೇಖಕನಲ್ಲಿರುವ ವಿಸ್ಮಯಕಾರಿ ಅಂಶವೆಂದರೆ ಅವನ ಸೃಜನಶೀಲತೆಯಲ್ಲ, ಅದು ಅವನ ಜಿದ್ದಿತನ, ಅವನ ಅಪರಿಮಿತವಾದ ತಾಳ್ಮೆ. “ಸೂಜಿಯಿಂದ ಬಾವಿ ತೋಡುವುದು” ಎಂಬ ಸೊಗಸಾದ ಟರ್ಕಿಷ್ ನುಡಿಗಟ್ಟನ್ನು ಲೇಖಕರನ್ನು ಗಮನದಲ್ಲಿಟ್ಟುಕೊಂಡೇ ಬಳಸಲಾಗಿದೆ ಎಂದು ನನ್ನ ಅನಿಸಿಕೆ,’ ಎಂದು ಪಾಮುಕ್ ಹೇಳುತ್ತಾರೆ. ಅತ್ಯಂತ ಸೂಕ್ಷ್ಮವಾದ ಸಂಕೀರ್ಣ ವಿಚಾರಗಳನ್ನು ಅನಾಯಾಸವಾಗಿ ತಮ್ಮ ಕಥನಗಾರಿಕೆಯಲ್ಲಿ ನಿರೂಪಿಸುವ ಒರ್ಹಾನ್ ಪಾಮುಕ್ ರವರ `ಹಿಮ’ ಅವರ ಏಳನೆಯ ಕಾದಂಬರಿ.

(ಲೇಖಕಿ ಕೆ.ಎಸ್ ವೈಶಾಲಿ)

ಒರ್ಹಾನ್ ಪಾಮುಕ್ ರವರ ಸಾಹಿತ್ಯ ಸೃಷ್ಟಿ ವಿಪುಲವಾಗಿದೆ : ದಿ ವೈಟ್ ಕ್ಯಾಸಲ್, ದಿ ಬ್ಲ್ಯಾಕ್ ಬುಕ್, ದಿ ನ್ಯೂ ಲೈಫ್, ಮೈ ನೇಮ್ ಈಸ್ ರೆಡ್, ಸ್ನೋ, ದಿ ಮ್ಯೂಸಿಯಂ ಆಫ್ ಇನ್ನೋಸೆನ್ಸ್, ದಿ ಸೈಲೆಂಟ್ ಹೌಸ್, ಎ ಸ್ಟ್ರೇಂಜ್ನೆಸ್ ಇನ್ ಮೈ ಮೈಂಡ್ ಇವೇ ಮುಂತಾದ ಕಾದಂಬರಿಗಳನ್ನು ರಚಿಸಿರುವ ಪಾಮುಕ್ ದಿ ಅದರ್ ಕಲರ್ಸ್, ಇಸ್ತಾನ್ಬುಲ್, ದಿ ನಯೀವ್ ಅಂಡ್ ಸೆಂಟಿಮೆಂಟಲ್ ನಾವೆಲಿಸ್ಟ್ ಎಂಬ ಕೃತಿಗಳನ್ನೂ ಹೊರತಂದಿದ್ದಾರೆ. 2006ರಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಪಾತ್ರರಾದ ಒರ್ಹಾನ್ ಪಾಮುಕ್ ರವರ ಕೃತಿಗಳು ಪ್ರಪಂಚಾದ್ಯಂತ 200,000 ಪ್ರತಿಗಳಷ್ಟು ಮಾರಾಟಗೊಂಡು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಿರುವ ದಾಖಲೆಯನ್ನು ನಿರ್ಮಿಸಿವೆ. ಪಾಮುಕ್ ರವರ ಕಾದಂಬರಿಗಳು ಇಲ್ಲಿಯವರೆಗೆ ಸುಮಾರು 61 ಭಾಷೆಗಳಿಗೆ ಅನುವಾದಗೊಂಡಿವೆ. ಆದರೆ ಪಾಮುಕ್ ರವರ ಯಾವ ಕಾದಂಬರಿಗಳೂ ಕನ್ನಡಕ್ಕೆ ಅನುವಾದಗೊಂಡಿರಲಿಲ್ಲ. ಅವರ `ಸ್ನೋ’ ಕಾದಂಬರಿಯ ಕನ್ನಡ ಭಾಷಾಂತರ `ಹಿಮ’ ಪ್ರಪ್ರಥಮವಾಗಿ ಕನ್ನಡ ಭಾಷೆಗೆ ಅನುವಾದಗೊಂಡಿರುವ ಕಾದಂಬರಿ. ಈ ಕಾದಂಬರಿಯನ್ನು ಪ್ರೀತಿಯಿಂದ ಕನ್ನಡ ಓದುಗರ ಮುಂದಿಡುತ್ತಿದ್ದೇನೆ.