ಸಾಹಿತಿ ಹೇಳಿದ:
“ನಾನೊಬ್ಬ ಬಡವ ಎಂಬುದು…..”
“ಲೋಕಕ್ಕೇ ಗೊತ್ತು!”
“ಹೌದು, ಕಳೆದ ಶುಕ್ರವಾರ ನನ್ನ ಕೈಯಲ್ಲಿ ಒಂದು ಕವರ್ ಕೊಟ್ಟು ‘ಇದರೊಳಗೆ ಒಂದು ಸಣ್ಣ ಕಥೆಯಿದೆ. ಓದಿ ನೋಡಿ ತಿದ್ದಿ ಕೊಡುತ್ತೀರಾ?’ ಅಂತ ಕೇಳಿದಳು. ನಾನು ಇಲ್ಲಿ ಬಂದು ಕವರ್ ತೆರೆದು ನೋಡಿದೆ. ಬೇರೇನೂ ಇಲ್ಲ. ಹತ್ತು ರೂಪಾಯಿಯ ಐದು ನೋಟುಗಳು ಮಾತ್ರ!”
“ಇದೇನು ಅವಳ ಸಣ್ಣಕಥೆ? ಐವತ್ತು ರೂಪಾಯಿ!”
“ಹೌದು”
“ಅದರಲ್ಲಿ ಈಗ ಎಷ್ಟು ಬಾಕಿ ಇದೆ?”
“ಅದರಿಂದ ಎರಡು ತಿಂಗಳ ಬಾಕಿಯಿದ್ದ ಬಾಡಿಗೆ ಕೊಟ್ಟೆ ಹೋಟೆಲಿಗೂ ಕೊಡುವುದಿತ್ತು. ಒಂದು ಹೊಸ ಅಂಗಿ ಮತ್ತು ಲುಂಗಿ ಕೊಂಡೆ. ಅದನ್ನೇ ಈಗ ನೀವು ಹಾಕಿಕೊಂಡಿದ್ದೀರಿ… ಬಾಕಿ ಇನ್ನು ಆರೂವರೆ ರೂಪಾಯಿ ಇರಬಹುದು.”
“ಅದರಿಂದ ಎರಡು ರೂಪಾಯಿ ನನಗೆ ಬೇಕು.”
ಸಾಹಿತಿ ಎರಡು ರೂಪಾಯಿ ಕೊಟ್ಟ.

ಸುನೈಫ್ ವಿಟ್ಲ ಅನುವಾದಿಸಿದ ವೈಕ್ಕಂ ಮುಹಮ್ಮದ್ ಬಷೀರ್ ಸಣ್ಣ ಕತೆ ಈ ಭಾನುವಾರದ ನಿಮ್ಮ ಓದಿಗಾಗಿ.

 

ಹೆಜ್ಜೆ ಗುರುತು ಎಂಬ ಈ ಕಥೆಯನ್ನು ಬಹಳ ವರ್ಷಗಳ ಹಿಂದೆ ರಾಜಕಾರಣಿಯೊಬ್ಬ ಸಾಹಿತಿಯೊಬ್ಬನಿಗೆ ಅವನ ಕೋಣೆಯಲ್ಲಿ ಕೂತು ಹೇಳಿದ್ದ. ಈ ಕಥೆ ಕೇಳಿ ತಾನು ಬಹಳ ಹೊತ್ತು ಸ್ಥಂಭೀಭೂತನಾಗಿ ಬಿಟ್ಟಿದ್ದೆ ಎಂದು ಆ ಸಾಹಿತಿ ನನ್ನೊಂದಿಗೆ ಹೇಳಿದ್ದ.
ನಾನೀಗ ಆ ಹಳೆಯ ಕಥೆಯನ್ನು ನೆನಪು ಮಾಡಿಕೊಳ್ಳಲೂ ಕಾರಣವಿದೆ. ಅದನ್ನು ಆಮೇಲೆ ಹೇಳುವೆ. ಆ ಸಾಹಿತಿಯಂತೆಯೇ, ಆ ರಾಜಕಾರಣಿಯೂ ಯಾರದೋ ಬಲವಂತಕ್ಕಲ್ಲ ರಾಜಕಾರಣಿಯಾದದ್ದು. ಒಳಗಿನ ತುಡಿತವೆಂದರೆ ತಪ್ಪಾಗಲಾರದು. ತನ್ನ ಸುತ್ತಲಿನ ಜನರ ಬದುಕು ಸುಂದರವಾಗಿಲ್ಲ; ಕೆಡುಕುಗಳಿಂದ ತುಂಬಿದೆ. ದಾಸ್ಯತನ. ಆದ್ದರಿಂದ ಸುಂದರವಾದ, ಆರೋಗ್ಯವಾದ, ಸ್ವತಂತ್ರವಾದ… ಹೀಗೊಂದು ಯೋಚನೆ ಆತನಲ್ಲಿ ಉದಿಸಿತು. ಆತನಿಗೆ ವಿದ್ಯಾಭ್ಯಾಸ ಅಷ್ಟಕ್ಕಷ್ಟೇ. ಜನಿಸಿದ್ದು ಕಡುಬಡತನದಲ್ಲಿ. ತನ್ನ ಹದಿನೆಂಟನೆ ವಯಸ್ಸಿನಲ್ಲಿ ರಾಜಕೀಯಕ್ಕೆ ಧುಮುಕಿದ್ದ ಆತ ಒಟ್ಟು ಒಂಭತ್ತು ವರ್ಷಗಳ ಕಾಲ ಜೈಲಿನಲ್ಲೂ ಕಳೆದಿದ್ದ. ಉತ್ತಮ ವಾಗ್ಮಿ. ಓದು ದೊಡ್ಡ ಹವ್ಯಾಸ. ಬುದ್ದಿಯೂ ಚುರುಕು. ಕೊನೆಗೊಮ್ಮೆ ಆತ… ಆಗಿನ ಅತ್ಯಂತ ಚುರುಕಿನ ಬಹುದೊಡ್ಡ ರಾಜಕೀಯ ಸಂಘಟನೆಯ ಪ್ರೆಸಿಡೆಂಟ್ ಆದ. ಅದಕ್ಕೂ ಮೊದಲೇ ಆ ರಾಜಕಾರಣಿಗೆ ಆ ಸಾಹಿತಿಯ ಪರಿಚಯವಿತ್ತು. ಅವರಿಬ್ಬರೂ ಜೈಲಿನಲ್ಲಿ ಒಂದೇ ಕೋಣೆಯಲ್ಲಿ ಕಾಲ ಕಳೆದಿದ್ದರು. ಅವರಿಬ್ಬರ ನಡುವಿನ ಹಲವು ಭಿನ್ನತೆಗಳಲ್ಲಿ ಮುಖ್ಯವಾದದ್ದು ತಮಾಷೆ. ಆ ರಾಜಕಾರಣಿ ಹಾಸ್ಯಪ್ರಿಯನಲ್ಲದಿದ್ದರೂ ಆ ಸಾಹಿತಿಯೊಂದಿಗೆ ಮಾತ್ರ ನಗುತ್ತಲೇ ಮಾತಾಡುತ್ತಾನೆ. ಸಾಹಿತಿ ರಾಜಕಾರಣಿಯೊಂದಿಗೆ ಆತನ ಬಣ್ಣದ ಬಗ್ಗೆ ಹೇಳುತ್ತಾನೆ:

“ನಾಯಕರೇ, ನಿಮ್ಮ ಕಣ್ಣಿನ ಬಿಳಿ ಮತ್ತು ಹಲ್ಲುಗಳು ಮಾತ್ರ ಬೆಳ್ಳಗಿರುವುದಲ್ಲವಾ!”
“ಉಗುರುಗಳು?”
“ಹು, ಉಗುರುಗಳೂ ಇವೆ. ಆದರೂ ನೀವು ಇಷ್ಟೊಂದು ಕಪ್ಪಾಗೋದಕ್ಕೆ ಕಾರಣ ಏನೂಂತ?”
“ಧಿಕ್ಕಾರಿ! ನನ್ನ ಮೈಬಣ್ಣದ ಬಗ್ಗೆ ಮಾತಾಡಿ ನನ್ನನ್ನು ಕೆಣಕಲಾಗದು!”. ಪೊಲೀಸರು ಆತನ ಮೈಬಣ್ಣವನ್ನು ಸೇರಿಸಿಯೇ ಬಯ್ಯುತ್ತಿದ್ದರು. ಪೊಲೀಸರಿಗೆ ಬಯ್ಯುವುದಕ್ಕಾಗಲೀ, ಹೊಡೆಯುವುದಕ್ಕಾಗಲೀ ವಿಶೇಷ ಕಾರಣಗಳು ಬೇಕಿಲ್ಲವಲ್ಲ. ಆ ಕಾಲದಲ್ಲಿ ಬಿಳಿಯರು ದೇಶ ಆಳುತ್ತಿದ್ದರು. ಅವರ ದಾಸರಾಗಿ ಕಂದು ಬಣ್ಣದ ರಾಜರುಗಳಿದ್ದರು. ಬಹುಜನರು ಆ ರಾಜರುಗಳ ಗುಲಾಮರಾಗಿದ್ದರು. ಹಾಗಿದ್ದ ಬಹುಜನರಲ್ಲಿ ಒಬ್ಬ, ಅದರಲ್ಲೂ ಕಪ್ಪು ಮನುಷ್ಯನೊಬ್ಬ ರಾಜಕೀಯ ಮಾತಾಡುವುದೆಂದರೆ ಎಷ್ಟು ಸರಿ? ಬಹುಜನರೇ ಆತನನ್ನು ವಿರೋಧಿಸಿದರು. ಆದರೂ ಕಷ್ಟಗಳನ್ನು ಕೋಟಲೆಗಳನ್ನುದಾಟಿ ಆ ರಾಜಕೀಯ ಸಂಘಟನೆ ಬೆಳೆಯಿತು. ಹಾಗೆ ಅದು ಬೆಳೆಯುತ್ತಿದ್ದ ಕಾಲದಲ್ಲಿ… ಒಂದು ರಾತ್ರಿ. ಸರಿಸುಮಾರು ಹತ್ತು ಗಂಟೆಯಾಗಿರಬಹುದು. ಸಾಹಿತಿ ತನ್ನ ಕೋಣೆಯಲ್ಲಿ ಬಾಗಿಲು ಹಾಕಿ ಕೂತು ಯುವತಿಯೊಬ್ಬಳಿಗೆ ಪತ್ರ ಬರೆಯುತ್ತಿದ್ದ. ಆಗ ಹೊರಗಿನಿಂದ ಯಾರದೋ ಸದ್ದು:
“ಧಿಕ್ಕಾರಿ ಒಳಗಿದ್ದಾನಾ?”
ಸಾಹಿತಿಗೆ ಗುರುತು ಸಿಕ್ಕಿತು. ಆತ ಹೇಳಿದ:
“ಇಲ್ಲ. ಏನೋ ಸಾಹಿತ್ಯದ ಕೆಲಸಕ್ಕೆ ದೂರ ಹೋಗಿದ್ದಾರೆ. ನಿಮಗೇನು ಬೇಕು?”
“ಧಿಕ್ಕಾರಿ!” ಆತ ಹೇಳಿದ: “ಬಾಗಿಲು ತೆಗಿ”
ಸಾಹಿತಿಯ ಉತ್ತರ:
“ಮನಸ್ಸಿಲ್ಲ!”
ಹೊರಗಿನ ಕತ್ತಲೆಯಿಂದ ಪುನಃ ಸದ್ದು:


“ನಾನು ಎರಡೂವರೆ ಮೈಲು ನಡೆದು ಬಂದಿದ್ದೇನೆ. ಬರುವಾಗ ಬೇರೆ ಸ್ಥಳವಿಲ್ಲದೆ ಇಲ್ಲಿಗೆ ಬಂದೆ ಅಂತ ತಿಳ್ಕೊಂಡಿದ್ದೀಯಾ? ಬಾಗಿಲು ತೆಗಿ”
“ನನ್ನ ಕೋಣೆ ರಾಜಕೀಯ ಭಿಕ್ಷುಕರಿಗೆ ಇರುವ ಧರ್ಮಚತ್ರ ಅಲ್ಲ!”
“ನಾನೀಗ ಬಾಗಿಲು ಒಡೆದು ಒಳಗೆ ಬರುವೆ!”
“ನಾಯಕರೇ, ಈ ಕೋಣೆಯ ಬಾಡಿಗೆ ಕಟ್ಟುತ್ತಿರುವುದು ನಾನು.”
“ಪರವಾಗಿಲ್ಲ. ಈಗ ಬಾಗಿಲು ತೆಗಿ!”
“ನಾನೀಗ ನಿಮ್ಮ ಜೊತೆ ಮಾತಾಡುವ ಮನಸ್ಸಲ್ಲಿ ಇಲ್ಲ.”
“ಮತ್ತೆ?”
“ಒಬ್ಬ ಹೆಣ್ಣು; ಅವಳಿಗೆ ಅರಳಿದ ಹೂವಿನಂತ ಕಂಗಳಿಲ್ಲ, ಅವಳ ಕೂದಲಿಗೆ ರಾತ್ರಿ ಮಲ್ಲಿಗೆಯ ವಾಸನೆಯೂ ಇಲ್ಲ. ಆದರೂ ನಾನೀಗ ಅವಳ ಧ್ಯಾನದಲ್ಲಿದ್ದೇನೆ.”
ಹೊರಗಿನಿಂದ ನಗುವ ಸದ್ದು:
“ಮನುಷ್ಯನಿಗೆ ಹುಚ್ಚು ಹಿಡಿದರೆ ಏನು ಮಾಡುವುದು?”
“ನನಗೆ ಹುಚ್ಚು ಹಿಡಿದಿಲ್ಲ!”
“ಹಾಗಾದರೆ ಬಾಗಿಲು ತೆಗಿ.”
“ಆಗಲಿ, ಆದರೆ ನನಗೊಂದು ಉಪಕಾರ ಮಾಡಬಹುದಾ?”
“ಏನದು?”
“ನಿಮ್ಮ ರಾಜಕೀಯದ ಸಂಗಾತಿಗಳು ರಾತ್ರಿ ಹಗಲೆಂದಿಲ್ಲದೆ ಇಲ್ಲಿಗೆ ಬಂದು ಉಪದ್ರ ಕೊಡುತ್ತಿದ್ದಾರೆ. ಅದಕ್ಕೇನಾದರೂ ಮಾಡಬಹುದಾ?”
“ಆಗಲ್ಲ!”
“ಹೋ!”
“ಬಾಗಿಲು ತೆಗಿ.”
“ತೆಗೆಯುವೆ. ಆದರೆ, ಒಂದೊಮ್ಮೆ ನೀವು ದೇಶ ಆಳುವಾಗ ನನಗೊಂದು ಸಹಾಯ ಮಾಡಲೇಬೇಕು?”
“ಪೋಲಿಸ್ ಕಾನ್ಸ್ಟೇಬಲ್ ಮಾಡುವೆ.”
“ಬೇಡ.”
“ಪೋಲಿಸ್ ಇನ್ಸ್ಪೆಕ್ಟರ್!”
“ಬೇಡ.”
“ಕಮಿಷನರ್!”
“ಬೇಡ.”
“ಸೇನೆಯ ಕಮ್ಯಾಂಡರ್ ಇನ್ ಚೀಫ್!”
“ಅದೂ ಬೇಡ!”
“ಮತ್ತೆ?”
“ರಾಜನನ್ನಾಗಿ ಮಾಡಿದರೆ ಸಾಕು!”
“ಅದು ಸಾಧ್ಯವಿಲ್ಲ. ನಮ್ಮ ಅಜೆಂಡಾದಲ್ಲಿ ರಾಜರುಗಳು ಇಲ್ಲ!”
“ಅದರೂ ಇತಿಹಾಸದ ಒಂದು ಕುರುಹಾಗಿನ ನಗೆ ರಾಜನ ಪಟ್ಟ ದಯಪಾಲಿಸಬೇಕು. ನನಗೆ ಪ್ರಜೆಗಳು ಬೇಕಿಲ್ಲ. ನಿಜವಾಗಿಯೂ ಹೇಳುತ್ತಿದ್ದೇನೆ. ಆಗಲೂ ನಾನು ಕಥೆ ಬರೆಯುತ್ತೇನೆ. ವಿಷಯ ಹೀಗಿದೆ ನೋಡಿ. ನಮ್ಮ ಆ ನದಿಯ ನಡುವೆ ಒಂದು ದ್ವೀಪ ಇದೆ ಆಲ್ವಾ? ಅಲ್ಲಿ ನನಗೊಂದು ಮನೆ ಕಟ್ಟಿಸಿ ಕೊಡಬೇಕು. ಆ ದ್ವೀಪದ ತುಂಬಾ ಮರಗಳಿರಬೇಕು. ಅದರಲ್ಲಿ ತಾವರೆ ಕೊಳವೂ ಹೂದೋಟವೂ ಬೇಕು.”
“ಮತ್ತೆ?”
“ಆ ದ್ವೀಪ ಮತ್ತು ಮನೆಗೆ ಬಾಡಿಗೆ ಕೇಳಬಾರದು. ಅಲ್ಲಿ ರೇಡಿಯೋ ಇರಬೇಕು. ಟೆಲಿಫೋನ್ ಬೇಕು. ಒಂದು ಸಣ್ಣ ಇಂಜಿನ್ ಬೋಟ್ ಕೂಡ ಬೇಕು.”
“ಒಪ್ಪಿದೆ. ಈಗ ಬಾಗಿಲು ತೆಗಿ!”
ಆ ಸಾಹಿತಿ ಬಾಗಿಲು ತೆರೆದ. ಆ ನಾಯಕ ಒಳಗೆ ಬಂದ. ಇದುವರೆಗೂ ಕಂಡಿಲ್ಲದ ವೇಷವದು. ಅಂಗಿಯಿಲ್ಲ: ಲುಂಗಿಯೂ ಇಲ್ಲ. ಸುತ್ತಿರುವುದು ಹಳೆಯದೊಂದು ಟವೆಲ್ ಮಾತ್ರ. ಆತ ಹಾಗೆಯೇ ಸಾಹಿತಿಯ ಆರಾಮ ಕುರ್ಚಿಯಲ್ಲಿ ಕೂತ. ಏನೂ ಆಗಿಯೇ ಇಲ್ಲವೆಂಬಂತೆ ಆತ ಹೇಳಿದ:

“ವಿಪರೀತ ದಾಹ, ಹಸಿವೂ ಇದೆ.”
ಸಾಹಿತಿ ಹೇಳಿದ:
“ದಾಹ ಇದ್ದರೆ ಉಣ್ಣಬೇಕು. ಹಸಿವಾದರೆ… ಹಸಿವಾದರೆ ಏನು ಮಾಡುವುದು?”
ಆತ ಅದನ್ನು ಕೇಳಿಸಿಕೊಳ್ಳದೆ ಹೇಳಿದ:
“ನನಗೊಂದು ಅಂಗಿ ಮತ್ತು ಲುಂಗಿ ಬೇಕು.”
ಸಾಹಿತಿ ತನ್ನ ಪೆಟ್ಟಿಗೆ ತೆರೆದು ಅದರಿಂದ ಒಂದು ಹೊಸ ಅಂಗಿ ಮತ್ತು ಹೊಸ ಲುಂಗಿಯನ್ನು ತೆಗೆದು ಕೊಟ್ಟ.
“ನಿಮ್ಮಂತಹ ಕಪ್ಪಗಿನ ಜನರು ಹಾಕುವ ಪೌಡರ್ ಮಾತ್ರ…….”
“ನನಗೆ ಹಸಿವಾಗುತ್ತಿದೆ.” ಮಾತು ಗದ್ಗದಿತವಾದಂತೆ ಇತ್ತು. ಕೆಲದಿನಗಳಿಂದ ಏನೂ ತಿಂದಿಲ್ಲವೇನೋ.
ತಕ್ಷಣ ಸಾಹಿತಿ ಕೆಳಗಿಳಿದು ಹೋಗಿ ಹೋಟೆಲಿನಿಂದ ಕಟ್ಟಿಸಿಕೊಂಡು ಬಂದ.
ಊಟ ಮುಗಿಸಿ, ನೀರು ಕುಡಿದು ದಾಹ ತಣಿಸಿ, ಬೀಡಿ ಸೇದುತ್ತಾ ಆತ ಹೇಳಿದ:
“ಹಾ… ಅಧಿಕಾರ ಕೈಗೆ ಬಂದರೆ ಮೊದಲ ಕೆಲಸ ಏನು ಅಂತ ಗೊತ್ತಾ?”
“ಗೊತ್ತು!” ಸಾಹಿತಿ ತಕ್ಷಣ ಹೇಳಿದ: “ನನಗೆ ಆ ದ್ವೀಪದ ವಿಷಯ ಸರಿ ಮಾಡಿ ಕೊಡುವುದು!”
“ಲೋ ಮೂರ್ಖ ಕೇಳಿಲ್ಲಿ. ಸಾಹಿತಿಗಳನ್ನ ಒಟ್ಟಾಗಿ ಕೊಂದು ಹಾಕುವುದು.”
“ಮತ್ತೆ?”
ಆತ ಕೇಳಿದ:
“ಸಾಹಿತಿಗಳಿಗೆ ಮತ್ತು ರಾಜಕಾರಣಿಗಳಿಗೆ ಇರುವ ವ್ಯತ್ಯಾಸ ಏನು ಗೊತ್ತಾ?”
ಸಾಹಿತಿ ಹೇಳಿದ:
“ಅದು.. ಅದು ಎಲ್ಲರಿಗು ಗೊತ್ತಿರುವಂತದ್ದೇ ಅಲ್ವಾ?”
“ಆದರೂ, ಏನದು?”
“ರಾಜಕಾರಣಿಗಳಿಗೆ ಬುದ್ದಿಯಿಲ್ಲ, ಸಾಹಿತಿಗಳಿಗೆ ಬುದ್ದಿ ಇದೆ.”
ಆತ ನಗುತ್ತಾ ಹೇಳಿದ:
“ಸಾಹಿತಿಗಳು ಸೋಂಬೇರಿಗಳು. ಕಳ್ಳರು. ಗೊತ್ತಾಯ್ತ?”
ಸಾಹಿತಿ ಹೇಳಿದ:
“ಎದ್ದು ನಿಂತು ನನಗೆ ನಮಸ್ಕಾರ ಮಾಡಿ. ನನ್ನ ಕಾಲು ಮುಟ್ಟಿ ನಮಸ್ಕರಿಸಿ ತಲೆಯಲ್ಲಿ ಇಟ್ಟುಕೊಳ್ಳಿ. ನಾವು ಸಾಹಿತಿಗಳೆಂದರೆ, ನಿಮ್ಮಂತಹ ರಾಜಕಾರಣಿಗಳನ್ನು ಏನು ಬೇಕಾದರೂ ಹೇಳಬಹುದು. ನಾವು ಅಷ್ಟೊಂದು ಒಳ್ಳೆಯವರು. ನಮ್ಮ ಹಾಗೆ ಕಠಿಣ ಪ್ರಯತ್ನ ಮಾಡುವವರು…….”
“ನಾನು ಬಂದು ಕರೆದಾಗ ಏನು ಮಾಡುತ್ತಿದ್ದಿರಿ?”
“ಒಂದು ಹೆಣ್ಣಿಗೆ, ಅಂದರೆ ಹುಡುಗಿಗೆ ಪತ್ರ ಬರೆಯುತ್ತಿದ್ದೆ. ಆಕೆ ಕಾಲೇಜ್ ಹುಡುಗಿ.”
“ಆ ಕಾಲೇಜ್ ಹುಡುಗಿಗೆ ಏನು ಬೇಕಂತೆ?”
“ಆಕೆಗೆ ಏನು ಬೇಕು ಅಂತ ನನಗೆ ಗೊತ್ತಿಲ್ಲ. ಅಥವಾ ಗೊತ್ತಿದೆ. ಅವಳು ಕುತಂತ್ರಿ.”
“ಹೋ, ಕುತಂತ್ರಿಗಳ ಬಗ್ಗೆ ಎಚ್ಚರ ಇರಬೇಕು.” ಆತ ಮಾತು ನಿಲ್ಲಿಸಿ ಮತ್ತೆ ಮುಂದುವರೆಸಿದ: “ನಾನು ಈ ಸಲ ಸಬ್ ಜೈಲಿನಲ್ಲಿದ್ದಾಗ ನನ್ನಿಂದ ಒಂದು ತಪ್ಪಾಯಿತು!”
“ಎಂತ ತಪ್ಪು?”
“ಪ್ರೇಮ!”
“ಪ್ರೇಮ ತಪ್ಪಾ?”
“ಒಬ್ಬ ರಾಜಕಾರಣಿಗೆ, ಅದು ಕೂಡ ಈ ಅನಿಶ್ಚಿತತೆಯ ಕಾಲದಲ್ಲಿ… ಏನೇ ಅದರೂ ನಾನೀಗ ಪ್ರೀತಿಯಲ್ಲಿ ಬಿದ್ದಾಗಿದೆ. ತುಂಬಾ ಕಾಯಿಸದೆ ಬೇಗ ಮದುವೆ ಆಗಬೇಕು. ಒಂದೇ ತೊಂದರೆ ಎಂದರೆ ಅವಳು ತುಂಬಾ ಕಲಿತಿದ್ದಾಳೆ.”
“ಚೆಂದ ಇದ್ದಾಳ?”
“ಸುರಸುಂದರಿ!”
“ಪವಾಡವೇ ಸರಿ! ನಿಮ್ಮಂತ ಒಬ್ಬ ಕಪ್ಪಗಿನ…. ಅದಿರಲಿ. ಇದು ಹೇಗೆ ನಡೆಯಿತು?”
“ಅವಳು ನನ್ನ ಅಭಿಮಾನಿ.”
“ಅಭಿಮಾನಿಯಾ? ನಿಮಗಾ? ಒಬ್ಬ ಕರಿಯ ರಾಜಕಾರಣಿಗೂ ಅಭಿಮಾನಿಯಾ?”
“ಹೌದು. ನನ್ನ ಭಾಷಣ ಕೇಳಿ ಎಷ್ಟು ಹೆಂಗಸರು ಅತ್ತಿದ್ದಾರೆ ಅಂತ ಗೊತ್ತಾ? ಎಷ್ಟೋ ಜನರು ಮೈಮೇಲಿದ್ದ ಆಭರಣಗಳನ್ನು ಬಿಚ್ಚಿ ಕೊಟ್ಟಿದ್ದಾರೆ!”
“ನಿಮ್ಮ ಈ ಸುರಸುಂದರಿ ಏನು ಕೊಟ್ಟಳು?”
“ಅವಳು ನನ್ನ ಸಂಬಂಧಿಕಳು ಅಂತ ಹೇಳಿ ನನ್ನನ್ನು ನೋಡಲು ಬಂದಳು. ಸಬ್ ಜೈಲಿನ ಹತ್ತಿರವೇ ಅವಳ ಮನೆ ಇದ್ದ ಕಾರಣ ದಿನವೂ ಮನೆಯಿಂದಲೇ ಊಟ ತರಲು ಶುರು ಮಾಡಿದಳು. ಹಾಗೆ ನಾನು ಅದರಲ್ಲಿ ಬಿದ್ದು ಬಿಟ್ಟೆ! ಅದಿರಲಿ, ನಿಮ್ಮ ಈ ಕುತಂತ್ರಿ ಏನು ಮಾಡಿದಳು?”
ಸಾಹಿತಿ ಹೇಳಿದ:
“ನಾನೊಬ್ಬ ಬಡವ ಎಂಬುದು…..”
“ಲೋಕಕ್ಕೇ ಗೊತ್ತು!”
“ಹೌದು, ಕಳೆದ ಶುಕ್ರವಾರ ನನ್ನ ಕೈಯಲ್ಲಿ ಒಂದು ಕವರ್ ಕೊಟ್ಟು ‘ಇದರೊಳಗೆ ಒಂದು ಸಣ್ಣ ಕಥೆಯಿದೆ. ಓದಿ ನೋಡಿ ತಿದ್ದಿ ಕೊಡುತ್ತೀರಾ?’ ಅಂತ ಕೇಳಿದಳು. ನಾನು ಇಲ್ಲಿ ಬಂದು ಕವರ್ ತೆರೆದು ನೋಡಿದೆ. ಬೇರೇನೂ ಇಲ್ಲ. ಹತ್ತು ರೂಪಾಯಿಯ ಐದು ನೋಟುಗಳು ಮಾತ್ರ!”
“ಇದೇನು ಅವಳ ಸಣ್ಣಕಥೆ? ಐವತ್ತು ರೂಪಾಯಿ!”
“ಹೌದು”
“ಅದರಲ್ಲಿ ಈಗ ಎಷ್ಟು ಬಾಕಿ ಇದೆ?”
“ಅದರಿಂದ ಎರಡು ತಿಂಗಳ ಬಾಕಿಯಿದ್ದ ಬಾಡಿಗೆ ಕೊಟ್ಟೆ ಹೋಟೆಲಿಗೂ ಕೊಡುವುದಿತ್ತು. ಒಂದು ಹೊಸ ಅಂಗಿ ಮತ್ತು ಲುಂಗಿ ಕೊಂಡೆ. ಅದನ್ನೇ ಈಗ ನೀವು ಹಾಕಿಕೊಂಡಿದ್ದೀರಿ… ಬಾಕಿ ಇನ್ನು ಆರೂವರೆ ರೂಪಾಯಿ ಇರಬಹುದು.”
“ಅದರಿಂದ ಎರಡು ರೂಪಾಯಿ ನನಗೆ ಬೇಕು.”
ಸಾಹಿತಿ ಎರಡು ರೂಪಾಯಿ ಕೊಟ್ಟ.

ರಾಜಕಾರಣಿ ಕೇಳಿದ:
“ನಿಮಗೂ ಅಭಿಮಾನಿಗಳು ಇದ್ದಾರಲ್ವಾ?”
“ಬೇಕಾದಷ್ಟು!”
“ಅವರಲ್ಲಿ ಯಾರಾದರೂ ನಿಮ್ಮನ್ನು ನೋಡಲು ಬಂದರೆ ನೀವೇನು ಮಾಡುತ್ತೀರಿ?”
“ಮೊದಲು ಅವರ ಜೇಬು ತಡಕಾಡಿ ನೋಡುವೆ. ಏನೂ ಇಲ್ಲದಿದ್ದರೆ ಹೊರಗಟ್ಟುವೆ!”
“ನನಗೂ ತುಂಬಾ ಅಭಿಮಾನಿಗಳಿದ್ದಾರೆ. ನಾನು ಒಂದು ಕಥೆ ಹೇಳುತ್ತೇನೆ. ಹೇಗೆ ಶುರು ಮಾಡುವುದು ಎಂದೇ ಗೊತ್ತಾಗುತ್ತಿಲ್ಲ!”
“ಹೀಗೇ ಹೇಳ್ತಾ ಹೋಗಿ. ಒಂದಾನೊಂದು ಕಾಲದಲ್ಲಿ…”
“ಹೌದು.” ರಾಜಕಾರಣಿ ಹೇಳತೊಡಗಿದ: “ಒಂದಾನೊಂದು ಕಾಲದಲ್ಲಿ ನನ್ನ ಹಾಗೆಯೇ ಒಬ್ಬ ಕರಿಯ ರಾಜಕಾರಣಿ ಇದ್ದ. ಹದಿನೆಂಟನೆ ವಯಸ್ಸಿನಲ್ಲಿ ಆತ ರಾಜಕೀಯಕ್ಕೆ ಇಳಿದಿದ್ದ. ಪೋಲಿಸರಿಂದ ಬೇಕಾದಷ್ಟು ಪೆಟ್ಟುಗಳು ಸಿಕ್ಕಿದ್ದವು. ಹಸಿದು ಮಲಗಿದ ದಿನಗಳೆಷ್ಟೋ. ಆ ಮಹಾನ್ ವ್ಯಕ್ತಿ ಈಗ ಕಾರ್ಮಿಕರ, ರೈತರ, ಬುದ್ಧಿಜೀವಿಗಳ ಮಾತ್ರವಲ್ಲ ಜನರ ನೆಮ್ಮದಿಗಾಗಿ ಹಗಲಿರುಳು ದುಡಿಯುವ ಅತ್ಯಂತ ಪ್ರಗತಿಪರವಾದ ರಾಜಕೀಯ ಸಂಘಟನೆಯೊಂದರ ಪ್ರೆಸಿಡೆಂಟ್.
“ಆತನ ಮನೆ ಆ ರಾಜಕೀಯ ಸಂಘಟನೆಯ ಆಫೀಸ್ ಕೋಣೆಯಂತೆಯೇ ಆಗಿತ್ತು. ಅದು ರಾಜಕೀಯದವರಿಗೆ ಮಾತ್ರವಲ್ಲ, ಯಾರು ಬೇಕಾದರೂ ಹೋಗಿ ಮಲಗಬಹುದಾದ ಧರ್ಮಚತ್ರ! ಅದರಲ್ಲಿ ಆತನಿಗೆ ಯಾವ ಬೇಜಾರು ಇರಲಿಲ್ಲ. ಜನರಿಗಾಗಿ ಕೆಲಸ ಮಾಡುವವರ ಹತ್ತಿರ ಜನರು ಬರುತ್ತಾರೆ. ರಾತ್ರಿ ಹಗಲೆಂದಿಲ್ಲದೆ ಜನರು ಬರುತ್ತಾರೆ. ಅದರಲ್ಲಿ ತಪ್ಪೇನಿದೆ?
“ಹಾಗೆ ಆತನ ಬದುಕು ಸಾಗುತ್ತಿದ್ದ ಒಂದು ರಾತ್ರಿ, ಆತನ ಹತ್ತಿರ ಒಬ್ಬ ಅಭಿಮಾನಿ ಬಂದ. ಸಮಯ ಅರ್ಧ ರಾತ್ರಿ ಕಳೆದಿರಬಹುದು. ಹೊರ ಜಗುಲಿಯಲ್ಲಿ ದೀಪ ಇತ್ತು. ಆಗಷ್ಟೇ ನಮ್ಮ ಕರಿಯ ನಾಯಕ, ತನಗಿದ್ದ ಒಂದೇ ಒಂದು ಅಂಗಿ ಮತ್ತು ಒಂದೇ ಒಂದು ಲುಂಗಿಯನ್ನು ಸೋಪು ಹಾಕಿ ತೊಳೆದು ವರಾಂಡದಲ್ಲಿ ಒಣಗಲು ಹಾಕಿದ್ದ.

“ದೂರದಿಂದ ನಡೆದು ಬಂದು ಸುಸ್ತಾಗಿದ್ದ ತನ್ನ ಅಭಿಮಾನಿಯ ಬಳಿ ಹೆಚ್ಚೀನೂ ಮಾತಾಡಲಿಲ್ಲ. ಆತ ಹತ್ತಿರದ ಪಟ್ಟಣವೊಂದರಲ್ಲಿ ಕೆಲಸ ಹುಡುಕಿ ಹೊರಟಿದ್ದ.
“ಅಭಿಮಾನಿಗೆ ವರಾಂಡದಲ್ಲಿ ಚಾಪೆ ಮಾತ್ತು ತಲೆದಿಂಬು ಹಾಕಿಕೊಟ್ಟ. ‘ಬೆಳಿಗ್ಗೆ ಮಾತಾಡೋಣ’ ಎಂದು ಹೇಳಿ ನಮ್ಮ ನಾಯಕ ಕೋಣೆ ಸೇರಿ ಬಾಗಿಲು ಹಾಕಿಕೊಂಡ. ಎರಡು ಮೂರು ದಿನಪತ್ರಿಕೆಗಳನ್ನು ನೆಲದಲ್ಲಿ ಹಾಸಿ ಅದರಲ್ಲಿ ಮಲಗಿಕೊಂಡ. ಯಾಕೆಂದರೆ, ಬೇರೆ ಚಾಪೆ ಮತ್ತು ತಲೆದಿಂಬು ಇರಲಿಲ್ಲ. ಲೋಕದಲ್ಲಿ ಹಾಗೆ ಅದೆಷ್ಟೋ ಜನರು ಮಲಗುತ್ತಾರೆ ಎಂದು ಆತ ಭಾವಿಸಿದ. ಹಾಗೆಯೇ ನಿದ್ದೆ ಹೋದ.
“ನಮ್ಮ ನಾಯಕ ಎದ್ದಾಗ ಗಂಟೆ ಎಂಟು ಕಳೆದಿತ್ತು! ಬಾಗಿಲು ತೆರೆದು ನೋಡಿದರೆ ತನ್ನ ಅಭಿಮಾನಿ ಹೋಗಿದ್ದಾನೆ. ಹೇಳದೇ ಹೋದದಕ್ಕೆ ಆ ನಾಯಕನಿಗೆ…. ಏನೂ ಅನ್ನಿಸಲಿಲ್ಲ. ಎಷ್ಟು ಜನರು ಹೀಗೆ ಮಾಡುವುದಿಲ್ಲ ಹೇಳಿ. ಸ್ವತಹ ಆತನೇ ಯಾರ ಯಾರದೋ ಮನೆಯ ಜಗುಲಿಯಲ್ಲಿ ಮಲಗಿ ಅಲ್ಲಿಂದ ಹೇಳದೇ ಕೇಳದೇ ಎದ್ದು ಬಂದಿದ್ದಾನೆ. ವಿಶೇಷವೆಂದರೆ, ಮಲಗಿದ ಚಾಪೆಯನ್ನು ಮಡಚಿ ಕೂಡ ಇಟ್ಟಿರಲಿಲ್ಲ! ಮಾತ್ರ ಅಲ್ಲ, ಅದರ ನಟ್ಟ ನಡುವೆ, ಚಾಪೆಯ ಹೃದಯ ಭಾಗದಲ್ಲಿ ಎಂಬಂತೆ… ಕೆಮ್ಮಣ್ಣಿನ ಹೆಜ್ಜೆ ಗುರುತು!
“ಯಾವತ್ತೂ ಹೀಗೆ ಆಗಿರದಿದ್ದರೂ ಅದನ್ನು ಅಷ್ಟು ವಿಶೇಷವಾಗಿ ಆತ ಕಾಣಲಿಲ್ಲ. ಹೋಗಿ ಸ್ನಾನ ಮುಗಿಸಿ ಬಂದು  ನೋಡುವಾಗ…..”


“ನೋಡುವಾಗ?” ಸಾಹಿತಿ ಆಶ್ಚರ್ಯದಿಂದ ಕೇಳಿದ. ರಾಜಕಾರಣಿ ತಣ್ಣಗಿನ ಸ್ವರದಲ್ಲಿ ಹೇಳಿದ:
“ನೋಡುವಾಗ, ಒಣಗಲು ಹಾಕಿದ್ದ ಅಂಗಿ ಲುಂಗಿ… ಅವೆರಡೂ ಇಲ್ಲ!”
“ಇದು ನಿನ್ನೆ ಸಂಜೆ ನಡೆದದ್ದಾ?”
“ಹೌದು”
ಅವರಿಬ್ಬರೂ ತುಂಬಾ ಹೊತ್ತು ಮೌನವಾಗಿ ಕೂತರು. ಕೊನೆಗೆ ಆತ ಹೊರಟು ಹೋದ. ಅದರ ನಂತರ ಅನೇಕ ವರ್ಷಗಳು ಕಳೆದವು. ಆ ನಡುವೆ ಆತ ಆ ಸುರಸುಂದರಿಯನ್ನು ಮದುವೆಯೂ ಆದ. ನನ್ನಲ್ಲಿ ಈ ಕಥೆ ಹೇಳಿದ ಆ ಸಾಹಿತಿ ತನ್ನ ಅಭಿಮಾನಿಯನ್ನು ಯಾತಕ್ಕೋ ಮದುವೆ ಆಗಲಿಲ್ಲ. ಆ ಕರಿಯ ರಾಜಕಾರಣಿಯನ್ನು ನಾನು ಈಗ ನೆನಪಿಸಲು ಕಾರಣ ಏನು ಎಂದು ತಾನೇ? ಹಳೆಯ ಪೊಲೀಸರಿಂದ ಹೊಸ ಸರಕಾರ ಹೊಡೆಸಿ ಕೊಂದಿರಲೂಬಹುದು, ಹಾವು ಕಚ್ಚಿದ್ದು ಅಂತ ಹೇಳುತ್ತಿದ್ದಾರೆ… ಆತ ಮೊನ್ನೆ ರಾತ್ರಿ ತೀರಿ ಹೋದ ಎಂದು ನಿನ್ನೆಯ ದಿನಪತ್ರಿಕೆಯಲ್ಲಿ ಓದಿದಾಗ ನನ್ನ ಕಣ್ಣ ಮುಂದೆ ಬಂದಿದ್ದು ಆ ಕೆಮ್ಮಣ್ಣಿನ ಹೆಜ್ಜೆ ಗುರುತು!

(ಮೂಲ:ವೈಕ್ಕಂ ಮುಹಮ್ಮದ್ ಬಷೀರ್ ಬರೆದ ಕಾಲ್ಪಾಡ್ ಎಂಬ ಸಣ್ಣ ಕಥೆ)

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)