ಬಾಲಕಿಯಾಗಿ ಏನೊಂದನ್ನೂ ಅರಿಯುವ ಮುನ್ನವೇ ಚಿಕ್ಕಾವಲ್ಲಪ್ಪನನ್ನು ಮದುವೆಯಾಗಿ ಸ್ವಂತ ಅತ್ತೆಯ ಮನೆಗೆ ಬರುವ ಪುಟ್ಟಮ್ಮ ಮನೆ ಹಾಗೂ ಹೊಲದ ಕೆಲಸಗಳ ಜವಾಬ್ದಾರಿಯನ್ನು ನಿರ್ವಹಿಸುತ್ತ ಮುಂದೆ ಕನ್ಯೆಯಾಗಿಯೂ ಗಂಡನೊಂದಿಗೆ ಸೇರಲು ಅವಕಾಶವಿರದೆ ವಯೋಸಹಜ ಕಾಮನೆಗಳನ್ನು ಹತ್ತಿಕ್ಕಿಕೊಂಡು ಸುಮಾರು ಎರೆಡು ದಶಕಗಳ ಕಾಲ ಬಂಜೆ ಎಂಬ ಹಣೆಪಟ್ಟಿ ಹೊತ್ತು ಮುಂದೊಮ್ಮೆ ತಾಯಿಯಾಗುವುದು, ಕೆಳಜಾತಿಯ ಕೆಲಸಗಾರರೊಂದಿಗೆ ಸಲುಗೆಯಿಂದ ಬೆರೆತು ಅಂದಿನ ಆಚರಣೆಯಾದ ವರ್ಣಸಂಘರ್ಷವನ್ನು ನೈತಿಕವಾಗಿ ವಿರೋಧಿಸುವುದು. ಜವಾಬ್ದಾರಿಯುತ ಸೋದರಿಯಾಗಿ ತಮ್ಮನನ್ನು ವಿದ್ಯಾವಂತನನ್ನಾಗಿ ಮಾಡುವುದು.
ಪ್ರೊ. ಕಟಾವೀರನಹಳ್ಳಿ ನಾಗರಾಜು ಬರೆದ ಕಾದಂಬರಿ “ಪುಟ್ಟಮ್ಮಯ್ಯ” ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಬರಹ

ನಿವೃತ್ತ ಪ್ರಾಂಶುಪಾಲರಾದ ಪ್ರೊಫೆಸರ್ ಕಟಾವೀರನಹಳ್ಳಿ ನಾಗರಾಜುರವರ ಲೇಖನಿಯಿಂದ ಬಹಳ ದಿನಗಳ ನಂತರ ಮೂಡಿಬಂದ ಅದ್ಭುತ ಕಲಾಕೃತಿ ಪುಟ್ಟಮ್ಮಯ್ಯ. ಇದೊಂದು ಸಾಮಾಜಿಕ ಕಾದಂಬರಿ ಆಗಿದ್ದು, ಸೂಕ್ಷ್ಮವಾಗಿ ಗಮನಿಸಿದರೆ ಕೇವಲ ಒಂದು ಕುಟುಂಬ ಅಥವಾ ಮನೆತನಕ್ಕೆ ಸೀಮಿತವಾದ ಕಥಾ ವಸ್ತುವಾಗಬಹುದಾಗಿದ್ದ ಕಾದಂಬರಿಯನ್ನು ಅಂದಿನ ಸಾಮಾಜಿಕ ಸ್ಥಿತಿಗತಿಗಳೊಡನೆ ತುಲನೆ ಮಾಡುತ್ತಾ ಸಾರ್ವಜನಿಕ ಅನುಭವ ಕಥನವಾಗಿಸುವ ಪ್ರಯತ್ನ ಕಾದಂಬರಿಕಾರರದ್ದು.

(ಪ್ರೊ. ಕಟಾವೀರನಹಳ್ಳಿ ನಾಗರಾಜು)

ಊರಿಗೊಬ್ಬ ಗೌಡ (ಕರಿಯಪ್ಪ), ಅವನ ವಿಧವಾ ತಂಗಿ (ಕರಿಯಮ್ಮ), ಬೆಳೆದು ನಿಂತ ತಂಗಿಯ ಮಗ (ಚಿಕ್ಕಾವಲ್ಲಪ್ಪ), ಅವರ ಜೀವನ ಹಸನಾಗಿಸುವ ಜವಾಬ್ದಾರಿ ಹೊತ್ತ ಹಿರಿಯ ಗೌಡ. ಪ್ರಾಕೃತಿಕ ಬದಲಾವಣೆಗಳ ಸಂಘರ್ಷಕ್ಕೆ ಸಿಲುಕಿ ಅಪರಿಚಿತ ಅನ್ಯಜಾತಿ ಮಹಿಳೆ ಆಲಮ್ಮನೊಂದಿಗಿನ ಚಿಕ್ಕಾವಲ್ಲಪ್ಪನ ಮಿಲನ. ಸ್ವತಂತ್ರ ಹೋರಾಟದ ಭಾಗವಾಗಿ ಚಿಕ್ಕಾವಲ್ಲಪ್ಪನ ಸೆರೆವಾಸ. ಬಿಡುಗಡೆಯ ನಂತರ ಆಲಮ್ಮನೊಂದಿಗೆ ನಿಶಾಲಗ್ನ, ಸಾಕ್ಷಿಯಾಗಿ ಮಗಳು ಭಂಗಾರಿಯ ಜನನ. ಇದ್ಯಾವುದರ ಪರಿವೇ ಇಲ್ಲದೆ ಸ್ವಂತ ಅಣ್ಣನ ಮಗಳು ಪುಟ್ಟಮ್ಮನೊಂದಿಗೆ ಚಿಕ್ಕಾವಲ್ಲಪ್ಪನ ಮದುವೆ ಮಾಡುವ ತಾಯಿ ಕರಿಯಮ್ಮ, ಆಲಮ್ಮನ ಸಖ್ಯದಲ್ಲಿ ಬಾಲೆ ಪುಟ್ಟಮ್ಮನನ್ನು ಕಡೆಗಣಿಸುವ ಚಿಕ್ಕಾವಲ್ಲಪ್ಪ. ಮುಂದೆ ಪುಟ್ಟಮ್ಮ ಋತುಮತಿಯಾದರೂ ಅವಳನ್ನು ಸೇರದ ಗಂಡ. ಎಲ್ಲವನ್ನೂ ನುಂಗಿಕೊಂಡೇ ಕನ್ಯಾ ಜೀವನ ನಡೆಸುವ ಪುಟ್ಟಮ್ಮ. ತನ್ನ ತಂಗಿ ಹಾಗೂ ಸಹೋದರರ ಮಕ್ಕಳಲ್ಲೇ ತಾಯ್ತನದ ಸಿಹಿ ಉಣ್ಣುವ ಪುಟ್ಟಮ್ಮ ಅವರ ಮೆಚ್ಚಿನ ಪುಟ್ಟಮ್ಮಯ್ಯಳಾಗಿ ಬದಲಾಗುತ್ತಾಳೆ. ಮತ್ತೊಮ್ಮೆ ಪ್ರಾಕೃತಿಕ ಸಂಘರ್ಷದಲ್ಲಿ ಪುಟ್ಟಮ್ಮನೊಂದಿಗೆ ಸೇರುವ ಗಂಡ, ನಾಗಪ್ಪ ಎಂಬ ಗಂಡು ಸಂತಾನ ಉದಯ.

ಆಲಮ್ಮನೊಂದಿಗಿನ ಸಂಸಾರದ ವಿಷಯ ತಿಳಿಸಲು ಸಾಧ್ಯವಾಗದೇ ಮಾನಸಿಕ ಹೊಯ್ದಟದಲ್ಲೇ ಅಂತ್ಯವಾಗುವ ಚಿಕ್ಕಾವಲ್ಲಪ್ಪ. ಹೀಗೇ ಕಾದಂಬರಿಯ ಕಥೆ ಸಾಗುತ್ತದೆ.

ವೃದ್ಧೆ ಕರಿಯಮ್ಮ, ನಾಯಕನನ್ನು ಗುಟ್ಟಾಗಿ ಮದುವೆಯಾಗುವ ಆಲಮ್ಮ ಹಾಗೂ ನಾಯಕನನ್ನು ಧಾರ್ಮಿಕ ವಿಧಿವಿಧಾನದಲ್ಲಿ ಮದುವೆಯಾಗಿ ಬರುವ ಪುಟ್ಟಮ್ಮ ಈ ಮೂರೂ ಪಾತ್ರಗಳ ಸುತ್ತಲೇ ಗಿರಕಿ ಹೊಡೆಯುವ ಕಥೆಯಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುವುದು ಮಡದಿ ಪುಟ್ಟಮ್ಮಳ ಪಾತ್ರವಷ್ಟೇ. ಬಾಲಕಿಯಾಗಿ ಏನೊಂದನ್ನೂ ಅರಿಯುವ ಮುನ್ನವೇ ಚಿಕ್ಕಾವಲ್ಲಪ್ಪನನ್ನು ಮದುವೆಯಾಗಿ ಸ್ವಂತ ಅತ್ತೆಯ ಮನೆಗೆ ಬರುವ ಪುಟ್ಟಮ್ಮ ಮನೆ ಹಾಗೂ ಹೊಲದ ಕೆಲಸಗಳ ಜವಾಬ್ದಾರಿಯನ್ನು ನಿರ್ವಹಿಸುತ್ತ ಮುಂದೆ ಕನ್ಯೆಯಾಗಿಯೂ ಗಂಡನೊಂದಿಗೆ ಸೇರಲು ಅವಕಾಶವಿರದೆ ವಯೋಸಹಜ ಕಾಮನೆಗಳನ್ನು ಹತ್ತಿಕ್ಕಿಕೊಂಡು ಸುಮಾರು ಎರೆಡು ದಶಕಗಳ ಕಾಲ ಬಂಜೆ ಎಂಬ ಹಣೆಪಟ್ಟಿ ಹೊತ್ತು ಮುಂದೊಮ್ಮೆ ತಾಯಿಯಾಗುವುದು, ಕೆಳಜಾತಿಯ ಕೆಲಸಗಾರರೊಂದಿಗೆ ಸಲುಗೆಯಿಂದ ಬೆರೆತು ಅಂದಿನ ಆಚರಣೆಯಾದ ವರ್ಣಸಂಘರ್ಷವನ್ನು ನೈತಿಕವಾಗಿ ವಿರೋಧಿಸುವುದು. ಜವಾಬ್ದಾರಿಯುತ ಸೋದರಿಯಾಗಿ ತಮ್ಮನನ್ನು ವಿದ್ಯಾವಂತನನ್ನಾಗಿ ಮಾಡುವುದು. ಮುಂದೆ ಸ್ವಂತ ಮಗನನ್ನು ಓದಿಸುವ ಫಣ ತೊಡುವುದು. ಹೀಗೇ ಕಾದಂಬರಿಯ ತುಂಬಾ ಪುಟ್ಟಮ್ಮಳ ವ್ಯಕ್ತಿತ್ವವೇ ಆವರಿಸಿಕೊಳ್ಳುತ್ತಾ ಸಾಗುತ್ತದೆ. ಇಲ್ಲಿ ಬಾಲಕಿ ಪುಟ್ಟಮ್ಮ ದಿನಕಳೆದಂತೆಲ್ಲ ಮಾತೃ ಹೃದಯದ ಮೇರು ಪರ್ವತವಾಗಿ ಬೆಳೆಯುತ್ತಾ ಹೋಗುತ್ತಾಳೆ. ತಂದೆ ಮನೆಯಲ್ಲಿ ಆದರ್ಶ ಮಗಳಾಗಿ, ಅತ್ತೆ ಮನೆಯಲ್ಲಿ ಮುದ್ದಿನ ಸೊಸೆಯಾಗಿ, ಜವಾಬ್ದಾರಿಯುತ ಗೌಡತಿಯಾಗಿ, ಮಗನಿಗೆ ಭವಿಷ್ಯ ನಿರ್ಮಿಸುವ ತಾಯಿಯಾಗಿ ಪುಟ್ಟಮ್ಮಳ ಪಾತ್ರ ಕಾದಂಬರಿಯ ಉದ್ದಕ್ಕೂ ಓದುಗರನ್ನು ಆವರಿಸಿಕೊಳ್ಳುತ್ತಾ ಸಾಗುತ್ತದೆ.

ಕಾದಂಬರಿಯ ಕಥಾವಸ್ತು ಸರಳವಾದದ್ದೇ ಆದರೂ ಅದನ್ನು ನಿರೂಪಿಸಿರುವ ಬಗೆ ವಿಶೇಷವಾಗಿದ್ದು ಅದಕ್ಕಾಗಿ ಕಾದಂಬರಿಕಾರರು ಆಯ್ದುಕೊಂಡಿರುವ ಗ್ರಾಮ್ಯ ಭಾಷೆ ಎಲ್ಲಿಯೂ ತನ್ನ ಸೊಗಡನ್ನು ಕಳೆದುಕೊಂಡಿಲ್ಲ. ಕಾದಂಬರಿಯಲ್ಲಿ ಬರುವ ಸ್ವಾತಂತ್ರ್ಯ ಹೋರಾಟದ ಸಂದರ್ಭಗಳ ಹಿನ್ನೆಲೆ, ಸ್ಥಳೀಯವಾಗಿ ಪ್ರಖ್ಯಾತವಾದ ಮಾಗೋಡು ಹಾಗೂ ಜುಂಜಪ್ಪನ ಜಾತ್ರೆಗಳ ಉಲ್ಲೇಖ, ಪ್ರಾಕೃತಿಕ ವರ್ಣನೆಗಳು ಓದುಗರಿಗೆ ಓದುತ್ತಿದ್ದೇವೆ ಎನ್ನುವುದರ ಬದಲು ಕಥೆಯನ್ನು ಕೇಳುತ್ತಿರುವಂತೆ ಭಾಸವಾಗಿಸುವುದರಲ್ಲಿ ಆಶ್ಚರ್ಯವಿಲ್ಲ.

ಎಲ್ಲಾ ಶ್ರೇಷ್ಠತೆಗಳೂ ಒಂದಿಷ್ಟು ಮಿತಿಯನ್ನು ಒಳಗೊಂಡಿರುತ್ತವೆ ಎಂಬಂತೆ ಪುಟ್ಟಮ್ಮಯ್ಯ ಕಾದಂಬರಿಯಲ್ಲಿಯೂ ಕೆಲವೊಂದು ಮಿತಿಗಳಿದ್ದು ಅವುಗಳಲ್ಲಿ ಮುಖ್ಯವಾದವುಗಳೆಂದರೆ ಕಾದಂಬರಿಯ ಪ್ರಾರಂಭದಲ್ಲಿ ಬರುವ ಕೊನಪ್ಪ ಮತ್ತು ದೇವೀರಿಯ ದಾಂಪತ್ಯಕ್ಕೆ ಸಂಬಂಧಿಸಿದ ವಿವರಣೆಯು ಇದ್ದಕ್ಕಿದ್ದಂತೆ ಕಾಣೆಯಾಗುವುದು. ಮಕ್ಕಳಿಗಾಗಿ ಪುಟ್ಟಮ್ಮಳು ದೇವರು, ಕಂದಾಚಾರದ ಮೊರೆ ಹೋಗುವುದು… ಅದರ ಬಲದಿಂದಲೇ ಪ್ರಾಕೃತಿಕ ಸಂಘರ್ಷ ಉಂಟಾಗಿ ನಾಯಕ ನಾಯಕಿ ಸೇರಿದರೆಂಬಂತೆ ಬಿಂಬಿಸುವ ಪ್ರಯತ್ನ ಮಾಡಿರುವುದು. ಕಥೆ ನಡೆಯುವುದು ಸ್ವತಂತ್ರ ಪೂರ್ವದ ಸಣ್ಣ ಹಳ್ಳಿಯಲ್ಲಾದರೂ ಸುಮಾರು ಎರಡು ದಶಕಗಳವರೆಗೂ ಕಥಾನಾಯಕ ಚಿಕ್ಕಾವಲ್ಲಪ್ಪ ಹಾಗೂ ಆಲಮ್ಮಳ ಗುಟ್ಟಿನ ಸಂಸಾರದ ವಿಚಾರ ಬಯಲಾಗದೆ ಉಳಿದದ್ದು, ಬೆಳೆದು ನಿಂತ ಮಗಳು ಭಂಗಾರಿ ಹಾಗೂ ಮಗ ನಾಗಪ್ಪನಿಗೂ ಅನುಮಾನ ಬಾರದಿದ್ದುದು. ಅಂದು ಪ್ರಬಲವಾಗಿದ್ದ ವರ್ಣ ಸಂಘರ್ಷವನ್ನು ಮೀರುವ ನಾಯಕ ನಾಯಕಿಯನ್ನು ಯಾರೊಬ್ಬರೂ ವಿರೋಧಿಸದಿರುವುದು. ಗಂಡನ ಗುಟ್ಟಿನ ಸಂಸಾರದ ಸತ್ಯ ಕೊನೆಯವರೆವಿಗೂ ಪುಟ್ಟಮ್ಮಳಿಗೆ ತಿಳಿಯದೇ ಹೋದದ್ದು ನಿಜಕ್ಕೂ ಓದುಗರನ್ನು ಗೊಂದಲಕ್ಕೀಡು ಮಾಡುತ್ತವೆ.

ಇಂತಹ ಸಣ್ಣ ಪ್ರಮಾದಗಳನ್ನು ಹೊರತುಪಡಿಸಿದರೆ ಪುಟ್ಟಮ್ಮಯ್ಯ ಒಮ್ಮೆ ಎಲ್ಲರೂ ಓದಿ ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ಕಾದಂಬರಿಯಾಗಿದ್ದು. ಓದಿ ಪ್ರೋತ್ಸಾಹಿಸಬೇಕಾಗಿ ಮನವಿ.

(ಕಾದಂಬರಿ ಬೇಕಾದವರು ಸಂಪರ್ಕಿಸಬಹುದಾದ ಸಂಖ್ಯೆ: 9141766728)