“ನೀವು ಸಿಕ್ಕಾಪಟ್ಟೆ ಗಲಾಟೆ ಮಾಡುತ್ತಿದ್ದೀರಿ. ಇಷ್ಟು ರಾತ್ರಿಯಾಗಿದೆ. ನಿಮ್ಮ ಗಲಾಟೆಯಿಂದ ನನಗೆ ನಿದ್ದೆ ಕೂಡ ಬರುತ್ತಿಲ್ಲ. ನಿಮಗೆ ಅಷ್ಟು ಗೊತ್ತಾಗೋದಿಲ್ಲವೇ..” ಎಂಬ ಅರ್ಥದಲ್ಲಿ ಬೈದ. ನಮಗೆಲ್ಲ ಹಾಗೆ ಮಾಡಿದೆವಲ್ಲ ಎಂಬ ಪಾಪ ಪ್ರಜ್ಞೆ ಬಂತು. ಕ್ಷಮಿಸಿ ಅಂತ ಕೇಳಿದೆವು. ಆದರೆ ಅಲ್ಲಿಯ ನಾಗರಿಕನಾಗಿದ್ದ ಚಂದ್ರುಗೆ ತುಂಬಾ ಮರ್ಯಾದೆ ಹೋಗಿಬಿಟ್ಟಿತು. ಅವನಿಗೆ sorry ಹೇಳುತ್ತಾ, ಇಷ್ಟೆಲ್ಲಾ ಗದ್ದಲ ಹಾಕಬಾರದಿತ್ತು ನೀವು ಎಂಬಂತೆ ನಮ್ಮ ಕಡೆ ನೋಡಿದ. ಸ್ವಲ್ಪ ಹೊತ್ತಿಗೆ ಮುಂಚೆ ತಾನೂ ಕೂಡ ನಮ್ಮ ಜೊತೆಗೆ ಮೈಮರೆತು ಗಲಾಟೆ ಮಾಡಿದ್ದ ಎಂಬುದೇ ಅವನಿಗೆ ಮರೆತುಹೋಗಿತ್ತು! ಥೇಟ್ ಅಮೆರಿಕನ್ನರ ಹಾಗೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತನೆಯ ಬರಹ
ನಾವು ಚಿಕ್ಕವರಿದ್ದಾಗ ಇದ್ದ ನೆರೆಹೊರೆಯವರಿಗೆ, ಈಗಿನ ನೆರೆಹೊರೆಯವರಿಗೆ ಬಹಳ ಅಂತರ ಇದೆ. ಆಗೆಲ್ಲ ಅಕ್ಕಪಕ್ಕದವರು ನಮ್ಮ ಮನೆಯವರೆ ಎಂಬಂತೆ ಇದ್ದರು. ಕೆಲವರು ಆಪ್ತ ಅನಿಸಿದರೆ ಇನ್ನೂ ಕೆಲವರು ತುಂಬಾ ಕಿರಿಕಿರಿ ಕೊಡುತ್ತಿದ್ದರು. ನನ್ನ ಅಮ್ಮನ ಎಲ್ಲ ಗೆಳತಿಯರನ್ನೂ ನಾವು ಅಕ್ಕಾರು ಎಂದೇ ಸಂಭೋದಿಸುತ್ತಿದ್ದೆವು. ನಮ್ಮ ಪಕ್ಕದಲ್ಲಿದ್ದ ಜಯಶ್ರೀ ಅಕ್ಕಾ ಅವರಂತೂ ನಮಗೆ ನನ್ನ ಅಮ್ಮನ ತರಹವೆ ಅಕ್ಕರೆ ತೋರುತ್ತಿದ್ದರು. ಅವರ ಮನೆಯಲ್ಲಿನ ಎಷ್ಟೋ ಖಾದ್ಯಗಳು ನಮ್ಮ ಮನೆಗೆ ಆಗಾಗ export ಆಗುತ್ತಿದ್ದವು! ಕಾಲಕ್ರಮೇಣ ಬೆಂಗಳೂರಿಗೆ ಬಂದ ಬಳಿಕ ಅದೆಲ್ಲ miss ಆಯ್ತು. ಇಲ್ಲಿ ಒಬ್ಬರಿಗೊಬ್ಬರು ಮಾತಾಡಿಸುವುದೇ ಒಂದು ದೊಡ್ಡ ಸಾಧನೆ. ಪಕ್ಕದಲ್ಲಿ ಯಾರು ವಾಸವಿದ್ದಾರೆ ಅಂತಲೂ ಒಮ್ಮೊಮ್ಮೆ ಗೊತ್ತಾಗೋದಿಲ್ಲ. ಆದರೂ ಬೆಂಗಳೂರು ಇದ್ದುದರಲ್ಲೇ ಉತ್ತಮ ಅನಿಸಿದ್ದು ಅಮೆರಿಕೆಗೆ ಹೋದಾಗ! ಅಲ್ಲಿ ಮಾತಾಡೋದು ಇರಲಿ ಒಬ್ಬರಿಗೊಬ್ಬರು ನೋಡಿ ನಕ್ಕರೆ ಅದೇ ಸ್ವರ್ಗ! ನಮ್ಮ flat ಮೂರನೇ ಅಂತಸ್ತಿನಲ್ಲಿ ಇತ್ತು. ಅದರ ಅಕ್ಕಪಕ್ಕ ಇತರ flat ಗಳು ಇದ್ದರೂ ಅಲ್ಲಿ ಯಾರಿದ್ದಾರೆ ಏನು ಎಂಬುದು ಗೊತ್ತಾಗುತ್ತಲೇ ಇರಲಿಲ್ಲ. ಯಾವಾಗಲೂ ಅಲ್ಲಿನ ಬಾಗಿಲುಗಳು ಮುಚ್ಚಿಕೊಂಡೆ ಇರುತ್ತಿದ್ದವು. ಇಲ್ಲಿನ ಹಾಗೆ ಪಕ್ಕದ ಮನೆಗೆ ಹೋಗಿ, “ಏನ್ ಸರ್ ಆಯ್ತಾ ಟಿಫನ್ನು? ಏನ್ ತಿಂದರಿ ಇವತ್ತು?” ಅಂತೆಲ್ಲ ಕೇಳೋದನ್ನ ಅಲ್ಲಿ ಕಲ್ಪನೆ ಕೂಡ ಮಾಡೋಕಾಗಲ್ಲ. ಅಮೆರಿಕನ್ನರಿಗೆ ಹಾಗೆಲ್ಲಾ ವೈಯುಕ್ತಿಕ ವಿಷಯಗಳನ್ನು ಕೇಳಿದರೆ, ಹುಬ್ಬು ಗಂಟಿಕ್ಕಿಸಿ “ವೇಯ್ ವಾ??” (wait what ಅನ್ನುವುದನ್ನು ಹಾಗೆ ರಾಗವಾಗಿ ಹೇಳುವ ಬಗೆ ಇದು!) ಅಂತ ನಾವೇನೋ ದೊಡ್ಡ ಅಪರಾಧ ಮಾಡಿದೆವು ಎಂಬಂತೆ ನೋಡುತ್ತಾರೆ.
ಹಿಂದೆ ಒಮ್ಮೆ ಬೆಂಗಳೂರಿಗೆ ನಮ್ಮ ಅಮೆರಿಕೆಯ ಬಾಸ್ ಬಂದಿದ್ದ. ಒಂದು ಮದ್ಯಾಹ್ನ ನನ್ನ ಎದುರಿಗೆ ಸಿಕ್ಕಾಗ, ನಾನು ಸಹಜವಾಗಿ ಊಟ ಆಯ್ತಾ? ಅಂತ ಕೇಳಿದ್ದೆ. ಅವನು ಹೂಂ ಅಥವಾ ಊಹೂಂ ಅಂದಿದ್ದರೆ ಅವನ ಗಂಟು ಏನು ಹೋಗುತ್ತಿತ್ತೋ ಗೊತ್ತಿಲ್ಲ. ಅದನ್ನು ಬಿಟ್ಟು “ಯಾಕೆ? ಎಲ್ಲಾದರೂ ಊಟಕ್ಕೆ ಕರೆದುಕೊಂಡು ಹೋಗುವವನಿದ್ದೀಯಾ?” ಅಂತ ಕೇಳಿದ್ದ. ಈ ಘಟನೆಯ ನಂತರ ಇಂತಹ ದಡ್ಡ ಪ್ರಶ್ನೆಗಳನ್ನು ಕೇಳುವುದನ್ನು ಬಿಟ್ಟಿದ್ದೆ. ಊಟನಾದ್ರೂ ಮಾಡಿಕೊಳ್ಳಲಿ, ಉಪವಾಸನಾದ್ರೂ ಇರಲಿ ನನಗೇನು!
ನಾವಿದ್ದ ಓಮಾಹಾದ ಅಪಾರ್ಟ್ಮೆಂಟಿನ ಗ್ರೌಂಡ್ ಫ್ಲೋರ್‌ನಲ್ಲಿನ ಒಂದು ಮನೆಯಲ್ಲಿ ಮಾತ್ರ ಒಂದು ಅಜ್ಜಿಯನ್ನು ಯಾವಾಗಲೂ ಕಾಣುತ್ತಿದ್ದೆವು. ಅವಳು ಹೊರಗಡೆ ಖುರ್ಚಿ ಹಾಕಿಕೊಂಡು ಕುಳಿತು ಒಂದಾದ ಮೇಲೆ ಒಂದು ಸಿಗರೇಟು ಸುಡುತ್ತಾ ಕೂಡುತ್ತಿದ್ದಳು. ಯಾವಾಗಲೋ ಒಮ್ಮೊಮ್ಮೆ ಅವಳ ಮಗಳು ಬಂದಾಗ ಒಂದೆರಡು ಚಿಕ್ಕ ಮಕ್ಕಳು ಕೂಡ ಕಾಣುತ್ತಿದ್ದರು. ಅವರ ಜೊತೆಗೆ ಆಡುತ್ತಲೇ ಸಿಗರೇಟು ಸೇದುತ್ತಿದ್ದಳು! ಅಲ್ಲಿರುವವರೆಗೂ ಅವಳು ಯಾರೊಟ್ಟಿಗೂ ಮಾತಾಡಿದ್ದೇ ನಾನು ನೋಡಲಿಲ್ಲ. ಅಲ್ಲಿನವರು ನಿವೃತ್ತಿಯಾದ ಮೇಲೆ ಏಕಾಂಗಿಯಾಗಲು ಇಷ್ಟ ಪಡುತ್ತಾರೋ ಏನೋ. ಅದೇ ನಮ್ಮ ದೇಶದಲ್ಲಿ ಹಾಗಿಲ್ಲ. ನಮ್ಮ ನಿವೃತ್ತರು ಹಾಗೆ ಏಕಾಂಗಿಯಾಗಿರಲು ಬಯಸುವುದಿಲ್ಲ. ನನ್ನನ್ನು ಯಾರೂ ಮಾತಾಡಿಸೋದೇ ಇಲ್ಲ ಎಂಬುದು ಇಲ್ಲಿನ ಹಲವಾರು ವಯಸ್ಸಾದವರ ಕೊರಗು. ಈಗೀಗ ಹಾಗೆ ಹೇಳುವವರ ಸಂಖ್ಯೆ ನಮ್ಮವರಲ್ಲೂ ತುಂಬಾ ಕಡಿಮೆ ಆಗುತ್ತಿದೆ. ಇದೂ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಇರಬಹುದು!
ಅಲ್ಲಿಗೆ ಹೋದ ಹೊಸದರಲ್ಲಿ ಮಗಳಿಗೂ ಶಾಲೆ ಶುರು ಆಗಿರಲಿಲ್ಲ. ಅವಳಿಗೆ ಸ್ವಲ್ಪ ಮನೋರಂಜನೆ ಮಾಡಲು, ಕಬಡ್ಡಿ ಆಟ ಕಲಿಸುವೆ ಬಾ ಅಂತ ಹೇಳಿದೆ. ದೇಶ ಬಿಟ್ಟು ಹೊರಗೆ ಬಂದಾಗ ನಮ್ಮ ದೇಸೀ ಆಟಗಳು, ಸಂಸ್ಕೃತಿ ತುಂಬಾ ನೆನಪಾಗುತ್ತೆ! ನಮ್ಮ ಮನೆಯಲ್ಲಿಯೇ ಇಬ್ಬರೂ ಕಬ್ಬಡ್ಡಿ ಆಡುತ್ತಾ ಖುಷಿ ಪಡುತ್ತಿದ್ದೆವು. ಅಷ್ಟೊತ್ತಿಗೆ ನಮ್ಮ ಮನೆಯ ಕರೆಗಂಟೆ ಕೂಗಿತು. ನನಗೆ ಖುಷಿಯಾಯಿತು. ಯಾರೋ ಒಬ್ಬರು ನಮ್ಮ ಮನೆಗೆ ಬಂದರಲ್ಲ ಅಂತ. ಬಾಗಿಲು ತೆಗೆದಾಗ ಮುಂದೊಬ್ಬ ಬಿಳಿಯ ನಿಂತಿದ್ದ. ತನ್ನ ಪರಿಚಯ ಮಾಡಿಕೊಂಡು, ನಾನು ನಿನ್ನ ಮನೆಯ ಕೆಳಗಿನ ಮನೆಯವನು ಅಂತ ಹೇಳಿದ. ಅದು ಹೇಗೆ ಅವನಿಗೆ ತಿಳಿಯಿತು ಅಂದರೆ ನಾವು ಕಬಡ್ಡಿ ಆಡುತ್ತಿದ್ದೆವಲ್ಲ!
“you are shaking my apartment!” (ನೀನು ನನ್ನ ಮನೆಯನ್ನು ಅಲುಗಾಡಿಸುತ್ತಿದ್ದೀಯ) ಅಂತ ತುಂಬಾ ಕೋಪದಿಂದ ಹೇಳಿದ. ಆಗ ನನಗೆ ನಾನು ಮಾಡಿದ ತಪ್ಪು ಅರಿವಾಗಿತ್ತು. ಅಲ್ಲಿನವರು ತಮ್ಮ ವೈಯುಕ್ತಿಕ ಜೀವನಕ್ಕೆ ಕಿರಿಕಿರಿ ಆಗುವುದನ್ನು ಎಳ್ಳಷ್ಟೂ ಸಹಿಸುವುದಿಲ್ಲ. ನಾವು ಒಮ್ಮೊಮ್ಮೆ ಅತಿ ಸಹಿಷ್ಣುಗಳು! ನಮ್ಮ ಮನೆಯ ಮೇಲಿನವರು ಎಷ್ಟೇ ಸಪ್ಪಳ ಮಾಡಿದರೂ ಹೋಗಲಿ ಬಿಡು, ನೋಡೋಣ ಅಂತೀವಿ. ಇವನಾದರೂ ತಾನೇ ಸ್ವತಃ ಬಂದು ಹೇಳಿ ಹೋದ. ಅಲ್ಲಿ ಎಷ್ಟೋ ಕಡೆ ಪೊಲೀಸರನ್ನೇ ಕರೆಸಿಬಿಡುತ್ತಾರೆ.
ಅಲ್ಲಿನ ನನ್ನ ಗೆಳೆಯನೊಬ್ಬನ ಮನೆಯ ಕೆಳಗಿನ ಮನೆಯಲ್ಲಿ ಒಬ್ಬ ಅಜ್ಜಿ ಇದ್ದಳಂತೆ. ಅದೂ ಕೂಡ ಅಪಾರ್ಟ್ಮೆಂಟ್. ಅಲ್ಲಿ ನಮ್ಮ ಕಟ್ಟಡಗಳ ತರಹ ಗಟ್ಟಿ ಇರೋದಿಲ್ಲ. ಕಟ್ಟಿಗೆಯನ್ನೇ ಜಾಸ್ತಿ ಬಳಸುತ್ತಾರಾದ್ದರಿಂದ ತುಂಬಾ ಸೂಕ್ಷ್ಮವಾಗಿರುತ್ತವೆ. ನಮ್ಮ ತರಹದ ಕಟ್ಟಡಗಳೂ ಇವೆ. ಆದರೂ ನಾನು ಇಂತಹ ಕಟ್ಟಡಗಳನ್ನೆ ನೋಡಿದ್ದು ಜಾಸ್ತಿ. ಮೇಲಿನಿಂದ ಏನೆ ಸಪ್ಪಳ ಆದರೂ ಆ ಅಜ್ಜಿ ತಮ್ಮ ಮನೆಯ ceiling ಗೆ ಕೋಲಿನಿಂದ ಕುಟ್ಟುತ್ತಿದ್ದರಂತೆ! ಹಾಗಂತ ನನ್ನ ಗೆಳೆಯ ಹೆಚ್ಚು ಸಪ್ಪಳ ಮಾಡುತ್ತಿರಲಿಲ್ಲ. ಅವರು ನಡೆಯುತ್ತಿದ್ದರೂ ಸಪ್ಪಳ ಆಗುತ್ತೆ ಅಂತ ಅಜ್ಜಿ ತಕರಾರು ತೆಗೆಯುತ್ತಿದ್ದಳಂತೆ. ಒಮ್ಮೆ ಪೊಲೀಸರನ್ನೂ ಕರೆಸಿಬಿಟ್ಟಳಂತೆ. ಹೀಗಾಗಿ ಇವರು ಮನೆಯಲ್ಲಿ ನಡೆಯುವಾಗ moon walk ತರಹ ನಿಧಾನಕ್ಕೆ ಅಡ್ಡಾಡುವುದನ್ನು ರೂಢಿಸಿಕೊಂಡರಂತೆ!
ನಾವು ಅಲ್ಲಿರುವವರೆಗೆ ಅಕ್ಕಪಕ್ಕದವರ ಅವಶ್ಯಕತೆ ಅಷ್ಟೆಲ್ಲಾ ಇರಲಿಲ್ಲ, ಯಾಕೆಂದರೆ ನಮ್ಮ ಕನ್ನಡ ಮಿತ್ರ ಬಳಗ ಇತ್ತಲ್ಲ! ಹೀಗೆ ಒಂದು ಸಂಜೆ ಮಂಜುನ ಮನೆಯಲ್ಲಿ ಚಾ ಕುಡಿಯುತ್ತಾ ಕೂತಿದ್ದಾಗ, camping ಹೋಗೋಣ ಗುರಣ್ಣ? ಅಂದ. ತಿರುಗಾಟಕ್ಕೆ ನಾನು ಇಲ್ಲ ಅಂದೆನೆಯೇ?
ನಡಿ, ಬರುವ ರವಿವಾರವೆ ಹೋಗೋಣ ಅಂದೆ. ನಮ್ಮ ಜೊತೆಗೆ ಚಂದ್ರು, ಅಭಿಷೇಕ್ ಹಾಗೂ ಕೊಮಾ ಮಂಜು ಕೂಡ ಬರಲು ತಯಾರಾದರು. ಅದು ಪಕ್ಕದ ರಾಜ್ಯ ಆಯೋವಾದಲ್ಲಿ ಇದ್ದ ಪೊಂಕಾ ಎಂಬ ಪ್ರದೇಶದಲ್ಲಿ ಇದ್ದ ಒಂದು ಸ್ಥಳ. ಅಲ್ಲಿ ಒಂದು ಕಾಡಿನ ತರಹ ಇರುತ್ತೆ, ನಾವು ಒಂದಿಷ್ಟು ಟೆಂಟ್ ತೆಗೆದುಕೊಂಡು ಹೋಗಿ ಒಂದು ರಾತ್ರಿ ಕಳೆಯಬೇಕು. ಅದೊಂದು ಖಂಡಿತ ಹೊಸ ಅನುಭವ ನಮಗೆ. ಅಲ್ಲಿಯೇ ಅಡಿಗೆ ಮಾಡಿಕೊಂಡು ತಿನ್ನುವ ಅವಕಾಶವೂ ಇತ್ತು. ಕಾಡಿನಲ್ಲಿ ಹೇಗಪ್ಪಾ ಇರೋದು ಎಂಬ ಭಯ ಇತ್ತಾದರೂ ಬೇರೆಯವರೂ ಕೂಡ ನಮ್ಮ ಜೊತೆ ಇರುವರಲ್ಲ ಎಂಬ ಸಮಾಧಾನ ಮಾಡಿಕೊಂಡೆ.
ಮೂರು ಕಾರುಗಳಲ್ಲಿ ಏನೇನು ಬೇಕೋ ಎಲ್ಲವನ್ನೂ ತೆಗೆದುಕೊಂಡು ಹೊರಟೆವು. ಪ್ರವೇಶಿಸುತ್ತಿದ್ದಂತೆ ಅದೊಂದು ಮಾನವ ನಿರ್ಮಿತ ಕಾಡಿನ ತರಹ ಅನಿಸಿತು. ಅಷ್ಟು ಸುವ್ಯವಸ್ಥೆಗಳು ಅಲ್ಲಿದ್ದವು. ಕಾಡು ಅಂತ ಕರೆಯುವುದಕ್ಕಿತ ದೊಡ್ಡ ಗಾರ್ಡನ್ ಅನ್ನಬಹುದೇನೋ.
ಅಲ್ಲಿ ಟೆಂಟ್ ಹಾಕೋದಕ್ಕೆ ಅಂತಲೇ ಒಂದಿಷ್ಟು ಸ್ಥಳ ನಿಗದಿ ಮಾಡಿದ್ದರು. ನಮಗೂ ಕೂಡ ಒಂದು ನಿರ್ದಿಷ್ಟ ಜಾಗ ಇತ್ತು. ಅದಕ್ಕೊಂದು ಸಂಖ್ಯೆ ಇತ್ತು. ಪಕ್ಕದಲ್ಲಿ ವಿದ್ಯುತ್ ಬೆಳಕಿಗೆ ಹಾಗೂ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ವ್ಯವಸ್ಥೆ ಇತ್ತು. ನಿತ್ಯ ಕರ್ಮಗಳನ್ನು ಪೂರೈಸಲು ಸಾರ್ವಜನಿಕ ಟಾಯ್ಲೆಟ್‌ಗಳೂ ಇದ್ದವು. ನಮ್ಮ ತರಹವೆ ಅಕ್ಕಪಕ್ಕದಲ್ಲಿ ಹಲವಾರು ಅಮೆರಿಕನ್ನರು ಟೆಂಟ್ ಹಾಕಿ ತಮ್ಮಷ್ಟಕ್ಕೆ ತಾವು ಇದ್ದರು! ಹೆಚ್ಚಾಗಿ ಅಲ್ಲಿ ಒಂದೇ ಕುಟುಂಬದವರು ಇದ್ದರು. ನಾವು ಮಾತ್ರ ಗುಂಪಿನಲ್ಲಿ ಬಂದಿದ್ದೆವು. ಮಕ್ಕಳನ್ನೂ ಸೇರಿಸಿ ಒಟ್ಟು ಹನ್ನೆರಡು ಜನ ಇದ್ದೆವು. ಟೆಂಟ್ ತಂದಿದ್ದೆವಾದರೂ ಅದನ್ನು ಹೇಗೆ ಹಾಕುವುದು ಅಂತ ಗೊತ್ತಾಗದೆ ಪೇಚಾಡಿದೆವು. ಆಗ ಅಲ್ಲಿಯೇ ಪಕ್ಕದವರು ಹೇಗೆ ಮಾಡಿದ್ದಾರೆ ಅಂತ ಗಮನಿಸಿ ಹೇಗೋ ಮಾಡಿ ಮಲಗಲು ಒಂದು ವ್ಯವಸ್ಥೆ ಮಾಡಿಕೊಂಡೆವು. ಇಲ್ಲಿನಂತೆ ಬೇರೆಯವರ ಬಳಿಗೆ ಹೋಗಿ, ಇದನ್ನು ಹೇಗೆ ಮಾಡಬೇಕು ಸ್ವಲ್ಪ ಹೇಳಿಕೊಡಿ ಅಂತ ಕೇಳೋಕಾಗುತ್ತೆಯೇ?
ಅಕ್ಕ ಪಕ್ಕದವರಿಗೆ, ನಮಗೆ ಸಾಕಷ್ಟು ಅಂತರವೂ ಇತ್ತಾದರೂ, ಅಲೆಮಾರಿಗಳ ತರಹ ಎಲ್ಲರೂ ಸಮೂಹಿಕವಾಗಿಯೇ ಒಂದು ಕಡೆ ಟೆಂಟ್ ಹಾಕಿದಂತೆಯೇ ಅನಿಸುತ್ತಿತ್ತು. ಇನ್ನೂ ಕೆಲವರು ತಮ್ಮ ಕ್ಯಾರವಾನ್ ತಂದಿದ್ದರು. ಅದಕ್ಕೆ ಮೋಟಾರ್ ಹೋಂ ಅಂತ ಕೂಡ ಹೇಳುತ್ತಾರೆ. ಅದರಲ್ಲಿಯೇ ಮಲಗುವುದರಿಂದ ಹಿಡಿದು ಎಲ್ಲ ವ್ಯವಸ್ಥೆ ಇರುತ್ತಾದರೂ, ಅದನ್ನು ಪಕ್ಕಕ್ಕೆ ನಿಲ್ಲಿಸಿ ಅವರೂ ಕೂಡ ಟೆಂಟ್ ಹಾಕಿದ್ದರು. ಇವರಿಗೆಲ್ಲಾ ಟೆಂಟ್ ಯಾಕ ಬೇಕ್ ಅಂತ ನಾವು ಕಿಚಾಯಿಸಿ ನಮ್ಮೊಳಗೆ ನಗುತ್ತಿದ್ದೆವು. ಅಡಿಗೆ ಮಾಡಲು ಶುರು ಮಾಡಿ ಮಿರ್ಚಿ, ಭಜಿ, ಗಿರಿಮಿಟ್ಟು ಆದಿಗಳನ್ನು ಮಾಡಿಕೊಂಡು ಸವಿಯುತ್ತಾ ಹರಟೆ ಹೊಡೆಯುತ್ತಾ, ಆಗಾಗ ಅಲ್ಲಿಲ್ಲಿ ವಿಹರಿಸುತ್ತಾ ತುಂಬಾ ಖುಷಿಯಾಗಿ ಸಮಯ ಕಳೆದೆವು. ಅದು ಯಾವಾಗ ಸಂಜೆಯಾಯಿತೋ ಅಂತಲೇ ಗೊತ್ತಾಗದಷ್ಟು ಮಜವಾಗಿತ್ತು. ಅಷ್ಟೊತ್ತಿಗೆ ಯಾವುದೋ ವಿಷಯ ಬಂದಾಗ ನಾನಂತೂ ಈ ದೇಶದಲ್ಲಿ ಇರೋಕೆ ಬಂದಿಲ್ಲ ಒಂದು ವರ್ಷ ಇದ್ದು ಹೋಗ್ತೀನಿ ಅಂದೆ. ನಾನು ಹಾಗೆ ಹೇಳಿದ್ದಕ್ಕೆ ಉಳಿದವರೂ ಕೂಡ ನಾವೂ ಹಾಗೇನೇ, ಇಲ್ಲಿ ಮಾತ್ರ ಇರೋದಿಲ್ಲ ಅಂದರು. ಈಗಾಗಲೇ ಬಹಳಷ್ಟು ವರ್ಷ ಅಲ್ಲಿದ್ದು ಅಲ್ಲಿನ ನಾಗರಿಕನಾಗಿದ್ದ ಚಂದ್ರು ನಮ್ಮ ಮಾತು ಕೇಳಿ ನಕ್ಕುಬಿಟ್ಟ. ಹೊಸದಾಗಿ ಇಲ್ಲಿಗೆ ಬಂದಾಗ ಎಲ್ಲಾರೂ ಹಾಗೆ ಹೇಳುತ್ತಾರೆ. ಯಾರೂ ಇಲ್ಲಿಂದ ವಾಪಸ್ಸು ಹೋಗೋಲ್ಲ ಅಂದ. ನಾವೆಲ್ಲರೂ ಅದಕ್ಕೆ ಒಪ್ಪಲಿಲ್ಲ. ನಾವು ಹೋಗಿಯೇ ತೀರುತ್ತೇವೆ ನಿನ್ನ ದೇಶ ಯಾರಿಗೆ ಬೇಕು ಅಂತೆಲ್ಲ ಕಾಲು ಎಳೆಯತೊಡಗಿದೆವು.
“ಆತು ಹಂಗಾರ, ವಾಪಸ್ಸು ಹೋಗತೀವಿ ಅಂತ ನೀವು ಹೇಳೋ ವೀಡಿಯೋ ಮಾಡಿಕೋತೀನಿ. ಮುಂದ ಹತ್ತು ವರ್ಷ ಆದ ಮ್ಯಾಲೆ ಆ ವಿಡಿಯೋ ನಿಮಗ ತೊರಸತೀನಿ ಮಕ್ಕಳಾ” ಅಂದ. ನಾನು ನಿಸ್ಸಂಕೋಚದಿಂದ ವಿಡಿಯೋ ಹೇಳಿಕೆ ಕೊಟ್ಟೆ. ಉಳಿದವರೂ ನಾವು ಭಾರತಕ್ಕೆ ಹೊರಟು ಹೋಗುತ್ತೇವೆ ಅಂತಲೆ ವಿಡಿಯೋದಲ್ಲಿ ಹೇಳಿದರು.
ರಾತ್ರಿ ಟೆಂಟ್‌ನಲ್ಲಿ ಕಳೆಯುವ ಅನುಭವವೇ ಅನನ್ಯ. ಆದರೆ ರಾತ್ರಿ ಗಂಟೆ 12 ಆದರೂ ಯಾರಿಗೂ ಮಲಗಿಕೊಳ್ಳುವ ಯೋಚನೆಯೇ ಇಲ್ಲ. ಮಕ್ಕಳು ಈಗಾಗಲೇ ಮಲಗಿದ್ದರು. ನಾವು ದೊಡ್ಡವರು ಹರಟೆ ಹೊಡೆಯುತ್ತಲೇ ಇದ್ದೆವು. ಮುಗಿಯಲಾರದ ಹರಟೆ ಅದು. ಎಷ್ಟೋ ಜನುಮಗಳ ಗೆಳೆಯರೊ ಏನೋ ಎಂಬಂತೆ ಮಾತಿನಲ್ಲಿ ಮುಳುಗಿದ್ದೆವು. ಅವರಿವರ ಬಗ್ಗೆ ಗಾಸಿಪ್ಪು, ಒಂದಿಷ್ಟು ಜನರ ಮಿಮಿಕ್ರಿ, ಹಾಡು.. ಹೀಗೆ ಮೈಮರೆತು ಮಾತಿನ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿದ್ದೆವು. ಸುಮಾರು ಒಂದು ಗಂಟೆ ಮೀರಿತ್ತು. ಅಷ್ಟೊತ್ತಿಗೆ ಎತ್ತರದ ಒಬ್ಬ ಮನುಷ್ಯ ನಮ್ಮ ಬಳಿಯೇ ಬರುತ್ತಿದ್ದುದು ಕಂಡಿತು. ಅದನ್ನು ಗಮನಿಸಿದ ಚಂದ್ರು, ಹುಶ್ ಹುಶ್ ಅಂತ ನಮಗೆ ಸನ್ನೆ ಮಾಡಿ ಸುಮ್ಮನಾಗಿಸಿದ. ಆಗಲೇ ನಮಗೆ ಅಲ್ಲಿ ಬೇರೆಯವರೂ ಇದ್ದಾರೆ ಎಂಬ ಸಂಗತಿ ನೆನಪಿಗೆ ಬಂತು! ಆ ಮನುಷ್ಯ ಅಮೆರಿಕೆಯವನೆ ಆಗಿದ್ದ.
ಇಲ್ಲಿ ಅಮೆರಿಕೆಯವನು ಅಂದರೆ ತುಂಬಾ ವರ್ಷಗಳ ಹಿಂದೆ ಅಲ್ಲಿಗೆ ವಲಸೆ ಬಂದ ಬಿಳಿಯ ಎಂಬ ಅರ್ಥದಲ್ಲಿ ಹೇಳಬಹುದೇನೋ. ಯಾಕೆಂದರೆ ಅಲ್ಲಿನ ಬಹಳಷ್ಟು ಜನಸಂಖ್ಯೆ ಬೇರೆ ಕಡೆಯಿಂದ ಹಲವು ವರ್ಷಗಳ ಹಿಂದೆ ಬಂದು ಇದ್ದವರೆ. ಆದರೂ ಭಾರತದಿಂದ ಹೊಸದಾಗಿ ಬರುವವರ ಬಗ್ಗೆ ಅವರಿಗೆ ಯಾವಾಗಲೂ ಒಂದು ಅಸಮಾಧಾನ ಇದ್ದೆ ಇದೆ. ಭಾರತವರು ಇಲ್ಲಿಗೆ ಬಂದು ನೆಲೆಸಬಾರದು ಎಂಬ ಮನಸ್ಥಿತಿ ಚಂದ್ರುಗೂ ಇತ್ತು!
ಹೀಗೆ ನಮ್ಮನ್ನು ಕಾಣಲು ಬಂದ ಅವನು ನಮ್ಮಿಂದ ಸ್ವಲ್ಪ ದೂರದಲ್ಲಿ ನಿಂತು “howdy neighbors!” (ಹೇಗಿದ್ದೀರಿ ನೆರೆಹೊರೆಯವರೆ) ಅಂದ. ಅವನ ಮಾತಿನಲ್ಲಿ ಒಂದು ಸಮಾಧಾನ ಇರುವುದನ್ನು ನಾವೆಲ್ಲ ಗಮನಿಸಿದೆವು. ಅವನು ಮುಂದುವರೆಸಿ, ನೀವು ಸಿಕ್ಕಾಪಟ್ಟೆ ಗಲಾಟೆ ಮಾಡುತ್ತಿದ್ದೀರಿ. ಇಷ್ಟು ರಾತ್ರಿಯಾಗಿದೆ. ನಿಮ್ಮ ಗಲಾಟೆಯಿಂದ ನನಗೆ ನಿದ್ದೆ ಕೂಡ ಬರುತ್ತಿಲ್ಲ. ನಿಮಗೆ ಅಷ್ಟು ಗೊತ್ತಾಗೋದಿಲ್ಲವೇ.. ಎಂಬ ಅರ್ಥದಲ್ಲಿ ಬೈದ. ನಮಗೆಲ್ಲ ಹಾಗೆ ಮಾಡಿದೆವಲ್ಲ ಎಂಬ ಪಾಪ ಪ್ರಜ್ಞೆ ಬಂತು. ಕ್ಷಮಿಸಿ ಅಂತ ಕೇಳಿದೆವು. ಆದರೆ ಅಲ್ಲಿಯ ನಾಗರಿಕನಾಗಿದ್ದ ಚಂದ್ರುಗೆ ತುಂಬಾ ಮರ್ಯಾದೆ ಹೋಗಿಬಿಟ್ಟಿತು. ಅವನಿಗೆ sorry ಹೇಳುತ್ತಾ, ಇಷ್ಟೆಲ್ಲಾ ಗದ್ದಲ ಹಾಕಬಾರದಿತ್ತು ನೀವು ಎಂಬಂತೆ ನಮ್ಮ ಕಡೆ ನೋಡಿದ. ಸ್ವಲ್ಪ ಹೊತ್ತಿಗೆ ಮುಂಚೆ ತಾನೂ ಕೂಡ ನಮ್ಮ ಜೊತೆಗೆ ಮೈಮರೆತು ಗಲಾಟೆ ಮಾಡಿದ್ದ ಎಂಬುದೇ ಅವನಿಗೆ ಮರೆತುಹೋಗಿತ್ತು! ಥೇಟ್ ಅಮೆರಿಕನ್ನರ ಹಾಗೆ. ತಾವು ಮಾಡುವುದೆಲ್ಲವನ್ನೂ ಬೇರೆಯವರು ಸಹಿಸಬೇಕು. ಬೇರೆಯವರು ಮಾತ್ರ ಏನೂ ಮಾಡಕೂಡದು. ಅವರು ಮಾಡುವ ಎಷ್ಟೋ ವಿಚಿತ್ರಗಳು, ಸಾರ್ವಜನಿಕವಾಗಿ ಮಾಡುವ ವಿಕಾರಗಳು ನಮಗೂ ಇಷ್ಟ ಆಗೋದಿಲ್ಲ. ಹಾಗಂತ ನಾವು ಅವರಿಗೆ ಹೇಳುತ್ತೇವೆಯೇ? ಊಹೂಂ ನಮ್ಮಷ್ಟು ಸಹಿಷ್ಣುಗಳು ಬೇರೆ ಯಾರಿದ್ದಾರೆ!?
ಅವನ ಕಡೆ ಬೈಸಿಕೊಂಡು ಪಿಸುಗುಡುತ್ತಾ ಇನ್ನಷ್ಟು ಹರಟೆ ಹೊಡೆದೇ ಮಲಗಿದೆವು. ಮರುದಿನ ಬೆಳಿಗ್ಗೆ ಎದ್ದ ಮೇಲೆ ಚಂದ್ರು ಅವನಿಗೆ ಭೇಟಿ ಮಾಡಿ ಹಿಂದಿನ ರಾತ್ರಿ ಆಗಿದ್ದಕ್ಕೆ ಮತ್ತೆ ಕ್ಷಮೆ ಕೇಳಿದ. ಅವನಿಗೆ ಚಾ ಕುಡಿ ಬಾ ಅಂತ ಆಹ್ವಾನ ಕೂಡ ಮಾಡಿ ಅವನಿಗೆ ಪೂಸಿ ಹೊಡೆಯುವ ಪ್ರಯತ್ನ ನಡೆಸಿದ್ದ. ನಾವು ಉಪ್ಪಿಟ್ಟು ಮಾಡಿಕೊಂಡು ತಿನ್ನುವ ತಯಾರಿಯಲ್ಲಿದ್ದೆವು. ಅಂತೂ ಟೆಂಟ್ ಕಾರ್ಯಕ್ರಮ ಮುಗಿಸಿ ವಾಪಸ್ಸು ಮನೆಗಳಿಗೆ ಹೊರಟೆವು. ಅದೊಂದು ತುಂಬಾ ಅಪರೂಪದ ಅನುಭವವಾಗಿತ್ತು. ಅಲ್ಲಿ ಇರುವ ತನಕ ಆಗಾಗ ಇಲ್ಲಿಗೆ ಬರಬೇಕು ಅಂತ ಅಂದುಕೊಂಡೆವು…
(ಮುಂದುವರಿಯುವುದು..)
(ಹಿಂದಿನ ಕಂತು: ನಾವು… ನಮ್ಮದು..)
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.