Advertisement
ಅಕ್ಕ ಸುಬ್ಬಕ್ಕನ ಪ್ರವಚನ ವೃತ್ತಾಂತ

ಅಕ್ಕ ಸುಬ್ಬಕ್ಕನ ಪ್ರವಚನ ವೃತ್ತಾಂತ

ಲಾಕ್ ಡೌನ್ ದೆಸೆಯಿಂದ ಕಾರ್ಯಕ್ರಮ ವೇದಿಕೆಗಳು ಸಿಗದೇ ಇದ್ದಾಗ, ಸುಬ್ಬಕ್ಕ ಹೊಸ ಐಡಿಯಾ ಮಾಡಿದಳು. ಅದುವೇ ಫೇಸ್ ಬುಕ್ ಲೈವ್. ಮೊದಲ ದಿನ ಲೈವ್ ಗೆ ಸಿದ್ಧಳಾದ ಆಕೆ, ‘ಲಾಕ್ ಡೌನ್’ ಸಮಯದಲ್ಲಿ ಯಾರೂ  ಮನೆಯಿಂದ ಹೊರ ಹೋಗದೆ ಇರುವುದರಿಂದ ನಾ ಪ್ರತಿದಿನ ಒಂದು ವಿಷಯದ ಕುರಿತು ಪ್ರವಚನ ಮಾಡುತ್ತಿದ್ದೇನೆ. `ಅಕ್ಕ ಸುಬ್ಬಕ್ಕನ ಪ್ರವಚನ’ ಅಂತ ಕೂಡ ಇದಕ್ಕೆ ಹೆಸರಿಡಲಾಗಿದೆ. ಹಾಗಾದರೆ ಈ ಪ್ರವಚನ ಅಂದ್ರೆ ಏನು? ಅಂತ ನಾ ಈಗಲೇ ಹೇಳೊಲ್ಲ. ದಿನಾ ಒಂದು ಟಾಪಿಕ್ ತಗೊಂಡು ನಾ ಮಾತಾಡಕಿ ಇದ್ದಿನಿ. ನೀವು ಈ ನನ್ ಮಾತುಗಳು ಕೇಳಿ ಬದಲಾದರೆ ಅಷ್ಟೇ ಸಾಕು’ ಎಂದು ಬದಲಾವಣೆ ಕಹಳೆ ಊದಿದಳು. –ಮಚ್ಚೇಂದ್ರ ಪಿ. ಅಣಕಲ್ ಬರೆದ ವಿಡಂಬನಾ ಬರಹ ಇಲ್ಲಿದೆ. 

ಉದಯೋನ್ಮಖ ಕವಯತ್ರಿಯಾದ ಸುಬ್ಬಕ್ಕ ಕಳೆದಾರು ವರ್ಷಗಳಿಂದ ಕೆಲ ಕವನ ಸಂಕಲನಗಳು ಪ್ರಕಟಿಸಿದ ಮಾತ್ರಕ್ಕೆ ಆಕೆ ಖ್ಯಾತ ಸಾಹಿತಿ, ಪ್ರಖ್ಯಾತ ಸಾಹಿತಿ, ಮಹಿಳಾ ಲೇಖಕಿ ಅಂತ ಇನ್ನೂ ಏನೇನೆಲ್ಲ ಅನ್ವರ್ಥನಾಮಗಳು ತನ್ನ ಹೆಸರಿನ ಮುಂದೆ ಸೇರಿಸಿಕೊಂಡಿದ್ದಳು. ಯಾವುದೋ ಒಂದು ಸಾಂಸ್ಕೃತಿಕ, ಸಾಹಿತ್ಯ ಸಂಘಟನೆಯ ರಾಜ್ಯ ಅಧ್ಯಕ್ಷರೆಂದು ಜಿಲ್ಲಾ ಬಸ್ ಸ್ಟಾಂಡ್ ಎದುರಿಗೆ ದೊಡ್ಡ ಕಟೌಟ್ ಹಾಕಿ ರಾಜಕಾರಣಿಗಳಂತೆ `ಹಾರ್ದಿಕ ಶುಭಾಶಯಗಳು’ ಅಂತ ಹಲ್ಲು ಕಿರಿದು ನಗುಮೊಗದ ಫೋಟೊದೊಂದಿಗೆ ಕೈ ಮುಗಿದು ಹೊಸ ವರ್ಷಕ್ಕೋ ಅಥವಾ ದಸರಾ, ಯುಗಾದಿ ಮೊದಲಾದ ರಾಷ್ಟ್ರೀಯ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಈ ರೀತಿ ತನ್ನ ಹೆಸರಿನೊಂದಿಗೆ ಆ ಪದಗಳು ಸೇರಿಸಿ ಜನರಿಗೆ ಶುಭ ಕೋರುತ್ತಾಳೆ. ಮತ್ತು ಆಕೆ ಆ ಕಟೌಟಿನ ಫೋಟೋ ತೆಗೆದು ಫೇಸ್ ಬುಕ್, ವಾಟ್ಸಪ್, ಟ್ವಿಟರ್ ಮೊದಲಾದ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವ ಗೀಳು ಬೆಳೆಸಿಕೊಂಡಿದ್ದಳು, ಕಾರಣ  ಬೇಗ ಕರ್ನಾಟಕ ತುಂಬೆಲ್ಲ ಎಲ್ಲರೂ `ದೊಡ್ಡ ಸಾಹಿತಿ’ ಅಂತ ತನ್ನನ್ನು ಗುರ್ತು ಹಿಡಿಯಲಿ ಅಂತ.

ಹಾಗೇನಾದ್ರೂ ಆದ್ರೆ ನಾನೇ ನಮ್ ಜಿಲ್ಲೆಯೊಳಗೆ ಹೆಸರುವಾಸಿ ಸಾಹಿತಿ ಅನ್ನೋದು ಅವಳ ಕಲ್ಪನೆ. ಆದರೆ ಈ ಕೊರೊನಾ ಮಹಾಮಾರಿ ಬಂದು ಈಗ ತಾನೆ ಬಾಟಿಗೆ ಬಂದ ಬಿಳಿ ಜೋಳದ ದಂಟಿಗೆ ರೋಗ ಬಡಿದು ಬೆಳೆಯೆಲ್ಲ ನಾಶವಾದಂತೆ ಇವಳ ಪ್ರಚಾರ ಕಾರ್ಯ ಸ್ಥಗಿತವಾಗಿತ್ತು. ಎಲ್ಲ ಕಟೌಟುಗಳು ನೆಲಕ್ಕುರುಳಿದವು. ಯಾವುದೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಭೆ ಸಮಾರಂಭಗಳು ಮಾಡದಂತೆ ಭಾರತ ಸರ್ಕಾರ ನಿರ್ಭಂಧ ಹೇರಿದ್ದರಿಂದ ಚಿಂತೆಗೀಡಾದ ಸುಬ್ಬಕ್ಕ ಮಾಡುವುದೇನೆಂದು ಯೋಚಿಸುತ್ತಾ ವಾಟ್ಸಪ್, ಫೇಸ್ ಬುಕ್ ನಲ್ಲಿ ಕೈಯಾಡಿಸುತ್ತಾ ಕಾಲ ಕಳೆಯುತ್ತಿರುವಾಗ ನಗರದ ಸವಿಮಠದ ಅಕ್ಕ ಮಹಾದೇವಿಯವರು ಫೇಸ್ ಬುಕ್ ಲೈವ್ ನಲ್ಲಿ ಪ್ರವಚನ ಹೇಳುತ್ತಿರುವುದು ಕಂಡು “ನಾನ್ಯಾಕೆ ಈ ರೀತಿ ಪ್ರವಚನ ಸುರು ಮಾಡಬಾರದು ?” ಅಂತ ಯೋಚಿಸುತ್ತಾ ಒಂದು ನಿರ್ಧಾರಕ್ಕೆ ಬಂದು “ಅವ್ವಾ ! ಸುಬ್ಬಕ್ಕನ ಪ್ರವಚನ” ಅಂತ ಹೆಸ್ರು ಕೊಟ್ಟು ನಾನು ಲೈವ್ ನಲ್ಲಿ ಪ್ರವಚನ ಹೇಳಬಹುದಲ್ಲಾ? ಎಂದುಕೊಂಡಳು. ಬೇಡ ಬೇಡ. ಈ ಅವ್ವಾ! ಅನ್ನೋ ಪದ ಬೇಡ. ನನಗಿನ್ನೂ ಅಷ್ಟೊಂದು ವಯಸ್ಸಾಗಿಲ್ಲ. `ಅಕ್ಕ ಸುಬ್ಬಕ್ಕನ ಪ್ರವಚನ’ ಅಂತ ಟೈಟಲ್ ಕೊಟ್ಟು ದಿನಾ ರಾತ್ರಿ ಊಟವಾದ ಮೇಲೆ 8 ಗಂಟೆಗೆ ಪ್ರವಚನ ಸುರುಮಾಡಿದರಾತು’ ಅಂತ ನಿರ್ಧರಿಸಿ ಬ್ಯಾನರ್ ಬರೆಸಿ ಮನೆಯ ಮಧ್ಯದ ಮಾಡ ಮುಚ್ಚುವಂತೆ ಕಟ್ಟಿ ಪ್ರವಚನ ಸುರು ಮಾಡುವುದಕ್ಕೂ ಮೊದಲೆರಡು ಗಂಟೆಗಳ ಕಾಲ ತನಗೆ ಬೇಕಾದವರಿಗೆ ರಾತ್ರಿ ಫೇಸ್ ಬುಕ್ ಲೈವ್ ಗೆ ಜೋಯಿನ್ ಆಗಲು ಹೇಳಿ ವಾಟ್ಸಪ್ ಗ್ರೂಪುಗಳಲ್ಲಿ `ಅಕ್ಕ ಸುಬ್ಬಕ್ಕನ ಪ್ರವಚನ’ ಅಂತ ಸಂದೇಶ ಹರಿಯ ಬಿಟ್ಟು ಹೆಚ್ಚು ಲೈಕ್ ಮತ್ತು ಶೇರ್ ಮಾಡಿ ಕಾಮೆಂಟ್ ಮಾಡಲು ಮರೆಯದಿರಿ ಅಂತ ಕೇಳಿಕೊಂಡಳು.

ಮತ್ತೇ ತನಗೆ ತೀರ ಆಪ್ತರಾದವರಿಗೆ ಕರೆ ಮಾಡಿ “ನೀವು `ಲೈವ್’ ನಲ್ಲಿ ಬರಲೇ ಬೇಕು. ನೀವು ಲೈವ್ ನಲ್ಲಿ ಬಂದು ನನಗೆ ಸಪೋರ್ಟ್ ಮಾಡದೇ ಹೋದ್ರೆ ಇನ್ಯಾರು ಸಪೋರ್ಟ್ ಮಾಡ್ತಾರೆ? ಅಂತ ದುಂಬಾಲು ಬಿದ್ದು ಕೇಳಿಕೊಂಡಾಗ ಕೆಲವರು ಅನಿವಾರ್ಯವಾಗಿ ಒಪ್ಪಿಗೆ ಸೂಚಿಸಿದ್ದರು.

ರಾತ್ರಿ ಸರಿಯಾಗಿ 8 ಗಂಟೆ ಸುಬ್ಬಕ್ಕ ಮೊದಲ ದಿನವಾದರಿಂದ ಹೊಸ ಬಟ್ಟೆ ತೊಟ್ಟುಕೊಂಡು, ಹಣೆ ಮೇಲೆ ವಿಭೂತಿ ಧರಿಸಿ ಸ್ವಲ್ಪ ಮೇಕಪ್ ಮಾಡಿಕೊಂಡು `ಲೈವ್’ ನಲ್ಲಿ ಬಂದು “ಎಲ್ಲರಿಗೂ ನಮಸ್ಕಾರಗಳು ! ನಾನು ಸುಭದ್ರ ಸಿ ಪೊದ್ದಾರ. ಪ್ರಖ್ಯಾತ ಸಾಹಿತಿಗಳು, ಪ್ರಗತಿಪರ ಚಿಂತಕರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರು” ಅಂತ ಎರಡು ಕೈ ಜೋಡಿಸಿ ಹುಸಿ ನಗೆಯ ಮುಗುಳ್ನಗೆ ಬೀರಿ ಮಾತು ಸುರು ಮಾಡಿದಳು.

“ನಾನು ಇವತ್ತೊಂದು ಹೊಸ ವಿನೂತನ ಪ್ರಯೋಗ ಸುರು ಮಾಡಿದ್ದಿನಿ. ಅದೇನಂದ್ರ ಈ ಕೋರನಾ `ಲಾಕ್ ಡೌನ್’ ಸಮಯದಲ್ಲಿ ಎಲ್ಲರೂ ಮನೆಯಿಂದ ಹೊರ ಹೋಗದೆ ಇರುವುದರಿಂದ ನಾ ಪ್ರತಿದಿನ ಒಂದು ವಿಷಯದ ಕುರಿತು ಪ್ರವಚನ ಮಾಡುತ್ತಿದ್ದೇನೆ. `ಅಕ್ಕ ಸುಬ್ಬಕ್ಕನ ಪ್ರವಚನ’ ಅಂತ ಕೂಡ ಇದಕ್ಕೆ ಹೆಸರಿಡಲಾಗಿದೆ. ಹಾಗಾದರೆ ಈ ಪ್ರವಚನ ಅಂದ್ರೆ ಏನು? ಅಂತ ನಾ ಈಗಲೇ ಹೇಳೊಲ್ಲ. ದಿನಾ ಒಂದು ಟಾಪಿಕ್ ತಗೊಂಡು ನಾ ಮಾತಾಡಕಿ ಇದ್ದಿನಿ. ನೀವು ಈ ನನ್ ಮಾತುಗಳು ಕೇಳಿ ಬದಲಾದರೆ ಅಷ್ಟೇ ಸಾಕು. ನಾ ಪ್ರತಿದಿನ ಒಂದೊಂದು ವಿಷಯ ತಗೊಂಡು ನಿಮ್ಮ ಮುಂದೆ ಬರ್ತಿನಿ. ಲೈವ್ ನಲ್ಲಿ ಬಂದು ಮಾತಾಡೋದು ಅಷ್ಟೊಂದು ಸಾಮಾನ್ಯ ಮಾತಲ್ಲ. ಅದು `ಮಾತು ಬೆಳ್ಳಿ, ಮೌನ ಬಂಗಾರ’ಅಂತಾರಲ್ಲ? ಹಾಗೆ. ಮತ್ತೇ “ಮಾತು ಮನೆ ಕೆಡಿಸಿತು” ಅಂತಾರೆ ಯಾವ ಮಾತು ಆಡಬೇಕು ಯಾವ ಮಾತು ಆಡಬಾರದು ಅನ್ನೋದು ಇಲ್ಲಿ ಹೇಳಿಕೊಡ್ತಿನಿ. “ಮಾತು ಮುತ್ತು, ಮಾತೇ ಮೃತ್ಯೂ” ಅಂತಾರೆ. ಹಾಗಾಗಿ ಒಮ್ಮೊಮ್ಮೆ ಮಾತಿನಿಂದ ಜೀವ ಹೋಗಬಹುದು. ಹುಷಾರಾಗಿರಿ. ನಿಮ್ಮ ಒಳ್ಳೆ ಮಾತಿನಿಂದ ಇನ್ನೊಬ್ಬರ ಜೀವಕ್ಕೆ ಅಪಾಯ ಇದೆ ಅಂತ ಗೊತ್ತಾದ್ರೆ ಖಂಡಿತ ನೀವು ಸುಳ್ಳನ್ನೆ ಸತ್ಯವೆಂದು ಜೋರಾಗಿ ಹೇಳಬೇಕು. “ನುಡಿದರೆ ಮುತ್ತಿನ ಹಾರದಂತಿರಬೇಕು….” ಅಂತ ಅಣ್ಣ ಬಸವಣ್ಣ ಹೇಳಿಲ್ವಾ? ಅದಕ್ಕೆ ನಮ್ಮ ಮಾತುಗಳು ಮುತ್ತಿನಂತೆ ಹೊಳೆಯುತ್ತಿರಬೇಕು. “ಮಾತು ಬಲ್ಲವನಿಗೆ ಜಗಳವಿಲ್ಲ- “ಅಂತ ಗಾದೆ ಮಾತೊಂದಿದೆ. ಅದು ನೀವು ಕೇಳಿರಬೇಕು. ಹಾಗಾಗಿ ಒಳ್ಳೆಯ ಮಾತುಗಾರನಾಗಬೇಕು. “ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬೀಡು ನಾಲಿಗೆ” ಅಂತ ದಾಸವಾಣಿಯು ನೀವು ಕೇಳಿರಬೇಕು. ಇರ್ಲಿ. “ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು” ಅಂತ ಮತ್ತೊಂದು ಗಾದೆ ಮಾತಿದೆ. ಹೀಗೆ ಮಾತಿನ ಬಗ್ಗೆ ಒಂದೇ! ಎರಡೇ? ಹೇಳ್ತಾ ಹೋದ್ರೆ ನೂರಾರು ಉದಾಹರಣೆ ಕೊಡಬಹುದು. ಆದ್ದರಿಂದ ಇಂದು ನಾವು ಒಳ್ಳೆಯ ಮಾತಾಡಿ ಗೆಳೆಯರಾಗೋಣವೆಂದು ಈ ಫೇಸ್ ಬುಕ್ `ಲೈವ್’ ನಲ್ಲಿ  ಬಂದು ನಿಂತಿದ್ದೇನೆ.” ಅಂತ ಆಕೆ ಹೇಳುತ್ತಿರುವಾಗ ಕೆಲವರು ಬೆಕ್ಕು ಕಿಟಕಿ ತೆರೆದು ಒಳ ಬಂದಂತೆ ಸುಬ್ಬಕ್ಕನ ಲೈವ್ ಗೆ ನುಸುಳಿದರು.

ದಿನಾ ಸುಬ್ಬಕ್ಕ ತನ್ನ ಪ್ರವಚನ ಸಮಯಕ್ಕೆ ಸರಿಯಾಗಿ ರಾತ್ರಿ 8 ರ ಸುಮಾರಿಗೆ ಫೇಸ್ ಬುಕ್ `ಲೈವ್’ ನಲ್ಲಿ ಬಂದು ಮಾತಾಡುವುದು ಜಗಜಾಹಿರಾಗಿ ಬಿಟ್ಟಿತ್ತು. ಆಕೆ ಒಮ್ಮೊಮ್ಮೆ ಪ್ರವಚನ ಸುರು ಆಗುವುದಕಿಂತ ಮುಚ್ಚೇ “ಹಲ್ಲೋ! ಕೇಳಸ್ತಾ ಇದೇ ಏನ್ರೀ?” ಅಂತ ಸಭೆ ಸಮಾರಂಭದಲ್ಲಿ ಮೈಕ್ ಹಿಡಿದು ಒದರುವಂತೆ ಚೀರುವಳು. ಆಗ ಲೈವ್ ವೀಕ್ಷಕರೆ! ಚಾಟ್ ಮಾಡಿ “ಕೇಳಿಸುತ್ತಿದೆ ಮಾತಾಡಿ ಅಕ್ಕಾ!” ಅನ್ನೋರು. ಮತ್ತೆ ಮುಂಬೈಯಿಂದ ವೀರೇಶ ಅನ್ನೊರು “ಕೇಳಿಸುತ್ತಿದೆ ಅಕ್ಕಾ!” ಅಂತ ಕಾಮೆಂಟ್ ಮಾಡಿದ. ಆಗ ಆಕೆ “ಅಗೋ! ಅಗೋ! ನನ್ ಮಾತು ಮುಂಬೈವರೆಗೂ ಹೋಯ್ತು ಅಂತ ಖುಷಿಯಾಗಿ ಕುಣಿದಾಡುತ್ತಿದ್ದಳು. ಆಗ ಒಬ್ಬ ಹೈದ್ರಾಬಾದನಿಂದ ಮತ್ತೊಬ್ಬ ದೆಹಲಿ ಇನ್ನೊಬ್ಬ ಬೆಂಗಳೂರು ರಾಯಚೂರ್ ಯಾದಗಿರಿ. ಬೀದರ, ಹುಬ್ಬಳಿ, ಬೆಳಗಾಂವ, ಧಾರವಾಡ, ಉಡಪಿ, ಕಲ್ಕತ್ತಾ, ಚೆನೈ, ಪುಣೆ, ನಾಸಿಕ್ ಗೋವಾ ದುಬೈ, ಮಸ್ಕಟ್, ಅಮೇರಿಕಾ ಮೊದಲಾದ ಕಡೆಯಲ್ಲಿರುವ ಅವಳ ಫೇಸ್ ಬುಕ್ ಸ್ನೇಹಿತರು ಲೈವ್ ಗೆ ಬಂದು ಚಾಟಿಂಗ್ ಮಾಡೋದನ್ನು ನೋಡಿ ನಾನು ಎಲ್ಲೆಲ್ಲೋ ಸಾಹಿತಿಯಾಗಿ ತುಂಬ ಜನರಿಗೆ ವಿಶ್ವದಾದ್ಯಂತ ಪರಿಚಯವಾದೆ ಅಂತ ಒಳಗೊಳಗೆ ಖುಷಿಯಾಗಿ ಮಾತು ಮುಂದುವರೆಸಿದಳು.

ಆಗ ಒಬ್ಬ ಹೈದ್ರಾಬಾದನಿಂದ ಮತ್ತೊಬ್ಬ ದೆಹಲಿ ಇನ್ನೊಬ್ಬ ಬೆಂಗಳೂರು ರಾಯಚೂರ್ ಯಾದಗಿರಿ. ಬೀದರ, ಹುಬ್ಬಳಿ, ಬೆಳಗಾಂವ, ಧಾರವಾಡ, ಉಡಪಿ, ಕಲ್ಕತ್ತಾ, ಚೆನೈ, ಪುಣೆ, ನಾಸಿಕ್ ಗೋವಾ ದುಬೈ, ಮಸ್ಕಟ್, ಅಮೇರಿಕಾ ಮೊದಲಾದ ಕಡೆಯಲ್ಲಿರುವ ಅವಳ ಫೇಸ್ ಬುಕ್ ಸ್ನೇಹಿತರು ಲೈವ್ ಗೆ ಬಂದು ಚಾಟಿಂಗ್ ಮಾಡೋದನ್ನು ನೋಡಿ ಖುಷಿಯಾದಳು.

“ನೋಡಿ ಮನುಷ್ಯನಿಗೆ ಏನೇ ಕಷ್ಟ ಬಂದ್ರು ಯಾರು ಹೆದರಬಾರದು. ನಮಗ ಆಗಲಾರದವು ಏನಾದ್ರೂ ಹೊಟ್ಟೆ ಕಿಚ್ಚಿನಿಂದ ಬರೆದ್ರು ಅವರ ಕೈಲಿ ಏನೂ ಮಾಡಲಾಕ್ ಆಗೋದಿಲ್ಲ. ಹೆಚ್ಚಂದ್ರ ಅವ್ರು ಒಂದು ಸಣ್ಣ ಬರಹ  ಬರೀಬೋದು. ಅದಕ್ಕೂ ಹೆಚ್ಚಿಗಿ ಅವರ ಕೈಲಿಂದ ಏನೂ ಮಾಡಲಾಕ್ ಆಗೋಲ್ಲ. ನಾನು ನೋಡ್ರೀ ಐದಾರು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ನಾಕಾರು ಪುಸ್ತಕ ಬರೆದು ನಿಮ್ ಮುಂದ ಬಂದ ನಿಂತೀನಿ. ಸುಮ್ಮ ಸುಮ್ನೆ ಆಗೋಲ್ಲ. ಎಲ್ಲದಕ್ಕೂ ಶ್ರಮ ಬೇಕು. ಮತ್ತ ನಿಮಗ ಮನಸ್ಸಿನ್ಯಾಗ ಆಗೋಲ್ಲ ಅಂತ ಏನಾದ್ರೂ ಅನಿಸಿದ್ರ ಮೊದ್ಲ ಅದು ನಿಮ್ ಮೈಂಡ್ ಸೆಟ್ ನಿಂದ ತೆಗೆದು ಹಾಕ್ರಿ. ನಾನಂತು ನನ್ನ ಮೈಂಡ್ ಸೆಟ್ಟ್ ಮಾಡಿಕೊಂಡೆ ಇದ್ದೀನಿ. ಯಾರಾದ್ರು ಅದು ಹಾಂಗಲ್ಲ ಹಿಂಗೆ ಅಂತ ಬುದ್ದಿ ಹೇಳಿದ್ರೆ ನಾ ಕೇಳಾಕಿ ಅಲ್ಲ. ಯಾಕೆಂದ್ರೆ ನನ್ ಮೈಂಡ್ ಸೆಟ್ ಆಪಡೆಟ್ ಮಾಡಲಿಕೆ ಬರೋದೆ ಇಲ್ಲ. ಅದು ಮೊದಲೆ ಸೆಟ್ ಆಗಿದೆ. ಅಂತ ತಲೆ ಬುಡ ಒಂದೂ ಅರ್ಥವಾಗದಂತೆ ಮಾತು ಸುರು ಮಾಡಿದಳು. ಇದನ್ನು ಕೇಳಿದವರಲ್ಲಿ ಒಬ್ಬ `ಬಕ್ವಾಸ್’ ಅಂತ ಚಾಟ್ ಮಾಡಿ ಲೈವನಿಂದ ಹೋರ ಹೋಗಿರುವುದು ಕಂಡುಬಂದಿತ್ತು.

ಹೀಗೆ ಆಕೆ ಪ್ರವಚನದ ಮಧ್ಯದಲ್ಲಿ ತನಗೆ ಆಗದವರ ಕುರಿತು ಪರೋಕ್ಷವಾಗಿ ವಿವಾದದ ಮಾತುಗಳನ್ನಾಡಿ ವೀಕ್ಷಕರಿಗೆ ಗೊಂದಲ ಸೃಷ್ಟಿ ಮಾಡತೊಡಗಿದಳು ಇದನ್ನು ನೋಡಿದ ಕೆಲವರು ಸಿಡಿಮಿಡಿಯಾಗಿ ಲೈವ್ ನಿಂದ ಎಗ್ಸಿಟ್ ಆಗುತ್ತಿರುವುದು ಅವಳ ಅನುಭವಕ್ಕೆ ಬರಲಿಲ್ಲ.

ಮತ್ತೆ ಕೆಲವರು “ಇವಳಿಗ್ಯಾಕ್ ಬಂತು ಇಂಥಹ ಬುದ್ಧಿ? ಗಂಡ-ಹೆಂಡ್ತಿ, ಮಕ್ಕಳು-ಮರಿ, ತುಂಬಿದ ಸಂಸಾರ. ಕೈ ತುಂಬ ಸಂಬಳ ಇರುವಾಗ ಈ `ಲಾಕ್ ಡೌನ್’ ನಲ್ಲಿ ಹಾಯಾಗಿ ಮನೆಯಲ್ಲಿ ಕುಳಿತು ಧಾರವಾಹಿನೋ ಅಥವಾ ಸಿನಿಮಾನೋ ನೋಡ್ತಾ ಕಾಲ ಕಳೆಯಬಾರದೆ? ಅಥವಾ ಆಕೆ ಸಾಹಿತಿ ಅಂತ ಆದ್ರೆ ಬರವಣಿಗೆಯಾದ್ರೂ ಮಾಡಬಾರದೆ? ಸಾಹಿತಿಯಾದವರು ಬರೆಯಬೇಕು. ಕಂಡ ಕಂಡ ಹಾಗೆ ಬಾಯಿಗೆ ಬಂದಂತೆ ತಲೆ ಬುಡ ಇಲ್ಲದೆ ಮಾತು ಆಡೋದಲ್ಲ. ಮಾತು ಆಡುವವರಿಗೆ ಪ್ರವಚನ ಹೇಳೋರಿಗೆ ಸಾಹಿತಿ ಅನ್ನೋಲ್ಲ.” ಅಂತ ಕೆಲವರು ಬೇಸತ್ತು `ಲೈವ್’ ಗೆ ಬೈ ಹೇಳಿದರು. ಮತ್ತೆ ಕೆಲವರು ಅವಳ ಲೈವ್ ಗೆ ಜೋಯಿನ್ ಆಗಿ ಮನಸ್ಸಿಲ್ಲದಿದ್ದರು ಆಕೆ ಗಮನಿಸಲಿ ಅಂತ ಒಮ್ಮೆ ಸುಮ್ಮನೆ ಲೈಕ್ ಕೊಟ್ಟು “ಹಾಯ್! ಸುಪರ್!” ಅಂತ ಇನ್ನೂ ಏನೇನೋ ತೋಚಿದ್ದು ಬರೆದು ಖುಷಿ ಪಡಿಸುತ್ತಿದ್ದರು.

ಸುಬ್ಬಕ್ಕ ಇದಕ್ಕೂ ಮೊದಲು ತಮ್ಮೂರಿನಲ್ಲಿ ಸಾಹಿತ್ಯ ಕಾರ್ಯಕ್ರಮ ನಡೆಯುವಾಗ ನೀರೂಪಣೆ ಕಾರ್ಯ ಕೈಗೆತ್ತಿಕೊಂಡು ಉತ್ತಮ ಮಾತುಗಾರಳಾಗಿದ್ದಳು. ಹಾಗಾಗಿ ಆಕೆ ಕೆಲ ಟಿ.ವಿ. ನಿರೂಪಕರನ್ನು ಮೀರಿ ಮುಂದೆ ಸಾಗಬೇಕೆಂದು ಅದೇಷ್ಟೋ ಸಲ ಅಂದುಕೊಂಡು ಜಿಲ್ಲಾ, ತಾಲೂಕು ಸಾಹಿತ್ಯ ಸಮ್ಮೇಳನಗಳ ಸಭೆ ಸಮಾರಂಭಗಳಲ್ಲಿ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದಳು. ಮತ್ತೆ ಇವಳ ನಿರೂಪಣೆ ನೋಡಿ ಕೆಲವು ಯು ಟ್ಯೂಬ್ ಚಾನಲ್ ನವರು ಕಾರ್ಯಕ್ರಮ ನಡೆಸಿಕೊಡಲು ಆಹ್ವಾನ ನೀಡಿದ್ದರಿಂದ ಅದಕ್ಕೆ ತಯಾರಿ ನಡೆಸಿಕೊಂಡು ಹೋಗಬೇಕೆನ್ನುವಷ್ಟರಲ್ಲಿಯೇ ದುರದೃಷ್ಠ ಕೊವಿಡ್-19 ನಿಂದಾಗಿ `ಲಾಕ್ ಡೌನ್ʼ ಬೀಳಬೇಕೆ? 2020 ಮಾರ್ಚ್‌ ತಿಂಗಳಿನಲ್ಲಿ ಭಾರತ ಸರ್ಕಾರ ಎಲ್ಲಾ ಸಭೆ ಸಮಾರಂಭಗಳಿಗೆ ಕಡಿವಾಣ ಹಾಕಿದ್ದರಿಂದ ಸುಬ್ಬಕ್ಕನ ಬಾಯಿಗೂ ಬೀಗ ಹಾಕಿದಂತಾಗಿತ್ತು. ಆದ್ರೆ ಅವಳಿಗೆ ಈ ಫೇಸ್ ಬುಕ್ ಲೈವ್ ಬರೋ ಐಡಿಯಾ ತಲೆಗೆ ಹೊಳೆದದ್ದೆ ತಡ, ಒಳಗೊಳಗೆ ಖುಷಿ ಪಟ್ಟಿದಳು.

ಮಾತಿನ ಮಲ್ಲಿಯಂತೆ ಅರಳು ಹುರಿದಂತೆ ಪಟಪಟ ಮಾತಾಡಲು ಸುರು ಮಾಡಿದಳಂದ್ರೆ ಅವಳ ಬಾಯಿ ಆಲಮಟ್ಟಿ ಡ್ಯಾಂನಂತೆ ತೆರೆದುಕೊಳ್ಳುವುದು ಮತ್ತೆ ಅವಳ ಮೂಗಿನ ಹೊರಳೆಗಳು ಚಿಟ್ಟೆ ರೆಕ್ಕೆಯ ತರಹ ಪುಟಿ ಪುಟಿದು ಹಾರುವುದು ಸುಂದರವಾದ ಮುಖ ಸ್ವಲ್ಪ ಕುರೂಪವಾಗಿ ನೋಡುಗರಿಗೆ ಅಸಹ್ಯವಾದರು ಒಮ್ಮೊಮ್ಮೆ ಮುದ್ದು- ಮುದ್ದಾಗಿ ಮಾತಾಡುತ್ತಿರುತ್ತಾಳೆ. ಆಗ ಅವಳ ಮಾತಿಗೆ ಮರುಳಾದ ಪಡ್ಡೆ ಹುಡುಗರು “ಹಾಯ್! ಅಕ್ಕಾ! ಸುಪರ್ ಅಕ್ಕಾ!” ಅಂತ ಕಾಮೆಂಟ್ ಹಾಕೋದು. ಮತ್ತು ಲೈಕ್ ಗಳ ಸುರಿ ಮಳೆ ಧಾರಾಕಾರವಾಗಿ ಹರಿದು ಬರುವುದು ದಿನಾ ಹೆಚ್ಚುತ್ತಲೇ ಇತ್ತು. ಆಗಾಗಿ ಆಕೆ “ನಾನೀಗ ಉತ್ತಮ ಸಾಹಿತಿಯಷ್ಟೇ ಅಲ್ಲ. ಉತ್ತಮ ಪ್ರವಚನಕಾರ್ತಿ. ಅದಕ್ಕೆ ದಿನಾ ಇಷ್ಟು ಜನಾ ನನ್ ಪ್ರವಚನದ ಲೈವ್ ಗೆ ಬರ್ತಾ ಇದ್ದಾರೆ.” ಅಂತ ಸುಬ್ಬಕ್ಕನಲ್ಲಿ ಅಹಂ ಮನೆ ಮಾಡಿತ್ತು.

ಅವಳ ಪ್ರವಚನ ಎಷ್ಟು ಪ್ರಚಾರವಾಗಿತ್ತೆಂದರೆ ಕರ್ನಾಟಕ, ಆಂಧ್ರ, ತೆಲಂಗಾಣ, ಗೋವಾ, ಬೆಂಗಳೂರು, ಮುಂಬೈ, ದೆಹಲಿ, ಚೆನೈ, ದುಬೈ, ಮಸ್ಕಟ್ ಮೊದಲಾದ ಕಡೆಗಳಲೆಲ್ಲ ಅವಳ ಫೇಸ್ ಬುಕ್ ಫ್ರೆಂಡ್ಸ್‌ಗಳಿಗೆ ಈಕೆ ತುಂಬಾ ಫೇಮಸ್ ಆದಳು.

ಸುಬ್ಬಕ್ಕ ಬರಿ ಸಾಹಿತಿಯಷ್ಟೆಯಲ್ಲ ಆಕೆ ಪಿ.ಎಚ್.ಡಿ.ಸಂಶೋಧನಾ ಅಭ್ಯರ್ಥಿಯು ಹೌದು. ವಿಶ್ವವಿದ್ಯಾಲಯವೊಂದರಲ್ಲಿ ಪಿ.ಎಚ್.ಡಿ.ನೊಂದಣಿ ಮಾಡಿ ಐದು ವರ್ಷ ಮುಗಿಲಿಕ್ ಬಂದ್ರೂನೂ ಆಕೆ ಸಂಶೋಧನಾ ಪ್ರಬಂಧ ಅರ್ಧಕ್ಕೆ ಇರುವುದನ್ನು ಕಂಡು ಬೆಸತ್ ಆಕೆ ಗೈಡು “ಏನ್ರೀ ! ನಮ್ ಸುಭದ್ರ ಬೇಗ ಪಿ.ಎಚ್.ಡಿ.ಪ್ರಬಂಧ ಬರೆದು ಸಬ್‍ಮಿಟ್ ಮಾಡ್ತಾಳೇನೋ ಅಂತ ಅಂದ್ರೆ ಲೈವ್ ನಲ್ಲಿ ಕುಳಿತು ಪ್ರವಚನ ಹೇಳಲಾಕ್ ಸುರು ಮಾಡ್ಯಾಳಲ್ಲರ್ರೀ! ಅಂತ ಬೇಸರ ವ್ಯಕ್ತಪಡಿಸಿದರಂತೆ. ಮತ್ತೆ ಅವರು ಆಕೆ ಪ್ರವಚನ ಆದ್ರೂ ಹೇಗೆ ಹೇಳ್ತಾಳೆ ನೋಡೋಣ ಅಂತ ಒಮ್ಮೆ ಅವಳ ಫೇಸ್ ಬುಕ್ ಓಪನ್ ಮಾಡಿ ಲೈವ್ ನಲ್ಲಿ ಇರೋದನ್ನು ಗಮನಿಸಿ ಒಳಬಂದರು.

ಆಗ ಆಕೆ “ಹಾಯ್ ! ಎಲ್ಲರಿಗೂ ನಮಸ್ಕಾರಗಳು” ಅಂತ ಕೈ ಮುಗಿದು ಮತ್ತೆ ಮಾತು ಮುಂದುವರೆಸಿದಳು. “ಸ್ನೇಹಿತರೆ! ಒಂದಿನ ಸೂರ್ಯ ತಡವಾಗಿ ಮುಳುಗಬಹುದು. ಆದರೆ ನಾನು ಮಾತ್ರ ಪ್ರತಿದಿನ ಟೈಂಗೆ ಸರಿಯಾಗಿ ಕರೆಕ್ಟಾಗಿ ಬಂದು ಕುಡತ್ತೀನಿ ನೋಡ್ರಿ. ಯಾಕೆಂದ್ರೆ ನನಗೆ ಸಮಯ ವ್ಯರ್ಥ ಮಾಡೋದು ಅಂದ್ರೆ ಆಗೊಲ್ಲ. ನಾ ದಿನಾ ಇಷ್ಟೋತ್ತಿಗೆ ಲೈವ್ ಬರ್ತಿನಂತ ನನ್ ಲಕ್ಷಾಂತರ ಅಭಿಮಾನಿಗಳು ಕಾಯ್ತಾ ಇರ್ತಾರೆ. ಅವರಿಗೆ ನಿರಾಸೆ ಮಾಡಬಾರದು ಅಂತಲೇ ನಾನು ನನ್ ಎಲ್ಲ ಕೆಲಸ ಮಾಡಲಿಕ್ಕೆ ಆಗದಿದ್ದರೂ ಅವು ಅಲ್ಲಲ್ಲೆ ಸಂದಿ ಗೊಂದಿಗಳಲ್ಲಿ ಒತ್ತಿಟ್ಟು ಇಲ್ಲಿ ಬಂದು ಕುಂತೀನಿ ನೋಡ್ರಿ.

ಈ ಪ್ರವಚನ ಹೇಳಾದೇನು ಸುಮ್ನೆ ಅದಾ ಏನ್ರೀ? ಎಲ್ಲಾ ತಯಾರಿ ಮಾಡ್ಕೊಂಡು ಲೈವ್ ನಲ್ಲಿ ಹೇಳಬೇಕಾದರ ಭಾಳ ಕಷ್ಟದ ಕೆಲಸ ಅದಾ ನೋಡ್ರೀ. ನಿನ್ನೆ ನಾ ಪ್ರವಚನ ಮಾಡಿದಕ್ಕೆ ಹುಬ್ಳಿಯಿಂದ ಒಬ್ಬ ಹುಡುಗ ಸಿಗರೇಟ್ ಸೇದಾದು ಬಿಟ್ಟಾನ. ಮತ್ತೊಬ್ಬ ಹುಡುಗ ಬೆಂಗಳೂರಿನಿಂದ ಕರೆ ಮಾಡಿ ಹೇಳಿದ ನಾ ಶೇರಿ ಕುಡಿಯೋದು ಬಿಟ್ಟಿನಂತ. ಇನ್ನೊಬ್ಬ ಮುಂಬೈಯಿಂದ ಕರೆ ಮಾಡಿ “ನಾ ನಿಮ್ ಮಾತ ಕೇಳಿ ತಂಬಾಕು ತಿನ್ನೋದು ಮತ್ತ `ಪಿಚಕ್’ ಅಂತ ಉಗುಳೊದು ಬಿಟ್ಟಿದಿನಿ ನೋಡ್ರೀ” ಅಂದ. ಮಗದೊಬ್ಬ ಹೈದ್ರಾಬಾದನಿಂದ “ಅಕ್ಕಾ! ನಿನ್ ಮಾತಿನಾಗ ಭಾಳ ಶಕ್ತಿ ಅದಾ” ಅಂದ. ಆದ್ರ ನಾ ಇವತ್ತು ಯಾವುದರ ಬಗ್ಗೆ ಮಾತಾಡಬೇಕು.” ಅಂತ ಯೋಚಿಸ್ತಾ ಇದ್ದೇನೆ. ನೀವೇ ಹೇಳಿ. ಅಂತ ಮುಗುಳ ನಗೆ ಬೀರಿದಳು. ಆಗ ಯಾರೋ ಒಬ್ಬ `ನಾಣಿ ’ ಅನ್ನೋ ಹೆಸರಿನವ ಕಾಮೆಂಟ್ ಹಾಕಿದ.

`ಅಕ್ಕಾ! ನಿನ್ ಮುಗುಳ ನಗು ಚಂದ,
ನಿನ್ ಮಾತು ಚಂದವೋ ಚಂದ” ಅಂತ ಕವನದ ಸಾಲಿನ ತರಹ ಕಾಮೆಂಟ ಹಾಕಿದ.

ಆಗ ಆಕೆ “ಅಗೋ! ಅಗೋ! ಅಲ್ನೋಡಿ. ನನ್ ಬಗ್ಗೆ ಅವರೆಷ್ಟು ಚನ್ನಾಗಿ ತಿಳಕ್ಕೊಂಡಿದ್ದಾರೆ.” ಅಂತ ಸ್ವಲ್ಪ ಮುಖದಲ್ಲಿ ಕಳೆ ತಂದುಕೊಂಡು ಮಂದಹಾಸ ಬೀರಿ ಮತ್ತೆ ಮಾತು ಸುರು ಮಾಡಿದಳು.

“ಖರೆ ಅದಾ! ನನ್ ಮಾತಿಗಿ ಇಷ್ಟೊಂದು ಜನ ಮನಃಪರಿವರ್ತನೆ ಮಾಡಿಕೊಂಡು ಸಾರಾಯಿ ಕುಡಿಯೋದು, ಸಿಗರೇಟು ಸೇದೊದು, ತಂಬಾಕು ತಿನ್ನೊದು ಬಿಟ್ಟು ಬಿಟ್ಟಿದ್ದಾರೆ ಅಂದಮ್ಯಾಗ, ನಾನು ಕಟ್ಟಿಕೊಂಡಿರೋ ಗಂಡನೇ ಸಾರಾಯಿ ಕುಡಿಯೋದು ಬಿಡುವಲ್ಲ ನಲ್ಲ? ಅವರನ್ನು ಹ್ಯಾಂಗ್ ಬಿಡಿಸೋದು? ಹ್ಞೂಂ! ನನ್ ಗಂಡಗೆ `ಲೈವ್’ ನಲ್ಲಿ ಬರಲು ಹೇಳಬೇಕು.” ಅಂತ ಯೋಚಿಸುತ್ತಿರುವಾಗಲೇ  “ಸುಬ್ಬಿ, ಏ ಸುಬ್ಬಿ! ನಾ ನಿನ್ ಗಂಡ್ ಬಂದಿನಂಬೋದು ಖಬರ್ ಐತ್ತಿಲ್ಲೇ! ಖಬರಗೇಡಿ. ಹೊರ್ಗ ಬಂದು ತೂರ್ಯಾಡ್ಕೊಂಡು ಬೀಳೋನಿಗೆ ಬೇಗ ಹಿಡ್ಕೊಬೇಕಂತ ತಿಳ್ಯಾಲ್ಲ ನಿಂಗೆ?” ಅಂತ ಜೋಲಿ ಹೊಡೆಯುತ್ತಾ ಒದರಾಡುತ್ತಿರುವ ಗಂಡನ ಶಬ್ದ ಕೇಳಿ ಸುಬ್ಬಕ್ಕ ಫೇಸ್ ಬುಕ್ ಲೈವ್ ನಿಂದ ಹೊರ ಓಡಿದಳು.

About The Author

ಮಚ್ಚೇಂದ್ರ ಪಿ ಅಣಕಲ್

ಮಚ್ಚೇಂದ್ರ ಪಿ ಅಣಕಲ್ ಮೂಲತಃ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದವರು. ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕಥೆಗಳಿಗೆ ಹಲವು ಪ್ರಶಸ್ತಿಗಳು ದೊರಕಿವೆ. ಬದುಕುತ್ತೇನೆ ಕತ್ತಲೆ ಮೊಟ್ಟೆಯೊಡೆದು (ಕವನಸಂಕಲನ), ಜ್ಞಾನ ಸೂರ್ಯ (ಸಂಪಾದಿತ ಕಾವ್ಯ), ಜನಪದ ವೈದ್ಯರ ಕೈಪಿಡಿ (ಸಂಪಾದನೆ), ಲಾಟರಿ (ಕಥಾಸಂಕಲನ), ಮೊದಲ ಗಿರಾಕಿ (ಕಥಾಸಂಕಲನ), ಹಗಲುಗಳ್ಳರು (ಕಥಾಸಂಕಲನ) ಇವರ ಪ್ರಕಟಿತ ಕೃತಿಗಳು.

2 Comments

  1. ಮಚ್ಚೇಂದ್ರ ಪಿ ಅಣಕಲ್

    ನನ್ನ ಲಲಿತ ಪ್ರಬಂಧ (ವಿಡಂಬನೆ)
    ಬರಹ ಪ್ರಕಟಿಸಿದ ಸಂಪಾದಕರಿಗೆ ತುಂಬು ಹೃದಯದ ಅಭಿನಂದನೆಗಳು.

    Reply
    • ರಾಜೇಂದ್ರಕುಮಾರ್ ಮುದ್ನಾಳ್

      ಅಕ್ಕನ ಪ್ರವಚನ ಪರಿಣಾಮಕಾರಿಯಾಗಿದೆ. ಪರಿತಪಿಸಿ ಕೂಡುವುದಕ್ಕಿಂತ ಎಲ್ಲರನ್ನೂ ಪರಿಪರಿಯಾಗಿ ಪ್ರೀತಿಸುವುದೇ ಲಲಿತ ಪ್ರಬಂಧಗಳ ಸಾರವಲ್ಲವೇ ಅಕ್ಕ… 👌👌👌

      Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ