ಗಾಂಧೀಜಿಯವರು ದೂರದಲ್ಲಿದ್ದುಕೊಂಡು ಎಲ್ಲರನ್ನೂ ಹುರಿದುಂಬಿಸುತ್ತಿದ್ದರು, ಅವರಲ್ಲಿ ಪ್ರೀತಿಯನ್ನು ಉಕ್ಕಿಸಿಬಿಡುತ್ತಿದ್ದರು ಎನ್ನುವುದಕ್ಕೆ ಉದಾಹರಣೆಯಾಗಿ ನನ್ನ ತಾಯಿಯ ಮೇಲೆ ಅವರು ಪ್ರಭಾವ ಬೀರಿದ್ದು ಹೀಗೆ. ಗಾಂಧೀಜಿ ಮೈಸೂರಿಗೆ ನಾನು 2 ಅಥವಾ 3 ವರ್ಷದವನಾಗಿದ್ದಾಗ ಬಂದಿದ್ದರಂತೆ. ನಾವೆಲ್ಲ ಅವರನ್ನು ನೋಡುವುದಕ್ಕೆ ಹೋಗಿದ್ದೆವಂತೆ. ಗಾಂಧೀಜಿಯವರು ಎಲ್ಲರಿಂದಲೂ ಹಣ ಸಹಾಯ ಕೋರಿದರಂತೆ. ಏನೂ ಓದಿಲ್ಲದ ಮುಗ್ಧ ಜಯಮ್ಮ ಅವರಿಗೆ ತಕ್ಷಣ ತನ್ನ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ತೆಗೆದು ಕೊಟ್ಟಳಂತೆ.
ಡಾ. ಎ.ಎನ್. ನಾಗರಾಜ್ ಅನುಭವ ಕಥನ “ಆನಂದದ ಹುಡುಕಾಟದಲ್ಲಿ” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ

ಚಿಕ್ಕಂದಿನ ಆತ್ಮೀಯ ಸ್ನೇಹಿತರು

ಶಂಕರ ಮೂರ್ತಿ

ಪ್ರೈಮರಿ ಸ್ಕೂಲು, ಮಿಡ್ಡ್ಲ್ ಸ್ಕೂಲು ಮತ್ತು ಹೈಸ್ಕೂಲುಗಳಲ್ಲಿ ನನ್ನ ಜತೆಯಲ್ಲಿ ಓದಿದ ಸ್ನೇಹಿತರುಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ನಂತರ ಬೇರೆಬೇರೆ ಕಾಲೇಜುಗಳಲ್ಲಿ ಓದಿ, ಬೇರೆಬೇರೆ ಊರುಗಳಲ್ಲಿ ನೆಲೆಸಿದ್ದರಿಂದ, ನಾನು ದೊಡ್ಡವನಾದ ಮೇಲೂ ಸಂಪರ್ಕದಲ್ಲಿದ್ದವರು ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ. ಅವರಲ್ಲಿ ಒಬ್ಬ ಶಂಕರಮೂರ್ತಿ, ನಮ್ಮ ಮನೆಯ ಹಿಂದೆ ಇದ್ದ ಅವರ ಚಿಕ್ಕಪ್ಪ-ಚಿಕ್ಕಮ್ಮನ ಮನೆಯಲ್ಲೇ ಇದ್ದುಕೊಂಡು ಪ್ರೈಮರಿ ಸ್ಕೂಲಿನಿಂದ ಹೈಸ್ಕೂಲಿನ ಕೊನೆಯವರೆಗೂ (1945 ರವರೆಗೆ) ನನ್ನ ಜತೆ ಸಹಪಾಠಿಯಾಗಿದ್ದ. ನಂತರ 22 ವರ್ಷಗಳು ಅವನ ಸಂಪರ್ಕ ತಪ್ಪಿಹೋಗಿತ್ತು. ನಾನು ಫಿಲಿಪ್ಪೈನ್ಸ್‍ನಲ್ಲಿ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯಲ್ಲಿ ಕೆಲಸ ಮಾಡಿ, 1967ರಲ್ಲಿ ಆ ಕೆಲಸ ಬಿಟ್ಟು ಭಾರತಕ್ಕೆ ಚೆನ್ನೈ ಮೂಲಕ ಸಂಸಾರ ಸಮೇತ ವಾಪಸ್ಸು ಬಂದೆ. ಆಕಸ್ಮಿಕವಾಗಿ ಚೆನ್ನೈನಲ್ಲಿ ಶಂಕರಮೂರ್ತಿ ಸಿಕ್ಕಿದ. ಆಮೇಲೆ ನಮ್ಮ ಚಿಕ್ಕಂದಿನ ಆತ್ಮೀಯ ಗೆಳೆತನವನ್ನು ಮುಂದುವರೆಸುವುದು ಸಾಧ್ಯವಾಯಿತು. ಅವನು ಒಬ್ಬ ಉತ್ತಮ ಎಲೆಕ್ಟ್ರಿಕಲ್ ಕಂಟ್ರಾಕ್ಟರಾಗಿ ಚೆನ್ನೈನಲ್ಲಿ ಒಳ್ಳೆಯ ಹೆಸರು ಸಂಪಾದಿಸಿಕೊಂಡಿದ್ದ. ಆರ್ಥಿಕ ವಾಗಿ ಅನುಕೂಲವಾಗಿದ್ದ. ಅವನ ಹೆಂಡತಿ-ಮಕ್ಕಳನ್ನು ಭೇಟಿ ಮಾಡಿ, ನಾನು ನನ್ನ ಹೆಂಡತಿ ಮತ್ತು ಮಕ್ಕಳು ಹಲವಾರು ಬಾರಿ ಚೆನ್ನೈಗೆ ಹೋದಾಗ ಅವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದೆವು. 7-8 ವರ್ಷಗಳ ಹಿಂದೆ ಅವನು ತೀರಿಕೊಳ್ಳುವವರೆಗೂ ಆಗಾಗ್ಗೆ ಭೇಟಿ ಮಾಡುತ್ತಿದ್ದೆವು. ತೀರ್ಥಹಳ್ಳಿಯ ಹತ್ತಿರ ಹುಂಚದಕಟ್ಟೆಯಲ್ಲಿರುವ ಅವನ ತಂದೆ ತಾಯಿಯರ ಮನೆಗೆ ಆಗಾಗ್ಗೆ ಅವನು ಬರುತ್ತಿದ್ದ. ಹಾಗೆ ಬಂದಾಗ, ಎರಡು ಬಾರಿ ಹೆಂಡತಿ ಸಮೇತ ನಮ್ಮ ಭೀಮನಕಟ್ಟೆಯ ಮನೆಗೂ ಬಂದಿದ್ದ.

ವೆಂಕಟೇಶರಾವ್

ಶಿವಮೊಗ್ಗದಲ್ಲಿ ನನ್ನ ಜತೆ 1939-1942 ರಲ್ಲಿ ಓದುತ್ತಿದ್ದ ಮತ್ತು ಆಟವಾಡುತ್ತಿದ್ದ, ಯಾವಾಗಲೂ ಹಸನ್ಮುಖಿಯಾಗಿರುತ್ತಿದ್ದ ಆತ್ಮೀಯ ಸ್ನೇಹಿತ ವೆಂಟೇಶರಾವ್ 1942 ರಿಂದ 1969 ರತನಕ ಬೇರೆಬೇರೆ ಊರುಗಳಲ್ಲಿ ಓದಿ ನಂತರ ಕೆಲಸ ಮಾಡುತ್ತಿದ್ದುದರಿಂದ ನನ್ನ ಜೀವನದಿಂದ ಮಾಯವಾಗಿದ್ದ. ನಾನು ಹೊರದೇಶಗಳಲ್ಲಿ 11 ವರ್ಷಗಳಿದ್ದು, ಅಲ್ಲಿಂದ ವಾಪಸ್ಸು ಬಂದ ಮೇಲೆ ಮೈಸೂರಿನ ಹತ್ತಿರದ ಕಳಲವಾಡಿಯಲ್ಲಿ 1969 ರಿಂದ 1979 ರವರೆಗೆ ನೆಲೆಸಿದ್ದಾಗ ಅವನೂ ಮೈಸೂರಿನಲ್ಲಿ ಎನ್.ಐ.ಇ. ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪ್ರೊಫೆಸರ್ ಆಗಿದ್ದು ನಂತರ ಪ್ರಿನ್ಸಿಪಾಲನಾಗಿದ್ದ. ಆದ್ದರಿಂದ ನಮ್ಮ ಸ್ನೇಹವನ್ನು ಮುಂದುವರೆಸುವುದು ಸಾಧ್ಯವಾಯಿತು. ಮೈಸೂರಿನ ಹತ್ತಿರ ಕಳಲವಾಡಿ ಎಂಬ ಹಳ್ಳಿಯಲ್ಲಿ ನಾನು ಜಮೀನು ಕೊಂಡುಕೊಂಡು ಅದರಲ್ಲಿ ನನ್ನ ಮನೆ ಕಟ್ಟುವುದಕ್ಕೆ, ತನ್ನ ಮನೆಯನ್ನು ಕಟ್ಟುವಾಗ ಕೊಟ್ಟಷ್ಟೇ ಗಮನಕೊಟ್ಟು, ಪ್ರೀತಿ-ವಿಶ್ವಾಸಗಳಿಂದ ಮಾಡಿದ ಸಹಾಯವನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇನೆ. ಅವನ ಹೆಂಡತಿ-ಮಕ್ಕಳೂ ನನ್ನ ಹೆಂಡತಿ-ಮಕ್ಕಳಿಗೆ ಆತ್ಮೀಯ ಸ್ನೇಹಿತರಾಗಿದ್ದರು. ನಾವು ತೀರ್ಥಹಳ್ಳಿಗೆ 1980ರಲ್ಲಿ ಹೋದ ಮೇಲೂ ನಾನು ಮೈಸೂರಿಗೆ ಹೋದಾಗ ವೆಂಕಟೇಶ ನನ್ನು ನೋಡುವುದು ಒಂದು ಮುಖ್ಯ ಕೆಲಸವಾಗಿತ್ತು. ನಂತರ ಅವನ ಅರವತ್ತರ ದಶಕದ ವಯಸ್ಸಿನಲ್ಲೇ ಹೃದಯಾಘಾತದಿಂದ ತೀರಿಕೊಂಡ ವರ್ತಮಾನ ಬಂತು. ಅವನ ಹಸನ್ಮುಖಿಯಾದ ಮೃದುವಾದ ವ್ಯಕ್ತಿತ್ವ, ನನ್ನ ಅವಶ್ಯಕತೆಗಳಿಗೆ ಸ್ಪಂದಿಸಿ ಪ್ರೀತಿಯಿಂದ ಮಾಡುತ್ತಿದ್ದ ಸಹಾಯ ಯಾವಾಗಲೂ ನನಗೆ ಸವಿಯಾದ ನೆನಪುಗಳು. ಒಮ್ಮೆ ಮೈಸೂರಿನಲ್ಲಿ ನನ್ನ ಪರ್ಸನ್ನು ಯಾರೋ ಪಿಕ್‍ಪಾಕೆಟ್ ಮಾಡಿ ಕದ್ದುಕೊಂಡಿದ್ದರು. ಅದರಲ್ಲಿ 700 ರುಪಾಯಿಗಳಿದ್ದವು. ಆ ವಿಷಯವನ್ನು ನ್ಯಾನ್ಸಿಗೆ ನಗುನಗುತ್ತ ಹೇಳಿದೆ. ನ್ಯಾನ್ಸಿಗೆ ಅಷ್ಟೊಂದು ದುಡ್ಡು ಕಳೆದುಕೊಂಡಿದ್ದ ವಿಷಯ ಕೇಳಿ ಅಳುವೇ ಬಂದುಬಿಟ್ಟಿತ್ತು. ಏನು ಮಾಡಿದರೂ ಅವಳ ದುಃಖ ಕಡಿಮೆಯಾಗಲಿಲ್ಲ. ಆಗ ನಾನು ‘ಓ, ನಾನು ಮರೆತೇ ಬಿಟ್ಟಿದ್ದೆ, ಬಸ್ನಲ್ಲಿ ಓಡಾಡುವುದಕ್ಕೆ ಮುಂಚೆ ನನ್ನ ಪರ್ಸನ್ನು ವೆಂಕಟೇಶನ ಕೈಲಿ ಕೊಟ್ಟು ಕೆಲವೇ ರುಪಾಯಿಗಳನ್ನು ಜೇಬಿನಲ್ಲಿಟ್ಟುಕೊಂಡಿದ್ದನ್ನು ಮರೆತೇಬಿಟ್ಟಿದ್ದೆ’ ಎಂದು ನಗುನಗುತ್ತಾ ಸುಳ್ಳು ಹೇಳಿದೆ. ಅದನ್ನು ಕೇಳಿ ‘ಅದು ನಿಜವಾ, ನಿಜವಾಗಿ ಅವನಿಗೆ ಕೊಟ್ಟಿದ್ದೀಯಾ’ ಎಂದು ನ್ಯಾನ್ಸಿ ನನ್ನ ಸುಳ್ಳನ್ನು ನಂಬಿ ಸಮಾಧಾನ ಮಾಡಿಕೊಂಡಳು. ನಾನು ವೆಂಕಟೇಶನಿಗೆ ಕಾಗದ ಬರೆದು ನ್ಯಾನ್ಸಿ ಕೇಳಿದರೆ ನನ್ನಂತೆ ಅವನೂ ಸುಳ್ಳು ಹೇಳಬೇಕೆಂದು ವಿನಂತಿಸಿಕೊಂಡೆ. ಅದೃಷ್ಟವಶಾತ್ ಆಗ ನಮ್ಮ ಮನೆಯಲ್ಲಿ ಟೆಲಿಫೋನಿರಲಿಲ್ಲ.

ಸ್ವಾತಂತ್ರ್ಯ ಹೋರಾಟಗಾರನಾಗಿ

1939 ರಲ್ಲಿ ನಾನು ಮಿಡ್ಲ್‍ಸ್ಕೂಲಿನಲ್ಲಿ ಓದುತ್ತಿದ್ದಾಗ ಅಣ್ಣನಿಗೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ವರ್ಗವಾಯಿತು. ಅಲ್ಲಿ ನಾನು ಸರ್ಕಾರಿ ಮೈನ್ ಮಿಡ್ಲ್‍ಸ್ಕೂಲಿನಲ್ಲಿ ಎರಡು ವರ್ಷ ಓದಿ, 1942 ರಲ್ಲಿ ಸರ್ಕಾರಿ ಹೈಸ್ಕೂಲಿನ ಮೊದಲನೆಯ ತರಗತಿಗೆ ಜೂನ್ ತಿಂಗಳಲ್ಲಿ ಸೇರಿಕೊಂಡೆ. ನಾಆಗಸ್ಟ್ ತಿಂಗಳಲ್ಲಿ ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳುವಳಿಗೆ ಕರೆಕೊಟ್ಟರು. ಭಾರತದಲ್ಲಿ ಎಲ್ಲೆಲ್ಲೂ ವಿದ್ಯಾರ್ಥಿಗಳೂ ಸೇರಿ, ಎಲ್ಲ ವರ್ಗದ ಜನರಲ್ಲೂ ವಿದ್ಯುತ್ ಸಂಚಾರವಾದ ರೀತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಚಳುವಳಿಯಲ್ಲಿ ಭಾಗವಹಿಸುವುದಕ್ಕೆ ಸ್ಫೂರ್ತಿ ಬಂತು. ನನ್ನಂತಹ ಚಿಕ್ಕವಯಸ್ಸಿನ ಹುಡುಗರ ಮೇಲೂ ಕೂಡ ಗಾಂಧೀಜಿಯವರ ಪ್ರಭಾವ ಜೋರಾಗಿದ್ದು ನಾವೆಲ್ಲ ಚಳುವಳಿಯಲ್ಲಿ ಸ್ಫೂರ್ತಿಯಿಂದ ಭಾಗವಹಿಸಿದೆವು. ಸ್ಕೂಲಿಗೆ ಸ್ಟ್ರೈಕ್‌ ಮಾಡಿ, ತ್ರಿವರ್ಣದ ಕಾಂಗ್ರೆಸ್ ಬಾವುಟ ಹಿಡಿದುಕೊಂಡು, ದೇಶಭಕ್ತಿ ಗೀತೆಗಳನ್ನು ಹಾಡುತ್ತ ಶಿವಮೊಗ್ಗದ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಿದ್ದೆವು. ನಾನು ಇತರರಿಗಿಂತ ಸಣ್ಣಕ್ಕಿದ್ದುದರಿಂದ, ನನ್ನ ಕೈಯಲ್ಲಿ ಬಾವುಟ ಕೊಟ್ಟು ಮೆರವಣಿಗೆಯ ಮುಂಭಾಗದಲ್ಲಿ ನಿಲ್ಲಿಸುತ್ತಿದ್ದರು. ಸರಕಾರಕ್ಕೆ ಈ ವಿಷಯ ಗೊತ್ತಾದ ಮೇಲೆ ನನ್ನ ತಂದೆಯವರಿಗೆ ನನ್ನನ್ನು ಚಳುವಳಿಯಲ್ಲಿ ಭಾಗವಹಿಸ ದಂತೆ ತಡೆಯಬೇಕೆಂಬ ಹುಕುಂ ಬಂತು. ಚಳುವಳಿಯಲ್ಲಿ ನಾನು ಭಾಗವಹಿಸಿದರೆ, ಅಣ್ಣ ತನ್ನ ಸರ್ಕಾರಿ ಕೆಲಸಕ್ಕೇ ಕುತ್ತು ಬರುವ ಸಾಧ್ಯತೆ ಇದ್ದುದನ್ನು ನನಗೆ ವಿವರಿಸಿ ಹೇಳಿ, ತಾವೂ ಸ್ವಾತಂತ್ರ್ಯ ಚಳುವಳಿಯ ಬೆಂಬಲಿಗರೆಂದೂ, ಆದರೆ ತಮ್ಮ ಸರ್ಕಾರಿ ನೌಕರಿಯಿಂದ ಬರುವ ಸಂಬಳದ ಅವಶ್ಯಕತೆ ನಮ್ಮೆಲ್ಲರ ಬದುಕಿಗೂ ಅತ್ಯವಶ್ಯಕವಾದುದ ರಿಂದ ನಾನು ಚಳುವಳಿಯಲ್ಲಿ ನೇರವಾಗಿ ಭಾಗವಹಿಸಬಾರದೆಂದು ತಿಳುವಳಿಕೆ ಕೊಟ್ಟರು. ಆಮೇಲೆ ನಾನು ಮೆರವಣಿಗೆಗಳಲ್ಲಿ ನೇರವಾದ ಪಾತ್ರ ವಹಿಸುವುದನ್ನು ನಿಲ್ಲಿಸಿದೆ. ಆದರೆ ಕ್ಲಾಸಿಗೆ ಹೋಗುತ್ತಿರುವ ಹುಡುಗರನ್ನು ತಡೆಯುವುದಕ್ಕೆ ಮಾಡುತ್ತಿದ್ದ ಪಿಕೆಟಿಂಗ್‍ನಲ್ಲಿ ಭಾಗವಹಿಸುವ ಮೂಲಕ ಚಳುವಳಿಯಲ್ಲಿ ಭಾಗವಹಿಸುವುದನ್ನು ಮುಂದುವರೆಸಿದೆ. ಒಂದು ದಿವಸ ನಾನು ಸ್ಕೂಲಿಗೆ ಹೋಗಿ ಹೆಡ್ಮೇಷ್ಟ್ರರನ್ನು “ಇವತ್ತು ಸ್ಕೂಲಿಗೆ ರಜೆ ಇದೆಯೇ?” ಎಂದು ಕೇಳಿದೆ. ಅದಕ್ಕೆ ಅವರು “ನೀವು ಸ್ಟ್ರೈಕ್ ಮಾಡೋ ಹುಡುಗರು. ನಿಮಗೆ ರಜವಾದರೇನು ಬಿಟ್ಟರೇನು” ಎಂದು ನನ್ನನ್ನು ಕೇಳಿದ್ದಕ್ಕೆ, ನಾನು “ನಾಳೆ ನಾವು ಪಿಕೆಟ್ ಮಾಡೋಕೆ ಬರಬೇಕೆ ಬೇಡವೇ ಎನ್ನುವ ಕಾರಣಕ್ಕೆ ಕೇಳಿದೆ” ಎಂದು ಹೇಳಿದೆ. ಅವರಿಗೆ ತುಂಬಾ ಕೋಪ ಬಂದು, ನನ್ನ ತಂದೆಯವರಿಗೆ ದೂರುಕೊಟ್ಟು ನನ್ನ ವರ್ತನೆಯ ವಿವರಗಳನ್ನು ಕೊಟ್ಟರಂತೆ. ತಂದೆಯವರಿಗೆ ಅದನ್ನು ಕೇಳಿ ನಗು ಬಂದು, ಅದನ್ನು ಕಷ್ಟಪಟ್ಟು ತಡೆದುಕೊಂಡರಂತೆ. ನಂತರ ಸರ್ಕಾರಿ ನೌಕರರ ಮಕ್ಕಳಾದ ನಾವೆಲ್ಲ ಕ್ಲಾಸಿಗೆ ಹೋಗಿ ಅಧ್ಯಾಪಕರ ಕಡೆಗೆ ಬೆನ್ನುಮಾಡಿ ಕುಳಿತೋ ಅಥವಾ ಬಾಯಿ ಮುಚ್ಚಿಕೊಂಡು ಶಬ್ದ ಮಾಡುತ್ತಲೋ ಅಥವಾ ಬೇರೆಬೇರೆ ರೀತಿಯಲ್ಲಿ ಗಲಾಟೆ ಮಾಡಿಯೋ ನಮ್ಮ ಪ್ರತಿಭಟನೆಯನ್ನು ತೋರಿಸುತ್ತಿದ್ದೆವು. ಒಟ್ಟಿನಲ್ಲಿ ನಮ್ಮ ಮನಸ್ಸಿನಲ್ಲಿ ಮೂಡಿದ್ದ “ನಾವೆಲ್ಲ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀಜಿಯ ಅನುಯಾಯಿಗಳು” ಎನ್ನುವ ಭಾವನೆಯನ್ನು ನೆನೆಸಿಕೊಂಡರೆ ಈಗಲೂ ಸಂತೋಷ ವಾಗುತ್ತದೆ.

ಮಹಾಜನ ಹೈಸ್ಕೂಲಿನಲ್ಲಿ

ಮುಂದಿನ ವರ್ಷ (1943 ರಲ್ಲಿ) ಅಣ್ಣನಿಗೆ ಮೈಸೂರಿಗೆ ಆಕಾಶವಾಣಿಯ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ವರ್ಗವಾಗಿದ್ದರಿಂದ ನನ್ನ ಹೈಸ್ಕೂಲು ವಿದ್ಯಾಭ್ಯಾಸದ ಕೊನೆಯ ಎರಡು ವರ್ಷ ಮೈಸೂರಿನ ಒಂಟಿಕೊಪ್ಪಲಿನಲ್ಲಿ ನಮ್ಮ ಮನೆಯ ಹತ್ತಿರವೇ ಇದ್ದ ಮಹಾಜನ ಹೈಸ್ಕೂಲಿನಲ್ಲಿ ಓದಿದ್ದೆ. ಆ ಸ್ಕೂಲಿನಲ್ಲಿ ಕೆಲಸ ಮಾಡುತ್ತಿದ್ದ ಹಲವಾರು ಅಧ್ಯಾಪಕರು ಖಾದೀಧಾರಿಗಳು ಮತ್ತು ಸ್ವಾತಂತ್ರ್ಯ ಹೋರಾಟದ ಪರವಾಗಿದ್ದವರು. ಯಾರಾದರೂ ಒಬ್ಬ ಅಧ್ಯಾಪಕರು ರಜ ತೆಗೆದುಕೊಂಡಿದ್ದರೆ, ಅವರ ಬದಲಿಗೆ ಮತ್ತೊಬ್ಬರು ಬಂದಾಗ, ಅವರಲ್ಲಿ ಒಬ್ಬ ಅಧ್ಯಾಪಕರು ಷೇಕ್ಸ್‍ಪಿಯರನ ಯಾವುದಾದರೂ ನಾಟಕವನ್ನು ಓದಿ, ನಮಗೆ ಅದರ ಅರ್ಥವನ್ನು ವಿವರಿಸಿ ಹೇಳುತ್ತಿದ್ದರು. ಮತ್ತೆ ಕೆಲವರು ಗಾಂಧೀಜಿ ಯವರ ಬಗ್ಗೆಯೋ, ಸ್ವಾತಂತ್ರ್ಯ ಚಳುವಳಿಯ ಬಗ್ಗೆಯೋ, ರಾಮಕೃಷ್ಣ ಪರಮ ಹಂಸರ ಅಥವಾ ವಿವೇಕಾನಂದರ ಬಗ್ಗೆಯೋ ಪಾಠ ಮಾಡುತ್ತಿದ್ದರು. ಒಟ್ಟಿನಲ್ಲಿ ನಮ್ಮ ಶಾಲೆಯು ಸ್ವಾತಂತ್ರ್ಯ ಹೋರಾಟದ ಮತ್ತು ಅಧ್ಯಾತ್ಮದ ಪರವಾದ ವಾತಾವರಣವನ್ನು ಸೃಷ್ಟಿಸಿತ್ತು.

ತಿಲಕ್ ಸಂಘದಲ್ಲಿ

ನಾವು ವಾಸಮಾಡುತ್ತಿದ್ದ ಒಂಟಿಕೊಪ್ಪಲ್ ಬಡಾವಣೆಯಲ್ಲಿ ನಾವು ಕೆಲವು ಹುಡುಗರು ಸೇರಿ ತಿಲಕ್ ಸಂಘ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಪ್ರತಿ ಭಾನುವಾರ ಅಥವಾ ರಜಾದಿನಗಳಲ್ಲಿ ದೇಶಭಕ್ತಿಗೀತೆಗಳನ್ನು ಹಾಡಿಕೊಂಡು ಪ್ರಭಾತ್ ಫೇರಿ (ಬೆಳಿಗ್ಗೆಯ ಮೆರವಣಿಗೆ) ಯನ್ನು ನಡೆಸುತ್ತಿದ್ದೆವು. ಈ ಸಂಸ್ಥೆಯಲ್ಲಿ ಕಾಂಗ್ರೆಸ್ ಮುಖಂಡರಾಗಿದ್ದ ಎಚ್ ಸಿ ದಾಸಪ್ಪ ಮತ್ತು ಶ್ರೀಮತಿ ಯಶೋಧರಮ್ಮ ದಾಸಪ್ಪ ಅವರ ಮಗ ತುಳಸೀದಾಸ್ ಕೂಡ ನಮ್ಮ ಜೊತೆಗಾರನಾಗಿದ್ದ. ಅವನೂ ನಾನು ಮೆರವಣಿಗೆಯಲ್ಲಿ ಹಾಡುಗಾರರಾಗಿ ದ್ದೆವು. ಯಶೋಧರಮ್ಮ ಮತ್ತು ದಾಸಪ್ಪ ಗಾಂಧೀಜಿಯ ಆದರ್ಶಗಳನ್ನು ಪಾಲಿಸುತ್ತಿದ್ದ ಅವರ ಶಿಷ್ಯರಾಗಿದ್ದರು.

ತುಳಸಿದಾಸನನ್ನು ಕರೆಯುವುದಕ್ಕೆ ಆಗಾಗ್ಗೆ ಅವರ ಮನೆಗೆ ಹೋಗುತ್ತಿದ್ದಾಗ ಯಶೋಧರಮ್ಮನವರು ನನ್ನನ್ನು ಅವರ ಮಗನ ಹಾಗೇ ನೋಡಿ ಕೊಳ್ಳುತ್ತಿದ್ದರು. ಅವರು ಮಂತ್ರಿಯಾಗಿದ್ದಾಗ ಕರ್ನಾಟಕ ಸರ್ಕಾರ ಪಾನನಿಷೇಧದ ವಿಷಯದಲ್ಲಿ ಗಾಂಧೀಜಿಯ ಆದರ್ಶಗಳನ್ನು ಪಾಲಿಸಲಿಲ್ಲ ಎಂಬ ಕಾರಣಕ್ಕಾಗಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಗಾಂಧೀಜಿಯ ನಿಜವಾದ ಅನುಯಾಯಿ ಎಂದು ನಮ್ಮೆಲ್ಲರಿಗೂ ಅವರ ಮೇಲಿದ್ದ ಗೌರವ, ಪ್ರೀತಿ ವಿಶ್ವಾಸಗಳು ಇಮ್ಮಡಿಯಾದವು. ಹಲವಾರು ವರ್ಷಗಳ ನಂತರ ನಾನು ಅಮೆರಿಕಾಕ್ಕೆ ಹೋಗಿ ವಾಪಸ್ಸು ಬಂದು ಮೈಸೂರಿನಲ್ಲಿ ನೆಲಸಿದಾಗ ತುಳಸಿ ‘ತುಳಸಿ ದಾಸಪ್ಪ’ ಎಂಬ ಹೆಸರಿನಲ್ಲಿ ಪಾರ್ಲಿಮೆಂಟಿನ ಮೆಂಬರ್(ಎಮ್.ಪಿ) ಆಗಿ ಚುನಾಯಿತನಾಗಿದ್ದ. ಪಾರ್ಲಿಮೆಂಟಿನ ಕೆಲಸಕ್ಕೆ ದೆಹಲಿಗೆ ಹೋಗುತ್ತಿದ್ದರೂ, ವರ್ಷದಲ್ಲಿ ಬಹುಕಾಲ ಮೈಸೂರಿನಲ್ಲೇ ಇರುತ್ತಿದ್ದುದರಿಂದ ಅವನೂ ನಾನು ಆಗಾಗ್ಗೆ ಭೇಟಿ ಮಾಡಿ ಮೊದಲಿನಂತೆಯೇ ಆಪ್ತಮಿತ್ರರಾಗಿದ್ದೆವು. 1970ರಲ್ಲಿ ನಾನು ಮೈಸೂರಿನ ಹತ್ತಿರ ನನ್ನ ತೋಟದಲ್ಲಿ ನೆಲೆಸಿದ ಮೇಲೆ, ಅವನು ಹಳ್ಳಿಹಳ್ಳಿಗಳಿಗೆ ಹೋಗಿ ತನ್ನನ್ನು ಚುನಾಯಿಸಿದ ಜನಗಳನ್ನು ಭೇಟಿ ಮಾಡಿ ಅವರ ಕುಂದು ಕೊರತೆಗಳು ಮತ್ತು ಅವಶ್ಯಕತೆಗಳ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾಗ ನಾನೂ ಅವನ ಜೊತೆ ಹೋಗುತ್ತಿದ್ದೆ. ದಾರಿಯಲ್ಲಿ ಅವನು ಕಲಿತಿದ್ದ ಹಿಂದೂಸ್ತಾನಿ ಶೈಲಿಯ ಹಾಡುಗಳನ್ನು ಹೇಳುತ್ತಿದ್ದ. ನನಗೂ ಹೇಳಿಕೊಡುತ್ತಿದ್ದ. ದುರ್ಗಾ ರಾಗದ ‘ಸಖಿ ಮೋರಿ ರುಮ ಝೂಮ’ ನಾನು ಅವನಿಂದ ಕಲಿತ ಒಂದು ಹಾಡು. ಈಗಲೂ ದುರ್ಗಾ ರಾಗ ನನಗೆ ತುಂಬಾ ಪ್ರಿಯವಾದ ರಾಗ.

ನಾನು ಮೈಸೂರು ಬಿಟ್ಟು ತೀರ್ಥಹಳ್ಳಿಗೆ ಹೋದಮೇಲೆ, ಅವನು ಮತ್ತೊಮ್ಮೆ ಎಂಪಿ ಆಗದೆ ಬೆಂಗಳೂರಿನಲ್ಲಿ ಮನೆ ಕಟ್ಟಿಕೊಂಡು ಅಲ್ಲಿಯೇ ನೆಲೆಸಿದ. ನಾನು ನನ್ನ ತೋಟ ಮಾರಿ ತೀರ್ಥಹಳ್ಳಿಯ ಹತ್ತಿರ ಭೀಮನಕಟ್ಟೆಯಲ್ಲಿ ನೆಲೆಸಿದ ಮೇಲೆ ನಾವಿಬ್ಬರೂ ಭೇಟಿಯಾಗಲೇ ಇಲ್ಲ. ಅವನು ಬೆಂಗಳೂರಿಗೆ ಹೋದ ಕೆಲವೇ ವರ್ಷಗಳಲ್ಲಿ ಹೃದಯಾ ಘಾತದಿಂದ ತೀರಿಕೊಂಡನೆಂಬ ವರ್ತಮಾನ ಕೇಳಿ ಮನಸ್ಸಿಗೆ ಬೇಸರವಾಯಿತು.

ಮತ್ತೊಬ್ಬ ಆಗಿನ ಕಾಲದ ಆಪ್ತಮಿತ್ರ ತವನಪ್ಪ ಭೋಪಾಲ್ ತಿಲಕ್ ಸಂಘದ ಕಾರ್ಯದರ್ಶಿಯಾಗಿ ಅದರ ಚಟುವಟಿಕೆಗಳಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದ. ಅವರ ತಂದೆ ಒಬ್ಬ ಅನುಕೂಲಸ್ಥ ವ್ಯಾಪಾರಿಯಾಗಿ ಮಗನ ಚಟುವಟಿಕೆಗಳಿಗೆ ಧಾರಾಳವಾಗಿ ಹಣ ಒದಗಿಸುತ್ತಿದ್ದರು. ಅದನ್ನು ಬಳಸಿಕೊಂಡು ಸಂಘದ ಚಟುವಟಿಕೆಗಳಿಗೆ ಅವನೇ ಬಹುಮಟ್ಟಿಗೆ ಹಣ ಒದಗಿಸುತ್ತಿದ್ದ. ಸಿಗರೇಟು ಸೇದುವುದು ಅವನಿಗೊಂದು ಚಟವಾಗಿತ್ತು. ನಾನು ಹೈಸ್ಕೂಲು ಮುಗಿಸುವುದಕ್ಕೆ ಮುಂಚೆಯೇ, ಅವನು ಮತ್ತು ಮತ್ತೊಬ್ಬ ಸ್ನೇಹಿತ, ಯಾರು ಹೆಚ್ಚು ಸಿಗರೇಟ್ಗಳನ್ನು ಅತಿಕಡಿಮೆ ಸಮಯದಲ್ಲಿ ಸೇದುತ್ತಾರೆ ಎನ್ನುವ ಒಂದು ‘ಆಟ’ ಆಡಿ, ಅದರಲ್ಲಿ ಭೋಪಾಲ್ ಗೆದ್ದನಂತೆ. ಆದರೆ ಆ ಆಟದಿಂದ ಅವನಿಗೆ ಉಸಿರಾಟದ ತೊಂದರೆಯಾಗಿ ಕೆಲವೇ ನಿಮಿಷಗಳಲ್ಲಿ ಸತ್ತುಹೋದ. ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಮತ್ತು ನನ್ನ ಒಬ್ಬ ಆತ್ಮೀಯ ಸ್ನೇಹಿತನ ಜೀವನವು ಒಂದು ಕ್ಷುಲ್ಲಕ ಆಟದಲ್ಲಿ ಕೊನೆಗೊಂಡಿತು.

ಗಾಂಧೀಜಿಯ ಆಶ್ರಮದ ಪ್ರಾರ್ಥನೆಯಲ್ಲಿ

ನನ್ನ ಹೈಸ್ಕೂಲು ಮತ್ತು ಕಾಲೇಜಿನ ಮೊದಲ ಎರಡು ವರ್ಷಗಳಲ್ಲಿ, ನಮ್ಮ ಮನೆಯ ಹತ್ತಿರದಲ್ಲಿ ಗಾಂಧೀಜಿಯ ಮೊಮ್ಮಗ ಕಾಂತಿಲಾಲ್ ಗಾಂಧಿ ಮತ್ತು ಅವರ ಹೆಂಡತಿ ಸರಸ್ವತಿ ವಾಸವಾಗಿದ್ದರು. ಕಾಂತಿಲಾಲ್ ಅವರನ್ನು ನಾವೆಲ್ಲ ಕಾಂತಿಭಾಯ್ ಎಂದು ಕರೆಯುತ್ತಿದ್ದೆವು. ಅವರು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ದ್ದರು. ಅವರ ಮನೆಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಾಯಂಕಾಲ, ಗಾಂಧೀಜಿಯ ಆಶ್ರಮದ ಪ್ರಾರ್ಥನೆಯನ್ನು ಮಾಡುತ್ತಿದ್ದರು. ಆ ಪ್ರಾರ್ಥನೆಗಳಲ್ಲಿ ನಾನು ಮತ್ತು 10-15 ಜನ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದೆವು. “ಯಂ ಬ್ರಹ್ಮಾ ವರುಣೇಂದ್ರ ರುದ್ರ ಮರುತಹ ಸ್ತುನ್ವಂತಿ ದಿವ್ಯೈ ಸ್ತವೈಹಿ” ಎಂಬ ಒಂದು ಶ್ಲೋಕ, “ಯಂ ಶೈವಾಸ್ಸಮುಪಾಸತೇ ಶಿವೈತಿ ಬ್ರಹ್ಮೇತಿ ವೇದಾಂತಿನಹ, ಬೌದ್ಧಾ ಬುದ್ಧಯಿತಿ ಪ್ರಮಾಣ ಪಟವಹ ಕರ್ತೇತಿ ನೈಯಾಯಿಕಾಹ” ಎಂಬ ಮತ್ತೊಂದು ಶ್ಲೋಕ ಇತ್ಯಾದಿ ದೇವರನ್ನು ಬೇರೆ ಗುಂಪುಗಳ ಜನಗಳು ಹೇಗೆ ಬೇರೆಬೇರೆ ಹೆಸರುಗಳಿಂದ ಆರಾಧಿಸುತ್ತಾರೆ ಎಂದು ಅರ್ಥ ಕೊಡುವ ಶ್ಲೋಕಗಳನ್ನು ಮತ್ತು ಕಬೀರ್, ಮೀರಾ ಇತ್ಯಾದಿ ಭಕ್ತರ ಗೀತೆಗಳನ್ನು ನಮ್ಮ ಪ್ರಾರ್ಥನೆ ಯಲ್ಲಿ ಹಾಡುತ್ತಿದ್ದೆವು. ಎಲ್ಲ ಮತಗಳ ಬಗ್ಗೆ ಬೇರೆಬೇರೆ ನಂಬಿಕೆಗಳ ಬಗ್ಗೆ ಗಾಂಧೀಜಿ ಯವರಿಗಿದ್ದ ಗೌರವಪೂರ್ವಕ ಭಾವನೆಗಳನ್ನು ನಾವೂ ಬೆಳೆಸಿಕೊಂಡೆವು. ಸ್ಥಿತಪ್ರಜ್ಞನ ಲಕ್ಷಣಗಳ ಬಗ್ಗೆ ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಹಾಡುತ್ತಿದ್ದೆವು. “ರಘುಪತಿ ರಾಘವ ರಾಜಾ ರಾಮ್, ಪತಿತ ಪಾವನ ಸೀತಾರಾಮ್, ಈಶ್ವರ-ಅಲ್ಲಾ ತೇರೆ ನಾಮ್” ಎಂದು ಸಾರುವ ಹಾಡುಗಳನ್ನು ಹೇಳಿಕೊಂಡು ಭಜನೆ ಮಾಡುತ್ತಿದ್ದೆವು. ಕಾಂತಿಭಾಯ್ ಅವರ ಮೂಲಕ ನಾವು ಗಾಂಧೀಜಿಯವರ ಶಿಷ್ಯರಾಗಿ ಬಿಟ್ಟಿದ್ದೆವು. ಖಾದಿ ಬಟ್ಟೆಗಳನ್ನೆ ಹಾಕುತ್ತಿದ್ದೆವು. ಈ ಪ್ರಾರ್ಥನೆಗಳು ನನ್ನ ಮನಸ್ಸಿಗೆ ತುಂಬಾ ಶಾಂತಿ ಕೊಡುತ್ತಿದ್ದವು. ನಾನೂ ಒಬ್ಬ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ, ಗಾಂಧೀಜಿಯ ಶಿಷ್ಯ ಎಂಬ ಉಲ್ಲಾಸಕರ ಭಾವನೆ ನನ್ನಲ್ಲಿತ್ತು. ದೇವರು ಒಬ್ಬನೆ, ಬೇರೆಬೇರೆ ಮತೀಯರು ಅವನನ್ನು ಬೇರೆಬೇರೆ ಹೆಸರುಗಳಿಂದ ಕರೆಯುತ್ತಾರೆ ಎಂಬ ಗಾಂಧೀಜಿಯ ನಂಬಿಕೆಗಳು ನನ್ನಲ್ಲಿ ಆಗ ಬೆಳೆದು ಇಂದಿಗೂ ಜೀವಂತವಾಗಿವೆ.

ಗಾಂಧೀಜಿಯವರು ದೂರದಲ್ಲಿದ್ದುಕೊಂಡು ಎಲ್ಲರನ್ನೂ ಹುರಿದುಂಬಿಸುತ್ತಿದ್ದರು, ಅವರಲ್ಲಿ ಪ್ರೀತಿಯನ್ನು ಉಕ್ಕಿಸಿಬಿಡುತ್ತಿದ್ದರು ಎನ್ನುವುದಕ್ಕೆ ಉದಾಹರಣೆಯಾಗಿ ನನ್ನ ತಾಯಿಯ ಮೇಲೆ ಅವರು ಪ್ರಭಾವ ಬೀರಿದ್ದು ಹೀಗೆ. ಗಾಂಧೀಜಿ ಮೈಸೂರಿಗೆ ನಾನು 2 ಅಥವಾ 3 ವರ್ಷದವನಾಗಿದ್ದಾಗ ಬಂದಿದ್ದರಂತೆ. ನಾವೆಲ್ಲ ಅವರನ್ನು ನೋಡುವುದಕ್ಕೆ ಹೋಗಿದ್ದೆವಂತೆ. ಗಾಂಧೀಜಿಯವರು ಎಲ್ಲರಿಂದಲೂ ಹಣ ಸಹಾಯ ಕೋರಿದರಂತೆ. ಏನೂ ಓದಿಲ್ಲದ ಮುಗ್ಧ ಜಯಮ್ಮ ಅವರಿಗೆ ತಕ್ಷಣ ತನ್ನ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ತೆಗೆದು ಕೊಟ್ಟಳಂತೆ. ಯಾರೂ ಅದರ ಬಗ್ಗೆ ಚಕಾರ ಎತ್ತದೇ ಇದ್ದುದು ಗಾಂಧೀಜಿಯವರ ಬಗ್ಗೆ ಬಹುತೇಕ ಜನಗಳಿಗೆ ಆಗ ಇದ್ದ ಗೌರವ, ನಂಬಿಕೆ ಮತ್ತು ಭಕ್ತಿಗಳನ್ನು ತೋರಿಸುತ್ತಿತ್ತು.

ಹೈಸ್ಕೂಲು ಮುಗಿಸಿದ ಮೇಲೆ ಮೈಸೂರಿನ ಯುವರಾಜಾ ಕಾಲೇಜಿನಲ್ಲಿ ನಾನು ಆಯ್ದುಕೊಂಡಿದ್ದ ರಸಾಯನ ಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದಲ್ಲಿ ಪಾಠಗಳು ಅಷ್ಟೊಂದು ಸ್ಫೂರ್ತಿಯನ್ನಾಗಲೀ, ಆನಂದವನ್ನಾಗಲೀ ಕೊಡಲಿಲ್ಲ. ಮುಖ್ಯವಾಗಿ ನಮ್ಮ ತಿಲಕ್ ಸಂಘದ ಚಟುವಟಿಕೆಗಳು, ಮತ್ತು ಕಾಂತಿಲಾಲ್ ಗಾಂಧಿಯವರ ಮನೆಯಲ್ಲಿ ನಡೆಯುತ್ತಿದ್ದ ಪ್ರಾರ್ಥನೆಗಳು ಕಾಲೇಜಿನ ವಿದ್ಯಾಭ್ಯಾಸಕ್ಕಿಂತ ಮುಖ್ಯವಾಗಿದ್ದವು.

ಆಗಸ್ಟ್ ತಿಂಗಳಲ್ಲಿ ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳುವಳಿಗೆ ಕರೆಕೊಟ್ಟರು. ಭಾರತದಲ್ಲಿ ಎಲ್ಲೆಲ್ಲೂ ವಿದ್ಯಾರ್ಥಿಗಳೂ ಸೇರಿ, ಎಲ್ಲ ವರ್ಗದ ಜನರಲ್ಲೂ ವಿದ್ಯುತ್ ಸಂಚಾರವಾದ ರೀತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಚಳುವಳಿಯಲ್ಲಿ ಭಾಗವಹಿಸುವುದಕ್ಕೆ ಸ್ಫೂರ್ತಿ ಬಂತು. ನನ್ನಂತಹ ಚಿಕ್ಕವಯಸ್ಸಿನ ಹುಡುಗರ ಮೇಲೂ ಕೂಡ ಗಾಂಧೀಜಿಯವರ ಪ್ರಭಾವ ಜೋರಾಗಿದ್ದು ನಾವೆಲ್ಲ ಚಳುವಳಿಯಲ್ಲಿ ಸ್ಫೂರ್ತಿಯಿಂದ ಭಾಗವಹಿಸಿದೆವು. 

ಯುವರಾಜಾ ಕಾಲೇಜಿನಲ್ಲಿ ಎರಡನೆಯ ವರ್ಷ ಕೊನೆಯ ಎರಡು-ಮೂರು ತಿಂಗಳು ಮೈಬಗ್ಗಿಸಿ ಚೆನ್ನಾಗಿ ಓದಿಕೊಂಡಿದ್ದರಿಂದ, ಆಯ್ದುಕೊಂಡಿದ್ದ ಮೂರೂ ವಿಷಯಗಳಲ್ಲಿ (ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಜೀವಶಾಸ್ತ್ರ ಮೊದಲನೆಯ ದರ್ಜೆಯಲ್ಲಿ ಪಾಸು ಮಾಡುವುದು ಸಾಧ್ಯವಾಯಿತು. ರಸಾಯನಶಾಸ್ತ್ರದ ಪಾಠ ಮಾಡುತ್ತಿದ್ದ ಸಂತಾನಂ, ಪ್ರಾಣಿಶಾಸ್ತ್ರದಲ್ಲಿ ಎಲ್.ಎಸ್.ರಾಮಸ್ವಾಮಿ, ಕನ್ನಡದಲ್ಲಿ ವೆಂಕಟರಾಮಪ್ಪ, ಇಂಗ್ಲಿಷ್‍ನಲ್ಲಿ ಮೈಲಾರಿರಾವ್ ಮತ್ತು ಎಮ್.ವಿ. ಕೃಷ್ಣಸ್ವಾಮಿ ಮಾತ್ರ ಚೆನ್ನಾಗಿ ಪಾಠ ಹೇಳುತ್ತಿದ್ದರು ಎಂದು ನೆನಪು. ಮಿಕ್ಕ ಉಪಾಧ್ಯಾಯರುಗಳ ಬಗ್ಗೆ ಹೆಚ್ಚು ನೆನಪಿಲ್ಲ.

ಯುವರಾಜಾ ಕಾಲೇಜು ನಮ್ಮ ಒಂಟಿಕೊಪ್ಪಲಿನ ಮನೆಯಿಂದ ಎರಡೂವರೆ ಮೈಲಿ ದೂರವಿತ್ತು. ಅಲ್ಲಿಗೆ ಮೊದಲ ವರ್ಷ ಪ್ರತಿನಿತ್ಯ ಸ್ನೇಹಿತರುಗಳ ಜತೆ ಹರಟೆ ಹೊಡೆದುಕೊಂಡು ಬರಿಗಾಲಿನಲ್ಲಿ ನಡೆದೇ ಹೋಗುತ್ತಿದ್ದೆವು. ಬಸ್ಸುಗಳಿಲ್ಲದ್ದರಿಂದ ಮನೆಯಿಂದ ಅಷ್ಟೇ ದೂರವಿದ್ದ ದೇವರಾಜ ಮಾರ್ಕೆಟ್ಟಿಗೂ ನಡೆದೇ ಹೋಗುತ್ತಿದ್ದೆವು. ಎರಡನೆಯ ವರ್ಷದಲ್ಲಿ ಓದುತ್ತಿದ್ದಾಗ ಸುಬ್ರಾಮು ಬೆಂಗಳೂರಿಗೆ ಬಿಎಸ್‍ಸಿ ಓದುವುದಕ್ಕೆ ಹೋಗಿ ಹಾಸ್ಟೆಲ್ ಸೇರಿಕೊಂಡಿದ್ದರಿಂದ ಅವನ ಸೈಕಲ್ ನನಗೆ ಸಿಕ್ಕಿತು. ಅಣ್ಣ ನನಗೆ ಒಂದು ಜೊತೆ ಚಪ್ಪಲಿಯನ್ನೂ ತೆಗೆಸಿಕೊಟ್ಟರು. ಆರಾಮವಾಗಿ ಬರಿಗಾಲಿನಲ್ಲಿ ನಡೆಯು ತ್ತಿದ್ದಾಗ ಕಾಲಿಗೆ ಕಲ್ಲು ಒತ್ತಿ ತೊಂದರೆಯಾದ ನೆನಪಿಲ್ಲ. ಈಗ ಬರಿಗಾಲಿನಲ್ಲಿ ಸ್ವಲ್ಪ ದೂರ ಕೂಡ ನಡೆಯುವುದೂ ತುಂಬಾ ಕಷ್ಟ.

ಕಾಲೇಜಿಗೆ ಹೋಗುತ್ತಿದ್ದಾಗ ಜಯಮ್ಮ ನನಗೆ ಮಧ್ಯಾನ್ಹದ ತಿಂಡಿಗಾಗಿ ದಿವಸಕ್ಕೆ ನಾಲ್ಕಾಣೆ ಕೊಡುತ್ತಿದ್ದಳು. ಅದರಲ್ಲಿ ಮೂರು ಕಾಸಿಗೆ ಒಂದು ಮಸಾಲೆ ದೋಸೆ ತಿಂದು, ಮೂರು ಕಾಸಿಗೆ ಕಾಫಿ ಕುಡಿದು, ಇನ್ನೂ ಮೂರೂವರೆ ಆಣೆ ಉಳಿಯುತ್ತಿತ್ತು ಎಂದು ನನ್ನ ಅಸ್ಪಷ್ಟವಾದ ನೆನಪು.

ಇಂಟರ್‍ಮೀಡೀಯಟ್ ಪರೀಕ್ಷೆ ಪಾಸಾದ ಮೇಲೆ 1947 ರಲ್ಲಿ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಓದಿ ವೈದ್ಯನಾಗಬೇಕೆಂಬ ಆಸೆಯಿತ್ತು. ಆದರೆ ಅಲ್ಲಿ ಸೀಟು ಸಿಕ್ಕದಿದ್ದುದರಿಂದ ಬೆಂಗಳೂರಿನ ಹತ್ತಿರ ಹೆಬ್ಬಾಳದಲ್ಲಿದ್ದ ಅಗ್ರಿಕಲ್ಚರಲ್ ಕಾಲೇಜಿನಲ್ಲಿ ಸೇರಿಕೊಂಡು, ಅಲ್ಲ್ಲಿ ಮೂರು ವರ್ಷ ಹಾಸ್ಟೆಲಿನಲ್ಲಿದ್ದುಕೊಂಡು ಬಿ.ಎಸ್ಸಿ.(ಅಗ್ರಿ) ಡಿಗ್ರಿಗೆ ಓದಿದೆ.

ಅಗ್ರಿಕಲ್ಚರಲ್ ಕಾಲೇಜಿನ ಹಾಸ್ಟೆಲ್ ಜೀವನ

ಅಲ್ಲಿಯ ಹಾಸ್ಟೆಲ್ ಜೀವನ ಒಂದು ಹೊಸ ಅನುಭವವನ್ನು ಕೊಟ್ಟಿತು. ನಮ್ಮ ಸಹಪಾಠಿಗಳ ಜೊತೆ ಆತ್ಮೀಯ ಒಡನಾಟವಿತ್ತು, ಅಧಿಕಾರ ಚಲಾಯಿಸಲು ಯಾರೂ ಯಜಮಾನರಿರಲಿಲ್ಲ. ಜಗಳಗಳಿಲ್ಲ, ಪ್ರೀತಿ ವಿಶ್ವಾಸ ತುಂಬಿದ ಸ್ನೇಹಿತರುಗಳು ಅನೇಕರಿ ದ್ದರು. ಎಲ್ಲಾ ಸೇರಿದ ನಮ್ಮ ಗುಂಪು ಒಂದು ದೊಡ್ಡ ಆತ್ಮೀಯ ಅವಿಭಕ್ತ ಕುಟುಂಬ ದಲ್ಲಿದ್ದಂತಿತ್ತು. ಪ್ರತಿ ಶುಕ್ರವಾರ ರಾತ್ರಿ ಸ್ಪೆಷಲ್ ಹಬ್ಬದ ಊಟವಿರುತ್ತಿತ್ತು. ಆ ಊಟಕ್ಕೆ ನಮ್ಮ ಸಂಬಂಧಿಗಳು ಮತ್ತು ಸ್ನೇಹಿತರುಗಳನ್ನು ಅತಿಥಿಗಳಾಗಿ ಕರೆಯುವ ಅವಕಾಶ ವಿರುತ್ತಿತ್ತು. ಅಡುಗೆ ಭಟ್ಟರು ರಾಮು ಮತ್ತು ಲಕ್ಷ್ಮಣ ಎಂಬ ಉಡುಪಿಯ ಅವಳಿ-ಜವಳಿ ಹುಡುಗರು ನಮ್ಮ ಅಣ್ಣ-ತಮ್ಮಂದಿರ ಹಾಗೇ ನಮ್ಮ ಜತೆ ಅನ್ಯೋನ್ಯವಾಗಿದ್ದರು. ಮತ್ತೊಬ್ಬ ಹಿರಿಯ ಅಡುಗೆಯವರು ರಾಮಚಂದ್ರಪ್ಪ ಒಳ್ಳೆಯ ಅಡುಗೆ ಮಾಡುತ್ತಿದ್ದರೂ ನಮ್ಮೊಂದಿಗೆ ಆತ್ಮೀಯರಾಗಿರಲಿಲ್ಲ.

ಗಾಂಧೀಜಿಯ ಆದರ್ಶಗಳನ್ನು ಮರೆತಿದ್ದು

ಅಗ್ರಿಕಲ್ಚರಲ್ ಕಾಲೇಜಿನಲ್ಲಿದ್ದ ಎರಡನೆಯ ವರ್ಷ, ಮೈಸೂರು ಸಂಸ್ಥಾನದಲ್ಲಿ ಇನ್ನೂ ಸ್ವಾತಂತ್ರ್ಯ ಬಂದಿರಲಿಲ್ಲ. ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪಿಸಬೇಕೆಂದು ಒತ್ತಾಯಿಸಲು ಮೈಸೂರು ಕಾಂಗ್ರೆಸ್ ಸಂಸ್ಥೆಯು ಹೋರಾಟ ಮಾಡುವುದಕ್ಕೆ ಕರೆ ಕೊಟ್ಟಿತು. ಹಲವಾರು ಕಡೆಗಳಲ್ಲಿ ಸತ್ಯಾಗ್ರಹಗಳು ನಡೆದ ಮೇಲೆ ಶಾಲಾ ಕಾಲೇಜುಗಳಿಗೆ ರಜಾ ಕೊಟ್ಟರು. ಹೋರಾಟದಲ್ಲಿ ಭಾಗವಹಿಸುವ ಮೊದಲ ಹೆಜ್ಜೆಯಾಗಿ, ಬೆಂಗಳೂರಿನಿಂದ ಮೈಸೂರಿಗೆ ಟಿಕೆಟ್ ತೆಗೆದುಕೊಳ್ಳದೆ ಕಾನೂನು ಉಲ್ಲಂಘಿಸಿ ನೂರಾರು ವಿದ್ಯಾರ್ಥಿಗಳು ರಾತ್ರಿಯ ರೈಲಿನಲ್ಲಿ ಪ್ರಯಾಣ ಮಾಡಿದೆವು. ಶ್ರೀರಂಗಪಟ್ಟಣದಲ್ಲಿ ನಮ್ಮನ್ನೆಲ್ಲಾ ಇಳಿಸಿ, ಅಲ್ಲಿಯ ಕೋರ್ಟಿನಲ್ಲಿ ನಮ್ಮೆಲ್ಲರಿಗೂ ಒಂದು ವಾರದ ಜೈಲು ಶಿಕ್ಷೆ ಕೊಟ್ಟರು. ಆ ಸಣ್ಣ ಊರಿನಲ್ಲಿದ್ದ ಜೈಲಿನಲ್ಲಿ ನಮ್ಮೆಲ್ಲರಿಗೂ ಸಾಕಷ್ಟು ಜಾಗವಿಲ್ಲದೆ, 2 ದಿವಸಗಳ ನಂತರ ಎಲ್ಲರನ್ನೂ ಬಿಡುಗಡೆ ಮಾಡಿದರು. ಮೈಸೂರಿನಲ್ಲಿ ನಡೆಯುತ್ತಿದ್ದ ಸತ್ಯಾಗ್ರಹದಲ್ಲಿ ಪೋಲೀಸರು ಭಾಗವಹಿಸಿದ ಹುಡುಗರನ್ನು ತುಂಬಾ ಕ್ರೂರವಾಗಿ ಹೊಡೆದು ಜೈಲಿಗೆ ಹಾಕುತ್ತಿದ್ದರು. ಲಾಕಪ್ಪಿನಲ್ಲಿ ಪೋಲೀಸರು ಸಾಲಾಗಿ ನಿಂತು ಎಲ್ಲರೂ ಹುಡುಗರಿಗೆ ಬೂಟ್ಸ್ ಕಾಲಿನಲ್ಲಿ ಒದೆಯುತ್ತಿದ್ದರಂತೆ. ನನ್ನ ಕಸಿನ್ ಪಾಪಣ್ಣಿ ಅಂತಹ ಒಂದು ಸತ್ಯಾಗ್ರಹದಲ್ಲಿ ಭಾಗವಹಿಸಲು ಒಂದು ಹಸಿರು ಶರ್ಟು ಹಾಕಿಕೊಂಡು ಹೋಗಿದ್ದ. ಕೆಲವು ಹುಡುಗರು ಪೋಲಿಸರ ಮೇಲೆ ಕಲ್ಲು ಎಸೆದರಂತೆ. ಕೆಲವರನ್ನು ಬಂಧಿಸಿ, ಲಾಟಿಯಿಂದ ಹೊಡೆದು ಪೋಲೀಸ್ ವ್ಯಾನಿನಲ್ಲಿ ತುಂಬಿದರಂತೆ. ಮಿಕ್ಕ ಹುಡುಗರನ್ನು ಅಟ್ಟಿಸಿಕೊಂಡು ಬಂದು ಹೊಡೆಯುತ್ತಿದ್ದರು. ಪಾಪಣ್ಣಿ ಅವರಿಂದ ತಪ್ಪಿಸಿಕೊಂಡು, ಮೇನ್ ರೋಡಿನಿಂದ ಅಡ್ಡರಸ್ತೆಯಲ್ಲಿದ್ದ ನಮ್ಮ ಮನೆಯ ಕಡೆ ತಿರುಗಿದ್ದನ್ನು ಮಾತ್ರ ನೋಡಿ ಮನೆಯೊಳಗೆ ನುಗ್ಗಿದ್ದನ್ನು ಪೋಲೀಸರು ನೋಡಲಿಲ್ಲ. ಪಾಪಣ್ಣಿ ಮನೆಯೊಳಗೆ ಬಂದು ತಕ್ಷಣ ಹಸಿರು ಶರ್ಟು ಬದಲಿಸಿ, ಅಟ್ಟದ ಮೇಲೆ ಕುಳಿತಿದ್ದ. ಸುಬ್ರಾಮು ಮನೆಯ ಎದುರಿಗೆ ನಿಂತಿದ್ದ. ಪೋಲೀಸರು ಸುಬ್ರಾಮುವನ್ನು ಹಸಿರು ಶರ್ಟು ಹಾಕಿಕೊಂಡಿದ್ದ ಹುಡುಗ ನಿಮ್ಮ ಮನೆಗೆ ಬಂದನೇ ಎಂದು ಕೇಳಿದ್ದಕ್ಕೆ ಸುಬ್ರಾಮು ‘ಈಗ ತಾನೇ ಹಲವರು ನಮ್ಮ ಅಡ್ಡ ರಸ್ತೆಯಿಂದ ಇನ್ನೊಂದು ಮೇನ್ ರೋಡಿನ ಕಡೆಗೆ ಓಡಿಹೋದರು. ಅದರಲ್ಲಿ ಒಬ್ಬ ಹಸಿರು ಶರ್ಟಿನವನೂ ಇದ್ದನೋ ಏನೊ’ ಎಂದು ಬಹಳ ನಂಬಿಕೆ ಬರುವ ರೀತಿಯಲ್ಲಿ ಹೇಳಿದ. ಪೋಲೀಸರು ನನ್ನ ಒಬ್ಬ ಸ್ನೇಹಿತನಿಗೆ ಲಾಠಿಯಿಂದ ಹೊಡೆದು ತಲೆ ಒಡೆದಿದ್ದರು. ಇದನ್ನೆಲ್ಲಾ ನೋಡಿ, ನನಗೆ ಏನಾದರೂ ಮಾಡಿ ಪೋಲೀಸ್ ವ್ಯಾನನ್ನು ಬೀಳಿಸಿ ನಮ್ಮ ಕೋಪ ತೋರಿಸಬೇಕೆಂಬ ಉತ್ಕಟವಾದ ಭಾವನೆಗಳು ಬಂದವು. ಆ ಭಾವನೆಗಳ ಅಮಲಿನಲ್ಲಿ ಗಾಂಧೀಜಿಯ ಅಹಿಂಸಾತ್ಮಕ ಹೋರಾಟದ ಆದರ್ಶಗಳು ತಾತ್ಕಾಲಿಕವಾಗಿ ಹಾರಿಹೋದವು. ನನ್ನ ಸಲಹೆಯಂತೆ ನಾವು 8-10 ಹುಡುಗರು ಸೇರಿ, ರಾತ್ರಿ ಹೊತ್ತಿನಲ್ಲಿ ಪೋಲೀಸ್ ವ್ಯಾನು ಬರುವ ರಸ್ತೆಯಲ್ಲಿ ಒಂದು ಅಥವಾ ಒಂದೂವರೆ ಅಡಿ ಅಗಲದ ಹೊಂಡ ಹೊಡೆದು, ಪೇಪರುಗಳನ್ನು ಹಾಸಿ, ಮೇಲೆ ಮಣ್ಣನ್ನು ಹೊಂಡ ಕಾಣದಂತೆ ಮುಚ್ಚಿ, ಎಲ್ಲರೂ ಮನೆ ಸೇರಿಕೊಂಡ ಮೇಲೆ, ಸ್ವಲ್ಪ ಗಲಾಟೆ ಮಾಡಿ ಪೋಲೀಸ್ ವ್ಯಾನು ಬರಲು ಪ್ರೇರೇಪಿಸುವುದಕ್ಕೆ, ಬೋಲೋ ಭಾರತ್ ಮಾತಾಕಿ ಜೈ ಅಂತ ಕೂಗುವ ಯೋಜನೆ ಹಾಕಿಕೊಂಡೆವು. ಆ ಯೋಜನೆಯ ಬಗ್ಗೆ ಮಾತಾಡಲು ಬೆಳಿಗ್ಗೆ ಒಂದು ಸೀಕ್ರೆಟ್ ಮೀಟಿಂಗ್ ಕರೆದಿದ್ದೆವು. ಆ ಮೀಟಿಂಗ್ ಬಗ್ಗೆ ಒಬ್ಬ ಹುಡುಗ ರಸ್ತೆಯ ಒಂದು ಕೊನೆಯಲ್ಲಿ ನಿಂತುಕೊಂಡು ರಸ್ತೆಯ ಮತ್ತೊಂದು ಕೊನೆಯಲ್ಲಿದ್ದ ಹುಡುಗನಿಗೆ ‘ಗೋಪಾಲಾ ಸಾಯಂಕಾಲ ಆರು ಗಂಟೆಗೆ ಸೀಕ್ರೆಟ್ ಮೀಟಿಂಗ್, ನಿಮ್ಮಣ್ಣನನ್ನೂ ಕರೆದುಕೊಂಡು ಬಾ’ ಅಂತ ಕೂಗಿ ಹೇಳಿದ್ದ. ರಾತ್ರಿ ಹನ್ನೊಂದು ಗಂಟೆಗೆ ಸುಮಾರು 10 ಹುಡುಗರು, ಪಿಕಾಸಿ, ಹಾರೆ ಇತ್ಯಾದಿ ಆಯುಧಗಳನ್ನು ತೆಗೆದುಕೊಂಡು ಬರಬೇಕೆಂದು ನಿರ್ಧರಿಸಿದ್ದೆವು. ಹತ್ತೂ ಮುಕ್ಕಾಲಿಗೆ ನಿದ್ದೆ ಮಾಡುತ್ತಿದ್ದ ಪಾಪಣ್ಣಿಯನ್ನು ಬಹಳ ಕಷ್ಟ ಪಟ್ಟು ಎಬ್ಬಿಸಿದೆ. ನಾವಿಬ್ಬರೂ ಪಿಕಾಸಿ ಹಾರೆ ಇತ್ಯಾದಿಗಳನ್ನು ತೆಗೆದುಕೊಂಡು ಹೊಂಡ ತೋಡಬೇಕೆಂದಿದ್ದ ಜಾಗಕ್ಕೆ ಹೋದೆವು. ಬೇರೆ ಒಬ್ಬನೂ ಬಂದಿರಲಿಲ್ಲ. ಗಾಂಧೀಜಿಯ ಬೋಧನೆಗೆ ವಿರುದ್ಧ ಹೋಗುವ ಆಸೆ ಅಲ್ಲಿಗೇ ಮುಕ್ತಾಯ ವಾಯಿತು. ಮುಗ್ಧ ಹುಡುಗರ ಸೀಕ್ರೆಟ್ ಮೀಟಿಂಗಿನ ಬಗ್ಗೆ ಪೋಲೀಸರಿಗೆ ಎಲ್ಲಾ ಗೊತ್ತಿತ್ತಂತೆ. ಏನಾದರೂ ಹೊಂಡ ಹೊಡೆದಿದ್ದರೆ, ಎಲ್ಲರಿಗೂ ಹೊಡೆದು ಬುದ್ಧಿ ಕಲಿಸುತ್ತಿದ್ದರು ಎಂಬುದು ಕಾಲಕ್ರಮೇಣ ನಮಗೆ ಗೊತ್ತಾಯಿತು. ಅಹಿಂಸಾತ್ಮಕ ಹೋರಾಟ ದಲ್ಲೇ ಸುಮಾರು ಜನ ಸತ್ತಿದ್ದರು. ಆದರೆ ಪೋಲೀಸರು ಮತ್ತು ಆಡಳಿತ ವರ್ಗದವರು, ನಮ್ಮ ಹೋರಾಟ ಹಿಂಸಾತ್ಮಕವಾಗಿದ್ದರೆ ನಮ್ಮ ಹಿಂಸೆಯ ಪ್ರಚೋದನೆಯಿಂದಲೇ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಜನಗಳನ್ನು ಸಾಯಿಸುತ್ತಿದ್ದರು ಎಂಬ ವಿಷಯ ಕಾಲಕ್ರಮೇಣ ನನಗೆ ಅರ್ಥವಾಯಿತು.

ಆತ್ಮೀಯ ಸ್ನೇಹಿತರು

ನಮ್ಮ ಡಿಗ್ರಿ ಕಾಲೇಜು ನಾನು ಸೇರುವುದಕ್ಕೆ ಒಂದು ವರ್ಷ ಮುಂಚೆ ಶುರುವಾಗಿತ್ತು. ನಮ್ಮದು ಎರಡನೆಯ ಬ್ಯಾಚು. ಈ ಎರಡು ಬ್ಯಾಚಿನ ವಿದ್ಯಾರ್ಥಿಗಳು ನಾವೆಲ್ಲ ಎರಡು ಮೂರು ವರ್ಷಗಳು ಒಟ್ಟಿಗೇ ಇದ್ದುದರಿಂದ ಹಲವಾರು ವಿದ್ಯಾರ್ಥಿಗಳು ನನಗೆ ತುಂಬಾ ಆತ್ಮೀಯ ಸ್ನೇಹಿತರುಗಳಾಗಿಬಿಟ್ಟರು. ಅವರಲ್ಲಿ ಕೃಷ್ಣಸ್ವಾಮಿರಾವ್ ಎಂಬಾತ ಒಳ್ಳೆಯ ಕರ್ನಾಟಿಕ್ ಕ್ಲಾಸಿಕಲ್ ಹಾಡುಗಾರ ಮತ್ತು ನಟ. ಯಾವಾಗಲೂ ಹಾಡನ್ನು ಗುನುಗುತ್ತ ತಮ್ಮದೇ ಲೋಕದಲ್ಲಿ ಇರುತ್ತಿದ್ದರು. ನಾನು ಡಿಗ್ರಿ ಮುಗಿಸಿ ಕಾಲೇಜು ಬಿಟ್ಟು, ದೆಹಲಿಗೆ ಎಮ್.ಎಸ್ಸಿ ಮಾಡಲು ಹೋದನಂತರ ಅವರ ಸಂಪರ್ಕ ತಪ್ಪಿ ಹೋಯಿತು. ಹಲವಾರು ವರ್ಷಗಳ ನಂತರ ಅವರು ಆತ್ಮಹತ್ಯೆ ಮಾಡಿಕೊಂಡರೆಂದು ಕೇಳಿ ಮನಸ್ಸಿಗೆ ಬೇಜಾರಾಯಿತು. ಜಡೆ ಶ್ರೀನಿವಾಸಮೂರ್ತಿ ಎಂಬ ಸ್ನೇಹಿತರು ಹೆಬ್ಬಾಳದ ಅಗ್ರಿಕಲ್ಚರಲ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಇತ್ತೀಚೆಗೆ ತೀರಿ ಕೊಳ್ಳುವವರೆಗೂ ನನ್ನ ಆತ್ಮೀಯ ಸ್ನೇಹಿತರಾಗಿದ್ದರು. ಡಾ. ಆರ್. ದ್ವಾರಕಿನಾಥ್‍ರವರು ಅದೇ ಯೂನಿವರ್ಸಿಟಿಯ ವೈಸ್‍ಛಾನ್ಸೆಲರ್ ಆಗಿದ್ದು ಇತ್ತೀಚೆಗೆ ತೀರಿಕೊಂಡರು. ಡಾ. ರಾಮಕೃಷ್ಣ ಮಧ್ಯಪ್ರದೇಶದಲ್ಲಿ ವ್ಯವಸಾಯದ ಇಲಾಖೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದು ನಂತರ ವಲ್ರ್ಡ್ ಬ್ಯಾಂಕಿನಲ್ಲಿ ಕೆಲಸ ಮಾಡಿ ಅಮೇರಿಕದಲ್ಲಿ ನೆಲೆಸಿ ಅವರು ಕೂಡ ಇತ್ತೀಚೆಗೆ ತೀರಿಕೊಂಡರು. ಹಾಸ್ಟೆಲಿನಲ್ಲಿ ನನ್ನ ರೂಂಮೇಟುಗಳಾಗಿದ್ದ ನನ್ನ ಚಿಕ್ಕಮ್ಮನ ಮಗ ಶ್ರೀಕಂಠು ಮತ್ತು ಮತ್ತೊಬ್ಬ ಅದೇ ಹೆಸರಿನ ಕೆ.ಆರ್. ಶ್ರೀಕಂಠಯ್ಯ ಎಂಬಿಬ್ಬರು ತುಂಬಾ ಹತ್ತಿರದ ಅಣ್ಣ ತಮ್ಮಂದಿರ ಹಾಗೇ ಇದ್ದು ಆತ್ಮೀಯ ಮಿತ್ರರಾಗಿದ್ದರು. ಶ್ರೀಕಂಠಯ್ಯ ಕ್ಲಾಸಿನಲ್ಲಿ ಯಾವಾಗಲೂ ನೋಟ್ಸ್‍ಗಳನ್ನು ಚೆನ್ನಾಗಿ ಬರೆದುಕೊಳ್ಳುತ್ತಿದ್ದನು. ಅವನ ನೋಟ್ಸ್‍ಗಳನ್ನು ಓದಿಕೊಂಡೇ ನಾನು ಕೊನೆಯ ವರ್ಷದಲ್ಲಿ ಕಾಲೇಜಿಗೆ ಮೂರನೆಯ ಸ್ಥಾನದಲ್ಲಿ ಉತ್ತೀರ್ಣನಾಗುವುದು ಸಾಧ್ಯವಾಯಿತು.
ನಮ್ಮ ಕಾಲೇಜಿನ ಆಗಿನ ಪಾಠಪ್ರವಚನಗಳು ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಕೆಲಸ ಮಾಡುವುದಕ್ಕೆ ತಯಾರು ಮಾಡಿತ್ತೇ ಹೊರತು ಒಬ್ಬ ವ್ಯವಸಾಯಗಾರನಾಗಿ ಕೆಲಸ ಮಾಡುವುದಕ್ಕೆ ತಯಾರು ಮಾಡುವಂತಿರಲಿಲ್ಲ ಎಂಬುದು ಮುಂದೆ ನಾನು ವ್ಯವಸಾಯಗಾರನಾಗಿ ಕೆಲಸ ಮಾಡಲು ಶುರು ಮಾಡಿದ ಮೇಲೆ ಮನದಟ್ಟಾಯಿತು.

ಅಧ್ಯಾತ್ಮದ ಬಗ್ಗೆ ಆಸಕ್ತಿ

ಅಗ್ರಿಕಲ್ಚರಲ್ ಕಾಲೇಜಿನ ಪಾಠಗಳಿಗಿಂತ ಹೆಚ್ಚು ಆಸಕ್ತಿ, ದೇವರ ಬಗ್ಗೆ ತೀವ್ರ ಆಸಕ್ತಿ ನನ್ನಲ್ಲಿ ಹುಟ್ಟಿತ್ತು. ಸ್ವಾಮಿ ವಿವೇಕಾನಂದರವರ, ಏಳು ಸಂಪುಟಗಳಲ್ಲಿದ್ದ, ಎಲ್ಲ ಬರವಣಿಗೆಗಳನ್ನೂ ತುಂಬಾ ಆಸ್ತೆಯಿಂದ ಓದಿ ಮುಗಿಸಿದೆ. ಜತೆಗೆ ಸರ್ ಎಸ್ ರಾಧಾಕೃಷ್ಣನ್ ಬರೆದ ‘ದಿ ಹಿಂದೂ ವ್ಯೂ ಆಫ್ ಲೈಫ್’, ‘ಎನ್ ಐಡಿಯಲಿಸ್ಟ್ಸ್ ವ್ಯೂ ಆಫ್ ಲೈಫ್’, ರೊಮೆಯ್ನ್ ರೋಲನ್ಡ್ ಬರೆದ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆ ಮತ್ತು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಇಂಗ್ಲೀಷಿನಲ್ಲಿ ಮತ್ತು ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನೂ ಓದಿ ಉಪನಿಷತ್ತುಗಳಲ್ಲಿ ವಿವರಿಸಿರುವ ಆಧ್ಯಾತ್ಮಿಕ ಅನುಭಾವವನ್ನು ಪಡೆದುಕೊಳ್ಳುವುದಕ್ಕೆ ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡುವ ಬಗ್ಗೆ ಯೋಚನೆಗಳು ಕೂಡ ಬಂದಿದ್ದವು. ಜ್ಞಾನಯೋಗ ಮತ್ತು ರಾಜಯೋಗಗಳನ್ನು ಅಭ್ಯಾಸ ಮಾಡಿದವರಲ್ಲಿ ದೈವಸಾಕ್ಷಾತ್ಕಾರ ದೊರಕುವುದು ಕೆಲವೇ ಜನರಿಗೆ ಮಾತ್ರ ಎಂಬುದನ್ನು ವಿವೇಕಾನಂದರ ಪುಸ್ತಕಗಳನ್ನು ಓದಿದ ಮೇಲೆ, ಹಾಗೆ ದೊರಕದಿದ್ದವರು ಈ ಜೀವನದಲ್ಲಿ ಸರಳವಾಗಿ ಮತ್ತು ಸುಲಭವಾಗಿ ಉತ್ತಮ ಮಾನವೀಯ ಸಂಬಂಧಗಳಲ್ಲಿ ದೊರಕುವ ಆನಂದಗಳಿಂದಲೂ ವಂಚಿತರಾಗುತ್ತಾರೆ ಎಂದು ನನಗನ್ನಿಸಿತು. ಹಿಮಾಲಯಕ್ಕೆ ಹೋಗುವುದರ ಬದಲು ಈ ಸಂಸಾರದಲ್ಲಿದ್ದುಕೊಂಡೆ ಪ್ರೀತಿ ಮತ್ತು ಸ್ನೇಹಗಳ ಮೂಲಕ ದೈವಸಾಕ್ಷಾತ್ಕಾರ ಪಡೆದುಕೊಳ್ಳಬೇಕೆಂದು ಆಗ ನಿರ್ಧರಿಸಿಕೊಂಡೆನು. ಸ್ವಾರ್ಥರಹಿತ ಪ್ರೀತಿ- ಸ್ನೇಹಗಳು, ಕ್ಷಮಾಗುಣ, ಇತರರ ಕಷ್ಟಗಳಿಗೆ ಸ್ಪಂದಿಸುವುದು, ಕೋಪ, ದ್ವೇಷ, ಅಸೂಯೆ ಇತ್ಯಾದಿ ನಕಾರಾತ್ಮಕ ಗುಣಗಳನ್ನು ವರ್ಜಿಸುವುದು ಇತ್ಯಾದಿಗಳೇ ದೈವೀಗುಣಗಳು ಮತ್ತು ಅವುಗಳನ್ನು ಬೆಳೆಸಿಕೊಂಡರೆ ದೊರಕುವ ಆನಂದವೇ ದೈವಾನುಭವಕ್ಕೆ ಅತಿಹತ್ತಿರ ಎನ್ನುವ ನಂಬಿಕೆ ನನ್ನಲ್ಲಿ ಆಗ ಬೆಳೆದು ಇಂದಿಗೂ ಜೀವಂತವಾಗಿದೆ.

ಕಾಶಿಯಲ್ಲಿ

ನನ್ನ 21ನೆಯ ವರ್ಷದಲ್ಲಿ (1950 ನೇ ಇಸವಿಯಲ್ಲಿ) ನನ್ನ ಬಿ.ಎಸ್ಸಿ(ಅಗ್ರಿ) ಡಿಗ್ರಿ ಮುಗಿದ ಮೇಲೆ, ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ನನಗಿಷ್ಟವಾದ ಸಸ್ಯಗಳ ವೈರಸ್ ಕಾಯಿಲೆಗಳ ಬಗ್ಗೆ ಎಮ್.ಎಸ್ಸಿ(ಅಗ್ರಿ) ಡಿಗ್ರಿಗೆ ಓದುವುದಕ್ಕೆ ಹೋದೆನು. ಕಾಶಿ ಪಟ್ಟಣದಲ್ಲಿ ವಿಶ್ವನಾಥನ ದೇವಾಲಯಕ್ಕೆ ಎಲ್ಲಕ್ಕಿಂತ ಮೊದಲು ಭೇಟಿ ಕೊಟ್ಟೆನು. ಅಲ್ಲಿಯ ಪಂಡರು ದೇವರ ಹೆಸರಿನಲ್ಲಿ ಎಲ್ಲರನ್ನೂ ಸುಲಿಗೆ ಮಾಡುತ್ತಿದ್ದುದನ್ನು ಕಂಡು ಬೇಸರವಾಯಿತು. ಜನಗಳು ನದಿಯಲ್ಲಿ ಸ್ನಾನಮಾಡಿ ಒದ್ದೆ ಬಟ್ಟೆಯಲ್ಲೇ ದೇವಸ್ಥಾನಕ್ಕೆ ಹೋಗುತ್ತಿದ್ದರು. ಈ ಅಭ್ಯಾಸದಿಂದ ದೇವಸ್ಥಾನದ ಒಳಗೆಲ್ಲ ಕೆಸರು ತುಂಬಿಕೊಂಡಿತ್ತು. ಇವೆರಡು ವಿಷಯಗಳು ದೇವಸ್ಥಾನದಲ್ಲಿರಬೇಕಾದ ಪವಿತ್ರವಾದ ವಾತಾವರಣವನ್ನು ಕಲುಷಿತ ಗೊಳಿಸಿದ್ದವು.

ಕಾಶಿಯಲ್ಲಿ ಒಮ್ಮೆ ಕುದುರೆ ಗಾಡಿಯಲ್ಲಿ ಪ್ರಯಾಣ ಮಾಡುತ್ತಿದ್ದೆ. ಗಾಡಿಯ ಚಾಲಕನು ಸುಶ್ರಾವ್ಯವಾಗಿ ಹಿಂದೂಸ್ತಾನಿ ಕ್ಲಾಸಿಕಲ್ ಶೈಲಿಯಲ್ಲಿ ಕೊಳಲು ಊದುತ್ತ ನನ್ನನ್ನು ಕರೆದುಕೊಂಡು ಹೋಗಿದ್ದು ಒಂದು ವಿಶಿಷ್ಟವಾದ ಅನುಭವವಾಗಿತ್ತು. ಕರ್ನಾಟಕ ದಲ್ಲಿ ಕ್ಲಾಸಿಕಲ್ ಸಂಗೀತವು ಕೆಲವು ಮೇಲ್ವರ್ಗದವರಿಗೆ ಸೀಮಿತವಾಗಿದೆ. ಕುದುರೆ ಗಾಡಿ ಹೊಡೆಯುವವರು, ಗಾರೆ ಕೆಲಸದವರು ಇತ್ಯಾದಿ ಸಾಧಾರಣ ಜನಗಳು ಕ್ಲಾಸಿಕಲ್ ಸಂಗೀತ ಹಾಡುವುದನ್ನು ನಾನೆಲ್ಲೂ ಕೇಳಿರಲಿಲ್ಲ. ಕಾಶಿಯಲ್ಲಿ ಅನೇಕ ಸಾಧಾರಣ ಜನಗಳು ಕೂಡ ಕ್ಲಾಸಿಕಲ್ ಸಂಗೀತವನ್ನು ಹಾಡುತ್ತಿದ್ದದ್ದು ನನಗೊಂದು ಅಪರೂಪದ ಸಂತೋಷಕರ ಅನುಭವವಾಗಿತ್ತು.

(ಕೃತಿ: ಆನಂದದ ಹುಡುಕಾಟದಲ್ಲಿ (ಅನುಭವ ಕಥನ), ಲೇಖಕರು: ಡಾ. ಎ.ಎನ್. ನಾಗರಾಜ್, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 170/-)