Advertisement
ಆರ್. ಕಲ್ಯಾಣಮ್ಮ ಮತ್ತು ಶ್ಯಾಮಲಾದೇವಿ: ನವೋದಯ ಸ್ತ್ರೀಸಾಹಿತ್ಯದ ಎರಡು ಆದಿದೀಪಗಳು: ಡಾ.ಎಲ್.ಜಿ. ಮೀರಾ ಅಂಕಣ

ಆರ್. ಕಲ್ಯಾಣಮ್ಮ ಮತ್ತು ಶ್ಯಾಮಲಾದೇವಿ: ನವೋದಯ ಸ್ತ್ರೀಸಾಹಿತ್ಯದ ಎರಡು ಆದಿದೀಪಗಳು: ಡಾ.ಎಲ್.ಜಿ. ಮೀರಾ ಅಂಕಣ

ಜನಮಾನಸಕ್ಕೆ ನವೋದಯ ಲೇಖಕಿಯರ ಮಹತ್ವದ ಕೊಡುಗೆಯನ್ನು ಪರಿಚಯ ಮಾಡಿಕೊಡುವಲ್ಲಿ ಮುಂದಿನ ಪೀಳಿಗೆಗಳ ಲೇಖಕಿಯರು ಮಾಡಿರುವ ಅಪಾರ ಪರಿಶ್ರಮವನ್ನು ನಾವು ನೆನೆಯಬೇಕು. ಪ್ರಧಾನವಾಹಿನಿಯ ಸಾಹಿತ್ಯಚರಿತ್ರೆಯು ಹಿರಿಯಲೇಖಕಿಯರನ್ನು ನಿರ್ಲಕ್ಷಿಸಿದ್ದ ಸಂದರ್ಭದಲ್ಲಿ, ಪ್ರೊ.ಚಿ.ನ.ಮಂಗಳಾರಂತಹ ವಿದ್ವಾಂಸೆಯರ ಆಸಕ್ತ ಪ್ರಯತ್ನಗಳು ಈ ಕೊರತೆಯನ್ನು ತುಂಬಲು ಪ್ರಾರಂಭಿಸಿದವು. ಇಪ್ಪತ್ತನೇ ಶತಮಾನದ ಎಂಟನೇ ದಶಕದಿಂದ ಮೊದಲುಗೊಂಡು, ಕರ್ನಾಟಕ ಲೇಖಕಿಯರ ಸಂಘ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗಗಳ ಮೂಲಕ, ಲೇಖಕಿಯರು ಸಾಂಘಿಕ ಪ್ರಯತ್ನಗಳನ್ನು ಮಾಡಿ ಅನೇಕ ನಿರ್ಲಕ್ಷಿತ ಲೇಖಕಿಯರನ್ನು ಬೆಳಕಿಗೆ ತಂದರು.
ಡಾ.
ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ತನೆಯ ಬರಹ

ದುರ್ಗಮವಾದ ಕಾಡಿನಲ್ಲಿ ಮೊದಲು ದಾರಿ ಮಾಡಿಕೊಂಡು ಹೋಗುವವರಿಗೆ ಸವಾಲುಗಳು ಬಹಳ. ಎಲ್ಲಿ ಹೋಗಬೇಕು, ಎಲ್ಲಿಂದ ಹೋಗಬೇಕು, ಕಲ್ಲುಮುಳ್ಳು ಎಲ್ಲಿರುತ್ತವೋ, ಯಾವ ಕಾಡುಪ್ರಾಣಿಗಳು ಬಂದು ಆಕ್ರಮಣ ಮಾಡುತ್ತವೋ, ಜೊತೆಗೆ ಇಷ್ಟೆಲ್ಲಾ ಸಾಹಸ ಮಾಡಿ ನಾವು ಗುರಿ ಮುಟ್ಟುತ್ತೇವೋ ಇಲ್ಲವೋ ಗೊತ್ತಿರುವುದಿಲ್ಲ. ಆದರೆ ಒಂದು ಸಲ ಯಾರಾದರೂ ದಾರಿ ಮಾಡಿಕೊಟ್ಟರೆಂದರೆ ಆ ಕಾಡಿನ ಮೂಲಕ ಹೋಗುವುದೂ ಸುಲಭ, ಮತ್ತು ಆ ಕಾಡಿನೊಳಗಿನ ಬೇರೆ ಪ್ರದೇಶಗಳನ್ನೂ ಪರಿಚಿತವಾಗಿಸಿಕೊಳ್ಳುವುದು ಸುಲಭ.

ಸಾಹಿತ್ಯಕ್ಷೇತ್ರವನ್ನು ಪುರುಷಪ್ರಧಾನತೆಯ ಒಂದು ದುರ್ಗಮಕಾಡು ಎಂದು ಭಾವಿಸುವುದಾದರೆ, ಇಪ್ಪತ್ತನೆಯ ಶತಮಾನದ ಆದಿಭಾಗದ ಅಂದರೆ ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದ ಮಹಿಳೆಯರಿಗೆ ಅದನ್ನು ಪ್ರವೇಶಿಸುವುದು ಸುಲಭವಾದ ಮಾತಾಗಿರಲಿಲ್ಲ. ಹೆಂಗಸರನ್ನು ಅಡುಗೆಮನೆ ಹಾಗೂ ಅಧೀನ ಪಾತ್ರಗಳಿಗೆ ಸೀಮಿತವಾಗಿಸಿದ್ದ ವ್ಯವಸ್ಥೆ, ನಿರಂತರ ಬಸಿರು-ಬಾಣಂತನಗಳ ಬಾಳು ಹೆಂಗಸರನ್ನು ಹೈರಾಣಾಗಿಸುತ್ತಿತ್ತು. ಅಂತಹ ಕಷ್ಟಕರ ಪರಿಸ್ಥಿತಿಯಲ್ಲೂ ಕೆಲವು ಮಹಿಳೆಯರು ಅಕ್ಷರಸಾಧನೆ ಮಾಡಿ ಮುಂದಿನ ಮಹಿಳೆಯರಿಗೆ ಮೇಲ್ಪಂಕ್ತಿ ಹಾಕಿಕೊಟ್ಟದ್ದು ಸ್ಮರಣೀಯ ಸಂಗತಿ. ಅದರ ಫಲಿತವನ್ನು ಈ ಮುಂದೆ ವಿವರಿಸಲಾಗಿದೆ.

 *****

ಕನ್ನಡದ ಮಹಿಳಾ ಸಾಹಿತ್ಯ ಚರಿತ್ರೆಯ ಆಧುನಿಕ ಕಾಲದ ಮೊದಲ ಘಟ್ಟ ಎಂದು ನಾವು ಇಪ್ಪತ್ತನೇ ಶತಮಾನದ ಆದಿಭಾಗವನ್ನು ಕರೆಯಲು ಸಾಧ್ಯ ಇದೆ. `ನವೋದಯ’ವೆಂದು ಕರೆಯಲಾಗುವ ಈ ಕಾಲಾವಧಿಯಲ್ಲಿ ಮಹಿಳೆಯರು ಗಮನೀಯ ಸಂಖ್ಯೆಯಲ್ಲಿ ಮತ್ತು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯಲಾರಂಭಿಸಿದರು. ಈ ಮಹಿಳೆಯರು ಕೇವಲ ಸೃಜನಶೀಲ ಸಾಹಿತ್ಯಕ್ಷೇತ್ರಕ್ಕಷ್ಟೇ ಅಲ್ಲದೆ ಪತ್ರಿಕೋದ್ಯಮ, ಪುಸ್ತಕ ಪ್ರಕಾಶನಗಳ ಕ್ಷೇತ್ರಗಳಿಗೂ ಕೊಡುಗೆ ನೀಡಿದರು. ನಂಜನಗೂಡು ತಿರುಮಲಾಂಬ, ಆರ್. ಕಲ್ಯಾಣಮ್ಮ, ಸರಸ್ವತಿ ಬಾಯಿ ರಾಜವಾಡೆ, ಕೊಡಗಿನ ಗೌರಮ್ಮ, ಹಚ್.ವಿ.ಸಾವಿತ್ರಮ್ಮ, ಬೆಳಗೆರೆ ಜಾನಕಮ್ಮ…….. ಹೀಗೆ ಆ ಕಾಲದ ಮುಖ್ಯ ಲೇಖಕಿಯರ ದೊಡ್ಡಯಾದಿಯೊಂದನ್ನು ನಾವು ಗಮನಿಸಬಹುದು. ಕನ್ನಡ ಸಾಹಿತ್ಯ ಚರಿತ್ರೆಯ ಹರಿಗಡಿಯದ ಧಾರೆಯ ಮಟ್ಟಿಗಂತೂ ಇದು ಮಹಾಪ್ರವಾಹವೊಂದರ ಸೇರ್ಪಡೆ.

ಜನಮಾನಸಕ್ಕೆ ನವೋದಯ ಲೇಖಕಿಯರ ಮಹತ್ವದ ಕೊಡುಗೆಯನ್ನು ಪರಿಚಯ ಮಾಡಿಕೊಡುವಲ್ಲಿ ಮುಂದಿನ ಪೀಳಿಗೆಗಳ ಲೇಖಕಿಯರು ಮಾಡಿರುವ ಅಪಾರ ಪರಿಶ್ರಮವನ್ನು ನಾವು ನೆನೆಯಬೇಕು. ಪ್ರಧಾನವಾಹಿನಿಯ ಸಾಹಿತ್ಯಚರಿತ್ರೆಯು ಹಿರಿಯಲೇಖಕಿಯರನ್ನು ನಿರ್ಲಕ್ಷಿಸಿದ್ದ ಸಂದರ್ಭದಲ್ಲಿ, ಪ್ರೊ.ಚಿ.ನ.ಮಂಗಳಾರಂತಹ ವಿದ್ವಾಂಸೆಯರ ಆಸಕ್ತ ಪ್ರಯತ್ನಗಳು ಈ ಕೊರತೆಯನ್ನು ತುಂಬಲು ಪ್ರಾರಂಭಿಸಿದವು. ಇಪ್ಪತ್ತನೇ ಶತಮಾನದ ಎಂಟನೇ ದಶಕದಿಂದ ಮೊದಲುಗೊಂಡು, ಕರ್ನಾಟಕ ಲೇಖಕಿಯರ ಸಂಘ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗಗಳ ಮೂಲಕ, ಲೇಖಕಿಯರು ಸಾಂಘಿಕ ಪ್ರಯತ್ನಗಳನ್ನು ಮಾಡಿ ಅನೇಕ ನಿರ್ಲಕ್ಷಿತ ಲೇಖಕಿಯರನ್ನು ಬೆಳಕಿಗೆ ತಂದರು.

ಹೊಸದಾಗಿ ತೆರೆದುಕೊಂಡ ಈ ನೂತನ ಮಹಿಳಾ ಸಾಹಿತ್ಯಾಕಾಶದಲ್ಲಿ ಹೊಳೆಯುವ ಎರಡು ತಾರೆಗಳೆಂದರೆ ಆರ್.ಕಲ್ಯಾಣಮ್ಮ ಹಾಗೂ ಶ್ಯಾಮಲಾದೇವಿ ಬೆಳಗಾಂವ್‌ಕರ್. ಆರ್.ಕಲ್ಯಾಣಮ್ಮನವರು ಕಾದಂಬರಿ, ಕಥೆ, ನಾಟಕ, ಮಕ್ಕಳ ಸಾಹಿತ್ಯವನ್ನು ರಚಿಸಿದರು. ಮಕ್ಕಳಿಗಾಗಿ ಬೆಂಗಳೂರಿನ ಮಕ್ಕಳಕೂಟವನ್ನು ಸ್ಥಾಪಿಸಿದರು. `ಕಲ್ಯಾಣ ಸರಸ್ವತಿ’ ಎಂಬ ಪತ್ರಿಕೆ ಮಾಡಿದರು. ಶ್ಯಾಮಲಾ ಅವರು ತಮ್ಮ ಮೂವತ್ಮೂರು ವರ್ಷದ ಕಿರುಅವಧಿಯ ಜೀವನದಲ್ಲಿ ಉತ್ತರ ಕರ್ನಾಟಕದ ಮೊದಲ ಲೇಖಕಿ ಅನ್ನಿಸಿಕೊಂಡು ಇಪ್ಪತ್ತು ಕಥೆಗಳು, ಮತ್ತು ಅನೇಕ ಪತ್ರಿಕಾ ಲೇಖನಗಳನ್ನು ರಚಿಸಿದರು. ಸಂಘಸಂಸ್ಥೆಗಳಿಗಾಗಿ ದುಡಿದರು.

ಕಲ್ಯಾಣಮ್ಮ ಮತ್ತು ಶ್ಯಾಮಲಾ ಅವರ ಕಥನವನ್ನು ಅಧ್ಯಯನ ಮಾಡುವುದು ಅಂದರೆ ಹೊಸಗನ್ನಡದ ಲೇಖಕಿಯರ ಗದ್ಯಸಾಹಿತ್ಯರಚನೆಯ ಮೊದಲ ಹೆಜ್ಜೆಗಳ ಮೇಲೆ ಹೆಜ್ಜೆಯಿಟ್ಟು ನಡೆದಂತೆ. ಈಗ ಈ ಲೇಖಕಿಯರ ಬದುಕು ಬರಹಗಳ ಪರಿಚಯ ಮಾಡಿಕೊಳ್ಳೋಣ.

ಆರ್.ಕಲ್ಯಾಣಮ್ಮ: ಇವರು 1891ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಅವರ ಪ್ರಾಥಮಿಕ ಶಿಕ್ಷಣ ಆರ್ಯಬಾಲಿಕಾ ಶಾಲೆಯಿಂದ ಪ್ರಾರಂಭವಾಯಿತು. ಅಂದಿನ ಸಂಪ್ರದಾಯದಂತೆ ಅವರಿಗೆ ಹತ್ತನೇ ವಯಸ್ಸಿಗೇ ಮದುವೆಯಾಯಿತು. ದುರಾದೃಷ್ಟವಶಾತ್ ಮದುವೆಯಾದ ಮೂರು ತಿಂಗಳಲ್ಲೇ ಆ ಬಾಲಕನು ಅಕಾಲ ಮರಣಕ್ಕೆ ಬಲಿಯಾದನು. ಈ ಘಟನೆಯಿಂದ ಕಲ್ಯಾಣಮ್ಮನ ಬಾಲ್ಯಜೀವನ ಬಿರುಗಾಳಿಗೆ ಸಿಕ್ಕ ತರಗೆಲೆಯಾಯಿತು. ಜೀವನದಲ್ಲಿ ವಿಧವೆಯ ಪಟ್ಟವನ್ನು ಕಟ್ಟಿಕೊಂಡು ಬೇರೆಯವರ ಸೇವೆಯನ್ನು ಮಾಡುತ್ತಾ ನಿಂದನೆಗಳನ್ನು ಸಹಿಸುತ್ತಾ ದಿನಗಳನ್ನು ದೂಡಬೇಕಾಯಿತು. ಕ್ರಮೇಣ ಬಾಲಕಿ ಕಲ್ಯಾಣಮ್ಮ ಈ ಸಮಸ್ಯೆ ತನಗೊಬ್ಬಳಿಗೇ ಬಂದದ್ದಲ್ಲವೆಂಬುದನ್ನು ಅರಿತು ಅದಕ್ಕೆ ಪರಿಹಾರಮಾರ್ಗವನ್ನು ತಿಳಿಯಬಯಸಿದರು.

ತಂದೆಯ ಬೆಂಬಲದಿಂದ ವಿಚಾರಶಕ್ತಿ ಬೆಳೆಸಿಕೊಂಡಿದ್ದ ಹಾಗೂ ಸಾಹಿತ್ಯಾಭ್ಯಾಸದಲ್ಲಿ ಆಸಕ್ತಿ ಹೊಂದಿದ್ದ ಕಲ್ಯಾಣಮ್ಮ ತಮ್ಮ ವಿಚಾರಗಳಿಗೆ ಬರಹದ ರೂಪ ಕೊಡಲು ಸಮರ್ಥರಾದರು. ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯಗಳು ಸ್ತ್ರೀಗೆ ಬಿಡುಗಡೆಯ ದಾರಿಗಳನ್ನು ತೆರೆಯಬಲ್ಲವು ಎಂಬುದು, ಇವರು ತಮ್ಮ ಓದು ಮತ್ತು ಜೀವನಾನುಭವಗಳಿಂದ ಕಂಡುಕೊಂಡ ಸತ್ಯವಾಗಿತ್ತು. ತಮ್ಮ ಲೇಖನವೊಂದರಲ್ಲಿ ಇವರು `ಸ್ತ್ರೀಗೆ ಶಿಕ್ಷಣ ನೀಡುವುದರ ಮೂಲಕ ಮನೆಯನ್ನು ಬೆಳೆಸಿದರೆ ನಾಡು ತನ್ನಷ್ಟಕ್ಕೆ ತಾನು ಬೆಳೆಯುವುದು’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸ್ತ್ರೀಶಿಕ್ಷಣದ ಪರವಾದ ತಮ್ಮ ವಿಚಾರಗಳ ಫಲವಾಗಿ 1913ರಲ್ಲಿ ಇವರು ಶ್ರೀ ಶಾರದಾ ಸ್ತ್ರೀಸಮಾಜವನ್ನು ಪ್ರಾರಂಭಿಸಿದರು.

ಕಲ್ಯಾಣಮ್ಮನವರು ತಮ್ಮ ಸಾಮಾಜಿಕ ಜೀವನವನ್ನು ಪ್ರಾರಂಭಿಸಿದ್ದು ಬರವಣಿಗೆಯಿಂದ. ಇವರು `ಭಕ್ತೆ ಮೀರಾ’, `ಮಾಧವಿ’, `ನಿರ್ಮಲಾ’, `ಸತೀ ಪದ್ಮಿನಿ’, `ಷಹಜಹಾನ್’, `ಬ್ಯಾರಿಷ್ಟರ್ ರಾಮಚಂದ್ರ’ ಮುಂತಾದ ಕಥನಕೃತಿಗಳನ್ನು ರಚಿಸಿದ್ದಾರೆ. ತಮ್ಮೊಳಗಿನ ನೋವನ್ನು, ತಮ್ಮ ಪರಿಸರವನ್ನು ಕುರಿತಾದ ಅನಿಸಿಕೆಗಳನ್ನು ಪ್ರಕಟಿಸುವುದಕ್ಕಾಗಿ, ಆಗಿನ ಪ್ರಸಿದ್ಧ ಪತ್ರಿಕೆಗಳಾದ `ಸಾಧ್ವಿ’, `ಒಕ್ಕಲಿಗರ ಪತ್ರಿಕೆ’, `ನುಡಿಗನ್ನಡಿ’, `ವಿದ್ಯಾದಾಯಿನಿ’, `ಕೊಡಗು’ ಮುಂತಾದ ಪತ್ರಿಕೆಗಳಲ್ಲಿ ಕಥೆಗಳನ್ನು, ಲೇಖನಗಳನ್ನು ಬರೆದರು. ಕಲ್ಯಾಣಮ್ಮನವರ ಬದುಕು ಬರಹಗಳನ್ನು ಕುರಿತು `ಕಲ್ಯಾಣ ಸರಸ್ವತಿ’ ಎಂಬ ಕೃತಿಯನ್ನು ರಚಿಸಿರುವ ವಿಮರ್ಶಕಿ ಡಾ.ಬಿ.ಎನ್.ಸುಮಿತ್ರಾಬಾಯಿಯವರು ತಮ್ಮ ಲೇಖನವೊಂದರಲ್ಲಿ ಗುರುತಿಸಿರುವಂತೆ, ಈ ಹಿರಿಯ ಲೇಖಕಿಯು ತಮ್ಮ ಕಥೆ ಕಾದಂಬರಿಗಳಲ್ಲಿ ರಜಪೂತ ಮಹಿಳೆಯನ್ನು ಆದರ್ಶವೆಂದು ಬಿಂಬಿಸಿದ್ದಾರೆ. “ಸ್ತ್ರೀಯು ವಿವೇಕರಹಿತಳಾಗಿ ಪುರುಷನ ಅಧೀನದಲ್ಲಿ ಬಿದ್ದಿದ್ದು ಅವನ ಮನವಿನೋದ ಪಡಿಸಿ, ಅವನಿಗೆ ಆಭರಣದಂತಿರಬೇಕೆಂದು ಅವಳು ಸೃಷ್ಟಿಸಲ್ಪಡಲಿಲ್ಲ. ಈಕೆಯು ತನಗೂ ಮತ್ತು ಇತರರಿಗೂ ಸೌಖ್ಯವನ್ನುಂಟು ಮಾಡುವುದಕ್ಕೆ ಮತ್ತು ಅವಳು ತನ್ನ ಜೀವಿತಕಾಲದಲ್ಲಿ ನಡೆಸಬೇಕಾದ ಅನೇಕ ಉತ್ತರವಾದಿ ಕಾರ್ಯಗಳನ್ನು ವಿರಚಿಸಿ, ಇತರರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಅವರನ್ನು ಶಿಕ್ಷಿಸಿ ದಯಾರ್ದ್ರಮಾನಸರಾಗುವಂತೆ ಮಾಡುವುದಕ್ಕಾಗಿಯೇ ಸ್ತ್ರೀಯು ಸೃಷ್ಟಿಸಲ್ಪಟ್ಟಿದ್ದಾಳೆ. ಹಾಗಲ್ಲದೆ ತಾನು ಮಾತ್ರ ಶೃಂಗರಿಸಿಕೊಂಡು ಹೊಟ್ಟೆಯನ್ನು ತುಂಬಿಸಿಕೊಂಡು ಕಾಲ ಕಳೆಯುತ್ತಿರಬೇಕೆಂಬ ಉದ್ದೇಶಕ್ಕಾಗಿರುವುದಿಲ್ಲ.” ಎಂಬ ಚಿಂತನೆ ಇಲ್ಲಿ ಮೂಡಿದೆ.

1922ರಲ್ಲಿ ಕಲ್ಯಾಣಮ್ಮನವರು `ಪ್ರಿಯಂವದಾ’ ಎಂಬ ಕಾದಂಬರಿಯನ್ನು ಪ್ರಕಟಿಸಿದ್ದಾರೆ. ಅದರ ವಸ್ತು ವರದಕ್ಷಿಣೆಯ ಸಮಸ್ಯೆ. ಅದರ ನಾಯಕನಾದ ಸತ್ಯೇಂದ್ರನ ಬಾಯಿಂದ ಲೇಖಕಿಯು ಈ ಮಾತುಗಳನ್ನು ಹೇಳಿಸಿದ್ದಾರೆ – “ಇದರಲ್ಲಿ (ಅರ್ಥಾತ್ ವರದಕ್ಷಿಣೆಯ ನಿರ್ಮೂಲನ ಕಾರ್ಯದಲ್ಲಿ) ಸ್ತ್ರೀ ಪುರುಷರಿಬ್ಬರೂ ಬೆರೆತು ಕೆಲಸ ಮಾಡಬೇಕು. ಇಲ್ಲಿ ನೋಡು! ಪುರುಷನು ಸಭೆಯಲ್ಲಿ ನಿಂತು ಧೈರ್ಯದಿಂದ ವರದಕ್ಷಿಣೆ ತೆಗೆದುಕೊಳ್ಳಕೂಡದೆಂದೂ, ಬಾಲ್ಯವಿವಾಹ ಮಾಡಕೂಡದೆಂದೂ, ಸ್ತ್ರೀಯರಿಗೆ ಸ್ವಾತಂತ್ರ್ಯವನ್ನು ಕೊಡಬೇಕೆಂದೂ ಉಪನ್ಯಾಸ ಮಾಡುವನು. ಅದೇ ಪುರುಷನು ಮನೆಗೆ ಬಂದರೆ ಕನ್ಯೆಗೆ ವಯಸ್ಸಾಗಿ ಹೋಗುವುದೆಂದೂ, ಹೆಚ್ಚು ಹಣವನ್ನು ಕೊಟ್ಟಾದರೂ ಜಾಗ್ರತೆಯಾಗಿ ವಿವಾಹವನ್ನು ನೆರವೇರಿಸಬೇಕೆಂದೂ ಹೆಂಡತಿಯು ಪೀಡಿಸಿ ಕಾಡಿಸುವಳು. ಆಗ ಅವನು ಏನು ಮಾಡಿಯಾನು?…… ಆದ್ದರಿಂದ ಈ ವಿಷಯಗಳಲ್ಲಿ ಪುರುಷರಿಗಿಂತ ಸ್ತ್ರೀಯರು ವಿದ್ಯಾವತಿಯರಾಗಿ ಪುರುಷರ ಮನಸ್ಸಿನಂತೆ ನಡೆಯಲು ಪ್ರಯತ್ನಿಸದ ಹೊರತು. ಈ ದುರಾಚಾರಗಳು ನಿರ್ಮೂಲವಾಗುವುದು ಅಸಂಭವವು”.

ಒಟ್ಟಿನಲ್ಲಿ ಕಲ್ಯಾಣಮ್ಮನವರು ತಾವು ಬರೆದ ಕಥೆ, ಕಾದಂಬರಿ ಮತ್ತು ಲೇಖನಗಳಲ್ಲಿ `ಸ್ತ್ರೀಯ ಉತ್ತಮಿಕೆಯ ಮೂಲಕ ಸಮಾಜದ ಉತ್ತಮಿಕೆ’ ಎಂಬ ವಿಚಾರವನ್ನು ಕೇಂದ್ರವಾಗಿರಿಸಿಕೊಂಡಿದ್ದರು.

 *****

ಶ್ಯಾಮಲಾ ಅವರ ಬದುಕು ಬರಹಗಳ ಪರಿಚಯ: ಧಾರವಾಡದಲ್ಲಿ 1910ರಲ್ಲಿ ಹುಟ್ಟಿದ ಶ್ಯಾಮಲಾದೇವಿ ಬೆಳಗಾಂವಕರ್ ಇದೇ ಸ್ಥಳದಲ್ಲಿ ಸಾಹಿತ್ಯದ ಕೆಲಸ ಮಾಡಿ 1943ರಲ್ಲಿ ಕೊನೆಯುಸಿರೆಳೆದರು. ತಮ್ಮ ಮಾತೃಭಾಷೆ ಮರಾಠಿಯಾದರೂ ತಮ್ಮ ನಾಡಿನ ಭಾಷೆಯಾದ ಕನ್ನಡಕ್ಕಾಗಿ ದುಡಿದರು.

ಶ್ಯಾಮಲಾ ಅವರು 1934ರಲ್ಲಿ `ಹೂಬಿಸಿಲು’ ಎಂಬ ಕಥಾಸಂಕಲನದ ಮೂಲಕ ತಮ್ಮ ಬರಹಗಳನ್ನು ಪ್ರಕಟಿಸಲು ಪ್ರಾರಂಭಿಸಿದರು. ಅವರ `ಹೊಂಬಿಸಿಲು’ ಕಥಾಸಂಕಲನ ಮರಣೋತ್ತರವಾಗಿ 1943ರಲ್ಲಿ ಪ್ರಕಟವಾಯಿತು. ಕತೆಗಳನ್ನಷ್ಟೇ ಅಲ್ಲದೆ ವಿಮರ್ಶೆ, ಪ್ರಬಂಧ, ಅನುವಾದ, ಸಂಗ್ರಹ, ಪತ್ರಿಕಾಬರಹ ಮುಂತಾದವನ್ನೂ ಈ ಲೇಖಕಿ ಬರೆದರು. ಹಿರಿಯ ವಿಮರ್ಶಕರಾದ ಡಾ.ಜಿ.ಎಸ್. ಆಮೂರರು ಗುರುತಿಸುವಂತೆ “ಮಹಿಳೆಯರಿಗೆ ಸೀಮಿತವಾಗಿ ಹೇಳುವುದಾದರೆ ಸಣ್ಣಕತೆಯ ಪ್ರಾರಂಭವಾದುದು ಈ (ಇಪ್ಪತ್ತನೆಯ) ಶತಮಾನದ ಮೂರನೆಯ ದಶಕದಲ್ಲಿ. ಉತ್ತರ ಕರ್ನಾಟಕದಲ್ಲಿ ಶ್ಯಾಮಲಾದೇವಿ ಬೆಳಗಾಂವಕರ, ಕೊಡಗಿನ ಗೌರಮ್ಮ ಹಾಗೂ ದಕ್ಷಿಣ ಕನ್ನಡದ ಸರಸ್ವತೀಬಾಯಿ ರಾಜವಾಡೆ – ಇವರನ್ನು ಈ ಪ್ರಕಾರದ ಆದ್ಯೆಯರು ಎಂದು ಗುರುತಿಸಬೇಕಾಗುತ್ತದೆ. ಮಾಸ್ತಿಯವರಿಗಿಂತ ಮೊದಲು ಸಣ್ಣಕತೆಗಳನ್ನು ಬರೆದವರಿದ್ದಂತೆ ಇವರಿಗಿಂತ ಮೊದಲು ಸಣ್ಣಕತೆಗಳನ್ನು ಬರೆದ ಮಹಿಳೆಯರಿದ್ದಾರೆ. ಆದರೆ ಇವರಲ್ಲಿ ಯಾರೂ ಈ ಮೂವರಷ್ಟು ಮಹತ್ವದ ಪ್ರಯೋಗಗಳನ್ನು ಮಾಡಿಲ್ಲ”.

ಶ್ಯಾಮಲಾ ಅವರು ತಮ್ಮ ಕಾಲದ ಲೇಖಕಿಯರು ಮಾಡುತ್ತಿದ್ದಂತೆ ವಿಧವಾಸಮಸ್ಯೆಯನ್ನು ಕೈಗೊತ್ತಿಕೊಳ್ಳಲಿಲ್ಲ. ಬದಲಾಗಿ ವಿಷಮವಿವಾಹ, ವರದಕ್ಷಿಣೆ, ಕೆಳವರ್ಗದವರ ಕಷ್ಟನಷ್ಟಗಳು ಅವರಿಗೆ ಹೆಚ್ಚು ಒದಗಿದ ಕಥಾವಸ್ತುಗಳಾಗಿವೆ. ಹಾಸ್ಯಪ್ರಜ್ಞೆಯನ್ನು ಹೊಂದಿದ್ದ ಈ ಲೇಖಕಿ ಬದುಕಿನ ನೋವನ್ನು ಚಿತ್ರಿಸಿದಂತೆ ನಲಿವನ್ನು ಸಹ ಚಿತ್ರಿಸಿದರು. ಬಡವರ, ಕೆಳವರ್ಗದವರ ಹಾಗೂ ದೇವದಾಸಿಯರ ಬದುಕನ್ನು ಕುರಿತು ಉತ್ತಮ ಒಳನೋಟಗಳನ್ನು ಕೊಟ್ಟರು.

ಶ್ಯಾಮಲಾ ಅವರ ಸಂವೇದನೆಯನ್ನು ಪ್ರಾತಿನಿಧಿಕವಾಗಿ ತೋರಿಸುವ ಒಂದು ಕಥೆ `ನಡೆದು ಬಂದ ಲಕ್ಷ್ಮಿ’. ಇದರಲ್ಲಿ ಕತೆಗಾರ್ತಿಯು ದ್ಯಾಂವಕ್ಕ ಎಂಬ ಜೋಗತಿಯನ್ನು ಮುಖ್ಯ ಪಾತ್ರವಾಗಿ ಇಟ್ಟುಕೊಂಡಿದ್ದಾರೆ. ಇದರಲ್ಲಿ ಗಂಡಸೊಬ್ಬನ ಜೊತೆ ಕೆಲವರ್ಷ ಮದುವೆಯಾದ ಹೆಂಡತಿಯಂತೆ ನಿಷ್ಠೆಯಿಂದ ಬದುಕಿದ ದ್ಯಾಂವಕ್ಕ ಅವನು ದುರ್ವರ್ತನೆ ತೋರಿಸಲಾರಂಭಿಸಿದ ನಂತರ ಮನೆಯಿಂದ ಅವನನ್ನು ಓಡಿಸಿ, ಧೈರ್ಯವಾಗಿ ತನ್ನ ಕಾಲ ಮೇಲೆ ತಾನು ನಿಂತು ಬದುಕಲಾರಂಭಿಸುತ್ತಾಳೆ. ಹೂತೋಟ, ಹಣ್ಣಿನ ತೋಟಗಳ ಗುತ್ತಿಗೆ ಹಿಡಿದು ರಾತ್ರಿ ಹಗಲು ದುಡಿದು ವ್ಯವಹಾರಕುಶಲೆಯಾಗಿ ತನ್ನ ಬದುಕನ್ನು ಚಂದಗೊಳಿಸಿಕೊಳ್ಳುತ್ತಾಳೆ. ಹೂವಿನ ಬುಟ್ಟಿ ಹೊತ್ತು ಸೊಗಸಾದ ಸೀರೆ, ಒಡವೆ ತೊಟ್ಟು ಅವಳು ಬರುತ್ತಿದ್ದರೆ ನಡೆದು ಬಂದ ಲಕ್ಷ್ಮಿಯಂತೆ ಕಾಣಿಸುತ್ತಿದ್ದಳು ಎಂದು ಕತೆಯಲ್ಲಿನ ಒಂದು ಪಾತ್ರ ವರ್ಣಿಸುತ್ತದೆ. ದ್ಯಾಂವಕ್ಕನ ಪೈಲ್ವಾನನಂತಹ ಮಗ ವಿವಾಹಿತ ಹೆಣ್ಣೊಬ್ಬಳನ್ನು ಪ್ರೀತಿಸಿ ಮನೆಯಲ್ಲಿ ಒಡವೆ ಕದ್ದು ಅವಳೊಂದಿಗೆ ಓಡಿಹೋಗಿ, ದುಡ್ಡು ಖರ್ಚು ಮಾಡಿ, ಕೊನೆಗೆ ಪೋಲೀಸರ ಅತಿಥಿಯಾಗುತ್ತಾನೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ದ್ಯಾಂವಕ್ಕ ಧೃತಿಗೆಡದೆ ಪೋಲೀಸರ ಬಳಿ ಕಾಡಿಬೇಡಿ ಮಗನನ್ನು ಬಿಡಿಸಿಕೊಂಡು ಅವನ ಪ್ರೇಯಸಿಯ ಇಚ್ಛೆಯಂತೆ ಅವಳ ಮೊದಲ ಗಂಡನಿಗೆ ಸೋಡಚೀಟಿ ಕೊಡಿಸುತ್ತಾಳೆ. ಆ ಹುಡುಗಿ ಮತ್ತು ತನ್ನ ಮಗನಿಗೆ ಮದುವೆ ಮಾಡಿ ಅವರು ಸುಖವಾಗಿರುವಂತೆ ನೋಡಿಕೊಳ್ಳುತ್ತಾಳೆ. ತನಗೆ ಸಿಗದ ದಾಂಪತ್ಯದ ನೆಮ್ಮದಿ ತನ್ನ ಮಗ ಸೊಸೆಗೆ ಸಿಗಲಿ ಎಂಬ ದೊಡ್ಡ ಮನಸ್ಸು ಈಕೆಯದು. ತಾವಿದ್ದ ಕಾಲದಲ್ಲಿ ಇಂತಹ ಗಟ್ಟಿಗಿತ್ತಿ ಸ್ತ್ರೀಪಾತ್ರವನ್ನು ಚಿತ್ರಿಸಿದ್ದಕ್ಕಾಗಿ ಓದುಗರಿಗೆ ಶ್ಯಾಮಲಾ ಅವರ ಬಗ್ಗೆ ಮೆಚ್ಚುಗೆ ಮೂಡುತ್ತದೆ.

ತಮ್ಮ ಕಥೆಗಳಲ್ಲಿ ಶ್ಯಾಮಲಾ ಅವರು ಚಿತ್ರಿಸಿರುವ ವೈವಿಧ್ಯಮಯ ಪಾತ್ರಗಳು ಹಾಗೂ ಜನಪದೀಯ ಅಂಶಗಳ ಬಗೆಗೆ ವಿಮರ್ಶಕರ ಪ್ರಶಂಸೆ ವ್ಯಕ್ತವಾಗಿದೆ. ಇವರ ಬದುಕು ಬರಹಗಳನ್ನು ಕುರಿತು `ಶ್ಯಾಮಲಾ ಸಂಚಯ’ ಎಂಬ ಕೃತಿಯನ್ನು ರಚಿಸಿರುವ ಡಾ.ವಿಜಯಾ ದಬ್ಬೆ ಹೇಳುವಂತೆ “ತಮ್ಮ ಕತೆಗಳಲ್ಲಿ ಅವರು ತಂದಿರುವ ಅನೇಕ ಜನಪದ ಆಚಾರ, ವಿಚಾರ, ನಂಬಿಕೆ, ಸಂಪ್ರದಾಯಗಳು, ಜನಪರ ಭಾಷೆ ಎದ್ದು ಕಾಣುವಂಥವಾಗಿವೆ. ಅವರು ವಿಶೇಷವಾಗಿ ಅಭ್ಯಾಸ ಮಾಡದಿದ್ದರೂ ಅವರ ಸಹಜ ವ್ಯಕ್ತಿತ್ವದ ಒಂದು ಭಾಗ ಜನಪದ ಸಂಪತ್ತಾಗಿತ್ತು”.

ಶ್ಯಾಮಲಾ ಅವರ ವ್ಯಕ್ತಿತ್ವದ ಇನ್ನೊಂದು ಮುಖ್ಯ ವಿಷಯವೆಂದರೆ ಅವರು ಸ್ತ್ರೀಪರ ನೋಟದ ವಿಮರ್ಶೆ ಮಾಡುತ್ತಿದ್ದುದು. ಮಹಿಳೆ, ಸಮಾಜ, ಸಾಹಿತ್ಯವನ್ನು ಕುರಿತು ಅವರು ಬರೆದ ಲೇಖನಗಳು ಅವರ ಸ್ತ್ರೀಸಂವೇದನೆಯನ್ನು ತೋರಿಸುತ್ತವೆ. ಈ ಬಗೆಯ ಬರವಣಿಗೆಯ ಇತಿಹಾಸವನ್ನು ಪ್ರಾರಂಭಿಸಿದ ಕನ್ನಡ ಲೇಖಕಿಯರಲ್ಲಿ ಶ್ಯಾಮಲಾ ಕೂಡ ಒಬ್ಬರು. ಬೆಳಗಾವಿಯಲ್ಲಿ ನಡೆದ ನಾಲ್ಕನೇ ಸಾಹಿತ್ಯ ಸಮ್ಮೇಳನದಲ್ಲಿ `ಎದ್ದೇಳಿರಿ ಮತ್ತು ಸಾಹಿತ್ಯದಲ್ಲಿ ನಿಮ್ಮ ಗೌರವದ ಸ್ಥಾನವನ್ನು ಬೇಗನೆ ಕಂಡುಕೊಳ್ಳಿರಿ’ ಎಂದು ತಮ್ಮ ಸಹಲೇಖಕಿಯರಿಗೆ ಕರೆಕೊಟ್ಟ ಉತ್ಸಾಹಿ ಇವರು.

ಹೀಗೆ ಆರ್. ಕಲ್ಯಾಣಮ್ಮ ಮತ್ತು ಶ್ಯಾಮಲಾ ಅವರು ಆಧುನಿಕ ಕನ್ನಡದ ಮೊದಲ ಪೀಳಿಗೆಯ ಲೇಖಕಿಯರಲ್ಲಿ ಗಮನಾರ್ಹ ಸ್ಥಾನವನ್ನು ಪಡೆಯುತ್ತಾರೆ ಮತ್ತು ಕನ್ನಡ ಸಾಹಿತ್ಯದ ಶ್ರೀಮಂತಿಕೆಯು ಇವರ ಕಥನದಿಂದ ಹೆಚ್ಚಿದೆ ಅನ್ನಬಹುದು.

 

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ಬದುಕಿನಲ್ಲಿ....

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ