ಹಾಗೆ ಆಡುವಾಗ ಅವನಲ್ಲಿ ಅಮ್ಮನಿಗೆ ತಾನು ಸುಳ್ಳು ಹೇಳುತ್ತಿದ್ದೇನೆ ಎಂಬ ಪಾಪಪ್ರಜ್ಞೆ ಇತ್ತು. ಅವನು ಆ ದಿನ ಮಧ್ಯಾಹ್ನ ಗೋವಿಂದಾಚಾರ್ಯರಲ್ಲಿ ಊಟ ಮುಗಿಸಿ ಒಂದರ್ಧ ಗಂಟೆ ಹರಟೆ ಹೊಡೆಯುತ್ತಾ ಕುಳಿತಾಗ ‘ಭಾವ, ನಾನು ಮಧ್ಯಾಹ್ನವೇ ಮನೆಗೆ ಊಟಕ್ಕೆ ಹೋಗಬೇಕಿತ್ತು. ಇನ್ನು ತಡಮಾಡಿದರೆ ಅಪ್ಪ ಅಮ್ಮನ ಮಾತು ಕೇಳುವುದು ಕಷ್ಟ’ ಎಂದು ಸುಮಾರು ಎರಡೂವರೆ ಗಂಟೆಯ ಸುಮಾರಿಗೇ ಗೋವಿಂದಾಚಾರ್ಯರ ಮನೆಯಿಂದ ಹೊರಟಿದ್ದ. ಹಾಗೆ ಹೊರಟವನು ನೇರವಾಗಿ ಮನೆಗೆ ಹೋಗದೆ ಗೋವಿಂದಾಚಾರ್ಯರ ಮನೆಯ ‘ಪಾಡಿ’ಯ ಹಿಂಬದಿಯಲ್ಲಿರುವ ಮೇರಿಯ ಮನೆಗೆ ಹೋಗಿದ್ದ.
ಡಾ. ನಾ. ಮೊಗಸಾಲೆಯವರ “ಇದ್ದೂ ಇಲ್ಲದ್ದು” ಹೊಸ ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ
ಉಡುಪಿಗೆ ಹೋಗುವ ರಾತ್ರೆ ಬಸ್ಸನ್ನು ರಮಾನಂದ ಹತ್ತಿದ. ಆದರೆ, ಎಷ್ಟೋ ವರುಷದ ಮೇಲೆ ತಾನು ಹುಟ್ಟಿದ ಊರಿಗೆ ಹೊರಡುತ್ತಿದ್ದೇನೆ ಎನ್ನುವ ಸಂಭ್ರಮ ಅವನಲ್ಲಿ ಇರಲಿಲ್ಲ. ಊರಲ್ಲಿ ಅಪ್ಪ ಅಮ್ಮ ಇಬ್ಬರೂ ಇಲ್ಲ. ಅಪ್ಪ ಇದ್ದಾಗ, ತಾನು ಭಾರತಿಯನ್ನು ರಿಜಿಸ್ಟರ್ಡ್ ವಿವಾಹವಾಗುವ ತನಕ, ತನ್ನನ್ನು ಪ್ರೀತಿಯಿಂದ ನಡೆಸಿಕೊಳ್ಳುತ್ತಿದ್ದರೂ, ಆ ಮೇಲೆ ಮೊದಲು ಪ್ರೀತಿಸಿದ್ದಕ್ಕಿಂತ ನಾಲ್ಕುಪಟ್ಟು ದ್ವೇಷವನ್ನು ತನ್ನ ಮೇಲೆ ತೋರುತ್ತಿದ್ದರು ಎನ್ನುವುದು ಅವನ ಅನುಭವವಾಗಿತ್ತು. ಹಾಗೆ ನೋಡಿದರೆ, ಮದುವೆಯ ನಂತರ ಅವನು ಅಪ್ಪನನ್ನು ಇದಿರಿಸಲು ಹೋಗಲಿಲ್ಲ. ಇದಿರಿಸುವ ಧೈರ್ಯವೂ ಅವನಲ್ಲಿ ಇರಲಿಲ್ಲ. ಅವನ ಸ್ನೇಹಿತರಲ್ಲಿ ಅವನ ಅಪ್ಪ ನಂಜು ನಂಜಿನ ಮಾತುಗಳನ್ನು ಆಡುವುದಷ್ಟೇ ಅಲ್ಲದೆ, ಅಪ್ಪ ತನ್ನ ಪಾಲಿಗೆ ಮಗ ಸತ್ತು ಹೋಗಿದ್ದಾನೆ ಎಂದು ಹೇಳುವುದನ್ನು ಗೋವಿಂದ ಭಾವನೇ ಖುದ್ದು ತನಗೆ ಹೇಳಿದಾಗ, ರಮಾನಂದನ ಮನಸ್ಸಿಗೆ ನೋವಾದರೂ, ‘ಇರಲಿ’ ಎಂದು ಆತ ಯಾವ ಪ್ರತಿಕ್ರಿಯೆಯನ್ನೂ ಕೊಡದೆ ಸುಮ್ಮನಾಗುತ್ತಿದ್ದ. ಆದರೆ ಗೋವಿಂದ ಆಚಾರ್ಯರು ಮಾತ್ರ ಆಗೊಮ್ಮೆ ಈಗೊಮ್ಮೆ ‘ಹೇಗಿದ್ದಿ ರಮಾನಂದ?’ ಎಂದು ದೂರವಾಣಿಯಲ್ಲಿ ರಮಾನಂದನನ್ನು ಪ್ರಶ್ನಿಸುತ್ತಿರುವುದು ರಮಾನಂದನಿಗೆ ವಿಶೇಷ ಸುಖ ನೀಡುತ್ತಿತ್ತು. ಒಂದೆರಡು ಬಾರಿ ಸಂಬಂಧಿಕರ ಮದುವೆಗೆಂದು ಗೋವಿಂದಾಚಾರ್ಯರು ಬೆಂಗಳೂರಿಗೆ ಬಂದಿದ್ದಾಗ ಕಷ್ಟಪಟ್ಟು ರಮಾನಂದನ ಮನೆಯನ್ನು ಹುಡುಕಿ, ಅಲ್ಲಿ ಊಟ ತೀರಿಸಿ ಹರಟೆ ಹೊಡೆದು ಬಂದದ್ದೂ ಉಂಟು. ಅಂಥ ಸಂದರ್ಭದಲ್ಲಿ ಮಾತಿನ ನಡುವೆ ‘ನಿನಗೊಂದು ಮಗುವಾಗಲಿ ರಮಾನಂದ, ಆಮೇಲೆ ನಿನ್ನ ಅಪ್ಪ ಆ ಮಗುವನ್ನು ಹೇಗೆ ಒಪ್ಪಿಕೊಳ್ಳುತ್ತಾರೆ ನೋಡು!’ ಎಂದಿದ್ದರು. ಆದರೆ ಮದುವೆಯಾಗಿ ಎಂಟು ವರುಷವಾದರೂ ರಮಾನಂದನಿಗೆ ಮಗುವಾಗಿರಲಿಲ್ಲ. ಆ ಸಂದರ್ಭದಲ್ಲಿ ರಮಾನಂದನ ಅಪ್ಪ ದಾಸುಭಟ್ಟರು ‘ನೋಡಿದೆಯಾ ಗೋವಿಂದ. ಆ ಬಿಕನಾಸಿ ರಮಾನಂದನಿಗೆ ಮಕ್ಕಳಾಗುವುದಿಲ್ಲ ಖಂಡಿತ. ಅದು ನನ್ನನ್ನು ಅವನು ಹೊಟ್ಟೆ ಉರಿಸಿದ್ದರ ಶಾಪ!’ ಎಂದು ಆಡುವುದೂ ಇತ್ತು. ಗೋವಿಂದಾಚಾರ್ಯರಿಗೆ ಆಗ ಹೇಗೆ ಉತ್ತರಿಸಬೇಕೆಂದು ತೋಚುತ್ತಿದ್ದಿಲ್ಲ. ಮೌನದಲ್ಲೇ ಅವರು ಅದಕ್ಕೆ ಪ್ರತಿಕ್ರಿಯಿಸುತ್ತಿದ್ದರು. ಅಂಥ ಸಂದರ್ಭದಲ್ಲಿ ದಾಸುಭಟ್ಟರಿಗೆ ವಿಪರೀತ ಕೋಪ ಬಂದು ಬಾಯಿ ತುಂಬ ವೀಳ್ಯದೆಲೆ ಹಾಕಿದ್ದನ್ನು ಉಗುಳಲು ಅಂಗಳದ ತುದಿಗೆ ಹೋಗಿ, ‘ನೀನೂ ಅವನ ಜಾತಿಗೇ ಸೇರಿದವನು ಗೋವಿಂದ. ಊಟ ಕೌರವರಲ್ಲಿ ಕೂಟ ಪಾಂಡವರಲ್ಲಿ ಎಂಬ ಗಾದೆ ನಿನಗೆ ಚೆನ್ನಾಗಿ ಅನ್ವಯಿಸುತ್ತದೆ’ ಎಂದು ಹೇಳಿ, ‘ನನ್ನ ಮಗನ ರಿಜಿಸ್ಟ್ರಿ ಮದುವೆಗೆ ನೀನೇ ಕಾರಣ ಎಂದು ನನಗೆ ಗೊತ್ತುಂಟು. ನೀನು ‘ನಾನಲ್ಲ’, ‘ನಾನಲ್ಲ’ ಎಂದು ಹತ್ತು ಸಾವಿರ ಸಲ ಹೇಳಿದರೂ ನಾನು ಅದನ್ನು ಒಪ್ಪುವುದಿಲ್ಲ. ಯಾಕೆಂದರೆ, ನನ್ನ ಮಗನಿಗೆ ನೀನು ಧೈರ್ಯಕೊಡದಿದ್ದರೆ ಅವನು ಖಂಡಿತ ಆ ಕಿರಿಸ್ತಾನದ ಹುಡುಗಿಯನ್ನು ಮದುವೆಯಾಗಲು ಸಾಧ್ಯವಿರಲಿಲ್ಲ’ ಎಂದು ಸದಾ ಹಂಗಿಸುತ್ತಿದ್ದುನ್ನು ಗೋವಿಂದಾಚಾರ್ಯರು ಸಾಂದರ್ಭಿಕವಾಗಿ ರಮಾನಂದನಿಗೆ ಹೇಳುವುದಿತ್ತು.
ಹಾಗೆ ನೋಡಿದರೆ, ಅಪ್ಪ ಹೇಳುವುದರಲ್ಲಿ ಸತ್ಯ ಇದೆ ಎನ್ನುವುದು ರಮಾನಂದನ ಆತ್ಮಕ್ಕೆ ಗೊತ್ತುಂಟು. ಅವನ ಮತ್ತು ಮೇರಿಯ(ಭಾರತಿಯ) ಪ್ರೇಮಪ್ರಕರಣವನ್ನು ತನ್ನ ಗೆಳೆಯರಲ್ಲೂ ಹಂಚಿಕೊಳ್ಳದಿದ್ದ ರಮಾನಂದ, ಒಂದು ಸಲ ಈ ವಿಷಯವನ್ನು ಗೋವಿಂದ ಭಾವನಲ್ಲಿ ಹೇಳಬೇಕೆಂದೇ ಬೆಂಗಳೂರಿನಿಂದ ಊರಿಗೆ ಬಂದಿದ್ದ. ಬಂದವನು ಸ್ವಲ್ಪ ಮಂಕಾಗಿ ಇದ್ದುದನ್ನು ಗಮನಿಸಿದ ದಾಸುಭಟ್ಟರು ‘ಏನೋ ಯಾಕೆ ಸಪ್ಪೆ ಮುಖ ಹಾಕಿಕೊಂಡ ಹಾಗಿದ್ದಿಯಲ್ಲ?’ ಎಂದು ಕೇಳಿದ್ದಕ್ಕೆ, ರಮಾನಂದ “ಏನಿಲ್ಲಪ್ಪ, ಆಫೀಸಿನ ಕೆಲಸದ ಒತ್ತಡ ಸಾಕು ಸಾಕಾಗಿದೆ. ರಾತ್ರೆ ಮಲಗಿದರೆ ನಿದ್ದೆ ಬರುವುದಿಲ್ಲ. ಅಷ್ಟೂ ಒತ್ತಡ’ ಎಂದು ಹಾರಿಕೆಯ ಉತ್ತರ ನೀಡಿದ್ದ. ಆದರೆ ದಾಸುಭಟ್ಟರೇನು ಸಾಮಾನ್ಯದವರೇ? ಅವರು ಗಂಭೀರವಾಗಿ ‘ಆಫೀಸಿನಲ್ಲಿ ಎಷ್ಟು ಜನ ಹೆಣ್ಮಕ್ಕಳಿದ್ದಾರೆ?’ ಎಂದು ಕೇಳಿದ್ದರು. ರಮಾನಂದನಿಗೆ ಅದರಿಂದ ವಿಪರೀತ ಸಿಟ್ಟು ಬಂದಿತ್ತು. ‘ನನ್ನನ್ನು ಯಾಕಪ್ಪ ಅಷ್ಟು ಸಣ್ಣವನಾಗಿ ಮಾಡುತ್ತೀರಿ? ನಮ್ಮ ಕಛೇರಿಯಲ್ಲಿ ಹುಡುಗರೇ ಇರಬೇಕೆಂದು ನಿಮ್ಮ ಅಭಿಪ್ರಾಯವೇ?’ ಎಂದು ಸ್ವಲ್ಪ ಅಸಮಾಧಾನದಿಂದಲೇ ಉತ್ತರಿಸಿದ್ದ. ದಾಸುಭಟ್ಟರಿಗೆ ಅದು ತೃಪ್ತಿ ನೀಡಿತ್ತು. ಅವರು ಮಾತನಾಡದೆ ಎದ್ದು ಹೋಗಿದ್ದರು. ಆದರೆ ಮಧ್ಯಾಹ್ನದ ಊಟದ ಪಂಕ್ತಿಯಲ್ಲಿ ರಮಾನಂದ ಇಲ್ಲದ್ದನ್ನು ಗಮನಿಸಿದ ಅವರು ‘ಎಲ್ಲಿದ್ದಾನೆ ನಿನ್ನ ಕುಮಾರ ಕಂಠೀರವ?’ ಎಂದು ಹೆಂಡತಿಯನ್ನು ಪ್ರಶ್ನಿಸಿದ್ದರು. ಅದಕ್ಕೆ ಆ ತಾಯಿ ‘ಇನ್ನೆಲ್ಲಿಗೆ ಹೋಗುತ್ತಾನೆ, ಆ ಗೋವಿಂದನಲ್ಲಿಗೆ ಹೋಗಿರುತ್ತಾನೆ. ಅಲ್ಲಿ ಅವರು ಊಟ ಮಾಡಿಸದೆ ಅವನನ್ನು ಕಳುಹಿಸುತ್ತಾರೆಯೇ?’ ಎಂದಿದ್ದರು.
ದಾಸುಭಟ್ಟರು ಹೆಂಡತಿಗೆ ‘ನೀನು ನಿನ್ನ ಮಗನಿಗೆ ‘ಅದು ಇಷ್ಟ’ ‘ಇದು ಇಷ್ಟ ಎಂದು ಊರಲ್ಲಿ ಇಲ್ಲದ್ದೆಲ್ಲ ಮಾಡಿಟ್ಟಿದ್ದಿ. ಆದರೆ ಅಲ್ಲಿ ಆ ಗೋವಿಂದನಲ್ಲಿ ಏನಿರುತ್ತದೆ. ಮಣ್ಣು? ಕೆಸುವಿನ ಎಲೆಯ ಚಟ್ನಿ, ಹುರುಳಿ ಸಾರು ಅಷ್ಟೇ.’ ಎಂದಿದ್ದರು.
ಭಟ್ಟರ ಪತ್ನಿ ಕೃಷ್ಣವೇಣಿಗೆ ಅದು ಇಷ್ಟವಾಗಲಿಲ್ಲ. “ನೀವು ಹಾಗೆಲ್ಲ ಆಡಬಾರದು ಇವರೇ. ಆ ಗೋವಿಂದನಿಗೂ ಅವನ ಹೆಂಡತಿ ಕಮಲಕ್ಕನಿಗೂ ನಮ್ಮ ರಮಾನಂದ ಅಂದರೆ ತಮ್ಮ ಮಕ್ಕಳಷ್ಟೇ ಪ್ರೀತಿ. ನಿಮ್ಮ ಮಗ ಅಲ್ಲಿ ಊಟ ತೀರಿಸಿ ಬಂದ ನಂತರ ‘ಊಟಕ್ಕೆ ಏನಿತ್ತು?’ ಎಂದು ಅವನನ್ನು ಕೇಳಿ ನೋಡಿ. ಆಗ ಆತ ಪೇರಡ್ಯೆ ಪಾಯಸ, ತೊವ್ವೆ, ಉದ್ದಿನ ಹಿಟ್ಟಿನ ಬಜ್ಜಿ, ಕುಂಬಳಕಾಯಿ ಕೊಟೆಕ್ಕನ ಎಲ್ಲಾ ಇತ್ತು ಎಂದು ಹೇಳದಿದ್ದರೆ, ನಾನು ನಿಮ್ಮ ಹೆಂಡತಿಯೇ ಅಲ್ಲ” ಎಂದ ನಕ್ಕಿದ್ದರು.
ದೂರ್ವಾಸ ಋಷಿಯ ವಂಶಸ್ಥರಂತಿದ್ದ ದಾಸುಭಟ್ಟರಿಗೆ ಹೆಂಡತಿಯ ಮಾತಿನಿಂದ ಖುಶಿಯಾಯಿತು. ಆದರೆ ಅವರಿಗೆ ‘ನಾನು ನಿಮ್ಮ ಹೆಂಡತಿಯೇ ಅಲ್ಲ’ ಎಂದು ತನ್ನ ಹೆಂಡತಿ ಅಂದದ್ದು ಸ್ವಲ್ಪ ಜಾಸ್ತಿಯಾಯಿತು ಅನಿಸಿತು. ಅವರು ‘ಎಂಥ ಮಾತನಾಡುವುದು ಮಾರಾಯ್ತಿ ನೀನು? ನೀನು ನನ್ನ ಹೆಂಡ್ತಿ ಅಲ್ಲ ಅಂದರೂ, ನಾನು ಒಪ್ಪಬೇಕಲ್ಲ ಅದನ್ನು? ನಾನು ನಿನಗೆ ಈ ಜನ್ಮದಲ್ಲಿ ಗಂಡನೇ! ನೀನು ಈ ಜನ್ಮದಲ್ಲಿ ನನಗೆ ಹೆಂಡತಿಯೇ!’ ಎಂದರು. ಊಟ ತೀರಿಸಿ ಏಳುತ್ತಿದ್ದಂತೆ ‘ಆ ವೀಳ್ಯದೆಲೆ ಹರಿವಾಣದಲ್ಲಿ ಅಡಿಕೆ ಹೋಳು ಇಲ್ಲ ಅಂತ ಕಾಣುತ್ತದೆ. ಎರಡು ಅಡಿಕೆ ಒಡೆದು ಹೋಳು ಮಾಡಿ ಹಾಕು ಬೇಗ!’ ಎಂದಿದ್ದರು.
ಕೃಷ್ಣವೇಣಿಗೆ ಸ್ವಲ್ಪ ಸಿಟ್ಟು ಬಂದಿತ್ತು. ಆಕೆ ‘ನಿಮಗೆಂಥ ಅವಸರ ವೀಳ್ಯದೆಲೆ ಹಾಕಲು? ನನ್ನ ಊಟ ಆಗುವ ತನಕ ಕಾಯಲಿಕ್ಕಾಗುವುದಿಲ್ಲವಾ ನಿಮಗೆ?’ ಎಂದ ಹೇಳಿಯೂ ಅಂಗಳಕ್ಕೆ ಇಳಿದು, ಅಲ್ಲಿದ್ದ ಹಣ್ಣಡಕೆ ರಾಶಿಯಿಂದ ಎರಡು ಹಣ್ಣಡಕೆ ತೆಗೆದು ಹೋಳು ಮಾಡಿ ತಾಂಬೂಲದ ಹರಿವಾಣಕ್ಕೆ ಹಾಕಿ ಊಟಕ್ಕೆ ಕುಳಿತಿದ್ದರು.
ಸಂಜೆ ರಮಾನಂದ ಮನೆಗೆ ಬರುವಾಗ ಕೃಷ್ಣವೇಣಿ ತುಳಸಿಕಟ್ಟೆಯ ಮುಂದೆ ದೀಪ ಇಟ್ಟು ನಮಸ್ಕರಿಸುತ್ತಿದ್ದರು. ಅವರಿಗೆ ಮಗನ ಮೇಲೆ ಆಗಲೇ ಅಸಮಾಧಾನವಾಗಿತ್ತು. ‘ಯಾಕಿಷ್ಟು ತಡ? ಅಂಥಾದ್ದು ಎಂಥ ಪಟ್ಟಾಂಗ ನಿನಗೆ ಗೋವಿಂದನ ಮನೆಯಲ್ಲಿ?’ ಎಂದು ಪ್ರಶ್ನಿಸಿದರು.
ರಮಾನಂದ ನಗುತ್ತಾ “ಭಾವ ಮಾತಿಗೆ ಕುಳಿತರೆ ಹೇಗೆ ಎಂದು ನಿನಗೆ ಗೊತ್ತಲ್ಲಮ್ಮ? ಅದು ಇದು ಅಂತ ಬಿಡಲೇ ಇಲ್ಲ. ಎರಡೆರಡು ಬಾರಿ ಕಾಫಿ ತಿಂಡಿ ಆಯಿತು. ಕೊನೆಗೆ ಕಮಲಕ್ಕನೇ ‘ಸಂಜೆಯಾಯಿತು ನೀನು ಈಗ ಹೋಗು ರಮಾನಂದ. ನಿನ್ನ ಅಪ್ಪ ಈಗ ಮುಖ ಊದಿಸಿಕೊಂಡಿರುತ್ತಾನೆ’ ಎಂದರು. ಆಗ ಗೋವಿಂದ ಭಾವ ‘ಆಯ್ತಪ್ಪ ಆಯ್ತು’, ಎಂದು ನನ್ನನ್ನು ಬಿಳ್ಕೊಟ್ಟರು” ಎಂದಿದ್ದ.
ಹಾಗೆ ಆಡುವಾಗ ಅವನಲ್ಲಿ ಅಮ್ಮನಿಗೆ ತಾನು ಸುಳ್ಳು ಹೇಳುತ್ತಿದ್ದೇನೆ ಎಂಬ ಪಾಪಪ್ರಜ್ಞೆ ಇತ್ತು. ಅವನು ಆ ದಿನ ಮಧ್ಯಾಹ್ನ ಗೋವಿಂದಾಚಾರ್ಯರಲ್ಲಿ ಊಟ ಮುಗಿಸಿ ಒಂದರ್ಧ ಗಂಟೆ ಹರಟೆ ಹೊಡೆಯುತ್ತಾ ಕುಳಿತಾಗ ‘ಭಾವ, ನಾನು ಮಧ್ಯಾಹ್ನವೇ ಮನೆಗೆ ಊಟಕ್ಕೆ ಹೋಗಬೇಕಿತ್ತು. ಇನ್ನು ತಡಮಾಡಿದರೆ ಅಪ್ಪ ಅಮ್ಮನ ಮಾತು ಕೇಳುವುದು ಕಷ್ಟ’ ಎಂದು ಸುಮಾರು ಎರಡೂವರೆ ಗಂಟೆಯ ಸುಮಾರಿಗೇ ಗೋವಿಂದಾಚಾರ್ಯರ ಮನೆಯಿಂದ ಹೊರಟಿದ್ದ. ಹಾಗೆ ಹೊರಟವನು ನೇರವಾಗಿ ಮನೆಗೆ ಹೋಗದೆ ಗೋವಿಂದಾಚಾರ್ಯರ ಮನೆಯ ‘ಪಾಡಿ’ಯ ಹಿಂಬದಿಯಲ್ಲಿರುವ ಮೇರಿಯ ಮನೆಗೆ ಹೋಗಿದ್ದ. ಮೇರಿ ಬೆಳಿಗ್ಗೆಯಿಂದಲೇ ಅವನನ್ನು ಕಾಯುತ್ತಿದ್ದಳು. ಅವನನ್ನು ನೋಡಿದವಳೇ ಓಡಿ ಬಂದು ‘ಇಷ್ಟೂ ಕಾಯಿಸುವುದಾ ನೀನು?’ ಎಂದು ಆಕ್ಷೇಪ ಎತ್ತಿದ್ದಳು.
ರಮಾನಂದ ‘ನೋಡು ಮೇರಿ, ನಿನಗೆ ನನ್ನ ಕಷ್ಟ ಅರ್ಥ ಆಗುವುದಿಲ್ಲ. ನಮ್ಮ ಮನೆಯಲ್ಲಿ ನಮ್ಮ ಪ್ರೇಮಪ್ರಕರಣ ಈ ತನಕ ಯಾರಿಗೂ ಗೊತ್ತಿಲ್ಲ. ನನ್ನ ಭಾವ ಗೋವಿಂದಾಚಾರ್ಯರ ಕಿವಿಗೆ ಈ ಸಲ ಹಾಕಿ ಹೋಗಬೇಕು, ಆ ನೆಲೆಯಲ್ಲಿ ನಿನ್ನನ್ನು ನೋಡಬೇಕು ಎಂದು ಬಂದವನು ನಾನು. ಆದರೆ ಗೋವಿಂದ ಭಾವನಲ್ಲಿ ಯಾಕೋ ನಮ್ಮ ಪ್ರಕರಣವನ್ನು ಪ್ರಸ್ತಾಪಿಸಲು ನನಗೆ ಧೈರ್ಯ ಬರಲಿಲ್ಲ. ಶುದ್ಧ ವೈದಿಕ ಬ್ರಾಹ್ಮಣರಾಗಿರುವ ನಮ್ಮ ಮನೆಯವರಾಗಲಿ, ಈ ಭಾವನ ಮನೆಯವರಾಗಲೀ ಖಂಡಿತ ನಮ್ಮ ಮದುವೆಗೆ ಒಪ್ಪುವವರಲ್ಲ ಎಂದು ನನಗೆ ಗೊತ್ತು. ಆದರೆ ಅವರು ಒಪ್ಪಲಿ ಬಿಡಲಿ, ನನ್ನ ನಿರ್ಧಾರದಲ್ಲಿ ಬದಲಾವಣೆ ಇಲ್ಲ. ಅದಾಗ್ಯೂ ಅವರ ಗಮನಕ್ಕೆ ತಂದೇ ನಮ್ಮ ಮದುವೆ ನಡೆಯಬೇಕು ಎಂದು ನನ್ನ ಕನಸು!’ ಎಂದಿದ್ದ.
ಮೇರಿ ‘ಅದೆಲ್ಲ ನನಗೆ ಗೊತ್ತು ರಮಾನಂದ. ಈ ಮಾತನ್ನು ನೂರು ಸಾರಿ ನೀನು ನನಗೆ ಈಗಾಗಲೇ ಹೇಳಿರಬಹುದೇನೋ! ಆದರೆ ನೀನು ಗಟ್ಟಿ ನಿರ್ಧಾರ ಯಾವತ್ತೂ ತೆಗೆದುಕೊಳ್ಳಲಿಕ್ಕೇ ಇಲ್ಲ, ನಮ್ಮ ಮದುವೆ ಅಗಲಿಕ್ಕೂ ಇಲ್ಲ’ ಎಂದು ಹಂಗಿಸುತ್ತಾ ಆಡಿದ್ದಳು.
ಮೇರಿಯ ಮನೆಯವರಿಗೆ-ಅವಳ ಅಪ್ಪ ಅಮ್ಮ ಮತ್ತು ಅಣ್ಣನಿಗೆ – ಈ ವಿಷಯ ಆಗಲೇ ತಿಳಿದಿತ್ತು. ಮೊದಮೊದಲು ಅವರು ‘ಇದು ಆಗುವುದೂ ಇಲ್ಲ, ಹೋಗುವುದೂ ಅಲ್ಲ’ ಎಂದುಕೊಂಡು ಮೇರಿಯ ನಿರ್ಧಾರವನ್ನು ಬದಲಿಸಲು ಪ್ರಯತ್ನಿಸಿದ್ದರು. ಆದರೆ ಮೇರಿ ‘ನೀವು ಹೆಚ್ಚು ಒತ್ತಡ ಹಾಕಿದರೆ ನಾನು ಬಾವಿಗೆ ಹಾರಿ ಸಾಯುತ್ತೇನೆ’ ಎಂದಿದ್ದಳು. ಅದಕ್ಕೆ ಮೇರಿಯ ಅಪ್ಪ ಅಮ್ಮ ಹೆದರಿದ್ದರೂ, ಅಣ್ಣ ಬಾವ್‍ತೀಸ ‘ಎಲ್ಲಾ ಪ್ರೇಮಿಗಳೂ ಆಡುವುದು ಹೀಗೇ! ನಿಂದೇನು ಮಹಾ?’ ಎಂದು ತಿರುಗೇಟು ನೀಡಿ, ಮೇರಿಯನ್ನು ಕೀಳಂದಾಜಿಸಿದ್ದ. ಆಗ ಮೇರಿ ಕನಲಿ ಕೆಂಡವಾಗಿದ್ದಳು. ‘ನಿನಗೆ ನನ್ನಲ್ಲಿ ನಂಬಿಕೆ ಇಲ್ಲವಾದರೆ ನೋಡು, ನಾನು ಕ್ರಿಸ್ತನ ಮೇಲೆ ಆಣೆ ಮಾಡುತ್ತೇನೆ. ನಾನು ಮದುವೆ ಆಗುವುದಾದರೆ ರಮಾನಂದನನ್ನೇ’ ಎಂದು ಕ್ಯಾಂಡ್ಲ್ ಹಚ್ಚಿ ಯೇಸು ಸ್ವಾಮಿಯ ಮೂರ್ತಿಯ ಇದಿರು ನಿಂತು ಆ ಮೂರ್ತಿಯನ್ನು ಮುಟ್ಟಿ ಪ್ರಮಾಣ ಮಾಡಿದ್ದಳು.
‘ನನ್ನನ್ನು ಯಾಕಪ್ಪ ಅಷ್ಟು ಸಣ್ಣವನಾಗಿ ಮಾಡುತ್ತೀರಿ? ನಮ್ಮ ಕಛೇರಿಯಲ್ಲಿ ಹುಡುಗರೇ ಇರಬೇಕೆಂದು ನಿಮ್ಮ ಅಭಿಪ್ರಾಯವೇ?’ ಎಂದು ಸ್ವಲ್ಪ ಅಸಮಾಧಾನದಿಂದಲೇ ಉತ್ತರಿಸಿದ್ದ. ದಾಸುಭಟ್ಟರಿಗೆ ಅದು ತೃಪ್ತಿ ನೀಡಿತ್ತು. ಅವರು ಮಾತನಾಡದೆ ಎದ್ದು ಹೋಗಿದ್ದರು.
ಆಗ ಮೇರಿಯ ಅಪ್ಪ ಗಾಬ್ರು ‘ನಿನಗೆ ತಲೆ ಸರಿಸಿ ಉಂಟಾ ಮಗ? ಯಾಕೆ ನಿನ್ನ ತಂಗಿಯನ್ನು ಗೋಳು ಹೊಯ್ದುಕೊಳ್ಳುತ್ತಿ?’ ಎಂದು ಬಾವ್‍ತೀಸನನ್ನು ಗದರಿದ್ದ. ಅದರಿಂದ ಸುಮ್ಮನಾದ ಬಾವ್‍ತೀಸ ‘ಆಯ್ತು, ನೀನು ಆ ರಮಾನಂದನನ್ನೇ ಮದುವೆಯಾಗು’ ಎಂದು ಸುಮ್ಮನಾಗಿದ್ದ.
ರಮಾನಂದ ಖಾಸಗಿ ಬಸ್ಸಿನ ಸ್ಲೀಪಿಂಗ್ ಕೋಚಿನಲ್ಲಿ ಕಾಲು ಚಾಚಿ ಮಲಗಿ ಹಿಂದಿನದ್ದನ್ನೆಲ್ಲ ಹೀಗೆ ನೆನಪಿಸಿಕೊಳ್ಳುತ್ತಿದ್ದಾಗ ಅವನ ಸ್ಮಾರ್ಟ್‍ಪೋನು ರಿಂಗಣಿಸಿತು. ತಕ್ಷಣ ತಾನು ಬಸ್ ಹಿಡಿದದ್ದನ್ನು ಭಾರತಿಗೆ ಆಗಲೇ ಹೇಳಬೇಕಿತ್ತು ಎಂದುಕೊಂಡ. ಪೋನನ್ನು ಎತ್ತಿಕೊಂಡರೆ, ಅದು ಭಾರತಿಯದ್ದೇ ಆಗಿತ್ತು. ‘ಹಲೋ, ಸ್ಸಾರಿ ಭಾರತಿ ನಾನು ಈಗತಾನೇ ಬಸ್ ಹತ್ತಿದೆ’ ಎಂದು ಆತ ಹೇಳುತ್ತಿರುವಷ್ಟರಲ್ಲಿ ಭಾರತಿ ‘ರೀ ಈಗ ಒಂಭತ್ತು ಗಂಟೆಯ ನ್ಯೂಸಿನಲ್ಲಿ ಇಂದು ರಾತ್ರೆ ಹನ್ನೆರಡು ಗಂಟೆಯಿಂದ ಇಡೀ ದೇಶ ಲಾಕ್‍ಡೌನ್ ಆಗುತ್ತದ್ದಂತೆ ಎಂಬ ಸುದ್ದಿ ಪ್ರಸಾರವಾಗುತ್ತಿದೆ. ಆಗಲೇ ಎಂಟು ಗಂಟೆಗೆ ಪ್ರಧಾನಿ ಮೋದಿಯವರು ಇದನ್ನು ಘೋಷಿಸಿದ್ದರಂತೆ’ ಎಂದಳು.
ರಮಾನಂದ ಆಶ್ಚರ್ಯ ಮತ್ತು ಕುತೂಹಲದಲ್ಲಿ ‘ಹೌದಾ?’ ಎಂದ. ಆಮೇಲೆ ‘ಎಷ್ಟು ದಿನದ್ದಂತೆ?’ ಎಂದು ಪ್ರಶ್ನಿಸಿದ.
‘ಇಪ್ಪತ್ತೊಂದು ದಿನದ ಲಾಕ್‍ಡೌನ್. ಎಪ್ರಿಲ್ ಹದಿನಾಲ್ಕರ ತನಕ ಅಂತ ಈಗಿನ ನಿರ್ಧಾರ. ಆ ನಂತರ ಕೊರೊನಾದ ಪೀಡೆ ಹೇಗಿದೆ ಎಂದು ಪರಿಶೀಲಿಸಿ, ಅದನ್ನು ಮುಂದುವರಿಸಬಹುದಂತೆ, ಇಲ್ಲವೇ ಹಿಂದೆಗೆದುಕೊಳ್ಳಲೂಬಹುದಂತೆ ಎನ್ನುತ್ತಿದೆ ವಾರ್ತೆ’ ಎಂದಳು ಭಾರತಿ.
‘ಓ ಅಷ್ಟೂ ದಿನದ ಲಾಕ್‍ಡೌನೇ’ ಎಂದು ದೊಡ್ಡದಾಗಿ ರಮಾನಂದ ಆತಂಕ ವ್ಯಕ್ತಪಡಿಸಿದಾಗ, ಬಸ್ಸಿನಲ್ಲಿರುವ ಸಹ ಪ್ರಯಾಣಿಕರು ಅದೇ ವಿಚಾರವನ್ನು ಚರ್ಚೆಗೆತ್ತಿಕೊಂಡವರಂತೆ ಮಾತನಾಡಲು ಹತ್ತಿದ್ದರು. ರಮಾನಂದನಿಗೆ ಸಹಪ್ರಯಾಣಿಕರ ಮಾತುಕತೆ ಮತ್ತು ಅಭಿಪ್ರಾಯದ ಬಗ್ಗೆ ಕುತೂಹಲ ಇತ್ತು. ಆತ ‘ಭಾರತಿ, ಇಲ್ಲಿ ಅಂದರೆ ಬಸ್ಸಿನಲ್ಲಿ ಎಲ್ಲರೂ ಅದರ ಬಗ್ಗೆ ಚರ್ಚಿಸುತ್ತಿದ್ದಾರೆ. ನಾನು ಅವರ ಮಾತುಗಳನ್ನು ತುಸು ಕೇಳಬೇಕಾಗಿದೆ’ ಎಂದು ಪೋನನ್ನು ಕಟ್ ಮಾಡಿ ಎದ್ದು ಕುಳಿತ, ಸೀಟಿನಿಂದ ಕೆಳಗಿಳಿದು ನಿಂತ.
ರಮಾನಂದನ ಸಹ ಪ್ರಯಾಣಿಕರಲ್ಲಿ ಬಹುತೇಕ ಮಂದಿ ಗೊಂದಲದಲ್ಲಿರುವುದು ಕಂಡು ಬಂತು. ಅನೇಕರು ಬಸ್ ಏಜೆಂಟರಲ್ಲಿ ‘ಸ್ವಾಮಿ ನಾಳೆ ಈ ಬಸ್ಸು ಮರಳಿ ಬರುತ್ತದಲ್ಲ ಬೆಂಗಳೂರಿಗೆ?’ ಎಂದು ಪ್ರಶ್ನಿಸುತ್ತಿದ್ದರು ಇನ್ನು ಕೆಲವರು ‘ಛೆ!’ ನನಗೆ ಊರಿಗೆ ಹೋಗದೆ ಗೊತ್ತಿಲ್ಲ. ಹೋದರೆ ಮರಳಿ ಬರುವುದು ಹೇಗೆ?’ ಎಂಬ ಮಾತಿನಲ್ಲೇ ತಲೆ ಚಚ್ಚಿಕೊಳ್ಳತೊಡಗಿದ್ದರು.
ಆದರೆ ಬಸ್ಸಿನ ಏಜೆಂಟರು ಎಲ್ಲರಿಗೂ ‘ಗೊತ್ತಿಲ್ಲ’, ‘ಗೊತ್ತಿಲ್ಲ’, ಎಂದಷ್ಟೇ ಉತ್ತರಿಸುವುದನ್ನು ನೋಡಿದ ರಮಾನಂದ ಮತ್ತೆ ಏಜೆಂಟರಲ್ಲಿ ತಾನೂ ಯಾಕೆ ಪ್ರಶ್ನಿಸಬೇಕೆಂದು ಸುಮ್ಮನಾದ. ಆದರೆ, ಬೆಂಗಳೂರಿನಿಂದ ಹೊರಟ ಬಸ್ಸು ನಾಳೆ ರಾತ್ರಿ ಖಂಡಿತ ಮರಳೀತು ಎಂದು ತರ್ಕಿಸಿದ. ಜೊತೆಗೆ ನಾಳೆಯಿಂದ ಅಂದರೆ(ದಿನಾಂಕ 26ರಿಂದ) ಎಲ್ಲಾ ರೆಗ್ಯುಲರ್ ಬಸ್ ಸರ್ವಿಸ್‍ಗಳು ನಿಲ್ಲಲೂಬಹುದು ಎಂದು ಊಹಿಸಿದ. ಆದರೂ ನಾಳೆ ರಾತ್ರೆ ಬಸ್ಸು ಇಲ್ಲ ಅಂದರೆ, ಬೆಂಗಳೂರಿಗೆ ಮರಳುವುದು ಹೇಗೆ? ಎಂದು ಯೋಚಿಸಿ, ಟ್ಯಾಕ್ಸಿ ಮಾಡಿಕೊಂಡು ಮರಳಿದರಾಯಿತು ಎಂದು ಸಮಾಧಾನ ತಂದುಕೊಂಡ.
ಅಷ್ಟರಲ್ಲಿ ಬಸ್ಸು ಏಜೆಂಟರಿಗೆ ನಾಲ್ಕಾರು ಮಂದಿ ‘ನಾವು ಬಸ್ಸಿನಿಂದ ಇಳಿಯುತ್ತೇವೆ ಸ್ವಾಮಿ. ನಾಳೆ ಬಸ್ ಮರಳಿ ಬಾರದಿದ್ದರೆ ನಾವು ಬೆಂಗಳೂರಿಗೆ ಮರಳುವುದು ಹೇಗೆ?’ ಎಂದು ಪ್ರಶ್ನಿಸತೊಡಗಿದರು. ನಮ್ಮ ಟಿಕೇಟ್‍ನ ಫೇರ್ ಹಿಂದೆ ಕೊಡಿ’ ಎಂದು ಕೇಳಹತ್ತಿದರು. ಬಸ್‍ಏಜೆಂಟ್ ಮಾತ್ರ “ಅದು ಹೇಗಾಗುತ್ತದೆ ಸ್ವಾಮಿ? ನಮ್ಮ ಬಸ್ ಕೆಟ್ಟಿಲ್ಲ. ನಿಮಗೆ ಎಲ್ಲಿಗೆ ಟಿಕೇಟು ಕೊಟ್ಟಿದ್ದೇವೆಯೋ ಅಲ್ಲಿಗೆ ನಿಮ್ಮನ್ನು ನಾವು ಒಯ್ಯುವುದಿಲ್ಲ ಎಂದು ಹೇಳುತ್ತಿಲ್ಲ” ಎಂದ. ಅಂಥವರ ಬಾಯಿ ಮುಚ್ಚಿಸಲು ತೊಡಗಿದ.
ರಮಾನಂದನಿಗೆ ಈ ಎಲ್ಲ ಅವಾಂತರಗಳನ್ನು ಭಾರತಿಗೆ ಹೇಳಬೇಕೆನಿಸಿತು. ಆತ ಪೋನನ್ನು ಎತ್ತಿಕೊಂಡು ರಿಂಗ್ ಕೊಟ್ಟ. ಭಾರತಿ ‘ಹೌದಯೇ (ಗಂಡನನ್ನು ಆಕೆ ಒಮ್ಮೊಮ್ಮೆ ಹಾಗೆ ಕರೆಯುವುದು ಇದೆ) ನಾಳೆ ನಿಮಗೆ ಮರಳಿ ಬರಲು ಬಸ್ಸಿಲ್ಲ ಅಂತ ಕಾಣುತ್ತದೆ’ ಎಂದಳು. ರಮಾನಂದ ‘ಹೌದು ಭಾರತಿ, ನನಗೂ ಆ ಸಂಶಯ ಇದೆ. ಈಗೇನು ಮಾಡಲಿ? ಮರಳಿ ಮನೆಗೆ ಬರಲೇ?’ ಎಂದು ಪ್ರಶ್ನಿಸಿದ. ಭಾರತಿ ‘ನಾನು ಏನೂಂತ ಹೇಳಲಿ? ನಿಮ್ಮಷ್ಟೇ ನನ್ನ ತರ್ಕವೂ’ ಎಂದವಳೇ ‘ನೀವು ನಮ್ಮ ಡ್ರೈವರ್‍ನನ್ನು ಕರಕೊಂಡು ನಮ್ಮ ಕಾರಲ್ಲೇ ಊರಿಗೆ ಹೋಗಬಹುದಿತ್ತು. ಈ ರಾದ್ಧಾಂತವೇ ಇದ್ದಿಲ್ಲ’ ಎಂದಳು. ರಮಾನಂದನಿಗೆ ಅದು ‘ಸರಿ’ ಅನಿಸಿತು. ಆತ “ಇಲ್ಲ ಭಾರತಿ ಹೇಗೂ ಹೊರಟಾಗಿದೆ. ಅಲ್ಲಿ ಗೋವಿಂದ ಭಾವ ಕಾಯುತ್ತಿದ್ದಾರೆ. ಅಕಸ್ಮಾತ್ ನಾಳೆ ಬಸ್ ಇಲ್ಲ ಅಂತ ಆದರೆ, ನಾಡಿದ್ದು ಟ್ಯಾಕ್ಸಿಮಾಡಿಕೊಂಡು ಹಿಂದೆ ಬರುತ್ತೇನೆ. ಪ್ರಾಯಃ ಕಾರುಗಳ ಸಂಚಾರಕ್ಕೆ ಅಡ್ಡಿ ಇರಲಿಕ್ಕಿಲ್ಲ ಎಂದು ಕಾಣುತ್ತದೆ” ಎಂದ.
ಅಷ್ಟರಲ್ಲಿ ಬಸ್‍ಸ್ಟಾರ್ಟ್ ಆಯಿತು. ಬಸ್ ಏಜೆಂಟರು ಪ್ರಯಾಣಿಕರ ಲೆಕ್ಕ ತೆಗೆದ ಟ್ರೀಪ್‍ಶೀಟಿನಲ್ಲಿ ‘ನಲುವತ್ತೊಂಬತ್ತು ಮಂದಿಯಲ್ಲಿ ಎಂಟು ಜನ ಇಲ್ಲ. ನಲುವತ್ತೊಂದು ಮಂದಿ ಇದ್ದಾರೆ’ ಎಂದು ಡ್ರೈವರಿಗೆ ಹೇಳಿದ. ಟ್ರಪ್‍ಶೀಟ್‍ನ್ನು ಕೊಟ್ಟು ಕೆಳಗಿಳಿದ.
ರಮಾನಂದ ಈಗ ಬಂದದ್ದನ್ನು ಧೈರ್ಯವಾಗಿ ಇದಿರಿಸುವುದು ಎಂದುಕೊಂಡ. ಸ್ಲೀಪಿಂಗ್ ಸೀಟಿನಲ್ಲಿ ಉದ್ದಕ್ಕೂ ಮಲಗಿ ಕಣ್ಣು ಮುಚ್ಚಿಕೊಂಡ. ಬಸ್ ನಿಧಾನವಾಗಿ ಬೆಂಗಳೂರಿನ ನಾಲ್ಕಾರು ಕಡೆಗಳಲ್ಲಿ ನಿಂತು ಆಮೇಲೆ ವೇಗವನ್ನು ವರ್ಧಿಸಿಕೊಂಡಿತು. ಉಡುಪಿಯಾಚೆ ರಭಸದಿಂದ ಸಾಗತೊಡಗಿತು.
ಅಷ್ಟರಲ್ಲಿ ಸಹಪ್ರಯಾಣಿಕರಲ್ಲಿ ಕೆಲವರು ಪೋನಿನಲ್ಲಿ ಲಾಕ್‍ಡೌನ್‍ನ ಬಗ್ಗೆ ಮಾತನಾಡತೊಡಗಿದರು. ಹಲವರು ತಮ್ಮ ಪಕ್ಕದಲ್ಲಿ ಕುಳಿತವರಲ್ಲಿ ಕೊರೊನಾದ ಭೀಕರತೆಯ ಬಗ್ಗೆ ಚರ್ಚಿಸತೊಡಗಿದರು. ರಮಾನಂದನಲ್ಲಿ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬೇಕೆಂಬ ಕಾತರತೆ ಇತ್ತು. ಭಾರತಿಗೆ ಪೋನು ಮಾಡಿದರೆ ಟಿ.ವಿಯ ನ್ಯೂಸ್ ಚಾನೆಲ್‍ಗಳಲ್ಲಿ ಹೆಚ್ಚಿನ ಮಾಹಿತಿ ಈಗ ಬಿತ್ತರವಾಗಬಹುದೆಂದು ತರ್ಕಿಸಿದ. ಆದರೆ ಭಾರತಿ ಈಗ ಮಲಗಿದ್ದರೆ, ಅವಳನ್ನು ಎಬ್ಬಿಸಿ ಡಿಸ್ಟರ್ಬ್ ಮಾಡುವುದು ಯಾಕೆ ಎಂದು ಸುಮ್ಮನಾದ, ವಾಟ್ಸಪ್‍ನಲ್ಲಿ ಏನೇನು ಬಂದಿರಬಹುದು ಎಂಬ ಕುತೂಹಲದಲ್ಲಿ ಪೋನನ್ನು ಕೈಗೆತ್ತಿಕೊಂಡ.
ವಾಟ್ಸಪ್‍ನಲ್ಲಿ ಲಾಕ್‍ಡೌನ್ ವಿಷಯಗಳು ಒಂದರ ಮೇಲೆ ಇನ್ನೊಂದು ಎಂಬಂತೆ ಬರುತ್ತಲೇ ಇತ್ತು. ನಾಳೆಯಿಂದ ‘ಏನೇನು ಇರುತ್ತವೆ’ ‘ಏನೇನು ಇರುವುದಿಲ್ಲ’ ಎಂಬಲ್ಲಿಂದ ತೊಡಗಿ, ಪ್ರಧಾನಿ ಮೋದಿಯವರ ನಿರ್ಧಾರವನ್ನು ಬೆಂಬಲಿಸುವ ಹೇಳಿಕೆಗಳ ಜೊತೆ, ಈ ನಿರ್ಧಾರವನ್ನು ಈಗಲ್ಲ ಹಿಂದೆಯೇ ಎತ್ತಿಕೋಳ್ಳಬೇಕಿತ್ತು, ಎಂಬ ಟೀಕೆಗಳೂ ಬರುತ್ತಲೇ ಇದ್ದುವು. ಸುಮಾರು ಒಂದು ತಾಸುಗಳ ತನಕ ಅವುಗಳನ್ನು ನೋಡಿದ ರಮಾನಂದನಿಗೆ ನಾಳೆ ಖಂಡಿತ ಈ ಬಸ್ಸು ಬೆಂಗಳೂರಿಗೆ ಮರಳುವುದಿಲ್ಲ ಎಂಬ ಅರಿವಾಯಿತು. ತಾನು ಇನ್ನು ಬೆಂಗಳೂರಿಗೆ ಹೇಗೆ ಮರಳುವುದು ಎಂಬ ಚಿಂತೆಯೇ ಅವನನ್ನು ಕಾಡಿ, ನಿದ್ದೆ ಅವನ ಕಡೆ ಸುಳಿಯಲಿಲ್ಲ.
ಬಸ್ಸು ಶಿರಾಡಿ ಘಾಟಿ ಇಳಿಯುವ ಹೊತ್ತಿನಲ್ಲಿ ಅವನಿಗೆ ಜೊಂಪು ಹತ್ತತೊಡಗಿತು. ನಿಧಾನವಾಗಿ ನಿದ್ದೆಯಲ್ಲಿ ತಾನು ಮುಳುಗಬಹುದು ಎನ್ನುವಾಗ ರಸ್ತೆಯ ತಿರುವುಗಳಲ್ಲಿ ಬಸ್ಸು ತಿರುಗುವ ರಭಸಕ್ಕೆ ಆ ಜೊಂಪು ಎದ್ದು ಬಡಿತು. ಆತ ಸುಮ್ಮನೇ ಕಣ್ಣು ಬಿಡಿಸಿ ಮಲಗಿದ. ಅವನ ತಲೆಯೊಳಗೆ ಏನೂ ಸುಳಿಯಲಿಲ್ಲ.
ಬಸ್ಸು ಧರ್ಮಸ್ಥಳ, ಕಾರ್ಕಳ, ಬೆಳ್ಮಣ್ ಪೇಟೆಯನ್ನು ದಾಟಿ ಮುಂದೆ ಮುಂದೆ ಹೋಯಿತು. ಕಂಡೆಕ್ಟರ್ ‘ಶಿರ್ವ’,’ಶಿರ್ವ’, ಎಂದು ಕೂಗಿದ. ರಮಾನಂದ ತಾನು ಇಳಿಯಬೇಕಾದ ಸುರಪುರ ಬಂತೆಂದು ಎದ್ದು ಕುಳಿತ. ಮೆಲ್ಲನೇ ಸೀಟಿನಿಂದ ಇಳಿದು ಕಂಡೆಕ್ಟರ್ ಬಳಿ ಸಾರಿ ‘ಸುರಪುರದ ಚರ್ಚ್‍ನ ಇದಿರು ಬಸ್ಸು ನಿಲ್ಲಿಸಿ’ ಎಂದು ವಿನಂತಿಸಿದ. ಕಂಡೆಕ್ಟರ್ ‘ಇಳಿಸುತ್ತೇವೆ, ಇನ್ನೇನು ಐದು ನಿಮಿಷದಲ್ಲಿ ಸುರಪುರ ಬರುತ್ತದೆ’ ಎನ್ನುವಷ್ಟರಲ್ಲಿ ಸುರಪುರವೂ ಬಂತು.
ರಮಾನಂದ ಬಸ್ಸಿನಿಂದ ಇಳಿದು ಆಚೆ ಈಚೆ ಕಣ್ಣಾಡಿಸುವಷ್ಟರಲ್ಲಿ ಗೋವಿಂದಾಚಾರ್ಯರು ಕಾರಿನಿಂದ ಇಳಿದಿದ್ದರು. ‘ಹಲೋ ರಮಾನಂದ ನಾನು ಇಲ್ಲಿದ್ದೇನೆ’ ಎಂದು ಕೈ ಬೀಸಿದರು. ರಮಾನಂದ ಆ ಕಡೆ ಧಾವಿಸುವಷ್ಟರಲ್ಲಿ ಗೋವಿಂದಾಚಾರ್ಯರ ಮಗ ನರಸಿಂಹನು ರಮಾನಂದನ ಕೈಯಲ್ಲಿದ್ದ ಏರ್‍ಬ್ಯಾಗ್‍ನ್ನು ಎತ್ತಿಕೊಂಡು ‘ನಮಸ್ಕಾರ’ ಎಂದ. ರಮಾನಂದ ‘ಓ, ನರಸಿಂಹ, ಚೆನ್ನಾಗಿದ್ದಿ ತಾನೇ?’ ಎಂದು ಅವನನ್ನು ವಿಚಾರಿಸಿದ. ‘ಹೌದು’ ಎಂದ ನರಸಿಂಹ.
ಕಾರಿಗೆ ಒರಗಿ ನಿಂತಿದ್ದ ಗೋವಿಂದಾಚಾರ್ಯರು ರಮಾನಂದನ ಬಳಿ ಬಂದು ಅವನ ಕೈ ಕುಲುಕಿ ಬೆನ್ನಿಗೆ ಮೆತ್ತಗೆ ಬಡಿಯಬೇಕು ಎನ್ನುವಷ್ಟರಲ್ಲಿ ರಮಾನಂದ ಬಾಗಿ ಆಚಾರ್ಯರ ಕಾಲು ಮುಟ್ಟಿದ. ‘ಛೆ ಛೆ ಈಗ ಇದೆಲ್ಲ ಬೇಡ ಇತ್ತಯ್ಯ’ ಎಂದು ಅಚಾರ್ಯರು ಹೇಳಿದ್ದಕ್ಕೆ ರಮಾನಂದ ‘ನೀವು ನನಗೆ ಭಾವ ಮಾತ್ರವಲ್ಲ, ನನ್ನ ಬದುಕಿಗೆ ಅರ್ಥಕೊಟ್ಟವರು’ ಎಂದ. ತನ್ನ ಮದುವೆಗೆ ಆಚಾರ್ಯರು ನೆರವಾದದ್ದನ್ನು ಸ್ಮರಿಸಿಕೊಂಡ.
(ಕೃತಿ: ಇದ್ದೂ ಇಲ್ಲದ್ದು (ಕಾದಂಬರಿ), ಲೇಖಕರು: ಡಾ. ನಾ. ಮೊಗಸಾಲೆ, ಪ್ರಕಾಶನ: ಸಾಹಿತ್ಯ ಪ್ರಕಾಶನ, ಬೆಲೆ: 290/-)
ಡಾ. ನಾ. ಮೊಗಸಾಲೆ ಕಾಸರಗೋಡು ತಾಲ್ಲೂಕಿನ ಕೋಳ್ಯೂರಿನ ಮೊಗಸಾಲೆಯವರು. ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆ ಕಥೆ ಕಾದಂಬರಿಗಳನ್ನೂ ಬರೆದಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಪ್ರಭವ, ಕಾಮನ ಬೆಡಗು ಬೆಳಗು ಸೇರಿದಂತೆ ಹಲವು ಕವನ ಸಂಕಲನಗಳು, ಮಣ್ಣಿನ ಮಕ್ಕಳು, ಕನಸಿನ ಬಳ್ಳಿ, ಅನಂತ, ಧಾತು ಸೇರಿದಂತೆ ಹಲವು ಕಾದಂಬರಿಗಳು, ವ್ಯಕ್ತಿಚಿತ್ರಗಳ ಸಂಗ್ರಹ ಸೇರಿದಂತೆ ಇನ್ನೂ ಹಲವು ಕೃತಿಗಳನ್ನು ರಚಿಸಿದ್ದಾರೆ