Advertisement
ಜಿ. ಎಸ್. ಶಿವರುದ್ರಪ್ಪ  ಬರೆದ ಕವಿತೆ: “ನನ್ನ ಹಣತೆ”

ಜಿ. ಎಸ್. ಶಿವರುದ್ರಪ್ಪ ಬರೆದ ಕವಿತೆ: “ನನ್ನ ಹಣತೆ”

ನನ್ನ ಹಣತೆ

ಹಣತೆ ಹಚ್ಚುತ್ತೇನೆ ನಾನೂ.
ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ.
ಹಣತೆ ಹಚ್ಚುತ್ತೇನೆ ನಾನೂ;
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲೆಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ
ಶತಮಾನದಿಂದಲೂ,
ನಡು ನಡುವೆ ಒಂದಷ್ಟು ಬೆಳಕು ಬೇಕೆಂದು
ಆಗಾಗ ಕಡ್ಡಿ ಗೀಚಿದ್ದೇವೆ,
ದೀಪ ಮುಡಿಸಿದ್ದೇವೆ,
ವೇದ, ಶಾಸ್ತ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ
ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ
ಸುಟ್ಟಿದ್ದೇವೆ.
‘ತಂಸೋಮಾ ಜ್ಯೋತಿರ್ಗಮಯಾ’ ಎನ್ನುತ್ತ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.
ನನಗೂ ಗೊತ್ತು, ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ,
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ
ತಿಂದರೂ, ಕುಡಿದರೂ ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.
ಆದರೂ ಹಣತೆ ಹಚ್ಚುತ್ತೇನೆ ನಾನೂ;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಶ್ಟು ಹೊತ್ತು ನಿನ್ನ ಮುಖ ನಾನು ನನ್ನ ಮುಖ ನೀನು
ನೊಡಬಹುದೆಂಬ ಒಂದೇ ಒಂದು ಆಸ್ಯೆಯಿಂದ;
ಹನತೆ ಆರಿದ ಮೆಲೆ ನೀನು ಯಾರೋ, ಮತ್ತೆ
ನಾನು ಯಾರೊ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ