ಇಲ್ಲಿಂದ ಪಶ್ಚಿಮಕ್ಕೆ ಹರಿದ ದಾರಿಯೊಂದು ಮಿಸುಕಾಡದೆ ಮಲಗಿತ್ತು. ಕಡಲ ಇಳಿಜಾರಿಗೆ ಸಾಗಿ ಹೋಗಲು ಪುಟಾಣಿ ಕಿಂಡಿ. ಇಲ್ಲಿಂದ ಕಾಣಸಿಗುವ ಸುಂದರ ದೃಶ್ಯಾವಳಿಗಳು ಅರಬ್ಬಿ ಕಡಲಿನ ವಿಹಂಗಮತೆಯನ್ನು, ಜೊತೆಗೆ ಎಂತಹ ಅರಸಿಕರನ್ನೂ ರಸಿಕರನ್ನಾಗಿ ಮಾಡುತ್ತದೆ. ಕಡಲಿನ ಹೆದ್ದಲೆಗಳು ಬಡಿಯುವ ತಾಣದಲ್ಲೊಂದು ಸುಂದರ ಬುರುಜು. ಕ್ಷಣ ಕ್ಷಣವು ಬಡಿವ ಅಲೆಗಳು ತಮ್ಮ ದಡದ ಮೋಹವನ್ನು ಬಿಚ್ಚಿಡುತ್ತವೆ. ಬೃಹತ್ ಬಸಾಲ್ಟ್ ಬಂಡೆಗಳನ್ನು ಉಜ್ಜಿ ತಿಕ್ಕಿ ನುಜ್ಜು ಗುಜ್ಜಾಗಿಸಿದರೂ ಮತ್ತೆ ಬಿಡಲೊಲ್ಲದ ಮೋಹ. ಬಸಾಲ್ಟ್ ಬಂಡೆಗಳಿಗೆ ಮುಖ ಒತ್ತಿ ತನ್ನ ಬಸಾಲ್ಡ್ ಪ್ರೇಮವನ್ನು ಹೊರಗೆಡಹುತ್ತದೆ.
ಶ್ರೀಧರ್ ಎಸ್. ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಬೇಕಲ್ ಪ್ರವಾಸದ ಕುರಿತ ಬರಹ ಇಲ್ಲಿದೆ
ಬೇಕಲ್ನ ದಾರಿಯಲ್ಲಿ
ಮೊದಲ ಪುಸ್ತಕ ಬಿಡುಗಡೆಯ ತಯಾರಿಯಲ್ಲಿದ್ದೆ. ಗೆಳೆಯನೊಬ್ಬ ನಿನ್ನನ್ನು ಮುಖಪುಟ ವಿನ್ಯಾಸಗಾರನಲ್ಲಿಗೆ ಕರೆದೊಯ್ಯುವೆ ಎಂದು ಹನ್ನೊಂದು ಗಂಟೆಗೆ ಮಂಗಳೂರಿನಿಂದ ಕಾಸರಗೋಡಿನ ರೈಲು ಹತ್ತಿಸಿದ. ತಪ್ಪು ತಿಳಿಯಬೇಡಿ ನಿಜವಾದ ರೈಲೇ. ತಿರುಗಾಟದ ಹುಚ್ಚಿನ ಮೀನಿಗೆ ಎರೆಹುಳ ತೋರಿಸಿದ್ದ! ನನ್ನ ಪುಸ್ತಕದ ಹೂರಣಕ್ಕೆ ನೆರವಾದಿತೆಂದು ಒಪ್ಪಿಕೊಂಡೆ. ಮಂಗಳೂರಿನ ಮುಖ್ಯ ನಿಲ್ದಾಣದಿಂದ ಹೊರಟು ಬೇಕಲ್ ಎನ್ನುವ ಪುಟಾಣಿ ಹಳ್ಳಿಯ ಕಡೆಗೆ ಹೊರಡಿಸಿದ್ದ.

ಅಂದು ದಾರಿ ಕಾಣದಷ್ಟು ಮಳೆ ಅಬ್ಬರ. ಕಡಲುಬ್ಬರ. ಮನದ ಕದ ತೆರೆದು ಮಳೆ ಹೊಡೆಯುತ್ತಿತ್ತು. ಮನಸ್ಸು ಮಳೆಯ ನೀರಿಗೆ ಕರಗಿತ್ತು. ಮಂಗಳೂರು ಬಿಡುತ್ತಲೇ ನಮ್ಮನ್ನು ಅಡ್ಡಗಟ್ಟಿದ ನೇತ್ರಾವತಿ ಕೆಂಪಾಗಿ ಹರಿಯುತ್ತಿದ್ದಳು. ಒಂಟಿ ಮೀನುಗಾರನೊಬ್ಬ ತನ್ನ ಹರಿಗೋಲು ಹಿಡಿದು ಅನಾಥ ಅಲೆಗಳನ್ನು ಪಳಗಿಸುತ್ತ ಆಗಷ್ಟೇ ಮೀನು ಬೇಟೆಗೆ ಹೊರಟಿದ್ದ. ನೇತ್ರಾವತಿಯ ದಂಡೆ ಉದ್ದಕ್ಕೂ ಹತ್ತಾರು ಬೋಟ್ಗಳು ಲಂಗರು ಹಾಕಿದ್ದವು. ಹಂಚಿಗೆ ಹಾಕಿದ ಎಣ್ಣೆಯಂತೆ ಸಿಡಿವ ತುಂತುರು ಮಳೆ ಸಿಂಚನವಾಯಿತು. ಹಳಿ ಪರೀಕ್ಷಕರ ತಂಡವೊಂದು ನೇತ್ರಾವತಿಯ ದಂಡೆಯಲ್ಲಿ ಬೀಡು ಬಿಟ್ಟಿತ್ತು. ಟ್ರೈನು ವೇಗ ಪಡೆಯುತ್ತಿದ್ದಂತೆ ಎಲ್ಲಾ ತೆಂಗಿನ ಮರಗಳು ಮಂಗಳೂರು ಕಡೆ ಬಾರಿ ಕೆಲಸವಿದ್ದಂತೆ ಧಾವಂತದಿಂದ ಓಡ ತೊಡಗಿದವು. ನೂರಾರು ಜನರು ಕಾರು ಬೈಕುಗಳಲ್ಲಿ ತಮ್ಮ ತಮ್ಮ ಕೆಲಸಗಳಿಗೆ ಓಡುತ್ತಿದ್ದರು. ಪ್ರೇಮು ಹಾಕಿದ ಚಿತ್ರಪಟದಂತೆ ಪ್ರತಿಯೊಬ್ಬರು. ತೆಂಗಿನ ಮರಗಳ ನಡುವೆ ತಂಗಿದ ಹಳೆಯ ಹೆಂಚಿನ ಮನೆಗಳು. ನಡುವೆ ಅಲ್ಲಲ್ಲಿ ತಾರಸಿ ಮನೆಗಳು. ಅವಲ್ಲಿ ಕೆಲವು ಮನೆ ಬಿಟ್ಟು ಹೋದ ಯಜಮಾನನ ನಿರೀಕ್ಷೆಯಲ್ಲಿ ಇದ್ದವು. ನೂರಾರು ಎಕರೆ ಖಾಲಿ ಬಿದ್ದ ಹಡಿಲು ಗದ್ದೆಗಳು ಕೆಲಸವಿಲ್ಲದೆ ಮೊಕ್ಕಾಮು ಹೂಡಿದ್ದವು. ಗದ್ದೆಯ ಮೇಲೆ ತಮ್ಮ ಹಕ್ಕಿನ ಸಾಮ್ರಾಜ್ಯ ಸ್ಥಾಪಿಸುತ್ತಾ ದನಗಳು ಮೇಯುತ್ತಿದ್ದವು. ಇವಕ್ಕೆಲ್ಲಾ ಕಲಶ ಇಟ್ಟಂತೆ ರೈಲಿನ ಹಿನ್ನೆಲೆ ಸಂಗೀತ. ದೂರದಿಂದ ಕಡಲಿನ ಮೊರೆತ. ನೂರಾರು ಜನರು ತಮ್ಮ ತಮ್ಮ ನಿಸ್ತಂತು ದೂರವಾಣಿಯಲ್ಲಿ ತಲ್ಲೀನ. ಪ್ರಕೃತಿಯ ರಮ್ಯತೆಯ ಮುಂದೆ ಈ ದೂರವಾಣಿಯು ನಿಸ್ತೇಜ. ಪ್ರಕೃತಿಗಿಂತ ಮತ್ತೊಬ್ಬ ಚಿತ್ರಕಾರನಿಲ್ಲ ಎಂದುಕೊಳ್ಳುತ್ತ ಹೊರಟೆ. ಕ್ಷಣ ಕ್ಷಣಕ್ಕೂ ಬದಲಾಗುವ ಹೊರಗಿನ ಚಿತ್ರಗಳು. ನೂರಾರು ಹಳ್ಳಗಳು ನಮ್ಮ ಹರಿವಿಗೆ ಅಡ್ಡವಾಗಿ ಹರಿದು ಕಡಲ ಸೇರಲು ಹೊರಟಿದ್ದವು. ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ರೈಲು ನಿಶ್ಚಿಂತೆಯಿಂದ ಬೇಕಲ್ಲನ ಕಡೆಗೆ ಹೊರಟಿತ್ತು. ಎಲ್ಲೆಲ್ಲಿಂದಲೋ ಹೊರಟ ಜನ ಏನೋ ಅದ್ಭುತವನ್ನು ಕಾಣುವ ತವಕದಿಂದ ನೂರಾರು ಕಥೆಗಳನ್ನು ಹೊತ್ತು ಮಂಗಳೂರು ಕಡೆಗೆ ಅಕ್ಷಯೋಹಿಣಿ ಸೈನ್ಯದಂತೆ ಹತ್ತಾರು ಟ್ರೈನುಗಳಲ್ಲಿ ಬಂದಿಳಿಯುತ್ತಿದ್ದರು. ಇಳಿದಷ್ಟೇ ವೇಗವಾಗಿ ಮಂಗಳೂರಿನ ನಿಲ್ದಾಣದಲ್ಲಿ ಕರಗುತ್ತಿದ್ದರು. ಬದುಕಿನ ಬಂಡಿ ನೂಕಲು ದಿನವೂ ನಿಲ್ಲದ ಓಡಾಟ.
ಕೆಲವು ತೆಂಗಿನ ಮರಗಳು ಬಾಯಾರಿ ಕಡಲು ಸೇರುವ ಹಳ್ಳಗಳಿಗೆ ಮುತ್ತಿಕ್ಕುತ್ತಿದ್ದವು. ತೆಂಗಿನ ಮರಗಳ ಪ್ರೇಮಕ್ಕೆ ಸ್ವಲ್ಪವೂ ಬೇಸರಿಸಿಕೊಳ್ಳದೆ ಹಳ್ಳ ಮಂದಸ್ಮಿತವಾಗಿ ಕಡಲಿಗೆ ತನ್ನನ್ನು ಒಪ್ಪಿಸಿಕೊಳ್ಳುತ್ತಲಿತ್ತು. ಜಗತ್ತಿಡಿ ಶೂನ್ಯ ಎಂಬಂತೆ ಹೊರನೋಟದ ಸೌಂದರ್ಯಕ್ಕೆ ನನ್ನನ್ನು ಒಪ್ಪಿಸಿಕೊಂಡಿದ್ದೆ. ಆಗಲೇ ಗೆಳೆಯ ನನ್ನನ್ನು ಎಚ್ಚರಿಸಿ ರೈಲಿನಿಂದ ಇಳಿಸಿದ. ಅಪಾರ ಹಸಿರು ಹೊದ್ದ ಈ ದಾರಿಯಲ್ಲಿ ನೀವೊಮ್ಮೆ ಪ್ರಯಾಣಿಸಿ ನೋಡಿ ಕವಿಯಾಗದಿದ್ದರೆ ಕೇಳಿ.
ನಮ್ಮನ್ನು ಇಳಿಸಿದ ರೈಲು ದೊಡ್ಡ ನಿಟ್ಟುಸಿರು ಬಿಟ್ಟು ಹೊರಟಿತು! ಬೆಳಿಗ್ಗೆ 6ಕ್ಕೆಲ್ಲ ತಿಂಡಿ ತಿಂದುದರಿಂದ ಹೊಟ್ಟೆ ಗೂಯಿಗುಡುತ್ತಲೆ ಇತ್ತು. ಕೇರಳ ಶೈಲಿಯ ಸದ್ಯ ಎಂಬ ಊಟ ಕೊಟ್ಟಿದ್ದರಿಂದ ನಾನು ಸದ್ಯಕ್ಕೆ ಬಚಾವಾದೆ. ಅಮ್ಮನಂತೆ ಊಟವಿಕ್ಕಿದ ಹೋಟೆಲ್ ಮಾಣಿಯ ಕೈಗೊಂದಿಷ್ಟು ಹಣ ತುರುಕಿದೆ. ಊರಗಲ ಮುಖ ಮಾಡಿ ನನ್ನನ್ನೇ ನೋಡುತ್ತಾ ನಮಸ್ಕರಿಸಿದ. ದಿನವಿಡೀ ಬೇಸರಿಸಿಕೊಳ್ಳದೆ ಅದದೇ ತಟ್ಟೆಗಳನ್ನು ಎತ್ತಿಡುವ ಇವರ ಕಾಯಕಕ್ಕೊಂದು ನನ್ನ ದೊಡ್ಡ ಸಲಾಮ. ಕಾಸರಗೋಡಿನಿಂದ ತೆರೆದ ನೀಲಿ ಬಸ್ಸು ನಮಗಾಗಿ ಕಾದಿತ್ತು. ಬಸ್ಸಿನಲ್ಲಿ ಕುಳಿತು ಬೇಕಲ ಕೋಟೆಗೆ ಹೊರಟೆವು. ತಂಪಾದ ಗಾಳಿ ಮನದೊಳಗೆ ನುಗ್ಗಿ ಹರ್ಷವನ್ನುಂಟು ಮಾಡಿತು. ನನಗೋ ತೆರೆದ ಬಸ್ಸಿನಲ್ಲಿ ಚಲಿಸೋ ಪುಳಕ. ಕಾಸರಗೋಡಿನ ಶಾಲೆ ನಡು ಮಧ್ಯಾನಕ್ಕೆ ಮುಗಿದುದರಿಂದ ಬಸ್ಸಿನ ತುಂಬಾ ಪುಟಾಣಿ ಮಕ್ಕಳ ಗೌಜಿ. ಅವರ ಜೊತೆಗೆ ನಾನೂ ಮಗುವಾದೆ. ನನ್ನನ್ನು ಪರಿಚಿತರಂತೆ ನೋಡುತ್ತಾ ಮಾತನಾಡಿಸಿ ನಕ್ಕರು. ಏನೇನೋ ಹರಟುತ್ತಾ ಗದ್ದಲ ಎಬ್ಬಿಸಿದ್ದರು. ಕಂಡಕ್ಟರ್ನ ಘಂಟಾನಾದವು ಮಕ್ಕಳ ಗಿಲಕಿಯೊಳಗೆ ಮುಳುಗಿ ಹೋಗಿತ್ತು. ಹಿರಿ ಮೇಸ್ಟ್ರಂತೆ ಆತ ಎಲ್ಲರನ್ನೂ ಸುಮ್ಮನಿರಿಸುತ್ತಿದ್ದ. ಚಂದ್ರಗಿರಿ ಕೋಟೆ ಬಳಸಿ ಚಂದ್ರ ನದಿ ಹಾಗೂ ಬೇಕಲ್ ನದಿ ದಾಟಿ ಬೇಕಲ್ ಊರಿನಲ್ಲಿ ನಮ್ಮನ್ನು ಇಳಿಸಿ ಕಾಜಂಗಾಡಿನ ಕಡೆಗೆ ಹೊರಟಿತು ಹಳೆಯ ನೀಲಿ ಬಸ್ಸು. ಹೆದ್ದಲೆಗಳು ಬಡಿದು ನುಜ್ಜು ಗುಜ್ಜಾದ ಬಸ್ಸು ನಿಲ್ದಾಣದ ಸ್ವಲ್ಪ ಮುಂದೆ ನನ್ನ ಇಳಿಸಿ ಮರೆಯಾಯಿತು. ಬೇಕಲ್ಲ ದಾರಿಗೆ ಅಂಟಿಕೊಂಡಂತೆ ಕೆಂಪು ಕಲ್ಲಿನ ವಿಶೇಷ ರಚನೆಗಳು ಬೇಕಲ್ನತ್ತ ಕೈಬೀಸುತ್ತವೆ.
ಬೇಕಲ್ನ ಕೋಟೆಯದುರಿಗೇ ಮುಖಪುಟ ವಿನ್ಯಾಸಗಾರ ಸಿಗುತ್ತೇನೆಂದು ಹೇಳಿದ್ದ. ತುರ್ತು ಕೆಲಸ ಒಂದು ಬಂದುದರಿಂದ ಆತ ನಾಪತ್ತೆಯಾಗಿದ್ದ. ಎಷ್ಟೇ ಪ್ರಯತ್ನಿಸಿದರೂ ಸಿಗದ ಸಂಪರ್ಕಕ್ಕೆ ಬೇಸತ್ತು ನಿಧಾನಕ್ಕೆ ಬೇಕಲ ಕೋಟೆಯತ್ತ ಮುಖಮಾಡಿದೆ. ಬೇಕಲ್ನ ಸುತ್ತಮುತ್ತ ನೂರಾರು ಸುಂದರ ಹೋಟೆಲುಗಳಿವೆ. ಒಂದಕ್ಕಿಂತ ಒಂದು ಚಂದ.
ಮರೆತು ಜೀವಿಸಬಹುದೇ
ಈಗ ಕೇರಳದ ಭಾಗವಾಗಿದ್ದರು ನೂರಾರು ವರ್ಷಗಳಿಂದ ಬದುಕಿ ಬಾಳಿದ್ದ ಕನ್ನಡಿಗರು ಕಟ್ಟಿದ ಕನ್ನಡ ಶಾಲೆಯೊಂದು ಕೆಲವೇ ಕೆಲವು ಮಕ್ಕಳೊಡಗೂಡಿ ಕನ್ನಡಿಗರ ಭಾಷಾ ಪ್ರೇಮಕ್ಕೆ ಕನ್ನಡಿ ಹಿಡಿಯುತ್ತಿತ್ತು. ಅವರ ಜೀವ ಕಣದೊಳಗೆ ಸೇರಿದ ಕನ್ನಡವನ್ನು ಬೇರ್ಪಡಿಸಿ ನೋಡುವುದು ಎಂತೋ? ತಿಳಿಯದಾದೆ. ಪರಂಪರೆಯಾಗಿ ಕಲಿತ ಭಾಷೆಯನ್ನು ಮರೆತು ಜೀವಿಸಬಹುದೇ?
ಅಗಸರ ಹೊಳೆ ಎಂಬ ಹೆಸರಿನ ಸುಸಜ್ಜಿತವಾದ ಕಟ್ಟಡವನ್ನು ಹೊಂದಿರುವ ವಿಶಿಷ್ಟ ಶಾಲೆಯಲ್ಲಿ ಈಗ ಕೆಲವೇ ಕೆಲವು ಬೆರಳೆಣಿಕೆಯ ವಿದ್ಯಾರ್ಥಿಗಳು! ಇಲ್ಲಿರುವ ನೂರಾರು ಕನ್ನಡಿಗರು ಪುತ್ತೂರು, ಸುಳ್ಯ ಕಡೆಗೆ ವಲಸೆ ಹೋದರೆಂದು ಅರ್ಧಂಬರ್ಧ ಕನ್ನಡ ತಿಳಿದ ಮುರುಳಿಧರರು ಮಾಹಿತಿ ನೀಡಿದರು. ಉಡುಪಿ ಕಡೆಯ ವ್ಯಕ್ತಿಯೊಬ್ಬ ಸಹ ಇಲ್ಲಿ ಹೋಟೆಲ್ ನಡೆಸುತ್ತಿದ್ದಾನೆ ಆತನ ಮಕ್ಕಳೆಲ್ಲರೂ ಕನ್ನಡ ಮರೆತು ಮಲಯಾಳ ಕಲಿತು ವ್ಯವಹಾರ ಮಾಡುತ್ತಿದ್ದಾರೆ ಎಂದು ತಿಳಿದು ಖೇದವಾಯಿತು. ಪುರುಷೋತ್ತಮ ಎನ್ನುವ ರಿಕ್ಷಾ ಚಾಲಕ ಅರೆಬರೇ ಕನ್ನಡದಲ್ಲಿ ಅರೇಭಾಷಿಕನಂತೆ ಮಾತನಾಡಿ ಅಚ್ಚರಿ ಮೂಡಿಸಿದ. ಆತನ ಕನ್ನಡವೋ ದೇವನಾಂಮಪ್ರಿಯ!!
ಬೇಕಲ್ ಕಾಣುತ್ತಲೇ ಇತಿಹಾಸದ ಬೃಹತ್ ಬಳ್ಳಿಯೊಂದು ಕಾಲಿಗೆ ತೊಡರಿದಂತೆ ಭಾಸವಾಯಿತು. ಮೊರೆವ ಹೆದ್ದಲೆಗಳ ನಡುವೆ ಕಡಲನ್ನು ಕಾಯುತ್ತಿರುವಂತೆ ಕಟ್ಟಿದ ಬೃಹತ್ ಕೋಟೆ. ಬೃಹತ್ ಎರಡು ಬುರುಜುಗಳು ಕೋಟೆ ಕಾವಲುಗಾರರಂತೆ ಒಳ ಹೊರ ಬರುವವರನ್ನು ಕಣ್ಣಿಟ್ಟು ಕಾಯುತ್ತದೆ. ಕೋಟೆ ಎದುರು ಬೃಹತ್ ಹೊಂಡಗಳನ್ನು ನಿರ್ಮಿಸಿ ನೀರು ತುಂಬಿಟ್ಟು ಮೊಸಳೆಗಳನ್ನು ಸಾಕುತ್ತಿದ್ದರು ಅನಿಸುತ್ತೆ. ಹೊರ ವರ್ತುಲದಲ್ಲೂ ಬೃಹತ್ ಬಾವಿ ಒಂದಿದೆ. ಪಶ್ಚಿಮಕ್ಕೆ ತೀರಾ ಕಡಿದಾದ ಉತ್ತರ ಮತ್ತು ದಕ್ಷಿಣದಲ್ಲಿ ಸಪಾಟಾದ ಬಸಾಲ್ಟ್ ಶಿಲಾ ಗುಡ್ಡದ ಮೇಲೆ ನಿರ್ಮಾಣ ಮಾಡಿರುವುದು ನಮ್ಮ ಹಿಂದಿನವರ ಚಾತುರ್ಯಕ್ಕೊಂದು ಮೆರಗು. ಎರಡು ಕಡೆಯೂ ಸಮುದ್ರ ಕಿನಾರೆಯನ್ನು ನೋಡಿ ಸವಿಯಬಹುದು. ಎರಡು ದಿಕ್ಕಿನ ಕಿನಾರೆಗಳು ೬೦ ಡಿಗ್ರಿಯಲ್ಲಿ ಸಂಧಿಸುವ ಕಿರು ಗುಡ್ಡದ ಮೇಲೆ ನಿರ್ಮಿಸಿರುವುದು ಒಂದು ವಿಶೇಷ. ಅಂದರೆ ಇಲ್ಲಿ ಸಮುದ್ರ ಸ್ವಲ್ಪವೇ ಒಳ ಚಾಚಿದೆ. ಇದನ್ನೇ ತಮ್ಮ ಲಾಭಕ್ಕಾಗಿ ಬಳಸಿಕೊಂಡ ಪರಿ ಅನನ್ಯ. ಕೆಂಪು ಕಲ್ಲು ಮತ್ತು ಬಸಾಲ್ಟ್ ಬಂಡೆಗಳನ್ನು ಉಪಯೋಗಿಸಿ ತಮ್ಮ ಅನೂಕೂಲಕ್ಕೆ ತಕ್ಕಂತೆ ಅದನ್ನು ಪರಿವರ್ತಿಸಲಾಗಿದೆ!
ಕೋಟೆಯ ಒಳಹೊಕ್ಕರೆ ಬಲಕ್ಕೆ ತಿರುಗಿ ಮತ್ತೆ ಎಡ ಮಗ್ಗುಲಿಗೆ ಹೊರಳಿ ಬೃಹತ್ ಏರುದಾರಿ ಬಳಸಿ ಏರಿದರೆ ಕೋಟೆಯ ಹಜಾರಕ್ಕೆ ತಲುಪುತ್ತೀರಿ. ನೀವು ಎಡಕ್ಕೆ ಮಗ್ಗಲು ಬದಲಾಯಿಸುವಲ್ಲೇ ಆಂಜನೇಯ ಸ್ವಾಮಿ ದೇವಾಲಯವಿದೆ. ದೇವಾಲಯದ ಅರ್ಚಕರು ಕನ್ನಡಿಗರು. ಅಂದು ಹನುಮನಿಗೆ ವೀಳ್ಯದೆಲೆಯ ಅಲಂಕಾರ. ಕನ್ನಡದಲ್ಲೇ ನಮ್ಮನ್ನು ವಿಚಾರಿಸಿಕೊಂಡರು. ಏರುದಾರಿಯ ಬಳಿ ಚೀಟಿ ಪರೀಕ್ಷಕರ ಕೊಠಡಿ.

ಕೆಳಗಿನ ಮೈದಾನದಿಂದ ಹಜಾರಕ್ಕೆ ಹತ್ತಡಿಯ ವ್ಯತ್ಯಾಸ. ಹಜಾರದಲ್ಲಿ ಹರಡಿದ ನೂರಾರು ಅವಶೇಷಗಳು ನಮ್ಮ ಗಮನ ಸೆಳೆಯುತ್ತದೆ. ಹಜಾರದ ನಡುವಿರುವ ಬೃಹತ್ ಬುರುಜು. ಮತ್ತು ಬಲಕ್ಕೆ ಇರುವ ಕೋಟೆಯೊಳಗಿನ ಕಚೇರಿಗಳ ಮತ್ತು ಸಭಾಮಂಟಪದ ಅವಶೇಷಗಳು ಕಂಡುಬರುತ್ತವೆ. ಅದರ ನಡುವೆಯೇ ಬಾವಿ ಒಂದಿದೆ. ಮುಂದೆ ಚಲಿಸಿದರೆ ವಿಶಾಲವಾದ ಮೈದಾನದಂತಹ ಜಾಗ. ಮುಖ್ಯವಾಗಿ ಅಧಿಕಾರಿಗಳ ಕಾವಲುಗಾರರ ಕೋಣೆಗಳು ಅಂದು ಇದ್ದಿರಬಹುದು. ಇಲ್ಲಿಂದ ಎಡಕ್ಕೆ ಸಣ್ಣ ಕಟ್ಟಡ ಒಂದಿದೆ. ಮುಖ್ಯದ್ವಾರದ ಎದುರಿಗೆ ಬೃಹತ್ ಬೃಹತ್ ಬುರುಜೊಂದು ಕಣ್ಮನ ಸೆಳೆಯುತ್ತದೆ. ಅದರ ಸುತ್ತಲಿನ ಇಳಿಜಾರುಗಳಲ್ಲಿ ಬೃಹತ್ ಬುರುಜುಗಳನ್ನು ನಿರ್ಮಿಸಿದ್ದಾರೆ. ಕಾವಲುಗಾರರ ಪ್ರವೇಶ ದ್ವಾರದಲ್ಲಿ ಎಲ್ಲಾ ಬುರುಜುಗಳೂ ಒಂದಕ್ಕೊಂದು ಸೇರುವಂತೆ ಕಾಲುದಾರಿಯನ್ನು ನಿರ್ಮಿಸಿದ್ದಾರೆ. ಮುಂದಕ್ಕಿರುವ ಸಪಾಟು ಬಯಲಿನ ಬಲಕ್ಕೆ ಚಲಿಸಿದರೆ ಅಂಗಾತ ಬಾಯಿ ಕಳೆದು ಮಲಗಿದ ಕೆಂಪು ಕಲ್ಲಿನ ಕೆರೆಯೊಂದಿದೆ. ಕೆರೆಯ ಅಚ್ಚುಕಟ್ಟುತನ ನಮ್ಮ ಗಮನ ಸೆಳೆಯುತ್ತದೆ. ಇಳಿದು ನೀರು ಸೇದುವವರಿಗಾಗಿ ಚಂದನೆಯ ಮೆಟ್ಟಿಲು.
ಇಲ್ಲಿಂದ ಪಶ್ಚಿಮಕ್ಕೆ ಹರಿದ ದಾರಿಯೊಂದು ಮಿಸುಕಾಡದೆ ಮಲಗಿತ್ತು. ಕಡಲ ಇಳಿಜಾರಿಗೆ ಸಾಗಿ ಹೋಗಲು ಪುಟಾಣಿ ಕಿಂಡಿ. ಇಲ್ಲಿಂದ ಕಾಣಸಿಗುವ ಸುಂದರ ದೃಶ್ಯಾವಳಿಗಳು ಅರಬ್ಬಿ ಕಡಲಿನ ವಿಹಂಗಮತೆಯನ್ನು, ಜೊತೆಗೆ ಎಂತಹ ಅರಸಿಕರನ್ನೂ ರಸಿಕರನ್ನಾಗಿ ಮಾಡುತ್ತದೆ. ಕಡಲಿನ ಹೆದ್ದಲೆಗಳು ಬಡಿಯುವ ತಾಣದಲ್ಲೊಂದು ಸುಂದರ ಬುರುಜು. ಕ್ಷಣ ಕ್ಷಣವು ಬಡಿವ ಅಲೆಗಳು ತಮ್ಮ ದಡದ ಮೋಹವನ್ನು ಬಿಚ್ಚಿಡುತ್ತವೆ. ಬೃಹತ್ ಬಸಾಲ್ಟ್ ಬಂಡೆಗಳನ್ನು ಉಜ್ಜಿ ತಿಕ್ಕಿ ನುಜ್ಜು ಗುಜ್ಜಾಗಿಸಿದರೂ ಮತ್ತೆ ಬಿಡಲೊಲ್ಲದ ಮೋಹ. ಬಸಾಲ್ಟ್ ಬಂಡೆಗಳಿಗೆ ಮುಖ ಒತ್ತಿ ತನ್ನ ಬಸಾಲ್ಡ್ ಪ್ರೇಮವನ್ನು ಹೊರಗೆಡಹುತ್ತದೆ. ಸದಾ ಬೋರ್ಗರೆವ ಕಡಲಿನಿಂದ ಕೋಟೆಯ ಗೋಡೆಗಳಿಗೆ ಉಪ್ಪು ನೀರ ಸಿಂಚನ.
ಕಡಲ ಕಾಗೆಯೊಂದು ಈ ಮಹಾ ಹೆದ್ದಲೆಗಳ ನಡುವೆ ಮೀನ ಬೇಟೆಯಲ್ಲಿ ತೊಡಗಿತ್ತು. ತನ್ನ ಬಿಳಿಯ ದಷ್ಟ ಪುಷ್ಟ ದೇಹ ಚೂಪು ಕೊಕ್ಕು ಮತ್ತು ಚುರುಕು ಕಣ್ಣಿನಿಂದ ಆಕರ್ಷಕವಾಗಿತ್ತು. ಹಲವು ಬಾರಿ ಇದು ದೊಡ್ಡ ಮೀನುಗಳ ಬೇಟೆಯಾಡಿದ್ದನ್ನು ಕಂಡಿದ್ದೆ. ಕಡಲ ಕಾಗೆಗಳ ಕಣ್ಣಿನ ಸೂಕ್ಷ್ಮತೆ ಬೆಚ್ಚಿ ಬೀಳಿಸುತ್ತದೆ. ಸೋಮಾರಿ ಕಾಗೆಗಳು ಕಡಲ ಕಾಗೆಯ ಮೀನನ್ನು ಗುಂಪಾಗಿ ಬಂದು, ಹೊಂಚಿ ಕಸಿಯುತಲಿದ್ದವು ನಮ್ಮ ರಾಜಕಾರಣಿಗಳಂತೆ. ವಿಸ್ಮಯ. ಯಾವುದೇ ಬಾರಿಯೂ ಸೋಮಾರಿ ಕಾಗೆಗಳು ಗೆದ್ದಿದ್ದು ಕಂಡಿಲ್ಲ. ಈ ಬೃಹತ್ ಅಲೆಗಳ ನಡುವೆ ಸದಾ ಕಲಸು ಮೇಲೋಗರವಾಗಿರುವ ನೀರು ಮತ್ತು ಮಣ್ಣಿನ ಕಣಗಳ ನಡುವೆ ಅದು ಹೇಗೆ ಮೀನ ಬೇಟೆ ಮಾಡುತ್ತದೆಯೋ ನಾನರಿಯೆ! ಸಾವಿರಾರು ವರ್ಷಗಳ ಹೊಂದಾಣಿಕೆಯ ಫಲವಾಗಿರಬೇಕು. ನೀರು ಸದಾ ಮಣ್ಣೊಳಗೆ ಬೆರೆತು ನೀರ್ ಮಣ್ಣಾಗಿ ಬಂದವರ ಮೇಲೆಲ್ಲ ಸಿಂಚನಗೈಯುತ್ತಲೇ ಇರುತ್ತದೆ. ಪಶ್ಚಿಮದ ಮೂರು ಬುರುಜುಗಳು ಕಡಲಿಗೆ ಇಳಿದವರ ಮಾಹಿತಿಯನ್ನು ತಿಳಿಸುತ್ತದೆ. ಈ ಬುರುಜುಗಳು ಕಡಲ ವ್ಯಾಪಾರದ ವ್ಯಾಪಕತೆಯನ್ನು ವಿಸ್ತಾರವಾಗಿ ವಿವರಿಸುವ ಗುರುತುಗಳಾಗಿ ತೋರುತ್ತವೆ. ಕರ್ನಾಟಕದ ಸುತ್ತಮುತ್ತ ಸಿಕ್ಕ ವಿವಿಧ ದೇಶಗಳ ನಾಣ್ಯಗಳು, ದೇವಾಲಯದ ಭಿತ್ತಿಯಲ್ಲಿ ಕಂಡ ಅನ್ಯ ದೇಶದವರ ಮುಖಗಳೂ ನಮ್ಮವರ ವ್ಯಾಪಾರಿತನವನ್ನು ಜಗಜ್ಜಾಹಿರು ಮಾಡುತ್ತವೆ.
ಅಂದೇ ನಮ್ಮವರು ಪರ್ಷಿಯ ಮುಂತಾದ ದೇಶಗಳೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದರು. ತಾವು ಕಂಡಿದ್ದನ್ನು ಶಿಲ್ಪಿಗಳು ದೇವಾಲಯದ ಗೋಡೆಗಳ ಮೇಲೆ ಅನೇಕ ವಿದೇಶಿಯರನ್ನು ಕೆತ್ತಿ ತಮ್ಮ ವ್ಯಾಪಾರದ ಸಂಬಂಧದ ಹೊಳಹನ್ನು ಬಿಟ್ಟು ಹೋಗಿದ್ದಾರೆ. 10ನೇ ಶತಮಾನದ ಬೃಹದೀಶ್ವರ ಹಾಗೂ ಸಾಗರ ಸಮೀಪದ ಅಘೋರೇಶ್ವರ ದೇವಾಲಯದ ಗೋಡೆಗಳ ಮೇಲಿನ ವಿದೇಶಿಯರ ಮುಖ ಕೆತ್ತನೆ ಜನರ ವ್ಯಾಪಾರದ ಕೊಂಡಿಗಳನ್ನು ತೋರ್ಪಡಿಸುತ್ತವೆ. ಅಘೋರೇಶ್ವರ ದೇವಾಲಯದ ಹೊನ್ನಿನ ಕಳಶ ಇವರ ವ್ಯಾಪಾರಿ ತನದ ವ್ಯಾಪಕತೆಗೆ ಸಾಕ್ಷಿಯಾಗಿದೆ.
ಇತಿಹಾಸದ ಮಗ್ಗುಲಿಗೆ ಬಳಿದ ಬಣ್ಣ
ಕದಂಬರಿಂದ ಮೊದಲ್ಗೊಂಡು ವೆಂಕಟಪ್ಪ ನಾಯಕನವರೆಗೆ ಆಳಿಸಿಕೊಂಡ ಈ ಭೂಮಿ ಕನ್ನಡ ನಾಡಿನ ಹಿರಿತನವನ್ನು ಮೂಕವಾಗಿ ಸಾರುತ್ತಲೇ ಇದೆ. ಹಿರಿಯ ವೆಂಕಟಪ್ಪ ನಾಯಕ ಇದರ ನಿರ್ಮಾಣವನ್ನು ಪ್ರಾರಂಭಿಸಿದ. 1650 ರಲ್ಲಿ ಶಿವಪ್ಪ ನಾಯಕ ಎಂಬ ಅಪ್ರತಿಮ ಹೋರಾಟಗಾರ ಇದನ್ನು ಪೂರ್ಣಗೊಳಿಸಿದ. ಮಲಬಾರ್ ಭಾಗದ ವ್ಯಾಪಾರದ ಅತ್ಯಂತ ಪ್ರಮುಖ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದದ್ದು ಬೇಕಲ್ ಪಟ್ಟಣ. ಇಲ್ಲಿಂದಲೇ ಕಾಳುಮೆಣಸು ಪರ್ಶಿಯ ಮುಂತಾದ ದೇಶಗಳಿಗೆ ರವಾನೆಯಾಗುತ್ತಿತ್ತು. ರಕ್ಷಣಾ ಹಿತದೃಷ್ಟಿಯಿಂದ ಇದೊಂದು ಮಹತ್ವದ ಕೋಟೆಯಾಗಿದೆ. ಸಂಪೂರ್ಣವಾಗಿ ಕೆಂಪು ಕಲ್ಲಿನಿಂದ ನಿರ್ಮಾಣವಾಗಿದೆ. ಹೈದರ್ ಅಲಿಯು ನಾಯಕ್ ಸಾಮ್ರಾಜ್ಯದ ಅರಸರನ್ನು ಸೋಲಿಸಿ , ಈ ಕೋಟೆಯನ್ನು ವಶಪಡಿಸಿಕೊಳ್ಳುತ್ತಾನೆ. ಇವನ ಕಾಲ ನಂತರ ಟಿಪ್ಪು ಸುಲ್ತಾನ್ ನಂತರದ ವರ್ಷಗಳಲ್ಲಿ ಬ್ರಿಟಿಷರ ವಶವಾಗುತ್ತದೆ. ಕಾಲದಿಂದ ಕಾಲಕ್ಕೆ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಬದಲಾಯಿಸಿಕೊಳ್ಳುತ್ತಾ ಬಂದ ಕೋಟೆ ಜನಮನದ ಸಂಸ್ಕೃತಿಯ ನಾಡಿಮಿಡಿತವಾಗಿತ್ತು. ಒಂದು ಕಾಲದಲ್ಲಿ ಹಬ್ಬಿ ಹರಡಿದ ಕನ್ನಡ ನಾಡಿನ ಭಾಗವಾಗಿತ್ತು. ತಲತಲಾಂತರದಿಂದ ಕೋಟೆ ಆಂಜನೇಯನಿಗೆ ಪೂಜೆ ಮಾಡುವ ಕನ್ನಡದ ಅರ್ಚಕರು, ಅವರ ಸುಲಲಿತವಾದ ಸುಂದರ ಕನ್ನಡ ಇದಕ್ಕೆ ಪುಷ್ಟಿಯನ್ನು ಒದಗಿಸುತ್ತದೆ. ಬೇಕಲ್ ಕೋಟೆಯ ಹತ್ತಿರವೇ ಅವರ ಮನೆಯಿದೆ. ಜನಮಾನಸದಲ್ಲಿ ಕನ್ನಡ ಪ್ರೇಮ ತೆಳುವಾಗಿದೆ. ಹಿರಿಯ ತಲೆಮಾರಿನವರು ಕನ್ನಡ ಮಾತನಾಡಿದಷ್ಟು ಇಂದಿನ ತಲೆಮಾರು ಕನ್ನಡವಾಡುವುದಿಲ್ಲ. ವಿಸ್ಮೃತಿಗೆ ಸರಿದ ಭಾಷೆ ಮತ್ತು ಹಳೆಯ ಸಂಸ್ಕೃತಿ ಸಂಪ್ರದಾಯಗಳು. ಕಾಸರಗೋಡು ಇಂದು ಕನ್ನಡದ ಗಡಿಯನಾಡು. ಎದೆಯೊಳಗೆ ಸರಿದಾಡಿದ ಕನ್ನಡ ಮಿಂಚೊಂದು ಮಿಂಚಿ ಮಾಯವಾಯಿತು.
ನಾನು ಹೋದಾಗ ಕೋಟೆಯ ಆಂಜನೇಯನಿಗೆ ವೀಳ್ಯದೆಲೆಯ ಅಲಂಕಾರ ಮಾಡಿದ್ದರು. ಇಲ್ಲಿನ ಅರ್ಚಕರು ಬಾಯಿ ತುಂಬಾ ಮಾತನಾಡಿಸಿದರು. ಸುಮಾರು ಕೋಟಿ ರೂಪಾಯಿಯ ಖರ್ಚಿನಲ್ಲಿ ವರ್ಷಂಪ್ರತಿ ಆಂಜನೇಯನ ವಿಶೇಷ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. ಪ್ರಕೃತಿಯ ನಡುವಿನ ಸುಂದರ ತಾಣಗಳ ಸವಿಯಲು ಇನ್ನೊಮ್ಮೆ ಇಲ್ಲಿಗೆ ಮಳೆಗಾಲದಲ್ಲಿ ಬರಬೇಕು. ಕಡಲ ಕಾವಲಿಗೆ ನಿಂತ ಬುರುಜಿನ ಪಕ್ಕ ಸುಮ್ಮನೆ ಹೆದ್ದಲೆಗಳ ನಾದಕ್ಕೆ ಕಿವಿ ಕೊಟ್ಟು ನಿಲ್ಲಬೇಕು.

ನಾನು ಚಂದ್ರಾ ನದಿ ಮತ್ತು ಬೇಕಲ್ ನದಿ ದಾಟುವಾಗ ಅಬ್ಬರದಲಿ ಹರಿಯುತ್ತಿತ್ತು. ಸ್ವಲ್ಪ ಹೊತ್ತು ಅಲ್ಲಲ್ಲಿ ನಿಂತು ನದಿಯ ದಾಟಿದೆ. ಶಿವಾನಂದ ಕಳವೆಯ ಮಧ್ಯ ಘಟ್ಟದಲ್ಲೂ ಈ ನದಿಗಳ ದಾಟುವ ಪ್ರಸಂಗ ಬರುತ್ತದೆ. ನದಿ ನಮ್ಮನ್ನು ದಾಟಿದ್ದೊ ನಾವೇ ನದಿಯನ್ನು ದಾಟಿದ್ದೋ ಎಂಬ ತೀವ್ರ ಗೊಂದಲ. ದಾಟಿದ ನದಿಗಳಿಗೆ ನಮ್ಮ ನೆನಪಿರುತ್ತದೆಯೇ? ಬದುಕಿನಲ್ಲಿ ನಾವು ಯಾವುದೆಲ್ಲಾ ನದಿ ದಾಟಬೇಕು? ಗೊತ್ತಿಲ್ಲ. ನದಿ ದಾಟುವ ಸುಂದರ ರೂಪಕವೊಂದು ಮನದ ಪುಟದಲ್ಲಿ ಅಚ್ಚಾಯಿತು! ಶಶಿಧರ ಹಾಲಾಡಿ ಅವರ ಸುಂದರ ಕಾದಂಬರಿಯ ನೆನಪಾಯಿತು. ನೂರಾರು ವರ್ಷಗಳಿಂದ ಬೇಕಲ್ ನದಿ ಇತಿಹಾಸದ ಸಾಕ್ಷಿ ಪ್ರಜ್ಞೆಯಾಗಿ ಹರಿಯುತ್ತಲೇ ಇದೆ.
(ಫೋಟೋಗಳು: ಲೇಖಕರವು)

ಶ್ರೀಧರ್ ಎಸ್. ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ. “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.


