Advertisement
ಬದುಕು ಈಗ ತುಂಬ ಸುಲಭ…: ವಿನಾಯಕ ಅರಳಸುರಳಿ ಅಂಕಣ

ಬದುಕು ಈಗ ತುಂಬ ಸುಲಭ…: ವಿನಾಯಕ ಅರಳಸುರಳಿ ಅಂಕಣ

ಕಾಲ ಬದಲಾಯಿತು. ಆಧುನಿಕತೆ ಎದ್ದು ನಿಂತಿತು. ಕಟ್ಟಿಗೆ ಕಡಿಯುವುದು ಕಷ್ಟ ಎಂದು ಗೀಝರ್ ಬಂತು. ಮತ್ತಿ ಸೊಪ್ಪು ಸಿಗುತ್ತಿಲ್ಲ ಎಂದು ಶ್ಯಾಂಪೂ ಬಂತು. ಅಮ್ಮ ಊರಲ್ಲಿದ್ದಾಳೆ ಎಂದಾಗ ಜೊಮ್ಯಾಟೋ ಬಂತು. ಕಾಲಿಗೆ ಬದಲಾಗಿ ಕಾರು ಬಂತು. ಸಾಕ್ಷಾತ್ ದ್ವಾಪರ ಯುಗದ ಕಾಳಿಂಗವೇ ಮೆಟ್ರೋದ ರೂಪ ತಾಳಿ ಹರಿದು ಬಂತು. ಎಲ್ಲವೂ ಸುಲಭವಾಯಿತು. ಸುಲಲಿತವಾಯಿತು. ಇಡೀ ಪ್ರಪಂಚವೇ ಬೆರಳ ತುದಿಯಲ್ಲಿ ಸಿಕ್ಕಿಕೊಂಡಿತು. ಮನುಷ್ಯ ಲೋಕದ ಬಾವುಟವೊಂದು ಚಂದ್ರನ ಅಂಗಳದಲ್ಲಿ ಪಟಪಟಿಸಿತು. “ವಿ ಆರ್ ಅಡ್ವಾನ್ಸ್ಡ್. ಹೈಲಿ ಸಿವಿಲೈಸ಼್ಡ್. ವಿಜ್ಞಾನಕ್ಕೆ ಅಸಾಧ್ಯವಾದದ್ದು ಯಾವುದೋ ಇಲ್ಲ” ಎಂದು ಮನುಷ್ಯ ಘೋಷಿಸಿದ.
ವಿನಾಯಕ
ಅರಳಸುರಳಿ ಬರೆಯುವ ಅಂಕಣಆಕಾಶ ಕಿಟಕಿ ಬರಹ ನಿಮ್ಮ ಓದಿಗೆ

ರಾತ್ರಿಯಾಗಿದೆ.‌ ಜಗತ್ತಿನ ಸಕಲ ಮಂಡೆಬಿಸಿಗಳೂ ತುಂಬಿರುವ ಆಫೀಸಿನಲ್ಲಿ ದುಡಿದು ಹೈರಾಣಾಗಿ ಬಂದಿದ್ದೀರಿ.‌ ಅಡುಗೆ ಮಾಡುವ ಉತ್ಸಾಹವಿಲ್ಲ. ಅರೆರೇ, ಅದಕ್ಕೇನಂತೆ? ಇದೇನು ಹತ್ತೊಂಭತ್ತನೇ ಶತಮಾನವಾ ಇಲ್ಲ ಹಳ್ಳಿ ಮೂಲೆಯ? ಶಹರ ಸ್ವಾಮೀ ಶಹರ. ಗುಂಡಿ ಒತ್ತಿ. ಮೊಬೈಲ್ ಉಜ್ಜಿ. ಬಣ್ಣ ಬಣ್ಣದ, ತರಹೇವಾರಿಯ, ನಳ-ಭೀಮರೂ ಮಾಡದ ಅಡುಗೆಗಳು ಚಿತ್ರ ವಿಚಿತ್ರಗಳಾಗಿ ಕಣ್ಮುಂದೆ ಬರುತ್ತವೆ. ಇಂಥಾದ್ದು ಬೇಕು ಎಂದು ಒತ್ತಿದರಾಯಿತು. ಹಣವೂ ಮೊಬೈಲ್ನಲ್ಲೇ ಇದೆ.‌ ಊಟವೂ ಅದರಲ್ಲೇ ಇದೆ. ಎರಡರ ಮಧ್ಯೆ ಚಿಕ್ಕ ದಾರಿ‌ ಮಾಡಿಕೊಟ್ಟರಾಯಿತು. ಅಲ್ಲೆಲ್ಲೋ ಕಾದು ನಿಂತಿರುವ ಡೆಲಿವರಿ ಬಾಯ್ ಭರ್ರೆಂದು ಬೈಕು ಸ್ಟಾರ್ಟ್ ಮಾಡಿಕೊಂಡು, ಫುಟ್ಪಾತಿನ ಮೇಲೆಲ್ಲಾ ಹತ್ತಿಸಿಕೊಂಡು, ಬೆಕ್ಕು ಬೆನ್ನಟ್ಟಿದ ಇಲಿಯಂತೆ ಸಂದಿ ಗೊಂದಿಯಲ್ಲೆಲ್ಲಾ ನುಗ್ಗಿ ಕೊನೆಗೂ ನಿಮಗೆ ನಿಮ್ಮ ರಾತ್ರಿಯ ಊಟ ತಂದು ಕೈಗಿಡುತ್ತಾನೆ. ಮೊಬೈಲಿನ ಮಿನುಗದ ಐದು ನಕ್ಷತ್ರಗಳ ಪೈಕಿ ಎರಡೋ ಮೂರೋ ಅವನಿಗೆ ರೇಟಿಂಗ್ ಎಂದು ಕೊಟ್ಟು, ಪ್ಲಾಸ್ಟಿಕ್ಕಿನಲ್ಲಿ ಸುತ್ತಿದ ಬಿಸಿ ಬಿಸಿ ತಿಂಡಿಯನ್ನು ಮೆಂದು ಪಾತ್ರೆ ಸಿಂಕಿಗೆ ತುಂಬಿ ಮಲಗಿದರಾಯಿತು.

ಮಲಗಿದರೂ ನಿದ್ರೆ ಬರುತ್ತಿಲ್ಲವೇ? ಬಾಸು ಸೂಟೀಸು-ಬೂಟೀಸು ತೊಟ್ಟ ಭಸ್ಮಾಸುರನಂತೆ ಕಣ್ಮುಂದೆ ಬಂದು, ಪೆಂಡಿಂಗಿರುವ ಟಾರ್ಗೆಟ್‌ಗಳು ನೆನಪಾಗಿ ನಿದ್ರೆ ಹಾರಿ ಹೋಯಿತೇ? ಚಿಂತಿಸಬೇಡಿ. ಟಂಟಡಾಣ್! ಇಲ್ಲಿದೆ ಪರಿಹಾರ. ಮತ್ತೆ ಮೊಬೈಲ್ ತೆರೆಯಿರಿ. ನಿಮ್ಮ ರಹಸ್ಯ ಪ್ಯಾಟರ್ನ್ ಉಜ್ಜಿ. ಫೇಸ್ಬುಕ್ಕಿದೆ. ಯೂಟ್ಯೂಬಿದೆ. ಇನ್ಸ್ಟಾಗ್ರಾಮಿದೆ. ಹಳೆಯ ಕಂಪನಿಯ ಕೊಲೀಗು ವಂದನಾ ಈ ರಾತ್ರಿ ಯಾವ ರೆಸ್ಟೋರೆಂಟಿನ ಯಾವ ಬೇಳೇಕಾಳು ತಿಂದಳು ಎಂಬುದು, ಸಹೋದ್ಯೋಗಿ ವೀರೇಶನ ಹುಡುಗಿ ಕೈಕೊಟ್ಟು ಅವನಿಗೆ ಲವ್ ಫೇಯ್ಲೂರಾಗಿರುವುದು, ಹೊಸದಾಗಿ ಮದುವೆಯಾದ ಹಳೆಯ ಗೆಳತಿ ಹಾಗೂ ಅವಳ ಹೊಸ ಗಂಡ ಊಟಿಯ ಬೆಟ್ಟದ ಮೇಲೆ ಒಬ್ಬರನ್ನೊಬ್ಬರು ತಬ್ಬಿಕೊಂಡಿದ್ದು, ಪಕ್ಕದ ಮನೆಯ ನಿತೇಶನ ಮಮ್ಮಿ ರಾತ್ರಿ ಊಟಕ್ಕೆ ಬಿಸಿಬೇಳೇ ಬಾತ್ ಮಾಡಿರುವುದು… ಮತ್ತಿತರ ರೋಚಕ ಮಾಹಿತಿಗಳೆಲ್ಲ ವಾಟ್ಸಾಪ್, ಫೇಸ್ಬುಕ್ಕಿನ ಸ್ಟೇಟಸ್‌ನಲ್ಲಿ ಸಾಲು ಸಾಲಾಗಿ, ಎಷ್ಟೇ ಉಜ್ಜಿದರೂ ಮುಗಿಯದೆ ಸುರಿಯುವ ಜಲ ಧಾರೆಯಂತೆ ಬರುತ್ತಲೇ ಇವೆ.‌

ಅದೂ ಬೋರಾಯಿತಾ? ನಿಮ್ಮೊಳಗಿನ ಟಾಲೆಂಟ್ ಇದ್ದಕ್ಕಿದ್ದಂತೆ ಉಕ್ಕಿ ಬಂತಾ? ನೋ ಪ್ರಾಬ್ಲಮ್! ಇಲ್ಲಿದೆ ಪರಿಹಾರ. ಟಿಕ್ ಟಾಕನ್ನೋ, ರೀಲ್ಸನ್ನೋ ತೆರೆಯಿರಿ. ಯಾವುದೋ ಹಾಡಿಗೆ, ಯಾವುದೋ ಡೈಲಾಗಿಗೆ ತುಟಿ ಆಡಿಸಿ. ಪಲ್ಟಿ ಹೊಡೆಯಿರಿ. ಕುಣಿಯಿರಿ. ಲಾಗಾ ಹಾಕಿ. ತೊರೆದು ಹೋದ ಗೆಳತಿಯ ನೆನೆದು ಹಾಡಿ. ನಿಮ್ಮಿಷ್ಟದ ನಾಯಕನ ಡೈಲಾಗು ಹೊಡೆದು ಝೂಮ್ ಎಫೆಕ್ಟ್ ಆ್ಯಡ್ ಮಾಡಿ. ಇಡೀ ಜಗತ್ತೇ ನಿಮ್ಮ ಟಾಲೆಂಟು ನೋಡಿ ಭಲಾ ಭೇಶ್ ಎನ್ನುತ್ತದೆ.

ಅಷ್ಟಕ್ಕೂ ನೆಮ್ಮದಿಯಾಗಿಲ್ವಾ? ಮನಸ್ಸಿಗೆ ಬೇರೇನೋ ‘ಬೇಕು’ ಅನಿಸುತ್ತಿದೆಯಾ? ‘ಅದಕ್ಕೂ’ ದಾರಿಯಿದೆ. ನೂರಾರು ವೆಬ್ಸೈಟುಗಳಿವೆ. ಚಾಟಿಂಗ್ ಆ್ಯಪುಗಳಿವೆ. ಬಯಸಿದ್ದನ್ನೆಲ್ಲ ಕೊಡುವವರಿದ್ದಾರೆ. ಯಾವ ಗೊಡ್ಡು ಸಂಪ್ರದಾಯದ ಹಂಗೂ ಇಲ್ಲದೇ ಜಗದೆಲ್ಲ ನಿಯಮಗಳ ಗಾಳಿಗೆ ತೂರಿ ಕುಳಿತಲ್ಲೇ ಕರಗುವ ಅವಕಾಶಗಳಿವೆ. ತಪ್ಪು-ಸರಿಗಳೆಲ್ಲ ಹಗಲಿನಲ್ಲಿ, ಗುಂಪಿನಲ್ಲಿ, ಬೆಳಕಿನಲ್ಲಿ ಮಾತ್ರ. ರಾತ್ರಿ, ಏಕಾಂತ, ಕತ್ತಲುಗಳನ್ನು ಪ್ರಶ್ನಿಸುವವರ್ಯಾರು?

ಸೆಕೆಯಾದರೆ ಏಸಿ ಇದೆ. ಚಳಿಯಾದರೆ ಹೀಟರ್ ಇದೆ. ತಲೆನೋವಾದರೆ ಸ್ಯಾರಿಡಾನ್ ಇದೆ. ಬೆನ್ನು ಉಳುಕಿದರೆ ಮೂವ್ ಇದೆ. ಹೃದಯವೇ ನಿಂತು ಹೋಯಿತಾ? ನೋ ವರೀಸ್! ಸಸಿಯಲ್ಲದ ಅದನ್ನೂ ಕಸಿ ಮಾಡುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿವೆ! “ಹಾರ್ಟ್‌ಅಟ್ಯಾಕ್‌ಗೆ ಹೆದರುವುದೇ ಬೇಡ!” ಎಂದು ವೃದ್ಧರೊಬ್ಬರು ಜಾಹೀರಾತಿನಲ್ಲಿ ಹೇಳುತ್ತಿದ್ದಾರೆ. ಒಂದೊಂದು ಅಂಗಕ್ಕೂ ಒಬ್ಬೊಬ್ಬ ಸ್ಪೆಷಲಿಸ್ಟ್ ಇದ್ದಾರೆ. ಒಂದೊಂದು ಸಂದಿಯನ್ನು ಸ್ಕ್ಯಾನ್ ಮಾಡುವುದಕ್ಕೂ ಒಂದೊಂದು ಯಂತ್ರವಿದೆ. ತಂತ್ರಜ್ಞಾನವಿದೆ. ಮಲಗಿಸಲು ಮಾತ್ರೆಯಿದೆ. ಎಬ್ಬಿಸಲು ಅಲರಾಂ ಇದೆ. ಇಂಗ್ಲೀಷ್ ಮೆಡಿಸಿನ್ ಬೇಡವಾ? ಆಯುರ್ವೇದ ಆಸ್ಪತ್ರೆ ಇಲ್ಲೇ ಎರಡು ಕ್ರಾಸಿನ ಆಚೆ ಇದೆ. ಕಷಾಯ ಕಹಿಯಾ? ಹಾಗಾದರೆ ಸಿಹಿ ಗುಳಿಗೆಗಳ ಹೋಮಿಯೋಪತಿಯೂ ಇದೆ! ಮಕ್ಕಳಾಗುವುದಕ್ಕೆ ಚಿಕಿತ್ಸೆಯಿದೆ. ಬೇಡವಾ? ಅದಕ್ಕೂ ಗುಳಿಗೆಯಿದೆ. ಹುಟ್ಟಿಸುವುದಕ್ಕೆ ಸಿಝ಼ರಿನ್ ಇದೆ.‌ ಕೊಲ್ಲ ಬಯಸಿದರೆ ಸುಪಾರಿ ಇದೆ.

ಒಂಟಿಯೆನಿಸಿದರೆ ಡೇಟಿಂಗ್ ಆ್ಯಪ್ ಇದೆ. ಜಂಟಿಯಾಗಬೇಕೆನಿಸಿದರೆ ಅದಕ್ಕೂ ಮ್ಯಾಟ್ರಿಮೋನಿ ಇದೆ. ಮದುವೆಗೆ ಓಡಾಡಲಿಕ್ಕೆ ಸಮಯವಿಲ್ವಾ? ಯಾಕ್ ಸಾರ್ ಹೆದರ್ತೀರಾ? ಮಾನ್ಯವರ್ ಮುಂತಾದ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳು ಅದಕ್ಕಾಗಿಯೇ ಕಾಯುತ್ತಿವೆ.‌ ಎಷ್ಟೆಷ್ಟು ಹೊತ್ತಿಗೆ ಏನೇನು ಕಾರ್ಯಕ್ರಮ, ಯಾರ್ಯಾರಿಗೆ ಯಾವ ಡ್ರೆಸ್, ಚಪ್ಪರ ಎಲ್ಲಿ, ತೋರಣ ಎಲ್ಲಿ ಎಲ್ಲಾ ಅವರೇ ನೋಡಿಕೊಳ್ಳುತ್ತಾರೆ. ಹುಡುಗಿಯ ಅಮ್ಮ, ಚಿಕ್ಕಿ, ಅತ್ತೆ, ಗೆಳತಿಯರೇ, ಅರಾಮಾಗಿರಿ! ಮದುಮಗಳನ್ನು ತಯಾರು ಮಾಡಲಿಕ್ಕೆ ಬ್ಯುಟೀಷಿಯನ್ ಇದ್ದಾಳೆ. ಮುಖಕ್ಕೆ ಮೂರೂವರೆ ಇಂಚು ಬಳಿದ ಮೇಲೂ ಉಳಿಯುವಷ್ಟು ಬಳಿಯಬಲ್ಲ ಬಣ್ಣ ಅವಳ ಮೇಕಪ್ ಸೆಟ್ಟಿನಲ್ಲಿದೆ. ಓ ಮದುಮಗಳ ತಂದೆಯೇ, ಹೆದರಬೇಡಿ! ಬನ್ನಿ, ಓಡಾಡಿ, ಮಾತಾಡಿಸಿ, ಅಕ್ಷತೆ ಹಾಕಿ. ಮೊದಲ ರಾತ್ರಿಯ ತನಕ ಎಲ್ಲವನ್ನೂ ಅವರೇ ಪ್ಲಾನ್ ಮಾಡಿದ್ದಾರೆ.  ನಿಮ್ಮ ಕೆಲಸ ಹೆಚ್ಚೇನಿಲ್ಲ. ಬಿಲ್ಲು ಕೊನೆಯಲ್ಲಿ ಬರುತ್ತದೆ. ಅಲ್ಲಿಯ ತನಕ ನೀವು ನಿರಾಳ.

ಮಧು ಚಂದ್ರಕ್ಕೆ ಹೋಗಬೇಕೇ? ಅಗೋಡಾ ಇದೆ. ಯಾತ್ರಾ ಇದೆ. ಸಾವಿರ ಪ್ಯಾಕೇಜುಗಳ ಎಂತೆಂಥದ್ದೋ ವೆಬ್ ಸೈಟುಗಳಿವೆ. ಓಲಾ ಕಾರು ಮನೆ ಬಾಗಿಲಿಗೆ ಬರುತ್ತದೆ. ಹತ್ತಿಕೊಳ್ಳಿ. ಬಸ್ಸು ನಿಲ್ದಾಣಕ್ಕೆ ಬರುತ್ತದೆ. ಏರಿ ಮಲಗಿ. ಕಣ್ತೆರೆದು ನೋಡಿದರೆ ಊಟಿ! ಕೊಡೈಕೆನಲ್! ಕಾಶ್ಮೀರ! ಸ್ವಿಟ್ಜರ್ಲ್ಯಾಂಡ್!! ಹೋಟೆಲ್ಲು ಬುಕ್ಕಾಗಿದೆ. ಅಲ್ಲಿ ಮಂಜು ಮುಸುಕಿದ ಊರಿದೆ. ಇಲ್ಲಿ ಓಡಾಡುವ ಕಾರಿದೆ. ಯೇ ರಾತೇ ಮುಲಾಕಾತೇ ಅಂತ ಹಾಡಿಬಿಡಿ.

ಅತ್ತೆ ಬೈದರೆ ಬೇರೆ ಮನೆಯಿದೆ. ಮಾವನಿಗೆ ಖಾಯಿಲೆಯಾದರೆ ಹೋಂ ನರ್ಸ್ ಇದ್ದಾರೆ. ಅಣ್ಣ-ತಮ್ಮನನ್ನು ಆಚೆ ಕಳಿಸಲು ಪಾಲು ಮಾಡಿದರಾಯಿತು. ಕೊನೆಗೆ ಮದುವೆಯೇ ಬೇಜಾರಾಯಿತಾ? ದಾಂಪತ್ಯವೇ ಬೋರಾಯಿತಾ? ಅಲ್ಲಿದ್ದಾರೆ ನೋಡಿ ಅಡ್ವೋಕೇಟ್, ದಿ ಡೈವೋರ್ಸ್ ಸ್ಪೆಷಲಿಸ್ಟ್! ಸೆಕ್ಷನ್ನುಗಳನ್ನೆಲ್ಲ ಹುಡುಕಿ, ‌ನಿಮ್ಮ ವಯಕ್ತಿಕ ಬದುಕನ್ನೆಲ್ಲ ಕೆದಕಿ ಲಾ ಪಾಯಿಂಟ್ ಇಟ್ಟನೆಂದರೆ ಮುಗಿಯಿತು. ಎಂಥಾ ಜಡ್ಜಾದರೂ ತಲೆ ಕೆರೆದುಕೊಂಡು ತಲಾಕ್ ತಲಾಕ್ ಎಂದುಬಿಡುತ್ತಾರೆ!  ಅಪ್ಪ, ಅಮ್ಮ, ಅತ್ತೆ, ಮಾವ ಕಿವಿ ಮಾತು ಹೇಳಿ ಕಿರಿಕಿರಿ ಮಾಡಿದರೆ ಅವರಿಗೆ ಕಾಣುವಂತೆ ‘ಮೈ ಲೈಫ್ ಮೈ ಚಾಯ್ಸ್’ ಎಂದು ಸ್ಟೇಟಸ್ ಹಾಕಿಬಿಡಿ. ಪುನಃ ಮದುವೆಯಾಗಲು ಬಯಸಿದರೆ ಮತ್ತದೇ ಮ್ಯಾಟ್ರಿಮೋನಿ, ಈವೆಂಟ್ ಮ್ಯಾನೇಜ್ಮೆಂಟು, ಹನಿಮೂನು ಟ್ರಾವೆಲ್ ಬುಕ್ಕರ್ ಆ್ಯಪ್‌ಗಳು…

*****

ತೇಜಸ್ವಿಯವರ ಪುಸ್ತಕಗಳನ್ನು ಓದುತ್ತಿದ್ದೆ. ಕಾಡೆಲ್ಲ ಅಲೆದು, ಹಾವಿನ ಚರ್ಮ ಸುಲಿದು, ಮಾರಿ ಬದುಕುವವರ ಕಥೆ ಇತ್ತು. ಸೌದೆ ಕಡಿದು ನೀರು ಕಾಯಿಸಿಕೊಳ್ಳುವ ಚಿತ್ರಣ ಇತ್ತು. ಕಾಡು ಕಡಿದು, ಗದ್ದೆ-ತೋಟ ಮಾಡಿ, ಉತ್ತಿ, ಬಿತ್ತಿ, ಬೆವರು ಹರಿಸಿ ಪುಡಿಗಾಸಿನಂಥಾ ಹೊಂಗನಸುಗಳ ಸಂಪಾದಿಸುವವರ ವ್ಯಥೆ ಇತ್ತು. ಜೇನಿತ್ತು. ಹಂದಿಯಿತ್ತು. ಕಾಡಿತ್ತು‌. ಬಸ್ಸುಗಳೇ ಓಡದ ದಾರಿಯಿತ್ತು. ಕಾರುಗಳೇ ಇಳಿಯದ ಹೆದ್ದಾರಿಯಿತ್ತು. ಅಲ್ಲೆಲ್ಲೋ ಒಂದು ಹಕ್ಕಿಯಿತ್ತು. ಅದರದ್ದೇ ಗೂಡಿತ್ತು. ಆ ಗೂಡಿನಂಥದ್ದೇ ಗುಡಿಸಲಿತ್ತು. ಅಲ್ಲಿ ದೀಪವಿತ್ತು. ದೀಪಾವಳಿಯೂ ಇತ್ತು. ಸಂಕ್ರಾಂತಿ, ಭೂಮಿ ಹುಣ್ಣಿಮೆಗಳಿತ್ತು. ಅಪ್ಪ ಕಟ್ಟಿಗೆ ಕಡಿಯುತ್ತಿದ್ದ. ಅಜ್ಜಿ ಅದನ್ನು ಒಲೆಗೆ ಒಟ್ಟುತ್ತಿದ್ದಳು. ಅಮ್ಮ ಗಂಜಿ ಬೇಯಿಸುತ್ತಿದ್ದಳು. ಅಕ್ಕ ಬಡಿಸುತ್ತಿದ್ದಳು. ಚಿಕ್ಕಮ್ಮ ಉಪ್ಪಿನಕಾಯಿ ಹಾಕುತ್ತಿದ್ದಳು. ಹತ್ತು ಕೈಗಳು ಸೇರಿ ಮಾಡಿದ ಅಡುಗೆಯಲ್ಲಿ ಅದೆಂಥದೋ ರುಚಿಯಿತ್ತು. ಊಟವಿಲ್ಲದ ದಿನ ‘ಎಲ್ಲ ದೇವರ ಪರೀಕ್ಷೆ’ ಎಂಬ ಅರೆ ಸಮಾಧಾನದ ನಿದ್ರೆಯಿತ್ತು.

ಕಾಲ ಬದಲಾಯಿತು. ಆಧುನಿಕತೆ ಎದ್ದು ನಿಂತಿತು. ಕಟ್ಟಿಗೆ ಕಡಿಯುವುದು ಕಷ್ಟ ಎಂದು ಗೀಝರ್ ಬಂತು. ಮತ್ತಿ ಸೊಪ್ಪು ಸಿಗುತ್ತಿಲ್ಲ ಎಂದು ಶ್ಯಾಂಪೂ ಬಂತು. ಅಮ್ಮ ಊರಲ್ಲಿದ್ದಾಳೆ ಎಂದಾಗ ಜೊಮ್ಯಾಟೋ ಬಂತು. ಕಾಲಿಗೆ ಬದಲಾಗಿ ಕಾರು ಬಂತು. ಸಾಕ್ಷಾತ್ ದ್ವಾಪರ ಯುಗದ ಕಾಳಿಂಗವೇ ಮೆಟ್ರೋದ ರೂಪ ತಾಳಿ ಹರಿದು ಬಂತು. ಎಲ್ಲವೂ ಸುಲಭವಾಯಿತು. ಸುಲಲಿತವಾಯಿತು. ಇಡೀ ಪ್ರಪಂಚವೇ ಬೆರಳ ತುದಿಯಲ್ಲಿ ಸಿಕ್ಕಿಕೊಂಡಿತು. ಮನುಷ್ಯ ಲೋಕದ ಬಾವುಟವೊಂದು ಚಂದ್ರನ ಅಂಗಳದಲ್ಲಿ ಪಟಪಟಿಸಿತು. “ವಿ ಆರ್ ಅಡ್ವಾನ್ಸ್ಡ್. ಹೈಲಿ ಸಿವಿಲೈಸ಼್ಡ್. ವಿಜ್ಞಾನಕ್ಕೆ ಅಸಾಧ್ಯವಾದದ್ದು ಯಾವುದೋ ಇಲ್ಲ” ಎಂದು ಮನುಷ್ಯ ಘೋಷಿಸಿದ.

ಅಲ್ಲೊಬ್ಬ ಕ್ಯಾನ್ಸರ್ ರೋಗಿ ಮೌನವಾಗಿ ನರಳಿದ.

ಇಡೀ ಶಹರದುದ್ದಕ್ಕೂ ಹತ್ತಾರು ವೃದ್ಧಾಶ್ರಮಗಳು. ಅದನ್ನೂ ಮೀರಿದ ಸಂಖ್ಯೆಯ ಅನಾಥಾಶ್ರಮಗಳು. ಬೀದಿಗೊಂದರಂತೆ ಆಸ್ಪತ್ರೆಗಳು. ಅದರ ಒಂದೊಂದು ಮಂಚದಲ್ಲೂ ನರಳುವ, ಸಾವಿನ ವರ ಬೇಡುತ್ತಿರುವ ಜೀವಗಳು. ಪಕ್ಕದಲ್ಲಿ ಮನದಲ್ಲೇ ಕೈಮುಗಿದು ಕುಳಿತ ಮನೆಯವರು. ಇಂಜಕ್ಷನ್ ಮಾತ್ರೆ ಕೊಟ್ಟು, ಹೆಚ್ಚೆಂದರೆ ಆಪರೇಷನ್ ಮಾಡಿ ಉಳಿದದ್ದನ್ನೆಲ್ಲ ದೇವರಿಗೆ ಬಿಡುವ ಡಾಕ್ಟರು. ಮತ್ತದೇ ದೇವರ ಪರೀಕ್ಷೆಯೆಂಬ ಪೂರ್ಣ ಅಸಮಾಧಾನದ ನಿದ್ರೆಗಳು…

ಐಸಿಯೂನಲ್ಲಿ ಮೂಗು, ಬಾಯಿ, ಬೆನ್ನು, ಕೈಗೆಲ್ಲ ನಾಳ ಚುಚ್ಚಿಸಿಕೊಂಡ ಬದುಕೂ ಅಲ್ಲದ, ಸಾವೂ ಅಲ್ಲದ ಸ್ಥಿತಿಯಲ್ಲಿರುವ ರೋಗಿಗಳು, ಅವರ ನೋವು ಶಮನ ಮಾಡದ, ಕೇವಲ ಲಕ್ಷ ಲಕ್ಷದ ಬಿಲ್ಲು ಕೊಡಬಹುದಾದ ಯಂತ್ರ, ಚಿಕಿತ್ಸೆಗಳು. ಕೋಟ್ಯಂತರ ಕೊಲೆ, ಸುಲಿಗೆ, ಪಾಲು, ಡೈವೋರ್ಸ್, ಮೋಸ, ಮರ್ಡರ್, ರೇಪ್ ಕೇಸುಗಳು ಬಾಕಿ ಇರುವ ಕೋರ್ಟುಗಳು, ‘ಐ ನೀಡ್ ಪೀಸ್‌ ಆಫ್ ಮೈಂಡ್’ ಎಂದು ಮುಚ್ಚಿದ ಕೋಣೆಯಲ್ಲಿ ಸೈಕ್ರಾಟ್ರಿಸ್ಟ್ ಎದುರು ನರಳುವ ಬಿಇ, ಎಂಸ್ಸಿ ಪದವೀಧರರ ಲಕ್ಷಾಧಿಪತಿಗಳು…

ಬೃಹತ್ ವೃದ್ಧಾಶ್ರಮವಾಗುತ್ತಿರುವ ಹಳ್ಳಿಗಳು, ಕಾಣೆಯಾಗುತ್ತಿರುವ ಕಾಡುಗಳು, ಸಾಯುತ್ತಿರುವ ತೋಟಗಳು, ನೇತಾಡುವ ಕುಣಿಕೆಗಳು, ಇಂದೋ ನಾಳೆಯೋ ಅದರೊಳಕ್ಕೆ ತೂರಲಿರುವ ರೈತರ ರುಂಡಗಳು, ವಿಷವಾಗುತ್ತಿರುವ ಗಾಳಿಗಳು, ಹಾಡು ಹಗಲಿನ ಹಾದರಗಳು, ಹೈಲಿ ಅಡ್ವಾನ್ಸ್ಡ್ ದರೋಡೆಗಳು, ಕಚಡಾ ರಾಜಕಾರಣಗಳು, ಮಾತೆತ್ತಿದರೆ ಜಾತಿ ಕೇಳುವ ಮನಸ್ಥಿತಿಗಳು, ಕಲಬೆರಕೆ ನೀರುಗಳು, ಕ್ಯಾನ್ಸರ್ ತರಿಸುವ ತಿಂಡಿಗಳು, ಬೊಜ್ಜು ಬರಿಸುವ ಉದ್ಯೋಗಗಳು…

ಅರೆರೇ ವಿಜ್ಞಾನವೇ.. ನೀನು ಸುಧಾರಿಸಿದ್ದಾದರೂ ಏನನ್ನು? ಹೇಳು ನಾಗರೀಕತೆಯೇ… ನೀನು ಸರಿ ಮಾಡಿದ್ದು ಯಾವುದನನ್ನು? ಅಲ್ಲ ತಂತ್ರಜ್ಞಾನವೇ, ಅಷ್ಟೆಲ್ಲ ಅವಿಷ್ಕಾರ, ಸಂಶೋಧನೆ, ಅಧ್ಯಯನಗಳ ಬಳಿಕವೂ ಮತ್ತೆ ನಾವೆಲ್ಲ ‘ವಿಧಿಯ ಆಟ’ ಎಂಬ ಅಸಹಾಯಕ ನಿಟ್ಟುಸಿರನ್ನೇ ಧ್ಯಾನಿಸುತ್ತಿದ್ದೇವೆ. ಆದರಿಂದು ನಮ್ಮ ಸಹಾಯಕ್ಕೆ ದೇವರೂ ಇಲ್ಲ.

ವಿಜ್ಞಾನದ ಮೊಟ್ಟ ಮೊದಲ ಪುಟದಲ್ಲೇ ಅವನ ಕೊಲೆಯಾಗಿದೆ.

ಬದುಕು ಈಗ ತುಂಬಾ ಕಷ್ಟ.

About The Author

ವಿನಾಯಕ ಅರಳಸುರಳಿ

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ' ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ 'ಮರ ಹತ್ತದ ಮೀನು' ಕಥಾ ಸಂಕಲನಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ