ಕವಿಯಾಗಿ ಮಾಲತಿಯವರಿಗೆ ಕತ್ತಲು ಮತ್ತು ಬೆಳಕಿನ ಕುರಿತಾಗಿ ವಿಶಿಷ್ಟವಾದ ಆಕರ್ಷಣೆಯಿದೆ ಎನ್ನಬಹುದು. ಈ ಮಾತಿಗೆ ಸಾಕ್ಷಿಯಾಗಿ ಈ ಕವನಸಂಕಲನದಲ್ಲಿ ‘ಅಜ್ಜಿ ಮತ್ತು..’ ಎಂಬ ಪದ್ಯವೊಂದಿದೆ. ಇಲ್ಲಿ, ಕತ್ತಲು–ಬೆಳಕಿನ ಆಟವನ್ನು ಕೇಂದ್ರವಾಗಿರಿಸಿಕೊಂಡು ಮನುಷ್ಯ ಬದುಕಿನ ಕ್ರಿಯೆಗಳನ್ನು ಅವರು ಶೋಧಿಸಲು ಪ್ರಯತ್ನಿಸಿದ್ದಾರೆ. ಈ ಪದ್ಯದ ಶೀರ್ಷಿಕೆಯಲ್ಲಿರುವ ‘ಅಜ್ಜಿ’ ಬೇರಾರೂ ಆಗಿರದೇ ನಮ್ಮೊಳಗಿನ ಅರಿವಿನ ಕೇಡು ಕಳೆಯಲೆಂದು ನಮ್ಮ ಎದೆಯಂಗಳದಲ್ಲಿ ಮುಡಿಸಿಟ್ಟ ಅರಿವಿನ ದೀವಿಗೆಯೇ ಆಗಿದ್ದಾಳೆ!
ಮಾಲತಿ ಗೋರೆಬೈಲ್ ಬರೆದ “ಗುಬ್ಬಿ ಲಾಟೀನು” ಕವನ ಸಂಕಲನದ ಕುರಿತು ಕಲ್ಲೇಶ್ ಕುಂಬಾರ್ ಬರಹ
ಯುವ ಕವಯತ್ರಿ ಮಾಲತಿ ಗೋರೆಬೈಲ್ ಅವರ ‘ಗುಬ್ಬಿ ಲಾಟೀನು’ ಎಂಬ ಈ ಕವನಸಂಕಲನ ಶೀರ್ಷಿಕೆ ಅದೆಷ್ಟು ಅರ್ಥಪೂರ್ಣವಾಗಿದೆಯೆಂದರೆ, ಇಲ್ಲಿ, ‘ಬೆಳಕು’ ಎಂಬ ಪದದ ಅರ್ಥದ ವ್ಯಾಪ್ತಿ ವಿಶಾಲವಾಗಿದ್ದು ಕೇವಲ ಜಗದ ಕತ್ತಲನ್ನು ಕಳೆಯುವುದಕ್ಕಷ್ಟೇ ಅದರ ಅರ್ಥ ಸೀಮಿತವಾಗಿರದೇ ನಮ್ಮ ಮನದ ಅರಿವಿನ ಕೇಡು ಕಳೆದು, ಅಲ್ಲಿ ಜ್ಞಾನದ ಬೆಳಕನ್ನು ಹೊತ್ತಿಸುವುದೂ ಕೂಡ ಆಗಿದೆ. ಹೀಗಾಗಿ, ‘ಗುಬ್ಬಿ ಲಾಟೀನು’ ಚಿಕ್ಕದಾದರೂ ನಮ್ಮ ಸುತ್ತಣ ತಿಮಿರನ್ನು ತೊಳೆದು ಹಾಕುವ ಶಕ್ತಿಯನ್ನು ಹೊಂದಿದೆ. ಅದರಂತೆ ಅರಿವಿನ ಬೆಳಕನ್ನು ಬೆಳಗಬಲ್ಲ ಕ್ರಿಯೆಯ ಬಗೆಯನ್ನು ಇಲ್ಲಿನ ಪದ್ಯಗಳನ್ನು ಓದುವುದರ ಮೂಲಕ ನಾವು ಗ್ರಹಿಸಬಹುದು. ಆದಾಗ್ಯೂ, ಇಲ್ಲಿನ ಬಹುತೇಕ ಪದ್ಯಗಳು ಈ ಮಿತಿಯನ್ನು ಮೀರಿಯೂ ಹಲವು ಅರ್ಥವನ್ನು –ಸಾಧ್ಯತೆಯನ್ನು ಧ್ವನಿಸುತ್ತವೆ.
ಈ ಸಂಕಲನದ ‘ಪ್ರೀತಿಯ ಚೂರುಗಳು’ ಎಂಬ ಶೀರ್ಷಿಕೆಯ, ಇಡಿಯಾಗಿ ಒಂದು ಪದ್ಯದ ತೆರದಲ್ಲಿ ಒಂದರ ಕೆಳಗೊಂದರಂತೆ ಪೇರಿಸಿಟ್ಟ ಹನಿಗವಿತೆಗಳು ಪ್ರೀತಿ ಅಂಕುರಿಸುವ ಬಗೆಯನ್ನು ಕಟ್ಟಿಕೊಡುತ್ತವೆ. ಹಾಗೆ ನೋಡಿದರೆ ಪ್ರೀತಿ ಇಲ್ಲದೇ ಯಾವ ಸಂಬಂಧ (ಮಮಕಾರ, ದ್ವೇಷ, ಅಸೂಯೆ, ಸಿಟ್ಟು, ಸೆಡವು..)ಗಳೂ ಊರ್ಜಿತಗೊಳ್ಳಲಾರವು ಎಂಬರ್ಥವನ್ನು ಸಹ ಈ ಹನಿಗವಿತೆಗಳು ಆಂತರ್ಯದಲ್ಲಿ ಬಚ್ಚಿಟ್ಟುಕೊಂಡಿವೆ ಎಂದರೆ ತಪ್ಪಾಗಲಾರದು. ಎರಡು ಆತ್ಮಗಳ ನಡುವೆ ಪ್ರೀತಿ ಹೇಗೆಲ್ಲ ಹುಟ್ಟಬಹುದು ಹಾಗೂ ಏಕಾದರೂ ಹುಟ್ಟಬಲ್ಲದು ಎಂಬ ಕಾರಣಗಳಿಗೆ ಕವಿಯಾಗಿ ಮಾಲತಿಯವರು ಇಲ್ಲಿ ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸಿದಂತಿದೆ! ಹಾಗೆಯೇ ಪ್ರೀತಿಸುವ ಹೃದಯಕ್ಕೆ ಹೇಗೆಲ್ಲ ಪ್ರೀತಿಸಬಹುದು ಎಂಬ ಸಲಹೆಯನ್ನು ಅವರು ಕೊಟ್ಟಿದ್ದಾರೆ ಎಂಬರ್ಥದಲ್ಲಿ ಈ ಹನಿಗವಿತೆಗಳಿವೆ.
ಕವಿಯಾಗಿ ಮಾಲತಿಯವರಿಗೆ ಕತ್ತಲು ಮತ್ತು ಬೆಳಕಿನ ಕುರಿತಾಗಿ ವಿಶಿಷ್ಟವಾದ ಆಕರ್ಷಣೆಯಿದೆ ಎನ್ನಬಹುದು. ಈ ಮಾತಿಗೆ ಸಾಕ್ಷಿಯಾಗಿ ಈ ಕವನಸಂಕಲನದಲ್ಲಿ ‘ಅಜ್ಜಿ ಮತ್ತು..’ ಎಂಬ ಪದ್ಯವೊಂದಿದೆ. ಇಲ್ಲಿ, ಕತ್ತಲು–ಬೆಳಕಿನ ಆಟವನ್ನು ಕೇಂದ್ರವಾಗಿರಿಸಿಕೊಂಡು ಮನುಷ್ಯ ಬದುಕಿನ ಕ್ರಿಯೆಗಳನ್ನು ಅವರು ಶೋಧಿಸಲು ಪ್ರಯತ್ನಿಸಿದ್ದಾರೆ. ಈ ಪದ್ಯದ ಶೀರ್ಷಿಕೆಯಲ್ಲಿರುವ ‘ಅಜ್ಜಿ’ ಬೇರಾರೂ ಆಗಿರದೇ ನಮ್ಮೊಳಗಿನ ಅರಿವಿನ ಕೇಡು ಕಳೆಯಲೆಂದು ನಮ್ಮ ಎದೆಯಂಗಳದಲ್ಲಿ ಮುಡಿಸಿಟ್ಟ ಅರಿವಿನ ದೀವಿಗೆಯೇ ಆಗಿದ್ದಾಳೆ! ಈ ಸಾಲುಗಳನ್ನು ನೋಡಿ:
ಸುಖವ ಅನುಭವಿಸದೇ
ಹತ್ತು ಹೆತ್ತವಳು
ಕಾರ್ಗತ್ತಲಿಗೂ ಬಟ್ಟೆ ತೊಡಿಸಿ
ಲಾಲಿ ಹಾಡಿದವಳು
ಬದುಕಿನುದ್ದಕ್ಕೂ ಬರೀ ನೋವನ್ನೇ ಉಂಡರೂ ಸಹ ಆ ನೋವಿನಲ್ಲೇ ಸುಖ, ಸಂತೋಷ, ಸಂಭ್ರಮವನ್ನು ಅರಸಲು ಪ್ರಯತ್ನಿಸುವ ಆ ಹೆಣ್ಣುಮಗಳ ಬದುಕಿನ ತಿಳುವಳಿಕೆಯ ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಈ ಸಾಲುಗಳಿವೆ. ಏಕೆಂದರೆ ಕತ್ತಲು ಹೇಗೆ ಕೇಡನ್ನು ಸಂಕೇತಿಸುತ್ತದೆಯೋ ಹಾಗೆಯೇ ಸುಖ, ಸಂತೃಪ್ತಿ, ನೆಮ್ಮದಿಯಯನ್ನೂ ಸಹ ಸಂಕೇತಿಸುತ್ತದೆ. ಈ ಅರ್ಥವನ್ನು ಮೀರಿಯೂ ಮುಷ್ಟಿ ಗಾತ್ರದ ಲಾಟೀನಿಗೆ ಜಗದ ಕತ್ತಲನ್ನು ಸಾಧ್ಯವಾಗದಿದ್ದರೂ ತಾನಿರುವ ಪರಿಸರವನ್ನು ಬೆಳಗಬಲ್ಲದು! ಅಂತೆಯೇ, ಮನುಷ್ಯರಾದ ನಾವು ಲೋಕದ ಕತ್ತಲೆಯೊಂದಿಗೆ ಅರಿವಿನ ಕೇಡು ಕಳೆಯಲು ಬೆಳಕಿನೊಂದಿಗೆ ಬಾಳಬೇಕಾಗಿರುವುದು ಅನಿವಾರ್ಯವಾಗಿದೆ ಎಂಬುದು ಇಡಿಯಾಗಿ ಪದ್ಯದ ತಾತ್ಪರ್ಯವಾಗಿದೆ.

ಇನ್ನು, ಈ ಸಂಕಲನದಲ್ಲಿ ನನ್ನನ್ನು ತೀವ್ರವಾಗಿ ಸೆಳೆದದ್ದು ‘ಶೀಗೇಕಾಯಿ’ ಎಂಬ ಪದ್ಯ. ಸಾಂಪ್ರದಾಯಿಕವಾದ ಬದುಕಿನಲ್ಲಿರಬಹುದಾದ ನಿಜವಾದ ಸುಖವು ಕಾರ್ಪೊರೇಟ್ ಜಗತ್ತು ರೂಪಿಸಿದ ಕೃತ್ರಿಮವಾದ ಬದುಕಿನಲ್ಲಿ ಇಲ್ಲ ಎಂಬ ಅರ್ಥವನ್ನು ಧ್ವನಿಸುತ್ತದೆ. ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳು ಬೆಳಿಗ್ಗೆ ಸ್ನಾನ ಮಾಡುವಾಗ ತಲೆಗೂದಲು ಫಳ ಫಳ ಹೊಳೆಯುವಂತೆ ಮಾಡಲು ಬಳಸುತ್ತಿದ್ದ ಶೀಗೇಕಾಯಿಯ ಹುಡಿಯನ್ನು (ನೊರೆ ಬರುವಂತೆ ರಾಸಾಯನಿಕ ದ್ರವ್ಯಗಳನ್ನು ಮಿಶ್ರಣ ಮಾಡಿ) ಸ್ಯಾಚೆಗಳಲ್ಲಿ ತುಂಬಿಸಿ ಮಾರಾಟ ಮಾಡುವುದರ ಮೂಲಕ ಅದನ್ನು ವ್ಯಾಪಾರದ ಸರಕನ್ನಾಗಿಸಿರುವುದು ದುರಂತವೇ ಸರಿ! ಹಿಂದಿನ ಕಾಲದಲ್ಲಿ ಎಲ್ಲೆಂದರಲ್ಲಿ ಧಾರಾಳವಾಗಿ ಪುಕ್ಕಟೆಯಾಗಿ ಸಿಗುತ್ತಿದ್ದ ಸಿಗೇಕಾಯಿ ವ್ಯಾಪಾರದ ಸರಕಾಗಿರುವುದರ ಹಿಂದೆ ಮನುಷ್ಯನ ಆಧುನಿಕ ಭೋಗ ಜಗತ್ತಿನ ಕುರಿತಾದ ಹಪಹಪಿಯೇ ಕಾರಣವಾಗಿದೆ. ಈ ಮೂಲಕ ಆತ ಆರ್ದ್ರವಾದ ಜೀವ ಸಂಬಂಧಗಳನ್ನು ಕಳಚಿಕೊಂಡು ಕೃತ್ರಿಮವಾದ (ಸ್ಯಾಚೆಯಲ್ಲಿರುವ ಸೀಗೇಕಾಯಿ ಪುಡಿಯಂತೆ!) ಬದುಕಿನ ಪರೀಧಿಯೊಳಗೆ ನೀರಸವಾದ ಬದುಕನ್ನು ನಿರ್ವಹಿಸುತ್ತಿದ್ದಾನೆ ಎಂಬುದಕ್ಕೆ ಸಾಕ್ಷಿಯೆಂಬಂತೆ ಈ ಪದ್ಯವಿದೆ.
ಮಾಲತಿಯವರಿಗೆ ತಾವು ನಿರ್ವಹಿಸುತ್ತಿರುವ ಬದುಕಿನ ಕುರಿತಾಗಿ ಅದಮ್ಯವಾದ ಪ್ರೀತಿಯಿದೆ. ಹೀಗಾಗಿಯೇ ಅವರು ಈ ಸಂಕಲನದಲ್ಲಿನ ಪದ್ಯಗಳಲ್ಲಿ ಮತ್ತೆ ಮತ್ತೆ ಪ್ರೀತಿ, ವಿಶ್ವಾಸ, ನಂಬಿಕೆಗಳ ಕುರಿತಾಗಿಯೇ ಚರ್ಚಿಸುತ್ತಾರೆ. ‘ಒಡ್ಡಿಕೊಳ್ಳಬೇಕು’ ಎಂಬ ಪದ್ಯ ಈ ಮಾತಿಗೆ ಸಾಕ್ಷಿಯಾಗಿದೆ. ಈ ಪದ್ಯದಲ್ಲಿ ಬದುಕು ಹಾಗೂ ಪ್ರೀತಿಯನ್ನು ಸಮೀಕರಿಸಿ ನೋಡಲು ಪ್ರಯತ್ನಿಸಿದ್ದಾರೆ. ನಾವು ಬದುಕಿನ ಸಿಕ್ಕುಗಳಿಂದ ಮುಕ್ತರಾಗಲು ಪರಸ್ಪರ ಸಹೃದಯತೆಯನ್ನು ಬೆಳೆಸಿಕೊಳ್ಳಬೇಕು. ಒಳಮಿಡಿತದ ಸದ್ದಿಗೆ ಎದೆಯಾನಿಸಿದಾಗ ಮಾತ್ರ ಬದುಕು ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ ಎಂದು ಮಾಲತಿಯವರು ಅಭಿಪ್ರಾಯ ಪಡುತ್ತಾರೆ.

ಅಂದ ಹಾಗೆ, ಈ ಕವನಸಂಕಲನದಲ್ಲಿ ಓದುಗನಿಗೆ ತೀವ್ರವಾಗಿ ತಟ್ಟುವ, ಆ ಮೂಲಕ ಚಿಂತನೆಗೀಡು ಮಾಡುವ ಪದ್ಯಗಳಿವೆ. ಓದುಗರಾದ ನಾವು ಈ ಪದ್ಯಗಳೊಂದಿಗೆ ಮುಖಾಮುಖಿಯಾಗುವುದೆಂದರೆ ನಮ್ಮದೇ ಬದುಕಿನೊಂದಿಗೆ ಅಷ್ಟೇ ಪ್ರಾಮಾಣಿಕವಾಗಿ ಮುಖಾಮುಖಿಯಾದಂತೆಯೇ ಸರಿ. ಬದುಕನ್ನು, ಬದುಕಿನ ಸ್ಥಿತ್ಯಂತರಗಳನ್ನು ಇನ್ನೊಂದು ಬಗೆಯಲ್ಲಿ ತೆರೆದಿಡುವ ಈ ಪದ್ಯಗಳು ಓದಿದ ಹಲವು ದಿನಗಳ ಕಾಲ ಮನದಲ್ಲಿ ಉಳಿದುಕೊಳ್ಳುತ್ತವೆ ಎಂದರೆ ಉತ್ಪ್ರೇಕ್ಷೆಯ ಮಾತಾಗಲಾರದು.
(ಕೃತಿ: ಗುಬ್ಬಿ ಲಾಟೀನು, ಲೇಖಕರು: ಮಾಲತಿ ಗೋರೆಬೈಲ್, ಪ್ರಕಾಶನ: ಕವಿತಾ ಪ್ರಕಾಶನ, ಮೈಸೂರು, ಪುಟ ಸಂಖ್ಯೆ : 92, ಪ್ರಕಟಣೆ: 2025, ಬೆಲೆ: 100/- )

ಕಲ್ಲೇಶ್ ಕುಂಬಾರ್ ಮೂಲತಃ ಬೆಳಗಾವಿ ಜಿಲ್ಲೆಯ ಹಾರೂಗೇರಿಯವರು. ಸಧ್ಯ, ಬಾಗಲಕೋಟ ಜಿಲ್ಲೆಯ ತೇರದಾಳದ ಶಾಖಾ ಗ್ರಂಥಾಲಯದಲ್ಲಿ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಉರಿಯ ನಾಲಗೆಯ ಮೇಲೆ’, ‘ಉಸುರಿನ ಪರಿಮಳವಿರಲು’, ‘ನಿಂದ ನಿಲುವಿನ ಘನ’ ಇವರ ಪ್ರಕಟಿತ ಕಥಾಸಂಕಲನಗಳು. ‘ಪುರುಷ ದಾರಿಯ ಮೇಲೆ’ ಕವನಸಂಕಲನದ ಪ್ರಕಟಣೆ.

