Advertisement
ಮಿಲೇ ಸುರ್ ಮೇರಾ ತುಮ್ಹಾರ: ಸುಮಾವೀಣಾ ಬರಹ

ಮಿಲೇ ಸುರ್ ಮೇರಾ ತುಮ್ಹಾರ: ಸುಮಾವೀಣಾ ಬರಹ

ದೂರದರ್ಶನದವರು ನಂತರದ ವರ್ಷಗಳಲ್ಲಿ ತಯಾರಿಸಿದ ಅಂತರಾಷ್ಟ್ರೀಯ  ಅಹಿಂಸಾ ಮಹತ್ವವನ್ನು ಹೇಳುವ  ‘ವಂದೇ ಮಾತರಂ’ ವಿಡಿಯೋ ಅದ್ಭುತ. ಮಗುವನ್ನು ಹಿಡಿದು ಬಚ್ಚು ಬಾಯಗಲಿಸುವ ಗಾಂಧಿಯ ದೃಶ್ಯದೊಂದಿಗೆ ಗಾಂಧೀಜಿಯ ಇತರೆ ಅಪೂರ್ವ ದೃಶ್ಯಾವಳಿಗಳ   ಸಂಗ್ರಹವನ್ನು ನೋಡಬಹುದು. ಸಾಹಿತ್ಯವಿಲ್ಲದೆ ಬರೇ ವಾದ್ಯ ಸಂಗೀತದ ಮೂಲಕವೇ ವಂದೇ  ಮಾತರಂ  ಧ್ವನಿ ಅದ್ಭುತವಾಗಿದೆ. ನಮ್ಮ ರಾಷ್ಟ್ರೀಯ ದ್ವಜವನ್ನು  ಹಿಡಿದು ಸಂಭ್ರಮಿಸುವ ಚಿಣ್ಣರೊಂದಿಗೆ    ಸೈನಿಕರೊಂದಿಗೆ  ಸರ್ವ ಧರ್ಮ ಸಮನ್ವಯತೆಯನ್ನು ಸಾರುವ  ಸಂಭ್ರಮ  ಇಲ್ಲಿದೆ.   
ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ, ಸ್ವರಸ್ವರಗಳಲ್ಲಿ ಸಾಮರಸ್ಯ ಹಾಗೂ ದೇಶಾಭಿಮಾನದ ಘಮಲನ್ನು ಹೊಂದಿರುವ ಹಾಡುಗಳ ಕುರಿತು ಸುಮಾವೀಣಾ ಬರಹ ನಿಮ್ಮ ಓದಿಗೆ

ಬೆಂಗಳೂರು ದೂರದರ್ಶನ ಕಾರ್ಯಕ್ರಮ ಪ್ರಸಾರ ಆರಂಭಿಸುವುದಕ್ಕೂ ಮೊದಲು ಅರ್ಥವಾದರೂ ಸರಿ! ಅರ್ಥವಾಗದೆ ಇದ್ದರೂ ಸರಿ! ಕಣ್ಣು ಮಿಟುಕಿಸದೆ ಮೈ ಅಲುಗಿಸದೆ ಟಿವಿ ಮುಂದೆ ಕೂರುತ್ತಿದ್ದ ಕಾಲವೊಂದಿತ್ತು. ದೂರದರ್ಶನ ದೆಹಲಿ ಕೇಂದ್ರದಿಂದ ಪ್ರತಿ ಭಾನುವಾರ ಪ್ರಾದೇಶಿಕ ಭಾಷೆಯ ಚಲನಚಿತ್ರಗಳು ಪ್ರಸಾರವಾಗುತ್ತಿದ್ದವು. ಮಧ್ಯಾಹ್ನ ವಾರ್ತೆ ಆದ ನಂತರ “ಕನ್ನಡ್  ಫೀಚರ್ ಫಿಲ್ಮ್”  ಎಂದು ಬಿಟ್ಟರಂತೂ ಕೈ ಕುಲುಕಿ ಕುಣಿದಾಡುತ್ತಿದ್ದೆವು. ಹಿಂದಿಯವರ ಬಾಯಲ್ಲಿ ಕನ್ನಡ ಕೇಳಿಸಿಕೊಳ್ಳುವುದು ಅಪ್ಯಾಯಮಾನವಾಗಿತ್ತು.

ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಗಳಲ್ಲಿ ನೇರ ಪ್ರಸಾರವಾಗುವ ಧ್ವಜಾರೋಹಣ  ಕಾರ್ಯಕ್ರಮಗಳನ್ನು ನೋಡುವುದಂತೂ ಬಹಳ ಖುಷಿ. ಅದರಲ್ಲೂ ಗಣರಾಜ್ಯೋತ್ಸವ  ಸಂದರ್ಭದಲ್ಲಿ ನಮ್ಮ ರಾಜ್ಯದ ಟ್ಯಾಬ್ಲೋ ನೋಡುವುದೆಂದರೆ ಇನ್ನೂ ಖುಷಿ. ಅದರಲ್ಲೂ  ನಮ್ಮ ಜಿಲ್ಲೆಯ ಥೀಮ್ ಇದ್ದರಂತೂ  ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದೆವು. ಬಹಳ ಹೆಮ್ಮೆ ಅನ್ನಿಸುತ್ತಿದ್ದ  ಇಂದಿಗೂ ನೋಡಲು ಕಾತರಿಸುವ ನೇರ ಪ್ರಸಾರದ ಕಾರ್ಯಕ್ರಮ ಬೀಟಿಂಗ್ ದಿ ರಿಟ್ರೀಟ್.  ಸೇನೆಯ ಆ ಸಂಗೀತ,  ಗೌರವ ಸ್ವೀಕರಣೆ, ಆ ವೈಭವವನ್ನು ನೋಡಿಯೇ ತಣಿಯಬೇಕು.

“ಯಾರು ಇದ್ದರೂ ನನ್ನ ತಾಯವ್ವನ್ಹೋಲರ ಸಾವಿರ ಕೊಳ್ಳಿ ಒಲ್ಯಾಗ ಇದ್ದರ ಜ್ಯೋತಿ ನಿನ್ಯಾರು ಹೋಲ್ಹಾರ”  ಎಂದು ಜಾನಪದರು ತಾಯಿಯ ಮಹತ್ವವನ್ನು ಹೇಳುವಂತೆ “ಸಾವಿರ ಟಿ.ವಿ.  ಚ್ಯಾನಲ್ ಇದ್ದರೂ  ಡಿ .ಡಿ ನ್ಯಾಷನಲ್ ನಿನ್ಯಾರು ಹೋಲ್ಹಾರ” ಎಂದು ಡಿ.ಡಿ. ನ್ಯಾಷನಲ್ ಚಾನೆಲ್‌ಗೆ ಹೇಳಬೇಕು.      ಆ ಗಾಂಭೀರ್ಯವೆ ಮೇರು ಮಟ್ಟದ್ದು. ಆಗಸ್ಟ್ ಬಂದಿತೆಂದರೆ ಸ್ವಾತಂತ್ರ್ಯ ದಿನಾಚರಣೆಯ    ಪೂರ್ವಭಾವಿ ಕಾರ್ಯಕ್ರಮಗಳ ಸಂಗಡ ವಿಶೇಷವಾಗಿ ವಿವಿಧತೆಯಲ್ಲಿ ಏಕತೆ ಎನ್ನುವ  ಸಂದೇಶ ಹೊತ್ತು ಸಂಯೋಜನೆಗೊಂಡು ಇಡೀ ಭಾರತೀಯತೆಯನ್ನು ಒಂದು ಚೌಕಟ್ಟಿನಲ್ಲಿ ಅಡಕವಾಗಿಸಿ  ಪ್ರಸಾರವಾಗುತ್ತಿದ್ದ “ಮಿಲೇ ಸುರ್ ಮೇರ ತುಮ್ಹಾರ” ದಂತಹ ಹಾಡುಗಳು ಈ ಎಲ್ಲವಕ್ಕೂ ಕಳಸಪ್ರಾಯದಂತೆ  ಇರುತ್ತಿದ್ದವು.  80 -90 ರ ದಶಕದಲ್ಲಿ ಬಾಲ್ಯಕಳೆದ ಪ್ರತಿಯೊಬ್ಬರೂ ದೆಹಲಿ   ದೂರದರ್ಶನದ ‘ಮಿಲೇ ಸುರ್ ಮೇರ ತಮ್ಹಾರ’ ಸಹಿತ ಇತರ   ಹಾಡುಗಳನ್ನು ನೆನಪಿಸಿಕೊಂಡೇ ನೆನಪಿಸಿಕೊಳ್ಳುತ್ತಾರೆ. ಮತ್ತೊಮ್ಮೆ-ಮಗದೊಮ್ಮೆ ನೋಡಬೇಕು, ಕೇಳಬೇಕು ಅನ್ನಿಸುವ. ಮಾಸ್ಟರ್ಪೀಸ್‌ಗಳು.

“ಮಿಲೇ ಸುರ್ ಮೇರ ತುಮ್ಹಾರ” ಹಾಡು ಅಶೋಕ ಪಟ್ಕಿಯವರ ಸಂಗೀತ ನಿರ್ದೇಶನದಲ್ಲಿದೆ. ಸ್ವರ ಸಂಯೋಜನೆ ಮಾಡಿ ಭೀಮ್ ಸೇನ್ ಜೋಶಿಯವರೆ ಮುಖ್ಯವಾಗಿ ಹಾಡಿದ್ದಾರೆ ಇವರೊಂದಿಗೆ, ಲತಾ ಮಂಗೇಶ್ಕರ್, ಬಾಲಮುರಳಿಕೃಷ್ಣ, ಕವಿತಾಕೃಷ್ಣಮೂರ್ತಿ ಮುಂತಾದ ಹಾಡುಗಾರರು ಹಾಡಿರುವ  ಖ್ಯಾತನಾಮರ ತಬಲ, ಸಿತಾರ್ ವಾದನದೊಂದಿಗೆ  ನಿಬದ್ಧವಾಗಿದೆ.   ಕ್ರಿಕೆಟಿಗರಾದ ಸುರೇಂದ್ರನಾಥ್, ವೆಂಕಟ್ ರಾಘವನ್, ಬ್ಯಾಡ್ಮಿಂಟನ್ ಪಟು   ಪ್ರಕಾಶ್ ಪಡುಕೊಣೇ ಮೊದಲಾದ ಕನ್ನಡ ಆಟಗಾರರು ತೆರೆದ ಜೀಪಿನಲ್ಲಿ ಕೊಡಗಿನ ಸಾಂಪ್ರದಾಯಿಕ ಧಿರಿಸಿನಲ್ಲಿ “ನನ್ನ ದನಿಗೆ ನಿನ್ನ ದನಿಯ ಸೇರಿದಂತೆ ನಮ್ಮ ಧ್ವನಿಯ” ಎನ್ನುತ್ತಿದ್ದಂತೆ “ನಮ್ ಕನ್ನಡ ಎಷ್ಟು ಇಂಪು”  ಎಂದು ಅಂದಿಗೆ ಅನ್ನಿಸಿದಂತೆ ಇಂದಿಗೂ  ಅನ್ನಿಸುತ್ತದೆ.  ಶಬಾನ ಅಜ್ಮಿ, ವಹಿದಾ ರೆಹಮಾನ್, ಶರ್ಮಿಳಾ  ಟ್ಯಾಗೋರ್, ಹೇಮಮಾಲಿನಿ  ಮಲ್ಲಿಕಾ ಸಾರಾಭಾಯಿ ಮುಂತಾದ ನಟಿಯರು, ಜಿತೇಂದ್ರ, ಮಿಥುನ್ ಚಕ್ರವರ್ತಿ ಮೊದಲಾದ ನಟರು  ಕಾಣಿಸಿಕೊಳ್ಳುವ  ಈ ಹಾಡನ್ನು  ಅಂದಿಗೆ  ಮತ್ತೊಮ್ಮೆ  ನೋಡಬೇಕೆಂದರೂ ಆಗುತ್ತಿರಲಿಲ್ಲ! ಈಗ ಸಾಕಷ್ಟು ಅವಕಾಶಗಳಿವೆ.

“ಮಿಲೇ ಸುರ್ ಮೆರಾ ತುಮ್ಹಾರ” ಹಾಡು  ಮುಖ್ಯವಾಗಿ ಸಾಂಸ್ಕೃತಿಕತೆಗೆ ಹೇಳಿ ಮಾಡಿಸಿದಂತೆ   ಕ್ರೀಡಾ ಕ್ಷೇತ್ರಕ್ಕೆ ಆದ್ಯತೆ ನೀಡಿದ Spread the Freedom Light ಶೀರ್ಷಿಕೆಯ ಹಾಡೂ ಅನನ್ಯವಾದದ್ದು.     ಕ್ರೀಡಾಪಟುಗಳೆ ಕ್ರೀಡಾ ಜ್ಯೋತಿ ಹಿಡಿದು  ಮಳೆಯಲ್ಲಿ ಬೆಟ್ಟ- ಗುಡ್ಡಗಳನ್ನು ಧಾಟಿ ಗಮ್ಯವನ್ನು ತಲುಪುವ   ಬರೇ ಹಿನ್ನೆಲೆ ಸಂಗೀತವುಳ್ಳ ವಿಡಿಯೋ ಎಲ್ಲ ಕ್ಷೇತ್ರದ ಕ್ರೀಡಾಪಟುಗಳನ್ನು ಒಮ್ಮೆಗೆ ನೋಡುವ   ಅವಕಾಶ ಕೊಡುತ್ತಿತ್ತು.

“ಸೌರ್ ಮಂಡಲ್ ಮೆ ಟಿಮ್ ಟಿಮ್ ಕರತೇ ತಾರೆ ಅನೇಕ್ ಹೈ” ಹಾಡೂ ಸರ್ವಧರ್ಮ ಸಮನ್ವಯತೆಯನ್ನು ಸಾರುವ ಗ್ರಾಮೀಣ ಸೊಗಡನ್ನು ಸೇರಿಸಿಕೊಂಡು ಇಂದಿಗೂ ಭಾರತೀಯರ  “ದಿಲ್ ಕಿ ಧಡ್ಕನ್ ಏಕ್ ಹೈ” ಅನ್ನುತ್ತದೆ.

ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಪರಿಚಯಿಸುವ “ತಿರಂಗ ಪ್ಯಾರ” ಶೀರ್ಷಿಕೆಯ ಇನ್ನೊಂದು   ಪ್ರಮುಖ ಹಾಡು.  “ಝಂಡಾ ಊಂಛ ರಹೇ ಹಮಾರ, ವಿಜಯ್ ವಿಶ್ವತಿ ರಂಗ ಪ್ಯಾರ” ಎನ್ನುತ್ತಾ  ಭಾರತೀಯರ ಬಾಹ್ಯಾಕಾಶ ಸಾಧನೆಯನ್ನು ಪರಿಚಯಿಸುವ, ಗತಕಾಲದ  ಇತಿಹಾಸವನ್ನು ಅನುರಣಿಸುವ  ಪಾರಂಪರಿಕ ಕಟ್ಟಡಗಳು,  ಮಿಲಿಟರಿ ಟ್ಯಾಂಕರ್‌ಗಳು,  ಇವುಗಳ ಜೊತೆಗೆ ಭಾರತೀಯ ಗುಡಿಕೈಗಾರಿಕೆಗನ್ನು ಸಾಂಕೇತಿಕವಾಗಿ ತೋರಿಸುವ ದೃಶ್ಯ ತುಣುಕುಗಳು, ಗಣರಾಜ್ಯೋತ್ಸವ  ಪೆರೇಡಿನ ಮೋಹಕ ದೃಶ್ಯಗಳು ಅಂದಿಗೆ ರೋಮಾಂಚನಕಾರಿ ಅನ್ನಿಸಿದರೆ  ಇಂದಿಗೆ ಹೆಮ್ಮೆ ಮತ್ತು ಅದಮ್ಯ ಆತ್ಮ ವಿಶ್ವಾಸವನ್ನು  ಮೂಡಿಸುತ್ತವೆ. ಯಾವಾಗಲೂ ‘ಝಂಡಾ ಊಂಛ ರಹೇ ಹಮಾರ’ ಎಂಬ ಧ್ವನಿ ರಿಂಗಣಿಸುತ್ತದೆ.

ಸುರ್ಯೋದಯದೊಂದಿಗೆ ಬಾನ್ಸುರಿ ವಾದನದೊಂದಿಗೆ ಪ್ರಾರಂಭವಾಗುವ “ವೈಷ್ಣವೋ ಜನತೋ   ತೇನೇ ಕಹಿಯೇರೆ” ಹಾಡು ಓಡು ಮೋಡಗಳಂತೆಯೇ ಸುಂದರವಾಗಿ ಚಲಿಸುತ್ತದೆ. ಸುದಾಂಶು ಬಹುಗುಣರು ಸಂಯೋಜಿಸಿರುವ ಸಂಗೀತದಲ್ಲಿ ಝರಿ- ಜಲಪಾತ ಸರೋವರಗಳು  ಪರ್ವತ ಶ್ರೇಣಿಗಳ, ಹಚ್ಚ ಹಸುರಿನ ದೃಶ್ಯಗಳನ್ನು ಹೆಚ್ಚು ಬಳಸಲಾಗಿದೆ.  ಗಾಂಧಿ, ಖಾದಿ, ಚರಕಗಳೆ ಇಲ್ಲಿನ ಮೂಲ ದ್ರವ್ಯ. “ಮೇರ ಧರ್ಮ್ ಸತ್ಯ ಔರ್ ಅಹಿಂಸಾ ಪರ್ ಆಧಾರಿತ್ ಹೈ, ಸತ್ಯ ಮೆರಾ ಭಗವಾನ್ ಹೈ, ಅಹಿಂಸಾ ಉಸೇ ಪಾನೇಕಾ ಸಾಧನ್” ಎಂಬ ಗಾಂಧಿಯ ಸಂದೇಶವನ್ನು ಹಾಕಿರುವುದು ಉಚಿತವಾಗಿದೆ.

ಎಳೆಯ ಮಕ್ಕಳು ಸ್ಲೇಟ್ ಹಿಡುದು ಬರುತ್ತಿರುವಂತೆ “ಹಮ್ನೆ ವಾದ  ಕಿಯೇ ತಿರಂಗ, ಕುಚ್ ಕರ್ ದಿಕಾ ಸಲಾಮ್ ತಿರಂಗ, ಜಹ್ ರಹ ವತನ್ ಕೇ ವಾಸ್ತೇ ಕುಚ್ ಕರ್ ದಿಖಾವೋ” ಎನ್ನುವ ಹಾಡು ಭಾರತೀಯರ ಸ್ವಾಭಿಮಾನವನ್ನು ಜಾಗೃತಗೊಳಿಸುವ ಸಂಯೋಜನೆಯಾಗಿದೆ. “ಪೂರಬ್ ಸೇ ಸೂರ್ಯ  ಉಘ” ಎಂಬ ರಾಷ್ಟ್ರೀಯ ಸಾಕ್ಷರತಾ ಮಿಷನ್‌ನ ಸಂದೇಶವೂ ಅನನ್ಯವಾಗಿದೆ.

ಇವುಗಳೊಂದಿಗೆ ದೂರದರ್ಶನದವರು ನಂತರದ ವರ್ಷಗಳಲ್ಲಿ ತಯಾರಿಸಿದ ಅಂತರಾಷ್ಟ್ರೀಯ  ಅಹಿಂಸಾ ಮಹತ್ವವನ್ನು ಹೇಳುವ  ‘ವಂದೇ ಮಾತರಂ’ ವಿಡಿಯೋ ಅದ್ಭುತ. ಮಗುವನ್ನು ಹಿಡಿದು ಬಚ್ಚು ಬಾಯಗಲಿಸುವ ಗಾಂಧಿಯ ದೃಶ್ಯದೊಂದಿಗೆ ಗಾಂಧೀಜಿಯ ಇತರೆ ಅಪೂರ್ವ ದೃಶ್ಯಾವಳಿಗಳ   ಸಂಗ್ರಹವನ್ನು ನೋಡಬಹುದು. ಸಾಹಿತ್ಯವಿಲ್ಲದೆ ಬರೇ ವಾದ್ಯ ಸಂಗೀತದ ಮೂಲಕವೇ ವಂದೇ  ಮಾತರಂ  ಧ್ವನಿ ಅದ್ಭುತವಾಗಿದೆ. ನಮ್ಮ ರಾಷ್ಟ್ರೀಯ ದ್ವಜವನ್ನು  ಹಿಡಿದು ಸಂಭ್ರಮಿಸುವ ಚಿಣ್ಣರೊಂದಿಗೆ    ಸೈನಿಕರೊಂದಿಗೆ  ಸರ್ವ ಧರ್ಮ ಸಮನ್ವಯತೆಯನ್ನು ಸಾರುವ  ಸಂಭ್ರಮ  ಇಲ್ಲಿದೆ.

ಜಾವೇದ್ ಅಕ್ತರ್ ಸಾಹಿತ್ಯದ  ಉಸ್ತಾದ್  ಝಾಕಿರ್ ಹುಸೇನ್ ಸಂಗೀತ ನಿರ್ದೇಶನದ “ಜೈ ಹಿಂದ್    ಎ ಪ್ಯಾರ್ ಕ ಸಂದೇಶ್  ಭಾರತ್ ಅನೋಕ ರಾಗ್  ಹೈ”  ಎನ್ನುವ ಮಾತು ಎಷ್ಟು ಚೆನ್ನಾಗಿದೆ ಅಲ್ವೆ.  “ಸೌರಾಗಿನಿಯೋಸೆ ಸಜಾ ಭಾರತ್” ಎಂದು ಶುಶ್ರಾವ್ಯವಾಗಿ ಹಾಡುವ ಪಂಡಿತ್ ಜಸ್ ರಾಜ್, ಜೇಸುದಾಸ್, ಸೋನು ನಿಗಮ್, ಶಂಕರ್ ಮಹಾದೇವನ್, ಅಲ್ಕಾ  ಯಾಗ್ನಿಕ್, ಕವಿತಾ ಕೃಷ್ಣಮೂರ್ತಿಯವರ  ಧ್ವನಿ, ಪ್ರದರ್ಶನ ಕಲೆಗಳ ಚಿತ್ರ, ಖ್ಯಾತ ಚಿತ್ರನಟರು, ಕ್ರೀಡಾಪಟುಗಳು ‘ಜೈ ಹಿಂದ್’ ಎನ್ನುವುದು  ಟಿವಿ ಮುಂದೆ ಕುಳಿತವರನ್ನು ಎಬ್ಬಿಸಿ  ರಾಷ್ಟ್ರ ವಂದನೆ ಮಾಡಿಸುತ್ತದೆ ಎಂದರೆ ತಪ್ಪಿಲ್ಲ!

“ಭಜೆ ಸರ್ಗಮ್ ಹರ್ ತರಫ್‌ಸೆ  ಗೂಂಜ್ ಬನ್ಕರ್  ದೇಸ್ ರಾಗ್”  ಎನ್ನುವ ಭೀಮಸೇನ ಜೋಶಿಯವರ ಹಾಡು ಉಸ್ತಾದ್ ಝಾಕಿರ್ ಹುಸೇನರ ತಬಲ, ಸಿತಾರ್ ವಾದನ, ಸರೋದ್, ವೀಣಾವಾದನ ರಾಜಸ್ಥಾನಿ ಸಾಂಪ್ರದಾಯಿಕ ನೃತ್ಯ ಕಥಕ್, ಒಡಿಸ್ಸಿ ಮಣಿಪುರಿ, ಕಥಕ್ಕಳಿ, ಮೋಹಿನಿ ಆಟ್ಟಮ್, ಕೂಚುಪುಡಿ, ಭರತನಾಟ್ಯಮ್ ಅದಕ್ಕೆ  ಧ್ವನಿಗೂಡಿಸಿರುವ ಬಾಲ ಮುರುಳಿಕೃಷ್ಣರ ಧ್ವನಿ ಮತ್ತು ಪಿಟೀಲು ವಾದನ  ಸಂಗೀತ ಲೋಕದ ಸೆಳೆತವನ್ನು ಮೂಡಿಸುತ್ತದೆ. ‘ಫಿರ್ ಮಿಲೆ ಸುರ್ ಮೆರಾ ತುಮ್ಹಾರ’  ಮೂಲ ಧ್ವನಿಯನ್ನೇ ಉಳಿಸಿಕೊಂಡು  ಇತ್ತೀಚೆಗೆ ರಚಿತವಾಗಿರುವುದು, ಪಾಶ್ಚಾತ್ಯ ಸಂಗೀತ ಮತ್ತು ಭಾರತೀಯ ಸಂಗೀತದ  ಇಂಪು ಇಲ್ಲಿದೆ.

ದೂರದರ್ಶನ  ಹೆಚ್ಚಿನವರಿಗೆ ಹತ್ತಿರ ದರ್ಶನವಾಗಿರುವುದು, ತನ್ನದೇ ಅನನ್ಯ ವರ್ಚಸ್ಸನ್ನು ಕಾಯ್ದುಕೊಂಡಿರುವುದು ತನ್ನ  ಮೌಲ್ಯಯುತ  ಕಾರ್ಯಕ್ರಮಗಳ ಮೂಲಕ. ಪ್ರಾದೇಶಿಕ ಭಾಷೆಯಲ್ಲಿ  ಮೂಲ ಸಾಹಿತ್ಯವನ್ನು ಅನುವಾದಿಸಿ ಎಲ್ಲಾ ಹಾಡುಗಳನ್ನು ಸರ್ವಭಾಷಾಮಯಿಯಾಗಿಸಿರುವುದು,   ರಾಷ್ಟ್ರೀಯತೆಯನ್ನು ಒಂದೇ ವೇದಿಕೆಯಲ್ಲಿ  ಜಾಗೃತಗೊಳಿಸಲು ದೂರದರ್ಶನ  ಪ್ರಸಾರ ಮಾಡುವ   ಈ ಹಾಡು ದೃಶ್ಯಗಳು  ಭಾರತೀಯರ  ಹೆಮ್ಮೆಯೇ ಸರಿ!  ಈ ಎಲ್ಲಾ  ಸಂಯೋಜನೆಗಳಲ್ಲಿಯೂ ಭಾರತದ  ಭೌಗೋಳಿಕ ವೈವಿಧ್ಯತೆ, ಬಾಹ್ಯಾಕಾಶ ಸಾಧನೆ, ಮಿಲಿಟರಿ ಸಾಧನೆ, ಕ್ರೀಡಾ ಸಾಧನೆ, ಜೀವವೈವಿಧ್ಯ, ನೃತ್ಯ, ಕಲೆ, ಉಡುಗೆ-ತೊಡುಗೆ ಕಲಾಪ್ರಕಾರಗಳನ್ನು ಒಂದೇ ಚೌಕಟ್ಟಿಗೆ ಒಳಪಡಿಸಿರುವುದು   ಭಾರತೀಯರಲ್ಲರೂ ಒಂದೇ ಎನ್ನುವುದನ್ನು ಪುನಃ ಪುನಃ  ಸಾರುತ್ತದೆ.

ನಾವು  ಭಾರತೀಯರು ಎನ್ನುವ ಹೆಮ್ಮೆಯನ್ನು ಈ ಹಾಡುಗಳ ರಾಗ ಸಂಯೋಜನೆ ಮತ್ತು ಪ್ರಸ್ತುತಿಗಳು ಹೆಚ್ಚಿಸುತ್ತವೆ. ನಿತ್ಯ ಉಲ್ಲಾಸವನ್ನು ತರಿಸುವ ದೂರದರ್ಶನದ ಈ ಅನನ್ಯ ಸಂಯೋಜನೆಗಳು ಸಾಕ್ಷೀಕರಿಸುವುದು “ಭಾರತ್ ಅನೌಕಾ ರಾಗ್”  ಎಂಬ ಮಾತನ್ನು.

About The Author

ಸುಮಾವೀಣಾ

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, 'ವಿಚಾರ ಸಿಂಧು’  ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ