ಅವರ ಆ ಪುಸ್ತಕಕ್ಕೆ ಅವರ ಹಕ್ಕೊತ್ತಾಯದ ಮೇಲೆ ನಾನು ಬ್ಲರ್ಬ್ ಬರೆದಿದ್ದೆ. ಈ ಬಗ್ಗೆ ನಮ್ಮ ನಡುವೆ ಒಂದು ಜೋಕ್ ಇತ್ತು. ಏನೆಂದರೆ ಆ ಪುಸ್ತಕ ಮುದ್ರಣ ಶುರುವಾಗುವ ಹಂತದಲ್ಲಿದೆ ಎಂದು ತಿಳಿದು ಅಜಿತ್ ಪಂಜಾಬ್‌ನಲ್ಲಿ ಸೇರಿ ನಾವು ಬೀರೋಚಿತವಾಗಿ ಸಿಲೆಬ್ರೇಟ್ ಮಾಡುವಾಗ, ಅವರು ಚೂರು ತೊದಲುತ್ತ, “ಈ ಪುಸ್ತಕ ಯಾವಾಗರೆ ಬರ್ಲಿ, ಅದಕ್ಕೆ ಬಲ್ಬ್ ಮಾತ್ರ ನೀವೇ ಬರೀಬೇಕ್ರಿ’’ – ಎಂದರು. ಅಂದಿನಿಂದ ಬ್ಲರ್ಬ್ ಪದಕ್ಕೆ ಪರ್ಯಾಯವೆಂಬಂತೆ ನಾವು ಬಲ್ಬ್ ಎಂದೇ ಬಳಸುತ್ತಿದ್ದೆವು. ಎಷ್ಟು ಕ್ಯಾಂಡಲಿಂದು ಇತ್ಯಾದಿ ವಿವರಗಳೊಂದಿಗೆ. ಯಾವುದಾದರೂ ಹೊಸ ಪುಸ್ತಕದ ಹಿನ್ನುಡಿಯಲ್ಲಿ ಹುರುಳಿಲ್ಲದಿದ್ದರೆ, ‘‘ಝೀರೋ ಕ್ಯಾಂಡಲ್ ಬಲ್ಬ್ರೀ” ಅಂತಿದ್ರು.
ಜಯಂತ ಕಾಯ್ಕಿಣಿ ಕೃತಿ “ತಾರಿ ದಂಡೆ”ಯ ಮತ್ತೊಂದು ಬರಹ ನಿಮ್ಮ ಓದಿಗೆ
ಮುಕ್ತ ಸಂವೇದನೆಯ ಮುಕುಂದ ಜೋಷಿ (21.6.1942-12.6.2012), ಮೂಲತಃ ಬೆಳಗಾವಿಯವರು. ಅವರ ತಂದೆ ವಿ.ಎಲ್. ಜೋಷಿ ಬೆಳಗಾವಿಯ ಕನ್ನಡ ಅಸ್ಮಿತೆಯ ಅವಿಭಾಜ್ಯ ಅಂಗವಾಗಿದ್ದವರು. ಕನ್ನಡ ಪ್ರಾಧ್ಯಾಪಕರಾಗಿದ್ದ ಅವರು ಬೇಂದ್ರೆಯವರ ‘ನಾಲ್ಕು ತಂತಿ’ಯನ್ನು ಎಂಬತ್ತರ ದಶಕದಲ್ಲೇ ಮರಾಠಿಗೆ ಅನುವಾದಿಸಿ ಪ್ರಕಟಿಸಿದ್ದರು. ತಂದೆಯಂತೆ ಕನ್ನಡ- ಮರಾಠಿ ಉಭಯ ಭಾಷೆಗಳಲ್ಲೂ ಪಾರಂಗತರಾಗಿದ್ದ ಮುಕುಂದ, ಮುಂಬಯಿಯ ರುಯಿಯಾ ಕಾಲೇಜಿನಲ್ಲಿ ಶಿಷ್ಯವತ್ಸಲ ಹಿಂದೀ ಪ್ರಾಧ್ಯಾಪಕರಾಗಿದ್ದರು. ಹೀಗಾಗಿ ಕನ್ನಡ, ಮರಾಠಿ ಮತ್ತು ಹಿಂದಿ – ಈ ಮೂರೂ ಭಾಷೆಯ ಸಾಹಿತ್ಯವನ್ನು ಸಂವೇದನಾಶೀಲವಾಗಿ ನೆಚ್ಚಿಕೊಂಡಿದ್ದರು. ನಾನು ಗಲಿಬಿಲಿ ಮತ್ತು ವಿಭ್ರಮೆಗಳಲ್ಲಿ ಮುಂಬಯಿಯ ಮೋಹದಲ್ಲಿ ಬೀಳುತ್ತಿರುವ ಆಯತ ಸಮಯದಲ್ಲಿ, ಕರ್ನಾಟಕ ಸಂಘದ ಕಾರ್ಯಕ್ರಮವೊಂದನ್ನು ನೋಡಿ ರೈಲಿಗಾಗಿ ಕಾಯುತ್ತಿರುವಾಗ ಮಾಟುಂಗಾ ಸೆಂಟ್ರಲ್ ಸ್ಟೇಷನ್ನಿನ ಫ್ಲಾಟ್‌ಫಾರ್ಮಿನ ಮೇಲೆ ಅಚಾನಕ್ ಆಗಿ ಸಪತ್ನೀಕರಾಗಿ ಸಿಕ್ಕ ಮುಕುಂದ ಜೋಷಿ ಆ ಕ್ಷಣದಿಂದ, ನನ್ನ 23 ವರುಷಗಳ ಮುಂಬಯಿ ಅಧ್ಯಾಯದುದ್ದಕ್ಕೂ ಸದ್ದಿರದೆ ನನ್ನನು ತಿದ್ದಿದ, ಸಂವೇದನೆಯನ್ನು ಪೋಷಿಸಿದ, ಜೀವಾಳದ ಗೆಳೆಯರಾದರು. ಅವರ ಪತ್ನಿ ಕೋಕಿಲಾ, ಘಾಟಕೋಪರ್‌ದ ಜುಂಜನವಾಲಾ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಿಕೆಯಾಗಿದ್ದರು.
ಮರಾಠಿಯ ಗ್ರೇಸ್, ವಿಂದಾ ಕರಂದೀಕರ್, ಜಿ.ವಿ. ಕುಲಕರ್ಣಿ, ದಿಲೀಪ್ ಚಿತ್ರೆ, ನಾಮದೇವ ಢಸಾಳ, ಹಿಂದಿಯ ಆಜ್ಞೇಯ, ಮೋಹನ್ ರಾಕೇಶ್, ಗುಲ್ಝಾರ್ ಮುಂತಾದವರನ್ನು ನನಗೆ ಓದಿ ಹೇಳಿ, ಓದಿಸಿ ಪರಿಚಯಿಸಿದವರು ಮುಕುಂದ್. 1976 ರಿಂದ 1984ರ ತನಕ ಬ್ಯಾಚುಲರ್ ಆಗಿ ಬೇರೆ ಬೇರೆ ಉಪನಗರಗಳಲ್ಲಿ ಠಿಕಾಣಿ ಹಂಚಿಕೊಂಡಿದ್ದ ನನಗೆ ಬೇಜಾರಾದಾಗೆಲ್ಲ ವಾತ್ಸಲ್ಯದಿಂದ ಸಲಹಿದ್ದು ಯಶವಂತ ಚಿತ್ತಾಲ, ಅರವಿಂದ ನಾಡಕರ್ಣಿ ಮತ್ತು ಮುಕುಂದ ಜೋಷಿ ಇವರ ಮನೆಗಳು. ಚಿತ್ತಾಲ, ಅರವಿಂದರಷ್ಟು ವಯಸ್ಸಿನಲ್ಲಿ ಹಿರಿಯರಲ್ಲವಾದ್ದರಿಂದ, ಮುಕುಂದರ ಜೊತೆ ನನಗೆ ಸಲಿಗೆ ಮತ್ತು ಜುಲುಮೆ ಜಾಸ್ತಿಯೇ ಇತ್ತು. ಎಲ್ಲೇ ಇದ್ದರೂ ವಾರಾಂತ್ಯಕ್ಕೆ ಅವರಲ್ಲಿರುತ್ತಿದ್ದೆ. ಛಾಬಿಲ್‌ದಾಸ್, ಗಡಕರಿ ರಂಗಾಯತನ್ ರಂಗಮಂದಿರಗಳಿಗೆ ಅವರು ನಾಟಕಕ್ಕೆ ಹೋಗುತ್ತಿದ್ದರೆ ನನಗೂ ತಿಕೆಟ್ಟು ತಗೊಂಡಿರುತ್ತಿದ್ದರು. ಭಾಷಾತೀತವಾಗಿ ಎಲ್ಲ ಕ್ಷೇತ್ರಗಳಲ್ಲೂ ಭಾಷೆಗಳಲ್ಲೂ ಕಾಣ್ಕೆ ಮತ್ತು ಅಭಿವ್ಯಕ್ತಿ ಕೌಶಲಗಳಲ್ಲಿ ಹೊಸತನಕ್ಕಾಗಿ ತುಡಿತ ಉಲ್ಬಣಗೊಂಡಿದ್ದ ಕಾಲ ಅದು. ದಾದರ್‌ನ ಛಾಬಿಲ್‌ದಾಸ್‌ದಲ್ಲಿ ಬಾದಲ್ ಸರ್ಕಾರ್ ಅವರ “ಜುಲೂಸ್”, ದುಬೇ ಅವರ “ಮಾಯಾವೀ ಸರೋವರ್”, ಠಾಣೆಯ ಗಡಕರಿಯಲ್ಲಿ ವಿಜಯ ತೆಂಡುಲ್ಕರ ಅವರ “ಪಾಯಜೆ ಜಾತೀಚಿ” (ನಟ ನಾನಾ ಪಾಟೇಕರರ ಪ್ರಾರಂಭಿಕ ರಂಗ ಪ್ರದರ್ಶನ), ರವೀಂದ್ರ ನಾಟ್ಯಮಂದಿರದಲ್ಲಿ ಬಿ.ವಿ. ಕಾರಂತರ “ಕತ್ತಲೆ ಬೆಳಕು”, ಎನ್‌ಸಿಪಿಏ ಥೇಟರಿನಲ್ಲಿ ಜಬ್ಬಾರ್ ಪಟೇಲರ “ಘಾಶಿರಾಮ್ ಕೊತ್ವಾಲ್” ಇವೆಲ್ಲವುಗಳನ್ನು ಒಂದೇ ಹಂಗಾಮಿನಲ್ಲಿ ನೋಡಿದ್ದೆವು. ಸದಾನಂದ ಸುವರ್ಣ ಮತ್ತು ಸಂತೋಷಕುಮಾರ ಗುಲ್ವಾಡಿ ಸೇರಿ ಆರಂಭಿಸಿದ್ದ ‘‘ದೃಷ್ಟಿ’’ ಫಿಲ್ಮ್ ಸೊಸೈಟಿಯ ಪ್ರದರ್ಶನಗಳಿಗೂ ತಪ್ಪದೇ ನಮ್ಮ ನಮ್ಮ ದೈನಿಕ ಉದ್ಯೋಗ ಮುಗಿಸಿ ನಾನಾ ದಿಕ್ಕುಗಳಿಂದ ಬಂದು ಹಾಜರಾಗುವ, ನಮ್ಮ ತಂಡದಲ್ಲಿ-ಗೆಳೆಯರಾದ ಕುಮಾರ ಜೋಷಿ, ಶರದ್ ಸೌಕೂರ್, ಗಜಾನನ ಉಪಾಧ್ಯ, ವಿಠ್ಠಲ ಕಟ್ಟಿ, ಎಸ್.ಕೆ. ಪ್ರಭು ಇದ್ದೆವು. ಈ ತಂಡಕ್ಕೆ ಟೀಮ್ ಲೀಡರ್ ಸಂಸಾರಿಗ ಮುಕುಂದ ಜೋಷಿ. ಮೀನು ಜಾರಿ ಮಸಾಲೆಯಲ್ಲಿ ಬಿತ್ತೋ ಎನ್ನುವಂತೆ ಮುಲುಂಡ್ ಪೂರ್ವದಲ್ಲಿ ನನಗೆ ಇಬ್ಬರೊಂದಿಗೆ ಹಂಚಿಕೊಳ್ಳುವ, ಒಂದು ಕೋಣೆಯ ಬಾಡಿಗೆ ಫ್ಲಾಟು ಸಿಕ್ಕಿತು. ಮುಕುಂದ ಜೋಷಿ ಇದ್ದಿದ್ದು ಮುಲುಂಡ್ ಪಶ್ಚಿಮದಲ್ಲಿ, ರೇಲ್ವೇ ಪಾದಚಾರಿ ಸೇತುವೆ ದಾಟಿ ಆಚೆಗೆ ಇಪ್ಪತ್ತೈದು ನಿಮಿಷ ನಡೆದರೆ ಮುಕುಂದ ಜೋಷಿ ಮನೆ! ನನ್ನ ಹನುಮದ್ವಿಕಾಸಕ್ಕೆ ಎಲ್ಲೆ ಇಲ್ಲವಾಯಿತು!
ಓದಿದ ಪುಸ್ತಕ, ನೋಡಿದ ನಾಟಕ ಸಿನಿಮಾಗಳ ಜೊತೆ ಓದದ ಪುಸ್ತಕ, ನೋಡದ ನಾಟಕ ಸಿನಿಮಾಗಳ ಬಗ್ಗೆ ನಾವು ಮೈಮರೆತು ಹರಟುತ್ತಿದ್ದೆವು. ಎರಡು ಮೂರು ತಾಸುಗಟ್ಟಲೆ ರಸ್ತೆಬದಿಯಲ್ಲಿ, ಗೂಡಂಗಡಿ ಬದಿಯಲ್ಲಿ ನಿಂತು ಮಾತಾಡುತ್ತಿದ್ದೆವು. ಹೇಳಲು ಹೊರಟಿದ್ದು ಅರ್ಧದಲ್ಲೇ ಪರಸ್ಪರ ತಿಳಿದು ಮತ್ತು ಅಲ್ಲಿಂದ ಟಿಸಿಲೊಡೆದು ಇನ್ನೆಲ್ಲೋ ವಿಲಕ್ಷಣವಾಗಿ ಹಬ್ಬುವ ಮಾತಿನ ಬಳ್ಳಿಗೆ ಕಾಲದ ಮಂಟಪವೇ ಬೇಕಾಗಿರಲಿಲ್ಲ. ಹೀಗಾಗಿ ದಣಿವೇ ಇರಲಿಲ್ಲ. ಅವರ ಕಾಲೇಜಿನ ಸಹೋದ್ಯೋಗಿ ಪುಷ್ಪಾ ಭಾವೆ (ಮರಾಠೀ ಚಿಂತಕಿ, ಲೇಖಕಿ) ಜೊತೆಗಿನ ಮಾತುಕತೆಗಳನ್ನೆಲ್ಲ ಮುಕುಂದ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಇರಾಣಿ ಕೆಫೆಗಳಲ್ಲಿ ಕೂತು ಬೇಗಂ ಅಖ್ತರ್, ಗೀತಾದತ್ ಮತ್ತು ತಲತ್ ಮಹಮೂದ್ ಬಗ್ಗೆ ಮಾತು ಶುರುವಾದರಂತೂ ಕೇಳುವುದೇ ಬೇಡ. ಈ ಮೂವರ ಬಗ್ಗೆ ಅವರು ಪ್ರತ್ಯೇಕವಾಗಿ ಸುದೀರ್ಘವಾಗಿ ‘‘ಕಸ್ತೂರಿ’’ಯ ಪುಸ್ತಕ ವಿಭಾಗದಲ್ಲಿ ಲೇಖನಗಳನ್ನು ಬರೆದರು.

(ಮುಕುಂದ ಜೋಷಿ)
ಮಾತಾಡುವಾಗ ನಡುನಡುವೆ “ಯಾವುದೋ ಒಂದು ಪಾಯಿಂಟನ್ಯಾಗ” ಅಂತಿದ್ದರು. ಆ ಪಾಯಿಂಟಿನ ತಲಾಶಿನಲ್ಲೇ ನಮ್ಮ ಚಡಪಡಿಕೆಗಳಿದ್ದವು. ತಮಗೆ ಇಷ್ಟವಾದ ಕನ್ನಡ ಕವಿತೆಗಳನ್ನು ಹಿಂದಿ-ಮರಾಠಿಗಳಿಗೆ ಮತ್ತು ಅಲ್ಲಿನ ಒಳ್ಳೆಯ ಹೊಸ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ ತಮ್ಮ ಫೈಲಿನಲ್ಲಿ ಇಟ್ಟುಕೊಳ್ಳುವುದು ಅವರ ಅತ್ಯಂತ ಖಾಸಗಿ ಹವ್ಯಾಸವಾಗಿತ್ತು. ಎಷ್ಟೇ ಒತ್ತಾಯಿಸಿದರೂ ಪ್ರಕಟಣೆಗೆ ಕಳಿಸುತ್ತಿರಲಿಲ್ಲ. ಕೊನೆಗೂ ಅವರ ಆಯ್ದ ಕನ್ನಡ ಕವಿತೆಗಳ ಹಿಂದಿ ಅನುವಾದಗಳು ‘ಸಮಕಾಲೀನ ಭಾರತೀಯ ಸಾಹಿತ್ಯ’ – ಸಂಪುಟದಲ್ಲಿ ಮತ್ತು ಮರಾಠಿ ಅನುವಾದಗಳು ‘ದೀರ್ಘಾ’ ಎಂಬ ಮರಾಠೀ ದೀಪಾವಳಿ ಅಂಕಗಳಲ್ಲಿ ಪ್ರಕಟಗೊಂಡವು.
ಕೋಕಿಲಾ ಜೋಷಿ ಅವರು ಗುಜರಾತಿ. ಅವರಿಬ್ಬರೂ ಮುಂಬಯಿಗೆ ಬರುವ ಮೊದಲು ಗೋವೆಯ ಪಣಜಿಯಲ್ಲಿ ಒಂದೇ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿದ್ದರು. ಅಲ್ಲೇ ಅವರಿಬ್ಬರ ಭೇಟಿ. ಅಭದ್ರತೆಯಲ್ಲಿ ಪರಸ್ಪರರ ಸ್ನೇಹವೇ ಸ್ಥೈರ್ಯವಾಗಿತ್ತು. ಅವರಿಬ್ಬರೂ ಪರಸ್ಪರ ಹೇಳಿಕೊಳ್ಳಲಾಗದ ಮಾತುಗಳು ಹೇಗೆ ‘‘ಮೇರೆ ಹಂದಂ ಮೇರೆ ದೋಸ್ತ್’’ ಚಿತ್ರದ ಲತಾ ಮಂಗೇಶಕರ್‌ರ ‘‘ಚಲೋ ಸಜನಾ ಜಹಾಂ ತಕ್ ಘಟಾ ಚಲೇ’’ – ಹಾಡನ್ನು ಒಟ್ಟಿಗೇ ಕೇಳಿದಾಗ ಉಮ್ಮಳಿಸಿ ಬಂದು ಮಾತಿನ ಹಂಗಿಲ್ಲದೆ ಇಬ್ಬರ ಮನಕ್ಕೂ ವೇದ್ಯವಾಯಿತು – ಎಂಬ ಮಾಯಕದ ಕ್ಷಣವನ್ನು ಮುಕುಂದ ಆರ್ದ್ರರಾಗಿ ಆಗಾಗ ಹೇಳುವುದಿತ್ತು. ಅವರ ಮದುವೆ ಆದ ಜಾಗವೂ ರೂಪಕಾತ್ಮಕವಾಗಿದೆ. ಗೋವಾದಲ್ಲಿ ಪರಿಚಿತರಾಗಿ ಮುಂಬಯಿಯಲ್ಲಿ ಸಂಸಾರ ನಡೆಸಿದ ಅವರ ಮದುವೆ ನಡೆದಿದ್ದು ಮೀರಜ್‌ನಲ್ಲಿ. ಅದು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದಿಂದ ಬರುವ ರೈಲು ಮಾರ್ಗಗಳು ಸಂಧಿಸುವ ಜಂಕ್ಷನ್. ಅದಕ್ಕೆ ಮೀರಜ್ ಜಂಕ್ಷನ್ ಎಂದೇ ಹೇಳುತ್ತಾರೆ. ನಂತರ ಅವರು ಮುಂಬಯಿಗೆ ಬಂದು ಜೀವನವನ್ನು ಕಷ್ಟಪಟ್ಟು ಕಟ್ಟಿಕೊಂಡರು. ಅವರಿಬ್ಬರಿಗೂ ಮುದ್ದಾದ ಇಬ್ಬರು ಹೆಣ್ಣುಮಕ್ಕಳು. ಮೊದಲನೆಯವಳು ತನ್ಮಯಿ. ನನ್ನ “ತನ್ಮಯಿಯ ಸೂಟಿ” ಕಥೆಯ ತನ್ಮಯಿಗೆ ಆಕೆಯೇ ಸ್ಫೂರ್ತಿ. ಎರಡನೆಯವಳು ಪ್ರಿಯಂಗು. ಮುಕುಂದ ಪಾಠ ಮಾಡುತ್ತಿದ್ದ ಮೋಹನ ರಾಕೇಶರ “ಆಷಾಢದ ಒಂದು ದಿನ’’ದ ಪ್ರಿಯಂಗುಮಂಜರಿ ಅದಕ್ಕೆ ಸ್ಫೂರ್ತಿ.
ತಲತ್ ಹಾಡುಗಳೆಂದರೆ ಅವರಿಗೆ ಜೀವ. ಸುಲಭಕ್ಕೆ ಸಿಗದ ತಲತ್ ಹಾಡುಗಳನ್ನು ಸಂಗ್ರಹಿಸುವುದು ಅವರ ಆಸಕ್ತಿ. ಅದು ಆಮೇಲೆ ನನಗೂ ಅಂಟಿತು. ಟೇಪರೆಕಾರ್ಡರಿನಲ್ಲಿ ಕ್ಯಾಸೆಟ್ ಹಚ್ಚಿ ಸಮ್ಮೋಹಿನಿಗೊಳಗಾದವರಂತೆ ಕೂತು ಕೇಳುತ್ತಿದ್ದೆವು. ಮುಕೇಶ್‌ನ ಅತಿ ಪ್ರಾರಂಭಿಕ “ಜಿಯೇಂಗೇ ಮಗರ್, ಮುಸ್ಕುರಾ ನ ಸಕೇಂಗೆ, ಕೆ ಅಬ ಜಿಂದಗೀ ಮೇ ಮೊಹಬ್ಬತ ನಹೀ ಹೈ’’ ಹಾಡಿನಲ್ಲಿ, ಅವನ ಹಾಡುಗಾರಿಕೆಯ ಶೈಲಿ ಎಷ್ಟೊಂದು ಸೈಗಲ್‌ರಿಂದ ಪ್ರಭಾವಿತವಾಗಿದೆ, ಕ್ರಮೇಣ ನಂತರ ಮುಕೇಶ್ ಹೇಗೆ ತಮ್ಮ ಸ್ವಂತ ಶೈಲಿಗೆ ಮರಳಿದರು ಎಂಬುದನ್ನು ಆ ಕ್ರಮದಲ್ಲೇ ಹಾಡುಗಳನ್ನು ಆಲಿಸಿ ಮನವರಿಕೆ ಮಾಡಿಕೊಳ್ಳುತ್ತಿದ್ದೆವು. ಒಮ್ಮೆ ಅವರು ‘‘ತಲತ್‌ರ ಅಪರೂಪದ ಸಿನಿಮೇತರ ಹಾಡುಗಳ ನಾಲ್ಕು ಕ್ಯಾಸೆಟ್‌ಗಳ ಗಿಫ್ಟ್ ಪ್ಯಾಕ್ ಎಚ್.ಎಂ.ವಿ.ಯಿಂದ ಬಿಡುಗಡೆ ಆಗಿದೆ. ನನ್ನ ಬರ್ಥಡೇ ಬರೋದು ಇನ್ಯಾವಾಗಲೋ. ಅದನ್ನು ನನಗೆ ಈಗಲೇ ಗಿಫ್ಟ್ ಅಂತ ಕೊಟ್ಟು ಬಿಡ್ರೀ. ರಿದಮ್ ಹೌಸ್‌ನಲ್ಲಿ ಜಾಸ್ತಿ ದಿವಸ ಇರೂದಿಲ್ಲ ಅವು’’ ಎಂದು ಗೋಗರೆದು ನನ್ನಿಂದ ಮುಂಚಿತ ಗಿಫ್ಟ್ ಪಡೆದಿದ್ದರು. ಅದೇ ಸಮಯದಲ್ಲೇ ಅವರನ್ನು ಖುಷಿಪಡಿಸಲೆಂದೇ “ತಲತ್ ನೀನೇಕೆ ಹಾಡುತಿಲ್ಲ’’-ಎಂದು ಒಂದು ಕವಿತೆ ಬರೆದಿದ್ದೆ. ಆ ಜಮಾನಾದ ನನ್ನ ಹೆಚ್ಚಿನ ಕಥೆ ಕವಿತೆಗಳ ಮೊದಲ ಓದುಗ ಅವರೇ. ಆಗ ನನಗೆ “ಗಡ್ಡ’’ವಿದ್ದುದರಿಂದ ಅವರ ಮಕ್ಕಳು ನನಗೆ ‘‘ದಾಡೀ’’ ಎಂದು ಕರೆಯಲಾರಂಭಿಸಿ ಆಮೇಲೆ ಮುಕುಂದ ಕೋಕಿಲಾ ಸಹ ನನ್ನನ್ನು ದಾಡೀ ಎಂದೇ ಕರೆಯುತ್ತಿದ್ದರು. ನನ್ನ ಮದುವೆಯ ಸಂದರ್ಭದಲ್ಲಿ ನಾನು ದಾಡಿ ತೆಗೆದಿದ್ದೆ. ಮದುವೆಯಲ್ಲಿ ನನಗೆ ಶುಭಕೋರಲು ಬಂದಾಗ ಅವರೆಲ್ಲ ಒಕ್ಕೊರಲಿನಲ್ಲಿ ಕೇಳಿದ್ದು – ‘‘ಅರೇ ‘ದಾಡಿ’ ಕಿಧರ್ ಹೈ?’’.
ನನ್ನ ಸಂಗಾತಿ ಸ್ಮಿತಾ, ಮರಾಠಿ ಕಥನೇತರ ಓದಿನ ಆಸಕ್ತಳಾದ್ದರಿಂದ ಯಾವುದೇ ಅಂಥ ಹೊಸ ಪುಸ್ತಕ ಬಂದಾಗ ಮುಕುಂದ, ತಮ್ಮ ಕಾಲೇಜಿನ ಲೈಬ್ರರಿಯಿಂದ ಓದಲು ತಂದುಕೊಡುತ್ತಿದ್ದರು. ಢಸಾಳ ಅವರ ಪತ್ನಿ ಮಲಿಕಾ ಅಮರ್ ಶೇಖ್ ಅವರ ‘‘ಮಲಾ ಉಧ್ವಸ್ಥ ವ್ಹಾಯ್‌ಚ ಆಹೇ” (ಉಧ್ವಸ್ಥಳಾಗಬಯಸುವೆ), ಪು.ಲ. ದೇಶಪಾಂಡೆ ಅವರ ಪತ್ನಿ ಸುನೀತಾ ದೇಶಪಾಂಡೆ ಬರೆದ “ಆಹೇ ಮನೋಹರ ತರೀ’’ (ಮನೋಹರ ಹೌದು, ಆದರೂ…) ಇವನ್ನು ಓದಲೇಬೇಕು ಎಂದು ಹಟಮಾಡಿ ನಮ್ಮಿಂದ ಓದಿಸಿ ನೆಮ್ಮದಿ ಪಟ್ಟವರು. ಅವರಿಗೆ ತಲತ್ ಎಷ್ಟು ಇಷ್ಟವೋ, ಜ್ಞಾನೇಶ್ವರಿ ಎಷ್ಟು ಇಷ್ಟವೋ ಅಮಿತಾಬ್ ಬಚ್ಚನ್ ಕೂಡ ಅಷ್ಟೇ ಇಷ್ಟ. ಅವನ ಖರಾಬು ಚಿತ್ರಗಳನ್ನೂ ಕೂಡ ವಿಡಿಯೊ ಲೈಬ್ರರಿಯಿಂದ ಕ್ಯಾಸೆಟ್ ತರಿಸಿಕೊಂಡು ನೋಡುತ್ತಿದ್ದರು. ‘‘ಅಮಿತಾಬ್ ಒಂದ್ ಪಿಕ್ಟರ್‌ನ್ಯಾಗ ವಿಲನ್ ಆಗ್ಯಾನ. ಯಾವುದು ಹೇಳಿ ನೋಡೋಣ’’ – ಎಂದು, ಅದರ ಉತ್ತರ ಗೊತ್ತಿರದಿದ್ದರೆ ನಮ್ಮ ಬಾಳುವೆಯೇ ವ್ಯರ್ಥ ಅನ್ನೋ ಥರದ ನೋಟದಲ್ಲಿ ನಮ್ಮನ್ನು ಕೆಣಕುತ್ತಿದ್ದರು. ಉತ್ತರ ಗೊತ್ತಿದ್ದರೂ ಅವರಿಗೆಲ್ಲಿ ನಿರಾಸೆ ಆದೀತು ಎಂದು ಸುಮ್ಮನಿರುತ್ತಿದ್ದೆವು. ಆಗ ಅವರು ವಿಜಯೋತ್ಸಾಹದಿಂದ “ಪರ್‌ವಾನಾ’’ ಅಂತ ಹೇಳಿ – ‘‘ಅದ್ರಾಗ ಮರ್ಡರ್ ಮಾಡಾಕ ಏನ್ ಐಡಿಯಾ ಮಾಡ್ತಾನ್ರೀ ಅಂವಾ’’ ಅಂತ ವಿವರವಾಗಿ ಅಮಿತಾಬನೇ ಸ್ವತಃ ಐಡಿಯಾ ಮಾಡಿದಾನೋ ಎಂಬಂತೆ ಸಂಭ್ರಮಿಸಿ ಹೇಳುತ್ತಿದ್ದರು. ಬೀರಡಿಕೆ ಉಲ್ಬಣಿಸಿದಾಗೆಲ್ಲ ಅಜಿತ್ ಪಂಜಾಬ ಎಂಬ ಇರಾಣಿ ಛಾಪಿನ ಸರಳ ಹೋಟೆಲಿನಲ್ಲಿ ಕೂತು ತುಂಬಾ ಹರಟುತ್ತಿದ್ದೆವು. ತೆಳ್ಳಗೆ ಇದ್ದ ಅವರ ತಲೆಯಲ್ಲಿ ಹುಲುಸಾದ ಕೂದಲಿತ್ತು. ಚೀನಿ ಕಣ್ಣುಗಳಂತೆ ತುಸು ಚಿಕ್ಕದಾಗಿದ್ದ ಕಣ್ಣುಗಳಲ್ಲಿ, ಅವರು ಹೃತ್ಪೂರ್ವಕವಾಗಿ ನಕ್ಕಾಗೆಲ್ಲ ಬೇಗನೆ ನೀರು ಬರುತ್ತಿತ್ತು.
ನಮ್ಮ ಬ್ರಹ್ಮಚಾರಿ ಕೂಟದಲ್ಲಿ ಯಾರದೇ ಮದುವೆಯಾದರೂ ಮುಕುಂದ- ಕೋಕಿಲಾ ದಂಪತಿ ಪಾಲಕರಂತೆ ಮುಂದಾಗಿ ನೆರವಾಗುತ್ತಿದ್ದರು. ಗೆಳೆಯ ಕುಮಾರ ಅಂತರ್‌ಜಾತಿ ವಿವಾಹವಾದಾಗ, ಹುಡುಗಿಯ ಕಡೆಯಿಂದ ಯಾರೂ ಬರದಿದ್ದಾಗ ಇವರೇ ಹುಡುಗಿಯ ಪಾಲಕರಾಗಿ ನಿಂತು ‘‘ಆರ್ಯ ಸಮಾಜ’’ ಹಾಲ್‌ನಲ್ಲಿ, ಕನ್ಯಾದಾನ ಮಾಡಿದರು. ಬಲು ವರುಷಗಳ ಹಿಂದೆ ಮೀರಜ್‌ನಲ್ಲಿ ಅವರಿಬ್ಬರ ಜಂಕ್ಷನ್ ಆದಾಗ- ಕೋಕಿಲಾರ ಕಡೆಯಿಂದ ಯಾರೂ ಬಂದಿರದಿದ್ದರಿಂದ ಮುಂಬಯಿಯ ಹಿರಿಯ ಪ್ರಾಧ್ಯಾಪಕ, ಸಾಹಿತಿ, ಕನ್ನಡ ಸಂಘಟಕ ಪ್ರೊ. ಜಿ.ಡಿ. ಜೋಷಿಯವರೇ ನಿಂತು ಕನ್ಯಾದಾನ ಮಾಡಿದ್ದರಂತೆ. ಅದರ ಮುಂದುವರೆದ ಸಾಮಾಜಿಕ ಋಣ ಇದು.
ಕಾಯಿಲೆ ಇತ್ಯಾದಿ ಆದಾಗೆಲ್ಲ ನಾನಂತೂ ಅವರ ಮನೆಯಲ್ಲೇ ಹೋಗಿ ಇದ್ದುಬಿಡುತ್ತಿದ್ದೆ. ಕೋಕಿಲಾ ಮೇಡಂ ಆಗ, “ದಾಡೀ, ಇಂದಲ್ಲ ನಾಳೆ ನಿನ್ನದೂ ಮದುವೆ, ಮನೆ ಎಲ್ಲ ಆಗಬೇಕು. ಈಗಿನಿಂದಲೇ ಚೂರು ಪಾರು ಸೇವ್ ಮಾಡು. ಈ ಮುಕುಂದನ ಮಾತು ಕೇಳಿ ಬೀಯರು ಗೀಯರು ಅಂತ ಪೋಲು ಮಾಡಬೇಡ. ಸೇವ್ ಮಾಡು. ಎರಡು ಸಾವಿರ ಆದದ್ದೇ ಎಫ್.ಡಿ. ಮಾಡು. ಮದುವೆ, ಸಂಸಾರ ಎಲ್ಲ ಸಲೀಸಲ್ಲ. ನಿಮ್ಮ ಕಾವ್ಯ, ಗೀವ್ಯ, ಪ್ಯಾಸಾ, ಗೀಸಾ ಯಾವುದೂ ನೆರವಿಗೆ ಬರುವುದಿಲ್ಲ. (ಪೋಯಟ್ರಿ ಗೀಯಟ್ರಿ ಪ್ಯಾಸಾವ್ಯಾಸಾ ಕುಛ್ ಕಾಮ್ ನಹೀ ಆಯೇಗಾ)’’- ಎಂದು ಕಡಕ್ ಆಗಿ ತಿಳಿಹೇಳುತ್ತಿದ್ದರು. ನನಗದು ಯಾವುದೋ ಫೈನಲ್ ಎಕ್ಸಾಮ್‌ನ ಪ್ರಶ್ನೆ ಪತ್ರಿಕೆ ಥರ ಕೇಳಿಸುತ್ತಿತ್ತು. ನಾವೆಲ್ಲ ‘ಉಮ್ರಾವ್ ಜಾನ್’ (ರೇಖಾ) ಚಿತ್ರ ನೋಡಿ ಹೊರಬರುವಾಗ- ಕೊನೆಯ ದೃಶ್ಯದಲ್ಲಿ ಎಷ್ಟೋ ದಶಕಗಳ ನಂತರ ಉಮ್ರಾವ್‌ಳನ್ನು ಆಕೆಯ ದುರ್ದೆಸೆಯಲ್ಲಿ ನೋಡಿದ ಆಕೆಯ ತಾಯಿಯ ರೋದನ ಕೋಕಿಲಾ ಮತ್ತು ಮುಕುಂದರನ್ನು ಎಷ್ಟು ಆಳವಾಗಿ ಕಲಕಿತ್ತೆಂದರೆ ನಂತರ ಮನೆ ತಲುಪುವ ತನಕವೂ ಅವರು ಒಂದು ಶಬ್ದವನ್ನೂ ಮಾತಾಡಲಿಲ್ಲ.
ಬೆಳಗಾವಿ ಅಂದರೆ ಮುಕುಂದರಿಗೆ ತುಂಬಾ ಅಚ್ಛೆ. ಅವರ ಧಾರವಾಡದ ಸಹಪಾಠಿ ಎಸ್.ಕೆ. ಕುಲಕರ್ಣಿ (ಅವರು ದೆಹಲಿಯಲ್ಲಿ ಕಾಯಿದೆ ತಜ್ಞರಾಗಿದ್ದರು. ಅವರನ್ನು ಮುಕುಂದರ ಮಕ್ಕಳು ವಕೀಲ ಕಾಕಾ ಅಂತ ಹೆಮ್ಮೆಯಿಂದ ಕರೀತಿದ್ದರು) ಮತ್ತು ನಿಡುಗಾಲದ ಬಾಲ್ಯ ಕಾಲ ದೋಸ್ತರಾದ ಪಿ.ಎಚ್. ಜೋಷಿ, ವಿಲಾಸ್ ಗದಗಕರ್, ಶ್ರೀಕಾಂತ ಮಂಗಳವೇಢೆ, ಎಸ್.ಎನ್. ಕುಲಕರ್ಣಿ ಬಗ್ಗೆ ಮುಕುಂದ್‌ಗೆ ತುಂಬಾ ನಂಬಿಕೆ ಮತ್ತು ಮಾರ್ದವ. ಬೆಳಗಾವಿಯ ರೆಕ್ಸ್, ಕೃಷ್ಣ, ರೇಡಿಯೋ, ಗ್ಲೋಬ್-ಇತ್ಯಾದಿ ಟಾಕೀಸುಗಳೆಂದರೆ ಮಿಲಿಟ್ರಿ ಮಹಾದೇವದಷ್ಟೇ ಪೂಜ್ಯ ಸ್ಥಳಗಳು. ರೇಡಿಯೋದಲ್ಲಿ ‘‘ಜಬ್ ಪ್ಯಾರ್ ಕಿಸೀ ಸೆ ಹೋತಾ ಹೈ’’- ಯಾವಾಗ ಬಂದಿತ್ತು, ‘‘ಸಂಗಮ್’’-ಎಷ್ಟು ವಾರ ನಡೆದಿತ್ತು. ಕೃಷ್ಣಾದಲ್ಲಿ “ಬೇಟಿ ಬೇಟೆ’’ ನೋಡಿ ಹೇಗೆ ಜನಾ ಅಳಕೋತ ಹೊರಗೆ ಬರ್ತಿದ್ದರು – ಎಲ್ಲವನ್ನು ಹುಬೇಹೂಬ್ ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದರು. ಲಿಂಗರಾಜ ಕಾಲೇಜಿನಲ್ಲಿ ಕೆಲಕಾಲ ಏ.ಕೆ. ರಾಮಾನುಜನ್ ಪಾಠ ಮಾಡುತ್ತಿದ್ದುದನ್ನು ಅತೀವ ಹೆಮ್ಮೆಯಿಂದ ಹೇಳುತ್ತಿದ್ದರು. ತಂಗಿ ಸುಲಭಾ ಮನಸ್ಸು ಮಾಡಿದ್ದರೆ ಬರಹಗಾರ್ತಿಯಾಗಿ ಬೆಳೆಯಬಹುದಾಗಿತ್ತು ಎಂಬ ಕೊರಗು ಅವರಲ್ಲಿತ್ತು.
ಮುಕುಂದ ಬಲು ಹಿಂದೆ ಎಪ್ಪತ್ತರ ದಶಕದಲ್ಲಿ ‘‘ಸಂಕ್ರಮಣ’’ದಲ್ಲಿ ಒಂದೆರಡು ಕವಿತೆಗಳನ್ನು ಪ್ರಕಟಿಸಿದ್ದರು. ಆಗಲೇ ಹೇಳಿದಂತೆ ಅನುವಾದಗಳನ್ನು ಮಾಡುತ್ತಲೇ ಇರುತ್ತಿದ್ದರು. ಎಲ್ಲೂ ಕಳಿಸುವುದು ಅವರಿಗೆ ಇಚ್ಛೆಯ ವಿಷಯವಾಗಿರಲಿಲ್ಲ. ನಾವೆಲ್ಲ ಎಳೆಯರು ಪಂಪು ಹೊಡೆದ ಮೇಲೆ ಒಂದೆರಡು ಕಥೆಗಳನ್ನು ಬರೆದರು. ನಮ್ಮ ಹಕ್ಕೊತ್ತಾಯಕ್ಕೆ ಮಣಿದು ‘ಮಯೂರ’, ‘ಪ್ರಜಾವಾಣಿ’ಗಳಿಗೆ ಕಳಿಸಿದರು. ಅದು ಪ್ರಕಟವಾಗಿ ತುಂಬಾ ಒಳ್ಳೆಯ ಪ್ರತಿಸ್ಪಂದನ ಬಂತು. ಅಂದರೆ ಅವರು ತಮ್ಮ ನಾಲ್ವತ್ತನೇ ವಯಸ್ಸಿನ ನಂತರವೇ ಕಥೆಗಳನ್ನು ಬರೆದದ್ದು. ಆಗ ಬೆಂಗಳೂರಿನಿಂದ ಕೇಶವ ಮಳಗಿ, ವಿವೇಕ ಶಾನಭಾಗ, ‘ಆನಂದ’ದಿಂದ (ಎರಡೂ ಅರ್ಥದಲ್ಲಿ) ಶ್ರೀರಾಮ್ ಎಲ್ಲರೂ ಅವರನ್ನು ಹುರಿದುಂಬಿಸಿ, ಅವರು ಇನ್ನೂ ಬರೆದರು. ಗೆಳೆಯ ಕೇಶವ ಮಳಗಿ ಮತ್ತವರ ಉತ್ಸಾಹಿ ಸ್ನೇಹಿತರು ಮುಂದಾಗಿ ಅವರ ‘‘ಒಂದು ಸಂಜೆ ಬೆಳಗಾದಾಗ’’ (ಕಲ್ಯಾಣಿ ಪ್ರಕಾಶನ, 1990) ಎಂಬ ಕಥಾಸಂಕಲನವನ್ನು ಪ್ರಕಟಿಸಿದರು. ಬೆಂಗಳೂರಿನಲ್ಲಿ 20.8.1990ರಂದು ಬಿಡುಗಡೆ ಇತ್ತು. ಅದಕ್ಕಾಗಿ ನಾನು ಮತ್ತು ಮುಕುಂದ ಬೆಂಗಳೂರಿಗೆ ರೈಲಿನಲ್ಲಿ ಪಯಣಿಸಿದೆವು. ಅದೊಂದು ಅವಿಸ್ಮರಣೀಯ ಸಹ ಪ್ರವಾಸ, ದಣಿವಿರದ ಉಸ್ಫೂರ್ತ ಮಾತುಗಳು. ಶೋಲಾಪುರ ನಿಲ್ದಾಣ ದಾಟಿದಾಗ ಮುಸ್ಸಂಜೆ, ನಾವಿಬ್ಬರೂ ಬೋಗಿಯ ಬಾಗಿಲು ತೆಗೆದು ಮೆಟ್ಟಿಲ ಮೇಲೆ ಕಾಲಿಟ್ಟು ಅಕ್ಕಪಕ್ಕ ಕುಳಿತೆವು. ವಿಲಕ್ಷಣವಾದ ಸಂಜೆ ಬೆಳಕು ಇತ್ತು. ಇಬ್ಬರೂ ಅದನ್ನು ಕೈಲಿ ಹಿಡಿಯುವವರಂತೆ ಎರಡೂ ಹಸ್ತಗಳನ್ನೂ ಅರಳಿಸಿ ಹಿಡಿದಿದ್ದೆವು. ‘‘ನೋಡ್ರಿ ಈ ಬೆಳಕಿನಲ್ಲಿ ನಮ್ಮದೇ ಹಸ್ತಗಳು ಹ್ಯಾಗ್ ಬ್ಯಾರೆ ಕಾಣಸ್ತಾವ ನೋಡ್ರಿ’’ ಎಂದು ನಮ್ಮವೇ ಅಂಗೈಗಳನ್ನು ಮುಗ್ಧರಂತೆ ನೋಡಿದೆವು. ಆ ವಿಲಕ್ಷಣ ಕ್ಷಣ, ನಮ್ಮಿಬ್ಬರನ್ನು ನಂತರ ಎಂದೂ ಬಿಟ್ಟು ಹೋಗಲಿಲ್ಲ.
ಅವರ ಆ ಪುಸ್ತಕಕ್ಕೆ ಅವರ ಹಕ್ಕೊತ್ತಾಯದ ಮೇಲೆ ನಾನು ಬ್ಲರ್ಬ್ ಬರೆದಿದ್ದೆ. ಈ ಬಗ್ಗೆ ನಮ್ಮ ನಡುವೆ ಒಂದು ಜೋಕ್ ಇತ್ತು. ಏನೆಂದರೆ ಆ ಪುಸ್ತಕ ಮುದ್ರಣ ಶುರುವಾಗುವ ಹಂತದಲ್ಲಿದೆ ಎಂದು ತಿಳಿದು ಅಜಿತ್ ಪಂಜಾಬ್‌ನಲ್ಲಿ ಸೇರಿ ನಾವು ಬೀರೋಚಿತವಾಗಿ ಸಿಲೆಬ್ರೇಟ್ ಮಾಡುವಾಗ, ಅವರು ಚೂರು ತೊದಲುತ್ತ, “ಈ ಪುಸ್ತಕ ಯಾವಾಗರೆ ಬರ್ಲಿ, ಅದಕ್ಕೆ ಬಲ್ಬ್ ಮಾತ್ರ ನೀವೇ ಬರೀಬೇಕ್ರಿ’’ – ಎಂದರು. ಅಂದಿನಿಂದ ಬ್ಲರ್ಬ್ ಪದಕ್ಕೆ ಪರ್ಯಾಯವೆಂಬಂತೆ ನಾವು ಬಲ್ಬ್ ಎಂದೇ ಬಳಸುತ್ತಿದ್ದೆವು. ಎಷ್ಟು ಕ್ಯಾಂಡಲಿಂದು ಇತ್ಯಾದಿ ವಿವರಗಳೊಂದಿಗೆ. ಯಾವುದಾದರೂ ಹೊಸ ಪುಸ್ತಕದ ಹಿನ್ನುಡಿಯಲ್ಲಿ ಹುರುಳಿಲ್ಲದಿದ್ದರೆ, ‘‘ಝೀರೋ ಕ್ಯಾಂಡಲ್ ಬಲ್ಬ್ರೀ” ಅಂತಿದ್ರು. ಈ ಪುಸ್ತಕ ಬಿಡುಗಡೆಯ ಸಂದರ್ಭಕ್ಕೆ ಇನ್ನೂ ಒಂದೆರಡು ವಿಶೇಷ ಖುಷಿಗಳ ಮೆರುಗು ಇತ್ತು. ಒಂದು: ವಿವೇಕ ಅನುರಾಧಾರ ಮದುವೆಯೂ ಒಂದು ದಿನ ಮುಂಚೆ ಇತ್ತು. ಇನ್ನೊಂದು: ಈ ಪುಸ್ತಕದ ಜೊತೆ ನಮ್ಮೆಲ್ಲರ ಆರಾಧ್ಯ ಕವಿ ಕೆ.ವಿ. ತಿರುಮಲೇಶರ ಮೊದಲ ಕಥಾಸಂಕಲನ ‘‘ಜಾಗುವಾ ಮತ್ತು ಇತರರು’’ – ಸಹ ಬಿಡುಗಡೆಗೊಳ್ಳುವುದಿತ್ತು. ಹೀಗಾಗಿ ಮಾತಿಗೆ ಮೀರಿದ ಉಲ್ಲಾಸವೊಂದು ಅಲೆ ಅಲೆಯಾಗಿ ಉಕ್ಕುತ್ತಿತ್ತು. 20.8.1990 ರಂದು ಮಧ್ಯಾಹ್ನ ಎಂ.ಜಿ. ರೋಡ್‌ನ ಅಡ್ಡ ರಸ್ತೆಯೊಂದರಲ್ಲಿದ್ದ ಓಕನ್ ಕಾಸ್ಕ್ ಎಂಬ ಮಧುಶಾಲೆಯಲ್ಲಿ ಮದುಮಕ್ಕಳಿಗೆ ಶುಭಕೋರಲು ಶ್ರೀರಾಮ, ತಿರುಮಲೇಶ್, ರಾಮಚಂದ್ರ ಶರ್ಮ, ಎಚ್.ಕೆ. ಅನಂತರಾವ್ (‘ಅಂತ’ ಖ್ಯಾತಿಯ ಲೇಖಕ. ಅವರನ್ನು ಅಂತ ರಾವ್ ಎಂದು ಶ್ರೀರಾಮ ಕರೀತಿದ್ದ) ಜೊತೆ ಸೇರಿದ್ದೆವು. ಆಗಷ್ಟೇ ಬೆಂಗಳೂರು ಡ್ರಾಟ್ ಬೀಯರಿಗೆ ಹೆಸರುವಾಸಿಯಾಗಿತ್ತು. ಸಂಜೆ ಪುಸ್ತಕ ಬಿಡುಗಡೆ ಇದೆ ಎಂದು ಬಲ್ಬ್ಧಾರಿಯಾದ ನಾನೇ ಎಲ್ಲರನ್ನೂ ಆಗಾಗ ಎಚ್ಚರಿಸುತ್ತಿದ್ದೆ. ಶರ್ಮರ ಚಾಟೂಕ್ತಿಗಳನ್ನು ತಿರುಮಲೇಶರ ಮಾತುಗಳನ್ನು ಆನಂದಿಸಿ ಅಲ್ಲಿಂದ ಎಲ್ಲ ಸೀದಾ ರವೀಂದ್ರ ಕಲಾ ಕ್ಷೇತ್ರದ ಪಕ್ಕದ ಕೊಠಡಿಗೆ ತಲುಪಿದೆವು. ಅಲ್ಲಿ ಕೇಶವ, ಎಂ.ಆರ್. ಕಮಲ, ಸತ್ಯಮೂರ್ತಿ ಆನಂದೂರು, ಚಂದ್ರಶೇಖರ ಆಲೂರು, ಕೆ. ಸತ್ಯನಾರಾಯಣ, ಪ್ರತಿಭಾ ನಂದಕುಮಾರ್, ಚಕ್ಕೆರೆ ಶಿವಶಂಕರ ಎಲ್ಲರೂ ಸಿಕ್ಕರು. ಕಾರ್ಯಕ್ರಮ ಆಪ್ತವಾಗಿ ಆಯಿತು. ಮುಕುಂದರ ಸಮಾಧಾನ ಮೂಕ ಉಮ್ಮಳದಂತಿತ್ತು. ಹೀಗೆ ಕ್ವಿಂಟಾಲುಗಟ್ಟಲೆ ಸ್ಫೂರ್ತಿಯನ್ನು ಹೊತ್ತುಕೊಂಡು ನಾವು ಮುಂಬಯಿಗೆ ಮರಳಿದೆವು. ಕೇಶವ ಬೀಳ್ಕೊಡಲು ಸ್ಟೇಷನ್ನಿಗೆ ಬಂದಿದ್ದ. ಬರುವಾಗ ಮುಕುಂದ ರೈಲಿನಲ್ಲಿ
‘‘ಶೋಲಾಪುರದ ಅಲೌಕಿಕ ಸಂಜೆ ಬೆಳಕಿನ ನೆನಪಿಗೆ’’ ಎಂದು ಬರೆದು ನನಗೆ ಪ್ರತಿಯನ್ನು ಕೊಟ್ಟರು.

(ಜಯಂತ ಕಾಯ್ಕಿಣಿ)
ಈ ಒಂದು ಹುರುಪಿನಲ್ಲೆ ಮುಕುಂದ ತಮ್ಮ ಜೀವಾಳದ ಕೃತಿಯಾದ ‘ನಿರುತ್ತರ’ ಕಾದಂಬರಿಯನ್ನು ಮುಂದಿನ ಒಂದೆರಡು ವರ್ಷಗಳಲ್ಲಿ ಬರೆಯಲು ತೊಡಗಿದರು. ನಾಲ್ಕು ಸುದೀರ್ಘ ಪತ್ರಗಳ ಮೂಲಕ ಮಾರ್ಮಿಕವಾಗಿ ಪ್ರಕಟಗೊಳ್ಳುವ ನಾಲ್ಕು ಪಾತ್ರಗಳ (ಕಲ್ಪನಾ, ನಚಿಕೇತ, ನಿಖಿಲ, ಶಾಂತಲಾ) ನಡುವಿನ ವಿಶಿಷ್ಟ ಸಂಬಂಧಗಳ ಕೃತಿ ಇದು. (ನಿರುತ್ತರ, 1996 ಗೀತಾ ಬುಕ್ ಹೌಸ್, ಮೈಸೂರು). ಹಸ್ತಪ್ರತಿಯಲ್ಲೆ ಇದನ್ನು ಯಶವಂತ ಚಿತ್ತಾಲ, ಮಾರುತಿ ಶಾನಭಾಗ (‘‘ಮುಕ್ತಿ” ಕಾದಂಬರಿ ಕುರಿತ ತಮ್ಮ ವಿಮರ್ಶೆಯಿಂದಾಗಿ ಸಾಹಿತ್ಯಾಸಕ್ತರ ಮನದಲ್ಲಿರುವವರು) ಇಬ್ಬರೂ ತುಂಬ ಇಷ್ಟಪಟ್ಟರು. ಅಣುಶಕ್ತಿನಗರದ ಸ್ನೇಹಿತೆ ಲೇಖಕಿ ಉಮಾ ರಾವ್ ಅವರ ಮನೆಯಲ್ಲಿ ಅದರ ಕೆಲಭಾಗಗಳನ್ನು ಮುಕುಂದ ವಾಚಿಸಿದರು. ಉಮಾ ರಾವ್ ಪ್ರೀತಿಯಿಂದ ಅವರನ್ನು ಮುಲುಂಡ್ ಜೋಷಿ ಎಂದು ಕರೆಯುತ್ತಿದ್ದರು. ಆ ಕೃತಿಗೆ ವಿವೇಕ ಬಲ್ಬನ್ನು ಬರೆದ. ಇದೇ ಸಮಯದಲ್ಲೇ ಅವರು ತಮ್ಮ ಅನುವಾದಗಳನ್ನೂ, ‘ಗೀತಾದತ್ತ’, ‘ಬೇಗಂ ಅಖ್ತರ್’ ಮತ್ತು ‘ತಲತ್ ಮಹಮೂದ್’ – ಕುರಿತ ನೀಳ್ ಬರಹಗಳನ್ನೂ ಬರೆದರು.
ಈ ಮೂರೂ ಮಹತ್ವದ ಲೇಖಾಂಕಗಳು ಸಂಗ್ರಹ ರೂಪದಲ್ಲಿ ಬರುವುದು ಇನ್ನೂ ಬಾಕಿ ಇದೆ. ಕನ್ನಡಕ್ಕೆ ಅವರು ಕೊಟ್ಟ ಇನ್ನೊಂದು ಅಪ್ರತಿಮ ಕೊಡುಗೆ- ‘‘ಈ ರಾತ್ರಿಗಳ ಜೊತೆಗೆ ನಮಗೆ ಪ್ರೀತಿ ಯಾಕಿಲ್ಲ?’’ (ಕವನ ಸಂಕಲನ, ಮೂಲ ಹಿಂದಿ : ವಿಜಯಕುಮಾರ್, ಅಂಕ ಪ್ರಕಾಶನ, 2014). ಗೆಳೆಯ ಗೋಪಾಲಕೃಷ್ಣ ಪೈ ಅವರ ಮುತುವರ್ಜಿಯಿಂದಾಗಿ ಈ ಪುಸ್ತಕ ಹೊರಬಂತು. ಆದರೆ ಅವರು ಇದಕ್ಕೆಲ್ಲ ಕಾಯುವವನಲ್ಲ ತಾನು ಎಂಬಂತೆ 2012ರ ಜೂನ್‌ನಲ್ಲಿ ತೀರಿಕೊಂಡರು. ಇಂದಿನ ಕನ್ನಡದ ಹೊಸ ಕವಿಗಳು ಓದಲೇಬೇಕಾದ ಹೊಸ ಒಕ್ಕಣಿಕೆಯ, ಹೊಸ ಶಾರೀರದ ಕವಿತೆಗಳು ಇದರಲ್ಲಿವೆ.
2000ರಿಂದೀಚೆ ನಾನು ಬೆಂಗಳೂರಿಗೆ ಬಂದು ಹೊಸ ಜೀವನೋಪಾಯಗಳಿಗಾಗಿ ಪ್ರಯತ್ನಿಸುತ್ತಿದ್ದಾಗ ಆಗಾಗ ಫೋನು ಮಾಡಿ, ‘‘ವಾಪಸ್ ಬಂದ್ ಬಿಡ್ರಿ’’ ಎನ್ನುತ್ತಿದ್ದರು. ನಡುವೆ ಆಗ ಈಗ ಕೆಲಸದ ಮೇಲೆ ಅಥವಾ ಕೆಲಸವಿಲ್ಲದೆ ಒಂದು ಬಗೆಯ ಪುನಶ್ಚೇತನ ಕ್ಕಾಗಿ ಎಂಬಂತೆ ಸಣ್ಣ ನೆಪ ಮಾಡಿ ನಾನು ಮುಂಬಯಿಗೆ ಹೋದಾಗೆಲ್ಲ ಮುಕುಂದರನ್ನು ಕಾಣುತ್ತಿದ್ದೆ. ಅವರ ಅತ್ಯಂತ ಸಹಜ, ಸರಳ, ಸುಂದರ ಸಾತ್ವಿಕ ಸಹವಾಸದಲ್ಲೆ ಒಂದು ಅಭಯ ಇತ್ತು. ಶ್ರೀರಾಮ ನಡುವೆ ಕೆಲಸದ ಮೇಲೆ ರೋಮ್‌ಗೆ ಹೋಗಿದ್ದಾಗ, ‘‘ರೋಮ್ ರೋಮ್ ಮೇ ಬಸನೇವಾಲೇ ರಾಮ್’’ ಎಂದು ಉದ್ಗರಿಸಿದರು. “ನಾನು ಇತ್ತೀಚೆ ಕಂಡುಕೊಂಡ ಅತ್ಯಂತ ಖುಷಿಯ ಕೆಲಸ ಅಂದರೆ ಮೊಮ್ಮಗನನ್ನು ಲೋಕಲ್ ರೈಲಿನಲ್ಲಿ ಕರೆದುಕೊಂಡು ವಿ.ಟಿ.ಗೆ ಹೋಗಿ ಸುತ್ತಾಡಿಸಿಕೊಂಡು ಬರುವುದು’’ ಎಂದು ಹೇಳಿದ್ದರು. 1999ರ ಒಂದು ಮಧ್ಯಾಹ್ನ ನಾವು ಮುಂಬಯಿಯನ್ನು ಬಿಟ್ಟು ಬೆಂಗಳೂರಿಗೆ ಹೊರಟು ನಿಂತಾಗ ಅವರ ಮನೆಯಿಂದ ನಾಲ್ಕೇ ನಿಮಿಷದ ಕಾಲುದಾರಿಯಲ್ಲಿದ್ದ ನಮ್ಮ ಬಸ್‌ಸ್ಟಾಪಿಗೆ ಥರ್ಮಾಸು ಫ್ಲಾಸ್ಕ್ ತುಂಬ ಬಿಸಿ ಬಿಸಿ ಚಾ ತೆಗೆದುಕೊಂಡು ಬಂದು ಕುಡಿಸಿದರು. ಅಭಯದ ಆಗರದಂತೆ ನಮ್ಮೆಲ್ಲರನ್ನೂ ತಬ್ಬಿ ‘ರ‍್ರಿ’ ಎಂದು ಬೀಳ್ಕೊಟ್ಟರು. ಆಗಲೇ ಅಲ್ಲೊಬ್ಬ ಬೀದಿ ಚಿಂದಿ ಆಯುವ ಹುಡುಗ ಖಾಲಿ ಪೆಪ್ಸಿ ಕ್ಯಾನನ್ನು ಕಾಲಿಂದ ಒದೆಯುತ್ತ ಬಂದ. ಅದು ಚಿಮ್ಮಿ ಆ ಬಸ್ಸಿನ ಅಡಿಗೆ ಹೋಗಿಬಿಟ್ಟಿತು. ಅದನ್ನು ಅದರ ಪಾಡಿಗೆ ಬಿಟ್ಟು ಹೋಗುವ ಮನಸ್ಸು ಅವನಿಗಿರಲಿಲ್ಲ. ಏಕೆಂದರೆ ಅದರಿಂದ ಅವನದೇ ಒಂದು ಲಯ ಭಂಗವಾಗಬಹುದಾಗಿತ್ತು. ಅವನೂ ಬಸ್ಸು ಹೊರಡಲು ಕಾಯುತ್ತ ಬಸ್ಸಿನ ಡ್ರೈವರು ಮತ್ತು ಸಹಾಯಕರ ಜೊತೆಗೆ ಸಂಭಾಷಣೆ ನಡೆಸಿದ್ದ. ಕೊನೇ ಗಳಿಗೆಯಲ್ಲಿ ಪ್ರತ್ಯಕ್ಷನಾಗಿ ಇಡೀ ಬಸ್ಸನ್ನೇ ತಾಬೆಯಲ್ಲಿ ತಗೊಂಡವನಂತೆ ಇದ್ದ. ಬಸ್ಸು ಹೊರಟಾಗ ಬಸ್ಸಿಗೆ ಮುಕುಂದರ ಜೊತೆ ಅವನೂ ಕೈಬೀಸಿದ. ಇದಾದ ಎಷ್ಟೋ ವರುಷಗಳ ನಂತರ ನನ್ನ ಕಥೆಯೊಂದರಲ್ಲಿ ಆ ಹುಡುಗ ಪೆಪ್ಸಿ ಕ್ಯಾನನ್ನು ಒದೆಯುತ್ತ ಹಾಗೆಯೇ ಬಂದು ಅಂದು ಉಸುರಿದ್ದನ್ನು ಹೇಳಿ ಹೋದ. ಅದಾದ ಕೆಲವು ವರುಷಗಳ ನಂತರ ಮುಂಬಯಿಯ ಅವರ ಮನೆಯಲ್ಲಿ (ಇದರ ನಂತರ ಮತ್ತೆ ಮುಲಾಖಾತ್ ಆಗಲಿಲ್ಲ) ಸಿಕ್ಕಾಗ, ಥಟ್ಟಂತ “ಆ ಹುಡುಗನ್ನ ಇನ್ನೂ ಸಾಕ್ಕೊಂಡೀರಲ್ಲ ಕಥೇಲಿ’’ – ಎಂದರು. ಮುಕುಂದರಿಗೆ ‘‘ಎಹಸಾಸ್’’ (ಅರಿವು) ಮತ್ತು ‘‘ಮೆಹಸೂಸ್’’ (ಅನುಭೂತಿ) ಈ ಎರಡೂ ಶಬ್ದಗಳು ಅಂದ್ರೆ ಪ್ರಾಣ.
ಕಣ್ಣೆದುರೇ ಇರುವವರು ಕಣ್ಮರೆಯಾದರೆ ಅದೊಂದು ಬಗೆಯ ಅಸಹಾಯಕ, ತೀರ ಭೌತಿಕವಾದ ಶೂನ್ಯ. (‘ಮನೆಯಂಗಳದ ಕರಿಮಾವಿನ ಮರ ಉರುಳಿ ಬಾನಿಗೇ ದೊಡ್ಡ ತೂತು’ – ಗಂಗಾಧರ ಚಿತ್ತಾಲ). ಆದರೆ ಸಂವೇದನೆಯ. ಆತ್ಮಸಾಕ್ಷಿಯ ಭಾಗವೇ ಆಗಿಹೋದ ಆಪ್ತರು, ಕಣ್ಣಾಚೆಗೆ ತೀರಿಕೊಂಡರೆ ಅದೊಂದು ಮಾಹಿತಿಯಾಗಿ ಕಾಡಿದರೂ ಮನಸಲ್ಲಿ ಅವರ ಹಾಜರಿ ಏನೇನೂ ಬದಲಾವಣೆ ಇಲ್ಲದೆ ಮುಂದುವರೆಯುತ್ತದೆ. ಇನ್ನೂ ತೀವ್ರವೇ ಆಗುತ್ತದೆ. ಜೀವಸಂಕುಲದ ಜೊತೆಗಿನ ಅನಾಮಿಕ ನಂಟಿಗೆ, ಕಾವ್ಯ, ಸಾಹಿತ್ಯ, ಕಲೆ, ಅಥವಾ ಇವ್ಯಾವುದರ ಹಂಗೂ ಇರದ ನಿರ್ಮಲ ಮಮಕಾರಗಳೇ ಅಸಂಖ್ಯ ಬೆಳಕಿಂಡಿಗಳು ಎಂಬುದನ್ನು ತಮ್ಮ ಪಾರದರ್ಶಕ ಸಹವಾಸಗುಣದಿಂದ ನನ್ನ ಅನುಭವಕ್ಕೆ ತಂದ ಬಂಧು ಮುಕುಂದ ಭೌತಿಕವಾಗಿ ಮರೆಯಾದ ಎಂಟು ವರುಷಗಳ ನಂತರ ಈಗ ಇದನ್ನು ಬರೆಯಲು ನನಗೆ ಸಾಧ್ಯವಾಗಿದೆ. ಇದನ್ನಾತ ಖಂಡಿತ ತಪ್ಪು ತಿಳಿಯುವುದಿಲ್ಲ. ಈಗಲೂ, ನೆನೆದರೆ ಸಾಕು, ‘‘ಮೆಹದಿ ಹಸನ್, ಗುಲಾಮ್ ಅಲಿಗಿಂತ ಹೇಗೆ ವಿಶಿಷ್ಟ?”, “ಗೀತಾದತ್ತ ಮತ್ತು ಗುರುದತ್ತರ ತೀವ್ರತೆಯಲ್ಲಿ ವೈರುಧ್ಯಗಳೇನು?’’, ‘‘ಮರಾಠಿ ಕವಿ ಗ್ರೇಸ್ ಮಿಸ್ಟಿರಿಯಸ್ಸೋ ಮಿಸ್ಟಿಕಲ್ಲೋ?’’- ಇಂಥ ಗಂಟೆಗಟ್ಟಲೆ ಹರಟೆಗೆ ಮುಕುಂದ್ ಮನಸಲ್ಲಿ ಹಾಜರ್!
ಅತೀವ ಉತ್ಸುಕತೆ ಮತ್ತು ತಾದಾತ್ಮ್ಯದಿಂದ ಅವರು ಕನ್ನಡಕ್ಕೆ ತಂದ ಹಿಂದೀ ಕವಿ ವಿಜಯಕುಮಾರರ ಕೆಲವು ಸಾಲುಗಳನ್ನು ಇಲ್ಲಿ ಉಲ್ಲೇಖಿಸುತ್ತ, ಅವರ ಎಹಸಾಸ್ ಅನ್ನು ಮೆಹಸೂಸ್ ಮಾಡುತ್ತ ಮುಕುಂದ ಜೋಷಿಗೆ ‘‘ಚೀಯರ್ಸ್’’ ಹೇಳುತ್ತೇನೆ.
ಒಂದು ಕತೆಯ ಹಿಂದೆ
ಮತ್ತೊಂದು ಕತೆ ನಡೆದು ಬರುತ್ತಿತ್ತು
ನಂತರ
ಹೇಳುವುದು ಕೇಳುವುದು
ಎಲ್ಲವೂ ಅರ್ಥಹೀನವಾಗುತ್ತಿತ್ತು…
ಜನರ ಚಪ್ಪಲಿಗಳಲ್ಲಿ ಉಳಿಯುವವು
ಇಡೀ ಊರಿನ ಬೀದಿಗಳು…
ಬದುಕು ಏನೂ ಅಲ್ಲ
ಕೇವಲ ಕನಸುಗಳ ಒಂದು ಅಪೂರ್ಣ ವಿವರಣೆ….
ಹತ್ತಿರ ಕೂತ ಈ ಮನುಷ್ಯ
ದೂರ ದೂರ ಕಾಣುತ್ತಾನೆ…
ಆತ ಯಾವಾಗಲೂ
ಒಂದು ಕಲ್ಲಿನಂತೆ ಹಿಂದೆಯೇ ಉಳಿಯುತ್ತಿದ್ದ
ದೃಢವಾಗಿ, ಜಡವಾಗಿ, ದುಃಖಿತನಾಗಿ
ಮತ್ತು ಉದ್ದೇಶ ಹೀನ
ನಾವೆಲ್ಲ ಅವನನ್ನು
ಹೆದರಿಕೆಯಿಂದ ಸಂಕೋಚದಿಂದ ಮುಟ್ಟಿ
ಮತ್ತೆ ನಂತರ, ಮೆಲ್ಲಗೆ ಮುಂದೆ
ಸಾಗುತ್ತಿದ್ದೆವು…
ಮಕ್ಕಳು ಯಾವ ಆಟಿಗೆಗಳಿಂದ
ಆಡುತ್ತಾರೋ
ರಾತ್ರಿ ಆ ಆಟಿಗೆಗಳ ರಹಸ್ಯ
ಅಲ್ಲಿ ಇಲ್ಲಿ ಬಿದ್ದುಕೊಂಡಿದೆ…
ಹಾಜರಿಲ್ಲದ ಕವಿ ಕೂಡ
ಕವಿಯೇ ಆಗಿರುತ್ತಾನೆ…
(ಕೃತಿ: ತಾರಿ ದಂಡೆ, ಲೇಖಕರು: ಜಯಂತ ಕಾಯ್ಕಿಣಿ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 250/-)

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ