ನಾನು ಆ ಮನೆಗೆ ಹೋಗುತ್ತೇನೆ ಎಂದು ತಿಳಿದು ಅವರು ಬಾಕಿ ಇರುವ ಕರೆಂಟ್ ಬಿಲ್ ಕಟ್ಟಿದ್ದರಂತೆ ಹಾಗೂ ಕ್ಲೀನ್ ಮಾಡಿಸಿದ್ದರಂತೆ. ಯಾವಾಗ ನಾನು ಹೋಗೋದಿಲ್ಲ ಎಂದು ತಿಳಿದ ಮೇಲೆ ನನ್ನ ಮೇಲೆ ಗರಂ ಆದರು. ಆದರೆ ಇದನ್ನು ತೋರಿಸಿಕೊಳ್ಳುವ ಹಾಗಿರಲಿಲ್ಲ. ಮನದಲ್ಲಿ ನನ್ನ ಬಗ್ಗೆ ಕೋಪವು ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಆಗ ಇವರೇ ನಮ್ಮ ಹೆಚ್ಚೆಂ ಆದ್ದರಿಂದ ನನಗೆ ಕಿರಿಕ್ ಕೊಡಲು ಶುರು ಮಾಡಿದರು. ರಜಾ ಕೇಳಿದಾಗ ತಕ್ಷಣ ಪ್ರತಿಕ್ರಿಯೆ ನೀಡದೇ ಇರುತ್ತಿದ್ದುದು, ಸುಖಾ ಸುಮ್ಮನೇ ಅದು ಮಾಡಿಲ್ಲ ಇದು ಮಾಡಿಲ್ಲ ಎಂದು ಹೇಳುತ್ತಿದ್ದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ಮೂರನೆಯ ಕಂತು ನಿಮ್ಮ ಓದಿಗೆ
ಮೊದಲ ಸರ್ಕಾರಿ ಶಿಕ್ಷಕನಾಗಿ ಚಿಕ್ಕಬಳ್ಳಾಪುರಕ್ಕೆ ಹೋದಾಗ ನನಗೆ ಅಯ್ಯೋ ಈ ಜಿಲ್ಲೆಯಲ್ಲಿ ಯಾಕಾದ್ರೂ ಆಯ್ಕೆ ಆದೆ ಎಂಬ ಮನೋಭಾವ ಬಂದಿದ್ದಂತೂ ಸುಳ್ಳಲ್ಲ. ಮೊದಲು ನಾನು ನನ್ನ ಗೆಳೆಯನ ಅಣ್ಣನ ಮನೆಯಲ್ಲಿ ಇದ್ದೆ. ಅವರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ನಮಗೆ ಶಿಕ್ಷಕರ ನೇಮಕ ಆದೇಶ ಕೊಡುವಾಗ ನೀವು ಬೇಗನೇ ಹುದ್ದೆಗೆ ಸೇರಬೇಕು. ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ ಎಂದು ತಿಳಿಸಿದ್ದರು. ಇದಕ್ಕಾಗಿ ನಾನು ವೇಗವಾಗಿ ಬಸ್ ಸ್ಟ್ಯಾಂಡ್ ಕಡೆ ಹೋದೆ. ಅಲ್ಲಿ ನಾನು ನೇಮಕವಾದ ಶಾಲೆಯ ಹೆಸರು ಕೇತೇನಹಳ್ಳಿ ಆಗಿತ್ತು. ಬಸ್ ಸ್ಟ್ಯಾಂಡಿಗೆ ಹೋಗಿ ಕೇತೇನಹಳ್ಳಿಗೆ ಹೋಗುವ ಬಸ್‌ಗಳ ಬಗ್ಗೆ ವಿಚಾರಿಸಿದೆ. ಆದರೆ ಅಲ್ಲಿ ಯಾರೂ ಅಲ್ಲಿಗೆ ಹೋಗಲು ಆ ಊರಿನ ಹೆಸರನ್ನು ಕೇತೇನಹಳ್ಳಿ ಎಂದು ಹೇಳಲಿಲ್ಲ. ಬದಲಾಗಿ ‘ಕೇತೇನಪಲ್ಲಿ’ ಎಂದೇ ಸಂಬೋಧಿಸುತ್ತಿದ್ದರು. ನಾನು ಕೇತೇನಹಳ್ಳಿಗೆ ಎಂದರೂ ಅವರು ಪದೇ ಪದೇ ಕೇತೇನಪಲ್ಲಿಗಾ ಎಂದು ಕೇಳುತ್ತಿದ್ದರು. ಕೊನೆಗೆ ಒಬ್ಬರು ಸಿಕ್ಕಿ ಎರಡೂ ಒಂದೇ ಎಂದರು. ಇಲ್ಲಿ ತೆಲುಗಿನ ಪ್ರಭಾವ ತುಸು ಹೆಚ್ಚೇ ಇರೋ ಊರು ಬೇರೆ. ನನ್ನ ಮಾತಿಗೆ ಬಹುತೇಕರು ಕನ್ನಡದಲ್ಲಿ ಪ್ರತಿಕ್ರಿಯಿಸಲಿಲ್ಲ.
ಕೇತೇನಹಳ್ಳಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿದ್ದು ಆಗ ಈಗಿನಷ್ಟು ಅಭಿವೃದ್ಧಿ ಹೊಂದಿರಲಿಲ್ಲವಾದ್ದರಿಂದ ಅದು ನನಗೆ ತುಂಬಾ ಇಂಟೀರಿಯರ್ ಅನಿಸುತ್ತಿತ್ತು. ಬಸ್ ಸೌಲಭ್ಯ ಅಷ್ಟಾಗಿ ಇರಲಿಲ್ಲ. ಖಾಸಗಿ ಮಿನಿ ಬಸ್‌ಗಳು ಹಾಗೂ ಒಂದೇ ಸರ್ಕಾರಿ ಬಸ್ ಹೋಗುತ್ತಿತ್ತು. ನಾನು ಒಂದು ಬಸ್ಸಿನಲ್ಲಿ ಆ ಶಾಲೆಗೆ ಹೋದಾಗ ಆ ಊರು ಹೋಗುವ ದಾರಿ ಮಲೆನಾಡನ್ನು ನೆನಪಿಸುತ್ತಿತ್ತು, ಮಾರ್ಗ ಮಧ್ಯೆ ಬೆಟ್ಟ ಗುಡ್ಡಗಳು, ಗಿಡಮರಗಳನ್ನು ಕಂಡು ಇದೇನಪ್ಪಾ ಬೆಂಗಳೂರು ಹತ್ತಿರ ಇರೋ ಊರು ಹೀಗಿದೆ? ಪ್ರಶ್ನೆ ಮನದಲ್ಲಿ ಏಳುತ್ತಿತ್ತು. ಈ ಬಸ್ಸಿನ ಕಡೇ ನಿಲ್ದಾಣವೇ ಕೇತೇನಹಳ್ಳಿಯಾಗಿತ್ತು. ಮುಂದೆ ಯಾವುದೇ ಊರು ಇರಲಿಲ್ಲ. ಇನ್ನು ಸ್ವಲ್ಪ ಹಿಂದಕ್ಕೆ ಬಂದರೆ ಕೆಳಭಾಗದಲ್ಲಿ ಹೋಗಲು ಇನ್ನೂ ಕಷ್ಟವಾದ ಊರುಗಳು ಇದ್ದವಂತೆ. ನಿಂ ಪುಣ್ಯಈ ಸ್ಕೂಲ್ ಆದ್ರೂ ಸಿಕ್ಕಿದೆ ಖುಷಿ ಪಡು ಎಂದು ಕೆಲವರು ಹೇಳಿದ್ರು. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಸುಮ್ಮನಾದೆ. ಸುಮ್ಮನಾಗಲೇಬೇಕಿತ್ತು. ಏಕೆಂದರೆ ಯಾವುದೇ ಬೇರೆ ಅವಕಾಶ ಇರಲಿಲ್ಲ.

ಶಾಲೆಗೆ ಹೋದಾಗ ನನಗೆ ತುಂಬಾ ಬೇಸರವಾಯ್ತು. ಒಂದರಿಂದ 8 ನೇತರಗತಿಯ ಮಕ್ಕಳಿಗೆ ಇದ್ದದ್ದು ಬರೀ 3 ಕೊಠಡಿಗಳು ಮಾತ್ರ!! ಶಾಲೆಗೊಂದು ಮೈದಾನವೇ ಇರಲಿಲ್ಲ. ಶಾಲೆಯ ಮೈದಾನದ ಮಧ್ಯದಲ್ಲಿಯೇ ಹರಿಯುವ ಚರಂಡಿ ನೀರು, ಬಸ್ ವಾಪಾಸ್ ತಿರುಗಿಸಿಕೊಳ್ಳಲು ಶಾಲಾ ಮೈದಾನವೇ ಬಳಕೆಯಾಗುತ್ತಿದ್ದುದ್ದನ್ನು ನೋಡಿ ನನಗೆ ತುಂಬಾ ಬೇಸರವೆನಿಸಿತು. ಎಂಥಾ ಶಾಲೆ ಆಯ್ಕೆ ಮಾಡಿಕೊಂಡೆ ಎಂದೆನಿಸಿತು. ನಾನು ಆ ಶಾಲೆಗೆ ಹೋದಾಗ ಅಲ್ಲಿ ಇದ್ದದ್ದು ಬರೀ 2 ಜನ ಶಿಕ್ಷಕರು ಮಾತ್ರ. ಮೂರನೇಯವನಾಗಿ ನಾನು ಹೋದೆ. 1 ರಿಂದ 8 ನೇ ತರಗತಿಯ ಮಕ್ಕಳಿಗೆ ಹೇಗಪ್ಪಾ ಪಾಠ ಮಾಡೋದು? ಎಂದು ಅಂದುಕೊಂಡೇ ಆಂದು ವಾಪಾಸಾದೆ.. ಆದರೆ ಅಲ್ಲಿದ್ದ ಶಿಕ್ಷಕರು ಯಾರೂ ಸಹ ನನಗೆ ನನ್ನ ವಾಸ್ತವ್ಯದ ಬಗ್ಗೆ ವಿಚಾರಿಸಲಿಲ್ಲ. ವಾಪಾಸ್ ಚಿಕ್ಕಬಳ್ಳಾಪುರಕ್ಕೆ ಬಂದಾಗ ನನ್ನ ಜೊತೆ ನೇಮಕವಾದ ಬೇರೆ ಶಿಕ್ಷಕರಿಗೆ ಅವರ ಸಹೋದ್ಯೋಗಿಗಳು ಒಳ್ಳೇ ರೀತಿಯಲ್ಲಿ ಅವರಿಗೆ ಸಹಾಯ ಮಾಡಿದ್ದನ್ನು ಕೇಳಿ ನನಗೆ ಅಂಥವರು ಸಿಗಲಿಲ್ಲವಲ್ಲ ಎಂದು ನಾನೇ ಮನದಲ್ಲಿಯೇ ಕೊರಗಿದೆ. ಹಲವು ದಿನಗಳು ನನ್ನ ಗೆಳೆಯನ ಅಣ್ಣನ ಮನೆಯಲ್ಲಿಯೇ ಇದ್ದೆ. ಕೆಲ ದಿನಗಳು ಕಳೆದ ನಂತರ ನನ್ನ ಬಳಿ ಚಿಕ್ಕಬಳ್ಳಾಪುರದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಬಗ್ಗೆ ಅಲ್ಲಿನ ಒಬ್ಬರು ವಿಚಾರಿಸಿದರು. ಅಷ್ಟೇ ಅಲ್ಲದೇ ತಾವೇ ವ್ಯವಸ್ಥೆ ಮಾಡೋದಾಗಿ ಹೇಳಿದರು. ನಾನು ಖುಷಿಯಿಂದ ಒಪ್ಪಿಕೊಂಡೆ. ಆದರೆ ನಂತರ ತಿಳಿದದ್ದು ಅದು ಅವರು ಇದ್ದ ಬಾಡಿಗೆ ಮನೆ. ಅದರ ಓನರ್ ಜೊತೆ ಕಿರಿಕ್ ಮಾಡಿಕೊಂಡು ಅವರು ಬೇರೆಡೆ ಹೋಗಿದ್ದಾರೆ. ಆದರೆ ಅವರ ಓನರ್ ಅವರಿಗೆ ಲೀಸ್ ಹಣ ನೀಡದೇ ಇದ್ದ ಕಾರಣ ಆ ಮನೆಯಲ್ಲಿ ನನ್ನನ್ನು ಸೇರಿಸಿ ಈ ಮೂಲಕ ಆ ಮನೆಯ ಲಾಭ ಮಾಡಿಕೊಳ್ಳಬೇಕು ಎಂದು ಬಯಸಿದ್ದ ವಿಷಯ ನಂತರ ತಿಳಿಯಿತು. ಆ ಮನೆಯೋ ಚೆನ್ನಾಗಿದ್ದಿದ್ದರೆ ಇರಬಹುದಿತ್ತು. ಆದರೆ ಅದು ಇದ್ದ ಏರಿಯಾ ನನಗೆ ಇಷ್ಟ ಆಗಲಿಲ್ಲ. ಅಲ್ಲದೇ ನನ್ನ ಗೆಳೆಯನ ಅಣ್ಣನೂ ಬೇಡ ಎಂದರು. ನಾನು ಅವರ ಮಾತಿನಂತೆ ಮಾರನೇ ದಿನ ಶಾಲೆಗೆ ಹೋಗಿ ನನಗೆ ಆ ಮನೆಗೆ ಹೋಗಲು ಇಷ್ಟವಿಲ್ಲ ಎಂದು ತಿಳಿಸಿದೆ. ಅವರು ನಾನು ಆ ಮನೆಗೆ ಹೋಗುತ್ತೇನೆ ಎಂದು ತಿಳಿದು ಅವರು ಬಾಕಿ ಇರುವ ಕರೆಂಟ್ ಬಿಲ್ ಕಟ್ಟಿದ್ದರಂತೆ ಹಾಗೂ ಕ್ಲೀನ್ ಮಾಡಿಸಿದ್ದರಂತೆ. ಯಾವಾಗ ನಾನು ಹೋಗೋದಿಲ್ಲ ಎಂದು ತಿಳಿದ ಮೇಲೆ ನನ್ನ ಮೇಲೆ ಗರಂ ಆದರು. ಆದರೆ ಇದನ್ನು ತೋರಿಸಿಕೊಳ್ಳುವ ಹಾಗಿರಲಿಲ್ಲ. ಮನದಲ್ಲಿ ನನ್ನ ಬಗ್ಗೆ ಕೋಪವು ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಆಗ ಇವರೇ ನಮ್ಮ ಹೆಚ್ಚೆಂ ಆದ್ದರಿಂದ ನನಗೆ ಕಿರಿಕ್ ಕೊಡಲು ಶುರು ಮಾಡಿದರು. ರಜಾ ಕೇಳಿದಾಗ ತಕ್ಷಣ ಪ್ರತಿಕ್ರಿಯೆ ನೀಡದೇ ಇರುತ್ತಿದ್ದುದು, ಸುಖಾ ಸುಮ್ಮನೇ ಅದು ಮಾಡಿಲ್ಲ ಇದು ಮಾಡಿಲ್ಲ ಎಂದು ಹೇಳುತ್ತಿದ್ದರು.
ನಾನು ಶಾಲೆಗೆ ಹೋದ ಒಂದು ತಿಂಗಳಷ್ಟರಲ್ಲಿ ನಮ್ಮ ಶಾಲೆಗೆ ಮತ್ತೊಬ್ಬ ನೇಮಕವಾದ ಹೊಸ ಶಿಕ್ಷಕರು ಬಂದರು. ಇವರೂ ಸಹ ಲೇಡೀಸ್ ಆದ್ದರಿಂದ ಇವರ ಜೊತೆ ಮೊದಲಿದ್ದ ಲೇಡೀಸ್ ಮೇಡಂ ಹೊಂದಿಕೊಂಡರು. ನನಗಿಂತಲೂ ಇವರಿಗೆ ರಜಾ ಹಾಗೂ ಶಾಲೆಗೆ ಬರೋ ಟೈಮಿಂಗ್ಸ್ ವಿಷಯದಲ್ಲಿ ಉದಾರತೆ ತೋರಿಸೋಕೆ ಶುರು ಮಾಡಿದರು. ಹೊಸದಾಗಿ ಬಂದವರು ಮುಖ್ಯೋಪಾಧ್ಯಾಯರಿಗೆ ಅವರು ಹೇಳಿದ ಕೆಲಸವನ್ನು ಮಾಡಿಕೊಡುತ್ತಿದ್ದರು.
ಶಿಕ್ಷಕನಾಗಿ ಒಂದೆರಡು ತಿಂಗಳ ನಂತರ ನಮ್ಮ ಊರಲ್ಲಿ ಮಾರಿ ಹಬ್ಬ ಆಯಿತು. ಆ ಹಬ್ಬಕ್ಕೆಂದು ನಾನು ಊರಿಗೆ ಹೊರಟೆ. ಅಲ್ಲಿಗೆ ಹೋದಾಗ ನಾನು ನಾಳೆ ಇನ್ನೇನು ವಾಪಸ್ ಆಗಬೇಕು ಎನ್ನುವಷ್ಟರಲ್ಲಿ ನಾನು ಬೈಕಿನಿಂದ ಬಿದ್ದು ಗಾಯ ಮಾಡಿಕೊಂಡೆ. ವಾಪಾಸ್ ಹೋಗೋದಿಕ್ಕೆ ತಡವಾಯ್ತು. ಇದೇ ಸಂದರ್ಭ ಎಂದು ಕಾಯುತ್ತಿದ್ದ ನಮ್ಮ ಹೆಡ್ ಮೇಡಂ ನನ್ನ ಮೇಲೆ ಹಗೆ ತೀರಿಸಿಕೊಳ್ಳಲು ಪ್ರಾರಂಭಿಸಿದರು. ಅಷ್ಟಕ್ಕೂ ನಾನು ಏಕೆ ಬಿದ್ದೆ? ತಡವಾಗಿ ಹೋಗಿದ್ದಕ್ಕೆ ನನ್ನ ಬಗ್ಗೆ ಏನು ಪಿತೂರಿ ಮಾಡಿದ್ರು? ನನಗೆ ಏನು ತೊಂದರೆ ಆಯ್ತು? ಎಂಬುದೆಲ್ಲಾ ಒಂದು ರೋಚಕ ಸ್ಟೋರಿ. ಇದನ್ನು ನಾನು ಮುಂದಿನ ಸಂಚಿಕೆಯಲ್ಲಿ ತಿಳಿಸಬಯಸುತ್ತೇನೆ.

ತೊಂದರೆ ಕೊಡೋಕೆ ಒಬ್ಬರು ಇದ್ರೆ ಕಾಯೋಕೂ ಒಬ್ಬ ಇರ್ತಾರಂತೆ. ಅಷ್ಟಕ್ಕೂ ತೊಂದರೆ ಕೊಟ್ಟವರೂ ನೆಮ್ಮದಿಯಾಗಿ ಇರುತ್ತಾರಾ? ಖಂಡಿತಾ ಇಲ್ಲ. ಕರ್ಮ ರಿಟರ್ನ್ಸ್ ಎಂಬಂತೆ ಮತ್ತೆ ಅವರಿಗೆ ವಾಪಾಸ್ ಬಂದೇ ಬರುತ್ತೆ. ಅಲ್ಲಿಯವರೆಗೂ ತೊಂದರೆ ಅನುಭವಿಸಿದವರು ಕಾಯಬೇಕಷ್ಟೇ. ಮರಳಿ ತಾವು ಅವರಿಗೆ ತೊಂದರೆ ಕೊಡಲು ಹೋಗಬಾರದು.

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

