ಇಲ್ಲಿರುವ ನಾಲ್ಕು ಕಥೆಗಳು ಕಟ್ಟುಕಥೆಗಳೆಂದು ನಮಗನಿಸುವುದೇ ಇಲ್ಲ. ಗ್ರಾಮ ಜೀವನವೇ ಹೀಗೆ…. ನೀರಿಗೆಂದು ಮೈಲುದೂರ ಕೊಡಪಾನ ಹಿಡಿದು ಸಾಗಿ ಮನೆಗೆ ನೀರು ತುಂಬಬೇಕು. ಮತ್ತೆ ಮನೆಯಿಂದ ಚೆಂಬು ಹಿಡಿದುಕೊಂಡು ಇನ್ನೆಲ್ಲಿಗೋ ನಡೆದು ಹೋಗುವಂತಹ ವಿಪರ್ಯಾಸಗಳು ಹಳ್ಳಿಯಲ್ಲಿ ಮಾತ್ರವೇ ನಡೆಯುತ್ತಿತ್ತು. ಇದು ಹಳ್ಳಿ ಬದುಕಿನ ನೋವಿನ ಚಿತ್ರಣ. ಕಥೆಗಾರರ ಬಾಲ್ಯವೇ ಇಲ್ಲಿನ ಕಥೆಗಳಿಗೆ ಸ್ಪೂರ್ತಿ, ಪ್ರೇರಣೆ ಕೊಟ್ಟಿರಲೂಬಹುದು. ಏಕೆಂದರೆ ಹಳ್ಳಿಯ ಬಾಲ್ಯವೆಂಬುದು ಅನುಭವಗಳನ್ನು ಮೊಗೆ ಮೊಗೆದು ಕೊಡುವ ತಾಣ.
ಮಲ್ಲಿಕಾರ್ಜುನ ತೂಲಹಳ್ಳಿ ಕಥಾ ಸಂಕಲನ “ಅಗಸ್ತ್ಯ ನಕ್ಷತ್ರ” ಕುರಿತು ಸಂಗೀತಾ ರವಿರಾಜ್ ಚೆಂಬು ಬರಹ
ಮಲ್ಲಿಕಾರ್ಜುನ ಗೌಡ, ತೂಲಹಳ್ಳಿಯವರ ಹಳ್ಳಿ ಅನುಭವಗಳ “ಅಗಸ್ತ್ಯ ನಕ್ಷತ್ರ” ಎಂಬ ನಾಲ್ಕು ನೀಳ್ಗತೆಗಳ ಸಂಕಲನ ಸಾರಸ್ವತ ಲೋಕದಲ್ಲಿ ಒಂದು ಶಾಶ್ವತ ಧ್ರುವ ತಾರೆಯಾಗುವಂತಹ ಕೃತಿ. ಒಂದು ಹಳ್ಳಿಯೆಂದರೆ ಅದೊಂದು ಪ್ರಾಪಂಚಿಕ ಲೋಕಕ್ಕೆ ಸಮ. ಆ ಲೋಕದ ಬದುಕು ಸಮಾಜಕ್ಕೆ ಮಾದರಿಯು ಆಗಬಹುದು ಅಥವಾ ಮಾರಕವು ಆಗಬಹುದು. ಅದನ್ನು ಹೇಗೆಂದು ಸ್ವೀಕರಿಸುವ ಗುಣ ಮಾತ್ರ ಲೇಖಕರ ಮನೋಧರ್ಮಕ್ಕೆ ಸೇರುತ್ತದೆ.
ಇಲ್ಲಿ ಅಗಸ್ತ್ಯ ನಕ್ಷತ್ರದಲ್ಲಿನ ನಾಲ್ಕು ನೀಳ್ಗತೆಗಳು ಸಾಮಾಜಿಕ ಕಥೆಗಳಾಗಿದ್ದು ಹಳ್ಳಿ ಜೀವನದ ಪದರುಗಳೆಲ್ಲವನ್ನು ಪ್ರತಿ ಕಥೆಯಲ್ಲಿ ಹರವಿ ಬಿಟ್ಟು ಸಾರವನ್ನೆಲ್ಲ ಹೊರಗೆಳಿದ್ದಿದ್ದಾರೆ. ಇಲ್ಲಿ ನೀರಿಲ್ಲದ ಸಂಕಟ ಇದೆ, ಗಣಿಗಾರಿಕೆ ನುಂಗಿದ ಹೊಲವಿದೆ, ನೋವ ನುಂಗುವ ರೈತರಿದ್ದಾರೆ, ಮಾಗಿದ ವಯೋವೃದ್ಧರಿದ್ದಾರೆ, ಅಪರಾಧ, ತೇರನ್ನೆಳೆಯುವ ಜಾತ್ರೆ, ಪ್ರಣಯವು ಒಂದು ಕಡೆ, ಹಳ್ಳಿಯ ಗೂಡಂಗಡಿ ಇತ್ಯಾದಿ ಸೇರಿದ ಬದುಕಿನ ಸತ್ಯಗಳಿವೆ. ಈಗಿನ ಧಾವಂತದ ಬದುಕಿನ ಸದ್ಯದಲ್ಲಿ ಮರಿಚೀಕೆಯಾದ ಇಂತಹ ಕಥೆಗಳು ನಮ್ಮನ್ನೊಮ್ಮೆ ಸುಖದ ಹಾದಿಯಲ್ಲಿ ಕೊಂಡೊಯ್ಯುತ್ತದೆ.
ಈ ಕೃತಿಯ ನಾಲ್ಕು ಕಥೆಗಳಲ್ಲಿ ಅಗಸ್ತ್ಯ ನಕ್ಷತ್ರ ಸುಂದರವಾದ ಕಥಾ ಹಂದರ. ಇದರಲ್ಲಿ ಕಥೆಗಾರರು ಗ್ರಾಮವೊಂದರ ಅನೇಕ ಮಗ್ಗುಲುಗಳ ವಿಚಾರಗಳನ್ನು ಕೈಗೆತ್ತಿಕೊಂಡರು, ಕೊನೆಗೊಂದು ಏಕರೂಪದ ನಿರ್ಧಾರ ತಳೆದಿರುವುದು ಮುಖ್ಯವಾಗಿ ಈ ಕಥೆಯ ಹೆಚ್ಚುಗಾರಿಕೆ. ಜಾತಿ ಪಂಕ್ತಿಗಳನ್ನು ಸೂಚ್ಯವಾಗಿ ಬಳಸಿದರೂ ಸಮಾನತೆಯ ಭಾವನೆಯೇ ಕಥೆಯಲ್ಲಿ ಎದ್ದು ಕಾಣುತ್ತದೆ. ಕಥೆಯ ನಾಯಕ ಭೋಜನ ಗೌಡರೆಂಬ ಭೋಜ ಗೌಡ ಕುತಂತ್ರಗಳಿಗೆ ಸಿಲುಕಿದರು ಆತನ ಒಳ್ಳೆಯತನ ಆತನನ್ನು ಕಾಪಾಡುವ ತಿರುಳು ಕಥೆಯಲ್ಲಿದೆ. ಬಾಲ್ಯದಿಂದಲೇ ಹಳ್ಳಿಯಿಂದ ಪ್ರಬಾವಿತರಾದ ಲೇಖಕರು ತಮ್ಮ ಗ್ರಾಮ್ಯ ಭಾಷೆಯ ಪದಗಳೊಂದಿಗೆ ಜೊತೆಗೆ ಹಳ್ಳಿಯ ತಲ್ಲಣಗಳೊಂದಿಗೆ ನಮಗಿಲ್ಲಿ ಕಾಣಸಿಗುತ್ತಾರೆ. ಹಳ್ಳಿಯ ಸರ್ವ ಕಷ್ಟ ಸುಖಗಳಿಗೆ, ಎಲ್ಲಾ ರೀತಿಯ ಪರಿಸ್ಥಿತಿಗಳಿಗೆ ಲೇಖಕರು ಒಗ್ಗಿಕೊಂಡಿರುವುದರಿಂದಲೆ ಏನೋ ತೀರಾ ಹಿಂದಿನ ಗ್ರಾಮವೊಂದರ ಎಲ್ಲಾ ಸೂಕ್ಷ್ಮಗಳನ್ನು ಹಿಂದೇಟು ಹಾಕದೆ ನಿರ್ಭಿಡೆಯಿಂದ ಉಲ್ಲೇಖಿಸಿಕೊಂಡಿದ್ದಾರೆ. ಅಂದರೆ ಪ್ರಾಮಾಣಿಕವಾದ ಬರವಣಿಗೆ ಮತ್ತು ಭಾಷೆ ಇಲ್ಲಿನ ಕಥೆಗಳಲ್ಲಿ ಕಂಡು ಬರುತ್ತದೆ.
“ಹಾಸಿದ್ದ ಕಂಬಳಿ ಅಲ್ಲೇ ಬಿಟ್ಟು ಕಡ್ಡಿ ಭರಮನೊಂದಿಗೆ ತಮ್ಮನ ಗೌಡ ಹೊಲ ಬೀಳುವವರೆಗೆ ಪಂಚೆ ತುದಿಯನ್ನು ಎಡಗೈಲಿ ಹಿಡಿದು ರಭಸದಿಂದ ನಡೆದ ಭೋಜನ ಗೌಡ. ಹೊಲದ ದೊಡ್ಡ ಏರಿಯ ಮೇಲೆ ಗುಂಪು ಗುಂಪು ಜನ”. ಅಗಸ್ತ್ಯ ನಕ್ಷತ್ರ ಕಥೆಯ ಈ ಸಾಲಿನಲ್ಲಿ ಕಂಡುಬರುವ ಶಿಸ್ತು ಬರವಣಿಗೆಯುದ್ದಕ್ಕೂ ಇದೆ. ಕನ್ನಡದಲ್ಲಿ ಸುಲಭವಾಗಿ ಕೇಳಿಬಾರದ ಹಲವಾರು ಪದಗಳು ಕನ್ನಡದ ಉಪಭಾಷೆಯಾದ ಇಲ್ಲಿನ ಗ್ರಾಮ್ಯ ಭಾಷೆಯ ಸೊಗಡಿನಲ್ಲಿದೆ. ಬಹುಷಃ ತಮ್ಮ ಬಾಲ್ಯದಲ್ಲಿ ಕಂಡಿದ್ದ ಕೇಳಿದ್ದ ನೆನಪುಗಳಿಗೆ ಲೇಖಕರು ಈಗ ಜೀವ ತುಂಬಿದ್ದಾರೆ ಎಂದೆನಿಸುತ್ತದೆ. ಅಗಸ್ತ್ಯ ನಕ್ಷತ್ರ ಕಥೆಯಲ್ಲಿ ಅಮಾಯಕ ಹೆಣ್ಣು ಸರೋಜ ಯಾವುದರ ಪರಿವೆಯೇ ಇಲ್ಲದೆ ಕೊಲೆಯಾದದ್ದು ಪ್ರತಿ ಹೆಣ್ಣಿನ ನೋವನ್ನು ಇಲ್ಲಿ ಪ್ರತಿನಿಧಿಸುತ್ತದೆ. ಇಂತಹ ವಿಚಾರವೆಲ್ಲ ಲೇಖಕ ಮತ್ತು ಸಮಾಜದ ನಡುವಿನ ಕೊಂಡಿಯಾಗಿ ಬೆಸೆದುಕೊಂಡಿರುವುದನ್ನು ಲೇಖಕರು ಓದುಗರಿಗೆ ಸಮರ್ಪಕವಾಗಿ ನೀಡಿದ್ದಾರೆ.
ಇಲ್ಲಿರುವ ನಾಲ್ಕು ಕಥೆಗಳು ಕಟ್ಟುಕಥೆಗಳೆಂದು ನಮಗನಿಸುವುದೇ ಇಲ್ಲ. ಗ್ರಾಮ ಜೀವನವೇ ಹೀಗೆ…. ನೀರಿಗೆಂದು ಮೈಲುದೂರ ಕೊಡಪಾನ ಹಿಡಿದು ಸಾಗಿ ಮನೆಗೆ ನೀರು ತುಂಬಬೇಕು. ಮತ್ತೆ ಮನೆಯಿಂದ ಚೆಂಬು ಹಿಡಿದುಕೊಂಡು ಇನ್ನೆಲ್ಲಿಗೋ ನಡೆದು ಹೋಗುವಂತಹ ವಿಪರ್ಯಾಸಗಳು ಹಳ್ಳಿಯಲ್ಲಿ ಮಾತ್ರವೇ ನಡೆಯುತ್ತಿತ್ತು. ಇದು ಹಳ್ಳಿ ಬದುಕಿನ ನೋವಿನ ಚಿತ್ರಣ. ಕಥೆಗಾರರ ಬಾಲ್ಯವೇ ಇಲ್ಲಿನ ಕಥೆಗಳಿಗೆ ಸ್ಪೂರ್ತಿ, ಪ್ರೇರಣೆ ಕೊಟ್ಟಿರಲೂಬಹುದು. ಏಕೆಂದರೆ ಹಳ್ಳಿಯ ಬಾಲ್ಯವೆಂಬುದು ಅನುಭವಗಳನ್ನು ಮೊಗೆ ಮೊಗೆದು ಕೊಡುವ ತಾಣ. ಕರೆಂಟಿಲ್ಲ, ಬಸ್ಸಿಲ್ಲ, ಶೌಚಾಲಯವಿಲ್ಲ, ಇಂಗ್ಲೀಷ್ ಇಲ್ಲ ಯಾವ ಸೌಕರ್ಯವೂ ಇಲ್ಲ ಎನ್ನುವ ಇವೆಲ್ಲ ಇಲ್ಲಗಳು ನಮ್ಮನ್ನು ಒಳಗಿನಿಂದಲೇ ಗಟ್ಟಿಗೊಳಿಸುತ್ತವೆಯೆ ಹೊರತು ನಮ್ಮನೆಂದಿಗು ಬಿಟ್ಟು ಕೊಡುವುದಿಲ್ಲ. ಹಾಗಾಗಿ ಇಂತಹ ಗಟ್ಟಿತನದ, ಗುಣಮಟ್ಟದ ಹಳ್ಳಿ ಹಿನ್ನಲೆಯ ಕಥೆಗಳು ಹುಟ್ಟಿಕೊಳ್ಳಲು ಕಾರಣವಾಗುತ್ತದೆ.
“ನಲ್ಲಿ ಬಂತು” ಕಥೆ ಮನುಷ್ಯರಿಗೆಲ್ಲ ಏನೋ ಸ್ಪಂದನೆ ನೀಡುವಂತೆ ವಿನೂತನವಾಗಿ ಮೂಡಿ ಬಂದಿದೆ. ನಲ್ಲಿ ಬಂತು ಕಥೆಯಲ್ಲಿ ಎಡಗಡೆಗೆ ಮಲಗಿಸಿಕೊಂಡಿದ್ದ ಹೆಣ್ಣುಗೂಸನ್ನು ಒಂದು ಕೈಲಿ ಎಚ್ಚರವಾಗದಂತೆ ಮೆಲ್ಲಗೆ ತಟ್ಟಿ, ಬಲ ಮಗ್ಗುಲಿಗೆ ಹತ್ತು ವರ್ಷದ ಮುದಿಗೂಸಾದರು ಈಗಲೂ ಬಾಯಲ್ಲಿ ಆಕೆಯ ಮೊಲೆಯಿಟ್ಟು ಮಲಗಿದ್ದ ಮಗ ದುರುಗನನ್ನು ಮನಸ್ಸಿಲ್ಲದ ಮನಸ್ಸಿನಿಂದ ಎಬ್ಬಿಸಿದಳು. ಇದರಲ್ಲಿ ಬಂದ ಹತ್ತು ವರ್ಷದ ಮುದಿಗೂಸು ಎಂಬಂತಹ ಪದ ಪ್ರಯೋಗಗಳು ಈ ಕೃತಿಯಲ್ಲಿ ಹಲವಾರು ಬಂದಿದೆ. ಇಂತಹ ಪ್ರಯೋಗಶೀಲತೆ, ಸೃಜನಶೀಲತೆ ಕಥೆಯ ಪರಂಪರೆಯನ್ನೇ ಬೆಳೆಸುತ್ತಾ ಹೋಗುತ್ತದೆ. ಈ ಕೃತಿಯ ಘಾಟು, ಕಣಿವೆ ಕಥೆಗಳು ತನ್ನ ವಸ್ತುನಿಷ್ಠ ಹೇಳಿಕೆಗಳೊಂದಿಗೆ ಓದುಗರನ್ನು ಆಕರ್ಷಿಸುತ್ತವೆ. ಒಟ್ಟಿನಲ್ಲಿ ನಾಲ್ಕು ಕಥೆಗಳು, ಸಾಮಾಜಿಕ ವ್ಯವಸ್ಥೆ ಶಿಥಿಲಗೊಳ್ಳುತಿರುವ ಈಗಿನ ಕಾಲಕ್ಕೆ ಹೊಸ ನೋಟವೊಂದನ್ನು ನೀಡಿ ಓದುಗರಲ್ಲಿ ಕಾಳಜಿಯನ್ನುಂಟು ಮಾಡುತ್ತದೆ.
ಆಯಾ ಕಥೆಗಳಲ್ಲಿ ಅದರದೇ ಆದ ಸತ್ವ ಇದೆ. ಕಥೆಯ ಒಳದನಿಗಳು ನಿಚ್ಚಳವಾಗಿ ಓದುಗರನ್ನು ಎಚ್ಚರಗೊಳಿಸಿ ಜಾಗೃತಗೊಳಿಸುತ್ತದೆ ಎಂಬ ಆಶಾವಾದದೊಂದಿಗೆ ಲೇಖಕರು ಅಗಸ್ತ್ಯ ನಕ್ಷತ್ರವನ್ನು ಓದುಗರಿಗೆ ನೀಡಿದ್ದಾರೆ. ಪಲ್ಲವ ಪ್ರಕಾಶನದಿಂದ ಪ್ರಕಟಗೊಂಡ “ಅಗಸ್ತ್ಯ ನಕ್ಷತ್ರ” ಸಂಕಲನ, ನಕ್ಷತ್ರದಂತೆ ಮಿನುಗಲಿ ಎಂಬುದಾಗಿ ಆಶಿಸೋಣ.
(ಕೃತಿ: ಅಗಸ್ತ್ಯ ನಕ್ಷತ್ರ (ಕಥಾಸಂಕಲನ), ಲೇಖಕರು: ಮಲ್ಲಿಕಾರ್ಜುನ ತೂಲಹಳ್ಳಿ, ಪ್ರಕಾಶಕರು: ಪಲ್ಲವ ಪ್ರಕಾಶನ)
ಸಂಗೀತಾ ರವಿರಾಜ್ ಅವರು ಮೂಲತಃ ಕೊಡಗಿನವರು. ಎಂ.ಎ ಅರ್ಥಶಾಸ್ತ್ರ ಬಿ.ಇಡಿ ಪದವೀಧರರಾಗಿದ್ದು, ಹಲವು ಪತ್ರಿಕೆಗಳಲ್ಲಿ ಇವರ ಕವಿತೆಗಳು, ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಸಂಗೀತಾ ಅವರು ‘ಚೆಂಬು ಸಾಹಿತ್ಯ ವೇದಿಕೆ’ ಯನ್ನು ಹುಟ್ಟುಹಾಕಿದ್ದಾರೆ. ಕಪ್ಪು ಹುಡುಗಿ(ಕವನ ಸಂಕಲನ), ಕಲ್ಯಾಣ ಸ್ವಾಮಿ(ಕಾದಂಬರಿ), ನಿರುತ್ತರ(ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು.
ಧನ್ಯವಾದ ಕೆಂಡಸಂಪಿಗೆ