ಎರಡನೇ ಮಹಾಯುದ್ಧದಲ್ಲಿ ಫ್ಯಾಸಿಸ್ಟರು 90 ಲಕ್ಷ ರಷ್ಯನ್ನರನ್ನು ಯಾತನಾಶಿಬಿರಗಳಲ್ಲಿ ಕೊಂದಿದ್ದಾರೆ. ಜನರನ್ನು ಕೊಲ್ಲಲು ಅವರು ಗ್ಯಾಸ್ ಚೇಂಬರ್‌ಗಳನ್ನು ಬಳಸಿದರು. ಮೃತದೇಹಗಳ ಕೊಬ್ಬನ್ನು ಸಾಬೂನು ಮತ್ತು ಹದಗೊಳಿಸಿದ ತೊಗಲು ತಯಾರಿಸಲು ಉಪಯೋಗಿಸಲಾಯಿತು. ಕೂದಲಿನಿಂದ ಹಾಸಿಗೆ ಮತ್ತು ಕಾಲ್ಚೀಲಗಳು ತಯಾರಾದವು. ಹಚ್ಚೆ ಇದ್ದಂಥ ಚರ್ಮದ ಭಾಗಗಳನ್ನು ಕತ್ತರಿಸಿ ಮನೆಯ ಸಿಂಗಾರಕ್ಕೆ ಉಪಯೋಗಿಸಲಾಯಿತು. ಹೆಣಗಳ ಬೂದಿ ಕೈತೋಟಕ್ಕೆ ಗೊಬ್ಬರವಾಯಿತು. ಇದು ಫ್ಯಾಸಿಸ್ಟರ ಸಂಸ್ಕೃತಿ!
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 54ನೇ ಕಂತು ನಿಮ್ಮ ಓದಿಗೆ.

1983 ರ ಆಗಸ್ಟ್ ತಿಂಗಳ ಸೋವಿಯತ್ ದೇಶದ ಪ್ರವಾಸ ಮುಗಿಯಲು ಮೂರ್ನಾಲ್ಕು ದಿನಗಳು ಉಳಿದ ಸಂದರ್ಭದಲ್ಲಿ ಲೆನಿನ್ ಗ್ರಾಡ್ (ಸೇಂಟ್ ಪೀಟರ್ಸ್ ಬರ್ಗ್) ನಗರದ ‘ಪೀಟರ್ ದ ಗ್ರೇಟ್’ನ ಬೇಸಗೆ ಅರಮನೆಗೆ ಭೇಟಿ ನೀಡಿದೆವು. 1725 ರಲ್ಲಿ ನಿಧನವಾಗುವವರೆಗೂ ಪೀಟರ್ ರಷ್ಯಾದ ಝಾರ್ ಸಾಮ್ರಾಜ್ಯದ ದೊರೆಯಾಗಿದ್ದ. 6 ಅಡಿ 8 ಇಂಚು ಎತ್ತರದ ಪೀಟರ್ ದ ಗ್ರೇಟ್ ಮಹಾ ಮುತ್ಸದ್ದಿ, ಸಂಘಟಕ ಮತ್ತು ಸುಧಾರಕ ಆಗಿದ್ದ. ರಷ್ಯಾದ ಆಧುನೀಕರಣದಲ್ಲಿ ಆತನ ಪಾತ್ರ ಹಿರಿದಾಗಿದೆ. ಆರ್ಥಿಕ, ಸಾಮಾಜಿಕ, ರಾಜಕೀಯ, ಆಡಳಿತಾತ್ಮಕ, ಶೈಕ್ಷಣಿಕ ಮತ್ತು ಮಿಲಿಟರಿ ವ್ಯವಸ್ಥೆಯಲ್ಲಿ ಪಾಶ್ಚಿಮಾತ್ಯ ರೀತಿಯ ಸುಧಾರಣೆ ತಂದ.

(ಪೀಟರ್ ದ ಗ್ರೇಟ್)

ಪೀಟರ್ ದ ಗ್ರೇಟ್ (1672-1725) ದುಡಿಯುವ ಜನರಿಗೇನು ಗ್ರೇಟ್ ಆಗಿರಲಿಲ್ಲ. ರಷ್ಯಾದ ಭಯಂಕರ ಚಳಿಯಲ್ಲಿ ಕೂಲಿಕಾರರು ಕೆಲಸ ಕಾರ್ಯಗಳಲ್ಲಿ ತಮ್ಮ ಓವರ್ ಕೋಟ್‌ಗಳಲ್ಲೇ ಕಲ್ಲು ಮಣ್ಣು ಕೆಸರನ್ನು ಸಾಗಿಸುವಂಥ ದುರಂತ ಸ್ಥಿತಿ ಇತ್ತು. ಮಲಗಲು ಆಶ್ರಯ ಕೂಡ ಇಲ್ಲದ ಆ ಬಡಜೀವಿಗಳು ನೇವಾನದಿಯ ಸೇತುವೆ ಕೆಳಗೆ ಚಿಕ್ಕ ದೋಣಿಗಳಲ್ಲಿ ರಾತ್ರಿ ಕಳೆಯುತ್ತಿದ್ದರು!

‘ಪೀಟರ್ ದ ಗ್ರೇಟ್ ಸಮರ್ ಪ್ಯಾಲೇಸ್’ ಅನ್ನು 1710 ರಿಂದ 1714 ರ ಅವಧಿಯಲ್ಲಿ ನಿರ್ಮಿಸಲಾಯಿತು. ಫೊಂಟಾಂಕಾ ನದಿ, ಮೊಯ್ಕಾ ನದಿ ಮತ್ತು ಸ್ವಾ್ಯನ್ ಕಾಲುವೆಯಿಂದಾಗಿ ನಿರ್ಮಾಣಗೊಂಡ ನಡುಗಡ್ಡೆಯಲ್ಲಿ ಈ ಸಮರ್ ಪ್ಯಾಲೇಸ್ ಇದೆ.

ಲೆನಿನ್ ಗ್ರಾಡ್ ನಗರದಿಂದ ಈ ಬೇಸಗೆ ಅರಮನೆಗೆ ಹೋಗುವ ವೇಳೆ ನಗರದಲ್ಲಿ ಒಂದು ಪ್ರದೇಶ ಬರುತ್ತದೆ. ಅದು ಚಕ್ಕಡಿಯ ಗಾಲಿಯ ಹಾಗೆ ಇದೆ. ಚಕ್ಕಡಿಯ ಗಡ್ಡೆಯಂಥ ಸ್ಥಳ ಇದರ ಕೇಂದ್ರಬಿಂದು. ಚಕ್ಕಡಿಯ ಹಲ್ಲುಗಳ ಹಾಗೆ ಇದರ ರಸ್ತೆಗಳಿವೆ. ಎರಡೂ ಬದಿಗೆ ಒಂದಸ್ತಿನ ಸಹಸ್ರಾರು ಮನೆಗಳಿವೆ. ಈ ಜಾಗದಲ್ಲಿ ಒಂದಸ್ತಿನ ಮನೆಗಳನ್ನು ಮಾತ್ರ ಕಟ್ಟಲು ಅವಕಾಶವಿದೆ. ಅಷ್ಟೇ ಅಲ್ಲದೆ ಪ್ರತಿಯೊಂದು ಬಾಗಿಲ ಮತ್ತು ಕಿಟಕಿಗಳ ಡಿಸೈನ್ ಕೂಡ ವಿಶಿಷ್ಟವಾಗಿರಬೇಕು ಎಂಬ ನಿಯಮವಿದೆ. ಇಡೀ ಪ್ರದೇಶ ಪಾರಂಪರಿಕ ಪ್ರದೇಶವಾಗಿದೆ.

(ಪೀಟರ್ ದ ಗ್ರೇಟ್ ಸಮರ್ ಪ್ಯಾಲೇಸ್)

ವಿಶಾಲವಾದ ಉದ್ಯಾನವನದ ಭಾಗವಾಗಿರುವ ಪೀಟರನ ಬೇಸಗೆ ಅರಮನೆ ಮನಮೋಹಕವಾಗಿದೆ. ಆರಡಿ ಎಂಟು ಇಂಚು ಎತ್ತರದ ಪೀಟರ್‌ಗೆ ಪ್ರತ್ಯೇಕವಾದ ಕಲಾತ್ಮಕ ಮಂಚ, ಕುರ್ಚಿ, ಟೇಬಲ್ ಮುಂತಾದವುಗಳಿವೆ. ಕಲಾಮಂದಿರವೊಂದರಲ್ಲಿ ವಯೋಲಿನ್ ವಾದಕರ ಒಂದು ತಂಡ 17ನೇ ಶತಮಾನದ ಸಂಗೀತ ನುಡಿಸುತ್ತಾರೆ. ನಾವು ಅಲ್ಲಿಗೆ ತಡವಾಗಿ ಹೋದಾಗ ಸಮಯ ಮುಗಿದ ಕಾರಣ ಅವರು ತಮ್ಮ ಸಂಗೀತ ಪರಿಕರಗಳನ್ನು ಪ್ಯಾಕ್ ಮಾಡುತ್ತಿದ್ದರು. ನಮ್ಮ ಗೈಡ್ ತಾನ್ಯಾ “ಭಾರತೀಯ ಗೆಳೆಯರು” ಎಂದು ರಷ್ಯನ್ ಭಾಷೆಯಲ್ಲಿ ಹೇಳಿದರು. ಅವರು ಸಂತೋಷದಿಂದ ತಮ್ಮ ಪರಿಕರಗಳನ್ನು ಬಿಚ್ಚಿ ನಮಗಾಗಿ ವಯೋಲಿನ್ ನುಡಿಸಿದರು. (ರಷ್ಯನ್ ಪ್ರವಾಸದ ನಂತರ ನಾನು ಅನೇಕ ದೇಶಗಳನ್ನು ಸುತ್ತಿದ್ದೇನೆ. ಆದರೆ ರಷ್ಯನ್ನರು ಭಾರತೀಯರಿಗೆ ಕೊಡುತ್ತಿದ್ದ ಮರ್ಯಾದೆಯ ವೈಶಿಷ್ಟ್ಯ ಬೇರೆಲ್ಲೂ ಕಂಡುಬರಲಿಲ್ಲ. ಅವರಿಗೆ ಭಾರತೀಯರೆಂದರೆ ಪಂಚಪ್ರಾಣ.)

(ಹೆರ್ಮಿಟೇಜ್ ವಸ್ತುಸಂಗ್ರಹಾಲಯ)

ಬೇಸಗೆ ಅರಮನೆಯ ಆವರಣದಲ್ಲಿ ಒಂದು ಕಾರಂಜಿ ಹೊಂಡ ಇದೆ. ಅಲ್ಲಿ ಪ್ರವಾಸಿಗರು ರೂಬಲ್ ಮತ್ತು ಕೊಪೆಕ್ ನಾಣ್ಯಗಳನ್ನು ಎಸೆಯುತ್ತಿದ್ದರು. ಬೇರೆ ದೇಶಗಳ ಪ್ರವಾಸಿಗರು ತಮ್ಮ ತಮ್ಮ ದೇಶದ ನಾಣ್ಯಗಳನ್ನೂ ಎಸೆಯುತ್ತಿದ್ದರು. ಆ ಹೊಂಡದ ತಳ ಚಿಲ್ಲರೆ ನಾಣ್ಯಗಳಿಂದ ತುಂಬಿ ಹೋಗಿತ್ತು. “ಇದೆಂಥ ಮೂಢ ನಂಬಿಕೆ” ಎಂದು ತಾನ್ಯಾಗೆ ಕೇಳಿದೆ. ‘ಇದು ಮೂಢ ನಂಬಿಕೆ ಅಲ್ಲ. ಈ ಸುಂದರ ಸ್ಥಳಕ್ಕೆ ಮತ್ತೆ ಭೇಟಿ ನೀಡಬೇಕೆಂಬ ಆಶಯದ ಪ್ರತೀಕವಿದು’ ಎಂದು ವಿವರಿಸಿದಳು.

ಮರುದಿನ ನಾವು ಹೆರ್ಮಿಟೇಜ್ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದೆವು. ಅದು ಎಷ್ಟು ದೊಡ್ಡ ಪಾರಂಪರಿಕ ವಸ್ತುಸಂಗ್ರಹಾಲಯವೆಂದರೆ, ಒಂದು ವಸ್ತುವಿನ ಮುಂದೆ ಒಂದೊಂದು ನಿಮಿಷ ನಿಲ್ಲುತ್ತ ಹೋದರೆ, ಸಂಪೂರ್ಣವಾಗಿ ನೋಡಲು ನಾಲ್ಕುವರ್ಷಗಳು ಬೇಕು ಎಂದು ತಾನ್ಯಾ ಹೇಳಿದಳು. ಅಲ್ಲಿನ ಅಮೂಲ್ಯ ಮೂರ್ತಿಗಳಲ್ಲಿ ಮೈಕೆಲ್ ಎಂಜಿಲೋನ ಅರ್ಧ ಕೆತ್ತಿದ ಮೂರ್ತಿಯೊಂದಿತ್ತು. ಅದು ಚಿಂತನೆ ಮಾಡುತ್ತ ಗಂಭೀರವಾಗಿ ಕುಳಿತ ವ್ಯಕ್ತಿಯ ಮೂರ್ತಿ. ಮೂರ್ತಿಯ ಕೆಳಭಾಗದಲ್ಲಿ ಕೆತ್ತುವ ವೇಳೆ ಮೈಕೆಲ್ ಎಂಜಿಲೋಗೆ ಆ ಮೂರ್ತಿ ಇಷ್ಟವಾಗಲಿಲ್ಲ. ಆತ ಅಲ್ಲಿಗೆ ಕೆತ್ತುವುದನ್ನು ನಿಲ್ಲಿಸಿದ. ಆ ಅರ್ಧ ಮೂರ್ತಿ ಜಗತ್ತಿನ ಬಹು ಪ್ರಸಿದ್ಧ ಮೂರ್ತಿಗಳಲ್ಲೊಂದಾಗಿದೆ ಎಂದು ತಾನ್ಯಾ ತಿಳಿಸಿದಳು.

1841ನೇ ಜೂನ್ 22ರಂದು ಜರ್ಮನ್ ದಾಳಿಯ ಸುದ್ದಿ ಬಂದಿತು. 30 ಲಕ್ಷ ಜನರು ಲೆನಿನ್‌ಗ್ರಾಡ್ ಮುತ್ತಿಗೆಯಿಂದ 900 ದಿನಗಳವರೆಗೆ ನಗರದೊಳಗೇ ಉಳಿಯಬೇಕಾಯಿತು ಎರಡನೇ ಮಹಾಯುದ್ಧದ ಸಂದರ್ಭದಲ್ಲಿನ ಆ 900 ದಿನಗಳ ಲೆನಿನ್‌ಗ್ರಾಡ್ ಮುತ್ತಿಗೆ ಭಯಾನಕವಾದುದು. ಹಿಟ್ಲರನ ನಾಜಿ (ಫ್ಯಾಸಿಸ್ಟ್) ಸೈನಿಕರು 1941ನೇ ಸೆಪ್ಟೆಂಬರ್ 8ರಿಂದ 1944ನೇ ಜನವರಿ 27ರ ವರೆಗೆ ಲೆನಿನ್‌ಗ್ರಾಡ್‌ಗೆ ಸಂಪೂರ್ಣ ಮುತ್ತಿಗೆ ಹಾಕಿದರು. 25 ಲಕ್ಷ ಲೆನಿನ್‌ಗ್ರಾಡ್ ನಿವಾಸಿಗಳು ತೀವ್ರ ಆಹಾರದ ಕೊರತೆಯನ್ನು ಎದುರಿಸುತ್ತ ಯಾವುದೇ ಹೊರಗಿನ ಸಂಪರ್ಕವಿಲ್ಲದೆ 2 ವರ್ಷ 4 ತಿಂಗಳು 19 ದಿನಗಳ ವರೆಗೆ ಹೃದಯವಿದ್ರಾವಕ ದಿನಗಳನ್ನು ಕಳೆಯಬೇಕಾಯಿತು. 4 ಲಕ್ಷ ಮಕ್ಕಳ ಸ್ಥಿತಿ ಹೇಳಲಸಾಧ್ಯವಾಗಿತ್ತು. ನಾಜಿಗಳು ಇಡೀ ನಗರವನ್ನು ಯಾತನಾಶಿಬಿರವಾಗಿ ಪರಿವರ್ತಿಸಿದ್ದರು. ಕಾರ್ಮಿಕರಿಗೆ ದಿನಕ್ಕೆ ಕೇವಲ 600 ಗ್ರಾಂ ಬ್ರೆಡ್ ಸಿಗುತ್ತಿತ್ತು. ಸರ್ಕಾರಿ ನೌಕರರಿಗೆ 400 ಗ್ರಾಂ ಮತ್ತು ಇತರ ನಾಗರಿಕರಿಗೆ 300 ಗ್ರಾಂ ಬ್ರೆಡ್ ಕೊಡುತ್ತಿದ್ದರು. ನಂತರದ ದಿನಗಳಲ್ಲಿ ಅಷ್ಟೂ ಸಿಗಲಿಲ್ಲ. ಜನರು ಕುದುರೆಗೆ ಹಾಕುವ ಆಹಾರವನ್ನು ತಿನ್ನುವ ಪರಿಸ್ಥಿತಿ ಬಂದಿತು. ಹಸಿವಿನಿಂದಾಗಿ ಜನರು ಜೀವಂತ ಹೆಣಗಳಾದರು. ಮೃತದೇಹಗಳ ಮಾಂಸವನ್ನು ಕೂಡ ಬೇಯಿಸಿ ತಿನ್ನವಂಥ ಭಯಂಕರ ಸ್ಥಿತಿ ಉಂಟಾಯಿತು.

29 ತಿಂಗಳವರೆಗಿನ ಫ್ಯಾಸಿಸ್ಟರ ಮುತ್ತಿಗೆಯಿಂದಾಗಿ ಹೊರಗಿನಿಂದ ಯಾವ ವಸ್ತುಗಳೂ ಬರದೇ ಇದ್ದಾಗ. ಇನ್ನೇನು ಆಗಲು ಸಾಧ್ಯ? ಹಸಿವಿನಿಂದ ಕಂಗಾಲಾಗಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಸತ್ತರು. ಅನೇಕರು ಕ್ಷಯ ಮುಂತಾದ ರೋಗರುಜಿನುಗಳಿಂದ ನರಳಿದರು. ಬಹುಪಾಲು ಜನ ದೈಹಿಕ ಮಾನಸಿಕ ಅಸ್ವಸ್ಥರಾಗಿ ಜೀವ ಹಿಡಿದುಕೊಂಡಿದ್ದರು.

ನಾಜಿಗಳು ಲೆನಿನ್ ಗ್ರಾಡ್‌ಗೆ ಮುತ್ತಿಗೆ ಹಾಕಿದಾಗ 11 ವರ್ಷದ ಬಾಲಕಿ (ಜನನ 23.01.1930) ತಾನ್ಯಾ ಸವಿಚೇವಾ ಬರೆದ ದಿನಚರಿಯ ಒಂದು ಪುಟ ಗರಬಡಿಸುವಂತದ್ದಾಗಿದೆ. ಆಕೆಯ ಮನೆಯವರೆಲ್ಲ ಹಸಿವಿನಿಂದ ಸತ್ತ ಸಮಯ ಮತ್ತು ದಿನಾಂಕಗಳನ್ನು ಆಕೆ ದಾಖಲು ಮಾಡಿದ್ದಾಳೆ. 1941ನೇ ಡಿಸೆಂಬರ್ 28ರಿಂದ 1942ನೇ ಮೇ 13ರ ವರೆಗೆ ತನ್ನ ಕುಟುಂಬದ 6 ಜನರು ಹಸಿವಿನಿಂದ ಸತ್ತ ದಿನಾಂಕಗಳನ್ನು ದಾಖಲು ಮಾಡಿದ್ದಾಳೆ. ಅದು 42 ಸಾಲುಗಳಿಂದ ಕೂಡಿದ 9 ಪುಟಗಳ ಡೈರಿ. ತನ್ನ ಇಡೀ ಸುಖೀ ಕುಟುಂಬದ ಜನರನ್ನು ಕಳೆದುಕೊಂಡ ದಾಖಲೆ ಅದು. ಲೆನಿನ್ ಗ್ರಾಡ್ ದುರಂತದ ಟೆಸ್ಟಿಮೊನಿ (ಪುರಾವೆ) ಇದಾಗಿದೆ. ಡೈರಿಯ ಕೊನೆಯ ಪುಟದ ಕೊನೆಯ ಸಾಲು: ‘ಸವಿಚೇವ್ ಕುಟುಂಬದವರು ಸತ್ತರು. ಎಲ್ಲರೂ ಸತ್ತರು. ಕೇವಲ ತಾನ್ಯಾ ಉಳಿದಿದ್ದಾಳೆ.’

ಎರಡು ವರ್ಷಗಳ ನಂತರ 1944ನೇ ಜುಲೈ 1 ರಂದು ಅನಾಥಾಶ್ರಮದಲ್ಲಿ ತಾನ್ಯಾ ಕೂಡ ಕ್ಷಯರೋಗದಿಂದ ಸತ್ತಳು. ಬಹಳ ದಿನಗಳ ನಂತರ ತಾನ್ಯಾಳ ಡೈರಿ ಸಿಕ್ಕಿತು. ಸೋವಿಯತ್ ಸರ್ಕಾರ ಆ ಡೈರಿಯ ಐತಿಹಾಸಿಕ ಮಹತ್ವವನ್ನು ಪರಿಗಣಿಸಿತು. 1981ರಲ್ಲಿ ತಾನ್ಯಾಳ ಡೈರಿಯನ್ನು ಅಮೃತಶಿಲೆಯಲ್ಲಿ ಕೆತ್ತಲಾಯಿತು. ಅದರ ಸುತ್ತ ಯುದ್ಧದಲ್ಲಿ ಸತ್ತ ಮಕ್ಕಳ ಸ್ಮಾರಕ ನಿರ್ಮಿಸಲಾಯಿತು. ತಾನ್ಯಾ ಸವಿಚೇವಾ ವಸ್ತುಸಂಗ್ರಹಾಲಯ ಎಂಥ ಕಲ್ಲುಹೃದಯಗಳೂ ಕರಗುವಂತೆ ಮಾಡುತ್ತದೆ.

(ತಾನ್ಯಾ ಸವಿಚೇವಾ)

ನಾವು ಅಲ್ಲಿಗೆ ತಡವಾಗಿ ಹೋದಾಗ ಸಮಯ ಮುಗಿದ ಕಾರಣ ಅವರು ತಮ್ಮ ಸಂಗೀತ ಪರಿಕರಗಳನ್ನು ಪ್ಯಾಕ್ ಮಾಡುತ್ತಿದ್ದರು. ನಮ್ಮ ಗೈಡ್ ತಾನ್ಯಾ “ಭಾರತೀಯ ಗೆಳೆಯರು” ಎಂದು ರಷ್ಯನ್ ಭಾಷೆಯಲ್ಲಿ ಹೇಳಿದರು. ಅವರು ಸಂತೋಷದಿಂದ ತಮ್ಮ ಪರಿಕರಗಳನ್ನು ಬಿಚ್ಚಿ ನಮಗಾಗಿ ವಯೋಲಿನ್ ನುಡಿಸಿದರು. 

ಲೆನಿನ್‌ಗ್ರಾಡ್ ಮುತ್ತಿಗೆ ಸಂದರ್ಭದಲ್ಲಿ ತಾನ್ಯಾಳ ಅಕ್ಕ ಶೆನ್ಯಾಳ ಸಾವು ಹಸಿವಿನಿಂದ ಸತ್ತ ಮೊದಲ ಸಾವಾಗಿದೆ. ಆಕೆ 1941 ನೇ ಡಿಸೆಂಬರ್ 28ರಂದು ಮಧ್ಯಾಹ್ನ 12 ಗಂಟೆಗೆ ತೀರಿಕೊಂಡಳು. ನಂತರ ಆಕೆಯ ಅಜ್ಜಿ ತೀರಿದಳು. ತದನಂತರ ಆಕೆಯ ಸಂಗೀತಗಾರ ಅಣ್ಣ ಮರಣಹೊಂದಿದ, ಬಳಿಕ ಆಕೆಯ ಚಿಕ್ಕಪ್ಪ ತೀರಿಕೊಂಡ. ಹೀಗೆ ಮನೆಯವರೆಲ್ಲ ಸತ್ತರು.

ಎರಡನೇ ಮಹಾಯುದ್ಧದಲ್ಲಿ ಫ್ಯಾಸಿಸ್ಟರು 90 ಲಕ್ಷ ರಷ್ಯನ್ನರನ್ನು ಯಾತನಾಶಿಬಿರಗಳಲ್ಲಿ ಕೊಂದಿದ್ದಾರೆ. ಜನರನ್ನು ಕೊಲ್ಲಲು ಅವರು ಗ್ಯಾಸ್ ಚೇಂಬರ್‌ಗಳನ್ನು ಬಳಸಿದರು. ಮೃತದೇಹಗಳ ಕೊಬ್ಬನ್ನು ಸಾಬೂನು ಮತ್ತು ಹದಗೊಳಿಸಿದ ತೊಗಲು ತಯಾರಿಸಲು ಉಪಯೋಗಿಸಲಾಯಿತು. ಕೂದಲಿನಿಂದ ಹಾಸಿಗೆ ಮತ್ತು ಕಾಲ್ಚೀಲಗಳು ತಯಾರಾದವು. ಹಚ್ಚೆ ಇದ್ದಂಥ ಚರ್ಮದ ಭಾಗಗಳನ್ನು ಕತ್ತರಿಸಿ ಮನೆಯ ಸಿಂಗಾರಕ್ಕೆ ಉಪಯೋಗಿಸಲಾಯಿತು. ಹೆಣಗಳ ಬೂದಿ ಕೈತೋಟಕ್ಕೆ ಗೊಬ್ಬರವಾಯಿತು. ಇದು ಫ್ಯಾಸಿಸ್ಟರ ಸಂಸ್ಕೃತಿ!

ಯಾತನಾಶಿಬಿರಗಳಲ್ಲಿ ಕೈದಿಗಳಿಗೆ ಮೈ ಮುಚ್ಚುವಷ್ಟು ಬಟ್ಟೆ ಇರಲಿಲ್ಲ. 15 ಗಂಟೆಗಳ ಕಾಲ ಬಿಡುವಿಲ್ಲದ ಕೆಲಸ ಮಾಡಬೇಕಿತ್ತು. ದಿನವೊಂದಕ್ಕೆ ಸಣ್ಣ ತಟ್ಟೆಯಲ್ಲಿ ಗಂಜಿ, 125 ಗ್ರಾಂ ಬ್ರೆಡ್ 2 ಕಪ್ ಕಾಫಿ. ಇಷ್ಟು ಬಿಟ್ಟರೆ ಬೇರೇನೂ ಇಲ್ಲ. ಕೈದಿಗಳು ನಿತ್ರಾಣರಾಗಿ ನಿಂತರೆ ನಾಜಿಗಳಿಂದ ಒದೆತ. ಹೀಗೆ ಸತ್ತವರ ಸಂಖ್ಯೆಯೂ ಸಾಕಷ್ಟಿದೆ. ಯಾತನಾಶಿಬಿರಗಳಲ್ಲಿ ಒಟ್ಟು 2 ಕೋಟಿ 80 ಲಕ್ಷ ಜನರನ್ನು ಬಂಧಿಸಲಾಗಿತ್ತು.

ಜರ್ಮನ್ನರ ಆರ್ಯನ್ ಕುಲವೇ ಜಗತ್ತಿನ ಶ್ರೇಷ್ಠಕುಲ ಎಂಬ ಭ್ರಮೆಯನ್ನು ಹಿಟ್ಲರ್ ಹೊಂದಿದ್ದ. ಅದೇ ಭ್ರಮೆಯನ್ನು ಜರ್ಮನ್ನರ ತಲೆಯಲ್ಲಿ ತುಂಬಿದ. ಜಗತ್ತಿನ ಎಲ್ಲ ಜನಾಂಗಗಳನ್ನು ಗುಲಾಮಗಿರಿಗೆ ತಳ್ಳಲು ಯತ್ನಿಸಿದ. 62 ದೇಶಗಳು ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದವು. 170 ಕೋಟಿ ಜನ ಯುದ್ಧದ ನೇರ ದುರಂತ ಅನುಭವಿಸಿದರು. 5 ಕೋಟಿ ಜನ ಸಾವಿಗೀಡಾದರು. 3.5 ಕೋಟಿ ಜನ ಗಾಯಾಳುಗಳಾದರು. ಲಕ್ಷಾಂತರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯಿತು. ಅವರು ವಶಪಡಿಸಿಕೊಂಡ ದೇಶಗಳಲ್ಲಿನ ಒಂದು ಕೋಟಿ ಹತ್ತು ಲಕ್ಷ ಜನ ಯಾತನಾ ಶಿಬಿರಗಳಲ್ಲಿ ಕೊಲೆಗೀಡಾದರು.

1939ನೇ ಸೆಪ್ಟೆಂಬರ್ ಒಂದರಂದು ಹಿಟ್ಲರ್ ಪೋಲಂಡ್ ಮೇಲೆ ದಾಳಿ ಮಾಡಿ ಎರಡನೇ ಮಹಾಯುದ್ಧ ಪ್ರಾರಂಭಿಸಿದ್ದ. 1941ರಲ್ಲಿ ಅಮೆರಿಕ, ಇಂಗ್ಲಂಡ್ ಮತ್ತು ಸೋವಿಯತ್ ದೇಶಗಳು ಮಿತ್ರರಾಷ್ಟ್ರಗಳಾದ ನಂತರ ಜಂಟಿಯಾಗಿ ಹಿಟ್ಲರನ ಜರ್ಮನಿಯ ವಿರುದ್ಧ ಯುದ್ಧ ಸಾರಿದವು. ಮಿತ್ರರಾಷ್ಟ್ರಗಳಿಂದ ರಷ್ಯಕ್ಕೆ ಸಿಕ್ಕ ನೆರವು ಮಾತ್ರ ಬಹಳ ಕಡಿಮೆಯಾಗಿತ್ತು.

1941ನೇ ಜೂನ್ 22ರಂದು ಫ್ಯಾಸಿಸ್ಟರು ಸೋವಿಯತ್ ದೇಶದ ಮೇಲೆ ಹಠಾತ್ ದಾಳಿ ಮಾಡಿದರು. ಈ ದಾಳಿಗೋಸ್ಕರವೇ ಹಿಟ್ಲರ್ 1940ರ ಆಗಸ್ಟ್‌ನಲ್ಲಿ ‘ಬರ್ಬರೊಸ್ಸಾ’ ಯೋಜನೆ ರೂಪಿಸಿದ್ದ. ಆ ಯೋಜನೆ ಪ್ರಕಾರ ಫ್ಯಾಸಿಸ್ಟರು 17 ವಾರಗಳೊಳಗಾಗಿ ಸೋವಿಯತ್ ದೇಶದ ಮೇಲೆ ಮಿಂಚಿನ ದಾಳಿ ನಡೆಸಿ. ಕೆಂಪುಸೇನೆಯನ್ನು ಸದೆಬಡಿದು ರಷ್ಯವನ್ನು ಸೋಲಿಸಬೇಕಾಗಿತ್ತು. ಪ್ರಥಮ ದಿನವೇ ಅವರು ಸೋವಿಯತ್ ನಗರಗಳಾದ ಕೌನಾಸ್, ಮಿನ್ಸ್ಕ್, ಕೀವ್, ಒಡೆಸ್ಸಾ, ಸೆವಸ್ತೊಪೋಲ್ ಮುಂತಾದ ನಗರಗಳ ಮೇಲೆ ಭೀಕರ ವಿಮಾನದಾಳಿ ಮಾಡಿದರು. ಯುಕ್ರೇನ್, ಬೈಲೊರಷ್ಯಾ, ಬಾಲ್ಟಿಕ್ ಗಣರಾಜ್ಯಗಳು, ವೊಲ್ಟಾಮಿಯಾ ಮತ್ತು ಕ್ರಿಮಿಯಾಗಳನ್ನು ವಶಪಡಿಸಿಕೊಂಡರು. ಸೋವಿಯತ್ ದೇಶದ ಶೇಕಡಾ 40ರಷ್ಟು ಜನರನ್ನು ಹತೋಟಿಗೆ ತೆಗೆದುಕೊಂಡರು. ನೀಚತನದ ಈ ಹಠಾತ್ ಮುತ್ತಿಗೆ ಸೋವಿಯತ್ – ಜರ್ಮನ್ ಮಧ್ಯೆ ಇದ್ದ ಅನಾಕ್ರಮಣದ ಒಡಂಬಡಿಕೆಯನ್ನು ಮುರಿಯಿತು. ಆ ದಿನ 190 ಮಿಲಿಟರಿ ಡಿವಿಜನ್, 55 ಲಕ್ಷ ಸೈನಿಕರು ಮತ್ತು ಸೈನ್ಯಾಧಿಕಾರಿಗಳು, 5 ಸಾವಿರ ಯುದ್ಧ ವಿಮಾನಗಳು, 4,300 ಯುದ್ಧ ಟ್ಯಾಂಕುಗಳು, 47,200 ಫಿರಂಗಿ ಮುಂತಾದವು ಯುದ್ಧಸನ್ನದ್ಧವಾಗಿದ್ದವು. ಅಂದಿನಿಂದ ಫ್ಯಾಸಿಸ಼ಂ ಮೇಲಿನ ವಿಜಯೋತ್ಸವದ ದಿನವಾದ 1945ನೇ ಮೇ 9ರ ವರೆಗೆ ಸೋವಿಯತ್ ಮತ್ತು ಜರ್ಮನ್ ಭೂಮಿ ಎರಡನೇ ಮಹಾಯುದ್ಧದ ಮುಖ್ಯ ರಣರಂಗಳಾದವು. ಈ ರಣರಂಗದಲ್ಲಿ ನಡೆದ 1418 ದಿನ ಮತ್ತು ರಾತ್ರಿಗಳ ಹೇಳಲಸಾಧ್ಯವಾದ ಸಾವು ನೋವುಗಳಿಂದ ಕೂಡಿದ ಯುದ್ಧಕ್ಕೆ ರಷ್ಯನ್ನರು ‘ಮಹಾ ದೇಶಾಭಿಮಾನಿ ಯುದ್ಧ’ ಎಂದು ಕರೆದರು.

ಈ ಯುದ್ಧದಲ್ಲಿ ಪ್ರತಿ ನಿಮಿಷಕ್ಕೆ 9 ಮಂದಿ ರಷ್ಯನ್ನರು ಅಸು ನೀಗಿದರು. ಪ್ರತಿ ದಿನಕ್ಕೆ ಸರಾಸರಿ 14 ಸಾವಿರ ಜನರಂತೆ ಒಟ್ಟು 2 ಕೋಟಿ 20 ಲಕ್ಷ ಜನ ಹುತಾತ್ಮರಾದರು.

ಎರಡನೇ ಮಹಾಯುದ್ಧದಲ್ಲಿ ಮಡಿದ ಪ್ರತಿ ಐವರಲ್ಲಿ ಇಬ್ಬರು ಸೋವಿಯತ್ ದೇಶದವರಾಗಿದ್ದರು. ಆ ಕಾಲದಲ್ಲಿ 48,500 ಕೋಟಿ ಡಾಲರ್‌ಗಳಷ್ಟು ಸೋವಿಯತ್ ದೇಶದ ಆಸ್ತಿ ನಾಶವಾಯಿತು. 32 ಸಾವಿರ ಕಾರ್ಖಾನೆಗಳು, 65 ಸಾವಿರ ಕಿಲೋ ಮೀಟರ್ ಉದ್ದದ ರೈಲು ಹಳಿ, 4,100 ರೈಲು ನಿಲ್ದಾಣಗಳು, 14 ಸಾವಿರ ರೇಲ್ವೆ ಸೇತುವೆಗಳು, 40 ಸಾವಿರ ಆಸ್ಪತ್ರೆಗಳು, 84 ಸಾವಿರ ಶಾಲೆಗಳು ನಾಶವಾದವು. ಫ್ಯಾಸಿಸ್ಟರು 70 ಲಕ್ಷ ಕುದುರೆ, 4 ಕೋಟಿ 40 ಲಕ್ಷ ಜಾನುವಾರು ಮತ್ತು 11 ಕೋಟಿ ಕೋಳಿಗಳನ್ನು ಜರ್ಮನಿಗೆ ಸಾಗಿಸಿದರು. 60 ಲಕ್ಷ ಮನೆಗಳನ್ನು ಕೆಡವಿ 2 ಕೋಟಿ 50 ಲಕ್ಷ ಜನರನ್ನು ನಿರಾಶ್ರಿತರನ್ನಾಗಿ ಮಾಡಿದರು. ಜನರ ದುಃಖಕ್ಕೆ ಲೆಕ್ಕ ಉಂಟೆ? ಇಂಥ ಬರ್ಬರ ಹತ್ಯೆ ಇತಿಹಾಸದಲ್ಲಿ ಹಿಂದೆಂದೂ ಆಗಿಲ್ಲ.

ಬರ್ಲಿನ್ ಮೇಲಿನ ಸೋವಿಯತ್ ಕಾರ್ಯಾಚರಣೆ 1945ನೇ ಏಪ್ರಿಲ್‌ನಲ್ಲಿ ಪ್ರಾರಂಭವಾಯಿತು. ಏಪ್ರಿಲ್ 30ರಂದು ಮಧ್ಯಾಹ್ಯ 3ಕ್ಕೆ ಸೋವಿಯತ್ ದೇಶದ ಕೆಂಪುಸೇನೆ ಬರ್ಲಿನ್ ರೈಕ್‌ಸ್ಟಾ್ಯಗ್ ಮೇಲೆ ಧ್ವಜ ಹಾರಿಸಿದಾಗ ಫ್ಯಾಸಿಸ್ಟರ ಯೋಜನೆ ನುಚ್ಚುನೂರಾಯಿತು. ಮುಂದೆ 50 ನಿಮಿಷದ ನಂತರ ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡ. ಮೇ 8ರಂದು ರಾತ್ರಿ ಜರ್ಮನಿ ಬೇಷರತ್ತಾಗಿ ಶರಣಾಗತವಾಯಿತು. ಎರಡನೇ ಮಹಾಯುದ್ಧ ಮುಗಿಯಿತು.