ರಾಸ್ಕೋಲ್ನಿಕೋವ್ ಗುರಿ ಇಲ್ಲದೆ ಅಲೆದ. ಸೂರ್ಯ ಮುಳುಗುತ್ತಿದ್ದ. ಎಂಥದೋ ದುಃಖ ಅವನನ್ನು ಇತ್ತೀಚೆಗೆ ಕಾಡುತ್ತಿತ್ತು ಅದೊಂದು ಥರ ದುಶ್ಶಕುನದಂಥ ದುಃಖ. ಒಂದು ಚದರಗಜ ಜಾಗದಲ್ಲಿ ನಿಂತು ಕೊನೆಯಿರದ ದುಃಖವನ್ನು ಅನಂತವಾಗಿ ಅನುಭವಿಸುತ್ತಲೇ ಇರಬೇಕಾದೀತು ಅನ್ನುವಂಥ ಕೆಟ್ಟಶಕುನ ನುಡಿಯುತ್ತಿದೆ ಅನಿಸುವಂಥ ದುಃಖ. ಸಂಜೆಯ ಹೊತ್ತಿನಲ್ಲಿ ಇಂಥ ಭಾವ ಸಾಮಾನ್ಯವಾಗಿ ಅವನ ಮನಸ್ಸನ್ನು ಕವಿದುಕೊಳ್ಳುತ್ತಿತ್ತು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

 

ಭಾಗ ಐದು: ಐದನೆಯ ಅಧ್ಯಾಯ

ಸೆಮ್ಯೊನೊವಿಚ್ ಕಳವಳಪಡುತ್ತ ಹೆದರಿದ ಹಾಗೆ ಕಾಣುತ್ತಿದ್ದ.
‘ನಿಮ್ಮನ್ನ ನೋಡಬೇಕಾಗಿತ್ತು, ಸೋಫ್ಯಾ ಸೆಮ್ಯೊನೋವ್ನಾ. ಕ್ಷಮಿಸಿ.. ನೀವು ಇಲ್ಲಿ ಸಿಗತೀರಿ ಅನ್ನಿಸಿತು’ ತಟ್ಟನೆ ರಾಸ್ಕೋಲ್ನಿಕೋವ್‌ನತ್ತ ತಿರುಗಿದ. ‘ಅಂದರೆ ಏನೂ ಅಂದುಕೊಳ್ಳಲಿಲ್ಲ… ಆ ಥರದ್ದು… ಏನಂದರೆ… ಕ್ಯಾತರೀನ ಇವಾನೋವ್ನಾ ಅವರಿಗೆ ಹುಚ್ಚು ಹಿಡಿದಿದೆ…’ ರಾಸ್ಕೋಲ್ನಿಕೋವ್‌ನನ್ನು ಬಿಟ್ಟು, ಸೋನ್ಯಾಳನ್ನ ನೋಡುತ್ತ ತಟ್ಟನೆ ವದರಿಬಿಟ್ಟ.

‘ಅಂದರೆ, ಹಾಗನ್ನಿಸಿತು… ಏನು ಮಾಡಬೇಕೋ ನಮಗೆ ತಿಳಿಯಲಿಲ್ಲ, ಅದಕ್ಕೇ…! ವಾಪಸ್ ಬಂದರು… ಅವಳನ್ನ ಹೊಡೆದು ಎಲ್ಲೋ ಬಿಸಾಕಿದ್ದರು ಅನಿಸತ್ತೆ… ಅಲ್ಲಾ, ಆಮೇಲೆ ಹಾಗೆ ಅನ್ನಿಸ್ತು… ಮಾರ್ಮೆಲಡೋವ್‍ ಅವರ ಮೇಲಧಿಕಾರಿಯನ್ನು ನೋಡುವುದಕ್ಕೆ ಓಡಿ ಹೋದರು. ಅವನು ಮನೆಯಲ್ಲಿರಲಿಲ್ಲ. ಇನ್ನೊಬ್ಬ ಜನರಲ್‌ನ ಮನೆಗೆ ಊಟಕ್ಕೆ ಹೋಗಿದ್ದ… ಕಲ್ಪನೆ ಮಾಡಕ್ಕೂ ಆಗಲ್ಲ… ಊಟ ಇಟ್ಟುಕೊಂಡಿದ್ದ ಜನರಲ್ ಮನೆಗೆ ಓಡಿದರು. ಗಂಡನ ಮೇಲಧಿಕಾರೀನ ಕರೆಯಲೇಬೇಕು ಅಂತ ನಿಮ್ಮ ಚಿಕ್ಕಮ್ಮ… ಹಟ ಮಾಡಿದರು… ಅವನು ಮಾಡುತ್ತಿದ್ದ ಊಟ ಬಿಟ್ಟು ಎದ್ದು ಬಂದನಂತೆ… ಆಮೇಲೇನಾಗತ್ತೆ, ನಿಮಗೇ ಗೊತ್ತು, ಮಾಮೂಲಿನ ಹಾಗೆ ಬೈದು ಓಡಿಸಿದರು, ನಿಮ್ಮ ಚಿಕ್ಕಮ್ಮ ಬೈದು, ಮಣ್ಣು ತೂರಿ ಆಣೆ ಪ್ರಮಾಣ ಇಟ್ಟಳಂತೆ. ಖಂಡಿತ ಮಾಡಿರಬಹುದು… ಆಕೆಯನ್ನ ಯಾಕೆ ಅರೆಸ್ಟು ಮಾಡಲಿಲ್ಲ, ಅದು ಮಾತ್ರ ತಿಳೀತಿಲ್ಲ ನನಗೆ… ಈಗ ಅವರು ಎಲ್ಲಾರಿಗೂ, ಅಮಾಲಿಯಾನೂ ಸೇರಿದ ಹಾಗೆ ಎಲ್ಲರಿಗೂ ಏನೋ ಹೇಳತಾ ಇದಾರೆ. ಏನು ಅನ್ನುವುದು ಮಾತ್ರ ಅರ್ಥ ಆಗತಿಲ್ಲ. ಏನೋ ಹೇಳತಾ ಚೀರತಾ ಸಿಕ್ಕಿದ್ದು ಎಸೀತಾ ತಾರಾಡತಾ ಇದಾರೆ. ಎಲ್ಲಾರೂ ನನ್ನ ಕೈ ಬಿಟ್ಟರು, ಮಕ್ಕಳನ್ನ ಬೀದಿಗೆ ಕರಕೊಂಡು ಹೋಗಿ ಹಾಡು ಹೇಳಿಸತೀನಿ, ಡಾನ್ಸು ಮಾಡಿಸತೀನಿ, ನಾನೂ ಮಾಡತೀನಿ, ದಿನಾ ಜನರಲ್‌ನ ಮನೆ ಮುಂದೆ ಹೋಗಿ ಹಾಡಿ, ಕುಣಿದು, ಭಿಕ್ಷೆ ಬೇಡತೇವೆ… ಅವನು ನೋಡಲಿ… ಸರ್ಕಾರಿ ಅಧಿಕಾರಿಯ ಮಕ್ಕಳು ಹೇಗೆ ಭಿಕ್ಷೆ ಎತ್ತೋ ಗತಿಗೆ ಬಂದಿದಾರೆ ಅಂತ ಅವನಿಗೆ ಗೊತ್ತಾಗಲಿ… ಅಂತಾರೆ. ಎಲ್ಲ ಮಕ್ಕಳನ್ನೂ ಹೊಡೀತಾರೆ. ಅಳತಾರೆ. ಲೆನ್ಯಾಗೆ ‘ಪುಟ್ಟ ಗುಡಿಸಿಲೂ’ ಹಾಡು ಹೇಳಿಕೊಡತಿದಾರೆ, ಹುಡುಗನನ್ನ ಡಾನ್ಸ್ ಮಾಡು ಅನ್ನತಿದಾರೆ. ಪೋಲೆಚ್ಕಾಗೂ ಹಾಗೇ ಕುಣಿ ಅನ್ನತಿದಾರೆ, ಅವರ ಬಟ್ಟೆ ಹರಿದು ತಲೆಗೆ ಟೋಪಿ ಮಾಡಿ ಹಾಕತಾ ಇದ್ದರು, ನಾಟಕದವರು ಹಾಕ್ಕೊಳ್ಳೋಂಥದ್ದು. ಅವರು ಬೇಸನ್ ಹಿಡಿದು ತಾಳ ಹಾಕತಿದ್ದರು. ಏನು ಹೇಳಿದರೂ ಕೇಳತಾ ಇಲ್ಲ. ಕಲ್ಪನೆ ಅಲ್ಲ, ನಿಜಾ! ಇಂಪಾಸಿಬಲ್!…’

ಸೆಮ್ಯೊನೊವಚ್ ಹೇಳುತ್ತಲೇ ಇರುತ್ತಿದ್ದ. ಉಸಿರು ಬಿಗಿ ಹಿಡಿದು ಕೇಳುತ್ತಿದ್ದ ಸೋನ್ಯಾ ತಟ್ಟನೆ ತನ್ನ ಹ್ಯಾಟು, ಮೇಲಂಗಿ ಎತ್ತಿಕೊಂಡು ಓಡಿದಳು. ಅವಳ ಹಿಂದ ರಾಸ್ಕೋಲ್ನಿಕೋವ್, ಅವರಿಬ್ಬರ ಹಿಂದೆ ಸೆಮ್ಯೊನೊವಿಚ್…

‘ಅವಳಿಗೆ ಖಂಡಿತ ಹುಚ್ಚು ಹಿಡಿದಿದೆ!’ ಬೀದಿಗೆ ಕಾಲಿಟ್ಟ ತಕ್ಷಣ ಸೆಮ್ಯೊನೊವಿಚ್ ರಾಸ್ಕೋಲ್ನಿಕೋವ್‌ಗೆ ಹೇಳಿದ. ‘ಸೋಫ್ಯಾಳನ್ನ ಹೆದರಿಸಬಾರದು ಅಂತ ‘ಹುಚ್ಚು ಹಿಡಿದ ಹಾಗೆ ಕಾಣತ್ತೆ’ ಅಂದೆ, ಅಷ್ಟೆ. ಅನುಮಾನ ಇಲ್ಲವೇ ಇಲ್ಲ. ಕ್ಷಯ ಬಂದಾಗ ಮಿದುಳಲ್ಲಿ ಗಡ್ಡೆ ಏಳತವಂತೆ. ನಾನು ಮೆಡಿಸಿನ್ ಓದಿದ್ದರೆ ಚೆನ್ನಾಗಿರತಿತ್ತು. ಅಂದಹಾಗೆ, ಅವಳ ಮನಸ್ಸು ತಿರುಗಿಸೋದಕ್ಕೆ ಪ್ರಯತ್ನಪಟ್ಟೆ, ಅವಳು ಯಾರ ಮಾತೂ ಕೇಳಲಿಲ್ಲ.’

‘ಮಿದುಳಲ್ಲಿ ಗಡ್ಡೆ ಏಳತ್ತ ಅಂತ ಹೇಳಿದೆಯಾ ಅವಳಿಗೆ?’

‘ಅದೇ ಅಂತಲ್ಲ, ಹೇಳಿದ್ದರೂ ಅವಳಿಗೇನೂ ಅರ್ಥ ಆಗತಿರಲಿಲ್ಲ. ನಾನು ಹೇಳುವುದು ಇಷ್ಟೆ: ಅತ್ತರೆ ಉಪಯೋಗವಿಲ್ಲ ಅಂತ ತಾರ್ಕಿಕವಾಗಿ ಒಪ್ಪಿಸಿದರೆ ಯಾರಾದರೂ ಸರಿ ಅಳು ನಿಲ್ಲಿಸತಾರೆ. ಅಥವಾ ಅಳು ನಿಲ್ಲಿಸಲ್ಲವಾ, ನಿನಗೇನನ್ನಿಸತ್ತೆ?’

‘ಹಾಗಿದ್ದಿದ್ದರೆ ಬದುಕು ಬಹಳ ಸುಲಭವಾಗಿರತಿತ್ತು,’ ಅಂದ ರಾಸ್ಕೋಲ್ನಿಕೋವ್.

‘ಎಕ್ಸ್ಕ್ಯೂಸ್‍ ಮಿ, ಅರ್ಥ ಮಾಡಿಕೊಳ್ಳುವುದು ಕ್ಯಾತರೀನಗೆ ಬಹಳ ಕಷ್ಟವಾಗಿರಬಹುದು. ಆದರೆ, ಗೊತ್ತಾ, ಪ್ಯಾರಿಸ್‌ನಲ್ಲಿ ಪ್ರಯೋಗಗಳು ನಡೆದಿವೆ. ಹುಚ್ಚು ಹಿಡಿವರನ್ನು ಕೇವಲ ತರ್ಕದ ಸಹಾಯದಿಂದ ಗುಣಪಡಿಸಬಹುದು ಅನ್ನುವ ಪ್ರಯೋಗವನ್ನು ಒಬ್ಬ ಪ್ರೊಫೆಸರ್ ಮಾಡತಾ ಇದ್ದ. ಇತ್ತೀಚೆಗೆ ತೀರಿ ಹೋದ, ಪಾಪ. ಅಂಥ ತರ್ಕೋಪಚಾರ ಸಾಧ್ಯ ಅಂತ ನಂಬಿದ್ದ. ಅವನ ವಿಚಾರ ಏನಪ್ಪ ಅಂದರೆ, ಹುಚ್ಚು ಹಿಡಿದವರಲ್ಲಿ ನಿರ್ದಿಷ್ಟವಾಗಿ ದೈಹಿಕವಾದ ಏರುಪೇರು ಏನೂ ಇರುವುದಿಲ್ಲ, ಹುಚ್ಚು ಅಂದರೆ ತರ್ಕ ತಪ್ಪುವುದು ಅಂತಷ್ಟೇ, ವಸ್ತುಗಳನ್ನ ಕುರಿತು ತಪ್ಪು ತೀರ್ಮಾನ ಮಾಡುವುದು ಅಂತಷ್ಟೇ ಅರ್ಥ ಎಂದು ಹೇಳಿದ. ಹುಚ್ಚನಿಗೆ ಅವನು ತಿಳಿದುಕೊಂಡಿರುವುದು ತಪ್ಪು ಅಂತ ಸಾವಕಾಶವಾಗಿ ಸಾಧಿಸಿ ತೋರಿಸತಿದ್ದ. ಫಲ ಸಿಗತಾ ಇತ್ತು ಗೊತ್ತಾ! ಹಾಗೆ ಮಾಡುವಾಗ ಅವನು ಪೇಶೆಂಟುಗಳಿಗೆ ಶವರ್ ಬಾತ್ ಕೂಡ ಮಾಡಿಸತಿದ್ದ. ಹಾಗಾಗಿ ಅವನ ವಿಧಾನದ ಬಗ್ಗೆ ಸ್ವಲ್ಪ ಸಂಶಯ ಇದೆ, ಅಥವಾ ಹಾಗನ್ನಿಸತ್ತೆ.’

ಅವನ ಮಾತು ಕೇಳಿಸಿಕೊಳ್ಳುವುದನ್ನು ರಾಸ್ಕೋಲ್ನಿಕೋವ್ ಯಾವಾಗಲೋ ನಿಲ್ಲಿಸಿಬಿಟ್ಟಿದ್ದ. ಅವನ ಮನೆ ಬಂದಿತ್ತು. ಸೆಮ್ಯೊನೊವಿಚ್‌ಗೆ ತಲೆ ಬಾಗಿ ವಂದಿಸಿದ ಹಾಗೆ ಮಾಡಿ ಗೇಟಿನಲ್ಲಿ ತಿರುಗಿಬಿಟ್ಟ. ಸೆಮ್ಯೊನೊವಿಚ್ ಎಚ್ಚರಗೊಂಡು ಸುತ್ತಲೂ ನೋಡಿದ, ಓಡಿದ.

ರಾಸ್ಕೋಲ್ನಿಕೋವ್ ತನ್ನ ರೂಮಿಗೆ ಹೋದ. ರೂಮಿನ ಮಧ್ಯದಲ್ಲಿ ನಿಂತ. ಯಾಕೆ ವಾಪಸ್ಸು ಬಂದಿದ್ದು? ಸುತ್ತಲೂ ನೋಡಿದ. ಹಳದಿಗೆ ತಿರುಗಿದ ವಾಲ್‌ಪೇಪರು, ಸೋಫಾದ ಮೇಲೆ ಧೂಳು, ಅಂಗಳದಲ್ಲಿ ಏನೋ ಒಂದೇ ಸಮ ತಟ್ಟುತ್ತಿರುವ ಶಬ್ದ. ಯಾರೋ ಎಲ್ಲೋ ಮೊಳೆ ಹೊಡೆಯುತ್ತಿದ್ದಾರೆ… ಕಿಟಕಿಯ ಹತ್ತಿರ ಹೋದ. ತುದಿಗಾಲಲ್ಲಿ ನಿಂತ. ಬಹಳ, ಬಹಳ ಗಮನಕೊಟ್ಟು ಅಂಗಳವನ್ನು ನೋಡಿದ. ಅಂಗಳ ಖಾಲಿಯಾಗಿತ್ತು. ಮೊಳೆ ಯಾರು ಹೊಡೆಯುತ್ತಿದ್ದರೋ ಕಾಣಲಿಲ್ಲ. ಎಡಭಾಗಕ್ಕೆ ಇದ್ದ ಮನೆಗಳಲ್ಲಿ ಅಲ್ಲೊಂದು ಇಲ್ಲೊಂದು ಕಿಟಕಿ ತೆರೆದಿದ್ದವು. ಒಣಗಿದ ಜೆರಾನಿಯಮ್‍ ಗಿಡ ಇದ್ದವು. ಒಗೆದ ಬಟ್ಟೆ ಒಣಹಾಗಿದ್ದರು ಕಿಟಕಿಗಳಲ್ಲಿ… ಇದೆಲ್ಲ ಅವನಿಗೆ ಬಾಯಿಪಾಠ. ಹೋಗಿ ಸೋಫಾ ಮೇಲೆ ಕೂತ.

ಎಂದೂ ಇಷ್ಟು ಭಯಂಕರವಾಗಿ ಒಂಟಿ ಅನಿಸಿರಲಿಲ್ಲ ಅವನಿಗೆ.

ಹೌದು. ಸೋನ್ಯಾಳ ಮೇಲೆ ದ್ವೇಷ ಹುಟ್ಟಬಹುದು ಅಂತ ಮತ್ತೆ ಅನ್ನಿಸಿತು. ಈ ಕ್ಷಣವೇ. ಅವಳು ಇನ್ನೂ ನರಳುವ ಹಾಗೆ ನೋವು ಪಡುವ ಹಾಗೆ ಮಾಡಿದ್ದ. ಯಾಕೆ ಅವಳ ಹತ್ತಿರ ಹೋಗಿ ‘ನನಗಾಗಿ ಕಣ್ಣೀರಿಡು,’ ಅಂತ ಯಾಚಿಸಿದ್ದ? ಅವಳ ಬದುಕು ಹರಿದು ತಿನ್ನುವುದಕ್ಕೆ ಅವನಿಗೇನು ಅಧಿಕಾರವಿದೆ!

‘ಒಬ್ಬನೇ ಇರತೇನೆ!’ ತಟ್ಟನೆ ದೃಢ ನಿರ್ಧಾರ ಮಾಡಿದ. ‘ಅವಳು ಜೈಲಿಗೆ ನನ್ನ ನೋಡಕ್ಕೆ ಬರಲ್ಲ!’

ಐದು ನಿಮಿಷವಾದಮೇಲೆ ತಟ್ಟನೆ ತಲೆ ಎತ್ತಿದ. ವಿಚಿತ್ರವಾಗಿ ನಕ್ಕ. ವಿಚಿತ್ರವಾದ ಆಲೋಚನೆ. ‘ಕಠಿಣಶಿಕ್ಷೆ ಅಂತಾದರೆ ಒಳ್ಳೆಯದು,’ ಅಂತ ತಟ್ಟನೆ ಅನಿಸಿತ್ತು.

ಅಸ್ಪಷ್ಟವಾದ ಚಿಂತೆಗಳು ಮನಸಲ್ಲಿ ಅಂಡಲೆಯುತ್ತ ಅವನು ಎಷ್ಟು ಹೊತ್ತು ರೂಮಿನಲ್ಲಿ ಕೂತಿದ್ದನೋ ಅದು ನೆನಪಾಗಲಿಲ್ಲ ಇದ್ದಕಿದ್ದ ಹಾಗೆ ಬಾಗಿಲು ತೆರೆದು ದುನ್ಯಾ ಒಳಕ್ಕೆ ಬಂದಳು. ಬಂದವಳೇ ಹೊಸ್ತಿಲ ಹತ್ತಿರವೇ ನಿಂತು ಅವನನ್ನು ನೋಡಿದಳು. ಸೋನ್ಯಾ ಮನೆಯಲ್ಲಿ ಅವನು ಮಾಡಿದ್ದ ಹಾಗೇ. ಒಳಕ್ಕೆ ಬಂದು ಅವನ ಎದುರಿಗೆ ಕುರ್ಚಿಯ ಮೇಲೆ ಕೂತಳು, ನಿನ್ನೆ ಕೂತಿದ್ದಲ್ಲೇ. ಮೌನವಾಗಿ, ಮನಸಲ್ಲಿ ಯಾವುದೇ ಯೋಚನೆ ಇರದೆ ಸುಮ್ಮನೆ ಅವಳನ್ನೆ ನೋಡಿದ.

‘ಸಿಟ್ಟು ಮಾಡಿಕೊಳ್ಳಬೇಡ, ಅಣ್ಣಾ, ಒಂದೇ ನಿಮಿಷ, ಹೊರಡತೇನೆ,’ ಅಂದಳು ದುನ್ಯಾ. ಅವಳ ಮುಖದಲ್ಲಿ ಗಾಂಭೀರ್ಯ ಇತ್ತೇ ಹೊರತು ಕಾಠಿಣ್ಯವಿಲ್ಲ. ಕಣ್ಣು ಸ್ವಚ್ಛವಾಗಿ, ಮೃದುವಾಗಿದ್ದವು. ಈಕೆ ಕೂಡ ಪ್ರೀತಿಯಿಂದಲೇ ತನ್ನ ಬಳಿಗೆ ಬಂದಿದ್ದಾಳೆ ಅನ್ನುವುದು ಗೊತ್ತಾಗುತ್ತಿತ್ತು.

‘ಅಣ್ಣಾ, ನನಗೆ ಎಲ್ಲಾ ಗೊತ್ತು, ಎಲ್ಲಾನೂ! ರಝುಮಿಖಿನ್ ಹೇಳಿದ. ಯಾವುದೋ ಕೆಟ್ಟ ಅನುಮಾನ, ಅರ್ಥವಿಲ್ಲದ ಸಂಶಯ ಇಟ್ಟುಕೊಂಡು ನಿನ್ನ ಬೆನ್ನು ಹತ್ತಿ ಹಿಂಸೆ ಕೊಡುತ್ತಿದ್ದಾರಂತೆ… ಏನೂ ಅಪಾಯ ಇಲ್ಲ, ನೀನು ಭಯಪಡಬೇಕಾಗಿಲ್ಲ ಅಂತ ರಝುಮಿಖಿನ್ ಹೇಳಿದ. ನಾನು ಒಪ್ಪಲ್ಲ. ನಿನಗೆ ಎಷ್ಟು ಸಿಟ್ಟು ಬಂದಿರಬೇಕು, ನನಗೆ ಅರ್ಥ ಆಗತ್ತೆ. ಈ ಕೋಪ ನಿನ್ನ ಮನಸಿಗೆ ದೊಡ್ಡ ಗಾಯ ಮಾಡಬಹುದು. ಅದೇ ನನಗೆ ಇರುವ ಭಯ. ನಮ್ಮನ್ನೆಲ್ಲ ಬಿಟ್ಟು ಹೋದೆ ಅಂತ ನೀನು ಇಂಥವನು, ಅಂಥವನು ಅಂತ ತೀರ್ಮಾನ ಮಾಡಲ್ಲ ನಾನು, ಅಂಥ ಹಕ್ಕೂ ನನಗಿಲ್ಲ. ನಾನು ಇದಕ್ಕೂ ಮೊದಲು ನಿನ್ನ ಹಾಗೇನಾದರೂ ಬೈದಿದ್ದರೆ ಕ್ಷಮಿಸಿಬಿಡು. ನನಗೇ ಇಂಥ ದುಃಖ ಬಂದಿದ್ದರೆ ನಾನೂ ಎಲ್ಲಾರನೂ ಬಿಟ್ಟು ಹೋಗಿಬಿಡತಿದ್ದೆ ಅನಿಸತ್ತೆ. ಈ ವಿಷಯ ಅಮ್ಮನಿಗೆ ಹೇಳಲ್ಲ. ನಿನ್ನ ಬೇರೆ ವಿಚಾರ ಮಾತ್ರ ಅಮ್ಮನ ಹತ್ತಿರ ಹೇಳತಾನೇ ಇರತೀನಿ. ನೀನು ಬೇಗ ಬರತೀಯ ಅಂತ ಹೇಳತೇನೆ. ಅಮ್ಮನ ಚಿಂತೆ ಬೇಡ ನಿನಗೆ. ಅಮ್ಮನಿಗೆ ನಾನು ಸಮಾಧಾನ ಹೇಳತೇನೆ, ಅಮ್ಮನಿಗೆ ನೋವು ಕೊಡಬೇಡ ಅಷ್ಟೇನೇ. ಅವಳು ನಿನ್ನ ಅಮ್ಮ. ಜ್ಞಾಪಕ ಇರಲಿ. ಒಂದು ಸಾರಿಯಾದರೂ ಬಂದು ಹೋಗು. ನಾನು ಈಗ ಬಂದಿದ್ದು ಯಾಕೆ ಅಂದರೆ, (ದುನ್ಯಾ ಎದ್ದಳು) ನಿನಗೆ ನನ್ನಿಂದ ಏನಾದರೂ ಸಹಾಯ ಬೇಕಾದರೆ, ಅಥವಾ ನನ್ನ ಪ್ರಾಣಾನೇ ಬೇಕರೂ, ನನ್ನ ಕರಿ, ಬರತೇನೆ ಅಂತ ಹೇಳಕ್ಕೆ ಬಂದೆ. ಗುಡ್ ಬೈ.’

ತಟ್ಟನೆ ತಿರುಗಿ ಬಾಗಿಲಿಗೆ ನಡೆದಳು.

‘ದುನ್ಯಾ!’ ರಾಸ್ಕೋಲ್ನಿಕೋವ್ ಅವಳನ್ನು ತಡೆದ. ಎದ್ದು ಅವಳ ಹತ್ತಿರಕ್ಕೆ ಹೋದ. ‘ಈ ರಝುಮಿಖಿನ್ ತುಂಬ ಒಳ್ಳೆಯವನು,’ ಅಂದ.

ದುನ್ಯಾ ಸ್ವಲ್ಪ ನಾಚಿದಳು.

‘ಹ್ಞೂಂ? ಸ್ವಲ್ಪ ಹೊತ್ತು ಸುಮ್ಮನಿದ್ದು ‘ಹ್ಞೂಂ?’ ಅಂದಳು.

‘ಪ್ರಾಕ್ಟಿಕಲ್ ಮನುಷ್ಯ, ಕಷ್ಟಪಟ್ಟು ದುಡೀತಾನೆ. ಪ್ರಾಮಾಣಿಕ. ಪ್ರೀತಿ ಇರುವ ಮನಸ್ಸು… ಗುಡ್ ಬೈ, ದುನ್ಯಾ.’

ದುನ್ಯಾ ಪೂರ ನಾಚಿದಳು. ಇದ್ದಕಿದ್ದ ಹಾಗೆ ಭಯಪಟ್ಟಳು.

‘ಏನಿದು ಅಣ್ಣಾ, ಹೀಗೆಲ್ಲ ಮಾತಾಡತಾ ಇದೀಯ? ಹೊರಟು ಹೋಗತೀಯಾ ಹೇಗೆ?’

‘ಪರವಾಗಿಲ್ಲ, ಬಿಡು… ಗುಡ್ ಬೈ…’

ಮತ್ತೆ ತಿರುಗಿ ಕಿಟಕಿಯ ಹತ್ತಿರ ಹೋಗಿ ನಿಂತ. ದುನ್ಯಾ ಅಲ್ಲೇ ನಿಂತು ಕಸಿವಿಸಿಪಡುತ್ತ ಅವನನ್ನು ನೋಡಿದಳು. ಹೆದರಿ ಹೊರಟುಬಿಟ್ಟಳು.

ಅವನಿಗೆ ಅವಳ ಬಗ್ಗೆ ಭಾವನೆಗಳೇನೂ ಇರಲಿಲ್ಲ ಎಂದಲ್ಲ. ಅವಳನ್ನ ಭದ್ರವಾಗಿ ತಬ್ಬಿಕೊಂಡು ಗುಡ್ ಬೈ ಅನ್ನಬೇಕು ಎಂದು ಒಂದು ಕ್ಷಣ ಅನಿಸಿತ್ತು ಅವನಿಗೆ. ಅವಳಿಗೂ ಹೇಳಿಬಿಡಬೇಕು ಅಂತಲೂ ಅನಿಸಿತ್ತು. ಆದರೂ ಅವಳ ಕೈ ಕುಲುಕುವುದಿರಲಿ, ಅವಳನ್ನು ಸೋಕುವುದಕ್ಕೂ ಧೈರ್ಯ ಬರಲಿಲ್ಲ ಅವನಿಗೆ.

‘ಮುಂದೆ ಯಾವತ್ತಾದರೂ ಈ ಗಳಿಗೆ ನೆನಪು ಮಾಡಿಕೊಂಡರೆ ಅವಳ ಮೈ ನಡುಗೀತು, ನಮ್ಮಣ್ಣ ನನ್ನ ಮುತ್ತನ್ನು ಕದ್ದುಕೊಂಡ, ಅಂದುಕೊಂಡಾಳು,’ ಅನ್ನಿಸಿತ್ತು ಅವನಿಗೆ.

‘ಇದನ್ನ ಇವಳು ಸಹಿಸತಾಳೋ ಇಲ್ಲವೋ?’ ಕೆಲವು ನಿಮಿಷ ಬಿಟ್ಟು ಮತ್ತೆ ಕೇಳಿಕೊಂಡ. ‘ಇಲ್ಲ, ಸಹಿಸಲ್ಲ ಅವಳು, ಅವಳಂಥವರು ಸಹಿಸಕ್ಕಾಗಲ್ಲ. ಅವಳಂಥವರು ಸಹಿಸಲ್ಲ…’

ಸೋನ್ಯಾ ಬಗ್ಗೆ ಯೋಚನೆ ಮಾಡಿದ.

ಕಿಟಕಿಯಿಂದ ತಾಜಾ ಗಾಳಿ ಬೀಸಿತು. ಹೊರಗಿನ ಬೆಳಕು ಈಗ ಮೊದಲಿನಷ್ಟು ಪ್ರಖರವಾಗಿರಲಿಲ್ಲ. ತಟ್ಟನೆ ಕ್ಯಾಪು ಎತ್ತಿಕೊಂಡು ಹೊರಟುಬಿಟ್ಟ.

ತನ್ನ ಆರೋಗ್ಯದ ಬಗ್ಗೆ ಅವನಿಗೆ ಚಿಂತೆ ಇರಲಿಲ್ಲ, ಚಿಂತೆ ಮಾಡುವುದು ಸಾಧ್ಯವೂ ಇರಲಿಲ್ಲ. ಆದರೂ ಕೊನೆಯಿರದ ಕಳವಳ, ಮನಸಿನೊಳಗಿದ್ದ ಭಯ ಇವು ಪರಿಣಾಮ ಬೀರದೆ ಇರಲು ಸಾಧ್ಯವಿರಲಿಲ್ಲ. ಅವನಿಗಿನ್ನೂ ಸನ್ನಿ ಹಿಡಿದಿರದಿದ್ದರೆ ಮನಸಿನಲ್ಲಿದ್ದ ಕೊನೆಯಿರದ ಕಳವಳ ಅವನನ್ನು ಎಚ್ಚರವಾಗಿಟ್ಟದ್ದೇ ಅದಕ್ಕೆ ಕಾರಣ. ಇದು ಎಷ್ಟೇ ಅಸಹಜವಾಗಿದ್ದರೂ ತತ್‌ಕ್ಷಣಕ್ಕೆ ಎಚ್ಚರದ ಸ್ಥಿತಿಯಲ್ಲಿದ್ದ.

ರಾಸ್ಕೋಲ್ನಿಕೋವ್ ಗುರಿ ಇಲ್ಲದೆ ಅಲೆದ. ಸೂರ್ಯ ಮುಳುಗುತ್ತಿದ್ದ. ಎಂಥದೋ ದುಃಖ ಅವನನ್ನು ಇತ್ತೀಚೆಗೆ ಕಾಡುತ್ತಿತ್ತು ಅದೊಂದು ಥರ ದುಶ್ಶಕುನದಂಥ ದುಃಖ. ಒಂದು ಚದರಗಜ ಜಾಗದಲ್ಲಿ ನಿಂತು ಕೊನೆಯಿರದ ದುಃಖವನ್ನು ಅನಂತವಾಗಿ ಅನುಭವಿಸುತ್ತಲೇ ಇರಬೇಕಾದೀತು ಅನ್ನುವಂಥ ಕೆಟ್ಟಶಕುನ ನುಡಿಯುತ್ತಿದೆ ಅನಿಸುವಂಥ ದುಃಖ. ಸಂಜೆಯ ಹೊತ್ತಿನಲ್ಲಿ ಇಂಥ ಭಾವ ಸಾಮಾನ್ಯವಾಗಿ ಅವನ ಮನಸ್ಸನ್ನು ಕವಿದುಕೊಳ್ಳುತ್ತಿತ್ತು.

‘ಸೂರ್ಯ ಮುಳುಗುವ ಹೊತ್ತಿನಲ್ಲಿ ಕೇವಲ ದೈಹಿಕ ದೌರ್ಬಲ್ಯದ ಕಾರಣಕ್ಕೆ ಹುಟ್ಟುವ ಇಂಥ ಭಾವನೆಗ ಕಾರಣದಿಂದ ಪೆದ್ದು ಪೆದ್ದಾಗಿ ನಡೆದುಕೊಳ್ಳಬಾರದು. ಹುಷಾರಾಗಿರಬೇಕು. ಸೋನ್ಯಾಳ ಹತ್ತಿರ ಹೋಗಲೇಬಾರದಾಗಿತ್ತು, ಅದರ ಮೇಲೆ ದುನ್ಯಾ ಕೂಡ ಬಂದಳು!’ ಎಂದು ಗೊಣಗುತ್ತ ತನ್ನನ್ನೆ ಬೈದುಕೊಂಡ.

ಯಾರೋ ಕರೆದರು. ತಿರುಗಿ ನೋಡಿದ. ಸೆಮ್ಯೊನೊವಿಚ್ ಓಡಿ ಬರುತ್ತಿದ್ದ.

‘ಗೊತ್ತಾ? ಈಗ ತಾನೇ ನಿಮ್ಮ ಮನೇಗೆ ಹೋಗಿದ್ದೆ. ನಿನ್ನ ಹುಡುಕತಾ ಇದ್ದೆ. ಗೊತ್ತಾ? ಅವಳು ಅಂದುಕೊಂಡ ಹಾಗೇ ಮಕ್ಕಳನ್ನೆಲ್ಲ ಕರಕೊಂಡು ಹೋಗಿಬಿಟ್ಟಿದಾಳೆ! ನಾನೂ ಸೋನ್ಯಾ ಇಬ್ಬರೂ ಅವರನ್ನ ಹುಡುಕೋದಕ್ಕೆ ಬಹಳ ಕಷ್ಟಪಟ್ಟೆವು. ಹುರಿಯುವ ಬಾಣಲಿ ಮೇಲೆ ತಾಳ ಹಾಕತಾ ಮಕ್ಕಳನ್ನ ಕುಣಿಸತಾ ಇದಾಳೆ, ಹಾಡು ಹೇಳಿಸತಾ ಇದಾಳೆ. ಮಕ್ಕಳು ಅಳತಾ ಇದಾವೆ. ಬೀದಿ ತಿರುವಿನಲ್ಲಿ, ಅಂಗಡಿ ಮುಂದೆ ನಿಂತಕಕೊಂಡು ಭಿಕ್ಷೆ ಬೇಡತಾರೆ. ಮೂರ್ಖ ಜನ ಅವರನ್ನ ಅಟ್ಟಿಸಿಕೊಂಡು ಹೋಗತಾ ಇದಾರೆ. ಬಾ!

‘ಮತ್ತೆ ಸೋನ್ಯಾ?…’ ರಾಸ್ಕೋಲ್ನಿಕೋವ್ ಭಯಪಡುತ್ತ ಕೇಳಿದ.

‘ಅವಳಿಗೆ ಉನ್ಮಾದ. ಅಂದರೆ ಸೋನ್ಯಾಗೆ ನಿಜವಾಗಲೂ ಉನ್ಮಾದ ಅಂತಲ್ಲ, ಕ್ಯಾತರೀನ ಇವಾನೋವ್ನಾ ಹಾಗಿದಾಳೆ. ಆದರೂ ಸೋನ್ಯಾಗೂ ಒಂದು ಥರ ಉನ್ಮಾದ ಅಂತನೇ ಅನ್ನಬಹುದು. ಕ್ಯಾತರೀನಾಗೆ ಪೂರಾ ಉನ್ಮಾದ. ಕೊನೆಗೂ ಹುಚ್ಚಿ ಆದಳು ಅನ್ನತೇನೆ. ಅವರನ್ನ ಪೋಲೀಸಿನವರ ಹತ್ತಿರ ಕರಕೊಂಡು ಹೋಗತಾರೆ. ಇದರ ಪರಿಣಾಮ ನಿನಗೆ ಗೊತ್ತಲ್ಲ… ಈಗ ಕೆನಾಲ್ ಹತ್ತಿರ ಇದಾರೆ ವೋಝ್ನೆಸೆನ್ಸ್ಕಿ ಸೇತುವೆ ಹತ್ತಿರ. ಸೋನ್ಯಾ ಮನೆ ಹತ್ತಿರಾನೇ.’

ಸೇತುವೆಗೆ ಬಹಳ ಹತ್ತಿರದಲ್ಲಿ, ಸೋನ್ಯಾ ಇದ್ದಲ್ಲಿಂದ ಎರಡೇ ಮನೆ ಆಚೆ ಜನರ ಪುಟ್ಟದೊಂದು ಗುಂಪು ಕೂಡಿತ್ತು. ಬೀದಿ ಹುಡುಗರು, ಹುಡುಗಿಯರು ಓಡೋಡಿ ಬರುತ್ತಿದ್ದರು. ಕ್ಯಾತರೀನಳ ದಣಿದ ಗೊಗ್ಗರು ದನಿ ಸೇತುವೆಯಿಂದ ಕೇಳುತ್ತಿತ್ತು. ಅದೊಂದು ವಿಚಿತ್ರ ದೃಶ್ಯ, ದಾರಿಹೋಕರ ಗಮನ ಸೆಳೆದಿತ್ತು. ಕ್ಯಾತರೀನ ಹಳೆಯ ಬಟ್ಟೆ ತೊಟ್ಟಿದ್ದಳು. ಫ್ಲಾನಲ್ ಶಾಲು ಹೊದ್ದಿದ್ದಳು. ಹುಲ್ಲಿನ ಹರಿದ ಹ್ಯಾಟನ್ನು ತಲೆಯ ಒಂದು ಪಕ್ಕದ ಮೇಲೆ ಸೊಟ್ಟಗೆ ಇಟ್ಟುಕೊಂಡಿದ್ದಳು. ಹುಲ್ಲಿನ ಗುಪ್ಪೆಯ ಹಾಗೆ ವಿಕಾರವಾಗಿ ಕಾಣುತ್ತಿತ್ತು ಅದು. ನಿಜವಾಗಲೂ ಬಹಳ ಉನ್ಮತ್ತಳಾಗಿದ್ದಳು. ದಣಿದಿದ್ದಳು, ಉಸಿರಾಡುವುದು ಕಷ್ಟವಾಗುತ್ತಿತ್ತು. ದಣಿದ ಕ್ಷಯಪೀಡಿತ ಮುಖದಲ್ಲಿ ಎಂದಿಗಿಂತ ಹೆಚ್ಚಿನ ನೋವು ಕಾಣುತ್ತಿತ್ತು (ಅಲ್ಲದೆ, ಕ್ಷಯರೋಗಿಗಳು ಮನೆಯಲ್ಲಿ ಕಾಣವುದಕ್ಕಿಂತ ಮನೆಯ ಹೊರಗೆ ಬಿಸಿಲಿಗೆ ಬಂದಾಗ ಹೆಚ್ಚು ರೋಗಗ್ರಸ್ತರಾಗಿ ಕಾಣುತ್ತಾರೆ). ಕಳವಳ ಕಾಡುತ್ತಿತ್ತು. ಪ್ರತಿ ಕ್ಷಣವೂ ಮತ್ತಷ್ಟು ರೇಗುತ್ತಿದ್ದಳು. ಮಕ್ಕಳ ಹತ್ತಿರಕ್ಕೆ ಓಡಿಹೋಗುತ್ತಿದ್ದಳು ಅವರ ಮೇಲೆ ಕಿರಿಚಾಡುತ್ತಿದ್ದಳು. ಅವರನ್ನ ಪುಸಲಾಯಿಸುತ್ತಿದ್ದಳು. ಅಲ್ಲೇ, ಜನಗಳ ಎದುರಿಗೇನೇ ಹೇಗೆ ಹಾಡಬೇಕು, ಹೇಗೆ ಡಾನ್ಸು ಮಾಡಬೇಕು ಅನ್ನುವ ಪಾಠ ಮಾಡುತ್ತಿದ್ದಳು. ಯಾಕೆ ಇದೆಲ್ಲ ಮಾಡಬೇಕು, ವಿವರಿಸುತ್ತಿದ್ದಳು. ನೀವು ಪೆದ್ದರು ಅರ್ಥ ಆಗಲ್ಲ ಅನ್ನುತ್ತ ದುಖಪಡುತ್ತಿದ್ದಳು. ಹೊಡೆಯುತ್ತಿದ್ದಳು… ಜನರ ಗುಂಪಿನಲ್ಲಿ ಸ್ವಲ್ಪ ಒಳ್ಳೆಯ ಬಟ್ಟೆ ತೊಟ್ಟ ಯಾರಾದರೂ ನಿಂತು ನೋಡುತ್ತಿರುವುದು ಕಂಡರೆ ಅವರ ಹತ್ತಿರ ಓಡಿ ಹೋಗುತ್ತಿದ್ದಳು. ಹೋದವಳೇ ಈ ಮಕ್ಕಳು; ಒಳ್ಳೆಯ ಮನೆತನದವರು, ಶ್ರೀಮಂತರು ಅಂತಲೇ ಅನ್ನಬೇಕು, ಇವರಿಗೆ ಎಂಥ ಗತಿ ಬಂದಿದೆ ನೋಡಿ ಅನ್ನುತ್ತಿದ್ದಳು. ಯಾರಾದರೂ ನಕ್ಕದ್ದೋ ಏನೋ ಹೇಳಿದ್ದೋ ಕೇಳಿದರೆ ಅವರ ಜೊತೆ ಜಗಳ ಆಡುವುದಕ್ಕೆ ಶುರು ಮಾಡುತ್ತಿದ್ದಳು. ಕೆಲವರು ನಿಜವಾಗಲೂ ನಗುತ್ತಿದ್ದರು, ಮಿಕ್ಕವರು ತಲೆ ಕೊಡವುತ್ತಿದ್ದರು. ಒಟ್ಟಿನಲ್ಲಿ ಈ ಹುಚ್ಚಿಯನ್ನೂ ಅವಳ ಬೆದರಿದ ಮಕ್ಕಳನ್ನೂ ಕಂಡು ಎಲ್ಲರಿಗೂ ಕುತೂಹಲ ಹುಟ್ಟಿತ್ತು.

ಸೆಮ್ಯೊನೊವಿಚ್ ಹೇಳಿದ ಹುರಿಯುವ ಬಾಂಡಲಿ ಅಲ್ಲೆಲ್ಲೂ ರಾಸ್ಕೋಲ್ನಿಕೋವ್‌ಗೆ ಕಾಣಲಿಲ್ಲ. ಅದರ ಬದಲಾಗಿ ಒಣಕಲು ಕೈಯಲ್ಲೆ ಚಪ್ಪಾಳೆ ತಟ್ಟುತ್ತ ಪೋಲೆಚ್ಕಾ ಹಾಡಿಗೆ, ಕೋಲ್ಯನ ಡಾನ್ಸಿಗೆ ತಾಳ ಹಾಕುತ್ತಿದ್ದಳು. ಆಗಾಗ ತಾನೇ ಹಾಡುತ್ತಲೂ ಇದ್ದಳು. ಒಂದು ಸಾಲು ಮುಗಿಯುವುದರೊಳಗೆ ಕೆಮ್ಮು ಬಂದು ಹಾಡು ನಿಲ್ಲಿಸುತ್ತಿದ್ದಳು. ಕೆಮ್ಮಿಗೆ ಶಾಪ ಹಾಕಿ ಅಳುತ್ತಿದ್ದಳು. ಎಲ್ಲಕ್ಕಿಂತ ಮಿಗಿಲಾಗಿ ಕೋಲ್ಯಾ, ಲೆನ್ಯಾರ ಭಯದ ಅಳುವನ್ನು ಕಂಡು ಅವಳ ಮನಸ್ಸು ಇನ್ನಷ್ಟು ಕದಡುತ್ತಿತ್ತು. ಬೀದಿ ಬದಿಯ ಹಾಡುಗಾರರ ಉಡುಪಿನಲ್ಲಿ ಸಜ್ಜು ಮಾಡುವುದಕ್ಕೆ ಪ್ರಯತ್ನಪಟ್ಟದ್ದು ಕಾಣುತ್ತಿತ್ತು. ಹುಡುಗನ ತಲೆಯ ಮೇಲೆ ಒಂದು ಥರಾ ಕೆಂಪು, ಬಿಳಿಯ ಮಿಶ್ರಣವಿದ್ದ ಬಟ್ಟೆಯ ಪೇಟ ಕಟ್ಟಿ ಅವನು ಟರ್ಕರ ಹಾಗೆ ಕಾಣುವಂತೆ ಮಾಡಿದ್ದಳು. ಲೆನ್ಯಾಗೆ ವಿಶೇಷ ಉಡುಪು ಇರಲಿಲ್ಲ. ಹೆಣೆದ ವೋರ್ಸ್ಟೆಡ್ ಹ್ಯಾಟು, (ನಿಜವಾಗಿ ಅದು ನೈಟ್ ಕ್ಯಾಪು) ಇತ್ತು. ಅದು ಮಾರ್ಮೆಲಡೋವ್ ಬಳಸುತ್ತ ಇದ್ದದ್ದು. ಮುರಿದ ಆಸ್ಟ್ರಿಚ್ ಪುಕ್ಕವನ್ನು ಆ ಟೋಪಿಗೆ ಸಿಕ್ಕಿಸಿದ್ದಳು. ಅದು ಕ್ಯಾತರೀನಳ ಅಜ್ಜಿಯದು, ಮನೆತನದ ಆಸ್ತಿ ಅನ್ನುವ ಹಾಗೆ ಅದನ್ನು ಪೆಟ್ಟಿಗೆಯಲ್ಲಿ ಜೋಪಾನವಾಗಿಟ್ಟದ್ದಳು ಕ್ಯಾತರೀನ.

ಇನ್ನು ಪೋಲೆಚ್ಕ ತನ್ನ ಮಾಮೂಲು ಪುಟ್ಟ ಫ್ರಾಕು ತೊಟ್ಟಿದ್ದಳು. ಕಣ್ಣೀರು ಬಚ್ಚಿಟ್ಟುಕೊಂಡು ಅಮ್ಮನ ಪಕ್ಕದಲ್ಲೇ ಕದಲದೆ ಇದ್ದಳು. ಅಮ್ಮನಿಗೆ ಹುಚ್ಚು ಹಿಡಿದಿರಬಹುದು ಅನ್ನುವ ಊಹೆ ಅವಳಿಗೆ ಬಂದಿತ್ತು. ಕಸಿವಿಸಿ ಪಡುತ್ತ ಸುತ್ತಲೂ ನೋಡುತ್ತಿದ್ದಳು. ಬೀದಿಯನ್ನು ನೋಡಿ, ಜನರನ್ನು ನೋಡಿ ಬಹಳ ಹೆದರಿದ್ದಳು. ಸೋನ್ಯಾ ಅಳುತ್ತಾ, ಮನೆಗೆ ಬಾ ಎಂದು ಗೋಗರೆಯುತ್ತ ಕ್ಯಾತರೀನಳ ಹಿಂದು ಹಿಂದೆಯೇ ಹೋಗುತ್ತಿದ್ದಳು. ಕ್ಯಾತರೀನ ಸಮಾಧಾನವಿಲ್ಲದೆ ಅವಳ ಮಾತು ಕೇಳುತ್ತಲೇ ಇರಲಿಲ್ಲ.

(ಕಲಾಕೃತಿಗಳು: ಪ್ಯಾಬ್ಲೋ ಪಿಕಾಸೋ)

ಅವಳನ್ನ ಭದ್ರವಾಗಿ ತಬ್ಬಿಕೊಂಡು ಗುಡ್ ಬೈ ಅನ್ನಬೇಕು ಎಂದು ಒಂದು ಕ್ಷಣ ಅನಿಸಿತ್ತು ಅವನಿಗೆ. ಅವಳಿಗೂ ಹೇಳಿಬಿಡಬೇಕು ಅಂತಲೂ ಅನಿಸಿತ್ತು. ಆದರೂ ಅವಳ ಕೈ ಕುಲುಕುವುದಿರಲಿ, ಅವಳನ್ನು ಸೋಕುವುದಕ್ಕೂ ಧೈರ್ಯ ಬರಲಿಲ್ಲ ಅವನಿಗೆ.

‘ಸಾಕು ನಿಲ್ಲಿಸು ಸೋನ್ಯಾ!’ ಕ್ಯಾತರೀನ ಚೀರಿದಳು, ಉಸಿರು ಕಟ್ಟಿ ಕೆಮ್ಮಿದಳು. ‘ಮಕ್ಕಳ ಹಾಗೆ ಆಡತೀಯ! ಏನು ಮಾತು ಅಂತ ಹೇಳತೀಯ! ಆಗಲೇ ಹೇಳಿದೆ, ಹೆಂಡ ಕುಡಿಯುವ ಆ ಜರ್ಮನ್ ಹೆಂಗಸಿನ ಮನೆಗೆ ಮತ್ತೆ ಕಾಲಿಡಲ್ಲ. ಪೀಟರ್ಸ್‌ಬರ್ಗ್‌ನ ಎಲ್ಲಾರಿಗೂ ಗೊತ್ತಾಗಲಿ, ಈ ಮಕ್ಕಳ ಅಪ್ಪ ಬದುಕೆಲ್ಲ ಸರ್ಕಾರದ ಸೇವೆ ಮಾಡಿದ, ಸೇವೆ ಮಾಡತಾನೇ ಸತ್ತು ಹೋದ,’ (ಕ್ಯಾತರೀನ ಆಗಲೇ ಇಂಥ ಕಲ್ಪನೆ ಕಟ್ಟಿಕೊಂಡು ಅದನ್ನ ಗಟ್ಟಿಯಾಗಿ, ಕುರುಡಾಗಿ ನಂಬಿದ್ದಳು) ‘ಕೆಲಸಕ್ಕೆ ಬಾರದ ಗಿಡ್ಡ ಗೌರ್ನರ್ ನೋಡಲಿ. ನೀನೆಂಥ ಪೆದ್ದಿ, ಸೋನ್ಯಾ. ಈಗ ಮನೇಲ್ಲಿ ತಿನ್ನಕ್ಕೆ ಏನಿದೆ? ನಿನ್ನ ಆಗಲೇ ಕಿತ್ತು ತಿಂದಿದೇವೆ. ಸಾಕು ಇನ್ನು ಅಂಥ ಕೆಲಸ ಮಾಡಲ್ಲ! ಆಹಾ, ರೋಡಿಯಾನ್ ರೊಮ್ಯಾನೊವಿಚ್, ನೀನಾ!’ ರಾಸ್ಕೋಲ್ನಿಕೋವ್‌ನನ್ನು ಕಂಡು ಉದ್ಗಾರ ಮಾಡಿ ಅವನತ್ತ ಧಾವಿಸಿದಳು. ‘ಈ ಪೆದ್ದೀಗೆ ಹೇಳು, ಈಗ ನಾವು ಮಾಡಬಹುದು ಅನ್ನೋ ಕೆಲಸ ಇದೊಂದೇ, ಹಾರ್ಮೋನಿ ನುಡಿಸಿಕೊಂಡು ಬೀದಿಲ್ಲಿ ಹಾಡು ಹೇಳೋರೂ ಬದುಕತಾರೆ. ಜನಕ್ಕೆ ಗೊತ್ತಾಗತ್ತೆ. ನಾವು ಬಡವರು, ಆದರೂ ದೊಡ್ಡ ಮನೆಯವರು, ಮಕ್ಕಳು ಅನಾಥರು, ಬಡತನ ಬಂದಿದೆ ಅಂತ. ಆ ಗಿಡ್ಡ ಗೌರ್ನರ್‍ ಕೆಲಸ ಹೋಗತ್ತೆ, ನೋಡತಾ ಇರು!. ಅವನ ಮನೆ ಮುಂದೆ ದಿನಾ ನಿಂತುಕೊಂಡು ಹಾಡತೇವೆ. ಮಹಾ ಪ್ರಭುಗಳು ಸಾರೋಟಿನಲ್ಲಿ ಹೋಗುವಾಗ ಮಕ್ಕಳನ್ನ ಮುಂದಕ್ಕೆ ತಳ್ಳಿ, ‘ಈ ಮಕ್ಕಳನ್ನ ಕಾಪಾಡು, ತಂದೆಯೇ’ ಅಂತ ಬೇಡತೇನೆ. ಅನಾಥ ಮಕ್ಕಳಿಗೆಲ್ಲ ಚಕ್ರವರ್ತಿಯೇ ತಂದೆ. ಕರುಣಾಮಯಿ. ಆ ಗಿಡ್ಡ ಗೌರನರ್ ಗತಿ ಏನಾಗತ್ತೆ, ಏನಾತ್ತೆ ನೋಡತಾ ಇರು…. ಲೆನ್ಯಾ! ನೆಟ್ಟಗೆ ನಿಲ್ಲು (ಫ್ರೆಂಚಿನಲ್ಲಿ ಹೇಳಿದಳು)! ನೀನು, ಕೋಲ್ಯಾ, ಇನ್ನೊಂದು ನಿಮಿಷದಲ್ಲಿ ನೀನು ಡಾನ್ಸು ಮಾಡಬೇಕು. ಯಾಕೆ ಬಿಕ್ಕುತಾ ಇದೀಯ! ಭಯಾನಾ? ಈಗೆಂಥಾ ಭಯಾನೋ ಪೆದ್ದಾ! ದೇವರೇ, ಏನು ಮಾಡಲಿ ಇವರನ್ನ ಕಟ್ಟಿಕೊಂಡು! ರೋಡಿಯಾನ್ ರೊಮ್ಯಾನಿಚ್! ಇವರ ತಲೆ ಎಷ್ಟು ಕೆಟ್ಟಿದೆ, ಗೊತ್ತಾ! ಇಂಥಾವರನ್ನ ಇಟ್ಟುಕೊಂಡು ಏನು ಮಾಡಲಿ ನಾನು!..’

ಅಳುತ್ತಾ, ಅಳುತ್ತಲೇ ಒಂದೇ ಸಮ ಮಾತಾಡುತ್ತಾ ಬಿಕ್ಕುತ್ತಿರುವ ಮಕ್ಕಳನ್ನು ತೋರಿಸಿದಳು. ವಾಪಸ್ಸು ಬರುವಂತೆ ಅವಳ ಮನಸ್ಸು ತಿರುಗಿಸಲು ರಾಸ್ಕೋಲ್ನಿಕೋವ್‌ ಪ್ರಯತ್ನಪಟ್ಟ. ಕೊನೆಗೆ, ದೊಡ್ಡ ಮನೆತನಗಳ ಹುಡುಗಿಯರಿಗೆ ಸ್ಕೂಲು ಕಟ್ಟುವ ಅವಳಂಥವಳು ಹಾಡಿಕೊಂಡು ಬೀದಿಯಲ್ಲಿ ಸುತ್ತುವುದು ತರವಲ್ಲ ಅಂತಲೂ ಅಂದ.

‘ಆಹಾ, ಸ್ಕೂಲು! ಅಂಗೈಯಲ್ಲಿ ಅರಮನೆ!’ ಕ್ಯಾತರೀನ ನಕ್ಕಳು.. ನಗುವಿನ ಹಿಂದೆಯೇ ಜೋರಾಗಿ ಕೆಮ್ಮು ಬಂದಿತ್ತು. ಆ ಕನಸು ಸತ್ತು ಹೋಯಿತು ರೋಡಿಯಾನ ರೊಮ್ಯಾನಿಚ್. ಎಲ್ಲಾರೂ ನಮ್ಮ ಕೈ ಬಿಟ್ಟರು. ಆ ಗಿಡ್ಡ ಜನರಲ್, ಗೊತ್ತಲ್ಲಾ ನಿನಗೆ, ಅವನ ಮೇಲೆ ಮಸಿ ಕುಡಿಕೆ ಎಸೆದೆ. ಅವನ ಆಂಟೆ-ರೂಮಲ್ಲಿದ್ದೆ. ವಿಸಿಟರ್ ಬುಕ್‌ನ ಪಕ್ಕನ ಟೇಬಲ್ಲಿನ ಮೇಲೆ ಮಸಿ ಕುಡಿಕೆ ಇತ್ತು. ನನ್ನ ಸಹಿ ಹಾಕಿದೆ ಪುಸ್ತಕದಲ್ಲಿ. ಆಮೇಲೆ ಮಸಿ ಕುಡಿಕೆ ಅವನ ಮೇಲೆ ಬೀಸಿ ಎಸೆದು ಓಡಿ ಹೋದೆ. ದುಷ್ಟ ಜನ! ಈಗ ನನ್ನ ಪಾಡು ನಾನೇ ನೋಡಿಕೊಳ್ಳತೇನೆ, ಯಾರಿಗೂ ತಲೆ ಬಗ್ಗಿಸಲ್ಲ! ಅವಳಿಗೆ ತುಂಬ ಹಿಂಸೆ ಕೊಟ್ಟಿದೇವೆ,’ (ಸೋನ್ಯಾಳನ್ನ ತೋರಿಸಿದಳು). ‘ಪೊಲೆಚ್ಕಾ, ದುಡ್ಡು ಎಷ್ಟು ಬಂತು? ತೋರಿಸು! ಏನು, ಎರಡು ಕೊಪೆಕ್, ಅಷ್ಟೇ! ಅಯ್ಯೋ ದರಿದ್ರ ಜನ! ಏನೂ ಕೊಡಲ್ಲ, ನಾಲಿಗೆ ಚಾಚಿಕೊಂಡು ಹಿಂದಿಂದೆ ಬರತಾರೆ! ಏ ಪೆಕರಾ, ಯಾಕೆ ನಮ್ಮನ್ನ ನೋಡಿ ನಗತಾ ಇದೀಯ?’ (ಗುಂಪಿನಲ್ಲಿದ್ದ ಒಬ್ಬನನ್ನು ಬೈದಳು) ‘ಎಲ್ಲಾ ಈ ಕೋಲ್ಕಾನಿಂದ. ದಡ್ಡ, ದಡ್ಡಾ! ಏನು ಬೇಕು ನಿನಗೆ, ಪೋಲೆಚ್ಕಾ? ಫ್ರೆಂಚಿನಲ್ಲಿ ಮಾತಾಡು ನನ್ನ ಜೊತೆ. ನಿನಗೆ ಎಷ್ಟೊಂದು ಫ್ರೆಂಚ್ ಮಾತು ಹೇಳಿಕೊಟ್ಟಿದೀನಿ! ಫ್ರೆಂಚ್ ಮಾತಾಡದೇ ಇದ್ದರೆ ನೀವು ಓದಿರೋರು, ದೊಡ್ಡ ಮನೆಯೋರು ಬೀದಿಯಲ್ಲಿ ಹಾಡಿ ಕುಣಿಯೋರಲ್ಲ ಅಂತ ಜನಕ್ಕೆ ಹ್ಯಾಗೆ ಗೊತ್ತಾಗತ್ತೆ? ನಾವು ಬೀದೀಲ್ಲಿ ಪೆಟ್ರೂಷ್ಕಾ ನಾಟಕ ಆಡತಾ ಇಲ್ಲ, ಒಳ್ಳೆ ರೊಮಾನ್ಸ್ ಆಟ ತೋರಿಸತಾ ಇದೇವೆ… ಹೌದು, ಯಾವ ಹಾಡು ಹೇಳಣ? ಸುಮ್ಮನೆ ಅಡ್ಡ ಬಾಯಿ ಹಾಕತಾ ಇದೀಯಲ್ಲ. ನಾವು… ರೋಡಿಯೋನ್, ಇಲ್ಲಿ ನಿಂತಿದ್ದು ಯಾವ ಹಾಡು, ಕೋಲ್ಯಾ ಕೂಡ ಡಾನ್ಸು ಮಾಡಕ್ಕೆ ಆಗುವಂಥದ್ದು ಹೇಳಣ ಅಂತ ತೀರ್ಮಾನ ಮಾಡಕ್ಕೆ. ನಾವು ಇನ್ನೂ ರೆಡಿ ಆಗಿಲ್ಲ, ಚೆನ್ನಾಗಿ ಪ್ರಾಕ್ಟೀಸು ಮಾಡಬೇಕು ಮೊದಲು. ಆಮೇಲೆ ನೆವ್ಸ್ಕಿ ಪ್ರಾಸ್ಪೆಕ್ಟ್ ಗೆ ಹೋಗಬೇಕು. ಅಲ್ಲಿ ದೊಡ್ಡ ದೊಡ್ಡ ಮನೆಯವರು ಬಂದಿರತಾರೆ, ನಮ್ಮನ್ನ ತಟ್ ಅಂತ ಗುರುತು ಹಿಡೀತಾರೆ.

ಲೆನ್ಯಾಗೆ ‘ದಿ ಲಿಟಲ್ ಫಾರಮ್’ ಹಾಡು ಗೊತ್ತು. ಆದರೆ, ಯಾವಾಗಲೂ ಅದೇ. ಆ ಹಾಡು ಎಲ್ಲಾರೂ ಹೇಳತಾರೆ. ನಾವು ಇನ್ನೂ ಒಳ್ಳೇ ಹಾಡು ಹೇಳಬೇಕು… ಯಾವುದಾರೂ ಜ್ಞಾಪ್ಕ ಬಂತಾ ಪೋಲ್ಯಾ? ನಿಮ್ಮಮ್ಮನಿಗೆ ಹೆಲ್ಪ್ ಮಾಡಲ್ಲವಾ! ಯಾಕೋ ಎಲ್ಲಾ ಮರೆತು ಹೋಗತಾ ಇದೆ. ಇಲ್ಲದೆ ಇದ್ದಿದ್ದರೆ ನನಗೇ ನೆನಪಿರತಾ ಇತ್ತು. ‘ಕತ್ತಿಯ ಮೇಲೆ ಕೈ ಇಟ್ಟು ನಿಂತ ವೀರ,’ ಹೇಳಕ್ಕಾಗಲ್ಲ, ಅಲ್ಲವಾ? ಆಹಾ, ‘ಐದು ಕಾಸು;’ ಅನ್ನೋ ಫ್ರೆಂಚ್ ಹಾಡು ಹೇಳಣ. ನಿನಗೆ ಹೇಳಿಕೊಟ್ಟಿದ್ದೆ, ನನಗೆ ಗೊತ್ತು. ಫ್ರೆಂಚ್ ಹಾಡು ಅನ್ನೋದು ಮುಖ್ಯ. ಅದರಿಂದ ನೀವು ದೊಡ್ಡ ಮನೆಯ ಮಕ್ಕಳು ಅಂತ ಜನಕ್ಕೆ ಗೊತ್ತಾಗತ್ತೆ. ದುಡ್ಡು ಕೊಡತಾರೆ…’ ಮಾರ್ಲ್‍ಬರೋ ಯುದ್ಧಕ್ಕೆ ಹೋದವನು ಯಾವಾಗ ಬರತಾನೋ ಗೊತ್ತಿಲ್ಲ’ ಅನ್ನೋ ಫ್ರೆಂಚ್ ಹಾಡು? ಸಾವುಕಾರರ ಮನೆಯಲ್ಲಿ ಅದನ್ನ ಲಾಲಿ ಹಾಡಿನ ಥರ ಹಾಡತಾರೆ.’ ಹಾಡುವುದಕ್ಕೆ ಶುರು ಮಾಡಿದಳು… ‘ಉಹ್ಞೂಂ ಬೇಡ…, ಐದು ಕಾಸು!’ ವಾಸಿ. ಎಲ್ಲೀ, ಕೋಲ್ಯಾ, ನಿನ್ನ ಕೈ ಸೊಂಟದ ಮೇಲಿಟ್ಟುಕೋ. ಬೇಗ. ನೀನು, ಲೆನ್ಯಾ, ಆ ಕಡೆ ತಿರುಗು. ನಾನೂ ಪೋಲೆಚ್ಕಾ ಇಬ್ಬರೂ ತಾಳ ಹಾಕತಾ ಹಾಡು ಹೇಳತೇವೆ..

ಐದು ಕಾಸು ಐದು ಕಾಸು
ಮನೆ ನಡೆಸಕ್ಕೆ ಐದು ಕಾಸು…
ಖ್ಖೊ ಖ್ಖೊ ಖ್ಖೋ…!’ (ದೊಡ್ಡದಾಗಿ ಕೆಮ್ಮುವುದಕ್ಕೆ ಶುರು ಮಾಡಿದಳು.) ‘ಅಂಗಿ ಜಾರತಾ ಇದೆ ತೋಳಿನಿಂದ, ಸರಿ ಮಾಡಿಕೋ ಪೋಲೆಚ್ಕಾ; ಕೆಮ್ಮುತ್ತಲೇ ಮಗಳಿಗೆ ಹೇಳಿದಳು. ‘ಬಟ್ಟೆ ಸರಿಯಾಗಿರಬೇಕು, ಹೆಜ್ಜೆ ಸರಿಯಾಗಿ ಹಾಕಬೇಕು. ಹಾಗೆ ಮಾಡಿದರೆ ಎಲ್ಲಾರಿಗೂ ನೀವು ದೊಡ್ಡ ಮನೆ ಮಕ್ಕಳು ಅಂತ ಗೊತ್ತಾಗತ್ತೆ. ಹೊಲಿಯುವಾಗ ಎರಡು ಲೆಂತ್ ಇರಲಿ ಅಂದೆ, ನೀನೇ ಚಿಕ್ಕದಾಗಿರಲಿ, ಚಿಕ್ಕದಾಗಿರಲಿ ಅಂದೆ ಸೋನ್ಯಾ. ಈಗ ನೋಡು ಮಗು ಚೆನ್ನಾಗಿ ಕಾಣಲ್ಲ… ಅಯ್ಯೋ, ಪೆದ್ದು ಮಕ್ಕಳು, ಯಾಕೆ ಅಳತಾ ಇದೀರಿ! ಸರಿ, ಕೋಲ್ಯಾ, ಶುರುಮಾಡು, ಬೇಗ, ಬೇಗ, ಬೇಗ—ಎಂಥಾ ಮಕ್ಕಳು, ಹೇಳಿದ್ದು ಕೇಳಲ್ಲ!’

‘ಐದು ಕಾಸು, ಐದು ಕಾಸು…
ಇನ್ನೊಬ್ಬ ಸೈನಿಕ! ಏನು ಬೇಕು ನಿನಗೆ?’
ಪೋಲೀಸಿನವನು ಜನದ ಗುಂಪಿನಲ್ಲಿ ದಾರಿ ಮಾಡಿಕೊಂಡು ಬರುತ್ತಿದ್ದ. ಅದೇ ಹೊತ್ತಿಗೆ ಯೂನಿಫಾರಮ್, ಗ್ರೇಟ್‍ ಕೋಟು ತೊಟ್ಟ ಆಢ್ಯನಾದ, ಸುಮಾರು ಐವತ್ತು ವಯಸಿನ ಮಹನೀಯ, ಕೊರಳಲ್ಲಿ ಪದಕ ಇದ್ದ ಅಧಿಕಾರಿ (ಪದಕ ಕಂಡು ಕ್ಯಾತರೀನ ಖುಷಿಯಾದಳು, ಅದು ಪೋಲೀಸನ ಮೇಲೂ ಪ್ರಭಾವ ಬೀರಿತು) ಕಾಣಿಸಿಕೊಂಡ ಹತ್ತಿರ ಬಂದವನೇ ಒಂದೂ ಮಾತಿಲ್ಲದೆ ಕ್ಯಾತರೀನಳ ಕೈಗೆ ಮೂರು ರೂಬಲ್‌ಮ ಹಸಿರು ನೋಟು ಕೊಟ್ಟ. ಅವನ ಮುಖದಲ್ಲಿ ನಿಜವಾದ ಕರುಣೆ ಇತ್ತು. ಅದನ್ನು ತೆಗೆದುಕೊಂಡ ಕ್ಯಾತರೀನ ಸೌಜನ್ಯದಿಂದ ವಂದಿಸಿದಳು.

‘ಥ್ಯಾಂಕ್ಸ್, ಸರ್,’ ಬಿಗುಮಾನದಿಂದ ಹೇಳಿದಳು. ‘ಯಾಕೆ ತಗೊಂಡವು ಅಂದರೆ… ದುಡ್ಡು ತಗೋ ಪೊಲೆಚ್ಕಾ. ನೋಡು, ಉದಾರವಾದ ಮನಸ್ಸಿನ ದೊಡ್ಡ ಮನುಷ್ಯರು ಇನ್ನೂ ಇದ್ದಾರೆ. ಕಷ್ಟದಲ್ಲಿರುವ ದೊಡ್ಡ ಮನೆಯ ಹೆಂಗಸಿಗೆ ಸಹಾಯ ಮಾಡುವುದಕ್ಕೆ ಸಿದ್ಧವಾಗಿದಾರೆ. ನೋಡಿ, ಸಾರ್, ಇವರು ಅನಾಥರು, ದೊಡ್ಡ ಮನೆತನದವರು. ಶ್ರೀಮಂತ ಕುಟುಂಬದವರೂ ಅಂತಲೂ ಅನ್ನಬಹುದು… ಆ ದರಿದ್ರ ಜನರಲ್ ಇದಾನಲ್ಲ, ಅವನಿಗೆ ಹೊಟ್ಟೆ ಕಿಚ್ಚು. ನನ್ನಿಂದ ತೊಂದರೆ ಆಯಿತು ಅಂತ ಕಾಲು ನೆಲಕ್ಕೆ ಅಪ್ಪಳಿಸಿದ. ‘ಯುವರ್ ಎಕ್ಸಲೆನ್ಸಿ, ನಿಮಗೆ ಸೆಮ್ಯೊನ್ ಮಾರ್ಮೆಲಡೋವ್ ಪರಿಚಯ ಇತ್ತು, ಅವನು ಸತ್ತ ದಿನವೇ ಅವ ಅವನ ಮಗಳನ್ನ, ಅವಮಾನ ಮಾಡಿದರು, ದುಷ್ಟರು. ಅಗೋ ಮತ್ತೆ ಅದೇ ಸೈನಿಕ! ಕಾಪಾಡಿ ನನ್ನ!’ ಅಧಿಕಾರಿಗೆ ಮೊರೆ ಇಟ್ಟಳು ‘ನನ್ನ ಪಾಡಿಗೆ ನನ್ನ ಯಾಕೆ ಬಿಡಲ್ಲ, ಈ ಸೈನಿಕ? ಆಗಲೇ ಒಬ್ಬನ ಕೈಯಿಂದ ತಪ್ಪಿಸಿಕೊಂಡು ಬಂದೆವು, ಮೆಶ್ಚಾನ್ಕಾಯಾ ಬೀದಿಯಿಂದ. ನಮ್ಮನ್ನ ಕೇಳಕ್ಕೆ ನೀನು ಯಾರು?’

‘ಮೇಡಂ, ಬೀದಿಯಲ್ಲಿ ಭಿಕ್ಷೆ ಬೇಡುವುದಕ್ಕೆ ನಿಷೇಧ ಇದೆ. ದಯವಿಟ್ಟು ಈ ಮಾನ ಹೋಗುವ ಕೆಟ್ಟ ಕೆಲಸ ನಿಲ್ಲಿಸಿ.’

‘ಅಂಥ ಕೆಲಸ ಮಾಡತಿರೋನು ನೀನು! ಹಾರ್ಮೋನಿಯಂ ಬಾರಿಸಿಕೊಂಡು ಹಾಡು ಹೇಳಿದರೆ ಏನಾಗತ್ತೆ?’

‘ಹಾಗೆ ಮಾಡಕ್ಕೆ ಪರ್ಮಿಟ್ಟು ಬೇಕು. ಮತ್ತೆ ನಿಮ್ಮ ವರ್ತನೆ ನೋಡಿದರೆ ಜನ ಕೆರಳತಾರೆ. ದಯವಿಟ್ಟು ನಿಮ್ಮ ಮನೆ ಎಲ್ಲಿದೆ, ಹೇಳಿ.’

‘ಏನು! ಪರ್ಮಿಟ್ಟಾ! ನನ್ನ ಗಂಡನ್ನ ಇವತ್ತು ಮಣ್ಣು ಮಾಡಿ ಬರತಾ ಇದೇನೆ, ಇದೇನಿದು ಪರ್ಮಿಟ್ಟು?’

‘ಮೇಡಂ. ಮೇಡಂ, ಸಮಾಧಾನ ಮಾಡಿಕೊಳ್ಳಿ. ಬನ್ನಿ, ನಾನು ಕರಕೊಂಡು ಹೋಗತೇನೆ. ಹೀಗೆಲ್ಲ ಬೀದಿಯಲ್ಲಿರಬಾರದು,’ ಅಧಿಕಾರಿ ಹೇಳುವುದಕ್ಕೆ ಪ್ರಯತ್ನಪಟ್ಟ.

‘ನಿಮಗೇನೂ ಗೊತ್ತಿಲ್ಲ, ಸರ್, ಏನೂ ಗೊತ್ತಿಲ್ಲ!’ ಕ್ಯಾತರೀನ ಚೀರಿ ಹೇಳಿದಳು. ‘ನಾವು ನೆವಸ್ಕ್ಕಿ ಪ್ರಾಸ್ಪೆಕ್ಟ್ ಗೆ ಹೋಗತೇವೆ—ಸೋನ್ಯಾ, ಸೋನ್ಯಾ! ಎಲ್ಲಿ ಹೋದಳು ಇವಳು? ಇವಳೂ ಅಳತಾ ಇದಾಳೆ! ಏನಾಯಿತು ನಿಮಗೆಲ್ಲ? ಕೋಲ್ಯಾ, ಲೆನ್ಯಾ, ಎಲ್ಲಿಗೆ ಹೋಗತಾ ಇದೀರಿ?ʼ ಇದ್ದಕಿದ್ದ ಹಾಗೆ ಭಯಗೊಂಡು ಕೇಳಿದಳು. ‘ಪೆದ್ದುಗಳು ನೀವು. ಎಲ್ಲಿಗೆ ಹೋಗತಾ ಇದಾರೆ, ಲೆನ್ಯಾ!…’

ಜನದ ಗುಂಪು ನೋಡಿ, ತಾಯಿಯ ಹುಚ್ಚಾಟ ನೋಡಿ ತಲೆ ಕೆಡುವಷ್ಟು ಭಯಗೊಂಡಿದ್ದ ಮಕ್ಕಳು ಕೊನೆಗೂ ತಮ್ಮನ್ನೆಲ್ಲ ಎಲ್ಲಿಗೋ ಕರಕೊಂಡು ಹೋಗಲು ಬಂದ ಪೋಲೀಸನನ್ನು ನೋಡಿ, ತಟ್ಟನೆ, ಎಲ್ಲರೂ ಮಾತಾಡಿಕೊಂಡರೋ ಅನ್ನುವ ಹಾಗೆ, ಒಬ್ಬರ ಕೈ ಒಬ್ಬರು ಹಿಡಿದು ಓಡಿ ಹೋದರು. ಕ್ಯಾತರೀನ ಚೀರಾಡುತ್ತ, ಅಳುತ್ತ ಅವರ ಬೆನ್ನು ಹತ್ತಿದಳು. ಓಡುತ್ತ, ಅಳುತ್ತ, ಉಸಿರಾಡಲು ಒದ್ದಾಡುತ್ತ ಅವಳು ಓಡುತ್ತಿದ್ದದ್ದು, ಅವಳ ಹಿಂದೆ ಪೋಲೆಚ್ಕಾ, ಸೋನ್ಯಾ ಓಡುತ್ತಿದ್ದದ್ದು ಕರುಣೆಯನ್ನೂ ವಿಕರಾಳ ಹಾಸ್ಯವನ್ನೂ ಉಕ್ಕಿಸುವಂಥ ದೃಶ್ಯ.

‘ಕರಕೊಂಡು ಬಾ ಅವರನ್ನ, ಕರಕೊಂಡು ಬಾ, ಸೋನ್ಯಾ! ಥೂ ಎಂಥಾ ಪೆದ್ದ ಮಕ್ಕಳು, ಕೃತಜ್ಞತೆ ಇಲ್ಲ!…ಪೋಲ್ಯಾ ಹಿಡಿ ಅವರನ್ನ… ನಿಮಗೋಸ್ಕರ ನಾನು ಏನು….’
ಓಡುತ್ತಿದ್ದವಳು ತಡವರಿಸಿ ಬಿದ್ದುಬಿಟ್ಟಳು.

ಸೋನ್ಯಾ ಅವಳ ಹತ್ತಿರ ಹೋಗಿ ನೋಡುತ್ತ, ‘ಗಾಯ ಆಗಿದೆ! ರಕ್ತ ಬರತಾ ಇದೆ! ಅಯ್ಯೋ ದೇವರೇ!’ ಅಂದಳು.

ಎಲ್ಲರೂ ಓಡಿ ಬಂದರು. ಸುತ್ತಲೂ ನಿಂತರು. ಮೊದಲು ಬಂದವರಲ್ಲಿ ರಾಸ್ಕೋಲ್ನಿಕೋವ್, ಸೆಮ್ಯೊನೊವಿಚ್ ಕೂಡ ಇದ್ದರು. ಅಧಿಕಾರಿ ದಡಬಡಿಸಿ ಬಂದ. ಪೋಲೀಸಿನವನೂ ‘ಬೇಡಪ್ಪಾ ಬೇಡ!’ ಅನ್ನುತ್ತ ಕೈ ಬೀಸಿಕೊಂಡು ಬಂದ. ವಿಷಯ ತೀರ ತೊಂದರೆ ಕೊಟ್ಟೀತು ಅನಿಸಿತು ಅವನಿಗೆ.

‘ಜಾಗ ಬಿಡಿ, ದೂರ ದೂರ ಹೋಗಿ,’ ಅನ್ನುತ್ತ ಜನರನ್ನು ಚದುರಿಸಿದ.

‘ಸಾಯತಾ ಇದಾಳೆ!’ ಯಾರೋ ಕೂಗಿದರು.

‘ಹುಚ್ಚು ಹಿಡಿದಿದೆ ಅವಳಿಗೆ!’ ಅಂದರು ಇನ್ನು ಯಾರೋ.

‘ಅಯ್ಯೋ, ದೇವರೇ!’ ‘ಚಿಕ್ಕ ಹುಡುಗನನ್ನೂ ಹುಡುಗೀನೂ ಹಿಡಿದರಾ?’ ‘ಬಂದರು.’ ‘ದೊಡ್ಡ ಹುಡುಗಿ ಅವರನ್ನ ಹಿಡಿದಳು.’
‘ಹುಚ್ಚು ಮಕ್ಕಳು!’ ಜನ ಹೀಗೆ ಮಾತಾಡಿದರು.

ಕ್ಯಾತರೀನಳನ್ನು ಗಮನಿಸಿ ನೋಡಿದಾಗ ಸೋನ್ಯಾ ಅಂದುಕೊಂಡ ಹಾಗೆ ಕಲ್ಲು ತಗಲಿ ಅವಳಿಗೆ ಗಾಯವೇನೂ ಆಗಿಲ್ಲ ಅನ್ನುವುದು ತಿಳಿಯಿತು. ಅವಳ ಬಾಯಿಂದ ಬಂದ ರಕ್ತ ಫುಟ್‍ಪಾತಿನ ಮೇಲೆ ಹರಿಯುತ್ತಿತ್ತು.

‘ನನಗೆ ಗೊತ್ತು, ಬಹಳ ನೋಡಿದೇನೆ, ಕ್ಷಯ ಇದು. ಹೀಗೆ ರಕ್ತ ಬಸಿದು ಉಸಿರು ಕಟ್ಟತ್ತೆ. ಮೊನ್ನೆ ತಾನೇ ನಮ್ಮ ಸಂಬಂಧಿಕರೊಬ್ಬರಿಗೆ ಹೀಗೇ ಆಗಿತ್ತು. ಒಂದೂವರೆ ಲೋಟದಷ್ಟು ರಕ್ತ ಹೋಗಿತ್ತು… ನಾವು ಏನೂ ಮಾಡಕ್ಕಾಗಲ್ಲ… ಸಾಯತಾ ಇದಾಳೆ…’ ರಾಸ್ಕೋಲ್ನಿಕೋವ್‌ನನ್ನೂ ಸೆಮ್ಯೊನೊವಿಚ್‌ನನ್ನೂ ನೋಡುತ್ತ ಅಧಿಕಾರಿ ಗೊಣಗಿದ.

‘ಹೀಗೆ, ಈ ಕಡೆ! ನಮ್ಮನೇಗೆ!’ ಸೋನ್ಯಾ ಬೇಡಿಕೊಳ್ಳುತ್ತಿದ್ದಳು. ‘ಇಲ್ಲೇ ನಮ್ಮನೆ!… ಇದೇ,, ಎರಡನೇದು, ಬೇಗ… ಬನ್ನಿ.. ಬೇಗ!… ಡಾಕ್ಟರನ್ನ ಕರೀರಿ!’ ಎಲ್ಲರ ಹತ್ತಿರ ಹೋಗಿ ಹೋಗಿ ಕೇಳಿಕೊಳ್ಳುತಿದ್ದಳು.

ಅಧಿಕಾರಿಯ ಪ್ರಯತ್ನದಿಂದ ಎಲ್ಲ ವ್ಯವಸ್ಥೆಯಾಯಿತು. ಪೋಲೀಸಿನವನು ಗಾಡಿಯನ್ನೂ ತರಿಸಿದ. ಕ್ಯಾತರೀನಳನ್ನು ಸೋನ್ಯಾಳ ಮನೆಗೆ ತಂದರು. ಕ್ಯಾತರೀನ ಮೂರ್ಛೆ ಹೋಗಿದ್ದಳು, ಸತ್ತಿದ್ದಾಳೆ ಅನಿಸುತ್ತಿತ್ತು. ರಕ್ತ ಸುರಿಯುತ್ತಿತ್ತು.. ಆದರೂ ನಿಧಾನವಾಗಿ ಎಚ್ಚರ ಮೂಡುತ್ತಿತ್ತು. ಸೋನ್ಯಾ, ರಾಸ್ಕೋಲ್ನಿಕೋವ್, ಸೆಮ್ಯೊನೊವಿಚ್‌ರ ಜೊತೆಗೆ ಅಧಿಕಾರಿ, ಪೋಲೀಸು ಕೂಡ ಸೋನ್ಯಾ ರೂಮಿಗೆ ಬಂದರು. ಅವರ ಜೊತೆಗೆ ಬಂದಿದ್ದ ಜನರ ಸಣ್ಣ ಗುಂಪನ್ನು ಪೋಲೀಸಿನವನು ಚದುರಿಸಿ ಬಾಗಿಲಿಂದಾಚೆಗೆ ಓಡಿಸಿದ. ಕೋಲ್ಯಾ ಲೆನ್ಯಾರ ಕೈ ಹಿಡಿದು ಕರೆದುಕೊಂಡು ಬಂದಳು ಪೋಲೆಚ್ಕಾ. ಮಕ್ಕಳು ನಡುಗುತ್ತಿದ್ದರು, ಅಳುತ್ತಿದ್ದರು. ಲಪೆರ್ನೌಮೋವ್‍ ಮನೆಯವರೂ ಬಂದರು. ಅವನು ಒಕ್ಕಣ್ಣಿನ ಕುಂಟ. ಚಿಕ್ಕದಾಗಿ ಕತ್ತರಿಸಿದ ಕೂದಲು, ಸೈಡ್ ವಿಸ್ಕರ್‍ ಗಳು. ಅವನ ಹೆಂಡತಿ ಯಾಕೋ ಸದಾ ಭಯಭೀತಳ ಹಾಗೆ ಕಾಣುತ್ತಿದ್ದಳು. ಜೊತೆಗೆ ಅವರ ಮಕ್ಕಳಿದ್ದವು. ಅವುಗಳ ಮುಖದಲ್ಲಿ ಆಶ್ಚರ್ಯವೆನ್ನುವುದು ಶಾಶ್ವತವಾಗಿ ಬೀಡುಬಿಟ್ಟಿದ್ದು, ಬಾಯಿ ಸದಾ ತೆರೆದೇ ಇರುತ್ತಿದ್ದವು. ಜನರ ಗುಂಪಿನ ಮಧ್ಯೆ ಸ್ವಿದ್ರಿಗೈಲೋವ್ ಕೂಡ ತಟ್ಟನೆ ಕಾಣಿಸಿಕೊಂಡ. ರಾಸ್ಕೋಲ್ನಿಕೋವ್‌ಗೆ ಆಶ್ಚರ್ಯವಾಯಿತು. ಅವನು ಎಲ್ಲಿಂದ ಬಂದ, ಜನದ ಗುಂಪಿನಲ್ಲಿ ನೋಡಿರಲಿಲ್ಲವಲ್ಲ ಅಂದುಕೊಂಡ.

ಡಾಕ್ಟರನ್ನು ಕರೆಯಿರಿ, ಪಾದ್ರಿಯನ್ನು ಕರೆಯಿರಿ ಅನ್ನುವ ಮಾತು ನಡೆದಿತ್ತು. ಡಾಕ್ಟರನ್ನ ಕರೆಸಿ ಉಪಯೋಗವಿಲ್ಲ ಎಂದು ಅಧಿಕಾರಿಯು ರಾಸ್ಕೋಲ್ನಿಕೋವ್ ಕಿವಿಯಲ್ಲಿ ಪಿಸುಗುಟ್ಟಿದರೂ ಡಾಕ್ಟರನ್ನು ಕರೆಸಿ ಎಂದು ಆಜ್ಞೆ ಮಾಡಿದ. ಸೋನ್ಯಾಗೆ ರೂಮನ್ನು ಬಾಡಿಗೆಗೆ ಕೊಟ್ಟಿದ್ದ ಕಾಪೆರ್ನೌಮೊವ್ ಡಾಕ್ಟರನ್ನು ಕರೆಯಲು ಸ್ವತಃ ಓಡಿ ಹೋದ.

ಕ್ಯಾತರೀನ ಸುದಾರಿಸಿಕೊಂಡಿದ್ದಳು. ರಕ್ತ ಸುರಿಯುವುದು ನಿಂತಿತ್ತು. ಕ್ಯಾತರೀನ ನೋವಿನಲ್ಲಿದ್ದರೂ ಸೋನ್ಯಾ ಹೇಗೆ ಬಿಳಿಚಿ, ನಡುಗುತ್ತ ನಿಂದಿದ್ದಾಳೆ, ಹಣೆಯ ಮೇಲಿನ ಬೆವರು ಹನಿಯನ್ನು ಕರ್ಚೀಫಿನಲ್ಲಿ ಒರೆಸಿಕೊಳ್ಳುತ್ತಿದ್ದಾಳೆ ಅನ್ನುವುದನ್ನು ಗಮನಿಸಿದಳು. ‘ಕೂರಿಸಿ’ ಅಂದಳು. ಇಬ್ಬರ ನೆರವಿನಿಂದ ಎದ್ದು ಕೂತಳು.

‘ಮಕ್ಕಳೆಲ್ಲಿ?’ ದುರ್ಬಲ ದನಿಯಲ್ಲಿ ಕೇಳಿದಳು. ‘ಕರಕೊಂಡು ಬಂದೆಯಾ, ಪೋಲ್ಯಾ? ಅಯ್ಯೋ, ಪೆದ್ದುಗಳು! ಯಾಕೆ ಓಡಿ ಹೋದಿರಿ?… ಅಯ್ಯೋ!’ ಅವಳ ಬತ್ತಿದ ತುಟಿಗೆ ರಕ್ತ ಮೆತ್ತಿದ್ದು ಹಾಗೇ ಇತ್ತು. ಕಣ್ಣು ಹೊರಳಿಸಿ ನೋಡಿದಳು. ‘ಸೋನ್ಯಾ! ನಿನ್ನ ಮನೆ ಹೀಗಿದೆ! ಇಲ್ಲಿಗೆ ಯಾವತ್ತೂ ಬರಲೂ ಇಲ್ಲ ನಾನು… ಈಗ ಬಂದೆ…’ ನೋವು ಪಡುತ್ತ ಸೋನ್ಯಾಳನ್ನು ನೋಡಿದಳು.

‘ನಿನ್ನ ರಕ್ತ ಹೀರಿಬಿಟ್ಟೆವು ಸೋನ್ಯಾ ನಾವೆಲ್ಲ… ಪೋಲ್ಯಾ, ಲೆನ್ಯಾ, ಕೋಲ್ಯ, ಬನ್ನಿ ಇಲ್ಲಿ… ಸರಿ, ಸೋನ್ಯಾ ಇಗೋ ಇವರನ್ನ ನಿನ್ನ ಕೈಗೆ ಒಪ್ಪಿಸತಾ ಇದೇನೆ. ಸಾಕಾಯಿತು ನನಗೆ. ಆಟ ಮುಗೀತು…’ ಕೆಮ್ಮಿದಳು. ‘ಮಲಗಿಸಿ ನನ್ನ… ತಣ್ಣಗೆ ಪ್ರಾಣ ಬಿಡಬೇಕು…’
ದಿಂಬಿನ ಮೇಲೆ ತಲೆ ಇರಿಸಿ ಮಲಗಿಸಿದರು.

‘ಏನು? ಪಾದ್ರೀನಾ?… ಬೇಕಾಗಿಲ್ಲ… ಪಾದ್ರಿಗೆ ಕೊಡೋದಕ್ಕೆ ದುಡ್ಡೆಲ್ಲಿಂದ ತರಲಿ?… ನಾನು ಯಾವ ಪಾಪ ಕೂಡ ಮಾಡಿಲ್ಲ.! ದೇವರು ನನ್ನ ಕ್ಷಮಿಸಬೇಕು… ನಾನೆಷ್ಟು ನೋವು ಪಟ್ಟಿದೇನೆ ಅವನಿಗೇ ಗೊತ್ತು… ದೇವರಿಗೆ ಗೊತ್ತಿಲ್ಲ ಅನ್ನೋ ಹಾಗೆ ಆಡತಾರೆ…!’

ಚಡಪಡಿಕೆಯ ಸನ್ನಿ ಹಿಡಿದಿತ್ತು. ಆಗಾಗ ಬೆಚ್ಚಿ ಎಚ್ಚರವಾಗುತ್ತಿದ್ದಳು. ಸುತ್ತಲೂ ನೋಡಿ ಎಲ್ಲರ ಗುರುತು ಹಿಡಿಯುತ್ತಿದ್ದಳು. ಒಂದು ಕ್ಷಣ. ಮತ್ತೆ ಎಚ್ಚರ ತಪ್ಪಿ ಸನ್ನಿ ಹಿಡಿಯುತ್ತಿತ್ತು. ಗೊಗ್ಗರು ದನಿ ಬರುತ್ತಿತ್ತು. ಹಂಟಲಲ್ಲಿ ಏನೋ ಸಿಕ್ಕಿಕೊಂಡ ಹಾಗೆ ಕಷ್ಟಪಟ್ಟು ಉಸಿರಾಡುತ್ತಿದ್ದಳು.

‘ಯುವರ್ ಎಕ್ಸಲೆನ್ಸೀ, ಈ ಅಮಾಲಿಯ ಲುಡ್ವಿಗೊವ್ನಾ…’ ಒಂದೊಂದು ಪದಕ್ಕೂ ಉಸಿರೆಳೆದುಕೊಳ್ಳುತ್ತ ಮಾತಾಡಿದಳು.

‘ಅಯ್ಯೋ! ಲೆನ್ಯಾ, ಕೋಲ್ಯಾ! ಸೊಂಟದ ಮೇಲೆ ಕೈ! ಬೇಗ ಬೇಗ! ಹಾಡತೀನಿ… ಕಾಲು ಹಾಕಿ ನೀವು…
ಮುತ್ತಿವೆ, ವಜ್ರ ವೈಢೂರ್ಯ ಇವೆ

ಮುಂದಕ್ಕೇನು? ನಾವೆಲ್ಲ ಹಾಡಿದ್ದಿದ್ದರೆ ಚೆನ್ನಾಗಿರತಿತ್ತು.
ಚೆಲುವಾದ ಕಣ್ಣಿವೆ ನಿನಗೆ,
ಇನ್ನೇನು ಬೇಕು ಹುಡುಗೀ
ಬಾಯಿಗೆ ಬಂದಿದ್ದು ಹೇಳತಾನೆ, ಪೆದ್ದಾ! ಇನ್ನೊಂದು ಹಾಡು…
ನಡು ಹಗಲ ಬಿಸಿಲಲ್ಲಿ, ಕಣಿವೆಯ ಇಳಿಜಾರಲ್ಲೀ…

ಆ ಹಾಡು ನನಗೆ ಎಷ್ಟೊಂದು ಇಷ್ಟ ಆಗತಿತ್ತು! ಪೊಲೆಚ್ಕಾ!… ಗೊತ್ತಾ… ನಿಮ್ಮಪ್ಪ.. ಆ ಹಾಡು ಹೇಳತಿದ್ದರು, ನನ್ನ ಮದುವೆ ಆಗಕ್ಕೂ ಮೊದಲು… ಎಷ್ಟ್ ಚೆನ್ನಾಗಿತ್ತು ಆಗ!… ನಾವೆಲ್ಲ ಹಾಡಕ್ಕೆ ಆಗಿದ್ದಿದ್ದರೆ ಚೆನ್ನಾಗಿರತಿತ್ತು. ಮುಂದಕ್ಕೇನೋ ಇದೆ, ಮರೆತು ಹೋಗಿದೆ…. ಜ್ಞಾಪಿಸಿರಿ ಯಾರಾದರೂ!’ ತೀರ ತಳಮಳಪಡುತ್ತಿದ್ದಳು. ಏಳುವುದಕ್ಕೆ ಹೆಣಗುತ್ತಿದ್ದಳು. ಕೊನೆಗೆ, ಭಯಂಕರವಾದ ಗೊಗ್ಗರು ದನಿಯಲ್ಲಿ ಕಷ್ಟಪಟ್ಟು ಹಾಡಿದಳು. ಒಂದೊಂದು ಮಾತಿಗೂ ಉಸಿರು ಕಟ್ಟುತಿತ್ತು. ಅವಳೊಳಗೆ ಭಯ ಬೆಳೆಯುತ್ತಿತ್ತು.

ನಡು ಹಗಲ ಬಿಸಿಲಲ್ಲಿ, ಅಲ್ಲಿ, ಕಣಿವೆ ನಾಡಲ್ಲಿ
ನನ್ನೆದೆಗೆ ಬಿತ್ತು ಗುಂಡು

‘ಯುವರ್ ಎಕ್ಸಲೆನ್ಸೀ!’ ಇದ್ದಕಿದ್ದ ಹಾಗೆ ಎದೆ ಸೀಳುವಂತೆ ಚೀರಿದಳು. ಆ ಕೂಗು ಅವಳ ಕಣ್ಣೀರಲ್ಲೇ ಕಳೆದು ಹೋಯಿತು. ‘ತಬ್ಬಲಿ ಮಕ್ಕಳನ್ನ ಕಾಪಾಡಿ! ಮಾರ್ಮೆಲಡೋವ್ ಮನೆಯ ಉಪ್ಪಿನ ಋಣ ಇದೆ ನಿಮಗೆ… ನಾವೂ ಸಾಹುಕಾರರೇ ಅನ್ನಬಹುದು… ಖೊಖ್!’ ತಟ್ಟನೆ ಮೆಟ್ಟಿಬಿದ್ದಳು. ಎಚ್ಚರವಾಯಿತು. ಭಯದಲ್ಲಿ ಸುತ್ತಲೂ ನೋಡಿದಳು. ಸೋನ್ಯಾಳ ಗುರುತು ಹತ್ತಿತ್ತು.

‘ಸೋನ್ಯಾ, ಸೋನ್ಯಾ!’ ದುರ್ಬಲವಾದ ದನಿಯಲ್ಲಿ ಅಕ್ಕರೆಯಿಂದ ಕರೆದಳು, ಅವಳನ್ನ ಇಲ್ಲಿ ಕಂಡು ಆಶ್ಚರ್ಯವಾಯಿತು ಅನ್ನುವ ಹಾಗೆ. ‘ಸೋನ್ಯಾ, ಡಿಯರ್, ನೀನೂ ಬಂದಿದೀಯಾ ಇಲ್ಲಿಗೆ?’
ಮತ್ತೆ ಎಬ್ಬಿಸಿ ಕೂರಿಸಿದರು.

‘ಸಾಕು!… ಮುಗೀತು ಇನ್ನ!… ಹೋಗ್ತೀನಿ, ಪಾಪದ ಹುಡುಗಿ! ಇನ್ನ ಈ ಕುದುರೇಗೆ ಗಾಡಿ ಎಳಯಕ್ಕೆ ಆಗಲ್ಲ! ಆಗಲ್ಲ…’ ಹತಾಶೆ, ದ್ವೇಷ ಇತ್ತು ದನಿಯಲ್ಲಿ. ತಲೆ ದಿಂಬಿನ ಮೇಲೆ ಬಿತ್ತು.

ಮತ್ತೆ ಮರೆವಿನಲ್ಲಿ ಅದ್ದಿಹೋದಳು. ಈ ಮೈಮರೆವು ಬಹಳ ಹೊತ್ತು ಇರಲಿಲ್ಲ. ರಕ್ತಹೀನವಾದ ಸೊರಗಿದ, ನಸು ಹಳದಿ ಬಣ್ಣದ ಮುಖ ಹಿಂದಕ್ಕೊರಗಿತು. ಬಾಯಿ ತೆರೆಯಿತು. ಕಾಲು ನೇರವಾಗಿ ಮೂರ್ಛೆ ಬಂದವರ ಹಾಗೆ ಅದುರಿ ಹಾಸಿಗೆಗೆ ಬಡಿದವು. ಆಳವಾಗಿ ಉಸಿರೆಳೆದುಕೊಂಡಳು. ಸತ್ತು ಹೋದಳು.

ಸೋನ್ಯಾ ಅವಳ ಮೇಲೆ ಬಿದ್ದು ಅಪ್ಪಿಕೊಂಡು ನಿಶ್ಚಲವಾಗಿದ್ದಳು. ಅವಳ ತಲೆ ಸತ್ತ ಕ್ಯಾತರೀನಳ ಬತ್ತಿದೆದೆಯ ಮೇಲೆ ಒರಗಿತ್ತು. ಪೋಲೆಚ್ಕ ಅಮ್ಮನ ಪಕ್ಕದಲ್ಲಿ ಮೊಳಕಾಲೂರಿ ಕೂತು ಅಮ್ಮನ ಪಾದಕ್ಕೆ ಮುತ್ತಿಟ್ಟಳು.

ಬಿಕ್ಕುತ್ತಿದ್ದ ಕೋಲ್ಯಾ, ಲೆನ್ಯಾರಿಗೆ ಏನಾಯಿತೆಂದು ಅರ್ಥವಾಗದಿದ್ದರೂ ಏನೋ ಭಯಂಕರವಾದದ್ದು ನಡೆದಿದೆ ಅನಿಸಿ ಒಬ್ಬರ ಭುಜ ಒಬ್ಬರು ಹಿಡಿದು ಒಬ್ಬರ ಕಣ್ಣಲ್ಲಿ ಇನ್ನೊಬ್ಬರು ಕಣ್ಣಿಟ್ಟು ನೋಡುತ್ತ ಇದ್ದಕಿದ್ದ ಹಾಗೆ ಒಟ್ಟಿಗೆ, ಬಾಯಿ ತೆಗೆದು ಗೊಳೋ ಎಂದು ಅತ್ತರು. ಅವರು ಇನ್ನೂ ಕೆಂಪು ಪೇಟ, ಆಸ್ಟ್ರಿಚ್ ರೆಕ್ಕೆ ಸಿಕ್ಕಿಸಿದ ನೈಟು ಕ್ಯಾಪು ತೊಟ್ಟೇ ಇದ್ದರು.

ಆ ಸರ್ಟಿಫಿಕೇಟ್ ಆಫ್ ಮೆರಿಟ್ ಅದು ಹೇಗೆ ಇದ್ದಕಿದ್ದ ಹಾಗೆ ಕ್ಯಾತರೀನಳ ಹಾಸಿಗೆಯ ಮೇಲೆ, ತಲೆ ದಿಂಬಿನ ಹತ್ತಿರ ಬಂದಿತ್ತು? ರಾಸ್ಕೋಲ್ನಿಕೋವ್ ಅದನ್ನು ನೋಡಿದ.

ರಾಸ್ಕೋಲ್ನಿಕೋವ್ ಕಿಟಕಿಯ ಹತ್ತಿರ ಹೋದ. ಸೆಮ್ಯೊನೊವಿಚ್ ಅವನ ಹಿಂದೆಯೇ ಹೆಜ್ಜೆ ಹಾಕಿದ.
‘ಹೋಗಿಬಿಟ್ಟಳು!’ ಅಂದ ಸೆಮ್ಯೊನೊವಿಚ್.

‘ರೋಡಿಯೋನ್ ರೊಮ್ಯಾನೊವಿಚ್, ನಿನ್ನ ಜೊತೆ ಒಂದೆರಡು ಮಾತು ಆಡುವುದಿತ್ತು,’ ಸ್ವಿದ್ರಿಗೈಲೋವ್ ಹತ್ತಿರಕ್ಕ ಬಂದ. ಸೆಮ್ಯೊನೊವಿಚ್ ಅವನಿಗೆ ಜಾಗ ಬಿಟ್ಟುಕೊಟ್ಟು ಸೂಕ್ಷ್ಮವಾಗಿ ಹಿಂದೆ ಸರಿದು ಮರೆಯಾದ. ಆಶ್ಚರ್ಯಗೊಂಡಿದ್ದ ರಾಸ್ಕೋಲ್ನಿಕೋವ್‌ನನ್ನು ಮತ್ತಷ್ಟು ಮೂಲೆಗೆ ಎಳೆದುಕೊಂಡು ಹೋದ ಸ್ವಿದ್ರಿಗೈಲೋವ್.

‘ಹೆಣ ಮಣ್ಣು ಮಾಡುವುದು, ಅಂತ್ಯ ಸಂಸ್ಕಾರ ಇತ್ಯಾದಿ ಎಲ್ಲಾ ನಾನು ನೋಡಿಕೊಳ್ಳತೇನೆ. ಗೊತ್ತಿದೆಯಲ್ಲ, ದುಡ್ಡಿನ ವಿಚಾರ ಅದೆಲ್ಲಾ. ನಿನಗೆ ಅವತ್ತೇ ಹೇಳಿದ ಹಾಗೆ ನನ್ನ ಹತ್ತಿರ ದುಡ್ಡಿದೆ. ಇಬ್ಬರು ಸಣ್ಣ ಮಕ್ಕಳನ್ನೂ ಪೋಲೆಚ್ಕಾನೂ ಯಾವುದಾದರೂ ಅನಾಥಾಶ್ರಮಕ್ಕೆ ಸೇರಿಸತೇನೆ. ಒಳ್ಳೆ ಜಾಗ ನೋಡತೇನೆ. ಒಬ್ಬೊಬ್ಬರ ಹೆಸರಿಗೂ ಹದಿನೈದು ಸಾವಿರ ರೂಬಲ್ ಇಡತೇನೆ. ಅವರು ವಯಸ್ಸಿಗೆ ಬರುವವರೆಗೆ ಖರ್ಚಿಗೆ ಆಗತ್ತೆ. ಸೋನ್ಯಾ ಅವರ ವಿಚಾರದಲ್ಲಿ ನೆಮ್ಮದಿಯಿಂದ ಇರಬಹುದು. ಅವಳನ್ನ ಈಗ ಅವಳು ಇರುವ ಕೆಸರು ಹೊಂಡದಿಂದ ಮೇಲಕ್ಕೆ ತರತೇನೆ. ಅವಳು ಒಳ್ಳೆಯ ಹುಡುಗಿ, ಅಲ್ಲವಾ? ದಯವಿಟ್ಟು ನಿಮ್ಮ ತಂಗಿ ಅವದೋತ್ಯ ರೊಮಾನೊವಿಚ್‌ಗೆ ಹೇಳಿ.—ಅವಳ ಪಾಲಿನ ಹತ್ತು ಸಾವಿರ ರೂಬಲ್ ಹೀಗೆ ಬಳಸಿದೆ ಅಂತ.’

‘ಇಷ್ಟೊಂದು ಉದಾರವಾಗಿರುವುದಕ್ಕೆ ಕಾರಣ ಏನು?’ ರಾಸ್ಕೋಲ್ನಿಕೋವ್ ಕೇಳಿದ.

‘ಹ್ಞಾ! ಎಷ್ಟೊಂದು ಅಪನಂಬಿಕೆಯ ಮನುಷ್ಯ!’ ಅನ್ನುತ್ತ ನಕ್ಕ ಸ್ವಿದ್ರಿಗೈಲೋವ್. ‘ನನ್ನ ಹತ್ತಿರ ದುಡ್ಡಿದೆ ಅಂತ ಹೇಳಿದ್ದೆ ನಿನಗೆ. ಮನುಷ್ಯತ್ವ ಇಟ್ಟುಕೊಂಡು ಸರಳವಾಗಿ ಈ ಕೆಲಸ ಮಾಡಕ್ಕೆ ಅವಕಾಶ ಕೊಡತೀಯ ತಾನೇ?’ ಸತ್ತ ಹೆಂಗಸಿನತ್ತ ಬೆರಳು ತೋರುತ್ತ ‘ಬಡ್ಡಿಗೆ ಸಾಲ ಕೊಡುತ್ತಿದ್ದ ಮುದುಕೀ ಥರ ಅವಳು ಹೇನು ಅಲ್ಲ, ಅಲ್ಲವಾ? ಒಪ್ಪಿಕೊಳ್ಳುತ್ತೀಯ. ‘ಪೀಟರ್ ಪೆಟ್ರೊವಿಚ್ ಬದುಕಿ ದುಷ್ಟ ಅಸಹ್ಯ ಕೆಲಸ ಮಾಡುವುದು ಒಳ್ಳೆಯದೋ ಅಥವಾ ಅವಳು ಸಾಯುವುದೋ? ಉದಾಹರಣೆಗೆ, ನನ್ನ ಸಹಾಯ ಇರದಿದ್ದರೆ ಪೋಲೆಚ್ಕಾ ಕೂಡ ಅದೇ ದಾರಿ ಹಿಡಿಯಬೇಕಾಗತ್ತೆ…’

ತಮಾಷೆ ಅನ್ನುವ ಹಾಗೆ ಕಣ್ಣು ಮಿಟುಕಿಸುತ್ತ, ಖುಷಿಯ ಗುಟ್ಟು ಅನ್ನುವ ಹಾಗೆ ಮಾತಾಡತಾ ಇದ್ದರೂ ಅವನ ಕಣ್ಣು ಮಾತ್ರ ರಾಸ್ಕೋಲ್ನಿಕೋವ್‌ನ ಮೇಲೆಯೇ ಇತ್ತು.

ತಾನು ಸೋನ್ಯಾಗೆ ಹೇಳಿದ ಅವವೇ ಮಾತುಗಳನ್ನು ಅವನ ಬಾಯಲ್ಲಿ ಕೇಳಿ ರಾಸ್ಕೋಲ್ನಿಕೋವ್ ಬಿಳಿಚಿಕೊಂಡ, ಮೈ ತಣ್ಣಗಾಯಿತು. ಎರಡು ಹೆಜ್ಜೆ ಹಿಂದೆ ಸರಿದು ಮೃಗದ ಹಾಗೆ ಸ್ವಿದ್ರಿಗೈಲೋವ್ನನ್ನು ನೋಡಿದ.

‘ಹೇ-ಗೆ ಗೊತ್ತು ನಿ-ನಗೆ?’ ಉಸಿರಾಟ ಕೂಡ ಕಷ್ಟ ಅನಿಸಿ ಪಿಸುದನಿಯಲ್ಲಿ ಕೇಳಿದ.

‘ನಾನು ಇಲ್ಲೇ ಇರೋದು. ಗೋಡೆಯ ಆ ಬದಿಯಲ್ಲಿ. ಮೇಡಮ್ ರೆಶ್ಲಿಚ್‍ ಕಪೆರನೌಮೋವ್‌ಗೆ ಸೇರಿದ ರೂಮಿನಲ್ಲಿ. ಅಗೋ ಅಲ್ಲಿದ್ದಾಳೆ, ಅವನು ಅಲ್ಲಿದಾನೆ, ನನ್ನ ಆಪ್ತ ಮಿತ್ರ. ನಾನು ಸೋನ್ಯಾಳ ನೆರೆಯವನು.’

‘ನೀನು?’

‘ನಾನೇ,’ ಸ್ವಿದ್ರಿಗೈಲೋವ್ ಮೈ ಕುಲುಕುವ ಹಾಗೆ ನಗುತ್ತ ಹೇಳಿದ. ‘ಪ್ರಮಾಣ ಮಾಡಿ ಹೇಳತೇನೆ, ರೋಡಿಯೋನ್ ರೊಮ್ಯಾನೊವಿಚ್, ನಿನ್ನ ಬಗ್ಗೆ ನನಗೆ ಭಯಂಕರ ಕುತೂಹಲ, ಆಸಕ್ತಿ ಹುಟ್ಟಿವೆ. ನಾವು ಬಹಳ ಹತ್ತಿರವಾಗತೇವೆ, ಆಪ್ತರಾಗತೇವೆ ಅಂತ ಯಾವತ್ತೋ ಭವಿಷ್ಯ ಹೇಳಿದ್ದೆ ನಿನಗೆ. ಈಗ ಆಪ್ತರಾಗಿಬಿಟ್ಟೆವು. ನಾನೆಂಥ ಸ್ನೇಹಮಯಿ ಗೊತ್ತಾಯಿತಲ್ಲ. ನನ್ನ ಜೊತೆ ಬದುಕುವುದು ಕಷ್ಟ ಅಲ್ಲ ಅಂತ ನಿನಗೇ ಗೊತ್ತಾಗತ್ತೆ…’