ಕಳೆದುಹೋದ ಕನಸುಗಳೇ
ಕಾಗೆಗಳ ಕೂಗಿಗೆ
ಗೂಬೆಗಳ ಗೂಂಗುಟ್ಟುವಿಕೆಗೆ
ಇನ್ನಿಲ್ಲವಾದ ಕನಸುಗಳೇ
ಮತ್ತೆ ಹುಟ್ಟಿಬನ್ನಿ
ಕಣ್ಣಿನೊಳಗೆ ಇಳಿದು
ಹೃದಯದಾಳದಲ್ಲಿ ಬೇರುಬಿಟ್ಟು
ಹೆಮ್ಮರವಾಗಿ ಬೆಳೆಯುವಂತೆ
ಮತ್ತೆ ಹುಟ್ಟಿಬನ್ನಿ
ನೀವಿಲ್ಲದೆ ಚಲಿಸದು ಕಾಲ್ಗಳು
ಕಳೆಯದು ನನ್ನ ಒಂದಿರುಳು
ದಾರಿ ದೂರವಾದೀತು
ಎದೆಯು ಭಾರವಾದೀತು
ಮತ್ತೆ ಹುಟ್ಟಿಬನ್ನಿ ಕನಸುಗಳೇ
ಅಜ್ಞಾನ ತಮವನ್ನು ಕೊಂದುಹಾಕುವಂತೆ
ಮಾತ್ಸರ್ಯದ ಎದೆಗೂಡಿಗೆ ಬೆಂಕಿಯಿಡುವಂತೆ
ಹರಕು ಬಾಯಿಗಳಿಗೆ ಹೊಲಿಗೆ ಹಾಕುವಂತೆ
ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.