ಅಂಕುರದ ಒಳಗಣ್ಣು

ಕಾಡಿಗೆಯ ಕಡುಗತ್ತಲ ಸೀಳಿ
ಕೋಲ್ಮಿಂಚಿನಂತೆ ಪ್ರತ್ಯಕ್ಷನಾದವ;
ಮನಮೋಹನ, ಬೆಳಕಿನ ಪುಂಜ
ಮಗುವೆ ಅವ? ಅವತರಿಸಿದಭಯ

ತೊನೆಯುತಿವೆ ತೆನೆತೆನೆಯು ಕೊಂಬೆರೆಂಬೆಯ ಹೂವು
ಘಮಿಸಿ ಪರಿಮಳಿಸಲು ಕಾಡುಮೇಡು;
ಎಲೆಮನೆಯ ಒಳಗೊಂದು ಹಚ್ಚಿ ನಚ್ಚುಗೆ ದೀಪ
ಹಂಬಲದ ಗೂಡೊಳಗೆ ಹಕ್ಕಿ ಹಾಡು

ಕೆನ್ನೆ ಕನ್ನೈದಿಲೆಗೆ ದುಂಬಿ ಅಲಕೆಯ ಜೊಂಪೆ
ಸಾಕಾರ ಸೌಂದರ್ಯದೊನಪು;
ಅದೋ, ಸುಳಿವು ಹೊಳಹಾಗಿ ಮೂಡುತಿದೆಯಲ್ಲಿ
ಶತಕೋಟಿ ಹರಕೆಗಳ ಮುಡಿಪು

ಶ್ಯಾಮಮೇಘಕೆ ಸೋತು ಒಲಿದು ನರ್ತಿಸಿ ನವಿಲು
ತಾನಾಗಿ ಎಸೆದಂತೆ ಮಿಸುನಿ ಮುಕುಟ
ಘನನೀಲ ಮೈವೆತ್ತ ಅರಳುಗಣ್ಣಿನ ಒಡೆಯ
ಸುತ್ತ ಮುತ್ತುವ ರಾಸಗೋಪಿಕೆಯರೊಡೆಯ

ಯಾವ ಯುಗಭಿತ್ತಿಯಲಿ ಮೂಡಿತೀ ತೇಜ
ಧರ್ಮನೇಗಿಲು ಉತ್ತ ಭೌಮಬೀಜ
ಮೊಳೆತು ಹೆಮ್ಮರವಾಗಿ, ಭಕ್ತಿಬಾಂದಳದಲ್ಲಿ ಬಿತ್ತರಿಸಿತೋ
ಭಾವಸೋಜಿಗವಾಗಿ, ಅಂಕುರದ ಒಳಗಣ್ಣು
ಚಿತ್ತದಾಕಾಶವನೆ ಎತ್ತರಿಸಿತೋ

ಹಸುಕರುವ ಲಾಲಿಸುವ, ಅಸುರರನು ಹಣಿಯುವ
ಹೊಸಬೆಣ್ಣೆ ಮೆಲ್ಲುತ್ತ ಕಾಡಿ ಪೀಡಿಸುವ
ಬನ್ನಿ, ಮಥುರೆ, ಗೋಕುಲ, ಬೃಂದಾವನದ ಉಪವನದಿ
ಕೊಳಲ ಕೃಷ್ಣನ ರಮಿಸಿ ಮುದ್ದುಗರೆವ