ಅದೊಂದು ಶನಿವಾರ. ರಾಮು ನಾಯಿ ಉಪವಾಸ ಮಾಡುತ್ತದೆ. ಇಡೀ ದಿನ ಯಾವ ಆಹಾರ ಕೊಟ್ಟರೂ ತಿನ್ನುವುದಿಲ್ಲ. ಮನೆಯ ಸದಸ್ಯರು ವಾರದ ಉಪವಾಸ ಮಾಡುತ್ತಿದ್ದರು. ಅದನ್ನು ಅನುಕರಣೆ ಮಾಡಿ ನಾಯಿಯೂ ಉಪವಾಸ ಮಾಡಿರಬಹುದು. ಬಾಲಕರು ಮನೆಯಿಂದ ಹೊರಗೆ ಹೊರಟರೆ ಅವರಿಗೆ ಬೆಂಗಾವಲಾಗಿ ಹಾಗೂ ಮನೆಗೆ ಮಕ್ಕಳನ್ನು ವಾಪಸ್ಸು ಕರೆತರಲು ನಾಯಿಗಳು ಅವರನ್ನು ಹಿಂಬಾಲಿಸಿ ಹೊರಟುಬಿಡುತ್ತಿದ್ದವು. ಮಕ್ಕಳಿಗೆ ಮನೆಯ ದಾರಿ ತಿಳಿಯದಾದಾಗ ಮುದ್ದುನಾಯಿಗಳು ದಾರಿ ತೋರಿಸುತ್ತಾ ಮನೆಗೆ ಕರೆತಂದ ಸಂದರ್ಭವಿದೆ.
ವೇದವತಿ ಕೋದಂಡರಾಮ್ ತಮ್ಮ ಮನೆಯ ಸಾಕುಪ್ರಾಣಿಗಳ ಕುರಿತು ಬರೆದ “ಯಾವ ಜನ್ಮದ ಮೈತ್ರಿ” ಕೃತಿಯ ಕುರಿತು ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ ಬರಹ
“ಎಲ್ಲಾ ನಾಯಿಗಳೂ ತುಂಬಾ ಅನ್ಯೋನ್ಯತೆಯಿಂದ ಕೂಡಿ, ನಮ್ಮೊಂದಿಗೆ ಜೀವನ ಪೂರ್ತಿ ಸಹಕಾರಿಗಳಾಗಿ, ಸಹವರ್ತಿಗಳಾಗಿ ನಮಗಾಗಿ ಪ್ರಾಣವನ್ನರ್ಪಿಸಿ, ಕೃತಾರ್ಥರಾಗಿ ನಮಗೆ ಮಹತ್ತಾದ ಉಪಕಾರವನ್ನಿತ್ತು ಸಲಹಿ ಕಾಪಾಡಿದ ಮಹಾನುಭಾವರು, ನಮ್ಮ ಮನೆಯ ಸಾಕುನಾಯಿಗಳು” ಎನ್ನುತ್ತಾರೆ ಲೇಖಕಿಯವರಾದ ವೇದವತಿ ಕೋದಂಡರಾಮ್ ಅವರು ತಮ್ಮ ‘ಯಾವ ಜನ್ಮದ ಮೈತ್ರಿ’ ಎಂಬ ಕೃತಿಯಲ್ಲಿ. ತಮ್ಮ ಮನೆಯಲ್ಲಿ ತಾವು ಸಾಕಿದ್ದ ಮಹಾನುಭಾವ ‘ಶ್ವಾನನಿಷ್ಟೆ’ ತೋರಿದ ನಾಯಿಗಳಿಗೆಲ್ಲಾ ಕೃತಜ್ಞತೆಗಳನ್ನರ್ಪಿಸಲಿಕ್ಕಾಗಿಯೇ ರೂಪುಗೊಂಡ ಕೃತಿಯಿದು. ಖ್ಯಾತ ಸಾಹಿತಿಗಳಾದ ಪ್ರೊ. ಎಸ್. ಜಿ. ಸಿದ್ದರಾಮಯ್ಯನವರ ಮುನ್ನುಡಿ ಮತ್ತು ಲಕ್ಷ್ಮಣ ಕೊಡಸೆಯವರ ಬೆನ್ನುಡಿಯಿದೆ.
ಕೃತಿಯ ವಿವರಗಳಲ್ಲಿ ಲೇಖಕಿಯವರ ಪರಿಚಯದ ಅನಾವರಣವಾಗುತ್ತದೆ. ರಾವ್ ಸಾಹೇಬ್ ನೆಟ್ಟಕಲ್ಲಪ್ಪನವರ ಪುತ್ರರಾದ ಹಾಗೂ ಪ್ರಜಾವಾಣಿ ಪತ್ರಿಕೆಯ ಸ್ಥಾಪಕರಾದ ಕೆ. ಎನ್. ಗುರುಸ್ವಾಮಿಯವರು ವೇದವತಿಯವರ ದೊಡ್ಡಪ್ಪ. ತಿಪಟೂರು ಮೂಲದ ವೇದವತಿಯವರು ಮದುವೆಯಾಗಿ 1948 ರಲ್ಲಿ ಬೆಂಗಳೂರಿಗೆ ಕಾಲಿಡುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ಸುಮಾರು 76 ವರ್ಷಗಳ ಕಾಲ ತಮ್ಮ ಮನೆಯಲ್ಲಿ ಸಾಕಿದ ಮುದ್ದುನಾಯಿಗಳೊಂದಿಗಿನ ಅನ್ಯೋನ್ಯತೆಯನ್ನು ‘ಯಾವ ಜನ್ಮದ ಮೈತ್ರಿ’ಯಲ್ಲಿ ಹೃದಯಸ್ಪರ್ಶಿಯಾಗಿ ವಿವರಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಬ್ರಿಟನ್ನಿನ ಪಶುವೈದ್ಯರಾದ ಡಾ. ಜೇಮ್ಸ್ ಹೆರಿಯಟ್ ಅವರು ತಮ್ಮ ಪಶುವೈದ್ಯ ವೃತ್ತಿಯ ಅನುಭವಗಳನ್ನು ‘ಆಲ್ ಥಿಂಗ್ಸ್ ಬ್ರೈಟ್ ಅಂಡ್ ಬ್ಯೂಟಿಫುಲ್’, ಆಲ್ ಕ್ರಿಯೇಚರ್ಸ್ ಗ್ರೇಟ್ ಅಂಡ್ ಸ್ಮಾಲ್’, ‘ಎವ್ವೆರಿ ಲಿವಿಂಗ್ ಥಿಂಗ್’ ಮುಂತಾದ ಕೃತಿಗಳಲ್ಲಿ ಅನಾವರಣಗೊಳಿಸಿದ್ದಾರೆ. ಕನ್ನಡದ ಮಟ್ಟಿಗೆ ಡಾ. ಮಿರ್ಜಾ ಬಷೀರ್, ಡಾ. ಟಿ. ಎಸ್. ರಮಾನಂದ ಮತ್ತು ಡಾ. ಗವಿಸ್ವಾಮಿಯವರು ಪಶುವೈದ್ಯ ವೃತ್ತಿಯ ಕಥನಗಳನ್ನು ಬರೆಯುತ್ತಿದ್ದಾರೆ. ಪ್ರಾಣಿ ಮಾಲಿಕರಾಗಿ ವೇದವತಿಯವರು ಬರೆದ ‘ಯಾವ ಜನ್ಮದ ಮೈತ್ರಿ’ ಅದೇ ಸಾಲಿನಲ್ಲಿ ಗ್ರಹಿಸಬಹುದಾದ ಕೃತಿ. ಕನ್ನಡದಲ್ಲಿ ಇದೊಂದು ವಿಶಿಷ್ಟ ಪ್ರಯತ್ನ.
ರೆಡ್ಡಿರಾಮು, ಬಿಳಿರಾಮು, ಕರಿರಾಮು, ಸಿರಿರಾಮು, ವಿಷ್ಣುರಾಮು, ಕಿಟ್ಟಿರಾಮು, ಗೋಪಿರಾಮು, ರಾಮನಿ, ರಾಮಾಂಭ, ರಾಮಿ ಹೀಗೆ ವೇದವತಿ ಕೋದಂಡರಾಮ್‌ರವರ ಮನೆಯ ಸಾಕುನಾಯಿಗಳಿಗೆ ಇಟ್ಟ ಬಹುತೇಕ ಹೆಸರುಗಳು ರಾಮು ಎಂಬ ಪ್ರತ್ಯಯವನ್ನು ಅಂಟಿಸಿಕೊಂಡಿವೆ. ಇದಕ್ಕೊಂದು ಕಾರಣವೂ ಅದೇ ಪುಸ್ತಕದಲ್ಲಿ ಸಿಕ್ಕಿಬಿಡುತ್ತದೆ. ಅವರ ಮನೆಯ ಹೆಸರು ‘ಶ್ರೀರಾಮಕೃಪ’. ಶ್ರೀರಾಮಕೃಪದಲ್ಲಿ ವಾಸಿಸುವ ನಾಯಿಗಳಿಗೆಲ್ಲಾ ರಾಮು ಎಂಬ ವಿಶೇಷಣದಿಂದ ಕರೆಯಲಾಗಿದೆ. ಅವು ಶ್ರೀರಾಮಕೃಪದ ಕಾವಲುಗಾರರು! ರಾಮು ಎಂದು ಕರೆದು ನಾವು ಪುಣ್ಯ ಗಳಿಸಿಕೊಂಡೆವು ಎನ್ನುತ್ತಾರೆ ವೇದವತಿಯವರು. ಜೊತೆಗೆ ಜಾನಿ, ಲೇಡಿ, ರೋಸಿ ಎಂಬ ಹೆಸರಿನ ಶ್ವಾನಗಳಿದ್ದವು. ತಲೆಮಾರು ಬೆಳೆದಂತೆ ಹೊಸ ಪೀಳಿಗೆಯ ಮಕ್ಕಳು ಅವರ ಮನೆಯ ಮುದ್ದುನಾಯಿಗಳಿಗೆ ಬಫಿ, ಡಫಿ, ಡ್ಯಾನಿ, ರೀಗೊ, ಚಿಲ್ಲಿ, ಜಿಂಜರ್, ಕ್ಲಿಯೋಪಾತ್ರಾ, ವಿಷ್ಣು, ಪೆಪ್ಸಿ, ಜೀರಾ, ಆಮ್ಲ, ಪ್ಲಾಶ್, ಜೋರೋ, ಸ್ನೂಪಿ, ಕಿಟ್ಟುಮರಿ, ಸಿರಿ, ಗೌರಿ, ಸೋಮ್ ಎಂಬ ಆಧುನಿಕ ಹೆಸರುಗಳನ್ನಿಟ್ಟಿದ್ದಾರೆ.
ಅವರ ಪ್ರಾಣಿಪ್ರೀತಿ ಶ್ವಾನಗಳಿಗಷ್ಟೇ ಸೀಮಿತವಲ್ಲ. ಮನೆಯಲ್ಲಿಯೇ ಬೆಕ್ಕು, ಕೋಳಿ, ಕುರಿ ಮತ್ತು ಮೇಕೆಗಳನ್ನು ಮುದ್ದುಪ್ರಾಣಿಗಳನ್ನಾಗಿ ಸಾಕಿದ್ದನ್ನೂ ವಿವರಿಸಿದ್ದಾರೆ. ಆ ಎಲ್ಲಾ ಮುದ್ದುಪ್ರಾಣಿಗಳು ಕೃತಿಯ ಪಾತ್ರಧಾರಿಗಳು. ಜೊತೆಗೆ ಕುಟುಂಬ ಸದಸ್ಯರಾದ ಪತಿಯವರಾದ ಕೋದಂಡರಾಮ್, ಮಕ್ಕಳಾದ ಸಂಯುಕ್ತ, ಶೈಲಜ, ಸಂಧ್ಯಾವಾಣಿ, ಬಾಬು, ಅರವಿಂದ ಹಾಗೂ ಸೊಸೆ ಮತ್ತು ಅಳಿಯಂದಿರು ಕೂಡ ಕುಟುಂಬ ಕಥನದ ಪಾತ್ರಧಾರಿಗಳು.
ಸ್ಥಿತಿವಂತರಾದ ವೇದವತಿ ಕೋದಂಡರಾಮ್ ಅವರು ಬೆಂಗಳೂರಿನ ಹಲವು ಸ್ಥಳಗಳಿಗೆ ತಮ್ಮ ವಾಸದ ಮನೆಯನ್ನು ಬದಲಾಯಿಸುತ್ತಾರೆ. ಸುಬ್ಬಯ್ಯ ಸರ್ಕಲ್, ಡಬಲ್ ರೋಡ್, ಮಹಾತ್ಮಾ ಗಾಂಧಿ ರಸ್ತೆಯ ಮನೆಯ ಚಿತ್ರಣಗಳು ಕಥನದ ನಿರೂಪಣೆಗೆ ವೇಗ ಕೊಟ್ಟಿವೆ. ವೇದವತಿಯವರು ಸ್ವತಃ ಹಾಡುಗಾರ್ತಿ. ಮನೆಯ ಕಾರ್ಯಕ್ರಮದಲ್ಲಿ ವೇದವತಿಯವರು ಹಾಡುತ್ತಿದ್ದರೆ, ಸುಮಾರು ಒಂದೂವರೆ ಗಂಟೆಗಳ ಕಾಲ ರಾಮು ನಾಯಿ ತದೇಕಚಿತ್ತದಿಂದ ಹಾಡನ್ನು ಆಲಿಸುತ್ತದೆ, ಅಷ್ಟರ ಮಟ್ಟಿಗೆ ಆ ನಾಯಿಗಳು ದಿನನಿತ್ಯ ಮನೆಯಲ್ಲಿ ಗುನುಗಿಕೊಳ್ಳುತ್ತಿದ್ದ ರಾಗದ ಇಂಪಿಗೆ ‘ನಿಯಮಾಧೀನ ಪ್ರತಿಫಲಿತ’ (Conditioned Reflex) ಅನ್ನು ತೋರಿಸುತ್ತಿದ್ದವು ಎಂದು ಓದುಗರು ಭಾವಿಸಬೇಕಿದೆ. ಈ ಪ್ರತಿಫಲಿತವನ್ನು ರಶಿಯಾದ ವಿಜ್ಞಾನಿ ಇವಾನ್ ಪಾವ್ಲೋವ್ ಮೊಟ್ಟಮೊದಲ ಬಾರಿಗೆ ನಿರೂಪಿಸಿದರು.
ಒಂದು ಸಂದರ್ಭದಲ್ಲಿ ಡಾಬರ್‌ಮನ್ ತಳಿಯ ನಾಯಿಯನ್ನು ಸಾಕಿರುತ್ತಾರೆ. ಅದು ಜಗಳಗಂಟ ನಾಯಿ. ಮನೆಯ ಇಬ್ಬರನ್ನು ಕಚ್ಚಿಬಿಡುತ್ತದೆ. ಆಗ ಹುಚ್ಚುನಾಯಿ ರೋಗಕ್ಕೆ ಲಸಿಕೆ ತೆಗೆದುಕೊಳ್ಳಬೇಕಾಗುತ್ತದೆ. ವೇದವತಿಯವರ ದೊಡ್ಡಪ್ಪ ಹಾಗೂ ಪ್ರಜಾವಾಣಿಯ ಸ್ಥಾಪಕರಾದ ಕೆ. ಎನ್. ಗುರುಸ್ವಾಮಿಯವರು ವೇದವತಿಯವರ ಪತಿಯವರಾದ ಕೋದಂಡರಾಮ್ ಅವರಿಗೆ ಸೌಮ್ಯ ಸ್ವಭಾವದ ಕಾಕರ್ ಸ್ಪೇನಿಯಲ್ ನಾಯಿ ಕೊಡುತ್ತಾರೆ.
ಲಾಲ್‌ಬಾಗ್ ರಸ್ತೆಯಿಂದ ಅಲಸೂರು ರಸ್ತೆಗೆ ಮನೆ ಬದಲಾಯಿಸುವ ಕೆಲಸ ಮೂರು ದಿನ ಹಿಡಿಯುತ್ತದೆ, ಮೂರು ಸಾಕುನಾಯಿಗಳನ್ನು ತಮ್ಮೊಂದಿಗೆ ಕರೆದೊಯ್ಯುವುದನ್ನು ಮರೆತುಬಿಡುತ್ತಾರೆ. ಆದರೆ, ಆ ಮೂರು ನಾಯಿಗಳಾದ ರೆಡ್ಡಿರಾಮು, ರೂಬಿರಾಮು ಮತ್ತು ಬಿಳಿರಾಮು ಎರಡು ದಿನಗಳ ನಂತರ ಅಲಸೂರು ಮನೆಯಲ್ಲಿ ಪ್ರತ್ಯಕ್ಷವಾಗುತ್ತವೆ. ಅವು ತಮ್ಮ ಪೋಷಕರ ಚಲನೆಯ ಮಾರ್ಗದ ವಾಸನೆ ಹಿಡಿದು ಬಂದಿರುತ್ತವೆ. ಶ್ವಾನಗಳಲ್ಲಿ ವಾಸನೆಯ ಇಂದ್ರಿಯ ಜ್ಞಾನ ಅತ್ಯುತ್ತಮ. ಇದೇ ಕಾರಣದಿಂದಲ್ಲವೇ ಪೋಲಿಸ್ ದಳದಲ್ಲಿ ಪತ್ತೇದಾರಿಕೆಗಾಗಿ ನಾಯಿಗಳನ್ನು ಬಳಸುವುದು.
ಅದೊಂದು ಶನಿವಾರ. ರಾಮು ನಾಯಿ ಉಪವಾಸ ಮಾಡುತ್ತದೆ. ಇಡೀ ದಿನ ಯಾವ ಆಹಾರ ಕೊಟ್ಟರೂ ತಿನ್ನುವುದಿಲ್ಲ. ಮನೆಯ ಸದಸ್ಯರು ವಾರದ ಉಪವಾಸ ಮಾಡುತ್ತಿದ್ದರು. ಅದನ್ನು ಅನುಕರಣೆ ಮಾಡಿ ನಾಯಿಯೂ ಉಪವಾಸ ಮಾಡಿರಬಹುದು. ಬಾಲಕರು ಮನೆಯಿಂದ ಹೊರಗೆ ಹೊರಟರೆ ಅವರಿಗೆ ಬೆಂಗಾವಲಾಗಿ ಹಾಗೂ ಮನೆಗೆ ಮಕ್ಕಳನ್ನು ವಾಪಸ್ಸು ಕರೆತರಲು ನಾಯಿಗಳು ಅವರನ್ನು ಹಿಂಬಾಲಿಸಿ ಹೊರಟುಬಿಡುತ್ತಿದ್ದವು. ಮಕ್ಕಳಿಗೆ ಮನೆಯ ದಾರಿ ತಿಳಿಯದಾದಾಗ ಮುದ್ದುನಾಯಿಗಳು ದಾರಿ ತೋರಿಸುತ್ತಾ ಮನೆಗೆ ಕರೆತಂದ ಸಂದರ್ಭವಿದೆ. ವೈದ್ಯಕೀಯ ವಿಜ್ಞಾನದ 2014ರ ನೊಬೆಲ್ ಪ್ರಶಸ್ತಿ ಇಂತಹ ವಿಷಯದ ಸಂಶೋಧನೆಗೆ ಸಿಕ್ಕಿದೆ. ಮನುಷ್ಯರಲ್ಲಿರುವಂತೆ ನಾಯಿಗಳ ಮೆದುಳಿನಲ್ಲಿರುವ ಸ್ಥಳಕೋಶಗಳು (place cells or grid cells) ಮಕ್ಕಳಿಗೆ ಮನೆಯ ಹಾದಿಯನ್ನು ತೋರಿಸಲು ನೆರವಾಗಿರಬಹುದು.
ವೇದವತಿಯವರ ಮನೆಯಲ್ಲಿ ದೇಸಿ ತಳಿಯ ನಾಯಿಗಳನ್ನು ಸಾಕುವುದರ ಜೊತೆಗೆ ವಿದೇಶಿ ತಳಿಗಳನ್ನು ಸಾಕಿದ್ದರು. ನಾಡಿನ ಹೆಮ್ಮೆಯ ತಳಿಯಾದ ಮುಧೋಳ್ ಹೌಂಡ್ ಅನ್ನು ಸಾಕಿದ್ದಾರೆ. ವಿದೇಶಿ ತಳಿಗಳ ಗುಣಲಕ್ಷಣಗಳನ್ನು ಒಂದು ಅಧ್ಯಾಯದಲ್ಲಿ ವಿವರಿಸಲಾಗಿದೆ. ಆಸ್ಟ್ರೇಲಿಯನ್ ಸಿಲ್ಕಿ ಟೆರಿಯರ್, ಲಾಸಾ ಆಪ್ಸೋ, ಪೊಮರೇನಿಯನ್, ಜರ್ಮನ್ ಶೆಫರ್ಡ್, ಕಾಕರ್ ಸ್ಪೇನಿಯಲ್, ಡಾಬರ್ ಮ್ಯಾನ್, ಲ್ಯಾಬ್ರಡಾರ್, ಶಿಟ್ಜೂ, ಗ್ರೇಟ್ ಡೇನ್, ಐರಿಶ್ ಸೆಟ್ಟರ್ ಮತ್ತು ಗೋಲ್ಡನ್ ರಿಟ್ರೀವರ್ ತಳಿಗಳನ್ನು ಸಾಕಿದ್ದಾರೆ.
ಪ್ರಾಣಿಗಳಿಂದ ಪಡೆದ ಉಪಯೋಗವನ್ನು ಸ್ಮರಿಸುವ ಲೇಖಕಿಯು ‘ಇವನ್ಯಾರವ ಇವನ್ಯಾರವ, ಇವನ್ಯಾರವ ಎನ್ನದಿರಿ, ಇವ ನಮ್ಮವ ಇವ ನಮ್ಮವ, ರಾಮು ಇವ ನಮ್ಮವ ಇವ ನಮ್ಮವನೆನ್ನಿರಿ’ ಎಂದು ಮೊದಲ ಪುಟದಲ್ಲೇ ಬರೆಯುತ್ತಾರೆ. ಪುಸ್ತಕದ ಕೊನೆಯಲ್ಲಿ ಹದಿನಾರು ಪುಟಗಳ ಬಣ್ಣದ ಚಿತ್ರಗಳನ್ನು ಅಚ್ಚುಮಾಡಲಾಗಿದೆ. ಆ ಚಿತ್ರಗಳಲ್ಲಿ ಅವರ ಮನೆಯಲ್ಲಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ಸಾಕಿದ ನಾಯಿಗಳೊಂದಿಗೆ ಕುಟುಂಬದ ಸದಸ್ಯರ ವರ್ಣಚಿತ್ರಗಳಿವೆ. ಲೇಖಕರು ಸುಮಾರು ಆರೇಳು ದಶಕಗಳ ಕಾಲ ತಮ್ಮ ಮನೆಯಲ್ಲಿ ಸಾಕಿದ್ದ ಮುದ್ದುಪ್ರಾಣಿಗಳೊಂದಿಗೆ ಕಳೆದ ಕ್ಷಣಗಳನ್ನು ನೆನಪಿನಲ್ಲಿಟ್ಟುಕೊಂಡು ‘ಯಾವ ಜನ್ಮದ ಮೈತ್ರಿ’ ರಚಿಸಿದ್ದಾರೆ. ಕೆಲವು ರೋಚಕ ಪ್ರಸಂಗಗಳನ್ನು ಅನುಕ್ರಮವಾಗಿ ಒಂದರಿಂದ ಹದಿಮೂರು ಪ್ರಸಂಗಗಳ ಅಡಿಯಲ್ಲಿ ಕಟ್ಟಿಕೊಡಲಾಗಿದೆ.
ನಗರಗಳಲ್ಲಿ ನಾಯಿ ಸಾಕಣೆಯು ಹೆಚ್ಚಾಗುತ್ತಿದೆ. ಮುದ್ದು ಪ್ರಾಣಿಯಾಗಿ, ಕಾವಲು ನಾಯಿಯಾಗಿ, ಅಂತಸ್ತಿನ ಪ್ರತೀಕವಾಗಿ ದುಬಾರಿ ಬೆಲೆಯ ನಾಯಿಗಳನ್ನೂ ಸಾಕಲಾಗುತ್ತಿದೆ. ಅವುಗಳ ಚಿಕಿತ್ಸೆಗೆ ನಗರದ ವಿವಿಧ ಭಾಗಗಳಲ್ಲಿ ಖಾಸಗಿ ಪಶುವೈದ್ಯಕೀಯ ಚಿಕಿತ್ಸಾಲಯಗಳು ತಲೆ ಎತ್ತುತ್ತಿವೆ. ಮುದ್ದುಪ್ರಾಣಿಯನ್ನು ಮನೆಯ ಸದಸ್ಯ ಎಂದು ಪರಿಗಣಿಸಲಾಗುತ್ತಿದೆ. ಮುತುವರ್ಜಿಯಿಂದ ಮುದ್ದುಪ್ರಾಣಿಗಳನ್ನು ಸಾಕಲು ಈ ಕೃತಿಯು ಪ್ರೇರಣೆ ನೀಡುತ್ತದೆ. ಪಾಲಕರಿಗಾಗಿಯೇ ಪಾಲಕರು ಇಂತಹ ಕೃತಿಗಳನ್ನು ಇನ್ನಷ್ಟು ಬರೆಯಲಿ ಎಂದು ಆಶಿಸೋಣ.
(ಕೃತಿ: ಯಾವ ಜನ್ಮದ ಮೈತ್ರಿ , ಲೇಖಕಿ: ವೇದವತಿ ಕೋದಂಡರಾಮ್ , ಪುಟಗಳು : 114, ಬೆಲೆ: ರೂ. 140/-, ಪ್ರಕಾಶಕರು: ಅಪರಾಜಿತೆ ಪ್ರಕಾಶನ, ಮೈಸೂರು, ಫೋನ್ : 9845790862)
ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿಯವರು ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಿರಿಯ ಪ್ರಾಧ್ಯಾಪಕರಾಗಿದ್ದಾರೆ. ಜಾನುವಾರು, ತೆನೆಮರೆಯ ಕ್ರಾಂತಿ ರಾಗಿ ಲಕ್ಷ್ಮಣಯ್ಯ, ನಿಮಗೆ ನೀವೇ ಬೆಳಕಾಗಿ, ಮಹಾನದಿಯ ಉಗಮ, ಪಶುವೈದ್ಯ ಸಂಪದ, ಜ್ಞಾನ ವಿಜ್ಞಾನ ಮತ್ತು ನಾಡು ಮರೆಯದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಇವರ ಕೃತಿಗಳು.