ಇಲ್ಲಿ ಕ್ರೈಮ್ ಇದ್ದರೂ, ಅನ್ಯಾಯವಿದ್ದರೂ ಸಾಮಾನ್ಯ ಮಹಿಳೆಯೊಬ್ಬಳು ತನ್ನ ಯುಕ್ತಿಯೊಂದರ ಶಕ್ತಿಯಿಂದ ಆರಕ್ಷಕರು, ಕ್ರಮಬದ್ಧ ತನಿಖೆ ಎಲ್ಲವ ಮೀರಿಸಿ ಬೇಧಿಸುವ ಹಾದಿಯೇ ಬಲು ರೋಮಾಂಚಕ. ಕಥನ ಕಟ್ಟುವಿಕೆಯೂ ಈ ದಾರಿಗೆ ಹಾದಿಗಲ್ಲಿನಂತೆ ಪೂರಕವಾಗಿಯೇ ಇದೆ. ಅದು ಮಾತ್ರವಲ್ಲದೆ, ಪ್ರಿಯಾಳನ್ನು ಸೂಪರ್ ಹ್ಯೂಮನ್ ಎಂದೋ, ಅತಿಮಾನುಷ ಶಕ್ತಿ ಉಳ್ಳವಳು ಎಂಬಂತೆ ಬಿಂಬಿಸದೆ ಸಾಮಾನ್ಯ ಮಹಿಳೆಯೊಬ್ಬಳಂತೆ ತೋರಿಸಿದ್ದು, ಕಥನಕ್ಕೆ ಪ್ರಾಮಾಣಿಕ ಸ್ಪರ್ಶವನ್ನು ನೀಡಿದೆ ಮತ್ತು ಅದು ತೀರಾ ನೈಜವಾಗಿದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಮಲಯಾಳಂನ ‘ಸೂಕ್ಷ್ಮ ದರ್ಶಿನಿ’ ಸಿನಿಮಾದ ವಿಶ್ಲೇಷಣೆ
ಕಡಲ ಒಡಲು ತೀರ ಮೌನ
ಅಲೆಯು ಉರಿಸಿ ಗುಟ್ಟಿನ ಮೇಣ
ನೆರಳ ಹಿಡಿಯುವುದು ಸುಲಭನಾ
ಸುಲಭ ಅನ್ನೋದೇನೇ ಕಠಿಣ
ನಿಗೂಢ ನಿಗೂಢ ಪ್ರಯಾಣ
ಬದುಕು ಅನೂಹ್ಯ ತಿರುವುಗಳ ಹೆದ್ದಾರಿ. ಇಲ್ಲಿ ಸರಿ ತಪ್ಪುಗಳು ಸಮಾನ ಪ್ರಮಾಣದಲ್ಲಿ ಹರಡಿವೆ. ನೆರಳು ನೀಡುವ ಮರಗಳು, ಎಡವಿ ಬಿದ್ದು ಉಸಿರುಗಳು ನಿಂತಿವೆ. ನರ್ತಿಸುವ ಅಲೆಗಳು ಬದುಕ ರಂಗಕ್ಕೆ ಅಂಕದ ಪರದೆಯೆಳೆದಿರುವುದಿದೆ. ಇಲ್ಲಿ ಒಳ್ಳೆಯ ಬೆಳಕಿನ ಪಾದದಲ್ಲಿ ಕ್ರೂರ ಕತ್ತಲು ಕಾಲು ಮುರಿದು ಬಿದ್ದಿರುತ್ತದೆ. ಬೆಳಕಿನ ಕಣ್ಣುಗಳ ಕಾಂತಿಗೆ ಅಂಧಕಾರದ ನೆರಳಿನ ಬೆನ್ನ ಹಿಂದಿನ ನಡಿಗೆ, ದೃಷ್ಟಿಯ ಹಿಡಿತಕ್ಕೆ ಲಭ್ಯವಾಗದೆ ಉಳಿಯುತ್ತದೆ. ವ್ಯಕ್ತಿತ್ವಗಳೂ ಹಾಗೆಯೇ. ದೂರದಿಂದ ಹಾಲಿನಲ್ಲಿ ಅಭಿಷೇಕಗೊಂಡಂತೆ ಕಂಗೊಳಿಸುವ ಚಂದಿರನ ಅಂಗಳದಲ್ಲಿ ಕುಳಿತ ಅಸಂಖ್ಯ ಕುಳಿಗಳು, ಸಮೀಪಸಿದಲಾಗಷ್ಟೇ ದರುಶನ ನೀಡುತ್ತವೆ. ದುರ್ಗಮ ಕಲ್ಲು-ಕಾಂತಾರವನ್ನು ಒಡಲಲ್ಲಿ ಪವಡಿಸಿರುವ ಪರ್ವತ ದೃಷ್ಟಿಗೆ ಬೀಳುವುದು ಸೌಂದರ್ಯದ ಶಿಲ್ಪಕಲೆಯಂತೆ.

(ಎಂ ಸಿ ಜಿತಿನ್)
ಹೀಗೆ ಪ್ರತಿಯೊಬ್ಬನ ಹಿಂದೆಯೂ ಜಗತ್ತು ನೋಡದ ವ್ಯಕ್ತಿತ್ವವಿರುತ್ತದೆ. ಕರಗಿದ ಸತ್ಯಗಳು ಅಜ್ಞಾತವಾಗಿರುತ್ತದೆ. ಮುಖವಾಡದ ಹಿಂದೆ ನಾಟಕವೊಂದು ಅವಿತಿರುತ್ತದೆ. ಇಂತಹ ಒಂದು ಗೋಮುಖ ವ್ಯಾಘ್ರಗಳ ಕಪಟ ನಾಟಕದ ಹಿಂದಿನ ತಲಾಶಿನ ಕಥನವೇ ಎಂ ಸಿ ಜಿತಿನ್ ನಿರ್ದೇಶನದ ‘ಸೂಕ್ಷ್ಮ ದರ್ಶಿನಿ’.
ಆಕೆ ಪ್ರಿಯಾ. ಪತಿ ಅಂಟೋನಿ. ನೆಮ್ಮದಿಯ ಬದುಕು. ಈರ್ವರೂ ಕೆಲಸಕ್ಕೆ ಹೋಗುತ್ತಾ, ಸಂಜೆ ಮಗಳೊಂದಿಗೆ ಕಾಲ ಕಳೆದು ದಿನ ಮುಗಿಸುವ ಸಾದಾ ಸೀದಾ ಮಧ್ಯಮ ವರ್ಗದ ಕುಟುಂಬ ಅವರದು. ಪ್ರಿಯಾಳಲ್ಲೊಂದು ಅನನ್ಯ ಗುಣವಿದೆ. ಅವಳು ಥೇಟು ಸೂಕ್ಷ್ಮ ದರ್ಶಕದಂತೆ. ಯಾವುದೇ ಘಟನೆ, ವ್ಯಕ್ತಿಗಳು, ವಿಚಾರಗಳನ್ನು ಸಾಮಾನ್ಯರಂತೆ ಗ್ರಹಿಸದೆ ವಿಶೇಷ ಆಸ್ಥೆಯಿಂದ ಅಭ್ಯಸಿಸುತ್ತಾಳೆ. ಗಮನವೆಲ್ಲವ ಕೇಂದ್ರೀಕರಿಸಿ, ಮರಕುಟಿಗ ಪೊಟರೆಯೊಳಗೆ ಹುದುಗಿರುವ ಹುಳ ಹುಪ್ಪಟೆಗಳನ್ನು ಪತ್ತೆ ಮಾಡಿ ಹೊರಗೆಳೆಯುವಂತೆ, ಆಕೆಯೂ ಕೂಡ ಸುಳ್ಳಿನ ಬಲೆಯನ್ನು ಸದಾ ಕಾಲ ಛೇದಿಸುತ್ತಿರುತ್ತಾಳೆ. ಇಂತಿರುವಾಗ ಆಕೆಯ ಹತ್ತಿರದ ಮನೆಗೆ ಕುಟುಂಬವೊಂದು ಬರುತ್ತದೆ. ಇಮ್ಯಾನುವೆಲ್ ಎಂದು ಮಗನ ಹೆಸರು. ಜೊತೆಗವನ ಮಾತೆ. ಊದಿಕೊಂಡಿರುವ ಮುಖ, ಕಾಂತಿ ಕರಗಿ ಹೋದ ಕಣ್ಣುಗಳು, ಮೌನಕ್ಕೆ ಶರಣಾದ ಭಾವವ ಹೊತ್ತವರವರು. ಈ ವ್ಯಕ್ತಿಯ ನಡುವಳಿಕೆಗಳು ದಿನ ಕಳೆದಂತೆ ಪ್ರಿಯಾಳಿಗೆ ಅಪ್ರಿಯವಾಗುತ್ತಾ ಹೋಗುತ್ತದೆ. ತೋಟದ ಸುತ್ತಲೂ ಅಲೆದಾಡುತ್ತಿದ್ದ ಆತ, ಕೆಂಪಗಿನ ಬಟ್ಟೆಯನ್ನು ಪತಾಕೆಯಂತೆ ಸಿಕ್ಕಿಸಿ ಹೋಗಿದ್ದ. ಗೋಡೆಯ ಮೇಲೆ ತೂಕಡಿಸುತ್ತಿದ್ದ ಉಡವನ್ನು ಹಿಡಿದು, ಮಸಾಲೆ ರುಬ್ಬಿ ನೆರೆಮನೆಯ ಮಂದಿಗಳಿಗೆ ಉಣ ಬಡಿಸಿದ್ದ. ಹೀಗೆ ಆತನ ವಿಲಕ್ಷಣ ನಡತೆಯೆಲ್ಲವೂ ಪ್ರಿಯಾಳ ಅವಗಾಹನೆಗೆ ಬರುತಿತ್ತು. ಅಷ್ಟಲ್ಲದೇ, ಅಲ್ಜಮೈರ್ ಖಾಯಿಲೆಯೆಂದು ಬಿಂಬಿಸಲ್ಪಟ್ಟ ಆತನ ಅಮ್ಮ ಎಲ್ಲಾ ಕೆಲಸಗಳನ್ನು ಇತರರ ಹೆಗಲಿನ ಹಂಗಿಲ್ಲದೆ ಮಾಡುತ್ತಿದ್ದರು. ಕುಕ್ಕರಿನ ಸೀಟಿಯು ಸಮರ್ಪಕ ಸಂದರ್ಭದಲ್ಲಿ ನಿಲುಗಡೆಗೊಳ್ಳುತಿತ್ತು. ನೀರು ಟ್ಯಾಂಕಿನ ಶಿರ ತಲುಪುತ್ತಿದ್ದಂತೆಯೇ, ಪಂಪಿನ ಸದ್ದು ಮೌನವಾಗುತಿತ್ತು.
ಹೀಗೆ ಎಲ್ಲಾ ಚಟುವಟಿಕೆಗಳು, ಯಾರ ಕಣ್ಗಾವಲಿಲ್ಲದೆ ಜರುಗುತ್ತಿದ್ದದು, ಪ್ರಿಯಾಳ ತನಿಖಾ ಮನಸ್ಸಿಗೆ ಅರಿವಾಯಿತು. ಯಾವುದೋ ಅಮಾನುಷ ಕೆಲಸವೊಂದು, ಹೊರಗಿನ ಪರಿಸರದ ಅರಿವಿಗೆ ಬರದೇ ನಡೆಯುತ್ತಿದೆ ಎಂದು ಅವಳಿಗೆ ಖಾತ್ರಿಯಾಗಿತ್ತು. ಹೀಗಿರುವಾಗ ಇದ್ದಕ್ಕಿದ್ದಂತೆಯೇ, ಇಮ್ಯಾನುವೆಲ್‌ನ ಅಮ್ಮ ಕಾಣೆಯಾದರು. ಇದರ ಹಿಂದೆ ಆತನದ್ದೇ ಕೈವಾಡವಿದೆ ಎಂಬುದು ಆಕೆಯ ಸಂಶಯ. ಕುತೂಹಲಿಯಾದ ಪ್ರಿಯಾ, ನೆರೆಮನೆಯ ಗೆಳತಿಯರ ಸಹಾಯ ಪಡೆದು ಇಮ್ಯಾನುವೆಲ್‌ನ ಮನೆಯ ಮೇಲೆ ಹದ್ದಿನ ಕಣ್ಣು ನೆಟ್ಟಳು. ಒಂದು ದಿನ ರಾತ್ರಿ ಅಡುಗೆ ಮನೆಯಿಂದ ನೋಡುತ್ತಿರಬೇಕಾದರೆ, ಇಮ್ಯಾನುವೆಲ್ ಮನೆಯಲ್ಲಿ, ಅಮ್ಮನ ಕೋಣೆಯಲ್ಲಿ, ಮಿಂಚಿನಂತೆ ಬೆಳಕು ಉರಿದು, ಗಂಭೀರಗೊಂಡ ತಾಯಿಯ ಮುಖವ ತೋರಿಸಿ ಆರಿ ಹೋಯಿತು. ತನ್ನ ಅನುಮಾನಗಳು ತಾಳೆ ಹೊಂದಿದ ಭರವಸೆಯಲ್ಲಿ ಆಕೆ ತನ್ನ ಪತಿಗೆ ಇಮ್ಯಾನುವೆಲ್‌ನ ಸಂಚಿನ ಬಗ್ಗೆ ಹೇಳುತ್ತಾಳೆ. ಅಮ್ಮ ಅವನ ಮನೆಯಲ್ಲೇ ಇದ್ದಾರೆ, ಅವನು ಸುಳ್ಳಿನ ಶಂಖವನ್ನು ನಮ್ಮ ಮುಂದೆ ಊದಿದ್ದಾನೆ ಎಂದು. ಆದರೆ ಅಂಟೋನಿ ಇದನ್ನು ನಂಬುವಂತಾಗಲು ಯಾವುದೇ ಪ್ರತ್ಯಕ್ಷ ಹಾಗೂ ಸಾಂದರ್ಭಿಕ ಸಾಕ್ಷಿಗಳು ಲಭ್ಯವಿರುವುದಿಲ್ಲ. ಎವಿಡೆನ್ಸ್ ಸಮೇತ ಇಮ್ಯಾನುವೆಲ್‌ನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಬೇಕು ಎನ್ನುತ್ತಾ ತನ್ನ ಗೆಳತಿಯರ ಸಹಾಯದೊಂದಿಗೆ, ಆತನ ಮನೆಗೆ ರಹಸ್ಯವಾಗಿ ನುಗ್ಗುತ್ತಾಳೆ ಪ್ರಿಯಾ.
ಆದರೆ ಮೊದಲ ಮಹಡಿಯ ಕಿಟಕಿಯೊಳಗೆ ನಡೆಯುವ ಭೀಬತ್ಸ್ಯ ಕೆಲಸಗಳು ಕಣ್ಣಿಗೆ ಕಾಣದೇ, ಆಕೆ ಖಾಲಿ ಕೈಯಲ್ಲಿ ವಾಪಸಾಗುತ್ತಾಳೆ. ಅವಳ ಅನುಮಾನ ಇಮ್ಯಾನುವೆಲ್‌ಗೆ ತಿಳಿದು, ಆತ ಜಾಗೃತಗೊಳ್ಳುತ್ತಾನೆ. ಅಮ್ಮನೂ ಮನೆಗೆ ಮರಳುತ್ತಾಳೆ. ಅವರ ಕುಟುಂಬ ಅಲ್ಲಿಂದ ಬೇರೆ ಕಡೆಗೆ ಸ್ಥಳಾoತರಗೊಳ್ಳುತ್ತದೆ. ಕಥೆ ಶುರುವಾಗುವ ಮುಂಚೆಯೇ ಮುಗಿಯಿತೇ ಎನ್ನುವಾಗ, ಪ್ರಿಯಾಳಿಗೆ ಅಲ್ಲಿ ನಡೆದ ಭೀಕರ ಗಂಡಾಂತರವೊಂದು ಅರಿವಿಗೆ ಬರುತ್ತದೆ. ಮುಂದೆ ಸರಪಳಿಯಂತೆ ಒಂದಕ್ಕೊಂದು ಕೊಂಡಿ ಜೋಡಿಸಿಕೊಂಡು ಹೋಗಿ, ದ್ವಿಮುಖ ವ್ಯಕ್ತಿತ್ವವೊಂದರ ಕ್ರೌರ್ಯ ಬೆತ್ತಲಾಗುತ್ತದೆ. ಹೀಗೆ ಮಳೆಯೇ ಕಾಣದ ಮರುಭೂಮಿಯ ಒಳಗೆ ಹುದುಗಿರುವ ಭೀಕರ ಅನಾವೃಷ್ಟಿಯ ಹೊರತೆಗೆಯುವ ಪ್ರಿಯಾಳ ಸಾಹಸಮಯ ಕಾರ್ಯದ ಕಥನವೇ ‘ಸೂಕ್ಷ್ಮ ದರ್ಶಿನಿ’.
ಪತ್ತೇದಾರಿ, ಕ್ರೈಮ್ ಥ್ರಿಲ್ಲರ್ ಮಾದರಿಯ ಚಿತ್ರಗಳು ಒಂದು ತೆರನಾದ ಕ್ಲೀಷೆಯನ್ನು ಜೊತೆಗೂಡಿಸಿಕೊಂಡಿರುತ್ತವೆ. ಒಂದು ಕೊಲೆ, ಅದರ ಸುತ್ತಲೂ ತನಿಖೆ, ಸಿಗದೇ ಉಳಿವ ಸುಳುಹುಗಳು, ಒಂದು ಸಣ್ಣ ಎಳೆಯ ಹಿಡಿದು ಪ್ರಕರಣದ ಬೇಧಿಸುವಿಕೆ ಹೀಗೆ, ಪೋಲೀಸರ ಪಾತ್ರಗಳು ಪ್ರಧಾನ ಭೂಮಿಕೆಯಲ್ಲಿ ಇರುತ್ತವೆ. ಆದರೆ ಇಲ್ಲಿ ಕ್ರೈಮ್ ಇದ್ದರೂ, ಅನ್ಯಾಯವಿದ್ದರೂ ಸಾಮಾನ್ಯ ಮಹಿಳೆಯೊಬ್ಬಳು ತನ್ನ ಯುಕ್ತಿಯೊಂದರ ಶಕ್ತಿಯಿಂದ ಆರಕ್ಷಕರು, ಕ್ರಮಬದ್ಧ ತನಿಖೆ ಎಲ್ಲವ ಮೀರಿಸಿ ಬೇಧಿಸುವ ಹಾದಿಯೇ ಬಲು ರೋಮಾಂಚಕ. ಕಥನ ಕಟ್ಟುವಿಕೆಯೂ ಈ ದಾರಿಗೆ ಹಾದಿಗಲ್ಲಿನಂತೆ ಪೂರಕವಾಗಿಯೇ ಇದೆ. ಅದು ಮಾತ್ರವಲ್ಲದೆ, ಪ್ರಿಯಾಳನ್ನು ಸೂಪರ್ ಹ್ಯೂಮನ್ ಎಂದೋ, ಅತಿಮಾನುಷ ಶಕ್ತಿ ಉಳ್ಳವಳು ಎಂಬಂತೆ ಬಿಂಬಿಸದೆ ಸಾಮಾನ್ಯ ಮಹಿಳೆಯೊಬ್ಬಳಂತೆ ತೋರಿಸಿದ್ದು, ಕಥನಕ್ಕೆ ಪ್ರಾಮಾಣಿಕ ಸ್ಪರ್ಶವನ್ನು ನೀಡಿದೆ ಮತ್ತು ಅದು ತೀರಾ ನೈಜವಾಗಿದೆ. ಇಂತಹ ಕಥೆಗಳು ಗೆಲ್ಲುವುದೇ ಈ ಎರಡು ಕಾರಣಗಳಿಗೆ,
1. ಉತ್ತರವಿಲ್ಲದ ಪ್ರಶ್ನೆಗಳನ್ನು ಉಳಿಸದೇ, ಎಲ್ಲಾ ತೆರನಾದ ಗೊಂದಲ, ಸಂದೇಹಗಳಿಗೆ ಕಾರಣವನ್ನು ನೀಡುವುದು
2. ಮುಗಿತಾಯ ಅಥವಾ ಕ್ಲೈಮಾಕ್ಸ್, ಯಾವ ಮನಸ್ಸು ಶೇಕಡಾ 1 % ದಷ್ಟೂ ಊಹಿಸಲಾಗದಂತೆ ಕಟ್ಟುವುದು. ಯಾಕೆಂದರೆ, ಇಂತಹ ಜಾನರಿನ ಚಿತ್ರಗಳನ್ನು ನೋಡುವಾಗ ಪ್ರೇಕ್ಷಕ ತನ್ನ ಪೂರ್ವ ಅನುಭವಗಳಿಂದ ಪ್ರೆರೇಪಿತನಾಗಿ, ತನ್ನದೇ ಅದ ಕಥೆ, ಅಂತ್ಯಗಳನ್ನು ನಿರ್ಮಿಸಿಕೊಂಡಿರುತ್ತಾನೆ. ಯಾವಾಗ ಆತನ ನಂಬಿಕೆಯ ಆಶಾಗೋಪುರಗಳನ್ನು, ಬೆಲೆಯೇ ಇಲ್ಲದಂತೆ ಉರುಳಿಸುತ್ತಾ ಕಥೆ ಮುನ್ನಡೆಯುತ್ತದೆಯೋ, ಆಗ ಅದು ಗೆಲುವಿನ ಗೆರೆಯನ್ನು ದಾಟುತ್ತಿದೆಯೆಂದೇ ಅರ್ಥ. ಇಲ್ಲೂ ಕೂಡ, ಅಸಂಭವ ಅನ್ನಿಸುವ, ಊಹಾತೀತ ಅನ್ನಬಹುದಾದ ಅಂತ್ಯ ಅದ್ಭುತವಾದ ಅಭಿಪ್ರಾಯಗಳನ್ನು ಸೃಷ್ಟಿಸಿದೆ ಎಂದರೆ ಅದು ಅತಿಶಯೋಕ್ತಿಯಲ್ಲ.
ಇನ್ನು ಚಿತ್ರದ ತುಂಬೆಲ್ಲಾ ಆವರಿಸಿರುವುದು ಪ್ರಿಯಾಳಾಗಿ ಜೀವಿಸಿದ ‘ನಜ್ರಿಯ’. ಕಾಡಿನ ಆತ್ಮದಂತೆ, ನದಿಯ ಒಡಲಿನಂತೆ ಜೀವಂತಿಕೆಯನ್ನೇ ಮೈವೆತ್ತು ಕುಳಿತ, ಜೊತೆಗೊಂದು ಹಿಡಿ ಬುದ್ಧಿವಂತಿಕೆಯನ್ನು ತನ್ನದಾಗಿಸಿಕೊಂಡ ಪಾತ್ರದಲ್ಲಿ ಪರಕಾಯ ಪ್ರವೇಶ ನಜ್ರಿಯಾರದ್ದು. Spontaneous Acting ಅನ್ನು ಕರಗತಗೊಳಿಸಿಕೊಂಡಿರುವ ನಟಿಗೆ ಈ ಪಾತ್ರ ಸವಾಲೊಡ್ಡಿರುವುದು ಅಸಾಧ್ಯ. ಇನ್ನು ‘ಇಮ್ಯಾನುವೆಲ್’ ಆಗಿ ‘ಬಾಸಿಲ್ ಜೋಸೆಫ್’ ಸಮಾಜಕ್ಕೆ ಒಳ್ಳೆಯವನಾಗಿ ತೋರ್ಪಡಿಸಿಕೊಂಡು, ಒಳಗಡೆ ಕಾರ್ಕೊಟಕ ವಿಷವ ಹೊತ್ತಿರುವ ಋಣಾತ್ಮಕ ಪಾತ್ರದಲ್ಲಿ ವಿಜೃಂಭಿಸಿದ್ದಾರೆ. ಡಾರ್ಕ್ ಕಾಮಿಡಿ ಪಾತ್ರಗಳಿಗೆ ಹೇಳಿ ಮಾಡಿಸಿದoತಿರುವ ಬಾಸಿಲ್, ಬದಲಾವಣೆಯು ಜಗದ ನಿಯಮ ಎಂಬಂತೆ ವಿಲಕ್ಷಣ ಮನಸ್ಸಿನ ಪಾತ್ರವ ಮೆರೆಸಿದ್ದಾರೆ.
ಖಳನೆಂದರೆ ಅಬ್ಬರಿಸಲೇಬೇಕೆಂದಿಲ್ಲ. ಬೆಚ್ಚಗಿದ್ದರೇನು, ತಣ್ಣಗಾದರೇನು ಬಾಯಾರಿಕೆಗೆ ನೀರು ಸಾಕು ಎಂಬಂತೆ, ಯಾವ ಅತಿರಂಜಿತ ಪಲಕುಗಳಿಲ್ಲದೆ ತನ್ನ ಕೆಲಸವನ್ನು ಸೊಗಸಾಗಿ ಪೂರೈಸಿದ್ದಾರೆ. ಉಳಿದ ಎಲ್ಲರ ಅಭಿನಯವೂ ಕಥೆಗೆ ಪೂರಕವಾಗಿದೆ. ನಿರ್ದೇಶಕ ಎಂ ಸಿ ಜಿತಿನ್ ಗಟ್ಟಿ ಕಥೆಯೊಂದರ ಬೆನ್ನು ಹಿಡಿದು, ಮೊಸರಿನಿಂದ ಕೂದಲನ್ನು ತೆಗೆದಂತೆಯೇ ಕಥೆಯನ್ನು ಕಟ್ಟಿದ್ದಾರೆ ಪರದೆಯ ಮೇಲೆ, ರೋಚಕತೆಯ ಉನ್ಮಾದವನ್ನು ಇಳಿಸದೆ. ಅನ್ವೇಷಣಮ್ ಕಂಡೆತ್ತುಮ್, ಕಿಷ್ಕಿಂಧಾ ಕಾಂಡಮ್ ನಂತಹ ಉತೃಷ್ಟ ರೋಚಕ ಚಿತ್ರಗಳನ್ನು ನೀಡಿದ ಮಾಲಿವುಡ್ ಅಂಗಳದಲ್ಲಿ ಮಿನುಗಿದ ಇನ್ನೊಂದು ತಾರೆಯೇ ಈ ಚಿತ್ರ. ಚಿತ್ರ ಮಂದಿರಗಳಲ್ಲೂ ಗಲ್ಲಾ ಪೆಟ್ಟಿಗೆಯ ಲೂಟಿಗೈದು, IMDB ಯಂಥ ಜಾಲತಾಣದಲ್ಲಿ 8 ರ ಮೇಲೆ ಅಂಕ ಗಳಿಸಿಕೊಂಡಿರುವುದೇ ಈ ಚಿತ್ರದ ಹೆಚ್ಚುಗಾರಿಕೆಗೆ ಸಾಕ್ಷಿ.
ಮುಗಿಸುವ ಮುನ್ನ:
ಬಹುತೇಕ ಬದುಕಿನಲ್ಲಿ ಬರುವ ಹಲವು ಪಾತ್ರಗಳ ಒಂದು ಮುಖದ ಪರಿಚಯವಷ್ಟೇ ಇರುತ್ತದೆ. ಅದು ಮುಖವಾಡವೋ, ನೈಜವೋ ಎಂಬುದರ ವಿಶ್ಲೇಷಣೆಗೆ ಇಳಿಯದೆ ನಮಗೆ ಕಾಣುವುದೇ ಸತ್ಯವೆಂದು ನಂಬಿರುತ್ತೇವೆ. ಈ ನಂಬಿಕೆಗಳು ಯಾವತ್ತಿಗೂ ವ್ಯಕ್ತಿನಿಷ್ಟ. ನಾವು ಕಂಡದ್ದು ಸುಳ್ಳಿರಬಹುದು ಅಥವಾ ನಿಜವಿರಬಹುದು. ಅಂದರೆ ವ್ಯಕ್ತಿತ್ವಗಳ ಅರ್ಥೈಸಿಕೊಳ್ಳುವಿಕೆ ಕೇವಲ ದೃಷ್ಟಿ ಹಾಯಿಸುವುದಕ್ಕಿಂತಲೂ ಮಿಗಿಲಾದದ್ದು. ಪ್ರೀತಿ ಪ್ರೇಮದ ಸನ್ನಿವೇಶದಲ್ಲಿ ಅವಳಿಗೆ ಅವನು, ಅವನಿಗೆ ಅವಳು ಎಂಬಂತೆ ಕಾಣುವ ಸಂಬಂಧಗಳು, ಒಂದು ಸೂರಿನಡಿ ಬಂಧಿಯಾದಾಗ ಅದು ಹೇಗೆ ಬಂಧಗಳಿಂದ ಹಠಾತ್ ಬಿಡುಗಡೆಯನ್ನು ಬಯಸುತ್ತದೆ ಎಂದರೆ ಇದೇ ಕಾರಣ. ಸುಳ್ಳು ವ್ಯಕ್ತಿತ್ವದ ಅಳಿವು, ನಿಜ ವ್ಯಕ್ತಿತ್ವದ ಅನಾವರಣ. ಆದ್ದರಿಂದ, ಬದುಕಿನಲ್ಲೊಂದು ಸೂಕ್ಷ ದರ್ಶಕವನ್ನು ಸದಾ ಜೊತೆಗೆ ಸಾಗಿಸೋಣ, ನಾಳಿನ ನೆಮ್ಮದಿಗಾಗಿ…..

ರಾಮ್ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು, ಕಲ್ಲುಗುಡ್ಡೆ ನಿವಾಸಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಹವ್ಯಾಸಿ ಬರಹಗಾರ. ಕಥೆ, ಲೇಖನಗಳೆಂದರೆ ಅಚ್ಚುಮೆಚ್ಚು. ಯಕ್ಷಗಾನ ಭಾಗವತಿಕೆ, ಮದ್ದಳೆ ವಾದನ, ಒರಿಗಾಮಿ ಇತರ ಹವ್ಯಾಸಗಳು….