Advertisement
ವೈಜ್ಞಾನಿಕ ಕೌತುಕದ ಬೆರಗನ್ನು ಎಚ್ಚರಿಸುವ “ವಿಲಕ್ಷಣ ಜಲಜಾಲ”: ನಾರಾಯಣ ಯಾಜಿ

ವೈಜ್ಞಾನಿಕ ಕೌತುಕದ ಬೆರಗನ್ನು ಎಚ್ಚರಿಸುವ “ವಿಲಕ್ಷಣ ಜಲಜಾಲ”: ನಾರಾಯಣ ಯಾಜಿ

ನೀರೆನ್ನುವ ಅಪೂರ್ವ ವಸ್ತು ಈ ಪ್ರಕೃತಿಯಲ್ಲಿ ಸೃಷ್ಟಿಯ ಕಾಲದಿಂದಲೂ ಇದೆ. ಮುಂದೆಯೂ ಇರಲಿದೆ. ಆದರೆ ಅದರಗುಣಮಟ್ಟವನ್ನು ಕಾಪಾಡಿ ಬದುಕುವುದು ಮತ್ತು ಭುವಿಯ ಮೇಲಿನ ಜೀವ ಸಂಕುಲನವನ್ನು ಡೈನೋಸಾರಸ್‌ಗಳಂತೆ ನಾಶವಾಗಿ ಹೋಗದಂತೆ ಮಾಡುವಲ್ಲಿ ಮಾನವರ ಪಾತ್ರದ ಕುರಿತು ಅವರು ಈ ಕೃತಿಯ ಮೂಲಕ ಗಮನ ಸೆಳೆಯುತ್ತಾರೆ. ಕೃತಿಯೊಂದು ಜನರನ್ನು ತಲುಪಲು ಭಾಷೆ ಮತ್ತು ಶೈಲಿ ಬಲು ಮುಖ್ಯ. ಈ ಎರಡರಲ್ಲಿಯೂ ಸಾಗರ್ ಅವರದು ಎತ್ತಿದ ಕೈ.
 ಡಾ. ಡಿ. ಎಂ. ಸಾಗರ್  ಬರೆದ “ವಿಲಕ್ಷಣ ಜಲಜಾಲ” ಕೃತಿಯ ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ

ನೀರಿಗೆ ಬಣ್ಣವಿಲ್ಲ, ರುಚಿಯಿಲ್ಲ, ವಾಸನೆಯಿಲ್ಲ, ಆಕಾರವಿಲ್ಲ ಎನ್ನುವ ವಿಷಯವನ್ನು ಪ್ರಾಥಮಿಕ ಶಾಲೆಗೆ ಹೋಗುವಾಗ ನಾವೆಲ್ಲಾ ಉರು ಹೊಡೆದ ನೆನಪು ಇನ್ನೂ ಮಾಸಿಲ್ಲ. ಈ ಭೂಮಿಯಲ್ಲಿ ಸುಮಾರು 71 % ನೀರಿದೆ, ಅವು ಹೆಚ್ಚೂ ಆಗುವುದಿಲ್ಲ. ಕಡಿಮೆಯೂ ಆಗುವುದಿಲ್ಲ ಎನ್ನುವದನ್ನು ಓದಿದ್ದೇವೆ. ಇಷ್ಟಿದ್ದರೂ ಜಗತ್ತಿನ ಮೂರನೆಯ ಮಹಾಯುದ್ಧ ನೀರಿನ ಕಾರಣದಿಂದ ಆಗುತ್ತದೆ ಎನ್ನುವ ಚರ್ಚೆ ನಡೆಯುತ್ತಲೇ ಇದೆ. ನೀರಿನಿಂದಲೇ ವಿದ್ಯುತ್ ತಯಾರಿಸುತ್ತಾರೆಯೆನ್ನುವುದನ್ನು ನಂಬಿಕೊಂಡ ಕಾಲವೂ ಒಂದಿತ್ತು. ಪರೀಕ್ಷೆಯಲ್ಲಿ ನೀರು ಕುಡಿದಷ್ಟೇ ಸುಲಭವಾಗಿ ಉತ್ತರಿಸಲಾಗದ ಬದಲಿಗೆ ಪರೀಕ್ಷೆಯೇ ನೀರು ಕುಡಿಸಿದ ಹಾದಿತುಳಿದು ಬಂದವರು ನಾವು. ಅಂತಹಾ ನೀರು ಅದೆಂತಹ ವೈಚಿತ್ರ್ಯವನ್ನು ಹೊಂದಿದೆ ಎನ್ನುವದನ್ನು ಡಾ. ಡಿ. ಎಂ. ಸಾಗರ್ ಅವರ “ವಿಲಕ್ಷಣ ಜಲಜಾಲ” ಕೃತಿಯನ್ನು ಓದಿದಾಗ ತಿಳಿಯುವುದಷ್ಟೇ ಅಲ್ಲ, ಬೆರಗಾಗುತ್ತೇವೆ. ವಿಜ್ಞಾನವನ್ನು ಸುಲಭಶೈಲಿಯಲ್ಲಿ ಸರಳಗನ್ನಡದಲ್ಲಿ ತಿಳಿಸಿಕೊಡುವ ಕೆಲವೇ ಜನರಲ್ಲಿ ಡಾ. ಸಾಗರ್ ಅವರು ಪ್ರಮುಖವಾಗಿ ಎದ್ದು ಕಾಣುತ್ತಾರೆ. ದೂರದ ಅಮೇರಿಕಾದ ಟುಸ್ಸಾನ್‌ನಲ್ಲಿ ಆಪ್ಟಿಕಲ್ ವಿಜ್ಞಾನಿಯಾಗಿರುವ ಇವರು ನೀರಿನ ಕುರಿತು ತಾನೇಕೆ ಬರೆದೆ ಎನ್ನುವುದನ್ನು ಮೊದಲ ನುಡಿಯಲ್ಲಿಯೇ ವಿವರವಾಗಿ ವಿಶಿದೀಕರಿಸಿದ್ದಾರೆ. ನಮ್ಮೆಲ್ಲಾ ನಂಬಿಕೆಯನ್ನು ತಲೆಕೆಳಗೆ ಮಾಡಿ ನೀರಿಗೆ ಬಣ್ಣವಿದೆ. ರುಚಿಯಿದೆ, ಆಕಾರವಿದೆ, ವಾಸನೆಯಿದೆ ಎನ್ನುವುದನ್ನು 9 ಅಧ್ಯಾಯಗಳಲ್ಲಿ ವಿವರಿಸಿದ ಶೈಲಿ ಓದುಗನನ್ನು ಸೆಳೆಯುತ್ತದೆ. ರಸಾಯನ ಶಾಸ್ತ್ರ, ಕ್ವಾಂಟಂ, ನ್ಯಾನೋ ಹೀಗೇ ಹಲವು ವಿಷಯಗಳಲ್ಲಿ ಇವರ ವೈಜ್ಞಾನಿಕ ಲೇಖನವನ್ನು ಜಗತ್ತಿನ ಪ್ರತಿಷ್ಠಿತ ಸಂಶೋಧನಾ ಮ್ಯಾಗಜಿನ್‌ಗಳಲ್ಲಿ ಪ್ರಕಟವಾಗುತ್ತಿದ್ದರೂ, “ಎಲ್ಲಾದರು ಇರು, ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು” ಎನ್ನುವ ಕುವೆಂಪುರವರ ಕರೆ ಇವರೆದೆಯಲ್ಲಿ ತುಂಬಿಕೊಂಡಿದೆ.

(ಡಾ. ಡಿ. ಎಂ. ಸಾಗರ್)

“ವಿಲಕ್ಷಣ ಜಲಜಾಲ” ದ ಮೊದಲ ಅಧ್ಯಾಯದಲ್ಲಿಯೇ ಕುತೂಹಲವನ್ನು ಹುಟ್ಟಿಸುತ್ತಾರೆ. ನೀರಿನ ನಿಗೂಢತೆಯನ್ನು “ನೀರು ಎಂದರೆ ಕೇವಲ ಎರಡು ಜಲಜನಕ ಮತ್ತು ಒಂದು ಆಮ್ಲಜನಕದ ಅಣುವಿನ ಜೋಡಣೆಯಲ್ಲ, ಅದು 104.5 ಡಿಗ್ರಿಯಲ್ಲಿ ಸೇರಿಕೊಂಡಿದೆ” ಎನ್ನುವ ಮೂಲಕ ನೀರಿನ ಅಣುಗುಚ್ಚಗಳ ಪರಿಚಯ ಮಾಡಿಸುತ್ತಾರೆ. ನೀರಿಗೆ “ಜೀವನ” ಎನ್ನುವ ಅರ್ಥವೂ ಇದೆ. 86 ಲಕ್ಷ ಜೀವರಾಶಿಗಳ ಬದುಕು ನಿಂತಿರುವುದೇ ನೀರಿನ ಕಾರಣದಿಂದ. ಅದಕ್ಕೆ ಕಾರಣ ‘ಹರಿಯುವ ನೀರು ಸದಾ ಬದಲಾಗುತ್ತಾ ಹೊಸ ವಸ್ತುಗಳನ್ನು ತನ್ನೊಳಗೆ ಒಳಗೊಳ್ಳುತ್ತಾ, ತನ್ನೊಳಗಿದನ್ನು ಹಾಗೂ ತನ್ನತನವನ್ನು ಕಳೆದುಕೊಳ್ಳುತ್ತಾ ಸಾಗುತ್ತದೆ’ ಎನ್ನುವ ವಿವರಣೆಯಿಂದ ಪ್ರಾರಂಭವಾಗುತ್ತದೆ. ನೀರು ಹೊಸ ವಸ್ತುಗಳನ್ನು ಒಳಗೊಳ್ಳುತ್ತಾ ತನ್ನತನವನ್ನು ಕಳೆದುಕೊಳ್ಳುತ್ತಾ ಇರುವ ಕಾರಣವೇ ಅದರ ಮೂಲ ರಚನೆಯಾದ 104.5 ಡಿಗ್ರಿ ಕೋನವೆನ್ನುತ್ತಾರೆ. ಋಣ ವಿದ್ಯುತ್ ಅಣುಗಳುಳ್ಳ ಆಮ್ಲಜನಕವು ಹೆಚ್ಚು ಧನವಿದ್ಯುತ್ ಉಳ್ಳ ಜಲಜನಕದ ಅಣುಗಳೊಡನೆ ಸೇರಿ ಉಂಟಾಗುವ ಅಣುಗುಚ್ಛದ ಕಾರಣದಿಂದಲೇ ಜಗತ್ತಿನ ಜೀವ ರಾಶಿ ನಿಂತಿದೆ. ಸಣ್ಣ ತೊರೆಯೊಂದು ಇಂತಹ ಕೋಟ್ಯಾಂತರ ಅಣುಗುಚ್ಛವನ್ನು ತನ್ನೊಳಗೆ ಸೇರಿಸಿಕೊಳ್ಳುತ್ತಾ, ಹಳ್ಳವಾಗಿ, ನದಿಯಾಗಿ ಸಾಗರವಾಗಿ ಬಿಡುತ್ತದೆ. ಎಣ್ಣೆ ನೀರಿನ ಮೇಲೆ ಏಕೆ ತೇಲುತ್ತದೆ ಎನ್ನುವುದಕ್ಕೆ ನಾನು ತಿಳಿದುಕೊಂಡಿದ್ದು ಅದು ನೀರಿಗಿಂತಲೂ ಹಗುರವಾಗಿರುವುದರಿಂದ ಎನ್ನುವುದು. ವಿದ್ಯುತ್ ಗುಣವಿಲ್ಲದ ಎಣ್ಣೆ ವಿದ್ಯುತ್ ಗುಣವಿರುವ ನೀರಿನ ಜೊತೆ ಸೇರದೇ ತೇಲುತ್ತದೆ ಎನ್ನುವ ಕಾರಣ ಅರ್ಥವಾದದ್ದು ಈ ಕೃತಿಯನ್ನು ಓದಿದಮೇಲೆಯೇ. ಗುರುತ್ವಾಕರ್ಷಣ ಶಕ್ತಿಯ ಕಾರಣದಿಂದ ನೀರು ಮೇಲಿನಿಂದ ಕೆಳಗೆ ಹರಿಯುತ್ತದೆ ಎಂದು ತಿಳಿದುಕೊಂಡಿದ್ದರೂ ತೆಂಗಿನ ಮರದ ತುದಿಯಲಿರುವ ಎಳೆನೀರಿನಲ್ಲಿ ನೀರು ತುಂಬಲು ಬೇಕಾದ ಪ್ರಚಂಡ ಅಶ್ವಶಕ್ತಿಯ ಪಂಪ್ ಸೆಟ್ ಮರದೊಳಗೆ ಅದೃಶ್ಯವಾಗಿ ಇದೆ ಎಂದುಕೊಂಡವನಿಗೆ ನೀರಿನಲ್ಲಿರುವ ದ್ರುವೀಕರಣ ಗುಣ ಇದಕ್ಕೆ ಕಾರಣ ಎಂದು ತಿಳಿಯಿತು. ಇದನ್ನು ವಿವರಿಸುವ ಸಲುವಾಗಿ ಉಪ್ಪು (NaCl) ನೀರಿನಲ್ಲಿ ಕರಗುವುದನ್ನು ಚಿತ್ರದ ಮೂಲಕ ವಿವರಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಗಣೇಶ ಹಾಲು ಕುಡಿದ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿಮಾಡಿತ್ತು. ನಂತರ ಅದಕ್ಕೆ ಕಾರಣ Surface tension ಎಂದು ತಿಳಿಸಿದ್ದರು. ಹಾಗೆಂದರೆ ಏನು ಎನ್ನುವುದರ ವಿವರಣೆ ಜನಸಾಮಾನ್ಯರಿಗೆ ತಿಳಿದಿದ್ದು ಕಡಿಮೆ. ಈ Surface tension ಯಾಕೆ ಉಂಟಾಗುತ್ತದೆ ಎನ್ನುವ ವಿವರಣೆಯನ್ನು ಇಲ್ಲಿ ಸರಳವಾಗಿ ವಿವರಿಸಲಾಗಿದೆ. ಸಾಗರ್ ಅವರು ಇದಕ್ಕೆ “ಆಕರ್ಷಣೀಯ ಒಗ್ಗಟ್ಟು” ಎನ್ನುವ ಕನ್ನಡದ ಹೆಸರನ್ನು ನೀಡಿದ್ದಾರೆ. ಅವರ ಬರಹಗಳಲ್ಲಿ ಶಬ್ದಗಳ ಮಾಯಾಜಾಲವಿರುವುದಿಲ್ಲ. ವೈಜ್ಞಾನಿಕ ಪದಗಳಿಗೆ ಕನ್ನಡದಲ್ಲಿ ಹೇಳುವಾಗ ಅದು ಸರಳ ಮತ್ತು ನಾಮಪದಕ್ಕೆ ಸೂಕ್ತವಾಗುವಂತಿರಬೇಕು, ಲೇಖಕರು ಆ ರೀತಿ ಪದಗಳನ್ನು ಸಂಯೋಜಿಸುತ್ತಾರೆ. ಇನ್ನಷ್ಟು ಆಪ್ತವಾಗಿರಲು ದ. ರಾ. ಬೇಂದ್ರೆಯವರ “ಮೂಡಲ ಮನೆಯ ಮುತ್ತಿನ ನೀರಿನ” ಕವನವನ್ನು ಉದಾಹರಿಸಿ ಹೂವಿನ ಮೇಲಿನ ನೀರಿನ ಬಿಂದುಗಳ ಗೋಳಾಕಾರಕ್ಕೂ ಈ ಆಕರ್ಷಣೀಯ ಒಗ್ಗಟ್ಟೆ ಕಾರಣವೆಂದು ವಿವರಿಸಿದ್ದಾರೆ. ಕನ್ನಡದಲ್ಲಿ ಪೂರ್ಣಚಂದ್ರ ತೇಜಸ್ವಿ ಮತ್ತು ಬಿ ಜಿ ಎಲ್ ಸ್ವಾಮಿ ಅವರು ವೈಜ್ಞಾನಿಕ ವಿಷಯಗಳನ್ನು ತಿಳಿಸುವಾಗ ಈ ರೀತಿಯ ಉಪಮೆಗಳನ್ನು ಬಳಸಿದ್ದರು. ಸಾಗರ್ ಅವರು ಅಮೇರಿಕದಲ್ಲಿದ್ದೂ ಸಹ ಕನ್ನಡದ ಬನಿಯನ್ನು ಬಿಟ್ಟಿಲ್ಲದಿರುವುದು ಕೃತಿಯುದ್ದಕ್ಕೂ ಕಾಣಬಹುದಾಗಿದೆ. ಜೀವನಕ್ಕೆ ಆಧಾರವಾಗಿರುವ ನೀರಿನ ಉಷ್ಣಾಂಶದಲ್ಲಿ ಕೇವಲ (ಸರಾಸರಿ) ಒಂದು ಡಿಗ್ರಿಯಷ್ಟು ಹೆಚ್ಚಾದರೂ ಅಪಾಯವೆನ್ನುವ ಎಚ್ಚರಿಕೆಯನ್ನು ಸಹ ಅವರು ವಿವರಿಸುವ ಮೂಲಕ ಹಸಿರುಮನೆಯ ಕಾಪಿಡುವಿಕೆಗೆ ನೀರಿನ ಸಮತೋಲನ ಬಹುಮುಖ್ಯವೆನ್ನುತ್ತಾರೆ.

ವೇದಕಾಲದಲ್ಲಿ ಸಹ ನೀರಿನ ನಂಬಿಕೆ ಮತ್ತು ಪ್ರಯೋಜನದ ಕುರಿತು ಇರುವ ವಿಷಯಗಳ ಕಡೆಗೂ ಓದುಗರ ಗಮನವನ್ನು ಸೆಳೆಯುತ್ತಾರೆ. ಇಲ್ಲಿ ಅವರು ನಾಸಾದೀಯದ (ಋ. ಮಂ.-10-129)

ನಾಸಾದಾಸೀನ್ನೋ ಸದಾಸೀತ್ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್/
ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀದ್ಗಹನಂ ಗಭೀರಂ II1II

“ಸೃಷ್ಟಿಗೆ ಪೂರ್ವದಲ್ಲಿ ಜಗದಾದಿಗಳಿಗೆ ಕಾರಣೀಭೂತವಾದುದೂ ಅವ್ಯಕ್ತ ಸ್ವರೂಪದಿಂದಿರುವದೂ ಇಂದ್ರಿಯಗಳಿಗೆ ಅಗ್ರಾಹ್ಯವಾದುದೂ ಆದ ಯಾವ ಹೆಸರಿನಿಂದಲೂ ಕರೆಯಲ್ಪಡಲು ಆಗದಿರುವ ಅಸತ್ ಎಂಬುದು ಇರಲಿಲ್ಲ. ವ್ಯಕ್ತಸ್ವರೂಪವುಳ್ಳದ್ದೂ, ಸತ ಎಂಬ ಮೂಲ ವಸ್ತುವೂ ಇರಲಿಲ್ಲ. ಲೋಕಗಳೂ ಇರಲಿಲ್ಲ. ಅಂತರಿಕ್ಷವೂ ಇರಲಿಲ್ಲ. ಅಲ್ಲಿಂದಾಚೆಗೆ ಯಾವ ಸ್ವರ್ಗಾದಿಲೋಕಗಳಿರುವವೋ ಅವೂ ಇರಲಿಲ್ಲ. ಹಾಗಾದರೆ ಇವೆಲ್ಲವನ್ನು ಆವರಿಸಿದ್ದ ಯಾವುದಾದರೂ ವಸ್ತುವಿದ್ದಿತೇ ಭೋಕ್ತೃವಿನ (ಜೀವಿಗಳಿಗೆ) ಸುಖಸಾಧನ ಸಾಮಗ್ರಿಗಳು ಎಲ್ಲಿದ್ದವು. ಅಥವಾ ಪ್ರವೇಶಿಸಲಸಾದ್ಯವಾದುದೂ, ಅಗಾಧವಾದುದೂ ಆದ ಉದಕವಿದ್ದಿತ್ತೇ” ಎನ್ನುವ ಮೊದಲನೆಯ ಮಂತ್ರವನ್ನು ಉಲ್ಲೇಖಿಸುತ್ತಾರೆ. ನಾಸಾದೀಯ ಸೃಷ್ಟಿ ರಹಸ್ಯವನ್ನು ತಿಳಿಸುವ ಅದ್ಭುತ 7 ಮಂತ್ರಗಳ ಸಂಗ್ರಹ. ನೀರಿನಲ್ಲಿ ಮೊದಲು ಜೀವಿಗಳ ಉಗಮವಾಯಿತು. ಅಷ್ಟೇಅಲ್ಲ, ಅವುಗಳು ಮನುಷ್ಯಜೀವಿ ಜನಿಸುವುದಕ್ಕಿಂತ ಮೂರು ಯುಗ ಪೂರ್ವದಲ್ಲಿಯೇ ಸಸ್ಯಗಳು ಜನಿಸಿದವು ಎನ್ನುತ್ತದೆ. ಬಹಳ ಮಹತ್ವದ ಈ ಮಂತ್ರಗಳ ಜೊತೆಗೆ ಆ ಕಾಲದಲ್ಲಿಯೇ ಅಂತರಿಕ್ಷ ಜಲ ಹಾಗೂ ಪಾತಾಳ ಜಲವೆನ್ನುವ ಎರಡು ಸ್ವರೂಪವನ್ನುಇದ್ದ ಸಂಗತಿಯನ್ನು ತಿಳಿಸುವುದರ ಜೊತೆಗೆ ಇವೆರಡೂ ಕೊನೆಗೆ ಹೋಗಿ ಸೇರುವುದು ಸಾಗರವನ್ನು ಎನ್ನುವ ಸಂಗತಿಯನ್ನು ತಿಳಿಸುವಾಗ ವೇದಗಳ ಪಾರಮ್ಯವನ್ನು ಹೇಳಬೇಕೆನ್ನುವ ಅತ್ಯುತ್ಸಾಹವಲ್ಲ.

“ವೇದಗಳಲ್ಲಿ ನೀರನ್ನು ಅಗ್ನಿಯ ಜನಕ” ಎನ್ನುವ ವಿಷಯದ ಕುರಿತು ಒತ್ತು ನೀಡುತ್ತಾರೆ. ಅಗ್ನಿ ಎನ್ನುವುದಕ್ಕೆ ‘ಹೊತ್ತಿ ಉರಿದಾಗ ಹೊರಹೊಮ್ಮುವ ಬೆಳಕು’ ಎಂದರ್ಥ. ಇಲ್ಲಿ ವೇದದ ಈ ಸಂಗತಿ ಇಂದು ವೈಜ್ಞಾನಿಕವಾಗಿ “ನೀರಿನ ಅಣುಗುಚ್ಛಗಳು ಪರಸ್ಪರ ಸಂಘರ್ಷಿಸುತ್ತಲೇ ಇರುತ್ತವೆ. ಈ ಸಂವಹನ ಕ್ರಿಯೆಯಲ್ಲಿ ಪೋಟಾನ್- ಅಂದರೆ ಬೆಳಕು-ಅಗ್ನಿ” ಎನ್ನುತ್ತಾರೆ. ಋಷಿಗಳು ವಿವರಿಸಿದ ಅಗ್ನಿ ಮೂಲವೆನ್ನುವುದು ಕೇವಲ ಆತಾರ್ಕಿಕ ಪ್ರಾಚೀನ ನಂಬಿಕೆಯಲ್ಲ; ಅದನ್ನು ಆಧುನಿಕ ವಿಜ್ಞಾನದ ಮೂಲಕವೂ ಅರ್ಥಮಾಡಿಕೊಳ್ಳುವುದು ಸಾಧ್ಯ ಎನ್ನುವ ಅವರ ಅಭಿಪ್ರಾಯ ಅಲ್ಲಗೆಳೆಯಲು ಸಾಧ್ಯವಾಗುವುದಿಲ್ಲ. ಸುಶ್ರುತ ಸಂಹಿತೆ, ಋಗ್ವೇದ ಇನ್ನೂ ಅನೇಕ ಕಡೆ ಬರುವ ನೀರಿನ ವಿಷಯಗಳನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ತೌಲನಿಕವಾಗಿ ಓದುಗರಿಗೆ ನೀಡೀದ್ದಾರೆ. ದಿವ್ಯ ಮತ್ತು ಭೂಮ್ಯವೆನ್ನುವ ಮಳೆನೀರು ಮತ್ತು ಭೂಮಿಯಲ್ಲಿ ಹರಿಯುವ ನೀರಿನ ಸ್ವರೂಪವನ್ನು ಜೊತೆಗೆ ಒಂಭತ್ತು ವಿಧವಾಗಿ ವೇದದಲ್ಲಿ ನೀರನ್ನು ವಿಂಗಡಿಸಿದ್ದಾರೆ ಎನ್ನುವ ವಿಷಯ ಅನೇಕರಿಗೆ ಅಚ್ಚರಿಯಾಗಬಹುದು. ದೇವರ ಪೂಜೆಯ ಕೊನೆಗೆ ಮಂತ್ರಪುಷ್ಪ “ಆಯತನಂ ವೇದ” ಎನ್ನುವುದು ಆಕರ್ಷಣೀಯ ಸೂಕ್ತಗಳ ಸಂಗ್ರಹ. ಅದರಲ್ಲಿ ನೀರನ್ನು ನಿರಂತರವಾಗಿ ಮೂಲ ತತ್ವವೆಂದೂ, ಬೆಂಬಲವೆಂದೂ, ಆಯತನವೆಂದೂ ವರ್ಣಿಸಲಾಗಿದೆ. ಅಗ್ನಿ, ವಾಯು, ಆಕಾಶ, ಚಂದ್ರ ಮೊದಲಾದವುದಕ್ಕೆಲ್ಲ ನೀರೆ ಆಯತನ – ಮೂಲ, ಅದೇ ಬ್ರಹ್ಮವು ಎನ್ನುವ ಮಾತು ಬರುತ್ತದೆ. ನೀರಿಗೆ ನಾಶವಿಲ್ಲ; ಸ್ವರೂಪ ಬದಲಾವಣೆ ಮಾತ್ರ ಇದೆ ಎನ್ನುವ ತತ್ವವನ್ನು ವಿಜ್ಞಾನ “law of conservation of mass” ಎಂದು ವಿವರಿಸುತ್ತದೆ. ವೇದದಲ್ಲಿ ಸಹಸ್ರಾರು ವರ್ಷಗಳ ಮೊದಲೇ ಈ ವಿಷಯದ ಕುರಿತು “ಸ ನಾಶ ಉದಕಸ್ಯಾಸ್ತಿ ತದೆವ ಪರಿವರ್ತತೆ” ಎನ್ನುವ ಮೂಲಕ ಇನ್ನೊಮ್ಮೆ ವೇದವನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಗಮನಿಸಬೇಕಾಗಿರುವತ್ತ ನಮ್ಮನ್ನು ಸೆಳೆಯುತ್ತಾರೆ. ವಿಜ್ಞಾನದ ಬರಹಗಳು ಆಧ್ಯಾತ್ಮಿಕವಾದದನ್ನು ಅಸಂಬದ್ಧ ಎಂದು ಆಚೆ ಬಿಸಾಕುವ ಪ್ರವೃತ್ತಿಯ ಹಿನ್ನೆಲೆಯಲ್ಲಿ ಡಾ. ಸಾಗರ್ ವೈಜ್ಞಾನಿಕವಾಗಿಯೇ ತಮ್ಮ ನಿಲುವನ್ನು ಸೌಜನ್ಯದಿಂದ ನಮ್ಮೆದುರು ತೆರೆದಿಡುತ್ತಾರೆ. ಅವರ ಬರಹದಲ್ಲಿ ಎಲ್ಲಿಯೂ ‘ವೇದದಲ್ಲಿ ಎಲ್ಲಾ ಇದೆʼ ಎನ್ನುವ ಒಣತರ್ಕವಿಲ್ಲ. ಬದಲಾಗಿ ತಾನು ಓದಿದ ಅನುಭವವನ್ನು ತಾರ್ಕಿಕವಾಗಿ ತೆರೆದಿಡುವ ಯತ್ನ ಪ್ರಸಂಶನೀಯವಾಗಿದೆ.

ವೇದದ ವಿಷಯ ಹೇಳುತ್ತಲೇ ನೀರಿನ ಉಗಮಕ್ಕೆ ಕಾರಣವಾಗಿರಬಹುದಾದ ವೈಜ್ಞಾನಿಕ ಅಂಶಗಳತ್ತ ಕರೆದುಕೊಂಡು ಹೋಗಿ ನೀರಿನ ಮೂಲವನ್ನು ತಿಳಿಯಬೇಕಾದರೆ ಇದರ ಅಪ್ಪ ಅಮ್ಮಂದಿರಾದ ಜಲಜನಕ ಮತ್ತು ಆಮ್ಲಜನಕದ ವಂಶಾವಳಿಯನ್ನು ಹೇಳುತ್ತಲೆ ಜಗತ್ತನ್ನು ನಡುಗಿಸುವ ಅಣುಬಾಂಬಿನ ಮೂಲವಾದ ಭಾರಜಲ “ಡಿಟೇರಿಯಂ (D2 O)” ವಿಷಯ ಪ್ರಸ್ತಾಪಿಸಿ ಭೂಮಿಯ ಹಾಗೂ ಆಕಾಶಕಾಯಗಳ ನೀರಿನ ಅನುಪಾತ ಒಂದೇ; ಆದರೆ ಈ ಎರಡರ ನೀರಿನ ಮೂಲವೂ ಒಂದೇ ಆಗಿರಬೇಕು ಎನ್ನುತ್ತಲೇ ಆಕಾಶಕಾಯಗಳ ಅಧ್ಯಯನ ಅಷ್ಟು ಸುಲಭವಲ್ಲ ಎನ್ನುತ್ತಾರೆ. ಅವರು ಹಿಂದೆ ತಿಳಿಸಿದ ದಿವ್ಯ ಎನ್ನುವ ನೀರಿನ ಪ್ರಬೇಧದ ಕುರಿತು ಎನ್ನುವ ಇನ್ನಷ್ಟು ವಿಶದವಾಗುತ್ತದೆ. ಆಕಾಶಗಾಮಿನಿಯಾದ ಗಂಗೆ ಭೂಮಿಗೆ ಬಂದ ಕಥೆಗೆ ಯಾವುದೋ ಹೊಸ ಹೊಳಪು ಸಿಕ್ಕಿತು. ಈ ವಿಷಯದಲ್ಲಿ ಸೂರಾಲು ದೇವಿಪ್ರಸಾದ ತಂತ್ರಿ ಎನ್ನುವ ವಿದ್ವಾಂಸರು “ಸೌರ ಸಾಗರೀ” ಎನ್ನುವ ಕಾದಂಬರಿಯನ್ನು ಬರೆಯಲು ತೊಡಗಿದ್ದಾರೆ. ಅದಕ್ಕಾಗಿ ಅವರು ಅನೇಕಸಲ ಹಿಮಾಲಯದಲ್ಲಿ ಅಲೆದಾಡಿದ್ದಾರೆ. ವೇದದಲ್ಲಿ ನೀರಿನ ಉಗಮದ ಕುರಿತು ಅನೇಕ ಅಮೂಲ್ಯ ವಿಷಯಗಳು ಅವರಿಗೆ ಗೊತ್ತು.

ಈ ಕೃತಿಯ ಹೆಸರು ಸೂಚಿಸುವ “ವಿಲಕ್ಷಣ ಜಲ ಜಾಲ” ಎನ್ನುವ ಅಧ್ಯಾಯ ನೀರಿನ ಜಾತಕವನ್ನೇ ಬಿಚ್ಚಿಟ್ಟಿದೆ. ಮೇಲ್ನೋಟಕ್ಕೆ ಪಾರದರ್ಶಕವಾಗಿ ಕಾಣುವ ನೀರಿನಲ್ಲಿ 60 ಬಗೆಯ ವಿಲಕ್ಷಣ ಸ್ಥಿತಿಗಳಿವೆಯಂತೆ! ಈ ಬಹುರೂಪಿತ್ವವೇ ಜೀವರಾಶಿಗಳು ಭುವಿಯಲ್ಲಿ ಇರುವುದಕ್ಕೆ ಕಾರಣ ಎನ್ನುತ್ತಾರೆ. ಘನವಾದ ಮಂಜುಗಡ್ಡೆ ತೇಲುವದು ಕೌತುಕವಲ್ಲ; ಅದರಲ್ಲಿರುವ ಅಣುವಿನ ವಿರಳವಾದ ಬಂಧವೇ ಕಾರಣ; ಅದನ್ನು ಅಣುವಿನ ರಚನೆಯ ಚಿತ್ರದಮೂಲಕ ತಿಳಿಸಿರುವ ವಿಷಯ ಪ್ರಶಂಶನೀಯ. ಜೇನುಗೂಡಿನ ಅಷ್ಟಾಕೃತಿ ರಚನೆಯ ಹಿಮಮಣಿ ಕುರಿತು ವಿವರಿಸುವಾಗ “ವಿಜ್ಞಾನ ಎನ್ನುವುದು ಊಹಾತ್ಮಕ ಪ್ರಶ್ನೋತ್ತರದ ಮೇಲೆ ಬೆಳೆಯುವುದಿಲ್ಲ. ಅದಕ್ಕೆ ನಿಖರವಾದ ಉತ್ತರ ಬೇಕು” ಎನ್ನುತ್ತಾ “ಎಲ್ಲವನ್ನೂ ಪರಿಶೀಲಿಸಿ ನಂತರ ಇದಮಿತ್ಥಂ ಎನ್ನುವದನ್ನು ತೋರಿಸುವುದು ವೈಜ್ಞಾನಿಕ ಮನೋಭಾವ” ಎನ್ನುತ್ತಾರೆ. ನೀರಿನ ಮಹತ್ವ ಮತ್ತು ಉಪಯೋಗದ ಕುರಿತು ವಿವರಿಸುತ್ತಲೇ ಬೇಜಾವಾಬ್ದಾರಿ ಕೈಗಾರಿಕೆಗಳು ಪರಿಸರವನ್ನು ನಾಶಮಾಡಿದ ‘ಹಿಂಕ್ಲಿ’ ಎನ್ನುವ ಊರು ‘ಪೆಸಿಫಿಕ್ ಗ್ಯಾಸ್ ಅಂಡ್ ಎಲೆಕ್ಟ್ರಿಕ್ ಕಂಪನಿ’ ಯಿಂದ ಸರ್ವನಾಶವಾದ ಘಟನೆ ಹಾಗೂ ಅದರ ವಿರುದ್ಧ ಎರಿನ್ ಬ್ರಾಂಕೋವಿಕ್ ಎನ್ನುವ ಮಹಿಳೆ ಹೋರಾಡಿ ಗೆದ್ದರೂ, ಊರು ಕೊನೆಗೂ ಬರ್ಬಾದಾಗಿಹೋದ ವಿಷಯ ಕಳವಳಕಾರಿ. ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಯ ಕಡೇ ಗಮನ ಸೆಳೆಯುವ ಅವರ ಕಳಕಳಿಗೆ ಸ್ಪಂದಿಸಬೇಕು. ಜೀವರಾಶಿಗಳ ಸ್ಥಿತಿಯನ್ನು ಪ್ರಭಾವಿಸುವಲ್ಲಿ ನೀರೆ ಪ್ರಮುಖವಾಗಿದೆ. ಕೈಗಾರಿಕೆಗಳ ಹಾವಳಿಯಿಂದ ಬಿಳಿ ಹಿಮ ಕಪ್ಪಾಗುವ ವಿಷಯ ಸಹ ಇಲ್ಲಿ ಬಹುಮುಖ್ಯವಾಗಿ ವಿವರಿಸಲಾಗಿದೆ. ಡಾ. ಡಿ. ಎಂ. ಸಾಗರ್ ಅವರು ಕೇವಲ ಪ್ರಯೋಗಾಲಯದಲ್ಲಿ ಕುಳಿತು ಸಂಶೋಧನೆಯಲ್ಲಿ ಮಗ್ನರಾಗುವ ವಿಜ್ಞಾನಿಯಲ್ಲ. ಪ್ರತಿಭಾವಂತರಾಗಿದ್ದೂ ಬಹಳ ಕಷ್ಟಪಟ್ಟು ತನ್ನ ಆಸಕ್ತಿಯಾದ ಸೈಂಟಿಸ್ಟ್ ಉದ್ಯೋಗವನ್ನು ಆಯ್ಕೆ ಮಾಡಿಕೊಂಡವರು.

ನೀರೆನ್ನುವ ಅಪೂರ್ವ ವಸ್ತು ಈ ಪ್ರಕೃತಿಯಲ್ಲಿ ಸೃಷ್ಟಿಯ ಕಾಲದಿಂದಲೂ ಇದೆ. ಮುಂದೆಯೂ ಇರಲಿದೆ. ಆದರೆ ಅದರಗುಣಮಟ್ಟವನ್ನು ಕಾಪಾಡಿ ಬದುಕುವುದು ಮತ್ತು ಭುವಿಯ ಮೇಲಿನ ಜೀವ ಸಂಕುಲನವನ್ನು ಡೈನೋಸಾರಸ್‌ಗಳಂತೆ ನಾಶವಾಗಿ ಹೋಗದಂತೆ ಮಾಡುವಲ್ಲಿ ಮಾನವರ ಪಾತ್ರದ ಕುರಿತು ಅವರು ಈ ಕೃತಿಯ ಮೂಲಕ ಗಮನ ಸೆಳೆಯುತ್ತಾರೆ. ಕೃತಿಯೊಂದು ಜನರನ್ನು ತಲುಪಲು ಭಾಷೆ ಮತ್ತು ಶೈಲಿ ಬಲು ಮುಖ್ಯ. ಈ ಎರಡರಲ್ಲಿಯೂ ಸಾಗರ್ ಅವರದು ಎತ್ತಿದ ಕೈ.

ಇನ್ನೊಂದು ಮಹತ್ವದ ವಿಷಯ ಎಂದರೆ ಇದರ ಮುಖಪುಟ ಮತ್ತು ಒಳಪುಟದಲ್ಲಿ ಅನೇಕ ಚಿತ್ರಗಳನ್ನು ರಚಿಸಿದ ಪ್ರಸಿದ್ಧ ಕಲಾವಿದ ಸತೀಶ ಯಲ್ಲಾಪುರ ಅವರ ರಚನೆಗಳು ಕೃತಿಯನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿದೆ.

(ಕೃತಿಯ ಹೆಸರು : ವಿಲಕ್ಷಣ ಜಲಜಾಲ, ಲೇಖಕರು : ಡಾ. ಡಿ. ಎಂ. ಸಾಗರ್, ಪ್ರಕಾಶಕರು: ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ, ಬೆಲೆ: ರೂ. 175/-)

About The Author

ನಾರಾಯಣ ಯಾಜಿ

ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ