ರಾಮಾಯಣವನ್ನು ಹೊಸ ಇತಿಹಾಸದೊಂದಿಗೆ ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಇಂಗ್ಲೀಷಿನಲ್ಲಿ ಬರೆದ ಆತ್ಮಕಥೆಯನ್ನು “ಭಾರತೀಯ ಹೋರಾಟ” ಎನ್ನುವ ಹೆಸರಿನಲ್ಲಿ ಹೊರತಂದಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ, ಗಾಂಧಿ ಒಂದು ಕಡೆ, ಅದಕ್ಕೆ ಪ್ರತಿಯಾಗಿ ನೇತಾಜಿ ಸುಭಾಶ್ ಬಾಬು ಎನ್ನುವ ಸುದ್ದಿ ಯಾವತ್ತಿನಿಂದಲೂ ಕೇಳುತ್ತಲೇ ಇದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ 1915 ರಿಂದ 1921ರ ತನಕ ಮಹತ್ವದ ತಿರುವು ಕಂಡ ದಿನಗಳು.
ಪ್ರೊ. ಕೆ.ಇ. ರಾಧಾಕೃಷ್ಣ ಅನುವಾದಿಸಿರುವ ಸುಭಾಶ್‌ಚಂದ್ರ ಬೋಸರ ಕೃತಿ “ಭಾರತೀಯ ಹೋರಾಟ”ದ ಕುರಿತು ನಾರಾಯಣ ಯಾಜಿ ಬರಹ, ನಿಮ್ಮ ಓದಿಗೆ
ಪ್ರೊ. ಕೆ. ಇ. ರಾಧಾಕೃಷ್ಣ ಅವರು ಏನನ್ನೇ ಬರೆದರೂ ಅದರಲ್ಲಿ ಹೊಸತನ ಇರುತ್ತದೆ. ಅವರ ಕಥೆಗಳ ಸಂಗ್ರಹವಾದ “ಸತ್ಯಮ್ಮನ ಮಕ್ಕಳು” ಕೃತಿಯನ್ನು ಓದುವಾಗ ತನ್ನ ಬಾಲ್ಯಕಾಲದಲ್ಲಿನ ಘಟನೆ, ಅಲ್ಲಿ ಬರುವ ಸುತ್ತಮುತ್ತಲಿನ ವ್ಯಕ್ತಿಗಳನ್ನು ಇಟ್ಟುಕೊಂಡು ಬರೆಯುತ್ತಾರೆ. ನಾಲ್ಕು ತಲೆಮಾರಿನ ಜನಜೀವನದ ಪಲ್ಲಟವನ್ನು ವಿವರಿಸುವ “ಪ್ರೇತಂಭಟ್ಟರ ನಿಂತಿಲ್ಲೆರು” ಕಾರಂತರ ಬೆಟ್ಟದ ಜೀವ, ಅನಂತಮೂರ್ತಿಯವರ ಮೌನಿ, ಲಂಕೇಶರ ಮುಸ್ಸಂಜೆಯ ಕಥಾಪ್ರಸಂಗ ಮೊದಲಾದ ಕಥೆಗಳಿಗೆ ಸರಿಸಮನಾಗಿ ನಿಲ್ಲಬಹುದಾದ ಕೃತಿ. ಖಂಡ ಕಾವ್ಯ ‘ಗೋಪಿಕೋನ್ಮಾದ. ಸಂಸ್ಕೃತದಲ್ಲಿರುವ ಅನಾಮಧೇಯ ಕವಿಯನ್ನು ಕನ್ನಡಕ್ಕೆ ಅದೇ ಸೊಗಸಿನೊಂದಿಗೆ ತಂದಿದ್ದಾರೆ. ಇದು ಪುತಿನ ಅವರ “ಗೋಕುಲ ನಿರ್ಗಮನ” ದ ವಸ್ತುವನ್ನು ಇನ್ನೊಂದು ಮಗ್ಗಲಿನಲ್ಲಿ ನೀಡಿದ ಕೃತಿ.
ರಾಮಾಯಣವನ್ನು ಹೊಸ ಇತಿಹಾಸದೊಂದಿಗೆ ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಇಂಗ್ಲೀಷಿನಲ್ಲಿ ಬರೆದ ಆತ್ಮಕಥೆಯನ್ನು “ಭಾರತೀಯ ಹೋರಾಟ” ಎನ್ನುವ ಹೆಸರಿನಲ್ಲಿ ಹೊರತಂದಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ, ಗಾಂಧಿ ಒಂದು ಕಡೆ, ಅದಕ್ಕೆ ಪ್ರತಿಯಾಗಿ ನೇತಾಜಿ ಸುಭಾಶ್ ಬಾಬು ಎನ್ನುವ ಸುದ್ದಿ ಯಾವತ್ತಿನಿಂದಲೂ ಕೇಳುತ್ತಲೇ ಇದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ 1915 ರಿಂದ 1921ರ ತನಕ ಮಹತ್ವದ ತಿರುವು ಕಂಡ ದಿನಗಳು. ಗೋಖಲೆಯವರಿಂದ ಪ್ರೇರಿತರಾಗಿ ಮಹಾತ್ಮಾ ಗಾಂಧೀಜಿ, ಆನಂತರದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಜವಾಹರಲಾಲ್ ನೆಹರು, ನೇತಾಜಿ ಸುಭಾಶ್ಚಂದ್ರ ಬೋಸ್ ಅವರುಗಳು ದಕ್ಷಿಣ ಆಫ್ರಿಕಾ, ಬ್ರಿಟನ್ನಿನಿಂದ ಬಂದು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ದಿನಗಳು. ಇದೇ ಸುಮಾರಿಗೆ ಸರ್ದಾರ್ ವಲ್ಲಭಬಾಯಿ ಪಟೇಲರೂ ಸಹ ವಕೀಲಿ ವೃತ್ತಿಯನ್ನು ತ್ಯಜಿಸಿ ಹೋರಾಟದಲ್ಲಿ ಪಾಲ್ಗೊಂಡರು. ಸುಮಾರು ಇಪ್ಪತ್ತು ವರ್ಷಗಳ ತನಕ ಜೊತೆಯಾಗಿ ಹೋರಾಟಮಾಡಿದ ಇವರಲ್ಲಿ ನಂತರ 1939 ರಲ್ಲಿ ಸುಭಾಶರು ಕಾಂಗ್ರೇಸ್ಸನ್ನು ಬಿಟ್ಟು ಫಾರ್ವರ್ಡ್ ಬ್ಲಾಕ್ ಪಕ್ಷವನ್ನು ಕಟ್ಟಿ ನಂತರ 1941 ರಲ್ಲಿ ಭಾರತವನ್ನು ಬಿಟ್ಟು ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಹೋರಾಟವನ್ನು ಮಾಡುವದರೊಂದಿಗೆ ತಮ್ಮ ಮಾರ್ಗವನ್ನು ತಾವೇ ಬದಲಾಯಿಸಿಕೊಂಡರು. ಅವರ ಈ ನಿಲುವು ಅನೇಕ ಸಂಶಯಗಳಿಗೂ, ಊಹಾಪೋಹಗಳಿಗೂ ಕಾರಣವಾಯಿತು. ನೇತಾಜಿ V/s ಇತರರು ಎನ್ನುವ ದೃಷ್ಟಿಯಿಂದ ಇತಿಹಾಸಪುಟಗಳಲ್ಲಿ ಸೇರಿಹೋಯಿತು. ಗಾಂಧೀಜಿಯಿಂದ ಹಿಡಿದು ಇನ್ನಿತರಾಗಲೀ, ಅಥವಾ ನೇತಾಜಿಯವರಾಗಲಿ, ತಮ್ಮ ನಡುವಿನ ಭಿನ್ನಾಭಿಪ್ರಾಯಗಳಿಗೆ ಬಹಿರಂಗವಾಗಿ ಯಾವುದೇ ಪರಸ್ಪರ ವಿರುದ್ಧವಾದ ಹೇಳಿಕೆಗಳನ್ನು ಕೊಡಲಿಲ್ಲ. ಆದರೂ ರೆಕ್ಕೆಪುಕ್ಕಗಳೆಲ್ಲವೂ ಬಲಿತು ಸಾಕಷ್ಟು ಹಾನಿಯನ್ನು ಮಾಡಿದೆ.
ನೇತಾಜಿ ಎಂದರೆ ಭಾರತೀಯರಿಗೆಲ್ಲ ಅದೇನೋ ಒಂದು ಆಕರ್ಷಣೆ. ತುಂಬುಗಲ್ಲದ ಶುಭ್ರವರ್ಣದ ಕನ್ನಡಕದೊಳಗಿನಿಂದ ಹೊರಡುವ ಆತ್ಮವಿಶ್ವಾಸಸೂಸುವ ಕಣ್ಣುಗಳು, ಅವರನ್ನು ನೋಡುತ್ತಲೇ ಇರಬೇಕೆನಿಸುತ್ತದೆ. ಕಲಕತ್ತಾದ ಕುಲೀನ ಮನೆತನದ ಇವರು ಬ್ರಿಟನ್ನಿನಲ್ಲಿ ICS ಪಾಸಾಗಿ ಅತ್ಯನ್ನತ ಸರಕಾರಿ ಹುದ್ದೆಗೆ ಏರಬಹುದಾಗಿರುವುದನ್ನು ಬಿಟ್ಟು ಬ್ರಿಟಿಷರ ವಿರುದ್ಧ ಹೋರಾಡಲು ಭಾರತಕ್ಕೆ ಬರುತ್ತಾರೆ. 1939 ರ ನಂತರದಲ್ಲಿ ಸಶಸ್ತ್ರ ಕ್ರಾಂತಿಗೆ ಕರೆಕೊಟ್ಟ ಹಾಗೂ ಆಜಾದ್ ಹಿಂದ್ ಸೇನೆಯನ್ನು ಸ್ಥಾಪಿಸಿದ ಅವರ ಸೇನಾ ಸಮವಸ್ತ್ರದ ಚಿತ್ರಣವೇ ಎದುರು ಬರುತ್ತದೆ. ಅವರ ಕೊನೆಯೂ ಸಹ ಒಂದು ಮಿಸ್ಟರಿಯಾಗಿ ಇತಿಹಾಸದಲ್ಲಿ ಉಳಿದಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ನೇತಾಜಿ ಯಾಕೆ ಕಾಂಗ್ರೆಸ್ಸಿನಿಂದ ಹೊರನಡೆದರು, ತಮ್ಮದೇ ಆದ ಫಾರ್ವರ್ಡ್ ಬ್ಲಾಕ್‌ಪಕ್ಷ ಕಟ್ಟಿದರು ಎನ್ನುವ ವಿವರಗಳು ಹೆಚ್ಚಿನವರಿಗೆ ತಿಳಿದಿಲ್ಲ. ಸಶಸ್ತ್ರ ಹೋರಾಟವಂತೂ ಬ್ರಿಟನ್ ಜೊತೆಗೆ ಗಾಂಧಿ ಮತ್ತು ನೆಹರುವಿನ ವಿರುದ್ಧ ಎಂದೇ ಬಿಂಬಿತವಾಗಿದೆ.
ಇದರಲ್ಲಿ ಸ್ವತಃ ನೇತಾಜಿಯವರೇ ತನ್ನ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಹೇಳಿಕೊಂಡಿದ್ದಾರೆ. ಇದರಲ್ಲಿ ಎಲ್ಲಿಯೂ ನೇತಾಜಿಯವರ ಜನನ, ತಂದೆ ತಾಯಿಗಳ ಉಲ್ಲೇಖವಿಲ್ಲ, ತನ್ನ ಬಾಲ್ಯ ಮತ್ತು ತನ್ನನ್ನು ತಾನು ಎಲ್ಲಕ್ಕಿಂತ ಮಿಗಿಲಾಗಿ ತೋರಿಸಿಕೊಳ್ಳಬೇಕೆನ್ನುವ ಹಪಹಪಿಕೆಯಿಲ್ಲ. ದೇಶಪ್ರೇಮವೆನ್ನುವ ಅಮಲು ಅವರಲ್ಲಿ ಇಲ್ಲ. ಎಲ್ಲರೂ ಊಹಿಸಿದಂತೆ ಗಾಂಧೀಜಿಯನ್ನು ದೂಷಣೆ ಮಾಡಿದ ಯಾವುದೇ ಒಂದು ವಾಕ್ಯವೂ ಇಲ್ಲ. ಗಾಂದೀಜಿಯವರನ್ನು ಉಲ್ಲೇಖಿಸುವಾಗ “ಮಹಾತ್ಮಾ” ಎಂದೇ ಅವರು ಸಂಭೋಧಿಸುತ್ತಾರೆ. ಗಾಂಧಿ ಮತ್ತು ನೇತಾಜಿ ಎಲ್ಲಿಯೂ ಮುಖಾಮುಖಿಯಾಗುವುದಿಲ್ಲ. ಅವರ ಹೋರಾಟದ ಹಾದಿ ಕವಲಾಗಿ ಒಡೆದರೂ ಅದು ಸೈದ್ಧಾಂತಿಕವಾದ ಪಥವಾಗಿ ಗುರುತಿಸಿಕೊಳ್ಳುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ಗಾಂಧೀಜಿಯವರ ಜೊತೆ ತನಗೆ ಸಾಗಲಾಗಿರುವುದಕ್ಕೆ ಅವರ ಮನಸ್ಸಿನಲ್ಲಿ ವಿಷಾದ ಮೂಡಿರುವುದನ್ನು ಕಾಣಬಹುದು. ಅದು ಸ್ಪಷ್ಟವಾಗಿ ವ್ಯಕ್ತವಾಗುವುದು ಅನಾಮಧೇಯ ಆಜಾದ್ ಹಿಂದ್ ಸೇನೆಯ ಯೋಧೆ “ಶ್ರೀಮತಿ ಎಂ” ಎನ್ನುವವರು ಬರೆದ “ಜೈ ಹಿಂದ್ ದಿನಚರಿ” ಎನ್ನುವ ಅತ್ಯಮೂಲ್ಯ ಕೃತಿಯಲ್ಲಿ ವಿವರವಾಗಿ ಬಂದಿದೆ. ಪ್ರೊ. ರಾಧಾಕೃಷ್ಣ ಅವರೇ ಅದನ್ನೂ ಅನುವಾದಿಸಿದ್ದಾರೆ. ಅದರಲ್ಲಿ ನೇತಾಜಿ ಅಜಾದ್ ಹಿಂದ್ ಸೈನ್ಯವನ್ನು ಸಂಘಟಿಸಿ ಜಪಾನ್, ಸಿಂಗಾಪುರ, ಮಲೇಷಿಯಾ, ರಂಗೂನಗಳಲ್ಲಿ ಮಾಡಿದ ಭಾಷಣಗಳಿವೆ. ಅದರಲ್ಲಿ ಅವರು ಭಾರತೀಯರನ್ನು ಉದ್ದೇಶಿಸಿ ಮಾತಾಡುವಾಗಲೆಲ್ಲ ಗಾಂಧೀಜಿಯವರನ್ನು ಉದ್ದೇಶಿಸಿ ಗೌರವದಿಂದಲೇ ಭಾಷಣ ಮಾಡುತ್ತಾರೆ. ನೇತಾಜಿಯವರಿಗೆ ಭಾರತ ಎಂದರೆ ಗಾಂಧಿ. ಮಗ ತನ್ನ ತಂದೆಯ ಹತ್ತಿರ ಹೇಗೆ ವಿಧೇಯತೆಯಿಂದ ನಿವೇದಿಸಿಕೊಳ್ಳುತ್ತಾನೆಯೋ ಹಾಗೆ ನೇತಾಜಿಯವರ ಭಾಷಣಗಳಿವೆ. ಇಂತಹ ನೇತಾಜಿ ಮತ್ತು ಗಾಂಧೀಜಿಯ ನಡುವೆ ಸರಿ ಇರಲಿಲ್ಲ ಎನ್ನುವ ಅನೇಕ ಮಿಥ್ಯಗಳಿಗೆ ಉತ್ತರ ಈ ಕೃತಿಯಲ್ಲಿದೆ. ಇಬ್ಬರ ಗುರಿಯೂ ಭಾರತವನ್ನು ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ದೊರಕಿಸಿಕೊಳ್ಳುವುದು.
ನೇತಾಜಿ ಸುಭಾಸ್ ಬಾಬು ಈ ಕೃತಿಯನ್ನು ಅವರು ಈ ದೇಶದಿಂದ ಪಾರಾಗಿ ವಿಯೆನ್ನಾದಲ್ಲಿದ್ದಾಗ ಬರೆದಿರುವುದು. ಅವರು ತಮ್ಮ ಮುನ್ನುಡೀಯಲ್ಲಿ ತಾನು ಇದನ್ನು ಅವಸರದಲ್ಲಿ ಬರೆಯಬೇಕಾಯಿತು ಎಂದು ಹೇಳುತ್ತಾರೆ. ಅವರೇ ಹೇಳಿಕೊಂಡಂತೆ “Many are the defects that will be found in this book. It was written in great haste and at a time when my health was far from satisfactory. As a matter of fact, owing to reasons of ill-health, the completion of the manuscript was delayed beyond all anticipation”. ಅನೇಕ ಅನಾಕೂಲತೆಗಳ ನಡುವೆಯೂ ಇದನ್ನು ಬರೆಯಲೇ ಬೇಕೆಂದು ಹಟ ಹಿಡಿದು ಬರೆದಿದ್ದಾರೆ. ವಿಯೆನ್ನಾದಲ್ಲಿ ಅವರ ಹತ್ತಿರ ಯಾವುದೇ ದಾಖಲೆಗಳು ಇರುವುದಿಲ್ಲ. ಆರೋಗ್ಯವೂ ಕೈಕೊಟ್ಟಿತ್ತು. ಈ ಎಲ್ಲದರ ನಡುವೆ ತಮ್ಮ ನೆನಪಿನಲ್ಲಿ ಬಂದ ಸಂಗತಿಗಳ ಆಧಾರದ ಮೇಲೆ ಇದನ್ನು ರಚಿಸಿದ್ದಾರೆ. ಎಲ್ಲಿಯೂ ಅವರು ತನ್ನ ಆತ್ಮಕಥೆ ಎಂದು ಹೇಳಿಕೊಂಡಿಲ್ಲ; “ಭಾರತೀಯ ಹೋರಾಟ” ಎನ್ನುವದು ಅವರು ನೀಡಿದ ಶೀರ್ಷಿಕೆ. ಇದು ಭಾರತೀಯರು ನಡೆಸಿದ ಹೋರಾಟವೆನ್ನುವುದು ಅವರ ನಿಲುವು. ಇಲ್ಲಿರುವ ವಿಷಯಗಳ ನಿರೂಪಣೆಯ ಶೈಲಿ ಅಲ್ಲಲ್ಲಿ ಖಂಡವಾಗಿದೆ.
ಸಮಗ್ರತೆಯ ಕೊರತೆ ಕಾಣಿಸಬಹುದಾದರೂ ಅದನ್ನು ಅವರಲ್ಲಿರುವ ದೇಶಾಭಿಮಾನದ ಕೆಚ್ಚು ಗೌಣವಾಗಿಸಿದೆ. ಪ್ರೋ. ರಾಧಾಕೃಷ್ಣರು ಗುರುತಿಸಿರುವಂತೆ ಇದು ‘ಟಿಪ್ಪಣಿಗಳ ಸಂಗ್ರಹ’ ಎನ್ನಬಹುದಾದ ಗ್ರಂಥ. ಆದರೆ ಇದು ಚಾರಿತ್ರಿಕವಾಗಿ ಸ್ವಾತಂತ್ರ್ಯ ಹೋರಾಟದ ಕೆಚ್ಚು ಉಕ್ಕೇರುತ್ತಿರುವ ಸಮಯ. ಅವರ ಅನುಭವ ಇಲ್ಲಿ ತೆರೆದಿಡುತ್ತಾ ಹೋಗುವುದು ಅವರು ಲಂಡನ್ನಿನಿಂದ ತಮ್ಮ ದೇಶ ಭಾರತಕ್ಕೆ ಸ್ವಾತಂತ್ರ್ಯ ಹೋರಾಟಕ್ಕೆ ಬಂದೂ ಸಹ ಹೆಚ್ಚು ಸಮಯವಾಗಿಲ್ಲ. ಭಾರತದ ರಾಜಕಾರಣ ಮತ್ತು ಇತಿಹಾಸವನ್ನು ಸಾವಿರಾರು ವರ್ಷಗಳ ಹಿನ್ನೆಲೆಯಿಂದ ನೋಡುತ್ತಾರೆ. ಶಂಕರಾಚಾರ್ಯರ ನಾಲ್ಕು ಆಮ್ನಾಯ ಪೀಠಗಳ ಉದಾಹರಣೆ. ರಾಮಾಯಣ ಮತ್ತು ಮಹಾಭಾರತಗಳು ದೇಶದೆಲ್ಲೆಡೆ ತನ್ನ ಪ್ರಭಾವ ಬೀರಿರುವುದು ಇವೆಲ್ಲವೂ ಈ ದೇಶಕ್ಕೆ ತನ್ನದೇ ಆದ ಒಂದು ಅಸ್ಮಿತೆ ಇತ್ತು ಎನ್ನುವುದಕ್ಕೆ ಆಧಾರವಾಗಿ ಉಲ್ಲೇಖಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಭಾರತಕ್ಕೆ ಮುಸ್ಲಿಂ ದೊರೆಗಳ ದಂಡಯಾತ್ರೆಯನ್ನು ವಿದೇಶಿ ಆಕ್ರಮಣ ಎಂದು ಕರೆಯುವುದಿಲ್ಲ. ಇದು ವರ್ತಮಾನ ಕಾಲಕ್ಕೆ ಬಹಳ ಮುಖ್ಯವಾಗುತ್ತದೆ. ಮುಹಮ್ಮದೀಯರು ಹಿಂದೂ ಧರ್ಮವನ್ನು ಅನುಸರಿಸದಿದ್ದರೂ ಭಾರತೀಯರ ಸಾಮಾನ್ಯ ಬದುಕನ್ನು, ಅವರ ಸುಖ ದುಃಖವನ್ನು ತಮ್ಮ ಬದುಕಿನಲ್ಲಿ ಸ್ಥಿರೀಕರಣಗೊಳಿಸಿಕೊಂಡರು ಎನ್ನುತ್ತಾರೆ. ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಬಳಿಕವಷ್ಟೇ ಭಾರತಕ್ಕೆ ತಾನು ಪರಕೀಯರಿಂದ ಗೆಲ್ಲಲ್ಪಟ್ಟಿದ್ದೇನೆ ಎನ್ನುವ ಅರಿವುಂಟಾದದ್ದು ಎನ್ನುವ ವಾಸ್ತವ ಸತ್ಯವನ್ನು ತೆರೆದಿಡುತ್ತಾರೆ. ಸ್ವಾತಂತ್ರ್ಯದ ಹೋರಾಟದ ಮೂಲ ನೇತಾಜಿ ಅರಿತುಕೊಂಡ ಈ ವಿಚಾರಗಳಿಂದ ಪ್ರಾರಂಭವಾಗುತ್ತದೆ. ಮೊಘಲಿಗರಿಗೂ, ಬ್ರಿಟಿಷರಿಗೂ ಇರುವ ವ್ಯತ್ಯಾಸವೆಂದರೆ, ಮುಸ್ಲಿಂ ದೊರೆಗಳಿಗೆ ಅನಾದಿಯಿಂದಲೂ ಈ ದೇಶದೊಡನೆ ವ್ಯಾಪಾರ ಸಂಬಂಧವಿದ್ದಿರುವದರಿಂದ ಇಲ್ಲಿನ ಜನಜೀವನದ ಪದ್ಧತಿಯ ಅರಿವಿತ್ತು. ಅದೇ ಯುರೋಪಿಯನ್ನರು ಒಂದು ಸ್ಥಿತ ಸಿದ್ಧಾಂತದಂತೆ ಪ್ರಜ್ಞಾಪೂರ್ವಕವಾಗಿಯೇ ಭಾರತದ ವೈವಿಧ್ಯತೆಯ ಬಗ್ಗೆ ವಿಶ್ಲೇಷಿಸುತ್ತಾರೆ ಎನ್ನುವ ವಿನ್ಸಂಟ್ ಸ್ಮಿತ್‌ನ ವಿವರಣೆಯನ್ನು ಇಸ್ಲಾಂ ಧರ್ಮ ಇಲ್ಲಿ ದರ್ಗಾ, ಉರುಸು ಮುಂತಾದ ಹಿಂದೂ ಪದ್ಧತಿಗಳನ್ನೊಳಗೊಂಡು ಭಾರತೀಯವಾಯಿತು. ಆದರೆ ಬ್ರಿಟಿಷರು ಭಾರತೀಯರನ್ನು ನವ ನಾಗರಿಕರನ್ನಾಗಿ, ನವ ಸಂಸ್ಕೃತಿಯಲ್ಲಿ ಪರಿವರ್ತಿಸಬೇಕೆಂಬ ಪ್ರಯತ್ನವೇ ಅವರ ವಿರುದ್ಧ ನಡೆದ ಪ್ರಥಮ ಸಂಘರ್ಷಕ್ಕೆ ಕಾರಣವಾಯಿತೆನ್ನುತ್ತಾರೆ.
ಸ್ವಾತಂತ್ರ್ಯ ಹೋರಾಟದ ನವ ಜಾಗೃತಿಯನ್ನು ಈ ಮೇಲಿನ ಹಿನ್ನೆಲೆಯಲ್ಲಿ ಮತ್ತು ಕ್ರೈಸ್ತ ಮಿಶಿನರಿಗಳ ಮತಾಂತರದ ಧಾವಂತದಲ್ಲಿ ಜನರನ್ನು ಜಾಗೃತಿಗೊಳಿಸಲು ಬಯಸಿದ ರಾಜಾರಾಮ್ ಮೋಹನರಾಯ್, ಕೇಶವಚಂದ್ರ ಸೇನ್, ದಯಾನಂದ ಸರಸ್ವತಿ, ರಾಮಕೃಷ್ಣ ಪರಮಹಂಸ ಈ ಎಲ್ಲರ ಕೊಡುಗೆಗಳನ್ನು ಉಲ್ಲೇಖಿಸುತ್ತಾರೆ. ರಾಜಾರಾಮ್ ಮೋಹನ ರಾಯರ ‘ಬ್ರಹ್ಮೋ ಸಮಾಜ’ ಕ್ರೈಸ್ತರಿಂದ ಪ್ರಭಾವಿತವಾದರೆ, ಆರ್ಯಸಮಾಜ “ಮರಳಿ ವೇದಗಳಿಗೆ” ಆಂದೋಲದ ಮೂಲಕ ದೇಶಪ್ರೇಮದ ಜಾಗ್ರತಿಯನ್ನು ಹುಟ್ಟಿಸಲು ಕಾರಣವಾಯಿತು ಎನ್ನುತ್ತಾರೆ. ಥಿಯಾಸೊಫಿಕಲ್ ಸೊಸೈಟಿ, 1905ರ ಬಂಗಾಲದ ವಿಭಜನೆ ರಾಷ್ಟ್ರ ಪ್ರಜ್ಞೆ ಜಾಗೃತವಾಗಲು ಕಾರಣವಾಯಿತು ಎನ್ನುವುದನ್ನು ತನ್ನ ಆಳವಾದ ವಿಶ್ಲೇಷಣೆಗಳೊಂದಿಗೆ ತೆರೆದಿಡುತ್ತಾರೆ. ನೇತಾಜಿಯವರು ಮುನ್ನುಡಿಯಾಗಿ ಭಾರತೀಯ ಹೋರಾಟವನ್ನು ವಿವರಿಸುವಾಗ ಎಲ್ಲವನ್ನೂ ತಮ್ಮ ನೆನಪಿನ ಬುತ್ತಿಯಿಂದ ವಿವರಿಸುತ್ತಾರೆ. ಅವೆಲ್ಲವೂ ಅಷ್ಟೇ ನಿಖರವಾಗಿದೆ.
ನೇತಾಜಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಕಾಂಗ್ರೆಸ್ಸನ್ನೇ ಏಕೆ ಆಯ್ಕೆ ಮಾಡಿಕೊಂಡೆ ಎನ್ನುವುದಕ್ಕೂ ಸ್ಪಷ್ಟ ಉದಾಹರಣೆಯನ್ನು ಕೊಡುತ್ತಾರೆ. ಕಾಂಗ್ರೆಸ್ಸೆನ್ನುವುದು ಎಲ್ಲರನ್ನು ಕೊಂಡೊಯ್ಯುವ ಸಾಧ್ಯತೆಯುಳ್ಳ ಏಕಮೇವ ಪಕ್ಷವೆನ್ನುತ್ತಾರೆ. ಅದರಲ್ಲಿ ಬಲಪಂಥೀಯರಿದ್ದಾರೆ, ಜಮೀನುದಾರರಿದ್ದಾರೆ, ಎಡಪಂಥೀಯರಿದ್ದಾರೆ ಎನ್ನುತ್ತಾ ತಾವೂ ಸಹ ಎಡಪಂಥದ ವಿಚಾರಧಾರೆಗೆ ತೆರೆದುಕೊಂಡವರು ಎಂದು ನುಡಿಯುತ್ತಾರೆ. ಜವಹಾರ್ ನೆಹರು ಸಹ ಎಡಪಂಥೀಯರೆ. ವಿಭಿನ್ನ ಗುಂಪು ಮತ್ತು ಭಿನ್ನ ಭಿನ್ನ ನಡೆಯುಳ್ಳ ಕಾಂಗ್ರೆಸಿನಲ್ಲಿ ಎಲ್ಲರನ್ನು ಸಮನ್ವತೆಯಿಂದ ತೆಗೆದುಕೊಂಡು ಹೋಗುವ ಸಾಮರ್ಥ್ಯವಿರುವವರು ಮಹಾತ್ಮಾ ಗಾಂಧೀಜಿ ಮಾತ್ರ ಎಂದು ಅವರು ಮೊದಲ ಬಾರಿಗೆ ಗಾಂಧೀಜಿಯ ಕುರಿತು ತಮಗಿರುವ ಆಕರ್ಷಣೆ ಮೂಲ ಕಾರಣವನ್ನು ಬಹಿರಂಗಪಡಿಸುತ್ತಾರೆ. ಇಂಗ್ಲೀಷ್ ಆವೃತ್ತಿಯಲ್ಲಿ ’The Indian Struggle’ ನಲ್ಲಿ ಗಾಂಧೀಜಿಯವರ ಕುರಿತು ಸುಭಾಷರು “The leader of the Congress is Mahatma Gandhi — who is the virtual dictator” ಎನ್ನುವ ಮಾತುಗಳನ್ನು ಶಬ್ಧ್ಯಾರೀತಿ ಅನುವಾದಿಸಿದರೆ ಅಪಾರ್ಥವನ್ನು ಕಲ್ಪಿಸಲು ಸಾಧ್ಯವಿದೆ. ಇಂಥಲ್ಲಿ ಅನುವಾದಕನ ಜಾಣ್ಮೆ ತುಂಬಾ ಮುಖ್ಯ. ಕೇವಲ ಭಾಷಾಜ್ಞಾನವಿದ್ದರೆ ಸಾಲದು, ಆ ಕಾಲದ ಸನಿವೇಶ, ಅಲ್ಲಿರುವ ವಿವಿಧ ಬಗೆಯ ಚಿಂತಕರು, ತರ್ಕ, ಕುತರ್ಕವಾದಿಗಳು ಇವರನ್ನೆಲ್ಲರನ್ನೂ ಸಂಭಾಳಿಸಿಕೊಂಡು ಹೋಗುವಂತಹ ವ್ಯಕ್ತಿತ್ವವನ್ನು ಹೊಂದಿದವರಾಗಬೇಕು. ರಾಜಕೀಯ ವಿಶ್ಲೇಷಣೆಯಲ್ಲಿ ಅಧಿಕಾರಯುಕ್ತವಾಗಿ ಮಾತಾಡಬಲ್ಲ ಪ್ರೋ. ರಾಧಾಕೃಷ್ಣ ಅವರು ಅನುವಾದ ಮಾಡುವಾಗ ಕಾಂಗ್ರೇಸ್ಸಿನ ಆಗಿನ ನಾಯಕರುಗಳ ವಿವಿಧತೆ, ವೈವಿಧ್ಯಮಯ ಚಿಂತನೆಗಳು ಇವುಗಳನ್ನೆಲ್ಲವನ್ನೂ ಸುಭಾಷರು ವಿವರಿಸಿರುವುದನ್ನು ಗಮನಿಸುತ್ತಾರೆ. ಮೊದಲೇ ಹೇಳಿದಂತೆ ಕಾಂಗ್ರೆಸ್ಸಿನಲ್ಲಿರುವ ಧಾರ್ಮಿಕ, ನಾಸ್ತಿಕ, ಉದಾರವಾದಿ, ತೀರ್ವವಾದಿ, ಬಲಪಂಥ, ಎಡಪಂಥ ಇವರನ್ನೆಲ್ಲರನ್ನು ತೆಗೆದುಕೊಂಡು ಹೋಗಬಲ್ಲ ಸಾಮರ್ಥ್ಯವಿರುವುದು ಗಾಂಧೀಜಿಯವರಿಗೆ ಮಾತ್ರಸಾಧ್ಯ ಎನ್ನುವುದನ್ನು ಮನಗಂಡಿದ್ದಾರೆ.
“ಎಲ್ಲಾ ರೀತಿಯ ಶಾಂತಿಯುತ ಮತ್ತು ಕಾನೂನು ಮಾರ್ಗಗಳ ಮೂಲಕ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯುವುದು ಕಾಂಗ್ರೇಸ್ ಪಕ್ಷದ ಗುರಿ. ಈಗ ಕಾಂಗ್ರೆಸ್ ಪಕ್ಷದ ನಾಯಕರು ಮಹಾತ್ಮಾ ಗಾಂಧಿ. ನಿಜದ ನೆಲೆಯಲ್ಲಿ ಅವರು ಒಂದು ರೀತಿಯ ಸರ್ವಾಧಿಕಾರಿಯೇ” (ಪು. 69) ಎಂದು ರೂಪಾಂತರ ಮಾಡುತ್ತಾರೆ. ಒಟ್ಟಾರೆಯಾಗಿ ನೇತಾಜಿಯವರು ಗಾಂಧೀಜಿಯವರನ್ನು ಜಗತ್ತಿನ ಇನ್ನಿತರ ಯಾವುದೇ ಸರ್ವಾಧಿಕಾರಿಗಳ ಜೊತೆ ಹೋಲಿಸಲು ಇಚ್ಛಿಸುವುದಿಲ್ಲ. ಗಾಂಧೀಜಿಯವರೊಡನೆ ಭಿನ್ನಾಭಿಪ್ರಾಯ ಇದ್ದಾಗಲೂ, ಅವರ ಹಾದಿಯನ್ನು ಬಿಟ್ಟು ತನ್ನದೇ ಆದ ಕ್ರಾಂತಿಕಾರಕ ಮಾರ್ಗವನ್ನು ಹಿಡಿದಾಗಲೂ ಇದಕ್ಕೆ ಕಾರಣ ಮಹಾತ್ಮಾ ಗಾಂಧೀಜಿ ಎಂದು ಎಲ್ಲಿಯೂ ಹೇಳಿರುವುದಿಲ್ಲ. ವಿವಿಧ ಗುಂಪುಗಳ ನಡುವೆ ಸಮನ್ವಯವನ್ನುಮಾಡುವುದು ಗಾಂಧೀಜಿಯವರಿಗೆ ಮಾತ್ರ ಸಾಧ್ಯ ಎನ್ನುವುದು ಅವರ ಅಭಿಪ್ರಾಯದ ತಿರುಳು. ಅದಕ್ಕೆ ಅವರು ಕೊಡುವ ಉದಾಹರಣೆ ಎಡಪಂಥೀಯ ಧೋರಣೆಗಳನ್ನು ಹೊಂದಿದ್ದ, ಶ್ರೀನಿವಾಸ್ ಅಯ್ಯಂಗಾರ್, ಜವಾಹರಲಾಲ್ ನೆಹರು, ಡಾ.ಮಹಮದ್ ಆಲಮ್, ಪಾರ್ಸಿಜನಾಂಗದ ಕುರ್ಷಿದ್ ಪ್ರೇಮಜಿ ನಾರೀಮನ್, ಡಾ. ಎಸ್. ಕಿಚ್ಲೂ ಮತ್ತು ತಾನು ಆಗಿದ್ದೇವೆ. ಇದರಲ್ಲಿ ಡಾ. ಎಸ್. ಕಿಚ್ಲೂ ಹಾಗೂ ಸುಭಾಷರ ಹೊರತೂ ಉಳಿದೆಲ್ಲವರನ್ನೂ ಗಾಂಧಿ ತಮ್ಮ ವಾದದತ್ತ ಮನವೊಲಿಸಿಕೊಂಡಿದ್ದರು.
ಮುಸ್ಲಿಂ ಲೀಗಿಗೆ ಪ್ರತಿಯಾಗಿ ಹುಟ್ಟಿಕೊಂಡಿರುವ ‘ಹಿಂದೂ ಮಹಾಸಭೆʼ, ಬ್ರಿಟಿಷರ ಪರವಾಗಿ ಹುಟ್ಟಿಕೊಂಡ ‘ಜಸ್ಟಿನ್ ಪಾರ್ಟಿ’ ಇವೆಲ್ಲದರ ನಡುವೆ ರಾಷ್ಟ್ರೀಯ ವಿಚರಧಾರೆ ಇದ್ದಿರುವುದು ಕಾಂಗ್ರೆಸಿಗೆ ಮಾತ್ರ, ಅದನ್ನು ಯಶಸ್ವಿಯಾಗಿ ನಿಭಾಯಿಸಬಲ್ಲ ಸಾಮರ್ಥ್ಯವಿರುವುದು ಕಾಂಗ್ರೆಸಿಗೆ ಮಾತ್ರ ಎನ್ನುವದು ಸುಭಾಷರ ಅರಿವಿಗಿದೆ. ಕಾಂಗ್ರೆಸ್ಸಿಗೆ ಆಗಬೇಕಾಗಿರುವುದು ವಿವೇಕಯುಕ್ತ ನಾಯಕತ್ವ. ಅದನ್ನು ಮಹಾತ್ಮಾ ಗಾಂಧೀಜಿ ಮಾತ್ರ ಕೊಡಬಲ್ಲರು. ಅವರ ನೇತ್ರತ್ವದ ಕಾಂಗ್ರೆಸಿಗೆ ನಿಶ್ಚಿತವಾದ ರಾಜಕೀಯ ಸಿದ್ಧಾಂತ ಮತ್ತು ಗುರಿ ಇದೆ. “ಉಳಿದ ಪಕ್ಷಗಳು ಬ್ರಿಟಿಷ್ ಅಧಿಕಾರಿಗಳ ಊಟದ ಮೇಜುಗಳಿಂದ ಎಸೆಯಲ್ಪಡುವ ರೊಟ್ಟಿಯ ತುಣುಕುಗಳನ್ನು ತಮ್ಮತಮ್ಮಲ್ಲೇ ಹಂಚಿಕೊಳ್ಳುವುದೇ ಈ ಮತೀಯ ಪಕ್ಷಗಳ ಗುರಿಯಾಗಿದೆ” ಎಂದು ಕಟುವಾಗಿ ಟೀಕಿಸುತ್ತಾರೆ. ನೆನಪಿಡಿ, ನೇತಾಜಿ ಕಾಂಗ್ರೆಸಿನ ಸಂಪರ್ಕ ಬಿಟ್ಟಮೇಲೆ ಇದನ್ನು ಬರೆದಿರುವುದು. ತನ್ನ ಸಿದ್ಧಾಂತಗಳಿಗೂ ಕಾಂಗ್ರೆಸಿನ ಸಿದ್ಧಾಂತಗಳಿಗೂ ವೈರುಧ್ಯಬಂದಾಗ ತಾನಾಗಿಯೇ ನಾಯಕತ್ವವನ್ನು ತ್ಯಜಿಸಿರುವುದು ಹೊರತೂ ಅದಕ್ಕೆ ಕಾಂಗ್ರೆಸ್ ಕಾರಣವಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ಫಾರ್ವರ್ಡ್ ಬ್ಲಾಕ್ ಪಕ್ಷವನ್ನು ಕಟ್ಟಿದಾಗಲೂ ಸಹ ಅವರ ಮನ್ಸಸ್ಸು ಕಾಂಗ್ರೆಸಿನಲ್ಲಿಯೇ ಇರುತ್ತದೆ. ಎಲ್ಲಿಯೂ ಕಾಂಗ್ರೆಸಿನಿಂದ ತನ್ನನ್ನು ಹೊರದೂಡಲಾಯಿತು ಎನ್ನುವ ಸಣ್ಣ ಅಪಸ್ವರವೂ ಅವರಿಂದ ಹೊರಬಂದಿಲ್ಲ. ಕಾಂಗ್ರೆಸಿನ ಅಧ್ಯಕ್ಷನಾಗಿ ಎರಡನೆ ಬಾರಿ ಅಧ್ಯಕ್ಷನಾಗಿ ಅಯ್ಕೆಯಾದಾಗ “ರಾಜಿನಾಮೆಗೆ ಕಾರಣ ಗಾಂಧೀವಾದಿಗಳೇ” ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಆದರೆ ಗಾಂಧೀಜಿಯವರನ್ನು ದೂರುವುದಿಲ್ಲ. ಬಹುಶಃ ಇದೊಂದು ಆತ್ಮಕಥೆ ಹೊರಬರದಿದ್ದಲ್ಲಿ ಸತ್ಯ ಇತಿಹಾಸದಲ್ಲಿ ಅಡಗಿಹೋಗುತ್ತಿತ್ತು. ಪ್ರೊ. ರಾಧಾಕೃಷ್ಣ ಅನುವಾದದ ಬದ್ಧತೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ಮಾಡಿದ್ದಾರೆ. ನೇತಾಜಿಯವರ ಪ್ರಸಿದ್ಧ ಭಾಷಣಗಳಲ್ಲಿಯೂ ಗಾಂಧೀಜಿಯವರ ಮತ್ತು ಕಾಂಗ್ರೆಸಿನ ವಿಷಯದಲ್ಲಿ ಈ ನಿಲುವು ಸದಾ ಇದೆ.

(ಪ್ರೊ. ಕೆ.ಇ. ರಾಧಾಕೃಷ್ಣ)
ಒಟ್ಟೂ ಹದಿನಾರು ಅಧ್ಯಾಯಗಳಲ್ಲಿ ಹಾಗೂ ಅದಕ್ಕೂ ಮೊದಲು ಪೂರ್ವ ಪೀಠಿಕೆಯಾಗಿ ಬರೆದ ಐದು ಅಧ್ಯಾಯಗಳಲ್ಲಿ ಬರೆದ ಈ ಆತ್ಮಕಥೆಯಲ್ಲಿ ನೇತಾಜಿಯವರು ಹೆಸರನ್ನು ನೀಡಿದ್ದೂ ಭಾರತೀಯರ ಸ್ವಾತಂತ್ರ್ಯ ಹೋರಾಟದ ಹಂತವನ್ನು ಸೂಚಿಸುತ್ತದೆ. ಉದಾಹರಣೆಗೆ “ಮೋಡಗಳು ಕವಿದವು”, ಚಂಡ ಮಾರುತ ಅಪ್ಪಳಿಸಿತು, ಹೋರಾಟ ಕುಸಿಯಿತು, ಮುಂಬರುವ ವಿಪ್ಲವದ ಗುರುತು, ಯುರೋಪಿನಲ್ಲಿ ಗಾಂಧಿ, ಶ್ವೇತಪತ್ರ ಮತ್ತು ಮತೀಯ ತೀರ್ಮಾನ, ಕೊನೆಯದಾಗಿ ಭವಿಷ್ಯದ ಬಗ್ಗೆ ಪಕ್ಷಿನೋಟ, ಹೀಗೆ ಓರ್ವ ನೇತಾರ ತನ್ನ ದೇಶದ ಕುರಿತು ಯಾವ ರೀತಿಯ ಕಳಕಳಿಯನ್ನು ಹೊಂದಿದ್ದಾನೆ ಎನ್ನುವುದನ್ನು ಅವರ ಆತ್ಮಕಥೆಯಲ್ಲಿದೆ. 1920 ರಿಂದ 1934 ನಡುವಿನ ಹದಿನಾಲ್ಕು ವರ್ಷಗಳ ಕಾಲ ಭಾರತೀಯ ಸ್ವಾತಂತ್ರ್ಯ ಹೋರಾಟ ಕಂಡ ಅನೇಕ ಮಜಲುಗಳ ಮೇಲೆ ಅವರು ಕ್ಷ-ಕಿರಣವನ್ನು ಬೀರುತ್ತಾರೆ. ಇದು ಗಾಂಧೀಜಿಯ ಯುಗವೂ ಹೌದು. ಈ ಸಂದರ್ಭದಲ್ಲಿ ದೇಶದಲ್ಲಿ ಯಾವ ಘಟನೆಯಾದರೂ ಅದಕ್ಕೆ ಕಾಂಗ್ರೆಸಿಗಿಂತಲೂ ಗಾಂಧೀಜಿಯ ನಿರ್ಧಾರವೂ ಕಾರಣವಾಗುತ್ತಿತ್ತು.
ಕಾಂಗ್ರೆಸು ಮೊದಲಿನಿಂದಲೂ ಹಿಂದುಗಳ ಪಕ್ಷ ಎನ್ನುವುದನ್ನು ಮುಸ್ಲಿಮರಲ್ಲಿ ಬಿತ್ತಲು ಬ್ರಿಟಿಷರು ಪ್ರಯತ್ನಿಸಿದ್ದರು. ಅದನ್ನು ಮೊದಲು ಗುರುತಿಸಿದ್ದು ಗಾಂಧೀಜಿ. ಅದನ್ನು ತೊಡೆದು ಹಾಕಲು ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡಿದರು. ಅದನ್ನು ಸುಭಾಷರು ಅಲ್ಲಗೆಳೆಯುವುದಿಲ್ಲ. 1923 ರಲ್ಲಿ ಪಂಜಾಬಿನಲ್ಲಿ ನಡೆದ ಭೀಕರ ಕೋಮುಗಲಭೆಗಳ ನಂತರ (ಹಿಂದುಗಳ) ಕಾಂಗ್ರೆಸಿಗೆ ಎದುರಾಗಿ ಮುಸ್ಲಿಮರು “ತನ್ ಜೀಮ ಅಥವಾ ತಬ್ಲಿಘಿ” ಎನ್ನುವ ಸಂಘಟನೆಯನ್ನು ಹುಟ್ಟುಹಾಕಿದರು. ಇದಕ್ಕೆ ಪ್ರತಿಯಾಗಿ ಹಿಂದೂ ಮಹಾಸಭಾ ಹುಟ್ಟಿಕೊಂಡಿತು. ತನ್ ಜೀಮ್ ಕೆಲ ಕಾಲಾಂತರದಲ್ಲಿ ತನ್ನ ಪ್ರಭಾವವನ್ನು ಕಳೆದುಕೊಂಡರೂ ಅದು ಮುಸ್ಲಿಮ್ ಲೀಗಿನ ಸ್ಥಾಪನೆಗೆ ಒಂದು ಪ್ರೇರಣೆಯಾಯಿತು ಎನ್ನುವುದು ಬಹು ಮುಖ್ಯ. ಮೊತ್ತ ಮೊದಲು ಕೆಳಸ್ತರದ ಹಿಂದುಗಳಿಗೆ ಮೀಸಲಾತಿಯನ್ನು ಕೊಡಬೇಕೆಂದು ಒತ್ತಾಯಿಸಿದ್ದು “ಹಿಂದು ಮಹಾಸಭಾ” ಎನ್ನುತ್ತಾರೆ. ಚರಿತ್ರೆಯನ್ನು ಇಷ್ಟೊಂದು ಆಳವಾಗಿ ಸುಭಾಷರು ತಮ್ಮ ನೆನಪಿನಿಂದಲೇ ದಾಖಲಿಸಿದ್ದಾರೆ. ಸ್ವಾಮಿ ಶ್ರದ್ಧಾನಂದರ ಕೊಲೆಯಾದಾಗ ಪರಿಸ್ಥಿತಿಯನ್ನು ನಿಭಾಯಿಸುವ ಹೊಣೆ ಗಾಂಧೀಜಿಯವರಿಗೆ ಬಂತು. ಅವರಿಗೆ ಸಮಷ್ಟಿ ಹಿತ ಮುಖ್ಯವಾದುದರಿಂದ ಸಮಾಜವನ್ನು ಒಡೆಯುವುದನ್ನು ತಡೆಯಲು ಪ್ರತಿಕ್ರಿಯಿಸಲಿಲ್ಲ. ಗಾಂಧೀಜಿಯವರು ಅಲಿ ಸಹೋದರರೆಂದೇ ಹೆಸರಾದ ಶೌಕತ್ ಅಲಿ ಮತ್ತು ಮಹಮದ್ ಅಲಿಯವರನ್ನು ಅಗತ್ಯಕ್ಕಿಂತಲೂ ಹೆಚ್ಚು ಪ್ರೀತಿಯಿಂದ ನೋಡಿಕೊಂಡರೂ ಕೊನೆಗೆ ಅವರು ಮುಸ್ಲಿಮ್ ಲೀಗಿನ ಸ್ಥಾಪನೆ ಮಾಡುವುದನ್ನು ತಡೆಯಲಾಗಲಿಲ್ಲ. ಜಿನ್ನಾ ನಾಗಪುರ ಅಧಿವೇಶನದಲ್ಲಿ ಮಹಾತ್ಮಾ ಗಾಂಧೀಜಿಯವರನ್ನು “ಮಿ. ಗಾಂಧಿ” ಎಂದು ಸಂಬೋಧಿಸಿದ್ದು ಕೋಲಾಹಲವನ್ನೇ ಎಬ್ಬಿಸಿತು.
ಗಾಂಧೀಜಿಯವರನ್ನು ಮಹಾತ್ಮಾ ಎಂದು ಕರೆದಿರುವುದೇ ಸುಭಾಷರು. ಆದರೆ ಅವರ ಅತಿಯಾದ ಸರಳತೆ ಮತ್ತು ಅಹಿಂಸೆಯನ್ನು ಸುಭಾಷರು ಸಹಿಸಲಿಲ್ಲ. ಗಾಂಧೀಜಿಯನ್ನು ಜನರು ಸಂತ ಪದವಿಗೆ ಏರಿಸಿ ಆರಾಧಿಸುವ ಮಟ್ಟಕ್ಕೆ ಬಂದಿರುವುದನ್ನು ಗಾಂಧಿ ವಿರೋಧಿಸಲಿಲ್ಲ. ಹಿಟ್ಲರ್, ಮುಸಲೋನಿ, ಲೆನಿನ್ ರಂತೆ ಗಾಂಧೀಜಿಯೂ ಜನರ ಮನಸ್ಥಿತಿಯನ್ನು ಚನ್ನಾಗಿ ಉಪಯೋಗಿಸಿಕೊಂಡರು ಎಂದು ಟೀಕಿಸುತ್ತಾರೆ. ಜವಾಹರನೆಹರೂ ಕುರಿತು ಯಾವತ್ತಿಗೂ ಅವರು ಯಾವ ಟೀಕೆಯನ್ನು ಮಾಡಿಲ್ಲ. ಅವರ ಕಮ್ಯುನಿಷ್ಟ ನಿಲುವನ್ನು ಮೆಚ್ಚಿಕೊಳ್ಳುತ್ತಾರೆ. “ಭಿನ್ನಾಭಿಪ್ರಾಯ ಏನೇ ಇರಲಿ ಗಾಂಧೀಜಿ ಮತ್ತು ತನ್ನ ನಡುವೆ ಇದ್ದ ಸಂಬಂಧಗಳು ಯಾವುದೇ ರೀತಿಯ ವ್ಯಕ್ತಿಗತ ದ್ವೇಷಗಳಿಗೆ ಎಡೆಮಾಡಲಿಲ್ಲ” ಎನ್ನುತ್ತಾರೆ.
ಒಂದು ಮೌಲಿಕವಾದ ಕೃತಿಯನ್ನು ಅನುವಾದ ಮಾಡಬೇಕಾದಾಗ ಅನುವಾದಕನಿಗೆ ಅದರ ಮೂಲದ ನಿರ್ವಚನದ ಅರಿವು ಅತ್ಯಗತ್ಯ. ಅನುವಾದಕ ಮೂಲಕ್ಕೆ ನಿಷ್ಟನಾಗಿರಬೇಕಾಗುತ್ತದೆ. ಉಪಯೋಗಿಸುವ ಪದಗಳ ಬಳಕೆಯಲ್ಲಿ ಜಾಗ್ರತೆ ಅತ್ಯಗತ್ಯ. ಒಂದು ಸಣ್ಣ ವ್ಯತ್ಯಾಸವೂ ಅಭಾಸಕ್ಕೆ ಎಡೆಮಾಡಿಕೊಡುತ್ತದೆ. ಸ್ವಂತದ್ದು ಎನ್ನುವುದೇನೂ ಇಲ್ಲದೇ ಇನ್ನೊಬ್ಬರ ವಿಚಾರವನ್ನು ಯಥಾವತ್ತಾಗಿ ದಾಖಲಿಸುವಲ್ಲಿ ಅನುವಾದಕ ತನ್ನನ್ನು ತಾನು ಕಾಣಿಸಿಕೊಳ್ಳುವುದು, ಅದನ್ನು ಹೇಳುವ ಶೈಲಿಯಮೇಲೆ ಅವಲಂಬಿತವಾಗಿದೆ. ಪ್ರೊ. ಕೆ. ಇ. ರಾಧಾಕೃಷ್ಣ ಅವರಿಗೆ ಇದು ಸಿದ್ಧಿಸಿದೆ. ಅವರ ಹಿಂದಿನ ಅನೇಕ ಅನುವಾದಗಳಲ್ಲಿ ಉಪಯೋಗಿಸುವ ಭಾಷೆ, ಕಾಲದ ಪರಿಜ್ಞಾನ ಸತ್ಯದ ಅನಾವರಣ, ಸಂಶೋಧಕನ ಚಿಕಿತ್ಸಕ ಬುದ್ಧಿ ಇವುಗಳನ್ನು ಕಾಣಬಹುದು. ಅದನ್ನು ಇಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿದ್ದಾರೆ.
(ಕೃತಿ: ಭಾರತೀಯ ಹೋರಾಟ, ಲೇಖಕರು: ಮೂಲ: ನೇತಾಜಿ ಸುಭಾಶ್ಚಂದ್ರ ಬೋಸ್ ಅನು: ಪ್ರೊ. ಕೆ. ಇ. ರಾಧಾಕೃಷ್ಣ, ಪ್ರಕಾಶಕರು: ಸನ್‌ಸ್ಟಾರ್ ಪಬ್ಲಿಷರ್, ಬೆಂಗಳೂರು)

ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.