ದೀಪಾ ಅವರ ರೀತಿಯಲ್ಲೇ ಬಾನುರವರು ಕೆಲವು ಉರ್ದು ಪದಗಳನ್ನು ಯಾವುದೇ ವಿವರಣೆ ಇಲ್ಲದೇ ಅನುವಾದ ಮಾಡದೇ ಬಳಸುತ್ತಾರೆ. ಉದಾಹರಣೆಗೆ ಸಂಬಂಧ ಸೂಚಕ ಪದಗಳಾದ ಭಾಬಿ, ಅಮ್ಮಿ, ಆಪ, ಬೇಟಾ, ಅಮ್ಮಿಜಾನ್, ದಾದಿಮಾ. ಆದರೆ ಸಾಕಷ್ಟು ಬಾರಿ ಇವುಗಳ ಬದಲು ಅತ್ತಿಗೆ, ಅಮ್ಮ, ತಂದೆ, ಅನ್ನುವ ಕನ್ನಡ ಪದಗಳನ್ನೇ ಬಳಸಿದ್ದಾರೆ. ಇಸ್ಲಾಮ್‌ಗೆ ಸಂಬಂಧಿಸಿದ ಆಜಾನ್, ಮುತವಲ್ಲಿ, ಕಫನ್, ಗುಸುರ್, ದಫನ್, ಖಬರ್‌ಸ್ತಾನ್, ಇವುಗಳೂ ಕೂಡ ವಿವರಣೆಯಿಲ್ಲದೆ ಕೆಲವೊಮ್ಮೆ ಉರ್ದು ಮೂಲ ರೂಪದಲ್ಲಿ, ಕೆಲವೊಮ್ಮೆ ಉರ್ದು ಮೂಲರೂಪದ ಜೊತೆಗೆ ಕನ್ನಡದ ವಿವರಣೆಯೊಂದಿಗೆ ಬರುತ್ತವೆ.
ಬಾನು ಮುಷ್ತಾಕ್ ಕತೆಗಳ ಅನುವಾದದ ಕುರಿತು ಬಿ.ವಿ.ರಾಮಪ್ರಸಾದ್ ಬರಹ
‘ಮೂಲ’ ಕೃತಿಯ ಅನುವಾದ ಮತ್ತು ‘ಮೂಲ’ ಕೃತಿಯೊಳಗಿನ ಅನುವಾದದ ಅನುವಾದ
ಹಿಂದಿಯಲ್ಲಿ ಕ್ರೈಮ್ ಪಟ್ರೋಲ್ ಅನ್ನುವ ಒಂದು ಸೀರಿಯಲ್ ಇದೆ. ಇದರಲ್ಲಿ ಕೆಲವೊಮ್ಮೆ ಕರ್ನಾಟಕದಲ್ಲಿ ನಡೆದಿರುವ ಅಪರಾಧಗಳ ನಾಟಕೀಕರಣ ಇರುತ್ತದೆ. ಪಾತ್ರಗಳು ‘ನಿಜ’ ಜೀವನದಲ್ಲಿ ಕನ್ನಡದಲ್ಲಿ ಮಾತಾಡಿರುತ್ತವೆ-ಉದಾಹರಣೆಗೆ ಕೊಲೆ ಹೇಗೆ ಮಾಡಬಹುದು ಅನ್ನುವುದರ ಬಗ್ಗೆ. ಆದರೆ ಸೀರಿಯಲ್‌ನ ಭಾಷೆ ಹಿಂದಿ. ಪಾತ್ರಗಳು ಕನ್ನಡ ಮಾತಾಡುತ್ತವೆ ಅಂತ ತೋರಿಸಲು ಅಮ್ಮ, ಅಪ್ಪ, ಅಣ್ಣ, ಈ ರೀತಿಯ ಕೆಲವು ಪದಗಳನ್ನು ಸೀರಿಯಲ್ ಉಪಯೋಗಿಸುತ್ತದೆ, ಉಳಿದಂತೆ ಸಂಭಾಷಣೆ ಹಿಂದಿಯಲ್ಲೇ ನಡೆಯುತ್ತದೆ. ಅಂದರೆ ಕನ್ನಡದ ಪಾತ್ರಗಳ ಕನ್ನಡವನ್ನು ಹೆಚ್ಚು ಕಮ್ಮಿ ಹಿಂದಿಯಲ್ಲೇ ನೀಡಿ, ಒಂದು ಎರಡು ಎದ್ದು ಕಾಣುವ ಕನ್ನಡ ಪದಗಳನ್ನು ಬಳಸಿ ಇದು ಕನ್ನಡದಲ್ಲಿ ನಡೆದಿರುವ ಕತೆ ಅನ್ನುವ ಸೂಚನೆಯನ್ನು ಕೊಡಲಾಗುತ್ತದೆ.
ಕನ್ನಡದ ಕೃತಿಯೊಂದನ್ನು ಇಂಗ್ಲಿಶ್‌ಗೆ ಅನುವಾದಿಸಿದಾಗ ಇದು ಕನ್ನಡದ ಕೃತಿ ಅನ್ನುವ ಸೂಚನೆಗಳನ್ನು ಕೊಡಬೇಕೆ ಬೇಡವೆ, ಕೊಟ್ಟರೆ ಎಷ್ಟರ ಮಟ್ಟಿಗೆ ಕೊಡಬೇಕು ಅನ್ನುವ ಪ್ರಶ್ನೆಯಂತೂ ಇದ್ದೇ ಇದೆ. ಆದರೆ ಹೆಚ್ಚು ಗಮನ ಸೆಳೆಯದಿರುವ ಇನ್ನೊಂದು ಪ್ರಶ್ನೆಯಿದೆ. ಕನ್ನಡದಲ್ಲೇ ಬರೆದಿರುವ ಕೃತಿಗಳಲ್ಲಿ ಬೇರೆ ಭಾಷೆಗಳ ಸಂಭಾಷಣೆಗಳನ್ನು ಹೇಗೆ ನೀಡಲಾಗುತ್ತದೆ? ‘ಮಲೆಗಳಲ್ಲಿ ಮದುಮಗಳು’ವಿನಲ್ಲಿ ‘ಸಾಬರ ಮಾತಿನಲ್ಲೇ ಕೇಳಿದನು’ ಎಂದು ಬರುತ್ತದೆ. ಇನ್ನು ‘ಸ್ವಪ್ನ ಸಾರಸ್ವತ’ದ ಪಾತ್ರಗಳು ‘ನಿಜ’ ಜೀವನದಲ್ಲಿ ಕೊಂಕಣಿಯಲ್ಲೇ ಮಾತಾಡಿರುವುದನ್ನು ಕನ್ನಡದಲ್ಲೇ ನೀಡಿ ಇವರು ಕೊಂಕಣಿಯಲ್ಲಿ ಮಾತಾಡಿದ್ದಾರೆ ಅನ್ನುವುದನ್ನು ಹೇಗೆ ಸೂಚಿಸಲಾಗಿದೆ ಅನ್ನುವುದು ಕುತೂಹಲಕಾರಿ ಪ್ರಶ್ನೆ. ಟಾಲ್ಸ್‌ಟಾಯ್‌ನ ‘ವಾರ್ ಆಂಡ್ ಪೀಸ್’ನಲ್ಲಿ ಫ್ರೆಂಚ್ ಸಂಭಾಷಣೆಗಳು ಅನೇಕ ಬಾರಿ ಫ್ರೆಂಚ್ ಭಾಷೆಯಲ್ಲೇ ಬರುತ್ತವೆ. ಇಲ್ಲಿ ಇನ್ನೊಂದು ಪ್ರಶ್ನೆ ಬರುತ್ತದೆ- ‘ವಾರ್ ಆಂಡ್ ಪೀಸ್’ ಅನ್ನು ಕನ್ನಡಕ್ಕೆ ಅನುವಾದಿಸುವಾಗ ಇದು ರಷ್ಯನ್ ಭಾಷೆಯ ಕೃತಿ ಅನ್ನುವ ಸೂಚನೆಗಳನ್ನು ಉಳಿಸಿಕೊಳ್ಳುವಂತೆ ಅದರ ಫ್ರೆಂಚ್ ಅನ್ನು ಅನುವಾದಿಸುವಾಗ ಇದು ಫ್ರೆಂಚ್ ಸಂಭಾಷಣೆಗಳ ಅನುವಾದ ಅನ್ನುವ ಸೂಚನೆಗಳನ್ನೂ ಉಳಿಸಿಕೊಳ್ಳಬೇಕೆ ಅಥವಾ ಹೇಗೆ ಮತ್ತು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳಬೇಕು?

(ಬಾನು ಮುಷ್ತಾಕ್)
ದೀಪಾ ಭಾಸ್ತಿಯವರ ಬಾನು ಮುಷ್ತಾಕ್ ಕತೆಗಳ ಅನುವಾದ ಈ ನಿಟ್ಟಿನಲ್ಲಿ ಕುತೂಹಲಕಾರಿಯಾದ ಪ್ರಶ್ನೆಗಳನ್ನು ಎತ್ತುತ್ತದೆ. ಒಂದು ಕಡೆ ಭಾಸ್ತಿಯವರು ಇದು ಕನ್ನಡದ ಕತೆಗಳು ಅನ್ನುವ ಸೂಚನೆಗಳನ್ನು ಹೇಗೆ, ಎಷ್ಟರ ಮಟ್ಟಿಗೆ ನೀಡುತ್ತಾರೆ ಅನ್ನುವ ಪ್ರಶ್ನೆಯಿದೆ. ಇನ್ನೊಂದು ಕಡೆ ಬಾನು ಮುಷ್ತಾಕ್‌ರವರ ಕತೆಗಳಲ್ಲಿ ಬರುವ ‘ಉರ್ದು’ವನ್ನು ಬಾನು ಮುಷ್ತಾಕ್‌ರವರು ಹೇಗೆ ಅನುವಾದಿಸಿದ್ದಾರೆ? ಇದು ಕನ್ನಡದಲ್ಲಿ ಬರೆದಿರುವ ಕತೆಗಳಾದರೂ ಅನೇಕ ಪಾತ್ರಗಳು ‘ನಿಜ’ ಜೀವನದಲ್ಲಿ ‘ಉರ್ದು’ವನ್ನೇ ಬಳಸುವ ಪಾತ್ರಗಳು- ಕೊನೆಯ ಪಕ್ಷ ಮನೆಯಲ್ಲಿ ಮಾತಾಡುವಾಗ. ಇದನ್ನು ಬಾನು ಮುಷ್ತಾಕ್ ಹೇಗೆ ಅನುವಾದಿಸಿದ್ದಾರೆ? ಹಾಗೂ ದೀಪಾ ಭಾಸ್ತಿಯವರು ಬಾನು ಮುಷ್ತಾಕ್‌ರ ಕನ್ನಡವನ್ನು ಅನುವಾದಿಸಿರುವ ಹಾಗೆಯೇ ಅವರ ‘ಉರ್ದು’ವನ್ನು ಅನುವಾದಿಸಿದ್ದಾರೆಯೇ? ಇನ್ನೂ ಮುಂದೆ ಹೋಗಿ ದೀಪಾ ಭಾಸ್ತಿಯವರು ಕನ್ನಡದ ಸೊಗಡನ್ನು ಇಂಗ್ಲಿಶ್‌ನಲ್ಲಿ ಬೀರಿರುವುದೇನೋ ಸರಿಯೇ, ಆದರೆ ಬಾನು ಮುಷ್ತಾಕ್‌ರವರು ಉರ್ದುವಿನ ಸೊಗಡನ್ನು ಕನ್ನಡದಲ್ಲಿ ಬೀರಿದ್ದಾರೆಯೇ? ಮತ್ತು ದೀಪಾ ಭಾಸ್ತಿಯವರ ಅನುವಾದ ಕನ್ನಡದಿಂದ ಇಂಗ್ಲಿಶ್‌ಗೆ ಅಷ್ಟೇಯೋ, ಅಥವಾ ಉರ್ದುವಿಂದ ಕನ್ನಡಕ್ಕೆ ಅನುವಾದವಾಗಿರುವುದರ ಇಂಗ್ಲಿಶ್ ಅನುವಾದವೋ?
ಇದಕ್ಕೆ ಸಂಬಂಧಿಸಿದಂತೆ ಕೆಲವು ಟಿಪ್ಪಣಿಗಳನ್ನು ಮಾಡುವ ಪ್ರಯತ್ನ ಈ ಬರಹ. ಮುಖ್ಯವಾಗಿ ಈ ಕೆಳಗಿನ ಅಂಶಗಳ ಬಗ್ಗೆ ಗಮನ ಸೆಳೆಯುವ ಪ್ರಯತ್ನ
1. ದೀಪಾ ಭಾಸ್ತಿಯವರು ಬಾನು ಅವರ ಕನ್ನಡವನ್ನು ಹೇಗೆ ಅನುವಾದಿಸಿದ್ದಾರೆ?
2. ಬಾನು ಅವರು ಉರ್ದುವನ್ನು ಕನ್ನಡಕ್ಕೆ ಹೇಗೆ ಅನುವಾದಿಸಿದ್ದಾರೆ?
3. ದೀಪಾ ಅವರು ಬಾನು ಅವರ ಉರ್ದುವನ್ನು ಹೇಗೆ ಅನುವಾದಿಸಿದ್ದಾರೆ?
ದೀಪಾ ಭಾಸ್ತಿಯವರ ಅನುವಾದದ ಸಿದ್ಧಾಂತ
ದೀಪಾ ಭಾಸ್ತಿಯವರು ತಮ್ಮ ಅನುವಾದದ ಸಿದ್ಧಾಂತವನ್ನು ‘ಹಾರ್ಟ್ ಲ್ಯಾಂಪ್’ನ ಹಿನ್ನುಡಿಯಲ್ಲಿ ”ಇಟ್ಯಾಲಿಕ್ಸ್ ಇಲ್ಲದ ಅನುವಾದ” ಅನ್ನುವ ಟಿಪ್ಪಣಿಯಲ್ಲಿ ನೀಡಿದ್ದಾರೆ. ಕೆಲವು ಕನ್ನಡ ಅಥವಾ ಉರ್ದು ಪದಗಳನ್ನು ಅನುವಾದ ಮಾಡದೇ ಹಾಗೇ ಉಳಿಸಿಕೊಳ್ಳಬೇಕು ಹಾಗು ಅವುಗಳನ್ನು ಇಟ್ಯಾಲಿಕ್ಸ್‌ನಲ್ಲಿ ನೀಡುವ ಅಥವಾ ಫುಟ್‌ನೋಟ್ಸ್ ನೀಡಿ ವಿವರಣೆ ನೀಡುವ ಅವಶ್ಯಕತೆ ಇಲ್ಲ ಅನ್ನುತ್ತಾರೆ. ಇಟ್ಯಾಲಿಕ್ಸ್ ಅಥವಾ ಫುಟ್‌ನೋಟ್ಸ್ ಬಳಕೆಯಿಂದ ಓದುವ ಸರಾಗತೆಗೆ ದಕ್ಕೆಯಾಗುತ್ತದೆ ಮತ್ತು ಅವು ಈ ಪದಗಳು ಬೇರೆ ಭಾಷೆಯಿಂದ ಬಂದ ವಿಚಿತ್ರ ಪದಗಳು ಅನ್ನುವ ಘೋಷಣೆಯನ್ನು ಮಾಡುತ್ತವೆ ಅನ್ನುತ್ತಾರೆ. (ಬಾನು ಮುಷ್ತಾಕ್ ಅವರು ತಮ್ಮ ಕತೆಗಳಲ್ಲಿ ”ಸೂಪ್”, “ಸ್ಟ್ರಿಕ್ಟ್ ಡಯೆಟ್” ತರದ ಪದಗಳನ್ನು ಉದ್ಧರಣ ಚಿಹ್ನೆಗಳನ್ನು ನೀಡಿ ಅವು ಇಂಗ್ಲಿಶ್‌ನ ಪದಗಳು ಅನ್ನುವುದನ್ನು ಸೂಚಿಸುವುದನ್ನು ಗಮನಿಸಬಹುದು). ಹಾಗೆ ಸರಾಗವಾಗಿ ಓದುವಾಗ ಓದುಗ ಬೇರೆ ಭಾಷೆಯ ಒಂದೋ ಎರಡೋ ಪದಗಳನ್ನು ಕಲಿಯಬಹುದು ಅನ್ನುವುದು ದೀಪಾ ಅವರ ಅಭಿಪ್ರಾಯ. (ನನ್ನ ಈ ಟಿಪ್ಪಣಿಯಲ್ಲಿ ಪದಗಳ ಬಗ್ಗೆ ಮಾತ್ರ ಮಾತಾಡುತ್ತಿದ್ದೇನೆ; ದೀಪಾ ಅವರು ಕನ್ನಡ ವಾಕ್ಯರಚನೆಯ ವೈಶಿಷ್ಟ್ಯಗಳನ್ನೂ ಕೂಡ ಕೆಲವೊಮ್ಮೆ ಇಂಗ್ಲಿಶ್ ಅಲ್ಲಿ ಉಳಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ).
ಸಹಜವಾಗಿಯೇ ಇದು ಇಂಗ್ಲಿಶ್‌ನಲ್ಲಿ ಸಂವಾದಿ ಪದಗಳಿಲ್ಲದ ಕನ್ನಡ ಪದಗಳಿಗೆ ಮಾತ್ರ ಅನ್ವಯಿಸುತ್ತದೆ- ಮಾವ, ಮೇಲೋಗರ, ಇತ್ಯಾದಿ. ಅನುವಾದದ ಸಿದ್ಧಾಂತಗಳು ನ್ಯೂಟನ್‌ನ ಭೌತಶಾಸ್ತ್ರದ ಸಿದ್ಧಾಂತಗಳ ಹಾಗೆ ಅಲ್ಲದೇ ಇರುವುದರಿಂದ ಪ್ರತಿ ಸಲವೂ ಇದನ್ನು ಪಾಲಿಸಲಾಗುತ್ತದೆ ಅಂತ ನಿರೀಕ್ಷಿಸಲಾಗುವುದಿಲ್ಲ. ಹಾಗೆಯೇ ಇಂಗ್ಲಿಶ್‌ನ ಒಬ್ಬ ಓದುಗ ಅರ್ಥವಾಗದೇ ಇರುವ ಕನ್ನಡ ಪದ ಬಂದಾಗ (ಉದಾಹರಣೆಗೆ ‘ಗಂಧ ಮಹೋತ್ಸವ) ಅಥವಾ ಕನ್ನಡದ ಒಬ್ಬ ಓದುಗ ಇಂಗ್ಲಿಶ್‌ಗೆ ಅನುವಾದವಾಗಿರುವ ಕೃತಿಯಲ್ಲಿ ಹಾಗೇ ಉಳಿಸಿರುವ ಅರ್ಥವಾಗದೇ ಇರುವ ಸ್ಪ್ಯಾನಿಷ್ ಪದ ಬಂದಾಗ, ಆ ಪದ ಬಳಸಿರುವ ಸಂದರ್ಭದಲ್ಲಿಯೇ ಅದರ ಅರ್ಥ ತಿಳಿಯಲಾಗದಿದ್ದಲ್ಲಿ, ಏನು ಮಾಡುತ್ತಾರೆ? ಆ ಪದವನ್ನು ಕಲಿಯುತ್ತಾರೆಯೇ, ಅಥವಾ ಆ ಪದದ ಅರ್ಥ ಹುಡುಕುತ್ತಾರೆಯೇ? ಆ ಪದಕ್ಕೆ ವಿವರಣೆ(ಫುಟ್‌ನೋಟ್ಸ್ ಮೂಲಕ, ಕಂಸದಲ್ಲಿ ನೀಡುವ ಮೂಲಕ, ಅಥವಾ ಜೊತೆಯಲ್ಲೇ ಅನುವಾದಿತ ಭಾಷೆಯ ಸಂವಾದಿ ಪದವನ್ನು ನೀಡುವ ಮೂಲಕ) ಪಠ್ಯದಲ್ಲಿ ಇಲ್ಲದೇ ಇರುವುದು ಓದುವ ಕ್ರಿಯೆಯನ್ನು ನಿಜವಾಗಿಯೂ ಸರಾಗಗೊಳಿಸುತ್ತದೆಯೇ ಅನ್ನುವ ಅನುಮಾನವೂ ಇದೆ. ಪ್ರತಿಯೊಂದಕ್ಕೂ ನಮ್ಮ ಬಳಿ ಉತ್ತರ ಇರಲೇಬೇಕಿಲ್ಲ ಅಂತ ದೀಪಾರವರೇ ತಮ್ಮ ಒಂದು ಲೇಖನದಲ್ಲಿ ಹೇಳುತ್ತಾರೆ. (Anthe: On Translating Kannada. The Paris Review, July 22, 2024) ಮತ್ತು ದೀಪಾ ಅವರ ಒಂದು ಸಂದರ್ಶನದಲ್ಲಿ ಸಂದರ್ಶಕರು ದೀಪಾ ಅವರ ಅನುವಾದದಲ್ಲಿ ಬಹಳ ಅಪರೂಪಕ್ಕೆ ಈ ರೀತಿ ಕನ್ನಡದ ಪದಗಳನ್ನು ಉಳಿಸುವುದು (ಅಥವಾ ವಾಕ್ಯ ರಚನೆಯ ವೈಶಿಷ್ಟ್ಯವನ್ನು ಉಳಿಸಿಕೊಳ್ಳುವುದು) ಆಗಿದೆ ಅನ್ನುತ್ತಾರೆ. (Translating ‘Heart Lamp’: Deepa Bhasthi. Harshaneeyam podcast. Youtube.)
ಈಗ ದೀಪಾರವರ ಕನ್ನಡ ಪದಗಳ ಅನುವಾದವನ್ನು ಗಮನಿಸೋಣ. ಮತ್ತೆ ಇಲ್ಲಿ ಇಂಗ್ಲಿಶ್‌ನಲ್ಲಿ ಸಂವಾದಿ ಪದಗಳು ಇಲ್ಲದೇ ಇರುವ ಸಂದರ್ಭದಲ್ಲಿ ಮಾತ್ರ ಇದು ಮುಖ್ಯವಾಗುತ್ತದೆ ಅನ್ನುವುದನ್ನು ಗಮನಿಸಬೇಕು. ಮತ್ತು, ನಾಳೆ, ತರದ ಪದಗಳಾಗಲೀ, ನಾಮಪದಗಳಾಗಲಿ ಯಾವ ತರಹದ ಸಮಸ್ಯೆಗಳನ್ನೂ ಒಡ್ಡುವುದಿಲ್ಲ. ಅಯ್ಯೋ, ಅಬ್ಬಾ, ಚೆ, ತರದ ಉದ್ಗಾರಗಳಿಗೆ ಇಂಗ್ಲಿಶ್‌ನಲ್ಲಿ ಪದಗಳಿಲ್ಲದೇ ಇರುವುದರಿಂದ ಅವನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಇನ್ನು ಮೇಲೊಗರ, ಶಾವಿಗೆ ತರದ ಪದಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ‘ಚಾಂಡಾಲಿ’ ಪದವನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಅಮ್ಮ, ಅಕ್ಕ, ಅತ್ತಿಗೆ, ಮಾವ ಮುಂತಾದ ಸಂಬಂಧ ಸೂಚಕ ಪದಗಳನ್ನು ಕೆಲವೊಮ್ಮೆ ಹಾಗೇ ಉಳಿಸಿಕೊಳ್ಳಲಾಗಿದೆ, ಮತ್ತು ಕೆಲವೊಮ್ಮೆ ಇಂಗ್ಲಿಶ್‌ಗೆ ಅನುವಾದಿಸಲಾಗಿದೆ. ದೀಪಾರವರು ತಮ್ಮ ಹಿನ್ನುಡಿಯಲ್ಲಿ ಅಂಕಲ್, ಆಂಟಿ ತರದ ಪದಗಳನ್ನು ಬಳಸಿಲ್ಲ ಅಂತ ಹೇಳಿರುವುದರ ಹೊರತಾಗಿಯೂ ಮಾವ ಅನ್ನುವುದನ್ನು ಅಂಕಲ್ ಎಂದು ಕೆಲವೊಮ್ಮೆ ಅನುವಾದಿಸಲಾಗಿದೆ. ಅಂದರೆ ಕನ್ನಡ ಪದಗಳನ್ನು ಹಾಗೇ ಉಳಿಸಿಕೊಳ್ಳಬೇಕು ಅನ್ನುವುದು ನೂರಕ್ಕೆ ನೂರರಷ್ಟು ಸಾರಿ ಆಗಿರುವುದಿಲ್ಲ. ಹಾಗೇ ಆಗಲೇಬೇಕು ಎಂದೇನು ನಾನು ಹೇಳುತ್ತಿಲ್ಲ: ಹಾಗೆ ಆಗಿಲ್ಲ ಅನ್ನುವುದು ಒಂದು ಹೇಳಿಕೆ ಅಷ್ಟೇ ಹೊರತು ಟೀಕೆಯಲ್ಲ.
ಫುಟ್‌ನೋಟ್ಸ್ ಅಥವಾ ಕಂಸಗಳನ್ನು ಬಳಸದೆಯೂ ಕನ್ನಡ ಪದಗಳಿಗೆ ವಿವರಣೆಯನ್ನು ನೀಡಬಹುದು. ಉದಾಹರಣೆಗೆ ಕನ್ನಡದಲ್ಲಿ ‘ಯಜಮಾನರು ಅಂದರೆ’ ಅಂತ ಇರುವುದಕ್ಕೆ, ಅನುವಾದದಲ್ಲಿ ”yajamana and call him owner” ಎಂದೂ, ‘ಗಂಡಾಂತರ’ ಅಂತ ಇರುವುದಕ್ಕೆ ”a gandanthara, a big disaster” ಎಂದೂ ವಿವರಣೆ ನೀಡಲಾಗಿದೆ. (ಹಾಗೆಯೇ ‘ಯಮಗಂಡ’ ಅನ್ನುವ ಪದವನ್ನು ಅನುವಾದದಲ್ಲಿ ಬಿಡಲಾಗಿದೆ). ‘ಬಿಂದಿಗೆ’ ಪದವನ್ನು ಒಮ್ಮೆ ಹಾಗೆಯೇ ಬಳಸಿ, ಇನ್ನೊಮ್ಮೆ ಅದನ್ನು “bronze bindige pot” ಎಂದು ಅನುವಾದಿಸಲಾಗಿದೆ. ಅಂದರೆ ಇಂಗ್ಲಿಶ್ ಅಲ್ಲಿ ಸಂವಾದಿ ಪದಗಳಿಲ್ಲದ ಕೆಲವು ಕನ್ನಡ ಪದಗಳಿಗಾದರೂ ವಿವರಣೆ ನೀಡುವ ಅವಶ್ಯಕತೆ ಇದೆ ಅನ್ನುವದನ್ನು ಅನುವಾದಕರು ಒಪ್ಪಿಕೊಳ್ಳುತ್ತಾರೆ.
ಇನ್ನು ಇಂಗ್ಲಿಶ್‌ನಲ್ಲಿ ಸಂವಾದಿ ಪದಗಳಿಲ್ಲದ ಅನೇಕ ಕನ್ನಡ ಪದಗಳನ್ನು ಇಂಗ್ಲಿಶ್‌ಗೆ ಅನುವಾದ ಮಾಡಲಾಗಿದೆ; ಉದಾ- ಪಿಶಾಚಿ (witch, devil), ರಂಡೆ, (whore), ಗಂಧರ್ವಕನ್ಯಾ(angel), ಗವಾಕ್ಷಿ (backdoor). ಇಲ್ಲಿ ಗಂಧರ್ವಕನ್ಯಾ ಅನ್ನುವುದು ಭಾನು ರವರ ಕತೆಯಲ್ಲಿ ‘ಹೂರ್’ ಪದದ ಕನ್ನಡದ ವಿವರಣೆ ಅನ್ನುವುದನ್ನು ಗಮನಿಸಬೇಕು. ಇನ್ನು ಓರಗಿತ್ತಿ ಮತ್ತು ಸವತಿ ಪದಗಳನ್ನು ‘co-sister’ ಮತ್ತು ‘ co-wife ‘ ಎಂದು ಅನುವಾದಿಸಿರುವುದು ತುಂಬಾ ಸ್ವಾರಸ್ಯಕರವಾಗಿದೆ. ‘co-sister ‘ ಪದ ಭಾರತೀಯ ಇಂಗ್ಲಿಶ್‌ನಲ್ಲಿ ಮಾತ್ರ ಬಳಕೆಯಲ್ಲಿರುವುದು. ಕನ್ನಡದಲ್ಲಿ ‘ಮಂಥರೆ’ ಅಂತಷ್ಟೇ ಇರುವುದಕ್ಕೆ ಇಂಗ್ಲಿಶ್‌ನಲ್ಲಿ ರಾಮಾಯಣದ ಮಂಥರೆ ಅನ್ನುವ ವಿವರಣೆಯ ಅವಶ್ಯಕತೆ ಅನುವಾದಕರಿಗೆ ಕಂಡು ಬಂದಿದೆ. ‘ಹಾಲುಕ್ಕಿಸಿದ’ ಎಂದು ಅಷ್ಟೇ ಇರುವ ಪದ ಇಂಗ್ಲಿಶ್‌ನಲ್ಲಿ ‘ milk-boiling-over ritual ‘ ಎಂದಾಗಿದೆ. ಕನ್ನಡದ ಓದುಗರಿಗೆ ಮಂಥರೆ ರಾಮಾಯಣದ ಪಾತ್ರ ಅನ್ನುವುದನ್ನು ಹೇಳುವ, ಮತ್ತು ಹಾಲುಕ್ಕಿಸುವುದು ಒಂದು ಆಚರಣೆ ಎಂದು ಹೇಳುವ ಅವಶ್ಯಕತೆಯಿಲ್ಲ. ಆದರೆ ಫುಟ್‌ನೋಟ್ಸ್ ಅಲ್ಲಿ ಅಥವಾ ಕಂಸದಲ್ಲಿ ವಿವರಣೆ ಕೊಡದೇ ಇದ್ದರೂ ಪರೋಕ್ಷವಾಗಿ ಇಂಗ್ಲಿಶ್ ಓದುಗರಿಗೆ ಕೆಲವೊಮ್ಮೆ ವಿವರಣೆ ನೀಡಬೇಕುತ್ತದೆ ಎಂದಾಯಿತು. ಇಲ್ಲಿ ಪ್ರಶ್ನೆ ಬರುವುದು ‘ಗಂಧ ಮಹೋತ್ಸವ’ ಅಥವಾ ‘ಸೆರಗು’/”ಲುಂಗಿ” ಪದಗಳಿಗೆ ವಿವರಣೆಯ ಅವಶ್ಯಕತೆ ಯಾಕೆ ಬರುವುದಿಲ್ಲ, ಮತ್ತು ‘ಹಾಲುಕ್ಕಿಸುವ’ ಅನ್ನುವ ಪದಕ್ಕೆ ಅದು ಒಂದು ಆಚರಣೆ ಅನ್ನುವ ಅವಶ್ಯಕತೆ ಯಾಕೆ ಬರುತ್ತದೆ? ”ಚಾಂಡಾಲಿ” ಅನ್ನುವ ಪದಕ್ಕೆ ಸಂವಾದಿಯಾದ ಇಂಗ್ಲಿಶ್ ಪದವಿಲ್ಲದೇ ಇದ್ದರೆ ”ಪಿಶಾಚಿ” ಅನ್ನುವುದಕ್ಕೆ witch/devil ಅನ್ನುವುದು ಸಂವಾದೀ ಇಂಗ್ಲಿಶ್ ಪದವೇ? ಕ್ರೈಮ್ ಪಟ್ರೋಲ್‌ನಲ್ಲಿ ಕನ್ನಡವನ್ನು ಸೂಚಿಸಲು ಅಣ್ಣ, ಅಮ್ಮ, ತರದ ಒಂದೆರಡು ಪದಗಳನ್ನು ಬಳಸುವುದಕ್ಕೆ ಹೋಲಿಸಿದರೆ ಖಂಡಿತವಾಗಿಯೂ ದೀಪಾ ಭಾಸ್ತಿಯವರ ಅನುವಾದ ಹೆಚ್ಚು ಸೂಕ್ಷ್ಮವಾದ್ದೂ, ಹೆಚ್ಚು ಆತ್ವಾವಲೋಕನದಿಂದ ಕೂಡಿರುವುದೂ ಆಗಿದೆ. ಆದರೆ ಈ ವ್ಯತ್ಯಾಸ ಕೇವಲ ಪ್ರಮಾಣಕ್ಕೆ ಸಂಬಂಧಿಸಿದ್ದೋ, ಅಥವಾ ಸ್ವರೂಪಕ್ಕೆ ಸಂಬಂಧಿಸಿದ್ದೋ?

(ದೀಪಾ ಭಾಸ್ತಿ)
ಇನ್ನು ಬಾನು ಮುಷ್ತಾಕ್ ಕತೆಗಳಲ್ಲಿ ಬರುವ ‘ಉರ್ದು’ ಪದಗಳ ಬಳಕೆಯನ್ನು ನೋಡೋಣ. ಒಂದು ರೀತಿಯಲ್ಲಿ ಅವರ ಕತೆಗಳ ಸಾಕಷ್ಟು ಭಾಗ ಉರ್ದುವಿನ ಅನುವಾದವೇ ಅನ್ನಬಹುದು. ಒಂದೆರಡು ಎದ್ದು ಕಾಣುವ ಉದಾಹರಣೆಗಳನ್ನು ನೋಡೋಣ. ‘ಬೆಂಕಿ ಮಳೆ’ ಕತೆಯಲ್ಲಿ ಜಿಲ್ಲಾಧಿಕಾರಿಗಳು ಮುತವಲ್ಲಿ ಸಾಹೇಬರ ಜೊತೆ ಉರ್ದುವಿನಲ್ಲೇ ಮಾತಾಡುತ್ತಾರೆ ಹಾಗೂ ‘ಅರಬಿ ಮೇಷ್ಟ್ರು ಮತ್ತು ಗೋಭಿ ಮಂಚೂರಿ’ ಕತೆಯಲ್ಲಿ ಮೇಷ್ಟ್ರು ”ಉತ್ತರ ಪ್ರದೇಶದ ಶಿಷ್ಟ ಉರ್ದುವಿನಲ್ಲಿ” ಮಾತಾಡುತ್ತಾರೆ. ಅವರು ಉರ್ದುವಿನಲ್ಲಿ ಮಾತಾಡಿದರು ಅಂತ ಹೇಳಿ, ಅವರ ಮಾತನ್ನು ಕನ್ನಡದಲ್ಲೇ ನೀಡಲಾಗಿದೆ. ಒಂದು ರೀತಿಯಲ್ಲಿ ಬಾನು ಮುಷ್ತಾಕ್ ಅವರ ಕತೆಗಳನ್ನು ಓದುವಾಗ ‘ಅವರು (ಕೊನೆಯ ಪಕ್ಷ ಮುಸ್ಲಿಮ್ ಪಾತ್ರಗಳು ಮನೆಯಲ್ಲಿ ಮಾತಾಡುತ್ತಿರುವಾಗ) ಉರ್ದುವಿನಲ್ಲಿ ಮಾತಾಡುತ್ತಿದ್ದಾರೆ’ ಅನ್ನುವುದನ್ನು ಮನಸಿನಲ್ಲಿ ಇಟ್ಟುಕೊಳ್ಳಬೇಕು.
ದೀಪಾ ಅವರ ರೀತಿಯಲ್ಲೇ ಬಾನುರವರು ಕೆಲವು ಉರ್ದು ಪದಗಳನ್ನು ಯಾವುದೇ ವಿವರಣೆ ಇಲ್ಲದೇ ಅನುವಾದ ಮಾಡದೇ ಬಳಸುತ್ತಾರೆ. ಉದಾಹರಣೆಗೆ ಸಂಬಂಧ ಸೂಚಕ ಪದಗಳಾದ ಭಾಬಿ, ಅಮ್ಮಿ, ಆಪ, ಬೇಟಾ, ಅಮ್ಮಿಜಾನ್, ದಾದಿಮಾ. ಆದರೆ ಸಾಕಷ್ಟು ಬಾರಿ ಇವುಗಳ ಬದಲು ಅತ್ತಿಗೆ, ಅಮ್ಮ, ತಂದೆ, ಅನ್ನುವ ಕನ್ನಡ ಪದಗಳನ್ನೇ ಬಳಸಿದ್ದಾರೆ. ಇಸ್ಲಾಮ್‌ಗೆ ಸಂಬಂಧಿಸಿದ ಆಜಾನ್, ಮುತವಲ್ಲಿ, ಕಫನ್, ಗುಸುರ್, ದಫನ್, ಖಬರ್‌ಸ್ತಾನ್, ಇವುಗಳೂ ಕೂಡ ವಿವರಣೆಯಿಲ್ಲದೆ ಕೆಲವೊಮ್ಮೆ ಉರ್ದು ಮೂಲ ರೂಪದಲ್ಲಿ, ಕೆಲವೊಮ್ಮೆ ಉರ್ದು ಮೂಲರೂಪದ ಜೊತೆಗೆ ಕನ್ನಡದ ವಿವರಣೆಯೊಂದಿಗೆ ಬರುತ್ತವೆ. ಇನ್ನು ಫೈಸಲ್, ಬರ್‌ಕತ್, ಹೂರ್ ತರದ ಮುಸ್ಲಿಮ್ಮರಲ್ಲದ ಕನ್ನಡಿಗರಿಗೂ ಚಿರಪರಿಚಿತವೇ ಆಗಿರುವ ಪದಗಳೂ ಕೂಡ ಉರ್ದುವಿನಲ್ಲೇ ಬರುತ್ತವೆ.
ಆದರೆ ಈ ರೀತಿಯ ಬಳಕೆಗಿಂತ ಕನ್ನಡದಲ್ಲಿ ವಿವರಣೆ ನೀಡಿ ಬಳಸಿರುವ ಉರ್ದು ಪದಗಳೇ ಹೆಚ್ಚಿವೆ. ಅಂದರೆ ಉರ್ದು ಪದ ಅಥವಾ ಪದಗುಚ್ಛಗಳನ್ನು ಬಳಸಿ ಅವುಗಳಿಗೆ ಕಂಸದಲ್ಲಿ ಕನ್ನಡದಲ್ಲಿ ವಿವರಣೆ ನೀಡಲಾಗಿದೆ. ಉದಾಹರಣೆ -ಮೊಹಬ್ಬತ್ ಕಿ ನಿಶಾನಿ-ಪ್ರೇಮದ ಕುರುಹು, ಮುಜಾವರ್(ಪೀಠಾಧಿಕಾರಿ), ತಸ್‌ಬೀಹ್ (ಜಪಮಾಲೆ), ಇಶಾ ನಮಾಜ್ (ರಾತ್ರಿಯ ನಮಾಜ್). ಕೆಲವೊಮ್ಮೆಯಾದರೂ ಕತೆಯಲ್ಲಿ ಈ ಪದಗಳು ಬರುವ ಸಂದರ್ಭದ ಆಧಾರದ ಮೇಲೆ ಅವುಗಳ ಅರ್ಥವನ್ನು ಊಹಿಸಬಹುದು. ಹಾಗೆಯೇ ಶೇರ-ಎ-ಬಬ್ಬರ್ ಅನ್ನುವುದಕ್ಕೆ ‘ಹೆಬ್ಬುಲಿಗಳಂತೆ’ ಅನ್ನುವ ವಿವರಣೆಯ ಅವಶ್ಯಕತೆ ಇದೆಯೇ ಅಥವಾ ಹೂರ್ ಅನ್ನುವುದಕ್ಕೆ ”ಗಂಧರ್ವ ಕನ್ಯೆ” ಅನ್ನುವುದು ಸರಿಹೋಗುತ್ತದೆಯೇ ಅನ್ನುವ ಪ್ರಶ್ನೆ ಕೇಳಿಕೊಳ್ಳಬಹುದು. ಇನ್ನೊಂದು ಕಡೆ ತಮ್ಮ ಅಕ್ಕನನ್ನು ಬಹುವಚನದಲ್ಲಿ ಮಾತಾಡಿಸಿದ ಅಂದು ”ಮುಸ್ಲಿಮರಲ್ಲಿ ಹಿರಿಯರನ್ನು ನೀನು ತಾನು ಎಂದು ಮಾತಾಡಿಸುವ ಅಭ್ಯಾಸವಿಲ್ಲ” ಅನ್ನುವ ವಿವರಣೆಯನ್ನು ನೀಡಲಾಗಿದೆ. ಇದು ಖಂಡಿತಾ ಬಾನು ಮುಷ್ತಾಕ್ ಅವರ ಶೈಲಿಯ ಬಗೆಗಿನ ಟೀಕೆಯಲ್ಲ; ಸೃಜನಶೀಲ ಸಾಹಿತಿ(ಅಥವಾ ಅನುವಾದಕಿ) ಕೈಬೆರಳಲ್ಲಿ ಲೆಕ್ಕ ಹಾಕಿ, ನಾನು ಈ ನಿಯಮದ ಪ್ರಕಾರವೇ ಎಲ್ಲಾ ಪದಗಳನ್ನೂ ಬಳಸುತ್ತೇನೆ ಎಂದು ಬರೆಯುವುದಕ್ಕೆ ಆಗುವುದಿಲ್ಲ. ಆದರೆ ದೀಪಾ ಅವರು ಇಂಗ್ಲಿಶ್‌ಗೆ ಕನ್ನಡದಿಂದ ಅನುವಾದಿಸುವಾಗ ಹೇಳಿರುವ ಇಟ್ಯಾಲಿಕ್ಸ್ ಅಥವಾ ಫುಟ್‌ನೋಟ್ಸ್ ಇಲ್ಲದ ಅನುವಾದ ಅನ್ನುವುದು ಬಾನು ಅವರು ಕನ್ನಡದ ಕತೆಗಳಲ್ಲಿ ಬಳಸುವ ಉರ್ದುವಿನಲ್ಲಿ ಕಾಣುವುದಿಲ್ಲ.
ಇನ್ನು ದೀಪಾ ಅವರು ಭಾನು ಮುಷ್ತಾಕ್ ಕತೆಗಳಲ್ಲಿ ಬರುವ ಉರ್ದು ಪದಗಳನ್ನು ಕೆಲವೊಮ್ಮೆ ಹಾಗೆಯೇ, ಕೆಲವೊಮ್ಮೆ ಇಂಗ್ಲಿಷ್‌ಗೆ ಅನುವಾದ ಮಾಡಿ ಬಳಸಿದ್ದಾರೆ. ಭಾಬಿ, ಅಬ್ಬಾ, ಆಜಾನ್, ಮುತವಲ್ಲಿ- ಈ ತರದ ಪದಗಳನ್ನು ವಿವರಣೆಯಿಲ್ಲದೇ ಮುಲರೂಪದಲ್ಲಿಯೇ ಬಳಸಿದ್ದಾರೆ. ಕೆಲವೊಮ್ಮೆ ಮೂಲದಲ್ಲಿ ಕನ್ನಡದಲ್ಲಿ ಕೊಟ್ಟಿರುವ ವಿವರಣೆಯನ್ನು ಇಂಗ್ಲಿಶ್‌ಗೆ ಅನುವಾದ ಮಾಡಿದ್ದಾರೆ – mohabbat ki nishani, a symbol of love: tasbih prayer beads. ಕೆಲವೊಮ್ಮೆ ಕನ್ನಡದಲ್ಲಿ ಕೊಟ್ಟಿರುವ ವಿವರಣೆಯನ್ನು ಬಿಟ್ಟು ಬರಿ ಉರ್ದು ಪದವನ್ನು ಮಾತ್ರ ಉಪಯೋಗಿಸಿದ್ದಾರೆ. ಜನಾಜೆ-ಕಿ-ನಮಾಜ್ (ಹೆಣಕ್ಕೆ ಸದ್ಗತಿಯನ್ನು ಕೋರಿ ನಡೆಸುವ ಪ್ರಾರ್ಥನೆ) ಅನ್ನುವುದನ್ನು janaja namaj ಎಂದು, ಶೇರೆ-ಎ-ಬಬ್ಬರ್ (ಹೆಬ್ಬುಲಿಗಳಂತೆ) ಅನ್ನುವುದನ್ನು sher-e-babbar ಎಂದು, ನಿಕಾಬ್ (ಮೇಲುವಸ್ತ್ರ) ಎಂದಿರುವುದನ್ನು niqab ಎಂದು, ಕಹಾ-ಸುನಾ (ಆಲಿಕೆ ಮತ್ತು ಹೇಳಿಕೆಗಳನ್ನು) ಎಂದಿರುವುದನ್ನು kaha-suna ಎಂದೂ ಅನುವಾದಿಸಿದ್ದಾರೆ. ಇನ್ನು ಕೆಲವೊಮ್ಮೆ ಉರ್ದು ಪದಗಳನ್ನು ಬಿಟ್ಟು ಇಂಗ್ಲಿಶ್‌ಗೆ ಅನುವಾದಿಸಿದ್ದಾರೆ. ಉದಾಹರಣೆಗೆ ಭಾಬಿ- sister-in-law, ಬರ್‌ಕತ್ – prosperity, ದಫನ್- burial, ಕಬೂಲ್- accept. ಕನ್ನಡದಲ್ಲಿ ಉರ್ದುವಿನಲ್ಲೇ ಇರುವ ‘ಕಫನ್’ ಅನ್ನುವ ಶೀರ್ಷಿಕೆಯನ್ನು ‘The Shroud ‘ ಎಂದು ಅನುವಾದಿಸಿದ್ದಾರೆ. ಯಾವ ಪದಗಳನ್ನು ಇಂಗ್ಲಿಶ್‌ಗೆ ಅನುವಾದ ಮಾಡಬೇಕು ಯಾವುದನ್ನು ಉರ್ದುವಿನಲ್ಲೇ ಉಳಿಸಿಕೊಳ್ಳಬೇಕು ಅನ್ನುವುದು ಒಂದು ಪೂರ್ವನಿರ್ಧಾರಿತ ಅನುವಾದಕ್ಕೆ ಸಂಬಂಧಿಸಿದ ಸಿದ್ಧಾಂತಕ್ಕಿಂತ (ಇಟ್ಯಾಲಿಕ್ಸ್ ಇಲ್ಲದ ಅನುವಾದ, ಸಂವಾದಿ ಪದಗಳಿಲ್ಲದೇ ಇದ್ದಲ್ಲಿ ಮೂಲಪದವನ್ನೇ ಉಳಿಸಿಕೊಳ್ಳಬೇಕು, ಓದುಗರು ಬೇರೆ ಭಾಷೆಯ ಒಂದೆರಡು ಪದಗಳನ್ನು ಕಲಿಯಬಹುದು- ಇತ್ಯಾದಿ) ಹೆಚ್ಚಾಗಿ ಆಯಾ ಸಂದರ್ಭದಲ್ಲಿ ಅನುಕೂಲಕರ ಆಯ್ಕೆ ಯಾವುದು ಅನ್ನುವುದರ ಮೇಲೆ ಇದ್ದ ಹಾಗಿದೆ.

ದೀಪಾ ಅವರು ಅನುವಾದದ ಬಗ್ಗೆ ಹೇಳುವಾಗ ಸಂವಾದಿ ಕನ್ನಡ ಪದಗಳು ಇಂಗ್ಲಿಶ್‌ನಲ್ಲಿ ಇಲ್ಲದೇ ಇದ್ದಾಗ ಕನ್ನಡ ಪದಗಳನ್ನೇ ಉಳಿಸಿಕೊಳ್ಳಬೇಕು, ಮತ್ತು ಅವು ಕನ್ನಡ ಪದಗಳು ಎಂದು ಇಟ್ಯಾಲಿಕ್ಸ್ ಮೂಲಕ ತೋರಿಸುವ ಅಥವಾ ಫುಟ್‌ನೋಟ್ಸ್ ಅಲ್ಲಿ ವಿವರಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ದೀಪಾ ಅವರು ಕನ್ನಡದಿಂದ ಅನುವಾದ ಮಾಡುವಾಗ ಪ್ರಜ್ಞಾಪೂರ್ವಕವಾಗಿ ಅದನ್ನು ಮಾಡಲು ಪ್ರಯತ್ನಿಸಿದ್ದಾರೆ. ಮೊದಲೇ ಹೇಳಿದಂತೆ ನೂರಕ್ಕೆ ನೂರರಷ್ಟು ಹೀಗೆ ಆಗಿಲ್ಲ, ಆಗಬೇಕು ಎಂದೂ ಇಲ್ಲ. ಆದರೆ ಇಟ್ಯಾಲಿಕ್ಸ್ ಅಥವಾ ಫುಟ್‌ನೋಟ್ಸ್ ಇಲ್ಲದೆಯೂ ಆ ಪದಗಳು ಬೇರೆ ಭಾಷೆಯದ್ದು ಎಂದು ತೋರಿಸಬಹುದು. ಬಾನು ಮುಷ್ತಾಕ್ ಅವರು ದೀಪಾ ಅವರಿಗೆ ಹೋಲಿಸಿದರೆ ಉರ್ದು ಪದಗಳನ್ನು ಬಳಸಿದಾಗ ಅವಕ್ಕೆ ವಿವರಣೆಗಳನ್ನು ನೀಡಿದ್ದಾರೆ. ಕನ್ನಡದಲ್ಲಿ ಬರೆಯುವ ಬಾನು ಮುಷ್ತಾಕ್ ಅವರಿಗೆ ಕೆಲವು ಉರ್ದು ಪದಗಳಿಗೆ ಕನ್ನಡದಲ್ಲಿ ವಿವರಣೆ ನೀಡುವುದು ಅವಶ್ಯಕ, ಕನ್ನಡ ಓದುಗರಿಗೆ ಈ ಪದಗಳ ಪರಿಚಯ ಇರುವುದಿಲ್ಲ ಅನಿಸಿರಬಹುದು. ಇಂಗ್ಲಿಷ್‌ಗೆ ಅನುವಾದಿಸಿರುವ ದೀಪಾ ಅವರಿಗೆ ಇಂಗ್ಲಿಷ್ ಓದುಗರಿಗೆ ಪರಿಚಯವಿಲ್ಲದಿದ್ದರೂ ಕನ್ನಡ ಪದಗಳನ್ನು ವಿವರಣೆ ಇಲ್ಲದೇ ನೀಡಬೇಕು ಅನಿಸಿದೆ. ಹೀಗೆ ನೋಡಿದರೆ ಕನ್ನಡ ಪದಗಳ ಅನುವಾದದ ಬಗ್ಗೆ ದೀಪಾ ಅವರ ಪ್ರಜ್ಞಾಪೂರ್ವಕ ಸಿದ್ಧಾಂತ ಮತ್ತು ಉರ್ದು ಪದಗಳ ಅನುವಾದದ ಬಗ್ಗೆ ಬಾನು ಅವರ ಅಪ್ರಜ್ಞಾಪೂರ್ವಕ ಸಿದ್ಧಾಂತ ಬೇರೆ ಬೇರೆ ಆಗಿರುವ ಹಾಗೆ ತೋರುತ್ತದೆ.


