Advertisement
ಕರ್ಮನಿಷ್ಟೆಯಲ್ಲಿ ಜಯಕಂಡವನ ಕಥನ: ನಾರಾಯಣ ಯಾಜಿ ಬರಹ

ಕರ್ಮನಿಷ್ಟೆಯಲ್ಲಿ ಜಯಕಂಡವನ ಕಥನ: ನಾರಾಯಣ ಯಾಜಿ ಬರಹ

ಮೊದಲು ಪ್ರಥಮ ಪುರುಷದಲ್ಲಿ ಪ್ರಾರಂಭಮಾಡಿದ ಹೆಗಡೆಯವರು ಇದ್ದಕ್ಕಿದ್ದಂತೆ ಅದನ್ನು ತೃತೀಯ ಪುರುಷದಲ್ಲಿ ಬರೆಯಲು ಪ್ರಾರಂಭಿಸುವುದು ಕುತೂಹಲಕಾರಿ. ಶೀರ್ಷಿಕೆಯಲ್ಲಿ ಹೇಳಿರುವಂತೆ ಇದು ಜಯರಾಮ ಹೆಗಡೆಯ ಜೀವನಕಥನ ಎನ್ನುವಾಗ ತನ್ನನ್ನು ತಾನು ಹೊರಗಡೆ ನಿಂತು ‘ಜಯರಾಮ’ ಎನ್ನುವ ಮೂಲಕ ಕಥನವನ್ನು ಹೇಳುವಾಗ ಮನಸ್ಸಿನ ಅನೇಕ ವಿಷಯಗಳನ್ನು ತೆರೆದಿಡಬಹುದು ಎನ್ನುವುದು ಅವರ ಅನಿಸಿಕೆಯಾಗಿರಬಹುದು.  ಅದೂ ಅಲ್ಲದೇ ಲೇಖನನ್ನೂ ಸಹ ವಿಮರ್ಶೆಗೊಳಿಸಲು  ಈ ರೀತಿಯ ಬರಹದಿಂದ ಸಾಧ್ಯ.
ಜಯರಾಮ
ಹೆಗಡೆ ಜೀವನ ಕಥನ ‘ಬೀದಿಯ ಬದುಕು’ ಕೃತಿಯ ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ

ಕನ್ನಡದ ಹಿರಿಯ ಸಾಹಿತಿ, ಕತೆಗಾರ ಮತ್ತು ಕಾಂತಾವರದಂತಹ ಒಂದು ಪುಟ್ಟ ಹಳ್ಳಿಯನ್ನು ಕೇಂದ್ರೀಕರಿಸಿಕೊಂಡು “ಕಾಂತಾವರ   ಕನ್ನಡ ಸಂಘ”ದ ಮೂಲಕ ನಾಡಿನಾದ್ಯಂತ ಪ್ರಸಿದ್ಧರಾದ ಡಾ. ನಾ. ಮೊಗಸಾಲೆಯವರು ಕಳೆದ ವಾರ ಇದೊಂದು ಪುಸ್ತಕವನ್ನು ಓದಿ ಎಂದು ಜಯರಾಮ ಹೆಗಡೆ ಎನ್ನುವವರು ಬರೆದ “ಬೀದಿಯ ಬದುಕು” ಎನ್ನುವ ಪುಸ್ತಕವನ್ನು ಕಳಿಸಿಕೊಟ್ಟರು.  ಮೊಗಸಾಲೆಯವರು ಕಳಿಸಿದ್ದು ಎಂದ ಮೇಲೆ ಅದರಲ್ಲಿ ಏನೋ ಒಂದು ವಿಶೇಷತೆ ಇದೆ ಎಂದು ತಿಳಿದು ತಕ್ಷಣವೇ ಅದರ ಪುಟ ತೆಗೆದು ಓದಲುಪಕ್ರಮಿಸಿದೆ. ಮೊದಲ ಪುಟದಿಂದಲೇ ಈ ಕೃತಿ ನನ್ನನ್ನು ಆವರಿಸಿಕೊಂಡಿತು. ಸುಮಾರು ನಾಲ್ಕುನೂರಾ ಮೂವತ್ತುನಾಲ್ಕು ಪುಟಗಳ ಈ ಕೃತಿಯನ್ನು ನಿರಂತರವಾಗಿ ಓದಿ ಮುಗಿಸಿದಾಗ ಈ ಕಥನದ ಕೇಂದ್ರವ್ಯಕ್ತಿ ಜಯರಾಮ ಹೆಗಡೆ  ಅಮೂರ್ತವಾಗಿ ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದಾರೆ.  ತಕ್ಷಣವೇ ಡಾ. ನಾ. ಮೊಗಸಾಲೆಯವರಿಗೆ ಫೋನಾಯಿಸಿ ಈ ವ್ಯಕ್ತಿಯ ಕುರಿತು ಕೇಳಿದಾಗ  “ಜಯರಾಮ ಹೆಗಡೆಯವರ ಜೀವನ ಕಥನ ಓದಿದಮೇಲೆ ಯಾವ ಹಿನ್ನೆಲೆಯಿಲ್ಲದ ವ್ಯಕ್ತಿ ಎಂತಹ ಸಂದರ್ಭದಲ್ಲಿಯೂ ತನ್ನ ಸ್ಪಷ್ಟ ನಿಲುವು, ನಿರ್ಭಿಡೆ, ಕರ್ಮಸಿದ್ಧಾಂತದಲ್ಲಿ ನಂಬಿಕೆಯಿಟ್ಟು ನಿಸ್ಪೃಹನಾಗಿ ತನ್ನ ಕೆಲಸವನ್ನು ಮಾಡಿದ ವ್ಯಕ್ತಿಯ ಬದುಕಿನಿಂದ ನಾನು ಪ್ರಭಾವಿತನಾಗಿದ್ದೇನೆ” ಎಂದರು. ಅಷ್ಟೇ ಅಲ್ಲ. ಈ ವರ್ಷದ ಪ್ರತಿಷ್ಠಿತ ಕಾಂತಾವರ ಕನ್ನಡ ಸಂಘದ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾದ ವಿಷಯವನ್ನು ತಿಳಿಸಿದರು.

ಕನ್ನಡ ಮಾತ್ರವಲ್ಲ, ಜಗತ್ತಿನ ಸಾಹಿತ್ಯ ಪರಂಪರೆಯಲ್ಲಿಯೂ ಜೀವನಚರಿತ್ರೆ ಎನ್ನುವುದು ಕೇವಲ ವ್ಯಕ್ತಿಯ ಬದುಕಿನ ಕಥನವಲ್ಲ; ಅದು ಕಾಲ, ಸಮಾಜ ಮತ್ತು ಮಾನವೀಯ ಮೌಲ್ಯಗಳ ಸಂವಾದವೂ ಹೌದು. ಸಾಮಾನ್ಯವಾಗಿ ಆತ್ಮಚರಿತ್ರೆಗಳು ಹಲವು ವಿಧಗಳಲ್ಲಿ ವಿಂಗಡಿಸಬಹುದು. ರಾಜಕೀಯ ಹಾಗೂ ಸಾರ್ವಜನಿಕ ಬದುಕಿನ ಆತ್ಮಚರಿತ್ರೆಗಳು ಧಂಡಿಯಾಗಿವೆ. ಅಲ್ಲಿ ವ್ಯಕ್ತಿಯ ಬದುಕು ರಾಷ್ಟ್ರದ ಅಥವಾ ಸಮಾಜದ ಇತಿಹಾಸದೊಂದಿಗೆ ಬೆಸೆದುಕೊಂಡಿರುತ್ತದೆ. ಮತ್ತೊಂದು ಕಡೆ ಸಾಹಿತ್ಯಿಕ ಆತ್ಮಚರಿತ್ರೆಗಳು, ಅಲ್ಲಿ ಸೃಜನಶೀಲತೆಯ ಬೆಳವಣಿಗೆ, ಆಂತರಿಕ ಸಂಕಟಗಳು ಮತ್ತು ಬೌದ್ಧಿಕ ಪಯಣವೇ ಕೇಂದ್ರವಾಗಿರುತ್ತದೆ. ಇವುಗಳ ಮಧ್ಯೆ Memoir ಅಥವಾ ಸ್ಮೃತಿಚಿತ್ರಗಳ ರೂಪದ ಆತ್ಮಕಥನಗಳಿವೆ. ಇದರಲ್ಲಿ ಸಂಪೂರ್ಣ ಜೀವನವನ್ನಲ್ಲ, ಬದುಕಿನ ಆಯ್ದ ಘಟ್ಟಗಳನ್ನು ನೆನಪಿನ ಬೆಳಕಿನಲ್ಲಿ ದಾಖಲಿಸಲಾಗುತ್ತದೆ. ಇದಕ್ಕಿಂತ ಇನ್ನೂ ವೈಯಕ್ತಿಕವಾದ ರೂಪವೆಂದರೆ ಡೈರಿ ಆಧಾರಿತ ಆತ್ಮಕಥನ, ಅದರಲ್ಲಿ  ಬಾಳಿನಲ್ಲಿ ಅನುಭವಿಸಿದ ಆಕ್ಷಣದ ಅನುಭವ, ನೋವು, ಆಸೆ, ನಿರಾಶೆ, ಎಲ್ಲವೂ ನಿರ್ಮಮಕಾರವಾಗಿ ಅಭಿವ್ಯಕ್ತಿಗೊಳ್ಳುತ್ತದೆ.

(ಜಯರಾಮ ಹೆಗಡೆ)

ಜಗತ್ತಿನ ಸಾಹಿತ್ಯದಲ್ಲಿ ಇಂತಹ ಅನಾಮಿಕ ಆತ್ಮಕಥನಗಳ ಉದಾಹರಣೆಗಳು ಅಪಾರ.  The Diary of a Nobody ಎಂಬ ಇಂಗ್ಲಿಷ್ ಕೃತಿಯಲ್ಲಿ ನಾಯಕನೊಬ್ಬ ಯಾವುದೇ ಮಹತ್ವದ ವ್ಯಕ್ತಿಯಲ್ಲ, ಆದರೆ ಅವನ ದಿನನಿತ್ಯದ ಸಣ್ಣಸಣ್ಣ ಘಟನೆಗಳೇ ಆ ಕಾಲದ ಸಮಾಜದವನ್ನು ಪ್ರತಿಫಲಿಸುತ್ತದೆ. ಅದೇ ರೀತಿ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬರೆಯಲ್ಪಟ್ಟ Anne Frank ಅವರ ಡೈರಿಯ ಲೇಖಕಿ ಪ್ರಸಿದ್ಧಳಾಗಿದ್ದು ಬರವಣಿಗೆಯ ನಂತರ; ಬರೆಯುವ ವೇಳೆಗೆ ಅವಳು ಅನಾಮಿಕಳೇ. ಜಯರಾಮ ಹೆಗಡೆಯವರ “ಬೀದಿಯ ಬದುಕು ಕೂಡ ಇದೇ ಜಾಡಿನಲ್ಲಿದೆ. ಬರವಣಿಗೆಯ ಕ್ಷಣದಲ್ಲಿ ಅವರಿಗೆ ‘ಸಾಹಿತಿ’ ಎಂಬ ಗುರುತು ಇರಲಿಲ್ಲ; ಬದುಕನ್ನು ಉಳಿಸಿಕೊಳ್ಳುವ ಹೋರಾಟವೇ ಅವರ ಮುಖ್ಯ ಗುರಿಯಾಗಿತ್ತು. “ಬೀದಿಯ ಬದುಕು” ಬಡತನದ ವೈಭವೀಕರಣವನ್ನು ಬದುಕಿನ  ಅಸಹಾಯಕತೆಯನ್ನು ಬಂಡವಾಳವನ್ನಾಗಿಸಿಕೊಂಡ ಕೃತಿಯಲ್ಲ. ಜಯರಾಮ ಹೆಗಡೆಯವರಿಗೆ ತನ್ನನ್ನು ಸಮಾಜದ ಮುಂದೆ ಪ್ರೊಜೆಕ್ಟ್ ಮಾಡಿಕೊಳ್ಳಬೇಕೆನ್ನುವ ಹೆಬ್ಬಯಕೆಯೂ ಇಲ್ಲ. ಘೋಷಿತ ಆತ್ಮಚರಿತ್ರೆಯಾಗಿ ಹುಟ್ಟಿದ ಕೃತಿಯೂ ಅಲ್ಲ. ಜೀವನದ ಒತ್ತಡಗಳ ಮಧ್ಯೆ, ತಮ್ಮೊಳಗಿನ ಭಾರವನ್ನು ಇಳಿಸಿಕೊಳ್ಳಲು ಬರೆಯಲ್ಪಟ್ಟ ಡೈರಿಗಳು ಕಾಲಕ್ರಮೇಣ ಆತ್ಮಕಥನದ ರೂಪವನ್ನು ಪಡೆದಿವೆ. ಈ ಅರ್ಥದಲ್ಲಿ ಇದು ಕೃತಕ ಸಂಯೋಜನೆಯಲ್ಲ, ಬದುಕಿನ ಸಹಜ ಹರಿವಿನ ದಾಖಲೆ. ಬಾಲ್ಯದಿಂದಲೂ ಸಾಹಿತ್ಯಪ್ರೇಮಿಯಾದ ಇವರಿಗೆ ಸವಾಲಿನ ಬದುಕಿನಲ್ಲಿ ತಂಪೆರೆದ ಸಂಗಾತಿಯೆಂದರೆ ಅದು ಸಾಹಿತ್ಯ. ಅದರಿಂದಾಗಿ ಇವರ ಬರಹವೂ ಸಹಜವಾಗಿಯೇ ಓದಿಸಿಕೊಂಡು ಹೋಗುತ್ತದೆ.

‘ಬೀದಿ’ ಎಲ್ಲಿಗೂ ಸಾಗುವುದಿಲ್ಲ. ಆದರೆ ಅದರ ಮೇಲೆ ಯಾವಯಾವುದೋ ಉದ್ದೇಶದಿಂದ ಸಾಗುವ ಜೀವಿಗಳಿಂದಾಗಿ ಅದಕ್ಕೆ ಬೀದಿ ಅಥವಾ ಮಾರ್ಗ ಎನ್ನುತ್ತಾರೆ.  ಅದಕ್ಕೊಂದು ಆದಿ ಮತ್ತು ಅಂತ್ಯ ಇರುತ್ತದೆ.  ಆದರೆ ಕಾಲಪ್ರವಾಹದಲ್ಲಿ ಸಾಗುವಾಗ ಕೆಲವರು ನಡುವೆ ಎಲ್ಲಿಯೋ ಮಾರ್ಗದ ಮೇಲೆ ಬರುತ್ತಾರೆ. ಜಯರಾಮ ಹೆಗಡೆಯವರ ಜೀವನದ ಬೀದಿ ಪ್ರಾರಂಭವಾಗಿದ್ದು ಸಿದ್ದಾಪುರದ ಹುಲಿಮನೆಯಿಂದ. ಅಲ್ಲಿಂದ ಅವರ ತಂದೆ ಹುಲಿಮನೆ ಲಕ್ಷ್ಮಿನಾರಾಯಣಪ್ಪ ಅವರು ಮನೆ ಅಳಿಯತನಕ್ಕೆ ಸಾಗರ ತಾಲೂಕಿನ ಕೌಲಮನೆಗೆ ಬರುತ್ತಾರೆ, ಕಾರಣಾಂತರಗಳಿಂದ ಅಲ್ಲಿಂದ ಸಮೀಪದ ಕೊಳಚಗಾರಿಗೆ ವಲಸೆ. ಅಲ್ಲಿ ಇವರ ಜನನ. ಇವರ ನೆನಪು ಪ್ರಾರಂಭವಾಗುವುದು ಕೊಳಚಗಾರಿಂದ. ಇವರದ್ದು  ಆಡ್ಯಸ್ಥ ಮನೆತನ. ಇವರ ಚಿಕ್ಕಪ್ಪ ಹುಲಿಮನೆ ಸೀತಾರಾಮ ಶಾಸ್ತ್ರಿಗಳು  ಎಂದರೆ ಒಂದುಕಾಲದ ನಾಟಕ ರಂಗಭೂಮಿಯ ಮಹಾನ್ ನಟ.  ಅವರೊಂದು ದಂತಕಥೆ. ಕೆರೆಮನೆ ಶಿವರಾಮ ಹೆಗಡೆಯವರು ಯಕ್ಷಗಾನದಲ್ಲಿ ಹೇಗೋ ಅದೇ ರೀತಿ ಹುಲಿಮನೆ ಶಾಸ್ತ್ರಿಗಳು ಎಂದರೆ ಅರ್ಥವಾದೀತು. ಬಾಲಮನಿಗೆ ಶಾಲೆಗೆ ಹೋಗಲಿಕ್ಕಾಗಲಿಲ್ಲ.  ಅವರಿಂದಲೇ ಬಾಲಕ ಜಯರಾಮನಿಗೆ ಕಾರಂತರು, ಶರತ್ ಚಂದ್ರ ಚಟರ್ಜಿ, ಬಂಕಿಮಚಂದ್ರ ಆನಂದಮಠ ಮೊದಲಾದ ಸಾಹಿತ್ಯದ ಶಿಕ್ಷಣ.  ಇವರ ಇನ್ನೊಬ್ಬ ಚಿಕ್ಕಪ್ಪ ಪರಮೇಶ್ವರ ಶಾಸ್ತ್ರಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಮಹಾನ್ ಅರ್ಥಧಾರಿಗಳಲ್ಲಿ ಓರ್ವರಾಗಿದ್ದರು. ಇವರ ತಂದೆ ಲಕ್ಷ್ಮಿನಾರಾಯಣಪ್ಪ ಎಂದರೆ ನ್ಯಾಯಪಂಚಾಯತಿಕೆಯಲ್ಲಿ ಎತ್ತಿದ ಕೈ.  ತನ್ನ ರೂಪ ಆಕರ್ಷಣೀಯವಾಗಿರಲಿಲ್ಲ ಎಂದು ಅವರೇ ಯಾವ ಮುಚ್ಚುಮರೆಯಿಲ್ಲದೇ ಹೇಳಿಕೊಳ್ಳುತ್ತಾರೆ. ವೇದಪಾಠಶಾಲೆಗೆ ಹೋದರೂ ಅದನ್ನು ವೃತ್ತಿಯನ್ನಾಗಿಸಿಕೊಳ್ಳಲಿಲ್ಲ. ಕಾರಣ ‘ಹೆಗಡೆ’ ಎನ್ನುವ ಅಡ್ಡ ಹೆಸರು. ಇತ್ತೀಚಿನವರೆಗೂ ಹವ್ಯಕರಲ್ಲಿ ಹೆಗಡೆಯವರು ಎಂದರೆ ವೈದಿಕರಾಗುವ ಹಾಗಿರಲಿಲ್ಲ. ಸಮಾಜದ ವ್ಯವಸ್ಥೆಯಲ್ಲಿ ಇವರು ಪ್ರಭುಗಳು. ದಕ್ಷಿಣೆಯನ್ನು ನೀಡುವವರೇ ಹೊರತೂ ಪಡೆಯುವರಲ್ಲ.  ಮಂತ್ರದ ಕುರಿತು ಇವರಿಗೆ ಅನಾದರ ಇಲ್ಲ, ಆದರೆ ಕಂದಾಚಾರವನ್ನೂ ಒಪ್ಪುವವರಲ್ಲ. ಕಷ್ಟಗಳಿಗೆ ಕಾರಣ ಯವುದೋ ಜನ್ಮದ ಕರ್ಮಫಲ ಎಂದು ಸುಮ್ಮನೆ ಇರುವ ಜಾಯಮಾನವೂ ಇವರದಲ್ಲ. “ಗುರುಶಾಪ ಬಂದಿತ್ತೇ?” ಎನ್ನುವ ಅಧ್ಯಾಯ ಇವೆಲ್ಲವನ್ನೂ ಆಳವಾಗಿ ವಿಶ್ಲೇಷಿಸುತ್ತದೆ. ಇವರಿಗೆ ವಾವೆಯಲ್ಲಿ ಮೊಮ್ಮಗನಾಗಬೇಕಾದ ಇವರಣ್ಣನ ಮಗ ಸೌರವ್ ೨೦೨೦ರಲ್ಲಿ ಅಕಾಲಿಕವಾಗಿ ಮರಣ ಹೊಂದಿದಾಗ ಗುರುಗಳನ್ನು ವಿರೋಧಿಸಿದವ ಎನ್ನುವ ಕಾರಣಕ್ಕೆ ಸಮಾಜ ಮತ್ತು ವ್ಯವಸ್ಥೆ  ಅಂತ್ಯಸಂಸ್ಕಾರಕ್ಕೆ ವೈದಿಕರು ಯಾರೂ ಬರದಾದಾಗ ಅನಂತಮೂರ್ತಿಯವ ಸಂಸ್ಕಾರ ನೆನಪಾಗುತ್ತದೆ. ಮಡುಗಟ್ಟಿದ ಆಕ್ರೋಶದ ನಡುವೆ ಅವರಿಗೆ ತಮ್ಮ ಮನೆಯಲ್ಲಿ ನಡೆದ ದುರಂತಗಳಿಗೆ ತನ್ನ ತಂದೆ ಹಿಂದಿನ ಗುರುಗಳನ್ನು ಎದುರುಹಾಕಿಕೊಂಡಿದ್ದು ಕಾರಣವೇ ಎನ್ನುವ ಸಂಶಯ ಇವರನ್ನು ಕಾಡುವದು. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ತಪ್ಪುಗಾಣಿಕೆ ನೀಡಿ ಪರಿಹಾರವಾಗಿ ಯಾವುದೋ ಧಾರ್ಮಿಕ  ವಿಧಿಯೊಂದಿಗೆ  ಪರಿಹಾರವಾಯಿತು ಎನ್ನುವ ಶರಣಾಗತಿ ಮಾರ್ಗವನ್ನು ಹಿಡಿಯುವ ಸಂದರ್ಭಗಳೇ ಹೆಚ್ಚು.  ಆದರೆ ಇವರ ಕುಟುಂಬಿಕರು ಮಾತ್ರ ಆ ಬೀದಿಯೆಡೆ ಲಕ್ಷವನ್ನೇ ಹರಿಸಿಲ್ಲ. ಜಯರಾಮ ಹೆಗಡೆಯವರ  ನಿಲುವು ಮನುಷ್ಯನಿಗೆ  ಜನ್ಮದೊಂದಿಗೆ ಮರಣವೂ ಬರುತ್ತದೆ. ಸಹಜವಾದ ಒಂದು ಘಟನೆ ನಡೆದಾಗ ಬದುಕಿನ ಅನಿವಾರ್ಯ ಅನುಭವ ಎದುರಾದಾಗ ಅದಕ್ಕೆ ‘ಗುರುಶಾಪ ಅಥವಾ ಬೇರೇನೋ ಕರ್ಮವಿಪಾಕʼ ಎಂದೆಲ್ಲ ಅರ್ಥೈಸುವುದಾದರೂ ಯಾಕೆ?’  ಎನ್ನುವ ವಿಚಾರ ಓದುವುದನ್ನು ನಿಲ್ಲಿಸಿ ಆಲೋಚಿಸುವಂತೆ ಮಾಡಿತು. ಭಗವದ್ಗೀತೆಯ ಸಾಂಖ್ಯಯೋಗದಲ್ಲಿ

ಯಃ ಸರ್ವತ್ರಾನಭಿಸ್ನೇಹಸ್ತತ್ತತ್ಪ್ರಾಪ್ಯ ಶುಭಾಶುಭಂ |
ನಾಭಿನಂದತಿ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ||

ಯಾವನು ಎಲ್ಲ ಸಂದರ್ಭಗಳಲ್ಲೂ ಆಸಕ್ತಿರಹಿತನಾಗಿದ್ದು, ಶುಭಾಶುಭಗಳನ್ನು ಪಡೆದರೂ ಹರ್ಷಿಸದೆ, ದ್ವೇಷಿಸದೆ ಇರುವನೋ ಅವನ ಬುದ್ಧಿ ಸ್ಥಿರವಾಗಿದೆ. ಎನ್ನುವದರ ಉದಾಹರಣೆಯಾಗಿ ಹೆಗಡೆಯವರು  ತಮ್ಮ ಮಾರ್ಗದಲ್ಲಿ (ಬೀದಿಯಲ್ಲಿ) ದೃಢವಾಗಿ ಮುನ್ನಡೆಯುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ಈ ಅಧ್ಯಾಯ ಕಾಣಿಸಿತು. Confession ಎನ್ನುವುದು ಹೆಗಡೆಯವರಲ್ಲಿ ಇಲ್ಲವೇ ಇಲ್ಲ, ಕಾರಣ ಅವರಿಗೆ ತನ್ನ ನಡೆಯಲ್ಲಿ ದೃಢತೆ ಇದೆ ಎನ್ನುವುದು ತಿಳಿದಿದೆ. ಹದಿಹರೆಯದ ನವಿರಾದ ಭಾವನೆಯನ್ನು ಈ ಕೃತಿಯಲ್ಲಿ ತೆರೆದಿಡಿಸುವಾಗಲೂ ಯಾವ ಸಂಕೋಚವಿಲ್ಲದೇ ಹೇಳುತ್ತಾರೆ. ಮದುವೆಯ ವಿಷಯದಲ್ಲಿಯೂ ಸಹ ಯಾವ ಮುಚ್ಚುಮರೆಯಿಲ್ಲದೇ ಹೇಳಿಕೊಂಡಿದ್ದಾರೆ.

ಇವರ ಅಲೆಮಾರಿ ಜೀವನದ ಎರಡನೆ ಹಂತ ಪ್ರಾರಂಭವಾಗುವುದೇ ಶರಾವತಿಗೆ ಆಣೆಕಟ್ಟು ಕಟ್ಟಿ ಇವರ ಕೊಳಚಗಾರಿನ ಆಸ್ತಿ ಮುಳುಗಡೆಯಾಗುವುದರಿಂದಾಗಿ. ಈ ನೋವು ಅರ್ಥವಾಗಬೇಕಾದರೆ  ಗಜಾನನ ಶರ್ಮರ “ಪುನರ್ವಸು” ಕಾದಂಬರಿಯ ಪಾತ್ರಗಳನ್ನು ಒಮ್ಮೆ ಓದಬೇಕು. ಅಲ್ಲಿಂದ ಬ್ಯಾಡರಕೊಪ್ಪಕ್ಕೆ ವಲಸೆ. ಪ್ರಾರಂಭದ ಹಂತದಲ್ಲಿ ಒಳ್ಳೆಯ ಬೆಳೆ. ನಂದಿ ಹೊಳೆಯ ಕೃಪೆ. ಮಂಡಲ ಪಂಚಾಯತ ಸದಸ್ಯರೂ ಆಗಿ ಬೆಂಗಳೂರಿನ ದರ್ಶನ. ಎಲ್ಲಾ ಜನಾಂಗದವರೊಟ್ಟಿಗೆ ಸಮಭಾವ.  ರಾಜಕೀಯದಲ್ಲಿ ಪ್ರಭಾವಶಾಲಿ. ಆದರೆ ಅದೇ ಜಾಗದಲ್ಲಿ ಇನ್ನಿತರರೂ ಬಂದು ವಸತಿ ಹೂಡಿದ ಪರಿಣಾಮ ನಂಬಿದ  ನಂದಿ ಹೊಳೆ ಕೈಕೊಟ್ಟಿತು. ಊರೇ ಬರಡಾಯಿತು. ‘ಕೊಳಚಗಾರಿನ ಸಮೃದ್ಧಿಯ ಸಂಸಾರವನ್ನು  ಡ್ಯಾಮಿನ ನೀರು  ಬಂದು ಮುಳುಗಿಸಿದರೆ ಬ್ಯಾಡರ ಕೊಪ್ಪದಲ್ಲಿ ಇವರ ಸಂಸಾರ ನೀರಿಲ್ಲದೇ ಮುಳುಗಿತ’. ಆಡ್ಯಸ್ಥರಾಗಿ ಬದುಕಿ ಬಡತನ ಬಂದರೆ ವ್ಯಕ್ತಿ ಕುಗ್ಗಿ ಹೋಗುವುದು ಸಹಜ. ಸಮಾಜವನ್ನು ಎದುರಿಸಲಾರದೇ ಅಸಹಾಯಕ ಬಾಳನ್ನು ಕಾಣಬೇಕಾಗುತ್ತದೆ.  ಅದರಲ್ಲಿಯೂ ಇವರ ಕುಟುಂಬದಲ್ಲಿ ಬಂದೆರಗಿದ ಸಾಲು ಸಾಲು ಸಾವು; ಉಪನಯದ ವಟು ಅಣ್ಣನ ಮಗ ಲಕ್ಷ್ಮೀನಾರಾಯಣ, ಇನ್ನೋರ್ವ ಅಣ್ಣ ಕಂಬಾಕಣ್ಣಯ್ಯ ಇನ್ನೋರ್ವ ಶ್ರೀಕರ, ಗಣೇಶ ಸೇರಿದಂತೆ ಸಾಲು ಸಾಲು ಸಾವುಗಳು ಅವರನ್ನು ಧೃತಿಗೆಡಿಸಿರಬೇಕು ಅನಿಸುತ್ತದೆ. ಭೈರಪ್ಪನವರ ‘ಭಿತ್ತಿ’ ಯ ದುರಂತ ನೆನಪಾಗುತ್ತದೆ. ತಕ್ಷಣ ಸ್ಥಿಪ್ರಜ್ಞರಾಗಿಬಿಡುತ್ತಾರೆ. ಬ್ಯಾಡರಕೊಪ್ಪದ ಕೃಷಿಭೂಮಿಯಲ್ಲಿ ಎದುರಾದ ಸಂಕಷ್ಟಗಳು, ನೀರಿನ ಕೊರತೆ, ಕುಟುಂಬ ವಿಭಜನೆ ಇವುಗಳನ್ನು ಅವರು ಯಾರನ್ನೂ ದೂರದೇ  ದಾಖಲಿಸುತ್ತಾರೆ.

ಮೊದಲು ಪ್ರಥಮ ಪುರುಷದಲ್ಲಿ ಪ್ರಾರಂಭಮಾಡಿದ ಹೆಗಡೆಯವರು ಇದ್ದಕ್ಕಿದ್ದಂತೆ ಅದನ್ನು ತೃತೀಯ ಪುರುಷದಲ್ಲಿ ಬರೆಯಲು ಪ್ರಾರಂಭಿಸುವುದು ಕುತೂಹಲಕಾರಿ. ಶೀರ್ಷಿಕೆಯಲ್ಲಿ ಹೇಳಿರುವಂತೆ ಇದು ಜಯರಾಮ ಹೆಗಡೆಯ ಜೀವನಕಥನ ಎನ್ನುವಾಗ ತನ್ನನ್ನು ತಾನು ಹೊರಗಡೆ ನಿಂತು ‘ಜಯರಾಮ’ ಎನ್ನುವ ಮೂಲಕ ಕಥನವನ್ನು ಹೇಳುವಾಗ ಮನಸ್ಸಿನ ಅನೇಕ ವಿಷಯಗಳನ್ನು ತೆರೆದಿಡಬಹುದು ಎನ್ನುವುದು ಅವರ ಅನಿಸಿಕೆಯಾಗಿರಬಹುದು.  ಅದೂ ಅಲ್ಲದೇ ಲೇಖನನ್ನೂ ಸಹ ವಿಮರ್ಶೆಗೊಳಿಸಲು  ಈ ರೀತಿಯ ಬರಹದಿಂದ ಸಾಧ್ಯ. ಇಂಗ್ಲೀಷಿನಲ್ಲಿ I-novel ಎನ್ನುವುದೊಂದು ಮಾದರಿಯ ಆತ್ಮಕಥನದ ಪದ್ಧತಿಯಿದೆ. ಇದು ಲೇಖಕರ ಸ್ವಂತ ಜೀವನದ ಅನುಭವಗಳನ್ನು ಆಧರಿಸಿದ, ಅರೆ-ಆತ್ಮಚರಿತ್ರೆಯ ರೀತಿಯ  ಕಥನಗಳು. ಇದರಲ್ಲಿ ಲೇಖಕ ಮತ್ತು ಕಥೆಯ ನಿರೂಪಕನ ನಡುವಿನ ಗಡಿ ಮಸುಕಾಗಿರುತ್ತದೆ. ಅವುಗಳಲ್ಲಿ ಲೇಖಕರು ತಮ್ಮ ಸೋಲುಗಳನ್ನು ಸಾಧನೆಯಂತೆ ಹೊಗಳದೆ, ನಿರ್ವಿಕಾರವಾಗಿ ದಾಖಲಿಸುತ್ತಾರೆ. ಹೆಗಡೆಯವರ ಬರವಣಿಗೆಯಲ್ಲೂ ಇದೇ ಗುಣ ಕಾಣಿಸುತ್ತದೆ. ದುಃಖವಿದೆ, ಆದರೆ ಕಹಿತನವಿಲ್ಲ. ನೋವಿದೆ. ಆದರೆ ಅಷ್ಟೇ ನಿರ್ಲಿಪ್ತತೆಯಿದೆ. ನಿಷ್ಟುರ ಸತ್ಯವಿದೆ, ಅದನ್ನು ಸಾಧನೆಯೆಂದು ಹೇಳಿಕೊಳ್ಳುವ ಗುಣವಿಲ್ಲ.  ಕನ್ನಡ ಸಾಹಿತ್ಯದಲ್ಲಿ ಈ ರೀತಿಯ ಆತ್ಮಕಥನ ಹೊಸತು. ಅಪ್ಪನನ್ನು ಎದುರುಹಾಕಿಕೊಂಡು ಆಡಿದ ಮಾತುಗಳನ್ನು ಹೇಳುವಾಗಲೂ ಸಹ ಅವರ ದರ್ಪಕ್ಕೆ ತಕ್ಕ ಉತ್ತರ ಮತ್ತು ಅದು ಆ ಹೊತ್ತಿನ  ಪ್ರತಿಕ್ರಿಯೆ ಹೊರತಾಗಿ ದೀರ್ಘಕಾಲದ ದ್ವೇಷವೆಂದು ಅನಿಸುವುದಿಲ್ಲ.  ಪತ್ನಿ ಶರಾವತಿಯ ಮದುವೆಯ ಹೊತ್ತಿನಲ್ಲಿ ಬಂದ ಜ್ವರದಿಂದ ಇವರೂ ಸಹ ಆಚೆ ಹೋಗಿ ಈಚೆ ಬಂದಿದ್ದಾರೆ.  ಅಮ್ಮನ ಚಿನ್ನದ ಪಾಟಳಿಯನ್ನು ಅಡವಿಡುವಾಗ ಮಾತ್ರ ಜಯರಾಮ  ರೋಧಿಸುವುದು.  ಇನ್ನೊಂದು ವಿಷಯ ಗಮನ ಸೆಳೆಯುವುದು ಅವರ ಮಿತ್ರ ಗಜಾನನ ಶಾಸ್ತ್ರಿ ಮತ್ತು ಅವರ ತಂಗಿ ಮೀನಾಕ್ಷಿಯರ ಅನುಬಂಧ. ಮನಸಾರೆ ಪ್ರೀತಿಸಿದ ಅವರನ್ನು ಮದುವೆಮಾಡಿಸುವಲ್ಲಿಯೂ ಓರ್ವ ಆದರ್ಶ ಅಣ್ಣನಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ದುರ್ದೈವದಿಂದ ಅವರ ಆತ್ಮ ಸಖ ಮತ್ತು ಬಾವ ಗಜಾನನ ಶಾಸ್ತ್ರಿಗಳು ಹೃದಯಾಘಾತದಿಂದ ತೀರಿಕೊಂಡಮೇಲೆ  ಅವರಿಗೆ ಅನಾಥಪ್ರಜ್ಞೆ ಕಾಣಿಸುತ್ತದೆ. ಜಯರಾಮ ಹೆಗಡೆಯ ತಂಗಿ ಮೀನಾಕ್ಷಿ ಬರೆದ ‘ಹರಿವ ನದಿ’ ಆತ್ಮಕತೆಯಲ್ಲಿ (ಲೇ. ಭಾರತಿ ಹೆಗಡೆ)  ಅಣ್ಣ ತಂಗಿಯರ  ಅನುಬಂಧದ ವಿಷಯ ಬಂದಿದೆ.

ನಲವತ್ತೊಂದನೆಯ  ವಯಸ್ಸಿನಲ್ಲಿ ಕುಸಿದ ಬದುಕಿನ ಬಂಡಿಯನ್ನು  ಗಟ್ಟಿಗೊಳಿಸಲು ಉದ್ಯೋಗಕ್ಕಾಗಿ ಮಿಜಾರು ಗುತ್ತಿಗೆ ಬಂದಾಗ, ಅವರ ಜೀವನ ಮತ್ತೊಂದು ಹಂತಕ್ಕೆ ಪ್ರವೇಶಿಸುತ್ತದೆ. ಮೂವತ್ತು ಎಕರೆ ಆಸ್ತಿಗಳ ಒಡೆಯರಾಗಿದ್ದ ಹುಲಿಮನೆಯ ಜಯರಾಮ ಇದೀಗ ಮಿಜಾರುಗುತ್ತು ಆನಂದ ಆಳ್ವರ ತಂಗಿ ‘ಸುಮತಿ’ಯ ಜಮೀನಿನಲ್ಲಿ ಉಸ್ತುವಾರಿಗೆ ತಿಂಗಳ ಸಂಬಳ ೫೦೦ ಕ್ಕೆ ಬಂದು ಸೇರಿದ್ದಾರೆ. ಮಿಜಾರು ಅಪ್ಪಟ ತುಳುನಾಡು. ಅಲ್ಲಿಂದ ಅವರ ಬದುಕಿನ ಮಜಲು ಒಂದುಕಡೆ ಜೀತ ಎನ್ನಬಹುದಾದರೂ ಜೀತವಲ್ಲ. ತಲೆಯ ಮೇಲೆ ಯಾವತ್ತಿಗೂ ಬೆದರಿಕೆಯ ಮತ್ತು ಇನ್ನಿತರರ ಈರ್ಷೆಯ ನುಡಿಗಳು, ಅಪರಿಚಿತ ಪ್ರದೇಶ, ಮಕ್ಕಳಿಲ್ಲ, ಒಂದೇ ಎರಡೆ ಆದರೂ ಕೃಷಿಯ ಮೇಲುಸ್ತುವಾರಿಕೆಯನ್ನು ಹೊತ್ತುಕೊಂಡು, ಅದನ್ನು ತಮ್ಮದೇ ಜಮೀನಿನಂತೆ ನೋಡಿಕೊಳ್ಳುವ ನಿಷ್ಠೆ, ಜಗತ್ತಿನ ಅನೇಕ ಅನಾಮಿಕ ಸೇವಕರ ನೆನಪಿಸುತ್ತದೆ. ಬುಕರ್ ಟಿ. ವಾಷಿಂಗ್ಟನ್ ತಾನು ಅನುಭವಿಸಿದ ಬಾಲ್ಯದ ದಾಸ್ಯದಿಂದ ವಿಮುಕ್ತನಾಗುವ ಕಥೆಯನ್ನು ಹೇಳುವಾಗ, “ಕೆಲಸವೇ ನನ್ನ ಗುರುತು” ಎನ್ನುವುದನ್ನು ಒತ್ತಿಹೇಳುತ್ತಾನೆ. ಹೆಗಡೆಯವರ ಬದುಕಿನಲ್ಲೂ ಕೆಲಸವೇ ಅವರ ಗುರುತುಗಳಾಗಿವೆ. ಬಂದ ಕೆಲವೇ ದಿನಗಳಲ್ಲಿ ಹೆಗಡೆಯವರು ತುಳು ಭಾಷೆಯನ್ನು ಅಪ್ಪಟ ತುಳುವರಂತೆ ಕಲಿತು ಮಿಜಾರು ಪರಿಸರದಲ್ಲಿ ಒಂದಾಗಿದ್ದು, ಜೊತೆಗೆ ಅಲ್ಲಿನ ಎಲ್ಲರ ಜೊತೆ ಕಲೆತು ಬದುಕುತ್ತಿರುವ ರೀತಿಯೇ ಇತರರಿಗೆ ಮಾದರಿಯಾಗಬಲ್ಲದು. ಒಂದುಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಳುಗಳನ್ನು ಕರೆಸಿ ಕೆಲಸಮಾಡಿಸುತ್ತಿದ್ದ ಆಢ್ಯಸ್ಥ ಮನೆತನದವ ತನ್ನ ನಡುವಯಸ್ಸಿನಲ್ಲಿ ಘಟ್ಟದ ಕೆಳಗಿನ ಶೆಟ್ಟರ ಮನೆಯಲ್ಲಿ ಜೀತದಂತೆ ಬದುಕುವ ಅನುಭವ ಸಾಮಾನ್ಯವಾದ್ದಲ್ಲ. ಅವರಿಗೆ ಜೋರಾಗಿ ಅಳಬೇಕೆನಿಸಿದರೂ ಅನುಭವಿಸಬೇಕೆಂದು ಗಟ್ಟಿ ಮನಸ್ಸು ಮಾಡಿಕೊಂಡರು.

ಜಯರಾಮ ಹೆಗಡೆಯವರು ಒಂದರ್ಥದಲ್ಲಿ Athiest ಅಂದುಕೊಂಡರೂ ನಾಸ್ತಿಕರಲ್ಲ.  ಆದರೆ ವಾಸ್ತವವಾದಿ. ವೇದವನ್ನು ಚನ್ನಾಗಿ ಉಚ್ಛರಿಸಬಲ್ಲ ಅವರಿಗೆ ತಿಂಗಳಿಗೆ ೧೫೦೦ ರೂಪಾಯಿಯ ವೇತನದ ಬಿಳಿನೆಲೆಯ ಅರ್ಚಕ ವೃತ್ತಿ ಅರಸಿಕೊಂಡು ಬಂದರೂ ಅದನ್ನು ಬಿಟ್ಟು ಕೃಷಿಯನ್ನೇ ಅವಲಂಬಿಸುವುದು ತಾನೋರ್ವ ಹೆಗಡೆ, ಯಾಚಕ ಪ್ರವೃತ್ತಿ ತನ್ನದಲ್ಲ ಎನ್ನುವ ಮನೋಭಾವದಿಂದ. ಹವ್ಯಕರು ಸಹಜವಾಗಿ ಕೃಷಿಕರಾಗಿರುವುದರಿಂದ ಆನಂದ ಆಳ್ವರ ದರ್ಪದ ನಡುವೆಯೂ ೫೦೦ ರೂಪಾಯಿ ಸಂಬಳದ ಕೃಷಿಯಲ್ಲಿಯೇ ಇರಲು ಬಯಸುತ್ತಾರೆ. ತನ್ನ ಮನಸ್ಸಿಗೆ ಒಪ್ಪದ ಯಾವ ಕೆಲಸವನ್ನೂ ಮಾಡಲಾರರು ಅವರು. ಅವರ ಬದುಕಿನಲ್ಲಿ ಬರುವ ಸುಬ್ಬಣ್ಣ ಭಟ್ಟರು  ಮಳೆ ನಿಂತರೂ ನಿಲ್ಲದ ಹನಿಯ ಹಾಗೇ ನೆನಪಿನಲ್ಲಿ ಉಳಿಯುತ್ತಾರೆ. ದೇವರಿಗಿಂತಲೂ ಕೊಡಮಣಿತ್ತಾಯ ದೈವದ ನಂಬುಗೆಯನ್ನು ಇವರೊಳಗೆ ಮೂಡಿಸಿದವರು ಅವರೇ.

ಆನಂದ  ಆಳ್ವರ  ಮತ್ತು ಇವರ ಸಂಬಂಧ ಮಾತ್ರ ಮರೆಯಲಾರದ ಅನುಬಹವ.  ಅವರ ಬಿಗುತನ, ಅನುಮಾನ, ಎಲ್ಲವನ್ನೂ ಮೀರಿ ಕೊನೆಗೆ ಇವರನ್ನು ಓರ್ವಮಗನಂತೆ ಹಚ್ಚಿಕೊಂಡಿದ್ದು  ಭಾವನಾತ್ಮಕವಾಗಿ ಮೂಡಿಬಂದಿದೆ. ಡಾ. ಭಗವಾನ್ ದಾಸ ಮತ್ತು ವೀಣಾ  ಇವರನ್ನು ತಮ್ಮದೇ ಬಾಂಧವರಂತೆ ನೋಡಿಕೊಂಡಿದ್ದು. ಮಕ್ಕಳಾಗುವ ಆಸೆಯನ್ನೇ ಬಿಟಿದ್ದ ಈ ದಂಪತಿಗಳಿಗೆ  ಸರಿಯಾದ ಚಿಕಿತ್ಸೆ ಕೊಡಿಸಿ ನಲವತ್ತೈದರ ಪ್ರಾಯದಲ್ಲಿ   ಮಗ ಲಕ್ಷ್ಮೀಶನ ಜನನ ಮೊದಲಾದ  ಭಾಗಗಳು ಕೃತಿಗೆ ಗಾಢ ಮಾನವೀಯ ಸ್ಪರ್ಶವನ್ನು ನೀಡುತ್ತವೆ. ಇಂದು ಆ ಮಗ ವೈದ್ಯನಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವುದು, ಹೆಗಡೆಯವರ ಬದುಕಿನ ತಾಳ್ಮೆಗೆ ಮತ್ತು  ಮೌನಕ್ಕೆ ಸಂದ ಜಯವಾಗಿದೆ. ವೀಣಾ ಮತ್ತು ಡಾ. ಭಗವಾನ್ ಶೆಟ್ಟರು ಇವರ ಪಾಲಿಗೆ ಇನ್ನೋರ್ವ ಪಾಲಕರಂತೆ ಕಾಣುತ್ತಾರೆ. ಇವೆಲ್ಲವೂ ಬಹುಶಃ ಬಿಳಿನೆಲೆಯಲ್ಲಿ ಅರ್ಚಕರಾಗಿದ್ದರೆ ಆಗುತ್ತಿರಲಿಲ್ಲ. ಆನಂದ ಶೆಟ್ಟರು ಇವರಿಗೆ ಸ್ವಂತಸೂರನ್ನು ಕೊಡಲು ತನ್ನ ಮಾಯಾಳ ಮನಒಲಿಸುವ ವಿಷಯ ಗಮನಿಸಿದಾಗ ಆನಂದ ಶೆಟ್ಟರ ದರ್ಪದ ವ್ಯಕ್ತಿತ್ವದ ಹಿಂದೆ ಇರುವ  ಮಾನವೀಯ ಮುಖ ಕಾಣಿಸುತ್ತದೆ.

ಮತ್ತೊಂದು ಮಹತ್ವದ ವ್ಯಕ್ತಿ ಇವರ ಬದುಕಿನಲ್ಲಿ ಪ್ರವೇಶ ಮಾಡುವುದು ಸುಬ್ಬಣ್ಣ ಭಟ್ಟರ ರೂಪದಲ್ಲಿ. ಎಲ್ಲಿಂದಲೋ ಬಂದವರಿಗೆ ಮನೆ ಕಟ್ಟಲು ಆ ಕಾಲದಲ್ಲಿ ಒಂದುಲಕ್ಷದ ಮೂವತ್ತೈದು ಸಾವಿರದಷ್ಟು ದೊಡ್ಡ ಮೊತ್ತವನ್ನು ಕೊಡುವುದು, ಅದನ್ನು ಯಾರಿಗೂ ತಿಳಿಸದೇ ಇದ್ದರೂ ಹೆಗಡೆಯವರು ಅವರ ಕುಟುಂಬದವರಿಗೆ ಮಗನ ದುಡಿತದಿಂದ ಸಂದಾಯ ಮಾಡುವುದೆಲ್ಲವೂ ಕಾಣದ ಕೈಯೊಂದು ಯಾವುದಾದರೂ ರೀತಿಯಲ್ಲಿ ಬಿದ್ದವರನ್ನು ಕಾಪಾಡಲು ಇರುತ್ತದೆ ಎನ್ನುವ ಜನಪದರ ಮಾತು ನೆನಪಿಗೆ ಬರುತ್ತದೆ… ಭೀಷ್ಮ ಧರ್ಮರಾಯನಿಗೆ “ನಿನ್ನ ಸತ್ಯದ ಫಲ ನಿನ್ನನ್ನು ರಕ್ಷಿಸುತ್ತದೆ” ಎಂದು  ಹರಸಿ ಕೊಟ್ಟ ಕಥೆಯೆಲ್ಲವೂ ಇಲ್ಲಿ ಮೂರ್ತರೂಪವಾಗಿವೆ. ಮನೆಯ ಉಸ್ತುವಾರಿ ನೋಡಿಕೊಳ್ಳುವಾಗ  ಬರುವ ಮನಸ್ತಾಪಗಳೆಲ್ಲವೂ ಬೇಸರ ತರಿಸಿದರೂ “ನಿನ್ನೆ ಮೊನ್ನೆಯವರೆಗ ಚನ್ನಾಗಿದ್ದವರು  ಇವತ್ತು ಅಪಥ್ಯವಾದ ಯಾವುದೋ ಕಾರ್ಯ ಮಾಡಿದರೆಂದು ಸಂಬಂಧ ಕಡಿದುಕೊಳ್ಳಬಹುದೇ” ಎನ್ನುವ ಪ್ರಶ್ನೆಗಳನ್ನು ಹಾಕಿಕೊಂಡು ಸಮಾಧಾನ ಮಾಡಿಕೊಳ್ಳುವ ಗುಣವೇ ಅವರನ್ನು ಗೆಲ್ಲಿಸಿದೆ. ಅಬುಕರಾಕ ಬ್ಯಾರಿಯಂತವ ಪ್ರೀತಿ ಇವರನ್ನು ಜಾತಿಧರ್ಮವನ್ನು ಮೀರಿದ ವ್ಯಕ್ತಿಯನಾಗಿಸಿದೆ.

ಜಯರಾಮ ಪದೇ ಪದೇ “ನಾನು ವಲಸೆ ಬಂದವನೋ, ಜೀವನವನ್ನರಸಿ ಬಂದವನೋ, ಅಥವಾ ತಾತ್ಕಾಲಿಕ ನೆಲೆಯನ್ನರಿಸಿ ಬಂದವನೋ”  ಎನ್ನುವ ಗೊಂದಲ ಅವರನ್ನು ಕಾಡುತ್ತಿದೆ.    ಇದು ಅವರ  “ಬೀದಿಯ  ಬದುಕಿನ” ಮೂಲ ಬೀಜವೂ ಹೌದು.  ಉತ್ತ ಬೀಜವನ್ನು ಮರವಾಗಿ ಬೆಳೆಯಲು ಬಿಡಬೇಕು; ಅದರ ಬೇರನ್ನು ಕೆದಕಲು ಹೊರಟರೆ ಬೆಳೆದ ಮರಕ್ಕೇ ತೊಂದರೆ. ಅವರಿಗೆ ಇರುವ ಸಂದೇಹ ಹಾಗೇ ಇರಲಿ. ಏಕೆಂದರೆ ಜನಸಾಮಾನ್ಯನ ಆತ್ಮಚರಿತ್ರೆಯ ಪ್ರಸ್ತುತತೆ ಇಲ್ಲಿಯೇ ಸ್ಪಷ್ಟವಾಗುತ್ತದೆ.. ಬೀದಿಯ ಬದುಕು ಓದುಗರಿಗೆ “ನಾನೂ ಇಂತೆಯೇ ಬದುಕಬಹುದು” ಎಂಬ ಧೈರ್ಯವನ್ನು ನೀಡುತ್ತದೆ. ಇದೇ ಕಾರಣಕ್ಕೆ ಜಗತ್ತಿನ ಅನಾಮಿಕ ಆತ್ಮಕಥನಗಳಂತೆ, ಈ ಕೃತಿಯೂ ತನ್ನ ಸರಳತೆಯಲ್ಲೇ ವಿಶಿಷ್ಟತೆಯನ್ನು ಹೊಂದಿದೆ.

About The Author

ನಾರಾಯಣ ಯಾಜಿ

ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.

1 Comment

  1. Vasantha kumar

    ನಾರಾಯಣ ಯಾಜಿಯವರ ಬರಹ ಎಷ್ಟು ಆಳವಾಗಿ ಮನದೊಳಗೆ ಹೊಕ್ಕಿತೆಂದರೆ ಆದಷ್ಟು ಬೇಗ ಜಯರಾಮ ಹೆಗಡೆಯವರ ಬದುಕಿನ ಬೀದಿಯಲ್ಲಿ ಒಂದು ಸುತ್ತು ವಿರಾಮವಾಗಿ ಹಾಕಬೇಕೆಂಬ ತುಡಿತ ಹೆಚ್ಚುವಂತೆ ಮಾಡಿದೆ

    Reply

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ