ಗ್ರೇ ಬಿಂದಿ X ಕೆಂಪು ಲಿಪ್ ಸ್ಟಿಕ್
ಸಿಟಿಯ ಬಣ್ಣಗಳು
1
ಅಣ್ಣಮ್ಮ ದೇವಿಯ ಮಹಾಜಾತ್ರೆಯಂಥ ಈ
ಶಹರಿನ ಊಳಿಗಕ್ಕೆ ಅವಳು ನಿಂತಾಗ
ಯಾರೂ ಕನಿಕರಿಸಲಿಲ್ಲ
ಬಿಸಿರಕ್ತದ ಪರಮದಾಹಿಯೀ
ನಗರದ ಹಗಲುಗಣ್ಣುಗಳ ಮೇಲೆ
ಕಾಂಚಾಣದ ಕನಸು
ಕುಣಿಕುಣಿದು
ಸಂಜೆ ಐದೂವರೆಯ ಹಳಿಗುಂಟ
ಸೋತ ಮುಂಜಾವು ಅಂಗಾತ ಬಿದ್ದು
ಪಾಲಿನ ಸುಖಕ್ಕಾಗಿ ದಾವೆ ಹೂಡುತ್ತಿದೆ
2
ಹೆಚ್ಚೆಂದ್ರೆ ಆರು ನಿಮಿಷ
ಕನ್ನಡಿಯ ಮುಂದೆ
ಸೀಮ್ ಲೆಸ್
ಸ್ಟ್ರೇಟ್ ಕಟ್
ಸ್ಲಿಮ್ ಫಿಟ್
ಕೆನ್ನೆ ಕೊರಳು ಪಕ್ಕೆಗಳ ಸುತ್ತಣ ಬೇಡದ ಕಲೆ
ಗೆರೆಗಳ ಮುಚ್ಚುವಾಟದ
ಜೋಶು ಮುಗಿದು
ಉಳಿದ ಚೂರು ಪಾರು
ಕಣ್ಣ ಕೆಳಕಪ್ಪು ಗುಳಿಮಚ್ಚುವ
ಫೈನಲ್ಸ್ ಸೆಣಸಾಟ
ನೀ ಕುಂತರೆ
ವಯಸ್ಸು ಕೂತಿರ್ತಾ?
ಕಿವೀ ಹಿಂದೆ ಕನ್ನಡ ಶಾಲೇ ಗೆಳತಿ
ಕರ್ರ್ ಎಂತ ಕಮೆಂಟಿಸಿದಂತಾಗಿ
ಮಕದ ಮೇಲೆ ಫಕ್ಕನೆ
ಹೊತ್ತಿಕೊಂಡಿದ್ದು ನೂರು ಕ್ಯಾಂಡಲ್ ನ ಬಲ್ಬು
ಮಹಾಗದ್ದಲ ದಾಟಿ
ಬಾಯಿಗೆ ಬಾಗಿಲಿಗೆ ಬೀಗ ಬಿದ್ದ ಮೇಲೇ
ಸಿಗುವ ಮಬ್ಬು ಬೆಳಕಿನ
ಮತ್ತೇರಿಸೋ ನಾದವಲಯ
ಅಲ್ಲೊಂದು ವಾರಾಂತ್ಯದ
ರಾತ್ರಿಯೂಟದ ಸಂಭ್ರಮ
ಮಕ್ಕಳಿಗೆ ಬಂದಂತೆ ರೆಕ್ಕೆ
ಬಣ್ಣದ ದೀಪ- ಬಿಂಕದ ಬೀಟ್ಸ್ ಗೋ
ದೊಡ್ಡವರ ಮಕದ ಗಂಟು ಸಡಿಲಿಸಿ
ಬಾಳ್ವೆಯ ಹಾದಿ ನೇರಾದ್ದಕ್ಕೋ-
ಒಂದರೆಗಳಿಗೇಲಿ
ಬಿಜಯಂಗೈವಳು
ಗಾಢ ಕೆಂಪು
ಲಿಪ್ ಸ್ಟಿಕ್ ಅಪ್ಸರೆ
ಆಯ್ಕೆಗಳ ಮೆನು ಹಿಡಿದು
ನಿಮಗೇನು ಬೇಕು
ಬೆಳದಿಂಗಳ ಚೆಲುವೆಯ ದನಿಗೆ ಸೋಲದವರುಂಟೇ !
ಖುಷಿಯಾಗಿ- ನೀಲಿ ಕಾಲರಿನ
ಸಣ್ಣ ಕಣ್ಣುಗಳ ಅಂಕಲ್
ಗೊತ್ತಿರೋ ಉತ್ತರ ಹೋಲ್ಡ್ ಮಾಡಿ
ಹೊಸದಾಗಿ ಮೆನು ಕಂಡ ಮಗುವಂತೆ ಓದಲಾರಂಭಿಸಿದ
ಎಡಕ್ಕೆ ಹೊರಳಿಸಿ ಕತ್ತು ಬೂದಿ ಬಣ್ಣದ ಬಿಂದಿಯತ್ತ
ಕೇಳಿತು ಕೆಂಪು ಲಿಪ್ಸ್ಟಿಕ್
ನಿಮಗೇನು ಕೊಡಲಿ ಮೇಡಂ !?
ಕಳೆದಿಪ್ಪತ್ವರ್ಷ ಒಂದೇ ಸರ್ವಿಂಗ್ ತಟ್ಟೇಲಿಟ್ಟು ಕೊಡಬಲ್ಲೆಯ ಸುಂದ್ರೀ ..?
ಹಾಂ!?
ಕಾಮನಬಿಲ್ಲಿನ ಹುಬ್ಬೇರಿದವು
. . .ದ್ದ ದ್ದ ಅದೇ ಫ್ರೆಂಚ್ ಫ್ರೈಸ್..
ನೋ ಸ್ಪೈಸ್ ಮಕ್ಕಳಿಗೆ- ಬೇಗ ಕೊಡಿ ಓಕೆ
(ನಗರವೇ ಒಂದು ಮಾಕ್ ಟೇಲ್ ಈ ಮಕ್ಕಳಿಗೆ)
ನನ್ನ ಕಾಕ್ ಟೇಲ್ ವಿವರ ನಂತ್ರ ಹೇಳುವೆ-
3
ಹೇಯ್.. ಯಾವೊಳೇ
ಬಾರೆ ಇಲ್ಲೀ
ಹತ್ಮನೆ ಕಟ್ಟಿಸ್ಕಂಡು ಆತ್ ಬಕೆಟ್ ಕಸ ಇಟಿ ಬುಟ್ಟು
ತಿಂಗ್ಳಿಗಿಪ್ಪತ್ ರೂಪೈಗೆ ನಾಮ ಹಾಕ್ತಾವಳೇ
ಗಾಂಚಲಿ ನಡಿಯಕ್ಕಿಲ್ಲ
ಬಾಕಿ ಇಡಿಲ್ಲಿ
ನೋಡೇ ಬುಡುವ
………
ಮೂರ್ ತಿಂಗ್ಳಿಂದ ಸಂಬಳಿಲ್ಲ ನಮಿಗೆ
ಮನಿಗಿಪ್ಪತ್ ಮಡಗಕ್ಕೇನು ಕೊಬ್ಬು ನಿಂದೂ?
ಮುನ್ಸಿಪಾಲ್ಟಿಗೆ ಫೋನ್ ಮಾಡಿ
ಚಾಡಿ ಯೇಳಿದ್ದ್ಯಾ ನೀನು
ಅದೇನ್ ಲಾಯ್ರೀ ಕಲ್ತಿದ್ದೊ ಇಲ್ಲಿ ತೋರ್ಸು ಬಾ
ಬಾಯಿಲ್ಲಿ
…
… ಮನೇ ಮುಂದೆಲ್ಲ ಹೀಗೆ
..ಗಲಾಟಿ ಮಾಡ್ಬೇಡಿ ಪ್ಲೀಸ್-
-ಕಿಟಕಿ ಪರದೆಗಳು ಅಲ್ಲಾಡಿವೆ
ಎಷ್ಟು ಕ್ಲಾಸೀ ಕಾಣಿಸ್ತಾಳೆ
ಥತ್..ಯೇನಿದು ಬೆಳ್ ಬೆಳಗ್ಗೆ-
ನಂ ಪಾಪೂ ಡೈಪರ್ ಬಿನ್ ಸಮೇತ
ಈ ಕಸದಪ್ಪ ಬಿಟ್ಟೋದ್ರೆ ಏನ್ಗತಿ
ನಾವ್ ಕೊಟ್ಟಿರೋ ಇನ್ನೂರೈವತ್ತು
ಕೊಟ್ಟೇ ಇಲ್ಲವ ಈ
ಕ್ಲಾಸೀ
ಲುಕಿಂಗ್
ವೋನರವ್ವ ?
..ಹೊಸ ಮನೆ ನೋಡು ಜಾನೂ ..”
4
ಹಾದೀ ಮೇಲೆ
ಸಂಪಿಗೆ ಘಮ
ಛಂದ ಮುಂಜಾವು
ಸಪ್ಪು ಹಣ್ಣು ಹೂವು
ಎಲ್ಲಾ ಎಷ್ಟು ಸೋವಿ!
ನೀಲಿ ಬಿಳಿ ಕೆಂಪು ಹಳದಿ
ಮೂವತ್ತು ರೂಪಾಯಿಗೆ
ಮೂರು ದಿವಸಾ ಚಿಂತಿಲ್ಲ
ಮೂರ್ ಹೊತ್ತಿನ ಮನೆ ವಾರ್ತೇ ರಥ ಎಳಿಬಹುದು
ಮುಂಜಾನೆ ವಾಕ್ ಮಾತ್ರ
ತಪ್ಪಿಸಕೂಡದು
ಹಾದಿಯಂಚಿನ
ಒದ್ದೇ ಮರಗಳಿಂದ
ದಪ್ಪ ಹನಿ ಮೈಮೇಲೆ
ಟಪ್ ಟಪಿಸುತಿದ್ರೆ
ಆಕಳು ಕರು ಆನಂದವಾಗಿ
ಆಚೀಚೆ ಓಡಾಡಿಕೊಂಡು
ಕಾದಿವೆ
ತರಕಾರೀ ಅಂಗಡಿಯಿಂದ
ಉದುರಬಹುದಾದ ನಿನ್ನೆಯೇ
ಎತ್ತಿಟ್ಟ ಫಲಗಳಿಗಾಗಿ
ಹಾಗೇ ಒಂದು ಪುಟ್ಟ ಗೂಳಿ
ಹಸಿರು ಸಪ್ಪಿಗ್ಗೆ ಮೂತಿಯಿಕ್ಕಿ
ಫಟ್ಟಂತ ನುಗ್ಗೇ ದಂಟಲ್ಲಿ ಬಡಿಸಿಕೊಂಡೊಡಿದೆ
ಆಹಾ ಗೋಕುಲವೆಂದ್ರೆ ಇದೇ
ಥಟ್ಟಂತ ಭುಜ ಸವರಿ ಮುಂದಾಗಿ
ಆರೆಂಜು ಪ್ಲಾಸ್ಟಿಕ್ ಚೀಲ
ವಡ್ಡಿದಳು ಕೋಲು ಮಕದ ಕಮಲಾಕ್ಷಿ
ಯಾರಮನೆ ಮಹಾಲಕ್ಷ್ಮೀ
ಅವಳ ಕಣ್ಣಿಂದ್ಯಾವ ಕಿಡಿ ಸಿಡಿಯಿತೋ
ಮೈಯಿಂದಾವ ಘಮಲು
ಕೋಲು ಮೀಸೆಯ ಗಡದಪ್ಪನ ಜನುಮಕ್ಕೆ ತಿವಿಯಿತೂ ಕಾಣೆ
ಈಚಲು ಮರದ ಮಡಿಕೆ
ತಲೇ ಮೇಲೆ ಆಕಾಶದಿಂದ
ಕೌಚಿದಂತೆ ಶುರುವಾಯ್ತು
ಜಡಿ ಮಳೆ
ಮಡಗೋದು ಮದ್ಲು ಮಡಗವೋ
ಎಲ್ಲಿ ನಿನಗಂಡ
ಗ್ಯಾನ ಎಲ್ಲೈತೆ ಅವಂಗೆ ?
ಅದೂ ಅದೂ.. ಅಂಗಲ್ಲ..
ವೋ ಮಾತಾಡ್ಬೇಡ ಯೆಲ್ಲಿ ನಿನ್ನೆಜಮಾನ
ಕೊಡೋ ಕಾಸು ಬರ್ಲಿ ಮದ್ಲು
ಅತ್ ಕಡೆ ಕಟ್ಟಕೈತೆ ಬಡ್ಡಿ
ಯೆಲ್ಲ ಬುಟ್ಟು ಇಲ್ಲೇನ್ .. ಯ್ಕಳನ ವಬ್ನೆ
ನಿಂತ್ ಬುಟ್ಟೆ ನಡಿ ನಡಿ
ಯೋ ಆ ಹಸಾ ಓಡಿಸ್ರೀ
ಬುಟ್ರೆ ಇಡೀ ಅಂಗ್ಡಿ
ತಿಂದಾಕಿ ಬುಡ್ತದೇ
ಸಾಕಕಾಗಲ ಹಸಾ ಕಟ್ತವೆ ಇವೆಲ್ಲ
.. ನಮದೂ ಇತ್ತು
ನೂರಿಪ್ಪತ್ ಹಸಾ
ಅರವತ್ತೆಮ್ಮೆ ಬುಟ್ ಬಂದೋ
ಇಲ್ಲಿ ಕುರಿ ಮಂದೆ ಸೇರ್ಕೊಂಡೊ
ಎಲ್ಲೀ ರೀ ಮೂರುವರೆ
ಚಿಲ್ರೆ ಕೊಡಿ
ಮಳೆ ಬರಂಗಿದೆ ಬೇಗ ಬೇಗ…
ಡಾ.ರಶ್ಮಿ ಹೆಗಡೆ ಕಬ್ಬಗಾರು(ತಲಘಟ್ಟಪುರ).
ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಕಬ್ಬಗಾರಿನವರು, ಸಧ್ಯ ಬೆಂಗಳೂರು ವಾಸಿ
“ಲೆಕ್ಕಕ್ಕೆ ಸಿಗದವರು” ಪ್ರಕಟಿತ ಕವನ ಸಂಕಲನ
ಮಾನವಶಾಸ್ತ್ರದಲ್ಲಿ ಬುಡಕಟ್ಟು ಜನಾಂಗೀಯ ಮನೋವೈದ್ಯಕೀಯ ವ್ಯವಸ್ಥೆ ಕುರಿತು ಡಾಕ್ಟರೆಟ್ ಪದವಿ ಪಡೆದಿದ್ದಾರೆ. ಅನ್ವೇಷಾ ರಿಸರ್ಚ್ ವೆಂಚರ್ಸ್ ಎನ್ನುವ ಸಂಸ್ಥೆಯ ಸಂಸ್ಥಾಪಕಿ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
