Advertisement
ಸಂದರ್ಶನಕ್ಕೆಂದು ಚೆನ್ನೈ ತಲುಪಿದ ಕುತೂಹಲಕಾರಿ ಅನುಭವ…: ಬಸವನಗೌಡ ಹೆಬ್ಬಳಗೆರೆ ಸರಣಿ

ಸಂದರ್ಶನಕ್ಕೆಂದು ಚೆನ್ನೈ ತಲುಪಿದ ಕುತೂಹಲಕಾರಿ ಅನುಭವ…: ಬಸವನಗೌಡ ಹೆಬ್ಬಳಗೆರೆ ಸರಣಿ

ಹಣ ಅಡ್ಜಸ್ಟ್ ಆದರೆ ಮಾತ್ರ ಹೋದರಾಯ್ತು ಎಂದುಕೊಂಡು ಮಾಡೋ ಪ್ರಯತ್ನವನ್ನೆಲ್ಲ ಮಾಡಿ ಸುಮ್ಮನಾದೆ. ಇನ್ನೇನು ಇವತ್ತು ರಾತ್ರಿ ಚೆನ್ನೈಗೆ ಹೋಗಬೇಕು ಎಂದು ಅವರು ಕೊಟ್ಟಿದ್ದ ಸಂದರ್ಶನದ ದಿನ ನಾಳೆಯೇ ಆಗಿತ್ತು ಎಂಬ ದಿನದವರೆಗೂ ಪ್ರಯತ್ನ ಮಾಡಿ ಸುಮ್ಮನಾಗಿದ್ದೆ. ಕಡೇ ದಿನ ಎಂದೂ ಕೇಳದ ನಮ್ಮ ಮನೆ ಓನರ್ ಅಂಕಲ್ ಬಳಿ ಕೇಳಿದೆ. ಅದಕ್ಕವರು ಒಂದೂ ಮಾತಾಡದೇ ತುಂಬಾ ಖುಷಿಯಿಂದಲೇ ಹಣ ಕೊಟ್ಟರಲ್ಲದೇ ಸಂದರ್ಶನಕ್ಕೆ ಹಾಜರಾಗುವ ಟಿಪ್ಸ್‌ಗಳನ್ನೂ ತಿಳಿಸಿದರು, ತುಂಬಾ ಖುಷಿಯಾಗಿ ನಾನು ಬೆಂಗಳೂರಿನ ರೈಲನ್ನು ಆ ದಿನ ಬೆಳಗ್ಗೆಯೇ ಹತ್ತಿ ಬೆಂಗಳೂರಿಗೆ ಸಂಜೆಯಷ್ಟರಲ್ಲಿ ಹೋಗಿ ತಲುಪಿದೆ.
ಬಸವನಗೌಡ
ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತೇಳನೆಯ ಕಂತು ನಿಮ್ಮ ಓದಿಗೆ

ಧಾರವಾಡಕ್ಕೆ ಕೆಲಸದ ಸಂದರ್ಶನಕ್ಕೆಂದು ಹೋಗಿ ಅಲ್ಲಿ ಆಯ್ಕೆಯಾದೆ. ಆದರೆ ಅವರು “ನನ್ನ ಮಟ್ಟದಲ್ಲಿ ನೀವು ಆಯ್ಕೆಯಾಗಿದ್ದೀರಿ. ಆದರೆ ನೀವು ಮುಂದಿನ ಹಂತದ ಆಯ್ಕೆಗೆ ಚೆನ್ನೈಗೆ ಹೋಗಬೇಕೆಂದರು”.  ಆಯ್ಕೆಯಾದ ಖುಷಿ ಒಂದೆಡೆಯಾದರೆ ಚೆನ್ನೈಗೆ ಹೇಗಪ್ಪಾ ಹೋಗೋದು? ಅಲ್ಲಿಗೆ ಹೋಗಲಿಕ್ಕೆ ದುಡ್ಡನ್ನು ಹೇಗೆ ಹೊಂದಿಸೋದು?  ಧಾರವಾಡಕ್ಕೆ ಬರಲೆಂದು ಸಾಲ ಮಾಡಿಕೊಂಡು ಹೋಗಿದ್ದೆ. ಆ ಸಾಲವನ್ನೇ ಇನ್ನೂ ತೀರಿಸಿಲ್ಲ. ಅದರ ಜೊತೆಗೆ ಮತ್ತೆ ಸಾಲ ಮಾಡಿಕೊಂಡು ಹೋಗೋದ್ಹೇಗೆ? ಎಂಬ ಆಲೋಚನೆಗಳು ಮನದಲ್ಲಿ ಬಂದು ಹೋಗುತ್ತಿದ್ದವು. ಮ್ಯಾನೇಜರ್ ಹೇಳಿದ “ನೀವು ಧಾರವಾಡಕ್ಕೆ ಸಂದರ್ಶನಕ್ಕೆ ಹೋದಾಗ ಅಲ್ಲಿ ಆಯ್ಕೆ ಆದರೂ ಆಗಬಹುದು, ಆಯ್ಕೆಯಾಗದೇ ಇರಲೂಬಹುದು” ಎಂಬ ಮಾತು ನನಗೆ ನುಂಗಲೂ ಆಗದೇ, ಇತ್ತ ಉಗುಳಲೂ ಇಷ್ಟವಾಗದ ಬಿಸಿ ತುಪ್ಪ ಆದಂತಿತ್ತು. ನಿರುದ್ಯೋಗಿಯಾಗಿರುವವನಿಗೆ ಕೆಲಸ ಸಿಗುವ ಒಳ್ಳೆ ಅವಕಾಶ, ಒಂದೊಮ್ಮೆ ಆಯ್ಕೆಯಾಗದಿದ್ದರೆ ಸಾಲದ ಹಣ ಹೇಗೆ ತೀರಿಸೋದು? ಎಂಬ ದ್ವಂದ್ವ ನನಗೆ ಕಾಡಿತ್ತು. ನನಗೆ ಮ್ಯಾನೇಜರ್ “ನೀವು ಚೆನ್ನೈಗೆ ಹೋಗೋ ಮುನ್ನ ದಾವಣಗೆರೆಯ ಮೆಡಿಕಲ್ ಸ್ಟೋರ್‌ಗಳಲ್ಲಿ ನಾನು ಹೇಳಿದ ಪ್ರೊಡಕ್ಟ್‌ಗಳ ಸರ್ವೇ ಮಾಡಿಕೊಂಡು ಹೋಗಿ”  ಎಂಬ ಸಲಹೆಯಿತ್ತರು. ನಾನು ಅವರ ಮಾತಿನಂತೆ ವಾಪಾಸ್ಸು ದಾವಣಗೆರೆಗೆ ಬಂದು ಸಕ್ಕರೆ ಕಾಯಿಲೆಗೆ ಯಾವ ಡಾಕ್ಟರ್ ಯಾವ ಮಾತ್ರೆಗಳನ್ನು ತಮ್ಮ ಬಳಿ ಬಂದವರ ರೋಗಿಗಳಿಗೆ ಬರೆಯುತ್ತಾರೆ ಎಂಬುದರ ಸರ್ವೇಯನ್ನು ತುಂಬಾ ಅಚ್ಚುಕಟ್ಟಾಗಿ ಒಂದು ನೋಟ್ ಬುಕ್ಕಿನಲ್ಲಿ ದಾಖಲಿಸಿಕೊಂಡೆ.

ಈಗ ಚೆನ್ನೈ ಹೋಗೋ ದಿನಗಳು ತುಂಬಾ ಹತ್ತಿರ ಬರ್ತಾ ಇದ್ದಂಗೆ ನನಗೆ ಒತ್ತಡವಾಗಲು ಶುರುವಾಯಿತು. ಅಲ್ಲಿಗೆ ಹೋಗಿ ಬರುವ ಖರ್ಚಿಗೆಂದು ಹಣ ಹೊಂದಾಣಿಕೆ ಮಾಡಲು ನನ್ನಿಂದ ಆಗಲಿಲ್ಲ. ಬಹುತೇಕರನ್ನು ಕೇಳಿದೆ. ಒಂದು ಸಾವಿರ ರೂಪಾಯಿಯೆಂದರೆ ಅದು ಅಗ ತುಂಬಾ ದೊಡ್ಡ ಮೊತ್ತ!! ನಾನು ನಮ್ಮಜ್ಜಿ ಊರಿಗೆ ಹೋಗಿ ನನ್ನ ಪರಿಚಿತರ ಬಳಿ ಕೇಳಿದೆ. ಎಲ್ಲರಿಂದಲೂ ಬರೀ ನೆಗಟೀವ್ ಉತ್ತರ. ನಮ್ಮಜ್ಜಿಗೂ ಹಣ ಹೊಂದಿಸಿ ಕೊಡಲು ಕೇಳಿದೆ. ಅವರು ಒಬ್ಬರ ಬಳಿ ಕೇಳಿದರಂತೆ. ಆ ಪುಣ್ಯಾತ್ಮ ಹಣ ಕೊಡೋದ್ ಬಿಟ್ಟು “ನೀನ್ಹೇಕೆ ಸಂದರ್ಶನಕ್ಕೆ ಹೋಗ್ತೀಯ? ಅಲ್ಲಿ ಬರೀ ಇಂಗ್ಲೀಷಿನಲ್ಲಿ ಮಾತನಾಡಬೇಕು. ವೈದ್ಯರ ಬಳಿ ಹೋದಾಗಲೂ ಅಷ್ಟೇ. ಇಂಗ್ಲೀಷ್ ಸರಿಯಾಗಿ ಗೊತ್ತಿಲ್ಲವೆಂದರೆ ಕೆಲಸ ಮಾಡೋಕೆ ಆಗೋಲ್ಲ” ಎಂಬ ಬಿಟ್ಟಿ ಸಲಹೆ ಕೊಡೋಕೆ ಶುರು ಮಾಡಿದ್ರು. ನಮ್ಮಲ್ಲಿ ಬಹುತೇಕರು ಹೀಗೆಯೇ. ಯಾರಾದ್ರೂ ಒಬ್ಬರು ಮುಂದೆ ಹೋಗ್ತಾರೆ ಅಂದ್ರೆ ಅವರನ್ನು ಏನಾದ್ರೂ ಮಾಡಿ ಕಾಲು ಹಿಡಿದು ಜಗ್ಗೋಕೆ ಪ್ರಯತ್ನಪಡ್ತಾ ಇರ್ತಾರೆ. ಅದಕ್ಕೆ ಕೆಲವರು “ಇಂಡಿಯಾದವರು ಕಾಲು ಹಿಡಿದು ಜಗ್ಗೋದ್ರಲ್ಲಿ ಎಕ್ಸ್ ಪರ್ಟ್ ಆಗಿರೋದ್ರಿಂದ ಕಬ್ಬಡಿಯಲ್ಲಿ ನಾವೇ ಚಾಂಪಿಯನ್ ” ಎಂದು ತಮಾಷೆಯಾಗಿ ಹೇಳ್ತಾರೆ. ಅಲ್ಲದೇ ನಾವು ಯಾವುದೇ ವಸ್ತುಗಳನ್ನು ಕಾಲಲ್ಲಿ ಟಚ್ ಮಾಡಿದ್ರೆ ತಕ್ಷಣ ಅದನ್ನು ನಮಸ್ಕರಿಸುತ್ತೇವಲ್ಲಾ ಅದಕ್ಕೆ ನಾವು ಫುಟ್ ಬಾಲನ್ನು ಕಾಲಲ್ಲಿ ಹೊಡೆಯೋಕಾಗುತ್ತೆ ಅಂತಾ ಆ ಆಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಷ್ಟು ಸಾಧನೆ ಮಾಡಿಲ್ಲ ಅಂತಾ ತಮಾಷೆಯಾಗಿ ಹೇಳ್ತಾರೆ. ಅಲ್ಲದೇ ನಮ್ಮವರ ಕಾಲು ಎಳೆಯುವವರ ಬಗ್ಗೆ ಒಂದು ಪ್ರಸಂಗವನ್ನು ಹೇಳ್ತಾರೆ. ಅದು ಹೀಗಿದೆ:

ಒಮ್ಮೆ ಎಲ್ಲಾ ದೇಶಗಳ ಕಪ್ಪೆಗಳ ಪ್ರದರ್ಶನ ಏರ್ಪಡಿಸಿದ್ದರಂತೆ. ಆಗ ಬೇರೆ ಬೇರೆ ದೇಶಗಳ ಕಪ್ಪೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರಂತೆ. ಅಲ್ಲಿ ಎಲ್ಲಾ ದೇಶಗಳ ಕಪ್ಪೆಗಳನ್ನು ಒಂದು ಗಾಜಿನ ಜಾರಿನಲ್ಲಿ ಇಟ್ಟು ಅದರ ಬಾಯಿಯನ್ನು ಮುಚ್ಚಲಾಗಿತ್ತಂತೆ. ಆದರೆ ಭಾರತದ ಕಪ್ಪೆಗಳನ್ನು ಮಾತ್ರ ಪಾತ್ರೆಯ ಬಾಯಿ ಮುಚ್ಚದೇ ಓಪನ್ ಆಗಿ ಹಾಗೆಯೇ ಇಟ್ಟಿದ್ದರಂತೆ. ಎಲ್ಲರಿಗೂ ಆಶ್ಚರ್ಯ. ಒಬ್ಬನಂತೂ ಕುತೂಹಲ ತಡೆಯಲಾಗದೇ ಭಾರತದಿಂದ ಕಪ್ಪೆ ತೆಗೆದುಕೊಂಡು ಹೋಗಿದ್ದ ವ್ಯಕ್ತಿಯನ್ನು ಇದರ ಬಗ್ಗೆ ಕೇಳಿದನಂತೆ. ಆಗ ಅವನು ನಗುತ್ತಾ ಸರ್ ನಿಮ್ಮ ದೇಶದ ಕಪ್ಪೆಗಳಾದರೆ ಒಂದು ಕಪ್ಪೆ ಜಾರಿನಿಂದ ತಪ್ಪಿಸಿಕೊಂಡು ಹೋಗಲು ಶುರು ಮಾಡಿದರೆ ಉಳಿದ ಕಪ್ಪೆಗಳು ಸುಮ್ಮನಿರುತ್ತವೆ, ಆದರೆ ಭಾರತದ ಕಪ್ಪೆಗಳು ಹಾಗಲ್ಲಾ!! ಒಂದು ಕಪ್ಪೆ ಜಾರಿನಿಂದ ಹೊರಗೆ ತಪ್ಪಿಸಿಕೊಂಡು ಹೋಗಲು ಶುರು ಮಾಡಿದರೆ ಉಳಿದ ಕಪ್ಪೆಗಳು ಅದು ಹೋಗುವುದನ್ನು ತಪ್ಪಿಸಲು ಅದರ ಕಾಲು ಹಿಡಿದು ಜಗ್ಗಲು ಶುರು ಮಾಡುತ್ತವೆ!! ಅದಕ್ಕೆ ನಮಗೆ  ಕಪ್ಪೆಗಳು ಜಾರಿನಿಂದ ತಪ್ಪಿಸಿಕೊಂಡು ಹೊರಗೆ ಹೋಗುತ್ತವೆ ಎಂಬ ಭಯವಿಲ್ಲ ಎಂದು ಹೇಳಿದನಂತೆ!! ಇಂತಹ ಮನಸ್ಥಿತಿ ಬಹುತೇಕರದ್ದು. ಇದನ್ನು ಮನಗಂಡೇ ಹಿರಿಯರು ‘ಸಾಧ್ಯವಾದರೆ ಸಾಗು ಇಲ್ಲದಿದ್ದರೆ ದಾರಿ ಬಿಡು’ ಎಂಬ ಮಾತನ್ನು ಹೇಳಿದ್ದಾರೆ!

ನನಗೂ ಹಾಗೆ ಆಯ್ತು. ದುಡ್ಡು ಇರೋ ಮನುಷ್ಯನೇ ಬಂದು ಆದರೆ ದುಡ್ಡು ಕೊಡಬೇಕು. ಇಷ್ಟವಿಲ್ಲದಿದ್ದರೆ ದುಡ್ಡು ಇಲ್ಲ ಅಂತಾ ಹೇಳಬೇಕು. ಆದರೆ ನಮ್ಮಜ್ಜಿಯ ಬಳಿ ಕೆಲಸದ ಬಗ್ಗೆ ಕಷ್ಟ ಅನ್ನೋ ರೀತಿಯಲ್ಲಿ ಕೆಟ್ಟದ್ದಾಗಿ ಹೇಳಿದ್ದನಂತೆ. ನಮ್ಮಜ್ಜಿ ಬಂದು ಈ ಮಾತನ್ನು ಹೇಳಲು “ಆಯ್ತು ಬಿಡು ಅಜ್ಜಿ ನಾನು ಹೋಗಲ್ಲ” ಎಂದು ಹೇಳಿ ಬಂದ  ದಾರಿಗೆ ಸುಂಕವಿಲ್ಲ ಅಂತಾ ವಾಪಸ್ಸು ದಾವಣಗೆರೆಗೆ ಹೋದೆ. ನಾನು ಕೆಲಸಕ್ಕೆ ಹೋಗೋದೇ ಬೇಡ. ಹಣ ಅಡ್ಜಸ್ಟ್ ಆದರೆ ಮಾತ್ರ ಹೋದರಾಯ್ತು ಎಂದುಕೊಂಡು ಮಾಡೋ ಪ್ರಯತ್ನವನ್ನೆಲ್ಲ ಮಾಡಿ ಸುಮ್ಮನಾದೆ. ಇನ್ನೇನು ಇವತ್ತು ರಾತ್ರಿ ಚೆನ್ನೈಗೆ ಹೋಗಬೇಕು ಎಂದು ಅವರು ಕೊಟ್ಟಿದ್ದ ಸಂದರ್ಶನದ ದಿನ ನಾಳೆಯೇ ಆಗಿತ್ತು ಎಂಬ ದಿನದವರೆಗೂ ಪ್ರಯತ್ನ ಮಾಡಿ ಸುಮ್ಮನಾಗಿದ್ದೆ. ಕಡೇ ದಿನ ಎಂದೂ ಕೇಳದ ನಮ್ಮ ಮನೆ ಓನರ್ ಅಂಕಲ್ ಬಳಿ ಕೇಳಿದೆ. ಅದಕ್ಕವರು ಒಂದೂ ಮಾತಾಡದೇ ತುಂಬಾ ಖುಷಿಯಿಂದಲೇ ಹಣ ಕೊಟ್ಟರಲ್ಲದೇ ಸಂದರ್ಶನಕ್ಕೆ ಹಾಜರಾಗುವ ಟಿಪ್ಸ್‌ಗಳನ್ನೂ ತಿಳಿಸಿದರು, ತುಂಬಾ ಖುಷಿಯಾಗಿ ನಾನು ಬೆಂಗಳೂರಿನ ರೈಲನ್ನು ಆ ದಿನ ಬೆಳಗ್ಗೆಯೇ ಹತ್ತಿ ಬೆಂಗಳೂರಿಗೆ ಸಂಜೆಯಷ್ಟರಲ್ಲಿ ಹೋಗಿ ತಲುಪಿದೆ. ನಾನು ಚೆನ್ನೈಗೆ ರೈಲಿನಲ್ಲಿ ಹೋದರೆ ತುಂಬಾ ಕಮ್ಮಿ ದುಡ್ಡು ಖರ್ಚಾಗುತ್ತದೆ. ದುಡ್ಡುಳಿಯುತ್ತದೆ ಎಂದು ಭಾವಿಸಿ ಸೀದಾ ರೈಲ್ವೇ ಸ್ಟೇಷನ್ನಿಗೆ ಹೋಗಿ ಚೆನ್ನೈಗೆ ಟಿಕೇಟ್ ತೆಗೆದುಕೊಂಡೆ.

ಇದೇ ಮೊದಲ ಸಲ ಅಲ್ಲಿಗೆ ಹೋಗುತ್ತಿದ್ದೇನಾದ್ದರಿಂದ ಭಯ ವಿಪರೀತ ಇತ್ತು. ಅಷ್ಟೇ ಅಲ್ಲದೇ ಅಲ್ಲಿವನರು ಬರೀ ತಮಿಳನ್ನು ಬಿಟ್ಟು ಬೇರೆ ಭಾಷೆಯನ್ನು ಮಾತನಾಡುವದಿಲ್ಲ ಎಂದು ಕೇಳಿದ್ದೆ. ನನಗೋ ತಮಿಳು ಬರುವುದಿಲ್ಲ, ಹೇಗಪ್ಪಾ ಅಲ್ಲಿಗೆ ಹೋಗಿ ಕಂಪೆನಿಯ ವಿಳಾಸ ಹುಡುಕುವುದು? ಎಂಬ ಪ್ರಶ್ನೆಯಲ್ಲಿಯೇ ಚೆನ್ನೈ ರೈಲಿನ ಬಳಿ ಹೋದೆ. ಆ ರೈಲನ್ನು ನೋಡಿ ತುಂಬಾ ಗಾಬರಿಯಾದೆ. ಕುಳಿತುಕೊಳ್ಳುವುದಕ್ಕಲ್ಲ ಕಡೇ ಪಕ್ಷ ನಿಂತುಳ್ಳುವುದಕ್ಕೂ ಅದರಲ್ಲಿ ಜಾಗವಿರಲಿಲ್ಲ. ನಿಂತುಕೊಂಡಾದರೂ ಹೋಗೋಣ ಎಂದು ಹತ್ತಲಿಕ್ಕೆ ಹೋದರೂ ಅಲ್ಲಿ ಅದಕ್ಕೂ ಅವಕಾಶವಿರಲಿಲ್ಲ. ಈಗ ನನಗೆ ತುಂಬಾ ಬೇಸರವಾಯ್ತು. ನಾಳೆಯೇ ಸಂದರ್ಶನಕ್ಕೆ ಹೋಗಬೇಕು. ಇವತ್ತಿನ ಸ್ಥಿತಿ ನೋಡಿದ್ರೆ ಹೀಗೆ. ಇವತ್ತೇ ರೈಲು ಇಷ್ಟು ರಶ್ ಆಗಬೇಕ? ಯಾಕೀಗಾಗಿರಬಹುದು ಎಂದು ಅಲ್ಲೇ ಮುಂದೆ ಬಂದು ಸರಿಸುಮಾರು 20 ವಯಸ್ಸಿನ ಒಬ್ಬ ತರುಣನನ್ನು “ಸರ್ ಇವತ್ತೇಕೆ ರೈಲು ರಶ್ ಆಗಿದೆ. ಇದರ ನಂತರ ಬೇರೆ ರೈಲು ಚೆನ್ನೈಗೆ ಇದೆಯಾ?” ಎಂದು ಇಂಗ್ಲೀಷಿನಲ್ಲಿ ಕೇಳಿದೆ. ಅದಕ್ಕೆ ಅವನು “ಲೌಡೆ ಇದು ಕನ್ನಡನಾಡು ಕನ್ನಡದಲ್ಲಿ ಮಾತಾಡಲೇ” ಎಂದು ತುಸು ಸಿಟ್ಟಿನಲ್ಲಿಯೇ ಹೇಳಿದನು.. ಅದಕ್ಕೆ  ನಾನು ತಕ್ಷಣ “ದಯಮಾಡಿ ಕ್ಷಮಿಸಿ, ನೀವು ಕನ್ನಡದವರಲ್ಲ ಎಂದು ಹಾಗೆ ಇಂಗ್ಲೀಷಿನಲ್ಲಿ ಮಾತನಾಡಿದೆ. ದಯಮಾಡಿ ಕ್ಷಮಿಸಿ” ಎಂದೆ. ಅದಕ್ಕವನು “ಇರಲಿ ಎಲ್ಲಿಗೆ ಹೋಗಬೇಕು” ಎಂದು ಕೇಳುತ್ತಾ ಸಮಾಧಾನಿಯಾದ. ನಾನು ಚೆನ್ನೈ ಎಂದೆ. ಅದಕ್ಕವನು “ನಾನೂ ಚೆನ್ನೈಗೆ ಹೋಗಬೇಕು. ಜೊತೆಗೆ ಹೋಗೋಣವಂತೆ” ಎಂದ. ನನಗೆ ದೇವರೇ ಇವನನ್ನು ಕಳಿಸಿರಬೇಕು ಎಂಬ ಫೀಲ್ ಆಯ್ತು. ಇವನೊಬ್ಬನಷ್ಟೇ ಅಲ್ಲದೇ ಇವನ ಜೊತೆ ಇನ್ನೂ ಮೂವರು ಹುಡುಗರು ಚೆನ್ನೈಗೆ ಹೊರಟಿದ್ದರು. ಅವರೂ ಬಂದು ಇವನ ಜೊತೆ ಸೇರಿಕೊಂಡರು. ಇವತ್ತೇಕೆ ರೈಲು ಇಷ್ಟು ರಶ್ ಇದೆ ಎಂದು ಕೇಳಿದಾಗ ಅವನು “ತಮಿಳುನಾಡಿನಲ್ಲಿ ಚುನಾವಣೆ ಇದೆಯಂತೆ. ನಾವೆಲ್ಲಾ ಈಗ ಖಾಸಗೀ ಬಸ್ಸಿನಲ್ಲಿ ಹೋಗೋಣ” ಎಂದ. ಆಯ್ತು  ಎಂದು ನಾವು ರೈಲ್ವೇ ಟಿಕೇಟ್ ಮರಳಿಸಿ ಬಸ್ ಸ್ಟ್ಯಾಂಡಿಗೆ ಹೋದೆವು. ಅದರಲ್ಲಿ ಒಬ್ಬ ಮಾತ್ರ ಎಣ್ಣೆ ಹೊಡೆದಿರಲಿಲ್ಲ… ಉಳಿದವರೆಲ್ಲ ತುಸು ಹೆಚ್ಚೇ ಕುಡಿದಿದ್ದರು.

ಇವರು  ಒಂದು ಖಾಸಗಿ ಬಸ್ಸಿನ ಬಳಿ ಕರೆದೊಯ್ದು ಬಸ್ ಚಾರ್ಚಿನ ಬಗ್ಗೆ ವಿಚಾರಿಸಿದರು. ಅವನು ಹೆಚ್ಚು ಹೇಳಿದಾಗ ನಾವು ಓಕಳೀಪುರಂ ಹುಡುಗರು ಹಾಗೇ ಹೀಗೆ ಎಂದು ದಬಾಯಿಸಿ ನೂರು ರೂಪಾಯಿಗೆ ಒಂದು ಸೀಟಿನಂತೆ ಮಾತನಾಡಿ ನಾವೆಲ್ಲಾ ಅದರಲ್ಲಿ ಕುಳಿತೆವು. ಅವರು ನನ್ನ ಬಗ್ಗೆ ವಿಚಾರಿಸಿ ನಾವು ನಿಮ್ಮನ್ನು ನಿಮ್ಮ ವಿಳಾಸಕ್ಕೆ ತಲುಪಿಸಲು ಸಹಾಯ ಮಾಡುತ್ತೇವೆ ಎಂದು ಹೇಳಿದಾಗ ನನಗೆ ಸಮಾಧಾನವಾಯ್ತು. ಬಸ್ಸಿನಲ್ಲಿ ಆರಾಮಾಗಿ ನಿದ್ರಿಸಿದೆ. ಬೆಳಗ್ಗೆ ನಾವು ಚೆನ್ನೈಗೆ ಸರಿಸುಮಾರು 6 ಘಂಟೆಯಷ್ಟರಲ್ಲಿ ತಲುಪಿದೆವು. ಅಲ್ಲಿ ಬಸ್ ಸ್ಟ್ಯಾಂಡಿನಲ್ಲಿ ಇಳಿದ ನಂತರ ಟೀ ಕುಡಿದೆವು. ಬೆಳ್ಳಂಬೆಳಗ್ಗೆಯೇ ಬೆವರು ಕಿತ್ತು ಬರುವಂತಹ ಬಿಸಿಲಿನ ಝಳದ ಅನುಭವವಾಯ್ತು. ಅವರು ನನಗೆ “ನೀವು ನಿಮ್ಮ ಕೆಲಸವಾದ ಮೇಲೆ ನಮಗೆ ಕರೆ ಮಾಡಿ, ಒಂದೊಮ್ಮೆ ಕಂಪೆನಿಗೆ  ಆಯ್ಕೆಯಾಗದಿದ್ದರೆ ಬೇಸರ ಮಾಡಿಕೊಳ್ಳಬೇಡಿ. ನಾವು ಜೊತೆಗೆ ಮರೀನಾ ಬೀಚಿಗೆ ಹೋಗೋಣ” ಎಂದು ಹೇಳಿದರಷ್ಟೇ ಅಲ್ಲದೇ ಚೆನ್ನೈನ ಒಕ್ಕಿಯಾಮ್ ತೊರೈಪಾಕಮ್ ಎಂಬ ಏರಿಯಾಕ್ಕೆ ಹೋಗಲು ಒಬ್ಬ ಡ್ರೈನರಿನ ಬಳಿ ಮಾತನಾಡಿಸಿ ಒಂದು ಸರ್ಕಾರಿ ಸಿಟಿ ಬಸ್ಸಿಗೆ ಹತ್ತಿಸಿದರು. ನಾನು ಅದರಲ್ಲಿ ಹತ್ತಿ ಡ್ರೈವರ್ ಸನಿಹ ನಿಂತೆ. ಅವನು ನಾನೂ ಬೆಂಗಳೂರಿನಲ್ಲಿ ಇದ್ದೆ. ನನಗೆ ಕನ್ನಡ ಬರುತ್ತದೆ ಎಂದು ಮಾತನಾಡಿಸಿದ. ಆ ಬಸ್ ನಾನು ಹೋಗಬೇಕಾದ ವಿಳಾಸವನ್ನು ತಲುಪದಿದ್ದರೂ ಅದರ ಆಸುಪಾಸಿನ ಏರಿಯಾಕ್ಕೆ ಹೋಯ್ತು. ಆಗ ಡ್ರೈವರ್ ನನ್ನನ್ನು ಇಳಿಸಿದ. ಕಂಪೆನಿಯನ್ನು ಹುಡುಕಲು ನಾನು ಹರಸಾಹಸ ಪಡುವುದು ಈಗ ಆರಂಭವಾಯ್ತು.

ಕಂಪೆನಿ ತಲುಪಿದ್ದು ಹೇಗೆ? ಅಲ್ಲಿ ಸಂದರ್ಶನ ಹೇಗಿತ್ತು? ಅದನ್ನು ನಾನು ಹೇಗೆ ಎದುರಿಸಿದೆ? ಸಂದರ್ಶನದಲ್ಲಿ ಆಯ್ಕೆಯಾದೆನಾ? ಮುಂತಾದ ಕುತೂಹಲಕಾರಿ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.

ಕೆಲವರು ಯಾವುದಾದರೂ ಹೊಸ ಕೆಲಸ ಪ್ರಾರಂಭಿಸುವಾಗ ನಮ್ಮನ್ನು ಎಲ್ಲರೂ  ಪ್ರೋತ್ಸಾಹಿಸೋಲ್ಲ. ಕೆಲವರು ಮಾಡು ಅನ್ತಾರೆ, ಕೆಲವರು ಬೇಡ ಅನ್ತಾರೆ. ಕೆಲವರು ಕೊಂಕು ನುಡೀತಾರೆ. ಇಂತಹವುಗಳೆಲ್ಲಾ ನಮ್ಮ ಸಾಧನೆಗೆ ಮೆಟ್ಟಿಲುಗಳನ್ನಾಗಿ ಉಪಯೋಗಿಸಿಕೊಳ್ಳಬೇಕು. ಸಾಧನೆಯೇ ಉತ್ತರವಾಗಬೇಕು ಅಷ್ಟೇ!!

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ