Advertisement
ಕೋಟೆ ಕೊತ್ತಲಗಳ ನಡುವೆ…: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಕೋಟೆ ಕೊತ್ತಲಗಳ ನಡುವೆ…: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಎಂದೂ ನಿದ್ರಿಸದ ಕೋಟೆ ಏಳು ಮಹಾದ್ವಾರಗಳಿಂದ ಇಂದಿಗೂ ಅಬೇಧ್ಯವಾಗಿದೆ. ತನ್ನ ತಲೆ ಬಿದ್ದಲ್ಲಿ ದೇವಾಲಯವನ್ನು ನಿರ್ಮಿಸಿ ಹಾಗೂ ದೇಹವಿದ್ದಲ್ಲಿ ಕೋಟೆ ಗೋಡೆಯ ನಿರ್ಮಿಸಿ ಎಂದು ತನ್ನನ್ನೆ ತಾ ಬಲಿಕೊಟ್ಟ! ತನ್ನ ತಲೆ ಕತ್ತರಿಸಿದ ಮೇಲೂ ಆತ ನಿಧಾನಕ್ಕೆ ಕೋಟೆಯ ಗೋಡೆ ಎಡೆಗೆ ನಡೆದು ಧರೆಗುರುಳಿದ. ಅಲ್ಲೇ ಕೋಟೆಯನ್ನು ನಿರ್ಮಿಸಲಾಯಿತು. ಎಷ್ಟೇ ಬಾರಿ ನಿರ್ಮಿಸಿದರೂ ನಿಲ್ಲದ ಕೋಟೆ ಬೀಳದೆ ನೇರ ನಿಂತಿತು. ಅಂತೂ ರಾಣಾಕುಂಭನ ಆಸೆ ನೆರವೇರಿತು. ಕಿಲಿವಾಡದಲ್ಲಿ ಬೃಹತ್ ಕೋಟೆಯೊಂದು ಎದ್ದು ನಿಂತಿತು!
ಶ್ರೀಧರ್‌
ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ರಾಜಸ್ಥಾನದಲ್ಲಿ ಓಡಾಡಿದ ಅನುಭವಗಳ ಕುರಿತ ಬರಹ

ಹಳದಿ ಬೆಳಕಲ್ಲಿ ಬೃಹತ್ ಆದ ಕೋಣೆ ಕಾಣುವ ಕನಸಿನೊಂದಿಗೆ ಎದ್ದು ಆರು ಗಂಟೆಗೆಲ್ಲಾ ತಣ್ಣಗಿನ ನೀರಲ್ಲಿ ಜಳಕ ಮಾಡಿ ರಣಕ್‌ಪುರದಿಂದ ಬಸ್ಸು ಹತ್ತಿದ್ದೆ. ಹತ್ತು ವರ್ಷಗಳ ಹಿಂದೆ ಗೂಗಲ್ ಆಂಟಿ ಕೇವಲ ಒಂದೇ ಗಂಟೆ ಎಂಬ ಮಾಹಿತಿಯಿಂದ ಏಳಕ್ಕೆಲ್ಲಾ ಕೋಟೆ ಎದುರಿಗೆಂಬ ಖುಷಿಯಲ್ಲಿದ್ದೆ. ವಿಪರೀತ ಬಿಸಿಲಲ್ಲಿ ಅರ್ಧದೂರಕ್ಕೆ ನಮ್ಮನ್ನಿಳಿಸಿ ಇಲ್ಲೇ ಇಳಿಯಿರಿ ಎಂದು ಹರಿದ ಹಿಂದಿಯಲ್ಲಿ ಉಸುರಿ ಕಂಡಕ್ಟರ್ ಇಳಿಸಿಹೋದ. ಅಲ್ಲಿಂದ ಜೀಪಿನಲ್ಲಿ ಹೋಗಿ ಎಂದ. ರಾಜಸ್ಥಾನಿ ಜನರ ಬದುಕನ್ನು ಹತ್ತಿರದಿಂದ ನೋಡುವ ಕುತೂಹಲದಿಂದ ‘ಸಾಯಿರ’ದಲ್ಲಿ ಲೋಕಲ್ ಬಸ್ ಹತ್ತಿದೆ. ಒಂದು ಜಂಕ್ಷನ್‌ನಿಂದ ಇನ್ನೊಂದಕ್ಕೆ ಕೆಲಸಗಾರರು ಬಿಳಿ ಜುಬ್ಬಾ, ಪೈಜಾಮ ತೊಟ್ಟವರು, ಕೈತುಂಬಾ ಬಿಳಿ ಬಳೆ ತೊಟ್ಟು, ಸೆರಗು ಹೊದ್ದು ದಾವಣಿಯಲ್ಲಿ ಹೊರಟ ಮಧ್ಯ ವಯಸ್ಕ ಮಹಿಳೆಯರು. ಕಿವಿಯಲ್ಲೆಲ್ಲಾ ಓಲೆ ತೊಟ್ಟ ಮುದುಕನಲ್ಲಿ ಹರಟುತ್ತಾ ಕುಳಿತೆ. ಎಲ್ಲರೂ ಬುತ್ತಿಗಂಟು ಹಿಡಿದಿದ್ದರು. ಕೆಲವರು ಅಲ್ಲಲ್ಲಿ ಇಳಿದು ಹತ್ತಿದರು. ತುಂಬಿಸಲಾಗದಷ್ಟು ಜನ ಹೊತ್ತು ಹೊಟ್ಟೆ ಉಬ್ಬಿಸಿಕೊಂಡು ಓಲಾಡುತ್ತಾ ಹೊರಟಿತು. ತಾವ್ಯಾವುದೋ ಜಾತ್ರೆಗೆ ಹೊರಟವರಂತೆ ಖುಷಿಯಲ್ಲಿ ಕೆಲಸಕ್ಕೆ ಹೊರಟಿದ್ದರು! ನಾನೊಬ್ಬ ಭಾಷೆ ಬಾರದ ಮಂಗನಂತೆ ಇವರ ನಡುವೆ ಕುಳಿತಿದ್ದೆ. ನನ್ನನ್ನೂ ಏನೋ ಗೇಲಿ ಮಾಡಿ ನಗುತಲಿದ್ದರು. ಅವರ ಜೊತೆಗೆ ನಾನು ನಕ್ಕೆ! ಹಣವಿದ್ದವರೆಲ್ಲಾ ಖುಷಿಯಾಗಿರುತ್ತಾರೆ ಎಂಬ ಮನಸ್ಸಿನ ಮಿತ್‌ನ್ನು ಅವರೆಲ್ಲ ಮೆಲ್ಲಗೆ ಪುಡಿ ಮಾಡುತಲಿದ್ದರು. ಹಣಕ್ಕೂ ಸಂತೋಷಕ್ಕೂ ಸಖ್ಯವಿಲ್ಲವೆಂಬ ಸತ್ಯವನ್ನು ಮನದಟ್ಟು ಮಾಡಿಸುತ್ತಾ ಕೂತಿದ್ದರು. ಸಣ್ಣ ಕೆಲಸ ಮಾಡುತ್ತಾ ಅದರಲ್ಲೇ ಬದುಕ ಕಾಣುವವರು. ಜೀವನ ಎಂದರೆ ಇವಿಷ್ಟೇ ಅಲ್ಲ ಎಂಬ ಪಾಠ ಮಾಡುತಲಿದ್ದರು. ಅನಕ್ಷರಸ್ಥರಾದರೂ ಅವರ ಜೀವನೋತ್ಸಾಹ ಮತ್ತು ವಿಶ್ವಾಸದ ಪರಿ ಅನನ್ಯ! ನಮ್ಮ ಬೃಹತ್ ಕೋಟೆ ಬರುತ್ತಲೇ ನಮಗೆ ನೆನಪಿಸಿ ಇಳಿಯಲು ಹೇಳಿ ಬುಸುಗುಡುತ್ತಾ ದೊಡ್ಡ ಹೊಟ್ಟೆ ಹೊತ್ತು ಹೊರಟಿತು ಬಸ್ಸು.

ಇಲ್ಲಿಂದ ಸುಮಾರು 20 ನಿಮಿಷ ಏರುದಾರಿಯಲ್ಲಿ ಕೋಟೆಯವರೆಗೆ ನಡೆದೇ ಹೋಗಬೇಕು. ಸಾಯಿರಾ ಜಂಕ್ಷನ್‌ನಲ್ಲಿ ಜೀಪು ಹಿಡಿದಿದ್ದರೆ ನೇರವಾಗಿ ಅದು ಕೋಟೆ ಎದುರಿಗೆ ತಂದು ನಿಲ್ಲಿಸುತ್ತದೆ. ಆದರೆ ಇಂತಹ ನೂರಾರು ಅನುಭವಗಳು ಸಿಗಲಾರದೆಂದು ಬಸ್ಸು ಹತ್ತಿದ್ದೆ! ರಾಜಸ್ಥಾನದ ಹಳ್ಳಿ ಬದುಕಿನ ಅನನ್ಯ ಚಿತ್ರಣ.

ರಾವಣ ಕೋಟೆಯ ಎದುರು

ತನ್ನ ಅನನ್ಯ ಶೈಲಿ ಹಾಗೂ ವಿಸ್ಮಯಕ್ಕೆ ಹೆಸರು ವಾಸಿಯಾದ ಕೋಟೆ! ಕೋಟೆಯ ಹೊಟ್ಟೆಯೊಳಗೇ ಅರಮನೆಯನ್ನೂ ಅಡಗಿಸಿಟ್ಟುಕೊಂಡಿದೆ. ಸಾವಿರಾರು ಸುರಿದು ಪ್ರವಾಸಕ್ಕೆ ಬಂದ `ಕೇಸರಿ’ ಕಂಪನಿಯವರು ಇಲ್ಲಿನ ಕೋಟೆಯನ್ನು ಮೂಸಿ ಮುಂದಿನ ನಿಲ್ದಾಣಕ್ಕೆ ಓಟ ಕಿತ್ತಿದ್ದು ಆಶ್ಚರ್ಯವಾಯಿತು. 5-6 ದಿನದೊಳಗೆ ರಾಜಸ್ಥಾನವನ್ನು ತೋರಿಸಿ ಸಂಪೂರ್ಣ ನೋಡಿ ಆಯಿತು ಎಂಬ ಇವರ ಪೋಸಿಗೊಂದು ವಿಷಾದ. ಪ್ರವಾಸದ ಪ್ರತಿ ಬಿಂದು ತಿರುವೂ ಮುಖ್ಯ ಎಂದು ಇವರಿಗೆಲ್ಲಾ ಅರ್ಥವಾಗುದೆಂದೊ? ಕುರುಡನೊಬ್ಬ ಆನೆಯನ್ನು ಮುಟ್ಟಿ ನೋಡಿದಂತೆ ನೋಡಿ ಬರುತ್ತಾರೆ. ಸಾವಿರಾರು ತೆತ್ತು ಪ್ರವಾಸ ಮಾಡಿ ಏನೂ ತಿಳಿದುಕೊಳ್ಳದೆ ಹೊಟೆಲ್‌ಗಳಿಗೆ ಹಣ ಸುರಿದು ಹಾಗೆ ಹಿಂದಿರುಗುತ್ತಾರೆ.

ಬನ್ನಿ ಕೋಟೆ ಕಟ್ಟಿದ ಕತೆಗೆ ಕಿವಿಯಾಗೋಣ

ಕಿವಿ ತುಂಬಿಸಲು ನಾನ್ ರೆಡಿ, ನೀವು? 1448 ರಲ್ಲಿ ತನ್ನ ಪ್ರಿಯ ಕೆಲ್‌ವಾಡಾ ಊರಿನ ಸನಿಹದಲ್ಲಿ `ಕುಂಭನು’ ಕೋಟೆ ಕಟ್ಟಲು ಆದೇಶಿಸಿದ. ರಾಣಾಕುಂಬನ ಆಡಳಿತವು ರಣತಂಬೋರಿನಿಂದ ಗ್ವಾಲಿಯರ್ ತನಕ ಹಬ್ಬಿತ್ತು. ತನ್ನ ಆಡಳಿತಕ್ಕೊಂದು ಭದ್ರ ನೆಲೆಯ ಅಗತ್ಯವೆಂದು `ಕುಂಭನು’ ಈ ಸ್ಥಳವನ್ನು ಗುರುತಿಸಿದ. ತನ್ನ ಸಾಮ್ರಾಜ್ಯದ ಉದ್ದಕ್ಕೂ ಇದ್ದ 84 ಕೋಟೆಗಳಲ್ಲಿ 32 ಕೋಟೆಯನ್ನು ರಾಣಾಕುಂಭನೇ ಕಟ್ಟಿಸಿದ್ದು ಎಂದರೆ ಅದೊಂದು ಮಹಾನ್‌ ಅಚ್ಚರಿ! ಭಾರತದಲ್ಲಿ ಶಿವಾಜಿಯ ತರುವಾಯ ಅತಿ ಹೆಚ್ಚು ಕೋಟೆಯನ್ನು ನಿರ್ಮಿಸಿದಾತ ರಾಣಾಕುಂಭನೇ. ಇಂತಹ ಮಹಾನ್‌ ವೀರನ ವಿಚಾರ ತಿಳಿದಿದ್ದು ಈ ಪ್ರವಾಸದಿಂದಲೇ! ಇಲ್ಲಿಯ ತನಕ ಇವನ ಬಗ್ಗೆ ಕೇವಲ ರಾಣಾ ಪ್ರತಾಪನ ತಂದೆ ಅಂತ ಒಂದು ಸಾಲಿನ ಪಠ್ಯದೊಂದಿಗೆ ಮುಗಿದು ಹೋಗುತ್ತದೆ! ನಮ್ಮ ರಾಷ್ಟ್ರದ ದುರಂತ. 1578 ರ ಏಪ್ರಿಲ್ ತಿಂಗಳಿನಲ್ಲಿ ಅಕ್ಬರ್ ಶಾಬಾಸ್ ಖಾನ್‌ದ ಮುಂದಾಳತ್ವದಲ್ಲಿ ಗೆದ್ದ ಕುಂಭನ ಮಗ ರಾಣಾಪ್ರತಾಪ 1583 ರಲ್ಲಿ ಅಕ್ಬರ್‌ನಿಂದ ಈ ಕೋಟೆಯನ್ನು ಗೆಲ್ಲುತ್ತಾನೆ.

ಪೂರ್ವಾಪರ

3,600 ಅಡಿಗಳೆತ್ತರದಲಿ ಗಗನ ಚುಂಬಿಸೋ ಮಾಳಿಗೆ ಮನೆಯಂತೆ ನಿರ್ಮಿಸುವ ಪೂರ್ವದ ಕತೆಯಂತು ರೋಚಕ. ಕೋಟೆಯ ಗೋಡೆ ಕಟ್ಟಿದಂತೆ ಮತ್ತೆ ಮತ್ತೆ ಧರೆಗುರುಳಿತಿತ್ತು. ಮತ್ತೆ ಕಟ್ಟಿ ನಿಲ್ಲಿಸಿದರೂ ರಾಣಾಕುಂಭ ಚಿಂತಿತನಾದ. ತನ್ನೂರಿನ ಸಂತನೊಬ್ಬನ ಬಳಿ ಸಲಹೆಗಾಗಿ ತೆರಳಿದ.

ಮಾರನೆಯ ಮುಂಜಾನೆ ಮತ್ತೆ ಉರುಳಿತು. ಆ ಊರಿಗೆ ಬಂದ ಅಲೆಮಾರಿ ಸಂತನೊಬ್ಬ ಒಂದು ಮಾನವ ಬಲಿದಾನವಾಗದೇ ಕೋಟೆ ಕಟ್ಟಲು ಅಸಾಧ್ಯವೆಂದ. ಅದರೊಂದಿಗೆ ತಾನೇ ಬಲಿಯಾದ! ನಂತರದ ದಿನಗಳಲ್ಲಿ ಗೋಡೆ ನಿವಿರ್ಘ್ನವಾಗಿ ಎದ್ದು ನಿಂತಿತು. ಕೋಟೆಯ ಗೋಡೆಗಳು ಅದ್ಭುತ ರಚನೆಯಿಂದ 500 ವರ್ಷಗಳ ತರುವಾಯವೂ ಮಜಬೂತಾಗಿ ನಿಂತಿದೆ

ಎಂದೂ ನಿದ್ರಿಸದ ಕೋಟೆ ಏಳು ಮಹಾದ್ವಾರಗಳಿಂದ ಇಂದಿಗೂ ಅಬೇಧ್ಯವಾಗಿದೆ. ತನ್ನ ತಲೆ ಬಿದ್ದಲ್ಲಿ ದೇವಾಲಯವನ್ನು ನಿರ್ಮಿಸಿ ಹಾಗೂ ದೇಹವಿದ್ದಲ್ಲಿ ಕೋಟೆ ಗೋಡೆಯ ನಿರ್ಮಿಸಿ ಎಂದು ತನ್ನನ್ನೆ ತಾ ಬಲಿಕೊಟ್ಟ! ತನ್ನ ತಲೆ ಕತ್ತರಿಸಿದ ಮೇಲೂ ಆತ ನಿಧಾನಕ್ಕೆ ಕೋಟೆಯ ಗೋಡೆ ಎಡೆಗೆ ನಡೆದು ಧರೆಗುರುಳಿದ. ಅಲ್ಲೇ ಕೋಟೆಯನ್ನು ನಿರ್ಮಿಸಲಾಯಿತು. ಎಷ್ಟೇ ಬಾರಿ ನಿರ್ಮಿಸಿದರೂ ನಿಲ್ಲದ ಕೋಟೆ ಬೀಳದೆ ನೇರ ನಿಂತಿತು. ಅಂತೂ ರಾಣಾಕುಂಭನ ಆಸೆ ನೆರವೇರಿತು. ಕಿಲಿವಾಡದಲ್ಲಿ ಬೃಹತ್ ಕೋಟೆಯೊಂದು ಎದ್ದು ನಿಂತಿತು!

ಇಲ್ಲಿನ ಸ್ಥಳೀಯ ನಿವಾಸಿಗಳು ಈ ಕೋಟೆಯನ್ನು ಎಂದೂ ನಿದ್ರಿಸದ ಕೋಟೆ ಎನ್ನುತ್ತಾರೆ. ಸತ್ತ ಸನ್ಯಾಸಿಯೊಬ್ಬನ ಆತ್ಮ ಈ ಕೋಟೆಯೊಳಗೆ ಸದಾ ಪಿಸು ಗುಡುತ್ತದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯ ಡ್ರೈವರ್ ರಮೇಶ್! ಇಂತಹುದೇ ಆತ್ಮಗಳ ಕತೆಯುಳ್ಳ ಎಂಟು ತಾಣಗಳಲ್ಲಿ 6 ರಾಜಸ್ಥಾನದಲ್ಲೇ ಇದೆ ಎಂಬುವುದು ಕೀರ್ತಿಯೋ ಅಪಕೀರ್ತಿಯೋ ನಾನರಿಯೇ.

ರಚನೆ ಮತ್ತು ವಿನ್ಯಾಸ

ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಗಿಟಿಸಿಕೊಂಡ ಅದ್ಭುತ ಕೋಟೆ. ಮಂದಾನ ಎಂಬ ಮುಖ್ಯ ಶಿಲ್ಪಿ ತನ್ನ ತನವನುಳಿಸಿ ರಚಿಸಿದ ಕೋಟೆ. ಮೇವಾರದ ರಾಜರ ಅದ್ಭುತ ರಚನೆ ಈ ಕೋಟೆಯಲ್ಲಿ ಎದ್ದು ಕಾಣುತ್ತದೆ. ಒಟ್ಟು ಏಳು ದ್ವಾರಗಳಿಂದ ಕೂಡಿದೆ. `ಅರೆಟ್ ಪೋಲ್’ ಎಂದು ಕರೆಯಿಸಿಕೊಳ್ಳುವ ದ್ವಾರದಿಂದ ಪ್ರಾರಂಭವಾಗುತ್ತದೆ. ರಾಮ್ ಪೋಲ್ ಕೋಟೆಯ ಅತಿ ಮುಖ್ಯ ದ್ವಾರ. ಇಲ್ಲಿಂದ ಮುಂದಿರುವ ಬಾದಲ್ ಮಹಲ್ ನಡುವೆ ಐದು ದ್ವಾರಗಳಿವೆ. ಎಲ್ಲಾ ದ್ವಾರಗಳನ್ನು ದಾಟಿ ಬಾದಲ್ ಮಹಲ್‌ಗೆ ಕಾಲಿಟ್ಟರು ಸಂಪೂರ್ಣ ಕೋಟೆ, ದೇವಾಲಯ ದೃಕ್ ಗೋಚರವಾಗುತ್ತದೆ. ತಣ್ಣನೆಯ ಗಾಳಿ ಬೀಸಿ ಕೋಟೆ ಏರಿದ ಸುಸ್ತನ್ನು ಮರೆ ಮಾಚುತ್ತದೆ. ಬಾದಲ್ ಮಹಲ್‌ನ ವಾಸ್ತು ಶಿಲ್ಪ ಗಮನ ಸೆಳೆಯುತ್ತದೆ. 600 ವರ್ಷಗಳಿಂದ ತಲೆ ಎತ್ತಿನಿಂತ ಅದರ ಗಡಸುತನ ನಮ್ಮನ್ನು ಕಾಡುತ್ತದೆ. ಗುಮ್ಮಟ ರೀತಿಯಲ್ಲಿ ಇದನ್ನು ಕಟ್ಟಿನಿಲ್ಲಿಸಲಾಗಿದೆ. ಹಬ್ಬಿನಿಂತ ಕೋಟೆಯ ಗೋಡೆ ಬೆಟ್ಟಕ್ಕೆ ಕಟ್ಟಿದ ತೋರಣದಂತೆ ಕಾಣುತ್ತದೆ. ಅಪಾರ ಶ್ರದ್ಧೆ, ಸಾಹಸಗಳು ಮೇಳೈಸಿ ಕಟ್ಟಿದ ಕೋಟೆಯ ಸುತ್ತ 360 ಕ್ಕೂ ಹೆಚ್ಚು ದೇವಾಲಯಗಳಿವೆ. ಅವುಗಳಲ್ಲಿ ಪ್ರಮುಖವಾದುದು ಗಣಪತಿ ದೇವಾಲಯ, ಚರ್ತುಭುಜ ದೇವಾಲಯ, ನೀಲಕಂಠ ಮಹಾದೇವ ದೇವಾಲಯ, ಮಾತಾಜಿ, ಹನುಮಾನ ದೇವಾಲಯ ಪ್ರಮುಖವಾದುದು.

ಭಾರತದ ಮಹಾಗೋಡೆ

ರಾಜಕಾರಣ ನನಗೆ ಆಗಿ ಬರೋಲ್ಲ. ಗೋಡೆ ಎಂದಿದ್ದು ರಾಹುಲ ದ್ರಾವಿಡ್‌ ಬಗ್ಗೆ ಅಲ್ಲ. ಭಾರತದಲ್ಲೂ ಒಂದು ಬೃಹತ್‌ ಗೋಡೆ ಇದೆ. ಅಲ್ಲಿಗೊಮ್ಮೆ ಹೋಗಿ ಬರೋಣ ಬನ್ನಿ. ಬೃಹತ್ ಭಾರತದ ಚರಿತ್ರೆಯಲ್ಲಿ ಎಲ್ಲೂ ದಾಖಲಾಗದ ದೇಸಿ ಸಂಪುಟ. ಯಾವ ಚರಿತ್ರೆಯ ಪುಸ್ತಕದಲ್ಲಿ ದಾಖಲಾಗದ ಅಸ್ಮಿಯತೆ ಭಾರತದ ಇತಿಹಾಸ. ಮುಚ್ಚಿಟ್ಟ ಇತಿಹಾಸದ ಆ ಪುಟಗಳನ್ನು ತೆರೆದು ತೋರಿಸುವ ಸಣ್ಣ ಪ್ರಯತ್ನ.

ಉದಯಪುರದಿಂದ 85 ಕಿ.ಮೀ. ದೂರದ ಅರಾವಳಿ ಬೆಟ್ಟಗಳ ಕಾಡಿನ ನಡುವೆ ಹುದುಗಿದೆ. ಈ ಕೋಟೆ ವಿಶ್ವದ ಅದ್ಭುತಗಳಲ್ಲಿ ಸ್ಥಾನ ಪಡೆಯುವುದಕ್ಕಿಂತಲೂ ಚಂದವಿರುವ ರಣಕ್‌ಪುರದ ಸೌಂದರ್ಯವಿನ್ನು ಕಣ್ಣ ಪಾಪೆಯಲ್ಲಿ ಹುದುಗಿರುವಾಗಲೇ ಕಂಡ ಮತ್ತೊಂದು ಅಚ್ಚರಿ ಚೀನಾದ ಮಹಾಗೋಡೆ 21,196 ಕಿಲೋ ಮೀಟರ್ ಉದ್ದವಿದ್ದರೆ, ಇಲ್ಲಿನ ಮಹಾಗೋಡೆ ಸುಮಾರು 38 ಕಿ.ಮೀ ಉದ್ದವನ್ನು ಬೆಟ್ಟದ ಮೇಲೆ ಬೃಹತ್ ಕಲ್ಲುಗಳಿಂದ ನಿರ್ಮಿಸಲಾಗಿದೆ. ಕೋಟೆಯೊಳಗಿನ ಎಲ್ಲಾ ದೇವಾಲಯ ನೋಡಬೇಕೆಂದರೂ ಕನಿಷ್ಠ ಆರು ತಿಂಗಳುಗಳೇ ನಮಗೆ ಬೇಕು. ಅಂದರೆ ದೇವಾಲಯ ಸಂಖ್ಯೆಗಳನ್ನು ಎಣಿಸಲು ನಮಗೆ ಸುಮಾರು ಅರ್ಧ ದಿನವೇ ಬೇಕು! ಅನಂತ ಆಕಾಶದ ಎಲ್ಲಾ ಕಲ್ಪನೆ ಮೀರಿ ಇಲ್ಲಿ ಸುಮಾರು 360 ದೇವಾಲಯಗಳಿವೆ. ಈ ಕೋಟೆ ಯುನೆಸ್ಕೊದ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಅಗ್ರಗಣ್ಯದಲ್ಲಿ ಇರಬೇಕಾಗಿದ್ದೆ.

ರಾಜಾರಾಣಾಕುಂಭ ನಿರ್ಮಿತ ಈ ಕೋಟೆ ಕುಂಬಲ್‌ಗಡ್ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಕೋಟೆ ಎಂದೂ ಒಂದೇ ದಿನದಲ್ಲಿ ನೋಡಿ ಮುಗಿಸಲಾಗದ, ನಮ್ಮ ನಿಲುವಿಗೆ ಸಿಗಲಾರದ ಅಪರೂಪದ ಅನರ್ಘ್ಯ ರತ್ನ. ಇದು ವಿಶ್ವದ ಎರಡನೆಯ ಮಹಾಗೋಡೆ ಹೊಂದಿರುವ ತಾಣವೆಂದರೆ ಇದರ ಮಹತ್ವ ನಿಮಗೆ ಅರ್ಥವಾದೀತು. ಯಾವುದೇ ಯಂತ್ರವಿಲ್ಲದ ಯುಗದಲ್ಲಿ ನಿರ್ಮಿಸಿದ ಶುದ್ಧ ದೇಸಿ ಜಗತ್ತು.  ಮುಖ ಕಾಣುವಷ್ಟು ಚಂದದ ಗೋಡೆಯನ್ನು ನಾವೀಗ ನಿರ್ಮಿಸುತ್ತಿರುವೆವು. ಆದರೆ ೩೦೦ ವರ್ಷಗಳ ಹಿಂದೆಯೇ ರಾಜಸ್ಥಾನಿಗರು ಸಾಧಿಸಿದ್ದರು. ಜಗತ್ತು  ಇನ್ನೂ ನವ ನಾಗರೀಕತೆಗೆ ಕಣ್ಣು ತೆರೆಯುತ್ತಿರುವಾಗಲೇ ಅಪಾರ ಅನನ್ಯತೆಗಳನ್ನು ಅದ್ಭುತಗಳನ್ನು ಜಗತ್ತಿಗೆ ಭಾರತೀಯರು ಎಂಬುದೇ ನನ್ನ ಹೆಮ್ಮೆ!

ಮಸುಕಾದ ಇತಿಹಾಸದ ಪುಟ

ಚರಿತ್ರೆ ನೀಡಿದ ಮರಣದಂಡನೆಗೆ ಗುರಿಯಾದ ಕೋಟೆ ತಬ್ಬಲಿಯಂತೆ ಪಿಸುಗುಡುತಲಿತ್ತು ಎಂದು ಇಂತಹ ಮಹಾನ್ ಕೋಟೆ ಪಠ್ಯದ ಪುಟ ಸೇರಿ ವಿಜೃಂಬಿಸುವುದೋ ಎಂಬ ತವಕದಲ್ಲೇ ಬೃಹತ್ ಕೋಟೆಗೆ ನಮಿಸಿದೆ.

ರಮ್ಯ ಸುಖವೊಂದೇ ಅನಂತವಾಗಿರಲು ಸಾಧ್ಯವೇ? ಭಾರತವೆಂಬ ಅಖಂಡ ಸಂವೇದನೆಯ ಬೀಜವೊಂದನು ನೆಟ್ಟು ವೃಕ್ಷವಾಗಿಸುವ ಕಲೆಗಾರಿಕೆ ನಮಗೆ ಸಿದ್ದಿಸಲಿ ಎಂಬ ಸದಾಶಯದೊಂದಿಗೆ ದುಃಖವೆಂಬ ತಬ್ಬಲಿತನದಲ್ಲಿ ಉದಯಪುರವೆಂಬ ಬಿಳಿಯೂರಿನ ಹಾದಿ ಹಿಡಿದೆ.

ನಮ್ಮತನವನು ಮರೆಯಾಗಿಸಿ ದಾಸ್ಯದ ಬೇರಿನಲ್ಲಿ ಚಿಗುರಿದ ಮರ ಎಷ್ಟು ದಿನ ಬಾಳಿಕೆ ಬರುವುದು? ತನ್ನ ಸ್ವಂತ ಇತಿಹಾಸದ ಹಾಸುಗಲ್ಲನ್ನು ನಾವೆಂದು ಹಾಸಿ ಸಂಭ್ರಮಿಸುವೆವೊ? ಭಾರತವೆಂಬ ಭಾವ ನಮ್ಮೊಡಲೊಳಗೆ ಹಸಿರಾಗಿ ಎಂದು ಚಿಗುರಿಸಿಕೊಳ್ಳುವೆವೋ ನಾ ಕಾಣೆ?

(ಫೋಟೋಗಳು: ಲೇಖಕರವು)

About The Author

ಶ್ರೀಧರ್‌ ಎಸ್.‌ ಸಿದ್ದಾಪುರ

ಶ್ರೀಧರ್‌ ಎಸ್.‌ ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ.  “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ